ಅವಧಿ Recommends ಸೀತಾ

ಇಂದು ಕೆ ಎಚ್ ಕಲಾಸೌಧದಲ್ಲಿ ’ಸೀತಾ’ ನಾಟಕ

ಈ ನಾಟಕದ ಪ್ರದರ್ಶನ ನೋಡಿ ಕಿರಣ್ ಕುಮಾರಿಯವರು ಬರೆದ ಬರಹ ಇಲ್ಲಿದೆ

ಕಾಡುವ ಸೀತೆಯರು

ಎಸ್ ಕಿರಣ್ ಕುಮಾರಿ

ಸಂವಾದ ಬದುಕು ಕಮ್ಯುನಿಟಿ ಕಾಲೇಜಿನ ಕ್ರಿಯಾಶೀಲ ಮಾಧ್ಯಮ ಕೋರ್ಸ್  ಸ್ಟೂಡೆಂಟ್ಸ್ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಇತ್ತೀಚೆಗೆ ಸೀತಾ ” ನಾಟಕ ಪ್ರದರ್ಶನ ಮಾಡಿದರು. ಮೂಲ ನಾಟಕ ಕರ್ತೃ ಸ್ನೇಹಲತಾ ರೆಡ್ಡಿ, ಕನ್ನಡಕ್ಕೆ ಅನುವಾದಿಸಿದವರು : ಟಿ.ಆರ್.ಮೋಹನ್. ನಿರ್ದೇಶನ : ಮಂಜುನಾರಾಯಣ್.. ನಿರ್ವಹಣೆ : ಮುರಳಿ ಮೋಹನ್ ಕಾಟಿ, ವಸ್ತ್ರವಿನ್ಯಾಸ : ಸಾನಾ ಮಹತಾಬ್. ಸಂಗೀತ : ಸುರೇಶ್
ಸೀತಾಯಣ
ಪುರಾಣಗಳ ಕಾಲದಿಂದ ಆಧುನಿಕ ಕಾಲದವರೆಗೆ ಗಂಡಸು ಮೇಲ್ಮೈ ಚಿಂತನೆ, ಆಳ್ವಿಕೆ ಮತ್ತು ಅಧಿಕಾರ ಶೋಷಣೆಗೆ ಹೆಂಗಸು ಹೇಗೆ ಬಲಿಯಾಗಿದ್ದಾಳೆ ? ಸ್ತ್ರೀ-ಎಂಬ ಜೀವಕ್ಕೆ ಗಂಡನಾಗಿ, ತಂದೆಯಾಗಿ, ಸೋದರನಾಗಿ, ಸ್ನೇಹಿತನಾಗಿ, ಪ್ರಿಯಕರನಾಗಿ ಹಲವು ಪಾತ್ರಗಳಿಂದ ಸುತ್ತುವರೆದಿದ್ದರೂ..ತನಗೆ ಕಿಂಚಿತ್ತೂ ಗೌರವವಿರದ, ತನ್ನ ಅಸ್ತಿತ್ವವನ್ನೇ ನಿರಾಕರಿಸುವ ಹಾಗೂ ತನಗೂ ಭಾವನೆಗಳಿವೆ ಎಂಬ ಅಭಿಪ್ರಾಯಕ್ಕೆ ಅವಕಾಶವೇ ಇರದಂಥ ಸ್ಥಿತಿಯನ್ನು ನಿರ್ಮಾಣ ಮಾಡಿರುವ ಎಲ್ಲ ಕಾಲಘಟ್ಟದ ಕಥಾನಕವನ್ನು ರಾಮಾಯಣದ- ಲಂಕಾ ಯುದ್ದದ ನಂತರದ ಸೀತಾ ದೃಷ್ಟಿಯ ರಾಮಾಯಣ ‘ ವನ್ನು ಸೂಕ್ಷ್ಮವಾಗಿ ಬಿಡಿಸಿಡುವಲ್ಲಿ ಈ ನಾಟಕದ ಕಥಾ ವಸ್ತು ಎಲ್ಲರ ಮನಗೆಲ್ಲುತ್ತದೆ. ‘
ದೃಶ್ಯ – 2
ಅಶೋಕ ವನದಲ್ಲಿ ಸೀತೆ ಸರಳ ಉಡುಗೆಯನ್ನುಟ್ಟು ರಾಮನ ಆಗಮನಕ್ಕಾಗಿ ಕಾಯುತ್ತಿರುವಾಗ ಜತೆಗಿದ್ದ ಪರಿಚಾರಿಕೆಯರು ಸೀತೆಯನ್ನು ರತ್ನ-ಆಭರಣ ಮತ್ತು ರೇಶಿಮೆ ಸೀರೆಯಿಂದ ಅಲಂಕರಿಸುವಂತೆ ಕೋರುತ್ತಾರೆ. ಸೀತೆ ಈ ಕೋರಿಕೆಯನ್ನು ಅತ್ಯಂತ ಪ್ರೀತಿಯಿಂದ ನಿರಾಕರಿಸುತ್ತಾಳೆ. ರಾಣಿ ಮಂಡೋದರಿ ಗಂಡ ರಾವಣನನ್ನು ಕಳೆದುಕೊಂಡಿರುವ ಈ ದು:ಖದ ಗಳಿಗೆಯಲ್ಲಿ ತಾನು ಅಲಂಕಾರ ಮಾಡಿಕೊಂಡು ಸಂತಸ ಪಡಬೇಕೆ? ಎಂಬ ಮನದಾಳದ ಮಾತುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸೀತಾ-ಮಂಡೋದರಿಯಂಥ ಮಹಿಳೆಯರ ಅಂತ:ಸಾಕ್ಷಿ ಯ ಪ್ರತೀಕದಂತಿರುವ ಈ ಮೌಲ್ಯಕ್ಕೆ ಪುರುಷಪ್ರಧಾನ ಮೌಲ್ಯವು ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ.
ದೃಶ್ಯ -3
ರಾಮನ ಅಗಲಿಕೆಯಿಂದ ನೊಂದುಕೊಂಡು ಚಡಪಡಿಸುತ್ತಿರುವ ಸೀತೆ ಬಹು ದಿನಗಳ ನಂತರ ಭೇಟಿ ಆಗೋದು ಸೀತಾ-ರಾಮನೆಂಬ ಕನಸಿನಲ್ಲಿ. ಆದರೆ ರಾಮ ತನ್ನ ಸೇವಕ ಹನುಮಂತನನ್ನು ಕಳುಹಿಸಿಕೊಟ್ಟಿರುವುದು ಸೀತೆಯ ನಿರೀಕ್ಷಿತ ಭಾವನೆಗೆ ತಣ್ಣೀರೆರಚಿದಂತಾಗುತ್ತದೆ. ಅಲ್ಲಿ ರಾಮನಿಲ್ಲ. ಬದಲಿಗೆ ಬಂಟ ಹನುಮಂತ.

ಇತ್ತ ರಾಮ-ಸೋದರ ಲಕ್ಷ್ಮಣರ ನಡುವಿನ ಸಂಭಾಷಣೆಯ ತುಣುಕು ಹೀಗೆ. ಸೀತೆಯನ್ನು ಕರೆತರಲು ಹನುಮಂತನನ್ನು ಕಳುಹಿಸುವ ಬದಲು ನೀನೇ ಹೋಗಬೇಕಿತ್ತು ಎಂದು ರಾಮನನ್ನು ಕೇಳುತ್ತಾನೆ ಲಕ್ಷ್ಮಣ. ರಾಮ ಮಾತ್ರ “ಸೋದರ, ನಾನು ರಾಜ ಅನ್ನೋದು ಮರೆಯಬೇಡ. ನನ್ನ ಸ್ವಂತದ ಭಾವನೆಗಳಿಗೆ ಇಲ್ಲಿ ಪ್ರಾಮುಖ್ಯತೆ ಕೊಟ್ಟು ರಾಜನಾಗಿ ನನಗಿರುವ ಕರ್ತವ್ಯಗಳನ್ನು ಹೇಗೆ ಮರೆಯಲಿ? ನಾನೇನು ವಿರಹದಿಂದ ನರಳುವ ಲಂಪಟನೇ? ” ಎಂದು ಉದ್ಘೋಶಿಸುವುದು ಮನುಷ್ಯ ಸಹಜ ಸಂವೇದನೆಯ ನಿರಾಕರಣೆ ಅತ್ಯಂತ ವ್ಯಂಗ್ಯವಾದ ಹಾಗೂ ಭಾವನಾರಹಿತ ರಾಮನ ಪ್ರತಿರೂಪ ಕಾಣಬಹುದಾಗಿದೆ. ಬಹುಷ: ಇಲ್ಲಿ ಮಹಿಳೆಯಾಗಿದ್ದುಕೊಂಡು ಪರಿತಪಿಸುತ್ತಿದ್ದ ಸೀತೆಯ ಭಾವನೆಗೂ , ರಾಜಧರ್ಮವನ್ನು ಪಾಲಿಸುತ್ತಿರುವ ರಾಮನ ಭಾವನೆಗೂ ಭಿನ್ನತೆ ಮತ್ತು ವ್ಯತಿರಿಕ್ತತೆ ಎದ್ದು ಕಾಣುತ್ತದೆ.
ಕೊನೆಗೆ ರಾಮನನ್ನ ಸೀತೆ ಭೇಟಿ ಮಾಡುವ ಪ್ರಸಂಗ ಎದುರಾಗುತ್ತದೆ. ರಾಮನ ಕಂಡ ಕೂಡಲೇ ಸೀತೆ ಓಡೋಡಿ ಬಂದು ಮೈತಡವುತ್ತಾಳೆ. ನಿನ್ನನ್ನು ಬಯಸಿ ಎಷ್ಟೆಲ್ಲಾ ನೋವು ಅನುಭವಿಸಿದೆ,ನಿನಗಾಗಿ ನಾನೆಷ್ಟು ಹಾತೊರೆದಿದ್ದೇನೆ ಬಲ್ಲೆಯಾ? ” ಎಂದು ಅಪ್ಪಿಕೊಳ್ಳಲು ಮುಂದಾಗುತ್ತಾಳೆ. ರಾಮ ಅವಳ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಸೀತೆಯನ್ನು ಉದ್ದೇಶಿಸಿ, ”ಸೀತೆ ನಿನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೋ ಸುತ್ತ ಮುತ್ತಲೂ ನಮ್ಮನ್ನು ಗಮನಿಸುವ ಜನರಿದ್ದಾರೆ, ..ನಾವಿಬ್ರೇ ಇಲ್ಲಿ ಏಕಾಂತದಲ್ಲಿಲ್ಲ ನೆನಪಿರಲಿ.. ” ಎಂದು ತನ್ನ ಆಸೆಗೆ ತಣ್ಣಿರೆರಚುವ ಮಾತು ಸೀತೆಯನ್ನು ಮೂಕ ರೋಧನೆಗೆ ತಳ್ಳುತ್ತದೆ.
”ರಾಮ ಬದಲಾಗಿದ್ದಾನೆ…ಅವನಿಗೆ ರಾಜ್ಯಾಧಿಕಾರದ ಅಮಲು ಏರಿದೆ ಈಗ ಸೀತೆಯ ಪ್ರೇಮದ – ಅಗತ್ಯವಿಲ್ಲ ”ಎಂದು ತನ್ನ ಅಳಲನ್ನು ತೋಡಿಕೊಳ್ಳುವುದು ಅತ್ಯಂತ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಮತ್ತೊಂದು ದೃಶ್ಯದಲ್ಲಿ ರಾಮ ಸೀತೆಯನ್ನು ಸಂತೈಸಲು ನನ್ನ ಪ್ರಿಯೆ ನಾನು ಮತ್ತು ನನ್ನ ರಾಜ್ಯ ನಿನ್ನನ್ನು ಪ್ರೀತಿಸುತ್ತದೆ. ಅಯೋಧ್ಯೆ ನಿನಗಾಗಿ ಕಾಯುತ್ತಿದೆ..ನೀನು ಅವರೆಲ್ಲರ ಪ್ರಿಯ ಮಹಾರಾಣಿ..ಅವರೆಲ್ಲರ ದೇವತೆ” ಎಂದು ವರ್ಣಿಸುತ್ತಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ,ಸೀತೆಯ ಮಾತುಗಳಲ್ಲೇ ಹೇಳುವುದಾದರೆ ” ನಾವು ಒಂದೋ ದೇವತೆಗಳು, ಇಲ್ಲವೇ ಗುಲಾಮರು . ಕಾಮದ ಅಥವಾ ಗೃಹಕೃತ್ಯದ ಉಪಕರಣಗಳು. ಲೈಂಗಿಕತೆಯ ಪ್ರಯೋಜನವೊಂದನ್ನು ಬಿಟ್ಟರೆ ನಾವು ನಿಷ್ಪ್ರಯೋಜಕರು. ರೋಮಾಂಚನಗೊಳ್ಳುವ, ಅನುಭವಗಳಿಗೆ ಮಿಡಿಯುವಂಥ ಮನಸ್ಸಿರುವ ನಿಮ್ಮಂಥ ಮನುಷ್ಯ ಜೀವಿಗಳೇ ನಾವಲ್ಲ ” ಎಂದು ಪ್ರತಿಕ್ರಿಯಿಸುವುದು ಪ್ರಸ್ತುತದ ಅನೇಕ ಹೆಣ್ಣುಗಳ- ಹೆಣ್ತನದ ಭಾವನೆ, ಅನುಭವಗಳಿಗೆ ಎಂಥ ಸ್ಥಿತಿಯಿದೆ? ಎಂಬುದನ್ನು ಮಾರ್ಮಿಕವಾಗಿ ಬಿಂಬಿಸುತ್ತದೆ.
ರಾಜ್ಯಾಧಿಕಾರದ ಆಮಿಷಕ್ಕೆ ಒಳಗಾದ – ಶ್ರೀರಾಮರಂಥ ಅನೇಕ ಪತಿಯರು ನಮ್ಮ ಸಮಾಜದಲ್ಲಿ ತಮ್ಮ ಹೆಂಡತಿಯರನ್ನು ಹತೋಟಿಗಿಟ್ಟುಕೊಳ್ಳಲು ಹೇಗೆ ಪ್ರಯತ್ನಿಸುತ್ತಾರೆ. ಮತ್ತು ಅವರ ಪಾತಿವ್ರತ್ಯ : ಶೀಲವನ್ನು ಶಂಕಿಸಿ ಅಗ್ನಿ ಪ್ರವೇಶಕ್ಕೆ ದೂಡುತ್ತಾರೆ..ಎಂಬುದನ್ನು ಮಾರ್ಮಿಕವಾಗಿ ತೋರಿಸಲಾಗಿದೆ. ಮಾತ್ರವಲ್ಲ ಪಾತಿವ್ರತ್ಯ:ಶೀಲವನ್ನು ಹೆಣ್ಣಿಗೆ ಮಾತ್ರ ಅನ್ವಯಿಸುವುದನ್ನು ಸಮರ್ಥನೆಗೊಳಪಡಿಸುತ್ತಾರೆ? ಧರ್ಮ ಮತ್ತು ರಾಜ್ಯದ ಅಧಿಕಾರವನ್ನೂ ಬಳಸಿಕೊಂಡು ಪುರುಷ ಪ್ರಧಾನ ವ್ಯವಸ್ಥೆಯನ್ನು ಗಟ್ಟಿ ಗೊಳಿಸುವ ತಂತ್ರ ಹೇಗೆ ಹೂಡುತ್ತಾರೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಸುವುದು ಪ್ರಶಂಸನೀಯ.
ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ನಿರತನಾದ ಅಯೋದ್ಯೆ ರಾಮನ ಕರ್ತವ್ಯ- ಆದೇಶವನ್ನು ತೀಕ್ಷ್ಣ ವಾಗಿ ಪ್ರತಿಕ್ರಿಯಿಸುತ್ತಾಳೆ ಸೀತೆ : ನಿನಗೆಷ್ಟು ಧೈರ್ಯ, ತಿರಸ್ಕರಿಸುತ್ತಿರುವವಳು ನಾನು, ನನ್ನ ಗಂಡನಾಗಿ, ಪ್ರೇಮಿಯಾಗಿ, ನಾನು ಜನ್ಮ ಕೊಡದ ಮಕ್ಕಳ ತಂದೆಯಾಗಿ ನಿನ್ನನ್ನು ತಿರಸ್ಕರಿಸುತ್ತೇನೆ. ರಾವಣನ ಬಗೆಗಿರುವ ಸಂತೋಷದಿಂದ, ಹೃದಯದಲ್ಲಿ ಗೌರವ ಪ್ರತಿಷ್ಟೆಯ ಭಾವನೆಗಳನ್ನು ಹೊತ್ತುಕೊಂಡು ಹೋಗುತ್ತೇನೆ. ನನಗೆ ಅವನನ್ನು ಪ್ರೀತಿಸಲಾಗಲಿಲ್ಲವಲ್ಲ ಎಂಬ ದು:ಖದಿಂದ..ಎಂದು ರಾಮನಿಗೆ ಗುಡ್ ಬೈ ಹೇಳುವುದು ರೋಮಾಂಚನೀಯ ಸಂಗತಿ. ಅಗ್ನಿಯಲ್ಲಿ ಬೆಂದ ಸೀತೆಯ ಒಡಲ ಉರಿ ಕೊನೆಗೆ ಇಡೀ ಮನುಕುಲಕ್ಕೂ ಹರಡಿ ಆ ಬೆಂಕಿಯ ಬೇಗೆಯಲ್ಲಿ ಎಲ್ಲರೂ ಬೇಯುತ್ತಿರುವಂತೆ ಹಾಗೂ ಇದೆ ರೀತಿಯಲ್ಲಿ ಮುಂದುವರೆದರೆ..ಭವಿಷ್ಯದ ಅನಾಹುತಕ್ಕೆ ಇದು ನಾಂದಿಹಾಡಿದಂತೆ ಎಂದು ಪರೋಕ್ಷವಾಗಿ ಸೂಚನೆ ಕೊಟ್ಟಿರುವುದು ಉತ್ತಮವಾದ ಅಂಶ.
ಆದರೆ ಇಡೀ ನಾಟಕದಲ್ಲಿ ಹೊಸ ಆಲೋಚನೆ ಅನುಸಂಧಾನದೊಂದಿಗೆ ಅಗಸ ಮತ್ತು ಆಕೆಯ ಹೆಂಡತಿಯನ್ನು ಬಿಂಬಿಸಲು ಪ್ರಯತ್ನಿಸಿರುವುದು ಗುಣಾತ್ಮಕ. ಅವರ ನಡುವಿನ ಸಂಭಾಷಣೆಯಲ್ಲಿ ಕೌಟುಂಬಿಕ ಸಮಸ್ಯೆ, ಅನುಮಾನ ಮತ್ತು ಅಸಮತೋಲನದ ಅಂಶವನ್ನು ಮಾನವೀಯತೆ ಮತ್ತು ಸ್ತ್ರೀತ್ವದ ಚೌಕಟ್ಟಿನ ಆಧಾರದ ಮೇಲೆ ಹೆಣೆಯಲ್ಪಟ್ಟ ಮಾದರಿ ಶಬ್ಬಾಸ್ ಎನ್ನಿಸಿಕೊಳ್ಳುತ್ತದೆ. ಶ್ರೀರಾಮ – ಸೀತೆಯರಿಗಿಂತ ಭಿನ್ನವಾಗಿ ಕಾಣುವ ಅಗಸ ಮತ್ತು ಅಗಸನ ಹೆಂಡತಿಯ ಬಿಡಿ ವ್ಯಕ್ತಿತ್ವವು ತಳ ಸಮುದಾಯದ ಬದುಕಿನ – ಒಲವು, ಹಾಗೂ ಅನ್ವರ್ಥಗಳನ್ನು ವಿವರಿಸಿಕೊಂಡಿರುವ ರೀತಿ ಅರ್ಥಪೂರ್ಣ ದಂಪತಿಗಳಂತೆ ಬಿಂಬಿಸಲ್ಪಟ್ಟಿದೆ.
ಈ ಹೊತ್ತು ಇಂಥ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ರೂಪಗೊಳ್ಳಬೇಕಿರುವ ಸಂಭಂಧಗಳು ಮತ್ತು ಭಾವನೆಗಳಿಗೆ ಪ್ರತಿಸ್ಪಂದನೆ ನೀಡುವಂಥ ವ್ಯಕ್ತಿತ್ವಗಳು ಅಗತ್ಯವಿದೆ ಎಂಬುದನ್ನು ಚೊಕ್ಕವಾಗಿ ನಿರೂಪಿಸಲ್ಪಡುತ್ತದೆ. ನಾಟಕದ ಪಾತ್ರಗಳೆಲ್ಲವೂ ನಮ್ಮ ಸುತ್ತಲ ಬದುಕಿನ ಅನೇಕ ಮಗ್ಗುಲುಗಳನ್ನು ಪರಿಚಯಿಸುತ್ತದೆ.
ದೃಶ್ಯ- 4 ರಲ್ಲಿ ಸ್ವಲ್ಪವೇ ಹೊತ್ತು ಕಾಣಿಸಿಕೊಳ್ಳುವ ” ರಾವಣ ” ನ ಪಾತ್ರಕ್ಕೆ ಒಂದು ಶರಣು. ಆತನ ಪ್ರೇಮಮಯ ಸ್ಪಂದನೆ, ನಿವೇದನೆ ಮತ್ತು ಸೀತೆಯ ಬಗೆಗಿನ ಕಾಳಜಿಯನ್ನು ಅರುಹಿಕೊಳ್ಳುವ ರೀತಿ ಅಂತ:ಕರಣದಲ್ಲಿರುವ ದೈವತ್ವವನ್ನು /ಮಾನವೀಯತೆಯನ್ನೂ ಎತ್ತಿ ಹಿಡಿದಿರುವುದು..ಪ್ರೇಕ್ಷಕರಾಗಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಇಂಥ ಪ್ರೇಮಿಯನ್ನು ಸೇರಲಾರದ ಸೀತೆಯ ಕೊರಗು.. ಎಂಥವರ ಕಣ್ಣಲ್ಲೂ ಹನಿ ಜಿನುಗುವಂತೆ ಮಾಡುತ್ತದೆ.
ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ತಂತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಶ್ರಮವಹಿಸಿದ್ದಾರೆ. ಪರಕಾಯ.ಪ್ರವೇಶ ಮಾಡಿ ಅಭಿನಯಿಸೋದು ದೊಡ್ಡ ಸವಾಲೇ ಸರಿ. ಒಟ್ಟಾರೆ ಇಡೀ ನಾಟಕವೇ ಒಂದು ಜೀವಂತ ದೃಶ್ಯ ಕಾವ್ಯವಾಗಿ ಗೋಚರಿಸಿತು. ನಿರ್ದೇಶನಾ ಶೈಲಿಗೆ ಮರುಳಾಗಿದ್ದೇನೆ.
ಬದುಕು ಕಾಲೇಜಿನಲ್ಲಿ ಪತ್ರಿಕೋದ್ಯಮ ಕಲಿಯಲು ಬಂದಿರುವ ಈ ಯುವಜನರ ತಂಡ ತಮ್ಮ ಕಲಿಕೆಯಲ್ಲಿ ಮೊತ್ತ ಮೊದಲ ಬಾರಿಗೆ ನಾಟಕ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ. ಅದಕ್ಕಾಗಿ ಈ ಯುವಜನರಿಗೆ ಅಭಿನಂದನೆಗಳು..ಜೊತೆಜೊತೆಗೆ ಇಂಥ ಹವ್ಯಾಸಿ ನಾಟಕವನ್ನು ಅಭ್ಯಾಸ ಮಾಡಿ ಸಮುದಾಯದಲ್ಲಿ ಹೊಸ ಪ್ರಜ್ನೆ ಮೂಡಿಸುವಲ್ಲಿ ಕಾರ್ಯ ನಿರ್ವಹಿಸಲಿ.. ಎಂಬ ಹಾರೈಕೆ ನನ್ನದು.
ಈ ನಾಟಕದ ಸೀತೆಯರು ಕಾಡುವ ಸೀತೆಯರಾಗಿ ನನ್ನೊಳಗೆ ಅಚ್ಚಳಿಯದೇ ನಿಂತಿದ್ದಾರೆ.
 

‍ಲೇಖಕರು G

November 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Hipparagi Siddaram

    ವಿಭಿನ್ನ ಶೈಲಿಯ ವಿಮರ್ಶೆ ಚೆನ್ನಾಗಿದೆ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: