ಚಿತ್ತಾಲರ ಕಥೆಯೊಳಗಿನ ನಿಗೂಡ ಪ್ರಪಂಚ – ಜಯಶ್ರೀ ಕಾಸರವಳ್ಳಿ ಬರೀತಾರೆ

ಜಯಶ್ರೀ ಕಾಸರವಳ್ಳಿ

ಯಶವಂತ ಚಿತ್ತಾಲರ ‘ಮೂರು ದಾರಿಗಳು’ ಸಿನಿಮಾ ಮಡುತ್ತಿದ್ದಂತಹ ಸಂದಂರ್ಭವದು. ಇನ್ನೂ ಸಿನಿಮಾ ಸಂಪೂರ್ಣವಾಗಿರದಿದ್ದರೂ, ಯಾವುದೋ ಕೆಲಸದ ನಿಮಿತ್ತ ಚಿತ್ತಾಲರು ಬಾಂಬೆಯಿಂದ ಬೆಂಗಳೂರಿಗೆ ಬಂದಿದ್ದಾರೆಂದು ತಿಳಿದು ಅವರಿಗಾಗಿ ಗಿರೀಶ್, ಸಿನಿಮಾದ ಪ್ರೋಮೋ ಏರ್ಪಡಿಸಿದ್ದ. ಆ ಪ್ರೋಮೋ ಅನ್ನು ಚಿತ್ತಾಲರೊಂದಿಗೆ ನೋಡಿದ್ದ ನನ್ನ ಮತ್ತೊಬ್ಬ ಅಣ್ಣ ಒಂದು ವಿಶಿಷ್ಟ ಕತೆಯನ್ನು ಹೇಳಿದ್ದ: ಇನ್ನೂ ಯಾವ ಸಂಭಾಷಣೆಯನ್ನೂ ಅಳವಡಿಸದ ಸಿನಿಮಾ ನೋಡಿದ ಚಿತ್ತಾಲರು, ಗಿರೀಶನನ್ನು ‘ಇದು ಮೂಕಿ ಸಿನಿಮಾವೇ?’ ಎಂದು ಕೇಳಿದರೆಂದೂ, ಅದಕ್ಕೆ ಗಿರೀಶ, ‘ಇಲ್ಲಾ! ಸಂಬಾಷಣೆಯನ್ನು ಆನಂತರ ಜೋಡಿಸುತ್ತೇವೆ. ಇದು ಬರೀ ಪ್ರೋಮೋ’ ಎಂದು ವಿವರಿಸಿದಾಗ, ಸ್ವಲ್ಪ ಸಮಾಧಾನಗೊಂಡ ಚಿತ್ತಾಲರು, ಹೊರಡುವುದಕ್ಕೆ ಮುಂಚೆ, ‘ಗಿರೀಶ್, ಡಯಲಾಗ್ ಸೇರಿಸುವುದನ್ನು ಮರೆಯಬೇಡಿ..’ ಎಂದು ಮತ್ತೊಮ್ಮೆ ಜ್ಞಾಪಿಸಿ ಹೋದರೆಂದು ಹೇಳಿದ್ದನ್ನು ಕೇವಲ ಕತೆಯಂತೆ ಕೇಳಿದ್ದ ನಾನು ಅಂದು ಅದನ್ನು ಪೂರ್ತಿ ನಂಬಿರದಿದ್ದರೂ, ಬಾಲ್ಯದಿಂದಲೂ ಕತೆಗಾರರೆಂದರೆ ಒಂದು ರೀತಿಯ ಭಯಮಿಶ್ರಿತ ಕೌತುಕದಿಂದ ನೋಡುತ್ತಾ ಬಂದಿದ್ದ ನನಗೆ, ಒಬ್ಬ ಲೇಖಕ ಇಷ್ಟೆಲ್ಲಾ ಮುಗ್ಧನಾಗಿರಬಹುದೆನ್ನುವ ವಿಷಯವೇ ನನ್ನ ಕಲ್ಪನೆಯನ್ನು ಮೀರಿದ್ದಾಗಿತ್ತು; ಮತ್ತು ಸಾಮಾನ್ಯವಾಗಿ ಆ ಕಾಲಕ್ಕೆ ಎಲ್ಲರೂ ಯೋಚಿಸುವ ಹಾಗೆಯೇ ನಾನೂ ಯೋಚಿಸುತ್ತಿದ್ದುದರಿಂದ ಒಬ್ಬ ಲೇಖಕ ಇಷ್ಟು ಮುಗ್ಧನಾಗಿದ್ದಲ್ಲಿ ಅವನೊಬ್ಬ ಪರಿಪೂರ್ಣ ಕತೆಗಾರನಾಗಲು ಅಸಾಧ್ಯವೆಂಬುದು ನನ್ನ ಮತ್ತೊಂದು ಪರಿಕಲ್ಪನೆಯಾಗಿತ್ತು. ಬಹುಶಃ ಎಲ್ಲರೂ ಎಡವಿದಲ್ಲಿ ನಾನೂ ಎಡವಿದ್ದೆ ಎಂಬ ಸೂಕ್ಷ್ಮವನ್ನು ಅರಿಯಲೇ ನಾನು ಅನೇಕ ವರುಷಗಳನ್ನು  ಸವೆಯಬೇಕಾಯಿತು.

ಆದರೆ ಕಾಲಕ್ರಮೇಣ ಒಬ್ಬ ಕತೆಗಾರನಾಗಿ ಬೆಳೆಯಬೇಕಾದರೆ, ಅನುಭವವನ್ನು ಗ್ರಹಿಸುವ ಸೂಕ್ಮ ಒಳನೋಟಗಳಿದ್ದರಷ್ಟೇ ಸಾಲದು, ನೋಡುವ ಪ್ರತಿಯೊಂದನ್ನು ಮತ್ತೊಬ್ಬರಿಗೆ ಕಾಣಿಸಲು ಸ್ವತಃ ಅವನಲ್ಲಿ ಮಗುವಿನ ಮುಗ್ಧತೆ ಮತ್ತು ಅದನ್ನು ಕಾಣುವ ಬೆರುಗು ಇದ್ದಲ್ಲಿ ಮಾತ್ರ, ತಾನು ಕಂಡಂತಹ ಪ್ರತಿಯೊಂದು ಕೌತುಕಮಯ ವಿಷಯವೂ  ತನ್ನ ಮೂಲ ಅಚ್ಚರಿಯೊಂದಿಗೆ ಅಕ್ಷರದ ಸ್ವರಮಾಲೆಯನ್ನು ತೊಟ್ಟು, ಹೊಸ  ರೂಪ, ಆಕಾರಗಳೊಂದಿಗೆ ಒಡಮೂಡಿ ಬಂದು, ಅದೊಂದು ಅಪ್ರಮೇಯ ಪ್ರತಿಮೆಗಳಾಗಿಯೋ, ಅದ್ವಿತೀಯ ರೂಪಕವಾಗಿಯೋ ಕತೆಯೊಂದಿಗೆ ಮೇಳೈಯಿಸಿಕೊಳ್ಳಲು ಸಾಧ್ಯವೆನ್ನುವುದು ನನ್ನ ಗ್ರಹಿಕೆಯಾಗಿತ್ತು. ಯಾವುದೇ ಕತೆಗಾರನ ಅನುಭವಗಳಾಗಲೀ, ಪಾತ್ರ ರಚನೆಗಳಾಗಲೀ, ಕೇವಲ ಕತೆಯ ಒಂದು ಸಾಧಾರಣ ಚೌಕಟ್ಟಿನೊಳಗೆ ಮಾತ್ರ ಬಂಧಿಯಾಗಿ ಭಟ್ಟಿಯಿಳಿಯದೇ, ಅವೆಲ್ಲವೂ ಕತೆಯಾಚೆಗಿನ ದ್ವನಿಯಾಗಿ ನಮ್ಮ ಮನೆಯಂಗಳದಲ್ಲಿ ಕಂಡು ಬರವಂತಹ ದಿನ ನಿತ್ಯದ ಪಾತ್ರಗಳಾಗಿ ಮೂಡಿ ಬಂದಾಗಲಷ್ಟೇ ಅವು ನಮಗೆ ಆಪ್ತವಾಗಬಲ್ಲದೆಂಬುವುದು ನನ್ನರಿವಿಗೆ ಬಂದಂತಹ ಮತ್ತೊಂದು  ಸಂಗತಿಯಾಗಿತ್ತು. ಇಲ್ಲದಿದ್ದಲ್ಲ್ಲಿ ಯಾವುದೇ ಕೋನದಿಂದ ನೋಡಿದರೂ ನಮ್ಮವರಲ್ಲದ, ನಮ್ಮವರಾಗಲೊಪ್ಪದ  ಯಾವದೋ ದೇಶದ ಹಲವು ಬರಹಗಾರರ ಅನೇಕ ಕೃತಿಗಳು ಇಂದು, ಕಾಲ, ದೇಶ, ಭಾಷೆ, ಸಂಸ್ಕೃತಿಯನ್ನು ಮೀರಿ ನಮ್ಮದಾಗಿ ನಮ್ಮ ಮನದಲ್ಲಿ ಭದ್ರವಾಗಿ ನೆಲೆಯೂರಲು ಹೇಗೆ ಸಾಧ್ಯ? ನಮ್ಮ ಬದುಕಿನ ಯಾವುದೋ ಒಂದು ತಂತು ಅಲ್ಲಿ ಮಿಡಿಯುತ್ತೆಂದೇ ಅಂತಹ ಕೃತಿಗಳನ್ನು ನಾವು ಬಾಚಿ ತಬ್ಬಿಗೊಳ್ಳುತ್ತೇವೇಯೆ?

ನೋಬಲ್ ಪ್ರಶಸ್ತಿ ವಿಜೇತ ಟರ್ಕಿಷ್ ಲೇಖಕ ಓರ್ಹಾನ್ ಪಾಮುಕ್ ತನ್ನ ಒಂದು ಕಾದಂಬರಿಯ ಬಗ್ಗೆ ಮಾತನಾಡುತ್ತಾ, ಒಂದು ಮಾತು ಹೇಳುತ್ತಾನೆ: ‘past is always an invented land!’ ಅವನು ಹೇಳಿದ ಉದ್ದೇಶ ಯಾವುದೇ ಇರಬಹುದು. ಆದರೆ ಒಬ್ಬ ಬರಹಗಾರನಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಬಾಲ್ಯದ ಪ್ರಾಮುಖ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಬಾಲ್ಯವೆನ್ನುವುದು ಹಲವು ನಿಗೂಢ ನಿಕ್ಷೇಪವಿರುವ ಸಮೃದ್ಧಿಯ ತಾಣ! ಅದೊಂದು ಅಕ್ಷಯಪಾತ್ರೆಯಿದ್ದ ಹಾಗೆ. ಎಷ್ಟು ಆಳವಾಗಿ ಇಣುಕಿ, ಚಿಕ್ಕಂದಿನ ಎಂದಿನದೋ ಘಟನೆಗಳೆಲ್ಲಾ ಹೊರ ಚಲ್ಲಿದ ನಂತರವೂ ಇನ್ನೂ ಏನೋ ಗುಪ್ತವಾಗಿರುವುದು ಅಡಗಿದೆ ಅನ್ನುವಂತಹ ಭ್ರಮೆ. ಪ್ರಾಯಶಃ ಬಾಲ್ಯದ ಇಂತಹ ಒಂದಷ್ಟು ನಿಧಿ, ಸ್ವಂದಿಸುವ ಭಾವುಕ ಮನಸ್ಸು, ವಿಷಯ ಗ್ರಹಿಸುವಲ್ಲಿನ ಸೂಕ್ಮಮತಿ, ಅಪಾರ ಅನುಭವಗಳ ಬತ್ತದ ಬತ್ತಳಿಕೆ ಹಾಗೂ ಇವೆಲ್ಲವನ್ನೂ ಭಾಷೆಯಲ್ಲಿ ಕಟ್ಟುವ ಕೌಶಲ್ಯ ಮಿಳಿತವಾದಲ್ಲಿ ಅಂತಹ ಬರಹಗಾರ ಒಬ್ಬ ಅತ್ಯುತ್ತಮ ಕತೆಗಾರನಾಗುವುದರಲ್ಲಿ ಸಂಶಯವಿಲ್ಲವೆನ್ನುವುದು ನನ್ನ ಮತ್ತೊಂದಿಷ್ಟು ಗ್ರಹಿಕೆ.

ನವ್ಯದ ಉಚ್ರಾಯ ಸ್ಥಿತಿಯಲ್ಲಿ ‘ಅನಾಥಪ್ರಜ್ಞೆ’ಯೇ ಪ್ರಮುಖ ವಸ್ತುವಾಗಿ, ಅನೇಕ ಕತೆಗಳು ಬಂದಿದ್ದರೂ, Carson McCullers ಳ ಕೃತಿಗಳನ್ನು ಓದುವವರೆಗೆ ಅನಾಥಪ್ರಜ್ಞೆ ಅನ್ನುವುದು ಕೇವಲ ಶಬ್ದವಾಗಿ ಮಾತ್ರ ನನ್ನ ತಲೆಯೊಳಗಿಳಿದಿತ್ತು. ಪಾತ್ರಗಳ ತೀವ್ರ ಒಂಟಿತನವನ್ನು, ಅನುಭವಿಸುವ ಅಪರಿಮಿತ ನೋವು, ನಿರಾಶೆ, ಹತಾಶೆ, ಅಸಹಾಯಕತೆಗಳನ್ನು, ಸಂದಂರ್ಭಕ್ಕೆ ಅನುಗುಣವಾಗಿ ಮೂಡಿ ಬರುವ ಸುತ್ತಲಿನ ಸನ್ನಿವೇಶದೊಂದಿಗೆ ಒಂದೊಂದೇ ಅಕ್ಷರಗಳನ್ನು ಹೆಕ್ಕಿ, ಹೆಕ್ಕಿ, ಜೋಡಿಸಿ, ಛಿದ್ರ ಬದುಕಿಗೊಂದು ಆಕಾರವನ್ನಿಟ್ಟು, ಭಾಷೆಯೆನ್ನುವುದು ಹೃದಯವನ್ನು ಕೆತ್ತಿ ನಮ್ಮ ಮುಂದಿಡಲು ಇರುವ ಏಕೈಕ ಸಮೂಹವೆನ್ನುವಂತೆ ಪದರ ಪದರಗಳೊಂದಿಗೆ ಅದನ್ನು ಬಿಚ್ಚಿ ತೆರೆದಿಡುತ್ತಾ, ಕತೆ ಕಟ್ಟಿ, ಅವಳು ಸಾಗುವ ರೀತಿ ಅನೂಹ್ಯವಾದದ್ದು.

Gabriel Garcia Marquez£À ‘Chronical of a death foretold‘ ಓದಿದಾಗ ಕೂಡ ನನ್ನನ್ನು ಬಹಳವಾಗಿ ಕಾಡಿದ್ದು, ಸಾಂತಿಯಾಗೋ ನಾಸೆರ್ನ ದುರದೃಷ್ಟದ ಕೊಲೆಯಾಗಲೀ, ಅವನನ್ನು ಕೊಂದ ಅವಳಿ ವಿಕಾರಿಯೋ ಸೋದರರ ಖಚಿತ ನಿರ್ಧಾರವಾಗಲೀ ಆಗಿರದೇ ಇವೆಲ್ಲಕ್ಕೂ ಮೂಲವಾದ ಏಂಜೆಲಾ ವಿಕಾರಿಯೋಳ ನಿಗೂಡ ಮೌನ! ಮತ್ತು ಮದುವೆಯಾದ ರಾತ್ರಿಯೇ, ತನ್ನ ಹೆಂಡತಿ ಕನ್ಯೆಯಲ್ಲವೆಂದು ತಿಳಿದು, ಅವಳನ್ನು ಪರಿತ್ಯಜಿಸಿ, ಕಣ್ಮರೆಯಾಗಿ ಹೋಗುವ ತನ್ನ ಗಂಡನಿಗಾಗಿಯೇ ಜೀವಮಾನ ಪೂರ್ತಿ ಕಾಯುತ್ತಾ ಕುಳಿತ ಏಂಜೆಲಾ ವಿಕಾರಿಯೋ, ಆನಂತರವೂ ಎಡೆಬಿಡದೆ ತನ್ನ ಭಾವನೆಗಳನ್ನು, ಗಂಡನ ಮೇಲಿನ ತನ್ನ ಪ್ರೀತಿಯನ್ನು, ಕಾಯುವ ನೋವುಗಳನ್ನು, ಬಾರದ ಅವನ ಮೇಲಿನ ಸಿಟ್ಟು, ರೋಷ, ಅಸಹಾಯಕತೆಯನ್ನು, ಕಿತ್ತು ತಿನ್ನುವ ತನ್ನ ಒಂಟಿತನವನ್ನು, ತನ್ನ ವಿಕ್ಷಿಪ್ತ ಮನಃಸ್ಥಿತಿಯನ್ನು, ತನ್ನ ದೈಹಿಕ ತಳಮಳಗಳನ್ನು, ತನ್ನೆಲ್ಲಾ ಲಜ್ಜೆ ನಾಚಿಕೆಗಳನ್ನು ಬಿಟ್ಟು ಸುಮಾರು ಹದಿನೇಳು ವರುಷ ನಿರಂತರವಾಗಿ ಬರೆಯುವ ಪತ್ರಗಳಿಂದ! ಮತ್ತು ಹದಿನೇಳು ಸುದೀರ್ಘ ವರುಷಗಳ ನಂತರದ ಒಂದು ದಿನ, ತನ್ನ ಮನೆಯ ಹೊಸ್ತಿಲಲ್ಲಿ – ಒಂದು ಚರ್ಮದ ಚೀಲದೊಡನೆ ಪ್ರತ್ಯಕ್ಷನಾಗುವ ಅವಳ ಗಂಡ, ಪತ್ರಗಳು ತಲುಪಿದ ದಿನಾಂಕಗಳಿಗನುಗುಣವಾಗಿ ಜೋಡಿಸಿ, ಬಣ್ಣದ ದಾರದಲ್ಲಿ ಬಿಗಿಯಾಗಿ ಕಟ್ಟಿದ ಒಂದು ಬಂಡಲ್ನೊಂದಿಗೆ ಅವಳು ಬರೆದ ಸುಮಾರು ಎರಡು ಸಾವಿರ ಪತ್ರಗಳಲ್ಲಿ ಒಂದನ್ನೂ ಒಡೆಯದೇ ಹಾಗೇ ಸುಭದ್ರವಾಗಿ ಅದನ್ನು ತಂದು ಅವಳಿಗೆ ಒಪ್ಪಿಸಿದಾಗ..!

ಒಬ್ಬ ಕತೆಗಾರ ಕತೆಯನ್ನು ಕಟ್ಟುವ ರೀತಿಯೇ ಎಷ್ಟು ವಿಶಿಷ್ಟವಾದದ್ದು!  ಹಲವಾರು ಕಾಕತಾಳೀಯ ಘಟನೆಗಳ ಸರಮಾಲೆಗಳ ನಡುವೆಯೂ ತನ್ನ ಪಾತ್ರಗಳ ತೀವ್ರ ಭಾವನೆಗಳನ್ನು ಸಮರ್ಥ ಕತೆಗಾರ ಅಕ್ಷರಗಳಲ್ಲಿ ರವಾನಿಸದಿದ್ದಲ್ಲಿ, ಬಹುಷಃ ಅದು ಹೇಳಬೇಕಾದ ಸಂದೇಶಗಳನ್ನು ಮುಟ್ಟಿಸಲಾಗದೇ ಮುರುಟಿ ಹೋಗಿಬಿಡಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳಲಾಗದೇನೊ? ಓದುಗರಿಗೆ ತಟ್ಟಬೇಕಾದಲ್ಲಿ ಅದೊಂದು ಅನನ್ಯ ಬರಹಗಳ ಆಗರವಾಗಬೇಕು. ತನ್ನ ಪಾತ್ರಗಳು ಬೇಡುವ ಭಾವ ತೀವ್ರತೆಯನ್ನು ಮೊದಲು ಕತೆಗಾರ ಅನುಭವಿಸಿದಲ್ಲಿ ಮಾತ್ರ ಅದೇ ರಭಸದಲ್ಲಿ ಅದು ಮೂಡಿ ಬಂದು ನಮ್ಮನ್ನು ತಟ್ಟಲು ಸಾಧ್ಯ. ಒಬ್ಬ ಕತೆಗಾರನಿಗಿರಬೇಕಾದ ಭಾವುಕತೆ, ತೀವ್ರತೆ, ಸೂಕ್ಮ ಸ್ವಂದನೆ, ತಾಳ್ಮೆ, ಶ್ರದ್ಧೆ, ಶಿಸ್ತು, ಕಾಳಜಿ, ಸಾಮಾಜಿಕ ಬದ್ಧತೆ ಹಾಗೂ ಪ್ರಮಾಣಿಕತೆ, ನಮ್ಮಲ್ಲಿ ಸ್ಪಷ್ಟವಾಗುತ್ತಾ ಹೋಗುವುದು ಇಂತಹ ಕೆಲವು ಸನ್ನಿವೇಶ ಮತ್ತು ಸಂದರ್ಭಗಳಲ್ಲಿ. ತನ್ನದೊಂದು ಕತೆಗೆ ಪೇರಲೆ ಹಣ್ಣಿನ ಬಗ್ಗೆ ಬರೆಯುವಾಗ, ಅದರ ವಾಸನೆಯೇ ಮರೆತಂತಾಗಿ, ಅದಕ್ಕಾಗಿ ತಾನಿರುವ ಮೆಕ್ಸಿಕೊ ನಗರದಿಂದ ತನ್ನ ಹುಟ್ಟೂರಿಗೆ ಪ್ರಯಾಣ ಮಾಡಿದ್ದರ ಬಗ್ಗೆ ಮಾರ್ಕೆಸ್ ಬರೆದುಕೊಂಡಿದ್ದಾನೆ. ತನ್ನ ‘‘ One hundred years of solitude’ನ ಪ್ರಧಾನ ಪಾತ್ರ ಬುಯಂಡಿಯಾ ಸತ್ತಾಗ ಅನೇಕ ದಿನದವರೆಗೆ ಕಾದಂಬರಿ ಮುಂದುವರಿಸಲಾಗದನ್ನೂ ಅವನು ಹೇಳಿಕೊಂಡಿದ್ದಾನೆ. ತನ್ನ ಕತೆಯ ಪಾತ್ರಗಳನ್ನು ಸ್ವತಃ ಕತೆಗಾರನೇ ಪ್ರೀತಿಸದಿದ್ದಲ್ಲಿ ಅದು ಓದುಗರಿಗೆ ತಲುಪುವುದು ಹೇಗೆ?

ಈ ಮಟ್ಟದ ಬರಹಗಾರನನ್ನು ಕನ್ನಡದಲ್ಲಿ ನಾನು ಕಂಡಿದ್ದು ಚಿತ್ತಾಲರಲ್ಲಿ ಮಾತ್ರ. ತಾವು ಬರೆಯಲು ಕೂರುವ ಸಮಯ, ಜಾಗ, ಉಪಯೋಗಿಸುವ ನೋಟ್ಪ್ಯಾಡ್, ಬಳಸುವ ಪೆನ್ಸಿಲ್, ತೂಗಿ, ಅಳೆದು ರೂಪ ತಳೆವ ಒಂದೊಂದು ಅಕ್ಷರಗಳೂ, ಆಗಷ್ಟೇ ಕಣ್ಣು ಬಿಡುವ ಹೊಸ ಹೊಸ ಪದಗಳೂ, ಹಾಗೆ ಆಕಾರ ಪಡೆದು ಮೂಡುವ ಹೊಚ್ಚ ಹೊಸ ಕತೆಗಳೂ, ಅದನ್ನು ಕಂಡು ಮಗುವಿನಂತೆ ಸಂಭ್ರಮಿಸುವ ಅವರ ಮುಗ್ಧತನವೂ…

ಅದಾಗ ನಾನಿನ್ನೂ ಮೈಸೂರಿನಲ್ಲಿ ಓದುತ್ತಿದ್ದಂತಹ ಕಾಲ. ಯಾವಾಗಲೋ ಚಿತ್ತಾಲರು ನನ್ನ ನೆಚ್ಚಿನ ಲೇಖಕರೆಂದು ದಿವಾಕರರಿಗೆ ಹೇಳಿದ್ದೆ. ಅದನ್ನು ಕೇಳಿ ಮಗುವಿನಂತೆ ಸಂಭ್ರಮಿಸಿದ ಚಿತ್ತಾಲರು, ಮೈಸೂರಿಗೆ ಬಂದಾಗೊಮ್ಮೆ, ನನ್ನನ್ನು ನೋಡಲಿಕ್ಕಾಗಿಯೇ ಹಾಸ್ಟೆಲ್ಗೆ ಬಂದಿದ್ದರು! ಆನಂತರ ನಮ್ಮ ಮದುವೆಗೆ..! ನಮ್ಮ ಮದುವೆಯ ನಂತರ ಬೆಂಗಳೂರಿಗೆ ಬಂದಾಗೆಲ್ಲಾ ನಮ್ಮಿಬ್ಬರನ್ನೂ ತಾವಿಳಿದುಕೊಂಡ ಫೈವ್ ಸ್ಟಾರ್ ಹೋಟೆಲ್ಗೆ ಕರೆದು, ರಾತ್ರಿ ಹನ್ನೊಂದರ ನಂತರ ತಮ್ಮ ಹೊಸ ಕತೆಯೊಂದನ್ನು ಅತ್ಯಂತ ಗುಟ್ಟಿನ ವಿಷಯವೇನೋ ಎನ್ನುವ ಹಾಗೆ, ಮಕ್ಕಳ ಸಂಭ್ರಮದಲ್ಲಿ ನೋಟ್ ಪ್ಯಾಡ್ನ ಬೆನ್ನು ಸವರುತ್ತಾ, ಹುಕ್ಕಿನಿಂದಲೇ ಓದುತ್ತಿದ್ದುದನ್ನು, ಅಂತಹ ಫೈವ್ ಸ್ಟಾರ್ ಪರಿಸರಕ್ಕೆ ತಕ್ಕುದಾದ ಸೀರೆಯಾಗಲೀ, ಸ್ಟೈಲ್ಯಾಗಲೀ ಒಂದೂ ಇರದ ನಾನು ಆಗೆಲ್ಲಾ ಖಿನ್ನಳಾಗಿ ಅದನ್ನು ಕೇಳಿಸಿಕೊಳ್ಳುತ್ತಿದ್ದದ್ದು..

ನೆನಪುಗಳು ಬಿಚ್ಚಿಕೊಳ್ಳುತ್ತಿವೆ….

ನನ್ನ ಮಟ್ಟಿಗೆ ಹೇಳುವುದಾದರೆ, ಮನುಕುಲಕ್ಕೆ ಸಂಬಂಧಪಟ್ಟ ಎಲ್ಲಾ ಕತೆಗಳಲ್ಲೂ ಗಂಡು-ಹೆಣ್ಣು ಇದ್ದೇ ಇರುವುದರಿಂದ ಅದನ್ನು ಲಿಂಗ ಭೇದ ಮಾಡಿ ಪ್ರತ್ಯೇಕಿಸಿ ನೋಡುವುದನ್ನು ಎಂದೂ ಇಷ್ಟಪಡದೆ, ಇಬ್ಬರನ್ನೂ ಸಮಾನವಾಗಿ ನೋಡಬಯಸುವವಳು ನಾನು. ಆದರೆ ಚಿತ್ತಾಲರ ಅತ್ಯುತ್ತಮ ಕತೆಗಳ ಪಟ್ಟಿಯಲ್ಲಿ ‘ಆಟ’, ‘ಕಳ್ಳ ಗಿರಿಯಣ್ಣ’, ‘ಸಿದ್ಧಾರ್ಥ’, ‘ತ್ರಯೋದಶ ಪುರಾಣ’ಗಳ ಜೊತೆಜೊತೆಗೇ, ‘ಬೊಮ್ಮಿಯ ಹುಲ್ಲು ಹೊರೆ’, ‘ಆಬೋಲಿನಾ’, ‘ಕತೆಯಾದಳು ಹುಡುಗಿ’, ‘ಪುರುಷ್ತೋಮನ ಮಗ ದತ್ತಾತ್ರೇಯ ಅವನ ಮಗಳು ಸಾವಿತ್ರಿ’ ಕೂಡಾ ಹೆಣ್ಣು ಮನಸ್ಸಿನ ಸುಕೋಮಲ ಮೃದು ಭಾವನೆಗಳನ್ನು ತಮ್ಮ ವಿಶಿಷ್ಟ ಸಂವೇದನೆಯಲ್ಲಿ ಯಥಾವತ್ತಾಗಿ  ಚಿತ್ತಾಲರು ಹಿಡಿದಿಟ್ಟಿರುವುದರಿಂದಲೇ ಸೇರಿಕೊಳ್ಳುತ್ತವೆ ಅನ್ನುವುದನ್ನು ಮಾತ್ರ ಅಲ್ಲಗಳೆಯಲಾಗುವುದಿಲ್ಲ. ನನ್ನ ಹನ್ನೆರಡನೇ ವಯಸ್ಸಿನಲ್ಲಿ ದೊರೆತ ‘ಆಟ’ ಕಥಾಸಂಕಲನವನ್ನು ಒಂದೇ ನಿಟ್ಟಿನಲ್ಲಿ ಓದಿ ಮುಗಿಸಿ, ಹೊತ್ತುಗೊತ್ತಿನ ಸಮಯ ಪ್ರಜ್ಙೆಯನ್ನೇ ಕಳೆದುಕೊಂಡು, ಮಾರ್ಕೆಸ್ನ ‘ಮಾನೊಲಾಗ್ ಆಪ್ ಇಸಾಬೆಲ್ಲಾ..’ ಳಂತಹ ವಿಚಿತ್ರ ಸ್ಥಿತಿ ತಲುಪಿದ್ದು ಈಗಲೂ ನೆನಪಿದೆ. ಅದುವರೆಗೂ ಕಾಫ್ಕನನ್ನಾಗಲೀ ಬೇರೆ ಯಾವ ಲೇಖಕರನ್ನಾಗಲೀ ಓದಿರದ ನನಗೆ, ಅವರ ‘ಪಯಣ’ ಗಾಢ ಪರಿಣಾಮ ಬೀರಿ, ಅನೇಕ ದಿನದವರೆಗೆ ಆ ನಾಯಕನ ಅಸ್ವಸ್ತ ಮನಃಸ್ಥಿತಿ ನನ್ನನ್ನು ಇನ್ನಿಲ್ಲದಷ್ಟು ಕಾಡಿಸಿತ್ತು.

ಸಂದರ್ಭಗಳನ್ನ, ಘಟನೆಗಳನ್ನ, ಸನ್ನಿವೇಶಗಳನ್ನ, ಕಾಕತಾಳೀಯಗಳನ್ನ, ತಪ್ಪಿಸಲಾಗದ ಅನಾಹುತಗಳನ್ನ, ತಪ್ಪಿಲ್ಲದೆಯೂ ಕಾಡುವ ಪಾಪಪ್ರಜ್ಞೆಗಳನ್ನ ಹಾಗೂ ಇವೆಲ್ಲಕ್ಕೂ  ಕಳಸವಿಟ್ಟಂತೆ ನಡೆಯುವ, ಸಂಭವಿಸುವ, ಬಿಚ್ಚಿಕೊಳ್ಳುವ ಎಲ್ಲಾ ಪ್ರಕ್ರಿಯೆಗೂ ಪೂರಕವಾಗುವ ಮುಸ್ಸಂಜೆಗಳನ್ನು  ಪ್ರಾಯಶಃ ಚಿತ್ತಾಲರಷ್ಟು ಸಮರ್ಪಕವಾಗಿ ಕಣ್ಣಿಗೆ ಕಟ್ಟಿಕೊಟ್ಟ ಮತ್ತೊಬ್ಬ ಬರಹಗಾರ ಕನ್ನಡದಲ್ಲಿ ಇಲ್ಲವೆಂದರೆ ಅತಿಶಯೋಕ್ತಿಯಲ್ಲವೇನೊ! ಎಷ್ಟೋ ಸಲ ಮಾರ್ಕೆಸ್, ಕಾರ್ಸನ್ ಮೆಕ್ಯುಲರ್ಸ್, ಒರ್ಹಾನ್ ಪಮುಕ್, ಒಟ್ಟಾಗಿ ಚಿತ್ತಾಲರಲ್ಲಿ ಕಾಣಿಸಿದ್ದೂ ಇದೆ.

ದಿನದ ಬೆಳಕು ಕ್ಷೀಣಿಸಿ, ಅತ್ತ ಕತ್ತಲೂ ಅಲ್ಲದ, ಇತ್ತ ಬೆಳಕೂ ಇಲ್ಲದ, ಅಸ್ಪಷ್ಟ ಚಹರೆಯೊಂದಿಗೆ ನಿಗೂಡವಾಗುತ್ತಾ ಹೋಗುವ ಮುಸ್ಸಂಜೆಯ ವಿಕ್ಷಿಪ್ತ ಕ್ಷಣಗಳನ್ನು ಪ್ರಾಯಶಃ ಚಿತ್ತಾಲರಂತೆ ಭಾಷೆಯಲ್ಲಿ ಕಟ್ಟಿ, ಕಾಲವನ್ನು ಚೌಕಟ್ಟಿನಲ್ಲಿ ಬಂಧಿಸಿಟ್ಟವರು ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದು. ಕಾರ್ಸನ್ ಮೆಕ್ಯುಲರ್ಸ್ಳಂತೆ ಚಿತ್ತಾಲರು ಕೂಡ ಕನ್ನಡಕ್ಕೆ ಹೊಸದೇ ಎನ್ನುವಂತಹ ಅಪರೂಪದ ಮನೋನೆಲೆಯನ್ನು, ತಮ್ಮದೇ ಆದಂತಹ ಕೆಲವು ಚಿತ್ತಾಲಿಯನ್ ಪದಗಳನ್ನು ಬಳಸುವುದರ ಮೂಲಕ ಕಟ್ಟಿ ಕೊಟ್ಟವರು. ಅಲ್ಲಿಯವರೆಗೂ ಅಂತಹ ಗಮನ ಸೆಳೆಯದ ‘ಮುಸ್ಸಂಜೆ’ ಅನ್ನುವ ಅಗೋಚರ ಅರೆಗತ್ತಲ ಮಸುಕು ಜಗತ್ತೊಂದು ಕಪ್ಪಿಟ್ಟು ದಿನವಿಡೀ ಸುರಿಯುವ ಹೊಧಾರಾಕಾರ ಮಳೆಯಲ್ಲಿ, ಇದ್ದಕಿದ್ದಂತೆ ಫಳ್ಳನೆ ಸೀಳಿದ ಒಂದು ಕೋಲು ಮಿಂಚು ಹೊಳೆಯಿಸಿದ ಕಂಬಳಿಯೊಳಗಿನ ಅಸ್ಪಷ್ಟ ಮುಖದೊಡನೆ ಮತ್ತಷ್ಟು ನಿಗೂಡವಾಗುತ್ತಲೂ, ಮಬ್ಬು ಕತ್ತಲಿನಲ್ಲಿ, ಅರೆ ಕ್ಷಣ ಕಂಡ ಆ ಮುಖ ಎಂದೋ ಎಲ್ಲೋ ಕಂಡ ಯಾರದ್ದೋ ಮಸುಕು ರೂಪದಂತೆ ಗೋಚರಿಸುತ್ತಲೂ, ದಣಪೆ ದಾಟಿ ಬಂದ ಆಗಂತುಕನೊಬ್ಬ ಅಲ್ಲಿಗೆ ಬಂದದ್ದೇ ಒಂದು ಉದ್ದೇಶಕ್ಕಾಗಿದ್ದು, ಏನನ್ನೋ ಬಿಚ್ಚಿಕೊಳ್ಳಲು ಹಾತೊರೆಯುತ್ತಾ ಕಾಯುತ್ತಿರುವಂತೆಯೂ, ಮತ್ತೆಲ್ಲೋ ಅಡಗಿ ಕುಳಿತ ಪೊತ್ತೆ ಮೀಸೆಯವನೊಬ್ಬ ಇದ್ದಕ್ಕಿದ್ದಂತೆ ಧುತ್ತೆಂದು ಎದುರಾಗಿ, ಚಿಕ್ಕ ಹುಡುಗನ ಕೈಯಲ್ಲಿ ರಹಸ್ಯವಾಗಿ ತುರುಕುವ ಅತ್ಯಂತ ಗುಟ್ಟಿನ ನಿಗೂಡ ಪತ್ರ, ಅದು ತಲುಪಬೇಕಾದಲ್ಲಿ ತಲುಪದೆ, ಮುಟ್ಟಬೇಕಾದ ವ್ಯಕ್ತಿಗೆ ಮುಟ್ಟದೆ, ಮತ್ತೆಲ್ಲೋ ರಹಸ್ಯದಲ್ಲಿ ರವಾನೆಯಾಗಿಯೋ, ಮತ್ತೆಷ್ಟೊ ವರುಷಗಳ ನಂತರ ಭೇಟಿಯಾಗುವ ಮತ್ತೊಂದೇ ಮುಖಾಮುಖಿಯಲ್ಲಿ, ಎಷ್ಟೋ ವರುಷದ ನಿಗೂಡಗಳೆಲ್ಲಾ ಸ್ಫೋಟಗೊಳ್ಳುವುದಕ್ಕೆ ಕಾದಂತಹ ಒಂದು ಗಳಿಗೆಯಲ್ಲಿ ಪಿಸುಗುಡುತ್ತಾ ಅದೆಷ್ಟೋ ಯುಗಗಳ ರಹಸ್ಯಗಳನ್ನು ಏಕಾಏಕಿ ಒರೆಗೆ ಹಚ್ಚುತ್ತಾ, ಹೊರ ಬಂದಂತಹ ಆ ಕ್ಷಣಗಳೋ…

ಭಾಷೆಯ ಒಳ ಒಳ ಮರ್ಮಗಳನ್ನೆಲ್ಲಾ ಛೇದಿಸುತ್ತಾ ಮನುಷ್ಯನ ಹೃದಯ ಶೋಧಿಸುವ ರೀತಿ, ಚಿತ್ತಾಲರಿಗೇ ಅನನ್ಯವಾದುದ್ದು. ರಣರಂಗದಲ್ಲಿ ಚಕ್ರವ್ಯೂಹವನ್ನು ಛೇದಿಸುತ್ತಾ ಮುನ್ನುಗ್ಗಿದ ಹಾಗೆ ಚಿತ್ತಾಲರು ನೇರವಾಗಿ ಮನುಷ್ಯನ ಹೃದಯಕ್ಕೇ ಲಗ್ಗೆಯಿಡುತ್ತಾರೆ. ಪ್ರತಿಯೊಂದು ಪದವನ್ನೂ ತೂಗಿ ಬಳಸುವ ರೀತಿ ಮತ್ತು ಆ ಪದದ ಬಳಕೆಯಿಂದಲೇ ವಿಶಿಷ್ಟ ಅರ್ಥ ಹೊಳೈಯಿಸುವ ನಿಬ್ಬೆರಗಿನ ಪರಿ…

‘ಶಿಕಾರಿ’ ಚಿತ್ತಾಲರ ಅನನ್ಯ ಕೊಡುಗೆ. ಇವತ್ತಿನ ಕಾರ್ಪೋರೆಟ್ ಜಗತ್ತಿನ ಕೌರ್ಯದ ಹಲವು ಮಜಲುಗಳನ್ನು ಮೂವತ್ತು ವರುಷಗಳ ಹಿಂದೆಯೇ ಅವರು ತೆರೆದಿಟ್ಟಿದ್ದರು.

ನಮ್ಮ ನಡುವಿನ ಅಪರೂಪದ, ಅನನ್ಯ ಬರಹಗಾರರಾದ ಚಿತ್ತಾಲರು ತಣ್ಣಗೆ ತಮ್ಮಷ್ಟಕ್ಕೇ ತಾವೆಂದು ದೂರದಲ್ಲೆ ಇದ್ದವರು. ಒಮ್ಮೆ ನಾನು ದಿವಾಕರರಲ್ಲಿ, ‘ಚಿತ್ತಾಲರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತಲ್ಲವೇ?’ ಎಂದು ಕೇಳಿದಾಗ ದಿವಾಕರರು ಒಂದು ಮಾತು ಹೇಳಿದ್ದರು: ‘ ಟಾಲ್ಸ್ಟಾಯ್ ಮಾಹಾನ್ ಲೇಖಕನೆಂದು ಇಡೀ ಜಗತ್ತೇ ಒಪ್ಪಿಕೊಂಡಿದೆ. ಆದರೆ ಅವನಿಗೆ ನೋಬಲ್ ಪ್ರಶಸ್ತಿ ದೊರೆಯಲಿಲ್ಲ. ಹಾಗಂತ ಜಗತ್ತು ಇವತ್ತಿಗೂ ಟಾಲ್ಸ್ಟಾಯ್ಯನ್ನು ಓದುವುದನ್ನು ನಿಲ್ಲಿಸಲಿಲ್ಲ!’

ಚಿತ್ತಾಲರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತು – ಅವರು ಯಾವ ಪ್ರಶಸ್ತಿಗೂ ಹಾತೊರೆದವರಲ್ಲ. ಆದರೆ ಕನ್ನಡ ನಾಡಿನಿಂದ ದೂರವಿದ್ದ ಅವರು ಕನ್ನಡ ಜನತೆ ತನ್ನ ಕತೆಗಳನ್ನು ಓದಬೇಕೆಂದು ಬಹಳ ಹಂಬಲಿಸುತ್ತಿದ್ದರು. ಈಗಿನ ಅನೇಕರು ಚಿತ್ತಾಲರನ್ನು ಓದಿಲ್ಲ ಅನ್ನುವುದು ವಿಷಾದದ ಸಂಗತಿಯಾದರೂ ನಿಜ. ಆದರೆ ಒಬ್ಬ ಲೇಖಕನಿಗೆ ಅವನ ಕೃತಿಗಳನ್ನು ಓದುವುದಕ್ಕಿಂತ ಮಿಗಿಲಾದ ದೊಡ್ಡ ಕೊಡುಗೆ ಇದೆಯೆ?

‍ಲೇಖಕರು avadhi

April 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. P. Sheshadri

    ಬಹಳ ಒಳ್ಳೆಯ ಲೇಖನ…
    ಹೊಸ ಕತೆಗಾರರಿಗೆ ಮಾರ್ಗದರ್ಶಿಯಂತಿದೆ.
    ಜಯಶ್ರೀಯವರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ
  2. Anil Talikoti

    ಮತ್ತೆ ಕೆತ್ತಲಾಗದ ಚಿತ್ತಾಲರು.
    ‘ಒಬ್ಬ ಲೇಖಕನಿಗೆ ಅವನ ಕೃತಿಗಳನ್ನು ಓದುವುದಕ್ಕಿಂತ ಮಿಗಿಲಾದ ದೊಡ್ಡ ಕೊಡುಗೆ ಇದೆಯೆ?’ ಅತ್ಯಂತ ನಿಖರವಾದ ಮಾತುಗಳು.
    -ಅನಿಲ

    ಪ್ರತಿಕ್ರಿಯೆ
  3. ವಾಗೀಶ ಜೆ.ಎಮ್

    ಚಿತ್ತ್ತಾಲರನ್ನು ಓದಿಕೊಳ್ಳಬೆಕಿದೆ.. ಅಂಕಣಕ್ಕೆ ಧನ್ಯವಾದಗಳು..

    ಪ್ರತಿಕ್ರಿಯೆ
  4. y k sandhya sharma

    shresta lekhaka chittalara bagegina lekhana tumba aalavada chintanegalannu olagondide. jayashree. mana muttida baraha.

    ಪ್ರತಿಕ್ರಿಯೆ
  5. Raj

    Yes that is very true, the first and foremost respect we can give to a writer is to read him!
    Well, looking the people who get all the big awards (Nobels, Jnanapithas), I, like many people have lost all respect for them and as readers we have to find our own idols and our own guiding lamps.

    ಪ್ರತಿಕ್ರಿಯೆ
  6. Vishwanath

    ಚಿತ್ತಾಲಿಯನ್ ಪದಗಳು. ವಾಹ್!
    ಕೇವಲ ಪ್ರಶಸ್ತಿಗಳಿಂದಲೇ ಲೇಖಕರನ್ನು ಅಳೆಯುವುದು ಸಲ್ಲ ಎಂಬ ದಿವಾಕರ್ ಸರ್ ಮಾತು ಖಂಡಿತ ನಿಜ.
    ಅತ್ಯುತ್ತಮ ಲೇಖನ. ವಿಶಿಷ್ಠ ಸಾಹಿತಿಗೆ ವಿಶಿಷ್ಠ ಪದನಮನ.

    ಪ್ರತಿಕ್ರಿಯೆ
  7. Vidya Rao

    ಕಾದಂಬರಿಗಳ ಜಗತ್ತೇ ಅದ್ಭುತ. ಚಿತ್ತಾಲರೊಳಗೆ ಮಗುವಿನ ಮುಗ್ಧತೆ, ಬೆರಗು ಎರಡನ್ನೂ ತೋರುವ ಸಂದರ್ಭ ಮನತಟ್ಟಿತು. ಬರವಣಿಗೆಯು ನಿರಂತರವಾದಾಗ ಪದಗಳು ಯಾಂತ್ರಿಕವಾಗಿಬಿಡುವ ಅಪಾಯವಿರುವ ಹೊತ್ತಿನಲ್ಲಿ ಸಂವೇದನೆಗಳನ್ನು ಉಳಿಸಿಕೊಂಡು ಹೃದಯ ತಟ್ಟುತ್ತ ಹೋಗುವುದು ಲೇಖಕನೂ ಸರಳ ಮನಸ್ಸಿನ ಸಹೃದಯಿಯಾಗಿದ್ದರೆ ಮಾತ್ರವೇನೋ. ಚಿತ್ತಾಲರನ್ನು ಕಂಡು ಸಂಭ್ರಮಿಸಿದ ನೀವೇ ಧನ್ಯರು.ಲೇಖನ ಮನಮುಟ್ಟಿತು. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: