ವೈಶಾಲಿ ಹೆಗಡೆ ಹೇಳಿದ ಶೆಟ್ಟಿ ಮಾಮ್ ಕಥೆ

ಬದಲಾವಣೆ

ವೈಶಾಲಿ ಹೆಗಡೆ

ಹರಿಪ್ರಸಾದ್ ಶೆಟ್ಟಿ ಇತ್ತಿತ್ತಲಾಗಿ ಒಂದು ನಮೂನೆ ಪಿರ್ಕು. ಇದು ಈಗ ಅವನ ಮಕ್ಕಳಿಗೂ ಗೊತ್ತಿರುವ ವಿಷಯ. ಅಷ್ಟಷ್ಟು ದಿವಸಕ್ಕೆ ಮಳ್ಳು ಏರಿದವನಂತೆ ಎಲ್ಲರಮೇಲೆ ಹರಿಹಾಯುತ್ತಾನೆ. ಬಾಡಿಗೆದಾರರ ಬಾಗಿಲು ಬಡಿದು ಜಗಳ ಕಾದು ಬರುತ್ತಾನೆ.
ಮಗ, ಸೊಸೆಯರಿಗೆಲ್ಲ ಫೋನಿನಲ್ಲಿ ವಾಚಾಮಗೋಚರ ಬಯ್ಯುತ್ತಾನೆ. ಮಗಳಿಗೆ ಫೋನಾಯಿಸಿ ಅಳಿಯ ಸರಿಯಿಲ್ಲ ಬಿಟ್ಟು ಬಾ ಎಂದೆಲ್ಲ ಹೇಳಿ ತಲೆ ಕೆಡಿಸುತ್ತಾನೆ. ಇಂತಿಪ್ಪ ಶೆಟ್ಟಿ ಯಾವಾಗಲೂ ಹೀಗೆ ಇದ್ದ ಎಂದಲ್ಲ. ಮುಂಚೆಲ್ಲಾ ಸರಿಯಾಗಿಯೇ ಇದ್ದ. ಶೆಟ್ಟಿಮಾಮ್ ಎಂದು ಆಚೀಚಿನವರಿಂದ ಕರೆಸಿಕೊಳ್ಳುತ್ತಿದ್ದ. ಅವನ ಈ ಪರಿ ಆರಂಭವಾಗಿದ್ದು ಸುಮಾರು ಐದಾರು ವರ್ಷಗಳ ಹಿಂದೆ, ಚೌತಿಹಬ್ಬದಲ್ಲಿ.

***

ಪ್ರತಿವರ್ಷದಂತೆ ಧೂಮ್ ಧಾಮ್ ಮಾಡಿ ಗಣಪತಿ ಚಪ್ಪರಕ್ಕೆ ಫಲಾವಳಿ ಕಟ್ಟಿ ಬಾಳೆಕಂಬ ನಿಲ್ಲಿಸಿ ತೋರಣ ಸುತ್ತಿ ಇನ್ನೇನು ಗಣಪತಿ ತರಲು ಹೊರಡಬೇಕು ಎನ್ನುವಾಗ ಸುರುವಾಗಿತ್ತು. ಹಿಂದೆಲ್ಲೂ ಕಂಡಿರದಂತೆ ಬೈಗಳದ ಸುರಿಮಳೆ. ಗಣಪತಿ ಹೊತ್ತುಕೊಂಡು ಬರಲು ಹೊರಡುವ ಮೊದಲು ಸೋಮುಗೌಡ ಒಳಬರುತ್ತಿದ್ದಂತೆ ಎಗರಾಡಿ ಅವನನ್ನು ಹೊಡೆಯಲು ಹೋದವರಂತೆ ಏರಿ ಹೋದಾಗ ಸೋಮುಗೌಡ ಕಿತ್ತಾಬಿದ್ದು ಓಡಿ ಹೋಗಿದ್ದ. ಇದೆಂಥ ರಂಪಾಟ ಎಂದು ಝರಿಸೀರೆಯುಟ್ಟು ತಯಾರಾಗುತ್ತಿದ್ದ ಶಾರಿಮಾಮಿ ( ಶಾರದಾಂಬ ಶೆಟ್ಟಿ, ಊರವರೆಲ್ಲರಿಗೂ ಶಾರಿಮಾಮಿ) ಹಾಗೆಯೇ ತುರುಬು ಬಿಗಿದುಕೊಳ್ಳುತ್ತ ಹೊರಗೋಡಿ ಬಂದರೆ ಶೆಟ್ಟಿಯ ನೆತ್ತಿ ಗಿರ್ರೆಂದು ಹೋಯಿತು.
ಹೆಂಡತಿಯ ಸೀರೆಯನ್ನು ದುಷ್ಶಾಸನನಂತೆ ಸೆಳೆದು ಅವಳನ್ನು ದರದರನೆ ಎಳೆದುಕೊಂಡು ಅಂಗಳದಲ್ಲಿ ನಿಲ್ಲಿಸಿ, ದೇವರ ಸ್ವಾಗತಕ್ಕೆಂದು ಬಾವಿಕಟ್ಟೆಯ ಮೇಲಿಟ್ಟಿದ್ದ ತುಂಬಿದ ಕೊಡವನ್ನೆತ್ತಿ ಅವಳ ತಲೆಮೇಲೆ ದಬದಬನೆ ಸುರಿದ. ಮಡಿಸೀರೆಯೆಂದು ಒಳಲಂಗವನ್ನೂ ಹಾಕಿರದ ಶಾರಿಮಾಮಿ ಅವಮಾನವೆ ಎದ್ದುನಿಂತಂತಾಗಿದ್ದಳು. ಇದೆಲ್ಲ ಮಗ, ಸೊಸೆ, ಮಗಳು, ಅಳಿಯ, ಚಿಳ್ಲಿ ಪಿಳ್ಳೆಗಳೆಲ್ಲ ಹೊರಬರುವಷ್ಟರಲ್ಲಿ ನಡೆದುಹೋಗಿತ್ತು. ಅಪ್ಪನ ಅಪರಾವತಾರವನ್ನು ಹಿಂದೆಂದೂ ಕಂಡಿರದ ಮಕ್ಕಳು ದಂಗುಬಡಿದು ಹೋಗಿದ್ದರು. ಅಮ್ಮನನ್ನು ರಕ್ಷಿಸುವುದೋ ಬಿಡುವುದೋ, ತಾವೂ ಹಾಗೆ ಅಂಗಳದಲ್ಲಿ ನಿಲ್ಲಬೇಕಾದೀತೋ ಎಂದು ಅನುಮಾನಪಡುತ್ತಲೇ ಕಂಬದಂತೆ ನಿಂತಿದ್ದರು. ಕೆಲನಿಮಿಷಗಳಲ್ಲೇ ಮಗಳಿಗೆ ಪರಿಸ್ಥಿತಿಯ ಅರಿವಾಗಿ ಓದಿ ಬಂದು ಅಮ್ಮನಿಗೆ ಅಡ್ಡನಿಂತಳು.
ಸೋಮುಗೌದನ ಒದರಾಟ ಕೇಳಿ ಕುತೂಹಲಕ್ಕೆಂದು ಹೊರಬಂದಿದ್ದ ಹಿಂದಿನ ಕೇರಿ ಜನವೆಲ್ಲ ಜಮಾಯಿಸಿ, ಬಾವಿಕಟ್ಟೆಯ ಬುಡಕ್ಕೆ ಮಗಳನ್ನಪ್ಪಿ ಮುದುರಿ ಕೂತಿದ್ದ ಶಾರಿಮಾಮಿಗೆ ಯಾರೋ ಬೇರೆ ಸೀರೆತಂದು ಹೊದೆಸಿ ತಮ್ಮ ಮನೆಗೆ ಕರಕೊಂಡು ಹೋದರು. ಆಮೇಲೆ ಹರಿಪ್ರಸಾದ ಶೆಟ್ಟಿ ಧುಮುಗುಡುತ್ತ ಒಳಹೋಗಿ ಹೊದ್ದು ಮಲಗಿಬಿಟ್ಟ. ಮಗಳು ಹೋಗಿ ಅಮ್ಮನನ್ನು ಕರೆತಂದು ಎಲ್ಲ ಒಟ್ಟಿಗೆ ಒಂದಷ್ಟು ಹೊತ್ತು ಅತ್ತು ಕೊನೆಗೆಲ್ಲ ಹೋಗಿ ಗಣಪತಿಯನ್ನು ಕರೆತಂದು ಚಿಕ್ಕದಾಗಿ ಪೂಜೆ ಮಾಡಿದರು. ಅವತ್ತಿನಿಂದ ಹರಿಪ್ರಸಾದ ಶೆಟ್ಟಿಯ ಬದಲಿಗೆ ಗಣಪತಿ ಪೂಜೆ ಅವನ ಮಗ ವಿನಾಯಕ ಶೆಟ್ಟಿ ಮಾಡುವ ರೂಢಿ ಜಾರಿಗೆ ಬಂತು. ಅಂತೂ ಪ್ರಸಾದದ ಹೊತ್ತಿಗೆ ಎದ್ದು ಬಂದ ಹರಿಪ್ರಸಾದ ಏನೂ ನಡೆದೇ ಇಲ್ಲವೆಂಬಂತೆ ಊಟ ಮಾಡುತ್ತಾ ಮೊಮ್ಮಕ್ಕಳೊಂದಿಗೆ ಚೇಷ್ಟೆ ಮಾಡುತ್ತಾ, ಎಂದಿನಂತೆ ಎರಡೆರಡು ಬಾರಿ ಉಪ್ಪಿನಕಾಯಿ ಹಾಕಿಸಿಕೊಂಡು ಉಂಡ. ಎಲ್ಲರಿಗೂ ಏನೋ ಸಮಾಧಾನ. ಹೋಗಲಿಬಿಡು ಆದದ್ದಾಯಿತು ಇನ್ನೆಂದೂ ಹೀಗೆ ಆಗದಿರಲಿ ಎಂದು ಗಣಪತಿಯನ್ನು ಬೇಡಿಕೊಂಡರು. ಶಾರಿಮಾಮಿಯ ಸಂಕಟವೆಲ್ಲೋ ಗಣಪತಿ ಎದುರಿನ ಕಾಲುದೀಪದ ಅಡಿಗೆ ಸಿಕ್ಕಿಹೋಗಿತ್ತು.

***

ಅಂದಿನಿಂದ ಆಗಾಗ ಅವನ ಮೇಲೆ ಹೀಗೆ ಅವತಾರ ಬರುತ್ತಿರುತ್ತದೆ. ಆದರೆ ಅದು ಯಾವಾಗ ಬರುತ್ತದೆ ಎಂದು ಮಾತ್ರ ಇನ್ನೂ ಕಂಡು ಹಿಡಿಯಲಾಗಿಲ್ಲ ಮನೆಯವರ್ಯಾರಿಗೂ. ಯಾಕೆ ಹಾಗೆ ಅವತಾರ ಬರುತ್ತದೆ ಎಂದೂ ಇನ್ನೂ ಅರ್ಥವಾಗಿಲ್ಲ ಅವರಿಗೆ. ಈ ಶೆಟ್ಟಿಮಾಮನದೊಂದು ಸಣ್ಣ ಗೂಡಂಗಡಿ ಎಂಬಂತ ದುಕಾನು. ಅದು ಶೆಟ್ಟಿಯ ಪ್ರಾಯಕಾಲದಿಂದ ಇಳಿವಯಸ್ಸಿನವರೆಗೆ ಶೆಟ್ಟಿಯ ಪ್ರಾಯದಂತೆಯೇ ಏರಿಳಿಯುತ್ತ ಹಲವಾರು ರೂಪಂತರಗೊಂಡು ಈಗ ಗವರ್ನಮೆಂಟ್ ಕೊಟ್ಟೆ, ಕಳ್ಳ ಸಾರಾಯಿ ಹಾಗೂ ಚೂಡ, ಪೆಪ್ಪರ್ಮಿಂಟು, ಬೀಡಿ ಮಾರುವ ಪೆಟ್ಟಿಗೆಯಾಗಿ ಬದಲಾಗಿದೆ. ಶೆಟ್ಟಿಮಾಮ ಮೊದಲು ಅಂಗಡಿ ತೆರೆದಿದ್ದು ಒಂದು ಸಣ್ಣ ಚಾದಂಗಡಿ, ಬಜ್ಜಿ, ಬೋಂಡ, ಕಾಜಮಿಜಿ ಮಾರುವ ಚಾದುಕಾನಾಗಿ. ಭಾರೀ ಬಿಸಿನೆಸ್ಸು ಆಗ. ಅಂಗಡಿಯ ಮುಂಬದಿಗೆ ಗಲ್ಲೆಯ ಪಕ್ಕ ಸಣ್ಣ ದೊಡ್ಡ ಗಾಜಿನ ಡಬ್ಬಿಗಳು. ಒಂದೊಂದರಲ್ಲೂ ಸೇವಿನ ಉಂಡೆ, ಅಂಟಿನ ಲಾಡು, ಎಳ್ಳುಂಡೆ ಗಳು ಪುಟ್ಟ ಪುಟ್ಟ ಬ್ರಹ್ಮಾಂಡಗಳಂತೆ ಗಿಡಿದುಕೊಂಡು ಕೂತಿರುತ್ತಿದ್ದವು. ಶೇಂಗ ಚಿಕ್ಕಿ, ಶುಂಟಿ ಪೆಪ್ಪರ್ಮಿಂಟು, ಲಿಂಬೆಹುಳಿ ಪೆಪ್ಪರ್ಮಿಂಟು ಡಬ್ಬಿಗಳು ಪಕ್ಕದ ಸಾಲಿನಲ್ಲಿ. ಮರದ ಬೇರಿನ ತುಂಡುಗಳಂತೆ ಅಕರಾಳ ವಿಕರಾಲವಾಗಿ ತೋರುವ ಬೆಲ್ಲದ ಘಮದ ಉದ್ದುದ್ದ ಕಾಜ್ ಮಿಜಿ ತುಂಡುಗಳನ್ನು ಗೋಪುರದಂತೆ ಪೇರಿಸಿದ ಒಂದು ಅಲುಮಿನಿಯಂ ತಟ್ಟೆ. ಅಲ್ಲೇ ಹಿಂಬದಿಗೆ ತಟ್ಟಿ ತಡಿಕೆಯಲ್ಲಿ ಒಲೆ.
ಚಾ ತಿಂಡಿಗಳೆಲ್ಲ ಅಲ್ಲೇ ಫ್ರೆಶ್ ಆಗಿ ತಯಾರಾಗುವಂತವು. ಸಂಜೆ ಕೆಲಸ ಮುಗಿಸಿ ಹೋಗುವ ಹಾಲಕ್ಕಿ ಕೇರಿಯ ಜನರೆಲ್ಲಾ, ದುಡ್ಡಿದ್ದಾಗ, ಒಣಮೀನು ಕೊಂಡು ಉಳಿದ ಹಣದಲ್ಲಿ ಒಂದು ಚಾ ಏರಿಸಿ ಹೋಗುತ್ತಿದ್ದರು. ಆಚೀಚೆಯ ಟೇಲರ್ ಅಂಗಡಿಯ ಹುಡುಗರು, ಸಲೂನಿನವರು ಎಲ್ಲ ಮಧ್ಯೆ ಬೋಂಡ ಕಟ್ಟಿಸ್ಕೊಂಡು ಹೋಗುತ್ತಿದ್ದರು. ಸಂಜೆ ಮನೆಗೆ ಹೋಗುವ ಮಾಸ್ತರುಗಳು ಕಾಜ್ಮಿಜಿನೋ, ಭಜ್ಜಿಯೋ ಕಟ್ಟಿಸ್ಕೊಂಡು ಹೋಗುತ್ತಿದ್ದರು. ಶೆಟ್ಟಿಮಾಮನ ಅಂಗಡಿಯಿಂದ ಬೆಳಿಗ್ಗೆ ಏಳುತ್ತಿದ್ದ ಬೆಲ್ಲದ ಪಾಕದ ವಾಸನೆ ಬೆಳಿಗ್ಗೆ ಶಾಲೆಗೆ ಹೋಗುವ ಮಕ್ಕಳನ್ನೆಲ್ಲ ಒಂದರೆಗಳಿಗೆ ಅಂಗಡಿ ಮುಂದೆ ತಡೆದು ನಿಲಿಸುತ್ತಿತ್ತು. ಅಂಗಡಿಯ ಹಿಂಬದಿಗೆ ತಟ್ಟಿಯಂತಿದ್ದ ಜಾಗದಲ್ಲಿ ದೊಡ್ಡ ಒಲೆ ಹೂಡಿ ಶಾರಿಮಾಮಿಯೇ ಕುದಿಸುತ್ತಿದ್ದ ಬೆಲ್ಲದ ಪಾಕ, ಅಳ್ಳಕವಾಗಿ ಕಲೆಸಿಟ್ಟಿದ್ದ ಹಳದಿ ಹಿಟ್ಟು ಶಾಲೆ ಮಕ್ಕಳ ಚಡ್ಡಿ/ಸ್ಕರ್ಟಿನ ಕಿಸೆಗಳಲ್ಲಿ ಪಾವಲಿಗಳನ್ನು ಕೂಡಿಸಿಡುತ್ತಿತ್ತು. ಮಧ್ಯಾಹ್ನ ಶಾಲೆ ಬಿಟ್ಟಾಗ ಊಟಕ್ಕೆ ಓಡುವ ಮಕ್ಕಳು ಅಂಗಡಿ ಪಕ್ಕ ನಿಂತು ಎಣ್ಣೆಯಲ್ಲಿ ಮಿಂದೆದ್ದು ಬೆಲ್ಲದ ಪಾಕದೊಳಕ್ಕೆ ಬುಳಕ್ಕನೆ ಬೀಳುವ ಹಿಟ್ಟಿನ ವಕ್ರ ಉದ್ದ ಕಡ್ಡಿಗಳನ್ನು ನೋಡುತ್ತಾ ಮನೆಗೆ ಹೋದವರೇ ಗಪಗಪನೆ ಊಟ ಮುಗಿಸಿ, ನಾಕಾಣೆ, ಎಂಟಾಣೆ ಬಿಸಿ ಬಿಸಿ ಕಾಜ್ ಮಿಜಿ ಮೆಲ್ಲುತ್ತ ಶಾಲೆಯತ್ತ ಹೊರಳುವುದು ಅವರ ಪರಮಾನಂದದ ಕ್ಷಣಗಳಲ್ಲಿ ಒಂದು.
ಮುಂಚೆಲ್ಲಾ ಹಳ್ಳಿ ಹಾದಿ ಹಿಡಿಯುವ ಮುನ್ನ, ಪುಟ್ಟದಾಗಿದ್ದ ಪೇಟೆಯ ಸೆರಗಲ್ಲಿ ಇದ್ದ ಒಂದೇ ಅನುಕೂಲಕರ ಅಂಗಡಿಯಾಗಿತ್ತು ಇದು. ಊರು ಬೆಳೆಯಿತು ನಿಜ ಆದರೆ ಶೆಟ್ಟಿ ಅಂಗಡಿಯ ದಿಕ್ಕಿನಲ್ಲಲ್ಲ. ಊರಿನ ಬಜಾರ್ ಬೆಳೆಯತೊಡಗಿದಂತೆ ಪೇಟೆಯಿಂದ ಚೂರು ದೂರದಲ್ಲಿರುವ ಶೆಟ್ಟಿ ಅಂಗಡಿ ಕ್ರಮೇಣ ಬಣ್ಣ ರುಚಿ ವಾಸನೆ ಕಳೆದುಕೊಂಡು, ಸಕಲವಸ್ತುಗಳನ್ನು ಮಾರುವ ಕಿರಾಣಿ ಅಂಗಡಿಯಾಗಿ ಅನಿವಾರ್ಯವಾಗಿ ಬದಲಾಯಿತು. ಸುತ್ತಮುತ್ತಲಿನ ಮನೆಗಳು, ದಾರಿಹೋಕರು ಅರ್ಜೆಂಟಿಗೆ ಸಕ್ಕರೆ, ಚಾಪುಡಿ, ಉಳ್ಳಗಡ್ಡಿ ಎಂದೆಲ್ಲ ಕೊಂಡು ಮತ್ತೆ ಕಳೆಗಟ್ಟತೊಡಗಿತು. ಕೆಲ ವರ್ಷಕ್ಕೆ ಅನತಿ ದೂರದಲ್ಲಿ ಸಿಮೆಂಟ್ ಕಟ್ಟಡದ ದೊಡ್ಡ ಪ್ರಮಾಣದ ಪೈಗಳ ಕಿರಾಣಿ ಅಂಗಡಿ ಶುರುವಾಗಿದ್ದೆ ಮತ್ತೆ ಶೆಟ್ಟಿಮಾಮ ವೇಷಬದಲಿಸಬೇಕಾಯಿತು. ಅದನ್ನೊಂದು ಸೋಡಾ, ಕೂಲ್ಡ್ರಿಂಕ್ಸ್, ಬೇಕರಿಯಾಗಿ ಬದಲಾಯಿಸಿದ. ನಡುಪೇಟೆಯಲ್ಲಿನ ಸುಂದರ ವಿನ್ಯಾಸದ, ಒಂದಕ್ಕಿಂತ ಹೆಚ್ಚು ಬಗೆಯ ಕೇಕ್, ಬ್ರೆಡ್, ಬನ್ ದೊರೆಯುವ ಬೇಕರಿಗಳಿದ್ದುದರಿಂದ ಶೆಟ್ಟಿ ಮಾಮನ ಬೇಕರಿ ಬಹಳ ದಿನ ನಡೆಯಲಿಲ್ಲ. ಈಗ ಮನೆಗೆ ಹೋಗುವ ಕೂಲಿಕಾರ್ಮಿಕರೇನು, ಮಾಸ್ತರು, ಆಫೀಸರುಗಳು ಕೂಡ ಚಾ ಕುಡಿಯುವುದಾಗಲೀ ಜೊತೆಗೆ ಬೋಂಡ ತಿನ್ನುವುದಾಗಲೀ ಬಿಟ್ಟಿರುವುದರಿಂದ ಶೆಟ್ಟಿಮಾಮನ ಅಂಗಡಿಯೂ ಕಂಟ್ರಿ, ಕೊಟ್ಟೆ, ಚೂಡ, ಚಿಪ್ಸ್, ಬಿಸ್ಕತ್ತು, ವಾರಕ್ಕೆರಡು ದಿನ ಗೋಬಿ ಮಂಚೂರಿ ಮಾರುವ ಅಂಗಡಿಯಾಗಿ ಬದಲಾಗಿದೆ.

***

ಮಗನ ಸಂಸಾರ ಇರುವುದು ಕೊಲ್ಲಾಪುರದಲ್ಲಿ. ಮುಂಬೈಗೆ ಕೆಲಸ ಅರಸಿ ಹೋದ ಮಗ ಅಲ್ಲಿ ಏಗಲಾಗದೆ, ಗೆಳೆಯನೊಬ್ಬನ ಸಹಾಯದಿಂದ ಕೊಲ್ಲಾಪುರಕ್ಕೆ ಹೋಗಿ ಏನೇನೋ ಗುದ್ದಾಡಿ ಅಂತೂ ಕೊನೆಗೊಂದು ಅಂಗಡಿ ಹಾಕಿಕೊಂಡು, ೨ ಫ್ಲ್ಯಾಟ್ ಮಾಡಿಕೊಂಡು, ಒಂದನ್ನು ಬಾಡಿಗೆಗೆ ಕೊಟ್ಟು, ಅಷ್ಟಷ್ಟು ದಿವಸಕ್ಕೆ ಹೆದರುತ್ತ ಅಪ್ಪನ ಫೋನ್ ಎತ್ತುತ್ತಾನೆ ಈಗೀಗ ಎಂದೊಂದು ಬಿಟ್ಟರೆ, ಸುಖವಾಗಿದ್ದಾನೆ. ಮಂಗಳೂರಿನಲ್ಲಿರುವ ಮಗಳು, ಅಳಿಯ ಹೈಸ್ಕೂಲ್ ಮಾಸ್ತರು. ಅವರಿಗೊಬ್ಬಳೆ ಮಗಳು. ಅಪ್ಪನ ಆರ್ಭಟ ಆರಂಭವಾದಾಗಿನಿಂದ ಮಕ್ಕಳು ಮನೆಗೆ ಬರುವುದು ಹನಿ ಕಮ್ಮಿ. ಆದರೆ ಪ್ರತಿ ಚೌತಿಹಬ್ಬದಲ್ಲಿ ಮಾತ್ರ ಎಲ್ಲರೂ ತಪ್ಪದೆ ಹಾಜರಾಗುತ್ತಾರೆ. ಶಾರಿಮಾಮಿಯೇ ಮುಂಬೈ, ಮಂಗಳೂರು ಎಂದು ಓಡಾಡುತ್ತಿರುತ್ತಾಳೆ. ಶೆಟ್ಟಿಮಾಮನ ಸವಾರಿ ಇತ್ತೀಚೆಗೆ ಎಲ್ಲೂ ಹೋಗುವುದಿಲ್ಲ. ಮೊದಮೊದಲು ಹೆಂಡತಿಯ ತಿರುಗಾಟಕ್ಕೆ ಗೊಣಗುತ್ತಲೇ ಹ್ನೂ ಎನ್ನುತ್ತಿದ್ದವ, ಈಗೀಗ ಬೇಡವೇ ಬೇಡ ಎಂದೆಲ್ಲ ಹಠ ಹಿಡಿಯುತ್ತಾನೆ. ಆ ಮಕ್ಕಳ ಮನೆಯಲ್ಲೇ ಏಕೆ ನೀ ಸೆಗಣಿ ತಿನ್ನಲು ಹೋಗಿ ಕೂರುವುದು ಎಂದೆಲ್ಲ ಒದರಾಡುವಾಗ ಶಾರಿಮಾಮಿ ಹೊಲಸು ಮಾತು ದೊಡ್ಡದು ಮಾಡುವುದು ಬೇಡ ಎನ್ನುತ್ತಾ ಸುಮ್ಮನೆ ದಿನ ದೂಡುತ್ತಾಳೆ. ಕದ್ದುಮುಚ್ಚಿ ಮಕ್ಕಳ ಜೊತೆ, ಮೊಮ್ಮಕ್ಕಳ ಜೊತೆ ಫೋನಿನಲ್ಲಿ ಹರಟುತ್ತಾಳೆ.
ಮಗ ಕಳೆದ ಬಾರಿ ಬಂದಾಗ ಜೀವನಕ್ಕಾಗುತ್ತದೆ ನಿಮಗೆ ಇರಲಿ, ಕೊನೆಗೆ ಅಲ್ಲಿನದೆಲ್ಲ ಬಿಟ್ಟು ಬಂದ ಮೇಲೆ ನಮಗೂ ಇರಲು ಒಂದು ಜಾಗ ಬೇಕಲ್ಲ ಎನ್ನುತ್ತಾ ಪಕ್ಕದಲ್ಲೇ ಮನೆಕಟ್ಟಿಸಿಕೊಂಡ ಮಗ ಬಾಡಿಗೆಗೆ ಬಿಟ್ಟಿದ್ದಾನೆ. ಬಾಡಿಗೆ ಹಣವೆಲ್ಲ ಶಾರಿಮಾಮಿಯ ಖಾತೆಗೆ ಜಮೆಯಾಗುತ್ತದೆ. ಪಕ್ಕದಲ್ಲೇ ಬಾಡಿಗೆಗೆ ಕೊಟ್ಟ ಮನೆಯೊಂದಿರುವುದು ಅವಳಿಗೀಗ ಬಲು ಹಗುರಾಗಿದೆ. ಮೊದಲ ಬಾರಿ ಬಾಡಿಗೆಗೆ ಬಂದವರು ಒಳ್ಳೆ ಜೊತೆಯಾಗಿದ್ದರು. ಆರಾಮವಾಗಿ ಹರಟುತ್ತಿದ್ದರು. ರೆವಿನ್ಯೂ ಆಫೀಸಿನಲ್ಲಿ ಕೆಲಸವಂತೆ ಗಂಡನಿಗೆ. ಹೆಂಡತಿ ಜಲಜ ಇಂಥದ್ದೇ ಕೆಲಸ ಎಂದಿಲ್ಲದಿದ್ದರೂ ಹಲವಾರು ಕೆಲಸ ಮಾಡಿಕೊಂಡಿರುತ್ತಿದ್ದಳು ದಿನವಿಡೀ. ಹಣದ ಅಗತ್ಯವೇನೂ ಅಲ್ಲ, ಅದೊಂದು ಬಗೆಯಲ್ಲಿ ಅವಳ ಚಟ ಏನಾದರೂ ಒಂದು ಮಾಡುವುದು. ಅಂಗಳದಲ್ಲಿ ಹಪ್ಪಳಮಾಡಿ ಒಣಗಿಸಿ ಹತ್ತಿರದ ಅಂಗಡಿಗಳಿಗೆ ಮಾರಿಬರುವುದು. ಸುನಂದಾ ಟೇಲರ್ ಹತ್ತಿರ ಸಬ್ ಕಾಂಟ್ರಾಕ್ಟ್ ಮಾಡಿಕೊಂಡು ಚೂಡಿದಾರಗಳ ಪ್ಯಾಂಟ್ ಹೊಲೆದು ಕೊಡುವುದು. ಯಾವ್ಯಾವುದೋ ಮಹಿಳಾ ಸಂಘಗಳಿಗೆ ಹೋಗಿ ಹಾಜರಿ ಹಾಕುವುದು. ಒಕ್ಕಲರ ಕೇರಿ, ಮುಸಲರ ಕೇರಿಯಲ್ಲೆಲ್ಲ ಪೋಲಿಯೋ ಹಾಕುವ ಸಂದರ್ಭದಲ್ಲಿ ಮಹಿಳಾ ಸಂಘದ ವತಿಯಿಂದ ನಡೆದಾಡಿ ಓಡಾಡಿ ಹಲವರ ಪರಿಚಯ ಮಾಡಿಕೊಂಡಿದ್ದಳು ಜಲಜ. ಶಾರಿಮಾಮಿಗೆ ತದ್ವಿರುದ್ಧ ಅಥವಾ ಶರಿಮಾಮಿಗೂ ಗೊತ್ತಿಲ್ಲದ ನಿಜವಾದ ಶಾರಿಮಾಮಿಯನ್ನು ಒಳಗಿಂದೆಲ್ಲೋ ಜಲಜ ಜಗ್ಗಿ ಎಳೆಯುತ್ತಿದ್ದಾಳೆನೋ ಎಂದು ಶಾರಿಮಾಮಿಗೆ ಜಲಜ ಬಂದಾಗಿಂದ ಹೆದರಿಕೆಯಾಗಲು ತೊಡಗಿತ್ತು.
ಬರೀ ಮೀನು ಮಾರ್ಕೆಟ್ಟಿಗೆ, ತರಕಾರಿ ಸಂತೆಗೆ ಹೋಗಿಬರುತ್ತಿದ್ದ ಶಾರಿಮಾಮಿ ಜಲಜಳ ಜೊತೆ ಸಿನೆಮಾಕೂ ಹೋಗತೊಡಗಿದಳು. ಮುಂಚೆ ಗಂಡನ ಜೊತೆ ಇಲ್ಲ ಮಕ್ಕಳ ಜೊತೆ, ಮಂಗಳೂರಿಗೆ ಹೋದಾಗ ಮೊಮ್ಮಗಳ ಜೊತೆ ಮಾತ್ರ ಸಿನೆಮಾಕ್ಕೆ ಹೋಗಿದ್ದ ಶಾರಿಮಾಮಿಗೆ ಜಲಜಳ ಜೊತೆ ಹೋದರೆ ಏನೋ ತಾನೊಬ್ಬಳೆ ಎಲ್ಲೋ ಹೋಗಿ ಬಂದೆ ಎಂದಂತ ಅನುಭವ. ಜಲಜಳಾದರೂ ಮಗಳು ಶಕುಗಿಂತಲೂ ಚಿಕ್ಕವಳು. ಆದರೂ ತನಗೆ ಸರಿಸಮ ಗೆಳತಿ ಎಂದೇ ಎನಿಸುತ್ತಿದ್ದಳು ಅವಳು. ಇವರ ಗೆಳೆತನದ ಬಗ್ಗೆ ಹರಿಪ್ರಸಾದ ಶೆಟ್ಟಿಗೆ ಅಸಡ್ಡೆಯಿದ್ದರೂ ಆಕ್ಷೇಪವೇನಿರಲಿಲ್ಲ. ಮಳ್ಳು ಏರಿದಾಗಲೊಮ್ಮೆ ಒದರಿ ಬರುತ್ತಿದ್ದ. ಜಲಜ ಸುಮ್ಮನೆ ಬಾಗಿಲಲ್ಲಿ ನಗುತ್ತ ನಿಂತುಬಿಡುತ್ತಿದ್ದಳು. ಅದೂ ಒಂದು ಕಾರಣ ಶಾರಿ ಜಲಜಳಿಗೂ ನಡುವೆ ಶೆಟ್ಟಿಯ ಪ್ರವೇಶ ಇನ್ನೂ ಆಗದಿದ್ದುದು. ಅವಳ ಅಳುಕಿಲ್ಲದ ನೇರ ನಿಲುವಿಗೆ ಶೆಟ್ಟಿಯೇ ಹೆದರಿ ಒದರಾಟದ ದಿಕ್ಕು ಬದಲಾಗಿ ಹಿಂದಿನ ಓಣಿಯ ಗೂಡಂಗಡಿಗೆ ಹೋಗಿ ಗಲಾಟೆ ಮಾಡಿ ಬರುತ್ತಿದ್ದ. ಜಲಜ ಮೀನು ತಿನ್ನುವ ಪೈಕಿಯವಳಲ್ಲ. ಆದರೆ ಮೀನು ತಿಂದು ಉದ್ಧಾರವಾದವಳು. ಹಾಗಾಗಿ ಮನೆಯಲ್ಲಿ ಬೇಯಿಸದಿದ್ದರೂ ಶಾರಿಮಮಿಯ ಹತ್ತಿರ ಮಾಡಿಸಿಕೊಂಡು ತಿಂದು ಬರುತ್ತಿದ್ದಳು. ಇಬ್ಬರಿಗೂ ಆಗೆಲ್ಲ ಏನೋ ಧನ್ಯತೆ.
ಈ ಚೌತಿಹಬ್ಬ ಬರುತ್ತದೆ ಎಂದರೆ ಶಾರಿಮಾಮಿಗೆ ಒಳಗೊಳಗೇ ಏನೇನೋ ಅಲುಗಿದಂತಾಗುತ್ತದೆ ಆ ಘಟನೆ ನಡೆದಾಗಿನಿಂದ. ಆ ನಂತರ ಎಲ್ಲ ಚೌತಿಗಳೂ ಹೆಚ್ಚುಕಮ್ಮಿ ಸುಸೂತ್ರವಾಗಿ ನಡೆದಿದ್ದರೂ ಎದೆ ಅದುರುವುದು ಮಾತ್ರ ನಿಂತಿಲ್ಲ. ಆ ವರುಷ ಜಲಜ ಇರುವುದಕ್ಕಾಗಿ ಏನೋ ಸಮಾಧಾನ ಶಾರಿಮಾಮಿಗೆ. ಪರ್ರ್ಪರೆ, ಪತಾಕೆ, ಹೂಬತ್ತಿ, ಗಂಧದ ಕಡ್ಡಿ, ಮಂಟಪ, ಫಲಾವಳಿಗಳ ಖರೀದಿಗಳನ್ನೆಲ್ಲ ಉದ್ದುದ್ದ ಸಾಮಾನುಚೀಟಿ ಬರೆಯುತ್ತ ಕೊಂಚ ಹುರುಪಿನಿಂದಲೇ ತಯಾರಾದಳು. ಅದು ತನ್ನಿ ಇದು ಅನ್ನಿ ಎಂದು ಹರಿಪ್ರಸಾದ ಶೆಟ್ಟಿಗೆ ಸ್ವಲ್ಪ ಧೈರ್ಯವಾಗಿಯೇ ಹೇಳತೊಡಗಿದಳು. ಮುಂಚೆಯೇ ಮೊಮ್ಮಕ್ಕಳಿಗೆಂದು ಚಕ್ಕುಲಿ, ಕೋಡುಬಳೆ, ಕರಜಿಕಾಯಿ ತಯಾರಿಗೆ ತೊಡಗಿದಳು. ಕಟ್ಟಿಗೆ ಹಾಕುವ ಬೊಮ್ಮಿಗೆ ಎರಡು ಹೊರೆ ಜಾಸ್ತಿ ಹಾಕು ಮುಂದಿನ ವಾರ ಎಂದಿದ್ದಾಳೆ.
ಗಣಪತಿ ಹೊರುವ ಸೋಮು ಓಡಿಹೋದ ಮೇಲೆ ಇತ್ತ ತಿರುಗಿಯೂ ನೋಡಿಲ್ಲ. ಒಮ್ಮೊಮ್ಮೆ ಸಾರಾಯಿ ಹೆಚ್ಚಾದಾಗ ಇವರ ಮನೆ ಬದಿ ಮುಖ ಮಾಡಿ ನಿಂತು ಹಾಡುತ್ತ ಅಣಕಿಸುತ್ತ ಹೋಗುತ್ತಾನೆ. ಆನಂತರದಿಂದ ಅವನ ತಮ್ಮ ಮಂಕಾಳು ಬರುತ್ತಾನೆ. ಅವನಿಗೂ ವಾರದ ಮುಂಚೆಯೇ ಇಂತಿಷ್ಟು ಗಂಟೆಗೆ ಗಣಪತಿ ತರುವುದು ಎಂದು ಹೇಳಿ ಕಳಿಸಿದಳು ಬೊಮ್ಮಿಯ ಕೈಲಿ. ಕೆಲಸದ ನಾಗುಗೆ ಮುಂಚೆಯೇ ಒಂದು ಹದಿನೈದು ದಿವಸದ ಮಟ್ಟಿಗೆ ಜಾಸ್ತಿ ಸಂಬಳ ಗೊತ್ತು ಮಾಡಿ ಬಟ್ಟೆ ಪಾತ್ರೆ ಎಲ್ಲ ವಹಿಸಿಕೊಟ್ಟಳು. ಜಲಜಳೂ ನೆರವಿಗೆ ಬಂದಳು. ಮಕ್ಕಳು ಮರಿಯೆಲ್ಲ ಇನ್ನೂ ಇರದ ಅವಳಿಗೆ ಇದೊಂತರ ಹೊಸ ಉತ್ಸಾಹದ ಹಬ್ಬ.
ಹರಿಪ್ರಸಾದ ಶೆಟ್ಟಿಗೆ ಈಗ ಏರಬಹುದು ಆಗ ಏರಬಹುದು ಎಂದು ಯಾವಾಗಲೂ ಅತಂಕದಲ್ಲಿರುತ್ತಿದ್ದ ಶಾರಿಮಾಮಿಯ ಒಂತರ ಹೊಸಮುಖ ದರ್ಶನವಾದಂತೆ ಸಂಭ್ರಮಿಸುತ್ತಿದ್ದಳು ಜಲಜ. ಹಬ್ಬ ಬಂತು ಸಾಂಗವಾಗಿ ಜರುಗಿತು ಕೂಡ. ಆಶ್ಚರ್ಯವೆಂಬಂತೆ ಹರಿಪ್ರಸಾದ ಶೆಟ್ಟಿಯಿಂದ ಎಂತ ಹೇಳಿಕೊಳ್ಳುವಂತ ದೃಶ್ಯಾವಳಿ ಎದುರಾಗಲೇ ಇಲ್ಲ. ಮಗ ಹೋಗುವಾಗ ತಾಯಿಗೊಂದು ಹೊಸ ಮೊಬೈಲ್ ಕೊಡಿಸಿ ಹೋದ. ಮೊಮ್ಮಗಳು ಅಜ್ಜಿಗೆ ಕಿವಿಗೆ ಸಿಕ್ಕಿಸಿ ಒಂದಿಷ್ಟು ಹೊಸ ಹೊಸ ಸಿನಿಮಾ ಹಾಡು ಕೇಳಿಸಿ ಹೋದಳು. ಮಗಳು ತಂದಿದ್ದ ಹೊಸ ಸೀರೆ ಉಟ್ಟು ಎಲ್ಲರಿಗೂ ಚಕ್ಕುಲಿ, ಉಂಡೆ, ಮನೆಯಲ್ಲಿ ಬೆಳೆದ ತೆಂಗಿನಕಾಯಿ, ಜುಮ್ಮನಕಾಯಿ, ಮುರುಗಲಸಿಪ್ಪೆ, ವಾಟೆಪುಡಿ, ಮೆಣಸಿನಪುಡಿ ಎಂದೆಲ್ಲ ಪಾಲು ಮಾಡಿ ಮೂಟೆಹೊರೆಸಿ ವಿ ಅರ ಎಲ್ ಹತ್ತಿಸಿಬಂದ ಶಾರಿಮಾಮಿ ಬಹುವರುಷಗಳ ನಂತರ ಹಬ್ಬ ಮಾಡಿದಗಾಯ್ತು ನೋಡು ಈ ಸರ್ತಿ ಎಂದಳು.
ಹಬ್ಬ ಮುಗಿದರೂ ಮನದೊಳಗಿನ ಹಬ್ಬ ಹೊಸದಾಗಿ ಹುಟ್ಟಿತ್ತು. ಹಬ್ಬಕ್ಕೆ ತೆಗೆದ ರೇಷ್ಮೆ ಸೀರೆಗಳು ಅಲ್ಲೇ ಬಿಸಿಲಿಗೆ ಹರಡಿಕೊಂಡು ಬೆವರು ಹಾರಿಸುತ್ತ ಒಣಗುತ್ತಿದ್ದವು ಹೊರಜಗಲಿಯ ಗಳದ ಮೇಲೆ. ಕಟಾನ್ಜನದಿಂದ ಹಾದುಹೋಗುವ ಗಾಳಿಯ ಮೇಲಿಂದ ಹಾಸಿಬಂದ ಕುಂಕುಮ, ತುಪ್ಪದ ದೀಪದ ಕಮಟುಮಿಶ್ರಿತ ಶಾರಿಮಾಮಿಯ ಬೆವರು ವಾಸನೆ ನಿಧಾನಕ್ಕೆ ಮನೆಯ ಒಳಗೂ ಹೊರಗೂ ಆಡುತ್ತ ಸೀರೆಯಿಂದ ಖಾಲಿಯಾಗುತ್ತಿತ್ತು. ಚಿಟ್ಟೆಯ ಮೇಲೆ ಕೂತ ಹರಿಪ್ರಸಾದ ಶೆಟ್ಟಿ ಆ ಗಾಳಿಯೊಳಗೆ ಸೇರುತ್ತ ಹಗೂರಕ್ಕೆ ತಾನೂ ಖಾಲಿಯಾಗುತ್ತಿದ್ದ.

***

ಈ ಪುರಾಣಕ್ಕೆ ಈಗ ಹಲವು ವರುಷಗಳೇ ಸಂದಿವೆ. ಮನೆಯ ಮುಸುಕಿನಲ್ಲಿ ಇರದ ಉಸಿರಾಟ ಶಾರಿಮಾಮಿಗೆ ಬಾಡಿಗೆಗೆ ಬಿಟ್ಟ ಮನೆಯಲ್ಲಿ. ಜಲಜಳ ಸಂಸಾರ ಖಾಲಿಯಾಗಿ, ೪ ಮಕ್ಕಳ ಬೀನ ಬಂದಳು. ಅವರೂ ಹೊರಟು ಸಕಲ ಸರಂಜಾಮುಗಳನ್ನು ಹೊರೆಸಿಕೊಂಡು ಸರೋಜಾ ಬಂದು ಹೋದಳು. ಈಗ ಅಲ್ಲಿ ವೀಣಾ ಗಂಡ ಮಗನೊಂದಿಗೆ ತಾನೂ ಕೆಲಸಕ್ಕೆ ಹೋಗುತ್ತಾ ಆಗಾಗ ಶಾರಿಮಮಿಯ ಉಪ್ಪಿನಕಾಯಿ ಇಸಕೊಳ್ಳುತ್ತ ಹರಿಪ್ರಸಾದ ಶೆಟ್ಟಿಯೊಂದಿಗೆ ಅವಳ ಮಗ ದಿನವೂ ಚೆಸ್ ಆಡುತ್ತ ಇದ್ದಾರೆ. ಹರಿಪ್ರಸಾದ ಶೆಟ್ಟಿಯ ಅವತಾರದ ಬಗ್ಗೆ ಗುಸುಗುಸು ದಂತಕತೆಯಂತೆ ಅಲ್ಲೆಲ್ಲ ಹರಿದಾಡುತ್ತಾ ಹಾಗೆ ಇದೆ. ಚೌತಿಹಬ್ಬದಲ್ಲಿ ಪೂಜೆಗೆ ಮಾತ್ರ ಹರಿಪ್ರಸಾದ ಶೆಟ್ಟಿ ಬರದೆ ಈಗಲೂ ಹೊದ್ದು ಮಲಗುತ್ತಾನೆ.. ಪ್ರಸಾದದ ಹೊತ್ತಿಗೆ ಎದ್ದು ಬರುತ್ತಾನೆ. ಶಾರಿಮಾಮಿಯ ಆ ಸೀರೆ ಮಾತ್ರ ಸಾಕ್ಷಿಯೆಂಬಂತೆ ಟ್ರಂಕಿನಲ್ಲೇ ಬಿದ್ದುಕೊಂಡಿದೆ.
ಬಾಡಿಗೆಯವರಿಗೆ ಮನೆಯ ಪಕ್ಕದಲ್ಲಿ ಸಂಜೆ ಏರಿಸಿಕೊಂಡವರು ದೊಡ್ಡದಾಗಿ ಭಜಿಸುತ್ತ ಹೋಗುವುದು ಸರಿಬರುತ್ತಿಲ್ಲ. ಹಾಗಾಗಿ ಯಾರೂ ವರ್ಷದ ಮೇಲೆ ನಿಲ್ಲುವುದಿಲ್ಲ. ಇದ್ದದರಲ್ಲಿ ಜಲಜಳ ಸಂಸಾರವೇ ಮಕ್ಕಳುಮರಿಯಿಲ್ಲದ್ದರಿಂದಲೇನೋ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಒಮ್ಮೊಮ್ಮೆ ಕುಡಿದಿದ್ದು ಹೆಚ್ಚಾದಾಗ ಸೋಮುಗೌಡ ಬಂದು ಅಮ್ಮ ನೀವು ಆರಾಮ್ ಇರ್ಬೇಕ್ರಾ ನೀವು ಆರಾಮಿರ್ರ ಅಮ್ಮ. ನಾ ಗಣಪತಿ ತರುದಿಲ್ರಾ ಆದ್ರೆ ನೀವು ಅರಾಮಿರಿ ಹ್ನಾ ಎನ್ನುತ್ತಾ ಏನೇನೋ ಬಡಬಡಿಸಿ ಹೋಗುತ್ತಾನೆ.
ಈ ಹಾಳು ವ್ಯವಹಾರ ಬೇಡಾಗಿತ್ತು ಎಂದು ಎಷ್ಟು ಹೇಳಿದರೂ ಕೇಳದಿದ್ದ ಶೆಟ್ಟಿಮಾಮ ಈಗ ಚೆಸ್ ಸಂಗಾತಿ ದೊರೆತ ಮೇಲೆ ಅಂಗಡಿ ಬಾಗಿಲು ಮುಚ್ಚಿದ್ದಾನೆ. ಪಟ್ಟಿ ಪುಸ್ತಕ, ಪೆನ್ನು, ಶಾಯಿ, ಆಟಿಗೆ, ಪಟಾಕಿ ಎಂದು ಹೊಸ ಸ್ಟಾಕು ಬಂದಿದೆ. ಗೂಡಂಗಡಿ ಈಗ ಆಚೀಚೆ ಕೇರಿಯವರಿಗಾಗಿ ಆಟಿಗೆ ಅಂಗಡಿಯಾಗಿ ಬದಲಾಗುತ್ತಿದೆ. ಶೆಟ್ಟಿಮಾಮನ ಏರಿದ ಮಳ್ಳು ಇಳಿದರೂ ಇಳಿಯಬಹುದೇನೋ ಎಂದು ಸುದ್ದಿ.
 

‍ಲೇಖಕರು avadhi

October 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ashok Shettar

    ಹರಿಪ್ರಸಾದ ಶೆಟ್ಟರ “ಪಿರ್ಕು” ಯಾಕಾಗಿ ಬಂತು ಯಾಕಾಗಿ ಹೋಯ್ತು ಗೊತ್ತಾಗಲಿಲ್ಲ. ಆದರೆ ಒಂದು ಕಥಾನಕವನ್ನು ಅದರ ಪ್ರಾದೇಶಿಕ ಸೊಗಡಿನ ವಿವರಗಳೊಂದಿಗೆ, ಹಾಸ್ಯಮಿಶ್ರಿತ ಧಾಟಿಯಲ್ಲಿ ಲವಲವಿಕೆಯಿಂದ ಹೇಳುವ ಕೌಶಲ ವೈಶಾಲಿಯವರಿಗೆ ಸಿದ್ಧಿಸಿದೆ. ಚೆನ್ನಾಗಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: