ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಸೈಕಲ್ ಜೊತೆಯಲ್ಲೇ ಬಿಡುಗಡೆಯನ್ನೂ ತಂದಿತ್ತು

ಕೊಟ್ಟ ಮಾತಿಗೆ ಅಪ್ಪ ತಪ್ಪಲಿಲ್ಲ, ಅವಳ ಹುಟ್ಟುಹಬ್ಬದ ಹಿಂದಿನ ದಿನ ‘ಚಿಟ್ಟಿ ನಾಳೆ ಸೈಕಲ್ ತಂದುಬಿಡೋಣ’ ಅಂತ ಹೇಳಿದಾಗ ಚಿಟ್ಟಿಗೆ ಆಕಾಶ ಅಂಗೈಲಿ. ಅಪ್ಪನ ಬಗ್ಗೆ ಪಾಪ ಅನ್ನಿಸಿ ಈಚೆಗೆ ತಾನು ಅಂಗಡಿಗೆ ಹೋಗಿ ತನಗೇನು ಬೇಕೋ ಅದನ್ನು ತೆಗೆದುಕೊಂಡು ತಿನ್ನಲಾಗದ ಕಾರಣ ಸಿಕ್ಕ ಹಣವನ್ನೆಲ್ಲಾ ಹುಂಡಿಯಲ್ಲಿ ಹಾಕಿಡುತ್ತಿದ್ದಳು. ಅಪ್ಪ ಆ ಮಾತನ್ನು ಹೇಳಿದ ತಕ್ಷಣ ಒಳಗೆ ಸಾಗಿ ಮಣ್ಣಿನ ಆ ಹುಂಡಿಯನ್ನು ಒಡೆದು ಅದರಲ್ಲಿದ್ದ ಚಿಲ್ಲರೆ ಕಾಸನ್ನು ಹಿಡಿದು ಅಪ್ಪನ ಮುಂದೆ ರಾಶಿ ಹಾಕಿದ್ದಳು.
ಅಪ್ಪನ ಕಣ್ಣಲ್ಲಿ ಅಯಾಚಿತವಾಗಿ ಹನಿಯೊಂದು ಮೂಡಿ, ಚಿಟ್ಟಿಯನ್ನು ದಿಟ್ಟಿಸುತ್ತಾ ‘ನಿನಗೆ ಸೈಕಲ್ ತಂದುಕೊಡಲಿಕ್ಕಾಗದೆ ಇರೋಷ್ಟು ಬಡವನಲ್ಲ ನಿನ್ನಪ್ಪ’ ಎಂದಿದ್ದ. ಅಯ್ಯೋ ತನ್ನ ಉದ್ದೇಶ ಅದಲ್ಲ ಎಂದು ಚಿಟ್ಟಿಗೆ ಹೇಳಬೇಕು ಅನ್ನಿಸಿತಾದರೂ ಹೇಗೆ ಹೇಳುವುದು ಗೊತ್ತಾಗಲಿಲ್ಲ. ‘ಇದನ್ನೆಲ್ಲಾ ನೀನೇ ಇಟ್ಕೋ, ಕಾಲೇಜಿಗೆ ಹೋಗೋವಾಗ ಬ್ಯಾಗೋ, ಬುಕ್ಕೋ ತಗೊಳ್ಳೋಕ್ಕೆ ಬರುತ್ತೆ’ ಎಂದು ಮಾತು ಮುಗಿಸಿದ್ದ.
ಅಲ್ಲಿಗೆ ಚಿಟ್ಟಿಗೆ ಸೈಕಲ್ ಸಿಗೋದು ಗ್ಯಾರೆಂಟಿಯಾಗಿತ್ತು.  ಇದನ್ನೆಲ್ಲಾ ನೋಡಿತ್ತಿದ್ದ ಸೀನು ‘ಅವಳಿಗೆ ಮಾತ್ರ ಏನು ನಂಗೂ ಸೈಕಲ್ ಬೇಕು’ ಅಂತ ಹಟ ಹಿಡಿದ. ‘ನಿನ್ನ ಸೈಕಲ್ ನಂಗೂ ಕೊಡ್ತೀಯಾ? ನಾನೂ ಕಲೀತೀನಿ’ ಎಂದು ಪುಟ್ಟಿ ಚಿಟ್ಟಿಯನ್ನು ಮತ್ತೆ ಮತ್ತೆ ಕೇಳಿ ರೇಜಿಗೆ ಹತ್ತಿಸಿಬಿಟ್ಟಿದ್ದಳು. ಈ  ಗಲಾಟೆಯಿಂದ ತಲೆ ಚಿಟ್ಟು ಹಿಡಿಸಿಕೊಂಡ ಅಮ್ಮ ಅಪ್ಪನ ಹತ್ತಿರ ‘ಇದೆಲ್ಲಾ ಯಾಕೆ ಬೇಕಿತ್ತು? ಈಗಲೇ ಇವಳನ್ನ ಹಿಡಿಯೋರು ಇಲ್ಲ, ಒಬ್ಬರಿಗೆ ತಂದು ಇನ್ನೊಬ್ಬರಿಗೆ ಇಲ್ಲ ಅಂದ್ರೆ ಸುಮ್ನೆ ಜಗಳ, ನಿಮಗೇನು ಮನೇಲಿರೋಳು ನಾನು’ ಅಂತ ವಾದಿಸಿ ಕೋಪ ಮಾಡಿಕೊಂಡಿದ್ದಳು. ಅಜ್ಜಿಗೆ ಮಾತ್ರ ಸೈಕಲ್ ಒಳ್ಳೆಯದಾ? ಕೆಟ್ಟದ್ದಾ? ಎನ್ನುವ ಗೊಂದಲ ಇದ್ದ ಹಾಗಿತ್ತು. ಅದಕ್ಕೆ ಪರ ವಿರೋಧ ಮಾತುಗಳು ನಡೆಯುತ್ತಿದ್ದಾಗಲೂ ಏನೂ ಮಾತಾಡದೆ ಉಳಿದಳು.
ಸೈಕಲ್ ಸಿಗುತ್ತೆ ಅಂತ ಗೊತ್ತಾದ ತಕ್ಷಣ ಸುಮ್ಮನಿರದ ಚಿಟ್ಟಿ ಊರಿಗೆಲ್ಲಾ ತನಗೆ ಸೈಕಲ್ ಸಿಗುತ್ತೆ ಅಂತ ಸಾರಿಕೊಂಡು ಬಂದಿದ್ದಳು. ಅವಳ ಉತ್ಸಾಹವನ್ನು ನೋಡಿ ಕೆಲವರು ನಕ್ಕರೆ, ಇನ್ನು ಕೆಲವರು ಮೊನ್ನೆ ತಾನೆ ತೆಗೆದ ಅವಳ ಕಾಲಿನ ಪಟ್ಟಿಯನ್ನು ಮತ್ತೆ ನೆನಪಿಸಿ ‘ಹುಷಾರು ಚಿಟ್ಟಿ’ ಎಂದಿದ್ದರು. ‘ನಮ್ಮಪ್ಪ ಕೊಡುಸ್ತಿರೋದು ಲೇಡೀಸ್ ಸೈಕಲ್ ಕಣ್ರೀ ಹಾಗೆಲ್ಲಾ ಆಗಲ್ಲ ಲಂಗ ಹಾಕ್ಕೊಂಡೂ ಸಲೀಸಾಗಿ ತುಳೀಬಹುದು’ ಎಂದು ಉತ್ತರ ಕೊಟ್ಟಿದ್ದಳು.
ಹೀಗೆ ಚಿಟ್ಟಿ ಸೈಕಲ್ ತೆಗೆದುಕೊಳ್ಳುವ ವಿಚಾರ ಬಾಯಿಂದ ಬಾಯಿಗೆ- ಮನೆಯಿಂದ ಮನೆಗೆ ಹರಡಿ ‘ಇನ್ನ ಅವಳನ್ನ ಹಿಡಿಯೋರೇ ಇಲ್ಲ ಬಿಡು’ ಎಂದು ನಿಟ್ಟುಸಿರಿಟ್ಟರು. ಕೂದಲು ಬಿರೆ ಹೊಯ್ದುಕೊಂಡು ಗಾಳಿಗೆ ಅದನ್ನು ಹಾರಿಸುತ್ತಾ ಸೈಕಲ್ ತುಳಿಯುವ ಚಿಟ್ಟಿಯ ಚಿತ್ರವನ್ನು ನೆನೆಸಿಕೊಂಡು ಹೊಟ್ಟೆಕಿಚ್ಚನ್ನೂ ಪಟ್ಟಿದ್ದರು. ಚಿಟ್ಟಿ ಮಾತ್ರ ಇನ್ನು ತಾನು ಸ್ವತಂತ್ರವಾಗಿ ಎಲ್ಲಿಗೆ ಬೇಕಾದರೂ ಹೋಗಬಹುದಾದ್ದನ್ನು, ಯಾರೋ ಕಷ್ಟದಲ್ಲಿದ್ದರೆ ತಕ್ಷಣ ಹೋಗಿ ಅವರನ್ನು ಕಾಪಾಡುವುದನ್ನು . . . ಸೈಕಲ್ ರೇಸ್ ಇಟ್ಟು ಅದರಲ್ಲಿ ತಾನು ಮೊದಲಿಗಳಾಗಿ ಬರುವುದನ್ನು… ಹೀಗೆ ಏನೆನೆಲ್ಲವನ್ನು ನೆನೆಸಿಕೊಂಡು ಖುಷಿಯಲ್ಲಿ ತೇಲಿಹೋಗುತ್ತಿದ್ದಳು.
ಜೀನತ್ತುವಿನ ಎರಡನೆಯ ಮಗುವಿನ ಜೊತೆ ಆಡುತ್ತಾ ‘ಇವನ್ನ ನಾನು ನೋಡಿಕೊಳ್ತೀನಿ ಅಕ್ಕಾ, ನನ್ನ ಲಂಗ ಬೇಕೇ ಬೇಕು, ಸೈಕಲ್ ಮೇಲೆ ಇದೇ ಲಂಗನ ಹಾಕ್ಕೋಂಡು ತುಳೀಬೇಕು. ಬೇಗ ಹೊಲೆದುಕೊಡು ಎನ್ನುತ್ತಾ’ ಹಟಕ್ಕೆ ಬಿದ್ದಳು. ‘ಉಮ್ಮಾ’ ಎನ್ನುತ್ತಾ ಕಾಡುತ್ತಿದ್ದ ಮಗುವನ್ನು ಎಳೆದುಕೊಂಡು ಕೂಡಿಸಿಕೊಳ್ಳುತ್ತಿದ್ದ ಚಿಟ್ಟಿಯನ್ನು ಕಡೆಗಣ್ಣಿಂದ ನೋಡುತ್ತಾ ಬಟ್ಟೆ ಹೊಲೆಯುತ್ತಿದ್ದ ಜೀನತ್ತುವಿಗೆ ಅದ್ದು ಬಂದಿದ್ದೂ ಗೊತ್ತಾಗಲಿಲ್ಲ. ತಲೆಗೆ ಹಾಕಿದ್ದ ಲೇಸಿನ ಟೋಪಿಯನ್ನು ತೆಗೆದು ‘ಯಾ ಅಲ್ಲಾ’ ಎಂದು ಗೊಣಗಿಕೊಂಡು ಕಟ್ಟೆಗೆ ಕೂತ ಅವನನ್ನು ಮುದ್ದು ಮುದ್ದಾಗಿ ‘ಅಬ್ಬು’ ಎನ್ನುತ್ತಾ ಮಗು ಹೋಗಿ ಹಿಡಿದುಕೊಂಡಿತು. ಚಿಟ್ಟಿಗೆ ಸ್ವಲ್ಪ ಗಾಬರಿಯಾಯಿತು. ಜೀನತ್ ಎಲ್ಲಿ ತನ್ನ ಬಟ್ಟೆಯನ್ನು ಅರ್ಧಕ್ಕೆ ಹೊಲೆಯುವುದನ್ನು ಬಿಟ್ಟು ಎದ್ದುಬಿಡುತ್ತಾಳೋ ಎಂದು. ಜೀನತ್ ಹಾಗೇನೂ ಮಾಡದೆ ತನ್ನ ಪಾಡಿಗೆ ತಾನು ಕೆಲಸದಲ್ಲಿ ಮಗ್ನಳಾದಳು. ಮಗುವನ್ನು ಆಡಿಸುತ್ತಾ ಅದ್ದು ಕೂತ. ಈಗ ಅದ್ದು ತನ್ನನ್ನು ಹೋಗು ಎಂದು ಹಿಂದೆಲ್ಲಾ ಕಳಿಸಿದ ಹಾಗೇ ಕಳಿಸಬಹುದು ಎಂದು ಕಾದಳು. ಹಾಗೇನೂ ಆಗಲಿಲ್ಲ. ಚಿಟ್ಟಿಗೆ ಸ್ವಲ್ಪ ನಿರಾಸೆಯಾಯಿತಾದರೂ ಇದ್ಯಾವುದೂ ತನ್ನ ಲಂಗ ಹೊಲೆಯಲಿಕ್ಕೆ ಅಡ್ಡಿ ಆಗಲಿಲ್ಲವಲ್ಲ ಎನ್ನುವ ಸಮಾಧಾನವಾಯ್ತು.
ಚಿಟ್ಟಿ ಅವನನ್ನೇ ನಿರುಕಿಸಿದಳು. ಅದ್ದುಗೆ ಇಷ್ಟು ಬೇಗ ವಯಸ್ಸಾಗಿಬಿಟ್ಟಿತಾ? ಅವನ ಜೊಂಪೆ ಜೊಂಪೆ ಕೂದಲಲ್ಲಿ ಧಾರಾಳವಾಗಿ ಹಣಕಿ ಹಾಕುತ್ತಿದ್ದ ಬಿಳಿ ಕೂದಲು, ಕೆನ್ನೆಯ ಮೇಲೆ ಮೂಡುತ್ತಿದ್ದ ನೆರಿಗೆ ಎಲ್ಲವೂ ಇದನ್ನೇ ಸಾರಿ ಹೇಳುತ್ತಿದ್ದವು. ಜೀನತ್ ಮುಖದಲ್ಲಿ ಮಾತ್ರ ಎಳಸುತನ ಕಾಣುತ್ತಿತ್ತು. ಜಾರುತ್ತಿದ್ದ ಸೆರಗನ್ನು ಸರಿ ಮಾಡಿಕೊಂಡು ನಿರಂತರವಾಗಿ ಹೊಲೆಯುತ್ತಲೇ ಇದ್ದಳು. ನೇರವಾದ ಮೂಗು, ಮೂಗುತಿ ಪಳ್ ಅಂತ ನಕ್ಕಿತ್ತು. ಛೇ ಜೀನತ್ ಇಂಥಾ ವಯಸ್ಸಾದವನನ್ನು ಮದುವೆ ಆಗಬಾರದಿತ್ತು, ಅದೂ ಅಷ್ಟು ಹಟ ಮಾಡಿ, ನಬೀಲಾಳನ್ನು ಎದುರು ಹಾಕಿಕೊಂಡು. . .
ಇಷ್ಟಾಗಿಯೂ ಇವಳು ಸಾಧಿಸಿದ್ದಾದರೂ ಏನು? ತಣ್ಣಗೆ ಕೂತ ಇಂಥಾ ಗಂಡನನ್ನೇ?’ ಎಂದುಕೊಂಡಳು. ಜೀನತ್ ಮುಖದಲ್ಲೂ ಮೊದಲಿನ ಖುಷಿಯಾಗಲೀ, ತುಂಟತನವಾಗಲೀ ಕಾಣಲಿಲ್ಲ. ಯಾಕೋ ಅಜ್ಜಿ ಹೇಳುತ್ತಿದ್ದ ‘ಹೊಸದ್ರಲ್ಲಿ ಅಗಸ ಬಟ್ಟೇನ ಎತ್ತಿ ಎತ್ತಿ ಒಗೆದ’ ಎನ್ನುವ ಮಾತು ನೆನಪಾಯಿತು. ಈಗ್ಯಾಕೆ ತನಗೆ ಈ ಮಾತು ನೆನಪಾಯಿತು? ಅಂದ್ರೆ ತನಗೆ ಏನೋ ಅರ್ಥವಾಗ್ತಾ ಇದೆ ಅಂದ ಹಾಗಾಯ್ತು. ಅವಳಿಗೆ ಆಶ್ಚರ್ಯವೂ ಆಯಿತು. ಯಾವುದರ ಪರಿವೆಯೂ ಇಲ್ಲದೆ ತೀರಾ ಸಹಜವಾಗಿ ಜೀನತ್ ತನ್ನ ಹಲ್ಲುಗಳಿಂದ ಕೊನೆಯಲ್ಲಿ ಉಳಿದ ದಾರವನ್ನು ಕಚ್ಚಿ ಕತ್ತರಿಸುತ್ತಾ ‘ತಗೋ ಚಿಟ್ಟಿ’ ಎಂದು ಲಂಗವನ್ನು ಅವಳ ಕೈಗೆ ಕೊಟ್ಟಳು. ಈ ಲಂಗ ಹಳೆಯ ಲಂಗದಷ್ಟು ಚೆನ್ನಾಗಿಲ್ಲ ಅಂತ ಅನ್ನಿಸಿತಾದರೂ, ಏನು ಮಾಡುವುದು ಅಂಥಾದ್ದೆ ಬಟ್ಟೆ ಮತ್ತೆ ಸಿಗಬೇಕಲ್ಲವಾ? ಅಪ್ಪನಾದರೂ ಎಲ್ಲಿಂದ ಹುಡುಕಿ ತಂದಾನು? ಅವನ ಅನಿವಾರ್ಯತೆಯನ್ನು ನೆನೆದು ಅವಳು ಸುಮ್ಮನಾಗಬೇಕಿತ್ತು.
ಹಾಗೆ ಹೊಲಿಸಿ ತಂದ ಲಂಗದ ಚಂದವನ್ನು ಪುಟ್ಟಿಗೆ ತೋರಿಸುತ್ತಿರುವಾಗ ಅಜ್ಜಿ ಅಪ್ಪನ ಹತ್ತಿರ ಬಹುದೊಡ್ಡ ತಕರಾರನ್ನೆ ತೆಗೆದಿದ್ದಳು. ‘ಅಲ್ಲ ಕಣೋ ಎಳೇ ಮಕ್ಕಳು ಕುಣಿದ ಹಾಗೇ ನೀನು ಕುಣಿಯೋದಾ? ನಾಳೆ ಆಗೋದಕ್ಕೆಲ್ಲಾ ನೀನೇ ಜವಾಬ್ದಾರಿ ಆಗ್ತೀಯಾ’ ಎಂದಳು ಮಾತು ತೆಗೆಯುವವಳಂತೆ. ಕಿವಿಗೆ ಕಡ್ಡಿಯನ್ನು ಹಾಕಿಕೊಂಡು ಕಣ್ಣನ್ನ ಮುಚ್ಚಿ ಸುಖವನ್ನು ಅನುಭವಿಸುತ್ತಿದ್ದ ಅಪ್ಪನಿಗೆ ಅಜ್ಜಿಯ ಮಾತು ಕಿರಿಕಿರಿ ಮಾಡಿತು. ‘ಏನಮ್ಮ ಅದು ನಿನ್ನ ಗೋಳು’ ಎಂದ ಕಿವಿಯಿಂದ ಕಡ್ಡಿಯನ್ನು ತೆಗೆಯುತ್ತಾ. ‘ಅಲ್ಲ ಕಣೊ ಹೆಣ್ಣ್ ಹುಡ್ಗೀನ ಹೇಗ್ ನೋಡ್ಕೋಬೇಕು ಅಂತ ನಿಂಗೆ ಗೊತ್ತಾಗ್ತಿಲ್ಲ? ಸೈಕಲ್ ಕೊಡುಸ್ತೀನಿ ಅಂತಿದ್ದೀಯಲ್ಲಾ?’ ಎಂದಳು ಅಜ್ಜಿ. ತನ್ನ ಆಸೆಗೆ ಕಲ್ಲು ಹಾಕಲಿಕ್ಕೆ ಎಷ್ಟು ಜನ ಕಾಯ್ತಾ ಇದಾರೆ! ಇವರಿಗೆಲ್ಲಾ ತನ್ನ ಸೈಕಲ್ ಮೇಲೆ ಯಾಕೆ ಕಣ್ಣು? ಎಂದು ಚಿಟ್ಟಿ ಕಂಗಾಲಾದಳು.
‘ಏನೋ ಮಗು ಆಸೆ ಪಡ್ತಿದೆ ಅಲ್ಲಿ ಇಲ್ಲಿ ಹೋಗಿ ಕೈಕಾಲು ಮುರ್ಕೊಂಡು ಇಲ್ದಿದ್ದ ಅವಾಂತ್ರ ಮಾಡ್ಕೊಳ್ಳೋಕ್ಕಿಂತ  ವಾಸಿ ಅಲ್ವಾ ಅದಕ್ಕೆ…’ ಎಂದು ಅಪ್ಪ ಮಾತು ಮುಗಿಸಿ ಇಲ್ಲ ಆಗಲೇ ಅಜ್ಜಿ ಬಾಯಿ ಹಾಕಿ ‘ಅದೇ ಕಣೋ ಬೇಡ ಅಂತಿರೋದು. ಇವತ್ತು ಬೆಳಗ್ಗೆ ಆ ಪದ್ದಕ್ಕ ಬಂದಿದ್ರು ಅವ್ರಿಗೂ ಚಿಟ್ಟಿಗೆ ಸೈಕಲ್ ತಕ್ಕೊಡೊ ವಿಷ್ಯ ಗೊತ್ತಾಯ್ತಂತೆ’ ಎಂದಳು ಏನೋ ಗುಟ್ಟನ್ನು ಹೇಳುವಂತೆ. ಅತ್ತೆ, ಸೊಸೆ ಯಾವತ್ತೂ ಒಟ್ಟಿಗೆ ಮಾತಾಡದವರು ಆಶ್ಚರ್ಯ ಎನ್ನಿಸುವ ಹಾಗೇ ಅಮ್ಮ ಈಗ ಅಜ್ಜಿ ಪರವಾಗಿ ವಾದ ಮಾಡತೊಡಗಿದಳು.‘ ನಾನ್ ಹೇಳಿದ್ರೆ ಇವ್ರಿಗೆ ಎಲ್ಲ್ ತಲೇಗ್ ಹೋಗುತ್ತೆ? ಊರೋರೆಲ್ಲಾ ನಮಗೆ ಬುದ್ಧಿ ಹೇಳಬೇಕು. ಹಾಗ್ ಮಾಡೋದೇ ಇವ್ರಿಗೆ ಇಷ್ಟ’ ಎಂದಳು.
ಅಪ್ಪನಿಗೆ ಈಗ ಸಿಡಿಮಿಡಿ ಶುರುವಾಯ್ತು, ‘ಅದೇನ್ ಹೇಳ್ತೀರೋ ನೇರವಾಗ್ ಹೇಳಿ ಇಲ್ಲಾಂದ್ರೆ ಸುಮ್ನೆ ಬಿದ್ದಿರಿ’ ಎಂದ. ‘ಹಾಂ ನೀವ್ ಹೀಗ್ ಹೇಳ್ತೀರ ಅಂತ ನನಗೆ ಗೊತ್ತಿತ್ತು. ಅದಕ್ಕೆ ಹೇಳಲ್ಲ ಅಂದ್ರೆ ಅತ್ತೆ ಕೇಳ್ಲಿಲ್ಲ’ ಎಂದಳು ಅಮ್ಮ. ಮತ್ತೆ ಮತ್ತೆ ತನಗೇ ತಾಕುವ ಹಾಗೇ ಮಾತಾಡುತ್ತಿದ್ದ ಅಮ್ಮನನ್ನು ನೋಡಿ ‘ಥತ್ ಏನ್ ಹೆಂಗ್ಸೇ ನೀನು ನಿನ್ನ ಏನಂತ ಮದ್ವೆ ಆದ್ನೋ ಕಾಣೆ ಮದ್ವೆ ಆದ್ ದಿನದಿಂದಾನೂ ಬರೀ ಕಿರಿ ಕಿರೀನೇ. ಮಗೂಗ್ ಕೊಡ್ಸೋ ಒಂದು ಸೈಕಲ್ ವಿಷಯಕ್ಕೆ ಯಾಕೆ ಹೀಗೆ ಜೀವ ತೆಗೀತಿದೀರಿ’  ರೇಗಿದ. ‘ಅಯ್ಯೊ ಅಯ್ಯೋ ಅವ್ಳ ಮೇಲ್ಯಾಕೋ ರೇಗ್ತೀಯ? ಅವ್ಳಿಗೆ ಮಗಳು ಅಂತ ನಿನಗಿಂತ ಜಾಸ್ತಿ ಪ್ರೀತೀ ಇದೆ. ಕೊಡ್ಸೋದ್ ದೊಡ್ದಲ್ಲ, ಹೀಗೆ ಸೈಕಲ್ ತುಳ್ದು ಮದ್ವೆ ಹೊತ್ತಲ್ಲಿ ಕಷ್ಟಕ್ಕೆ ಸಿಕ್ಕಿಕೊಳ್ಳೋದಕ್ಕಾಗುತ್ತಾ ? ನೀನೇ ಹೇಳು?’ ಎಂದಳು. ‘ಮದುವೆಗೂ ಸೈಕಲ್‌ಗೂ ಏನಮ್ಮ ಸಂಬಂಧ?’ ಅಪ್ಪ ಮತ್ತೆ ರೇಗಿದ. ‘ಇದೆ ಕಣೋ. ಇದೆ ಮೊನ್ನೆ ಪದ್ದಕ್ಕ ಸಂಬಂಧದಲ್ಲಿ ಮದ್ವೆ ಆಯ್ತಂತೆ. ಹುಡುಗನ ಕಡೆ ಒಳ್ಳೆ ಸ್ಥಿತಿವಂತ್ರು. ಹುಡ್ಗಿ ಚೆನ್ನಾಗಿದೆ ಅಂತ ಮದ್ವೆನೂ ಮಾಡ್ಕೊಂಡ್ರು. ಆದ್ರೆ ಮೊದಲ್ನೆ ರಾತ್ರಿ ಕಳ್ದ ಮೇಲೆ ಅವ್ರತ್ತೆ ಹೋಗಿ ಹಾಸಿಗೆ ಹುಡುಕಿದ್ರಂತೆ. ಒಂದು ಸಣ್ಣ ಕಲೆ ಕೂಡಾ ಕಾಣಲಿಲ್ಲ ಅಂತ ಸಿಟ್ಟ್ ಮಾಡ್ಕೊಂಡ್ ಆ ಹುಡ್ಗೀನ ಬಿಟ್ಟೇ ಹೋಗ್ಬಿಟ್ರಂತೆ! ಅವ್ಳೂ ಹೀಗೇ ಸೈಕಲ್ ತುಳೀತಿದ್ಲಂತೆ’. ಅಪ್ಪ ಮೌನವಾದ. ಅಜ್ಜಿ ‘ಕನ್ಯಾಪೊರೆ ಇಲ್ಲ ಅಂದ್ರೆ ಇವ್ಳನ್ನ ಗಂಡ ಒಪ್ಕೊಳ್ಳೋದಾದ್ರೂ ಹೇಗೆ ಹೇಳು? ಆ ಹುಡುಗಿಯ ಜೀವನ ಹಾಳಾದ ಹಾಗೇ ಚಿಟ್ಟೀಯದ್ದೂ. . . ’ ಎಂದಳು. ಅಪ್ಪ ಸಿರ್ರೆಂದು ರೇಗಿದ ‘ಹಾವು ಮುಂಗ್ಸಿ ಹಾಗಿರೋ ಇಬ್ರೂ ಸೇರ್ಕೊಂಡ್ ಮಾತಾಡೋಕ್ಕ್ ಬಂದಾಗ್ಲೇ ಅಂದ್ಕೊಂಡೆ. ಇಲ್ಲಿ ಯಾರ್ದೋ ಖರಾಮತ್ತಿದೆ ಅಂತ. ನಾನ್ ಅವತ್ತಿಂದ ಹೇಳ್ತಿದೀನಿ ಆ ಹೆಂಗಸಿನ ಸಹವಾಸ ಬೇಡಾಂತ. ಅತ್ತೆ ಸೊಸೆ ಇಬ್ರೂ ಅವ್ಳ್ ಹಿಂದೆ ಗಿರಗಿಟ್ಲೆ ಥರ  ಸುತ್ತ್‌ತೀರಲ್ಲ? ನೋಡಿ ಈಗ್ಲೂ ಹೇಳ್ತಾ ಇದೀನಿ,  ಇನ್ನೂ ಯಾವ ಕಾಲ್ದಲ್ಲಿದ್ದೀರಾ ಇಬ್ರೂ?’ ಎಂದ ಖಡಕ್ಕಾಗಿ.
‘ಅಲ್ಲ ಕಣೋ. . .’ ಎನ್ನುವ ಅಜ್ಜಿಯ ಮಾತನ್ನು ತುಂಡರಿಸುತ್ತಾ  ‘ಹೆಂಗಸ್ರ ಬುದ್ದಿ ಮೊಳಕಾಲ್ ಕೆಳ್ಗೆ ಅಂತ ಸುಮ್ನೆ ಅಂದಿಲ್ಲ. ಇಲ್ದಿರೋದೆಲ್ಲಾ ಯೋಚ್ನೆ ಮಾಡ್ಕೊಂಡು ನೀವ್ ಹಾಳಾಗೋದಲ್ದೆ ಮಕ್ಳನ್ನೂ ಹಾಳ್ ಮಾಡ್ತಾ ಇದೀರಾ . . .‘ ಎಂದ. ಅಪ್ಪನ ಮಾತಿಗೆ ಅಜ್ಜಿ ತನ್ನ ಎಂದಿನ ಮಾಮೂಲಿ ಭಂಗಿಯಲ್ಲಿ ಕೂತು ‘ಹೌದು ಕಣೋ ನೀನು ನನ್ನ ಅನ್ನ ಬೇಕಾದ್ದೆ. ಅನ್ನು ಅನ್ನು. ಇದೇ ಹೆಂಗಸು ಕಣೋ ನಿನ್ನ ಹೆತ್ತಿದ್ದು, ಬೆಳೆಸಿದ್ದು, ಓದಿಸಿ ಈ ಸ್ಥಿತಿಗೆ ತಂದಿದ್ದು. ಅದಕ್ಕೆ ನನ್ನ ಬುದ್ದಿ ಮೊಳಕಾಲ ಕೆಳಗೆ. ನಿನ್ನ ಮಗಳು ಹೆಣ್ಣೆ ತಿಳ್ಕೋ, ಇವಳ ಪರವಾಗಿ ಮಾತಾಡೋಕ್ಕೆ ಹೋಗಿ ನನ್ನ ಅಂತಾ ಇದೀಯಾ? ಮಗಳಿಗಾದರೆ ಒಂದು ಅಮ್ಮನಿಗಾದರೆ ಒಂದಾ’ ಎಂದು ಕಣ್ಣು, ಮೂಗು ವರೆಸಿಕೊಳ್ಳಲು ಶುರುಮಾಡಿದಳು. ‘ಇಷ್ಟಕ್ಕೆಲ್ಲಾ ಕಾರಣವಾದ ಆ ಪದ್ದಕ್ಕನನ್ನು ಹಿಡಿದು ಒಮ್ಮೆಯಾದರೂ ಹೊಡೆದುಬಿಡಬೇಕು. ಅವಳಿಗೆ ತಂದಿಟ್ಟು ತಮಾಷಿ ನೋಡುವ ಬುದ್ದಿ ಬಹಳ ಆಯ್ತು’ ಎಂದು ಕೊಂಡ ಚಿಟ್ಟಿಗೆ ಇದ್ದಕ್ಕಿದ್ದಹಾಗೇ ‘ಅರೆ ಅಜ್ಜಿ ಮಾತಾಡ್ತ ಇರೋದು ನಿಜ ಅಲ್ವಾ? ಅಪ್ಪ ನನ್ನ ಪರವಾಗಿ ಮಾತಾಡಿದ್ದು ಸರೀನೇ. ಆದ್ರೆ  ಅಜ್ಜಿಯನ್ನು ಹೆಂಗಸಿನ ಬುದ್ದಿ ಅಂತ ಬೈಯ್ಯಬಾರದಿತ್ತು. ಅಜ್ಜಿಯ ಹಾಗೇ ನಾನೂ ಹೆಂಗಸೇ ಅಲ್ಲವಾ? ಇವತ್ತು ಅಜ್ಜಿಯನ್ನು ಬೈದವ ನಾಳೆ ನನ್ನ ಬೈಯ್ಯಲ್ಲ ಅಂತ ಏನು ಗ್ಯಾರೆಂಟಿ?’ ಎನ್ನುವ ಗೊಂದಲಕ್ಕೆ ಬಿದ್ದಳು. ಅದಕ್ಕಿಂತ ದೊಡ್ಡ ಪ್ರಶ್ನೆ ಅವಳ ತಲೆಯಲ್ಲಿ ಉಳಿದಿದ್ದು ಕನ್ಯಾಪೊರೆಯದ್ದು.
ಹೇಗೇ ಯೋಚಿಸಿದರೂ ಚಿಟ್ಟಿಗೆ ಯಾವುದಕ್ಕೂ ಉತ್ತರ ಸಿಗುವ ಹಾಗಿರಲಿಲ್ಲ. ಅವಳಿಗೆ ಈರುಳ್ಳಿಪೊರೆ ಗೊತ್ತು, ಹಾವಿನ ಪೊರೆಗೊತ್ತು ಯಾವುದಿದು ಕನ್ಯಾಪೊರೆ? ಸೈಕಲ್ ತುಳುದ್ರೆ ಅದ್ಯಕೆ ಹೋಗುತ್ತೆ? ಅದೆಲ್ಲಿರುತ್ತೆ? ಹೇಗಿರುತ್ತೆ? ದಪ್ಪಕ್ಕೆ ತೆಳ್ಳಗೆ? ಊಹುಂ ಗೊತ್ತಾಗ್ತಾ ಇಲ್ಲ. ಕೇಳಿದಳಾದರೂ ಭಾರತಿಗಾಗಲಿ, ಸರೋಜಾಗಾಗಲೀ, ಎಲ್ಲ ಕಟ್ಟೆ ಒಡೆದಿರೋರೇ ಎಂದು ಕಿಸಿಕಿಸಿ ನಕ್ಕ ನಕ್ಕತ್ತುವಿಗಾಗಲೀ ಈ ವಿಷಯ ಗೊತ್ತಿರಲಿಲ್ಲ. ಆ ಹಾಳು ಆರೋಗ್ಯಾಗೇ ಇಂಥಾ ವಿಷಯಗಳು ಚೆನ್ನಾಗಿ ಗೊತ್ತಿರುತ್ತಿತ್ತು. ಅವಳು ಎಲ್ಲಿ ಹೋಗಿ ಸತ್ತಿದ್ದಾಳೋ ತಿಳಿಯದು? ಯಾರ ಹತ್ರ ಉತ್ತರ ಸಿಗುತ್ತೆ? ಆ ಹಾಳು ಪದ್ದಕ್ಕ ಇಂಥಾದ್ದನ್ನೆಲ್ಲಾ ಯಾಕೆ ಅಮ್ಮ ಅಜ್ಜಿಯರ ತಲೆಗೆ ತುರುಕಬೇಕು? ಅಪ್ಪ ಏನಾದ್ರೂ ಮನಸ್ಸನ್ನು ಬದಲಿಸಿಕೊಂಡು ಬಿಟ್ಟರೆ… ಒಟ್ಟಿನಲ್ಲಿ ಎಲ್ಲಾ ತನ್ನ ಸುಖವನ್ನು ಹಾಳು ಮಾಡಲಿಕ್ಕೇ ಇರೋರು ಎಂದು ಬೇಸರಿಸಿಕೊಂಡಳು.
ಇಷ್ಟೆಲ್ಲಾ ಆದಮೇಲೂ ಅಪ್ಪ ಮಾತ್ರ ಯಾರ ಮಾತನ್ನೂ ಕೇಳದೆ ಸೈಕಲ್ ತಂದುಕೊಟ್ಟಿದ್ದ. ಅಮ್ಮ ಅಜ್ಜಿ ತುಂಬ ಹಟ ಮಾಡದೆ ಅಪ್ಪನಿಗೆ ಸುಮ್ಮನೆ ಬೇಡ ಅಂತ ಹೇಳಿದ್ದರೆ ಅವನು ಕೇಳುತ್ತಿದ್ದ ಅನ್ನಿಸುತ್ತೆ. ‘ಆಗಿದ್ದೆಲ್ಲಾ ಒಳ್ಳೇದಕ್ಕೆ ಬಿಡು’ ಎನ್ನುವ ನಕ್ಕತ್ತು ವೇದಾಂತ ಯಾರಿಗೆ ಪ್ರಿಯವಾಗುತ್ತೊ ಇಲ್ಲವೋ ಗೊತ್ತಿಲ್ಲ ಆದರೆ ಚಿಟ್ಟಿಗೆ ಮಾತ್ರ ಆಪ್ಯಾಯ ಅನ್ನಿಸಿತ್ತು. ಸ್ನಾನ ಮಾಡಿ ದೇವರ ಮುಂದೆ ನಿಂತು ಕೈ ಮುಗಿಯುತ್ತಿದ್ದ ಚಿಟ್ಟಿಗೆ ‘ಚಿಟ್ಟಿ ಬೇಗ ಬಾರೆ’ ಎಂದ ಪುಟ್ಟಿಯ ಧ್ವನಿ ಕೇಳಿಸಿತು. ಹೊರಗೆ ಓಡಿ ಬಂದು ನೋಡಿದರೆ   ತನಗೆ ಪ್ರಿಯವಾದ ತಿಳಿ ಗುಲಾಬಿ ಬಣ್ಣದ ಸೈಕಲ್ ಹೊಳೆಯುತ್ತಾ ಮನೆಯ ಮುಂದೆ ನಿಂತಿತ್ತು. ಆಕಾಶವೇ ಕೈಗೆ ಎಟಕಿದಷ್ಟು – ಕಣ್ಣಲ್ಲಿ ನೀರು ತುಂಬಿಕೊಳ್ಳುವಷ್ಟು ಖುಷಿಯಾಯ್ತು.
‘ಎಲ್ಲಿ ಹತ್ತು ನೋಡೋಣ’ ಎಂದ ಅಪ್ಪ-ಇನ್ನೇನು ಅತ್ತೇ ಬಿಡುತ್ತಾಳೆ ಎನ್ನುವ ಅವಳ ಭಾವುಕತೆಯನ್ನು ನೋಡುತ್ತಾ. ಚಿಟ್ಟಿ ಒಂದು ಕ್ಷಣ ಕಣ್ಣಾಡಿಸಿದಳು. ಏನೋ ತೋಚಿದವಳಂತೆ ಎಲ್ಲವನ್ನೂ ಅದ್ಭುತ ಎನ್ನುವಂತೆ ನೋಡುತ್ತಾ ನಿಂತಿದ್ದ ಟಾಮಿ  ಒಂದೇ ಸಲಕ್ಕೆ ತನ್ನ ಮೇಲೆ ಎರಗಿಬಿಡುತ್ತೋ ಎನ್ನುವ ಭಯದಿಂದ ಅಲ್ಲಿದ್ದ ಚೈನಿಂದ ಕಟ್ಟಿದಳು. ಅದು ತನ್ನನ್ನು ಯಾಕೆ ಕಟ್ಟಿ ಹಾಕ್ತಿದೀಯ ಎನ್ನುವಂತೆ ಕುಯ್ಯ್ ಕುಯ್ಯ್ ಎನ್ನತೊಡಗಿತ್ತು. ಅಪ್ಪ ಅವಳ ಮುಂಜಾಗರೂಕತೆಗೆ ನಕ್ಕ. ಅಷ್ಟರಲ್ಲಿ ಓಡಿ ಬಂದ ಸೀನು ‘ನಂದು ಸೈಕಲ್’ ಎನ್ನುತ್ತಾ ಅಳಲಿಕ್ಕೆ ಶುರುಮಾಡ್ದ. ‘ಅಕ್ಕ ಸ್ವಲ್ಪ ಹೊತ್ತು ಹೊಡೀಲಿ ಆಮೇಲೆ ನಿಂಗೆ ಕೊಡ್ತೀನಿ’ ಎಂದು ಅಪ್ಪ ಅವನನ್ನು ಸಮಾಧಾನ ಮಾಡಿದನಾದರೂ, ಸೀನು ಬಿಡದೆ ಹಟ ಮಾಡಿ ಚಿಟ್ಟಿಯ ಕೈಗಳನ್ನು ಪರಚಿ, ಕಚ್ಚಿಬಿಟ್ಟ. ನೋವು, ಉರಿಗೆ ಚಿಟ್ಟಿಗೆ ಅಳುಬಂತು. ಅದನ್ನು ನೋಡಿ ಅವನನ್ನು ಹಿಡಿದೆಳೆದುಕೊಂಡು ‘ಲೇ ಇವನ್ನ ಕರ್ಕೋಳ್ಳೆ’ ಎಂದು ಎರಡು ಮೂರು ಸಲ ಅಮ್ಮನಿಗೆ ಕೂಗಿ ಹೇಳಿದ ಅಪ್ಪ. ಅಮ್ಮ ಹೊರಗೇ ಬಾರದ ಕಾರಣ ಸೀನನಿಗೆ ಒಂದು ಏಟನ್ನು ಕೊಟ್ಟು ಒಳಗೆ ಕಳಿಸಿದ. ಅಳುತ್ತಾ ಹೊರಟ ಅವನನ್ನು ನೋಡಿ ಚಿಟ್ಟಿಗೆ ಬೇಸರವಾಯಿತಾದರೂ ಕೈಲಿದ್ದ ಹೊಳೆವ ಸೈಕಲ್ ಅಷ್ಟರವರೆಗೆ ನಡೆದ ಎಲ್ಲವನ್ನೂ ಮರೆಸಿತ್ತು. ‘ನಾನು ಹಿಡ್ಕೋತೀನಿ ಚಿಟ್ಟಿ ಯೋಚ್ನೆ ಮಾಡ್ಬೇಡ’ ಎಂದು ಅಪ್ಪ ಹೇಳಿದ್ದರಿಂದಲೋ ಹಿಂದೆ ಸೈಕಲ್ ಹೊಡೆದ ಅನುಭವ ಇದ್ದಿದ್ದರಿಂದಲೋ‌ ಏನೋ ಚಿಟ್ಟಿಯಲ್ಲಿ ವಿಶ್ವಾಸ ಜಾಸ್ತಿಯಾಗಿತ್ತ್ತು. ಸ್ವಲ್ಪ ದೂರ ಬಿಟ್ಟೂಬಿಟ್ಟು ಕಾಲನ್ನು ನೆಲಕ್ಕೆ ಕೊಡುತ್ತಿದ್ದವಳು ನಂತರ ಸಲೀಸಾಗಿ ಸೈಕಲ್ ತುಳಿಯಹತ್ತಿದ್ದಳು. ಅಪ್ಪನಿಗೆ ಸಂತೋಷವಾಗಿತ್ತು. ಒಂದು ದೊಡ್ದ ರೌಂಡ್ ಹೋಗಿ ಬರ್ತೀನಿ ಅಪ್ಪಾ ಕೂಗಿ ಹೇಳಿದಳು ಎಲ್ಲರಿಗೂ ತನ್ನ ಸೈಕಲ್ ತೋರಿಸಬೇಕಲ್ಲಾ. ಅಪ್ಪ ಹುಂ ಎಂದು ತಲೆ ಆಡಿಸಿದ.
ಹಾಗೆ ತುಳಿಯುತ್ತಾ ಹೊರಟವಳ ಮನಸ್ಸಿನಲ್ಲಿ ಕೇಡಿಗ ಬುದ್ದಿ ಜಾಗೃತವಾಯ್ತು. ಸೀದಾ ಪದ್ದಕ್ಕನ ಮನೆಯ ಮುಂದೆ ಬಂದು ಸೈಕಲ್ ನಿಲ್ಲಿಸಿ ಅವಳು ಕಿಟಕಿಯಲ್ಲಿ ಬಗ್ಗಿ ನೋಡುವವರೆಗೂ ಬೆಲ್ಲನ್ನು ಬಾರಿಸತೊಡಗಿದಳು. ‘ಯಾರದು?’ ಎನ್ನುತ್ತಾ ಪದ್ದಕ್ಕ ಬಗ್ಗಿ ನೋಡಿ ಚಿಟ್ಟಿಯನ್ನು ಕಂಡಿದ್ದೇ ಮುಖ ಸಿಂಡರಿಸಿಕೊಂಡಳು. ‘ನಿನ್ನ ಆಟ ನನ್ನ ಹತ್ತಿರ ಇನ್ನು ನಡೆಯಲ್ಲ. ನನಗೆ ಸೈಕಲ್ ಸಿಗದೇ ಇರುವಹಾಗೆ ನೋಡ್ದಿಕೊಂಡೆ ಅಲ್ಲವಾ? ಆದ್ರೆ ಈಗ ಆಗಿದ್ದೇನು? ನೋಡು ಸೈಕಲ್‌ನ’  ಎನ್ನುವಂತೆ ಅವಳ ಎದುರೇ ರಾಜಾರೋಷವಾಗಿ ಸೈಕಲ್ ತುಳಿಯುತ್ತಾ ಚಿಟ್ಟಿ ಮುಂದೆ ಸಾಗಿದಳು. ಅವಳ ಕಾಲಿಗೆ ಅದ್ಭುತ ಶಕ್ತಿ, ಮನಸ್ಸಿಗೆ ಅಪೂರ್ವವಾದ ಹುಮ್ಮಸ್ಸು ಮೂಡಿತ್ತು. ‘ನಿನ್ನದೇ ನೆಲ ನಿನ್ನದೇ ಜಲ ನಿನ್ನದೇ ಆಕಾಶ ಕಿಂಚಿತ್ತೂ ಅನುಮಾನ ಬೇಡವೋ’  ಎಲ್ಲೋ ಕೇಳಿದ ಹಾಡು ನಾಲಿಗೆಯಲ್ಲಿ ನಲಿಯತೊಡಗಿತ್ತು.

(ಮುಂದುವರಿಯುವುದು…)

 

‍ಲೇಖಕರು avadhi

March 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ ಕೊನೆಯ ಭಾಗ : ಚಿಟ್ಟಿ ಸಿರೀಶ ಆಗಿದ್ದಳು « ಅವಧಿ / Avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ ಕೊನೆಯ ಭಾಗ : ಚಿಟ್ಟಿ ಸಿರೀಶ ಆಗಿದ್ದಳು April 1, 2014 by G (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: