ನಾ ದಿವಾಕರ ನೋಡಿದ ‘ಪಾರ್ಶ್ವ ಸಂಗೀತ’

ಜೀವನದ ಸಂಕೀರ್ಣತೆಗಳಿಗೆ ರಾಗ-ರಂಗಸ್ಪರ್ಶ

ಸುಶ್ರಾವ್ಯ ಗೀತೆಗಳ ನಡುವೆಯೇ ಬದುಕಿನ ಜಟಿಲ ಸಿಕ್ಕುಗಳನ್ನು ಕಾಣುವ ಒಂದು ಅಪೂರ್ವ ಪ್ರಯತ್ನ

ನಾ ದಿವಾಕರ

ರಂಗಭೂಮಿ ಎನ್ನುವ ಪರಿಕಲ್ಪನೆಯೇ ಮೂಲತಃ ಸಾಮಾನ್ಯ ಜನತೆಯ ಅಥವಾ ಒಂದು ಸಾಮಾಜಿಕ ಚೌಕಟ್ಟಿನ ಸಿಕ್ಕುಗಳನ್ನು, ಸಂಕೀರ್ಣತೆಗಳನ್ನು, ಸವಾಲು-ಪ್ರತಿರೋಧಗಳನ್ನು ಅನುಭಾವಾತ್ಮಕವಾಗಿ ತೆರೆದಿಡುವ ಒಂದು ಪ್ರಯೋಗಶಾಲೆ. ಅನೇಕ ಸನ್ನಿವೇಶಗಳಲ್ಲಿ ರಂಗಭೂಮಿ ಸಮಕಾಲೀನ ಸಮಾಜದ ಪ್ರಾತ್ಯಕ್ಷಿಕೆಯಾಗಿ ಕಂಡುಬರುವುದೂ ಉಂಟು. ಪ್ರಯೋಗ ಎನ್ನುವುದನ್ನು ತನ್ನ ಅವಿನಾಭಾವ ಅಂಗವಾಗಿ ಸ್ವೀಕರಿಸಿಕೊಂಡೇ ಬೆಳೆದುಬಂದಿರುವ ಹವ್ಯಾಸಿ-ವೃತ್ತಿರಂಗಭೂಮಿ ತನಗೆ ಆಸರೆ ನೀಡುವ ಸಮಾಜಕ್ಕೆ ಮುಖಾಮುಖಿಯಾಗುತ್ತಲೇ, ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳೊಡನೆ, ವ್ಯತ್ಯಯಗಳೊಡನೆ ಹಾಗೂ ಅಪಸವ್ಯಗಳೊಡನೆಯೂ ಅನುಸಂಧಾನ ಮಾಡುತ್ತಲೇ ಇರುತ್ತದೆ. ಇರಬೇಕು ಸಹ. ಹಾಗಿದ್ದಾಗಲೇ ರಂಗಪ್ರಯೋಗ ಎನ್ನುವುದು ಕೇವಲ ಪ್ರಾಯೋಗಿಕವಾಗದೆ ಪ್ರೇಕ್ಷಕರ, ಅಂದರೆ ವಿಶಾಲ ಸಮಾಜದ, ಮುಂದೆ ವರ್ತಮಾನದ ವಾಸ್ತವಗಳನ್ನು ತೆರೆದಿಡಲು ಸಾಧ್ಯವಾಗುತ್ತದೆ.

ವಿಶಾಲ ಸಂಸ್ಕೃತಿಯ ಒಂದು ಭಾಗವಾಗಿ ವರ್ತಮಾನದ ಸಮಾಜಕ್ಕೆ ಹಾಗೂ ನಾಳಿನ ತಲೆಮಾರಿಗೆ ನಾವು ಏನನ್ನು ಕೊಡಬಹುದು, ಕೊಡಬೇಕು ಎಂಬ ತೌಲನಿಕ ಪ್ರಜ್ಞೆ ಜಾಗೃತವಾಗಿದ್ದರೆ ರಂಗ ನಿರ್ದೇಶಕರು, ನಾಟಕಕಾರರು, ಹೊಸತನ್ನು ಶೋಧಿಸುವ ನಿರಂತರ ಪ್ರಯತ್ನದಲ್ಲಿರುತ್ತಾರೆ. ನವರಸಗಳ ಅಭಿವ್ಯಕ್ತಿಯ ಒಂದು ಭೂಮಿಕೆಯಾಗಿ ರಂಗಭೂಮಿ ಈ ಶೋಧನೆಗೆ ಹೆಚ್ಚೆಚ್ಚು ಅವಕಾಶಗಳನ್ನೂ ಕಲ್ಪಿಸುತ್ತದೆ. ಏಕೆಂದರೆ ಸೃಜನಶೀಲ ರಂಗನಿರ್ದೇಶಕರಿಗೆ ಇಲ್ಲಿ ಪೂರ್ಣ ಸ್ವಾತಂತ್ರ‍್ಯ, ಸ್ವಾಯತ್ತತೆ ಇರುತ್ತದೆ. ತಾವು ರಂಗರೂಪಕ್ಕೆ ಅಳವಡಿಸಲಿಚ್ಚಿಸುವ ಯಾವುದೇ ಕಥಾ ಹಂದರದಲ್ಲಿ ಸುಪ್ತವಾಗಿ ಇರಬಹುದಾದ ನಮ್ಯತೆಯನ್ನು (Flexibility) ಪರಿಣಾಮಕಾರಿಯಾಗಿ ಬಳಸಿಕೊಂಡು ರಂಗಪ್ರೇಕ್ಷಕರನ್ನು ರಂಜಿಸುವ ಮತ್ತು ಪ್ರೇಕ್ಷಕ ವೃಂದದಿಂದಾಚೆಗಿನ ಸಮಾಜವನ್ನು ತಲುಪುವ ಪ್ರಯತ್ನಗಳನ್ನು ರಂಗನಿರ್ದೇಶಕರು ಮಾಡುತ್ತಲೇ ಇರಬೇಕಾಗುತ್ತದೆ. ಇದು ರಂಗಭೂಮಿ ಒಂದು ಸಾಂಸ್ಕೃತಿಕ ಕಲೆಯಾಗಿ ರಂಗಕರ್ಮಿಗಳಿಗೆ ನೀಡುವ ಅವಕಾಶವೂ ಹೌದು, ಒಡ್ಡುವ ಸವಾಲೂ ಹೌದು.

ಜೀವನ್ಮುಖಿ ಸಾಹಿತ್ಯಕ್ಕೆ ರಂಗಸ್ಪರ್ಶ

ಇಂತಹ ಒಂದು ಸೃಜನಶೀಲ ಪ್ರಯತ್ನವನ್ನು ಮೈಸೂರು ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್‌ ಹಿರೇಮಠ್‌ ತಮ್ಮ “ಪಾರ್ಶ್ವ ಸಂಗೀತ” ನಾಟಕದ ಮೂಲಕ ಮಾಡಿದ್ದಾರೆ. ಬಿ.ಪಿ. ಅರುಣ್‌ ಅವರಿಂದ ರಂಗರೂಪ ಪಡೆದು ಹೊಸ ವಿನ್ಯಾಸದಲ್ಲಿ ಕಾಣಿಸಿಕೊಳ್ಳುವ ಶ್ರೀನಿವಾಸ ವೈದ್ಯ ಅವರ ಬರಹಗಳ ಗುಚ್ಚ ರಂಗವೇದಿಕೆಯಲ್ಲಿ ೧೯೪೦ರಿಂದ ೧೯೭೦ರವರೆಗಿನ ಸುಮಧುರ ಹಿಂದಿ ಚಿತ್ರಗೀತೆಗಳನ್ನು ಧ್ವನಿಸುತ್ತಲೇ ಪ್ರೇಕ್ಷಕರ ಮುಂದೆ ಜೀವನ ಪಯಣದ ಸಂಕೀರ್ಣತೆಗಳನ್ನು, ಸಿಕ್ಕುಗಳನ್ನು ತೆರೆದಿಡುತ್ತದೆ. ಭಾರತದ ಸಿನೆಮಾದ ಇತಿಹಾಸವನ್ನು ತೆರೆದು ನೋಡಿದಾಗ ಮೂಕಿ ಚಿತ್ರದಿಂದ ಆರಂಭವಾಗುವ ಪಯಣ ನಿಧಾನವಾಗಿ ತನ್ನ ಪ್ರಸ್ತುತತೆಯನ್ನು ವಿಸ್ತರಿಸಿಕೊಳ್ಳುತ್ತಾ ನಡೆದಿರುವುದನ್ನು ಗಮನಿಸಬಹುದು. ಈ ತೆರೆದುಕೊಳ್ಳುವ ಪ್ರಕ್ರಿಯೆಗೆ ಚಲನಚಿತ್ರಗಳ ಕಥಾವಸ್ತುಗಳಷ್ಟೇ ಪ್ರಭಾವಶಾಲಿಯಾಗಿ ಚಾಲನೆ ಮತ್ತು ಸಾರ್ವಕಾಲಿಕತೆಯನ್ನು ನೀಡಿರುವುದು ಸಿನೆಮಾ ಸಂಗೀತ. ಕಾರಣವೇನೆಂದರೆ ಈ ಅವಧಿಯ ಚಲನಚಿತ್ರಗೀತೆಗಳಲ್ಲಿ ಕಾವ್ಯಸ್ಪರ್ಶವಿರುತ್ತಿತ್ತು, ಶಾಸ್ತ್ರೀಯ-ಆಧುನಿಕ-ಜಾನಪದ ಸಂಗೀತ ಪ್ರಕಾರಗಳ ವೈವಿಧ್ಯಮಯ ಧ್ವನಿ ಇರುತ್ತಿತ್ತು.

ಪಂಕಜ್‌ ಮಲ್ಲಿಕ್‌, ಕುಂದನ್‌ಲಾಲ್‌ ಸೈಗಲ್‌, ನೂರ್‌ಜಹಾನ್‌, ಶಂಶಾದ್‌ ಬೇಗಂ, ಮೊಹಮ್ಮದ್‌ ರಫಿ, ಮುಖೇಶ್‌, ತಲತ್‌ ಮಹಮೂದ್‌, ಮನ್ನಾಡೇ, ಹೇಮಂತ್‌ ಕುಮಾರ್‌, ಲತಾಮಂಗೇಶ್ಕರ್‌, ಕಿಶೋರ್‌ ಕುಮಾರ್‌ ಮುಂತಾದ ಗಾಯಕರು ಧ್ವನಿಗೂಡಿಸಿದ ಗೀತೆಗಳಲ್ಲಿ ಮಾಧರ್ಯ ತುಂಬಲು ನೌಷಾದ್‌, ಹುಸನ್‌ಲಾಲ್‌ ಭಗತ್‌ರಾಮ್‌, ಶಂಕರ್-ಜೈಕಿಷನ್‌, ಸಚಿನ್‌ ದೇವ್‌ ಬರ್ಮನ್‌, ಸಿ. ರಾಮಚಂದ್ರ, ವಸಂತ್‌ ದೇಸಾಯ್‌, ಗುಲಾಮ್ ಮಹಮ್ಮದ್‌, ಖಯ್ಯಾಮ್‌ ಮುಂತಾದ ಸಂಗೀತ ದಿಗ್ಗಜರಿದ್ದರು. ಈ ಮಧುರ ಗೀತೆಗಳನ್ನು ಹೃದಯಸ್ಪರ್ಶಿಯಾಗಿ ಮಾಡುತ್ತಿದ್ದುದು ಈ ಕಾಲಘಟ್ಟದ ಗೀತ ರಚನೆಕಾರರು. ಕವಿ ಪ್ರದೀಪ್, ಸಾಹಿರ್‌ ಲುಧಿಯಾನ್ವಿ, ಭರತ್‌ವ್ಯಾಸ್‌, ಶಕೀಲ್‌ ಬದಾಯುನಿ, ಮಜರೂಹ್‌ ಸುಲ್ತಾನ್‌ಪುರಿ, ಹಜರತ್‌ ಜೈಪುರಿ, ಕೈಫಿ ಅಜ್ಮಿ, ರಾಜೇಂದ್ರ ಕಿಷನ್‌, ಶೈಲೇಂದ್ರ ಮುಂತಾದವರು. ಈ ಮಹಾನ್‌ ಕಲಾವಿದರ ಪ್ರಯೋಗಶೀಲತೆ ಮತ್ತು ಸೃಜನಶೀಲತೆಯೇ ಹಿಂದಿ ಸಿನೆಮಾ ಸಂಗೀತಕ್ಕೆ ಸಾರ್ವಕಾಲಿಕ ಶ್ರೇಷ್ಠತೆಯನ್ನೂ ನೀಡಿದೆ.

೧೯೬೧ರಲ್ಲಿ ತೆರೆಗೆ ಬಂದ ಶೋಲಾ ಔರ್‌ ಶಬ್ನಮ್‌ ಚಿತ್ರದಲ್ಲಿ ಕೈಫಿ ಅಜ್ಮಿ ಅವರ ಒಂದು ಗೀತೆ “ಜಾನೆ ಕ್ಯಾ ಢೂಂಡ್‌ತಿ ರಹತೀ ಹೈ…” ಮೊಹಮ್ಮದ್‌ ರಫಿ ಅವರ ಮಧುರಧ್ವನಿಯಲ್ಲಿ “ಕೈಸೆ ಬಾಜಾರ್‌ ಕ ದಸ್ತೂರ್‌ ತುಜೇ ಸಮ್‌ಜಾವೂಂ ಭಿಕ್‌ ಗಯಾ ಜೋ ವಹ್‌ ಖರೀದಾರ್‌ ನಹೀಂ ಹೋ ಸಖ್ತಾ” ಎಂದು  ಕೊನೆಯಾಗುತ್ತದೆ. ಒಮ್ಮೆ ಮಾರಾಟವಾದವರು ಎಂದಿಗೂ ಖರೀದಿದಾರರಾಗುವುದಿಲ್ಲ ಎಂಬ ಈ ಸಂದೇಶ ಇಂದಿನ ವಾತಾವರಣಕ್ಕೆ ಎಷ್ಟು ಸುಂದರವಾಗಿ ಹೊಂದಾಣಿಕೆಯಾಗುತ್ತದೆಯಲ್ಲವೇ? ಇದು ಆ ಕಾಲಘಟ್ಟದ ಚಿತ್ರಗೀತೆಗಳ ಒಂದು ಝಲಕ್‌ ಎನ್ನಬಹುದು. ಕವಿ ಪ್ರದೀಪ್‌ ಅವರು ಅಮರ್‌ ರಹೇ ಪ್ಯಾರ್‌ (೧೯೪೭) ಚಿತ್ರಕ್ಕೆ ರಚಿಸಿ ಹಾಡಿರುವ

“ಆಜ್‌ ಕೆ ಇನ್ಸಾನ್‌ ಕೊ ಏ ಕ್ಯಾ ಹೋ ಗಯಾ,

ಇಸ್‌ ಕಾ ಪುರಾಣಾ ಪ್ಯಾರ್‌ ಕಹ್ಞಾ ಪರ್‌ ಖೋ ಗಯಾ”

ಇಂದಿನ ಮತದ್ವೇಷ ರಾಜಕಾರಣದ ಸಂದರ್ಭದಲ್ಲಿ ಅತ್ಯಂತ ಸೂಕ್ತ ನಿರೂಪಣೆಯನ್ನು ನೀಡುತ್ತದೆ. ಬಾಲಿವುಡ್‌ ಎನ್ನಲಾಗುವ ಹಿಂದಿ ಚಿತ್ರರಂಗದ ಸಂಗೀತ ತನ್ನ ಪಯಣದಲ್ಲಿ ತಳಮಟ್ಟದ ಜನಸಾಮಾನ್ಯರ ಬದುಕಿನ ಒಂದು ಭಾಗವಾಗಿ ಹೊರಹೊಮ್ಮಲು ಕಾರಣವಾಗಿದ್ದು ಆ ಗೀತೆಗಳಲ್ಲಿದ್ದ ಮನುಜ ಸಂಬಂಧಗಳ ಸೂಕ್ಷ್ಮ ತರಂಗಗಳು ಮತ್ತು ಸಂವೇದನೆಯ ತಂತುಗಳು.

೧೯೪೦ರ ದಶಕದ ಉತ್ತರಾರ್ಧದಲ್ಲಿ ೧೯೫೦ರ ದಶಕದಲ್ಲಿ ಈ ಸಾಮಾಜಿಕ ಸೂಕ್ಷ್ಮತೆಗಳಿಗೆ ಒಂದು ಮನರಂಜನೆಯ ಸ್ಪರ್ಶ ನೀಡುವ ಮೂಲಕ, ಶುದ್ಧ ಮನರಂಜನೆಯ ಮಾಧ್ಯಮಕ್ಕೆ ಜೀವನ ಸ್ಪರ್ಶ ನೀಡಿದ ಕೀರ್ತಿ ರಾಜ್‌ಕಪೂರ್‌ ಅವರಿಗೇ ನಿಸ್ಸಂದೇಹವಾಗಿ ಸಲ್ಲಬೇಕು. ಶ್ರೀ ೪೨೦, ಬರಸಾತ್‌, ಆವಾರಾ, ಅನಾರಿ, ಜಾಗ್ತೇರಹೋ, ಬೂಟ್‌ಪಾಲಿಶ್‌ ಮುಂತಾದ ಚಿತ್ರಗಳ ಮೂಲಕ ರಾಜ್‌ಕಪೂರ್‌ ತಳಮಟ್ಟದ ಹಾಗೂ ಕೆಳ ಮಧ್ಯಮ ವರ್ಗದ ಸಾಮಾನ್ಯ ಜನತೆಗೆ ನಿಕಟವಾಗುವಂತೆ, ಬದುಕಿನ ಜಂಜಾಟಗಳನ್ನು ತೆರೆದಿಟ್ಟಿದ್ದರು. ಕೈಗಾರಿಕೀಕರಣ, ವಾಣಿಜ್ಯೀಕರಣ ಹಾಗೂ ಆಧುನಿಕೀಕರಣ ಮೂರೂ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ಸಾಗುತ್ತಿದ್ದ ಮುಂಬೈ ನಗರಿಯ ಕೆಳಸ್ತರದ ದುಡಿಯುವ ಜೀವಿಗಳಿಗೆ, ಬದುಕಿನ ಸಂಕೀರ್ಣತೆಗಳ ನಡುವೆ ಸಿಲುಕಿ ತಮ್ಮ ಜೀವನ ಸವೆಸುವ ಶ್ರೀಸಾಮಾನ್ಯರಿಗೆ ಈ ಚಿತ್ರಗಳು-ಹಾಡುಗಳು ಮನರಂಜನೆಯೊಡನೆ ಸಾಂತ್ವನವನ್ನೂ ನೀಡುತ್ತಿದ್ದವು. ಹಾಗಾಗಿಯೇ ರಾಜ್‌ಕಪೂರ್‌ ಇಂದಿಗೂ ಮಧ್ಯಮ ವರ್ಗದ ಬದುಕಿನ ರೂಪಕವಾಗಿಯೇ ಕಾಣುತ್ತಾರೆ.

೧೯೪೦-೭೦ರ ಮೂರು ದಶಕಗಳ ಚಲನಚಿತ್ರಗೀತೆಗಳು ಅಂದಿನ ಒಂದು ವರ್ಗದ ಯುವ ಸಮೂಹದಲ್ಲಿ  ಉಡುಪು, ತಲೆಗೂದಲಿನ ವಿನ್ಯಾಸ, ಹಾವಭಾವಗಳು, ನಡಿಗೆಯ ಶೈಲಿ, ಬದುಕು ಕಟ್ಟಿಕೊಳ್ಳುವ ರೀತಿ ಎಲ್ಲವನ್ನೂ ಪ್ರಭಾವಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಗೀತೆಗಳು ಮನರಂಜನೆಯನ್ನಷ್ಟೇ ನೀಡದೆ ನೋವುಂಡ ಬದುಕಿಗೆ ಸಾಂತ್ವನ, ದಿಕ್ಕೆಟ್ಟ ಬದುಕಿಗೆ ಸ್ಥೈರ್ಯ, ಸ್ವೇಚ್ಛೆಯ ಬದುಕಿಗೆ ಸಮಾಧಾನವನ್ನೂ ನೀಡುತ್ತಿದ್ದವು. ಅಂತಹುದೇ ಒಂದು ಚಿತ್ರಣವನ್ನು ರಾಜ್‌ಕಪೂರ್‌ನನ್ನೇ ರೂಪಕವಾಗಿಟ್ಟುಕೊಂಡು ಬಿ.ಪಿ. ಅರುಣ್‌ ರಂಗರೂಪಕ್ಕೆ ಅಳವಡಿಸಿರುವ ಶ್ರೀನಿವಾಸ ವೈದ್ಯರ ಬರಹಗಳನ್ನು ಪ್ರಶಾಂತ್‌ ಹಿರೇಮಠ್‌ ಆ ಕಾಲಘಟ್ಟದ ಮಧುರ ಗೀತೆಗಳೊಡನೆ ಮುಖಾಮುಖಿಯಾಗಿಸುತ್ತಾ ಒಂದು ಕಥಾ ಹಂದರಕ್ಕೆ ಜೀವ ತುಂಬಲು ಪ್ರಯತ್ನಿಸಿ ಗೆದ್ದಿದ್ದಾರೆ.

ಇಂದಿಗೂ ನಮ್ಮ ಎದೆಯಾಳದ ಭಾವತರಂಗಗಳನ್ನು ಸ್ಪರ್ಶಿಸುವ ಸುಮಧುರ ಗೀತೆಗಳು ತನ್ನ ಬಾಲ್ಯದಲ್ಲಿ ಕಂಡ ತನ್ನ ಚಿಕ್ಕಪ್ಪನ ಬದುಕನ್ನು ಹೇಗೆ ಪ್ರಭಾವಿಸಿದ್ದವು ಎನ್ನುವುದನ್ನು ನಿರೂಪಕನ ಮೂಲಕ ಹೇಳಿಸುವ  “ಪಾರ್ಶ್ವ ಸಂಗೀತ”, ಅಪರಿಮಿತ ಸಿನೆಮಾ ಸಂಗೀತ ಪ್ರೇಮಿಯಾದ ಚಿಕ್ಕಪ್ಪನ ಪಾತ್ರದಲ್ಲಿ ನುಸುಳುವ ಬದುಕಿನ ಎಲ್ಲ ಸಂಕೀರ್ಣತೆಗಳನ್ನೂ ಪ್ರೇಕ್ಷಕರ ಮುಂದಿಡುತ್ತದೆ. ನಾಟಕದ ಕೇಂದ್ರ ವ್ಯಕ್ತಿ ಶ್ಯಾಮ ಚಿಕ್ಕಪ್ಪ ಉಡಾಳ ಸ್ವಭಾವದ ಬೇಜವಾಬ್ದಾರಿ ಯುವಕ, ವಿದ್ಯಾಭ್ಯಾಸದಲ್ಲಿ ದಡ್ಡ ಶಿಖಾಮಣಿ, ಗಣಿತದಲ್ಲಿ ಸೊನ್ನೆ ಮಾರ್ಕ್ಸ್‌ ತೆಗೆಯುವಷ್ಟು ಹೆಡ್ಡ. ಇಂತಹ ಯುವಕನಿಗೆ ಸಿನೆಮಾ ಸಂಗೀತದಲ್ಲಿ ಅಪಾರವಾದ ಆಸಕ್ತಿ, ಅಗಾಧ ಪ್ರೇಮ. ಅವನ ನಡೆನುಡಿ, ಹಾವಭಾವಗಳನ್ನು ಸಿನೆಮಾದ ಮಧುರ ಗೀತೆಗಳು ನಿರ್ದೇಶಿಸುತ್ತವೆ. ಮಗನ ಈ ಉಡಾಫೆ ಬದುಕಿಗೆ ಸದಾ ವಿರೋಧ ವ್ಯಕ್ತಪಡಿಸುವ ಸಂಪ್ರದಾಯವಾಗಿ ಅಪ್ಪ. ಅಪ್ಪನಿಗೆ ತನ್ನ ಮಗ ಉದ್ಧಾರ ಆಗುವುದಿಲ್ಲ ಎಂಬ ಆತಂಕದೊಡನೆ, ತನ್ನ ಶಾಸ್ತ್ರ ಸಂಪ್ರದಾಯಬದ್ಧ ಬದುಕಿಗೆ ಅಡ್ಡಿಯಾಗುವ ಉಡಾಳ ಸ್ವಭಾವದ ಮಗನ ಗ್ರಾಮಾಫೋನ್‌ ಕಾಟ. ಸದಾ ತನ್ನ ಮಗನನ್ನು ಶಪಿಸುತ್ತಲೇ ಇರುವ ಅಪ್ಪನಿಗೆ, ತಮ್ಮನನ್ನು ಮೂದಲಿಸುತ್ತಲೇ ಇರುವ ಇಬ್ಬರು ಹಿರಿಯ ಮಕ್ಕಳ ತಾತ್ವಿಕ ಬೆಂಬಲ. ಇಷ್ಟರ ನಡುವೆ ತನ್ನ ವಯಸ್ಕ ಮಗನನ್ನು ಮುದ್ದುಕಂದನಂತೆಯೇ ಪ್ರೀತಿಸುವ, ವಾತ್ಸಲ್ಯದೊಂದಿಗೆ ಸಾಂತ್ವನ ನೀಡುವ ತಾಯಿ ಹೃದಯ.

ಈ ಚಿತ್ರಣವನ್ನು ೧೯೬೦-೭೦ರ ದಶಕದಲ್ಲಿ ಮೇಲ್ಜಾತಿಯ ಎಲ್ಲ ಮಧ್ಯಮ ವರ್ಗದ ಕುಟುಂಬಗಳಲ್ಲೂ ಕಾಣಬಹುದಿತ್ತು. ಶಾಸ್ತ್ರ ಸಂಪ್ರದಾಯಗಳಿಗೆ ಆಧುನಿಕತೆ ಮುಖಾಮುಖಿಯಾದಾಗ ಉಂಟಾಗಬಹುದಾದ ತಾತ್ವಿಕ ಸಂಘರ್ಷಗಳನ್ನು ಶ್ರೀನಿವಾಸ ವೈದ್ಯರ ಬರಹಗಳಲ್ಲಿ ಧಾರಾಳವಾಗಿ ಕಾಣಬಹುದು. ಈ ಬರಹಗಳನ್ನೇ ಆಧರಿಸಿದ “ಪಾರ್ಶ್ವ ಸಂಗೀತ” ಈ ಮುಖಾಮುಖಿ ಸಂಘರ್ಷವನ್ನು ಸಿನೆಮಾ ಸಂಗೀತ ಮತ್ತು ಸಾಂಪ್ರದಾಯಿಕ ಮಂತ್ರಪಠಣ-ಪೂಜಾ ವಿಧಿಗಳ ನಡುವಿನ ಘರ್ಷಣೆಯ ಮೂಲಕ ಬಹಳ ಪರಿಣಾಮಕಾರಿಯಾಗಿ ಮುಂದಿಡುತ್ತದೆ. ಸಂಪ್ರದಾಯಸ್ಥ ಸಮಾಜದಲ್ಲಿ ಹಿರಿಯ ತಲೆಮಾರಿನ ವಕ್ತಾರರಿಗೆ ತಮ್ಮ ಕರುಳಕುಡಿಗಳು ಅತಿರೇಕದ ಆಧುನಿಕತೆಯತ್ತ ಸಾಗುವುದು ರುಚಿಸುವುದೇ ಇಲ್ಲ. ಹಾಗಾಗಿಯೇ ಯುವ ಸಮೂಹ ಧರಿಸುವ ಉಡುಪುಗಳಿಂದ ಹಿಡಿದು ಅವರ ಆಸಕ್ತಿಗಳವರೆಗೂ ಈ ವಿರೋಧ ವಿಸ್ತರಿಸುತ್ತಲೇ ಇರುತ್ತದೆ. ಮುಂಜಾನೆ ಎದ್ದು ದೇವರನಾಮ ಕೇಳಬಾರದೇ? ಅದೇನು ಕಿವಿಗಡಚಿಕ್ಕುವ ಸಿನೆಮಾ ಹಾಡುಗಳನ್ನು ಕೇಳೋದು!! ಇದು ನಿತ್ಯ ಕಂಡುಬರುವ ವಿದ್ಯಮಾನ.

ಮನುಜ ಸಂಬಂಧಗಳ ಮನೋಜ್ಞ ಚಿತ್ರಣ

ತನ್ನ ಹಿರಿಯರೊಡಗಿನ ಈ ಸಂಘರ್ಷದ ನಡುವೆಯೇ ಶ್ಯಾಮ ಚಿಕ್ಕಪ್ಪ ಹೇಗೆ ತನ್ನ ಪ್ರೀತಿಯ ಸೆಲೆಯನ್ನೂ ಕಂಡುಕೊಳ್ಳಲು ಸಾಧ್ಯವಾಯಿತು, ತಾನು ಪ್ರೀತಿಸತೊಡಗಿದ ಗೆಳತಿಯ ಸ್ನೇಹ ಅವನ ಬದುಕಿನ ಹಾದಿಯನ್ನೇ ಬದಲಿಸಲು ನೆರವಾಯಿತು, ಇಬ್ಬರು ಯುವ ಪ್ರೇಮಿಗಳ ನಡುವೆ ಏರ್ಪಡುವ ಸಂಬಂಧವು ಹೇಗೆ ಶ್ಯಾಮ ಚಿಕ್ಕಪ್ಪನ ಬದುಕಿಗೆ ಒಂದು ಹೊಸ ತಿರುವು ನೀಡಿತು ಎನ್ನುವುದನ್ನು ನೆನಪಿಸಿಕೊಳ್ಳುವ ನಿರೂಪಕನು ಈ ಪ್ರೇಮಾಂಕುರದ ಅಲೆಗಳನ್ನು ಸ್ಮರಿಸುವುದನ್ನು ಮಧುರ ಚಿತ್ರಗೀತೆಗಳ ಮೂಲಕ ಬಿಂಬಿಸುವುದು “ಪಾರ್ಶ್ವ ಸಂಗೀತ” ನಾಟಕಕ್ಕೆ ಹೆಚ್ಚು ಮೆರುಗು ನೀಡುತ್ತದೆ. ನಾಟಕ ನೋಡುತ್ತಿದ್ದಂತೆ ನೆನಪಾಗುವ (ಈ ನಾಟಕದಲ್ಲಿ ಅಳವಡಿಸದ) ಒಂದು ಹಾಡು ಲೀಡರ್‌ ಚಿತ್ರದ್ದು (ದಿಲೀಪ್‌ ಕುಮಾರ್‌ ವೈಜಯಂತಿಮಾಲಾ), ಶಕೀಲ್-ನೌಷಾದ್‌ ಜೋಡಿಯ ಈ ಹಾಡಿನ ಪಲ್ಲವಿ ಹೀಗಿದೆ:

“ಇಕ್‌ ಶಹನ್‌ಷಾಹನೆ ಬನ್‌ವಾಕೆ ಹಸೀನ್‌ ತಾಜ್‌ ಮಹಲ್

ಸಾರೀ ದುನಿಯಾ ಕೋ ಮುಹಬ್ಬತ್‌ ಕ ನಿಷಾನೀ ದೀ ಹೈ”

ತಾಜ್‌ಮಹಲ್‌ ಪ್ರೇಮಿಗಳಿಗೆ ಒಂದು ರೂಪಕವಾಗಿರುವಂತೆಯೇ ಭಗ್ನಪ್ರೇಮಿಗಳನ್ನು ಸದಾ ಉತ್ತೇಜಿಸುವ ಪ್ರತಿಮೆಯಾಗಿಯೂ ಉಳಿದಿದೆ. ಅದನ್ನು ಒಂದು ಚಿತ್ರಗೀತೆಯಲ್ಲಿ ಅಳವಡಿಸುವ ಮೂಲಕ ಪ್ರೇಮಾಂಕುರದ ಅಲೆಗಳನ್ನು ಮತ್ತಷ್ಟು ರೋಚಕವಾಗಿ ಮಾಡುವ ಕಲಾ ಪ್ರತಿಭೆಯನ್ನು ಇಂತಹ ನೂರಾರು ಹಾಡುಗಳಲ್ಲಿ ಗುರುತಿಸಬಹುದು.

“ಪಾರ್ಶ್ವ ಸಂಗೀತ” ನಾಟಕದಲ್ಲಿ ಬಿ.ಪಿ. ಅರುಣ್‌ ಮತ್ತು ನಿರ್ದೇಶಕ ಪ್ರಶಾಂತ್‌ ಹಿರೇಮಠ್‌ ಈ ಪ್ರತಿಮೆಗಳನ್ನೇ ರಂಗವೇದಿಕೆಯಲ್ಲಿ ರೂಪಕಗಳಾಗಿ ಬಳಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಸಹಜವಾಗಿಯೇ ಭಾರತ ವಸಾಹತು ದಾಸ್ಯದಿಂದ ವಿಮೋಚನೆ ಪಡೆದಾಗ ಮಧ್ಯಮ ವರ್ಗಗಳಲ್ಲಿ ಹಾಗೂ ದುಡಿಯುವ ಜನತೆಯ ನಡುವೆಯೂ ನಿರಾಳತೆಯನ್ನು ಮೂಡಿಸಿದ ಹೊತ್ತಿನಲ್ಲಿ ಸಾಮಾಜಿಕ ಬದುಕಿನಲ್ಲಿ ಮನುಜ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದೇಶವನ್ನು ತಮ್ಮ ಚಿತ್ರಗಳ ಮೂಲಕ – ಸಿನೆಮಾ ಸಂಗೀತದ ಮೂಲಕ ಉಣಬಡಿಸಿದ ರಾಜ್‌ಕಪೂರ್‌ “ಪಾರ್ಶ್ವ ಸಂಗೀತ”ದ ಉದ್ದಕ್ಕೂ ರೂಪಕವಾಗಿ ಬಳಕೆಯಾಗುತ್ತಾರೆ. ವಿವಿಧ ಸನ್ನಿವೇಶಗಳಲ್ಲಿ ಬಂದು ಹೋಗುವ ಈ ರೂಪಕವು ಮೌನವಾದರೂ, ಇಡೀ ನಾಟಕದ ಸ್ಥಾಯಿಭಾವವನ್ನು ಪ್ರತಿನಿಧಿಸುವ ಹಾಗೂ ಗಟ್ಟಿಗೊಳಿಸುವ ಒಂದು ಅಲೆಯಾಗಿ ಕಾಣುತ್ತದೆ. (ಮೈಮ್‌ ರಮೇಶ್‌ ಅವರ ಅಭಿನಯದ ಬಗ್ಗೆ ಹೇಳಬೇಕಿಲ್ಲ)

ರಾಜ್‌ಕಪೂರ್‌ ಅವರ ಶ್ರೀ ೪೨೦ ಚಿತ್ರದ ಒಂದು ಹಾಡು “ಪ್ಯಾರ್ ಹುವಾ ಇಕ್‌ರಾರ್‌ ಹುವಾ” ಯುವಪ್ರೇಮಿಗಳ ಭವಿಷ್ಯದ ಜೀವನ ದರ್ಶನವನ್ನು ಬಿಂಬಿಸುವ ಹಾಗೂ ಅವರ ಮನದಾಳದ ಆಶೋತ್ತರಗಳನ್ನು ಪ್ರತಿನಿಧಿಸುವ ಒಂದು ಗೀತೆ. ಮಳೆಯಲ್ಲೇ ಚಿತ್ರೀಕರಣವಾಗುವ ಹಾಡಿನ ಕೊನೆಯಲ್ಲಿ ಛತ್ರಿ ಹಿಡಿದು ಹೋಗುತ್ತಿರುವ ಇಬ್ಬರು ಮಕ್ಕಳತ್ತ ಬೆಟ್ಟುಮಾಡುವ ನಾಯಕ:

“ಮೈ ನಾ ರಹೂಂಗಿ ತುಮ್‌ ನಾ ರಹೂಂಗಿ

ಫಿರ್‌ ಭಿ ರಹೇಗಿ ನಿಶಾನಿಯಾ”

ಎಂಬ ಸಾಲುಗಳ ಮೂಲಕ ಪ್ರೀತಿ-ಪ್ರೇಮಗಳ ಮೂಲಕ ಬೆಸೆಯುವ ಮನುಜ ಸಂಬಂಧಗಳೇ ಭವಿಷ್ಯದ ಸಮಾಜವೊಂದನ್ನೂ ಸೃಷ್ಟಿಸುತ್ತದೆ ಎನ್ನುವ ಸಂದೇಶವನ್ನು ಬಹಳ ಮಾರ್ಮಿಕವಾಗಿ ನೀಡುತ್ತಾರೆ. ಆದರೆ ಎಲ್ಲರ ಬದುಕಿನಲ್ಲೂ ಇದು ಸಾಕಾರಗೊಳ್ಳುವುದಿಲ್ಲ ಎನ್ನುವುದೂ ಬದುಕಿನಷ್ಟೇ ಸತ್ಯ. ಶ್ರೀನಿವಾಸ ವೈದ್ಯ ಅವರ ಬರಹಗಳಲ್ಲಿ ಗುರುತಿಸಬಹುದಾದ ಈ ಜೀವನ ಪಯಣದ ಚಿತ್ರಣವನ್ನು, ಆದಿ-ಅಂತ್ಯದ ನಡುವಿನ ಸೂಕ್ಷ್ಮ ಎಳೆಗಳನ್ನು, ಮನುಷ್ಯನನ್ನು ಭಾವುಕವಾಗಿಸಿ ಬದುಕಿನ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವ ಜೀವನವೇ ಕೆಲವೊಮ್ಮೆ ಅವನನ್ನು ವಿರಾಗಿಯನ್ನಾಗಿ ಮಾಡಿಬಿಡುವ ವಾಸ್ತವತೆಗಳನ್ನು, ಪ್ರಶಾಂತ್‌ ಹಿರೇಮಠ್‌ “ಪಾರ್ಶ್ವ ಸಂಗೀತ” ನಾಟಕದ ಮೂಲಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡುತ್ತಾರೆ. ಶ್ಯಾಮ ತಾನು ಪ್ರೀತಿಸಿ ಮದುವೆಯಾದವಳನ್ನು ಕಳೆದುಕೊಂಡು ನಿರ್ಲಿಪ್ತತೆಗೆ ಜಾರಿಬಿಡುತ್ತಾನೆ, ಏಕಾಂತತೆಗೆ ಶರಣಾಗುತ್ತಾನೆ, ಅವನ ಜೀವನೋತ್ಸಾಹ ಬತ್ತಿಹೋದಂತೆ ಮೌನಕ್ಕೆ ಶರಣಾಗಿ ಬಿಡುತ್ತಾನೆ.

ಹೀಗೆ ಕೊನೆಯಾಗುವ ಕಥಾ ಹಂದರದಲ್ಲಿ ಶ್ಯಾಮ ಚಿಕ್ಕಪ್ಪನ ನಿರಾಸೆಯ ಕ್ಷಣಗಳನ್ನು ಸಹಿಸಿಕೊಳ್ಳಲಾಗದ ಅಪ್ಪ ದೇವರನ್ನೇ ದೂಷಿಸುತ್ತಾನೆ. ನಾಟಕವು ಸುಖಾಂತ್ಯ ಕಾಣದೆ ಹೋದರೂ ಅಲ್ಲಿ ಸಾಮಾನ್ಯ ಜನತೆಯ ಬದುಕಿನ ವಾಸ್ತವಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಜೀವನ ನಿರ್ಥಕ ಎನ್ನುವ ಅಸ್ತಿತ್ವವಾದಿ ನೆಲೆಯಲ್ಲಿ ನೋಡದೆ ಮನುಷ್ಯನ ಬದುಕಿನಲ್ಲಿ ಕಾಣಲಾಗುವ ಏರಿಳಿತಗಳು ಸಾರ್ವಕಾಲಿಕ, ಸಾರ್ವತ್ರಿಕ ಎಂಬ ಸಂದೇಶವನ್ನು ಈ ನಾಟಕದ ಮೂಲಕ ಪ್ರಶಾಂತ್‌ ಹಿರೇಮಠ್‌ ನೀಡುತ್ತಾರೆ. ೨೫ಕ್ಕೂ ಹೆಚ್ಚು ಕಲಾವಿದರೊಡನೆ, ಅತ್ಯುತ್ತಮ ರಂಗಸಜ್ಜಿಕೆ, ರಂಗ, ವಸ್ತ್ರ ವಿನ್ಯಾಸ, ಹಿನ್ನೆಲೆ ಸಂಗೀತ ಹಾಗೂ ಮನಮುಟ್ಟುವ ಅಭಿನಯದ ಮೂಲಕ “ಪಾರ್ಶ್ವ ಸಂಗೀತ” ಶ್ರೀಸಾಮಾನ್ಯನ ಬದುಕಿನ ಮತ್ತೊಂದು ಮಜಲನ್ನು ಪ್ರೇಕ್ಷಕರ ಮುಂದಿಡುತ್ತದೆ. ಹಾಗೆಯೇ ಮರೆತು ಹೋಗಬಹುದಾದ ಒಂದು ಸಂಗೀತ ಪರಂಪರೆಯ ಸೂಕ್ಷ್ಮ ತಂತುಗಳನ್ನು ಸಮಕಾಲೀನ ಆಧುನಿಕ ಜಗತ್ತಿನ ಮುಂದಿಡುವ ಮೂಲಕ ಪ್ರಶಾಂತ್‌ ಹಿರೇಮಠ್‌ ಮತ್ತು ಇಡೀ ತಂಡವು ಕನ್ನಡ ರಂಗಭೂಮಿಗೆ ಒಂದು ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.

ಶ್ರೀಸಾಮಾನ್ಯನ ಬದುಕಿಗೆ ಹತ್ತಿರ ಎನಿಸುವ ಬರಹಗಳ ಮೂಲಕವೇ ಖ್ಯಾತನಾಮರಾಗಿದ್ದ ಶ್ರೀನಿವಾಸ ವೈದ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲು ಇದಕ್ಕಿಂತಲೂ ಹೆಚ್ಚಿನದೇನು ಬೇಕು? ಪ್ರಶಾಂತ್‌ ಹಿರೇಮಠ್‌ ತಮ್ಮ ರಂಗಭೂಮಿಯ ಅನುಭವ ಮತ್ತು ರಂಗಾಯಣದ ತಾಲೀಮನ್ನು ಸಾದರಪಡಿಸುವ ರೀತಿಯಲ್ಲಿ “ಪಾರ್ಶ್ವ ಸಂಗೀತ”ವನ್ನು ನಮ್ಮ ಮುಂದಿಡುತ್ತಾರೆ. ಇಂತಹುದೇ ಪ್ರಯತ್ನಗಳು ಮುಂದೆಯೂ ನಡೆಯುತ್ತಿರಲಿ ಎಂಬ ಆಶಯದೊಂದಿಗೆ, ಪ್ರಶಾಂತ್‌ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.

‍ಲೇಖಕರು avadhi

August 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: