ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ ಕೊನೆಯ ಭಾಗ : ಚಿಟ್ಟಿ ಸಿರೀಶ ಆಗಿದ್ದಳು

(ಇಲ್ಲಿಯವರೆಗೆ…)

ಚಿಟ್ಟಿ ಎಲ್ಲರೂ ಬೆರಗಾಗುವ ಹಾಗೇ ಓದಿದಳು, ‘ಪರ್ವಾಗಿಲ್ವೆ ಚಿಟ್ಟಿಗೆ ಈಗ ತುಂಬಾ ಜವಾಬ್ದಾರಿ ಬಂದಿದೆ!’ ಅಂತ ಮಾತಾಡಿಕೊಳ್ಳುವಷ್ಟು. ಅಪ್ಪನಿಗೆ ಅವಳು ಕೊಟ್ಟ ಮಾತನ್ನು ನೆರವೇರಿಸಿದಳು. ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಬಂದಳು. ‘ಇವಳು ಓದಿ ಯಾವ ಮನೆಯನ್ನು ಉದ್ಧಾರ ಮಾಡಬೇಕಿತ್ತು?’ ಅಂತ ಯಾರೂ ಮಾತಾಡಲಿಲ್ಲ ಹಾಗೆ ಮಾತಾಡಲಿಲ್ಲ ಅನ್ನೋದೇ ಸಮಾಧಾನ. ಸೈಕಲ್ ತುಳೀತಾ ಪಿಯುಸಿ ಮುಗಿಸಿದ ಚಿಟ್ಟಿಗೆ ಅಪ್ಪ ಸ್ಕೂಟಿ ತಂದುಕೊಟ್ಟ. ಅದಕ್ಕೂ ಯಾರೂ ಮಾತಾಡಲಿಲ್ಲ. ಮಾತಾಡಲಿಲ್ಲ ಅಂದ್ರೆ ವಿರೋಧ ಇಲ್ಲ ಅಂತ ಅಲ್ಲ. ಈ ಅಪ್ಪ ಮಗಳಿಗೆ ಯಾರು ಏನು ಹೇಳಿದ್ರೂ ಇಷ್ಟೇ. ಯಾರ ಮಾತನ್ನೂ ಕೇಳಲ್ಲ ಅಂತ ಅವರ ನಿಲುವಾಗಿತ್ತು. ಸೀನು ಮಾತ್ರ ‘ಕಾಲು ಹೋಗಿ ಸೈಕಲ್ ಬಂತು ಡುಂ ಡುಂ ಡುಂ. . . ಸೈಕಲ್ ಹೋಗಿ ಸ್ಕೂಟರ್ ಬಂತು ಡುಂ ಡುಂ, ಡುಂ ಸ್ಕೂಟರ್ ಹೋಗಿ ಇನ್ನೇನ್ ಬರುತ್ತೋ ಡುಂಡುಂ ಡುಂ’ ಎಂದು ಅಣಕವಾಡಿದ್ದ.
ಸೈಕಲ್ ತಂದ ಹೊಸತರಲ್ಲಿ ಅವನು ಮಾಡಿದ ಚೇಷ್ಟೆಗಳಿಗೇನೂ ಕಡಿಮೆಯಿರಲಿಲ್ಲ. ತನಗೆ ಇಲ್ಲದೆ ಚಿಟ್ಟಿಗೆ ಮಾತ್ರ ಸೈಕಲ್ ತಂದುಕೊಟ್ಟಿದ್ದು ಅವನಿಗೆ ಕೋಪ ಬಂದಿತ್ತು. ರಾತ್ರೋ ರಾತ್ರಿ ಸೈಕಲ್ ಟ್ಯೂಬ್‌ನ ಗಾಳಿ ತೆಗೆದುಬಿಡುತ್ತಿದ್ದ. ಇನ್ನೇನು ಕಾಲೇಜಿಗೆ ಹೊರಡಬೇಕು ಆಗ ಗಾಳಿಯಿಲ್ಲದ ಚಪ್ಪಟೆ ಟ್ಯೂಬು ಕಾಣುತ್ತಿತ್ತು. ಐದು ಕಿಲೋಮೀಟರ್ ಹೋಗಲಿಕ್ಕೆ ಅರ್ಧ ಗಂಟೆಯಾದ್ರೂ ಬೇಕಿತ್ತು. ತಾನು ಮತ್ತೆ ಟೂಬ್‌ಗೆ ಗಾಳಿ ತುಂಬಿಸಿಕೊಂಡು ಹೊರಡುವಷ್ಟರಲ್ಲಿ ಲೇಟಾಗುತ್ತೆ ಅಂತ ನೆನೆಸಿಕೊಂಡೇ ಅಳು ಬರುತ್ತಿತ್ತು. ಅವನ ಚೇಷ್ಟೆ ಆಷ್ಟಕ್ಕೇ ನಿಲ್ಲುತ್ತಿರಲಿಲ್ಲ ನೆಗ್ಗಲು ಮುಳ್ಳನ್ನು ತಂದು ಟೈರ್‌ಗೆ ಚುಚ್ಚು ಪಂಚರ್ ಮಾಡುತ್ತಿದ್ದ. ಪಂಛರ್ ಎಲ್ಲಾಗಿದೆ ಅಂತ ಹುಡುಕಿ ಅದನ್ನ ಹಾಕಿಸಿಕೊಂಡು ಹೋಗುವುದಕ್ಕೆ ಹೆಚ್ಚು ಹೊತ್ತು ಹಿಡಿಯುತ್ತಿತ್ತು. ಒಂದೊಂದು ಸಲ ಸೈಕಲ್ ಸೀಟು ಕಾಣೆಯಾಗಿಬಿಡುತ್ತಿತ್ತು. ಇದೆಲ್ಲಾ ಮಾಡುತ್ತಿದ್ದುದು ಸೀನು ಅಂತ ಗೊತ್ತಿದ್ದೂ ಅಜ್ಜಿ, ಅಮ್ಮ ಏನೂ ಮಾತಾಡುತ್ತಿರಲಿಲ್ಲ.
’ನಂಗೇ ಇಲ್ದೆ ನಿಂಗೆ ಅಪ್ಪ ಕೊಡುಸ್ತಲ್ವಾ ಈಗ ಹೋಗು ಅದ್ ಹೇಗೆ ಹೋಗ್ತೀಯಾ ನಾನೂ ನೋಡ್ತೀನಿ’ ಎನ್ನುವಂತೆ ನೋಡುತ್ತಾ ನಿಂತಿರುತ್ತಿದ್ದ. ಇಷ್ಟೆಲ್ಲಾ ಆದಮೇಲೂ ಅವನ ಜೊತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಮತ್ತಷ್ಟು ತೊಂದರೆಗೆ ಸಿಕ್ಕಿಕೊಳ್ಳುವುದು ಖಚಿತ. ಆದ್ದರಿಂದ ಸೀನು ಜೊತೆ ಒಪ್ಪಂದಕ್ಕೆ ಬಂದಿದ್ದಳು ಚಿಟ್ಟಿ. ಅವನ ಹೋಂ ವರ್ಕ್ ಮಾಡಿಕೊಡುವುದು, ಶೂಗೆ ಪಾಲೀಶ್ ಮಾಡುವುದು, ಬಟ್ಟೆಗೆಳಿಗೆ ಇಸ್ತ್ರಿ ಮಡುವುದು ॒ಒಂದಾ ಎರಡಾ? ಕಾಲ ಮೇಲೆ ಕಾಲು ಹಾಕಿಕೊಂಡು ‘ಏಯ್ ಚಿಟ್ಟಿ ಇದನ್ನ ಮಾಡೆ, ಅದನ್ನ ಮಾಡೆ’ ಎಂದು ಅರ್ಡರ್ ಮಾಡುತ್ತಿದ್ದ. . . .‘ ಇವನು ನನ್ನ ಮೇಲೆ ರೋಫ್ ಹಾಕ್ತಾನೆ’ ಎಂದುಕೊಂಡರೂ ಯಾರ ಹತ್ತಿರವೂ ಹೇಳಿಕೊಳ್ಳಲಾಗದ ಕಾರಣ ಎಡಗೈಲಿ ಅವನ ಎಲ್ಲಾ ನೋಟ್ಸ್ ಪೂರ್ತಿ ಮಾಡಿಕೊಡುತಿದ್ದಳು. ಅವಳ ಸಂಕಟ ಯ್ಯಾರಿಗೂ ಅರ್ಥವೂ ಆಗುತ್ತಿರಲಿಲ್ಲ.
ಈಗ ಚಿಟ್ಟಿಯ ಕಣ್ಣು ಅಜ್ಜಿ, ಅಮ್ಮ ಸೀನುವಿಗೆ ಕೊಡುತ್ತಿದ್ದ ಬೆಣ್ಣೆ ಬಿಸ್ಕತ್ತಿನ ಮೇಲೆಯೋ, ಕೇಕಿನ ಮೇಲೆಯೋ ಇರುತ್ತಿರಲಿಲ್ಲ. ಅವಳ ಪುಸ್ತಕಗಳು ಹರಿದು ಹೋಗುವುದನ್ನು ತಪ್ಪಿಸುವುದರ ಮೇಲಿತ್ತು. ಇಷ್ಟಾಗಿಯೂ ಪುಟ್ಟಿಗೆ ಮಾತ್ರ ಯಾವುದರ ಬಿಸಿಯೂ ತಟ್ಟುತ್ತಿರಲಿಲ್ಲ. ಬೇಕು ಅಂದಾಗ ಸೈಕಲ್ ಹತ್ತಿ ಹೊರಟುಬಿಡುತ್ತಿದ್ದಳು ಚಿಟ್ಟಿಗೆ ‘ನಿನಗೆ ಕೆಲ್ಸ ಇದ್ಯಾ?’ ಅಂತ ಕೂಡಾ ಕೇಳುತ್ತಿರಲಿಲ್ಲ.
ಚಿಟ್ಟಿಗೆ ಸಂಕಟವಾಗುತ್ತಿದ್ದುದೇ ಆಗ. ತನ್ನದು ಎಂದು ಯಾವುದನ್ನು ಅಂದುಕೊಂಡಿದ್ದಳೋ ಅದೆಲ್ಲ ಅವಳದ್ದು ಮಾತ್ರ ಆಗಿರಲಿಲ್ಲ. ಚೆನ್ನಾಗಿ ಕಾಣುತ್ತೆ ಅಂತ ಚಿಟ್ಟಿಯ ಲಂಗಗಳನ್ನು ಪುಟ್ಟಿ ಹಾಕಿಕೊಳ್ಳುತ್ತಿದ್ದಳು. ಚಿಟ್ಟಿ ಗಲಾಟೆ ಮಾಡಿದರೆ ‘ಸಣ್ಣ ಹುಡುಗಿ ಏನೋ ಆಸೆ ಪಟ್ಟು ಹಾಕಿಕೊಂಡರೆ ಅದಕ್ಕೆ ಇಷ್ಟ್ ಮಾತಾಡ್ತಾಳೆ’ ಅಂತ ಅಮ್ಮ ಗೊಣಗಿಕೊಳ್ಳುತ್ತಿದ್ದಳು. ಚಿಟ್ಟಿಗೆ ಒಮ್ಮೊಮ್ಮೆ ‘ಅಮ್ಮನ ಅಸಹನೆ ನನ್ನ ಮೇಲೋ ಅಥವಾ ಬೆಳೆಯುತ್ತಿರುವ ನನ್ನ ದೇಹದ ಮೇಲೋ’ ಎಂದು ಅರ್ಥವಾಗದೆ ಹೋಗುತ್ತಿತ್ತು. ಚಿಕ್ಕ ಹುಡುಗಿಯಾಗಿದ್ದಾಗ ಅಮ್ಮ ಪ್ರತಿಯೊಂದಕ್ಕೂ ತನ್ನನ್ನು ಅಡ್ಡಗೋಡೆಯಗಿ ನಿಂತು ಕಾಪಾಡುತ್ತಿದ್ದಳು. ಅಂಥಾ ಅಮ್ಮ ಇವತ್ತು ತಾನೇನೇ ಮಾಡಿದರೂ ತಪ್ಪು ಅನ್ನುತ್ತಿದ್ದಾಳೆ. ಹಾಗಾದರೆ ಇದಕ್ಕೆಲ್ಲಾ ಅರ್ಥ ಏನು? ತನಗಾಗುವ ಅನ್ಯಾಯವನ್ನಾಗಲೀ, ತನ್ನ ಮೇಲೆ ನಡಿಯುವ ದೌರ್ಜನ್ಯವನ್ನಾಗಲೀ ಯಾರೊಂದಿಗೂ ಹೇಳಿಕೊಳ್ಳುವ ಹಾಗಿರಲಿಲ್ಲ. ‘ಸಾಕು ಸಾಕು ಯಾರ್ಗೂ ಆಗ್ದೇ ಇರೋದು ನಿನಗೆ ಮಾತ್ರ ಆಗ್ತಾ ಇದೆ ಅಂದ್ಕೊಂಡಿದ್ದೀಯಾ? ಹೆಣ್ಣಾದ ಮೇಲೆ ಇದೆಲ್ಲಾ ಮಾಮೂಲಿ. ಸ್ವಲ್ಪನಾದ್ರೂ ತಗ್ಗಿ ಬಗ್ಗಿ ನಡೆದುಕೊಳ್ಳದಿದ್ರೆ ಹೇಗೆ? ಸಹಿಸಿಕೊಳ್ಳದಿದ್ರೆ ಹೇಗೆ?’ ಎಂದು ಅವಳ ಬಾಯನ್ನು ಮುಚ್ಚಿಸುತ್ತಿದ್ದಳು.
ನಂಗ್ಯಾಕೆ ಬೇಕು ‘ಕೆಟ್ಟ ಮೇಲೆ ಬುದ್ಧಿ ಬಂತು ಅಟ್ಟ ಮೇಲೆ ಒಲೆ ಉರೀತು’ ಅಂತ ಸುಮ್ನೆ ಹೇಳಿಲ್ಲ ಅಂತ ಅಜ್ಜಿ ಆಗೀಗ ಗೊಣಗಿಕೊಂಡರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಚಿಟ್ಟಿ ಇರಲಿಲ್ಲ. ‘ಅಲ್ವೇ ನಮ್ಮ ಸ್ನೇಹಾನೂ ಬೇಡ ಅಂತ ದೂರ ಹೋಗ್ಬಿಟ್ಯಾ?’ ಎಂದು ನಕ್ಕತ್ತು ಬೇಸರ ಮಾಡಿಕೊಂಡಾಗ ‘ಅದು ಹಾಗಲ್ಲ ಕಣೆ, ಓದೋದು ತುಂಬಾ ಇರುತ್ತಲ್ಲ ಅದಕೆ’ ಎಂದು ಚಿಟ್ಟಿ ಮಾತು ತೇಲಿಸಿದ್ದಳು. ಅವಳಿಗೆ ಈಗ ಅಡಿಗರು ಹೇಳಿದ ತನ್ನ ಭವಿಷ್ಯವನ್ನು ಸುಳ್ಳು ಮಾಡಿ ತೋರಿಸುವುದಷ್ಟೇ ಬೇಕಿತ್ತು.
ಸರೋಜಾಳ ಅಕ್ಕನ ಮದುವೆ ಸೆಟ್ಲ್ ಆಗಿ ಒಂದೇ ಮದುವೆಗೆ ಎಷ್ಟ್ ಖರ್ಚ್ ಮಾಡೋದು ಸರೋಜನ ಮದುವೆ ಕೂಡಾ ಒಟ್ಟಿಗೆ ಮಾಡಿಬಿಡೋಣ ಅಂತ ರಾಮೇಗೌಡರು ಅಂದುಕೊಂಡಿದ್ದರಿಂದ ಹೆಂಡತಿ ಸತ್ತು ಒಂಟಿಯಾಗಿದ್ದ ದೂರದ ಸಂಬಂಧಿ ಹುಡುಗನ ಜೊತೆ ಮದುವೆ ಮಾಡಿಕೊಳ್ಳಬೇಕಾಯಿತು. ‘ಹುಡುಗನ ಮನೆಯ ಕಡೆ ಚೆನ್ನಾಗಿದ್ದಾರಂತೆ; ಸರೋಜಾಗೆ ಈಗಲೇ ವಡವೆ ವಸ್ತುವನ್ನೆಲ್ಲಾ ಮಾಡಿಸಿಟ್ಟಿದ್ದಾರಂತೆ. . .’ ಭಾರತಿ ಹೇಳುತ್ತಿದ್ದರೆ ಚಿಟ್ಟಿಗೆ ಬೇಸರ. ‘ಏನೇ ಆಗಲಿ ಸರೋಜಾ ಇದಕ್ಕೆ ಒಪ್ಪಬಾರದಿತ್ತು’ ಎಂದುಕೊಂಡಳು. ಹಾಗೆ ಅಂದುಕೊಂಡಿದ್ದನ್ನು ಹೇಳುವುದರೊಳಗೆ ಸರೋಜಾಳ ಮದುವೆ ನಡೆದು ಹೋಗಿತ್ತು. ಚಿಟ್ಟಿ ಆ ಮದುವೆಗೆ ಹೋಗಿ ಪ್ರಸೆಂಟೇಷನ್ ಕೊಟ್ಟು ಬಂದಿದ್ದಳು. ಸರೋಜಾಳ ಮುಖದಲ್ಲಿ ಎಲ್ಲಾದರೂ ದುಃಖ ಕಂಡಿತಾ ಎಂದು ಹುಡುಕಿದಳು. ಅವಳಿಗೆ ಹಾಗೆ ಕಾಣಲಿಲ್ಲ. ಒಟ್ಟಿನಲ್ಲಿ ಅವಳು ಸಮಾಧಾನವಾಗಿದ್ದರೆ ಆಯಿತು ಅಷ್ಟೇ ಎಂದು ಸಮಾಧಾನ ಮಾಡಿಕೊಂಡಳು.

ನಕ್ಕತ್ತುವಿಗೆ ದಿನಾ ಕಾಲೇಜಿಗೆ ಐದು ಕಿಲೋಮೀಟರ್ ಹೋಗುವುದು ಬೇಸರವಾಗಿ ಅರ್ಧದಲ್ಲೇ ಬಿಟ್ಟುಬಿಟ್ಟಳು. ತನ್ನಷ್ಟು ಹೋರಾಟ ಮಾಡಿದ್ದಿದ್ದರೆ ವಿದ್ಯೆಯ ಬೆಲೆ ಏನೂಂತ ಗೊತ್ತಾಗುತ್ತಿತ್ತು ಎಂದುಕೊಂಡಳು ಚಿಟ್ಟಿ. ‘ನಮ್ಮ ಹುಡುಗೀರನ ತುಂಬಾ ದಿನ ಮನೇಲಿ ಇಟ್ಕೊಳ್ಬಾರ್ದು. ಮಳೆ ಇದ್ದ ಕಡೆ ಕಳೆ ಬರುತ್ತೆ. ಅದಕ್ಕೆ ಕಳೆ ಬರದ ಹಾಗೆ ಬೆಳೆ ಇಡಬೇಕು’ ಎಂದು ಮೈದು ಸಾಬರು ಯಾರೊಂದಿಗೋ ಹೇಳುತ್ತಿದ್ದರು. ಅದಾದ ಸ್ವಲ್ಪ ದಿನಗಳಲ್ಲೆ ಹೊಸ ಕಳೆಯ ಜೊತೆ ಹೊಳೆಯುವಂತೆ ನಕ್ಕತ್ತು ತನ್ನ ನಿಖಾ ಬಗ್ಗೆ ಹೇಳಿಕೊಂಡಿದ್ದಳು. ‘ಪಟ್ಟಣದಲ್ಲಿ ದೊಡ್ಡಚಪ್ಪಲಿಯ ಅಂಗಡಿಯನ್ನು ಇಟ್ಟಿದ್ದಾರೆ ನೀನು ಯಾವಾಗಲಾದರೂ ಪೇಟೆಯ ಕಡೆಗೆ ಬಂದರೆ ನಿನಗೆ ಚಪ್ಪಲಿಯನ್ನು ಫ್ರೀಯಾಗಿ ಕೊಡೋಕ್ಕೆ ಹೇಳ್ತೀನಿ’ ಎಂದು ಉದಾರವಾಗಿ ಚಿಟ್ಟಿಗೆ ಹೇಳಿದ್ದಳು. ಅವಳು ಮೌನವಾಗಿ ತಲೆ ಆಡಿಸಿದ್ದಳು. ನಕ್ಕತ್ತು ಕೂಡಾ ಹೀಗೆ ಊರನ್ನು ಬಿಟ್ಟು ಹೋಗಿದ್ದಳು.
ತನ್ನ ಮನೆಗೆ ಯಾವ ಹುಡುಗನೂ ಮಗಳನ್ನು ನೋಡಲಿಕ್ಕೆ ಬರಲಿಲ್ಲ ಎನ್ನುವ ಕೊರಗನ್ನು ಹೊತ್ತ ಮಂಗಳಿಯ ಅಮ್ಮ ಕಮಲಮ್ಮ ದಿನಾ ಗಂಡನಿಗೆ ವರಾತ ಹಚ್ಚುತ್ತಿದ್ದರು. ಅವರಿಗೆ ಭಾರತಿಯನ್ನು ನೋಡಲಿಕ್ಕೆ ಬಂದಿದ್ದ ಡಾಕ್ಟರ್ ಗಂಡು ಕಣ್ಣು ಕುಕ್ಕುತ್ತಿತ್ತು. ಭಾರತಿಗೂ ಇದರಿಂದ ಹೆಮ್ಮೆ ಇತ್ತು. ‘ಓದಬಾರದಾ ಭಾರತಿ?’ ಎಂದು ಹೇಳಿದ ಚಿಟ್ಟಿಗೆ ‘ಬಿಡೇ ಓದಿದ ಮೇಲಾದ್ರೂ ಮದುವೆ ಮಾಡಿಕೊಳ್ಳಲೇ ಬೇಕಲ್ಲವಾ? ಈಗಲೇ ಆದ್ರೆ ಬೇಗ ಮಕ್ಕಳಾಗುತ್ವೆ . . .ಬೇಗ ಜವಾಬ್ದಾರಿ ತೀರಿಹೋಗುತ್ತೆ’ ಅಂತ ಮನೆಯಲ್ಲಿ ಆಡಿಕೊಂಡಿದ್ದ ಮಾತನ್ನೇ ಚಿಟ್ಟಿಯ ಎದುರೂ ಆಡಿದ್ದಳು.
ಸದಾ ಕನ್ನಡಕ ಹಾಕಿಕೊಂಡೇ ಇರುತ್ತಿದ್ದ ಆ ಡಾಕ್ಟರ್, ಒಮ್ಮೆ ಕನ್ನಡಕ ತೆಗೆದಾಗ ಸೋಮಣ್ಣನ ಕೈಗೆ ಸಿಕ್ಕಿಬಿದ್ದಿದ್ದ. ಅವನ ಒಂದು ಕಣ್ಣು ಗುಡ್ಡೆ ಆಡುತ್ತಲೇ ಇರಲಿಲ್ಲ. ಸೋಮಣ್ಣ ‘ಯಾಕೆ ಹೀಗೆ ಮೋಸ ಮಾಡಿದ್ರಿ? ನನ್ನ ತಂಗಿಯೇನು ಕುಂಟಿಯಾ? ಕುರುಡಿಯಾ? ಅಂಥಾ ಲಕ್ಷಣವಾದ ಹುಡುಗಿಗೆ ಇಂಥಾ ಅನ್ಯಾಯ ಮಾದುವುದಾ?’ ಎಂದು ಆ ಡಾಕ್ಟರ್ ಮೇಲೆ ರೇಗಿದ್ದರು. ಭಾರತಿ ಅವತ್ತೆಲ್ಲಾ ಅತ್ತಿದ್ದಳು. ಸೋಮಣ್ಣ ‘ಹೋಗೆ ಆ ಕಣ್ಣಿಲ್ಲದವನನ್ನೆ ಮದುವೆ ಆಗು’ ಎಂದು ರೇಗಿದ್ದರು. ಇದೇ ದರ್ಪವನ್ನು ಹೆಂಡತಿಯ ಮೇಲೆ ಒಮ್ಮೆ ತೋರಿದ್ದರೂ ಹೆಂಡತಿ ದಾರಿಗೆ ಬರುತ್ತಿದ್ದಳು ಎಂದು ಚಿಟ್ಟಿಗೆ ಅನ್ನಿಸಿತ್ತಾದರೂ ಇದು ಅವರವರ ಮನೆಯ ಗೋಳು ಇದಕ್ಕೆ ಅವರವರೇ ಜವಾಬ್ದಾರರು ಎಂದು ಅರ್ಥವಾಗಿದ್ದರಿಂದ ತುಟಿಕ್‌ಪಿಟಿಕ್ಕ್ ಎನ್ನಲಿಲ್ಲ. ಮದುವೆ ತಪ್ಪಿ ಹೋಗಿದ್ದರಿಂದ ಮಂಗಳಿಯ ಅಮ್ಮ ಮಾತ್ರ ತುಂಬಾ ಖುಷಿಯಲ್ಲಿದ್ದರು. ‘ಸದ್ಯ ನಮ್ಮ ಮಂಗಳಿಗೆ ಕುಂಟೋ ಕುರುಡೋ ಹುಡುಗ ಬರಲಿಲ್ಲ ನ್ಡಿ ಏನು ಓದಿದ್ರೇನು ಮನುಷ್ಯನಿಗೆ ಐಬಿರಬಾರದು’ ಎಂದು ಪದ್ದಕ್ಕನಲ್ಲಿ ಹೇಳಿಕೊಂಡು ಸಮಾಧಾನ ಮಾಡಿಕೊಂಡಿದ್ದರು. ಅಮ್ಮ ಮಾತ್ರ ಯಾವುದೂ ತನಗೆ ಸಂಬಂಧಪಟ್ಟಿದ್ದಲ್ಲ ಎನ್ನುವ ಹಾಗೇ ಉಳಿದುಬಿಟ್ಟಿದ್ದಳು.
ಹೀಗೆ ಚಿಟ್ಟಿಯ ವಾರಿಗೆಯ ಎಲ್ಲರೂ ಮದುವೆಯಾಗಿ ವರ್ಷ ಕಳೆಯುವುದರೊಳಗೆ ಹೊಟ್ಟೆಯಲ್ಲಿ ಪುಟ್ಟ ಜೀವಗಳನ್ನು ಹೊತ್ತು ತವರಿಗೆ ಬಂದಿದ್ದರು. ಮದುವೆಯಾಗಿ ಒಂದೇ ವರ್ಷಕ್ಕೆ ತಮ್ಮ ಎಲ್ಲಾ ಎಳವೆಯನ್ನೂ ಕಳೆದುಕೊಂಡು, ದೊಡ್ದ ಹೆಂಗಸಿನ ಹಾಗೆ ಕಾಣುತ್ತಿದ್ದುದನ್ನು ನೋಡಿ ಚಿಟ್ಟಿ ತಾನು ಹಾಗಾಲಿಲ್ಲವಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟಿದ್ದಳು. ಅವರ ಕಥೆಗಳು, ಮನೆಯ ವಾತಾವರಣ, ಅತ್ತಿಗೆ, ಅತ್ತೆ, ನಾದಿನಿ, ಭಾವ, ಮಾವ ಎಲ್ಲರ ಕಥೆಗಳನ್ನೂ ಕೇಳುತ್ತಾ ‘ಛೇ ಇಂಥಾ ಜಂಜಾಟಕ್ಕೆ ಯಾಕೆ ಇವರೆಲ್ಲಾ ಮದುವೆಯಾಗಿದ್ದು?’ ಅಂತ ಬೇಸರವಾಯಿತು. ಎಲ್ಲಾ ಕಂಕುಳಲ್ಲಿ ಮಕ್ಕಳನ್ನು ಒತ್ತು ಓಡಾಡುತ್ತಿದ್ದರೆ ಇವಳು ಮಾತ್ರ ಚೆಲ್ಲು ಚೆಲ್ಲಾಗಿ. . .ಎನ್ನುವ ಭಾವ ಅಮ್ಮನ ಮುಖದಲ್ಲಿ ತೇಲುತ್ತಿದ್ದುದನ್ನು ಚಿಟ್ಟಿ ಗಮನಿಸಿದ್ದಳು.
ಸಂಸಾರ ಸಾಗರಗಳನ್ನು ನೋಡ್ತಾ ನೋಡ್ತಾ ತನಗೆ ಮದುವೆ ಬೇಡ ಅಂದುಕೊಂಡವಳು, ಡಿಗ್ರಿ ಕಂಪ್ಲೀಟ್ ಆಗುವ ಹೊತ್ತಿಗೆ ಅಪ್ಪ ಖಾಯಿಲೆ ಮಲಗಿದ್ದರಿಂದ ‘ಇನ್ನು ನಿನ್ನನ್ನು ಓದಿಸಲಿಕ್ಕೆ ಆಗಲ್ಲ ಕಣೆ’ ಎಂದು ಅಮ್ಮ ಹಟ ಹಿಡಿದಿದ್ದರಿಂದ ಚಿಟ್ಟಿ ಕೂಡಾ ಮದುವೆಗೆ ಒಪ್ಪಿದ್ದಳು. ಮತ್ತು ಅವಳಿಗೆ ಈಗ ಜಗತ್ತು ಪೂರ್ತಿಯಾಗಿ ಅರ್ಥವಾಗುತ್ತಿತ್ತು.
ಚಿಟ್ಟಿ ಈಗ ಅಪ್ಪಟ ಗೃಹಿಣಿ. ಇಬ್ಬರು ಮಕ್ಕಳ ತಾಯಿ. ಗಂಡ ಇಂಜಿನಿಯರ್. ನೀನು ಕೆಲ್ಸ ಮಾಡೋದು ಬೇಡ ಮನೆ ನಿಭಾಯಿಸಿಕೊಂಡು ಇರು ಸಾಕು ಎಂದು ಕಂಡೀಷನ್ ಹಾಕಿದ್ದರಿಂದ ಚಿಟ್ಟಿ ಯಾವ ಕೆಲಸಕ್ಕೂ ಅಪ್ಲೈ ಕೂಡಾ ಮಾಡಲಿಲ್ಲ. ಅಪ್ಪ ಕೊಡಿಸಿದ್ದ ಸ್ಕೂಟಿ ಮೂಲೇಲಿ ತುಕ್ಕು ಹಿಡಿಯುತ್ತಾ ನಿಂತಿತ್ತು, ಗಂಡನಿಗೆ ಹೆಂಡತಿ ಹೀಗೆ ಸ್ಕೂಟಿಯಲ್ಲಿ ಓಡಾಡುವುದು ಅವಮಾನಕರವಾಗಿತ್ತು. ಅವನ ಕಾರು, ಕಾರಿನ ಡ್ರೈವರ್ ಊರವರ ಮೂಗಿನ ಮೇಲೆ ಬೆರಳಿರಿಸುವ ಹಾಗೇ ಮಾಡಿತ್ತು.

*

ಪೇಟೆಯಲ್ಲಿ ತರಕಾರಿಗಾಗಿ ಹೊರಟಿದ್ದ ಚಿಟ್ಟಿಯನ್ನು ತಡೆದು ಗಂಡ ತಾನೇ ಕಾರು ತೆಗೆದುಕೊಂಡು ಬಂದಿದ್ದ. ದಾರಿಯಲ್ಲಿ ‘ಚಿಟ್ಟಿ’ ಎಂದು ಯಾರೋ ಕೂಗಿದರು. ತಿರುಗಿ ನೋಡಿದರೆ ಆರೋಗ್ಯ, ॒ನನ್ನಾಗಿದ್ದ ಆರೋಗ್ಯ ಮುಂಚಿನ ಹಾಗೆ ದಷ್ಟ ಪುಷ್ಟವಾಗಿರದೆ ಸಪೂರವಾಗಿದ್ದಳು. ಅವಳನ್ನ ನೋಡಿ ಕಣ್ಣರಳಿಸಿದ ಚಿಟ್ಟಿ ‘ಏನೇ?’ ಎಂದು ಮಾತಿಗೆ ನಿಂತಿದ್ದಳು. ಚಿಟ್ಟಿಯ ಗಂಡ ಮನೋಹರನಿಗೆ ಮುಜುಗರ. ಸಿರೀಶ ಹೀಗೆ ದಾರಿಯಲ್ಲಿ ನಿಂತು ಮಾತಾಡದೆ ಮನೆಗೆ ಕರೆದರೆ ಬೇಡ ಅಂತಾರಾ? ಪ್ಲೀಸ್ ಮೇಡಂ ಮನೆಗೆ ಬನ್ನಿ’ ಎನುತ್ತ ಆರೋಗ್ಯಾಗೆ ಕಾರ್ಡ್ ಕೊಟ್ಟಿದ್ದ. ಅದನ್ನು ತೆಗೆದುಕೊಳ್ಳುತ್ತಾ ಆರೋಗ್ಯ ಖಂಡಿತಾ ಬರ್ತೀನಿ. ನಿಮ್ಮಿಬ್ಬರದ್ದೂ ಒಳ್ಳೆಯ ಪೇರ್ ಅಂದಿದ್ದಳು. ಅವಳ ಮಾತಿನಲ್ಲಿದ್ದ ನಯ- ನಾಜೂಕು ನೋಡಿ ಚಿಟ್ಟಿಗೆ ಅಚ್ಚರಿಯಾಗಿತ್ತು.
‘ಚಿಟ್ಟಿ’ ಅಂತ ನನ್ನ್ ವೇಶದ ಆರೋಗ್ಯ ಮಾರ್ಕೇಟ್‌ನಲ್ಲಿ ಕೂಗಿದ್ದು ಮನೋಹರನಿಗೆ ಇಷ್ಟವಾಗಲಿಲ್ಲ. ಹಾಗಂತ ಯಾರಾದರೂ ಕರೆದರೆ ಅವನಿಗೆ ಮೂಗಿನ ತುದಿಯಲ್ಲಿ ಕೋಪ. ‘ಅಂಥಾ ಒಳ್ಳೆ ಹೆಸರನ್ನು ಹಾಳು ಮಾಡಿ ಅದೇನು ಚಿಟ್ಟಿ ಅಂತ ಕರೆಯೋದು? ಇದಕ್ಕೆ ಅಡ್ದ ಹೆಸರನ್ನು ಇಡಬಾರದು’ ಎಂದು ರೇಗುತ್ತಿದ್ದ. ಮದುವೆಯಾದ ಹೊಸದರಲ್ಲಿ ‘ಸಿರಿ’ ಅಂತ ಅವನು ಕೂಗಿದ್ರೆ ‘ಓ’ ಅನ್ನಬೇಕೋ ಬೇಡವೋ ಗೊತ್ತಾಗದೆ ನಿಲ್ಲುತ್ತಿದ್ದಳು. ಅಟೆಂಡೆನ್ಸ್ ಹಾಕುವಾಗ ಮಾತ್ರ ಪ್ರಜ್ಞಾಪೂರ್ವಕವಾಗಿ ತನ್ನ ಹೆಸರು ಸಿರೀಶ ಅಂತ ನೆನಪಿಸಿಕೊಳ್ಳುತ್ತಿದ್ದ ಚಿಟ್ಟಿಗೆ ಈಗ ಅದೇ ಹೆಸರಿನಲ್ಲೇ ಗಂಡನ ಮನೆಯವರು ಕರೆಯುವಾಗ ಆಪ್ಯಾಯತೆಯನ್ನು ಕಳೆದುಕೊಂಡ ಅನುಭವ ಆಗುತ್ತಿತ್ತು. ಎಲ್ಲರೂ ತನ್ನನ್ನು ದೂರ ಇಟ್ಟೇನೋಡ್ತಾ ಇದಾರೇನೂ ಎನ್ನುವ ಆತಂಕ ಸೃಷ್ಟಿಯಾಗುತ್ತಿತ್ತು. ‘ರೀ ನೀವೂ ನನ್ನ ಹಾಗೇ ಕರೀರಿ. ಚಿಕ್ಕ ವಯಸ್ಸಿನಿಂದ ಎಲ್ಲ ನನ್ನನ್ನು ಹಾಗೇ ಕರೆಯೋದು. ನಂಗೆ ಆ ಹೆಸರೇ ಇಷ್ಟ’ ಅಂತ ಗಂಡನ ಜೊತೆ ಹೇಳಿಕೊಂಡಾಗ ಕೋಪ ಮಾಡಿಕೊಂಡು ಊಟವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದ. ಅವನ ಎದುರಿಗೆ ಹೇಳುವ ಧೈರ್ಯ ಸಾಲಲಿಲ್ಲವಾದ್ದರಿಂದ ಮನಸ್ಸಿನಲ್ಲೇ ‘ಸಿಡುಕು ಮೂತಿಯ ಸುಬ್ಬ’ ಅಂತ ಬೈದುಕೊಂಡಿದ್ದಳು.
ಚಿಟ್ಟಿ ಆಲಿಯಾಸ್ ಸಿರೀಶ ದಿನ ಕಳೆದ ಹಾಗೆ ಗಂಡನ ಸಿಡುಕಿಗೆ, ಅವನ ಭಾವನೆಗಳಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುತ್ತಾ ಬಂದಳು. ‘ನಮ್ಮ ಸಿರಿ ಇದ್ದಾಳಲ್ಲ ಎಷ್ಟು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದಾಳೆ ಅಂತೀನಿ! ನಂಗಂತೂ ಇವಳು ಹೀಗೆ ದಾರಿಗೆ ಬರ್ತಾಳೆ ಅನ್ನೋ ನಂಬಿಕೆ ಇರಲಿಲ್ಲ’ ಎಂದು ಅಮ್ಮನೂ ಎಲ್ಲರ ಹತ್ತಿರ ಹೇಳಿಕೊಳ್ಳುತ್ತಿದ್ದಳು. ಈ ಅಮ್ಮನಾದರೂ ಚಿಟ್ಟಿ ಅನ್ನಬಾರದೇ? ಅವಳೇತಾನೆ ಈ ಹೆಸರನ್ನು ತನಗಿಟ್ಟಿದ್ದೂ? ಜೀರಿಗೆ ಮಾವಿನ ಮಿಡಿಯನ್ನು ಲಂಗದಲ್ಲಿ ತುಂಬಿಕೊಂಡು ಅದರ ಸೋನೆಯನ್ನು ಬಟ್ಟೆಯ ತುಂಬಾ ಮಾಡಿಕೊಂಡು ಬಂದ ತನ್ನ ಕಡೆಗೆ ಕಣ್ಣನ್ನು ಅಗಲಿಸಿ ‘ಚಿಟ್ಟಿ’ ಅಂತ ಕೂಗುತ್ತಿದ್ದುದು ಈಗಲೂ ಅವಳ ಕಿವಿಯನ್ನು ತುಂಬುತ್ತದೆ. ತಾನು ಬಂದರೆ ಅಮ್ಮ ಸಡಗರದಿಂದ ‘ಸಿರಿ ಸಿರಿ’ ಎಂದು ಓಡಾಡುತ್ತಾಳೆ. ಪುಟ್ಟಿ, ಸೀನು ಈಗ ‘ಅಕ್ಕಾ’ ಎನ್ನುತ್ತಾರೆ. ಬಾವನ ಕಾರು, ಕೊಡಿಸುವ ತಿಂಡಿ, ಬಟ್ಟೆ ಬೇಕಾದ ಸಾಮಾನುಗಳಿಂದ ಚಿಟ್ಟಿಗೆ ಗೌರವ ಬಂದಿದೆ. ಅವಳ ಮಕ್ಕಳನ್ನು ಎತ್ತಿ ಆಡಿಸಿ ನಗಿಸುತ್ತಾರೆ. ಅಪ್ಪ ಮಾತ್ರ ಗುಟ್ಟಾಗಿ ‘ಚಿಟ್ಟಿ ನನ್ನ ರಾಜಕುಮಾರಿ’ ಅಂತ ಕರೀತಾನೆ. ಆಗ ಅವಳ ಕಣ್ಣುಗಳು ದೀಪದ ಹಾಗೆ ಹೊಳೆಯುತ್ತವೆ.
‘ಮಕ್ಕಳನ್ನು ಸರಿಯಾಗಿ ಬೆಳೆಸಬೇಕು ಸಿರೀ. ಇದೇನಿದು ಅವರ ಇಚ್ಚೆಯ ಹಾಗೆ ಬಿಡೋದಾ?’ ಗಂಡ ರೇಗಿದರೆ ಅವಳಿಗೆ ತಾನೆಲ್ಲಾ ಹೀಗೇ ಅಲ್ಲವಾ ಬೆಳೆದಿದ್ದು ಏನಾಗಿದೆ ಎಂದು ಹೇಳುವ ಆತುರ. ‘ನೋಡು ಇಲ್ದಿದ್ದೆಲ್ಲಾ ಹೇಳಿ ನನ್ನ ತಲೆ ಕೆಡಿಸಬೇಡ. ಕಾಡು, ಮೇಡು ಸುತ್ತಿಕೊಂದು ಕರಡಿ, ಕಪಿಗಳ ಹಾಗೆ ಕಾಲ ಕಳೆಯೋದು ಮುಗೀತು. ಇನ್ನಾದರೂ ಜವಾಬ್ದಾರಿಯಿಂದ ನಡ್ಕೊಳ್ಳೋದು ಕಲ್ತುಕೋ. ಅಪ್ಪಿ ತಪ್ಪಿ ಕೂಡಾ ನಿನ್ನ ಸಾಹಸಗಾಥೆಗಳನ್ನೆ ನನ್ನ ಮಕ್ಕಳ ಎದುರು ಹೇಳಬೇಡ. ಹಾಂ ಅಂದ ಹಾಗೇ ನನ್ನ ಮಕ್ಕಳಿಗೆ ಚಿಟ್ಟಿ ಪುಟ್ಟಿ ಚಿನ್ನು ರನ್ನ ಅಂತ ಅಡ್ದ ಹೆಸರುಗಳನ್ನು ಇಡಬೇಡ. . . ಮುದ್ದಿಸಿ ಹಾಳು ಮಾಡಬೇಡ’ ಅವನು ಹಾಗೇ ಹೇಳುವಾಗ ಮೂರುವರ್ಷದ ಮಗ ಐದುವರ್ಷದ ಮಗಳು ಬಿಟ್ಟ ಕಣ್ಣಿಂದ ನೋಡುತ್ತಿದ್ದರು. ಅವನು ಹಾಗೆ ಹೋಗಿದ್ದೇ ತಡ ಮಗಳು ಬಂದು ಕುತ್ತಿಗೆಗೆ ಜೋತು ಬಿದ್ದು ‘ಅಮ್ಮ ಯಾಕಮ್ಮ ಅಪ್ಪ ನಿನ್ನ ಬೈದಿದ್ದು? ಅವನೇನು ರಾಕ್ಷಸಾನಾ?’ ಎಂದು ಕೇಳಿದ್ದಳು. ಚಿಟ್ಟಿಗೆ ತನಗೆ ಪುಟ್ಟಿ ಕೇಳಿದ್ದ ಇದೇ ಪ್ರಶ್ನೆ ನೆನಪಾಗಿ ಕಿಸಕ್ಕನೆ ನಗು ಬಂತು. ನಗುತ್ತಲೆ ‘ಹಾಗೆಲ್ಲಾ ಏನೂ ಇಲ್ಲ. ನಿನಗೆ ಪ್ರಪಂಚ ಅರ್ಥ ಆಗಬಾರದಂತೆ ಕಣೇ’ ಎಂದಳು. ‘ಹಾಗಂದ್ರೆ?’ ಕೇಳಿದಳು ಮತ್ತಷ್ಟು ಮುಗ್ದಳಾಗಿ. ‘ಯಾರು ಏನೂ ಹೇಳಿಕೊಡದೇನೂ ಎಲ್ಲಾ ನಿನಗೆ ಅರ್ಥ ಆಗುತ್ತೆ ಬಿಡು. ನಿಂಗೇನು ಮಾಡಿಕೊಡ್ಲಿ? ಮ್ಯಾಗಿ?’ ಎಂದಳು ಮಾತು ಮರೆಸಲಿಕ್ಕೆ. ಮ್ಯಾಗಿ ಎನ್ನುವ ಹೆಸರನ್ನು ಕೇಳಿದ ತಕ್ಷಣ ಮಗಳು ‘ಹಸಿವೂ’ ಎಂದು ಕಳ್ಳ ಆಟ ತೆಗೆದಿದ್ದಳು. ಚಿಟ್ಟಿ ಎನ್ನುವ ಹೆಸರನ್ನು ಮರೆಯಲು ಯತ್ನಿಸುತ್ತಿದ್ದ ಸಿರೀಶ ಎಲ್ಲದಕ್ಕೂ ಬೆನ್ನು ಹಾಕಿ ಅಡುಗೆ ಮನೆಯ ಕಡೆಗೆ ನಡೆದಿದ್ದಳು.
ಮುಗಿಯಿತು.

‍ಲೇಖಕರು G

April 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಜಿ.ಎನ್ ನಾಗರಾಜ್

    ಮೈಸೂರಿಗೆ ಅಂದುಕೊಂಡು ಹೊರಟು ಮದ್ದೂರಿನಲ್ಲೇ ದಡಕ್ಕನೇ ಇಳಿಯಬೇಕಾದಾಗ ಮನಸ್ಸು ಇನ್ನೂ ಮೈಸೂರಿನತ್ತಣ ಪ್ರಯಾಣದಲ್ಲಿಯೇ ಮುಳುಗಿದಂತಾಗಿದೆ.ಲವಲವಿಕೆಯಿಂದ ತುಂಬಿ ತುಳುಕಿದ ಈ ಕಥಾವಾಹಿನಿ ಚಿಟ್ಟಿಯ ಬೆಳವಣಿಗೆಯ ಕಥೆ ಮಾತ್ರವಾಗದೆ ಊರ ಹೆಮ್ಮಕ್ಕಳ ಜೀವನ ಸಂಕಟಗಳೆಲ್ಲಾ ಕಣ್ಮುಂದೆ ಹಾದು ಹೋಗುವಂತೆ ಮಾಡಿದೆ

    ಪ್ರತಿಕ್ರಿಯೆ
  2. Raghunandan K

    ಆಪ್ತವಾಗಿ ಓದಿಸಿಕೊಳ್ಳುತ್ತಿದ್ದ ಚಿಟ್ಟಿ ಇಷ್ಟು ಬೇಗ ಮುಗಿದೇ ಹೋಯ್ತಾ ಎನ್ನಿಸುವಂತೆ ಮಾಡಿದ್ದೀರಿ.
    ಚಿಟ್ಟಿಯನ್ನ ಕಟ್ಟಿಕೊಟ್ಟ ನಿಮಗೆ ಧನ್ಯವಾದ.

    ಪ್ರತಿಕ್ರಿಯೆ
  3. ಹನುಮಂತ ಹಾಲಿಗೇರಿ

    ಮೊದಲ ಎರಡ್ಮೂರು ಕಂತುಗಳಲ್ಲಿ ಚಿಟ್ಟೆ ಆರಾಮಾಗಿ ಓದಿಸಿಕೊಂಡಿದ್ದಾಳೆ. ಓದುತ್ತಿದ್ದಂತೆ ಮನಸ್ಸು ಹೆಣ್ಮನವಾದ ಅನುಭವ. ಆಮೇಲಾಮೇಲೆ ಕೆಲಸದ ಒತ್ತಡದಲ್ಲಿ ರಾತ್ರಿ ಓದಿದರಾಯಿತು ಎಂದುಕೊಂಡವನಿಗೆ ಆಗಿರಲೆ ಇಲ್ಲ. ಈಗ ಚಿಟ್ಟೆ ಮುಗಿದ ಅಧ್ಯಾಯ ಎಂದ ಬೇಸರವಾಗಿದೆ. ಪುಸ್ತಕ ಬಂದ ಮೇಲೆ ಕೊಂಡು ಓದಲೇಬೇಕು.

    ಪ್ರತಿಕ್ರಿಯೆ
  4. mamatha n s

    Tumba iista aaythu… chittiya paathra nanna baalyada dinagalanna nenapisithu.putta hudugiya manasina bhavanegalanna adestu chennagi nirupisiddira..chittiya maduve matthu vaivahika jeevanavannu innastu vivarisabahudittu,begane mugisida haagide. Thank you so much chandrika avare mattu thanks to avadhi…one of the best novel..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: