ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಭಾರತಿಯ ಮನೆಯದು ಮತ್ತೊಂದು ಕಥೆ

(ಇಲ್ಲಿಯವರೆಗೆ)

ಚಿಟ್ಟಿ ಪುಟ್ಟಿಯ ಜೊತೆ ಜಗಳ ಆಡಿಕೊಂಡು ಸೀದಾ ಒಂದು ತೋಟದ ಒಳಗೆ ಬಂದುಬಿಡುತ್ತಾಳೆ. ಅದು ಅಂತಿಂಥಾ ತೋಟ ಅಲ್ಲ ಅತ್ಯಂತ ಸುಂದರವಾದ ತೋಟ. ಅಲ್ಲಿ ಮಕ್ಕಳು ಖುಷಿಯಿಂದಕುಣಿದಾಡುತ್ತಾ ಇದ್ದಾರೆ. ಆ ದೃಶ್ಯವನ್ನು ನೋಡಿ ಕೂಡಾ ಅವಳಿಗೆ ಸಂತೋಷ ಆಗಲಿಲ್ಲ.ಅಳುತ್ತಾ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕೂರುತ್ತಾಳೆ. ಹಾಗೆ ಕೂತ ಅವಳಿಗೆ ‘ಚಿಟ್ಟಿ’ ಎಂದು ಯಾರೋ ಕೂಗಿದ್ದು ಕೇಳುತ್ತದೆ. ತಿರುಗಿ ನೋಡಿದ ಅವಳು ಬೆಚ್ಚಿಬೀಳುತ್ತಾಳೆ. ಅದೊಂದು ರಣ ಹದ್ದು. ಅದು ಅವಳನ್ನು ಹತ್ತಿರ ಬರುವಂತೆ ಕರೆಯುತ್ತದೆ. ಚಿಟ್ಟಿ ಹೇಳುತ್ತಾಳೆ ‘ನೀನು ಕೆಟ್ಟವನು ನಾನು ನಿನ್ನ ಹತ್ತಿರಕ್ಕೆ ಬರಲಾರೆ’ ಎಂದು.ಆಗ ಹದ್ದು ‘ಇಲ್ಲ ನಾನು ನಿನಗೆ ಯಾವ ಅಪಾಯವನ್ನೂ ಮಾಡಲಾರೆ’ ಎಂದು ಒಂದು ಹಣ್ಣನ್ನುತೆಗೆದು ಅವಳಿಗೆ ಕೊಡುತ್ತದೆ. ನೋಡಲಿಕ್ಕೆ ತುಂಬಾ ಚೆನ್ನಾಗಿರುವ ಹಣ್ಣು. ಆದರೆಅದನ್ನು ತಿಂದರೆ ತನ್ನ ಜೀವಕ್ಕೆ ಅಪಾಯ ಬರಬಹುದು ಎನ್ನುವ ಆತಂಕದಿಂದಲೇ ಆ ಹದ್ದಿಗೆ‘ಇದರಲ್ಲಿ ವಿಷ ಹಾ‌ಇದ್ದೀಯ ಅಲ್ಲವಾ? ಇದನ್ನು ನಾನು ತಿಂದರೆ ಸತ್ತೇ ಹೋಗ್ತೀನಿ. ನಾನುಸತ್ತು ಹೋದರೆ ನನ್ನ ನೀನು ಕುಕ್ಕಿ ಕುಕ್ಕಿ ತಿನ್ನುತ್ತೀಯ ಅಲ್ಲವಾ?’ ಎನ್ನುತ್ತಾಳೆ.

‘ನೀನು ಮಾತಾಡ್ತ ಇರೋದೇ ಸರಿಯಲ್ಲ. ನಾನು ಒಳ್ಳೆಯವನು ಪ್ಲೀಸ್ ಅರ್ಥ ಮಾಡ್ಕೋ’ಎನ್ನುತ್ತಾ ರಮಿಸುತ್ತದೆ ಆ ಹದ್ದು. ಆ ಮಾತಿನಲ್ಲಿ ಏನೋ ವಿಶ್ವಾಸ ಕಂಡ ಚಿಟ್ಟಿಅದನ್ನು ತೆಗೆದುಕೊಂಡು ತಿನ್ನುತ್ತಾಳೆ. ಅವಳಿಗೆ ಮತ್ತು ಬಂದ ಹಾಗೆ ಅನ್ನಿಸುತ್ತದೆ. ಅದನ್ನು ಗಮನಿಸಿದ ಹದ್ದು ‘ನನ್ನ ಹೆಗಲೇರು’ ಎನ್ನುತ್ತದೆ. ಚಿಟ್ಟಿ ಅದರ ರೆಕ್ಕೆಗಳಮೇಲೆ ಕೂಡುತ್ತಾಳೆ. ಹಾಗೆ ಕೂತ ಅವಳನ್ನು ದೂರದ ದ್ವೀಪವೊಂದಕ್ಕೆ ಅದು ಎತ್ತಿಕೊಂಡುಸಾಗುತ್ತದೆ. ಆ ದ್ವೀಪದಲ್ಲಿಸುತ್ತಾ ನೀರು ಕಾಣುತ್ತಿದೆ. ತೀರ ಪುಟ್ಟ ದ್ವೀಪ ಅಲ್ಲಿ ಅವಳನ್ನು ಇಳಿಸಿದ ಹಕ್ಕಿಯನ್ನು ಚಿಟ್ಟಿ ಪ್ರಶ್ನಿಸುತ್ತಾಳೆ ‘ನನ್ನನ್ನು ಇಲ್ಲಿಗೆಯಾಕೆ ಕರೆದು ತಂದೆ?’ ಹಾಗೆ ಅನ್ನುವಾಗಲೇ ಆ ಹಕ್ಕಿ ಒಂದು ಸುಂದರಹುಡುಗನಾಗುತ್ತದೆ.

ಹತ್ತುವರ್ಷದ ಆ ಹುಡುಗನ ಮುಖದಲ್ಲಿ ಉಜ್ವಲವಾದ ಕಾಂತಿ ತುಂಬಿದೆ. ‘ನಿನ್ನ ನೋಡಿದೆ ನನಗಿಷ್ಟ ಆಯ್ತು ಅದಕ್ಕೆ ನಿನ್ನ ಕರೆದುಕೊಂಡು ಬಂದೆ, ಇಬ್ಬರೂ ಆಟ ಆಡೋಣ ಬಾ’ ಎಂದುಕರೆಯುತ್ತಾನೆ. ಆಗ ಚಿಟ್ಟಿ ‘ನೀನು ನನಗಿಂತ ಸಣ್ಣವನು, ನಿನ್ನ ಹತ್ತಿರ ನಾನು ಏನು ಆಟ ಆಡಲಿ?’ ಎನ್ನುತಾಳೆ. ಅದಕ್ಕೆ ಆ ಹುಡುಗ ಅವಳನ್ನು ಬಗೆ ಬಗೆಯಾಗಿ ಒಪ್ಪಿಸಿ ಆಡಲು ಶುರುಮಾಡುತ್ತಾನೆ. ಹಾಗೆ ಮರಳು ಮನೆಗಳನ್ನು ಕಟ್ಟಿ ಆಡುವಾಗ ಇದ್ದಕ್ಕಿದ್ದ ಹಾಗೆ ಚಿಟ್ಟಿಗೆಪರೀಕ್ಷೆಯ ನೆನಪಾಗುತ್ತದೆ. ಹುಡುಗ ಬೇಡ ಪರೀಕ್ಷೆಯನ್ನು ನೆನೆಸಿಕೊಳ್ಳಬೇಡ ಎನ್ನುತ್ತಾನೆ. ಅವನು ಹಾಗೆ ಮಾತು ಮುಗಿಸುವ ಮೊದಲೇ ದೊಡ್ದ ಅಲೆಯೊಂದು ಬಂದು ಅಪ್ಪಳಿಸುತ್ತದೆ. ಹುಡುಗ ಹೇಳುತ್ತಾನೆ, ‘ನಡೀ ನಾವಿಲ್ಲಿರೋದು ಬೇಡ ಈ ಅಲೆಗಳು ನಮ್ಮನ್ನು ನುಂಗಿ ಬಿಡುತ್ತದೆ’ ಎಂದು. ಹಾಗೆ ನೋಡುವಾಗಳೇ ಆ ಹುಡುಗ ಮತ್ತೆಹಕ್ಕಿಯಾಗುತ್ತಾನೆ. ತನ್ನ ಹೆಗಲೇರುವಂತೆ ಮತ್ತೆ ಕರೆಯುತ್ತಾನೆ ಆದರೆ ಚಿಟ್ಟಿಗೆ ಆಗುವುದೇ ಇಲ್ಲ ಇನ್ನೊಂದು ದೊಡ್ದ ಅಲೆ ಬಂದು ಅವಳನ್ನು ಮುತ್ತುತ್ತದೆ. ಚಿಟ್ಟಿಬೆಚ್ಚಿ ಏಳುತ್ತಾಳೆ.

ತಾನು ಕಂಡಿದ್ದು ಕನಸು ಎಂದು ತಿಳಿದು ಸಮಾಧಾನವಾದರೂ ಆ ಕನಸಿಗೋಪರೀಕ್ಷೆಯ ಭಯಕ್ಕೋ ಅವಳಿಗೆ ಆ ರಾತ್ರಿ ನಿದ್ದೆ ಬರುವುದೇ ಇಲ್ಲ. ಸೋಮಣ್ಣನ ಮಗಳು ಗೀತುವನ್ನು ಕಂಕುಳಲ್ಲಿ ಎತ್ತಿಕೊಂಡು ಭಾರತಿ, ಚಿಟ್ಟಿಯನ್ನು ಹುಡುಕುತ್ತಾ ಬಂದಳು. ಕೆನ್ನೆಯ ಮೇಲೆ ಕೆಂಪಗೆ ಎದ್ದು ಕಾಣುತ್ತಿದ್ದ ಆ ಮೊಡವೆ ಅವಳನ್ನು ಇನ್ನಷ್ಟು ಸುಂದರವಾಗಿಸಿತ್ತು. ‘ಏನೇ ಭಾರತಿ ಇದು?’ ಎಂದು ಅಮ್ಮ ಭಾರತಿಯನ್ನು ಕೇಳಿದಳು. ಭಾರತಿ ಉತ್ತರಿಸುವ ಮೊದಲೇ ‘ಎಲ್ಲಾರ ಮನೆಯ ದೋಸೆ ತೂತೇ ಬಿಡು’ಎನ್ನುತ್ತಾ ಗೀತು ಕೆನ್ನೆಯನ್ನು ಸವರಿ ‘ಚಿಟ್ಟಿ ಭಾರತಿ ಬಂದಿದ್ದಾಳೆ ನೋಡೇ’ ಎಂದುಕೂಗಿದಳು. ಅಂದಿದ್ದನ್ನೆ ಸಾವಿರ ಸಲ ಅಂದುಕೊಳ್ಳುತ್ತಾ ಪಾಠ ಕಂಠಪಾಠವೂ ಆಗದೆ ಮನಸ್ಸಿನಲ್ಲೂ
ಉಳಿಯದೆ ಕೊಡುತ್ತಿದ್ದ ಕಾಟವನ್ನು ನೆನೆಸಿಕೊಂಡು ಚಿಟ್ಟಿಯ ಕಣ್ಣುತುಂಬಿಕೊಳ್ಳುತ್ತಿತ್ತು. ‘ಇದರ ಮಧ್ಯೆ ಇವಳು ಬೇರೆ’ ಎಂದು ಬೈದುಕೊಂಡಳು. ಹಾಗೇಬೈದುಕೊಳ್ಳುವಾಗಲೇ ಭಾರತಿ ರೂಮಿನೊಳಗೆ ಬಂದುಬಿಟ್ಟಳು. ಚಿಟ್ಟಿಗೆ ಇದು ಇಷ್ಟವಾಗದೇಹೋದರೂ ಅನಿವಾರ್ಯವಾಗಿ ಸಹಿಸಿಕೊಂಡಳು. ಗೀತುವಿನ ಅಳು ರೂಮಿನ ತುಂಬಾ ತುಂಬಿಕೊಂಡಿತ್ತು. ‘ಓದ್ಕೊಳಲ್ವೇನೇ? ಈ ಮಗೂನ ಇಟ್ಕೊಂಡ್ ಓಡಾಡ್ತಾ ಇದೀಯಲ್ಲಾ? ನೀನ್ ಉದ್ಧಾರವಾದ ಹಾಗೇ’ ಎಂದು ಚಿಟ್ಟಿ ಕೇಳಿದಳು. ‘ಇಲ್ಲ ಕಣೆ ನಮ್ಮನೇಲಿ ಓದೋದಾ?ನಿಲ್ಲೋಕೂ ಜಾಗ ಇಲ್ಲ. ನಮ್ಮತ್ಗೆ ಗಲಾಟೆ ಮಾಡ್ತಾ ಇದಾಳೆ’ ಎಂದಳು. ‘ಯಾಕೆ?’ ಅಚ್ಚರಿಯಿಂದ ಕೇಳಿದಳು ಚಿಟ್ಟಿ. ಭಾರತಿ ಅತ್ತಿತ್ತ ನೋಡುತ್ತಾ ‘ಬಾ ಹೇಳ್ತೀನಿ’ಎನ್ನುತ್ತಾ ಒಂದು ಕೈಲಿ ಗೀತುವನ್ನೂ, ಇನ್ನೊಂದು ಕೈಲಿ ಚಿಟ್ಟಿಯ ಕೈಯನ್ನುಹಿಡಿದೆಳೆದುಕೊಂಡು ಸಾಗಿದಳು.

ಎತ್ತಲೋ ಎಳೆದುಕೊಂಡು ಸಾಗುತ್ತಿದ್ದ ಭಾರತಿಯನ್ನು ದಾರಿಯಲ್ಲೇ ನಿಲ್ಲಿಸಿದ ಚಿಟ್ಟಿ ಅಲ್ವೇ ವಿಷ್ಯ ಹೇಳು ಅಂದ್ರೆ ಇಲ್ಲಿಗ್ಯಾಕೆ ಕರ್ಕೊಂಡ್ ಬರ್ತಿದೀಯಾ?’ ಕೇಳಿದಳು ಕುತೂಹಲದಿಂದ. ‘ಅದೇ ಹೇಗ್ ಹೇಳೋದು ಅಂತ ಅರ್ಥವಾಗ್ತಾ ಇಲ್ಲ’ ಎಂದಳು ಭಾರತಿ ವಿಶಾದದಿಂದ. ಓದಿದ್ದು ಮರೆತು ಹೋಗುತ್ತಿರುವ ಈ ಹೊತ್ತಲ್ಲಿ ಈ ಭಾರತಿಯ ಗಲಾಟೆ ಏನು ಎಂದು ಅರ್ಥವಾಗದೆ ಹಾಳು ದತ್ತೂರಿ ಬೀಜ ನನ್ನ ಜೀವ ತೆಗೀಲಿಕ್ಕೆ ಏನಾಗಿತ್ತು, ಕನಸಲ್ಲಿ ಬಂದ ಹುಡುಗ ಈಗ ಬಂದಿದ್ದರೆ ಏನಾಗುತ್ತಿತ್ತು ಎಂದು ಬೈದುಕೊಂಡಳಾದರೂ ಭಾರತಿಯ ಮನೆಯಲ್ಲಿ ಅಂಥಾ ಗಲಾಟೆ ಏನಾಗಿದೆ ಎನ್ನುವ ಕುತೂಹಲ ಸಹಜವಾಗೇ ಮೂಡಿತು.‘ನಮ್ಮತ್ಗೇಗೆ ಆಸ್ತೀಲಿ ಪಾಲು ಬೇಕಂತೆ ಕಣೆ ಅದಕ್ಕೆ ಅಪ್ಪ ಅಮ್ಮನ ಹತ್ತಿರ ಜಗಳ ಮಾಡ್ತಿದಾಳೆ. ಆದ್ರೆ ಅಪ್ಪ ಅಮ್ಮ ‘ಪಾಲನ್ನು ಕೊಡಲ್ಲ’ ಅಂತಿದಾರೆ ಎಂದಳು ಭಾರತಿ.‘ಇದಕ್ಕೆ ಸೋಮಣ್ಣ ಏನ್ ಹೇಳ್ತಿದಾರೆ?’ ಚಿಟ್ಟಿ ಕೇಳಿದಳು. ‘ಏನ್ ಹೇಳ್ತಾರೆ? ಅತ್ಗೆ ಹೇಳೊದೇ ಸರಿ ಅಂತಾ ಕೂತಿದ್ದಾರೆ. ಇರೋ ನಾಕೆಕರೇನ ಹತ್ತು ಭಾಗ ಮಾಡಿದ್ರೆ ಉಳ್ಯೋದೇನು? ಹೀಗೆಲ್ಲ ಆದರೆ ಮನೆ ನಡ್ಯೋದ್ ಹೇಗೆ ಅಂತ ಅವರ ಯೋಚನೆ. ಅಮ್ಮ ನನ್ನ ಗತಿ ಏನು? ನನ್ನಮದುವೆ ಹೇಗೆ ಮಾಡೊದು? ಅಂತೆಲ್ಲಾ ಯೋಚ್ನೆ ಮಾಡ್ತ್ತಾ ಇದ್ರು. ಒಟ್ನಾಲ್ಲಿ ನಾನೊಬ್ಬಳು ಅವರಿಗೆ ಭಾರವಾಗಿದ್ದೀನಿ’ ಎಂದಳು. ಹಾಗೇನ್ನುವಾಗ ಅವಳ ಕೆನ್ನೆಯ ಮೇಲೆ ಇಳಿದ ನೀರು ಚಿಟ್ಟಿಯ ಮನಸ್ಸನ್ನು ಕಲಕಿಬಿಟ್ಟಿತು. ‘ಅದ್ಯಾಕೆ ಹಾಗಂತೀಯಾ? ನೋವಿನಿಂದ ಕೇಳಿದಳು

ಚಿಟ್ಟಿ. ‘ಇನ್ನೇನೇ ಮತ್ತೆ ಇವಳ ಮದ್ವೆ ಮಾಡೋಕ್ಕೆ ನಮ್ಮ ಸುಖಾನ ಯಾಕ್ ಬಲಿಕೊಡ್ಬೇಕು. ಎಲ್ಲಾ ನಿಮ್ಮ ನಿಮ್ಮ ಸುಖಾನೇ ನೋಡ್ಕೊಳ್ಳಿ. ಈ ಮನೆ ಸೊಸೆ ಅಂದ್ರೆ ದುಡ್ಯೋ ಎತ್ತು ಅಂದ್ಕೊಂಡಿದ್ದೀರಾ. ನನ್ನ ಗಂಡನಿಗೆ ಕೆಲ್ಸ ಇಲ್ಲ ನಾನು ದುಡಿತಿರೋದ್ರಲ್ಲಿ ಬದುಕ್ಬೇಕು. ಅವ್ರಿಗೂ ಒಂದು ಅಂಗಡಿನೋ ಏನಾದ್ರೂ ಹಾಕ್ಕೊಡಿ’ ಎಂದು ಕೇಳಿದಾಗ ಅಪ್ಪ ‘ನಮ್ಮ ಹತ್ರ ಹಣ ಎಲ್ಲಿದ್ಯಾಮ್ಮ? ನಿನಗೆ ಕೆಲ್ಸಾನಾದ್ರೂ ಇದೆ ಇನ್ಯರಿಗೂ ಕೆಲ್ಸಾನೂ ಇಲ್ವಲ್ಲ’ ಎಂದರು. ಅದಕ್ಕೆ ಅತ್ತಿಗೆ ‘ಅದಕ್ಕೆ ನಾನೇನ್ ಮಾಡ್ಲಿ ಇದೆಲ್ಲಾ ನಿಮ್ಮ್ನಿಮ್ಮ ಯೋಗ್ಯತೆ. ನನ್ನ ಗಂಡನ ಪಾಲನ್ನು ಕೊಟ್ಬಿಡಿ ಆಮೇಲೆ ಮಿಕ್ಕ ಮಾತು’ ಎಂದು ಸಿಂಬಳಸುರಿಸುತ್ತಾ ಕಂಕುಳಲ್ಲಿ ಕೂತಿದ್ದ ಮಗು ಗೀತುವನ್ನು ನಡುಮನೆಯಲ್ಲಿ ಇಳಿಸಿದ್ದಳು. ಹಾಗೆ ಇಳಿಸಿದ ರಭಸಕ್ಕೆ ಗೀತು ಜೋರಾಗಿ ಅಳತೊಡಗಿದ್ದಳು. ಅಮ್ಮ ನನ್ನ ಕೈಗೆ ಮಗುವನ್ನುಕೊಟ್ಟು ಕರಕೊಂಡು ಹೋಗು ಅಂತ ಕಳಿಸಿದರು ಬಂದೆ ಕಣೆ’ ಎಂದಳು. ಚಿಟ್ಟಿ ಭಾರವಾದ ಮನಸ್ಸಿನಿಂದ ಭಾರತಿಯ ಮನೆ ಒಡೆಯುವ ಚಿತ್ರವನ್ನು ಕಲ್ಪಿಸಿಕೊಂಡಳು. ಅವಳಿಗೆ ಅದು ಸಮಾಧನವಾಗಲಿಲ್ಲ. ಒಡೆದ ಮನೆಗಳ ಕಥೆ ಇದು ಮೊದಲನೆಯದೂ ಅಲ್ಲ ಕೊನೆಯದೂ ಅಲ್ಲ. ಹಳ್ಳಿಯಲ್ಲಿ ಇಂಥಾ ವಿಷಯಗಳು ಬೇಗ ಸುದ್ದಿಯೂ ಆಗುತ್ತಿತ್ತು. ಹಾಗೇ ನಾಕು ದಿನ ಊರವರ ಬಾಯಲ್ಲಿ ಆಡಿ ಕರಗಿಯೂ ಹೋಗುತ್ತಿತ್ತು. ಆದರೆ ಬೀದಿಗೆ ಬಂದ ಜಗಳಗಳು ಮನಸ್ಸನ್ನು ಮನುಷ್ಯರನ್ನೂ ಬೇರೆ ಮಾಡುತ್ತಿದ್ದವು. ಅಣ್ಣ ತಮ್ಮಂದಿರ ಮಕ್ಕಳು ಒಟ್ಟಿಗೆ ಬೆಳೆದವರು ಆಟ ಆಡುವುದನ್ನು ನಿಲ್ಲಿಸುತ್ತಿದ್ದರು.

ಒಟ್ಟಿಗೆ ಊಟ ಮಾಡುವುದನ್ನು ಬಿಡುತ್ತಿದ್ದರು. ಕೊನೆಗೆ ಮಾತಾಡುವುದನ್ನೂ. ಬದ್ಧ ದ್ವೇಷಿಗಳ ಹಾಗೆ ಆಡುತ್ತಿದ್ದರು. ನಾಗ ಅವನದೊಡ್ಡಪ್ಪನ ಮಗ ಪಂಚಾಕ್ಷರಿಗೂ ದೊಡ್ದ ಜಗಳವೇ ನಡೆದು ಹೋಗಿದ್ದನ್ನು ಚಿಟ್ಟಿ ನೋಡಿದ್ದಳು ಕೂಡಾ. ದೊಡ್ಡ ದೊಡ್ಡವರ ನಡುವೆ ಏನು ಜಗಳ ನಡೆದಿತ್ತೋ ಏನೋ ತಿಳಿಯದು. ಆದರೆ ಈ ಹುಡುಗರು ಮಾತ್ರ ಸ್ಕೂಲಲ್ಲಿ ಬದ್ಧ ದ್ವೇಷಿಗಳ ಹಾಗೇ ಆಡುತ್ತಿದ್ದರು. ಒಂದೇ ಕ್ಲಾಸಿನಲ್ಲಿ ಓದುತ್ತಿದ್ದ ಅವರು ಒಂದು ಕಡೆ ಕೂರುತ್ತಿರಲಿಲ್ಲ. ನಮ್ಮ ಆಸ್ತಿಯನ್ನು ಹೊಡೆದುಕೊಂಡ ಅಂತ ಒಬ್ಬ ಹೇಳಿದರೆ ಮತ್ತೊಬ್ಬನೂ ಅದೇ ಮಾತನ್ನು ಹೇಳುತ್ತಿದ್ದ. ಮನೆಯ ಮಧ್ಯೆ ಗೋಡೆ ಎದ್ದಿದ್ದವು. ಎರಡು ಒಲೆ ಉರಿಯುತ್ತಿದ್ದವು.  ಅಜ್ಜಿ ಮಾತ್ರ ಎರಡೂ ಮನೆಯ ಮಧ್ಯದಗೋಡೆಗೆ ಆತು  ಅಳುತ್ತಾ ಕೂತಿತ್ತು. ಆಕೆ ಯಾರಿಗೂ ಸೇರದೆ ಕಂಬಕ್ಕೆ ಒರಗಿ ಕುಟ್ತಣಿಯಲ್ಲಿ ಎಲೆ ಅಡಿಕೆಯನ್ನು ಕುಟ್ಟುತ್ತಾ ಆ ತಾಳಕ್ಕೆ ತಕ್ಕ ಹಾಗೆ ಮನಸ್ಸಿನದುಃಖವನ್ನು ಹಾಡು ಮಾಡಿ ಹಾಡುತ್ತಾ ಒಂಟಿಯಾಗಿ ದ್೮ನ ನೂಕುತ್ತಿತ್ತು. ಬೊಚ್ಚಬಾಯಿಗೆ ಶಬ್ದ ಸ್ಪಷ್ಟವಾಗಿ ಬಾರದ ಕಾರಣ ಮಾತಾಡುವಾಗ ಬರೀ ಗಾಳಿ ನುಗ್ಗಿ ಆ ಅಜ್ಜಿ ಏನು ಹೇಳ್ತಾ ಇದೆ ಅನ್ನೋದೇ ಗೊತ್ತಾಗುತ್ತಿರಲಿಲ್ಲ.ಮನೆ ಇಬ್ಭಾಗ ಆದಮೇಲೆ ಎಂದೂ ಅಜ್ಜಿ ಮನೆಯ ಒಳಗೆ ಹೋಗಲೇ ಇಲ್ಲ. ಯಾರು ಕರೆದರೂ ಮಳೆ,ಗಾಳಿ, ಬಿಸಿಲು ಯಾವುದಕ್ಕೂ ಜಗ್ಗದೆ ಅದೇ ಗೋಡೆಗೊರಗಿ ಕೂತಿತ್ತು. ಸೊಸೆಯರು ಬಂದು ‘ಊರಜನ ನಮ್ಮನ್ನ ಅನ್ನಬೇಕಾ ಬನ್ನಿ ಒಳಗೆ’ ಅಂತ ಬೈದರೂ ಅಜ್ಜಿ ಜಪ್ಪಯ್ಯ ಅನ್ನಲಿಲ್ಲ.ಊರವರು ಹೇಳಿದರೆ ‘ಕೂಡಿ ಬಾಳಿದ ಮನೆ ಒಡೆದದ್ದನ್ನ ನಾನು ಹೇಗೆ ಸಹಿಸಲಿ? ನನ್ನ ಮಕ್ಕಳೆಕೌರವ ಪಾಂಡವರಾಗಿಬಿಟ್ಟರಲ್ಲಾ?’ ಎಂದು ಕೊರಗತೊಡಗಿದ್ದಳು.

ಹಾಗೆ ಕೊರಗಿ ಕೊರಗಿ ಒಂದು ದಿನ ಕೂತ ಕಡೆಯೇ ಜೀವ ಬಿಟ್ಟು ಬಿಟ್ಟಿದ್ದಳು. ಹಾಗೆ ಪ್ರಾಣಬಿಟ್ಟ ದಿನ ಇಬ್ಬರುಮಕ್ಕಳು ತಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವ ಹಾಗೇ ಓಡಾದಿದ್ದರು. ಊರವರು ಇದೇನಪ್ಪಾಸಾವಿನ ಎದುರೂ ನಿಮ್ಮ ದ್ವೇಷಾನಾ? ಒಟ್ಟಿಗೆ ಸಂಸ್ಕಾರ ಮಾಡಿ’ ಎಂದಿದ್ದರು. ‘ಅವನಿಗೆಆಗಲ್ಲ ಅಂತ ಹೇಳ್ಲಿ ನಾನು ಮಾಡ್ತೀನಿ’ ಎಂದು ದೊಡ್ಡವನು ಹೇಳಿದರೆ. ಚಿಕ್ಕವನೂ ಕೂಡಾಹಾಗೇ ಹೇಳಿದ್ದ. ದಿನ ಕಳೆದರೂ ಶವ ಮಾತ್ರ ಹೊರಗೇ ಬಿದ್ದಿತ್ತು. ಕೊನೆಗೆ ಊರವರೆಲ್ಲಾ ಸೇರಿಕೊಂಡು ‘ನಾವೇ ಸಂಸ್ಕಾರ ಮಾಡ್ತೀವಿ ನಮ್ಮ ಊರಿನ ತಾಯಿ’ ಎಂದುಮುಂದೆ ಬಂದಾಗ ಇನ್ನು ಊರವರನ್ನೆಲ್ಲ ಎದುರು ಹಾಕಿಕೊಂಡು ಬದುಕು ನಡೆಸುವು ಅಸಾಧ್ಯದ ಮಾತು ನಾಳೆ ಉಗಿಯುವುದು ನಮ್ಮನ್ನೆ ಅಲ್ಲವೇ?  ಎನ್ನುವ ತಮ್ಮ ಹೆಂಡಂದಿರ ಹಿತವಚನಕೇಳಿಕೊಂಡು ಉತ್ತರ ದಕ್ಷಿಣದ ತಮ್ಮ ಮುಖವನ್ನು ಅತ್ತಕಡೆಗೆ ತಿರುಗಿಸಿಕೊಂಡು ಸಂಸ್ಕಾರಮಾಡಿ ಮುಗಿಸಿದ್ದರು. ಹಾಗೇ ಸಂಸ್ಕಾರ ಮುಗಿಸಿದ ಅವರು ಮತ್ತೆ ಯಾವತ್ತೂ ಒಬ್ಬರಮುಖವನ್ನು ಒಬ್ಬರು ನೋಡಲಿಲ್ಲ. ಕಂಡವರು ಬೈತಾರೆ ಅನ್ನುವ ಕಾರಣಕ್ಕೆ ಇಬ್ಬರೂ ಬೇರೆಬೇರೆಯಾಗಿ ಎಡೆ ಇಟ್ಟು ಋಣ ಕಳೆದುಕೊಂಡಿದ್ದರು. ನೆಲದ ಆಳದಲ್ಲಿ ಮಲಗಿದ ಅಜ್ಜಿ ಅಲ್ಲೂನರಳುವುದನ್ನು ಬಿಡಲಿಲ್ಲ. ಇಂಥಾ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಹಲುಬುವಿಕೆ ಕೇಳಿತ್ತು. ಆಸ್ತಿಯ ಪಾಲಿಗೆ ಬಂದ ಭಾರತಿಯ ಅತ್ತಿಗೆ ಸುಮ ಮನೆಯಲ್ಲೆ ಉಳಿದಿದ್ದಳು. ಎಲ್ಲವೂ ತನ್ನಾಧಿಕಾರದ ಪರಿಧಿಯಲ್ಲೆ ಇರಬೇಕು ಎಂದು ಸರ್ವಾಧಿಕಾರಿ ಧೋರಣ್ಯನ್ನುತೋರಿಸುತ್ತಿದ್ದಳು. ಆಗೀಗ ಭಾರತಿ ಬಂದು ಅಳುತ್ತಾ ಚಿಟ್ಟಿಯ ಜೊತೆಯೇ ಓದುವ ಪ್ರಯತ್ನಮಾಡುತ್ತಿದ್ದಳು. ಮನೆಯಲ್ಲಿದ್ದರೆ ‘ಹಾಗೇ ಓದಿ ಅವಳೇನು ಸಾಮ್ರಾಜ್ಯ ಕಟ್ಟಬೇಕಿದೆ?’ಎಂದು ಅವಳನ್ನು ಕೆಲಸಕ್ಕೆ ಹಚ್ಚುತ್ತಿದ್ದಳು.

ಒಬ್ಬಳೇ ಮಗಳು ಎಂದು ಪ್ರೀತಿಯಿಂದಬೆಳೆಸಿದ್ದ ಭಾರತಿಯ ಅಪ್ಪ ಮಂಜಣ್ಣನವರಿಗೆ ಇದರಿಂದ ಕೋಪ ಬಂದಿದ್ದೂ ನಿಜವಾದರೂ ‘ಅವಳುಇನ್ನೊಂದು ಮನೆಯ ಹೆಣ್ಣುಮಗಳಲ್ಲವೇ ನಾನು ಅನ್ನಬಾರದು’ ಎಂದು ತಾಳ್ಮೆಯಿಂದ ಸುಮ್ಮನೆಉಳಿದುಬಿಟ್ಟಿದ್ದರು. ಆದರೆ ನಾಳೆ ಪರೀಕ್ಷೆ ಎನ್ನುವಾಗ ಒಂದು ಭಾರೀ ದುರಂತವೇನಡೆದುಹೋಗಿತ್ತು. ಹಾಲ್ ಟಿಕೇಟ್‌ತಗೊಂಡು ಬರೋಕ್ಕೆ ಬಾ ಅಂತ ಚಿಟ್ಟಿ ಭಾರತಿಯನ್ನುಕರೆಯಲು ಹೋದಳು. ಅಲ್ಲೇ ಇದ್ದ ಅವಳ ಅತ್ತಿಗೆ ಸುಮ ‘ಅವಳು ಬರೊಲ್ಲ ಹೋಗು’ ಎಂದಳು.ಅಷ್ಟರಲ್ಲಿ ರತ್ನಮ್ಮ ಹೊರಗೆ ಬರ್ತಾ ‘ನಿಂದ್ಯಾಕೋ ಅತಿಯಾಯ್ತು ಕಣೆ ಓದೋ ಹುಡ್ಗಿ ನಾಳೆಪರೀಕ್ಷೆ ಅಂದ್ರೆ ಇವತ್ತು ಹಾಲ್ಟಿಕೇಟ್ ತಗೋಬೇಡ ಅಂದ್ರೆ ಹೇಗೆ ನೀನ್ ಹೋಗು ಭಾರತಿ’ಎಂದರು. ಅಷ್ಟಕ್ಕೆ ಸುಮ್ಮನಾಗದೆ ಆಕೆ ‘ವಯಸ್ಸಾಗಿರೋ ನಿಂಗೆ ಇಷ್ಟು ಧಿಮಾಕಾ ಏಯ್ಮುದ್ಕಿ ನಿನ್ನ ಏನ್ ಮಾತೀನಿ ನೋಡು’ ಎಂದಳು. ಆ ಮಾತಿಗೆ ರತ್ನಮ್ಮನವರು ಅಳುತ್ತಾನಿಂತರು. ಅದನ್ನ ಕೇಳಿಸ್ಕೊಂಡ ಮಂಜಣ್ಣನವರು ‘ದೊಡ್ಡವರು ಸಣ್ಣವರು ಅಂತ ಗೌರವಬೇಡವೇನಮ್ಮಾ ಹಾಗೆಲ್ಲಾ ಮಾತಾಡ್ತಿದೀಯಲ್ಲಾ’ ಎಂದರು’. ಅದಕ್ಕೆ ಆಕೆ‘ವಯಸ್ಸಾಗಿಬಿಟ್ರೆ ಗೌರವ ಕೊಡ್ಬೇಕಾ? ಎಷ್ಟೆ ವಯಸ್ಸಾದ್ರೂ ಕತ್ತೆ ಅದರ ಚಾಕರಿಯನ್ನೇಮಾಡಬೇಕಲ್ವಾ’ ಎಂದಿದ್ದಳು. ಆ ಮಾತು ಭಾರತಿಯ ಅಣ್ಣಂದಿರ ಕಿವಿಗೆ ಬಿದ್ದಿದ್ದೇ ತಡಎಲ್ಲ ಸೇರಿ ಆಕೆಯನ್ನು ಮನಸ್ಸಿಗೆ ಬಂದ ಹಾಗೆ ಬಡೆದುಬಿಟ್ಟಿದ್ದರು. ತನ್ನ ಕಣ್ಣೆದುರೇಹೀಗೆ ಮೂರು ನಾಕು ಜನ ಸೇರಿ ಒಬ್ಬ ಹೆಂಗಸನ್ನು ಹೊಡೆಯುತ್ತಿದ್ದುದನ್ನು ನೋಡಿದ ಚಿಟ್ಟಿದಿಗ್ಭ್ರಾಂತಳಾಗಿದ್ದಳು. ಭಾರತಿ ಗೊಳೋ ಅಂತಾ ಅಳುತ್ತಿದ್ದರೆ ಅವಳ ತಂದೆ ಮಂಜಣ್ಣನವರುಮತ್ತು ರತ್ನಮ್ಮ ಇಬ್ಬರೂ ‘ಹೊಡೆಯಬೇಡಿ ಬಿಡ್ರೋ’ ಎಂದು ತಡೆಯುವ ಪ್ರಯತ್ನಮಾಡುತ್ತಿದ್ದರು. ಅತ್ತಿಗೆ ಎನ್ನುವುದನ್ನೂ ನೋಡದೆ ತಮ್ಮಂದಿರೆಲ್ಲಾ ಹೀಗೆ ಚೆಚ್ಚಿಹಾಕಿದ್ದನ್ನು ನೋಡಿ ಸೋಮಣ್ಣ ಏನೂ ಮಾತಾಡಲಿಲ್ಲ.ಅಳು ಅಳುತ್ತಲೇ ಭಾರತಿ ಹಾಲ್ಟಿಕೇಟನ್ನು ತೆಗೆದುಕೊಂಡಳು. ಅದರದು ಈ ಹುಟ್ಟಾದರೆ ಇನ್ನುಪರೀಕ್ಷೆ ಇನ್ಯಾವ ಹುಟ್ಟೋ ರಿಸಲ್ಟ್ ಎನ್ನುವಾಗ ಇನ್ನೇನೋ. ‘ಛೇ ನಾನು ಇವಳ ಜೊತೆಬರಬಾರದಿತ್ತು. ಅಪಶಕುನವಾಯಿತೇನೋ’ ಎಂದುಕೊಂಡಳು ಚಿಟ್ಟಿ. ಅವಳ ಮನಸ್ಸಿನಲ್ಲಿಗಾಢವಿಷಾದ ಮಡುಗಟ್ಟಿತ್ತು. ತಪ್ಪು ಭಾರತಿಯ ಅತ್ತಿಗೆಯದ್ದೇ. ಆದರೂ ಶಿಕ್ಷೆ ಅಷ್ಟು ಕ್ರೂರವಾಗಿ ಕೊಟ್ಟಿದ್ದು ಮಾತ್ರ ಇಷ್ಟವಾಗಲಿಲ್ಲ. ಅಸಹಾಯಕಳಾಗಿ ಅವಳ ಕೂಗು ಚಿಟ್ಟಿಯಒಳಕಿವಿಗೆ ತಾಕಿ ಮಾರ್ದನಿಗೊಡುತ್ತಿತ್ತು.

(ಮುಂದುವರಿಯುವುದು…)

‍ಲೇಖಕರು avadhi

February 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: