ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ’ಚಿಟ್ಟಿ ನೀನ್ ಮಾತ್ರ ಪ್ರೀತಿಯಲ್ಲಿ ಬೀಳಬೇಡ…'

ಕಳಚಿಬಿದ್ದ ಕಾಮನಬಿಲ್ಲಿನ ಚೂರು ಕಣ್ಣೀರ ಹನಿಯಲ್ಲಿ. . .

ಚಿಟ್ಟಿಯ ಕಣ್ಣಲ್ಲಿ ಬೆಂಕಿಯು ಧಗಧಗನೆ ಹೊತ್ತಿ ಉರಿಯುತ್ತಿತ್ತು. ಕುಟ್ಟಿಯ ಆರ್ತನಾದ, ಮಕ್ಕಳ ಅಳು ಅವಳ ಕಿವಿಯನ್ನು ಮುಟ್ಟಿ ಬೆಚ್ಚಿ ಬೀಳುವ ಹಾಗಾಯಿತು. ಊರಿಗೂರೇ ಸ್ಮಶಾನ ಮೌನದಲ್ಲಿ ಮುಳುಗಿತು. ಯಾರ ಬಾಯಲ್ಲೂ ಮಾತಿಲ್ಲ. ಅಡುಗೆ ಆಗಿದೆ ಎಂದು ಹೆಂಗಸರು ಹೇಳಿದರೂ ಗಂಡಸರು ಊಟಕ್ಕೆ ಏಳಲಿಲ್ಲ. ಮಕ್ಕಳನ್ನು ಬಲವಂತಕ್ಕೆ ತಟ್ಟೆಯ ಮುಂದೆ ಕೂಡಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು. ಚಿಟ್ಟಿಗೆ ಅವತ್ತು ಊಟ ಸೇರಲಿಲ್ಲ. ಅಂಗಡಿ ಸುಟ್ಟ ಅವಶೇಷದ ಸುತ್ತಾ ಕುಟ್ಟಿ ಎಷ್ಟೋ ಹೊತ್ತಿನತನಕ ಹುಚ್ಚನ ಹಾಗೆ ಓಡಾಡುತ್ತಲೇ ಇದ್ದ. ಅವನನ್ನು ಅವನ ಹೆಂಡತಿ ಪಾತುಮ್ಮಿ ಬಲವಂತಕ್ಕೆ ಮನೆಗೆ ಕರೆದೊಯ್ದಳು. ಮಗನಾಗಿ ಹುಟ್ಟಿ ತನ್ನ ಅನ್ನಕ್ಕೆ ಕಲ್ಲು ಹಾಕಿದ ಹುಂಜಾನನನ್ನು ಶಪಿಸುತ್ತಾ, ಅಳುತ್ತಾ ಕುಟ್ಟಿ ಮನೆಗೆ ಹೊರಟ. ಚಿಟ್ಟಿಗೆ ತಡೆಯಲಾಗಲಿಲ್ಲ `ಅಮ್ಮ ಕುಟ್ಟಿಯ ಅಂಗಡಿಯನ್ನು ಯಾಕೆ ಸುಟ್ಟರು?’ ಅಮ್ಮ ಮಾತಾಡಲಿಲ್ಲ. ಅಜ್ಜಿ ಮಾತ್ರ ಮೂಲೆಯಲ್ಲಿ ಕೂತು `ಇದೆಲ್ಲಾ ಆದದ್ದು ಆ ಹುಂಜಾನ ಮತ್ತು ತಾರರಿಂದ ಅಂತ ಹೇಳಬಾರದೇ? ನಾಳೆ ಇವ್ಳೂ ಆ ತಪ್ಪು ಮಾಡಬಾರದಲ್ಲಾ?’ ಎಂದಳು.
ಅಮ್ಮ ಚಿಟ್ಟಿಯನ್ನು ಬಾಚಿ ತಬ್ಬಿದಳು. ಚಿಟ್ಟಿಗೆ ದಿಕ್ಕು ತೋಚದಾಯಿತು. ಅಮ್ಮನ ಕಣ್ಣಿಂದ ಹನಿಸಿದ ಕಣ್ಣೀರಿಗೆ ಏನು ಅರ್ಥ ಎಂದು ಹುಡುಕಿದಳು. ಆ ಕ್ಷಣಕ್ಕೆ ತನಗೆ ತಿಳಿಯದ ಜಗತ್ತು ತುಂಬ ಇದೆ ಅನ್ನಿಸಿತು. ರಾತ್ರಿಯಿಡೀ ಅಮ್ಮ ಚಿಟ್ಟಿಯನ್ನು ತನ್ನ ತೆಕ್ಕೆಯಲ್ಲಿ ಮಲಗಿಸಿಕೊಂಡಳು. ಅಮ್ಮ `ತಾರಾ ಹುಂಜಾನ ತಪ್ಪು ಮಾಡಿದ್ರಾ? ತಪ್ಪು ಅಂದರೇನಮ್ಮಾ?’ ಚಿಟ್ಟಿಯ ಪ್ರಶ್ನೆಗೆ ಅಮ್ಮ ಅವಳ ಬಾಯನ್ನ ಮುಚ್ಚಿದಳು. `ಚಿಟ್ಟಿ ಇದೆಲ್ಲಾ ಮುಂದೆ ನಿಂಗೆ ಗೊತ್ತಾಗುತ್ತೆ. ಅಲ್ಲೀವಗರ್ು ಸುಮ್ಮನೆ ಇರು’ ಎಂದಳು.
ಚಿಟ್ಟಿ ಸುಮ್ಮನಾಗಲಿಲ್ಲ `ಅಮ್ಮಾ ನೀನೇ ಹೇಳಿದ ಕಥೆಯ ರಾಜಕುಮಾರಿ ರಾಜಕುಮಾರನನು ಮದುವೆಯಾಗಿ ಸುಖವಾಗಿರಲಿಲ್ಲವೇ? ಇಲ್ಲಿ ಮಾತ್ರ ಯಾಕೆ ಹೀಗೆ?’. ಅಮ್ಮ ಹೇಳಿದಳು `ಚಿಟ್ಟಿ ಅದು ಕಥೆ ನಿಜ ಅಲ್ಲ’. `ಹಾಗಾದ್ರೆ ಸುಳ್ಳು ಕಥೆಗಳನ್ನು ನಂಗ್ಯಾಕೆ ಹೇಳಿದೆ?’ ಅಮ್ಮ ತನ್ನನ್ನು ದಿಕ್ಕು ತಪ್ಪಿಸಿದ್ದಕ್ಕಾಗಿ ಚಿಟ್ಟಿಗೆ ಕೋಪ ಬಂದಿತ್ತು. ಅಮ್ಮನಿಗೆ ಹೇಳಲಿಕ್ಕೆ ಏನೂ ಉಳಿದಿರಲಿಲ್ಲ. ತಾನು ಹೇಳಿದ್ದು ಸುಳ್ಳ? ನಿಜವಾ? ಅವಳಿಗೆ ಗೊತ್ತಿಲ್ಲ. ನಿದ್ದೆ ಮಾಡಿಸಲು, ಗಲಾಟೆ ಮಾಡದೆ ಸುಮ್ಮನಾಗಿಸಲು ಈ ಕಥೆಗಳನ್ನು ತಾನು ಹೇಳಿದ್ದೇ? ಈ ಕಥೆಗಳು ಮಕ್ಕಳ ಮನಸ್ಸನ್ನು ಹೀಗೆ ಕೆಡಿಸುತ್ತವೆಯೇ?!
ಚಿಟ್ಟಿ ಯೋಚಿಸುತ್ತಿದ್ದಳು ಅಮ್ಮ ಯಾವುದಕ್ಕಾದರೂ ಹೇಳಿರಲಿ ಎಂಥಾ ಚಂದದ ಕಥೆಗಳು! ಕೀಲುಕುದುರೆಯ ಮೇಲೆ ಬರುವ ರಾಜಕುಮಾರ ರಾಕ್ಷಸನ ಭದ್ರವಾದ ಹಿಡಿತದಿಂದ ತಪ್ಪಿಸಿ ರಾಜಕುಮಾರಿಯನ್ನು ಅವಳ ರಾಜ್ಯಕ್ಕೆ ಸೇರಿಸುತ್ತಾನೆ. ಆಗ ರಾಜ ಮೆಚ್ಚಿ ಅವನಿಗೆ ಅವಳ ಮಗಳನ್ನ ಕೊಟ್ಟು ಮದುವೆ ಮಾಡುತ್ತಾನೆ. ತನಗೆ ತಿಳಿದ ಎಲ್ಲಾ ಕಥೆಗಳಲ್ಲೂ ಇದೇ ಕೊನೆ, ಒಂದು ರಂಗುಮಹಾಪಟ್ಟಣದ ಕಥೆಯನ್ನು ಬಿಟ್ಟು. ಇದನ್ನೇ ಅಲ್ಲವೇ ತಾನೂ, ತಾರಾ ಎಲ್ಲರೂ ನಂಬಿದ್ದು. ಚಿಟ್ಟಿ ಒಂದು ನಿರ್ಧಾರಕ್ಕೆ ಬಂದಳು, ತಾರಾ ಸಿಕ್ಕರೆ ಅವಳಿಗೆ ಹೇಳಬೇಕು ಈ ದೊಡ್ಡವರೆಲ್ಲಾ ನಮಗೆ ಮೋಸ ಮಾಡಲಿಕ್ಕೆ ಈ ಕಥೆಗಳನ್ನು ಹೇಳುತ್ತಾರೆ. ಇವನ್ನು ನಂಬುವುದು ಬೇಡ. ಹುಂಜಾನನನ್ನು ಬಿಟ್ಟು ನಿನ್ನ ಪಾಡಿಗೆ ನೀನು ಅಪ್ಪ ಅಮ್ಮನ ಹತ್ತಿರ ಬಂದು ಬಿಡು ಎಂದು. ಆದರೆ ತಾರ ಸಿಗುವುದಾರೂ ಎಲ್ಲಿ? ಅವತ್ತು ರಾತ್ರಿ ಅವಳಿಗೆ ಯಾವ ಕನಸೂ ಬೀಳಲಿಲ್ಲ. ನಿದ್ದೆಯೂ ಬರಲಿಲ್ಲ.
ಬೆಳಗ್ಗೆ ಚಿಟ್ಟಿ ಮುಖ ತೊಳೆಯುತ್ತಾ ಬೇಲಿಯ ಹತ್ತಿರ ನಿಂತಿದ್ದಾಗ ಪಾತುಮ್ಮಿ ಅಮ್ಮನ ಹತ್ತಿರ ಏನನ್ನೋ ಹೇಳಿಕೊಂಡು ಅಳುತ್ತಿದ್ದಳು. ಬಹುಶಃ ಹುಂಜಾನನ ವಿಷಯವೇ ಇರಬೇಕು ಎಂದುಕೊಂಡಳು ಚಿಟ್ಟಿ. ಹಿಂದೆ ಅವಳಿಗೆ ಎಲ್ಲ ವಿಷಯ ತಿಳಿದಿದ್ದೂ ಹೇಳದೆ ತಪ್ಪು ಮಾಡಿದೆನೇನೋ ಎನ್ನುವ ಪಾಪಪ್ರಜ್ಞೆ ಕಾಡಿತು. ಇಲ್ಲ ಇದರಲ್ಲಿ ನನ್ನ ತಪ್ಫೇನಿದೆ? ತಾರಾನೇ ತಾನೇ ಹೇಳಬೇಡ ಅಂತ ಹೇಳಿದ್ದು. ಇಲ್ಲದಿದ್ದರೆ ತಾನು ಯಾರ ಬಳಿಯಾದರೂ ಹೇಳುತ್ತಿರಲಿಲ್ಲವೇ? ಇದ್ಯಾಕೋ ತನ್ನ ಲೆಕ್ಕಕ್ಕೆ ಸಿಗುತ್ತಿಲ್ಲವಲ್ಲ ಎನ್ನುವ ವಿಷಾದಕ್ಕೆ ಬಿದ್ದಳು. ಇಷ್ಟಕ್ಕೂ ಅವಳು ಮಾಡುತ್ತಿರುವುದು ತಪ್ಪೆಂದು ತನಗಾದರೂ ಹೇಗೆ ತಿಳೀಬೇಕು? ಪ್ರೀತಿಸುವುದು ತಪ್ಪೇ ಆದರೆ ಮಂಜ ಮುನಾಫನಾಗಿ ಯಾಕೆ ಬದಲಾಗುತ್ತಿದ್ದ? ಅವನೀಗ ಸಾಬರ ಹೆಣ್ಣು ಮಗಳ ಜೊತೆ ಸಂಸಾರ ಮಾಡಿಕೊಂಡು ಸಂತೋಷವಾಗಿಲ್ಲವೇ? ಮಂಜನ ವಿಷಯಕ್ಕೆ ಅಷ್ಟೆಲ್ಲಾ ಮಾತಾಡಿದ ಈ ವಿಷಯಕ್ಕೆ ಮಾತ್ರ ಮೈದು ಸಾಬರು ಯಾಕೆ ಮಾತಾಡಲಿಲ್ಲ?! ತಾರಾ ತಮನ್ನಾ ಆಗಿಯೋ, ಹುಂಜಾನ ರಂಗನೋ, ಸಿಂಗನೋ ಆಗಿಯೋ ಯಾಕೆ ಬದಲಾಗಬಾರದಿತ್ತು? ಎಂದುಕೊಂಡಳು.
ಹಾಗೆ ಆಗಿಬಿಟ್ಟರೆ ಸಮಸ್ಯೆ ಇರುವುದೇ ಇಲ್ಲವಲ್ಲ ಎನ್ನುವ ಯೋಚನೆ ಬಂದ ತಕ್ಷಣ ಅವಳಿಗೇ ಖುಷಿಯಾಯಿತಾದರೂ, ಅದನ್ನು ಹೇಳಿಕೊಳ್ಳಬೇಕು ಅಂದುಕೊಳ್ಳುವಾಗಲೇ ಅಮ್ಮಾ ಒಳಬರುತ್ತಾ `ಈ ವಿಷಯಕ್ಕೆ ನೀನು ಯಾರ ಹತ್ರಾನೂ ಏನೂ ಮಾತಾಡಬೇಡ ಚಿಟ್ಟೀ; ಕೇಶವ ಮೊದ್ಲೇ ಒಳ್ಳೆಯವನಲ್ಲ. ಆ ಮಕ್ಕಳನ್ನ ಹುಡುಕಿಸಲಿಕ್ಕೆ ಜನಾನ್ನ ಬಿಟ್ಟಿದ್ದಾನಂತೆ. ಪೇಟೆಯಿಂದ ಕೂಡ ಒಂದಿಷ್ಟು ಹುಡುಗರು ಬಂದಿದ್ದಾರಂತೆ. ಅವ್ರೆಲ್ಲಾ ಹಿಂದೂ ಹುಡುಗೀನ ಹುಂಜಾನ ಹಾರಿಸಿಕೊಂಡು ಹೋಗಿದ್ದಕ್ಕೆ ಕೋಪದಿಂದ ಇದ್ದಾರಂತೆ. ಒಟ್ನಲ್ಲಿ ಏನೇನು ಆಗುತ್ತೋ ಗೊತ್ತಾಗ್ತಾ ಇಲ್ಲ’ ಎಂದು ಗೊಣಗಿದಳು. ಏನೋ ಹೇಳಬೇಕೆಂದುಕೊಂಡಿದ್ದ ಚಿಟ್ಟಿಯ ಮಾತು ಗಂಟಲಾಳಗಳಲ್ಲೆ ಉಳಿದುಬಿಟ್ಟಿತು.
ಶಾಲೆಗೆ ಹೊರಟ ಚಿಟ್ಟಿಗೆ ಭಾರತಿ ತೋರಿಸಿದ್ದಳು: `ಇವರೇ ನೋಡು ಪೇಟೆಯಿಂದ ಬಂದ ಜನ’ ಎಂದು. ಅವರು ಊರಿನ ಒಳಗೆ, ಹೊರಗಿನ ಗುಡ್ಡ, ಮುನೇಶ್ವರನ ಆಲದ ಮರ… ಎಲ್ಲಾ ಕಡೆಯೂ ಕೇಸರಿ ಝಂಡಾಗಳನ್ನು ನೆಡುತ್ತಿದ್ದರು. `ಇವರೆಲ್ಲಾ ಏನು ಮಾಡುತ್ತಾರೆ?’ ಚಿಟ್ಟಿ ಭಾರತಿಯನ್ನು ಕೇಳಿದಳು. `ಸುರೇಶಣ್ಣ ಹೇಳಿದ- ಯಾರು ಧರ್ಮವನ್ನು ಬಿಟ್ಟು ಹೋಗುತ್ತಾರೋ ಅವರನ್ನು ಸರಿಯಾದ ದಾರಿಗೆ ತರುತ್ತಾರಂತೆ’ ಎಂದಳು ಭಾರತಿ. `ಸರಿದಾರಿಗೆ ಹೇಗೆ ತರುತ್ತಾರೆ? ಯಾಕೆ ತರುತ್ತಾರೆ?’ ಉತ್ತರವಿಲ್ಲದ ಪ್ರಶ್ನೆಗಳನ್ನು ಚಿಟ್ಟಿ ಕೇಳಿದಳು.
ಆರೋಗ್ಯ ರೇಗಿದಳು, `ಇದೆಲ್ಲಾ ದುಡ್ಡಿದ್ದೋರ ಕಥೆ. ನಾವು ಕ್ರಿಶ್ಚಿಯನ್ ಆಗಲಿಲ್ಲವಾ? ನಮ್ಮನ್ನು ಯಾರು ಬೇಡ ಅಂದರು? ಇವರೆಲ್ಲಾ ಆಗ ಎಲ್ಲಿದ್ದರು? ನಮ್ಮ ಊಟ, ನಮ್ಮ ನಿದ್ದೆ, ಹಾಗೇ ನಮ್ಮ ದೇವರು ಕೂಡಾ! ನನ್ನನ್ನು ಕೇಳಿದರೆ-ತಾರಾ ಮುಸ್ಲೀಂ ಆಗೋದೇ ವಾಸಿ. ಆಗ ಯಾರೂ ಅವಳನ್ನು ಮುಟ್ಟಲಿಕ್ಕಾಗಲ್ಲ’ ಎಂದು. ಅವಳು ಹೇಳಿದಷ್ಟು ಸರಳವೇ ಆಗಿದ್ದರೆ ಇದ್ಯಾಕೆ ದೊಡ್ಡ ಗಲಾಟೆ ಆಗುತ್ತಿತ್ತು? ನಮ್ಮ ಊರಿನ ಗಲಾಟೆಗೆ ಬೇರೆ ಊರಿಂದ ಜನ ಯಾಕೆ ಬರಬೇಕು? ನಮ್ಮ ಊರ ಜನಕ್ಕೆ ನ್ಯಾಯ ತೀರ್ಮಾನ ಮಾಡಲಿಕ್ಕೆ ಬರುವುದಿಲ್ಲವೇ? ಇದಕ್ಕೆಲ್ಲಾ ಕಾರಣರಾದ ಹುಂಜಾನ ತಾರಾ ಎಲ್ಲಿ ಹೋದರು? ಪ್ರಶ್ನೆಗಳಿಗೆ ಉತ್ತರ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೂ ಒಬ್ಬೊಬ್ಬರಿಗೂ ಒಂದೊಂದು ಪ್ರಶ್ನೆ ಮಾತ್ರ ಇದ್ದೇ ಇತ್ತು.
ಅಷ್ಟರಲ್ಲಿ ನಕ್ಕತ್ತು ಬೆಂಕಿಪೊಟ್ಟಣವನ್ನು ಹಿಡಿದು ಓಡಿ ಬಂದು `ನೋಡ್ರೆ’ ಎಂದಳು. ಎಲ್ಲರೂ ಕಣ್ಣರಳಿಸಿದರು, ಹಿಪ್ಪು ನೇರಳೆ ಸೊಪ್ಪಿನ ಮಧ್ಯೆ ಹಸಿರು, ಹಳದಿ, ಕೆಂಪು ಬಣ್ಣಗಳನ್ನು ಆತುಕೊಂಡ ಮುದ್ದಾದ ಹೊಳೆವ ಜೀರುಂಡೆ ಕೂತಿತ್ತು, ಥೇಟು ಕಾಮನ ಬಿಲ್ಲಿನ ಒಂದು ತುಣುಕು ಹುಂಜಾನನ ಬಗ್ಗೆ ಮಾತಾಡುವಾಗ ತಾರಾಳ ಕಣ್ಣಲ್ಲಿ ಮಿನುಗಿತ್ತಲ್ಲ ಹಾಗೆ. ಅದನ್ನು ನೋಡಿ ಕಣ್ಣರಳಿಸಿದ ಚಿಟ್ಟಿ `ಎಲ್ಲಿತ್ತೇ?’ ಎಂದಳು. `ನಮ್ಮನೆ ಬೇಲಿಯ ಮೇಲೆ. ಇನ್ನೇನು ಮೊಟ್ಟೆ ಇಡುತ್ತೆ ಅನ್ಸುತ್ತೆ ಅದಕ್ಕೆ ಹಾರ್ತಾ ಇಲ್ಲ. ನನ್ನ ಕೈಗೆ ಸುಲಭವಾಗಿ ಸಿಕ್ಕಿಬಿಟ್ಟಿತು’ ಎಂದಳು ನಕ್ಕತ್ತು. ಜೀರುಂಡೆಯ ಬಣ್ಣ ಅವರ ಕಣ್ಣೊಳಗೆ ಬೆರೆತು ಬೆರಗನ್ನು ಮೂಡಿಸಿತು. ಇಂಥಾ ಜೀರುಂಡೆ ನನಗೂ ಸಿಕ್ಕೀತೇ? ಎನ್ನುವ ಯೋಚನೆಗೆ ಬಿದ್ದ ಚಿಟ್ಟಿಗೆ `ಸುಮ್ನೆ ಸಿಗಲ್ಲಮ್ಮ ಇದಕ್ಕೆಲ್ಲಾ ಅದೃಷ್ಟ ಇರಬೇಕು. ಇದು ಅವು ಮೊಟ್ಟೆ ಇಡುವ ಕಾಲ, ಬೇಲಿಯ ಬದಿಯಲ್ಲಿ ನಿಂತು ಸರಿಯಾಗಿ ನೋಡಿದ್ರೆ ಸಿಕ್ಕರೂ ಸಿಗಬಹುದು’ ಎಂದಳು ನಕ್ಕತ್ತು. `ಇದನ್ನೆಲ್ಲಾ ಮನೇಲಿ ಸಾಕ್ತಾರಾ?’ ಕೇಳಿದಳು ಮಂಗಳಿ. ಆರೋಗ್ಯಾಗೆ ರೇಗಿ `ನಿಂಗೆ ಸಿಕ್ಕಿಲ್ಲವಲ್ಲ ಅದಕ್ಕೆ ಹೀಗಂತಾ ಇದೀಯಾ?’ ಎಂದಾಗ `ನೀವು ಶೂದ್ರರು, ಏನನ್ನು ಬೇಕಾದ್ರೂ ಸಾಕ್ತೀರ. ನಾವ್ ಹಾಗಲ್ಲ’ ಎಂದಳು ಮಂಗಳಿ. ಬಹುಶಃ ತಾರಾಳ ವಿಷಯಕ್ಕೆ ಮನಸ್ಸು ರೋಸಿ ಹೋಗಿದ್ದರಿಂದಲೋ ಏನೋ ಮಾತನ್ನು ಮುಂದುವರಿಸದೇ `ಸರಿಬಿಡು ನಿಂಗೆ ಮಡಿ ಮಾಡೋ ಜೀರುಂಡೇನ ಹುಡುಕಿ ತಂದುಕೊಡೋಣ’ ಜೋರಾಗಿ ನಕ್ಕಳು ಆರೋಗ್ಯ. ಅರೆ ಅಂಥಾದ್ದೊಂದು ಜೀರುಂಡೆ ಇರುತ್ತಾ? ಯಾರಿಗೆ ಗೊತ್ತು ಋಷಿ ಮುನಿಗಳೆಲ್ಲ ಏನೇನೋ ಆಗ್ತಾರಲ್ಲ ಹಾಗೆ ಇದೂ ಇರಬಹುದು ಎಂದುಕೊಂಡಳು ಚಿಟ್ಟಿ. ಅಷ್ಟರಲ್ಲಿ ಆರೋಗ್ಯಾನ ಮಾತಿಗೆ ಎಲ್ಲರೂ ಒಂದು ಸುತ್ತು ನಕ್ಕು ಮಂಗಳಿ ಕೋಪದಿಂದ ಮನೆಗೆ ಹೋಗಿದ್ದೂ ಆಗಿತ್ತು.
ಬೇಲಿಯ ಬದಿಯಲ್ಲಿ ನಿಂತು ನಿಜಕ್ಕೂ ನಾನು ಅದೃಷ್ಟಶಾಲಿಯೇ? ನಂಗೆ ಜೀರುಂಡೆ ಸಿಗುತ್ತಾ? ಇಲ್ಲಾಂದ್ರೆ ಯೋಚಿಸುತ್ತಿದ್ದಳು ಚಿಟ್ಟಿ. `ಏನ್ ನೋಡ್ತಾ ಇದೀಯ?’ ಎನ್ನುತ್ತಾ ಹತ್ತಿರ ಬಂದು ಬಗ್ಗಿ ನೋಡಿದಳು ಪುಟ್ಟಿ. ಅವಳಿಗೆ ಬೇಲಿಯ ಸಾಲಲ್ಲಿ ಏನೂ ಕಾಣಲಿಲ್ಲ `ಜೀರುಂಡೆ’ ದಿವ್ಯನಿರ್ಲಕ್ಷ್ಯದಿಂದ ಚಿಟ್ಟಿ ಎಲ್ಲವನ್ನೂ ಹೇಳಿದಳು. `ಅದ್ಯಾಕ್ ಮೊಟ್ಟೆ ಇಡುತ್ತೆ? ಅದಕ್ಕೆ ಗೊತ್ತಾಗಲ್ವಾ ಮೊಟ್ಟೆ ಇಡೋವಾಗ ತನಗೆ ಹಾರೋಕ್ಕಾಗಲ್ಲ ಅಂತ. ಗೊತ್ತಿದ್ದ ಮೇಲೂ ಅದು ಮೊಟ್ಟೆ ಇಡೋದು ಯಾಕೆ? ನಮ್ಮ ಕೈಗೆ ಸಿಗೋದು ಯಾಕೆ? ಎಲ್ಲ ಅದರದ್ದೇ ತಪ್ಪು’ ಪುಟ್ಟಿ ಊರಗಲ ಬಾಯನ್ನು ತೆಗೆದು ನಗುತ್ತಾ ಹೇಳಿದಳು. `ಅದ್ರ ಥರಾನೆ ಇನ್ನೊಂದು ಮರಿಯನ್ನು ಹುಟ್ಟಿಸೋಕ್ಕೆ ಮೊಟ್ಟೆ ಬೇಕಲ್ಲ’ ಎಂದಳು ಚಿಟ್ಟಿ ಎಲ್ಲ ತಿಳಿದವಳಂತೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಮ್ಮ `ಚಿಟ್ಟಿ ಬೇಲಿ ಮಗ್ಗಲಲ್ಲಿ ಹೋಗ್ಬೇಡ ಅಂತ ಎಷ್ಟ್ ಸಲ ಹೇಳಿದ್ದೀನಿ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅನ್ನೋ ಹಾಗೇ ನಿಂಗ್ ಹಿಡ್ದಿರೋ ಗೀಳನ್ನ ಇವ್ಳಿಗೂ ಹಿಡುಸ್ತೀಯ. ಮಿಡಿ ನಾಗರ ಏನಾದ್ರೂ ಇದ್ರೆ ಹಣೆಗೇ ಹೊಡ್ಯುತ್ತೆ ಬಾ ಈಚೆಗೆ’ ಎಂದಳು. `ಅಮ್ಮ ಚಿಟ್ಟಿ ಜೀರುಂಡೆ ಹುಡುಕ್ತಾ ಇದಾಳೆ’ ಎಂದಳು ಪುಟ್ಟಿ. ಆ ಮಾತನ್ನು ಕೇಳಿ ಅಮ್ಮಾ ಬೇಸರದಿಂದ `ಅಲ್ಲಕಣೇ ಅದ್ರ ಪಾಡಿಗೆ ಅದು ಮೊಟ್ಟೆ ಇಟ್ಟು ಮರಿ ಮಾಡುತ್ತೆ ಅದಕ್ಕೂ ಬಿಡ್ದೆ ಯಾಕೇ ನೇಣಿಡ್ತೀಯ? ಈಗ ಬೇರೆ ಕೆಲ್ಸ ಇದೆ ನೀನ್ ಸ್ವಲ್ಪ ಒಳಗ್ ಬಾ’ ಎಂದು ಬಲವಂತಕ್ಕೆ ಚಿಟ್ಟಿಯನ್ನು ಒಳಗೆ ಕರೆದೊಯ್ದಳು. ಚಿಟ್ಟಿಗೆ ಗಮನವೆಲ್ಲಾ ಬೇಲಿಯ ಮೇಲೆ. ತಾನು ಇಲ್ಲದೇ ಇರುವ ಹೊತ್ತಿನಲ್ಲಿ ಜೀರುಂಡೆ ಹೊರಕ್ಕೆ ಬಂದರೆ ಅದನ್ನು ಹಿಡಿಯೋರು ಯಾರು?

ಅಮ್ಮ ಚಿಟ್ಟಿಯನ್ನು ಒಳಗೆ ಕರೆದುಕೊಂಡು ಹೋಗಿ `ಇವತ್ತು ದುಡಿದರೆ ಹೊಟ್ಟೆ ತುಂಬಬೇಕು ಪಾಪ ಪಾತುಮ್ಮಿ ಎಷ್ಟ್ ಕಷ್ಟ ಪಡ್ತಾ ಇದ್ದಾಳೋ ಏನೋ ದುಡಿಯೋ ಅಂಗಡಿಯನ್ನು ಬೇರೆ ಕಳಕೊಂಡಿದ್ದಾಳೆ. ಮಗ ಬೇರೆ ಹೀಗೇ … ಅವಳಿಗೆ ಯಾರು ಆಸರೆಯಾಗುತ್ತಾರೋ ಗೊತ್ತಿಲ್ಲ’ ಎನ್ನುತ್ತಾ ಅಕ್ಕಿಯನ್ನು ಚೀಲಕ್ಕೆ ಹಾಕಿ ಯಾರಿಗೂ ಕಾಣದ ಹಾಗೆ ಪಾತುಮ್ಮಿಯ ಕೈಗೆ ಕೊಟ್ಟು ಬರುವಂತೆ ಹೇಳಿದಳು. ಅಜ್ಜಿಗೆ ಗೊತ್ತಾಗದಿರುವಂತೆ ಮತ್ತೆ ಮತ್ತೆ ಎಚ್ಚರಿಕೆಯನ್ನೂ ಕೊಟ್ಟಳು. ನಾಳೆ ನಮಗೆ ಅಕ್ಕಿ ಇಲ್ಲದಂತಾದರೆ… ಅಮ್ಮನನ್ನು ಕೇಳಬೇಕೆನ್ನಿಸಿತು. ಅಮ್ಮ ಅಷ್ಟು ಗಂಭೀರವಾಗಿದ್ದಕ್ಕೆ ಕೇಳಲಾದಗೆ ಹೋದಳು. ಸಾಲಾಗಿ ಎಂಟು ಮಕ್ಕಳನ್ನ ಹಡೆದರೂ ಎಂಟು ಮಕ್ಕಳ ತಾಯಿ ಅನ್ನಲಿಕ್ಕಾಗದ ಪಾತುಮ್ಮಿಯ ಚಿತ್ರ ಒಂದು ಸಲ ಕಣ್ಣೆದುರು ಹಾದುಹೋಯಿತು. ಊರೆಲ್ಲಾ ಹಬ್ಬ ಮಾಡಿ ಮಾಂಸ ತಿಂತಾ ಇದ್ರೂ ಕುಟ್ಟಿಯ ಮನೆಯಲ್ಲಿ ಒಲೆ ಉರಿಯುವುದೇ ಕಷ್ಟ ಆಗ್ತ ಇತ್ತು. ಮಕ್ಕಳ ಮಾಂಸ ತಿನ್ನುವ ಆಸೆಗೆ ಪಾತುಮ್ಮಿಗೆ ಕಡಿವಾಣ ಹಾಕಲಿಕ್ಕಾಗದೆ ಕಾಡಲ್ಲಿ ಬೆಳೆದ ಅಣಬೆಯನ್ನೂ, ಅದರ ಜೊತೆಗೆ ಗೆಡ್ದೆ ಗೆಣಸುಗಳನ್ನೋ ಹಾಕಿ ಥೇಟ್ ಮಾಂಸದ ಸಾರಿನ ಹಾಗೆ ಮಾಡುವುದನ್ನು ಅದುಹೇಗೋ ಪಾತುಮ್ಮಿ ರೂಢಿಸಿಕೊಂಡಿದ್ದಳು. ಅದೆಲ್ಲಕ್ಕಿಂತ ಇದು ಮಾಂಸದ ಸಾರು ಎಂದು ಮಕ್ಕಳನ್ನು ನಂಬಿಸುವ ಕಲೆಯನ್ನೂ ಇಂಥಾ ಫತುಮ್ಮಿಯ ಬಗ್ಗೆ ಊರವರಿಗೆ ಗೌರವ.
ಎಂಥಾ ಕಷ್ಟದ ಹೊತ್ತಲ್ಲೂ ಯಾರ ಮನೆಯ ಬಾಗಿಲಿಗೂ ತಾನಾಗಲೀ ತನ್ನ ಮಕ್ಕಳನ್ನಾಗಲಿ ಕಳಿಸಿರಲಿಲ್ಲ. ಕುಟ್ಟಿಯ ಯಡಬಿಡಂಗಿತನಕ್ಕೆ ಟೀ ಅಂಗಡಿಯೊಂದೇ ಸಾಕಾಗಿತ್ತು ಅವನ ಬಾಯ ಕಾರಣಕ್ಕೆ ಪಾತುಮ್ಮಿ ಊರ ಕೆಲ ಜನರ ಜೊತೆ ಕಾರಣವೇ ಇಲ್ಲದೆ ದ್ವೇಶವನ್ನು ಕಟ್ಟಿಕೊಂಡಿದ್ದಳು. ಪಾತುಮ್ಮಿಗೆ ಇದ್ದ ಒಂದೇ ಒಂದು ದೌರ್ಬಲ್ಯ-ಅದು ಅವಳ ಗಂಡ. ಯಾರದರೂ ನಿನ್ನ ಗಂಡ ಹೀಗೆ ಅಂತ ಅಂದುಬಿಟ್ಟರೆ ಸಾಕು-ಅದ್ಯಾವ ಸ್ಥಿತಿಯಲ್ಲಿದ್ದರೂ ಅವರ ಜೊತೆ ಜಗಳ ಆಡದೆ ಬರುತ್ತಿರಲಿಲ್ಲ. ನನ್ನ ಗಂಡನ ಬಾಯಿಗೆ ಬೀಳುವ ಕೆಲಸವನ್ನು ನೀವ್ಯಾಕೆ ಮಾಡುವುದು? ಎಂದು ಅವರನ್ನೇ ಜಬ್ಬರಿಸಿ, ಅವನು ಕೊಟ್ಟ ಎಂಟು ಮಕ್ಕಳನ್ನು ನೆನೆದು ಹೆಮ್ಮೆಯಿಂದ ಕೇಳುತ್ತಿದ್ದಳು.
ಚಿಟ್ಟಿ ಕುಟ್ಟಿಯ ಮನೆ ಮುಟ್ಟುವಾಗ ಅಲ್ಲಿ ಮೈದು ಸಾಬರಿಂದ ಹಿಡಿದು ಸುಮಾರಷ್ಟು ಜನ ಮುಸಲ್ಮಾನರು ರಾಮೇಗೌಡರಾದಿಯಾದ ಹಿಂದೂಗಳು ಸೇರಿದ್ದರು. ಕೇಶವ ಮಾಡಿದ್ದು ತಪ್ಪೇ; ಆದರೆ ಅವನನ್ನು ಎದುರು ಹಾಕಿಕೊಳ್ಳುವವರು ಯಾರು? ಹೇಳಿದ ಮಾತನ್ನು ಕೇಳುವವರಿಗಾದರೆ ಏನಾದರೂ ಹೇಳಬಹುದು ಆದರೆ

ಕಲೆ : ವಿಜಯ್ ಶ್ರೀಮಾಲಿ

ಕೇಶವನಂಥ ಹುಂಬನಿಗೆ ಏನು ಹೇಳುವುದು? ಹಣದ ಮದ ತಲೆಗೆ ಹತ್ತಿದೆ. ಈಗ ಬರೀ ಕುಟ್ಟಿಯ ಮೇಲೆ ಮಾತ್ರವಲ್ಲ, ಊರಲ್ಲಿರುವ ಎಲ್ಲಾ ಮುಸಲ್ಮಾನರ ಮೇಲೂ ಅವನಿಗೆ ಕೋಪವೇ… ತನ್ನ ಮಗಳದ್ದು ತಪ್ಪು ಅಂತ ಅವನು ಭಾವಿಸಲೇ ಇಲ್ಲ . . . ಹೀಗೆ ತಲೆಗೊಂದರಂತೆ ಮಾತಾಡುತ್ತಾ ಕೂತಿದ್ದರು. ಚಿಟ್ಟಿ ಒಳಗೆ ಬಂದಳು. ಕುಟ್ಟಿ ತಲೆಯ ಮೇಲೆ ಕೈ ಹೊತ್ತು ಕೂತಿದ್ದ. ತಾನು ಅವನ ಅಂಗಡಿಯ ಕಡೆಗೆ ಸುಳಿದರೇ ಸಾಕು `ಬಾಂಬ್ರ ಮೋಳೆ’ ಎನ್ನುತ್ತಾ ಹಾಸ್ಯ ಮಾಡುತ್ತಿದ್ದ ಕುಟ್ಟಿಯ ಸ್ಥಿತಿಯನ್ನು ನೋಡಿ ಅಯ್ಯೋ ಅನ್ನಿಸಿತು.
ಆಗಲೇ ಮೈದುಸಾಬರು ನಿಟ್ಟುಸಿರಿಟ್ಟು `ಅಣ್ಣ ತಮ್ಮರ ಹಾಗೆ ಇರುವ ನಮ್ಮನ್ನು ಇಂಥಾ ಊರನ್ನ ಒಡೀಲಿಕ್ಕೆ ಅಂತಾನೇ ಆ ಕೇಶವ ಪಣತೊಟ್ಟು ನಿಂತಿರೋ ಹಾಗಿದೆ. ಇಲ್ಲದಿದ್ದರೆ ಹೀಗೆ ಬೇರೆ ಊರಿಂದ ಜನಾನ ಕರುಸ್ತಾ ಇದ್ನಾ? ಒಂದು ಸಲ ಬೇರೆಯವರು ಬಂದರೆ ಆಗಿಹೋಯಿತು ನಮ್ಮ ಮಾತನ್ನು ಕೇಳುವವರು ಯಾರಿರುತ್ತಾರೆ?’ ಎಂದರು. ರಾಮೇಗೌಡರೂ ಅವರ ಮಾತಿಗೆ ತಲೆತೂಗಿದ್ದರು. ಪಾತುಮ್ಮಿ ಕಣ್ಣಿರನ್ನು ಒರೆಸಿಕೊಳ್ಳುತ್ತಾ `ಖುದಾ ನಮ್ಮ ಕಡೆಗಿದ್ದಾನೆ ಬಿಡಿ ಭಯ್ಯ. ತಿಳಿಯದ ನನ್ನ ಮಗನನ್ನು ಆ ಹುಡುಗಿ ಬುಟ್ಟಿಗೆ ಹಾಕಿಕೊಂಡು ಹೋಯ್ತು ಅಂದ್ರೆ . . .’ ಎನ್ನುವಾಗಲೇ ಕುಟ್ಟಿಗೆ ದುಃಖ ಜಾಸ್ತಿಯಾಗಿತ್ತು. ಆದರೂ `ಸುಮ್ಮನಿರು ಪಾತಿ ನಿನ್ನ ಮಗನನ್ನು ಅರಿಯದವ ಅನ್ನೋಕ್ಕಾಗುತ್ತಾ? ಹಾಗ್ ನೋಡಿದ್ರೆ ಅದೇ ಸಣ್ಣ ಹುಡ್ಗಿ’ ಎಂದ. ಊರವರನ್ನೆಲ್ಲಾ ಆಡಿಕೊಳ್ಳುತ್ತಿದ್ದ ಕುಟ್ಟಿ ಇವನೇನಾ ಅಚ್ಚರಿಯಿಂದ ನೋಡಿದಳು ಚಿಟ್ಟಿ. ಆ ಜನರನ್ನು ನೋಡಿ ದಿಕ್ಕು ತೋಚದೆ ಅಮ್ಮ ಕೊಟ್ಟಿದ್ದನ್ನು ಕೊಟ್ಟು ಆದಷ್ಟೋ ಬೇಗ ಹೋಗಿಬಿಡಬೇಕು ಎಂದು `ಅಮ್ಮ ನಿಮಗೆ ಅಂತ ಕಳಿಸಿದಳು. ತಗೊಳ್ಳಿ’ ಎನ್ನುತ್ತಾ ಚೀಲವನ್ನು ಪಾತುಮ್ಮಿಯ ಕೈಗೆ ವಗರ್ಾಯಿಸಿದಳು.
ಬೇಡ ಅನ್ನದೆ ಅಕ್ಕಿಯ ಚೀಲವನ್ನು ತೆಗೆದುಕೊಂಡು `ಅಲ್ಲಾ ನಿಮ್ಮನೇನ ಕಾಪಾಡ್ತಾನೆ’ ಚಿಟ್ಟಿಯ ತಲೆ ನೇವರಿಸಿದ ಫಾತುಮ್ಮಿ ಕಣ್ಣು ಮೂಗು ವರೆಸಿಕೊಳ್ಳುತ್ತಾ ಒಳಗೆ ಹೋದಳು. ಅವಳಿಗೆ ತಾನು ಅಕ್ಕಿ ತಂದುಕೊಟ್ಟಿದ್ದರಿಂದ ಬೇಜಾರಾಯಿತಾ? ಇಲ್ಲ ಸಂತೋಷವಾಯಿತಾ? ತಿಳಿಯದೆ ನಿಂತಳು ಚಿಟ್ಟಿ. ಮೈದು ಸಾಬರು ಕುಟ್ಟಿಯನ್ನು ಸಮಾಧಾನ ಮಾಡಿದರು. `ನಾವೆಲ್ಲಾ ಇಲ್ಲವಾ? ನೋಡು ಈ ಊರ ಜನ ನಿನ್ನ ಕೈಬಿಡ್ತಾರೆ ಅಂದುಕೊಳ್ಳಬೇಡ. ನೀನು ನಮಗೆಲ್ಲಾ ಬೇಕು. ಹುಂಜಾನ ಇನ್ನು ನಿನ್ನ ಮಗ ಅಲ್ಲ ಅಂದ್ಕೋ. .. ನಾನು ನಿಂಗೆ ಹಣ ಕೊಡ್ತೀನಿ ಮತ್ತೆ ಟೀ ಅಂಗಡಿ ಶುರುಮಾಡು’ ಎಂದೆಲ್ಲ ಹೇಳುತ್ತಿದ್ದರು. ಪಾಪ ಇವರನ್ನು ಈ ಸ್ಥಿತಿಗೆ ತಂದಿದ್ದು ಆ ತಾರಾನೆ. ಅವರ ಮನೆಯಲ್ಲಿ ಒಪ್ಪಿಸಿ ಮದ್ವೆ ಆಗಿದ್ದಿದ್ರೆ ಹೀಗೆಲ್ಲಾ ಆಗುತ್ತಿತ್ತೇ? ಎಂದೆಲ್ಲಾ ಯೋಚಿಸುತ್ತಾ ನಿಂತ ಚಿಟ್ಟಿಯನ್ನು ಮೈದು ಸಾಬರು ಹತ್ತಿರಕ್ಕೆ ಕರೆದು ಕೆನ್ನೆಯನ್ನು ಸವರುತ್ತಾ `ಆಟಕ್ಕೆ ಹೋಗಲಿಲ್ಲವಾ?’ ಎಂದರು. ಹಾಗೆ ಅವರ ಕೈ ಅವಳ ಕೆನ್ನೆಯನ್ನು ಸವರಿದಾಗ ಸಂಕೋಚವಾದರೂ ಸಂತೋಷವಾಯಿತು. `ಈಗ ಹೋಗ್ತೇನೆ ಅಬ್ಬು’ ಎಂದಳು-ನಕ್ಕತ್ತು ತನ್ನ ತಂದೆಯನ್ನು ಅಬ್ಬು ಎಂದು ಕರೆಯಿತ್ತಿದ್ದುದನ್ನು ನೆನೆದು. ಅವಳು ಅಬ್ಬು ಎಂದು ಕರೆದದ್ದಕ್ಕೆ ಮೈದು ಸಾಬರಿಗೆ ಸಂತೋಷವಾಗಿ ನಕ್ಕರು.
ಮನೆಗೆ ಬರುವುದರೊಳಗೆ ಅಮ್ಮನೇ ಚಿಟ್ಟಿಗೆಂದು ಜೀರುಂಡೆಯನ್ನು ಹಿಡಿದಿಟ್ಟಿದ್ದಳು. ಪುಟ್ಟಿ ಅದರ ಜೊತೆ ಆಡುತ್ತಿದ್ದಳು. ಚಿಟ್ಟಿಗೆ ಖುಷಿಯಾಯ್ತು. `ಪುಟ್ಟಿ ಇದೆಲ್ಲೇ ಇತ್ತು’ ಎಂದಳು ಖುಷಿಯನ್ನು ತಡೆದುಕೊಳ್ಳಲಾಗದೆ. `ಅಮ್ಮ ಕಾಡು ಮಲ್ಲಿಗೆ ಗಿಡದ ಹತ್ತಿರದಿಂದ ಹುಡುಕಿ ತಂದಳು’ ಎಂದಳು. ಅಮ್ಮನಿಗೆ ತನ್ನ ಮೇಲಿನ ಪ್ರೀತಿಯ ಅರಿವಾಗಿ ಚಿಟ್ಟಿಗೆ ಖುಷಿಯಾಯಿತಾದರೂ ಜೀರುಂಡೆ ತನ್ನ ಕೈಗೆ ಸಿಗದೆ ಅಮ್ಮನ ಕೈಗೆ ಸಿಕ್ಕಿದೆ. ಅಂದ್ಮೇಲೆ ನಾನು ಅದೃಷ್ಟವಂತಳೋ ಅಥವಾ ಅಮ್ಮನೋ ಎಂದು ಯೋಚಿಸಿದಳು. ಅಷ್ಟರಲ್ಲಿ ಅಮ್ಮ ಬೆಂಕಿಪೊಟ್ಟಣವನ್ನು ಖಾಲಿ ಮಾಡಿ ಅದರ ಮೇಲೆ ಗಾಳಿ ಆಡಲು ತೂತುಗಳನ್ನ ಕೊರೆದು ಅದರಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಹಾಕಿ `ತಗೊಳ್ಳೆ. . . ` ಎಂದು ತಂದುಕೊಟ್ಟಳು. ಅಮ್ಮನನ್ನು ತಬ್ಬಿ ಅವಳ ಕೆನ್ನೆಗೆ ಮುತ್ತನ್ನ ಕೊಟ್ಟು `ಒಳ್ಳೇ ಅಮ್ಮ’ ಎಂದಳು.
ಪುಟ್ಟಿ ಕಣ್ಣರಳಿಸಿ ಚಿಟ್ಟಿಯನ್ನು ನೋಡಿ ತಾನೂ ಅಮ್ಮನ ಕೆನ್ನೆಗೆ ಮುತ್ತಿಟ್ಟಳು. ಅಮ್ಮ ಇಬ್ಬರನ್ನು ತಬ್ಬಿ ಒಂದು ಕ್ಷಣ ಬಿಟ್ಟು `ಪಾತುಮ್ಮಿ ಏನಂದಳು?’ ಕೇಳಿದಳು. ಚಿಟ್ಟಿಗೆ ಅಮ್ಮನ ಮಾತಿನಲ್ಲಿ ಗಮನ ಇರಲಿಲ್ಲ. ಜೀರುಂಡೆಯ ಕುತ್ತಿಗೆಗೆ ದಾರ ಕಟ್ಟಬೇಕು ಅದು ಯಾವತ್ತೂ ಹಾರಿ ಹೋಗದ ಹಾಗೆ ತನ್ನ ಜೊತೆಯೆ ಇಟ್ಟುಕೊಳ್ಳಬೇಕು. ಪ್ರತಿಸಲ ಅದು ಮೊಟ್ಟೆ ಇಟ್ಟ ನಂತರ ಅದನ್ನು ತಾನು ಜೋಪಾನವಾಗಿ ನೋಡಿಕೊಂಡು ಮರಿಯಾದ ಮೇಲೆ ಅವಕ್ಕೂ ಹಿಪ್ಪುನೇರಳೆ ಸೊಪ್ಪನ್ನು ಹಾಕಿ ಸಾಕಬೇಕು. ಎಲ್ಲರ ಹೊಟ್ಟೆ ಉರಿಸಬೇಕು…ಹೀಗೆ ಕನಸುಗಳ ಲೋಕದಲ್ಲೇ ವಿಹರಿಸತೊಡಗಿದಳು.
ಹೂ ಕಟ್ಟುವ ದಾರದಲ್ಲಿ ಕುಣಿಕೆಯನ್ನು ಮಾಡಿ ಅದರ ಕುತ್ತಿಗೆಯ ಭಾಗಕ್ಕೆ ಹುಷಾರಿಂದ ಹಾಕಿದಳು ಚಿಟ್ಟೀ. ಅಲ್ಲಿಗೆ ಆ ಜೀರುಂಡೆ ಪೂರ್ಣವಾಗಿ ಅವಳ ಕೈವಶ ಆಗಿತ್ತು. ತನ್ನ ರೆಕ್ಕೆಗಳನ್ನು ಅಗಲಿಸಿ ಮೈಮುರಿದ ಆ ಪುಟ್ಟ ಜೀರುಂಡೆಯ ದಪ್ಪ ಕವಚ ಒಮ್ಮೆ ಮೇಲೆದ್ದಿತು. ಕುತೂಹಲದಿಂದ ಅದರ ಮಧ್ಯೆ ಪುಟ್ಟಿ ಕೈ ಇಟ್ಟೇ ಬಿಟ್ಟಳು. ಮೈಮುರಿದ ಜೀರುಂಡೆ ತನ್ನ ಮೈಯ್ಯನ್ನು ಸಡಿಲ ಬಿಟ್ಟಿತು. ಪುಟ್ಟಿಯ ಕೈ ಬೆರಳಿನ ತುದಿ ಕತ್ತರಿಸಿ `ಹೋ’ ಎನ್ನುವ ಅಳು ಮನೆಯ ತುಂಬಾ ತುಂಬಿತು. ದಾರ ಕಟ್ಟಿಸಿಕೊಂಡ ಜೀರುಂಡೆ ಮಾತ್ರ ಯಾವುದರ ಗಮನವೂ ಇಲ್ಲದೆ ಬೆಂಕಿಪೆಟ್ಟಿಗೆ ಒಳಗೆ ಬೆಚ್ಚಗೆ ಮಲಗಿಕೊಂಡಿತು.
ರಾತ್ರಿ ಎಚ್ಚರಾದಾಗೆಲ್ಲಾ ಚಿಟ್ಟಿ ಬೆಂಕಿಪೆಟ್ಟಿಗೆ ತೆಗೆದು ಜೀರುಂಡೆ ಮೊಟ್ಟೆ ಇಟ್ಟಿತಾ? ಎಂದು ನೋಡುವುದು ನಡೆದೆ ಇತ್ತು. ಹಾಗೇ ತೆಗೆದಾಗೆಲ್ಲಾ ಜೀರುಂಡೆ ಮೈ ಒದರಿ ಮತ್ತೆ ಮಲಗಿಕೊಳ್ಳುತ್ತಿತ್ತು. ಪ್ರತಿಸಲವೂ ಇನ್ನೂ ಮೊಟ್ಟೆ ಇಟ್ಟಿಲ್ಲ ಎನ್ನುವ ಬೇಸರ ಅವಳಿಗೆ. `ಚಿಟ್ಟೀ ನಿದ್ದೆ ಕೆಟ್ಟರೆ ಕಷ್ಟ ಮಲಕ್ಕೋ’ ಅಮ್ಮ ಒಮ್ಮೆ ಎಚ್ಚರಾದಾಗ ಚಿಟ್ಟಿಯನ್ನು ಗದರಿದ್ದಳು.
ಬೆಳಗಾಗುವುದರೊಳಗೆ ಒಂದು ಕೆಟ್ಟ ಸುದ್ದಿ ಊರಿನ ತುಂಬಾ ಹರಿದಾಡುತ್ತಿತ್ತು. ಕಣ್ಣನ್ನು ಬಿಟ್ಟು ಬೆಂಕಿಪೆಟ್ಟಿಗೆಯನ್ನು ತೆಗೆಯಲು ಹೋದ ಅವಳ ಕೈ ತಡೆದಿತ್ತು. ಅವರಿವರು ಮನೆಯ ಮುಂದೆ ಮಾತಾಡುವ ಮಾತಿನಲ್ಲಿ ಅವಳಿಗೆ ಗೊತ್ತಾಗಿದ್ದು -ಮುನಿಯಪ್ಪನ ಆಲದ ಮರಕ್ಕೆ ಹುಂಜಾನನ ದೇಹ ಚೂರು ಚೂರಾಗಿ ನೇತಾಡುತ್ತಿತ್ತೆಂದು. ಯಾಕಿಂತಾ ದ್ವೇಷ? ಯಾಕೆ ಇಂಥ ಕೆಲ್ಸ ಮಾಡ್ತಾರೆ? ಚಿಟ್ಟಿಗೆ ಮನಸ್ಸಿನಲ್ಲಿ ಮುಳ್ಳಾಡಿತು. ಹೊರಗೆ ಬರಲು ನೋಡಿದ ಅವಳನ್ನು ಅಜ್ಜಿ ತಡೆದಳು. `ಎಲ್ಲ ಮುಗಿಯುವವರೆಗೂ ನೀನು ಹೊರಗೆ ಹೋಗಬೇಡ ಚಿಟ್ಟೀ ಸ್ಕೂಲಿಗೂ’ ಅಜ್ಜಿಯ ಮಾತಿಗೆ ಚಿಟ್ಟಿ ಕಂಗಾಲಾದಳು.
ಕೇಶವ ಸೇಡನ್ನು ಹಿಂಬಾಲಿಸುವವನಂತೆ ಮಗಳನ್ನ ಹುಡುಕಿಸಿದ್ದ. ಜಗತ್ತನ್ನೇ ಕಾಣದ ಎರಡು ಎಳೆ ಜೀವಗಳು ಎಲ್ಲಿ ಹೋಗಲು ಸಾಧ್ಯ? ಆಶ್ರಯ ಕೊಟ್ಟವರೇ ಕೇಶವನಿಗೆ ಸುದ್ದಿ ತಲುಪಿಸಿದರು. ಮೊದಲು ಹುಂಜಾನನನ್ನು ಕಡಿದುಹಾಕಿದ ಕೇಶವ ಅಡ್ಡಬಂದ ಮಗಳನ್ನೂ ಬಿಡಲಿಲ್ಲ. `ಮುಸಲ್ಮಾನನ ಸಂಗದಿಂದ ಮೈಲಿಗೆಯಾದ ನೀನು ನನ್ನ ಮನೆಯ ಒಳಗೆ ಕಾಲಿಡಲೂ ಸಾಧ್ಯವಿಲ್ಲ’ ಎಂದು ಅವಳನ್ನೂ ಕೊಂದನಂತೆ ಎಂದು ತಿಳಿದವರು ಮಾತಾಡಿದರು. ಇದರಲ್ಲಿ ನಿಜ ಯಾವುದು? ಸುಳ್ಳು ಯಾವುದು?
ಸುದ್ದಿ ಗೊತ್ತಿದ್ದರೂ ಯಾರೂ ಏನೂ ಮಾತಾಡಲಿಲ್ಲ. ಮರಕ್ಕೆ ನೇತಾಡುತ್ತಿದ್ದ ಹುಂಜಾನನ ದೇಹದ ಒಂದೊಂದೇ ಭಾಗಗಳನ್ನು ಅಳುತ್ತಲೇ ಇಳಿಸಿದ ಕುಟ್ಟಿ ಅದಕ್ಕೆ ವಿಧಿವತ್ತಾಗಿ ಸಂಸ್ಕಾರ ಮಾಡಿದ. ಇದೆಲ್ಲಾ ಆದ ಮೇಲೆ ಕುಟ್ಟಿ ತನ್ನ ಸೇರು, ಪಾವು, ಚಟಾಕು ಮಕ್ಕಳನ್ನು ಕರೆದುಕೊಂಡು ಊರನ್ನ ಬಿಟ್ಟು ಹೊರಟಾಗ; ಕೇಶವ ಗೆದ್ದೆ ಎನ್ನುವ ಹಮ್ಮಿನಿಂದ ಮೀಸೆಯ ಮೇಲೆ ಕೈ ಆಡಿಸಿದ್ದ. ಚಿಟ್ಟಿಗೆ ನೋವಾಗಿತ್ತು, ಇನ್ನೂರು ಮುನ್ನೂರು ವರ್ಷಗಳಿಂದ ಆಲದ ಮರದಲ್ಲೇ ನೆಲೆನಿಂತು ಊರನ್ನು ಕಾಪಾಡುತ್ತಿರುವ ಮುನೇಶ್ವರಸ್ವಾಮಿ ಏನು ಮಾಡಿದ? ಆ ಕೇಶವನಿಗೆ ಬುದ್ಧಿ ಕಲಿಸಬೇಡವೋ?. ನಾಕು ಮಾರು ಉದ್ದದ ಹಾವಿನ ರೂಪದಲ್ಲಿ ಓಡಾಡುವ ಸ್ವಾಮಿಗೆ ವಯಸ್ಸಿನ ಕಾರಣದಿಂದ ಮೈತುಂಬಾ ಕೂದಲು ಬಂದಿದೆಯಂತೆ. ಗೋದಿಯ ಬಣ್ಣದಿಂದ ಅವನ ಮೈ ಕಪ್ಪನೆಯ ಬಣ್ಣದಲ್ಲಿ ಮಿಂಚುತ್ತಿದೆಯಂತೆ. ಪಾಪಾ ಇಷ್ಟೆಲ್ಲಾ ಮಾಡುವಾಗ ಕೂದಲು ಕಣ್ಣಿಗೆ ಅಡ್ಡ ಬಂದಿರಬೇಕು. ಇಲ್ಲಾಂದ್ರೆ ಸರ್ವಶಕ್ತನಾದ ಭಗವಂತ ಸುಮ್ಮನೆ ನಿಲ್ಲುವುದು ಎಂದರೇನು? ಆ ಕೇಶವ ಮತ್ತು ಅವನ ಹುಡುಗರನ್ನು ಸುಮ್ಮನೆ ಬಿಡುವುದು ಅಂದರೇನು?
ಹುಂಜಾನನ ಗತಿ ಹೀಗಾಯಿತಾದರೂ ತಾರಾ ಏನಾದಳು? ಎನ್ನುವುದು ಎಲ್ಲರಿಗೂ ದೊಡ್ಡ ಪ್ರಶ್ನೆಯಾಗಿತ್ತು. ಇದೆಲ್ಲಾ ನಡೆಯುವಾಗ ಯಾರು ಏನೇ ಅಂದರೂ `ಮಗಳಲ್ಲವಾ ಅವಳನ್ನ ಕೊಲ್ಲುವ ಹಂತಕ್ಕೆ ಹೋಗಿರಲಾರ. ಅವಳನ್ನು ಎಲ್ಲಿಯಾದರೂ ಬಚ್ಚಿಟ್ಟಿರಬಹುದೇ?’ ಎಂದುಕೊಂಡರು. ಆದರೆ ಕೇಶವನ ಕ್ರೌರ್ಯ ಮಿತಿ ಮೀರಿತ್ತು ಎನ್ನುವುದು ಅರ್ಥ ಆಗಿದ್ದೇ ತಾಯಕ್ಕ ತನ್ನ ಮನೆಯ ಹಿಂದಿನ ತಿಪ್ಪೆಯ ಎದುರು ಅಳುತ್ತಾ ನಿಂತಿದ್ದು, ಐದಿಡ್ಲಿ ನಾಗ ಅವಳನ್ನು ಸಮಾಧಾನ ಮಾಡಿ ಕರೆದುಕೊಂಡು ಹೋದಾಗ. `ಕೇಶವ ಮಗಳನ್ನು ಕತ್ತರಿಸಿದ್ದು ನಿಜ. ಹುಂಜಾನನ ಸಂಗದಿಂದ ಮೈಲಿಗೆಯಾದ ಮಗಳ ಹೆಣಕ್ಕೆ ಸಂಸ್ಕಾರ ಕೂಡಾ ಮಾಡದೆ ಅವಳನ್ನು ತನ್ನ ಮನೆಯ ತಿಪ್ಪೆಯಲ್ಲಿ ಹೂತಿಟ್ಟಿದ್ದನಂತೆ’. ಕಣ್ಣೀರನ್ನು ಸುರಿಸುತ್ತಾ ಇನ್ನು ಮಗಳು ದೆವ್ವ ಆಗಬಹುದು ಎಂದು ತಾಯಕ್ಕನೆ ತನಗೆ ತಿಳಿದ ಹಾಗೆ ಆ ತಿಪ್ಪೆಗೆ ಹೂವು ಹಾಕಿ, ಹಾಲು ತುಪ್ಪ ಎರೆದು, ಕಣ್ಣನ್ನು ಒರೆಸಿಕೊಂಡಿದ್ದಳಂತೆ ಎಂದು ಐದಿಡ್ಲಿನಾಗ ದುಃಖವನ್ನು ತಡೆದುಕೊಳ್ಳಲಾಗದೆ ಬಾಯಿಬಿಟ್ಟಿದ್ದ. ಕೇಶವ ಮಾತ್ರ ಯಾವುದಕ್ಕೂ ಜಗ್ಗದೆ ಬಂದ ಹುಡುಗರನ್ನು ಚೆನ್ನಾಗಿ ನೋಡಿಕೊಂಡು ವಾಪಾಸು ಕಳಿಸಿದ್ದ.
ಇಷ್ಟೆಲ್ಲಾ ಆಗಿದ್ದು ತಾರಾ ಮೈಲಿಗೆ ಆದಳು ಎಂದುತಾನೆ? ತಾನೂ ಒಂದು ಸಲ ಮೈಲಿಗೆಯಾದೆ, ತನ್ನ ಮೈಯ್ಯಿಂದ ತನಗೇ ತಿಳಿಯದೆ ರಕ್ತ ಹರಿಯಿತು. ಆದರೆ ಈಗ ತಾರಾ ಮೈಲಿಗೆಯಾಗಿದ್ದು ಯಾಕೆ? ಹಾಗೆ ಮೈಲಿಗೆಯಾದ್ದರಿಂದ ಅವಳ ಮೈಯ್ಯಿಂದ ಕೂಡಾ ರಕ್ತ ಹರಿಯಿತಲ್ಲವೇ? ಅಂದರೆ ಹೆಣ್ಣು ಮತ್ತೆ ಮತ್ತೆ ಮೈಲಿಗೆ ಆಗುತ್ತಾಳಾ? ಹಾಗೆ ಮೈಲಿಗೆ ಆಗುವುದು ತಪ್ಪಾ? ಚಿಟ್ಟಿಗೆ ತಳ ಬುಡ ಗೊತ್ತಾಗಲಿಲ್ಲ. ಅಮ್ಮ ಗೊಣಗಿದಳು `ಗಂಡಸರಿಗೆ ಯಾವ ನಿಯಮವೂ ಇಲ್ಲ, ಯಾವ ಮೈಲಿಗೆಯೂ ಇಲ್ಲ, ಇರೋದೆಲ್ಲಾ ಹೆಂಗಸಿಗೆ ಮಾತ್ರ’.
ತನ್ನ ಜೊತೆ ಆಡುತ್ತಾ ಆಡುತ್ತಾ ಬೆಳೆದ ತಾರಾಗೆ ಹೀಗಾಗಬೇಕೆ? ಚಿಟ್ಟಿಗೆ ಸಂಕಟವಾಯಿತು. ಬೆಳೆದು ಬಾಳಬೇಕಿದ್ದ ಹುಡ್ಗೀ ತನ್ನ ಅಪ್ಪನ ಕಾರಣಕ್ಕೆ ಹೀಗಾದಳಲ್ಲಾ ಎಂದ ಜನರ ಮಾತು ಅವಳ ಮನಸ್ಸಿನಲ್ಲಿ ನಿಂತುಬಿಟ್ಟಿತು. ನಾಚುತ್ತಾ ಹುಂಜಾನನ ಬಗ್ಗೆ ಹೇಳಿದ್ದ ತಾರಾ, ಚಿಟ್ಟಿಯ ಕನಸ್ಸಿಗೆ ಬಂದು `ಚಿಟ್ಟಿ ನೀನ್ ಮಾತ್ರ ಪ್ರೀತಿಯಲ್ಲಿ ಬೀಳಬೇಡ’ ಎಂದು ಕಣ್ಣೀರಿಟ್ಟಿದ್ದಳು.
ಬೆಳಗ್ಗೆ ಹೊತ್ತಿಗೆ ಬೆಂಕಿಪೆಟ್ಟಿಗೆಯಲ್ಲಿ ನಾಕು ತಿಳಿ ಗುಲಾಬಿ ಬಣ್ಣದ, ಅಲಸಂದೆ ಗಾತ್ರದ ಮೊಟ್ಟೆಗಳು ಮುದ್ದಾಗಿ ಕೂತಿದ್ದವು. ಜೀರುಂಡೆ ಮಾತ್ರ ಯಾಕೋ ಅಲುಗಾಡಲಿಲ್ಲ. ಏಳು ಬಣ್ಣದ ಕಾಮನಬಿಲ್ಲು ಆಕಾಶದಿಂದ ಭೂಮಿಗೆ ಬಿದ್ದು ಜೀರುಂಡೆಯಾಗಿ ತಾರಾಳ ಕಣ್ಣಲ್ಲಿ ಮಿಂಚಿತ್ತಲ್ಲವೇ? ಅದು ಚಿಟ್ಟಿಯ ಕಣ್ಣಲ್ಲಿ ಕರಗಿ ಹನಿಯಾಗಿ ನೆಲಕ್ಕೆ ಉರುಳತೊಡಗಿತು.
 
 
 

‍ಲೇಖಕರು G

October 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. chandra barkoor

    ಸುಂದರವಾದ ಹಾಗೂ ಕುತೂಹಲಕಾರಿಯಾದ ಬರವಣಿಗೆ….

    ಪ್ರತಿಕ್ರಿಯೆ

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ‘…ದೀಪದ್ ಆಸೆಗ್ ಹೋಗಿ ರೆಕ್ಕೆ ಕಳ್ಕೊಂಡ್ ಬೀಳುತ್ವೆ’ « ಅವಧಿ / avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ‘…ದೀಪದ್ ಆಸೆಗ್ ಹೋಗಿ ರೆಕ್ಕೆ ಕಳ್ಕೊಂಡ್ ಬೀಳುತ್ವೆ’ October 15, 2013 by Avadhikannada (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: