ನುಗಡೋಣಿ ಅವರ ಕತೆಗಳಲ್ಲಿ ಗ್ರಾಮಲೋಕ ಮತ್ತು ಜಾತಿ ಸಂಕರ;ವಿಮರ್ಶೆ

ಸುರೇಶ್ ನಾಗಲಮಡಿಕೆ

ಅಮರೇಶ್ ನುಗಡೋಣಿ ನಮ್ಮ ನಡುವಿನ ಉತ್ತಮ ಕತೆಗಾರರಲ್ಲಿ ಒಬ್ಬರು. ಮಣ್ಣು ಸೇರಿತು ಬೀಜ, ತಮಂಧದ ಕೇಡು, ಸವಾರಿ ಎಂಬ ಮೂರು ಕಥಾಸಂಕಲನಗಳನ್ನು ಇದುವರೆಗೆ ಪ್ರಕಟಿಸಿದ್ದಾರೆ. ಅಮರೇಶ್ ಅವರ ಕತೆಗಳಲ್ಲಿ ಅಡಗಿರುವ ಗ್ರಾಮ ಪ್ರಪಂಚ ಮತ್ತು ಅದು ಕಾಲಯಾನದಲ್ಲಿ ಆಗುತ್ತಿರುವ ಪಲ್ಲಟಗಳು ಕಲಾತ್ಮಕವಾಗಿ ಮೂಡಿ ಬರುತ್ತವೆ. ಇವರು ಬಳಸುವ ಭಾಷೆಯಲ್ಲೇ ಗ್ರಾಮ ಬದುಕಿನ ಸ್ಥಿತ್ಯಂತರಗಳನ್ನೂ ಕಾಣಬಹುದು. ಹಾಗೆ ನೋಡಿದರೆ ವಚನಕಾರರು ಓಡಾಡಿದ ಜಾಗಗಳಲ್ಲಿ ಮತ್ತು ಅವರ ಪ್ರಭಾವ ವಲಯಗಳಲ್ಲಿ ಇವರ ಅನೇಕ ಕತೆಗಳು ಹುಟ್ಟಿಕೊಂಡಿವೆ. ಅದರಲ್ಲೂ ಬಸವಣ್ಣನ ವ್ಯಕ್ತಿತ್ವವನ್ನು ಆಧುನಿಕ ಸಂದರ್ಭದಲ್ಲಿಟ್ಟು ಪರೀಕ್ಷಿಸುವ ಕ್ರಮವೂ ಇಲ್ಲಿ ಅನಾವರಣಗೊಂಡಿದೆ. ಬಸವಣ್ಣ ಎಬ್ಬಿಸಿದ ಜಾತಿ ನಿರ್ಮೂಲನ ಸಂಘರ್ಷಗಳನ್ನೂ ಇವರ ಕಥಾಪ್ರಪಂಚ ಒಳಗು ಮಾಡಿಕೊಂಡಿರುವ ಬಗೆಗಳು ಆಶ್ಚರ್ಯವುಂಟುಮಾಡುತ್ತದೆ. ಬಸವಣ್ಣನ ವ್ಯಕ್ತಿತ್ವವೂ ಇವರ ಪಾತ್ರಗಳ ಮೇಲೆ ಪ್ರಭಾವ ಬೀರಿದಿಯೋ? ಅಥವಾ ಬಸವಣ್ಣನ ಆಶಯಗಳನ್ನು ಇವರು ಎಷ್ಟರಮಟ್ಟಿಗೆ ಸ್ವೀಕರಿಸಿದ್ದಾರೆ. ಎಂಬ ಪ್ರಶ್ನೆಗಳು ಇವರ ಕತೆಗಳ ಹಿನ್ನೆಲೆಯಲ್ಲಿ ಕೇಳಿಕೊಳ್ಳಲು ಅವಕಾಶವಿದೆ. ಹಾಗೆ ನೋಡಿದರೆ ಬಸವಣ್ಣ ಕಂಡ ಸಮಾಜದ ಚಿಂತನೆಗಳು ಇವರ ಕತೆಗಳಲ್ಲೂ ಕೂಡಾ ಚದುರಿದಂತೆ ಕಾಣಿಸುತ್ತಾ ಹೋಗುತ್ತವೆ. ಚಳುವಳಿಯ ಚಿಂತನೆಗಳು ಅಮರೇಶರು ಸೃಷ್ಟಿಸಿದ ಗ್ರಾಮಲೋಕದಲ್ಲಿ ಚದುರಿದಂತೆ ಕಂಡರೂ ಈ ನೆಲದ ಚಿಂತನಾಕ್ರಮವೊಂದು ಜನಪದರ ಲೋಕಗ್ರಹಿಕೆಯಲ್ಲಿ ಲೀನವಾಗಿರುವುದು ಮುಖ್ಯಸಂಗತಿ. ಈ ಕತೆಗಳು ಕಾಲವನ್ನು ಮತ್ತು ಬದುಕನ್ನು ಏಕತ್ರಗೊಳಿಸುವ ಪರಿಯನ್ನು ಕೂಡಾ ಗಮನಿಸಬೇಕಾದ ಸಂಗತಿ.

ಕಾಲಗರ್ಭದಲ್ಲಿ ಜೀವಂತವಾಗಿರುವ ದೇಸೀ ಚಿಂತನಕ್ರಮಗಳು ವರ್ತಮಾನದ ಬದುಕಿನ ಪರಿಪ್ರೇಕ್ಷಕನಕ್ಕೂ ಬಂದು ತಲುಪುತ್ತದೆ. ಇವರ ಎಲ್ಲಾ ಕತೆಗಳು ಒಂದಿಲ್ಲ ಒಂದು ಕಾರಣಕ್ಕೆ ಜಮೀನ್ದಾರಿ ಪದ್ಧತಿ, ದಲಿತ ಜಗತ್ತು ಹಾಗು ಪಲ್ಲಟವಾಗುತ್ತಿರುವ ಗ್ರಾಮದ ಬದುಕಿನ ವಿನ್ಯಾಸಗಳು ಇವು ಮುಪ್ಪುರಿಗೊಳ್ಳುತ್ತಲೇ ತನ್ನದೇ ಆದ ಮುಗ್ಧತೆಯನ್ನು ಈ ಕಥಾಜಗತ್ತು ಉಳಿಸಿಕೊಳ್ಳಲು ಪ್ರಯತ್ನಿಸಿದೆ.ಮಣ್ಣು ಸೇರಿತು ಬೀಜ ಸಂಕಲನದ ಅನೇಕ ಕತೆಗಳು ಹಾಗು ಉಳಿದ ಅನೇಕ ಕಡೆ ಚಿತ್ರಿತಗೊಂಡಿರುವುದು. ಮೇಲುಸಮುದಾಯದ ಮತ್ತು ಕೆಳಸಮುದಾಯಗಳ ಕಾಮಸಂಬಂಧಿ ವಿಚಾರಗಳು ಅದರಲ್ಲೂ ಮಾದರ ಜಾತಿಗಳ ಹೆಣ್ಣು ಮಕ್ಕಳನ್ನು ಜಮೀನ್ದಾರಿಗಳು ನಡೆಸಿಕೊಳ್ಳುವ ಬಗೆ ಹಾಗೆ ನೋಡಿದರೆ ಅಮರೇಶ್ ಅವರ ಕತೆಗಳು ಬಹುಪಾಲು ದಲಿತ ಹೆಣ್ಣು ಮಕ್ಕಳ ಬದುಕಿನ ಯಾನವೇ ಆಗಿದೆ. ಮೇಲು ವರ್ಗದ ಹೆಣ್ಣು ಮಕ್ಕಳು ಮಾದರ ಗಂಡಸರನ್ನು ಒಪ್ಪಿಕೊಳ್ಳುವುದು ಕೆಲವು ಕಥೆಗಳಲ್ಲಿ ಮಾತ್ರ. ಮನುಷ್ಯನ ಮನಸ್ಥಿತಿಯನ್ನು ಸಾಮಾಜಿಕ ಆಶಯಗಳನ್ನು ಅಮರೇಶ್ ಅವರು ಶೋಧಿಸುವ ಕ್ರಮ ಈ ಬಗೆಯ ಸಂಭಂಧಗಳ ಮೂಲಕ ಎನ್ನಬಹುದು. ಇವುಗಳ ನಡುವೆ ಭಾರತೀಯ ಗ್ರಾಮಲೋಕ ಇಂದಿಗೂ ಆರೋಗ್ಯಕರವಾಗಿ ಉಳಿಸಿಕೊಂಡು ಬರುತ್ತಿರುವ ಕೂಡೊಟ್ಟಿನ ಬದುಕು. ಈ ಬಗೆಯ ಬದುಕನ್ನು ಅಮರೇಶ್ ಅವರ ಕತೆಗಳು ಸದ್ದಿಲ್ಲದೆ ಒಳಗು ಮಾಡಿಕೊಂಡಿವೆ. ದಾರಿಮೂಡಿಸುವ ಹೆಜ್ಜೆ ಕತೆಯಲ್ಲಿ ಬರುವ ತಿಮ್ಮಕ್ಕನ ಬದುಕು ಇದಕ್ಕೆ ಬಹುದೊಡ್ಡ ನಿದರ್ಶನ. ತಿಮ್ಮಕ್ಕನ ಜಾತಿಯೂ ಕೂಡಾ ಅನುಮಾನಾಸ್ಪದ ರೀತಿಯಲ್ಲಿ ಕಲ್ಪಿತಗೊಳ್ಳುವ ಸಂದರ್ಭದಲ್ಲಿ ಸ್ವತ: ತಿಮ್ಮಕ್ಕ ಮಗ ರಾಚಪ್ಪನ ಜಾತಿಯ ವಿಚಾರದಲ್ಲಿ ಜಾತಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ.

ಅಮರೇಶ್ ಅವರ ಕತೆಗಳಲ್ಲಿ ಜಾತಿಯ ಪ್ರಶ್ನೆಗಳು ಗಂಭೀರವಾಗಿ ಕಾಣಿಸಿಕೊಳ್ಳುವುದು. ತಾತ್ವಿಕವಾಗಿ ಬಸವಣ್ಣನ ವಚನ ಚಳುವಳಿಯ ಹಿನ್ನೆಲೆಯಲ್ಲಿ ಒಂದು ಕಡೆಯಾದರೆ ಅಪ್ರಜ್ಞಾಪೂರ್ವಕವಾಗಿಯೇ ಆ ಪ್ರಶ್ನೆಯನ್ನು ಅವರ ಪಾತ್ರಗಳು ಎದುರಿಸುವುದು ಮತ್ತೊಂದು ಕಡೆ. ತಿಮ್ಮಕ್ಕನ ಬಾಳು ಈ ಬಗೆಯದೇ. ಈ ಕತೆಯಲ್ಲಿ ತಪ್ಪಿಸಿಕೊಂಡು ಓಡಾಡುವ ಎಮ್ಮೆ ವೀರ್ಯವನ್ನು ತುಂಬುವ ಕೋಣ ಸಾಂಕೇತಿಕವಾಗಿ ಕೆಲಸಮಾಡಿದೆ. ತಿಮ್ಮಕ್ಕ ಮಠದ ವ್ಯವಸ್ಥೆಗೆ ತುತ್ತಾದವಳು. ತನ್ನ ಮಕ್ಕಳು ಯಾರಿಗೆ ಹುಟ್ಟಿವೆ ಎಂಬುದನ್ನು ಕೂಡಾ ಲೆಕ್ಕಿಸದೆ ಬದುಕನ್ನು ಸಾಗಿಸುತ್ತಾಳೆ. ಈ ರೀತಿಯ ಬದುಕನ್ನು ಬಾಳಿದ ತಿಮ್ಮಕ್ಕ ತನ್ನ ಮಗಳು ಮಾದೇವಿ ಮುಸ್ಲಿಂ ಹುಡುಗ ಹುಸೇನಿಯಿಂದ ಗರ್ಭ ಕಟ್ಟಿಸಿಕೊಂಡಾಗ ತಿಮ್ಮಕ್ಕ ಮರುಮಾತನಾಡದೆ ಹುಸೇನಿಗೆ ಮಾದೇವಿಯನ್ನು ಮದುವೆ ಮಾಡಿಸಲು ಸಿದ್ಧಮಾಡುತ್ತಾಳೆ. ಆದರೆ ಕತೆ ತಿಮ್ಮಕ್ಕ ತೀರ್ಮಾನಕ್ಕೆ ಬರುತ್ತಾಳೆ ವಿನ: ಮದುವೆ ಮಾಡಿದಂತೆ ಚಿತ್ರಿತಗೊಂಡಿಲ್ಲ.ತಮಂಧದ ಕೇಡು ಕತೆಯಲ್ಲಿ ದುರುಗನ ಬದುಕು ಕೂಡಾ ಇದೇ ಬಗೆಯದೇ. ಆದರೆ ತಿಮ್ಮಕ್ಕನಿಗೆ ಇರುವ ಧ್ಯೆರ್ಯ ದುರುಗನಿಗೆ ಇಲ್ಲವಾಗಿದೆ ಗೌಡರ ಶಾಂತಗೌಡನ ಜೀತದಾಳು ದುರುಗ. ಮಾನಸಿಕವಾಗಿ ಗೌಡರ ಕುಟುಂಬಕ್ಕೆ ಒಗ್ಗಿಕೊಂಡಿರುವುದು ಮಾತ್ರವಲ್ಲದೆ ತನ್ನ ಜೀವಮಾನವೆಲ್ಲ ಗೌಡರ ವ್ಯಕ್ತಿತ್ವದಲ್ಲೇ ಲೀನವಾಗಿಸಿಕೊಂಡಿದ್ದಾನೆ. ದುರುಗನ ಮಗ ಚೆನ್ನ ಗೌಡರ ಮಗಳನ್ನು ವರಿಸಿದ್ದಾನೆ. ಮದುವೆಯಾಗಲೂ ಸಿದ್ಧವಾಗಿರುವಾಗ ಗೌಡ ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾನೆ. ಆದರೆ ಗೌಡ ದುರುಗನ ಹೆಂಡತಿಯಾದ ಚಂದವ್ವನನ್ನು ಸೇರಿದ್ದ. ದೇಹ ಸಂಬಂಧಗಳು ಕೂಡಾ ಜಾತಿಯನ್ನೇ ಅವಲಂಬಿಸಿವೆ ಎನ್ನುವುದನ್ನು ಇಲ್ಲಿ ಮನಗಾಣಬಹುದು.

ಚಂದವ್ವನ ದೇಹ ಕೆಳಜಾತಿಯದು ಎಂಬ ಕಾರಣಕ್ಕೆ ಗೌಡ ಆ ದೇಹವನ್ನೂ ಆಕ್ರಮಿಸಿದ. ಅಕ್ಕಮ್ಮನ ದೇಹ ಮೇಲು ಜಾತಿಯದು ಎಂಬ ಕಾರಣಕ್ಕೆ ಚೆನ್ನ ಮುಟ್ಟುವ ಹಾಗಿಲ್ಲ. ಇಲ್ಲಿಯೂ ಕೂಡಾ  ಇವರಿಬ್ಬರು ವಿವಾಹವಾಗುವ ಸೂಚನೆಗಳು ನಮಗೆ ಆಗುವುದಿಲ್ಲ. ವಚನ ಚಳುವಳಿ ಎತ್ತಿಕೊಂಡ ಜಾತಿ ಪ್ರಶ್ನೆಗಳು ಈ ಬಗೆಯ ಕತೆಗಳಲ್ಲಿ ನಮ್ಮ ಕಣ್ಣ ಮುಂದೆ ಬಂದು ನಿಂತು ಕೊಳ್ಳುತ್ತವೆ. ಈ ವಿಚಾರದಲ್ಲಿ ಚಲನೆಯ ಕನಸು ಕಂಡಿದ್ದ ಬಸವಣ್ಣನ ಕನಸುಗಳು ಕೂಡಾ ಚದುರಿದಂತೆ ಕಾಣುತ್ತವೆ. ಅಮರೇಶ್ ಅವರ ಕಲೆಗಾರಿಕೆ ಮತ್ತು ಗ್ರಾಮಲೋಕದ ವಾಸ್ತವ ಚಿತ್ರಗಳು ಇದಕ್ಕೆ ದೊಡ್ಡ ಸಾಕ್ಷಿಯಾಗಿವೆ. ಆದರೆ ‘ಮನ್ನಿಸಿ ಮೂಕಾದ ಮೇಲೆ’ ಎಂಬ ಕತೆಯಲ್ಲಿ ಮಾತ್ರ ಮೇಲುವರ್ಗದ ಮಾದೇವಿ ಬ್ಯಾಡರ ಹುಡುಗ ನಾಗರಾಜನ ಮದುವೆ ಆಯಿತು ಎಂಬ ಸೂಚನೆ ಸಿಗುತ್ತದಾದರೂ ಕೂಡಾ ಅವರ ಬದುಕು ಸ್ಪಷ್ಟವಾಗುವುದಿಲ್ಲ. ಮಲ್ಲಿಕಾರ್ಜುನನ ಓದು ತನ್ನ ಬದುಕಿನಲ್ಲಿ ಏನನ್ನು ಕಲಿಸಿತು ಎಂಬ ಪ್ರಶ್ನೆಯನ್ನು ಅವನೇ ಕೇಳಿಸಿಕೊಂಡಾಗ ಮುಗ್ಧಲೋಕವನ್ನು ಕಡೆಗಣಿಸುವುದು ಕಂಡುಬರುತ್ತದೆ. ಮಾದೇವಿ ಓದಿರುವ ಮಲ್ಲಿಕಾರ್ಜುನನನ್ನು ನಾನು ಬ್ಯಾಡರ ಹುಡುಗನನ್ನು ಮದುವೆಯಾಗಲು ಸಿದ್ಧನಿದ್ದೆ ಎಂದು ಧ್ಯೆರ್ಯವಾಗಿ ಹೇಳುವಾಗಲೇ ತನ್ನ ಬಿರುಕುಗಳು ಅರಿವಾಗುವುದು. ಕುಲವೆನ್ನುವುದು ತಮ್ಮ ಬದುಕಿನಲ್ಲಿ ಮನಸ್ಥಿತಿಗಳಿಗೆ ಉಂಟು ಮಾಡಿದ ಪಲ್ಲಟಗಳನ್ನು ತಾತ್ವಿಕವಾಗಿ ಕಟ್ಟಿಕೊಡಲು ಈ ಕತೆಗಳು ಪ್ರಯತ್ನಿಸುತ್ತವೆ.’ಧರೆ ಉರಿದರೆ’ ಕತೆಯಲ್ಲಿನ ಪರಕ್ಕನ ಬದುಕು ವಿಚಿತ್ರ ಬಗೆಯದು. ಮಕ್ಕಳ ಲೋಕವನ್ನು ಕಟ್ಟಿಸಿಕೊಡುವ ಧಾಟಿಯಲ್ಲಿ ಸಾಗಿದರೂ ಪರಕ್ಕನ ವೈಯುಕ್ತಿಕ ಬದುಕನ್ನು ಜಮೀನ್ದಾರಿ ಲೋಕ ರಾಜಕೀಯ ಕಕ್ಷೆಗೆ ಮತ್ತು ಲೈಂಗಿಕವಾಗಿ ಆಕೆಯ ದೇಹವನ್ನು ನಾಶ ಮಾಡುತ್ತದೆ.

ಪರಕ್ಕ ಮಾನಸಿಕವಾಗಿ ಅಸ್ವಸ್ಥತೆಯಿಂದ ಕೂಡಿದ್ದರಿಂದ ಸಮಾಜವನ್ನು ಎಚ್ಚರಿಸಿ ಹೋಗುವುದು ಮೊಟಕುಗೊಳ್ಳುತ್ತದೆ. ಕಾಗೀಕೂಟದ ಸೊಮ್ಮಿಯ ಬದುಕು ಕೂಡಾ ಈ ಬಗೆಯದೇ ಆಗಿದೆ. ಅಮರೇಶ್ ಅವರ ಕತೆಗಳಲ್ಲಿ ಬರುವ ಗ್ರಾಮಲೋಕದ ದಲಿತ ಹೆಣ್ಣು ಮಕ್ಕಳು ತಮ್ಮ ಬದುಕನ್ನು ನಿರ್ಮಿಸಿಕೊಳ್ಳುವುದು ದೇಹ ಸಂಬಂಧಗಳ ಮುಖೇನವೇ ಅನಿಸುತ್ತದೆ. ಸೊಮ್ಮಿ ತನ್ನ ಬಾಲ್ಯದ ಗಂಡನೆಂದು ಬಿಂಬಿಸಿದ್ದ ಲಿಂಗನನ್ನು ಮದುವೆಯಾಗುವುದು ಸಂಶಯವಾದಾಗ ಮೇಲು ಜಾತಿಯ ಮಾದೇವನೊಂದಿಗೆ ಕೂಡಿಬರುತ್ತಾಳೆ. ಈ ಬಗೆಯ ಸಂದರ್ಭಗಳಲ್ಲಿ ಅಮರೇಶ್ ಅವರು ದೈಹಿಕ ಭಾಷೆಯನ್ನು ಬಳಸುವಾಗ ಅತಿರೇಕಕ್ಕೂ ಹೋಗುತ್ತಾರೆ. ದಲಿತ ಹೆಣ್ಣು ಮಕ್ಕಳಿಗೆ ಲೋಕದ ಬಗೆಗಿನ ಚಿಂತನೆ ಅಡಗಿರುವುದು ಎಲ್ಲಿ? ಒಂದು ಕಾಲಕ್ಕೆ ತಮ್ಮ ಇಡೀ ಬದುಕು ಗ್ರಾಮದ ಮೇಲುವರ್ಗದ ಬಯಕೆಗಳಿಗೆ ಸೀಮಿತವಾಗಿತ್ತು. ಎದುರಿಗಿರುವ ಗಂಡಸರು ಇಷ್ಟವಿಲ್ಲದಿದ್ದರೂ ಜಾತಿಯ ಕಾರಣದಿಂದ ಅವರನ್ನು ಒಪ್ಪಿಕೊಳ್ಳುವುದುಂಟು. ಕರ್ನಾಟಕದ ಎರಡು ಪ್ರಬಲ ಜಾತಿಗಳಾದ ಲಿಂಗಾಯಿತ ಮತ್ತು ಗೌಡರು ಉಳಿದ ಸಮುದಾಯಗಳ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳು ಮಾತ್ರವಲ್ಲ ದಲಿತರ ಬದುಕಿನ ಪಲ್ಲಟಗಳನ್ನೂ ಅಮರೇಶ್ ಅವರ ಕತೆಗಳು ಗರ್ಭೀಕರಿಸಿಕೊಂಡಿವೆ. ಮಾದರ ಗಂಗವ್ವನನ್ನು ತೋಟದ ಮನೆಯಲ್ಲಿಟ್ಟುಕೊಂಡ ಬಸವರಾಜಪ್ಪ ತನ್ನ ಜಾತಿಯ ಬಲದಿಂದ ಗಂಗವ್ವನ ಸ್ವಾತಂತ್ರ್ಯವನ್ನು ಕಸಿದಿದ್ದಾನೆ. ಆದರೆ ದಲಿತ ಹೆಣ್ಣು ಮಕ್ಕಳು ತಾವೇ ಮೇಲುವರ್ಗದ ಗಂಡಸರನ್ನು ವರಿಸಿ ಹೋಗಿರುವ ನಿದರ್ಶನಗಳು ನಮಗೆ ದಕ್ಕುವುದಿಲ್ಲ. ಇನ್ನು ಮೇಲುವರ್ಗದ ಸ್ತ್ರೀಯರು ಕೆಲಸಮುದಾಯದ ಪುರುಷರನ್ನೂ ಒಪ್ಪಿ ಕೊಳ್ಳುವುದರ ಬಗ್ಗೆ ಮಾತನಾಡುವುದು ಅಷ್ಟೇ ಮುಖ್ಯವಾದ ಸಂಗತಿ.

‘ಹೊತ್ತು ಮೂಡುವ ಸಮಯ’ ಕತೆಯ ಅಕ್ಕಮ್ಮನ ಬಾಳು ಈ ಬಗೆಯದು. ದೈಹಿಕವಾಗಿ ಅಸಮರ್ಥನಾದ ಗೌಡ ಅಕ್ಕಮ್ಮನ ಬಯಕೆಯನ್ನು ಪೂರೈಸಲಾರದೆ ಹೋಗುತ್ತಾನೆ. ಅಕ್ಕಮ್ಮ ಮಾದರಲಿಂಗನನ್ನು ಬಯಸಿದದ್ದರೂ ದೇಹಗಳು ಕೂಡುವ ಸಂದರ್ಭದಲ್ಲಿ ಬಯಲಾಗಿ ಲಿಂಗನ ಕೊಲೆಯಾಗುತ್ತದೆ. ಅಕ್ಕಮ್ಮ ಲಿಂಗನ ನಂತರ ಭೀಮನೆಂಬ ಆಳನ್ನು ಬಯಸಿದರೂ ಗೌಡರ ಭೀತಿಯಿಂದ ಹಿಂಜರಿಯುತ್ತಾಳೆ. ಆದರೂ ಅಕ್ಕಮ್ಮನ ಮಾತುಗಳು ಇಲ್ಲಿ ಬೇರೊಂದು ಆಲೋಚನಾ ಕ್ರಮಕ್ಕೆ ತಿರುಗುತ್ತವೆ. ಲಿಂಗಾ . . . ದೈವಕ್ಕೆ ಕರುಣೆಯಿಲ್ಲವೋ ನಿನ್ನ ಕರ್ಕಂಡೋಗಿ ದೋಗಿ ಹಂತಿ ಗುಂಡಿಗೆ ಹಾಕಿ ತುಳಿಸಿ ಬಿಟ್ಟರಲ್ಲೋ ನನ್ನನ್ನು ಅದೆಂಗ ಬಿಟ್ಟನೋ ನಿಮ್ಮ ಕಟುಗನಂಥ ಗೌಡ ಎಂದು ಸ್ವಗತ ರೂಪದಲ್ಲಿ ಕೇಳಿಕೊಂಡರೂ ಗೌಡನ ಬದುಕಿನ ಬಿರುಕುಗಳು ಹೇಡಿತನಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ಅಮರೇಶ್ ನುಗಡೋಣಿ ಅವರ ಕತೆಗಳಲ್ಲಿ ಈ ಬಗೆಯ ಜಾತಿ ಸಂಕರದ ವಿಧಾನಗಳು ಹಾಗು ಅವುಗಳು ಒಡ್ಡಿದ ಸವಾಲು ಸಮಸ್ಯೆಗಳನ್ನು ನೋಡಿದರೆ, ಮತ್ತೊಂದು ಕಡೆ ಗ್ರಾಮಲೋಕದಲ್ಲಿ ಜಾತಿಗಳು ಧರ್ಮಗಳು ಭಿನ್ನವಾಗಿದ್ದರೂ, ಕೂಡೊಟ್ಟಿನ ಬದುಕನ್ನು ಕಾಣಬಹುದು. ಇವರ ಕತೆಗಳಲ್ಲಿ ಮನುಷ್ಯನನ್ನು ಒಂದು ಮಾಡುವುದಕ್ಕೆ ಯಾವುದೇ ಜಾತಿ ಧರ್ಮ ಅಡ್ಡಿಯಾಗುವುದಿಲ್ಲ. ಮಾದರರು, ಗೌಡರು, ಲಿಂಗಾಯಿತರು, ಉಪ್ಪಾರರು, ಮುಸ್ಲಿಮರು, ಎಲ್ಲರೂ ಬರುತ್ತಾರೆ. ಒಟ್ಟಿಗೆ ಬದುಕುತ್ತಾರೆ. ಮನುಷ್ಯತ್ವದ ಕಾಲಯಾನದಲ್ಲಿ ಏಕತ್ರಗೊಳ್ಳುತ್ತಾರೆ.

ಇದು ಭಾರತದ ಬದುಕಿನ ವಿಧಾನವೂ ಕೂಡಾ. ಜಮೀನ್ದಾರ ಜೀತದಾಳುಗಳ ಸಂಭಂದ ಕೇವಲ ಅಧೀನದ್ದು ಎಂದೆನಿಸದೆ ಮಾನವೀಯತೆಯ ಕಕ್ಷೆಯಲ್ಲೇ ಬರುತ್ತದೆ. ಇವರ ನಡುವೆ ಸಮಾಜವನ್ನು ಎಚ್ಚರಿಸುವ ಮಠಗಳು ತಾತಂದಿರು ಬರುತ್ತಾರೆ. ಇವರು ಸಂಪೂರ್ಣವಾಗಿ ವಚನ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು. ತಿಮ್ಮಕ್ಕನ ಬದುಕು ಮಠದ ಅಂಗಳದಲ್ಲಿ ಅರಳಿದರೂ ಆಕೆ ಬದುಕುವುದು ಒಂಟಿಯಾಗಿ. ತನ್ನ ಮಗಳು ಮುಸ್ಲಿಂ ಹುಡುಗ ಹುಸೇನಿಯನ್ನು ಇಷ್ಟಪಟ್ಟಾಗ ಯಾವುದೇ ತಕರಾರು ಇಲ್ಲದೆ ಆ ಸಂಬಂಧವನ್ನು ಒಪ್ಪಿಕೊಳ್ಳುತ್ತಾಳೆ,’ನೆಲದಮರೆಯನಿಧಾನ’ ಕತೆ ಈ ಬಗೆಯ ಕೂಡು ಬದುಕಿನ ಸಂಬಂಧಗಳನ್ನು ಅದ್ಭುತವಾಗಿ ಅನಾವರಣಗೊಳಿಸುತ್ತದೆ. ಸಿದ್ಲಂಗಪ್ಪ ಮತ್ತು ತಂಗಿ ಶಿವಮ್ಮ ಲಿಂಗಮ್ಮನಿಗೆ ಮಕ್ಕಳಾದರೂ ಆಕೆಯ ಇಚ್ಚಿತ ಆಶಯಗಳನ್ನು ಪೂರೈಸುವುದಿಲ್ಲ. ಮಾದರ ಯಲ್ಲಪ್ಪ ನನ್ನ ಮಗನಾಗಿ ಯಾಕೆ ಹುಟ್ಟಲಿಲ್ಲ? ಎಂದು ಲಿಂಗಮ್ಮ ಕೇಳಿದರೆ ಯವ್ವಾ ಲಿಂಗಮ್ಮವ್ವಾ ಇದೆಲ್ಲಾ ನಾವು ಮಾಡಿಕೊಂಡಿದಂತವ್ವ ಮನುಷ್ಯರೆಲ್ಲಾ ಒಂದೇ ಅಂತ ಬಲ್ಲವರು ಹೇಳ್ತಾರವ್ವ ಶರಣ್ರು ಮಾದರ ಮನ್ಯಾಗ ಹೋಗಿ ಉಂಡ್ರಂತವ್ವ ಎಂದು ಯಲ್ಲಪ್ಪ ಹೇಳುತ್ತಾನೆ. ಈ ಮಾತುಗಳಲ್ಲಿ ಶರಣ್ರು ಈ ವಿಧಾನದಲ್ಲಿ ಪ್ರಭಾವ ಬೀರಿದ್ದಾರೆ ಎನ್ನುವುದು ತಿಳಿಯುತ್ತದೆ. ಲಿಂಗಮ್ಮ ಸಾಯುವಾಗ ತನ್ನ ಬಂಗಾರದ ಸರವನ್ನು ಓದುವ ಎಲ್ಲಪ್ಪನ ಮಗನಿಗೆ ಕೊಡುವುದಾಗಿ ಊರಗೌಡಗೆ ಹೇಳುತ್ತಾಳೆ. ನಮ್ಮ ಗ್ರಾಮ ಪ್ರಪಂಚದಲ್ಲಿ ಅಸ್ಪ್ರಶ್ಯತೆ ಎನ್ನುವುದು ಎಷ್ಟು ಇತ್ತೋ ಅಷ್ಟೇ ಬಗೆಯಲ್ಲಿ ಮಾನವೀಯತೆ ಅಡಗಿತ್ತು. ಆದರೆ ಅದನ್ನು ಒಡೆಯುತ್ತಿರುವುದು ರಾಜಕಾರಣ ಎನ್ನುವುದು ಇವರ ಕತೆಗಳಲ್ಲೇ ಅರಿವಾಗುತ್ತದೆ.

ಸುಲ್ತಾನಮ್ಮ ಮುಸ್ಲಿಂರಾದರೂ ಮಾನಸಿಕವಾಗಿ ಅಸ್ವಸ್ಥಳಾದ ಮೂಕಳಾದ ಪರಕ್ಕನನ್ನು ತನ್ನ ಸ್ವಂತ ಮಗಳಂತೆ ಸಾಕುವ ಪರಿ ‘ಕುಡಿಬಂದ ದೀಪಗಳು’ ಕತೆಯಲ್ಲಿ ಹಿಂದು ಹುಡುಗಿ ದೇವಿಯನ್ನು ಮುಸ್ಲಿಂ ದಂಪತಿಗಳು ಸಾಕುವ ಪರಿ ಭಾರತೀಯ ಬದುಕಿನ ಸೌಹಾರ್ದತೆಯನ್ನು ತಿಳಿಸುತ್ತದೆ. ಜಾತಿಯ ಸಮಸ್ಯೆಗಳು ಎಷ್ಟೇ ಸಂಕೀರ್ಣಗೊಂಡಿದ್ದರೂ ಸಂಬಂಧಗಳ ಸಂಕರ ಮತ್ತು ಮಾನವತೆಯ ಬೇರುಗಳು ಕೊಳೆತು ಹೋಗುವುದು ಕಷ್ಟವೆಂಬುದು ‘ಎ ದಿಲ್ ಮಾಂಗೆ ಮೋರ್’ ಕತೆಯು ಚೆನ್ನಾಗಿ ಕಟ್ಟಿಕೊಡುತ್ತದೆ. ಹುಸೇನವ್ವ ಹೋಟೆಲ್ ನಡೆಸುವ ಬಡ ಹೆಂಗಸು. ಆದರೆ ಅನೇಕ ಹುಡುಗರಿಗೆ ಬದುಕು ಕೊಟ್ಟವಳು. ಈ ಕತೆ ಏಕಕಾಲದಲ್ಲಿ ಕ್ರಿಕೆಟ್ ಲೋಕದ ಆಧುನಿಕ ಜೂಜು ಮತ್ತು ಹಳ್ಳಿಯ ಜಾತಿ ಸಮಸ್ಯೆ ಸಾಮರಸ್ಯವನ್ನೂ ಕಟ್ಟಿಕೊಢುತ್ತದೆ. ಖಾಜವಲಿಯನ್ನು ಊರು ಗುಮಾನಿಯಿಂದ ನೋಡಿದರೆ ಖಾಜವಲಿ ಆಶ್ಚರ್ಯದ ರೀತಿಯಲ್ಲಿ ನಡೆದುಕೊಳ್ಳುತ್ತಾನೆ. ಕ್ರಿಕೆಟ್ ಜೂಜಾಟದಿಂದ ಬಂದ ಹಣವನ್ನು ಹುಸೇನವ್ವ ಹುತಾತ್ಮ ಸೈನಿಕ ಚಂದ್ರಪ್ಪನಿಗೆ ನೀಡುತ್ತಾಳೆ. ತನ್ನ ಬಳಿಯಿದ್ದ ಚಿದಾನಂದನಿಗೆ ಓದುವಂತೆ ಹೇಳುತ್ತಾಳೆ. ಈ ಬಗೆಯ ಸಂಬಂಧಗಳು ಇಂದಿಗೂ ಜೀವಂತವಾಗಿವೆ. ವಾಣಿಜ್ಯೀಕರಣಗೊಳ್ಳುತ್ತಿರುವ ಭೂಮಿ, ದಲಿತರ ಆಧುನಿಕ ಪ್ರಶ್ನೆಗಳು, ರಾಜಕಾರಣ, ಬಸವಣ್ಣನ ಸಾಮಾಜಿಕ ಆಶಯಗಳು, ಆಧ್ಯಾತ್ಮದ ಹುಡುಕಾಟಗಳನ್ನು ಅಮರೇಶ್ ಅವರ ಕತೆಗಳು ಬೇರೆ ಬೇರೆ ಜಾಗಗಳಲ್ಲಿ ಶೋಧಿಸುತ್ತವೆ. ಸವಾರಿಕತೆಯು ಏಕಕಾಲದಲ್ಲಿ ಗ್ರಾಮಲೋಕವು ನಂಬದ ಕಾಯಕದ ಮೌಲ್ಯಗಳು ಮತ್ತು ರಾಜಕಾರಣದ ಕುತಂತ್ರಗಳು ಮುಖಾಮುಖಿಯನ್ನಾಗಿಸುತ್ತದೆ. ಒಂದು ಕಡೆ ಸಾವನ್ನೇ ನಂಬಿಕೊಂಡು ಬದುಕುತ್ತಿರುವ ವಜ್ರಪ್ಪನಿದ್ದಾನೆ. ಆಶ್ಚರ್ಯಕರವಾಗಿ ವಾಸ್ತವವಾಗುವ ಆತನ ಕನಸುಗಳು ಇವೆ. ಮತ್ತೊಂದು ಕಡೆ ಗ್ರಾಮ ಸಮಾಜವನ್ನು ವಿಘಟಿಸುವ ವಿಕೃತ ರಾಜಕೀಯ ಮನಸ್ಸು ಶಿವಪ್ಪಗೌಡನದು.

ಊರಿನ ಭೂಮಿಯನ್ನು ಖರೀದಿಸಿ ವಿದೇಶಿ ಕಂಪೆನಿಯ ಪ್ರವೇಶಕ್ಕೆ ಹಾತೊರೆಯುತ್ತಾನೆ. ರೈತರು ತಮ್ಮ ಭೂಮಿಯನ್ನು ಮಾರಲು ಸಿದ್ದವಾಗುತ್ತಾರೆ. ಇವರನ್ನು ಎಚ್ಚರಿಸಲು ಸಿದ್ದಪ್ಪನ ಹೋರಾಟ ಫಲ ನೀಡುವುದಿಲ್ಲ. ವರ್ತಮಾನದ ಬದುಕಿನ ಸಂಕಟಗಳನ್ನು ಸವಾರಿಕತೆ ಎದುರುಗೊಳ್ಳುತ್ತದೆ. ವಜ್ರಪ್ಪ ನಂಬುವ ನಂಬಿಕೆಗಳು ಹುಸಿಯಾಗುವುದಿಲ್ಲ. ಸಿದ್ದರಮಾತುಗಳನ್ನು ನಂಬಿದ್ದರೆ ಏನಾಗುತ್ತಿತ್ತು. ಎಂಬುದರ ಬಗ್ಗೆ ಕತೆ ವ್ಯಂಗ್ಯವನ್ನು ಹೇಳುತ್ತದೆ. ಆಧುನಿಕತೆ ಜತೆ ತತ್ವ ಪದಗಳ ಪ್ರಭಾವ ಮತ್ತು ಅವಧೂತರ ಬದುಕಿನ ಕ್ರಮಗಳು ಸದ್ದಿಲ್ಲದಂತೆ ಜಾಗ ಪಡೆದಿದೆ, ಒಂದು ರೀತಿಯಲ್ಲಿ ಇವರ ತತ್ವ ಯಾವ ಬಗೆಯದು? ವಿದೇಶಿ ಕಂಪನಿಗಳನ್ನು ವಿರೋಧಿಸುವ ಗುಣಗಳನ್ನು ಗ್ರಾಮಲೋಕದ ಹಿರಿಯರಾದ ಸಿದ್ದರು ಮತ್ತು ಗುರುಗಳಿಂದ ವಜ್ರಪ್ಪನಿಂದ ಪಡೆಯಲಾಗಿದೆ. ‘ಕಣ್ಣು ಮುಕ್ಕಾದ ಬೀಜಗಳು’ ಕತೆಯಲ್ಲಿ ಬದಲಾಗುತ್ತಿರುವ ದೈವಪಾಲು ವಿಧಾನಗಳನ್ನು ಹಳ್ಳಿಯ ಬದುಕಿನ ಪಲ್ಲಟಗಳನ್ನು ಯಶಸ್ವಿಯಾಗಿ ಕಟ್ಟಿಕೊಡುತ್ತದೆ. ಮಾನವ ಸಂಪನ್ಮೂಲವನ್ನು ಕಡೆಗಣಿಸುವ ಯಂತ್ರನಾಗರಿಕತೆಯ ಭೀಕರತೆಯನ್ನು ಹೇಳುತ್ತದೆ.ಸಿದ್ಧರ ಗುಡ್ಡದ ಬದುಕು ಕೆಲಸವಿಲ್ಲದೆ ಅಲೆಮಾರಿಯಾಗುತ್ತದೆ. ಅಮರೇಶ್ ಅವರ ಕತೆಯ ತಂತ್ರಗಾರಿಕೆ ಗೆಲ್ಲುವುದು ಅವರ ವೈಯುಕ್ತಿಕ ಬದುಕನ್ನು ಕಟ್ಟುತ್ತಲೇ ಅದನ್ನು ಅಪ್ಪಿಕೊಳ್ಳುವ ಬಹಿರಂಗದ ಸಂಗತಿಗಳನ್ನು ಜೋಡಿಸುವಾಗ ‘ಜೋಗುಳನಿಂದಲ್ಲದೆ’ ಕತೆಯನ್ನೇ ತೆಗೆದುಕೊಳ್ಳಬಹುದು. ಮಾಯಪ್ಪನು ಮಾದರ ಲಿಂಗ ಯೋಗಿಯಾದರೆ ತಾನು ಯಾಕಾಗಬಾರದು ಎಂಬ ಹಠದಿಂದ ಸಿದ್ಧರ ನಡುವೆ ತನ್ನ ಮನಸ್ಸನ್ನು ದಂಡಿಸಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಅಮರೇಶ್ ಅವರ ಚಿಂತನಾಕ್ರಮ ವಚನ ಮತ್ತು ಶೂನ್ಯ ಸಂವಾದನೆಗಳ ಕೆಲವು ವಾಗ್ವಾದಗಳನ್ನ ನೆನಪಿಗೆ ಬಂದರೂ ಅಂತಿಮವಾಗಿ ಕತೆ ವರ್ತಮಾನದಲ್ಲೂ ಕಾಯಕದ ಮಹತ್ವವನ್ನು ಅದ್ಭುತವಾಗಿ ಹೆಣೆಯುತ್ತದೆ ಎನ್ನಬಹುದು.

ಮಾಯಪ್ಪ ಯೋಗಿಗಳಿಂದ ಪಡೆಯಲಾರದ ಬದುಕಿನ ತತ್ವವನ್ನು ಮುಗ್ಧ ನೀಲಕ್ಕನಿಂದ ಪಡೆದುಕೊಳ್ಳುತ್ತಾನೆ. ನೀಲಕ್ಕನ ಸಂಸಾರದ ಬದುಕು ವಚನಕಾರರು ನಂಬಿದ ತತ್ವಜ್ಞಾನವೇ ಆಗಿದೆ. ಕಾಯಕದಲ್ಲೇ ಒಂದು ಯೋಗತ್ವ ಅಡಗಿದೆ. ಎನ್ನುವುದು ಅಪ್ರಜ್ಞಾಪೂರ್ವಕವಾಗಿಯೇ ನೀಲಕ್ಕ ನಂಬಿದಾಗ ಜನಪದರ ಲೋಕ ಗ್ರಹಿಕೆಯ ತಂತ್ರವು ಈ ಕತೆಗೆ ಸಾಕಷ್ಟು ನೆರವಾಗಿದೆ. ತಾವು ನಂಬಿದ ಪರಂಪರೆಯ ಜನಪದ ದೈವಗಳನ್ನು ಆಧುನಿಕ ಜಗತ್ತಿಗೆ ಪರಿಚಯಿಸಲು ಹೊರಟು ಇಡೀ ಬದುಕಿನ ಮುಗ್ಧತೆಯನ್ನು ನಾಶಮಾಡಿಕೊಳ್ಳುವ ಮಾದಪ್ಪ – ಪಾತವ್ವರು ‘ದೈವಕ್ಕೆ ಮೊದಲು ಶರಣೆಂಬೆವು’ ಕತೆಯಲ್ಲಿ ಇದ್ದಾರೆ. ಬಸವಣ್ಣನಿಂದ ಪ್ರಭಾವಿತಗೊಂಡ ಜನಪದರ ಸಾಂಸ್ಕ್ರತಿಕ ನಾಯಕ ಪಾತಪ್ಪ ಆಧುನಿಕ ನಾಗರೀಕತೆಗೆ ಸಿಕ್ಕಿ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುವ ಪರಿಯು ಈ ಕತೆಯದು. ಗ್ರಾಮ ಬದುಕಿನ ಮೌಲ್ಯಕ್ಕೆ ಅಂಟಿಕೊಂಡ್ಡಿದ್ದ ಮಾದಪ್ಪ ಪಾತವ್ವರು ಪಾತಪ್ಪನ ಕತೆಯನ್ನು ವಿಶ್ವವಿದ್ಯಾಲಯದಲ್ಲಿ ಹಾಡಿದರೂ ನಗರಗಳಿಗೆ ಭೇಟಿಕೊಟ್ಟರೂ ಹಳ್ಳಿಯ ಪ್ರೀತಿಯನ್ನು ಎಲ್ಲೂ ಪಡೆಯದೇ ಸೋಲುತ್ತಾರೆ. ಅಂತಿಮವಾಗಿ ಇವರು ಮುಖಮಾಡುವುದು ಪಾತಪ್ಪನ ಕತೆಯನ್ನು ಊರಬದುಕಿನ ಕಡೆಗೆ ತಿರುಗಿಸುವುದರ ಮೂಲಕ. ಅಮರೇಶ್ ಅವರ ‘ನೀರು ತಂದವರು’ ಮತ್ತು ಬೇಟೆ ಕತೆಗಳಲ್ಲಿ ದಲಿತರ ತಾತ್ವಿಕ ಸಂಘರ್ಷಗಳನ್ನು ತಿಳಿಸುತ್ತವೆ. ಮಾತ್ರವಲ್ಲ ತಲೆಮಾರುಗಳ ಭಾವನಾತ್ಮಕ ತಲ್ಲಣಗಳನ್ನು ಕಾಣಬಹುದು. ಸದ್ದಿಲ್ಲದೆ ವರ್ತಮಾನದ ದಲಿತರ ಎಡ-ಬಲ ಅಕ್ಷರವಂತ ದಲಿತರ ಸ್ವಾರ್ಥ ರಾಜಕಾರಣವನ್ನು ಬಯಲುಗೆಳೆದಿವೆ. ಅಂಬೇಡ್ಕರ್ ಅವರ ಚಿಂತನಾ ಕ್ರಮಗಳನ್ನು ಅಕ್ಷರಸ್ಥ ದಲಿತ ಸಮುದಾಯ ಬಳಸಿಕೊಳ್ಳುವ ಕ್ರಮ ಬಸವಣ್ಣನನ್ನು ಗುಮಾನಿಯಿಂದಲೇ ನೋಡುವುದು ಕಂಡುಬರುತ್ತದೆ, ಅಮರೇಶ್ ಅವರು ಮಣ್ಣು ಸೇರಿತು ಬೀಜ ಕತೆಗಳಲ್ಲಿ ಅಪ್ಪಟ ಗ್ರಾಮೀಣ ಮನಸ್ಸುಗಳ ಅಂತರಂಗವನ್ನು ಹೇಳುವಲ್ಲಿ ಹೇಗೆ ಯಶಸ್ವಿಯಾದರೋ ಅದೇ ವಿಧಾನದಲ್ಲಿ ತಮಂಧದ ಕೇಡು ಮತ್ತು ಸವಾರಿ ಸಂಕಲನದ ಕೆಲವು ಕತೆಗಳಲ್ಲಿ ಪಲ್ಲಟಗೊಂಡು ಮಾನಸಿಕ ಸ್ಥಿತಿಗಳನ್ನು ಅನಾವರಣಗೊಳಿಸುತ್ತಾರೆ.

ನೀರು ತಂದವರು ಕತೆಯಲ್ಲಿ ಲಿಂಗಾಯಿತ ಪ್ರಗತಿಪರ ದಲಿತರ ಸಿದ್ದಪ್ಪ ನಂಬಿದ ಮೌಲ್ಯಗಳು ಇಲ್ಲಿ ಕಲಿತ ಹುಡುಗರಿಗೆ ಸರಿಎಣಿಸದೆ ಹೋಗುತ್ತವೆ. ಇವರು ಊರಿಕೇರಿಯಲ್ಲಿ ಅಂಬೇಡ್ಕರ್ ಮೂರ್ತಿಯನ್ನು ಇಡುವುದಕ್ಕೆ ತೀರ್ಮಾನಿಸಿದಾಗ ಸಿದ್ದಪ್ಪ ಲಿಂಗಾಯಿತರ ಕೇರಿಯಲ್ಲಿ ಸ್ಥಾಪಿಸಿ ಎಂದು ಹೇಳುತ್ತಾನೆ. ಹುಡುಗರು ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಎನ್ನುವಂತೆ ಮಾತನಾಡುತ್ತಾರೆ. ಇದು ಸಮಕಾಲೀನ ಸಾಂಸ್ಕೃತಿಕ ನಾಯಕತ್ವದ ಬಿರುಕುಗಳನ್ನು ಮತ್ತು ಪರಿಕಲ್ಪನೆಯನ್ನು ಸೋಚಿಸುತ್ತದೆ. ಹಿರಿ ತಲೆಮಾರು ಸಿದ್ದಪ್ಪನ ಸಲಹೆಗಳನ್ನು ಸ್ವೀಕರಿಸುತ್ತಾರೆ. ನೀರಿನ ವಿಚಾರ ಬಂದಾಗ ಕೆಲ ಹುಡುಗರು ಸಂಘರ್ಷಕ್ಕೂ ಸಿದ್ದರಾಗಿರುತ್ತಾರೆ. ಪ್ರಾದೇಶಿಕ ಭಾಷೆಯ ಗಟ್ಟಿತನದಿಂದ ಈ ಕತೆ ಗಮನ ಸೆಳೆಯುತ್ತದೆ. ಆದರೂ ಉಳಿದ ಕತೆಗಳಂತೆ ಹೆಚ್ಚು ಕಲಾತ್ಮಕತೆಯನ್ನು ಉಳಿಸಿಕೊಂಡಿಲ್ಲ. ಇದು ಇವರಿಗೆ ಮಾತ್ರ ಸವಾಲು ಅಲ್ಲ ಬದಲಾಗಿ ಈ ರೀತಿಯ ತಾತ್ವಿಕ ಸಂಘರ್ಷಗಳು ನುಸುಳಿದಾಗ ಕತೆಯನ್ನು ಕಟ್ಟುವ ಎಲ್ಲರ ಸಮಸ್ಯೆ ಕೂಡಾ ‘ನೀರು ತಂದವರು’ ಈ ಕತೆಯ ಎದಡು ಪೀಳಿಗೆಗಳ ನಡುವಿನ ಸಂವಹನವು ಕುಸಿಯುವುದಕ್ಕೆ ಸಮಾನವಾದ ಭಾಷೆಯ ಕೊರತೆಯೂ ಕಾರಣವಿರಬಹುದು. ಎಂಬ ಹೆಚ್. ಎಸ್. ಅರ್ ಅವರ ಮಾತುಗಳನ್ನು ಒಪ್ಪಬಹುದು. ಓದಿರುವ ದಲಿತ ಸಮುದಾಯ ಅನಕ್ಷರಸ್ಥ ಸಮುದಾಯಗಳನ್ನು ನಡೆಸಿಕೊಳ್ಳುವ ಬಗೆಯನ್ನು ‘ಬೇಟೆ’ ಕತೆ ಚೆನ್ನಾಗಿ ಅಭಿವ್ಯಕ್ತಿಸುತ್ತದೆ.

ದಲಿತರ ಭೂಮಿಯನ್ನು ಊರ ಗೌಡ ಮತ್ತು ಕಲಿತ ದಲಿತರ ಹುಡುಗ ಪುರುಷೋತ್ತಮ ಕಬಳಿಸುವ ಹುನ್ನಾರವು ಪ್ಯೂಡಲ್ ವ್ಯವಸ್ಥೆಯ ಪಲ್ಲಟಗಳನ್ನು ಹೇಳುವಂತದ್ದು. ಇದುವರೆಗೂ ಅಮರೇಶರ ಕತೆಗಳು ದಲಿತರ ಭೂಮಿ ಪ್ರಶ್ನೆಯನ್ನು ಭಾವನಾತ್ಮಕವಾಗಿಯೂ ತಂದಿದ್ದರು. ಆದರೆ ‘ಬೇಟೆ’ ಕತೆಯಲ್ಲಿ ದಲಿತರೇ ದಲಿತರನ್ನು ವಂಚಿಸುವ ಪ್ರಕ್ರಿಯೆ ಇದೆ. ರೈಸ್ ಮಿಲ್ಲನ್ನು ಕಟ್ಟುವ ಸಲುವಾಗಿ ಪರಶಿವಯ್ಯನ ಭೂಮಿಯನ್ನು ಕಬಳಿಸುವ ಹುನ್ನಾರವನ್ನು ಇಬ್ಬರೂ ಪ್ರಯತ್ನಿಸುತ್ತಾರೆ. ಇದು ವರ್ತಮಾನದ ಸ್ಥಿತಿಗಳೂ ಕೂಡಾ ಅಮರೇಶರು ದಲಿತ-ಬಂಡಾಯ ಚಳುವಳಿಯ ಬೀಜಗಳನ್ನು ಯಾವುದೇ ತಾತ್ವಿಕ ಸಿದ್ದಾಂತಗಳಿಂದ ಸ್ವೀಕಾರ ಮಾಡುವುದಿಲ್ಲ. ತಮ್ಮ ಪ್ರಾದೇಶಿಕ ಅನುಭವಗಳ ಮುಖೇನವೇ ಕಟ್ಟಿಕೊಡುತ್ತಾರೆ. ಸಿದ್ಧವಾದ ಸಿದ್ಧಾಂತಗಳಿಗಿಂತ ಅನುಭವಗಳನ್ನು ಗಟ್ಟಿಯಾಗಿ ನಂಬಿದಾಗ ಮಾತ್ರ ಈ ಬಗೆಯ ಕತೆಗಳು ಹುಟ್ಟುವುದಕ್ಕೆ ಸಾಧ್ಯ. ಇದು ನಿಜವಾದ ದೇಸಿ ಬದುಕಿನ ಅಭಿವ್ಯಕ್ತಿ ಎನ್ನಬಹುದು. ಮತ್ತೊಂದು ಕಡೆ ನಕ್ಸಲ್ ಸಂಗತಿಗಳನ್ನು ‘ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು’  ಎಂಬ ಕತೆಯಲ್ಲಿ ತಂದರೂ ಗೌಡ ಮತ್ತು ದಸ್ತಗಿರಿ ಸಂಬಂಧಗಳ ಮುಖೇನ ಗ್ರಾಮಲೋಕದ ಮುಗ್ಧತೆಯನ್ನು ಮರೆಮಾಚಿಸುವುದಿಲ್ಲ.

ಚಂದ್ರಪ್ಪ ಜಮೀನು ಬಡವರಿಗೆ ಹಂಚಬೇಕು ಎಂದು ಹೇಳಿದಾಗ ಪ್ರಾರಂಭದಲ್ಲಿ ಗೌಡ ವಿರೋಧಿಸಿದರೂ ಕೊನೆಯಲ್ಲಿ ಒಪ್ಪಿಕೊಳ್ಳುತ್ತಾನೆ. ಆದರೆ ಪುಗಸಟ್ಟೆ ಜಮೀನನ್ನು ಗೌಡನಿಂದ ಜನ ಸ್ವೀಕರಿಸಲು ಸಿದ್ದರಾಗಿರುವುದಿಲ್ಲ. ಗೌಡ ದಸ್ತಗಿರಿಗೆ ಸ್ವಲ್ಪ ಜಮೀನನ್ನು ನೀಡಿ ತಾನು ಶಹರಕ್ಕೆ ಹೋಗಲು ತೀರ್ಮಾನಿಸಿದಾಗಿ ದಸ್ತಗಿರಿ ತನ್ನನ್ನೂ ಶಹರಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾನೆ, ಇವು ಗ್ರಾಮಲೋಕದ ಸಂಭಂಧಗಳು ಹೀಗೆ ಅಮರೇಶರಂಥವರು ತಮ್ಮ ಭಾಗದಲ್ಲಿ ಪ್ರಭಾವಿತಗೊಂಡ ನಕ್ಸಲ್ ವಿಚಾರಗಳನ್ನು ಕೂಡಾ ತಾವು ನಂಬಿದ ಮೌಲ್ಯಗಳಿಗೆ ಅನುವುಗೊಳಿಸುತ್ತಾರೆ. ಅಂತಿಮವಾಗಿ ಈ ಬಗೆಯ ವಿಚಾರಧಾರೆಗಳು ಕೂಡಾ ಮಾನವೀಯತೆಯ ಗರ್ಭವನ್ನು ಸೀಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬುದು ಇವರ ಕತೆಗಳ ಮುಖೇನ ತಿಳಿಯಬಹುದು.ಅಮರೇಶ್ ಅವರ ಮೂರು ಕಥಾಸಂಕಲನಗಳ ಕಥನಕಲೆಯನ್ನು ಕುರಿತು ಈಗಾಗಲೇ ಚರ್ಚೆಯಾಗಿದೆ. ಕಟ್ಟುವ ಕ್ರಿಯೆ ಮತ್ತು ಹೇಳುವ ಕ್ರಿಯೆ ಇವುಗಳ ನಡುವಿನ ವ್ಯತ್ಯಾಸ ಸಂಭಂಧಗಳನ್ನು ಇವರು ಚೆನ್ನಾಗಿ ಬಲ್ಲವರು. ಹೈದರಬಾದ್ ಕರ್ನಾಟಕದ ಪ್ರಾದೇಶಿಕ ಭಾಷೆಯೇ ಒಂದು ಲೋಕದೃಷ್ಟಿಯನ್ನು ಬಯಲುಮಾಡುತ್ತದೆ. ಸವಾರಿ ಎಂಬ ಮೂರನೇ ಸಂಕಲನದಲ್ಲೂ ಕೂಡ ಅವರು ತಮ್ಮ ಪ್ರಾದೇಶಿಕ ಭಾಷೆಯನ್ನು ಬಿಟ್ಟುಕೊಟ್ಟಿಲ್ಲ. ಈ ಕತೆಗಳಲ್ಲಿ ಆಧುನಿಕ ಸಂಧರ್ಭಗಳಲ್ಲಿ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಸವಾಲುಗಳು ಬಂದರೂ ತಮಗೆ ದಕ್ಕಿದ ಭಾಷೆಯ ಮುಖೇನವೇ ಕತೆ ನಿರ್ಮಸಿದ್ದಾರೆ, ತೆಲುಗು ಭಾಷೆಯ ರಾಯಚೂರು ಬದುಕಿನ ಅಂತರಂಗಕ್ಕೆ ಹೆಣೆದುಕೊಂಡು ಪ್ರವೇಶವಾಗುತ್ತದೆ ವಿನ: ಉದ್ದೇಶಪೂರ್ವಕವಾಗಿ ಅಲ್ಲ.

ದಲಿತರ ಪುರುಷೋತ್ತಮನನ್ನು ಅದೇ ದಲಿತ ಮಹಿಳೆ ಪರಸಪ್ಪ ಎಂದು ಹೇಳುವಾಗಲು ಇದು ನಿಜ. ಇವರ ಕತೆಗಳಲ್ಲಿ  ಕಥನಾಕ್ರಮವಾಗುವ ರೀತಿ ಯಾರೋ ಹೇಳಿದ್ದು, ಅಥವಾ ತತ್ವಗಳ ಮುಖೇನವೇ ಅಲ್ಲ. ಪಾತ್ರಗಳ ಅನುಭವ ಕಥನವೇ ಆಗಿರುತ್ತದೆ. ಕತೆಗಾರ ಬಾಹ್ಯದಲ್ಲಿ ನಿಂತು ಮಾತನಾಡುತ್ತಾನೆ ಅಷ್ಟೆ. ಪ್ರಥಮಪುರುಷದಿಂದ ಸಾಗುವ ಇವರ ಒಂದೇ ಒಂದು ಕಥೆ ಎಂದರೆ ‘ಮೀರುವಘನ’ ಈ ಕಥೆ ತಂತ್ರಗಾರಿಕೆಯಿಂದ ಅಷ್ಟೇನೂ ಯಶಸ್ವಿಯಾಗಿಲ್ಲ. ಅನುಭವವನ್ನು ವರದಿರೂಪಕ್ಕೆ ಅಲ್ಲಲ್ಲಿ ತಂದಿರುವುದು ಕಾಣಬಹುದು. ಇಷ್ಟನ್ನು ಬಿಟ್ಟರೆ ತಮ್ಮ ಕಥನದ ಬಗೆಯನ್ನು ಬದಲಾದ ಅಗತ್ಯಗಳಿಗೆ ಬೇಕಾದಂತೆ ಮರು ರೂಪಿಸಿಕೊಳ್ಳುವ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಈಗಲೂ ಅವರ ಕಥನದ ಕೇಂದ್ರದಲ್ಲಿ ಮನುಷ್ಯರಿದ್ದಾರೆ. ‘ಆ ಮನುಷ್ಯರಿಗೆ ಸಾಮಾಜಿಕ ಚಹರೆಗಳಿವೆ’ ಎಂಬ ಕೆ.ವಿ ನಾರಾಯಣರ ಮಾತುಗಳನ್ನು ಸ್ವೀಕರಿಸಬಹುದು. ಇವರ ಕತೆಗಳಲ್ಲಿ ಬರುವ ಯಾವುದೇ ಮನುಷ್ಯರು ಅಪ್ರಸ್ತುತ ಅಲ್ಲ ವ್ಯರ್ಥವೂ ಅಲ್ಲ. ಎಲ್ಲರ ಬದುಕು ಕೂಡಾ ಮುಖ್ಯವಾಗುತ್ತದೆ. ಆ ಪಾತ್ರಗಳು ತಮ್ಮಷ್ಟಕ್ಕೆ ತಾವೇ ಬೆಳೆದುಕೊಂಡುಹೋಗುತ್ತವೆ. ಹೀಗೆ ಬೆಳೆಯುವ ಕ್ರಮ ಕತೆಗಳ ರಚನಾ ವಿನ್ಯಾಸಕ್ಕೂ ನೆರವಾಗಿದೆ. ಅಮರೇಶರ ಕತೆಗಳು ಕನ್ನಡ ಕಥಾವಲಯದಲ್ಲಿ ಒಂದು ಮುಖ್ಯವಾದ ಹೆಜ್ಜೆಯನ್ನು ಇಟ್ಟಿವೆ.

 

‍ಲೇಖಕರು avadhi

February 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಹನುಮಂತ ಹಾಲಿಗೇರಿ

    ನುಗಡೋಣಿಯವರ ಕಥೆಗಳ ಎಲ್ಲ ಮಗ್ಗಲುಳ ವಿಶ್ಲೇಷಣೆ ಚಲೋ ಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: