ಪರೀಕ್ಷೆ ಜ್ವರ ಮತ್ತು ಜಾತ್ರೆಗಳು – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ
ಪರೀಕ್ಷಾ ಸಮಯ ಎಂದರೆ ಅದು ನಿಜಕ್ಕೂ ವಿದ್ಯಾರ್ಥಿಗಳು ಜಾಗರೂಕರಾಗಿರ ಬೇಕಾದ ಸಮಯ. ತಮ್ಮ ಆರೋಗ್ಯವನ್ನು ತಾವು ಕಾಪಾಡಿಕೊಳ್ಳಲೇ ಬೇಕಾದಂತಹ ಸಮಯ.   ಪರೀಕ್ಷಾ ಭಯ ಮಕ್ಕಳನ್ನು ಕಾಡದೇ ಬಿಟ್ಟದ್ದೆ ಇಲ್ಲ. ಪರೀಕ್ಷಾ ಭಯದಿಂದ ಮಕ್ಕಳು ಇಲ್ಲ ಸಲ್ಲದ ನೆಪ ಹೇಳಿ ಅನಾರೋಗ್ಯವನ್ನು ಸೃಷ್ಟಿಸಿಕೊಂಡಿದ್ದೂ ಇರುವಂತೆ, ಪರೀಕ್ಷೆ ಎನ್ನುವ ಮಾನಸಿಕ ಭಯಕ್ಕೆ ಮಣೆ ಹಾಕುವಂತೆ ದೇಹವೂ ಸಹಕರಿಸಿ ಅನಾರೋಗ್ಯದ ಸಿಂಟಮ್ಸ ತೋರಿಸಿದ ಉದಾರಣೆಗಳೂ ಇವೆ. ಆದರೆ ಪ್ರಕೃತಿ ಕೂಡ ಇದೇ ಸಮಯದಲ್ಲಿ ಮಕ್ಕಳ ಅನಾರೋಗ್ಯವನ್ನು ಹೆಚ್ಚಿಸುತ್ತದೆ. ಚಳಿ ಮುಗಿದು ಬೇಸಿಗೆ ಪ್ರಾರಂಭವಾಗುವ ಈ ದಿನಗಳು ನೈಸರ್ಗಿಕವಾಗಿ ವೈರಸ್‌ಗಳು ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಚಿಕನ್ ಫಾಕ್ಸ್, ಮಂಗನ ಬಾವು, ಮದ್ರಾಸ್ ಐ ಮುಂತಾದ ರೋಗ ತರುವ ವೈರಸ್‌ಗಳಿಗೆ ಶೀಘ್ರವಾಗಿ ಬೆಳವಣಿಗೆ ಹೊಂದಲು ಇದು ಸಕಾಲವಾಗಿರುವುದರಿಂದ ಆ ವೈರಸ್‌ಗಳು ಚಿಕ್ಕ ಮಕ್ಕಳನ್ನು ಅಡರಿಕೊಳ್ಳುತ್ತದೆ ಹಾಗು ರೋಗಗಳನ್ನು ತರುತ್ತವೆ. ಅದರಲ್ಲೂ ಈ ಸಮಯ ಪರೀಕ್ಷಾ ಸಮಯವಾದುದರಿಂದ ಈ ರೋಗಗಳು ಉಳಿದ ಸಮಯದಲ್ಲಿ ಬಾಧಿಸಿದ್ದಕ್ಕಿಂತ ಹೆಚ್ಚಿನ ಉಪಟಳ ನೀಡಿದಂತೆ ಭಾಸವಾಗುತ್ತದೆ. ಅದರಲ್ಲೂ ಈ ರೋಗಗಳು ಸಾಂಕ್ರಾಮಿಕ ರೋಗವಾದ್ದರಿಂದ ಶಾಲೆಗಳಲ್ಲಿ ಒಂದು ಮಗುವಿಗೆ ಬರುವುದೇ ತಡ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಎಲ್ಲಾ ಮಕ್ಕಳಿಗೆ ಹರಡುತ್ತದೆ ಹಾಗೂ ನೋವು ನರಳಿಕೆಯನ್ನು ಕೊಡುಗೆಯಾಗಿ ನೀಡುತ್ತದೆ.
ನಂತರದ ಪಾತ್ರ ಪರೀಕ್ಷಾ ಸಮಯದಲ್ಲಿ ನಡೆಯುವ ಊರೂರಿನ ಜಾತ್ರೆಗಳದ್ದು. ಡಿಸೆಂಬರ್ ಮುಗಿಯಿತೆಂದರೆ ಸಾಕು. ಶಾಲೆಗಳಲ್ಲಿ ಪೋರ್ಷನ್ ಮುಗಿದಿರುತ್ತದೆ ಹಾಗೇ ಊರೂರುಗಳಲ್ಲಿ ಜಾತ್ರೆ ಪ್ರಾರಂಭವಾಗುತ್ತದೆ.
ಕೆಲವು ಮಕ್ಕಳಿಗಂತೂ ಜಾತ್ರೆ ಎಲ್ಲಾ ಮುಗಿದ ಮೆಲೆ ಪರೀಕ್ಷೆಯ ನೆಪಾಗುತ್ತದೆ. ಅಷ್ಟು ದಿನಗಳವರೆಗೆ ನಿರಾಳವಾಗಿದ್ದ ಪಾಲಕರಿಗೂ ಆಗ ಮಕ್ಕಳು ನಂಬರ್ ಬರಲೇ ಬೇಕು ಎನ್ನುವ ಒತ್ತಡ ಪ್ರಾರಂಭವಾಗುತ್ತದೆ. ಅಲ್ಲಿಂದ ಮುಂದೆ ಮಕ್ಕಳ ಮೇಲೆ ಓದು ಎನ್ನುವ ತೀವೃ ಒತ್ತಡ. ಒತ್ತಡಕ್ಕೆ ಸಿಲುಕಿದ ಮಕ್ಕಳ ಪಾಡು ಆಗ ಹೇಳತೀರದು. ಅದು ಪುನಃ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಅದರಲ್ಲೂ ಇಡಿ ವರ್ಷದ ಓದನ್ನು ಕೇವಲ ಮೂರು ತಾಸಿನಲ್ಲಿ ಅಳೆಯುವ ನಮ್ಮ ಬೋರ್ಡ ಪರೀಕ್ಷೆಗಳ  ಈ ಶಿಕ್ಷಣ ಪದ್ದತಿಯಲ್ಲಿ ಪರೀಕ್ಷಾ ಸಮಯದ ಆರೋಗ್ಯ ಹಾಗು ಸಮಯದ ಹೊಂದಾಣಿಕೆ ಹಾಗು ನಿಭಾಯಿಸುವಿಕೆ ಅತೀ ಮುಖ್ಯ.
ನಾಲ್ಕಾರು ದಿನಗಳ ಹಿಂದೆ ಶಾಲೆಯಿಂದ ಬಂದ ಮಗ ಜ್ವರ ಎಂದು ಮಲಗಿ ಬಿಟ್ಟಿದ್ದ. ತನ್ನ ಹಣೆಗೆ ತಾನೇ ತಣ್ಣೀರು ಪಟ್ಟಿಯನ್ನಿಟ್ಟುಕೊಂಡು ಮಲಗಿದ್ದವನನ್ನು ಕಂಡು ತಮಾಷೆ ಮಾಡುತ್ತ ಹಣೆ ಮುಟ್ಟಿದರೆ ನಿಜಕ್ಕೂ ಮೈ ಸುಡುತ್ತಿತ್ತು. ಬೇಗನೇ ಒಂದಿಷ್ಟು ಹೊಟ್ಟೆಗೆ ಹಾಕಿ ಒಂದು ಟ್ಯಾಬ್ಲೆಟ ಹಾಕಿ ಮಲಗಿಸಿದೆ. ರಾತ್ರಿ ಊಟಕ್ಕೆ ಎಬ್ಬಿಸಿದರೆ ಕಿವಿ, ದವಡೆ ನೋವು ಎಂದು ಮುಲುಗಲು ಪ್ರಾರಂಭಿಸಿದ್ದ. ‘ಕೆಪ್ಪಟು’ ನಾನು ಅಂಜಿಕೆಯಿಂದ ಹೇಳಿದ್ದೆ. ಮಾರನೇ ದಿನ ಊದಿಕೊಂಡಿದ್ದ ದವಡೆಯೊಂದಿಗೆ ವೈದ್ಯರ ಬಳಿ ಹೋದರೆ ನಾನು ಹೇಳಿದ್ದನ್ನೇ ದೃಢಪಡಿಸಿದ್ದರು. ಮಂಗನ ಬಾವು. ಮೈಲ್ಡ್ ಆಗಿದೆ. ಏನೂ ಯೋಚನೆ ಬೇಡ ಎಂದು ಔಷಧ ಕೊಟ್ಟು ಕಳಿಸಿದ್ದರು. ಹಿಂದಿನ ವರ್ಷವೂ ಇದೇ ಸಮಯಕ್ಕೆ ಚಿಕನ್ ಫಾಕ್ಸನಿಂದ ನರಳಿದ್ದ ಮಗ ಮತ್ತೆ ಈ ವರ್ಷ ಕೂಡ ಮತ್ತೆ ನೋವಿನಿಂದ ನರಳುವುದನ್ನು ಕಂಡಾಗ ನಿಜಕ್ಕೂ ಬೇಸರವಾಗಿತ್ತು. ಪರೀಕ್ಷೆ ಇನ್ನು ಮೂರ್‍ನಾಲ್ಕು ದಿನ ಇದೆ ಎನ್ನುವಾಗಲೇ ಹೀಗೆ ಅನಾರೋಗ್ಯ ಕಾಡುವುದಾದರೂ ಯಾಕೆ ಎಂದು ಚಿಂತೆಗಿಟ್ಟುಕೊಂಡಿತ್ತು. ‘ಅವನೋ ಮೊದಲನೇ ತರಗತಿ, ಪರವಾಗಿಲ್ಲ. ಆದರೆ ಆತನ ಅಣ್ಣನಿಗೆ ಬಂದರೆ…?’ ಎನ್ನುವ ಆತಂಕ.
ಹಿಂದಿನ ವರ್ಷ ಕೂಡ ಇದೇ ಸಮಯಕ್ಕೆ ಆತನಿಗೆ ಚಿಕನ್ ಫಾಕ್ಸ್ ಆಗಿತ್ತು. ಮಹಾ ಯುನಿವರ್ಸಿಟಿ ಎಕ್ಸಾಮ್ ಎಂಬಂತೆ ಅವನ ತರಗತಿಯ ಪರೀಕ್ಷೆಗಳೆಲ್ಲ ಮುಗಿದ ಮೇಲೆ ಮತ್ತೆ ಪರೀಕ್ಷೆ ಬರೆಯಿಸಿ ‘ಪಾಸು ಕಣಪಾ’ ಎಂದಾಗಿತ್ತು. ಈಗ ಮತ್ತೆ ಅನಾರೋಗ್ಯ ಕಾಡಿದ್ದರಿಂದ ಆತ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದ. ಅದೂ ಅಲ್ಲದೇ ಒಂದು ವರ್ಷ ಮುಂಚಿತವಾಗಿಯೇ ಶಾಲೆಗೆ ಸೇರಿಸಿದ್ದರಿಂದ ಕೆಲವೊಮ್ಮೆ ‘ಮುಂದಿನ ವರ್ಷ ಕೂಡ ಒಂದನೇ ತರಗತಿಗೇ ಸೇರಿಸಿ ಬಿಡೋಣ’ ಎನ್ನುವ ನಮ್ಮ ಚರ್ಚೆಯನ್ನು ಕೇಳಿದ್ದ ಆತನ ಆತಂಕ ಸಹಜವಾಗಿಯೇ ತಾರಕಕ್ಕೇರಿತ್ತು. ಒಂದು ಕೆನ್ನೆ ಎಂದುಕೊಂಡಿದ್ದು ಕ್ರಮೇಣ ಇನ್ನೊಂದು ಕೆನ್ನೆಯಲ್ಲೂ ಕಾಣಿಸಿಕೊಂಡು ಮತ್ತೆ ನಾಲ್ಕಾರು ದಿನಗಳ ರಜೆ ಮಾಡಬೇಕಾದ ಅನಿವಾರ್ಯತೆ  ಸೃಷ್ಟಿಯಾಗಿತ್ತು.; ‘ಏನೆ ಆಗಲಿ ನಾನು ಎಕ್ಸಾಂಗೆ ಹೋಗೇ ಹೋಗ್ತೀನಿ’ ಆತ ಘೋಷಣೆ ಮಾಡಿಬಿಟ್ಟಿದ್ದ.
ಹೌದು, ಪರೀಕ್ಷಾ ಸಮಯ ಎಂದರೆ ಅದು ನಿಜಕ್ಕೂ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕಾದ ಸಮಯ. ತಮ್ಮ ಆರೋಗ್ಯವನ್ನು ತಾವು ಕಾಪಾಡಿಕೊಳ್ಳಲೇ ಬೇಕಾದಂತಹ ಸಮಯ. ಪರೀಕ್ಷೆ ಹತ್ತಿರ ಬಂತೆಂದರೆ ಎಸ್. ಎಸ್.ಎಲ್.ಸಿ. ವಿದ್ಯಾರ್ಥಿಗಳ ಪಾಲಕರನ್ನು  ಕರೆದು ಮಕ್ಕಳಿಗೆ ಹೆಚ್ಚಿನ ಪೋಷಕಾಂಶವನ್ನು ನೀಡುವಂತೆ, ಹಣ್ಣು-ಹಂಪಲು, ತರಕಾರಿ, ಸೊಪ್ಪುಗಳನ್ನು ಹೆಚ್ಚಿಗೆ ಊಟದಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ತಿಳಿಸುವುದು ಒಂದು ಸಂಪ್ರದಾಯದಂತೆ ಹೈಸ್ಕೂಲ್‌ಗಳಲ್ಲಿ ನಡೆಸಿಕೊಂಡು ಬರಲಾಗುತ್ತದೆ. ಅಂದರೆ ಪರೀಕ್ಷೆಯಲ್ಲಿ ನೆನಪಿಟ್ಟುಕೊಳ್ಳಲು ಬೇಕಾದ ಪೋಷಕಾಂಶಗಳು, ಆ ಸಮಯದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳಲು ಬೇಕಾದ ನ್ಯೂಟ್ರೀಶಿಯನ್‌ಗಳನ್ನು ಸೇವಿಸುವುದರಿಂದ ಹೆಚ್ಚಿನ ಅಂಕ ಪಡೆಯಬಹುದಾದ ಸಾಧ್ಯತೆ ಇರುತ್ತದೆ. ಇಷ್ಟಾಗಿ ಕೂಡ ಮನೆಯ ಬಡತನದ ಹಿನ್ನಲೆಯಿದ್ದಿರಬಹುದು ಅಥವಾ ತಿಳುವಳಿಕೆಯ ಕೊರತೆಯಿಂದಿರಬಹುದು ಪರೀಕ್ಷಾ ಸಮಯದ ಅನಾರೋಗ್ಯ ಕಾಡುತ್ತಲೇ ಇರುವುದು ತಪ್ಪುವುದಿಲ್ಲ. ಇವೆಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳ ಮನಸ್ಥಿತಿ ಕೂಡ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ.
ಆಕೆ ರಂಜಿತಾ. ಪ್ರತಿಭಾವಂತ ವಿದ್ಯಾರ್ಥಿ.  ಒಂದನೇ ತರಗತಿಯಿಂದ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಯಾವತ್ತೂ ಬಿಟ್ಟುಕೊಟ್ಟಿದ್ದೇ ಇಲ್ಲ. ಆದರೂ ಆಕೆಗೆ ಆತಂಕ ತಪ್ಪಿದ್ದಲ್ಲ. ಈಗ ಹತ್ತನೇ ತರಗತಿಯಲ್ಲಿರುವ ಆಕೆಗೆ ತಾನೆಲ್ಲಿ ಫೇಲ್ ಆಗಿಬಿಡುತ್ತೇನೋ ಎನ್ನುವ ಆತಂಕ. ಅಂಕ ಕಡಿಮೆ ಆಗಿ ಬಿಟ್ಟರೆ ಅನ್ನುವ ಭಯ ಹೀಗಾಗಿ ಪರೀಕ್ಷೆ ಹತ್ತಿರ ಬಂತೆಂದರೆ ಆಕೆ ಟೆನ್ಶನ್‌ಗೆ ಒಳಗಾಗುತ್ತಾಳೆ. ಮೆಲ್ಲಗೆ ತಲೆ ನೋವು ಪ್ರಾರಂಭವಾಗುತ್ತದೆ. ಪರೀಕ್ಷೆ ಹತ್ತಿರ ಬಂದಂತೆ ಜ್ವರ ಏರುತ್ತದೆ. ನಂತರ ವಾಂತಿ… ನಿಲ್ಲಿಸಲೇ ಆಗದಷ್ಟು ವಾಕರಿಕೆ. ಆಕೆ ಪೂರ್ತಿ ಸುಸ್ತಾಗುತ್ತಾಳೆ. ಆ ಸುಸ್ತಿನಲ್ಲಿಯೇ ಪರೀಕ್ಷೆ ಬರೆಯುತ್ತಾಳೆ. ಅಚ್ಚರಿಯೆಂದರೆ ಪರಿಕ್ಷೆ ಬರೆಯುವ ಮೂರು ತಾಸು ಆಕೆಗೆ ಜ್ವರವಾಗಲಿ, ವಾಂತಿಯಾಗಲಿ ಇರುವುದಿಲ್ಲ. ಮಗಳಿಗೆ ಆರೋಗ್ಯ ಸರಿ ಇದ್ದಿದ್ದರೆ ಆಕೆ ಪ್ರಥಮ ಸ್ಥಾನ ಗಳಿಸಿಯೇ ಗಳಿಸುತ್ತಿದ್ದಳು ಎಂದು ಪಾಲಕರು ತೃಪ್ತಿ ಪಡುತ್ತಾರೆ. ಆಕೆ ಕೂಡ ನನ್ನ ಆರೋಗ್ಯ ಸರಿ ಇಲ್ಲದಿದ್ದರೂ ಮೂರನೆ ನಂಬರ್ ಬಂದೆ. ಆರೋಗ್ಯ ಸರಿ ಇದ್ದಿದ್ದರೆ ಫಸ್ಟ ಬರುತ್ತಿದ್ದೆ ಅನ್ನುತ್ತಾಳೆ. ಇದು ಚಾಚೂ ತಪ್ಪದೇ ಪ್ರತಿವರ್ಷ ನಡೆದು ಬಂದಿರುವುದರಿಂದ ಪರೀಕ್ಷೆಯ ಬಗ್ಗೆ ಶಿಕ್ಷಕರು ಹೇಳಿದ ತಕ್ಷಣ ನಾಳೆಯಿಂದ ಜ್ವರ ಸ್ಟಾರ್ಟ್ಟ ಆಗುತ್ತಾ? ಎಂದು ಉಳಿದ ಮಕ್ಕಳು ಗೇಲಿ ಮಾಡತೊಡಗುತ್ತಾರೆ.  ಈಗೀಗ ಅವಳ ಜ್ವರ ಎನ್ನುವುದು ಎಲ್ಲರ ತಮಾಷೆಯ ವಿಷಯವಾಗಿದ್ದರೂ ಪರೀಕ್ಷೆಯ ಸಮಯದಲ್ಲಿ ಆಕೆಗೆ ೧೦೨-೧೦೩ ಡಿಗ್ರಿ ಜ್ವರ ಇರುವುದಂತೂ ಸತ್ಯ. ಆಕೆಯ ಮಾನಸಿಕ ಸ್ಥಿತಿ ದೈಹಿಕವಾಗಿಯೂ ಪರಿಣಾಮ ಬೀರುತ್ತಿರುತ್ತದೆ.
ಆತ ಸಂಬೃಮ. ಶಿಕ್ಷಕರು ಯಾವಾಗ ಪರೀಕ್ಷೆ ಎಂದರೋ ಆತನಿಗೆ ಹೊಟ್ಟೆ ನೋವು ಪ್ರಾರಂಭವಾಗುತ್ತದೆ. ಜ್ವರ ಎಂದರೆ ಏರದ ದೇಹದ ತಾಪಕ್ಕೆ ಉತ್ತರ ಕೊಡಬೇಕಲ್ಲ? ಹೀಗಾಗಿ ಮೇಲ್ನೋಟಕ್ಕೆ ಗೊತ್ತಾಗದ, ಬರೀ ಮುಖ ಕಿವುಚಿ ನೋವನ್ನು ತೋರ್ಪಡಿಸುವ ಕಾಯಿಲೆಗಳನ್ನಷ್ಟೇ ಬರಿಸಿಕೊಳ್ಳಲು ಸಾಧ್ಯವಾದ್ದರಿಂದ ಪರೀಕ್ಷೆಯ ಹೆಸರು ಕೇಳಿದರೆ ಸಾಕು ಎಲ್ಲಿಲ್ಲದ ನೋವುಗಳು ಪ್ರಾರಂಭವಾಗಿ ಬಿಡುವ ಚೋದ್ಯ ನೋಡುವುದೇ ತಮಾಷೆ ಎನ್ನಿಸಿ ಬಿಡುತ್ತಿತ್ತು. ಕೆಲವು ಸಲ ಆತನ ಆಟಾಟೋಪಗಳನ್ನು ನಿಜ ಎಂದು ನಂಬಿದ್ದ ಪಾಲಕರು, ನಂತರದ ದಿನಗಳಲ್ಲಿ ಆತ ನೋವು ಎಂದು ಮುಖ ಕಿವುಚಿದಾಗಲೆಲ್ಲ, ಪಾಪ ನನ್ನ ಮಗ. ಡಾಕ್ಟರ್ ಹತ್ರ ಹೋಗಿ ಬರೋಣ. ಒಂದು ಇಂಜೆಕ್ಷನ್ ಕೊಟ್ಟರೆ ನೋವು ಕಡಿಮೆ ಆಗುತ್ತದೆ ಎನ್ನಲು ಪ್ರಾರಂಭಿಸಿದ್ದರು. ಹೀಗಾಗಿ ಆತನ ನೋವಿನ ನಾಟಕ ಬಹುತೇಕ ಮಾಯವಾಗಿತ್ತು.
ಇಂತಹದ್ದು ಹತ್ತು ಹಲವು ಉದಾಹರಣೆಗಳಿವೆ. ಪರೀಕ್ಷಾ ಭಯ ಮಕ್ಕಳನ್ನು ಕಾಡದೇ ಬಿಟ್ಟದ್ದೆ ಇಲ್ಲ. ಪರೀಕ್ಷಾ ಭಯದಿಂದ ಮಕ್ಕಳು ಇಲ್ಲ ಸಲ್ಲದ ನೆಪ ಹೇಳಿ ಅನಾರೋಗ್ಯವನ್ನು ಸೃಷ್ಟಿಸಿಕೊಂಡಿದ್ದೂ ಇರುವಂತೆ, ಪರೀಕ್ಷೆ ಎನ್ನುವ ಮಾನಸಿಕ ಭಯಕ್ಕೆ ಮಣೆ ಹಾಕುವಂತೆ ದೇಹವೂ ಸಹಕರಿಸಿ ಅನಾರೋಗ್ಯದ ಸಿಂಟಮ್ಸ ತೋರಿಸಿದ ಉದಾರಣೆಗಳೂ ಇವೆ. ಆದರೆ ಪ್ರಕೃತಿ ಕೂಡ ಇದೇ ಸಮಯದಲ್ಲಿ ಮಕ್ಕಳ ಅನಾರೋಗ್ಯವನ್ನು ಹೆಚ್ಚಿಸುತ್ತದೆ. ಆಗ ತಾನೆ ಚಳಿ ಮುಗಿದು ಬೇಸಿಗೆ ನಿಧಾನಕ್ಕೆ ಹೆಜ್ಜೆ ಇಡುತ್ತಿರುತ್ತದೆ. ಶಿಶಿರನ ಅತ್ಯಾಚಾರದಿಂದ ಬೋಳಾದಂತಿದ್ದ ಪ್ರಕೃತಿ ನಿಧಾನಕ್ಕೆ ವಸಂತನ ಆಗಮನಕ್ಕೆ ಸಿದ್ದಳಾಗುತ್ತಾಳೆ. ಚಳಿ ಮುಗಿದು ಬೇಸಿಗೆ ಪ್ರಾರಂಭವಾಗುವ ಈ ದಿನಗಳು ನೈಸರ್ಗಿಕವಾಗಿ ವೈರಸ್‌ಗಳು ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಚಿಕನ್ ಫಾಕ್ಸ್, ಮಂಗನ ಬಾವು, ಮದ್ರಾಸ್ ಐ ಮುಂತಾದ ರೋಗ ತರುವ ವೈರಸ್‌ಗಳಿಗೆ ಶೀಘ್ರವಾಗಿ ಬೆಳವಣಿಗೆ ಹೊಂದಲು ಇದು ಸಕಾಲವಾಗಿರುವುದರಿಂದ ಆ ವೈರಸ್‌ಗಳು ಚಿಕ್ಕ ಮಕ್ಕಳನ್ನು ಅಡರಿಕೊಳ್ಳುತ್ತದೆ ಹಾಗು ರೋಗಗಳನ್ನು ತರುತ್ತವೆ. ಅದರಲ್ಲೂ ಈ ಸಮಯ ಪರೀಕ್ಷಾ ಸಮಯವಾದುದರಿಂದ ಈ ರೋಗಗಳು ಉಳಿದ ಸಮಯದಲ್ಲಿ ಬಾಧಿಸಿದ್ದಕ್ಕಿಂತ ಹೆಚ್ಚಿನ ಉಪಟಳ ನೀಡಿದಂತೆ ಭಾಸವಾಗುತ್ತದೆ. ಅದರಲ್ಲೂ ಈ ರೋಗಗಳು ಸಾಂಕ್ರಾಮಿಕ ರೋಗವಾದ್ದರಿಂದ ಶಾಲೆಗಳಲ್ಲಿ ಒಂದು ಮಗುವಿಗೆ ಬರುವುದೇ ತಡ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಎಲ್ಲಾ ಮಕ್ಕಳಿಗೆ ಹರಡುತ್ತದೆ ಹಾಗೂ ನೋವು ನರಳಿಕೆಯನ್ನು ಕೊಡುಗೆಯಾಗಿ ನೀಡುತ್ತದೆ. ಕೆಲವೊಮ್ಮೆ  ರೋಗದಿಂದಾಗಿ ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆಗಳೂ ಸಂಭವಿಸುತ್ತದೆ.
ಮೇಲಿನದ್ದು ಪರೀಕ್ಷಾ ಸಮಯದಲ್ಲಿ ಅನಾರೋಗ್ಯದ ಚಿತ್ರಣವಾದರೆ ಈಗ ಹೇಳ ಹೊರಟಿರುವುದು ಪರೀಕ್ಷೆಯೊಂದಿಗೇ ನಡೆಯುವ ಊರೂರಿನ ಜಾತ್ರೆಗಳು. ಡಿಸೆಂಬರ್ ಮುಗಿಯಿತೆಂದರೆ ಸಾಕು. ಶಾಲೆಗಳಲ್ಲಿ ಪೋರ್ಷನ್ ಮುಗಿದಿರುತ್ತದೆ ಹಾಗೇ ಊರೂರುಗಳಲ್ಲಿ ಜಾತ್ರೆ ಪ್ರಾರಂಭವಾಗುತ್ತದೆ. ನಾನು ಚಿಕ್ಕವಳಿರುವಾಗಿಂದ ಕಾಲೇಜಿಗೆ ಹೋಗುವವರೆಗೆ ಶಿರಸಿ ಜಾತ್ರೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡಿದ್ದೇ ಇಲ್ಲ. ನನ್ನ ಅಪ್ಪನ ಚಿಕ್ಕಪ್ಪ ಊರಿಗೆ ಮೊದಲೇ ಶಿರಸಿ ಜಾತ್ರೆಗೆ ಎಂದು ಬಂದಿಳಿಯುತ್ತಿದ್ದರು. ಇರುವ ನಾಲ್ಕಾರು ದಿನಗಳಲ್ಲಿ ಪ್ರತಿ ದಿನವೂ ನಾವಿರುವ ಅಮ್ಮಿನಳ್ಳಿ ಎನ್ನುವ ಪುಟ್ಟ ಹಳ್ಳಿಯಿಂದ ಶಿರಸಿಗೆ ಹೋಗುತ್ತಿದ್ದರು. ಅದರಲ್ಲಿ ಒಂದು ದಿನ ನನ್ನನ್ನು ಕರೆದುಕೊಂಡು ಹೋಗುವ ಸುಂದರ ದಿನವೂ ಆಗಿರುತ್ತಿತು. ಜಾತ್ರೆಗೆ ಕರೆದೊಯ್ದು, ಗದ್ದುಗೆ ಏರಿದ್ದ ಮಾರಿಯಮ್ಮನ ದರ್ಶನ ಮಾಡಿಸಿ, ಇಡೀ ಜಾತ್ರೆ ಪೇಟೆಯನ್ನು ಓಡಾಡಿಸಿ, ಬೇಕಾದ ಆಟದ ಸಾಮಾನು, ಗಿಜಿಗಿಜಿ, ಬಳೆ ಎಂದೆಲ್ಲ ಕೊಡಿಸುತ್ತಿದ್ದ ಆ ದಿನಕ್ಕಾಗಿ ಎರಡು ವರ್ಷ ಉಸಿರು ಬಿಗಿಹಿಡಿದು ಕಾಯುತ್ತಿದ್ದೆ. ನಂತರ ನಾನು ಮೇಲಿನ ತರಗತಿಗೆ ಬಂದಂತೆಲ್ಲ ನಂಬರ್ ಬರುವ ಹಟದಲ್ಲಿ ಜಾತ್ರೆಯ ಸೆಳೆತ ಸ್ವಲ್ಪ ಮಟ್ಟಿಗೆ ದೂರವಾದರೂ ಎಂದೂ ತಪ್ಪಿಸಿಕೊಂಡಿದ್ದೇ ಇಲ್ಲ. ಆದರೆ ಮತ್ತೆ ಜಾತ್ರೆಯ ಸಂಭ್ರಮ ಪಾರಂಭವಾಗಿದ್ದೇ ಕಾಲೇಜು ಮೆಟ್ಟಿಲು ಹತ್ತಿದ ನಂತರ. ನಮ್ಮ ಪರೀಕ್ಷೆಯ ಓದು ಜಾತ್ರೆಯ ನಂತರವೇ ಪ್ರಾರಂಭವಾಗುತ್ತಿತ್ತು. ಯಾವುದೋ ನೆಪ ಹೇಳಿ ಮಧ್ಯಾಹ್ನದವರೆಗೆ ಜಾತ್ರೆಯಲ್ಲಿ ಓಡಾಡಿ ಜಾತ್ರೆಯನ್ನೆಲ್ಲ ಮುಗಿಸಿ, ಜೈಂಟ್ ವ್ಹೀಲ್, ಟೊರೊಟೊರೊ ಅಂತೆಲ್ಲ ಹತ್ತಿ ನಂvರ ಆ ವರ್ಷದ ಬಿಡ್ಕಿ ಬಯಲಿನಲ್ಲಿನ ಅಂಗಡಿಗಳನ್ನೆಲ್ಲ ತೆರವುಗೊಳಿಸಿದ ನಂತರವೇ ನಮ್ಮ ಪರೀಕ್ಷಾ ತಯಾರಿ ಜೋರಾಗಿ ನಡೆಯುತ್ತಿತ್ತು.
ಈಗ ಆ ನೆನಪುಗಳೆಲ್ಲ ಮಾಸುತ್ತ ಬಂದಿದೆ. ‘ಬರೀ ಜಾತ್ರೆಗೆ ಓಡಾಡಿ. ಪರೀಕ್ಷೆಗೆ ಓದಬೇಡಿ’ ನಮ್ಮ ವಿದ್ಯಾರ್ಥಿಗಳನ್ನು ಥೇಟ್ ಅಂದು ನಮ್ಮ ಶಿಕ್ಷಕರು ನಮ್ಮನ್ನು ತರಾಟೆಗೆ ತೆಗೆದುಕೊಂಡಂತೆ, ಅಥವಾ ಅದಕ್ಕೂ ಒಂದು ಕೈ ಜಾಸ್ತಿಯೇ ಬೈಯ್ಯುವುದನ್ನು ಕಂಡಾಗ ನಿಜಕ್ಕೂ ನನಗೇ ನಗು ಬರುತ್ತದೆ. ಅದರಲ್ಲೂ ನಮ್ಮ ಹೈಸ್ಕೂಲ್ ಇರುವುದು ನಿರಾಶ್ರಿತರ ಏರಿಯಾದಲ್ಲಿ. ಇಡೀ ಕಾರವಾರದ ಸಮುದ್ರ ತೀರದ ಸೀಬರ್ಡ ನಿರಾಶ್ರಿತರು ಇಲ್ಲಿದ್ದಾರೆ. ಫೆಬ್ರುವರಿ ತಿಂಗಳು ಬಂತೆಂದರೆ ಒಂದೊಂದೇ ಊರುಗಳಲ್ಲಿ ಜಾತ್ರೆಯ ಹಂಗಾಮ ಪ್ರಾರಂಭವಾಗುತ್ತದೆ.  ಆಯಾ ಉರುಗಳಿಂದ ಬಂದ ನಿರಾಶ್ರಿತರು ತಮ್ಮ ಮೂಲ ಊರಿನ ಜಾತ್ರೆಗೆ ಹೋಗಲೇ ಬೇಕು, ಕೇವಲ ತಮ್ಮ ಊರಿನ ಜಾತ್ರೆಗೆ ಹೋದರೆ ಸಾಕೆ? ಸುತ್ತಲ ಸಂಬಂಧಿಕರ ಊರುಗಳಿಗೆ ಹೋಗದಿದ್ದರೆ ಆದೀತೆ? ಹೀಗಾಗಿ ಫೆಬ್ರುವರಿಯ ಇಪ್ಪತ್ತೆಂಟು ದಿನಗಳಲ್ಲಿ ಮಕ್ಕಳು ಶಾಲೆಯ ಮುಖ ನೋಡುವುದು ಕೇವಲ ಹದಿನೈದೇ ದಿನ ಎಂದರೂ ತಪ್ಪಾಗಲಾರದು. ಅಂತಹ ಮಕ್ಕಳನ್ನು ಎಲ್ಲೆಂದು ಹುಡುಕಿ ತರುವುದು? ಅದರಲ್ಲು ಬದಲಾದ ಶಿಕ್ಷಣ ಪದ್ದತಿಯಿಂದಾಗಿ ನಮಗೆ ಮಕ್ಕಳು ಕೊನೆಯ ವಾರ್ಷಿಕ ಪರೀಕ್ಷೆಗೆ ಬರದಿದ್ದರೂ ನಡೆದೀತು, ಮಧ್ಯೆ ನಾವು ಮಾಡುವ ರೂಪಣಾತ್ಮಕ ಪರೀಕ್ಷೆಗೆ ಬರದಿದ್ದರೆ ಆಗದು ಎನ್ನುವ ಸ್ಥಿತಿಯಲ್ಲಿ ಪದೇ ಪದೆ ಮಕ್ಕಳ ಪಾಲಕರಿಗೆ ಶಾಲೆಗೆ ಬರಲು ಹೇಳಿ ಕಳುಹಿಸುತ್ತಾ….. ಈ ಬಾಯಿಗೆ ಬುದ್ಧಿ ಇತ್ತಾ? ನಮ್ಗೇನ್ ಕೆಲ್ಸಾ ಇಲ್ಲ ಅಂದೆ ಮಾಡ್ಕುಂಡಿರಾ? ಹಿಂಗೆ ಎರ್‍ಡೆರ್‍ಡೆ ದಿನ್ಕೆ ಶಾಲಿಗೆ ಹೋತೆ ಕುಂತ್ರೆ ಮೀನ್ ಮಾರುಕೆ ಯಾರ್ ಬಾಯಿ ಹೋತಿದೆ?  ಎನ್ನುತ್ತ ನಮ್ಮ ಹಿಂದಿನಿಂದ ಬೈಯ್ಯುವುದಷ್ಟೇ ಅಲ್ಲ, ನಮ್ಮ ಹತ್ತಿರ ಕೂಡ ಶಾಲಿ ಕಲ್ಯೂರು ಯಾರು? ನಾಮೋ, ನಮ್ ಮಗ್ನೋ? ಎಂದು ಪ್ರಶ್ನಿಸುವಾಗ ಕೆಲವೊಮ್ಮೆ ಇದೆಂತಹ ಪರಿಪಾಟಲು ಎನ್ನಿಸದಿರಲು ಯಾವ ಶಿಕ್ಷಕರಿಗೂ ಸಾಧ್ಯವಿಲ್ಲ. ಅಂತೂ ಇಂತೂ ಮಕ್ಕಳು ಪರೀಕ್ಷೆ ಮುಗಿಸಿ ಒಮ್ಮೆ ಅವರನ್ನೆಲ್ಲ ಮೇಲಿನ ತರಗತಿಗೆ ತಳ್ಳಿ ಬಿಟ್ಟರೆ ಆ ವ ಶಾಲೆಗೆ ಹೊಗಿ ಕಲಿಸಿದ್ದಕ್ಕೆ ನಮಗೂ ಸಮಾಧಾನ. ಶಾಲೆಗೆ ಹೋಗಿದ್ದಕ್ಕೆ  ಮಕ್ಕಳಿಗೂ ಸಮಾಧಾನ.
ಕೆಲವು ಮಕ್ಕಳಿಗಂತೂ ಜಾತ್ರೆ ಎಲ್ಲಾ ಮುಗಿದ ಮೆಲೆ ಪರೀಕ್ಷೆಯ ನೆಪಾಗುತ್ತದೆ. ಅಷ್ಟು ದಿನಗಳವರೆಗೆ ನಿರಾಳವಾಗಿದ್ದ ಪಾಲಕರಿಗೂ ಆಗ ಮಕ್ಕಳು ನಂಬರ್ ಬರಲೇ ಬೇಕು ಎನ್ನುವ ಒತ್ತಡ ಪ್ರಾರಂಭವಾಗುತ್ತದೆ. ಅಲ್ಲಿಂದ ಮುಂದೆ ಮಕ್ಕಳ ಮೇಲೆ ಓದು ಎನ್ನುವ ತೀವೃ ಒತ್ತಡ. ಒತ್ತಡಕ್ಕೆ ಸಿಲುಕಿದ ಮಕ್ಕಳ ಪಾಡು ಆಗ ಹೇಳತೀರದು. ಅದು ಪುನಃ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಅದರಲ್ಲೂ ಇಡಿ ವರ್ಷದ ಓದನ್ನು ಕೇವಲ ಮೂರು ತಾಸಿನಲ್ಲಿ ಅಳೆಯುವ ನಮ್ಮ ಬೋರ್ಡ ಪರೀಕ್ಷೆಗಳ  ಈ ಶಿಕ್ಷಣ ಪದ್ದತಿಯಲ್ಲಿ ಪರೀಕ್ಷಾ ಸಮಯದ ಆರೋಗ್ಯ ಹಾಗು ಸಮಯದ ಹೊಂದಾಣಿಕೆ ಹಾಗು ನಿಭಾಯಿಸುವಿಕೆ ಅತೀ ಮುಖ್ಯ. ಆದರೂ ಈಗ ಶಿಕ್ಷಣ ಪದ್ದತಿ ಹಾಗೂ ಪರೀಕ್ಷಾ ಪದ್ದತಿಯ ಬದಲಾವಣೆ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಇಡೀ ವರ್ಷದ ಓದನ್ನು ನೆನಪಿಟ್ಟುಕೊಂಡು ಮೂರು ತಾಸಿನಲ್ಲಿ ಎಲ್ಲವನ್ನು ತೋಡಿಕೊಳ್ಳುವ ಪದ್ದತಿಯಿಂದ ಮುಕ್ತಿ ಸಿಗುತ್ತಿದೆ. ಆದರೂ ಪರೀಕ್ಷಾ ಸಮಯ ಎಂದರೆ ಮಕ್ಕಳು, ಪಾಲಕರು, ಶಿಕ್ಷಕರು ಹಾಗು ಶಿಕ್ಷಣ ಇಲಾಖೆ ಎಲ್ಲವುಗಳ ಸಂಪೂರ್ಣ ಜವಾಬ್ಧಾರಿ ಹಾಗು ಪರಸ್ಪರ ಪುರಕವಾದ ಹೊಂದಾಣಿಕೆಯ ಅಗತ್ಯವಿದೆ.

‍ಲೇಖಕರು avadhi

March 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: