’ರಣ್ ಉತ್ಸವ ಮತ್ತು ನಾವಿಬ್ಬರು’ – ಬೆಳದಿಂಗಳಲಿ ಅರಳಿದ ಮೌನ ಕಾವ್ಯ…

(ಇಲ್ಲಿಯವರೆಗೆ)

ನಮ್ಮ ಒಂಟೆ ಗಾಡಿ ಸವಾರಿ ಮತ್ತೆ ವಾಪಸ್ ಟೆಂಟ್ ಸಿಟಿಯೆಡೆಗೆ ಹೊರಟಿತ್ತು.  ನಿಮಿಷಗಳಲ್ಲೇ ಕತ್ತಲಾವರಿಸಲು ಶುರುವಿಟ್ಟಿತ್ತು. ಆ ಕ್ಷಣಗಳ ಮೌನ, ನಿಧಾನಗತಿಯ ಪಯಣ, ಕತ್ತಲೂ ಅಲ್ಲದ ಬೆಳಕೂ ಅಲ್ಲದ ದಿನದ ಸಮಯದ ಮಾಯೆ,  ಎಲ್ಲವನ್ನೂ ಸುಮ್ಮನೆ ಸವಿಯುತ್ತ,  ಮುಗುಳ್ನಗೆಯೊಂದು ಸಾಗುತ್ತಿದ್ದರೆ ಅದೋ ದೂರದಲ್ಲಿ ಹುಣ್ಣಿಮೆ ಚಂದಿರ ಹುಟ್ತುತಲಿದ್ದ. ತುಂಬು ಚಂದಿರನ ಹೆರುತಿದ್ದ ಬಾನಿನಲ್ಲಿ ಕಂಡದ್ದು ಬೇನೆಯಲ್ಲ, ಬರೀ ಪ್ರಶಾಂತತೆ! ಸುರ್ಯೋದಯ/ಸೂರ್ಯಾಸ್ತದ ಸಮಯದಲ್ಲಿ ಸೂರ್ಯ ಬಣ್ಣ ಬದಲಿಸುವುದನ್ನು ಕಾಣುವುದು ಸಾಮಾನ್ಯ.
ಆದರಿಲ್ಲಿ ದುಂಡು ಚಂದಿರ ಕಡು ಕಿತ್ತಳೆ  ಬಣ್ಣದಲ್ಲಿ ಹುಟ್ಟಿ, ತುಸುವೇ ಗುಲಾಬಿ ಬಣ್ಣಕ್ಕೆ ತಿರುಗಿ, ಮತ್ತೆ ಬಂಗಾರ ಬಣ್ಣದವನಾಗಿ, ಕೊನೆಗೂ ಹಾಲ್ಬಿಳುಪನ್ನು ಮೈ ತುಂಬಿಕೊಳ್ಳುತಲಿದ್ದ. ಅವನಲ್ಲಿ ನೆಟ್ಟ ನೋಟ ಹಿಂತೆಗೆಯಲೇ ಇಲ್ಲ. ಹಿಮ್ಮೆಳದಲ್ಲಿದ್ದ ಬಾನ  ಕಪ್ಪಿನಷ್ಟೇ ಆಳವಾಗಿ, ಗಾಢವಾಗಿ ಆ ಕ್ಷಣಗಳು ಒಳಗಿಳಿಯತೊಡಗಿದ್ದವು. ಹೊರಗಣ ಪ್ರಪಂಚ ಕ್ಯಾಮೆರಾ ಕಾರ್ಯವನ್ನು ಶುರು ಮಾಡಿಯಾಗಿತ್ತು.  ಇದ್ದಕ್ಕಿದ್ದಂತೆ ಗಾಢ ನಿದ್ದೆಯಿಂದ ಎದ್ದಂತೆ ನಾನೂ  ಕ್ಯಾಮೆರ ಹೊರತೆಗೆದು, ಒಂಟೆ  ಗಾಡಿಯನ್ನು ಒಂದೆರಡು ನಿಮಿಷಗಳ ಕಾಲ ನಿಲ್ಲಿಸಲು ಹೇಳಿ, ಆ ಚಂದಿರನ  ಮುದ್ದು ಅವತಾರಗಳನ್ನು ಕ್ಯಾಮೆರಾದ  ನೆನಪಿನ ಚಿಪ್ಪಿನಲ್ಲೂ ಮೊಗೆದುಕೊಂಡಾಯ್ತು. ಮತ್ತೆ ಬಂಡಿಯೇರಿ ಹೊರಟಾಗ ಅನಿಸಿದ್ದು, ಒಂದು ದಿನದಲ್ಲಿ ಅದೆಷ್ಟು ಸುಂದರ ಕ್ಷಣಗಳು!  ಚಳಿ ಮೈ ಬಳಸಲು ಶುರುವಿಟ್ಟಿತ್ತು. ಆದರೆ ಮನಸನಾಗಲೇ ಅನಿವರ್ಚನೀಯ ಅನುಭವ ಬಳಸಿಕೊಂಡಾಗಿತ್ತು. ಅದೇ ಗುಂಗಿನಲ್ಲಿ ಮತ್ತ್ತೆ ಟೆಂಟ್ ಸಿಟಿಗೆ ಮರಳಿದಾಗ, ವಾಪಸ್ ರಣ್ ಗೆ ಹೋಗಲು  ಇದ್ದದ್ದು ಹೆಚ್ಚು-ಕಮ್ಮಿ  ಘಂಟೆಯ ಕಾಲಾವಕಾಶ. ರಾತ್ರಿ ೯:0೦-೧೧: ೦೦ ರ ನಡುವೆ ಹುಣ್ಣಿಮೆ ಚಂದಿರನೊಡನೆ ಹಾಲ್ಬಿಳುಪಿನ ಹಾಸಿನ ಮೇಲೆ dating ಗೆ ಹೋಗಲು ಮುಕ್ತ ಅವಕಾಶ 🙂

ರಾತ್ರಿಯಲ್ಲಿ ರಣ್ ಸೇರಿದ್ದು ಬಸ್ ನ ಮುಖಾಂತರ. ಬಸ್ ರಣ್ ತಲುಪಿದಾಗ ಆಗಲೇ 9:40 ರ ಸಮಯ. ನಂದನ್ ಬಸ್ ನಲ್ಲೇ ಮಲಗಿಬಿಟ್ಟಿದ್ದ. ನನಗಿದ್ದಿದ್ದು ಕೇವಲ ೪೦-೪೫ ನಿಮಿಷಗಳ ಕಾಲಾವಕಾಶ for the most beautiful moonlight walk. Solitude at its best! ಮತ್ತೆ ನಂದನ್ ನ ಬಸ್ ಡ್ರೈವರ್ ಸುಪರ್ದಿಗೆ ವಹಿಸಿ, ಕಂಡಕ್ಟರ್ ನ ಫೋನ್ ನಂಬರ್ ಪಡೆದು, ಮಗು ಎದ್ದರೆ ಫೋನ್ ಮಾಡಿ ಎಂದು ತಿಳಿಸಿ, ರಣ್ ನೆಡೆಗೆ ಹೆಜ್ಜೆಯಿಡುವಾಗ ಬದುಕಿಗೆ ನಾ ಶರಣಾಗುತಿರುವ  ಪರಿ, ಬದುಕನ್ನು ನಾ ಅತಿಯಾಗಿ ನಂಬುವ ಪರಿ, ಏನೆಲ್ಲಾ ಆದ ಮೇಲೂ, ಅದೇ ಅದಮ್ಯ ನಂಬಿಕೆಯೊಡನೆ  ಬದುಕ ಬೆರಳು ಹಿಡಿದು ನಾ ನಡೆಯುವ ಪರಿಯನ್ನು ನೆನೆದು ನನ್ನಲ್ಲೇ ಏನೋ  ಭಾವ ಸಂಚಲನ! ಇರುವ ಕ್ಷಣದಲ್ಲಿ ಇರದೇ ಮತ್ತೆಲ್ಲೋ ಸಾಗುತ್ತಿದ್ದ ಆಲೋಚನೆಗಳನ್ನು ಮರಳಿ ಆ ಕ್ಷಣಕ್ಕೆ ಎಳೆದು ತಂದಾಗ, ಕಣ್ಣಲ್ಲಿ ಬೆಳದಿಂಗಳ ಬೆಳಕು… ಬಿಳಿಯ ಬಂಜರಿನ ಪ್ರತಿಫಲನ, ಕತ್ತಲಿನ ಮುಸುಕಿನಲಿ ಮುಗುಳುನಗುವ ಬೆಳಕು! ಮಾಯದಂಥ ಮಳೆ ಬಂತಣ್ಣ ಮಗದಾದ ಕೆರೆಗೆ! ಇಲ್ಲಿ ಬೆಳದಿಂಗಳ ಮಳೆ ಮರಳುಪ್ಪಿನ ಮೇಲೆ…

ನಂತರ ನಡೆದದ್ದು ಮೌನ ಕಾವ್ಯ! ತುಂಬು ಹುಣ್ಣಿಮೆಯ ಬೆಳದಿಂಗಳಿನಲಿ ಬಿಳಿ ಮರಳುಪ್ಪಿನ ಹಾಸಿನ ಮೇಲೆ ದೂರದಲ್ಲಿ ನಡೆದು ಹೋಗುತ್ತಿದ್ದ ಜನರನ್ನು ನೋಡುತ್ತಿದ್ದರೆ, ನೆರಳುಗಳೆದ್ದು ನಡೆದಾಡುತ್ತಿದ್ದವೇನೋ ಎಂದೆನಿಸಿತ್ತು ಒಂದು ಕ್ಷಣ. ನೆರಳು ಮತ್ತು ನೆರಳಿನ ನೆರಳು ಎರಡನ್ನೂ ಒಟ್ಟಿಗೆ ಕಂಡಂಥ ಸೋಜಿಗದ ಅನುಭವ. ಕಾಲಲ್ಲಿ ಧರಿಸಿದ್ದ ಸ್ಪೋರ್ಟ್ಸ್ ಶೂಗಳು ಮಾತ್ರ ಹರಳು ಹರಳಾದ ಉಪ್ಪಿನ ಸ್ಪರ್ಶಕೆ, ದನಿಗೆ ಮಾರು ಹೋಗಿ, ಉತ್ಸಾಹದಿಂದ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತಲಿದ್ದವು. ಹಿನ್ನೆಲೆಯಲ್ಲಿ ಅಲ್ಲಿ-ಇಲ್ಲಿ ಕೇಳಿ ಬರುವ ಮಾತುಗಳು, ಅಗಾಧ ಮೌನ, ಲಯಬದ್ಧವಾಗಿ ಕೇಳಿ ಬರುತ್ತಿದ್ದ ಹೆಜ್ಜೆಗಳ ಕರ್-ಕರ್ ಸದ್ದು ಜೊತೆಗೆ ವಿಶಾಲ ಭೂಮಿ, ಬಾನು, ಶಶಿ, ‘ಅವನ’ ಬೆಳಕು, ತಾಕಿ ಹೋಗುವ ಚಳಿ, ಮತ್ತು ಏಕಾಂತ. ಒಂದು ತೆರನಾದ ಅಲೌಕಿಕ ಅನುಭವ. ‘ನಾನು’ ಎನ್ನುವುದೆಷ್ಟು ಗೌಣ ಎಂಬುದನ್ನು ಒಂದು ಚಕಾರವಿಲ್ಲದೇ ತೆರೆದಿಡುವಂಥ ಕ್ಷಣಗಳು… ಸುಮಾರು ದೂರ ಹಾಗೇ ನಡೆದು, ಕೊನೆಗೊಂದು ಘಳಿಗೆಯಲ್ಲಿ ಮರಳು ಹಾಸಿನ ಮೇಲೆ ಕುಳಿತವಳು ಅದೆಷ್ಟು ಕ್ಷಣಗಳೋ,  ನಿಮಿಷಗಳೋ, ಯುಗಗಳೋ ಅವುಗಳಲ್ಲಿ ಕಳೆದು ಹೋಗಿ ಅನಂತ ಬಿಳುಪಿನಲ್ಲಿ ವಿಲೀನಳಾಗಿಬಿಟ್ಟಿದ್ದೆ. ಕತ್ತಲಿನ ಹೊದಿಕೆಯಲ್ಲಿ ನಗುತಿದ್ದ ಬೆಳಕು, ಕತ್ತಲು ಸೋಕಿದರೂ ಸೋಕದಂತಿತ್ತು!

ಮತ್ತೆ ದೂರದಲ್ಲಿ  ಧ್ವನಿವರ್ಧಕದಲ್ಲಿ ನಿರ್ದೇಶನಗಳು ಶುರುವಾಗಿದ್ದವು. ಜನರು ತಮ್ಮ ತಮ್ಮ ಬಸ್ ಗಳಿಗೆ ಮರಳಬೇಕಾದ ಸಂದೇಶ. ನಾನು ರಣ್ ಗೆ  ಹೋಗುವಾಗ ಸ್ನೇಹಿತರೊಂದಿಷ್ಟು ಜನ ಹಿಡಿ ಮರುಳನ್ನು ತಮಗಾಗಿ ತರಲು ಹೇಳಿದ್ದರು. ಧ್ವನಿವರ್ಧಕದ ಸಂದೇಶ ಕೇಳಿದೊಡನೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಪೊಟ್ಟಣಗಳನ್ನು ಹೊರತೆಗೆದು ಅವುಗಳಲ್ಲಿ ತುಂಬಿಕೊಳ್ಳಲು, ಬೊಗಸೆಯಲ್ಲಿ ಮರಳುಪ್ಪನ್ನು ಮೊಗೆದದ್ದೇ ತಡ ಒಂದು ಕ್ಷಣ ತಟಸ್ಥಳಾಗಿಬಿಟ್ಟೆ. ‘ಬದುಕು ಇಷ್ಟೇ ಅಲ್ಲವಾ…?!’

ಧ್ವನಿವರ್ಧಕದ ಸಂದೇಶ ಮೊಳಗುತಲಿತ್ತು, ವಾಸ್ತವ ಎಳೆಯುತಲಿತ್ತು, ಅನುಭವದಾಳ ಸೆಳೆಯುತಲಿತ್ತು… ‘ನಿಮ್ಮ ನಿಮ್ಮ ಗುಂಪಿನಲ್ಲೇ ಇರಿ, ಕುಟುಂಬದವರೊಂದಿಗೆ ಇರಿ, ಬೇಗ ಬಸ್ ತಲುಪಿ … ‘ ಸಂದೇಶಗಳು ಮುಂದುವರೆಯುತ್ತಲೇ ಇದ್ದವು. ನಂದನ್ ನೆನಪಾದ, ಹೆಜ್ಜೆಗಳು ವೇಗವಾದವು… ಒಂದೇ ಸಮಯದಲ್ಲಿ ಎರಡು ಮಾಯೆಗಳು ಎಳೆಯುತಲಿದ್ದವು – ಅತ್ತ ಬಯಲು, ಬೆಳದಿಂಗಳು ಇತ್ತ ಪ್ರೀತಿ, ಕರುಳು! ಅಂತೂ ಬಸ್ ತಲುಪಿದಾಗ ಲಾಜಿಕಲ್ ಮಂಜುಳಾ ಸಹ ಮರಳಿದ್ದಳು. ನಂದನ್ ತನ್ನ ಆಸನದಲ್ಲಿ ಸುಖ ನಿದ್ದೆಯಲ್ಲೇ ಇದ್ದ.  ನನಗೆ ನೆಮ್ಮದಿಯ ನಿಟ್ಟುಸಿರು! ಬಸ್ ನ ಸೀಟ್ನಲ್ಲಿ ಕುಳಿತಾಗ ಏನೋ ಧನ್ಯತಾ ಭಾವ, ವಿಶೇಷವಾದದ್ದೇನೋ ಪಡೆದ ಹಾಗೆ, ಮತ್ತಿನ್ನೇನೋ ಹಿಂದೆ ಬಿಟ್ಟು ಬಂದ ಹಾಗೆ… ಆಲೋಚನೆಗಳ ಬಾಗಿಲು ಒಮ್ಮಿಂದೊಮ್ಮೆಲೇ ಮುಚ್ಚಿತು. ತೃಪ್ತ ಭಾವವೊಂದು ಆವರಿಸಿತು. ಮರಳಿ ಟೆಂಟ್ ಗೆ,ಮರಳಿ ಬೆಚ್ಚನೆ ಭಾವಕೆ, ಮರಳಿ ನಿದ್ರೆಗೆ ಜಾರುವಾಗ ಪ್ರಶಾಂತತೆ ಮುತ್ತಿಟ್ಟ ಅನುಭವ!

(ಮುಂದುವರಿಯುವುದು…)

‍ಲೇಖಕರು avadhi

April 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. ahalyaballal

    “ಅತ್ತ ಬಯಲು, ಬೆಳದಿಂಗಳು. ಇತ್ತ ಪ್ರೀತಿ, ಕರುಳು!”
    Yes. ಅದೇ ಮತ್ತೆ. ರಣ್ ಒಂದು ನೆಪ, ಅಷ್ಟೇ. ಈ ಅನುಭೂತಿಗೆ ನನ್ನಂತಹ ಎಷ್ಟೋ ಜನ relate ಮಾಡಬಹುದು. Very enjoyable!

    ಪ್ರತಿಕ್ರಿಯೆ
  2. Swarna

    ಹಿಡಿಯಲ್ಲಿ ಸಿಕ್ಕಿದ್ದು , ದಕ್ಕಿದ್ದು… ಎಲ್ಲವೂ ಬದುಕು. ಸುಂದರವಾದ ಬರಹ

    ಪ್ರತಿಕ್ರಿಯೆ
  3. Raj

    Beautiful experience.
    But I feel sad how many people spend their whole lives in petty matters and non-sense instead of living with peace and meaning and filling it with beauty.

    ಪ್ರತಿಕ್ರಿಯೆ
  4. Geetanjali Arakeri

    Very neat narration!! Took all the “attention” while readin..Keep it up!! He is with you:-)

    ಪ್ರತಿಕ್ರಿಯೆ

Trackbacks/Pingbacks

  1. ’ರಣ್ ಉತ್ಸವ ಮತ್ತು ನಾವಿಬ್ಬರು’ – ನಾನು ಪಾಕಿಸ್ತಾನದ ಮರಗಳನ್ನು ನೋಡಿದೆ « ಅವಧಿ / Avadhi - [...] ’ರಣ್ ಉತ್ಸವ ಮತ್ತು ನಾವಿಬ್ಬರು’ – ನಾನು ಪಾಕಿಸ್ತಾನದ ಮರಗಳನ್ನು ನೋಡಿದೆ April 2, 2014 by user2 (ಇಲ್ಲಿಯವರೆಗೆ) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: