ಮಹಿಳೆಯರು ಮತ್ತು ಆತ್ಮಕಥೆಗಳು – ಜಯಶ್ರೀ ಬಿ ಕದ್ರಿ ಬರೀತಾರೆ

ಸ್ವ-ಗತ / ಮಹಿಳಾ ಸಾಹಿತ್ಯದ ಇತಿಮಿತಿಗಳು

ಜಯಶ್ರೀ ಬಿ ಕದ್ರಿ


ಇತ್ತೀಚಿಗೆ ನಾನು ಕನ್ನಡದ ಪ್ರಮುಖ ಲೇಖಕ-ಲೇಖಕಿಯರ ಆತ್ಮ ಕಥೆಗಳನ್ನು ಪಟ್ಟು ಹಿಡಿದು ಜಿದ್ದಿಗೆ ಜಿದ್ದಂತೆ ಓದಿದೆ. ಇದು ಸಂಶೋಧನಾ ಲೇಖನವೇನಲ್ಲವೆಂದೂ, ಕೇವಲ ಆಸಕ್ತಿಯಿಂದ ಗಮನಿಸಿದ ಅಂಶಗಳೆಂದೂ ಮೊದಲೇ ಸ್ಪಷ್ಟಪಡಿಸಿಕೊಳ್ಳುತ್ತ ಕೆಲವೊಂದು ವಿಚಾರಗಳನ್ನು ಬರೆಯಲಿಚ್ಛಿಸುತ್ತೇನೆ. ಲೇಖಕರಿಗೆ ಹೋಲಿಸಿದರೆ ಲೇಖಕಿಯರ ಆತ್ಮಕತೆಗಳು ವಿರಳ ಈಗಾಗಲೇ ಸಾಹಿತ್ಯ ಪ್ರಪಂಚದಲ್ಲಿ ಸ್ಥಾನಗಳಿಸಿಕೊಂಡಿರುವ ಪ್ರತಿಭಾ ನಂದಕುಮಾರರ, ‘ಅನುದಿನದ ಅಂತರಗಂಗೆ,’ ಸಾರಾ ಅಬೂಬಕರ್ ಅವರ ‘ ಹೊತ್ತು ಕಂತುವ ಮುನ್ನ ‘, ಪ್ರೇಮ ಕಾರಂತರ ’ಸೋಲಿಸಬೇಡ ಗೆಲಿಸಯ್ಯ’, ಉಷಾ ರೈರವರ ‘ ಯಾವ ನಾಳೆಯೂ ನಮ್ಮದಲ್ಲ’, ಹಾಗೂ ಇಂದಿರಾ ಲಂಕೇಶ್ ರವರ ‘ ಹುಳಿ ಮಾವಿನ ಮರ ಮತ್ತು ನಾನು’ ಪುರುಷ ಲೇಖರಲ್ಲಿ ಓದಿದವುಗಳು ಗಿರೀಶ್ ಕಾರ್ನಾಡರ ಆಡಾಡತ ಆಯುಷ್ಯ,’ ಸಿಎನ್ನಾರ್ ರವರ ‘ನೆರಳುಗಳ ಬೆನ್ನು ಹತ್ತಿ’, ಬಿ.ವಿ.ಕಾರಂತರ ‘ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’, ದೇವನೂರು ಮಹದೇವರ ‘ ಎದೆಗೆ ಬಿದ್ದ ಅಕ್ಷರ (ಬೇಸಿಕಲಿ ಬಿಡಿ ಬರಗಳ ಸಂಗ್ರಹ), ಸಿದ್ದಲಿಂಗಯ್ಯನವರ ‘ ಊರುಕೇರಿ’, ಲಂಕೇಶ್ ರವರ ‘ ಹುಳಿಮಾವಿನ ಮರ’, ಅನಂತ ಮೂತರ್ಿಯವರ ‘ ಸುರಗಿ’, ಕುಪ್ಪೆ ನಾಗರಾಜರವರ ‘ ಅಲೆಮಾರಿಯ ಅಂತರಂಗ ಹಾಗೂ ಎಸ್.ಎಲ್. ಬೈರಪ್ಪರವರ ‘ ಭಿತ್ತಿ’

ಪುರುಷ ಲೇಖಕರ ಆತ್ಮಕತೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಅವರ ಬಾಲ್ಯದ, ಯೌವನದ ಚಿತ್ರಣ, ಅವರ ಬಡತನ, ವಿದ್ಯಾಭ್ಯಾಸಕ್ಕಾಗಿ ಸ್ಕೂಲು, ಹಾಸ್ಟೆಲುಗಳಲ್ಲಿ ಅವರು ಪಟ್ಟ ಬವಣೆಗಳು, ಅಪಮಾನ ತಿರಸ್ಕಾರಗಳು, ಹಾಗೆಯೇ ಅವರ ಪ್ರತಿಭೆಯಿಂದ ಅವುಗಳನ್ನು ಅವರು ಮೀರಿ ನಿಂತ ಬಗೆ, ದಲಿತ ಸಂವೇದನೆ, ಬ್ರಾಹ್ಮಣತ್ವದ ಛಾಯೆ ಹೀಗೆ ಭಿನ್ನ ಭಿನ್ನ ತಾತ್ವಿಕ ದೃಷ್ಟಿಕೋನಗಳಿರುವ ಈ ಬರಹಗಳು ಒಂದಿಡೀ ತಲೆಮಾರಿನ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು, ಸಂಕ್ರಮಣ ಸ್ಥಿತಿಯನ್ನು, ಮನುಷ್ಯ ಚೇತನದ ಅದಮ್ಯ ಶಕ್ತಿಯನ್ನು ನಿಸ್ಸಂಶಯವಾಗಿ ದಾಖಲಿಸುತ್ತವೆ.
ಅದೇ ಮಹಿಳಾ ಲೇಖಕಿಯರ ಆತ್ಮ ಕತೆಗಳಲ್ಲಿ ಕಾಣಿಸುವುದು ಅವರ ಬಾಲ್ಯಕ್ಕಿಂತಲೂ ವೈವಾಹಿಕ ಜೀವನದ ಸಾಂದ್ರ ಅನುಭವಗಳು, ಬಾಲ್ಯದ ಅನುಭವಗಳು ರಮ್ಯ ಕಥಾನಕಗಳಂತೆ ಭಾಸವಾದರೆ ವೈವಾಹಿಕ ಜೀವನದ ನೋವು ನಲಿವುಗಳೇ ಅವರನ್ನು ಲೇಖಕಿಯರಾಗಿ ಬೆಳೆಸಿದವೇನೋ ಅನಿಸುತ್ತದೆ.
ಈ ನಿಟ್ಟಿನಲ್ಲಿ ಎಗ್ಗಿಲ್ಲದೆ ನಿರ್ಭಿಡೆಯಿಂದ ಬರೆದವರೆಂದರೆ ಪ್ರತಿಭಾ ನಂದಕುಮಾರ್, ಪ್ರೀತಿಗೋಸ್ಕರ ತನಗಿರುವ ಅದಮ್ಯ ಹಂಬಲವನ್ನು, ಭೋರ್ಗರೆವ ತಮ್ಮ ಭಾವ ಪ್ರವಾಹಕ್ಕೆ outlet ಆಗಿ ಸಾಹಿತ್ಯವನ್ನು ಬಳಸಿಕೊಂಡ ಬಗೆಯನ್ನು ಅತ್ಯಂತ ಪ್ರಾಮಾಣಿಕವಾಗಿ (ಕೆಲವೊಮ್ಮೆ ಹೀಗೂ ಉಂಟೆ ! ಎನಿಸುವಂತೆ ) ಆಕೆ ಬರೆಯುತ್ತಾರೆ. ಉಳಿದಂತೆ ಸಾರಾ ಅಬೂಬಕರ್, ಉಷಾ ರೈ, ಪ್ರೇಮಾಕಾರಂತ ಇವರೆಲ್ಲರ ಬರಹಗಳು ಸಾಂಪ್ರದಾಯಿಕ ಜಾಡಿನಲ್ಲಿಯೇ ವ್ಯವಸ್ಥೆಯ ವಿರುದ್ಧದ ತಮ್ಮ ತಣ್ಣನೆಯ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಇಲ್ಲಿ ಕಾಡುವ ಪ್ರಶ್ನೆಯೆಂದರೆ ಆತ್ಮಕತೆಯನ್ನು ಒಳಗೊಂಡಂತೆ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಹೆಣ್ಣಿಗಿರುವ ಸ್ವಾತಂತ್ರ್ಯ’ ಇದಕ್ಕೆ ಕಾರಣ ಮಹಿಳೆಯರ ಅನುಭವಕ್ಕಿರುವ ಮಿತಿ, ಬೈರಪ್ಪನವರಂತೆ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ರಿಸರ್ಚ್ ಮಾಡಲು , ಉಳಿದ ಸಾಹಿತಿಗಳಂತೆ ಹೋರಾಟಗಳಲ್ಲಿ ಪಾಲ್ಗೊಳ್ಳಲು, ಬಂಡಾಯವೇಳಲು ಮಹಿಳಾ ಸಾಹಿತಿಗಳಿಗೆ ಅನುಕೂಲಗಳೆಲ್ಲಿವೆ? ಅವರದೇನಿದ್ದರೂ ವ್ಯವಸ್ಥೆಯೊಳಗೆ ಚೂರುಪಾರು ಬದಲಾವಣೆ ಕಂಡುಕೊಳ್ಳುವ, ಅಟ್ಲೀಸ್ಟ್ ಜಾಗೃತ ಪ್ರಜ್ಞೆಯಿಂದ ಸಲ್ಫ್ ಐಡೆಂಟಿಟಿಯನ್ನು ಕಂಡುಕೊಳ್ಳುವ ಪ್ರಯತ್ನ, ಹೀಗಾಗಿಯೇ ಮಹಿಳಾ ಸಾಹಿತ್ಯದಲ್ಲಿ ಮನೆ, ಸಂಸಾರ, ಅಡಿಗೆ ಮನೆಗಳ ದಟ್ಟ ವಿವರಗಳೂ, ಬಿಕ್ಕುದನಿಯ ಹಾಡುಗಳೂ ಕೇಳಿಬರುತ್ತವೆ. ಇತ್ತೀಚೆಗೆ ಕ್ಲೀಷೆಯಾಗುತ್ತಿರುವ ಅಡಿಗೆಮನೆ ರೂಪಕಗಳು (ಕುದಿಯುತ್ತಿರುವ ಅನ್ನ ಇತ್ಯಾದಿ) ಇದಕ್ಕೆ ಸಾಕ್ಷಿ ಒಟ್ಟಿನ ಮೇಲೆ ಮಹಿಳೆಯರ ಸಾಹಿತ್ಯವೆಂದರೆ ಮಿತಿಯುಳ್ಳದ್ದಾಗಲು ಕಾರಣ ಅವರಿಗಿರುವ, ಚಲನಶೀಲನೆಯ (ಮಾನಸಿಕ, ಆರ್ಥಿಕ ಸಾಮಾಜಿಕ) ತೊಡಕುಗಳೇ ಆಗಿವೆ.
ಈ ನಿಟ್ಟಿನಲ್ಲಿ ಆಂಗ್ಲ ಮಹಿಳಾ ಸಾಹಿತಿಗಳು ಬೋಲ್ಡ್ ಎನ್ನಬಹುದು. ಅಸಲಿಗೆ ಅದೇ ಅಂಗ್ಲ ಸಾಹಿತ್ಯದ ಪಾಪ್ಯುಲಾರಿಟಿಗೆ ಕಾರಣ ಕೂಡ. ಅವರಿಗಿರುವ ಅಂತರಾಷ್ಟ್ರೀಯ ಮನ್ನಣೆಯೂ ಇನ್ನೊಂದು ಕಾರಣ. ನಿಜವಾಗಿ ಅರುಂಧತಿರಾಯ್, ಕಿರಣ್ ದೇಸಾಯಿ ಹೀಗೆ ಬುಕರ್ ಅವಾರ್ಡ್ ಪುಲಿಟರ್ ಪ್ರಶಸ್ತಿ ವಿಜೇತರಿಗಿಂತಲೂ ಅತ್ಯುತ್ತಮ ಲೇಖಕಿಯರು ಭಾರತೀಯ ಭಾಷೆಗಳಲ್ಲಿ ಖಂಡಿತವಾಗಿಯೂ ಇದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಹಿಳಾ ಸಾಹಿತ್ಯ ಇನ್ನೂ ತನ್ನತನದ ಹುಡುಕಾಟದಲ್ಲಿದೆ ಎಂದೆನಿಸುತ್ತದೆ. ಸಾಮಾಜಿಕ, ರಾಜಕೀಯ ವಿಷಯಗಳು ಹಿನ್ನೆಲೆಯಲ್ಲಿದ್ದರೂ ಲಿಂಗಾಧಾರಿತ ಪ್ರಶ್ನೆಗಳೇ ಮುಖ್ಯಭೂಮಿಕೆಯಾಗಿರುತ್ತದೆ. ಬಹುಶ: ಇದು ಮಹಿಳಾ ಸಾಹಿತ್ಯದ ಶಕ್ತಿ ಹಾಗೂ ಮಿತಿ.

‍ಲೇಖಕರು G

October 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. narayan raichur

    ee maalikeyannee munduvarisi – Ranga / kirutere /sinema kalaavide BHARGAVI NARAYANA avar ” Naanu – Bhargavi ” odi nodi !!

    ಪ್ರತಿಕ್ರಿಯೆ
  2. Anonymous

    Odide…iiked it.’chalana sheelate’ mattu srujana sheelate eraduo beku. Srujana sheelaraadante chalana sheelate hechchisuttade. Mundondu dina mahila barahada bage bere aagabahudu. ‘Anna kudiyalu’ adaradde time bekalwa.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: