ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ದೇವರು ಕಾಣೆಯಾಗಿದ್ದಾರೆ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಮಹಾಲಕ್ಷ್ಮೀ ಜಿವೆಲ್ಲರ್ಸ್ ಅಂಗಡಿಯ ರಿ-ಒಪನಿಂಗ್ ನ ಸಂದೇಶವನ್ನು ಹೊತ್ತ ಕೆಂಪು ಪಾಂಪ್ಲೆಟ್ ಗಳು ರಸ್ತೆಯಲ್ಲೆಲ್ಲಾ ಹಾರಾಡುತ್ತಿದ್ದವು. ಮೂವತ್ತು ವರ್ಷ ಹಳೆಯ ಚಿನ್ನದಂಗಡಿ ನವೀಕರಣದ ನಂತರ ಮದುಮಗಳಂತೆ ಸಿಂಗಾರಗೊಂಡಿತ್ತು. ಮೊದಲ ದಿನವಾದ್ದರಿಂದ ಏನಾದರೂ ಆಫ಼ರ್ ಇರಬಹುದೆಂದು ಕೆಲವರು ಬಂದಿದ್ದರೆ ಇನ್ನು ಕೆಲವರು ಸ್ವೀಟ್ ಬಾಕ್ಸ್ ಗಾಗಿ ಕಾದಿದ್ದರು. ಅಂಗಡಿಯ ಓನರ್ ಗೋಪಾಲಾಚಾರಿ ರೇಶ್ಮೆ ಜುಬ್ಬ ಪಂಚೆ ಉಟ್ಟುಕೊಂಡಿದ್ದರು, ಮಗ ಶ್ರೀನಿವಾಸ್ ಆಚಾರಿ ಸರಳವಾದ ಕಾಟನ್ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ತೊಟ್ಟು ಬಂದವರನ್ನು ಸ್ವಾಗತಿಸುತ್ತಿದ್ದ. ಟೌನ್ ನಲ್ಲೇ ಅತ್ಯಂತ ದೊಡ್ಡದಾದ ಚಿನ್ನದಂಗಡಿಯ ಉದ್ಘಾಟನೆಗೆ ಜನ ಕಾದಿದ್ದರು. ಊರಿನ ಗಣ್ಯವ್ಯಕ್ತಿಗಳ ಕಾರುಗಳೂ ಬಂದು ನಿಂತವು.

ಕ್ಷೇಮ ತಾರೆ ಲಾಭತಾರೆಯನ್ನೆಲ್ಲಾ ನೋಡಿ ಇಟ್ಟ ಮುಹೂರ್ತದ ಸಮಯ ಸರಿಯಾಗಿ ಗೋಪಾಲಾಚಾರಿ ಗಣ್ಯರ ಜೊತೆ ಸೇರಿ ಲಗುಬಗೆಯಿಂದ ಟೇಪ್ ಕತ್ತರಿಸಿದಾಗ ಕರತಾಡನದ ಮಳೆಗರೆಯಿತು. ಉದ್ಘಾಟನೆಯ ನಂತರ ಗಲ್ಲಾಪೆಟ್ಟಿಗೆಯ ಪಕ್ಕ ಪೂಜೆಗೆ ಅದ್ಧೂರಿಯಾಗಿ ಅಣಿ ಮಾಡಲಾಗಿತ್ತು. ಜನಗಳ ಸದ್ದುಗದ್ದಲವನ್ನು ಮೆಟ್ಟಿ ಹಾಕುವಂತೆ ಪುರೋಹಿತರ ಮಂತ್ರಪಠಣ ಕೇಳಿಸುತ್ತಿತ್ತು. ಗೋಪಾಲಾಚಾರಿ ತನ್ನ ಪುಟ್ಟ ಅಂಗಡಿ ಇಂದು ಇಷ್ಟು ದೊಡ್ಡದಾಗಿ ಬೆಳೆದಿರುವುದನ್ನು ನೋಡಿ ಕಣ್ತುಂಬಿಕೊಳ್ಳುತ್ತಾ ಕೈಮುಗಿದು ದೇವರ ಕಡೆ ನೋಡುತ್ತಾನೆ.. ಬಾಳೆಗಂಬ, ತೋರಣ, ಕಳಸ, ಗಣಪತಿ ವಿಗ್ರಹಗಳಿವೆ. ಆದರೆ ಅವನ ಇಷ್ಟದೇವತೆ ಮಹಾಲಕ್ಷ್ಮಿಯ ಫೋಟೋ ಕಾಣಲಿಲ್ಲ. ‘ಅಮ್ಮನವರ ಫೋಟೋ ಎಲ್ಲಿ?’ ಜನಗಳ ಮುಂದೆ ಮಗನನ್ನು ಗದರಿಸಿಯೇ ಬಿಟ್ಟರು ಗೋಪಾಲಾಚಾರಿ. ‘ಅದು ಹಳೇದಾಗಿ ಫ಼್ರೇಮ್ ಕಿತ್ತುಬರುತ್ತಿತ್ತು, ಮಹಾಲಕ್ಷ್ಮಿಯ ಹೊಸಾ ಫೋಟೋ ಮಾಡಸಿದ್ದೀನಲ್ಲಾ.. ನೋಡ್ಲಿಲ್ವಾ? ಎಷ್ಟು ದೊಡ್ಡದಾಗಿದೆ’ ಗೋಡೆಗೆ ನೇತುಹಾಕಿದ್ದ ಒಬ್ಬ ಮನುಷ್ಯನ ಗಾತ್ರದ ಫೋಟೋವನ್ನು ತೋರಿಸಿದ.

ತಾವರೇಹಳ್ಳಿ ಮಹಾಲಕ್ಷ್ಮೀಯ ಫೋಟೋವನ್ನು ಗೋಪಾಲಾಚಾರಿ ತನ್ನ ಬಾಲ್ಯದಿಂದ ಜೊತೆಗೆ ಉಳಿಸಿಕೊಂಡಿದ್ದರು. ಆದರೆ ಇಂದು ಮಗ ಅದನ್ನು ಬದಲಾಯಿಸಿಬಿಟ್ಟಿದ್ದ. ಕಪ್ಪುಶಿಲೆಯ, ಗರ್ಭಗುಡಿಯಲ್ಲಿ ದಿನವೂ ಅಭಿಷೇಕ ಪೂಜೆ ಅರ್ಚನೆಮಾಡಿಸಿಕೊಳ್ಳೋ ದೇವರ ಪಟಕ್ಕೂ, ಅಂಗಡಿಯಲ್ಲಿ ಕಂಪ್ಯೂಟರ್ ಪ್ರಿಂಟ್ ಆದ ಈ ಪಟಕ್ಕೂ ಸಮವೇ ಅನ್ನೋದು ಗೋಪಾಲಾಚಾರಿಯ ತರ್ಕ. ಅದೂ ಅಲ್ಲದೆ ಆಕೆ ಗೋಪಾಲಾಚಾರಿಯ ಇಷ್ಟಾರ್ಥಗಳನ್ನು ಸಿದ್ಧಿಸಿಕೊಟ್ಟವಳು. ಆ ಫೋಟೋವನ್ನು ಪೂಜೆ ಮಾಡಲು ಶುರುಮಾಡಿದಾಗಿನಿಂದ ಅವರ ಭವಿಷ್ಯವೇ ಬದಲಾಗಿತ್ತು.

ಹತ್ತನೇ ಕ್ಲಾಸ್ ಪರೀಕ್ಷೆಯನ್ನು ಮೂರು ಸಲ ಕಟ್ಟಿದರೂ ಪಾಸ್ ಮಾಡಲಾಗದೆ ಅಪ್ಪನ ಕೈಯಿಂದ ಬಾರುಕೋಲಿನಿಂದ ಒದೆ ತಿನ್ನುತ್ತಿದ್ದ ಗೋಪಾಲ ಬೇಸತ್ತು ತಾವರೇಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಕೂತುಬಿಡುತ್ತಿದ್ದ. ಮುಂದೆ ನನ್ನ ಭವಿಷ್ಯ ಏನು ಅಂತ ಯೋಚಿಸುತ್ತಾ ಅಳುತ್ತಾ ಕೂತಿದ್ದಾಗ ಯಾರೋ ಬಂದು ಮಹಾಲಕ್ಷ್ಮೀಯ ಫೋಟೋ ಕೊಟ್ಟು ಇದನ್ನು ಪೂಜೆ ಮಾಡಿದರೆ ನಿನಗೆ ಒಳ್ಳೆಯದಾಗುವುದೆಂದು ಹೇಳಿದ್ದರು. ಅದರಂತೆಯೇ ಕೆಲವೇ ದಿನಗಳಲ್ಲಿ ಅಪ್ಪನ ಸ್ನೇಹಿತ, ಅಕ್ಕಸಾಲಿಗನ ಅಂಗಡಿಯಲ್ಲಿ ಸಹಾಯದ ಕೆಲಸಕ್ಕೆ ಸೇರಿದನು. ಅಲ್ಲಿ ಆಭರಣಗಳನ್ನು ಮಾಡುವುದನ್ನು ಕಲಿತು, ಆರೇ ವರ್ಷದಲ್ಲಿ ತನ್ನದೇ ಸ್ವಂತ ಅಂಗಡಿಯನ್ನು ಶುರುಮಾಡಿದ. ಹೆಣ್ಣು ಕೊಟ್ಟ ಮಾವನ ಆಸ್ತಿಯೂ ಅವನದಾಗಿತ್ತು. ಎಲ್ಲವೂ ಲಕ್ಷ್ಮಿಯ ಕೃಪಾಕಟಾಕ್ಷದಿಂದ ನಡಿಯಿತು ಅನ್ನೋ ಅಚಲವಾದ ನಂಬಿಕೆ ಆತನದು. ಯಾರ ಮುಂದೆ ಅಹಂಕಾರ ತೋರಿಸಿದರೂ ಆ ತಾಯಿಯ ಮುಂದೆ ತಲೆಬಾಗುತ್ತಿದ್ದ ಗೋಪಾಲ.

ಎದೆ ಎತ್ತರಕ್ಕೆ ಬೆಳದ ಮಗ ಶ್ರೀನಿವಾಸ, ಬೆಂಗಳೂರಿನಲ್ಲಿ ಎಂಬಿಎ ಪಡೆದ ಮೇಲೆ ವ್ಯಾಪಾರದ ಬಗ್ಗೆ ಹೊಸ ಯೋಜನೆಯನ್ನು ಹಾಕಿ, ಅಂಗಡಿಯನ್ನು ರಿನೋವೇಟ್ ಮಾಡಲು ಹೇಳಿದಾಗ ಮಗನ ಮಾತು ಸರಿ ಇರಬಹುದೆಂದು ಅಂಗಡಿಯನ್ನು ಆರು ತಿಂಗಳು ಮುಚ್ಚಿಸಿ ರಿನೋವೇಶನ್ ಗೆ ಒಪ್ಪಿಗೆ ಕೊಟ್ಟಿದ್ದನು. ಆದರೆ ಮೂವತ್ತು ವರ್ಷದಿಂದ ಗಲ್ಲಾಪೆಟ್ಟಿಗೆಯಲ್ಲಿಟ್ಟು ಪೂಜೆ ಮಾಡುತ್ತಿದ್ದ ದೇವತೆ ಕಾಣೆಯಾಗಿರುವಾಗ ಗೋಪಾಲಚಾರಿಗೆ ಸಹಿಸಿಕೊಳ್ಳೋದಕ್ಕಾಗುತ್ತದೆಯೇ?

‘ಆಪ್ಪ, ಇಂಟೀರಿಯರ್ಸ್ ತುಂಬಾ ಕ್ಲಾಸಿ ಆಗಿದೆ ಅಂತ ಎಲ್ಲರೂ ಹೇಳ್ತಿದ್ದಾರೆ’ ಶ್ರ‍ೀನಿವಾಸ ತನ್ನ ಆಯ್ಕೆಯನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ ಅನ್ನೋದನ್ನು ಅಂಡರ್ ಲೈನ್ ಮಾಡುವಂತೆ ಹೇಳಿದಾಗ ‘ಅದೇನಾದ್ರೂ ಇರ್ಲಿ, ಅಮ್ಮನೋರ ಫೋಟೋ ಎಲ್ಲಿ? ನಂಗೆ ಈಗ್ಲೇ ಬೇಕು’ ಪಟ್ಟು ಹಿಡಿದು ಕೇಳಿದರು ಗೋಪಾಲಾಚಾರಿ. ಅಪ್ಪ ಹಟ ಬಿಡೋದಿಲ್ಲವೆಂದರಿತ ಸೀನು ಆ ಫೋಟೋ ಹೊಸಾ ಶೋರೂಂಗೆ ಮ್ಯಾಚ್ ಆಗಲ್ಲ. ಈ ಲಕ್ಷ್ಮೀ ಫೋಟೋ ಅಂಗಡಿಯ ಲುಕ್ ಗೆ ತಕ್ಕದಾಗಿದೆ, ಪಂಚಲೋಹದ್ ಫ಼್ರೇಮ್ ಹಾಕ್ಸಿದ್ದೀನಿ, ಸುತ್ತ ಎಲ್ ಈ ಡಿ ಲೈಟ್ಸ್ ಬರುತ್ತೆ, ಅದು ಪ್ರಭಾವಳಿ ತರ ಕಂಡು ಮಹಾಲಕ್ಷ್ಮೀನೇ ಎದ್ದು ಬಂದಿದ್ದಾಳೇನೋ ಹಾಗಿರುತ್ತೆ..’ ಎಂದು ತಾನು ಮಾಡಿಸಿದ ಫೋಟೋವನ್ನು ಹೊಗಳಿ ಹೊನ್ನಕ್ಕಿಟ್ಟ ಸೀನು. ಅದೇನೇ ಹೇಳಿದರೂ ಅಪ್ಪ ಹಳೇ ಫೋಟೋ ಬಗ್ಗೆ ಕೇಳೋದನ್ನ ನಿಲ್ಲಿಸಲಿಲ್ಲ. ಸುತ್ತ ಜನರಿದ್ದಾರೆ ಅನ್ನೋದನ್ನೂ ಪರಿಗಣಿಸದೆ ಈಗಲೇ ನಾನು ನನ್ನ ಮಹಾಲಕ್ಷ್ಮಿಯನ್ನು ನೋಡಬೇಕೆಂದು ದುಂಬಾಲು ಬಿದ್ದ. ಗೋಪಾಲ ಪೀಡಿಸಿದಾಗ ಕೊನೆಗೂ ಸೀನು ಬಾಯಿಬಿಟ್ಟ. ‘ಫೋಟೋನ ಗಣಪತಿ ಗುಡಿ ಪಕ್ಕ ಇರೋ ನವಗ್ರಹ ಕಲ್ಲಿನ ಹತ್ತಿರ ಇಟ್ಟುಬಂದೆ’. ಅಷ್ಟು ಹೇಳಿ ಮುಗಿಸಲಿಲ್ಲ ಅಷ್ಟ್ರಲ್ಲಿ ಗೋಪಾಲಾಚಾರಿ ರಂಪ ಶುರುಮಾಡಿಬಿಟ್ಟ. ಆ ಫೋಟೋ ಏನ್ ಮಾಡಿತ್ತು ನಿಂಗೆ? ಆಚೆ ಹೇಗ್ ತೊಗೊಂಡ್ ಹೋದೆ? ಮನೆಗೆ ಬಂದ ಮಹಾಲಕ್ಷ್ಮಿಯನ್ನ ಒದ್ಬಿಟ್ಯಲ್ಲಾ.. ಇನ್ನು ಅವಳು ನಮಗೆ ಒಲೀತಾಳಾ?. ಮಗ ಎಷ್ಟು ಸಮಾಧಾನ ಮಾಡಿದರೂ ಉಪಯೋಗವಾಗಲಿಲ್ಲ. ಗೋಪಾಚಾಲಾರಿ ಫೋಟೋನ ವಾಪಸ್ ತರಲು ಪಂಚೆ ಎತ್ತಿಕಟ್ಟಿಕೊಂಡು ಹೊರಟೇಬಿಟ್ಟ.

ಗೋಪಾಲಾಚಾರಿ ರಸ್ತೆಯಲ್ಲಿ ಬಿರಬಿರನೆ ನಡೆದುಹೋಗ್ತಿರೋದನ್ನು ಕಂಡವರು ಮನೇಗಾ? ಏನಾದರೂ ಮರೆತುಬಂದ್ರಾ? ಅಂತ ಕೇಳಿದರು. ದೇವಸ್ಥಾನಕ್ಕೆ ಅಂತ ಹೇಳಿದಾಗ ಒಬ್ಬ ತನ್ನ ಹೀರೋ ಹೊಂಡಾದಲ್ಲಿ ಕೂರಿಸಿಕೊಂಡು ಡ್ರಾಪ್ ಕೊಡ್ತೀನಿ ಎಂದು ಸಹಾಯಾಸ್ತ ಚಾಚಿದ. ‘ತಾಯೀ, ನನ್ ಕೈ ಬಿಡ್ಬೇಡಮ್ಮಾ’ ಎನ್ನುತ್ತಾ ಗೋಪಾಲಾಚಾರಿ ಬೈಕ್ ಏರಿದರು. ರಸ್ತೆಯ ಮೂಲೆಯಲ್ಲಿದ್ದ ಪುಟ್ಟ ಗಣಪನ ಗುಡಿಯ ಮುಂದೆ ಬೈಕು ನಿಂತಿತು. ಪುರೋಹಿತರು ಅವರನ್ನು ನೋಡಿ ಮಂಗಳಾರತಿ ತಟ್ಟೆ ಅಣಿಮಾಡಿಕೊಂಡರು. ಆದರೆ ಗೋಪಾಲಾಚಾರಿ ಛಂಗನೆ ಇಳಿದು ನವಗ್ರಹದ ಕಡೆಗೆ ನಡೆದರು. ಗರ್ಭಗುಡಿಯ ಕಡೆ ತಿರುಗಿಯೂ ನೋಡಲಿಲ್ಲ. ನವಗ್ರಹದ ಹತ್ತಿರ ಬಂದಾಗ ಕೆಲವು ಭಿನ್ನವಾದ ದೇವರ ವಿಗ್ರಹಗಳು, ಹಳೇ ದೇವರ ಫೋಟೋಗಳು ಇದ್ದುವು. ಅವನ್ನೆಲ್ಲಾ ಒಂದೊಂದಾಗಿ ತೆಗೆದು ನೋಡೋಕೆ ಶುರು ಮಾಡಿದಾಗ ಅರ್ಚಕರು, ‘ಏನ್ ಹುಡುಕ್ತಿದ್ದೀರಿ ಆಚಾರ್ರೆ? ಫೋಟೋ ಗಾಜು ಒಡೆದಿದೆ, ಕೈಗೆ ಚುಚ್ಚಿಬಿಡುತ್ತೆ ಹುಷಾರು’ ಅನ್ನುತ್ತಾ ಬಂದರು. ‘ನನ್ನ ಮಗ ನಮ್ಮ ಅಂಗಡಿಯಲ್ಲಿದ್ದ ಮಹಾಲಕ್ಷ್ಮೀಯ ಫೋಟೋವನ್ನು ಇಲ್ಲಿ ತಂದಿಟ್ಟಿದ್ನಂತೆ, ಹುಡುಕ್ತಿದ್ದೀನಿ’ ಎನ್ನುತ್ತಾ ತನ್ನ ದೇವತೆಯ ಮಹಿಮೆಯನ್ನೂ ವಿವರಿಸಿದಾಗ, ಅರ್ಚಕರು ‘ಓ ಕೆಲುವೊಂದನ್ನು ನೆನ್ನೆಯಷ್ಟೇ ಯಾರೋ ತಗೊಂಡುಹೋದರು. ಯೋಚ್ನೆ ಮಾಡ್ಬೇಡಿ, ಕೇಳಿನೋಡ್ತೀನಿ’ ಎಂದು ಸಮಾಧಾನ ನುಡಿದದ್ದು ನಿಜ. ಆದರೆ ಮಂಗಳಾರತಿ ತಗೊಂಡು ತಟ್ಟೆಗೆ ದಕ್ಷಿಣೆ ಹಾಕದೆ ಹೊರಟ ಗೋಪಾಲಾಚಾರಿಗೆ ಸಹಾಯ ಮಾಡುವ ಮನಸ್ಸು ಅವರಿಗೆ ಎಲ್ಲಿಂದ ಬರಬೇಕು?

ಊರೆಲ್ಲಾ ಹುಡುಕಿದರೂ ಫೋಟೋ ಸಿಗದೇಹೋದಾಗ ಗೋಪಾಲಾಚಾರಿ ಕಾಲೆಳೆದುಕೊಂಡು ಮನೆಗೆ ವಾಪಸ್ಸಾದರು. ಅಂದಿನ ಘಟನೆಯಿಂದ ಅವರ ಮನಸ್ಸು ವ್ಯಾಕುಲವಾಯಿತು. ಮನೆಯಲ್ಲಿ, ಅಂಗಡಿಯಲ್ಲಿ ಏನೇ ಸಣ್ಣಪುಟ್ಟ ತೊಂದರೆಯಾದರೂ ಅದಕ್ಕೆ ಮಹಾಲಕ್ಷ್ಮಿಯನ್ನು ದೂಡಿದುದ್ದೇ ಕಾರಣ ಅನ್ನುತಿದ್ದರು, ಎಲ್ಲರ ಮೇಲೂ ಸಿಡಿಮಿಡಿಗೊಳ್ಳುತ್ತಿದ್ದರು. ಮನಃಶಾಂತಿಯಂತೂ ಸಂಪೂರ್ಣವಾಗಿ ಕಳೆದುಹೋಗಿತ್ತು. ಸಿಕ್ಕಸಿಕ್ಕವರ ಮುಂದೆ ಮಗನನ್ನು ಬೈಯ್ಯುತ್ತಿದ್ದರು. ಅದೊಂದು ದಿನವಂತೂ ಬೆಳಗ್ಗೆ ಪೂಜೆ ಮಾಡುವಾಗ ಗೋಪಾಲಾಚಾರಿ ಕಳೆದುಹೋದ ಪಟವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು.

ಹುಚ್ಚನಂತೆ ಊರು ತುಂಬ ದೇವರನ್ನು ಹುಡುಕಲು ಶುರುಮಾಡಿದ ಅಪ್ಪನ ಪರಿಸ್ಥಿತಿಯನ್ನು ನೋಡಲಾಗದೇ ಮಗ ಪತ್ರಿಕೆಯಲ್ಲಿ ದೇವರ ಫೋಟೋವನ್ನು ಹುಡುಕಲು ಜಾಹೀರಾತು ಕೊಟ್ಟ. ಅದನ್ನು ನೋಡಿದವರು ನಕ್ಕು ಸುಮ್ಮನಾದರು, ಇನ್ನೂ ಕೆಲವರು ಜಾಹೀರಾತಿನ ಫೋಟೋ ತೆಗೆದು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದರು, ಬಿಟ್ಟರೆ ಇನ್ನೇನೂ ಪ್ರಯೋಜನವಾಗಲಿಲ್ಲ. ‘ಅಪ್ಪ. ನನ್ನ ಕ್ಷಮಿಸಿ. ನಿಮ್ಗೆ ಬೇಜಾರ್ ಮಾಡ್ಬೇಕು ಅಂತ ನಾನು ಫೋಟೋನ ಆಚೆ ಇಟ್ಟುಬರ್ಲಿಲ್ಲ..’ ಆ ಫೋಟೋ ವಿಷಯದಲ್ಲಿ ತಂದೆ ಇಷ್ಟೊಂದು ಭಾವುಕನಾಗುತ್ತಾನೆಂದು ಅರಿವಿಲ್ಲದೇ ತೆಗೆದುಕೊಂಡ ನಿರ್ಧಾರದ ಬಗ್ಗೆ ನಿಜವಾಗಿಯೂ ನೊಂದುಕೊಂಡು ಸೀನು ಅಪ್ಪನ ಕ್ಷಮೆಯಾಚಿಸಿದ. ಗೋಪಾಲಾಚಾರಿ ಮಾತ್ರ ಕಣ್ಣುಮಿಟಿಸದೇ ಕೂತಿದ್ದರು.

‘ಪುಟ್ಟಿ ಜಾಣ ಮರಿ ಅಲ್ವಾ? ಬಾ ನಿನಗೊಂದು ಕತೆ ಹೇಳ್ತೀನಿ’. ಗೋಪಲಾಚಾರಿಯ ಸೊಸೆ ಮಗಳನ್ನು ಓಲೈಸಿ ಕರೆದುಕೊಂಡು ಬಂದು ಮಾವನಿಗೆ ಕಾಣೋ ಹಾಗೆ ಕೂರಿಸಿಕೊಂಡು ಕತೆ ಹೇಳಲು ಶುರುಮಾಡಿದಳು. ವ್ಯಾಸರಾಯರು ಒಂದು ದಿನ ಕನಕದಾಸರು ಸೇರಿದಂತೆ ಇತರೆ ಶಿಷ್ಯರಿಗೆ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಯಾರೂ ನೋಡದ ಹಾಗೆ ತಿನ್ನಬೇಕು ಅಂದಾಗ ಎಲ್ಲರೂ ಬಚ್ಚಿಟ್ಟುಕೊಂಡು ತಿಂದು ಬಂದರೆ ಬಾಲ ಕನಕ ಮಾತ್ರ ತಿಂದಿರಲಿಲ್ಲ. ಯಾಕೆ ಅಂತ ಗುರುಗಳು ಕೇಳಿದ್ದಕ್ಕೆ, ಯಾರು ನೋಡದಿದ್ದರೂ ದೇವರು ನಮ್ಮನ್ನು ನೋಡುತ್ತಿರುತ್ತಾರೆ ಅಂದನಂತೆ ಕನಕ. ಅಂದರೆ, ದೇವರು ಎಲ್ಲಾ ಕಡೆ ಇದ್ದಾನೆ, ಅವನು ಸರ್ವಾಂತರ್ಯಾಮಿ.. ಅಂತ ವಿವರಿಸುತ್ತಿರುವಾಗ ಗೋಪಾಲಾಚಾರಿ ಹೆಗಲಮೇಲಿದ್ದ ಶಲ್ಯವನ್ನು ಕೊಡವಿ ‘ನೀನು ನನಗೆ ಬುದ್ದಿಹೇಳೋದಕ್ಕೆ ಇಷ್ಟು ಕಷ್ಟಪಟ್ಟು ಮಗಳಿಗೆ ಕತೆ ಹೇಳೋ ನಾಟಕ ಮಾಡ್ಬೇಕಿಲ್ಲ. ನಿನ್ ಕೈಲಾದ್ರೆ ಆ ನನ್ ತಾಯಿ ಫೋಟೋವನ್ನು ಹುಡುಕಿಕೊಡು’ ಅಂತ ಗುಡುಗಿ ಹೊರಟುಬಿಟ್ಟನು. ಮನೆಯವರೆಲ್ಲಾ ಪ್ರಯತ್ನ ಪಟ್ಟರೂ ಗೋಪಾಲಾಚಾರಿಯನ್ನು ಸುಧಾರಿಸುವುದು ಕಷ್ಟವಾಯಿತು.

ಇನ್ನೊಂದು ದಿನ ಸೀನು ಅಂಗಡಿಯಿಂದ ಮನೆಗೆ ಬಂದಾಗ ಹೆಂಡತಿ ಸಪ್ಪಗಿರೋದನ್ನು ಗಮನಿಸಿ ಏನಾಯ್ತು ಎಂದು ವಿಚಾರಿಸಿದ. ಮಾವನೋರ ಬಗ್ಗೆ ಯಾಕೆ ಚಾಡಿ ಹೇಳಬೇಕು ಅಂತ ಆಕೆ ಬಾಯಿ ಬಿಡಲಿಲ್ಲ. ಅಷ್ಟ್ರಲ್ಲಿ ಅಮ್ಮನೇ ಮಾತು ಶುರುಮಾಡಿದಳು. ‘ಮನೆ ಒಳಗೆಲ್ಲಾ ಜೀರಳೆಗಳು, ಚೇಳು ಹೆಚ್ಚಾಗಿವೆ. ಏನಾದ್ರು ಮಾಡ್ಬೇಕು ಅಂತ ನಾವಿಬ್ರೂ ಮಾತಾಡಿಕೊಳ್ಳುತ್ತಿದ್ದೆವು. ಅದಕ್ಕೆ ನಿಮ್ಮಪ್ಪ ದುರುಗುಟ್ಟಿಕೊಂಡು ನಿನ್ ಗಂಡ ದೇವರಿಗೆ ಮಾಡಿರೋ ಅಪಚಾರದಿಂದ ಹೀಗೆ ಆಗ್ತಿರೋದು. ಮೊದ್ಲು ಯಾವತ್ತಾದ್ರೂ ಹೀಗಾಗಿತ್ತಾ ಹೇಳು? ಅಂತ ನಿನ್ ಹೆಂಡತಿ ಮೇಲೇ ಕೂಗಾಡಿಬಿಟ್ಟರು. ನಿಮ್ಮಪ್ಪನ ಭಕ್ತಿಯೂ ಸಾಕು, ಈ ಕೂಗಾಟವೂ ಸಾಕು’ ಅಂದರು. ಅಪ್ಪನ ತರ್ಕಗಳು, ಒಂದಕ್ಕೊಂದು ಸಂಬಂಧಕಟ್ಟಿಕೊಂಡು ಮನೆಯ ನೆಮ್ಮದಿ ಹಾಳುಮಾಡುವ ವಾದಗಳನ್ನು ನೋಡಿ ನೋಡಿ ಸೀನುಗೂ ರೋಸಿಹೋಯಿತು. ಇದಕ್ಕೊಂದು ಕೊನೆಗಾಣಿಸಬೇಕೆಂದುಕೊಂಡ.

‘ಅಪ್ಪಾ ಇಲ್ ನೋಡು, ಯಾರ್ ಬಂದಿದ್ದಾರೆ’. ಮಗ ಮನೆಯಾಚೆ ನಿಂತುಕೊಂಡು ಕೂಗಿದ. ಗೋಪಾಲ ಕುತೂಹಲದಿಂದ ಕಣ್ಣು ಸಣ್ಣಗೆ ಮಾಡಿಕೊಂಡು ಯಾರಿರಬಹುದೆಂದು ನೋಡಿದಾಗ ಮಗನ ಕೈಲಿ ಮಹಾಲಕ್ಷ್ಮೀ ಫೋಟೋ ಇದ್ದಿತು. ‘ಅಂತೂ ನಿನ್ ತಾಯಿ ಸಿಕ್ಕಿಬಿಟ್ಟಳು. ಅರ್ಚಕರಿಗೆ ಹೇಳಿದ್ದೆ ಹುಡುಕಿಸಿಕೊಟ್ಟರು’ ಗೋಪಾಲಾಚಾರಿ ಆಶ್ಚರ್ಯ ಖುಷಿಗಳಿಂದ ಓಡಿಬಂದು ಫೋಟೋವನ್ನು ಕೈಗೆತ್ತಿಕೊಂಡರು. ಮೂವತ್ತು ವರ್ಷಗಳಿಂದ ಕಾಪಾಡಿದ ತಾಯಿ ವಾಪಸ್ ಮನೆಗೆ ಬಂದಳು ಅಂತ ಇನ್ನು ಮುಂದೆ ಅಪ್ಪ ನೆಮ್ಮದಿಯಿಂದಿರುತ್ತಾರೆ ಅಂತ ಸೀನು ಸಮಾಧಾನವಾಗುವಷ್ಟರಲ್ಲಿ ಗೋಪಾಲಾಚಾರಿ, ‘ಏನೋ ನನ್ನನ್ನ ಮೂರ್ಖನನ್ನಾಗಿ ಮಾಡ್ಬೇಕು ಅಂತಿದ್ದೀಯಾ? ಇದು ನನ್ನ ಮನೆಯಲ್ಲಿದ್ದದ್ದಲ್ಲ. ಎಲ್ಲಿಂದಲೋ ಬೇರೆಯಾವುದನ್ನೋ ತಂದುಕೊಡೋದಕ್ಕೆ ನೀನೇ ಬೇಕಾ?’. ಶ್ರೀನಿವಾಸ ಇದೇ ಆ ಫೋಟೋ, ಹೊಸದೇನಲ್ಲ ಅಂತ ಮನವರಿಕೆ ಮಾಡೋಕೆ ಪ್ರಯತ್ನಪಟ್ಟ. ‘ಬುದ್ಧಿ ಉಪಯೋಗಿಸಿ ಹಳೇಫೋಟೋವನ್ನೇನೋ ತಂದಿದ್ದೀಯ ಆದ್ರೆ ಇದು ನನ್ನದಲ್ಲ’. ಹೇಗ್ ಹೇಳ್ತೀಯ ಅಂತ ಕೇಳಿದ್ದಕ್ಕೆ ನಮ್ಮ ಫೋಟೋದ ಹಿಂದೆ ನಾನು ತಪ್ಪು ಕಾಣಿಕೆ ಅಂತ ಇಟ್ಟಿದ್ದ ದುಡ್ಡು ಮತ್ತು ಡೇಟ್ ಗಳನ್ನು ಬರೆದಿದ್ದೆ. ಮೇಲಿಂದ ಮೇಲೆ ದೇವರ ವಿಷ್ಯಯದಲ್ಲಿ ನೀನು ಅಪಚಾರ ಮಾಡ್ತಾನೇ ಇದ್ದೀಯ. ನಿನಗೆ ಒಳ್ಳೇದಾಗಲ್ಲ ನೋಡು’. ಮತ್ತೆ ಗೋಪಾಲಾಚಾರಿ ಕೂಗಾಡಿದ. ಮಗನಿಗೆ ಸಿಟ್ಟು ರೇಗಿಹೋಯಿತು. ಸಮಾಧಾನ ತಂದುಕೊಂಡು ತನ್ನ ಅಭಿಪ್ರಾಯವನ್ನು ಮಂಡಿಸಿದ.

ನೀನು ಪೂಜೆ ಮಾಡುತ್ತಿದ್ದ ದೇವರ ಶಕ್ತಿ ಬರೀ ಆ ಫೋಟೋದಲ್ಲಿ ಮಾತ್ರವೇ ಇರೋದಾ? ನಿನಗೆ ಮಾತ್ರವೇ ದೇವರಿರೋದಾ? ದೇವರ ಶಕ್ತಿಯನ್ನು ಒಂದು ಫೋಟೋ ಫ಼್ರೇಮ್ ಒಳಗೆ ಯಾಕೆ ಕಟ್ಟುಹಾಕಿದ್ದೀಯಪ್ಪಾ? ನೀನು ಆಡೋದನ್ನ ನೋಡಿದ್ರ ನಿನಗೆ ದೇವರ ಮೇಲಿದ್ದುದು ಭಕ್ತಿ ಅಂತ ನನಗನಿಸುತ್ತಿಲ್ಲ. ಅದು ಭಕ್ತಿಯೋ? ಭಯವೋ? ಅವಲಂಬನೆಯೋ? ನೀನೇ ಪ್ರಶ್ನೆ ಕೇಳಿಕೋ. ನಾವು ಶ್ರಮ ಪಟ್ಟು ದುಡಿದರೆ ದೇವರು ಒಲಿದೇ ಒಲಿಯುತ್ತಾನೆ. ನನ್ನ ಫೋಟೋವನ್ನು ಮನೆಯಿಂದ ಆಚೆ ಇಟ್ಟರು ಅನ್ನೋ ಸಣ್ಣ ಕಾರಣಕ್ಕೆ ನಿನ್ನನ್ನು ದೂರ ತಳ್ಳುವಷ್ಟು ಸಣ್ಣ ಬುದ್ಧಿಯಿದ್ದರೆ ಅವನು ದೇವರೇ ಅಲ್ಲ. ದೇವರಿಗೆ ಬೇಧ ಭಾವಗಳಿಲ್ಲ, ಯಾವ ಅಪೇಕ್ಷೆಯೂ ಇಲ್ಲ. ನಾವು ನಮ್ಮ ಸಮಾಧಾನ ಸಂತೋಷಗಳಿಗಾಗಿ ಪೂಜೆ, ಅಲಂಕಾರ, ನೈವೇದ್ಯೆಗಳನ್ನು ಮಾಡಿಕೊಳ್ಳುತ್ತೇವಷ್ಟೇ! ಸೀನು ತನಗೆ ತಿಳಿದಷ್ಟನ್ನು ವಿವರವಾಗಿ ಹೇಳಿ, ‘ನಾನ್ ಹೇಳಿದ್ದು ಸುಳ್ಳಾದರೆ ನಿನ್ನನ್ನು ನೀನೇ ಪ್ರಶ್ನೆ ಮಾಡಿಕೋ’ ಎಂದು ಹೇಳಿ ಹೋದ.

ದಿನಗಳುರುಳಿದರೂ ಗೋಪಾಲಾಚಾರಿಗೆ ಮಗನ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಲೇ ಇತ್ತು. ಒಂದು ದಿನ ಬೇಸರವಾಗಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ರವಚನ ನಡೆಯುತ್ತಿತ್ತು. ‘ಭಕ್ತಿಗಳಲ್ಲಿ ನವವಿಧಾನಗಳಿವೆ. ಒಬ್ಬೊಬ್ಬರದೂ ಒಂದೊಂದು ಥರಹದ ಭಕ್ತಿ. ನವವಿಧ ಭಕುತಿಗಳು ಯಾವುವು ಅಂದರೇ, ಶ್ರವಣ, ಕೀರ್ತನ, ಸ್ಮರಣ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆ. ಉದಾಹರಣೆಗೆ ಯಶೋದೆ ಭಗವಂತನನ್ನು ಮಗುವಾಗಿ ಕಂಡಳು, ಮೀರಾ ತನ್ನ ಪತಿಯಾಗಿ ಕಂಡಳು, ಶರಣರು ವಚನಗಳಲ್ಲಿ ಹಾಡಿದರು. ಹೀಗೇ ಭಗವಂತನನ್ನು ಕಾಣಲು ನಾನಾ ವಿಧ’ ಎಂದು ದೃಷ್ಟಾಂತ ಸಮೇತ ವಿವರಿಸುತ್ತಿದ್ದರು. ಗೋಪಾಲಾಚಾರಿ ಅಂತರ್ಮುಖಿಯಾಗಿ ಕುಳಿತ.

ಹೌದು. ನನ್ನದು ಯಾವ ವಿಧದ ಭಕ್ತಿ? ತಪ್ಪು ಮಾಡಿದಾಗ ತಪ್ಪು ಕಾಣಿಕೆ ಹಾಕಿ ಮನಸ್ಸಿಗೆ ಸಮಾಧಾನ ಪಡೆದುಕೊಳ್ಳುತ್ತಿದ್ದೆ, ಯಾರಿಗಾದರೂ ನೋವು ಮಾಡಿದ್ದರೆ ಪೋಟೋ ಮುಂದೆ ಕ್ಷಮೆ ಕೇಳುತ್ತಿದ್ದೆ, ನನಗೆ ಬದುಕಿನಲ್ಲಿ ಹಣ ಕೊಡು, ಯಶಸ್ಸು ಕೊಡು ಅಂತ ಬೇಡುತ್ತಿದ್ದೆ. ದೇವರನ್ನು ನನ್ನ ಪಾಪಪ್ರಜ್ಞೆಗಳನ್ನು ಕಮ್ಮಿಮಾಡಿಕೊಳ್ಳುವ ಸಾಧನವಾಗಿ, ನನ್ನ ಲೌಕಿಕ ವಿಷಯಗಳಿಗಾಗಿ ಮಾತ್ರ ಮೀಸಲಿಟ್ಟಿದ್ದೆ. ಈಗ ಫೋಟೋ ಕಾಣದೇ ಇದ್ದಾಗಲೂ ನಾನು ಪರಿತಪಿಸುತ್ತಿದ್ದದ್ದು ನನಗೆ ಏನಾದರೂ ತೊಂದರೆಯಾಗಬಹುದೆಂಬ ಭಯದಿಂದಲೇ ವಿನಹ ಭಕ್ತಿಯಿಂದಲ್ಲ ಅಂತ ಅರಿವಾಯಿತು. ಹಾಗಾದರೆ ಭಕ್ತಿ ಎಂದರೇನು? ನಾನು ಇಷ್ಟು ದಿನ ಭಕ್ತನಾಗಿರಲಿಲ್ಲವೇ? ನನ್ನೊಳಗೆ ಭಕ್ತಿಯೇ ಇರಲಿಲ್ಲವೇ ಅನ್ನೋ ಗೊಂದಲ ಕಾಡಿತು.

ಶೂನ್ಯದಲ್ಲಿ ದೃಷ್ಟಿ ನೆಟ್ಟು ಯೋಚಿಸುತ್ತಿದ್ದವನಿಗೆ ಮನುಷ್ಯ ಮತ್ತು ದೇವರ ಸಂಬಂಧವನ್ನು ತಾನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡಿದ್ದೆ ಅನ್ನೋ ಉತ್ತರ ಸಿಕ್ಕಿತು. ತಕ್ಷಣವೇ ದೇವರನ್ನು ಕಾಣೋ ಮಾರ್ಗವನ್ನು ಹುಡುಕುವ ಹಂಬಲ ಹುಟ್ಟಿತು. ಪ್ರವಚನಕಾರರ ಹತ್ತಿರ ಹೋಗಿ ‘ಭಕ್ತಿ ಎಂದರೇನು? ನಾನು ದೇವರನ್ನು ನಿಜವಾಗಿ ಕಾಣೋದು ಹೇಗೆ?’ ಎಂದು ದೇವರನ್ನು ಹುಡುಕುತ್ತಿದ್ದ ವಿವೇಕಾನಂದರು ತಮ್ಮ ಗುರುಗಳಾದ ಪರಮಹಂಸರನ್ನು ಕೇಳಿದ ಹಾಗೆ ಗೋಪಾಲಾಚಾರಿ ಪ್ರವಚನಕಾರರನ್ನು ಕೇಳಿದರು. ಸತ್ಯವನ್ನರಿಯುವ ಚಡಪಡಿಕೆಯನ್ನು ಅವರ ಕಣ್ಣುಗಳಲ್ಲಿ ಕಂಡ ಪ್ರವಚನಾಕಾರರು ‘ಈ ಸಲ ನೀವು ದೇವರನ್ನು ರಸ್ತೆಯಲ್ಲಿ ಹುಡುಕಬೇಡಿ, ಅಂತರಂಗದಲ್ಲಿ ಹುಡುಕಿ ಸಿಗುತ್ತಾರೆ’ ಎಂದು ಹೇಳಿ ಮುಗುಳ್ನಕ್ಕರು.

‍ಲೇಖಕರು Admin

August 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Likhitha T A

    ಬಹಳ ಅದ್ಭುತ ಕಲ್ಪನೆ… ವಾಸ್ತವಿಕ ಸತ್ಯ ಇದು…ಕೊನೆಯ ಸಾಲು ಅದ್ಭುತ… “ದೇವರನ್ನು ರಸ್ತೆಯಲ್ಲಿ ಹುಡುಕಬೇಡ ಅಂತರಂಗದಲ್ಲಿ ಹುಡುಕು” ತುಂಬಾ ಚೆನ್ನಾಗಿದೆ ಸಾಲುಗಳು….

    ಪ್ರತಿಕ್ರಿಯೆ
  2. Trupti hangargi

    ಧನ್ಯವಾದಗಳು ಮಿಸ್ ರಂಜನಿ ರಾಘವನ್, ತುಂಬಾ ಅರ್ಥಪೂರ್ಣವಾಗಿತ್ತು ನಿಮ್ ಕಥೆ, ಓದುತ್ತ ಓದುತ್ತ ಕಥೆ ಯಾವಾಗ ಮುಗಿತು ಅಂತ ನೆ ಗೊತಾಗಲ್ಲಿಲಾ. ದೇವರ ಬಗ್ಗೆ ಇದ್ದ ನಿಜವಾದ ಭಕ್ತಿ ನ ಅರ್ಥ ಮಾಡಿಸ್ಬಿತ್ರೀ. ನನ್ನ ಕನ್ನಡ ದಲ್ಲಿ ಏನಾದರು ತಪ್ಪಾಗಿದರೆ ಕ್ಷಮಿಸಿ.

    ಪ್ರತಿಕ್ರಿಯೆ
    • ಮಲ್ಲಯ್ಯ ಸ್ವಾಮಿ

      ಭಕ್ತಿ ಭಕ್ತನ ಮೂಲವನ್ನೆ ಈ ಕಥೆಯ ಮೂಲಕ ಅದ್ಭುತವಾಗಿ ಕಟ್ಟಿದ್ದಿರಾ.
      ರೇಷ್ಮೆ ಬಟ್ಟೆ ನೇಯುವಾಗೆ, ತೊಟ್ಟವರು ಆನಂದವಾಗುವಾಗೆ, ನೋಡಿದವರು ಇಷ್ಟ ♥ ಪಡುವಾಗೆ.

      ಕಲ್ಪನೆಯಲ್ಲಿ ವಾಸ್ತವಿಕತೆಯ ಪ್ರತಿಬಿಂಬ

      ♥️♥️♥️ ನಿಮ್ಮ ಕಥೆಯು ಇಷ್ಟ ♥ ನೀವು ಇಷ್ಟ ♥

      ಪ್ರತಿಕ್ರಿಯೆ
      • Shrishail

        ದೈವಿಕ ಶಕ್ತಿ ಹಾಗೂ ಜನರ ನಡುವೆ ಎಂತಹ ಸಂಬಂಧ ಇರಬೇಕೆಂದು ಚೆನ್ನಾಗಿ ಕಲ್ಪಿಸಿ ಕೊಟ್ಟಿದ್ದೀರಿ..
        ನಿಮ್ಮ ಬರವಣಿಗೆಯ ಬದುಕಿಗೆ ನನ್ನ ಅಭಿನಂದನೆಗಳು.

        ಪ್ರತಿಕ್ರಿಯೆ
  3. Anu

    Nivu bhaktiyannu nimma antarangadalli arithidirre. Nimage yashassu siguttade ranjani Akka.

    ಪ್ರತಿಕ್ರಿಯೆ
  4. poorvikakr

    Superb story very interesting. Nanig nijvaglu nabhokakthilla niv esht chanag Kathe bharithira antha . Nimige Kathe bhariyo a avyasa eg bhanthu ,niv yavaginda Kathe bharithidhira ,one story complete madoke esht days beku nimige ? Nan question ge answer madthira antha bhavsthini . Thank you good luck

    ಪ್ರತಿಕ್ರಿಯೆ
    • ಮಧುಸೂದನ.ಸಿ.ಜಿ

      ನನ್ನ ವೈಯಕ್ತಿಕ ಬದುಕಿನಲ್ಲಿ ನಾನು ಹಲವು ಬಾರಿ ಆಡಿದ ಮಾತುಗಳು, ನಿಮ್ಮ ಅಂಕಣದಲ್ಲಿ…

      ಸೀನು ನಾನಾಗಿ, ಗೋಪಾಲಾಚಾರಿ ನನ್ನ ತಂದೆಯಾಗಿ, ನಿಮ್ಮ ಕಥೆಯ ಪಾತ್ರಗಳೇ , ನನ್ನ ವೈಯಕ್ತಿಕ ಜೀವನಾನುಭವದ ಮೇಲೆ ಬೆಳಕು ಚೆಲ್ಲಿವೆ.

      ಹಳೆಯ ಘಟಿತಗಳನ್ನ ಮೆಲಕು ಹಾಕುತ್ತಾ…

      ಧನ್ಯವಾದಗಳು.
      ಜಿ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: