ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಸೈಕಲ್ ಸವಾರಿ

(ಇಲ್ಲಿಯವರೆಗೆ)

ಮನೆಯಲ್ಲಿ ಯಾರಿಗೂ ಮಾತಾಡುವುದು ಬೇಕಿರಲಿಲ್ಲ. ಅವಮಾನವೋ, ಸಿಟ್ಟೋ, ನಿರಾಸೆಯೋ ಒಂದೂ ಅರ್ಥವಾಗದ ಸ್ಥಿತಿ. ಚಿಟ್ಟಿ ಎಲ್ಲದಕ್ಕೂ ಕಾರಣವಾದರೂ -ಏನೂ ಆಗಿಲ್ಲ ಎನ್ನುವ ಹಾಗೇ ಇದ್ದುಬಿಟ್ಟಿದ್ದಳು. ಅವಳ ಒಳಗೆ ಯಾವುದೋ ದೃಢತೆ ಮನೆಮಾಡಿತ್ತು. ಮಾತಿಗೂ ಮೀರಿದ ವಿಶ್ವಾಸ ಕಣ್ಣುಗಳಲ್ಲಿತ್ತು. ತಾನು ಅಂದುಕೊಂಡಿದ್ದನ್ನು ಮಾಡಬಲ್ಲೆ ಎನ್ನುವ ಆತ್ಮಸ್ಥೈರ್ಯ ಅವಳ ಎದೆಯನ್ನು ತುಂಬಿತ್ತು. ಇದೆಲ್ಲಾ ಆಗಿದ್ದು ಹುಡುಗನ ಮನೆಯ ಕಡೆಯವರ ಎದುರು ತಾನು ಓದಬೇಕು ಅಂತ ಅಂದಳಲ್ಲ- ಅದರಿಂದ ಮಾತ್ರ ಆಗಿರಲಿಲ್ಲ. ಚಿಟ್ಟಿ ಈ ಮಟ್ಟಿಗೆ ಹೆಚ್ಚಿಕೊಳ್ಳಬಹುದು ಎಂದು ಅಮ್ಮ ಅಂದುಕೊಂಡಿರಲಿಲ್ಲ.

ಅವಳ ಉದ್ಧಟತನದ ಮಾತುಗಳನ್ನು ಕೇಳಿದ ತಕ್ಷಣ ಅಮ್ಮನ ಕೈಗಳು ಅಯಾಚಿತವಾಗಿ ಮೇಲೆದ್ದು ಇನ್ನೇನು ಅವಳ ಕೆನ್ನೆಯನ್ನು ತಟ್ಟಬೇಕು ಆಗ ಹುಡುಗ ತಡೆಯುತ್ತಾ ‘ಯಾಕೆ ಇವಳನ್ನು ಹೊಡೀತೀರಿ ಎಲ್ಲರಿಗೂ ಇರುವ ಹಾಗೆ ಇವಳಿಗೂ ಆಸೆಯಿದೆ. ಆದರೆ ಏನು ಮಾಡುವುದು? ನಮ್ಮ ಮನೆಯಲ್ಲಿ ಓದಿಸುವ ವಾತಾವರಣ ಇಲ್ಲ. ಓದಿನ ಬಗ್ಗೆ ನಮ್ಮ ಮನೆಯಲ್ಲಿ ಯಾರಿಗೂ ಆಸಕ್ತಿಯಿಲ್ಲ. ಬಹುಶಃ ನನ್ನ ಮದುವೆಯಾದರೆ ನಿಮ್ಮ ಹುಡುಗಿಯ ಆಸೆ ಈಡೇರಲಾರದು. ಅದಕ್ಕೆ ಇದನ್ನೆಲ್ಲಾ ಇಲ್ಲಿಗೆ ಬಿಟ್ಟುಬಿಡೋಣ’ ಎಂದು ಖಂಡತುಂಡವಾಗಿ ಹೇಳಿ ಹೊರಟುಬಿಟ್ಟ.

ಚಿಟ್ಟಿಗೆ ತನ್ನ ಸಮಸ್ಯೆ ಇಷ್ಟು ಸುಲಭವಾಗಿ ಬಗೆಹರಿದುಬಹುದು ಎಂಬ ನಂಬಿಕೆಯಿರಲಿಲ್ಲ. ಆದರೂ ಎಲ್ಲವೂ ಅವಳ ಕಣ್ಣೆದುರಿಗೇ ನಡೆದುಬಿಟ್ಟಿತ್ತು. ಅಮ್ಮ ಅಳುತ್ತಾ ಅವತ್ತೆಲ್ಲಾ ಯಾರ ಜೊತೆಗೂ ಮಾತಾಡಲಿಲ್ಲ. ಅಜ್ಜಿ ‘ಊರವರ ಮುಂದೆ ಮರ್ಯಾದೆ ಹೋಯ್ತು ಇನ್ನ ಇವಳನ್ನು ನೋಡೋಕ್ಕೆ ಯಾವ ಹುಡುಗ ಬರ್ತಾನೆ?’ ಎಂದು ಗೊಣಗಿಕೊಂಡಳು. ಚಿಟ್ಟಿಯನ್ನು ಯಾಕೋ ಯಾರೂ ನಿಲ್ಲಿಸಿ ಪ್ರಶ್ನೆ ಮಾಡಲಿಲ್ಲ. ಅವತ್ತು ರತ್ನಮ್ಮನವರೇ ಅಡುಗೆ ಮಾಡಿ ಭಾರತಿಯ ಕೈಲಿ ಕಳಿಸಿದ್ದರು.

ಅಪ್ಪ ಅದನ್ನು ಎಲ್ಲರಿಗೂ ಕೊಟ್ಟ. ಚಿಟ್ಟಿಯ ಕೈಗೆ ಕೊಟ್ಟು ಹೊರಡುವಾಗ ಚಿಟ್ಟಿ ‘ಅಪ್ಪಾ’ ಎಂದಿದ್ದಳು. ಅವಳ ಎದುರಿಗೆ ಕೂತ ಅಪ್ಪ ಅವಳ ಮೊಖವನ್ನೇ ದಿಟ್ಟಿಸುತ್ತಾ ‘ಏನು?’ ಎಂದ. ‘ನನ್ನದು ತಪ್ಪೇ ಇರಬಹುದು ಅಪ್ಪಾ. ಆದರೆ ನಾನು ಓದಬೇಕು. ಇಷ್ಟು ದಿನ ಓದಲಿಲ್ಲ ನಿಜ. ಆದರೆ ಮುಂದೆ ಹಾಗಿರುವುದಿಲ್ಲ. ನನ್ನ ಮಾತನ್ನು ನಾನು ನಡೆಸಿಕೊಡ್ತೀನಿ. ಯಾರ ತಂಟೆಗೂ ಹೋಗಲ್ಲ, ಓದೋದನ್ನು ಬಿಟ್ಟು ಬೇರೆ ಏನೂ ಮಾಡಲ್ಲ. ನನ್ನನ್ನು ನಂಬು. ಬೇಕಾದರೆ ಎರಡು ವರ್ಷ ನೋಡು… ನಾನು ಓದಿಲ್ಲವೆಂದರೆ ॒ಓದೋಕ್ಕೆ ಆಗಲಿಲ್ಲ ಅಂದ್ರೆ ಬೇಕಾದರೆ ಮದುವೆ ಮಾಡಿಬಿಡು’ ಎಂದಳು ಚಿಟ್ಟಿ ದೈನ್ಯದಿಂದ. ಅಪ್ಪ ಒಂದು ಕ್ಷಣ ಅವಳ ಕಣ್ಣುಗಳನ್ನೇ ನೋಡಿದ. ಅವನಿಗೆ ಎಂಥಾದೋ ಮಿಂಚು ಕಂಡಂತಾಯಿತೇನೋ. . .

ಅವಳ ತಲೆಯನ್ನು ನೇವರಿಸುತ್ತಾ ‘ಓದೋದೇ ನಿನ್ನ ಗುರಿಯಾದರೆ ಓದು ಚಿಟ್ಟಿ, ನನ್ನ ಕಷ್ಟದ ಬಗ್ಗೆ ನಿಂಗೆ ಚಿಂತೆ ಬೇಡ’ ಎಂದು ಅಲ್ಲಿಂದ ಹೊರಟ. ಚಿಟ್ಟಿಯ ಮುಖದಲ್ಲಿ ಮಂದಹಾಸ ಕಾಣಿಸಿಕೊಂಡಿತು. ಅಮ್ಮ ಅಸಹನೆಯಿಂದ ಅಪ್ಪನ ಕಡೆಗೆ ನೋಡಿ ಮುಖ ತಿರುಗಿಸಿಕೊಂಡಳು. ಚಿಟ್ಟಿ ಕಾಲೇಜಿಗೆ ಹೋಗುವ ತಯಾರಿ ನಡೆಸಿದ್ದಳು. ಎಲ್ಲರ ಹತ್ತಿರ ತಾನು ಕಾಲೇಜಿಗೆ ಸೇರುವ ವಿಚಾರವನ್ನೂ ಹೇಳಿಕೊಂಡಳು. ಯಾರಿಗೋ ಹೇಳಿ ಅರ್ಜಿ ತರಿಸಿಕೊಂಡು ತನ್ನ ಅಕ್ಷರ ಸರಿಯಾಗಿಲ್ಲ ಎಂದು ಅಪ್ಪನನ್ನು ಕಾದು ಅದನು ತುಂಬಿಸಿದಳು. ಕೊನೆಯಲ್ಲಿ ತನ್ನ ಸಹಿಯನ್ನು ಹಾಕುವಾಗ ಸಣ್ಣದಾಗಿ ನಡುಗಿದ ಕೈಯ್ಯ ಕಾರಣಕ್ಕೆ ಸ್ವಲ್ಪ ಸೊಟ್ಟಗಾಗಿ ‘ಅಯ್ಯೋ ಈ ಸಹಿಯಿಂದಾಗಿ ತನಗೆ ಸೀಟು ಸಿಗದೆ ಹೋದರೆ…’ ಎಂದೆನ್ನಿಸಿ ಗಾಬರಿಗೊಳಗಾದಳು. ಆದರೆ ಅವಳಿಗೆ ಅದನ್ನು ಯಾರ ಹತ್ತಿರ ಹೇಳಿಕೊಳ್ಳುವುದು ತಿಳಿಯದೆ ಒದ್ದಾಡಿದಳು. ‘ಅದು ಬರೀ ಸೈನ್ ಅಷ್ಟೇ ಚಿಟ್ಟಿ ಯೋಚ್ನೆ ಮಾಡ್ಬೇಡ’ ಎಂದು ಅಪ್ಪ ಹೇಳುವವರೆಗೂ ಅವಳಿಗೆ ಸಮಾಧಾನವಾಗಲಿಲ್ಲ.

ಸರೋಜಾಳ ಮನೆಯ ಮೂಲೆಯಲ್ಲಿ ನಿಲ್ಲಿಸಿದ್ದ ಸೈಕಲ್‌ನ್ನು ಗುಜರಿಗೆ ಹಾಕಬೇಕು ಎಂದು ರಾಮೇಗೌಡರು ಓಡಾಡುವಾಗ ಸರೋಜ ‘ಅಪ್ಪ ಆ ಸೈಕಲ್ ನನಗಿರಲಿ’ ಎಂದು ಗೋಗರೆದಿದ್ದರಿಂದ ಅದು ಮನೆಯಲ್ಲೇ ಉಳಿದಿತ್ತು. ‘ಯಾರೂ ಇಲ್ಲದ ಕಡೆ ಮಾತ್ರ ಓಡಿಸಬೇಕು’ ಎನ್ನುವ ಕರಾರಿನ ಮೇಲೆ ಸೈಕಲ್ ಸರೋಜಾಳ ಕೈಗೆ ಬಂದಿತ್ತು. ‘ನಾನೂ ಸೈಕಲ್ ಕಲೀಬೇಕು’ ಚಿಟ್ಟಿಗೆ ಅನ್ನಿಸಿತಾದರೂ ಮನೆಯಲ್ಲಿ ಹೇಳಲಿಕ್ಕಾಗುತ್ತದಾ? ಅಮ್ಮನ ಎದುರಿಗೆ ತಾನು ಹಾಗೇನಾದರೂ ಹೇಳಿದರೆ ಕಾಲೇಜಿಗೂ ಎಲ್ಲಿ ಕಲ್ಲುಬೀಳುತ್ತೋ ಎನ್ನುವ ಭಯದಿಂದ ಮಾತಾಡಲಿಲ್ಲ. ಬ್ರೇಕಿಲ್ಲದ ಸೈಕಲ್ ಮೇಲೆ ಹತ್ತಿ ಗಾಳಿಯ ಹಾಗೇ ಹಾರುತ್ತಾ ಹೋಗುತ್ತಿದ್ದ ಸರೋಜಾ ಸ್ವಲ್ಪ ದೂರ ಹೋಗುವಷ್ಟರಲ್ಲಿ ಆಯತಪ್ಪಿ ಕೆಳಕ್ಕೆ ದುಪ್ಪೆಂದು ಬಿದ್ದುಬಿಟ್ಟಳು. ಸೈಕಲ್ ಚಕ್ರ ನಿಲ್ಲದೆ ತಿರುಗುತ್ತಲೇ ಇತ್ತು. ಗಾಬರಿಯಿಂದ ಅವಳನ್ನು ಎತ್ತಲು ಹೋದ ಚಿಟ್ಟಿ ಮತ್ತು ಭಾರತಿಯನ್ನು ಮುಖ ಊದಿಸಿಕೊಂಡ ಸರೋಜಾ ಬೈಯ್ಯಲು ಶುರು ಮಾಡಿದಳು. ಅವಳನ್ನು ಸಮಾಧಾನ ಮಾಡುತ್ತಾ ‘ನೋಡು ಕಲ್ಲಿರುವ ಕಡೆ ಹುಡುಕಿಕೊಂಡು ಹೋಗು. ಕಲ್ಲುಸಿಕ್ಕ ತಕ್ಷಣ ಕಾಲನ್ನು ಕೊಟ್ಟು ನಿಲ್ಲಿಸು’ ಎಂದು ಬಿಟ್ಟಿ ಸಲಹೆಯನ್ನು ಬೇರೆ ಕೊಟ್ಟಳು ಭಾರತಿ. ಅವಳು ಹಾಗೆಂದಿದ್ದೇ ತಡ ಚಿಟ್ಟಿಗೆ ಮತ್ತಷ್ಟು ನಗು ಉಕ್ಕಿ ಬಂತು. ಈಗ ಸರೋಜಾಗೆ ಮತ್ತಷ್ಟು ಕೋಪ ಬಂತು. ಅದನ್ನು ಲೆಕ್ಕಿಸದೆ ‘ಅಲ್ಲ ಕಣೆ ಇವಳು ಬಿಟ್ಟಿ ಸಲಹೆ ಕೊಡ್ತಾಳೆ, ಕಲ್ಲನ್ನ ಹುಡುಕ್ಕೊಂಡು ಹೋಗು ಅಂದ್ಯಲ್ಲಾ? ಅದನ್ನ ಮಾಡೋದು ನಾಯಿಗಳು ಅಲ್ವಾ? ನನ್ನ ಹತ್ತಿರ ಹೇಳಿದೆ ಸರಿಯಾಯ್ತು. . . . ಯಾರ ಎದುರಿಗೂ ಹೀಗೆಲ್ಲಾ ಮಾತಾಡಬೇಡ ’ ಎಂದಳು ಚಿಟ್ಟಿ.

ಆ ಮಾತನ್ನು ಕೇಳಿದ್ದೇ ತಡ ‘ಹಾಂ ನನ್ನ ನಾಯಿ ಅಂದ್ಯಾ?’ ಎಂದು ಸರೋಜಾ ಅವಳ ಜೊತೆ ಜಗಳಕ್ಕೆ ನಿಂತಳು. ಈಗ ನಿಜಕ್ಕೂ ಚಿಟ್ಟಿಗೆ ಗಾಬರಿಯಾಯ್ತು. ‘ಅಯ್ಯೋ ನಾನ್ ಅಂದಿದ್ದು ಹಾಗಲ್ಲ ಕಣೇ’ ಎಂದು ಎಷ್ಟೇ ಸಮಜಾಯಿಷಿಕೊಟ್ಟರೂ ಸರೋಜಾ ಕೇಳಲೇ ಇಲ್ಲ. ಇನ್ನು ಜಗಳ ಯಾವ ಮಟ್ಟಕ್ಕೆ ಬೇಕಾದರೂ ಮುಟ್ಟಬಹುದು ಎಂದು ಭಾವಿಸಿ ಭಾರತಿ ಮಧ್ಯೆ ಬಂದು ‘ಅದು ಹಾಗಲ್ಲ ಹೀಗಲ್ಲ’ ಎಂದು ಸರೋಜಾಳನ್ನು ಸಮಾಧಾನ ಮಾಡಿದಳು. ಅದು ಅಲ್ಲಿಗೆ ನಿಲ್ಲದೆ ಹೋದ್ದರಿಂದ ಭಾರತಿಯೇ ಇದಕ್ಕೆ ಕೊನೆ ಎನ್ನುವ ಹಾಗೆ ‘ಒಬ್ಬೊಬ್ಬರೇ ಸೈಕಲ್ ಕಲಿಯೋದು ಸಾಧ್ಯವಿಲ್ಲ. ಅದಕ್ಕೆ ಒಬ್ಬರು ಸೈಕಲ್ ಹಿಡಕೊಂಡರೆ ಇನ್ನೊಬ್ಬರು ತುಳಿಯೋದು ಸುಲಭವಾಗುತ್ತೆ, ನಿನ್ನ ಕಾರಣದಿಂದ ನಾವೂ ಕಲಿತ ಹಾಗಾಗುತ್ತೆ’ ಎಂದಳು. ಮತ್ತೆ ಬಿದ್ದು ಎದ್ದು ಮಾಡೋದಕ್ಕಿಂತ ಇದು ಸರಿ ಎನ್ನಿಸಿದ್ದರಿಂದ ತನ್ನ ಎಲ್ಲಾ ಕೋಪವನ್ನೂ ಬಿಟ್ಟು ಸರೋಜಾ ಒಪ್ಪಿಕೊಂಡಳು. ಅವತ್ತು ಚಿಟ್ಟಿ ಗುಲಾಬಿ ಬಣ್ಣದ ಚೀಟಿ ಲಂಗವನ್ನು ಹಾಕಿಕೊಂಡಿದ್ದಳು. ಅವಳಿಗೆ ಯಾವಾಗಲೂ ಆ ಬಣ್ಣವೆಂದರೆ ಹೆಚ್ಚು ಪ್ರಿಯ. ಅದೆಲ್ಲಿ ಸಿಕ್ಕೊಂಡು ಹರಿದು ಹೋಗುತ್ತೋ ಎಂದು ಚಿಟ್ಟಿ ಕಚ್ಚೆಯ ಹಾಗೇ ಲಂಗವನ್ನು ಕಾಲುಗಳ ಮಧ್ಯದಿಂದ ತೆಗೆದುಕೊಂಡು ನಾಜೂಕಾಗಿ ಸಿಕ್ಕಿಸಿಕೊಂಡಳು. ಚಿಟ್ಟಿಯ ಈ ಐಡಿಯಾ ಭಾರತಿ, ಸರೋಜಾರಿಗೆ ಇಷ್ಟವಾದರೂ ಕಾಲುಕಾಣದ ಹಾಗೇ ಸಿಕ್ಕಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗೂ ಹೀಗೂ ಸರತಿಯ ಮೇಲೆ ಸೈಕಲ್ಲು ತುಳೀಲಿಕ್ಕೆ ಶುರು ಮಾಡಿದರು.

ಒಬ್ಬೊಬ್ಬರದ್ದೂ ಒಂದೊಂದು ಪಾಡು. ಬಿದ್ದಿದ್ದಕ್ಕೂ ಎದ್ದಿದ್ದಕ್ಕೂ ಲೆಕ್ಕವೇ ಇಲ್ಲ! ಮತ್ತೆ ಮತ್ತೆ ಪಾಳಿಯಲ್ಲಿ ಸೈಕಲ್ ಓಡುತ್ತಲೇ ಇತ್ತು. ಮಟಮಟ ಮಧ್ಯಾಹ್ನ ಚಿಟ್ಟಿ ಸೈಕಲ್ ಹತ್ತಿದಳು. ಭಾರತಿ, ಸರೋಜಾ ಸೈಕಲ್‌ನ್ನು ಹಿಡಿದು ಅವಳು ಬೀಳದ ಹಾಗೇ ನೋಡಿಕೊಂಡರು. ಚಿಟ್ಟಿಗೆ ಪ್ರತಿಸಲದಂತೆ ತನ್ನ ಕೈಲಿ ಯಾವುದೂ ಇಲ್ಲ ಅನ್ನಿಸಿ ಗಾಬರಿಯಾಯಿತು. ಸ್ವಲ್ಪ ದೂರ ಅಷ್ಟೆ, ಬ್ಯಾಲೆನ್ಸ್ ಸಿಕ್ಕು ತಾನು ಸ್ವತಂತ್ರವಾಗಿ ಸೈಕಲ್ ಓಡಿಸಬಲ್ಲೆ ಎಂದುಕೊಂಡಳು. ಕೊಕ್ಕೋಗೆ ಅಂತ ಹಾಕಿದ್ದ ಎರಡು ಕಂಬಳ ಮಧ್ಯೆ ಸೈಕಲ್ಲ್‌ನ್ನು ನುಸುಳಿಸಿ ಹೊಡೆಯತೊಡಗಿದಳು. ಅವಳು ಸೈಕಲ್ ಹೊಡೆಯುವ ವೈಖರಿಯನ್ನು ನೋಡಿ ಅಚ್ಚರಿಪಡುವಾಗಲೇ, ಚಿಟ್ಟಿಯ ಸೈಕಲ್ ತುಳಿಯುವ ವೇಗ ಜಾಸ್ತಿಯಾಗಿ ಭಾರತಿ, ಸರೋಜಾರ ಕೈತಪ್ಪಿ ಹೋಯಿತು. ನಿಜಕ್ಕೂ ಅದೊಂದು ಅದ್ಭುತ ಅನುಭವ, ಓಡುತ್ತಾ ಹೋದರೂ ತಡೆವ ಏದುಸಿರಿನೊಂದಿಗೆ ಅಷ್ಟು ವೇಗವಾಗಿ ಸಾಗುವುದು ಸಾಧ್ಯವಿಲ್ಲ. ತನ್ನ ಎರಡೂ ಬದಿಗೆ ರೆಕ್ಕೆ ಮೂಡಿ ಸುಯ್ಯ್ ಅಂತ ಸಾಗ್ತಿದೀನಿ ಅಂತ ಅವಳಿಗೆ ಅನ್ನಿಸಿದ್ದೇ ತಡ ಉತ್ಸಾಹ ಇನ್ನೂ ಜಾಸ್ತಿಯಾಯಿತು.

‘ಬೇಡ ಕಣೆ’॒ ಎಂದು ಕೂಗುತ್ತಿದ್ದ ಭಾರತಿ, ಸರೋಜಾರ ಧ್ವನಿ ಅವಳ ಕಿವಿಯನ್ನು ಮುಟ್ಟಲೇ ಇಲ್ಲ. ಅದೆಲ್ಲಿತ್ತೋ ಏನೋ ಟಾಮಿ ಓಡಿ ಬಂತು. ತನ್ನ ಒಡತಿಯನ್ನು ಹೀಗೆ ಸೈಕಲ್ ಹಾರಿಸಿಕೊಂಡು ಹೋಗುವುದನ್ನು ನೋಡಿಕೊಂಡೂ ಅದು ಹೇಗಿರಲಿಕ್ಕೆ ಸಾಧ್ಯ? ಸೈಕಲ್‌ಗೆ ಒಂದು ಗತಿಯನ್ನು ಕಾಣಿಸಬೇಕಲ್ಲವಾ? ! ತನ್ನ ದೇಹವನ್ನು ಸ್ವಲ್ವವೇ ಬಾಗಿಸಿ ದಷ್ಟಪುಷ್ಟವಾಗಿದ್ದ ತನ್ನ ಕಾಲುಗಳನ್ನು ಮತ್ತಷ್ಟು ದೃಢವಾಗಿಸಿ ಸೈಕಲ್‌ಗಿಂತ ವೇಗವಾಗಿ ಓಡುತ್ತಾ ಚಿಟ್ಟಿಯ ಎದುರಿಗೆ ನಿಂತಿತು.

ಇದ್ಯಾವುದನ್ನೂ ನಿರೀಕ್ಷಿಸದ ಚಿಟ್ಟಿ ಅವಕ್ಕಾಗಿ ‘ಏಯ್ ಟಾಮಿ ಪಕ್ಕಕ್ಕೆ ಹೋಗೋ’ ಎಂದು ಕೂಗಿದಳು. ಟಾಮಿಗೆ ಈಗ ತುಂಬಾ ಸ್ಪಷ್ಟವಾಗಿದ್ದು ಚಿಟ್ಟಿ ಯಾವುದೋ ಅಪಾಯದಲ್ಲಿದ್ದಾಳೆ. ಅವಳನ್ನು ಹೊತ್ತ ಸೈಕಲ್ ಎಂಬ ರಾಕ್ಷಸ ನಿಷ್ಕರುಣೆಯಿಂದ ಅವಳನ್ನು ಎತ್ತೊಯ್ಯುತ್ತಿದ್ದಾನೆ ಎನ್ನಿಸಿ ಅದು ಮತ್ತಷ್ಟು ಬೊಗಳಲಿಕ್ಕೆ ಶುರುಮಾಡಿತು ಹಾಗೇ ಸೈಕಲ್ ಎನ್ನುವ ರಾಕ್ಷಸನ ಮೇಲೆ ಹಾರಿ ಹಾರಿ ಬೀಳತೊಡಗಿತು. ಇನ್ನು ಬೇರೆ ದಾರಿಯಿಲ್ಲ, ಒಂದು ಹದಕ್ಕೆ ತಂದುಕೊಂಡು ತನ್ನ ಕೈವಶ ಮಾಡಿಕೊಳ್ಳ ಹೊರಟಿದ್ದ ಸೈಕಲ್‌ನ್ನು ಟಾಮಿ ಹೀಗೆ ಅಡ್ದಗಟ್ಟಿದ್ದೆ ಅಲ್ಲದೆ, ತನ್ನ ಹರಿತ ಹಲ್ಲುಗಳಿಂದ ಸೀಳುಬಿಡುತ್ತೇನೆ ಎಂದು ಎರಗಿ ಬಂದಿದ್ದರಿಂದ ದಿಕ್ಕು ತಪ್ಪಿ ನೆಲಕ್ಕೆ ಒರಗಿದಳು ಚಿಟ್ಟಿ. ಕಟ್ಟಿದ್ದ ಕಚ್ಚೆ ಬಿಚ್ಚಿಹೋಗಿ ತೊಡೆಯವರೆಗೂ ಅವಳ ಲಂಗ ಹರಿದುಬಿಟ್ಟಿತ್ತು. ಇಷ್ಟೆಲ್ಲಾ ನಡೆಯುವಾಗ ಜಮ್ಮುನೇರಳೆ ಮರಕ್ಕೆ ಹತ್ತಿದ್ದ ಐದಿಡ್ಲಿ ನಾಗ ಅದನ್ನು ನೋಡಿಬಿಟ್ಟಿದ್ದ. ಸೈಕಲ್ ಸಂದಿಯಲ್ಲಿ ಸಿಕ್ಕಿಕೊಂಡಿದ್ದ ಕಾಲನ್ನು ತೆಗೆಯಲಿಕ್ಕಾಗದೆ ಒದ್ದಾಡುತ್ತಿದ್ದ ಚಿಟ್ಟಿಯನ್ನು ನೋಡಿ ತನ್ನ ತಪ್ಪಿನ ಅರಿವಾಯಿತೋ ಅಥವಾ ಸೈಕಲ್ ಎನ್ನುವ ರಾಕ್ಷಸನನ್ನು ಕೆಡವಿದ್ದಕ್ಕೆ ಹೆಮ್ಮೆಯಿಂದಲೋ ಟಾಮಿ ಕುಯ್ ಉಯ್ ಎನ್ನುತ್ತಾ ಹತ್ತಿರಕ್ಕೆ ಬಂದು ಸೈಕಲ್‌ನ್ನು ಮೂಸಿ ನೋಡಿತು. ಅವಮಾನದಿಂದ ಕುಗ್ಗಿಹೋದ ಚಿಟ್ಟಿ ‘ಏಯ್ ಹೋಗಾಚೆ ದರಿದ್ರದ್ದೇ’ ಎಂದು ಬೈದು ಪಕ್ಕದಲ್ಲಿದ್ದ ಕಲ್ಲನ್ನು ಒಗೆದಳು. ಚಿಟ್ಟಿ ತನ್ನನ್ನು ಯಾಕೆ ಬೈತಾಳೆ ಅಂತ ತಿಳಿಯದ ಟಾಮಿ ಹೋದ ಹಾಗೇ ಮಾಡಿ ಮತ್ತೆ ಹತ್ತಿರಕ್ಕೆ ಬರತೊಡಗಿತು.

ಟಾಮಿಯ ಈ ವಿಚಿತ್ರ ಚೇಷ್ಟೆಗೆ ಬೇಸತ್ತ ಚಿಟ್ಟಿ ಇದನ್ನ ಲೆಕ್ಕಿಸಬಾರದು ಎಂದು ನಿಧಾನಕ್ಕೆ ಎದ್ದು ನಿಲ್ಲಲು ಯತ್ನಿಸಿದಳು. ಆದರೆ ಕಾಲಲ್ಲಿ ಬ್ರಹ್ಮಾಂಡದಂಥಾ ನೋವು. ಕಾಲನ್ನು ನೋಡಿಕೊಳ್ಳುತ್ತಾಳೆ, ಎಣ್ಣೆಗೆ ಹಾಕಿದ ಪೂರಿಯ ಹಾಗೆ ಊದಿಬಿಟ್ಟಿತ್ತು. ಏನೋ ಮಾಡಲು ಹೋಗಿ ಏನೋ ಆಗಿತ್ತು. ಇಂಥವುಗಳನ್ನು ಯಾವತ್ತೂ ಕ್ಷಮಿಸದ ಅಮ್ಮ-ಅಪ್ಪ ಥಟ್ಟನೆ ನೆನಪಾಗಿ ಕಂಗಾಲಾದಳು. ಎಲ್ಲಕ್ಕಿಂತ ಅವಳಿಗೆ ಬೇಸರವಾಗಿದ್ದು ಅವಳ ಗುಲಾಬಿ ಬಣ್ಣದ ಚೀಟಿ ಲಂಗ ಚಿಂದಿ ಚಿಂದಿಯಾಗಿದ್ದು. ‘ಬಿಡೇ ಸೈಕಲ್‌ನಿಂದ ಬಿದ್ದೆ ಅಂತ ಹೇಳದಿದ್ದರೆ ಆಯಿತು’ ಎನ್ನುವ ಭಾರತಿ, ಸರೋಜಾರ ಮಾತನ್ನು ನಂಬಿ, ‘ಇನ್ನೇನನ್ನು ಹೇಳುವುದು?’ ಎಂದು ಯೋಚಿಸುತ್ತಾ ಮನೆಗೆ ಬಂದ ಚಿಟ್ಟಿಗೆ ಬಾಗಿಲಲ್ಲಿ ಅಮ್ಮನ ಉರಿಮುಖ ಕಾಣಿಸಿತು. ‘ಸೈಕಲ್ ಓಡುಸ್ತೀಯೇನೆ ಗಂಡುಬೀರಿ. . .’ ಎಂದು ಬೈದಳು. ಅಮ್ಮನಿಗೆ ವಿಷಯ ಮುಟ್ಟಿಸಿ ಅಲ್ಲೇ ನಿಂತಿದ್ದ ನಾಗ ‘ಹಿ ಹಿ’ ಎಂದು ಹಲ್ಲುಕಿರಿದ. ಚಿಟ್ಟಿ ಮಾತಾಡದೆ ಒಳಗೆ ಸಾಗಿದಳು. ಮಾರನೆಯ ದಿನ ಅಪ್ಪನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ಲಾಸ್ಟರ್ ಮಾಡಿಸಿಕೊಂಡು ಬಂದ. ಕಾಲಲ್ಲಿ ಗುಂಡನ್ನು ಕಟ್ಟಿಕೊಂಡ ಅನುಭವದೊಂದಿಗೆ ಚಿಟ್ಟಿ ಕಾಲು ಎಳೆದು ಹಾಕುತ್ತಾ ಓಡಾಡತೊಡಗಿದಳು. ‘ಇನ್ನು ನಾಕುವಾರ ಅಲ್ಲಾಡುವ ಹಾಗಿಲ್ಲ. ಇದೇ ಕಾಲನ್ನು ಇಟ್ಟುಕೊಂಡು ಮರ ಹತ್ತಬೇಡ’ ಅಪ್ಪ ತಮಾಷೆ ಮಾಡಿದ. ಚಿಟ್ಟಿಗೆ ಯಾಕೋ ಅಪ್ಪನ ಸಾಮೀಪ್ಯ ಇಷ್ಟವಾಗತೊಡಗಿತ್ತು. ಹಿಂದೆಯೇ ಅಪ್ಪನ ಇನ್ನೊಂದು ಸಂಬಂಧ ನೆನಪಾಯಿತಾದರೂ ‘ಇರಲಿ ಬಿಡು’ ಅನ್ನಿಸಿತು. ‘ಛೇ ಇವತ್ಯಾಕೆ ನನಗೆ ಹೀಗನ್ನಿಸುತ್ತಿದೆ? ಚಿಟ್ಟಿಗೆ ಅಚ್ಚರಿಯಾದರೂ ಅನ್ನಿಸಿದ್ದಂತೂ ನಿಜ.

‘ಅಪ್ಪ ನಿನ್ನನ್ನು ಯಾವತ್ತೂ ಇದರ ಬಗ್ಗೆ ಕೇಳೊಲ್ಲ ಕಣೋ’ ಮನಸ್ಸಿನಲ್ಲೇ ಅಂದುಕೊಂಡಳು. ಅಮ್ಮನ ಮುಖ ಕಣ್ಣ ಮುಂದೆ ತೇಲಿ ಬಂದರೂ ಯಾರೂ ಮಾಡದ ತಪ್ಪನ್ನ ಅಪ್ಪ ಮಾಡಿಲ್ಲ ಬಿಡು ಎಂದುಕೊಂಡು ಸುಮ್ಮನಾದಳು. ಇನ್ನು ಒಂದು ತಿಂಗಳು ತನ್ನ ಕಾಲು ಸರಿಯಾಗುತ್ತೆ ಎನ್ನುವ ಸಮಾಧಾನದಲ್ಲಿ ಅದೇ ಕಾಲನ್ನು ಎಳೆದುಕೊಂಡು ಭಾರತಿಯ ಮನೆಗೆ ಹೊರಟ ಚಿಟ್ಟಿಗೆ ನಾಗ ಹೊಸದಾಗಿ ಹುಟ್ಟಿದ ಎಮ್ಮೆಯ ಕರುವೊಂದನ್ನು ಹಿಡಿದು ಎದುರಾಗಿದ್ದ. ಅವನನ್ನು ನೋಡಿ ಮುಖವನ್ನು ಸೊಟ್ಟಗೆ ತಿರುಗಿಸಿದಳು ಚಿಟ್ಟಿ. ಅಷ್ಟರಲ್ಲಿ ಅಲ್ಲಿ ಬಂದ ಯಾರೋ ‘ಏನೋ ನಾಗ ಈ ಎಳೆ ಕರುವನ್ನು ಹಿಡಿದು ಬಿಸಿಲಲ್ಲಿ ಹೊರಟಿದ್ದೀಯ’ ಎಂದರು. ‘ಒಂದೇ ಸಮನೆ ಉಚ್ಚಿಕೊಳ್ತಿದೆ. ಅದಕ್ಕೆ ಬಿಸಿಲಿಗೆ ಕಟ್ಟೋಣ ಅಂತ ಬಂದೆ’ ಎಂದ ನಾಗ. ಬಂದವರು ‘ಅಲ್ವೋ ಪೆದ್ದ ಯಾರಾದ್ರೂ ಉಚ್ಚಿಕೊಳ್ಳುತ್ತೆ ಅಂತ ಉರಿಬಿಸಿಲಿಗೆ ಕಟ್ಟಿಹಾಕ್ತಾರಾ? ಎಂಥಾ ದಡ್ಡನಯ್ಯಾ’ ಎಂದು ಬೈದರು. ‘ನನ್ನ ದಡ್ಡತನ ನೋಡುವಿರಂತೆ ಬಿಡಿ ಈ ಬಿಸಿಲಿಗೆ ಎಂಥಾ ಆನೆ ಲದ್ದೀನೆ ಒಣಗಿ ಗರಗಾಗುತ್ತೆ. ಇನ್ನ ಇದ್ರ ಹೊಟ್ಟೇಲಿರೋದು ಗಟ್ಟಿಯಾಗಲ್ವಾ’ ಎಂದ ಅವನ ಹುಂಬ ಮಾತಿಗೆ ನಗುತ್ತಾ ಬಂದವರು ಹೊರಟುಹೋದರು. ಚಿಟ್ಟಿ ಈ ಮಾತುಕಥೆ ನಡೆಯುವಾಗ ತನ್ನ ಕಾಲನ್ನು ಎಳೆದುಕೊಂಡು ಹೊರಟಿದ್ದಳು. ಬಂದವರು ಹೊರಟ ತಕ್ಷಣ ಮತ್ತೆ ಚಿಟ್ಟಿಗೆ ನಾಗ ಅಡ್ಡಗಟ್ಟಿದ. ಅವಳ ಎದುರೂಗೆ ನಿಂತು ‘ಏಯ್ ಚಿಟ್ಟಿ ನಾನು ನಿನ್ನ ಬೆತ್ತಲೆ ತೊಡೆಗಳನ್ನು ನೋಡಿದೆ’ ಎಂದು ಕಿಸಕ್ಕನೆ ನಕ್ಕ.

ಚಿಟ್ಟಿಗೆ ಮೊದಲು ಅವಮಾನವಾದರೂ ಕೋಪ ನೆತ್ತಿಗೆ ಹತ್ತಿ ಎಲ್ಲವೂ ಮರೆತುಹೋಗಿ ‘ಯಾಕೆ ಯಾರಿಗೂ ಇಲ್ವಾ ತೊಡೆ ಹೋಗೋ . . .ನಿಮ್ಮಮ್ಮ . . . ಅಕ್ಕ ಎಲ್ಲರಿಗೂ ಇದೆ ಬೇಕಿದ್ರೆ ನೋಡು ಹೋಗು’ ಎಂದುಬಿಟ್ಟಳು. ಬೇರೆ ಯಾರಾದ್ರೂ ಆಗಿದ್ರೆ ಏನು ಮಾಡುತ್ತಿದ್ದರೋ ತಿಳಿಯದು. ಪುಕ್ಕಲ ನಾಗ ಮಾತ್ರ ತಿರುಗಿಸಿ ಏನು ಮಾತಾಡುವುದೆಂದು ತಿಳಿಯದೆ ಬೆಬ್ಬೆಬ್ಬೆ ಅಂತ ನಿಂತ. ಚಿಟ್ಟಿಗೆ ಖುಷಿಯಾಗಿತ್ತು. ತಾನು ಎದುರಿಸದೆ ಬಿಟ್ಟಿದ್ದರೆ ಅವನು ಮತ್ತೆ ಮತ್ತೆ ನಾನು ಸಿಕ್ಕಾಗಲೆಲ್ಲಾ ಇದನ್ನೇ ಹೇಳುತ್ತಿದ್ದ. ಜಗತ್ತೇ ಹೀಗೆ. ನಾನು ಸುಮ್ಮನಿದ್ದರೆ ನನ್ನನ್ನೇ ಕಟ್ಟಿ ಕೆಡುವುತ್ತದೆ. ನಾನೂ ಎದ್ದು ನಿಲ್ಲಬೇಕು ಎಂದುಕೊಳ್ಳುವಾಗಲೇ ಕಾಲ ಬಳಿ ಚಿಳ್ಳೆಂದು ನೋವು ಕಾಣಿಸಿಕೊಂಡು ‘ಅಯ್ಯೋ ನನ್ನ ಕಾಲಗತಿ ಹೀಗಾಯಿತೇ?’ ಎಂದು ನೊಂದುಕೊಂಡಳು. ಅಪ್ಪ ಒಳ್ಳೆಯವನೋ ಕೆಟ್ಟವನೋ ಗೊತ್ತಿಲ್ಲ. ಸ್ವಲ್ಪ ದಿನ ಕಳೆಯುವುದರೊಳಗೆ ಚಿಟ್ಟಿಗೆ ಈ ಸಲ ಅವಳ ಹುಟ್ಟಿದ ಹಬ್ಬಕ್ಕೆ ಸೈಕಲ್- ಅದೂ ಲೇಡೀಸ್ ಸೈಕಲ್-ಕೊಡಿಸುವುದಾಗಿ ಹೇಳಿದ. ಹಾಗೇ ಗುಲಾಬಿ ಬಣ್ಣದ ಚೀಟಿ ಲಂಗವನ್ನೂ ಕೂಡಾ. ಚಿಟ್ಟಿಗೆ ಸಂತೋಷವಾಯಿತಾದರೂ ಅಷ್ಟು ಹಣವನ್ನು ಅಪ್ಪ ಎಲ್ಲಿಂದ ತರ್ತಾನೆ? ಎಂಬುದು ತಿಳಿಯದೆ ಕಂಗಾಲಾದಳು. ಇಷ್ಟಕ್ಕೂ ಅಪ್ಪನಿಗೆ ಸೈಕಲ್ ಕೊಡಿಸಬೇಕು ಅಂತ ಅನ್ನಿಸಿದ್ದಾದರೂ ಯಾಕೆ? ಎಲ್ಲವೂ ಪ್ರಶ್ನೆಗಳಾಗೇ ಉಳಿದರೂ; ಸೈಕಲ್ ಸಿಗುವ ಕ್ಷಣಗಳಿಗಾಗಿ ಕಾದು ಕುಳಿತಳು ಚಿಟ್ಟಿ.

(ಮುಂದುವರಿಯುವುದು…)

‍ಲೇಖಕರು avadhi

March 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: