ಪಿ ಚಂದ್ರಿಕಾ ಅಂಕಣ – ಕಾಣದ ದಾರಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

2

ನಾನೇನು ಕೇಳಿದೆ? ಉತ್ತರ ಹೇಳಲಾಗದ್ದನ್ನಾ? ಅಥವಾ ಆ ಪ್ರಶ್ನೆಗೆ ಉತ್ತರಿಸಿ ಬಿಟ್ಟರೆ ಎಲ್ಲ ಸೋಗುಗಳು ಕಳಚಿ ನಗ್ನವಾಗಿ ನಿಂತ ಹಾಗಾಗುತ್ತೆ ಅಂತಲಾ? ಕಾರು ಮಾತ್ರ ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುವ ಹಾಗೆ ಲೀಲೆ ಎನ್ನುವ ಹಾಗೆ ಜಾರುತ್ತಾ ಆಡಾಡುತ್ತಾ ಬೆಟ್ಟ ಇಳಿಯತೊಡಗಿತು. ಸಹಾರ ಕಿಸುರುಗಟ್ಟಿದ್ದ ಕಣ್ಣ ತುದಿಯನ್ನು ಸೈಡ್ ಮಿರರ್ ಕಾಣ ಸುತ್ತಿತ್ತು. ಯಾಕೋ ಅಸಹ್ಯ ಅನ್ನಿಸಿತು. ರಾತ್ರಿ ಕುಡಿದಿರಬೇಕು, ಅದೆ ನೆನ್ನೆ ಮಧ್ಯಹ್ನ ಅದ್ಯಾವನೋ ತಂದುಕೊಟ್ಟ ಆ ಫಾರಿನ್ ಸ್ಕಾಚನ್ನು! ಕೊಟ್ಟವ ಶುದ್ಧನಾ? ಜಗಳ ಆಡಿದ್ದೆ. ಮಾತು ಮೀರಿ ಹೋಗುತ್ತದೆ ಅನ್ನಿಸಿದಾಗ, `ಸಂಜೆ ಮಾತಾಡೋಣ’ ಅಂದವರು ಸಂಜೆ ಆಗುತ್ತಿದ್ದಂತೆ ಕೈಗೇ ಸಿಗಲಿಲ್ಲ. ಬೆಳಗ್ಗಿನಿಂದ ಬದಲಾವಣೆ, ಸಮಾವೇಶ, ಒಗ್ಗಟ್ಟು ಎಂದೆಲ್ಲಾ ಮಾತಾಡಿದರು. ಜೊತೆಗಿರುವ ನನ್ನ ಮಾತ್ರ ದೂರ ಇಟ್ಟರು. ಹೊರ ಜಗತ್ತಿಗೆ ಎಷ್ಟು ಎತ್ತರದ ವ್ಯಕ್ತಿತ್ವ ಎಂಥಾ ಸರಳತೆ. ಇಲ್ಲಿಲ್ಲ ಸರಳ ಎಂದು ತೋರಿಸಿಕೊಳ್ಳಲಿಕ್ಕೆ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದರು?! ಆದರೆ ಆ ಸೋಗಿನ ಮುಖದ ಹಿಂದೆ ಎಷ್ಟೆಲ್ಲಾ ಅಡಗಿದೆ?! ಒಂದು ಹುಳು ತಲೆಗೆ ಹೊಕ್ಕರೆ ಬಿಡದ ನಾನು ಇನ್ನೂ ಅವರನ್ನು ಕೇಳುವ ಹುಕಿಯನ್ನೇ ಉಳಿಸಿಕೊಂಡಿದ್ದೆ.

‘ಆ ರಾಘು ಈಗ ಹತ್ತು ವರ್ಷಗಳ ಹಿಂದಿನ ತನಕ ಅಂಡರ್ ವರ್ಲ್ಡ್ ಅನ್ನು ಆಳಿದವ. ಅವನ ಕೈಲಿ ಹೆಣವಾದವರೆಷ್ಟು? ಎಷ್ಟು ಮಂದಿ ಆಸ್ತಿ ಕಳಕೊಂಡರು? ತಮ್ಮ ಹೆಣ್ಣು ಮಕ್ಕಳನ್ನು ಕೂಡಾ. ಬದಲಾದೆ ಎಂದು ಮಾತಾಡಿ, ಎರಡಕ್ಷರ ಬರೆದುಬಿಟ್ಟರೆ ಎಲ್ಲವೂ ಬದಲಾಗುತ್ತೆ ಅಂತ ನಾನು ನಂಬಬೇಕು. ಪ್ರಪಂಚವನ್ನು ನಂಬಿಸುವುದು ಸುಲಭ ಅಥವಾ ಅದಕ್ಕೆ ಅಂಥಾ ದರ್ದು ಇಲ್ಲ. ಆದ್ದರಿಂದ ನಂಬಿದೆ ಅನ್ನುವ ಹಾಗೆ ನಡೆದುಕೊಳ್ಳುತ್ತದೆ. ನಾನು ಹಾಗಲ್ಲ. ಕಮಿಟೆಡ್ ಮಂದಿಯ ಜೊತೆ ಬೆಳೆದೆ. ಅಂಥವನನ್ನೇ ಮದುವೆ ಮಾಡಿಕೊಂಡೆ. ನನಗೆ ಸರಿ ತಪ್ಪುಗಳು ಬೇರೆಯವರಿಗಿಂತ ಬೇಗ ಅರ್ಥವಾಗುತ್ತೆ. ಕಾ ಎನ್ನುವವರೆಗೂ ಅದು ಕಾಗೆ ಎಂದು ನಿರ್ಧಾರಕ್ಕೆ ಬರಬೇಡ ಎನ್ನುವ ನಿಮ್ಮ ಮಾತನ್ನ ನಾನು ಕೇಳಬೇಕು ಅಲ್ಲವಾ? ನನ್ನ ನಂಬಿಸಲು ಬರಬೇಡಿ, ನಂಬಿಸಿದ ತಕ್ಷಣ ಅರ್ಧ ಯುದ್ಧ ಗೆದ್ದ ಹಾಗೆ ಅಂದುಕೊಂಡರೆ ಅದು ನಿಮ್ಮ ತಪ್ಪು. ಅಂಥವನಿ೦ದ ಪಾರ್ಟಿಗೆ ಸಪೋರ್ಟಾ? ಬೇಡಿ ಸಹಾ ಅಂಥಾ ಹಣ ನಮ್ಮನ್ನು ಆಳುವುದು ಬೇಡ’ ಎಂದು ಬೇಡಿಕೊಂಡೆ ಕೇಳಲಿಲ್ಲ. ಇದು ಹಣದ ವಿಷಯ ನೀವು ತಲೆ ಹಾಕಬೇಡಿ.ಇದನ್ನು ನನ್ನ ಮನೆಯ ಖರ್ಚಿಗೆ ತೆಗೆದುಕೊಂಡು ಹೋಗುತ್ತಿಲ್ಲ’ ಎಂದರು.

ವಯಸ್ಸು ಜಾರಿದಂತೆಲ್ಲಾ ಇಂಥಾ ಮಾತುಗಳು ಬರುತ್ತವಾ. ಹೋರಾಟದಲ್ಲಿದ್ದಾಗ ಏನನ್ನೂ ಮುಟ್ಟದ ಸಹಾ ಈಗ ಯಾಕೆ ಬದಲಾದರು. ಸಾಮ್ರಾಜ್ಯವನ್ನು ಕಟ್ಟಿಕೊಳ್ಳುತ್ತಿದ್ದಂತೆ ಹಣದ ಅವಶ್ಯಕತೆ ಯಾವುದಕ್ಕಾದರೂ ಒಪ್ಪಿಕೊಳ್ಳುವಂತೆ ಮಾಡುತ್ತದಾ? ನನಗೆ ಗೊತ್ತು ಅವರು ಹಣ ತೆಗೆದುಕೊಂಡು ಏನೂ ಮಾಡಲಾರರು ಯಾಕೆಂದರೆ ದಿನಕ್ಕೆ ಹತ್ತು ಟೀ ಬಿಟ್ಟರೆ ಏನೂ ಬೇಕಾಗಿಲ್ಲ. ಅವರ ಈ ನಿಲುವು ಅವರ ಸುತ್ತ ಇರುವವರಲ್ಲಿನ ಲೋಭವನ್ನು ಬಡಿದೆಬ್ಬಿಸುತ್ತಿದೆ. ಸಂಘಟನೆಯ ಹೆಸರಲ್ಲಿ ಹೇಗೆ ಹೇಘೋ ಹಣವನ್ನು ಮಾಡಿಕೊಳ್ಳುತ್ತಿದ್ದಾರೆ. ಇವರು ಬಿಗ್ಗಿಯಾಗಿಬಿಟ್ಟೆ ಉಳಿದವರಿಗೆ ದಾರಿ ಎಲ್ಲಿ ಸಿಗುತ್ತೆ? ನನಗೂ ಕೋಪ ಬಂತು,ಯಾಕೆ ತಲೆ ಹಾಕಬಾರದು? ಇಷ್ಟು ದಿನಗಳು ನೀವು ಕಟ್ಟಿದ ಸಂಘಟನೆ ಹೋರಾಟ ಎಲ್ಲದರಲ್ಲು ನಾನಿದ್ದೀನಿ. ಆಗ ಬೇಕಾದವಳು ನಿಮ್ಮನ್ನು ವಿರೋಧಿಸಿದೆ ಅಂದ ತಕ್ಷಣ ಬೇಡವಾಗ್ತೀನಿ ಅಲ್ವಾ?’ ಎಂದೆ. ಗೊತ್ತು ನನ್ನ ವಾದಕ್ಕೆ ಸಹಾ ಸೊಪ್ಪೂ ಹಾಕುವುದಿಲ್ಲ. ನನ್ನದು ಹಟಮಾರಿತನವೋ, ಆದರ್ಶದ ಬೆನ್ನು ಏರಿದ ತವಕವೋ, ನನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹಂಬಲವೋ? ಗೊತ್ತಿಲ್ಲ. ಸಹಾ ರೇಗು ಹತ್ತಿದಾಗ ಮಾತ್ರ ನಿಮ್ಮದು ಆತ್ಮರತಿ. ಸ್ವಲ್ಪ ಕಡಿಮೆ ಮಾಡಿಕೊಳ್ಳಿ’ ಎನ್ನುತ್ತಿದ್ದರು.

ನಿಜ ನನ್ನದು ಆತ್ಮರತಿಯೇ ಏನು ಮಾಡಲಿ? ಜಗತ್ತೆಲ್ಲಾ ಹೀಗೆ ಹೋ ಎನ್ನುತ್ತಾ ನೈತಿಕತೆಯನ್ನೆ ಮರೆತು ಯಾವುದರ ಹಿಂದೆಯೋ ಓಡುವಾಗ, ನೀತಿಗೋಸ್ಕರ, ನಿಯತ್ತಿಗೋಸ್ಕರ, ಈ ಸಮಾಜ ಉದ್ಧಾರಕ್ಕೋಸ್ಕರ ಎಲ್ಲವನ್ನೂ ತ್ಯಾಗ ಮಾಡಿದವರಿಗೆ ಉಳಿಯಲಿಕ್ಕೆ ಏನಾದರೂ ಬೇಡವೋ? ಅದು ಆತ್ಮರತಿಯ ಹಾಗೆ ಕಂಡರೆ ನನ್ನ ತಪ್ಪಾ? ನನ್ನದೇನೋ ಆತ್ಮರತಿ ಅದಕ್ಕೆ ಅಂಟಿಕೊಂಡು ಬದುಕುತ್ತಿರುವೆ ನಿಜ. ಆದರೆ ಇವರು ಹೊರಗೆ ಯಾವುದನ್ನ ಬೇಡ ಅಂತ ತಿರಸ್ಕಾರದಿಂದ ನೋಡುತ್ತಿದ್ದಾರೋ, ಯಾವುದನ್ನು ತಮ್ಮ ಜೀವಮಾನದ ಬರವಣ ಗೆಯ ಮೂಲಕ ವಿರೋಧಿಸುತ್ತಿದ್ದರೋ, ತಮ್ಮ ಹಾಡುಗಳ ಮೂಲಕ ಜನರನ್ನು ರೊಚ್ಚಿಗೆಬ್ಬಿಸುತ್ತಿದ್ದರೋ ಅಂಥಾ ಅದರ ಬಗ್ಗೆ ಒಳಗೆ ತೀವ್ರವಾದ ಹಂಬಲ ಉಳಿಸಿಕೊಂಡು ಬಿಟ್ಟಿದ್ದಾರಲ್ಲಾ! ನನ್ನ ಹಠ ಇನ್ನೂ ಜಾಸ್ತಿಯಾಯಿತು,ಛೇ! ಹಣದ ಜೊತೆ ಆ ಮನುಷ್ಯ ರಾಘು ಕೊಟ್ಟ ಫಾರಿನ್ ಸ್ಕಾಚನ್ನು ನಾಚಿಕೆ ಇಲ್ಲದೆ ತೆಗೆದುಕೊಂಡರಲ್ಲಾ? ಅದು ಸ್ಕಾಚ್ಮಾತ್ರಾ ಅಂದುಕೊಳ್ಳಬೇಡಿ ಜನರ ನೆತ್ತರು. ಅದಕ್ಕೆ ಸೂತಕ ಇದೆ. ನೀವು ಕುಡಿದರೆ ನನಗೆ ನೋವಾಗುತ್ತೆ’ ಎಂದು ಅದನ್ನ ತೆಗೆದುಕೊಂಡಿದ್ದಕ್ಕೆ ವಿರೋಧಿಸಿದೆ. ಬಿ ಪ್ರಾಕ್ಟಿಕಲ್ ಐ ಸೆ. ಅವನು ಎಲ್ಲವನ್ನೂ ಬಿಟ್ಟು ಹತ್ತು ವರ್ಷಗಳೇ ಆಗಿದೆ. ಮೇಲಾಗಿ ಅವನ ಜೊತೆ ಸಹಾಯಕ್ಕೆ ಒದಗಿ ಬರುವ ಜನ ಇದ್ದಾರೆ. ಇಷ್ಟಕ್ಕೂ ಅವನು ಬದಲಾಗಿಲ್ಲ ಅಂತ ನೀವು ಯಾಕೆ ಅಂದುಕೊಳ್ಳುತ್ತೀರಿ? ಇನ್ನು ಈ ಸ್ಕಾಚು. ಇದರ ವಿಷಯಕ್ಕೂ ನಿಮಗೂ ಯಾವ ಸಂಬಂಧವೂ ಇಲ್ಲ. ಇದರ ಜೊತೆ ಎಮೋಷನಲ್ ಸಂಗತಿಗಳನ್ನು ಸೇರಿಸಬೇಡಿ. ಇದು ಇರೋದು ಕುಡಿಯೋಕೆ. ಅವನು ಪ್ರೀತಿಯಿಂದ ತಂದುಕೊಟ್ಟಿದ್ದಾನೆ...’ ಅವರ ಮಾತುಗಳು ಮುಗಿಯುವ ಮೊದಲೇ ನಾನು ಸಿಡಿದಿದ್ದೆ.ಪ್ರೀತಿ?! ನಿಮಗೆ ಅಗತ್ಯ ಕಂಡಿದ್ದು ಯಾವುದೇ ಇದ್ದರೂ ಅದರ ಹಿಂದೆ ನಿಮಗೆ ಪ್ರೀತಿ ಧಾರಾಳವಾಗಿ ಕಾಣುತ್ತೆ. ಅವತ್ತು ನನ್ನಲ್ಲಿ ಕೂಡಾ ನಿಮಗೆ ಕಂಡಿದ್ದು ಇದೇ ಪ್ರೀತಿ ತಾನೆ? ಎಲ್ಲಿ ಹೋಯಿತು ಸಹಾ ನಿಮ್ಮ ಸಿನ್ಸಿಯಾರಿಟಿ?’ ನನ್ನ ಮಾತುಗಳು ಕಿವಿದೆರೆಗೆ ಬೀಳಲೇ ಇಲ್ಲ ಎನ್ನುವ ಹಾಗೇ ಎದ್ದು ಹೊರಟುಬಿಟ್ಟರು.

ಮತ್ತೆ ಸಿಕ್ಕಿದ್ದು ಬೆಳಗ್ಗೆಯೇ. ಎಂದಿನ ಹಾಗೆ ಗಂಟು ಹುಬ್ಬು, ತುಟಿಯ ಮೇಲೆ ಮಾತ್ರ ಮಂದಹಾಸ. ಈ ಮನುಷ್ಯನಿಗೇನಾ ನಾನು ಹಂಬಲಿಸಿದ್ದು? ಈ ಮನುಷ್ಯನ ಆಶಯಗಳಿಗೆ ನಾನು ದುಡಿಯುತ್ತಿರುವುದು? ಇವರು ನನ್ನನ್ನು ಪಕ್ಕದಲ್ಲಿ ಇಟ್ಟುಕೊಂಡಿರುವುದು ನನ್ನ ಮೇಲಿನ ಗೌರವಕ್ಕಲ್ಲ, ನನ್ನಂಥ ಹೆಣ್ಣೊಬ್ಬಳಿದ್ದರೆ ಜಗತ್ತು ಇವರನ್ನು ಒಪ್ಪತ್ತದೆ ಎನ್ನುವ ನಂಬಿಕೆಯಿಂದ ಅಂತ ಎಷ್ಟೋ ಸಲ ಅನ್ನಿಸಿದೆ. ನಾನು ಒಳಗೆ ಇಷ್ಟೆಲ್ಲಾ ತಳಮಳಿಸುತ್ತಿರುವಾಗ, ಏನೂ ಆಗಿಲ್ಲ ಎನ್ನುವಂತೆ ಕಿಟಕಿಯ ಹೊರಗೆ ನೋಡುತ್ತಿದ್ದ ಸಹಾ ನನಗೆ ಹುಚ್ಚು ಹಿಡಿಸಿಬಿಡುತ್ತಾರೆ ಎನ್ನುವ ಭಯ ಕಾಡತೊಡಗಿತು.

ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಲೇ ಇಲ್ಲ ಚೈತನ್ಯ! ನಾಳೆ ನನ್ನ ಜೊತೆ ನೀವು ಬರ್ತಾ ಇದ್ದೀರಲ್ವಾ? ಬಲವಂತ ಅಂದುಕೊಳ್ಳಬೇಡಿ, ನಿಮ್ಮನ್ನ ಬನ್ನಿ ಅಂತ ನಾನು ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, ನೀವು ಬಂದ್ರೆ, ನಿಮ್ಮೂರಿನ ಜನರ ಸಹಕಾರ ಸಿಗುತ್ತೆ. ನಿಮ್ಮ ಕಂಠ ಅವರೆಲ್ಲರನ್ನೂ ಮಂತ್ರ ಮುಗ್ಧಗೊಳಿಸುತ್ತೆ. ಒಂದು ಆಪ್ತವಾದ ವಾತಾವರಣ. ಯೋಚನೆ ಮಾಡಿ, ಯಾವುದಕ್ಕೆ ಅಲ್ಲದಿದ್ದರೂ ನಿಮ್ಮತ್ತೆ ಮಾವ- ಸತೀಶನ ತಂದೆ ತಾಯನ್ನು ಮಾತಾಡಿಸಿ ಬರಬಹುದು’ ಎಂದರು. ನಿಜಕ್ಕೂ ನನಗೆ ನೋವನ್ನಿಸಿತು. ಎಂದೂ ನೆನಪಾಗದ ಅತ್ತೆ ಮಾವ ಇವರಿಗೆ ಈಗ ನೆನಪಾಯುತಲ್ಲವೇ? ಎಂದಾದರೂ ಹೋಗಿ ಅವರನ್ನು ನೋಡಿ ಬರುವೆ ಎಂದಾಗನೀನಿಲ್ಲದೆ ನಾನಿರಲಾರೆ’ ಎಂದು ಎಮೋಷನಲ್ ಬ್ಲಾಕ್ಮೇಲ್ ಮಾಡಿ ಹೋಗದಂತೆ ಮಾಡಿರಲಿಲ್ಲವೇ? ಅವರಿಗೆ ಸತೀಶನ ಜೊತೆಗಿನ ನನ್ನ ನೆನಪೂ ಬೇಡ. ಎಲ್ಲವನ್ನೂ ಕಳಕೊಂಡು ನಾನು ಮಾತ್ರ ಇವರಿಗೆ ಸಿಗಬೇಕು. ನಾನ್ನೊಳಗ್ಗಿನ ಯ್ವುದನ್ನೂ ಇವರು ಒಪ್ಪಿಕೊಳ್ಳುವ ಸ್ಥಿತಿಯಲ್ಲೇ ಇಲ್ಲ. ಆಶಾಳ ವಿಷಯವೊಂದಕ್ಕೆ ಮಾತಾಡಲ್ಲ ಅದಷ್ಟೇ ನನ್ನ ಪುಣ್ಯ. ಇದನ್ನೆಲ್ಲಾ ನಾನು ಇನ್ನೂ ಎಷ್ಟು ದಿನ ನೋಡಬೇಕು?
ಕಾಡು ಮುಗಿಯಿತು.

ಬಸ್ ನಿಲ್ದಾಣ ಕಂಡಿದ್ದೇ ತಡ ನಾನು ಡ್ರೈವರ್ಗ ಗೆ, ಕಾರು ನಿಲ್ಲಿಸಿ’ ಎಂದು ಹೇಳಿದೆ. ನಿಂತ ಕಾರನ್ನು ಇಳಿಯುವಾಗ ಸೆರಗು ಹ್ಯಾಂಡಲ್‌ಗೆ ಸಿಕ್ಕು ಹರಿಯಿತು. ವಿನಾ ಕಾರಣ ಕಣ್ಣಲ್ಲಿ ನೀರು ಜಿನುಗಿತು. ಬಾಗಿಲನ್ನು ಹಾಕಿ ಬಗ್ಗಿ,ಹೋಗಿ ಬನ್ನಿ’ ಎಂದೆ. ಇದ್ದಕ್ಕಿದ್ದಂತೆ ನನ್ನ ನಿರ್ಧಾರದಿಂದ ಕಂಗಾಲಾದಂತೆ ಸಹಾ ಕಾರನ್ನ ಇಳಿದು, ಯಾಕೆ ಇಲ್ಲೇ ಇಳಿಯುತ್ತಿದ್ದೀರಿ?, ಮನೆಯತನಕ ಬಿಟ್ಟು, ಆಮೇಲೆ ಮೀಟಿಂಗ್‌ಗೆ ಹೋಗುವೆ, ನಡಿಯಿರಿ’ ಎಂದು ನನ್ನ ತೋಳುಗಳನ್ನು ಹಿಡಿದರು. ಇಷ್ಟು ವಿನಯವನ್ನು ಜಿನುಗಿಸುವ ಮಾತುಗಳನ್ನು ಎಲ್ಲಿ ಕಲಿತರು? ಪ್ರೀತಿಯನ್ನೆ ಸವರುವ ಮಾತುಗಳನ್ನು ಎಲ್ಲಿಂದ ಹೊತ್ತು ತಂದರು?ಸಹಾ ಸತ್ಯ ಹೇಳಲಿಕ್ಕೆ ಸಾಧ್ಯ ಆಗುವುದು ಒಂದು ಭೂಮಿಗೆ, ಮತ್ತೊಂದು ಹೆಣ್ಣಿಗೆ ಮಾತ್ರ. ನಿಮ್ಮ ಹಾಗೆ ಮಾತಾಡಲು ನನಗೆ ಸಾಧ್ಯವಾಗದೆ ಹೋಗಬಹುದು. ಆದರೆ ಸತ್ಯ ಹೇಳಲಿಕ್ಕೆ ನನಗೆ ಯಾವ ಅಳುಕೂ ಇಲ್ಲ. ಈಗಲೂ ಹೇಳುತ್ತಿರುವೆ ನಿಮ್ಮ ಬ್ಯಾಗಿನಲ್ಲಿರುವ ಫಾರಿನ್ ಸ್ಕಾಚ್, ನಿಮಗೆ ಒಂದಲ್ಲ ಒಂದು ದಿನ ನೀತಿ ಹೇಳುತ್ತದೆ. ನೀವು ಯಾರನ್ನ ಬದಲಾಗಿದ್ದಾರೆ ಎಂದು ಹೇಳುತ್ತಿದ್ದೀರೋ ನನಗೆ ಗೊತ್ತಾಗುತ್ತಿಲ್ಲ. ಕತ್ತಿಗೆ ಅಂಟಿದ ರಕ್ತವನ್ನು ಏಳು ನದಿಗಳ ನೀರಿಂದ ತೊಳೆದರೂ ಶಿಂಡು ವಾಸನೆ ಹೋಗಲ್ಲಾಂತಾರೆ’ ಎಂದೆ. ಎಲ್ಲರಿಗೂ ಜಗತ್ತು ಅವಕಾಶ ಕೊಡುತ್ತೆ ನೀವು ಮಾತ್ರಾ ...’ ಎಂದು ಭುಜದ ಮೇಲೆ ಕೈಯಿಟ್ಟು, ಏನೋ ಹೇಳಲು ಬಂದ ಅವರನ್ನು ತಡೆಯುತ್ತಾ ಬಿಕ್ಕಿದೆೆ.

ಪ್ಲೀಸ್ ಚೇತು ನಿಮ್ಮಿಂದ ಈ ಮಾತುಗಳನ್ನು ನಾನು ನಿರೀಕ್ಷಿಸಿರಲಿಲ್ಲ. ಪ್ಲೀಸ್ ಇಂಥಾ ಎಮೋಷನಲ್ ಗಳಿಂದ ಹೊರಗೆ ಬನ್ನಿ. ಜಗತ್ತು ನಿಂತ ನೀರಲ್ಲ’ ಎಂದರು. ಇನ್ನು ವಾದ ಬೇಡ ಎಂತಲೋ ಈ ಮಾತಿಗೆ ಏನು ಬದಲು ಹೇಳಲಿ? ಅದೂ ಅಲ್ಲದೆ ಆ ಡ್ರೈವರ್ನ ಎದುರು ಎಂದೋ ಸುಮ್ಮನೆ ನಿಂತೆ. ಪ್ಲೀಸ್ ಇನ್ನೊಬ್ಬರ ಮುಂದೆ ಇದೆಲ್ಲಾ ಏನು? ಈಗ ನೀವು ಬರುವುದಾದರೆ ಕರೆದೊಯ್ಯುವೆ. ಇಲ್ಲದಿದ್ದರೆ ನಾನು ಹೊರಡಬೇಕಾಗುತ್ತದೆ. ನನಗಾಗಿ ಒಂದು ಖಾಸಗಿ ಸಭೆ ಇದೆ, ಸಣ್ಣ ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿಕೊಂಡು ನಿಲ್ಲಲಿಕ್ಕೆ ಆಗುವುದಿಲ್ಲ’ ಎಂದರು. ಸಣ್ಣ ಪುಟ್ಟ ಸಂಗತಿಗಳಾ? ಯಾವುದು ನೈತಿಕವಾದ ಹೋರಾಟವಾಗಬೇಕಿತ್ತೋ ಅದು ಸಣ್ಣ ಪುಟ್ಟ ಸಂಗತಿ. ಇನ್ನು ಇವರ ಖಾಸಗಿ ಸಭೆಗಳು ಹೇಗಿರುತ್ತದೆ ಎಂದು ಕಣ್ಣಾರೆ ಕಂಡಿದ್ದ ನನಗೆ, ಇಳಿದು ಹೋದ ಮನುಷ್ಯನ ಬಳಿ ಮಾತಾಡುವುದರಲ್ಲಿ ಅರ್ಥ ಇಲ್ಲ ಅನ್ನಿಸಿತು. ಸಹಾ ನನ್ನ ಮೌನ ಅರ್ಥ ಮಾಡಿಕೊಂಡವರಂತೆ ಅಸಹಾಯಕತೆಯಿಂದ ಕಾರನ್ನು ಹತ್ತಿ,ಹೊರಡು’ ಎಂದು ಡ್ರೈವರ್ ಗೆ ಹೇಳಿದರು. ಅವರ ಧ್ವನಿ ಸ್ವಲ್ಪ ಕಟುವಾಗೇ ಇತ್ತು. ಸಾಮಾನ್ಯವಾಗಿ ಅವರ ಧ್ವನಿಗೆ ಕಟುತ್ವವಾಗಲೀ, ಗಡಸುತನವಾಗಲೀ ಬರುವುದಿಲ್ಲ.

ಕಾರು ಮಣ್ಣ ರಸ್ತೆಯನ್ನು ದಾಟಿ ಹೊರಟು, ಟಾರು ರಸ್ತೆಯ ಕಡೆಗೆ ಹೊರಳಿತು. ಅಲ್ಲೊಂದು ಸುಳಿ ಹುಟ್ಟಿದ ಹಾಗೆ ದೂಳು ಗಪ್ಪೆಂದು ಮೇಲೆದ್ದಿತು. ಯಾಕೋ ಕೈಕಾಲುಗಳಲ್ಲಿ ಶಕ್ತಿ ಸೋರಿ ಹೋದಂತಾಗಿ ಕುಸಿದೆ. ಬಿಟ್ಟು ಹೋದರು, ನನ್ನ ಹೀಗೆ ಎಲ್ಲಿಯಾದರೂ ಸರಿಯೆ ಬಿಟ್ಟು ಹೋಗಬಹುದು. ಯಾಕೆಂದರೆ ಈ ಸಮಾಜದಲ್ಲಿ ನಮ್ಮ ಸಂಬಂಧಕ್ಕೆ ಪವಿತ್ರವಾದ ಯಾವ ಅರ್ಥವೂ ಇಲ್ಲ. ಇದ್ದರೆ ಅದು ಇಟ್ಟುಕೊಂಡವಳು ಎಂದು ಮಾತ್ರ. ಇಟ್ಟುಕೊಂಡವಳ ಜೊತೆ ಹೀಗಲ್ಲದೆ ಇನ್ನು ಹೇಗೆ ನಡೆದುಕೊಳ್ಳಲು ಸಾಧ್ಯ? ಸಂಸಾರಕ್ಕೊಬ್ಬಳು, ಸಾಹಚರ್ಯಕ್ಕೊಬ್ಬಳು ಎಂದು ನಮ್ಮ ಸಂಬಂಧವನ್ನು ಎಲ್ಲರ ಎದುರು ಹೇಳುತ್ತಾ ನಂಬಿಸಬಹುದು. ಆದರೆ ಸಾಹಚರ್ಯದ ಅರ್ಥ ದೇಹದ ಮಿತಿಗಳಲ್ಲೆ ಸುತ್ತಿಬಿಟ್ಟರೆ…? ನನ್ನ ಭಾವನೆಗಳಿಗೆ ಬೆಲೆಯೇ ಇಲ್ಲವಾದರೆ? ನೆನ್ನೆಯಿಂದ ತಡೆದುಕೊಂಡಿದ್ದ ದುಃಖ ಸಣ್ಣದಾಗಿ ಹೊಕ್ಕುಳಾಳದಲ್ಲಿ ಹುಟ್ಟಿಕೊಂಡಿತು.

`ತಪ್ಪೆಲ್ಲಾಯಿತು? ಈ ತಪ್ಪುಗಳ ಲೆಕ್ಕ ಇಡುವುದಾದರೂ ಹೇಗೆ? ಇದ್ದಕ್ಕಿದ್ದ ಹಾಗೆ ಸತೀಶ ನೆನಪಾದ. ಸತೀಶ ನೀನಿರಬೇಕಿತ್ತು. ನೀನಿದ್ದಿದ್ದರೆ ಇಂಥಾ ವ್ಯಕ್ತಿಯ ಜೊತೆ ಜೀವನ ಪೂರ್ತಿ ನಡೆಯುವ ನಿರ್ಧಾರಕ್ಕೆ ನಾನು ಬರುತ್ತಲೇ ಇರುತ್ತಿರಲಿಲ್ಲ. ತಪ್ಪು ನನ್ನದಲ್ಲ; ಖಂಡಿತಾ ಅಲ್ಲ, ನಿನ್ನದೇ ಸತೀಶ’ ಎಂದುಕೊಳ್ಳುತ್ತಿದ್ದಂತೆ ತಳಮಳ ಹೆಚ್ಚಾಗಿ ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅಳತೊಡಗಿದೆ. ಕಣ್ಣೆದುರೇ ದೂಳೆಬ್ಬಿಸಿಕೊಂಡು ಹೋದ ಬಸ್ಸಿಗೆ ಕೈ ಅಡ್ಡ ಹಾಕಿ ನಿಲ್ಲಿಸುವುದೂ ಬೇಡವಾಗಿತ್ತು. ಸುಮ್ಮನೆ ನಿರ್ಮಾನುಷವಾಗಿದ್ದ ಕಾಡಿನಲ್ಲೇ ಇದ್ದುಬಿಡೋಣ ಅನ್ನಿಸಿ, ಅಲ್ಲೇ ಇದ್ದ ಬೆಂಚಿಗೆ ಆತುಕೊಂಡು ಕುಸಿದು ಕುಳಿತೆ. ಆಕಾಶದಲ್ಲಿ ಮೆಲ್ಲನೆ ಮೋಡ ಆವರಿಸಿಕೊಳ್ಳುತ್ತಿತ್ತು. ತಣ್ಣನೆಯ ಗಾಳಿ ಅಲೆಯಾಗಿ ಬಿಸಿಗಾಳಿಯನ್ನು ನೂಕಿದ್ದಕ್ಕೋ ಏನೋ ಮೈಯ್ಯೆಲ್ಲ ಬಿಸಿಯಾಗಿ ಹಿಂದೆ ಬೀಸಿದ ತಂಗಾಳಿಗೆ ಮೈ ಒಂದು ಕ್ಷಣ ನಡುಗಿತು. ಈಗ ಹೋಗುವುದು ಎಲ್ಲಿಗೆ?

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: