ಪಿ ಚಂದ್ರಿಕಾ ಅಂಕಣ- ಮಹಮದ್ ಸಿಕ್ಕೇ ಬಿಟ್ಟರು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

11

ಎಲ್ಲವೂ ಸಲೀಸಾಗಿ ಹೋಗುತ್ತಿರುವುದಕ್ಕೆ ಕಾರಣ ಚಂದ್ರಹಾಸರ ಅಪಾರವಾದ ನೆರವು ಎನ್ನುವುದನ್ನು ಮರೆಯುವಂತೆಯೇ ಇರಲಿಲ್ಲ. ಅವರ ಸಹಾಯ ಇಲ್ಲದಿದ್ದರೆ ನಾವು ಆ ಜಾಗಗಳಿಗೆ ಹೋಗುವುದಾಗಲೀ ಆ ಜನರನ್ನು ಮಾತಾಡಿಸುವುದಾಗಲೀ ಸಾಧ್ಯವೇ ಇರಲಿಲ್ಲ. ಯಾಕೆಂದರೆ ನಮ್ಮ ನಮ್ಮ ಮನಸ್ಸುಗಳ ನಡುವೆ ಅಂಥಾದ್ದೊಂದು ದೊಡ್ಡ ಬಿರುಕು. ಇಷ್ಟು ವರ್ಷಗಳಿಂದ ಒಟ್ಟಿಗೆ ಬದುಕುತ್ತಿರುವವ ಮನಸ್ಸಿನಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಅಪನಂಬಿಕೆ. ಕೋಮುಗಳ ವಿಷಯದಲ್ಲಿ ಎರಡು ಪಂಗಡಗಳಲ್ಲಿ ಕಟ್ಟರ್‌ಗಳು ಇದ್ದಾರೆ. ಸಣ್ಣ ವಿಷಯಗಳನ್ನೂ ದೊಡ್ಡದಾಗಿ ಮಾಡುವುದು, ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂಷಿಸುವುದು ನಡೆಯುತ್ತಲೇ ಇದೆ.

ನಾವು ಭೇಟಿ ಮಾಡಬೇಕಾದ ಮತ್ತೊಬ್ಬ ವ್ಯಕ್ತಿಯನ್ನು ಕುರಿತಾದ ಕುತೂಹಲ ನಮ್ಮಲ್ಲಿ ಇದ್ದೇ ಇತ್ತು. ಆತನನ್ನು ನಾವು ಭೇಟಿಯಾಗಿದ್ದು ಒಂದೇ ಸಲ. ಆತ ಕೊಟ್ಟ ಭರವಸೆ ಇಡೀ ಚಿತ್ರೀಕರಣದ ವೇಳೆಯಲ್ಲಿ ತಾನೇ ನಿಲ್ಲುತ್ತೇನೆ ಎನ್ನುವ ಹಾಗಿತ್ತು. ಈತನ ಹೆಸರೂ ಮಹಮದ. ಸುತ್ತ ಜನ ಈತನನ್ನು ಬ್ರಿಟೀಷ್ ಮಹಮದ ಎಂದು ಕರೆಯುತ್ತಾರೆ. ನನಗೆ ಅಚ್ಚರಿಯಾಯಿತು ಇದ್ಯಾವ ಮಹಮದ್ ಇಂಗ್ಲಿಷಿನವ? ಎಂದು. ನನ್ನ ಅಚ್ಚರಿಯನ್ನೂ ಮೀರಿ ಯಾವ ಕುತೂಹಲವೂ ಇಲ್ಲದೆ, ಆತ ಹೊರಗೆ ಚಪ್ಪಲಿ ಇತ್ತು ಅಂದ್ರೆ ಅವ ಮನೆಯಲ್ಲೇ ಇದ್ದ ಎಂದು ಎಣಿಸಿ ಎಂದಿದ್ದರು ಚಂದ್ರಹಾಸರ ಪರಿಚಯಸ್ತರು.

ಯಾರ ಮನೆಯ ಮುಂದೆ ಚಪ್ಪಲಿ ಇದೆಯೋ ಅದೆಲ್ಲಾ ಬ್ರಿಟೀಷ್ ಮಹಮದನ ಮನೆಯೆಂದೇ ಭಾವಿಸಬೇಕು ಎಂದು ನಾನೂ ಚಂಚಲಾ ಮಾತಾಡಿಕೊಂಡೆವು. ಹಾಗೇ ಮಾತು ಮುಂದುವರೆಯುತ್ತಲೇ ಇತ್ತು. ಬಿಗಿಹಿಡಿದ ನಮ್ಮ ನಗುವಿನ ಮಧ್ಯೆಯೇ ಕಡಲ ಕೊರೆತಕ್ಕೆ ಸಿಕ್ಕು ಹಾನಿಯಾದ ಮನೆಗಳಿಗೆ ಆಸ್ತಿ ಪಾಸ್ತಿಗಳಿಗೆಲ್ಲಾ ಈತನೇ ಪರಿಹಾರ ಕೊಡಿಸುವವ’ ಎಂದು ಹೇಳಿದ್ದರು. ನಾವ್ಯಾಕೋ ಕಷ್ಟ ಪಡುತ್ತಿದ್ದೇವೆ ಎಂದು ಭಾವಿಸಿದ ಚಂದ್ರಹಾಸರು ಏನಾಯ್ತು?’ ಎಂದರು. ಅದಕ್ಕೆ ನಾನು ಇನ್ನೂ ಎಷ್ಟು ಜನ ಮಹಮದರನ್ನು ನಾವು ಭೇಟಿಯಾಗಬೇಕೋ ತಿಳಿಯದು. ಆದರೆ ಇನ್ನು ಭೇಟಿಯಾಗಲಿಕ್ಕೆ ಬಾಕಿ ಇರುವುದು ಮಹಮದ್ ಪೈಗಂಬರ್ ಅವರನ್ನು ಮಾತ್ರ. ಅವರನ್ನೂ ತೋರಿಸಿಬಿಡಿ’ ಎಂದು ನಾನು ತಮಾಷೇ ಮಾಡಿದ್ದೆ.

ನಗುವುದೇ ಅಪರೂಪವಾಗಿದ್ದ ಪಂಚಾಕ್ಷರಿ ನಕ್ಕಿದ್ದರು. ಆತನ ಉದಾತ್ತತೆಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಆಗಲೇ ಒಂದು ಚಿತ್ರ ಮೂಡಿಬಿಟ್ಟಿತ್ತು. ಮತ್ತೊಮ್ಮೆ ಹೊರಗೆ ಜಗುಲಿಯ ಕೆಳಗೆ ಚಪ್ಪಲಿಗಳಿದ್ದರೆ ಅವರು ಮನೆಯಲ್ಲಿದ್ದಾರೆ ಎಂದುಕೊಳ್ಳಿ’ ಎನ್ನುತ್ತಾ ಅವರು ಹೊರಟು ಹೋದರು. ಚಂಚಲಾ ಬನ್ನಿ ಚಂದ್ರಿಕಾ ಚಪ್ಪಲಿ ಹುಡುಕುವಾ’ ಎಂದು ಜೋರಾಗಿ ನಕ್ಕರು. ನಗುವನ್ನು ತಡೆದುಕೊಳ್ಳುತ್ತಾ, ಚಂದ್ರಹಾಸರು ಹಾಗೆ ಹುಡುಕುವುದೇನೂ ಬೇಡ ಅವರ ಮನೆ ನನಗೆ ಗೊತ್ತಿದೆ’ ಎಂದಿದ್ದರು.

ನಮ್ಮ ನಿರೀಕ್ಷೆಯಂತೆ ಬ್ರಿಟಿಷ್ ಮಹಮದ್ ಸಿಕ್ಕೇ ಬಿಟ್ಟರು. ಇಷ್ಟು ಸುಲಭಕ್ಕೆ ಆ ಮನುಷ್ಯ ಸಿಗಬಹುದು ಎಂದುಕೊಂಡಿರಲಿಲ್ಲ. ನಮ್ಮನ್ನು ನೋಡಿ ಆತನ ಹತ್ತಿರಕ್ಕೆ ಯಾಕೆ ಬಂದಿರಬಹುದು ಎನ್ನುವ ಅಂದಾಜೂ ಸಿಗದೆ ಒದ್ದಾಡಿದರು. ಅತನ ಮುಖದ ಕಗ್ಗಂಟನ್ನು ಬಿಚ್ಚುವವರಂತೆ ಸರ್ ನಾವು ಒಂದು ಸಿನಿಮಾ ತೆಗೆಯಲಿಕ್ಕುಂಟು’ ಎಂದು ಚಂದ್ರಹಾಸರೇ ಮಾತನ್ನು ಶುರು ಮಾಡಿದರು.ಏನದು ಸಿನಿಮಾವಾ? ಅದಕೆ ನಾನೇನು ಮಾಡಲಿಕ್ಕುಂಟು ಮಾರಾಯ್ರೆ?’ ಎಂದು ಇನ್ನಷ್ಟು ಪ್ರಶ್ನಾರ್ಥಕ ಚಿಹ್ನೆಯನ್ನು ಮುಖದ ಮೇಲೇರಿಸಿಕೊಂಡ ಬ್ರಿಟಿಷ್ ಮಹಮದ್ ನಮ್ಮ ಕಡೆಗೆ ತೀಕ್ಷ್ನವಾಗಿ ನೋಡಿದರು. ಬಿಳಿ ಮಿಶ್ರಿತ ಕೆಂಪು ಬಣ್ಣ, ಚೂಪಾದ ಮೂಗು, ಕಣ್ಣುಗಳು ಬೆಕ್ಕಿನದ್ದೆ. ಕೂದಲು ಬಣ್ಣ ಹಚ್ಚಿದ್ದೋ, ಇರುವುದೇ ಹಾಗೋ ಗೊತ್ತಿಲ್ಲ, ಹೆಚ್ಚೂ ಕಮ್ಮಿ ಬೂದು ಬಣ್ಣದ್ದು. ತೆಳ್ಳಗಿನ ದೇಹ, ಎತ್ತರದ ನಿಲುವು. ಅಚ್ಚ ಬಿಳಿ ಬಣ್ಣದ ಪೈಜಾನ ಕುರ್ತಾ. ಐವತ್ತರ ಆಸುಪಾಸಿನ ಆತನಿಗೆ ಲೋಕಾನುಭವ ಅತಿಯಾಗಿದೆ ಎಂದು ನೋಡಿದ ತಕ್ಷಣವೇ ಗೊತ್ತಾಗುತ್ತಿತ್ತು. ಎಲ್ಲಕ್ಕಿಂತ ನನಗೆ ಅಚ್ಚರಿ ಎನ್ನಿಸಿದ್ದು ಆತನ ಇಂಗ್ಲಿಷ್ ಹಾಗೂ ತುಂಬಾ ಸ್ಪಷ್ಟವಾದ ಉಚ್ಛಾರ.

ಚಂದ್ರಹಾಸರು ತಮ್ಮ ಹಳೆಯ ನೆನಪುಗಳನ್ನು ಅವರ ಜೊತೆ ಹಂಚಿಕೊಳ್ಳುತ್ತಿದ್ದರು. ನನ್ನ ನೆನಪಿರಬೇಕಲ್ಲ ನಿಮಗೆ?’ ಎಂದ ಅವರ ಮಾತಿಗೆ ಬ್ರಿಟಿಷ್ ಮಹಮದ,ಎಲ್ಲಿ ಭೇಟಿಯಾಗಿದ್ದೆವು ಹೇಳಿ?’ ಎಂದು ತನ್ನ ನೆನಪನ್ನೂ ಕೆದಕಲು ಆರಂಭಿಸಿದ್ದರು. ಮಸೀದಿ ಬಿದ್ದ ದಿನ ಸಂಜೆ ನಾನೂ ನೀವೂ ಮುಸ್ಲೀಂ ಕೇರಿಯ, ಕೆಲಸಕ್ಕೆ ಹೋಗುವ ಜನರಿಗೆ ಪಾಠ ಮಾಡುತ್ತಿದ್ದೆವು ನೆನಪಿದೆಯಾ?’ ಎಂದರು. ಬಿಎಸ್‌ಎನ್‌ಎಲ್‌ನ ಇಂಜಿನಿಯರ್ ಕೆಲಸದ ನಡುವೆಯೂ ಈ ಮನುಷ್ಯನಿಗೆ ನಾಟಕಕ್ಕೆ ಟೈಂ ಹೇಗೆ ಮಾಡಿಕೊಳ್ಳುತ್ತಾರೋ ಎನ್ನುವ ಕುತೂಹಲವಿದ್ದ ನಮಗೆ, ಅವರ ಇನ್ನೊಂದು ವೇಷ ಕಂಡು ಇನ್ನಷ್ಟು ಅಚ್ಚರಿಯಾಯಿತು.

ಓ ಇಂಜಿನಿಯರ್ ಸಾಹೇಬ್ರೆ ತುಂಬಾ ಬದಲಾಗಿಬಿಟ್ಟಿದ್ದೀರಿ’ ಎಂದು ಉದ್ಗಾರದ ಜೊತೆ ಉತ್ಸಾಹವನ್ನೂ ತೆಗೆದುಕೊಂಡ ಬ್ರಿಟಿಷ್ ಮಹಮದ್ ಚಂದ್ರಹಾಸರು ತಮ್ಮ ತಲೆಯನ್ನು ಒಮ್ಮೆ ಸವರಿಕೊಂಡು ಮಾತನಾಡತೊಡಗಿದರು. ಹಾಗಿದ್ರೆ ಚಾ ಕುಡಿತಾ ಮಾತಾಡುವ ಆಯ್ತಾ?’ ಎಂದು ಒಳಗೆ ಹೋಗುವಾಗಎಲ್ಲರಿಗೂ ಸಕ್ಕರೆ ಆದೀತಲ್ಲವಾ?’ ಎಂದು ಕೇಳಿದ್ದರು. ತೊಂದರೆ ಬೇಡ’ ಎಂದಾಗ ತಾಯಿಗೆ ಕೊಡಲಿಕ್ಕುಂಟು ಹಾಗೆ ನಿಮಗೂ ಮಾಡುವ’ ಎಂದು ಒಳಸಾಗಿದರು. ಇವರೇ ಮಾಡುವುದಾ?’ ಎಂದು ಕೇಳಿದಾಗ ಚಂದ್ರಹಾಸರು ಮೆಲ್ಲಗೆ ಇಲ್ಲ ಇವರು ಮದುವೆ ಆಗಿಲ್ಲ’ ಎಂದಿದ್ದರು.

ಬಾಗಿಲಿಗೆ ಹಾಕಿದ್ದ ಪರದೆ ಸರಿಸಿಕೊಂಡು ಚಹಾದ ಕಪ್ಪುಗಳ ಜೊತೆಗೆ ಬಂದ ಮಹಮದ್ ನೋಡಲಿಕ್ಕೆ ಮಾತ್ರವಲ್ಲ ಅವರ ವರ್ತನೆಯೂ ಬ್ರಿಟಿಷ್ ಚಹರೆಗಳನ್ನು ಪಕ್ಕಾ ಕಾಣಿಸುತ್ತಿತ್ತು. ಒಳ್ಳೆಯ ಚಹಾ ಕುಡಿದ ಮೇಲೆ ಲೋಕಾಭಿರಾಮದ ನಂತರ ನಮ್ಮ ವಿಷಯಕ್ಕೆ ಬಂದೆವು. ನಾನು ಎಂದಿನಂತೆ ನೋಟ್‌ಬುಕ್ ತೆಗೆದು ಹೇಳಿದ ಎಲ್ಲಾ ಸಂಗತಿಗಳನ್ನೂ ಬರೆದುಕೊಳ್ಳತೊಡಗಿದೆ. ಪ್ರತಿ ವರ್ಷದ ಪ್ರಕೃತಿ ವಿಕೋಪದಲ್ಲಿ ಜನ ಪಡುವ ಕಷ್ಟ ಎಲ್ಲವನ್ನೂ ವಿವರಿಸುತ್ತಿದ್ದರೆ ಮನೆ ಕಳೆದುಕೊಳ್ಳುವ ಪಾತುಮ್ಮಳ ಚಿತ್ರ ಕಣ್ಣಮುಂದೆ ಸ್ಪಷ್ಟವಾಗತೊಡಗಿತು. ಅವರ ಮಾತುಗಳ ನಡುವೆ ಕೆಲ ಅಥೆಂಟಿಕ್ ಲೋಕಲ್ ಡೈಲಾಗುಗಳನ್ನು ಚಂಚಲಾ ಕೂಡಾ ನೋಟ್ ಮಾಡಿಕೊಳ್ಳತೊಡಗಿದರು.

ಒಂದಿಷ್ಟು ಫೋಟೋಗಳು, ಆ ಕಡಲತೀರದ ಮನೆಗಳ ಜಾಗದ ನಕ್ಷೆ ಎಲ್ಲವನ್ನು ನಮ್ಮ ಮುಂದೆ ಹರವಿ, ಏನು ಮಾಡುವುದು ಬೇರೆಡೆ ಹೋಗಿ ಮನೆ ಕಟ್ಟಿಕೊಳ್ಳಿ ಎಂದರೆ ಕೇಳುವುದಿಲ್ಲ. ಈಗಾಗಲೇ ಏಳು ತೆಂಗಿನ ಸಾಲುಗಳನ್ನು ಕಡಲು ನುಂಗಿಬಿಟ್ಟಿದೆ. ಇಷ್ಟಾದರೂ ಜನ ಮಾತ್ರ ಕಡಲತಾಯಿ ಏನೂ ಮಾಡುವುದಿಲ್ಲ ಎನ್ನುತ್ತಾರೆ. ಮತ್ತೆಮನೆ ಬಿದ್ದಾಗ ಮಾತ್ರ ನನ್ನ ಬಳಿ ಓಡಿಬರುತ್ತಾರೆ’ ಎಂದರು.ಏನೋ ಬಿಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಲ್ಲ’ ಎಂದ ಪಂಚಾಕ್ಷರಿಗೆ, ಅಲ್ಲಾ ನನಗೆ ಕೊಟ್ಟ ಕೆಲಸ ಇದು ಸರ್ ಇದೂ ಮಾಡಿಲ್ಲಾಂದ್ರೆ ಹೇಗೆ ಅಲ್ಲವಾ? ಈ ಸಮಾಜದ ಋಣ ತೀರಿಸುವುದು?' ಎಂದರು. ನಮಗೋ ಈಗ ಅದ್ಭುತ ವ್ಯಕ್ತಿಯಾಗಿ ಕಾಣಿಸಿಕೊಂಡ.ಸರ್ ನಿಮ್ಮ ಕಡೆಯಿಂದ ನಮಗೆ ಒಂದು ಕೆಲಸ ಆಗಬೇಕಿದೆ. ನಾವಲ್ಲಿ ಒಬ್ಬ ಬಡ ಮುಸ್ಲೀಂ ಮಹಿಳೆಯ ಕಥೆಯನ್ನು ಚಿತ್ರೀಕರಣ ಮಾಡಬೇಕಿದೆ. ಉಲ್ಲಾಳದ ದರ್ಗಾದಿಂದ ಪರ್ಮೀಷನ್ ತೆಗೆದುಕೊಂಡೆವು. ಆದರೆ ಜನರಿಗೆ ಇಷ್ಟು ಸಹಾಯ ಮಾಡುವ ನೀವು, ನಮಗೆ ಅನುಕೂಲವಾಗುವ ಹಾಗೆ ಅಲ್ಲಿಯ ಜನರಿಗೆ ಒಂದು ಮಾತನ್ನು ಹೇಳಿ’ ಎಂದು ಕೇಳಿಕೊಂಡೆವು.

ನಮ್ಮ ಮಾತಿಂದ ಆತನ ಮುಖ ಕಂದಿದ ಹಾಗಾಯಿತು. ಸ್ವಲ್ಪ ಒರಟಾಗಿ ತನಗೆ ಮಂಗಳೂರಲ್ಲಿ ಸ್ವಲ್ಪ ಕೆಲಸ ಇದೆಯೆಂದೂ, ಬರಲಿಕ್ಕಾಗುವುದಿಲ್ಲವೆಂದೂ ಹೇಳಿದರು. ನಾವು ಪಟ್ಟುಬಿಡದೆ ಇಲ್ಲ ಬನ್ನಿ’ ಎಂದು ಕರೆದೆವು. ನನಗೆ ಯಾಕೋ ಆತನಿಗೆ ಅಲ್ಲಿಗೆ ಬರಲಿಕ್ಕೆ ಮನಸ್ಸಿಲ್ಲ, ಅದಕ್ಕೆ ಕೊಸರಾಡುತ್ತಿದ್ದಾರೆ ಅನ್ನಿಸತೊಡಗಿತು. ನಾವು ಆತನನ್ನು ಬಿಡುವುದಿಲ್ಲ ಎಂದು ಗೊತ್ತಾಯಿತು ಎನ್ನಿಸುತ್ತೆ.ಸರಿ ಹಾಗಿದ್ದರೆ ನನ್ನ ತಾಯಿಗೆ ಮೆಡಿಸಿನ್ ಕೊಡಲಿಕ್ಕುಂಟು, ಅದನ್ನು ಕೊಟ್ಟು ಅಲ್ಲಿಗೇ ಬರುತ್ತೇನೆ, ನೀವು ಅಲ್ಲೇ ಇರಿ’ ಎಂದರು. ಆತನ ಮಾತುಗಳಲ್ಲಿ ನನಗೆ ಮಾತ್ರ ಆತ ಬರಲಾರರು ಎನಿಸಿತು.

ಆತನಿಂದ ಬೀಳ್ಕೊಂಡು ಹೊರಬಂದಾಗ ನನಗನ್ನಿಸಿದ್ದನ್ನು ಹೇಳಿಯೇಬಿಟ್ಟೆ. ಆದರೆ ಉಳಿದವರ್ಯಾರೂ ನನ್ನ ಮಾತಿಗೆ ಸಹಮತ ವ್ಯಕ್ತಪಡಿಸಲಿಲ್ಲ. ನನ್ನದು ವಿಪರೀತದ ಆಲೋಚನೆ ಎಂದರು. ಜನರನ್ನು ಹೀಗೆ ಅಂಡರ್‌ಎಸ್ಟಿಮೇಟ್ ಮಾಡಬೇಡಿ’ ಎಂದು ಪಂಚಾಕ್ಷರಿ ಎಂದರೆ,ಮನುಷ್ಯ ಪ್ರಿನ್ಸಿಪಲ್ಡ್’ ಎಂದಿದ್ದರು ಚಂದ್ರಹಾಸ. ಚಂಚಲಾ ಬರಬಹುದೇನೋ ನೋಡೋಣ' ಎಂದರೆ, ನಾನು ಮಾತ್ರಬರುವುದಿಲ್ಲ ನೋಡಿ ಬೇಕಾದರೆ’ ಎಂದು ಗಂಟಾಘೋಷವಾಗಿ ಹೇಳಿಬಿಟ್ಟೆ.

ಕಡಲ ಕೊರೆತ ತಡೆಯಲಿಟ್ಟಿದ್ದ ಕಲ್ಲುಗಳ ಗೋಡೆಯ ಮೇಲೆ ನಿಂತು ಸಮುದ್ರ ಗಾಳಿಗೆ ಮೈಯೊಡ್ಡಿದ್ದಾಯ್ತು, ಕಲ್ಲುಗಳ ಇಳಿದು ಸಮುದ್ರದ ಬಳಿ ಹೋಗಿ ಅಲೆಗಳಿಂದ ನಮ್ಮ ಕಾಲುಗಳನ್ನು ತೊಯ್ಸಿಕೊಂಡಿದ್ದಾಯ್ತು, ಕೂತು ನಿಂತು ಕಡೆಗೆ ಬೇಸರವಾಗಿ ನಾನು ಪಾತುಮ್ಮಳ ಮನೆಯ ಕೆಲಸ ನಡೆಯುತ್ತಿದ್ದ ಕಡೆಗೆ ನಾನೂ ಚಂಚಲ ಹೊರಟೆವು. ನಮ್ಮನ್ನು ಬಹು ಹೊತ್ತಿನಿಂದ ಗಮನಿಸುತ್ತಿದ್ದ ಒಬ್ಬ ವ್ಯಕ್ತಿ ಯಾರಿಗಾದರೂ ಕಾಯ್ತಾ ಇದೀರಾ?’ ಎಂದು ಕೇಳಿದ.ಹೌದು ಮಹಮದರಿಗಾಗಿ ಕಾಯ್ತಾ ಇದೀವಿ’ ಎಂದೆ. ಯಾವ ಮಹಮದ್?’ ಎಂದು ಆ ವ್ಯಕ್ತಿ ನಮ್ಮನ್ನ ಮರುಪ್ರಶ್ನಿಸಿದ.ಅದೇ ಕಡಲಕೊರೆತಕ್ಕೆ ಹಾನಿಯಾದಾಗ ಪರಿಹಾರ ಕೊಡುಸ್ತಾರಲ್ಲ ಆ ಮಹಮದ್’ ಎಂದೆ. ಅಷ್ಟರಲ್ಲಿ ಚಂದ್ರಹಾಸ, ಪಂಚಾಕ್ಷರಿ ಕೂಡಾ ನಮ್ಮನ್ನು ಸೇರಿದರು. ಓ ಬ್ರಿಟಿಷ ಮೊಹಮದ್‌ನಾ ಅವನಿಗೆ ಇಲ್ಲಿಗೆ ಬರಲಿಕ್ಕೆ ಅಷ್ಟು ಧೈರ್ಯ ಉಂಟಾ? ಬೆರಕೆ ಆಸಾಮಿ’ ಎಂದು ಬೈಯ್ಯಲು ಶುರು ಮಾಡಿದ.

ಆತ ಬಂದು ಹೇಳಿದರೆ ಇಲ್ಲಿಯ ಜನ ಅವನ ಮಾತನ್ನು ಕೇಳ್ತಾರೆ ಅಂದುಕೊಂಡರೆ ಇಲ್ಲಿ ಸೀನ್ ಉಲ್ಟಾ ಆಯ್ತಲ್ಲಾ ಎಂದು ದಂಗಾದೆವು. ಅಲ್ಲ ಮಾರಾಯ್ರೆ ಅವನು ತನಗೆ ಬೇಕಾದವರಿಗೆ ಮಾತ್ರ ಪರಿಹಾರ ಕೊಡುಸ್ತಾನೆ, ಅದ್ರಲ್ಲು ಕಮೀಷನ್ನು. ಇದೆಂಥಾ ಸೇವೆ ಅವಂದು?’ ಎನ್ನುವಾಗ ಚಂದ್ರಹಾಸರೇ ಮುಂದಾಗಿ ಆದರೆ ಇಲ್ಲಿಯ ಜನಕ್ಕೆ ಸರಕಾರದಿಂದ ಏನು ಬೇಕಾದರೂ ಅವರೇ ಬರಬೇಕಲ್ಲಾ’ ಎಂದರು. ಎಂಥಾಕ್ಕೆ ಅವ ಬರೋದು ಬೊಬ್ಬೆ ಹೊಡೆಯಾಕೆ? ಸರಕಾರ ಕೊಡ್ತಾದೆ ನಾವು ತಗೋತೀವಿ. ನೋಡಿ ನೀವೇ ನೋಡಿ' ಎನ್ನುತ್ತಾ ತಮ್ಮ ಮನೆಯ ಬಿದ್ದು ಹೋದ ಭಾಗವನ್ನು ತೋರಿಸುತ್ತಾಇಷ್ಟು ಕಟ್ಟಲಿಕ್ಕೆ ಎಷ್ಟು ಬೇಕು ಹೇಳಿ ಇಂವ ಹೇಳಿದ ಹತ್ತುಸಾವಿರ ಮಾತ್ರ ಇದಕ್ಕೆ ಸಿಗ್ತದೆ ಅಂತ. ಓಯ್ ನೀವೇ ಕಾಣಿ, ಇದು ಸಮಾ ಉಂಟಾ?’ ಅಂತ. ನಾವು ಮಾತಿಲ್ಲದಂತೆ ನಿಂತೆವು. `ಹೋಯ್ ನಿಮಗೆ ಇನ್ನೂ ಹೇಳಲಿಕ್ಕೆ ಉಂಟು. ಇವ ಇದ್ದಾನಲ್ಲ ಇವನ ಇಂಗ್ಲಿಷು ಎಷ್ಟು ಚಂದ ಉಂಟು ನೋಡಿ. ನಮ್ಮ ಸುತ್ತ ಹತ್ತಾರು ಪಳ್ಳಿಗಳ ಮಕ್ಕಳೆಲ್ಲರೂ ಸರ್ಕಾರಿ ಶಾಲೆಗೇ ಹೋಗುವುದು ಇವನಷ್ಟು ಚಂದ ಇಂಗ್ಲಿಷು ಯಾರಾದರೂ ಮಾತಾಡ್ತಾರಾ? ಇವನ ಮುತ್ತಜ್ಜ ಯಾರೋ ಬೇಡ ಅಂತ ಬಿಸುಟು ಹೋಗಿದ್ದ ಮಗುವಾಗಿದ್ದರಂತೆ. ನಮ್ಮ ಜನಕ್ಕೆ ಸಿಕ್ಕು ಮನೆಯ ಮಗನ ಹಾಗೆ ಬೆಳೆದ. ಅವನು ಯಾರೋ ಬ್ರಿಟೀಷರಿಗೇ ಹುಟ್ಟಿರಬೇಕು. ಇಲ್ಲಾಂದಿದ್ರೆ ಇವನಿಗೆ ಇಷ್ಟು ಚಂದದ ಇಂಗ್ಲಿಷು ಬರೋಕೆ ಹೇಗೆ ಸಾಧ್ಯ? ಅದೆಲ್ಲಾ ರಕ್ತದಲ್ಲೇ ಬರಬೇಕು’ ಎಂದು ಅವನ ಪೂರ್ವಾಪರಗಳನ್ನೆಲ್ಲಾ ಜಾಲಾಡಿಸತೊಡಗಿದ.

ಇವನಿಗೆ ಬ್ರಿಟಿಷ್ ಮಹಮದ ತನ್ನ ಮನೆಗೆ ಸರಿಯಾದ ಬೆಲೆ ಕಟ್ಟಲಿಲ್ಲವೆಂಬ ಬೇಸರವಾ? ಅಥವಾ ಅವನ ಚಂದದ ಇಂಗ್ಲಿಷು? ಸರಕಾರದ ಮಟ್ಟದಲ್ಲಿ ಕೆಲಸ ಮಾಡುತ್ತದೆಯಾದ್ದರಿಂದ ತನಗೆ ಆ ಅವಕಾಶ ಇಲ್ಲದೇ ಹೋಗಿದ್ದರಿಂದ ಈ ದ್ವೇಷವಾ? ಗೊತ್ತಾಗಲಿಲ್ಲ. ಮನುಷ್ಯನ ಸ್ವಭಾವವೇ ಹೀಗೆ. ತನಗಿಲ್ಲದ್ದು ಬೇರೆಯವರಿಗಿದೆ ಎಂದು ಗೊತ್ತಾದರೆ ಅದಕ್ಕೆ ಹೊಟ್ಟೆಕಿಚ್ಚು ಪಡೋದು ಸ್ವಾಭಾವಿಕ. ಅಂತೂ ಚೆನ್ನಾಗಿ ಇಂಗ್ಲಿಷ್ ಬರೋದೂ ಎಷ್ಟು ದೊಡ್ಡ ತಪ್ಪು ಎನ್ನುವುದು ನಮಗರ್ಥವಾಯಿತು.

ಬ್ರಿಟಿಶ್ ಮಹಮದ ಅವತ್ತು ಬರಲಿಲ್ಲ, ಮಾತ್ರವಲ್ಲ ಆ ದಾರಿಯಲ್ಲಿ ಓಡಾಡುವಾಗ ಅವರ ಮನೆಯ ಜಗುಲಿಯ ಕೆಳಗೆ ಚಪ್ಪಲಿಯೂ ಕಾಣಲಿಲ್ಲ. ಬಹುಶಃ ನಾವುಗಳು ಅಲ್ಲೇ ಇದ್ದೇವೆ ಎನ್ನುವ ಸಂಗತಿಯನ್ನು ತಿಳಿದುಕೊಳ್ಳುವುದು ಅವನಿಗೇನು ಕಷ್ಟವಿರಲಿಲ್ಲ. ಆದರೆ ಇರುವ ವಿಷಯವನ್ನು ನಮ್ಮ ಬಳಿ ನೇರವಾಗಿ ಹೇಳಬಹುದಿತ್ತು ಅನ್ನಿಸಿದರೂ ಯಾವ ಮನುಷ್ಯನಿಗಾದರೂ ಆ ಸಂಕೋಚ ಇದ್ದೇ ಇರುತ್ತದೆಯಲ್ಲವೇ. ಹಾಗೇ ಅವರು ನಮ್ಮನ್ನು ನೋಡಲು ಬರಲಿಲ್ಲ ಎಂದುಕೊಂಡುಬಿಡೋಣ.

ಈಗ ಅವನು ಬಂದು ಅಲ್ಲಿ ಹೇಳಲೇಬೇಕು ಎನ್ನುವ ಅನಿವಾರ್ಯತೆಯೇನೂ ಕಂಡುಬರಲಿಲ್ಲ. ಜನಕ್ಕೆ ಜನ ಪರಿಚಯ ಅನ್ನುವ ಹಾಗೆ ಆಗಿಬಿಟ್ಟಿತು. ಅಲ್ಲಿ ಹೋಗಿ ಬರುವುದು ಮತ್ತು ಸಲಾಂ ಸಾಬ್‌ಗೆ ಕೆಲಸ ವಹಿಸಿಕೊಟ್ಟಿದ್ದು, ಅಲ್ಲೇ ತೆಂಗಿನ ಗರಿ, ಗಳಗಳಿಗೆ ಹಣಕ್ಕೆ ಕೊಟ್ಟಿದ್ದು ಮತ್ತು ಸಣ್ಣ ಪುಟ್ಟ ವಸ್ತುಗಳನ್ನು ಅಲ್ಲೇ ಕೊಂಡುಕೊಂಡಿದ್ದು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮುಸ್ಲೀಂ ಮನೆ ಹೆಂಗಿರುತ್ತೆ ಎನ್ನುವ ಸಣ್ಣ ಪುಟ್ಟ ಸಂಗತಿಗಳನ್ನು ಅವರಲ್ಲೇ ಕೇಳಿ ತಿಳಿದುಕೊಂಡಿದ್ದು, ಅವರಿಗೆ ಹತ್ತಿರವಾಗಲಿಕ್ಕೆ ಕಾರಣವಾದ ಸಂಗತಿಯಾಗಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: