ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಮುಚ್ಚಿ ಹೋಯಿತು ಕ್ಲಬ್ಬು

(ಇಲ್ಲಿಯವರೆಗೆ…)

ಅಜ್ಜಿ ಒದ್ದೆ ಬಟ್ಟೆಯನ್ನು ಮೈಗಂಟಿಸಿಕೊಂಡು ಮೇಲೆ ಹಾಕಿದ್ದ ಗಳುವಿನ ಮೇಲೆ  ಮಡಿಕೋಲಿಂದ ಬಟ್ಟೆಯನ್ನು ಒಣಗಿ ಹಾಕುತ್ತಾ ‘ಚಲ್ವ ಗಜಗಮನೆಯರಾರತಿ ಮಾಡಿರೇ, ಗಜಮುಖ ನಿಜ ಗಣಪನಿಗೆ. . . .ಪಾಶಾಂಕುಶನಿಗೆ ಪರ್ವತಿ ತನಯಗೆ ದೇಶ ದೇಶದಲಿ ಪೂಜೆಗೊಂಬಾವಗೆ ಈಶ್ವ್ವರನಾ ಪುತ್ರ ಪಾರ್ವಾತಿ ತನಯಾಗೆ ಜಾತಿ ಮಣಿಕ್ಯಾದಾರತಿ ಮಾಡಿರೆ’ ಎಂದು ಹಾಡುತ್ತಾ ಹಾಡನ್ನು ಮಧ್ಯಕ್ಕೆ ನಿಲ್ಲಿಸಿ ‘ಹಾಳು ಬೆಕ್ಕು ಬಂದು ಮನೇಲಿರೋ ಹಾಲನ್ನೆಲ್ಲ ಕುಡಿದು ಹೋಯ್ತು. ಈ ಮನೇಲಿ ಹೇಳೋಕೂ ಕೇಳೋಕ್ಕೂ ಯಾರೂ ಇಲ್ಲ. ಇವತ್ತು ಇನ್ನ ನನ್ನ ಹೊಟ್ಟೇಗ್ ಏನ್ ಮಾಡ್ಬೇಕು?’ ಎಂದು ಬೈದುಕೊಳ್ಳುತ್ತಿದ್ದಳು. ಈ ಅಜ್ಜಿ ಆರತಿ ಹಾಡನ್ನ ಹೇಳ್ತಾಳೆ, ಆದ್ರೆ ಆರತೀನೇ ಮಾಡಲ್ಲ ಅಲ್ವಾ?’ ತುಟಿಯ ಅಂಚಲ್ಲಿ ನಗುವನ್ನಿಳುಸಿಕೊಂಡ ಪುಟ್ಟಿ ಚಿಟ್ಟಿಯ ಕಡೆಗೆ ನೋಡಿದಳು. ಅಜ್ಜಿಗೆ ಅವತ್ತು ಏಕಾದಶಿ.
ಅವಳು ಹಾಲು ಹಣ್ಣನ್ನು ಬಿಟ್ಟು ಏನೂ ತಗೊಳ್ಳುವ ಹಾಗಿಲ್ಲ. ಗಂಟೆ ಹನ್ನೊಂದಾದ್ದರಿಂದ ಈಗ ಎಲ್ಲೂ ಹಾಲು ಸಿಗುವುದು ಕಷ್ಟವೇ. ಅಮ್ಮ ‘ನಾನ್ ಯಾರ್ ಮನೇಲಾದ್ರೂ ತಗೊಂಡ್ ಬರ್ತೀನಿ ನೀವ್ ಸುಮ್ನಿರಿ ಎಷ್ಟ್ ಸಲ ಹೇಳ್ತೀರ ಕೇಳಿ ಕೇಳಿ ಕಿವಿ ಚಿಟ್ಟ್ ಹಿಡೀತು’ ಎಂದು ಬೈದಳು. ಅಜ್ಜಿಗೂ ಕೋಪ ಬಂತು ‘ವಯಸ್ಸಾದ್ಮೇಲೆ ಇರ್ಬಾರ್ದು ಕಣೇ. ನಿಮ್ಮ ಹತ್ರ ಎಲ್ಲಾ ಅನ್ನಿಸಿಕೊಳ್ಳುವ ಕರ್ಮ ನನಗೆ’ ಎಂದು ಕೂಗಿದಳು. ಯಾವುದನ್ನೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ಹೊರಡುತ್ತಿದ್ದ ಅಪ್ಪನನ್ನು ಅಮ್ಮ ತಡೆದಳು ನಿಲ್ಲಿಸಿದಳು. ಅಪ್ಪ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಅಪ್ಪನಿಗೆ ಹೆಚ್ಚು ಬೆಲೆ ಇತ್ತು. ಅಪ್ಪ ಯಾವತ್ತೂ ತನ್ನ ಕೆಲಸಕ್ಕೆ ಅನ್ಯಾಯ ಮಾಡುತ್ತಿರಲಿಲ್ಲ. ಇನ್ನೊಂದು ಮದುವೆಯಾಗಿ ದುಡಿದ ದುಡಿದ್ದದ್ದೆಲ್ಲಾ ಮನೆಗೆ ಕೊಡಲಾಗದ ಅನಿವಾರ್ಯತೆ ಇದ್ದಿದ್ದರಿಂದ ಮನೆಯಲ್ಲಿ ಅಮ್ಮನ ಜವಾಬ್ದಾರಿ ಜಾಸ್ತಿಯಿತ್ತು. ಹೊರಡುತ್ತಿದ್ದ ಅಪ್ಪನ ಎದುರು ನಿಂತು ‘ಹಾಲಿಗೆ ದುಡ್ಡು ಕೊಟ್ಟು ಹೋಗಿ’ ಎಂದಳು. ಅಪ್ಪನಿಗೆ ಕೋಪ ಬಂತು ‘ದುಡ್ಡು ದುಡ್ಡು ಅಂದ್ರೆ ನಾನೆಲ್ಲಿಂದ ತರಲಿ? ನನ್ನ ಹೆಣದ ಮೇಲೆ ಹಾಕ್ತೀನಿ ತಗೋ’ ಎಂದ. ‘ಅದನ್ನ ಆಮೇಲೆ ನೋಡೋಣ ನೀವೀಗ ದುಡ್ಡು ಕೊಟ್ಟಿಲ್ಲ ಅಂದ್ರ್ ನಾಳೆ ಮಕ್ಕಳಿಗೆ ಹಾಲಿರಲ್ಲ, ದುಡ್ಡ್ ಕೊಟ್ಟಿಲ್ಲ ಅಂದ್ರೆ ಹಾಲಿನವನು ನಾಳೆಯಿಂದ ಹಾಲು ಹಾಕಲ್ಲ ಅಂತ ಹೇಳ್ಬಿಟ್ಟಿದ್ದಾನೆ. ಜೊತೆಗೆ ಕೇಳ್ತ್ತಾ ಇದೀರಲ್ಲ ನಿಮ್ಮಮ್ಮನ ಮಾತುಗಳ್ನ?’ ಎಂದಳು ಅಸಹಾಯಕತೆಯಿಂದ.
‘ನೋಡೆ ನನ್ನ ಕೈಲಾಗಿದ್ದನ್ನ ನಾನು ಮಾಡ್ತಾ ಇದೀನಿ. ಇದಕ್ಕೆ ಮೀರಿ ನನ್ ಏನೂ ಮಾಡೋಕ್ಕಾಗಲ್ಲ’ ಎಂದು ಬಿಟ್ಟಿದ್ದ. ‘ಮಾಡೋಕ್ಕಾಗಲ್ಲ ಅಂದ್ರೆ ಮೂರು ಮಕ್ಕಳು ಬೇಕಿತ್ತಾ ನಿಮ್ಗೆ?’ ಎಂದು ಪ್ರತ್ಯುತ್ತರ ಕೊಟ್ಟಿದ್ದಳು ಅಮ್ಮ. ಮುಂದೆ ಮಾತಾಡಲಿಕ್ಕೆ ಅವಳಿಗೆ ಇತ್ತಾದರೂ ಎದುರೂಗೆ ಮಕ್ಕಳಿದ್ದರಿಂದ ಅಲ್ಲಿಗೇ ಮಾತನ್ನು ತಡೆದಿದ್ದಳು. ಅಪ್ಪ ಸರಕಾರಿ ಕಛೇರಿಯೊಂದರಲ್ಲಿ ಗುಮಾಸ್ತ. ಅವನು ಹೇಳಿದರೆ ಮಾತ್ರ ಸಾಹೇಬರು ಸೈನ್ ಮಾಡ್ತಾ ಇದ್ದಿದ್ದು. ಕೆಲಸ ಮಾಡಿಕೊಡಿ ಎಂದು ಎಷ್ಟೋ ಸಲ ಮನೆಗೆ ಹಣವನ್ನು ತಂದುಕೊಡಲು ಬಂದವರೂ ಇದ್ದಾರೆ. ಅಪ್ಪ ಅಂಥಾ ಹಣವನ್ನು ಎಡಗೈಲು ಮುಟ್ಟುತ್ತಿರಲಿಲ್ಲ. ಸ್ಕೂಲ್ಡೇಗೆ ಚಿಟ್ಟಿಗೆ ಹತ್ತುರೂಪಾಯಿ ಬೇಕಿತ್ತು ಅಪ್ಪನನ್ನು ಕೇಳಿದಳು. ಅಪ್ಪ ಹತ್ತು ರೂಪಾಯಿಯ ಬಗ್ಗೆ ಅರ್ಧಗಂಟೆ ಭಾಷಣ ಮಾಡಿ ‘ಚಿಟ್ಟಿ ನೀನು ದೊಡ್ಡವಳಾದ ಮೇಲೆ ದುಡಿದು ಏನ್ ಬೇಕೋ ಅದನ್ನೆಲ್ಲಾ ತಗೋವಂತೆ’ ಎಂದಿದ್ದನು. ಅದೇ ಹೊತ್ತಿಗೆ ಯಾರೋ ಕೆಲಸ ಮಾಡಿಕೊಡುವಂತೆ ಹಣವನ್ನು ತಂದುಕೊಟ್ಟರು. ಅಪ್ಪ ಅದನ್ನು ಮುಟ್ಟದೆ ವಾಪಾಸು ತಗೊಂಡ್ ಹೋಗಿ ನಿಮ್ಮ ಕೆಲಸ ನಾನ್ ಮಾಡಿಕೊಡೋಕ್ಕಾಗಲ್ಲ ಎಂದು ಬಿಟ್ಟಿದ್ದ. ಬಂದವರು ಅಪ್ಪನನ್ನು ಗೋಗರೆದರು. ನೀವು ಕೇಳಿದಷ್ಟು ಹಣ ಕೊಡ್ತೀವಿ ಎಂದರು ಅಪ್ಪ ಮಾತ್ರ ಯಾವುದಕ್ಕೂ ಒಪ್ಪಲಿಲ್ಲ ಚಿಟ್ಟಿಗೆ ಕೋಪ ಬಂದಿತ್ತು. ನಾನು ಕೇಳಿದ್ದು ಬರೀ ಹತ್ತು ರೂಪಾಯಿ ಅವರಾಗೆ ಕೊಡಲು ಬಂದಿದ್ದು ನೂರು ರೂಪಾಯಿಯ ಅದೆಷ್ಟೋ ನೋಟುಗಳನ್ನು. ಅಪ್ಪನಿಗೆ ನನ್ನ‌ಆಸೆ ಯಾಕೆ ಅರ್ಥವೇ ಆಗಲಿಲ್ಲ?! ಅವರು ಹೋದ ಮೇಲೆ ಅಪ್ಪನ ಜೊತೆ ಚಿಟ್ಟಿ ಜಗಳ ಮಾಡಿದಳು. ಅಪ್ಪ ಆ ಹಣವನ್ನು ಅವರಾಗೇ ಕೊಡಲು ಬಂದಿದ್ದರು ಅಲ್ಲವಾ ತಗೊಂಡಿದ್ರೆ ತಪ್ಪೇನು ಆಗ್ತಾ ಇತ್ತು? ಚಿಟ್ಟಿಯ ಮಾತಿಗೆ ಮೊದಲು ಕೋಪಗೊಂಡರೂ ಅಪ್ಪ ಅವಳನ್ನ ಕೂಡಿಸಿಕೊಂಡು ಸಮಾಧಾನದಿಂದ ‘ಚಿಟ್ಟಿ ಕೆಲಸ ಮಾಡಿದ್ದಕ್ಕೆ ನನಗೆ ಸರಕಾರ ಸಂಬಳ ಅಂತ ಕೊಡುತ್ತೆ. ಅದನ್ನ ಬಿಟ್ಟು ಇವರ ಹತ್ರ ಎಲ್ಲಾ ಯಾಕೆ ತಗೋಬೇಕು ಹೇಳು’ ಎಂದಿದ್ದ.
ಚಿಟ್ಟಿ ಇನ್ನೂ ಗೊಂದಲದಲ್ಲೆ ಇದ್ದಳು. ‘ಮಗಳೇ ಇದೆಲ್ಲಾ ನಿನಗೆ ಈಗ ಗೊತ್ತಾಗಲ್ಲ ದೊಡ್ದವಳಾದ ಮೇಲೆ ಒಂದಲ್ಲಾ ಒಂದು ದಿನ ಅಂದ್ಕೋತೀಯ ಅಪ್ಪ ಮಾಡಿದ್ದು ಸರಿ ಅಂತ’. ಅವತ್ತು ಅಪ್ಪ ತುಂಬಾ ಬೇರೆಯಾಗೇ ಕಂಡಿದ್ದ. ಅಂಥಾ ಅಪ್ಪ ಅಮ್ಮನ ಎದುರು ಹೀಗೆ ನಿಲ್ಲುವುದಕ್ಕೆ ಕಾರಣ ಅವನು ತಪ್ಪುಗಳನ್ನು ಮಾಡಿರೋದೆ ಅಲ್ವಾ? ಸುಳ್ಳು ಹೇಳಬೇಡ ಇನ್ನೊಬ್ಬರ ವಸ್ತುವಿಗೆ ಆಸೆ ಪಡಬೇಡ ಅಂದ ಅಪ್ಪ ಯಾಕೆ ಹೀಗಾದ? ಚಿಟ್ಟಿ ತನ್ನ ಯೋಚನೆಗಳಿಂದ ಹೊರಗೆ ಬರುವ ಹೊತ್ತಿಗೆ ಅಪ್ಪ ಹೊರಟು ಹೋಗಿದ್ದ ಅಮ್ಮನ ಮುಖದಲ್ಲಿ ಅಸಮಾಧಾನದ ಗೆರೆಗಳಿದ್ದವು ಯಾರನ್ನೋ ಹಾಲು ಕೇಳಿಬರಲು ಲೋಟವನ್ನು ಹಿಡಿದು ಹೊರಗೆ ಹೊರಟಳು. ಪುಟ್ಟಿ ಇದ್ಯಾವುದೂ ತನಗೆ ಸಂಬಂಧ ಪಡದೆ ಇರುವ ವಿಷಯ ಎನ್ನುವಂತೆ ಬೆಕ್ಕಿನ ಚಿತ್ರ ಬರೆಯುತ್ತಾ ಕೂತಿದ್ದಳು. ಚಿಟ್ಟಿಗೆ ಅವಳ ಬಗ್ಗೆಯೇ ಅನುಮಾನ. ಬರೆಯುತ್ತಿದ್ದ ಬೆಕ್ಕಿನ ಚಿತ್ರವನ್ನು ನೋಡಿ ‘ಯಾವುದಿದು ಕಳ್ಳ ಬೆಕ್ಕು?’ ಎಂದಳು ಚಿಟ್ಟೀ. ಪುಟ್ಟಿ ಅವಳನ್ನೊಮ್ಮೆ ನೋಡಿ ಮತ್ತೆ ಚಿತ್ರ ಬರೆಯುವುದನ್ನು ಮುಂದುವರಿಸಿದಳು. ‘ನಿಜ ಹೇಳು ಹಾಲ್ ಕುಡ್ದಿದ್ದು ನೀನೇ ತಾನೆ’ ಎಂದಳು. ಬಿದ್ದು ಹೋದ ಹಲ್ಲು ಚಿಗಿರು ಒಡೆದು ಅಗಲವಾಗಿ ಬಾಯಿಬಿಟ್ಟರೆ ವಿಚಿತ್ರವಾಗಿ ಕಾಣುತ್ತಿದ್ದ ಪುಟ್ಟಿ ಅವಳ ಕಡೆಗೆ ತಿರುಗಿ ‘ಹೀ’ ಎಂದು ನಕ್ಕಳು. ಈಚೆಗೆ ಪುಟ್ಟಿ ಅಸಾಧ್ಯ ತುಂಟಿಯಾಗುತ್ತಿದ್ದಳು. ಕೇಳಿದರೆ ಕೊಡುತ್ತಾರಾದರೂ ಕದ್ದು ತಿನ್ನುವುದರಲ್ಲೇ ಅವಳಿಗೆ ಏನೋ ಖುಷಿ.
ಒಂದು ಸಲ ಪರಂಗಿ ಹಣ್ಣನ್ನು ಇಟ್ಟಲ್ಲೆ ಡೊಕರು ಕೊರೆದು ಒಳಗಿನ ತಿರುಳನ್ನೆಲ್ಲಾ ತಿಂದು ಏನೂ ಗೊತ್ತಿಲ್ಲ ಅನ್ನುವ ಹಾಗೇ ಇದ್ದು ಬಿಟ್ಟಿದ್ದಳು. ಆದರೆ ಅವಳ ಅಂಗಿಗೆ ಹತ್ತಿದ್ದ ಪಪ್ಪಾಯಿಯ ತಿರುಳು ಅಮ್ಮನಿಗೆ ಗುಟ್ಟನ್ನು ಬಿಟ್ಟಿಕೊಟ್ಟಿತ್ತು. ಈಗಲೂ ಇವಳೆ ಹಾಲನ್ನು ಕುಡಿರಬೇಕು ಎನ್ನುವ ಅನುಮಾನ ಬಲವಾಗಿ ‘ಪುಟ್ಟಿ ನಿಜ ಹೇಳು ಸುಳ್ಳು ಹೇಳಿದ್ರೆ ಕಣ್ಣು ಹೋಗುತ್ತೆ’ ಎಂದಳು ಚಿಟ್ಟಿ. ಅವಳ ಮಾತಿಗೆ ‘ಯಾಕೆ ಜೋರ್ ಮಾಡ್ತೀಯಾ ನೀನ್ ಹೇಳೋದೆಲ್ಲಾ ಬುರುಡೆ ದಾಸಯ್ಯನ್ ಪದ ಹೋಗ್ ಹೋಗೇ’ ಎಂದಳು. ಚಿಟ್ಟಿಗೆ ಅವಳು ತನ್ನ ಮಾತನ್ನು ಕೇಳದೆ ಉಚಾಯಿಸಿ ಮಾತಾಡಿದ್ದಕ್ಕೆ ಕೋಪ ಬಂತು. ‘ಪಾಪಾ ಅಮ್ಮ ಹಾಲ್ ಹುಡುಕ್ಕೊಂಡ್ ಯಾರ್ ಮನೇಗ್ ಹೋದ್ಲೋ ಏನೋ? ನೋಡು ನನ್ನ ಮಾತ್ ಕೇಳು ಅಜ್ಜಿ ಹತ್ರ ಹೋಗಿ ನಾನೇ ಕುಡ್ದೆ ಅಂತ ಒಪ್ಕೊಂಡ್‌ಬಿಡು. ಆಗ ನಿಂಗೇನೂ ಕೆಟ್ಟದಾಗಲ್ಲ’ ಎಂದ ಚಿಟ್ಟಿಯ ಮಾತಿಗೆ ಪುಟ್ಟೀ ದೃಢವಾಗಿ ಉತ್ತರಿಸಿದ್ದಳು ‘ನಾನೆಷ್ಟ್ ಸಲ ಸುಳ್ಳು ಹೇಳಿದ್ದೀನಿ ಗೊತ್ತಾ? ನಂಗೇನೂ ಆಗಿಲ್ಲ. ಸುಳ್ಳ್ ಹೇಳಿದ್ರೆ ಏನೂ ಆಗಲ್ಲ. ಇದೆಲ್ಲಾ ಸುಮ್ನೆ ದೊಡ್ಡವರು ನಮ್ಮನ್ನ ನಂಬ್ಸೋದಕ್ಕೆ ಹೇಳೊ ಕಥೆ ಅಂತ ಇಷ್ಟು ದೊಡ್ಡವಳಾದರೂ ನಿಂಗೆ ಗೊತ್ತೇ ಆಗಿಲ್ವಲ್ಲಾ? ನಾನೇನು ಹಾಲು ಕುಡೀಬೇಕು ಅಂತ ಹೋಗ್ಲಿಲ್ಲ. ಕೆನೆ ತಿನ್ನೋಣ ಅಂತ ಹೋದೆ. ಅಮ್ಮ ಅಜ್ಜಿ ಎಲ್ಲಾ ಸೀನೂಗೆ ಎರಡ್ ಎರಡ್ ಹೊತ್ತೂ ಲೋಟದ ತುಂಬಾ ಗಟ್ಟಿಹಾಲ್ ಕೊಡ್ತಾರೆ. ನಾನ್ ಕೇಳಿದ್ರೆ ಕೊಡಲ್ಲ. ಚಿಟ್ಟಿ ನಂಗೂ ನಿಂಗೂ, ಇಬ್ರಿಗೂ ಹಾಲಿಗ್ ನೀರ್ ಹಾಕಿ ಕೊಡ್ತಾರೆ ಗೊತ್ತಾ? ಗಟ್ಟಿ ಹಾಲ್ ನೋಡಿ ಆಸೆ ಆಯ್ತು ಕುಡ್ದೆ ಅಷ್ಟೇ. ಅದನ್ನ ಅಜ್ಜಿ ಹತ್ರ ಹೇಳಿ ಅವಳ ಮಡಿಕೋಲಿಂದ ತಟ್ಟಿಸ್ಕೊಳ್ಬೇಕಿತ್ತಾ?’ ಎಂದುಬಿಟ್ಟಳು.
ಅರೆ ಇವಳು ನನಗಿಂತ ಬರೀ ಎರಡು ವರ್ಷಕ್ಕೆ ಚಿಕ್ಕವಳು ಆದರೂ ಇವಳು ಯೋಚನೆ ಮಾಡುವ ಹಾಗೇ ನಾನ್ಯಾಕೆ ಯೋಚನೆ ಮಾಡ್ತಾ ಇಲ್ಲ? ಇವಳಿಗೆ ಗೊತ್ತಾಗುವಷ್ಟು ನಂಗ್ಯಾಕೆ ಗೊತ್ತಾಗ್ತಾ ಇಲ್ಲ? ಚಿಟ್ಟಿಗೆ ಆಶ್ಚರ್ಯವಾಯಿತು. ಇದೊಂದು ಮಂಕು ಏನೂ ಗೊತ್ತಾಗಲ್ಲ ಎಂದು ಅತ್ತೆಯ ಮನೆಯವರು ಅನ್ನುತ್ತಿದ್ದುದು ಅವಳಿಗೆ ನೆನಪಾಯಿತು. ಈಗ ನೋಡು ತಮಾಷೀನಾ ಎಂದು ಕಿಟಕಿಯಲ್ಲಿ ನಿಲ್ಲ್ಲಿಸಿ ಅತ್ತೆಯ ಮಕ್ಕಳು ಚೆಕ್ಕುಲಿಯನ್ನು ತಿನ್ನುತ್ತಿದ್ದರೂ ಅದರ ಶಬ್ದಕ್ಕಾದರೂ ತಿರುಗಿ ನೋಡದ ಚಿಟ್ಟಿಯನ್ನು ಆಡಿಕೊಳ್ಳುತ್ತಿದ್ದರು. ಇಲ್ಲ ಇನ್ನು ಮುಂದೆ ಇವಳಿಗಿಂತ ತಾನು ಚಾಲಾಕಿ ಆಗಿರಬೇಕು ಅಂದುಕೊಂಡಳು. ಅದೆಲ್ಲಾ ಸರಿ ನನಗೆ ಹಾಲಿಗೆ ನೀರನ್ನು ಬೆರೆಸಿ ಕೊಡುತ್ತಿದ್ದರೂ ಅದರ ರುಚಿ ನನಗ್ಯಾಕೆ ಗೊತ್ತಾಗಲಿಲ್ಲ? ಇದೆಲ್ಲಾ ನನ್ನ ಕಣ್ಣಿಗ್ಯಾಕೆ ಬೀಳಲಿಲ್ಲ? ಅಂದ್ರೆ ನನಗೆ ಗೊತ್ತಿಲ್ಲದೆ ನಮ್ಮ ಮನೆಯಲ್ಲಿ ಏನೇನೋ ನಡೆಯುತ್ತಿದೆ ಅಂದ ಹಾಗಾಯ್ತು ಎಂದುಕೊಂಡಳು ಚಿಟ್ಟಿ. ಪುಟ್ಟಿ ಮಾತ್ರ ಯಾವ ಯೋಚನೆಯೂ ಇಲ್ಲದೆ ತನ್ನ ಪಾಡಿಗೆ ತಾನು ಚಿತ್ರ ಬರೆಯುತ್ತಾ ತಾನು ಬರೆದ ಚಿತ್ರದ ಚಂದಕ್ಕೆ ತಾನೇ ಮರುಳಾಗುತ್ತಾ ‘ಮ್ಯಾವ್ ಮ್ಯಾವ್ ಬಿಸ್ ಬಿಸ್ ಮ್ಯಾವ್ ಮ್ಯಾವ್, ಅಡಿಗೆಯ ಮನೆಯೊಳು ಬಡಬಡ ಬರುವುದು ಕೊಡಹಾಲನು ಕುಡಿದು ಗಡಿಗೆಯ ಒಡೆವುದು. . . . .ಮ್ಯಾವ್ ಮ್ಯಾವ್ ಬಿಸ್ ಬಿಸ್ ಮ್ಯಾವ್ ಮ್ಯಾವ್. . . . . ’ ಎನ್ನುತ್ತಾ ಸಂತೋಷ ಪಡುತ್ತಿದ್ದಳು.
ಚಿಟ್ಟಿ ಮಾತ್ರ ಪುಟ್ಟಿಯ ಮಾತಿನಿಂದ ದಿಗ್ಭ್ರಮೆಗೊಳಗಾಗಿದ್ದಳು ‘ನಾನು ನಂಬುವ ಅಮ್ಮ ಕೂಡ ನನಗೆ ಹೀಗೆ ಮಾಡುತ್ತಾಳಾ? ಅಥವಾ ಪುಟ್ಟಿ ಸುಳ್ಳು ಹೇಳುತ್ತಿದ್ದಾಳಾ?. . . ’ ಅಮ್ಮ ಯಾವಾಗಲೂ ಅರ್ಧ ತಮಾಷಿ, ಅರ್ಧ ನೋವಲ್ಲಿ ಹೇಳುತ್ತಿದ್ದಳು ಸೀನು ಹುಟ್ಟಿದಾಗ ಪುಟ್ಟಿಗೆ ಸಿಟ್ಟು ಬಂದಿತ್ತಂತೆ. ಗಂಡು ಮಗ ಹುಟ್ಟಿದ ಅಂತ ಅಪ್ಪ, ಅಮ್ಮ ಎಲ್ಲ ಸಂತೋಷ ಪಡುತ್ತಿದ್ದರೆ ಪುಟ್ಟಿ ಮಾತ್ರ ಮಗುವನ್ನೇ ದುರುಗುಟ್ಟಿ ನೋಡುತ್ತಿದ್ದಳಂತೆ. ಮಗುವನ್ನು ಹಾಲುಕುಡಿಯಲಿ ಅಂತ ಅಮ್ಮನ ಪಕ್ಕಕ್ಕೆ ಮಲಗಿಸಿದರೆ ಗಲಾಟೆ ಮಾಡಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತಾನು ಅಮ್ಮನ ಪಕ್ಕ ಮಲಗಿದ್ದಳಂತೆ. ಮಧ್ಯರಾತ್ರೀಲಿ ಮಗು ಜೋರಾಗಿ ಅಳುತ್ತಿದ್ದರೆ ಅಮ್ಮ ಗಾಬರಿಯಲ್ಲಿ ಎದ್ದು ನೋಡಿದರೆ ಬುಟ್ಟಿತಲೆಯ ಪುಟ್ಟಿ ಮಗುವಿನ ಕೆನ್ನೆಯನ್ನು ಕಚ್ಚಿಬಿಟ್ಟಿದ್ದಳಂತೆ. ಅಮ್ಮನಿಗೆ ಕೋಪಬಂದು ಅವಳಿಗೆ ನಾಕು ಏಟನ್ನು ಹಾಕಿದ್ದಳಂತೆ. ಅಷ್ಟಾದರೂ ಪುಟ್ಟಿ ಒಂದು ಚೂರೂ ಅಳದೆ, ‘ಇವನು ಬಂದು ನನ್ನ ನಿನ್ನ ಪಕ್ಕ ಮಲಗದ ಹಾಗೇ ಮಾಡಿ ಬಿಟ್ಟ’ ಎಂದು ಸುಮ್ಮನೆ ಅಜ್ಜಿಯ ಪಕ್ಕಕ್ಕೆ ಮಲಗಿದ್ದಳಂತೆ.

ಈಗಲೂ ನೋಡಿಕೋ ಅಂತ ಪುಟ್ಟಿಗೆ ಏನಾದರೂ ಸೀನನ ಜವಾಬ್ದಾರಿಯನ್ನು ಕೊಟ್ಟರೆ ಅವನ ಮೇಲೆ ರಾಶಿತಪ್ಪನ್ನು ಹಾಕುತ್ತಿದ್ದಳು. ಸುಮ್ಮನೆ ಆಡುತ್ತಿದ್ದ ಅವನಿಗೆ ಎಲ್ಲಂದರಲ್ಲಿ ಜಿಗುಟಿ ಬಿಡುತ್ತಿದ್ದಳು. ಮೊದಮೊದಲು ಮಾತುಬಾರದ ಸೀನು ಬರೀ ಅಳುತ್ತಿದ್ದ. ಮಗುವಿಗೆ ಇರುವೆ ಕಚ್ಚಿತೋ, ಹಸಿವಾಯಿತೋ, ಹೊಟ್ಟೆಯಲ್ಲಿ ನೋವಾಯಿತೋ, ಜ್ವರ ಬಂತೋ ಎಂದು ಅಮ್ಮ ಗಾಬರಿಯಾಗುತ್ತಿದ್ದಳು. ಸ್ನಾನ ಮಾಡಿಸುವಾಗಲೋ ಬಟ್ಟೆ ಬದಲಿಸುವಾಗಲೋ ಪುಟ್ಟಿ ಮಾಡಿದ ಈ ಗುರುತುಗಳನ್ನು ಕಂಡು ಗಾಬರಿಯಾಗಿ ‘ಇವಳು ಮಗೂನ ಏನಾದ್ರೂ ಮಾಡೇಬಿಡ್ತಾಳೆ ಅಷ್ಟೇ’ ಎಂದು ನಿಟ್ಟುಸಿರು ಬಿಡುತ್ತಿದ್ದಳು. ಈಗೀಗ ಅವನಿಗೆ ಮಾತು ಚೆನ್ನಾಗಿ ಬರುವುದರಿಂದ ‘ಪುಟ್ಟೀನೇ ಮಾಡಿದ್ದು ಹೀಗ್ ಹೀಗೆ ಮಾಡಿದಳು’ ಎಂದು ನೇರವಾಗೇ ಹೇಳಿಬಿಡುತ್ತಿದ್ದ. ಆದ್ದರಿಂದ ಪುಟ್ಟಿ ಈಗ ಅವನನ್ನು ಹೊಡೆಯೊಲ್ಲ, ಕಚ್ಚಲ್ಲ, ಚಿವುಟಲ್ಲ. ಆದ್ರೆ ಅವನಿಗೆ ತೊಂದರೆ ಆಗುವ ಹಾಗೇ ಹೀಗೆ ಏನಾದ್ರೂ ಮಾಡಿರುತ್ತಿದ್ದಳು. ಯಾಕೆ ಎಂದು ಕೇಳಿದರೆ ಅವಳ ಹತ್ತಿರ ಎಲ್ಲದಕ್ಕೂ ಉತ್ತರ ಇದ್ದೇ ಇರುತ್ತಿತ್ತು.
ಯೋಚನೆ ಮಾಡುತ್ತಾ ಕೂತಿದ್ದ ಚಿಟ್ಟಿಯ ಕಡೆಗೆ ನೋಡಿದ ಪುಟ್ಟಿ ‘ಮ್ಯಾವ್ ಮ್ಯಾವ್ ಬಿಸ್ ಬಿಸ್ ಮ್ಯಾವ್ ಮ್ಯಾವ್’ ಎಂದಳು. ಅಮ್ಮ ಎಲ್ಲಿಂದಲೋ ಒಂದು ಲೋಟ ಹಾಲನ್ನು ಹಿಡಿದು ಬಂದಳು. ಬರುತ್ತಲೆ ಮಂಜಣ್ಣನವರ ಕ್ಲಬ್ ಬಳಿ ಜೋರು ಗಲಾಟೆ ನಡೆಯುತ್ತಿದ್ದುದ್ದರ ಬಗ್ಗೆ ಸುದ್ದಿಯನ್ನು ತಂದಿದ್ದಳು. ಚಿಟ್ಟಿಯ ಮನಸ್ಸು ಪುಟ್ಟಿಯ ಕಡೆಯಿಂದ ಭಾರತಿಯ ಕ್ಲಬ್ ಕಡೆಗೆ ಓಡಿತು. ಪದ್ದಕ್ಕನ ಅಳಿಯ ಶ್ರೀಕಂಠಮೂರ್ತಿ ಊರಿಗೆ ಬಂದು ಅರ್ಧ ದಿನ ಕಳೆಯುವುದರೊಳಗೆ ಈ ಊರಲ್ಲಿ ಏನಿದೆ? ಅದಕ್ಕೆ‌ಇಂಥಾ ಊರಿಗೆ ಬರಲ್ಲ ಅಂದಿದ್ದು, ಎಲ್ಲಾ ಆಗಿದ್ದು ನಿನ್ನಿಂದಲೇ ಎಂದು ಹೆಂಡತಿಯೊಂದಿಗೆ ವರಾತ ತೆಗೆದಿದ್ದನಂತೆ. ಅದನ್ನಿ ನೋಡಿ ಇಬ್ಬರನ್ನೂ ಪದ್ದಕ್ಕ ‘ದೇವಸ್ಥಾನಕ್ಕೆ ಹೋಗಿ ಬನ್ನಿ, ಒಳ್ಳೇದಾಗುತ್ತೆ’ ಅಂತ ಕಳಿಸಿದ್ದಾಳೆ.
ದಾರಿಯುದ್ದಕ್ಕೂ ‘ಆ ಹಳೆಯ ದೇವಸ್ಥಾನದಲ್ಲಿ ಏನಿದೆ? ತನಗೆ ನಂಬಿಕೆಯೇ ಇಲ್ಲ ಅಂಥಾದ್ದರಲ್ಲಿ ದೇವಸ್ಥಾನಕ್ಕೆ ಯಾಕೆ ಹೋಗಬೇಕು?’ ಎಂದೆಲ್ಲಾ ಕೂಗಾಡಿದ್ದಾನೆ. ಕಣ್ಣಂಚಲ್ಲಿ ನೀರನ್ನ ಇರಿಸಿಕೊಂಡ ವೇಣಿ ಮಾತ್ರ ದಾರಿಯಲ್ಲಿ ಸಿಕ್ಕವರನ್ನು ನಗುತ್ತಲೇ ಮಾತನಾಡಿಸಿದ್ದಾಳೆ. ‘ಯಾಕಮ್ಮ ನಿನ್ನ ಗಂಡ ನಿನ್ನ ಮೇಲೆ ಮುನಿಸಿಕೊಂಡ ಹಾಗಿದ್ದಾನೆ?’ ಎಂದು ಯಾರೋ ಕೇಳಿದ್ದು ಶ್ರೀಕಂಠಮೂರ್ತಿಯ ಕಿವಿಗೆ ಬಿದ್ದು ಕೆಂಡಾಮಂಡಲ ಆಗಿ ಅವರ ಎದುರೇ ವೇಣಿಯನ್ನು ಬಾಯಿಗೆ ಬಂದ ಹಾಗೇ ಬೈದಿದ್ದಾನೆ. ಏನೋ ಊರ ಅಳಿಯ ಮಾತಾಡ್ತಾ ಇದ್ದಾನೆ ಎಂದು ಗೌರವ ಕೊಟ್ಟು ಕೇಳಿದವರು ಹಾಗೇ ಹೊರಟುಹೋಗಿದ್ದಾರೆ. ವೇಣಿ ‘ಸ್ವಲ್ಪ ಸಮಾಧಾನವಾಗಿರಿ’ ಎಂದಿದ್ದಕ್ಕೆ ಅವಳ ಮೇಲೂ ಇನ್ನಷ್ಟು ಹಾರಾಡಿದ್ದಾನೆ. ಮನೆಗೆ ಬಂದ ಮೇಲೆ ‘ಇಲ್ಲಿ ಏನಿದೆ? ಹಾಳು ಕೊಂಪೆ, ಇಲ್ಲಿದ್ದರೆ ನನ್ನ ತಲೆ ಚಿಟ್ಟು ಹಿಡಿಯುತ್ತೆ ಅಷ್ಟೇ. ಈಗ ನಾನು ಊರಿಗೆ ಹೋಗಲೇ ಬೇಕು, ನೀನೂ ಹೊರಡು’ ಎಂದು ವೇಣಿಯನ್ನು ಬಲವಂತ ಮಾಡಿದ್ದಾನೆ. ನಾಕು ದಿನ ಇದ್ದು ಅಮ್ಮನ ಜೊರ್ತೆ ಅದೂ ಇದೂ ಮಾತಾಡುತ್ತಾ ಬೆಳದ ಊರಿನ ತುಂಬಾ ಓಡಾಡಿಕೊಂಡು ಬರುವ ಆಸೆಯಿಂದ ಬಂದಿದ್ದ ವೇಣಿಗೆ ಬೇಜಾರಾಗಿದೆ. ಮಗಳ ಬೇಜಾರನ್ನ ನೋಡಿ ಅಳಿಯನಿಗೆ ಹೇಳಲಾಗದೆ ಹೇಳಲೂ ಇರಲಾಗದೆ ದಿಕ್ಕುತೋಚದ ಪದ್ದಕ್ಕ ಖಾಯಿಲೆ ಬಿದ್ದಿದ್ದ ಗಂಡನನ್ನು ಹುರಿದುಂಬಿಸಿ, ಅಳಿಯನ ಜೊತೆ ಮಂಜಣ್ಣನವರ ಕ್ಲಬ್ಬಿಗೆ ಕಳಿಸಿದಳಂತೆ. ಹೀಗೆ ಕ್ಲಬ್ಬಿಗೆ ಗತ್ತಿನಿಂದ ಬಂದ ವೇಣಿಯ ಗಂಡ ತನ್ನ ಇಂಗ್ಲೀಷನ್ನು ಬಳಸಿ ಮೇಷ್ಟ್ರುಗಾರಿಕೆಯ ಗತ್ತಿನಿಂದಲೇ ಮಾತಾಡಿದ್ದಾನೆ. ಆಟದಲ್ಲಿ ಸೋತರು, ತಾನು ಸೋತೇ ಇಲ್ಲವೆಂದೂ, ಇಲ್ಲಿ ನಡೀತಾ ಇರೋದೆಲ್ಲಾ ಮೋಸದಾಟ ಎಂದೂ ಜರಿದಿದ್ದೇ ಅಲ್ಲದೆ ಊರ ಜನರನ್ನು ‘ಕಂಟ್ರಿ ಬ್ರೂಟ್ಸ್’ ಎಂದು ಅಂದುಬಿಟ್ಟಿದ್ದಾನೆ. ನಮ್ಮನ್ನ ಕಂತ್ರಿ ಎಂದು ಬೈದ ಎಂದು ಭಾವಿಸಿದ ಊರ ಜನ ಏನಯ್ಯ ಅಂತ ಏಕವಚನಕ್ಕೆ ಇಳಿದು ಮಾತನಾಡಿದ್ದಾರೆ. ಇದರಿಂದ ಅವಮಾನಿತನಾದ ಶ್ರೀಕಂಠಮೂರ್ತಿ ಅಷ್ಟ್ಟು ಜನ ಮಕ್ಕಳಿಗೆ ಪಾಠ ಹೇಳುವ, ಶ್ರೀಮಂತ ಮನೆತನದ ಹಿನ್ನೆಲೆಯ ತನ್ನನ್ನು ಹೀಗೆ ಅವಮಾನ ಮಾಡಬಹುದೆ? ‘ಊರ ಅಳಿಯ ಬಿಡ್ರಯ್ಯ’ ಎಂದು ಯಾರೋ ಅಂದಿದ್ದಾರೆ.
‘ನನ್ನ ಅವಮಾನ ಮಾಡಬೇಕೂಂತಾನೇ ನೀವೆಲ್ಲಾ ಕಾಯ್ತಾ ಇದ್ರಾ? ನನ್ನ ಮೇಲೆ ಕೈ ಮಾಡಿದ್ರಿ ಎಂದು ನಿಮ್ಮನ್ನೆಲಾ ಒಳಗೆ ಹಾಕಿಸಿಬಿಡ್ತೀನಿ’ ಎಂದು ರೇಗಾಡಿದ್ದನೆ. ಶ್ರೀಕಂಠಮೂರ್ತಿಯ ಈ ಆವಾಜನ್ನು ಕೇಳಿದ ಊರ ಜನ ಬಿಟ್ಟಾರೆ? ‘ನಾವೇನೂ ಬಳೆ ತೊಟ್ಟುಕೊಂಡಿಲ್ಲ’ ಎಂದು ಅವನಿಗೆ ನಾಕು ಕೊಟ್ಟು ನೂಕಿದ್ದಾರೆ. ಆಧಾರಕ್ಕೆಂದು ನಿಲ್ಲಿಸಿದ್ದ ಜಗುಲಿಯ ಮರದ ಕಂಬ ಅವನ ಹಣೆಗೆ ಬಡಿದು ರಕ್ತ ಬಂದು ಬಿಟ್ಟಿದೆ. ಅವನ ಕೋಪ ಬ್ರಹ್ಮರಂದ್ರವನ್ನು ಮುಟ್ಟಿ ಶಿವನ ಅವತಾರವನ್ನು ಧರಿಸಿ ಎಗರಾಡಿದ್ದಾನೆ. ಚಿಟ್ಟಿ ಅಲ್ಲಿಗೆ ಹೋಗುವ ಹೊತ್ತಿಗೆ ವೇಣಿ, ಪದ್ದಕ್ಕ ಇಬ್ಬರೂ ಶ್ರೀಕಂಠ ಮೂರ್ತಿಯನ್ನು ಸಮಾಧಾನ ಮಾಡಿ ಮನೆಗೆ ಕರೆದೊಯ್ಯಲು ನೋಡುತ್ತಿದ್ದರು. ಅವರಿಬ್ಬರ ಹಿಡಿತಕ್ಕೂ ಸಿಕ್ಕದೆ ಆವೇಶದಿಂದ ಬಿಡಿಸಿಕೊಂಡು ಜನರ ಮೇಲೆ ಬೀಳಲು ಹೋಗುತ್ತಿದ್ದ. ಅವನ ಹಣೆಯಿಂದ ಧಾರಾಕಾರ ರಕ್ತ ಸುರಿಯುತ್ತಲೆ ಇತ್ತು. ‘ಅಮ್ಮ ನಿನ್ನ ಗಂಡನ್ನ ಕರೆದುಕೊಂಡು ಹೋಗಿ ಮೊದಲು ಪಟ್ಟು ಹಾಕು, ಈ ಆವೇಶ ನೋಡ್ತಾ ಇದ್ರೆ ಇವತ್ತು ರಕ್ತ ಹೆಪ್ಪುಗಟ್ಟಲ್ಲ’ ಎಂದು ಯಾರೋ ಹಿರಿಯರು ಹೇಳಿದ್ದಕ್ಕೆ ಶ್ರೀಕಂಠಮೂರ್ತಿ ಅವರ ಮೇಲೆ ರೇಗಾಡಿದ. ಅಷ್ಟಲ್ಲದೆ ತನ್ನನ್ನು ಎಳೆದುಕೊಂಡು ಹೋಗಲು ಬಂದಿದ್ದ ವೇಣಿಗೂ ಸರಿಯಾಗೇ ಒಂದೆರಡು ಏಟುಗಳನ್ನೂ ಕೊಟ್ಟ.
ಇಷ್ಟೆಲ್ಲಾ ಆದರೂ ಅಳುತ್ತಲೆ ‘ಬನ್ನಿ ಮನೆಗೆ ಹೋಗೋಣ’ ಎಂದು ಸಮಾಧಾನದಿಂದ ಮಾತಾಡುತ್ತಿದ್ದ ವೇಣಿಯನ್ನು ನೋಡಿ ಊರ ಜನ ನಮ್ಮ ಊರ ಹೆಣ್ಣು ಮಗಳಿಗೆ ಎಂಥಾ ಸಹನೆ ಎನ್ನಿಸಿ ‘ಅಯ್ಯೋ’ ಅಂದಿದ್ದರು. ಚಿಟ್ಟಿಗೆ ಮಾತ್ರ ಈ ವೇಣಿಗೆ ಏನಾಗಿದೆ? ಯಾಕೆ ತಪ್ಪು ಮಾಡಿದ, ತನ್ನನ್ನು ಹೊಡೆದ ಗಂಡನಿಗೆ ತಿರುಗಿಸಿ ಹೊಡೆಯದೆ ಬಿಟ್ಟಳು ಎನ್ನಿಸಿಬಿಟ್ಟಿತ್ತು.
ಮನೆಗೆ ಬಂದವನು ಅವನ ಕೋಪವನ್ನು ತಡೆಯಲಾದರೆ ವೇಣಿಯ ಕೂದಲನ್ನು ಹಿಡಿದು ಅವಳ ತಲೆಯನ್ನು ಗೋಡೆಗೆ ಹಾಕಿ ಗಟ್ಟಿಸಿದ ತನಗೆ ಏನಾಗುತ್ತಿದೆ ಎಂದು ಅರ್ಥವಾಗುವುದರೊಳಗೆ ವೇಣಿಯ ತಲೆ ಧಿಂ ಎಂದಿತು. ಅಯ್ಯೋ ಎನ್ನುವ ಕೂಗನ್ನು ಕೇಳಿ ಬಂದ ಪದ್ದಕ್ಕ ಮಗಳನ್ನು ಬಿಡಿಸಿಕೊಳ್ಳಲು ಹರ ಸಾಹಸ ಮಾಡಿದಳು. ಕಿಟಕಿಯಿಂದ ಬಗ್ಗಿ ನೋಡುತ್ತಿದ್ದ ಚಿಟ್ಟಿ ಮತ್ತು ಊರ ಜನಕ್ಕೆ ‘ಹೋಗಿ ಇಲ್ಲೇನು ಕೋತಿ ಕುಣೀತಾ ಇಲ್ಲ’ ಎಂದು ಗದರಿಸಿದಳು. ಒಂದಿಷ್ಟು ಜನ ನಮಗ್ಯಾಕೆ ಎಂದು ಹೋದರಾದರೂ ನಿಂತ ಕೆಲವರ ಜೊತೆ ಚಿಟ್ಟಿ ಕೂಡಾ ನಿಂತಳು. ‘ಹೊರಗೆ ನಿಂತವರು ಹಾಳಾಗಿ ಹೋಗಲಿ’ ಎಂದುಕೊಂಡು ಕುದ್ದಳಾದರೂ ವೇಣಿಯ ಸ್ಥಿತಿಯನ್ನು ನೋಡಿ ಪದ್ದಕ್ಕ ಕಣ್ಣುಗಳಲ್ಲಿ ನೀರು ತುಂಬಿ ‘ಏನಪ್ಪ ಎಂಥಾ ಕುರಿ ಕಾಯೋನು ಕೂಡಾ ಹೆಂಡತಿಯನ್ನು ಹೀಗೆ ಹೊಡೆಯಲ್ಲವಲ್ಲ?’ ಎಂದು ಅಳುತ್ತಿದ್ದ ಮಗಳನ್ನು ಭುಜಕ್ಕೆ ಒರಗಿಸಿಕೊಂಡು ಕೇಳಿದಳು. ‘ಹಾ ನಾನೇನು ಕುರಿ ಕಾಯೋನಾ? ನನ್ನ ನೀವು ಹೀಗನ್ನಬಹುದಾ? ಊರ ಜನ ಅಲ್ಲದೆ ನೀವೂ ನನ್ನ ಎದುರು ನಿಂತು ಮಾತಾಡ್ತಾ ಇದೀರಾ? ನನ್ನಂಥವನಿಗೆ ನಿಮ್ಮ ಮಗಳನ್ನ ಯಾಕೆ ಕೊಟ್ಟು ಮದುವೆ ಮಾಡಿದಿರಿ? ಇನ್ನೆಂದೂ ನಾನು ಈ ಊರಿಗೆ ಬರಲಾರೆ, ನನ್ನ ಹೆಂಡತಿಯನ್ನು ಕಳಿಸಲಾರೆ’ ಎಂದು ದಿವ್ಯ ಪ್ರತಿಜ್ಞೆಯನ್ನು ಮಾಡಿದ. ಅಳುತ್ತಿದ್ದ ಹೆಂಡತಿಗೆ ‘ಇನ್ನೊಂದು ಸಲ ತೌರು ಮನೆ ಅಂತ ಏನಾದ್ರೂ ಅಂದ್ರೆ ಇನ್ಯಾವತ್ತೂ ನಿನ್ನ್ ಮುಖ ಕೂಡಾ ನೋಡಲ್ಲ’ ಎಂದು ಹೆದರಿಸಿದ. ಇಂಥಾ ಮಹಾನಾಟಕವನ್ನು ನೋಡುತ್ತಾ ಚಿಟ್ಟಿ ದಂಗಾದಳು. ಹಾಗಾದರೆ ವೇಣಿ ಇನ್ನು ಈ ಊರಿಗೆ ಬರೋದೇ ಇಲ್ಲವೇ? ಹಾಗೇ ಅವಳಿಗೆ ತನ್ನ ತಾಯ ಮನೆಗೆ ಬರಕೂಡದು ಎಂದು ಹೇಳಲಿಕ್ಕೆ ಇವನ್ಯಾರು? ಅವಳು ಇಲ್ಲೇ ಹುಟ್ಟಿ ಬೆಳೆದವಳಲ್ಲವೆ? ಅವಳಿಗೆ ಬರಬೇಕು ಎನ್ನುವ ಆಸೆ ಇರುವುದಿಲ್ಲವೇ?
‘ಹೆಣ್ಣು ನದಿಯ ಹಾಗೇ ಚಿಟ್ಟಿ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇನ್ನೆಲ್ಲೋ ಹೋಗಿ ಸೇರಬೇಕು. ನಾನು ಹಾಗೆ ಬಂದವಳೆ ಅಲ್ಲವಾ? ಎಲ್ಲ ಚಿತ್ರಗಳನ್ನು ಎದೆಯಲ್ಲಿ ತುಂಬಿಕೊಳ್ಳುವುದಷ್ಟೇ ನಮಗಿರೋದು. ಹುಟ್ಟಿದ್ದು ನಮ್ಮ ಮನೆಯಲ್ಲ. ಬಂದಿರೋದೂ ನಮ್ಮ ಮನೆಯಲ್ಲ. ಒಟ್ನಲ್ಲಿ ಹೆಣ್ಣಿಗೆ ನನ್ನದು ಅಂತ ಯಾವುದೂ ಇರೋದಿಲ್ಲ. ಹೊಟ್ಟೇಲಿ ಹುಟ್ಟಿದ ಮಕ್ಕಳನ್ನ ಬಿಟ್ಟು. ಜೀವಕೊಟ್ಟು ಹುಟ್ಟಿಸಿ ನಮ್ಮ ರಕ್ತಾನೆ ಹಾಲನ್ನಾಗಿ ಕುಡಿಸ್ತೀವಿ. ಬೆಳೆದ ಮೇಲೆ ಅವೂ ನಮ್ಮವಲ್ಲ ಪಾಪಾ ಪದ್ದಕ್ಕನ ಸ್ಥಿತಿ ನೋಡು, ಇಂಥಾ ಕರ್ಮ ಯಾ‌ಅರಿಗೂ ಬೇಡ’ ಎಂದು ನಿಟ್ಟುಸಿರಿಟ್ಟಳು ಅಮ್ಮ. ಚಿಟ್ಟಿಗೂ ಈಗ ಪದ್ದಕ್ಕನ ಬಗ್ಗೆ ಪಾಪ ಅನ್ನಿಸಿತ್ತು. ತಕ್ಷಣವೇ ‘ಅಮ್ಮ ನಾನ್ ಮಾತ್ರ ಯಾವತ್ತೂ ಮದ್ವೆ ಆಗಲ್ಲ’ ಎಂದಳು ಚಿಟ್ಟಿ ದೃಢವಾಗಿ. ಅಮ್ಮನಿಗೆ ಚಿಟ್ಟಿಯ ಮನಸ್ಸಿನಲ್ಲಿ ನಡೆಯುತ್ತಿರುವ ಕೋಲಾಹಲ ಏನೆಂದು ಅರ್ಥವಾಯ್ತು. ಅವಳ ತಲೆಯನ್ನು ಸವರುತ್ತಾ ‘ನೀನು ಇದನ್ನೆಲ್ಲಾ ಯೋಚ್ನೆ ಮಾಡೋಕ್ಕೆ ತುಂಬಾ ಸಮಯ ಇದೆ. ನಿಂಗೆ ಒಳ್ಳೆ ಗಂಡಾನೆ ಸಿಗಬಹುದು ಯೋಚ್ನೆ ಮಾಡ್ಬೇಡ’ ಎಂದು ಸಮಾಧಾನ ಮಾಡಿದ್ದಳು. ಚಿಟ್ಟಿಗೆ ಮಾತ್ರ ವೇಣಿ ಊಫಿಟ್ ಎಂದು ಹೇಳುವ ಹಾಗಾದ್ರೆ ಎಷ್ಟು ಚೆನ್ನ. ಆಗ ಅವಳು ಮತ್ತೆ ಚಿಕ್ಕವಳಾಗಿ ಈ ಗಂಡನನ್ನು ಬಿಟ್ಟು, ಬೇರೆಯ ಒಳ್ಳೆಯ ಗಂಡನನ್ನು ಮದುವೆಯಾಗಬಹುದಲ್ವಾ ಅನ್ನಿಸಿತ್ತು. ‘ಹಣೇಬರಕ್ಕೆ ಯಾರ್ ಹೊಣೆ, ಯಾರಾದ್ರೂ ಅಷ್ಟೆ. ಸಧ್ಯ ಹೇಗೋ ಇಲ್ಲೇ ಇರ್ತೀನಿ ಅನ್ನದೆ ಗಂಡನ ಮನೆಗೆ ಹೋದಳಲ್ಲ ಅಷ್ಟು ಸಾಕು’ ಎಂದಳು ಅಜ್ಜಿ.
‘ಅಮ್ಮ ಬರೀ ವೇಣಿ ಮಾತ್ರ ಅಲ್ಲ, ಅಜ್ಜಿ, ನೀನು, ಪದ್ದಕ್ಕ ಎಲ್ಲ ಎಲ್ಲ ಊಫಿಟ್ ಅಂತ ಹೇಳಿ ಚಿಕ್ಕವರಾಗಿ ಬಿಟ್ರೆ ಆಗ ಮದುವೇನೆ ಆಗ್ದೆ ಎಲ್ಲ ಸುಖವಾಗಿರಬಹುದಿತ್ತು ಅಲ್ವಾ’ ಎಂದಳು. ‘ಹಾ ಇರಬಹುದಿತ್ತು ಆಗ ನೀನು ಎಲ್ಲೇ ಬರ್ತಾ ಇದ್ದೆ, ಇಷ್ಟೆಲ್ಲಾ ಮಾತಾಡೋಕ್ಕೆ?’ ಎಂದಳು ಅಜ್ಜಿ. ಅಮ್ಮ ‘ಹಾಗೆಲ್ಲಾ ಆಗೋ ಹಾಗಿದ್ರೆ ನಮ್ಮನ್ನ ಹಿಡಿಯೋರು ಯಾರ್ ಇರ್ತಾ ಇದ್ರು ಹೇಳು? ಅದೆಲ್ಲಾ ಆಗದ ಮಾತು ಅದೆಲ್ಲಾ ಏನಿದ್ರು ನಿನ್ನ ಕುಂಟಾಬಿಲ್ಲೆಯಲ್ಲಿ ಮಾತ್ರ’ ಎಂದಳು. ಅದೂ ನಿಜ ಎನ್ನಿಸಿತು ಚಿಟ್ಟಿಗೆ.
ಪದ್ದಕ್ಕ ತನ್ನ ಮಗಳ ಜೀವನ ಹೀಗಾದದ್ದಕ್ಕೆ, ಊರ ಜನರ ಎದುರು ತನ್ನ ಮಾನ ಹೋಗಿದ್ದಕ್ಕೆ ಅವಮಾನದಿಂದ ಕುದ್ದು ಹೋಗಿದ್ದಾಳೆ. ತನ್ನ ಮಗಳಿಗೆ ‘ಇಷ್ಟೆಲ್ಲಾ ಕಷ್ಟ ಆದರೆ ಅವನ ಜೊತೆ ಇರೋದಾದ್ರೂ ಯಾಕೆ ಬಿಟ್ಟು ಬಾ’ ಎಂದಳಂತೆ. ವೇಣಿ ‘ಊರವರ ಮುಂದೆ ಈಗ ನನ್ನ ಮರ್ಯಾದೆ ಹೋಗಿರೋದೇ ಸಾಕು ಗಂಡನನ್ನು ಬಿಟ್ಟು ಬಂದವಳು ಅಂತ ಅನ್ನಿಸಿಕೊಳ್ಳುವುದು ಯಾಕೆ?’ ಎಂದು ಗಂಡನ ಜೊತೆ ಹೊರಟು ನಿಂತಳು. ಪದ್ದಕ್ಕ ಅವಳನ್ನ ಅತ್ಯಂತ ನೋವಿನಿಂದ ಕಳಿಸಿಕೊಟ್ಟಳು. ಬಸ್ಸು ಹತ್ತುವ ತನಕ ಯಾರ ಜೊತೆಯೂ ಮಾತಾಡದೆ ಉರಿಯುತ್ತಲೇ ಇದ್ದ. ಬೆಳಗ್ಗೆ ತಾನೆ ‘ಎಂಥಾ ಅಳಿಯ?’ ಅಂದುಕೊಂಡಿದ್ದ ಊರ ಜನ ‘ಅಯ್ಯೋ ಎಂಥಾ ಅಳಿಯ ಸಿಕ್ಕಿ ಬಿಟ್ಟ ಪದ್ದಕ್ಕ ಮಗಳನ್ನ ಸ್ವಲ್ಪ ನೋಡಿ ಮಾಡಿ ಆ ಮನೆಗೆ ಕೊಡಬೇಕಿತ್ತು’ ಎಂದು ಪೇಚಾಡಿಕೊಂಡರು. ಇಷ್ಟೆಲ್ಲ ಆದಮೇಲೆ ಮಂಜಣ್ಣನವರ ಮನೆಯ ಮುಂದೆ ನಿಂತು ಪದ್ದಕ್ಕ ಹಿಡಿ ಹಿಡಿ ಶಾಪ ಹಾಕಿದ್ದಳು. ನನ್ನ ಮಗಳ ಜೀವನ ಹೀಗೆ ಹಾಳಾಗೋಕ್ಕೆ ನಿನ್ನ ಕ್ಲಬ್ಬೇ ಕಾರಣ ಎಂದು ವದರಿದ್ದಳು. ಅದನ್ನ ಕೇಳಲಾರದ ರತ್ನಮ್ಮ ‘ನಾಳೆಯಿಂದ ನಾವು ಹಸಿದಿದ್ದರೂ ಪರವಾಗಿಲ್ಲ, ಈ ಕ್ಲಬ್ಬಿನ ಸಹವಾಸ ಮಾತ್ರ ಬೇಡ’ ಎಂದು ಹಟ ಹಿಡಿದರು. ಮಂಜಣ್ಣ ‘ಯಾರಿಗೋಸ್ಕರವೋ ಕೈತುಂಬುವ ಹಣವನ್ನು ಬಿಡೋಕ್ಕಾಗುತ್ತಾ ನಮ್ಮ ದುಡಿಮೆ ನಮ್ಮದು’ ಎಂದು ಹಟ ಹಿಡಿದರು.
‘ಮಗಳು ವಯಸ್ಸಿಗೆ ಬರ್ತಾ ಇದಾಳೆ. ಇದೆಲ್ಲಾ ಮನೆ ಹತ್ರ ಬೇಡ, ಇವತ್ತಾದ ಅವಾಂತರವೇ ಸಾಕು ಕ್ಲಬ್ಬನ್ನು ಇನ್ನೂ ನಡೆಸುವುದು ಬೇಡವೇ ಬೇಡ. ಇನ್ನೂ ಎಷ್ಟು ಜನರ ಶಾಪ ನಮ್ಮನ್ನು ತಟ್ಟಬೇಕು?’ ಎಂದು ಅನ್ನ ನೀರು ಬಿಟ್ಟರು. ಪರಿಣಾಮವಾಗಿ ದನದ ಕೊಟ್ಟಿಗೆಯೊಂದು ಕ್ಲಬ್ಬಾಗಿ ಪರಿವರ್ತನೆಯಾಗಿ ಊರವರ ಕಣ್ಣಲ್ಲಿ ತುಂಬಿದ್ದ ಬಣ್ಣಗಳನ್ನು ಕಳೆದುಕೊಂಡು ಹಾಳುಬಿದ್ದಿತು. ಆದರೆ ವೇಣಿಯ ಕಣ್ಣ ನೀರು ಮಾತ್ರ ಚಿಟ್ಟಿಯನ್ನು ಬಿಡದೆ ಹಿಂಬಾಲಿಸಿದ್ದವು.
(ಮುಂದುವರಿಯುವುದು)

‍ಲೇಖಕರು G

November 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. g.n.nagaraj

    ಸೀನೂ ಪರಿಚಯವಾಯಿತು.ಪುಟ್ಟಿ ಚಿಟ್ಟಿಯರ ನಡುವಣ ವೈದೃಶ್ಯವೂ ಕೂಡ. ಆದರೆ ಚಿಟ್ಟಿಗೆ ಹಾಲಿಗೆ ನೀರು ಸೇರಿಸಿ ಕೊಡುತ್ತಾರೆ ಎಂಬುದು ಗೊತ್ತಾಗಿರಲೇ ಇಲ್ಲ ಎಂಬುದು ಈ ವಿಷಯವನ್ನು ಪ್ರಖರಗೊಳಿಸುವ ತಂತ್ರ ಮಾತ್ರವೋ ಹೇಗೆ ?

    ಪ್ರತಿಕ್ರಿಯೆ
  2. g.n.nagaraj

    ಸೀನೂನ ಹಾಗೂ ಚಿಟ್ಟಿ,ಪುಟ್ಟಿಯರ ನಡುವಣ ವೈದೃಶ್ಯದ ಪರಿಚಯವಾಯಿತು. ಆದರೆ ಚಿಟ್ಟಿಗೆ ಹಾಲಿಗೆ ನೀರು ಬೆರಸಿ ಕೊಡುತ್ತಿದ್ದುದರ ಬಗ್ಗೆ ಗೊತ್ತಿರಲಿಲ್ಲ ಎನ್ನುವುದನ್ನು ನಂಬುವುದು ಕಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: