ಪ್ರಮೋದ್ ಮುತಾಲಿಕ್ ಅನುವಾದಿಸಿದ ‘ರೂಮಿ ಕವನಗಳು’

ಪ್ರಮೋದ್ ಮುತಾಲಿಕ್


1)   
         ಬೇಕು ಎಂದುಕೊಂಡ ಬಯಕೆಗಳ ಬೆನ್ನುಹತ್ತಿದರೆ
         ನನ್ನ ಬದುಕಾಗುವದು ಯಾತನೆಗಳ ಕುಲುಮೆ.
         ಕುಳಿತುಕೊಂಡರೆ ನನ್ನಷ್ಟಕ್ಕೆ ನಾ ಶಾಂತನಾಗಿ,
         ಹರಿದು ಬರುವುದು ಬೇಕಂದುಕೊಂಡದ್ದು ತಂತಾನೆ.
         ಬೇಕೆಂದುಕೊಂಡದ್ದಕ್ಕೂ ನಾನು ಬೇಕು ಅನಿಸುವುದು,
         ಬಂದಿದೆ ಹುಡುಕಿಕೊಂಡು ನನ್ನ.
         ಅರ್ಥ ಮಾಡಿಕೊಳ್ಳುವವರಿಗೆ ಇದೆ ಇದರಲ್ಲಿ ಗೂಢ.

2)  
          ಅರ್ಥವೇನು ಶರೀರಕ್ಕೆ? ಸಹನೆ.
          ಅರ್ಥವೇನು ಪ್ರೀತಿಗೆ? ಕೃತಜ್ಞತೆ.
          ಅವಿತಿದೆ ಏನು ನಮ್ಮ ಎದೆಯಲಿ? ನಗು.
          ಮತ್ತೇನು? ಸಹಾನುಭೂತಿ.

3)
          ಯಾರಿಗೂ ಕಾಣಿಸದಷ್ಟು ಚಿಕ್ಕವ ನಾ
          ವಿಶಾಲ ಪ್ರೀತಿ ಹೇಗಿದ್ದೀತು ನನ್ನೊಳಗೆ?
          ನೋಡು ನಿನ್ನ ಕಣ್ಣುಗಳ. ಚಿಕ್ಕವೇ ಅವು
          ನೋಡುವವು ಎಲ್ಲವನ್ನೂ.



4)
        ನಾನು ಇಲ್ಲವಾದಾಗ
        ನನ್ನ ಶವಪೆಟ್ಟಿಗೆ ಎತ್ತಿದಾಗ
        ನೀ ತಪ್ಪು ತಿಳಿಯಬೇಡ
       ನಾ ಕೊರಗುವೆ ಎಲ್ಲ ಬಿಟ್ಟು ಹೋಗಲು ಎಂದು.

5)
           ನಾನು ಇನ್ನಿಲ್ಲ ಎಂದು ನೀ
           ಯೋಚಿಸಿದ ಮರುಕ್ಷಣವೇ
           ಕೊನೆಯಾಗುವುದು ನಿನ್ನ ದ್ವೇಷ
           ನನ್ನನ್ನು ಪ್ರೀತಿಸಲೂ ಬಹುದು
           ಮನಸ್ವೀ.

6)
        ಎಲ್ಲಿಯವರೆಗೆ  ಕೊರಗುತ್ತಿ ನೀ ಈ
        ಯಾತನಾಮಯ ಬದುಕು ಕುರಿತು?
        ಎಲ್ಲಿಯವರೆಗೆ ಯೋಚಿಸುವಿ ನಿನ್ನ
        ಹಿಂಡುವ ಸುತ್ತಲಿನವರ ಕುರಿತು?
        ಅವರು ಹಿಂಡುವುದು ನಿನ್ನ ದೇಹ ಮಾತ್ರ!
        ಎದ್ದೇಳು, ಹುಚ್ಚು ಯೋಚನೆ ಬೇಡ.

7)
         ಇದೆ ನಿನ್ನಾತ್ಮದಲಿ ಒಂದು ಜೀವಸೆಲೆ
         ಅರಸು ಆ ಜೀವವ. ಇದೆ ನಿನ್ನ ದೇಹ
         ಪರ್ವತದಲಿ ವಜ್ರವೊಂದು ಅಪರೂಪದ.
         ಓ ಯಾತ್ರಿಕನೇ, ನಿಲ್ಲಿಸು ನಿನ್ನ ಹುಡುಕಾಟ
         ಹುಡುಕಬೇಡ ಅಲ್ಲಿಲ್ಲಿ, ಹುಡುಕು ನಿನ್ನೊಳಗೆ.

8)
        ನಿನ್ನೆ ನಾನು ಚಾಣಾಕ್ಷನಾಗಿದ್ದೆ
        ಜಗತ್ತನ್ನೇ ಬದಲಿಸುವ ಬಯಕೆ.
       
        ಇಂದು ನಾನು ಬುದ್ಧಿವಂತ
        ನನ್ನನ್ನೇ ನಾನು ತಿದ್ದಿಕೊಳ್ಳುತ್ತಿದ್ದೇನೆ.

9)
       ಇದೇ ನೀ ಕ್ರಮಿಸುವ ಪಥ, ನಿನ್ನದು ಮಾತ್ರ.
       ಬೇರೆಯವರು ನಿನ್ನೊಂದಿಗೆ ಕ್ರಮಿಸಿಯಾರು,
       ಆದರೆ ನಿನಗಾಗಿ ಯಾರೂ ಕ್ರಮಿಸರು.

10)
        ನೀನು  ಅಂಬೇಗಾಲು ಇಡುವುದಕ್ಕಲ್ಲ ಇರುವದು,
        ಬೇಡ, ಹಾಗೆ ಮಾಡಬೇಡ.
        ಇವೆ ನಿನಗೆ ರೆಕ್ಕೆಗಳು,
        ಕಲಿ ಹಾರಲು ಮೇಲೆ ಮೇಲೆ, ಹಾರು.

‍ಲೇಖಕರು avadhi

August 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: