’ಸಾಕ್ಷಿ ಹಾರಿ ಹೋದ ಪ್ರಸಂಗ’ – ಸಣ್ಣ ಕಥೆ

”ಸಿಂಚನ  ಕನ್ನಡ ಸಂಘ(ಸಿಂಗಪೂರ್)’ ಆಯೋಜಿಸಿದ ಕಥಾ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ

ವಿಜಯ್ ಹೂಗಾರ್

ಎಂದಿನಂತೆ ಈ ಬಾರಿಯೂ ಕೂಡ ಪಕ್ಕದ ಸೀಟು ಹುಡುಗಿಯದಾಗಿರಲಿ ಅಂತ ಒಮ್ಮೆ ಬೇಡಿಕೊಂಡೆ ಬಸ್ಸಿನ ಟಿಕೆಟ್ ಬುಕ್ ಮಾಡಲು ಕುಳಿತಿದ್ದೆ.ಡಿಡಿಎಲ್ ಜೆ ಚಿತ್ರದಲ್ಲಿ ಶಾರುಕ್ ಗೆ ಜರ್ನಿಯಲ್ಲೇ ದಿಡ್ಹಿರ ಅಂತ ವೈಲ್ಡ್ ಆಗಿ ಪ್ರೀತಿ ಆಗುವಂತೆ ನನ್ನ ಜೀವನದಲ್ಲೂ ಆಗಬಹುದೇನೋ ಅನ್ನುವ ಸಾಧ್ಯತೆಗಳ ಬಗ್ಗೆ ಮನಸ್ಸು ಗೌಪ್ಯವಾಗಿ ಒಳಗೊಳಗೇ ಲೆಕ್ಕ ಹಾಕಿಕೊಳ್ಳುತ್ತಿತ್ತು.ಇಲ್ಲಿಯವರೆಗಿನ ನನ್ನ ಹಿಂದಿನ ದಾಖಲೆಗಳನ್ನು ತಿರಿವಿ ಹಾಕಿ ನೋಡಿದರೆ ತಪ್ಪಿಯೂ ಕೂಡ ಈ ತರಹದ ವಿಸ್ಮಯ ನಡೆದಿರಲಿಲ್ಲ.ಕೆಲಸ ಮಾಡುವ ಕಂಪನಿಯ ಬಸ್ಸಿನಿಂದ ಹಿಡಿದು ಬಿಎಂಟಿಸಿ ಬಸ್ಸು, ರೈಲು,ಕೊನೆಗೆ ಆಟೋದಲ್ಲಿಯೂ ಹುಡುಗಿ ಬಂದು ಕುಳಿತಿರುವ ಯಾವುದೇ ಘಟನೆಗಳೂ ಇರಲಿಲ್ಲ. ಅಪ್ಪಿ ತಪ್ಪಿ ಬಂದ್ರು ತುಂಬಾ ಹಿರಿಯರು ‘ಮಗಾ…ಒಂಚೂರು’ ಅಂತ ಜಾಗ ಕೇಳುವರು ಅಥವಾ ನಮ್ಮ ವಯಸ್ಸಿನವರಾದರೆ ‘ಅಣ್ಣ…!’ ಅಂತ ಸಂಭಂದ ಕುದುರಿಸಿಯೇ ಸಭ್ಯವಾಗಿ ಸೀಟಿನಿಂದ ಹೊರತಳ್ಳುತ್ತಿದ್ದರು.ಮನೆಯವರು ನಾನು ಚಿಕ್ಕವನಿದ್ದಾಗಿನಿಂದಲೂ ‘ಒಳ್ಳೆಯ ಹುಡುಗ’ ಅಂತ ಹಣೆಪಟ್ಟ ಕಟ್ಟಿ ನನ್ನ ಖಾಯಂ ಸಭ್ಯನನ್ನಾಗಿ ಮಾಡಿ ಕೈ ತೊಳೆದಿದ್ದರು. ತಪ್ಪು ಮಾಡಲು ಬಿಡದೆ ಸರಿಯಾದ ದಾರಿಯೇ ಅರಸಿ ನೀಡುತ್ತಿದ್ದರು. ಕೊನೆಗೆ ಮಾಡಿದ ತಪ್ಪು ಎದುರಿಸುವ ಪ್ರಸಂಗಗಳು ಸಿಕ್ಕಿದ್ದು ತುಂಬಾ ಕಡಿಮೆ.ಮಿಕ್ಕ ಸಿಕ್ಕ ತಪ್ಪುಗಳೆಲ್ಲ ಚಿಲ್ರೆ ಲೆಕ್ಕದಲ್ಲಿ ಉಡುಗಿ ಹೋಗುತ್ತಿದ್ದವು. ಒಳ್ಳೆಯದೇ ಮಾಡುತ್ತಾ ಬಂದಿರುವ ‘ಅಭ್ಯಾಸ ಬಲವೋ’ ಅಥವಾ ‘ಕೆಟ್ಟದನ್ನು ಮಾಡಿ ದಕ್ಕಿಸಿಕೊಳ್ಳುವ ಧೈರ್ಯ ಸಾಲದಕ್ಕೋ’ ಯಾವುದೇ ತರಹದ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ.
ತಿಂಗಳಿಗೋ ಅಥವ ಎರಡು ತಿಂಗಳಿಗೋ ನಮ್ಮೂರಿಗೆ ಹೋಗುವ ನಾನು ಮೊದಲ ಮತ್ತು ಕೊನೆಯ ಆದ್ಯತೆ ಬಸ್ಸೇ ಆಗಿದ್ದರಿಂದ ರೈಲು ಬುಕ್ ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ.ಕಾರಣ ಇಷ್ಟೇ ನಾನು ಊರಿಗೆ ಹೋಗುವ ನಿರ್ಧಾರ ಯಾವಾಗಲೂ ತರಾತುರಿಯಲ್ಲೇ ಆಗುವದರಿಂದ ಪೂರ್ವನಿರ್ಧಾರಿತವಾಗಿ ಟಿಕೆಟ್ ಕಾಯ್ದಿರಿಸುವ ವಿಚಾರ ಯಾವಾಗಲೋ ಕೈ ಬಿಟ್ಟಾಗಿತ್ತು. ರೈಲಿನ ಸಹವಾಸ ಬಿಟ್ಟಿದ್ದಕ್ಕೋ ಗೊತ್ತಿಲ್ಲ ಬಸ್ಸಿನಲ್ಲಿ ರಾತ್ರಿಯಿಡಿ ಗೊತ್ತು ಗುರಿಯಿಲ್ಲದ ಜನರ ಮಧ್ಯ ಕಾಲು ಕಿಸಿದು ಮಲಗಿ,ಇಲ್ಲಾ ಸಿಟ್ಟಿಂಗ್ ಇದ್ರೆ ಇನ್ನೊಬ್ಬರ ಭುಜದ ಮೇಲೆ ಒರಗಿ ನಾರುವ ಬಾಯಿಯಿಂದ ಕೊಳೆತ ಮುಗುಳ್ನಗೆ ಕೊಟ್ಟು ಹೋಗುವದರಲ್ಲಿ ತುಂಬಾ ಖುಷಿ ಕೊಡುತ್ತಿತ್ತು .ಒಂಥರಾ ಕೂಡುಕುಟುಂಬ ಮನೆಸಮೆತ ಗಾಳಿಯಲ್ಲಿ ತೇಲುತ್ತ ಹೋದಂತೆ ಭಾಸವಾಗುತ್ತಿತ್ತು.

ಅಂದು ಸ್ಲೀಪರ್ ಸೀಟು ಸಿಗದ ಕಾರಣ ಸಿಟ್ಟಿಂಗ್ ಅಲ್ಲೇ ಮೈ ನೆಗ್ಗಿಸಿಕೊಂಡು ಹೋಗುವ ಪರಿಸ್ಥಿತಿ ಒದಗಿ ಬಂದಿತ್ತು. ಯಾವುದಕ್ಕೂ ಪಕ್ಕದ ಸೀಟು ಖಾಲಿಯಾಗಿಟ್ಟು ಸೀಟು ಬುಕ್ ಮಾಡಿದೆ. ಯಾರಾದರು ತಲೆ ತಿನ್ನುವ ವಕ್ತಿ ದಂಡೆತ್ತಿ ಬಂದರೆ ಸೇಫ್ಟಿಗೆ ಅಂತ ‘ಅಪ್ಪನ ಪ್ರೇಯಸಿ’ ಕಾದಂಬರಿ ಆಯುಧವಾಗಿ ಇಟ್ಟಿಕೊಂಡಿದ್ದೆ.ಯಾರಾದರು ಮಾತನಾಡಲು ಕಂಪನಿ ಸಿಕ್ಕರೆ ಸಮಯ ಕಳೆಯೋದು ಕಷ್ಟದ ಕೆಲಸವಲ್ಲ. ಅದರಲ್ಲೂ ಹುಡುಗಿ ಮಾತಿಗೆ ಸಿಕ್ಕರೆ ಮಾತಿಗೂ ಬಣ್ಣ ಬರುತ್ತದೆ.ಆದರೆ ಹುಡುಗಿ ಮಾತಿಗೆ ಸಿಗುವದು ಬಿಎಂಟಿಸಿ ಬಸ್ಸಲ್ಲಿ ಸೀಟು ಸಿಗುವಷ್ಟೇ ಕಷ್ಟ.
ಅವತ್ತಿನ ಇರುಳು ನನಗೆ ತುಂಬಾ ವಿಶೇಷವಾಗಿ ಕಂಡಿತ್ತು.ಆಫೀಸಿನ ಕೆಲಸ ಪೆಂಡಿಂಗ್ ಇಡದೆ ಎಲ್ಲ ಮುಗಿಸಿ ಬಂದಿದ್ದಕ್ಕೋ ಅಥವಾ ತುಂಬಾ ದಿವಸದ ಮೇಲೆ ಒಂದು ವಾರ ರಜೆ ಸಿಕ್ಕಿದ್ದಕ್ಕೋ ಮನಸ್ಸು ತುಂಬಾ ನಿರಾಳವಾಗಿತ್ತು.ಇರುಳಾದಮೇಲೆ ಆನಂದರಾವ್ ಸರ್ಕಲ್ಲಿಗೆ ಒಂದು ವಿಶೇಷವಾದ ಖಳೆ ಮೂಡುತ್ತದೆ. ಹಗಲಿನಲ್ಲಿ ಬೆಂಗಳೂರಿನ ಒಂದು ಸಾಮಾನ್ಯ ಪ್ರದೇಶ ಕಂಡರೆ ಇರುಳಲ್ಲಿ ಜಾಗೃತ ಜಾಗವಾಗುತ್ತದೆ. ತಮಗಿಂತಲೂ ಭಾರ ಇರುವ ಲಗೇಜ್ ಹೊತ್ತಿ ಬರುವ ಪ್ರತಿ ಜೀವಕ್ಕೂ ಪ್ರತಿಕ್ಷೆಯ ಅಲೆಗಳನ್ನು ಉದ್ದೆಪಿಸುವಂತೆ ಕೆರಳಿಸುತ್ತದೆ.

00000

ಟಿಕೆಟ್ ನಂಬರ್ ಕೊಟ್ಟು, ಬಸ್ಸ ನಂಬರ್ ಪಡೆದು ಪ್ರತಿ ಬಸ್ಸಿಗೂ ನಮಗೆ ಕೊಟ್ಟಿರುವ ಬಸ್ ನಂಬರ್ ಜೊತೆ ತಾಳೆ ಮಾಡುತ್ತಾ ಕುಳಿತುಕೊಂಡಿದ್ದೆ.ಕ್ಷಣ ಕ್ಷಣಕ್ಕೂ ಹೊಸ ಮುಖಗಳು ಅಲ್ಲಿಗೆ ಬರುತ್ತಿದ್ದವು.ತುಸು ಹೊತ್ತಾದ ಬಳಿಕ ಯಾವುದೊ ಒಂದು ಬಸ್ಸು ಆ ಮುಖಗಳನ್ನು ನುಂಗಿಬಿಡುತ್ತಿತ್ತು. ನಾನು ಕಾಯುತ್ತಿರುವ ಬಸ್ಸು ಬಿಟ್ಟು ಎಲ್ಲಾ ಬಸ್ಸುಗಳು ಸಾಲು ಸಾಲಾಗಿ ನಿಂತು ಗುರ್ ಗುರ್ ಅಂತ ಧ್ವನಿಸಿ ಮಾಯವಾಗುತ್ತಿದ್ದವು.ನನ್ನ ಜೊತೆ ಮಾತಿಗೆ ಕುಳಿತ ಪ್ರಯಾಣಿಕ ಆಗಲೇ ಒಂದೆರೆಡು ಸಲ ಲಘು ನಿದ್ದೆಯ ಸವಿ ಕಂಡಿದ್ದ.ಬಸ್ಸು ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ತಡ ಮಾಡಿ ಬಂದು ತನ್ನ ಪ್ರಯಾಣಿಕರನ್ನು ಗಲಿಬಿಲಿಯ ಬಾವಿಗೆ ತಳ್ಳಿತ್ತು.ಬಸ್ಸು ಬಂದ ಐದು ನಿಮಿಷಕ್ಕೆ ಬಸ್ಸು ಹೊರಡಲು ಸಿದ್ಧವಾಯಿತು.ನನ್ನ ಪಕ್ಕದ ಸೀಟು ಇನ್ನು ಖಾಲಿಯೇ ಇತ್ತು.ಮುಂದಿನ ಸ್ಟಾಪ್ ಗೆ ಯಾರಾದರು ಬರಬಹುದು ಅಂತ ನನ್ನಷ್ಟಕ್ಕೆ ನಾನೇ ಸಮಾಧಾನಿಸಿದೆ.ಇಂತಹ ಅಘಟಿತ ಕಾಮನೆಗಳನ್ನು ಸಾಕಿರುವ ನನ್ನ ಮನಸ್ಸು ಖಾಲಿ ಸೀಟನ್ನೇ ದುರುಗುಟ್ಟಿಸಿ ನೋಡುತ್ತಿತ್ತು.ಆ ಸೀಟು ಯಾವ ಪುಣ್ಯಾತ್ಮನ/ಪುಣ್ಯಾತ್ಮಳ ಹಿತ್ತಲು ಬಾಗಿಲುಗಳಿಂದ ಉಸಿರುಗಟ್ಟುವದೋ ಅಂತ ಯೋಚಿಸುತ್ತಿತ್ತು.
ನಮ್ಮೂರಿನ ಬಸ್ಸು ಹತ್ತಿದರೆ ಸಾಕು ಊರಿನ ಚಿತ್ರಣ ಸಹಪ್ರಯಾಣಿಕರು ಮಾತಾಡುವ ಭಾಷೆಯಲ್ಲಿ ಅರಳುತ್ತದೆ. ‘ಏ ನಿನ್ನವ್ವನ್ ನಿಮ್ಮೌವ್ವಗ್ ದೌಡ್ ಬಾ ಅಂತ್ ಹೇಳ್,ಹೊದರ್ ಆಕಡೆ ಹೊತದ್ ನೀರ್ ನಾಗ್ ಕಲ್ಲ ಹೊಡದಂಗ ಅಪ್ಪೇಶಿ ಮಾರಿದು…..! ‘. ‘ಆ ಪಿಶವಿಗಿ ಬೆಂಕಿ ಹಚ್ಚ ಅಕಾಡಿ,ಕುಸಿಗ್ ಏನ್ ಆಯ್ತ್ ನೋಡ್ ಪೈಲಾ,ಅವಗಿಂದ್ ಬಾಯಿ ಬಡಕೋತದ…….!’ ಹೀಗೆ ಪುಣ್ಯ ವಾಕ್ಯಗಳು ಕಿವಿಗೆ ಬಿದ್ದರೆ ಸಾಕು ಮನಸ್ಸು ಹೊಸ ಮುನ್ನುಡಿಗೆ ಸಜ್ಜಾಗುತ್ತದೆ.
ಪ್ರತಿ ಸಲ ಊರಿಗೆ ಹೋಗುವಾಗ ಅಮ್ಮ ಯಾವಾಗಲು ಒಂದೆರೆಡು ರೆಗ್ಯುಲರ್ ಮಾತುಗಳು ಹೇಳುತ್ತಿದ್ದಳು.’ಊಟ ಮಾಡದೆ ಮಲ್ಕೊಬೇಡ’ ಮತ್ತು ‘ನೀರಿನ ಬಾಟಲಿ ಸಂಗಟ ಇರಲಿ’ ಅಂತ. ಅವತ್ತು ಅಮ್ಮ ಹೇಳದೆ ಹೋಗಿದ್ರು ಅದು ಯಾಕೋ ನೆನಪಾಗಿತ್ತು.ಅದಕ್ಕೆ ಎದ್ದು ಕೆಳಗಿಳಿದು ಒಂದು ಬಿಸ್ಕಿಟು ಮತ್ತು ಬಾಟಲ್ ನೀರು ಹಿಡಿದು ಸಾಫ್ಟ್ವೇರ್ ಇಂಜಿನಿಯರ್ ಸ್ಟೈಲ್ ಅಲ್ಲಿ ಘಳಿಗೆಗೊಮ್ಮೆ ಘುಟುಕು ಘುಟುಕು ಕುಡಿಯುತ್ತ ಒಳಗಡೆ ಬಂದೆ.ಡ್ರೈವರ್ ಹತ್ತಿರ ಎಲ್ಲಾ ಪ್ರಯಾಣಿಕರ ಹೆಸರು ಮತ್ತು ಫೋನ್ ನಂಬರ್ ಇತ್ತು. ಅಲ್ಲಿಗೆ ಹಾಜರಿದ್ದವರ ಹೆಸರ ಮುಂದೆ ಪೆನ್ನಿನಿಂದ ಮಾರ್ಕ್ ಮಾಡುತ್ತಿದ್ದ. ನನ್ನ ಹೆಸರ ಮುಂದೆ ಕೂಡ ಮಾರ್ಕ ಮಾಡಲಾಗಿತ್ತು.ನನಗೆ ಅರಿವಿಲ್ಲದೆ ಪಕ್ಕದ ಸೀಟಿನ ಹೆಸರನ್ನು ಕಣ್ಣು ಇಣುಕಿತು.ಅದಕ್ಕೆ ಟಿಕ್ ಮಾರ್ಕ್ ಮಾಡಲಾಗಿತ್ತು.ಹೆಸರು “ಸಾ….” ಅಂತ ಓದುವಷ್ಟರಲ್ಲೇ “ಓ ನಡೀರಿ ಮುಂದೆ ಟೈಮ್ ಆಯ್ತು…!”ಅಂತ ಯಾರೋ ಒಬ್ಬ ಹಿಂದಿನಿಂದ ಗುಮ್ಮಿದ.ನಮ್ಮ ಬಸ್ಸು ಕೂಡ ಸ್ಟಾರ್ಟ್ ಆಗಿ ‘ಗುರ್…ಗುರ್’ ಅನ್ನತೊಡಗಿತು. ಹಿಂದಿನಿಂದ ನೂಕಿದ ವ್ಯಕ್ತಿಯ ಒತ್ತಾಯದ ಮೇರೆಗೆ ಹಾಗೆ ನನ್ನ ಸೀಟಿನವರೆಗೂ ನಡೆದು ಬಂದೆ.ನನ್ನ ಸೀಟಿನಕಡೆ ಒಮ್ಮೆ ಕಣ್ಣು ಹಾಯಿಸಿ ನೋಡಿದೆ ಯಾರೋ ಕುಳಿತಿದ್ದಾರೆ ಅನ್ನುವ ಮುನ್ಸೂಚನೆ ಕಣ್ಣು ನೀಡಿತು. ಆದರೆ ಅದು ಗಂಡೋ ಅಥವಾ ಹೆಣ್ಣೋ ಅನ್ನುವ ನಿರ್ಧಾರ ಕಣ್ಣು ಇನ್ನು ತಿಳಿಸಿರಲಿಲ್ಲ.ಹಾಗೇ ಮುನ್ನಡೆದೆ.ನಮ್ಮ ಸೀಟಿನ ಮೇಲೆ ಒಂದು ಪದರು ಸ್ಲೀಪರ್ ಕೋಚ್ ಆಗಿದ್ದರಿಂದ ಕುಳಿತಿರುವ ವ್ಯಕ್ತಿಯ ಅರ್ಧ ಭಾಗ ಕತ್ತಲಲ್ಲಿ ಮುಳುಗಿತ್ತು.ಕೈಯಲ್ಲಿ ಒಂದು ಪುಸ್ತಕ.ಯಾವುದು ಅಂತ ದುರುಗುಟ್ಟಿದೆ.ಅರೇ ಅದು ನನ್ನ ಪುಸ್ತಕ.ಹೊರ ಹೋಗುವಾಗ ಬ್ಯಾಗ್ ಮೇಲೆ ಇಟ್ಟು ಹೋಗಿದ್ದು.ಕುಳಿತವರು ಯಾರು ಅಂತ ಕಣ್ಣು ಇನ್ನು ತೀಕ್ಷ್ಣವಾಯಿತು.ತೊಟ್ಟಿರುವ ಬಟ್ಟೆ ಜೀನ್ಸ್ ಆಗಿದ್ದರಿಂದ ಕಂಡು ಹಿಡಿಯಲು ಸ್ವಲ್ಪ ಕಷ್ಟವಾದರು ಪೋಲಿ ಕಣ್ಣಿಗೆ ಪತ್ತೆ ಹಚ್ಚಲು ತುಂಬಾ ಸಮಯ ಹಿಡಿಯಲಿಲ್ಲ.ಕುಳಿತಿರುವ ಆತ್ಮ ಹೆಣ್ಣಿನದು ಅಂತ ನಿಸ್ಸಂದೇಹವಾಗಿ ಘೋಷಿಸಿತು.
ನಾನು ಹತ್ತಿರ ಹೋಗಿ,ತುಸು ಬಾಗಿ ‘ಅದು….ಅದು….actually ನನ್ ಸೀಟು…..’ಅಂತ ಟಿಕೆಟ್ ತೋರಿಸಲು ಮುಂದಾದೆ. ಅದಕ್ಕವಳು ನನಗೆ ಬಸ್ಸ ಜರ್ನಿ ಆಗಿ ಬರುವದಿಲ್ಲ ಓಮಿಟ್ ಆಗುವ ಚಾನ್ಸ್ ಇರತ್ತೆ ಅದಕ್ಕೆ…. 🙁 ಅದಕ್ಕೆ….! ಇಲ್ಲ ಅಂದ್ರೆ ನನ್ ನನ್ ಸೀಟಲ್ಲೇ ಕುತ್ಕೊತಿನಿ’ ಅಂತ ನಮ್ರವಾಗಿಯೇ ಬೆದರಿಸಿದಳು.ಧ್ವನಿ ತುಂಬಾ ನವಿರಾಗಿತ್ತು. ‘ಆಗೋದಿಲ್ಲ’ ಅಂತ ಹೇಳಲು ಮನಸಾಗಲಿಲ್ಲ.ಇಲ್ಲ ಅಂತ ಹೇಳಿ ಎಲ್ಲಿ ನನ್ ಮುಖದ ಮೇಲೆ ಕಾರಿಕೊಂಡರೆ ಅಂತ ‘ಇರಲಿ ಪರವಾಗಿಲ್ಲ’ ಹೇಳಿ ಪಕ್ಕದಲ್ಲೇ ಕುಳಿತುಕೊಂಡೆ.ಒಬ್ಬರ ಮೂಗು ಇನ್ನೊಬ್ಬರ ಎಂಜಲು ಉಸಿರು ನೆಕ್ಕುವಷ್ಟು ಅಕ್ಕ ಪಕ್ಕ.
ಅವಳು ಅವಳಷ್ಟಕ್ಕೆ ಪುಸ್ತಕದಲ್ಲಿ ಮುಳುಗಿಹೊಗಿದ್ದಳು. ಯಾಕೆ ಏನು ಅಂತ ಕೇಳುವ ಮೊದಲು ಆ ಪುಸ್ತಕ ನನ್ನದೇ ಅಂತ ಖಚಿತ ಆದ ಮೇಲೆ ದಬಾಯಿಸಬೇಕು ಅಂತ ವಾರೆಗಣ್ಣಿನಿಂದ ಗೌಪ್ಯವಾಗಿ ಗಮನಿಸುತ್ತಾ ಹೋದೆ.ಅವಳ ಚಾಣಾಕ್ಷತೆಯ ಮುಂದೆ ನನ್ನ ಗೌಪ್ಯಕಾರ್ಯಾಚರಣೆ ಮೊದಲ ಹಂತದಲ್ಲೇ ಬಾಲ ಮಡಚಿ ಮುಗ್ಗರಿಸಿತು.
ಅವಳು ನನ್ನೆಡೆಗೆ ತಿರುಗಿ.
‘ಇದನ್ನು ಖರೀದಿಸಿದ ಹೊಸತರಲ್ಲಿ ಸ್ವಲ್ಪ ಓದಿದ್ದೆ……ಒಂಚೂರು ಬಾಕಿ ಇತ್ತು.
ಕಥೆಗೆ ಈಗ ಪದಗಳಿಂದ ಮುಕ್ತಿ ಸಿಗತ್ತೆ ಅನ್ಸುತ್ತೆ’ ಅಂತ ಬದಲಾಗುತ್ತಿರುವ ನನ್ನ ಹಾವಭಾವಕ್ಕೆ ನಗುತ್ತಲೇ ಹೇಳಿದಳು. ಅದೊಂದು ಪ್ರಬುದ್ಧ ನಗುವಾಗಿತ್ತು.
ಅವಳ ನಗುವಿಗೆ ನನ್ನ ನಗು ಸೇರಿಸಿ ‘ಓದಿಸಿಕೊಳ್ಳುವ ಕಥೆಯ ಋಣ ಯಾವ್ಯಾವ,ಯಾರ್ಯಾರು ಖರಿದಿಸಿದ ಪುಸ್ತದಲ್ಲಿ ಅಡಗಿರತ್ತೋ…..ಒಟ್ಟಾರೆ ಆ ಬಿಡಿ ತುಣುಕುಗಳು ಎಲ್ಲೋ ಒಂದು ದಿನ ಒಂದಾಗಲೇ ಬೇಕು’ ಅಂತ ಹೇಳಿದೆ.
ಅವಳು ಹೇಳಿದ ಮಾತಿಗೆ ಸರಿ ಸಮವಾಗಿ ನಿಂತ ನನ್ನ ಮಾತು ಕೇಳಿ ಅವಳ ದೇಹ ದೇಗುಲ ನನ್ನೆಡೆಗೆ ಮುಖ ಮಾಡಿ ‘ನಿಜ ನಿಜ….!’ ಅಂತ ಹೇಳಿದಳು.
ಅವಳು ಮತ್ತೆ ಪುಸ್ತಕದ ಪದಗಳನ್ನು ಆಯುತ್ತ,ಕಲ್ಪನೆಯ ಜಾಡು ಮೂಡಿಸುತ್ತ ಕುಳಿತಳು.ಅವಳಿಗೆ ಪುಸ್ತಕ ಕೊಟ್ಟು ನಾನು ನಿರುದ್ಯೋಗಿಯಾದೆ,ಅವಳ ರೂಪ ರೇಷೆಗಳನ್ನು ಗಮನಿಸುವ ಕಾರ್ಯ ಒಂದನ್ನು ಬಿಟ್ಟು.ತುಸು ಹೊತ್ತು ಯೋಚನೆ ಮಾಡಿದಾಗ
ಪಯಣ,ಪ್ರಣಯ,ಪ್ರೇಯಸಿ(ಅಪ್ಪನ ಪ್ರೇಯಸಿ ಕಾದಂಬರಿ) ಪ್ರಾಣಾಂತಿಕ ಸಂಯೋಜನೆ(ಡೆಡ್ಲಿ ಕಾಂಬಿನೇಶನ್) ಅನಿಸಿತು.

00000

ನೀಲಿ ಬಣ್ಣದ ಜೀನ್ಸು.ಅದಕ್ಕೊಪುವ ಹಾಗೆ ಕಪ್ಪು ಬಣ್ಣದ ಟೀ ಶರ್ಟು.ಟೀ ಶರ್ಟ್ ಮೇಲೆ ಬಿಳಿ ಬಣ್ಣದಿಂದ ಬರೆದ ಯಾವುದೊ ಅಮರವಾಣಿಯ ತುಣುಕು.ಹೇರ್ ಕ್ಲಿಪ್ಪಿನಿಂದ ಆಗಷ್ಟೇ ಬಿಡುಗಡೆ ಹೊಂದಿ ಎಡಭುಜಕ್ಕೆ ಒರಗಿದ ಕೇಶರಾಶಿ.ಟೈಮ್ ಟು ಟೈಮ್ ಮುಂಗುರುಳು ಹಿಂದಕ್ಕೆ ಹಾಕುವ ವೈಖರಿ.ಕಾಲ್ಕೆಳಗೆ ಒಂದು ತೊಡೆಗಣಕದ ಬ್ಯಾಗು.ಪದೇ ಪದೇ ಬಡಿದುಕೊಳ್ಳುವ ಸ್ಮಾರ್ಟ್ ಫೋನಿನ ಸೊಲ್ಲು.ಇಷ್ಟೆಲ್ಲಾ ಸಂಕ್ಷಿಪ್ತ ಮಾಹಿತಿಯನ್ನು ವಾರೆಗಣ್ಣಿನ ಸಹಾಯದಿಂದ ಸಿಕ್ಕಿತು.ಮೂಗಿಗೆ ಮುತ್ತುತ್ತಿದ್ದ ಸಹಜ ಅನ್ನಿಸುವಂತಹ ಕೃತಕ ಪರಿಮಳ ನನ್ನ ಸುತ್ತ ಒಂದು ವಲಯವೇ ಸೃಷ್ಟಿಸಿತು.ಸ್ಮಾರ್ಟ್ ಫೋನಿನ ಬೆಳಕಿನಿಂದ ಅವಳ ಮುಖ ತುಸು ಹೊತ್ತು ಬೆಳಗಿ ಮತ್ತೆ ಕರಗುತ್ತಿತ್ತು.ಹೀಗೆ ತುಂಡು ತುಂಡಾಗಿ ಕಂಡ ಅವಳ ಅಸ್ಪಷ್ಟ ಮುಖ ‘ಹೀಗಿದೆ’ ಅಂತ ಹೇಳುವ ನಿಖರತೆ ಸಿಕ್ಕಿರಲಿಲ್ಲ.
ನಿರಾಳ ಮನಸು ‘ಆಯ್ತಾ ಸಮಾಧಾನ…? ಮುಂದೆ…?’ ಅನ್ನುವ ಕೆಣಕು ಪ್ರಶ್ನೆ ನನ್ನ ಮುಂದಿಟ್ಟಿತು.ನಾನು ಮೌನಕ್ಕೆ ಶರಣಾದೆ.ಕೊನೆಗೆ ‘ಇಷ್ಟೇನಾ?’ ಅನಿಸಿತು.’ಸಿಗುವವರೆಗೆ ಒಂದು ಒಂದು ಕೊರಗು,ಸಿಕ್ಕ ಮೇಲೆ ಕೈ ಜಾರುವ ಬೆರಗು’ ಅನಿಸಿತು.ಇತ್ತ ಬಸ್ಸು ಬೆಂಗಳೂರಿನ ಬೆಳಕು ಕಳಚಿ ಮುನ್ನುಗ್ಗುತ್ತಿದ್ದರೆ ಅತ್ತ ವಿಶಾಲವಾದ ಇರುಳು ತನ್ನ ಎರಡು ಕೈ ಚಾಚಿ ನಮ್ಮನ್ನು ಸೆಳೆದುಕೊಳ್ಳುತ್ತಿತ್ತು.ಡ್ರೈವರ್ ಅಳಿದುಳಿದು ಬೆಳಗುತ್ತಿದ್ದ ಲೈಟ್ ಆರಿಸಿ ಎಲ್ಲರನ್ನು ಕತ್ತಲಿನಿಂದ ಕಟ್ಟಿಹಾಕಿದ.ಬಸ್ಸು ಏಕಾಂತವಾಗಿ ಇರುಳು ಸೀಳುತ್ತ ಒಂದೇ ಸಮನೆ ಓಡುತ್ತಿತ್ತು.
ಅದೆಷ್ಟೇ ದೂರ ಸರಿದು ಕುಳಿತರೂ ರಸ್ತೆಯ ತಿರುವಿಗೆ ನಮ್ಮ ಭುಜಗಳು ಅಂಟುತ್ತಿದ್ದವು. ಸುಧೀರ್ಘವಾಗಿ ಅಥವಾ ಎಡೆಬಿಡದೆ ಹೆಗಲಿಗೆ ಹೆಗಲು ಮುತ್ತಿಡುವ ಪರಿಸ್ಥಿತಿ ಪದೇ ಪದೇ ಬಂದರೆ ‘ಇದೆಲ್ಲ ಸಹಜ ಬಿಡಿ’ ಅನ್ನುವಂತಹ ಕೃತಕ ನಗೆ ಬೀರಿ ಸುಮ್ಮನಾಗಿ ಬಿಡುತ್ತಿದ್ದೆವು.ಅಮಲು ತುಂಬಿದ ರಸ್ತೆಯ ಮೇಲೆ ಬಸ್ಸಿನ ತುಂಟ ಚಲನೆಗೆ ಭುಜಗಳು ಮೈ ಮರೆತು ಮೊಜಿನಲ್ಲಿದ್ದವು.ರಸ್ತೆಯ ಪ್ರತಿಯೊಂದು ತಿರುವಿಗೂ ಝಿಲ್ಲೆನ್ನೆವ ಭಾವ ಸರ್ವಾಂಗ ವ್ಯಾಪಿಸಿ ದಿಗ್ದಷೆಗಳಿಗೆ ರೋಮಾಂಚನ ತಲುಪಿಸುತ್ತಿತ್ತು.ಆ ಸ್ಪರ್ಶ ನನ್ನ ಏಕಾಗ್ರತೆಯನ್ನು ಕಸಿದು ಅವಳ ಭುಜಕ್ಕೆ ಕಟ್ಟಿಹಾಕಿತ್ತು.ಭುಜ ತುಂಬಾ ಮೊನಚಾದಂತೆ ತೋರುತ್ತಿತ್ತು.
ಗೌಪ್ಯವಾಗಿ ಅವಳ ಚಲನವಲನಗಳನ್ನು ಗಮನಿಸುತ್ತಿದ್ದ ಮನಸ್ಸು ತನ್ನಷ್ಟಕ್ಕೆ ಸುಮ್ಮನೆ ಕುಳಿತಿತ್ತು.ಬಸ್ಸಿನ ವೇಗ ವೃದ್ದಿಯಾದಂತೆ ತಂಗಾಳಿ,ಬಿರುಗಾಳಿಯಂತೆ ಮಲಗಿದ ಅವಳ ಕೇಶರಾಶಿಯನ್ನ ಬಡಿದೆಬ್ಬಿಸುತ್ತಿತ್ತು.ಬೇಕಾಬಿಟ್ಟಿಯಾಗಿ ಗಾಳಿಯ ದಿಕ್ಕಿಗೆ ಹಾರಾಡುತ್ತಿದ್ದ ಕೂದಲು ನನ್ನ ಭುಜ ಮತ್ತು ಮುಖಕ್ಕೆ ಮುಟ್ಟಿ ಹೋಗುತ್ತಿತ್ತು. ಅದನ್ನರಿತ ಅವಳು ತಡಮಾಡದೆ ಕಿಟಕಿ ಮುಚ್ಚುವ ಕಾರ್ಯಕ್ರಮಕ್ಕೆ ಮುಂದಾದಳು.ಮಳೆ ಬಿಸಿಲು ಚಳಿಗೆ ತುಕ್ಕು ಹಿಡಿದ ಕಿಟಕಿ ಮುಚ್ಚಲು ಹೆಣಗುತ್ತಿದ್ದಳು.ಕಿಟಕಿ ಮುಚ್ಚುವ ಎಲ್ಲ ಸಾಧ್ಯತೆಗಳನ್ನು ಪರೀಕ್ಷಿಸಿದ ಮೇಲೆ ಕೊನೆಗೆ ನನ್ನೆಡೆಗೆ ‘ರೀ ಒಂಚೂರು ಸಹಾಯ ಮಾಡಿ…!’ ಅಂತ ಆಹ್ವಾನ ಪತ್ರವನ್ನ ಕಣ್ಣಿನಿಂದಲೇ ಪೋಸ್ಟ್ ಮಾಡಿದಳು.ಅದಕ್ಕೆ ನಾನು ತಡಮಾಡದೆ ಲೈಕ್ ಒತ್ತಿ ಸಹಾಯಕ್ಕೆ ಮುಂದಾದೆ.
ಅವಳು ಕುಳಿತ ಜಾಗವನ್ನು ಭೇದಿಸಿ ಕಿಟಕಿ ಮುಚ್ಚಿ ಅವಳಿಂದ ಸೈ ಅನ್ನಿಸಿಕೊಳ್ಳುವದು ಸುಲಭದ ಮಾತಾಗಿರಲಿಲ್ಲ. ಯಾಕೆಂದರೆ ಇದಕ್ಕೂ ಮೊದಲು ನಾನು ಈ ಪ್ರಯತ್ನಕ್ಕೆ ಕೈ ಹಾಕಿ ಕೈ ಸುಟ್ಟಿಕೊಂಡಿದ್ದೆ.ಆದರೂ ‘ಸಭ್ಯತೆಯೇ ಮೊದಲ ಆದ್ಯತೆ’ ಅಂತ ಅವಳೆಡೆಗೆ ಬಾಗಿ ಕಿಟಕಿಗೆ ಕೈ ನೀಡಿದೆ.ಇಬ್ಬರು ನೂಕುವ ರೋಧಕ್ಕೆ ಕಿಟಕಿ ಪ್ರತಿರೋಧವಾಗಿ ತಟಸ್ಥವಾಗಿ ನಿಂತಲ್ಲೇ ನಿಂತಿತ್ತು.ಪುಸ್ತಕ ಪಕ್ಕಕ್ಕಿಟ್ಟು ಇನ್ನು ಜೋರಾಗಿ ದವಡೆ ಕಚ್ಚಿ ಮತ್ತೆ ನೂಕಿದೆವು.ಕಿಟಕಿ ಜಪ್ಪಯ್ಯ ಅಂದ್ರೂ ಅಲುಗಾಡಲಿಲ್ಲ.ಜೋರು ಜೋರಾಗಿ ಬಿಟ್ಟ ಇಬ್ಬರ ಉಸಿರು ಗಾಳಿಯಲ್ಲಿ ಒಂದಾಗುತ್ತಿದ್ದವು.ಕಿಟಕಿಯ ಕಠೊರ ನಿಲುವು ನಮ್ಮ ಸಾಮರ್ಥ್ಯವನ್ನು ಹೀಯಾಳಿಸುತ್ತಿತ್ತು.ಒಂದು ಮುಗುಳ್ನಗೆಯನ್ನು ಕೊಟ್ಟು ಹಟಮಾರಿ ಕಿಟಕಿಯನ್ನೇ ನೋಡಿದೆ.ಅದಕ್ಕವಳು ನಗುವಿಗೆ ಸ್ಪಂದಿಸಿ ಮರುನಗು ನೀಡಿ ಮತ್ತೆ ಕಿಟಕಿಗೆ ಕೈ ಹಾಕಿದಳು.ಇನ್ನೇನು ಮಾಡೋದು ಅಂತ ಕಿಟಕಿಯ ತಳದಲ್ಲಿ ಏನಾದರು ಕಸ ಸಿಕ್ಕಿರಬಹುದು ಅಂತ ಕೈ ಹಾಕಿ ತೆಗೆದೆ.ಮತ್ತೆ ಇಬ್ಬರ ಕೈ ಕಿಟಕಿಗೆ ಕೊಟ್ಟು ಜೋರು ನೀಡಿದೆವು.ನಾವು ನೂಕಿದ ರಭಸಕ್ಕೆ ತಾಳದೆ ಕಿಟಕಿ ಒಂದೇ ಸಮನೆ ಮುಚ್ಚಿತು.ಶಕ್ತಿ ಹಾಕಿ ನೂಕಿದ್ದರಿಂದ ನನ್ನ ತೋಳಿಗೆ ಅವಳ ಎದೆ ತಾಗಿತು.’ಅಯ್ಯೋ…,ರೀ ನೋಡಿ ತಳ್ರಿ’ ಅಂತ ಎಲ್ಲರಿಗೂ ಕೇಳಿಸುವ ಹಾಗೆ ಕಿರುಚಿದಳು.ಅವಳ ಶಬ್ದ ಕಿವಿಗೆ ಬಿದ್ದ ತಕ್ಷಣ ಎದೆಗೆ ಅಂಟಿದ ಕೈ ಹಿಂದೆ ತೆಗೆದುಕೊಂಡೆ.
ಅವಳು ನಾಚಿ ಮಗುಚಿಕೊಂಡಳು.
ನನ್ನ ಸಭ್ಯತೆ ಲೂಟಿಯಾಗಿ ನರ ನಾಡಿಯಲ್ಲೆಲ್ಲ ದಂಗೆ ಎದ್ದಿತು.
ಬಯಸದೇ ಬಂದ ಸ್ಪರ್ಷ ಎದೆಯಲ್ಲಿ ಘನಿಕರಿಸಿದ ಯಾವುದೊ ಬಯಕೆ ಸ್ಖಲಿಸಿದಂತೆ ಭಾಸವಾಗಿ ರಕ್ತ ಬಿಸಿಯಾಗಿ ಮೈ ಬೆವತು ಹೋಗಿತ್ತು.
ಎಲ್ಲರು ನನ್ನನ್ನ ಅಪರಾಧಿ ದೃಷ್ಟಿಯಿಂದ ನೋಡಿ ಏನಾಯ್ತಮ್ಮ ಅಂತ ಹೆಣ್ಣು ಜೀವಕ್ಕೆ ಕೇಳಿದರು.ಅದಕ್ಕವಳು ಏನಿಲ್ಲ ಅಂತ ಹೇಳಿ ಸುಮ್ಮನಾದಳು.ಘಟನೆ ಸಹಜವಾಗಿ ಘಟಿಸಿದ್ದರಿಂದ ಎಲ್ಲರೂ ಅದನ್ನು ಲೈಟ್ ಆಗಿಯೇ ಸ್ವೀಕರಿಸಿದರು.
ಏನು ಮಾತಾಡದೆ ನನ್ನ ಸೀಟಿನಲ್ಲೇ ಬಂದು ಕುಳಿತುಕೊಂಡೆ.ಆ ಗುಂಗಿನಿಂದ ಹೊರಬರಲು ತುಸು ಸಮಯವೇ ಬೇಕಾಯಿತು.ಕ್ಷಮೆ ಕೇಳಲು ಮುಂದಾದೆ.ಸುಮ್ಮನಾದೆ.ಸ್ಮಶಾನ ಮೌನ ಇಬ್ಬರಲ್ಲೂ ಆವರಿಸಿತು.
ಮತ್ತೆ ಅವಳೆಡೆಗೆ ಮುಖ ಮಾಡಿ ‘ಸಾರೀ’ ಎಂದೆ.
ನಿರುತ್ತರನಾದೆ.
ತಪಸ್ಸು ಭಂಗ ತಪಸ್ವಿನಿಯಂತೆ ಸುಮ್ಮನ್ನಿದ್ದಳು.
ಮತ್ತೆ ‘ಐ ಯಮ್ ರಿಯಲಿ ಸಾರೀ’ ಅಂದೇ.
ಬಾಡಿಗೆಯ ನಗು ತಂದು ‘ಇಟ್ಸ್ ಓಕೆ’ ಅಂದಳು.
ಸ್ವಲ್ಪ ಸಮಾಧಾನವಾಯಿತು.
‘actually ಅದು ಸಡನ್ ಆಗಿ ಕಿಟಕಿ ಹೆಂಗ ಕ್ಲೋಸ್ ಆಯ್ತು ಅನ್ನೋದು ಗೊತ್ತ್ ಆಗ್ಲಿಲ್ಲ’ ಅಂತ ಮಾತು ಮುಂದುವರಿಸಿದೆ.
‘ಪರವಾಗಿಲ್ಲ…! ಅಂತ ಕಿರುನಗು ಕೊಟ್ಟಳು’
ಆ ನಗು ಜೀವಂತವಾಗಿತ್ತು.

೦೦೦೦೦

ಬಸ್ಸು ಟಾರು ರಸ್ತೆಯ ಮೇಲೆ ಬೆಳಕು ಉಗುಳಿ ಹಾಗೆ ಹಿಂದಿನಿಂದ ಬೆಳಕನ್ನು ಉಡುಗುತ್ತ ತಾನು ಬಂದಿದ್ದ ಪುರಾವೆಯನ್ನ ಅಳಿಸುತ್ತ ಸಾಗುತ್ತಿತ್ತು.ಅತ್ತ ಕಾದಂಬರಿಯ ಅಂತಿಮ ಕಂತು ದೃಷ್ಟಿಯ ಮುಖಾಂತರ ಅವಳ ಸ್ಮೃತಿ ಸೇರುತ್ತಿತ್ತು.ಕೊನೆಯ ಪುಟ ಓದಿ ಮುಗಿಸಿದ ಮೇಲೆ ಕಥಾ ಪಾತ್ರಗಳನ್ನ ಮತ್ತು ಅವುಗಳು ಬೆಳೆದದನ್ನ ಅರಗಿಸಿಕೊಳ್ಳುವಂತೆ ಕಣ್ಮುಚ್ಚಿ ಒಮ್ಮೆ ದೀರ್ಘ ಉಸಿರು ಬಿಟ್ಟಳು.
ಮುಕ್ತಿ ಸಿಕ್ತಾ…?ಅಂತ ಕುತೂಹಲದಿಂದ ಕೇಳಿದೆ.
‘ಸಿಕ್ತು….ಆದ್ರೆ ನನಗಲ್ಲ….ಲೇಖಕನಿಗೆ.ಲೇಖಕ ಬರೆದು ನಿರಳನಾಗುತ್ತಾನೆ,ಆದ್ರೆ ಓದುಗ ಕಥೆಗೆ ಬಲಿಯಾಗುತ್ತಾನೆ’. ಎಂದಳು
‘ಲೇಖಕ ಓದುಗನಾದಮೆಲೇನೆ ಲೇಖಕನಾಗುವದಕ್ಕೆ ಸಾಧ್ಯ ಆಲ್ವಾ?ಅದು ಅವನಿಗೂ ಬಿಟ್ಟಿದ್ದಲ್ಲ…!ಯಾರಿಗೂ….!’. ಅಂತ ಹೇಳಿದೆ
‘ಬರಹಗಾರನಿಗೆ ಪಾತ್ರ ಸೃಷ್ಟಿಸುವದರ ಮೇಲೆ ಹಿಡಿತವಿರುತ್ತೆ. ಆದ್ರೆ ಆ ಪಾತ್ರಗಳು ಓದುಗನ ಮೇಲೆ ಮಾಡುವ ಪರಿಣಾಮಗಳ ಮೇಲೆ ಹಿಡಿತವಿರುವದಿಲ್ಲ. ಅವರವರು ಅವರವರೇ ಸಂಭಾಳಿಸಬೇಕು. ಇದು ಒಂಥರಾ ಬಿಲ್ಲುಗಾರಿಕೆ ಇದ್ದಂಗೆ.ಬಿಲ್ಲು ಹಿಡಿದು ಎಳೆಯುವದಷ್ಟೇ ಲೇಖಕನ ಪಾತ್ರ. ಅದು ಯಾರಿಗೆ ನಾಟುತ್ತೆ , ಎಷ್ಟರ ಮಟ್ಟಿಗೆ ನಾಟುತ್ತೆ ಅನ್ನುವದು ಅವನಿಗು ಗೊತ್ತಿರುವದಿಲ್ಲ’ ಎಂದಳು.
ನಾನು ನಿಜ ನೀಡಿ ಅಂತ ತಲೆ ಆಡಿಸಿದೆ.
ಹಸಿವಾಗಿದ್ದರಿಂದ ಬಿಸ್ಕಿಟು ಪ್ಯಾಕೆಟ್ ಒಡೆದು ಅವಳೆಡೆಗೆ ಕೈ ಮಾಡಿದೆ.ಅದಕ್ಕವಳು ‘ಪರವಾಗಿಲ್ಲ..!’ಅಂತ ಹೇಳಿ ಸುಮ್ಮನಾದಳು.ಮತ್ತೊಮ್ಮೆ ಕೇಳಿದ್ದಕ್ಕೆ ಸ್ವೀಕರಿಸಿದಳು.ಒಂದಾದ ಮೇಲೆ ಒಂದು ಇಬ್ಬರು ತಿಂದು ಮುಗಿಸಿದೆವು.ಅವಳ ಹಸಿವು ನನಗಿಂತಲೂ ಜೋರಾಗಿತ್ತು ಅನ್ನುವದು ಅದನ್ನ ತಿಂದು ಮುಗಿಸಿದ ರಭಸದಲ್ಲೇ ತಿಳಿಯಿತು.
ಕೊನೆಗೆ ‘ಥ್ಯಾಂಕ್ಸ್ ‘ಹೇಳಿದಳು
‘ಇರ್ಲಿ ಬಿಡ್ರಿ…’ ಅಂತ ಹೇಳಿದೆ.
‘ಹೌದು ನೀವು ನಾರ್ಥ ಕಡೆಯವರಾ?’ ಅಂತ ಮುಂಗುರುಳು ಸರಿಸುತ್ತ ಕುತೂಹಲದಿಂದ ಕೇಳಿದಳು.
‘ಎಲ್ರೂ ಮಾತಾಡಿದ ನೆಕ್ಸ್ಟ್ ಸೆಕೆಂಡ್ ಈ ಪ್ರಶ್ನೆ ಕೆಳ್ತಾರ.ನೀವು ಸ್ವಲ್ಪ ತಡ ಮಾಡಿದ್ರಿ.
ನಿಜ ಹೇಳಬೇಕೆಂದ್ರ ನಮ್ಮೂರು ಬಸವಕಲ್ಯಾಣ. ಬೆಳೆದದ್ದು ಗುಲ್ಬರ್ಗ.
ನಮ್ಮೂರ ಕಡಿ ಹೋದ್ರ ‘ಏನ್ಲೇ ಬೆಂಗಳೂರು ಹೋಗಿ ಎರೆಡು ತಿಂಗ್ಳು ಆಗಿಲ್ಲ ಆಗ್ಲೇ ಬೆಂಗಳೂರು ಭಾಷಾ ಶುರು ಹಚ್ಚಿಕೊಂಡಿದ್ದಿ’
ಅಂತ ಕೆಳ್ತಾರ.
ಇಲ್ಲಿ ನೋಡಿದ್ರ ‘ನೀವು ನಾರ್ಥ ಕಡೆಯವರಾ ಅಂತ ಕೇಳ್ತಿರಿ?’
ನಮ್ ಭಾಷ್ಯಾ ಅಗಸನ್ ನಾಯಿ ಥರ ಆಗ್ಯದ.
ಅಂತ ಸುಧಿರ್ಘವಾಗಿ ವಿವರಿಸಿದೆ.
ಅದಕ್ಕವಳು ನಕ್ಕು ‘ಚನ್ನಾಗಿ ಮಾತಾಡ್ತಿರಾ!’ ಅಂತ ಹೇಳಿದಳು.
ಅವಳ ಹಾಸ್ಯ ಪ್ರಜ್ಞೆ ಇಬ್ಬರ ನಡುವಿನ ಸಂಕೋಚದ ಕೊಂಡಿ ಸಡಿಲಿಸುತ್ತ ಸಾಗಿತ್ತು.ಮಾತಿಗೆ ಮಾತು ಸೇರಿತು.ಸಮಯ ಬೊಗಸೆಯಲ್ಲಿನ ಉಸುಕಿನತೆ ಕೈ ಜಾರುತ್ತಿತ್ತು.ಅವಳ ಮುಖವನ್ನೇ ಸರಿಯಾಗಿ ಕಾಣದೇ ಬರಿ ಮಾತಿನಲ್ಲೇ ಗಾಳಿಗೋಪುರವೇ ಸೃಷ್ಟಿಯಾಗಿತ್ತು.

೦೦೦೦೦

ಬಿಸ್ಕಿಟು ಅರಗಿಸಿಕೊಂಡು ಹೊಟ್ಟೆ ಮತ್ತೆ ಹಸಿವಿನ ಕಹಳೆ ಕೂಗಿತ್ತು. ಅಷ್ಟರಲ್ಲಿ ‘ಇಪ್ಪತ್ ನಿಮಿಶ್ ಊಟದ ಸ್ಟಾಪ್ ಅದಾ ನೋಡ್ರಿ’ ಅಂತ ಡ್ರೈವರ್ ಕ್ಯಾಬಿನಯಿಂದ ಬಂದ ಸೊಲ್ಲು ಹಸಿವಿಗೆ ಕಾದ ಹೊಟ್ಟೆಗೆ ಒಂದು ತೆರನಾದ ನಿರಾಳ ಭಾವ ಮೂಡಿಸಿತು.ಬಸ್ಸಿನ ವೇಗ ಕುಂದಿರುವದು ಗಮನಿಸಿ ಈಗ ಊಟದ ಸಮಯ ಅಂತ ಸುಮಾರು ಜನ ಆಗಲೇ ಎದ್ದು ತಮ್ಮ ಚಪ್ಪಲಿ ಹುಡುಕಾಡುತ್ತಿದ್ದರು.ಊಟದ ನೆಪದಲ್ಲಿ ಕೆಳಗಿಳಿದು ಸ್ಪಷ್ಟವಾಗಿ ಅವಳ ಮುಖ ನೋಡಲು ಮನಸು ಕಾಯುತ್ತಿತ್ತು.ಇಷ್ಟು ನವಿರಾಗಿ ಮಾತನಾಡುವ ಹುಡುಗಿಯ ಮುಖವನ್ನು ಮನಸು ನಾನಾ ಪ್ರಕಾರವಾಗಿ ಊಸಿಹಿಕೊಂಡು ಪರದಾಡುತ್ತಿತ್ತು. ಆ ಪರದಾಟ ಮುಕ್ತಿ ಬಯಸುತ್ತಿತ್ತು.

ಎಲ್ಲರು ಸಾಲು ಸಾಲಾಗಿ ಕೆಳಗಿಳಿದು ಹೋಗುತ್ತಿದ್ದರು. ಬನ್ನಿ ಊಟ ಮಾಡಣ ಅಂತ ಅವಳಿಗೆ ಆಹ್ವಾನವಿಟ್ಟೆ. ಅವಳು ಹಸಿವಿಲ್ಲ ಆದ್ರೆ ಕಂಪನಿ ಕೊಡ್ತೀನಿ ಅಂತ ಹೇಳಿದಳು. ನಾನು ಬಾಗಿ ಎದ್ದು ಅವಳ ಮೋರೆ ನೋಡಲು ಕಾತುರದಿಂದ ಸೀಟಿನ ಪಕ್ಕ ನಿಂತುಕೊಂಡೆ. ಅವಳು ಬಾಗಿ ಹೊರ ಬರುವಷ್ಟರಲ್ಲಿ ಹಿಂದಿನಿಂದ ಒಂದು ಬಾಲಸಂಕುಲವೊಂದು ತರಾತುರಿಯಲ್ಲಿ ನಿದ್ದೆಯಿಂದ ಎದ್ದು ನನ್ನನ್ನು ತಳ್ಳುತ್ತ ‘ನಡೀರಿ ಅಂಕಲ್ ದಾರಿ ಬಿಡಿ’ ಅಂತ ಹೊರಗಡೆ ತಂದು ತೂರಿದರು. ‘ಥೂ…ಅಂಕಲ್ಲಾ?’ ಅಂತ ಅವರಿಗೆ ಜವಾಬು ನೀಡುವಷ್ಟರಲ್ಲಿ ಆ ಮಕ್ಕಳು ತಮ್ಮವರ ಜೊತೆ ಕುಳಿತಿದ್ದರು.ಅವಳು ಮಾತ್ರ ನಗುತ್ತ ಅಲ್ಲೇ ಹಿಂದೆ ದಾರಿಯಲ್ಲಿ ಇಟ್ಟಿದ್ದ ಬ್ಯಾಗು ಸರಿಸುತ್ತಾ ಸೂಕ್ಷ್ಮವಾಗಿ ಕಾಲಿಡುತ್ತಾ ಹೊರಬರುತ್ತಿದ್ದಳು.ಮತ್ತೆ ಗಮನ ಅವಳೆಡೆಗೆ ವಾಲಿತು.
ನನ್ನ ಜೀವ ಎದೆ ದಾಟಿ ಬಾಯಿಗೆ ಬಂದಿತ್ತು. ಡ್ರೈವರ್ ಕ್ಯಾಬಿನ್ ಯಿಂದ ನಿಧಾನಕ್ಕೆ ಇಡುವ ಹೆಜ್ಜೆ ನನ್ನ ಎದೆಯಮೇಲೆ ಇಟ್ಟಂತೆ ಕೆಳಗಿಳಿದಳು.ನನ್ನ ಕಣ್ಣು ತೊಟ್ಟಿರುವ ಜೀನ್ಸ್ ಮತ್ತು ಟೀ ಶರ್ಟ್ ದಾಟಿ ಅವಳ ಮೋರೆಯೆಡೆಗೆ ಮುನ್ನುಗ್ಗಿತು.’ಅಬ್ಬಾ….ಎಂಥಾ ಸೌಂದರ್ಯ….ಹೂವಿನ ರಾಶಿಯಿಂದ ನಿರ್ಮಿಸಿದ ಚಲಿಸುವ ಸೌಂದರ್ಯ ಶಿಲ್ಪದ ಹಾಗೆ ಕೆಳಗಿಳಿಯುತ್ತಿದ್ದಳು.ನೋಡಲು ಎರಡು ಕಣ್ಣು ಸಾಲದ ಪರಿಸ್ಥಿತಿ ಅದು. ಅವಳು ಕೆಳಗಿಳಿದ ತಕ್ಷಣ ಇಷ್ಟೊತ್ತು ಹರಟೆ ಹೊಡೆದಿದ್ದು ಇವಳ ಜೋತೇಗೆನಾ? ಅಂತ ಅನುಮಾನ ಅಭಿಮಾನ ಒಟ್ಟಿಗೆ ಅನಿಸಿತು.
ಅವಳ ನೋಡುತ್ತಲೇ ಜಾರಿದ ಲಘು ಧ್ಯಾನವನ್ನು ಅವಳೇ ಎಬ್ಬಿಸಿ ‘ಬನ್ನಿ ಹೋಗೋಣ’ ಅಂತ ಹೇಳಿದಳು. ತುಸು ಅಸ್ಥಿರನಾದೆ. ಅವಳ ಜೊತೆ ಹೆಜ್ಜೆ ಹಾಕಿದೆ.ಆ ಹತ್ತು ಹೆಜ್ಜೆಗಳ ಯಾತ್ರೆ ಅನಂತದವರೆಗೆ ನೀಟುವಂತಿತ್ತು. ಹೆಜ್ಜೆಯಿಂದ ಹೆಜ್ಜೆಗೆ ಏನೋ ಧೈರ್ಯ-ಮುಜುಗರ, ನೆಮ್ಮದಿ-ಬೇಗುದಿ,ಕೊರಗು-ಬೆರಗು, ಹೀಗೆ ಸಾಲು ಸಾಲಾದ ಭಾವಗಳು ಮುತ್ತಿಕ್ಕಿದವು. ಎಲ್ಲವೂ ಪರಿಗಣಿಸಿ ಅವಳ ಜೊತೆಯಾದೆ.

0000

ಸಕಲ ಜೀವಾತ್ಮಗಳ ನೆರಳು ಕಸಿದುಕೊಂಡು,ಗಾಢ ನಿದ್ದೆಯಲಿ ಮೈ ಮರೆತ ಇರುಳಿನ ತೆಕ್ಕೆಯಲಿ ಹೆದ್ದಾರಿಯ ಪಕ್ಕ ಅಲಂಕೃತಗೊಂಡ ತೃತೀಯ ದರ್ಜೆಯ ಎರಡು ಹೋಟೆಲ್ ಗಳು ಬಂದ ಜನರಿಗೆ ಭಿಕ್ಷೆ ಬೇಡುವಂತೆ ‘ಬನ್ನಿ ಸರ್….ಬನ್ನಿ ಮೇಡಂ….ಬಿಸಿ ಬಿಸಿ ಊಟ…..ಸೂಪರ್ ಫಾಸ್ಟ್ ಸರ್ವಿಸ್…. ಬನ್ನಿ ಮೇಡಂ…. ಬನ್ನಿ ಸರ್’ ಅಂತ ಬಂದವರನ್ನ ತಬ್ಬಿಬ್ಬುಗೊಳಿಸುತ್ತಿದ್ದವು.ಒಂದು ಇನ್ನೊಂದಕ್ಕೆ ಪೈಪೋಟಿ ನೀಡುವಂತೆ ಅಲಂಕೃತಗೊಂಡಿದ್ದವು. ನಾವು ಯಾವ ಕಡೆ ಹೋಗಬೇಕು ಅನ್ನುವದು ತಿಳಿಯಲಿಲ್ಲ. ಅವಳೆಡೆಗೆ ಮುಖ ಮಾಡಿದೆ. ಅವಳು ತನ್ನ ಎರಡು ಬೆರಳುಗಳನ್ನು ನನ್ನೆಡೆಗೆ ತೋರಿಸಿ, ಇದರಲ್ಲಿ ಯಾವುದಾದರು ಒಂದನ್ನ ಸೆಲೆಕ್ಟ್ ಮಾಡು ಅಂದಳು. ನಾನು ಮಧ್ಯದ್ದು ಚೂಸ್ ಮಾಡಿದೆ. ನಗುತ್ತ ಎರಡನೇ ಹೋಟೆಲ್ ಹೋಗೋಣ ಅಂತ ಹೇಳಿ ಮುನ್ನಡೆದಳು.
ಅಶಾಂತ ಜಾಗದಲ್ಲಿ ಪ್ರಶಾಂತತೆ ಹುಡುಕಿ ಒಂದು ಟೇಬಲ್ ಮೇಲೆ ಕುಳಿತೆವು.ನಾಲ್ಕು ಜನರು ಕುಳಿತುಕೊಳ್ಳುವ ಜಾಗದಲ್ಲಿ ಒಬ್ಬ ಮೊದಲೇ ಒಂದು ಸ್ಥಾನ ಅಲಂಕರಿಸಿದ್ದ.
ನೀವು…ನೀವ್ ಏನು ತಗೋತಿರಾ….! ಅಂತ ಅವಳನ್ನ ಕೇಳಿದೆ.
ನನಗೇನು ಬೇಡ! ಅಂತ ಹೇಳಿದಳು.
ಕೊನೆ ಪಕ್ಷ ಜ್ಯೂಸು ಆದ್ರೂ ತಗೊಳ್ಳಿ ಅಂತ ಹೇಳಿದೆ.
‘ಓಕೆ ಒಂದು ಸಪೋಟ ಜ್ಯೂಸು’ ಅಂತ ಹೇಳಿದಳು.
ನಾನು ಅನ್ನಾ-ಸಾಂಬಾರ್ ಹೇಳಿದೆ.
ಆರ್ಡರ್ ಬರಲು ಇನ್ನು ತಡವಿತ್ತು.ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ನಮ್ಮಿಬ್ಬರ ಚಲನವಲನಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದ.ಅದಕ್ಕೆ ನನ್ನ ಮಾತಿಗೆ ಒಂಚೂರು ಕಡಿವಾಣ ಬಿದ್ದಂಗಾಯಿತು.ಆ ಒತ್ತಡದಲ್ಲೂ ಮಾತು ನಿಲ್ಲಲಿಲ್ಲ. ಇಂತಹ ಅದೃಷ್ಟ ಮತ್ತೆ ಮತ್ತೆ ಸಿಗುವದಿಲ್ಲ ಅಂತ ಮತ್ತೆ ಶುರುಮಾಡಿದೆ.
ಮತ್ತೆ ಏನ್ ಸಮಾಚಾರ…..ಹೌದು ನಿಮ್ ಹೆಸರೇ ಹೇಳಲಿಲ್ವಲ್ಲ! ಎಂದು ಕೇಳಿದೆ
ಅವಳು ‘ಸಾಕ್ಷಿ’ ಅಂತ ಹೇಳಿದಳು.
‘ಯಾವುದಕ್ಕೆ?’ ಅಂತ ಕೇಳಿದೆ.
ನಸುನಕ್ಕಳು
‘ನನ್ ಹೆಸರು ಅಭಿಸಾರ’ ಅಂತ ಹೇಳಿದೆ.
ಹಮ್….ಚನ್ನಾಗಿದೆ ಹೆಸರು
‘ನೀವು ಈ ಕಾದಂಬರಿ ಓದಿದ್ದೀರಾ?ನಿಮಗೆ ಹೇಗನಿಸ್ತು?’ ಅಂತ ನನ್ನ ಕೇಳಿದಳು.
ನಾನು ‘ಹೆಸರಲ್ಲೇ ಒಂಥರಾ ಕಿಕ್ ಇದೆ. ಅಪ್ಪನ ಪ್ರೇಯಸಿ.ಸಾಮಾನ್ಯವಾಗಿ ಕಥೆ ಕಾದಂಬರಿಗಳು ಹಳ್ಳಿಯ ಹಿನ್ನಲೆಯಲ್ಲಿ ಬಂದ್ರೆ ಇದು ಬೆಂಗಳೂರಿನಲ್ಲಿ ನಡೆಯುವ ಅಪ್ಪಟ ನಗರ ಕೇಂದ್ರಿತ ಕಾದಂಬರಿ. ಇಲ್ಲಿ ಬರುವ ಪಾತ್ರಗಳು ತುಂಬಾ ರೂಟೆಡ್ ಅನ್ಸತ್ತೆ. ನಗರದ ಯಾವುದೊ ಮೂಲೆಯಲ್ಲಿ ಜರುಗಿದರು ನಮ್ಮ ಸುತ್ತಮುತ್ತ ನಡೆದಂತೆ ಅನ್ಸುತ್ತೆ.ಬೆಂಗಳೊರಿಗೆ ಒಂದೆರೆಡು ಸುತ್ತು ಹಾಕಿ ಸೂಕ್ಷ್ಮವಾಗಿ ಗಮನಿಸಿದರೆ ಆ ಪಾತ್ರಗಳು ನಮ್ಮ ಮುಂದೆ ಜೀವಂತವಾಗಿ ಬಿಡ್ತವೆ.ಅದನ್ನ ಕಂಡುಹಿಡಿಯಬೇಕಷ್ಟೇ. ಅಂತ ಹೇಳಿದೆ.
ಪ್ರೀತಿ ಅನ್ನುವ ಪದನೇ ಹಾಗೆ ಯಾರಿಗೂ ಬಿಟ್ಟಿಲ್ಲ. ಅಪ್ಪ ಆದ್ರೇನು……!ಮಗ ಆದ್ರೇನು….! ಅಂತ ಜಾಣ್ಮೆಯಿಂದ ಪ್ರೀತಿಯ ದೂರು ಹೇಳಿದಳು.
ಪ್ರೀತಿಯ ವಿಷಯ ಬಂದಿದ್ದೆ ತಡ ಅವಳ ಪ್ರೀತಿಯ ಬಗ್ಗೆ ತಿಳಿದುಕೊಳ್ಳುವ ಕೆಟ್ಟ ಕುತೂಹಲ ಹುಟ್ಟಿತು.
ಅದಕ್ಕೆ ಧೈರ್ಯ ಮಾಡಿ.
ಅಂದ್ರೆ ನೀವು ಯಾರನ್ನಾದರು ಲವ್ ಮಾಡಿದ್ದೀರಾ? ಅಂತ ಅಂಜುತ್ತಲೇ ಕೇಳಿದೆ.
ನಾನು ಕೇಳಿದ ಪ್ರಶ್ನೆಗೆ ಅವಳು ಹೇಗೆ ಪ್ರತಿಕ್ರಯಿಸುತ್ತಾಳೆ ಅಂತ ನನ್ನ ಅನಾಗರಿಕ ಕಿವಿ ನಿಮಿರಿ ಅವಳನ್ನೇ ನೋಡುತ್ತಿತ್ತು.
ಉತ್ತರ ಅವಳಿಂದ ಹೊರ ಬರುವ ಮುನ್ನ ವೇಟರ್ ಬಂದು ಫಟಾರನೆ ‘ಅನ್ನಾ-ಸಾರು ಮತ್ತೆ ಸಪೋಟ ಜ್ಯೂಸು’ ಟೇಬಲ್ ಮೇಲೆ ಕುಕ್ಕರಿಸಿ ಬಿಲ್ ಇಟ್ಟು ಹೋದ.ವಿಚಲಿತಗೊಂಡಂತೆ ಎಚ್ಚರಗೊಂಡ ನಾನು ಸುಧಾರಿಸಿಕೊಂಡು ಅವನ ಬೆನ್ನಿಗೆ ಒಂದು ಥ್ಯಾಂಕ್ಸ್ ಕಳುಹಿಸಿಕೊಟ್ಟೆ.ನಾನು ಕಳುಹಿಸಿದ ಥ್ಯಾಂಕ್ಸ್ ಅವನ ಹುಡುಕಾಟದಲ್ಲಿ ಎಲ್ಲೋ ಕಳೆದು ಹೋಯಿತು.
ಕಣ್ಣಿಂದಲೇ ಕೇಳಿದ ಪ್ರಶ್ನೆ ತಿರುಗಿ ಕೇಳಿದೆ.
ಅವಳ ಎಲ್ಲೋ ನೋಡುತ್ತಾ….’ನಾನು ಮನಷ್ಯಳೇ,ನನಗು ಮನಸಿದೆ. ನಾನು ಬೇಡ ಅಂದ್ರು ನಮಗೆ ಗೊತ್ತಾಗದೆ ನಮ್ ವಯಸ್ಸು ಗೌಪ್ಯವಾಗಿ ಒಬ್ಬರನ್ನಾದರೂ ಪ್ರೀತಿ ಮಾಡೇ ಮಾಡತ್ತೆ.ನಾನು ಮಾಡಿದೆ.ಒಳ್ಳೆ ಹುಡುಗ.ಹೆಸರು ಇಶಾನ್ ಮಿತ್ತಲ್’. ಅಂತ ನಾಚುತ್ತಲೇ ಹೇಳಿದಳು.
ಅವಳ ತುಟಿಯಿಂದ ಆ ನಾರ್ಥಿ ಹುಡುಗನ ಹೆಸರು ಹೊರ ಬಂದಾಗ ಅವಳು ಕೆಲ ಕ್ಷಣ ಎಲ್ಲೋ ಕಳೆದು ಹೋದ ಹಾಗೆ ಅನಿಸಿತು.
ಕೆಲಸ ಇಲ್ದೆ ಸುಮ್ ಸುಮ್ನೆ ಏನೋ ಬಿಟ್ಕೊಂಡ್ರೂ ಅಂತಾರಲ್ಲ ಹಾಗೆ ಅನಿಸ್ತು .
ಸ್ವಲ್ಪ ಸವರಿಕೊಂಡು.
ಓಹೋ ಹೋ ಹೋ ಹೋ ಅತಿ ಆಯ್ತಪ್ಪ ನಿಮ್ಮದು. ಈಚೀಚೆ ನಿಮಗೆ. ಕನ್ನಡದ ಹುಡುಗಿಯರಿಗೆ ಕನ್ನಡೇತರ, ಉತ್ತರ ಭಾರತೀಯ ಹುಡುಗರು ಬಹಳ ಆಕರ್ಷಕ ಅನಸ್ತಾರೆ ಗೊತ್ತು. ಪಿಕ್ಚರ್ ಅಲ್ಲಿ ಹೃತಿಕ್ ರೋಶನ್ , ಶಾರುಖ್ , ಶಾಹಿದ್ ಕಪೂರ್ ಗಳು ಮಾತಾಡೋದು ನೋಡ್ತಿರಿ. ಕನಸು ಕಾಣ್ತಿರಿ. ಇಲ್ಲಿ ಉತ್ತರ ಭಾರತದ ಶ್ರೀಮಂತ ಅಪ್ಪಂದಿರ ಬೊಕ್ಕಸದ ಬಡ್ಡಿಮಕ್ಕಳು ಒಂದು ಬೈಕ್ ಅಲ್ಲಿ ಕೂರಿಸಿಕೊಂಡು “ಚಲೋ ಡೋಸ ಖಾಯೇಂಗೆ” ಅಂದ್ರೆ ಸಾಕು ಆತ ಎಷ್ಟೇ ಧಡ್ಡನಾಗಿದ್ರು ಅವನು ಮಾತಾಡುವ ಹಿಂದಿಯಲ್ಲಿ ಅವನ ಉದ್ದ ಶಂಪೂಗೂದಲಲ್ಲಿ ನಿಮಗೆ ಕಪೂರ್ ಖಾನ್ ಗಳೆಲ್ಲ ಕಾಣ್ತಾರೆ. ನಮ್ಮಂಥ ಕನ್ನಡದ ಹುಡುಗ್ರು ನೋಡಿದ್ರೆ, ಕನ್ನಡದ ಮಾತು ಕೇಳಿದ್ರೆ ನಿಮಗೆ ನಿಮ್ಮ ಮನೆ,ಅಪ್ಪ,ಅಮ್ಮ,ಮುಸ್ರೆ,ಮುದ್ದೆ,ಸಾರು,ಗಂಜಿ ನೆನಪಾಗುತ್ತೆ. ಅದರಿಂದ ದೂರ ಓಡಬೇಕು ಅಂತ ಬೈಕ್ ಹತ್ತಿ ಕೂತುಬಿಡ್ತಿರಿ. ಅವನು ಅಪವೇಳೆಯಲಿ ಮನೆ ತಲುಪಿಸಲು ಬಂದಾಗ,ಮನೆಯಿಂದ ತುಸು ದೂರವೇ….’ಇಧರೀ ಛೋಡದೋ’ ಎಂದು ಇಳಿದು ಬಿಡುತ್ತಿರಿ. ಅವನು ನಗುವನ್ನು ತೋರದ ಹೆಲ್ಮೆಟ್ ಹಾಕಿಕೊಂಡು ಹೋಗ್ತನಲ್ಲ, ಆಗಲು ಗೊತ್ತಾಗಲ್ಲ ನಿಮಗೆ… ಆಗ್ತಾ ಇರೋದು ಕಲ್ಪನೆ ಅಂತ. ಅಂತ ಎಲ್ಲೋ ಓದಿದ್ದು ನೆನಪಾಗಿ ಹೇಳಿದೆ.
ನನ್ನ ಮಾತು ಕೇಳಿ ಅವಳಿಗೆ ದಂಗು ಬಡಿದಂತೆ ‘ಇವನ್ಯಾರು ನನ್ನ ಪರ್ಸನಲ್ ವಿಷಯ ಕೈ ಹೊಕೊಕ್ಕೆ’ ಅನ್ನುವ ದೃಷ್ಟಿಯಲಿ ನೋಡತೊಡಗಿದಳು. ಹೇಳಿದ ಮಾತು ಅವಳ ಆತ್ಮಕ್ಕೆ ಕೈ ಹಾಕಿ ಕದಡಿದಂತೆ ಅವಳನ್ನು ನಾಟಿತ್ತು.ಅವಳು ಉತ್ತರ ಹುಡುಕುತ್ತಿದ್ದಳು.ಏನು ಮಾಡಲು ತೋಚದೆ ಜ್ಯೂಸು ಅರ್ಧಕ್ಕೆ ಬಿಟ್ಟು ಸಿಟ್ಟಿನಿಂದ ಅಲ್ಲಿಂದ ಹೊರಟು ಹೋದಳು. ನಾನು ರೀ… ಬನ್ರಿ ನನ್ ತಮಾಷೆ ಮಾಡ್ತಾ ಇದ್ದೆ’ ಅಂತ ಹೇಳಿದೆ
ಅವಳು ಹಿಂತಿರುಗಿಯೂ ನೋಡಲಿಲ್ಲ
ನಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ನನ್ನನ್ನು ನೋಡಿ ನಗುತ್ತಿದ್ದ.
ಥೂ…ಇಷ್ಟು ಕ್ರೂರವಾಗಿ ಹೇಳಬಾರದಿತ್ತು.
ಮೊದಲು ಎದೆಗೆ ಮುಟ್ಟಿದ್ದಕ್ಕೆ ಹೇಗೋ ಕ್ಷಮಿಸಿದ್ದಳು.ಈಗ ಅವಳ ಆತ್ಮಕ್ಕೆ ಕೈ ಹಾಕಿದ್ದೀನಿ.
ಅವಳು ಕ್ಷಮಿಸುವ ಯಾವುದೇ ಸಾಧ್ಯತೆಗಳು ನನಗೆ ಕಾಣಲಿಲ್ಲ.ಅದು ಅವರ ಆಯ್ಕೆ,ಅದಕ್ಕೆ ಸ್ವತಂತ್ರ ಇದೆ.
ಈಗೇನು ಮಾಡೋದು ಅನ್ನೋದು ತೋಚಲಿಲ್ಲ.ಅವಳನ್ನು ಸಮಾಧಾನ ಮಾಡಲಾ?ಅಥವಾ ಹೊಟ್ಟೆಗೆ ಸಮಾಧಾನ ಹೇಳಲಾ ಅನ್ನುವದು ತಿಳಿಯಲಿಲ್ಲ.ಹೊಟ್ಟೆ ಹಸಿದು ನಿಂತಿತ್ತು. ಮೊದಲು ಊಟ ಮಾಡಣ ಅಂತ ತಟ್ಟೆಯ ಕಡೆ ನೋಡಿದೆ. ಅನ್ನದ ಮೇಲೆ ಲೈಟ್ ಹುಳುವೊಂದು ಸತ್ತಂಗೆ ಕುಳಿತಿತ್ತು.ಅವಳು ಹೋದ್ಳು ಕೊನೆ ಪಕ್ಷ ಚನ್ನಾಗಿ ಊಟ ಮಾಡಣ ಅಂದ್ರೆ ಇದೇನು ಹುಳು ಬಿದ್ದಿದೆಯಲ್ಲ ಅಂತ ವೇಟರ್ ಗೆ ತೋರಿಸಿ ಬೇರೆ ಅನ್ನ ಕೊಡಲು ಕರೆಸಿದೆ.ಪಕ್ಕದಲ್ಲಿ ಕುಳಿತ ವ್ಯಕ್ತಿ ನಾನು ಯಾತಕ್ಕೆ ವೇಟರ್ ನನ್ನು ಕರೆಯುತ್ತಿದ್ದೇನೆ ಅನ್ನುವದು ಇನ್ನು ತಿಳಿದಿರಲಿಲ್ಲ.ಕಾರ್ಯನಿರತ ವೇಟರ್ ನನ್ನ ನಾಲ್ಕೈದು ಕರೆಗೆ ಓ ನೀಡಿದನು.
ಅವನು ಬಂದು ವಿಚಾರಿಸುವದರಲ್ಲಿ ಆ ಲೈಟ್ ಹುಳು ಅನ್ನದ ಮೇಲಿಂದ ಹಾರಿ ಹೋಗಿತ್ತು.!
ವೇಟರ್ ‘ಏನು…..?’ ಅಂತ ಜೋರು ಮಾಡಿದ
ನಾನು ತಬ್ಬಿಬ್ಬಾದೆ….ಸಾಕ್ಷಿ ಇರಲಿಲ್ಲ……!
‘ಅ…ಅನ್ನದ ಮೇಲೆ ಹುಳು ಬಿದ್ದಿತ್ತು’. ಬೇರೆ ತಟ್ಟೆ ಕೊಡಿ ಅಂತ ಹೇಳಿದೆ.
ವೇಟರ್ ‘ಎಲ್ಲಿ ಕಾಣ್ತಾ ಇಲ್ಲಲ್ರಿ’ ಅಂತ ನುಡಿದ.
ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ನನ್ನ ಮುಖ ನೋಡಿ ಜೋರಾಗಿ ನಗತೊಡಗಿದ.
‘ಇಲ್ಲೇ ಇತ್ತು….ಹಾರಿ ಹೋಯ್ತು’ ಅಂತ ಹೇಳಿದೆ.
ನೋಡಿ ಸರ್ ಸಾಕ್ಷಿ ಇಲ್ಲ ಅಂದ್ರೆ ಏನು ಮಾಡಕ್ಕಾಗಲ್ಲ.ಸುಮ್ ಸುಮ್ನೆ ಅವರು ತಟ್ಟೆ ಚೇಂಜ್ ಮಾಡಲ್ಲ.ಒಳಗೆ ಇರೋರು ಸಾಕ್ಷಿ ಕೇಳ್ತಾರೆ.
ಒಂದ್ ಕೆಲಸ ಮಾಡಿ ಯಾರಾದ್ರು ಸಾಕ್ಷಿ ಹೇಳಿದ್ರೆ ನಾನು ತಟ್ಟೆ ಚೇಂಜ್ ಮಾಡ್ತೀನಿ ಅಂತ ಒಂದು ಸಲಹೆ ಕೂಡ ಕೊಟ್ಟ.
ನಾನು ಪಕ್ಕದಲ್ಲಿ ಕುಳಿತ ವ್ಯಕ್ತಿಯ ಕಡೆ ನೋಡಿದೆ…ಅವನು ಇನ್ನು ಜೋರಾಗಿ ನಗಲಾರಂಭಿಸಿದ.
ಸಾಕ್ಷಿ ಹೋದ ಕಡೆಗೆ ಒಮ್ಮೆ ನೋಡಿದೆ….! ಅವಳು ಬಸ್ಸಿನೆಡೆಗೆ ಹೋಗುತ್ತಿದ್ದಳು….!
 

‍ಲೇಖಕರು G

November 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Vidyadhar Lonarmath

    ತುಂಬಾ ಚೆನ್ನಾಗಿ ಬರ್ದಿದಿರಾ ವಿಜಯ್. ತುಂಬಾ ಇಷ್ಟ ಆಯ್ತು ನಿಮ್ಮ ಸಾಕ್ಷಿ ಪ್ರಸಂಗ. ಮುಂದೆ ಏನಾಯ್ತು ಎಂಬುದು ತಿಳಿಸಿ.

    ಪ್ರತಿಕ್ರಿಯೆ
  2. Anil Talikoti

    ಕಥೆ ತುಂಬಾ ಇಷ್ಟವಾಯಿತು. ಊಟಾ ಏನು – ದಿನಾ ಇದ್ದಿದ್ದೆ -ಬೇಕಂದರೆ ಇನ್ನೊಂದು ಆರ್ಡರ ಮಾಡಬಹುದು – ಸಾಕ್ಷಿ ಸಿಗುತ್ತಾ ಮತ್ತೆ ಮತ್ತೆ? ಮುಂದಿನ ಘಟನೆಗೆ – ಓದುಗನಾಗಿ ಬಲಿಯಾದದ್ದಕ್ಕೆ – ಸಾಕ್ಷಿ ಪ್ರತ್ಯಕ್ಷ ಸಾಕ್ಷಿ ಯಾಗುತ್ತಾಳೆ ಎಂದುಕೊಂಡು ಖುಶಿಯಾಗಬಹುದು.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  3. manoj

    EE katheya character gu nanagu bahala similarities ive, aadre bareyooke saakshi illa .. … excellent post. enjoyed a lot.. 🙂

    ಪ್ರತಿಕ್ರಿಯೆ
  4. Anonymous

    I was occupying single seat row , besides your two seat row in that bus.I still remember the scene created by you regarding missing of your luggage containing a gold necklace for bought your sister and non-appearance of your beautiful co-passenger.But i promise that i donot tell about this to any body,o.k?

    ಪ್ರತಿಕ್ರಿಯೆ
  5. mahesh kalal

    ‘ಬರಹಗಾರನಿಗೆ ಪಾತ್ರ ಸೃಷ್ಟಿಸುವದರ ಮೇಲೆ ಹಿಡಿತವಿರುತ್ತೆ. ಆದ್ರೆ ಆ ಪಾತ್ರಗಳು ಓದುಗನ ಮೇಲೆ ಮಾಡುವ ಪರಿಣಾಮಗಳ ಮೇಲೆ ಹಿಡಿತವಿರುವದಿಲ್ಲ. ಅವರವರು ಅವರವರೇ ಸಂಭಾಳಿಸಬೇಕು. ಇದು ಒಂಥರಾ ಬಿಲ್ಲುಗಾರಿಕೆ ಇದ್ದಂಗೆ.ಬಿಲ್ಲು ಹಿಡಿದು ಎಳೆಯುವದಷ್ಟೇ ಲೇಖಕನ ಪಾತ್ರ. ಅದು ಯಾರಿಗೆ ನಾಟುತ್ತೆ , ಎಷ್ಟರ ಮಟ್ಟಿಗೆ ನಾಟುತ್ತೆ ಅನ್ನುವದು ಅವನಿಗು ಗೊತ್ತಿರುವದಿಲ್ಲ’ thumba hidisid line kathe chennagide

    ಪ್ರತಿಕ್ರಿಯೆ
  6. lalithasiddabasavaiah

    ಕಥೆ ಲವಲವಿಕೆಯಲ್ಲಿ ಅದ್ದಿ ತೆಗೆದಂತೆ ಬರೆದಿದ್ದೀರಿ. ಒಂದು ಸಾಲು ಶುರುಮಾಡಿದರೆ ಮುಂದಕ್ಕೆ ಅದೇ ಓದುಗನ್ನ ಎಳಕೊಂಡುಹೋಗುತ್ತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: