ದರ್ಶನ್ ಜಯಣ್ಣ ಸರಣಿ – ಅಪ್ಪನ ಜನತಾ ದರ್ಶನ

ದರ್ಶನ್ ಜಯಣ್ಣ

8

ಅಪ್ಪ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುತ್ತಿರಲಿಲ್ಲ. ಜೊತೆಗೆ ಸ್ನಾನ ಮಾಡಿ ದೇವರ ಪೂಜೆ ಮುಗಿಯದ ಹೊರತು ನೀರು ಅಥವಾ ಒಂದು ಲೋಟ ಕಾಫಿ ಬಿಟ್ಟು ಬೇರೇನನ್ನು ಮುಟ್ಟುತಿರಲಿಲ್ಲ. ಇದಕ್ಕೇ ಒಂದೇ ಒಂದು ಅಪವಾದವೆಂದರೆ ಕ್ಯಾತ್ಸಂದ್ರದ ಅವರ ತಂಗಿಯ ಮನೆಗೆ ಹೋದಾಗ ಅವರ ಹೋಟೆಲ್ಲಿನ ತಟ್ಟೆ ಇಡ್ಲಿ- ವಡೆ, ಮಸಾಲೆ ದೋಸೆಯನ್ನ ಮಾತ್ರ ನಿರಾಕರಿಸುತ್ತಿರಲಿಲ್ಲ. 

ಅಮ್ಮ ಏನಾದರೂ ಬಲವಂತ ಮಾಡಿ (ಅದೂ ಸಕ್ಕರೆ ಖಾಯಿಲೆ ಖಾತ್ರಿಯಾದಮೇಲೆ) ತಿನ್ನಲು ಹೇಳಿದರೆ ‘ನನಗೆ ಕೆಲಸ ಮುಖ್ಯ, ಅದು ಮುಗಿಯದ ಹೊರತು ನನ್ನನ್ನು ಪೀಡಿಸಬೇಡ, ತಿನ್ನದಿದ್ದರೆ ಏನೂ ಸಾಯಲ್ಲ!’ ಎಂದು ಡ್ರಾಮ್ಯಾಟಿಕ್ ಉಡಾಫೆ ಹೊಡೆದು ಬಾಯಿ ಮುಚ್ಚಿಸುವುದು ರೂಢಿಯಾಗಿತ್ತು. ಆದರೂ ಅಮ್ಮ ಬಲವಂತ ಮಾಡುತ್ತಿದ್ದಕ್ಕೆ ಎರಡು ಕಾರಣಗಳಿತ್ತು. ಒಂದು ಅವರಿಗಿದ್ದ ಸಕ್ಕರೆ ಖಾಯಿಲೆ ಎರಡು ಮನೆಯ ಹೊರಗೆ ಅಪ್ಪನನ್ನು ಭೇಟಿಮಾಡಲು ಬಂದ ಜನ. 

ಹೌದು, ಅಪ್ಪನಿಗೆ ಆಯುರ್ವೇದ ತಿಳಿದಿದ್ದರಿಂದ ಮತ್ತು ಒಂದು ಮಟ್ಟಿಗೆ ಔಷದಿಗಳನ್ನು ಮಾಡಿಕೊಡುತ್ತಾ ಮನೆಮದ್ದನೂ ಹೇಳಿಕೊಡುತ್ತಿದ್ದುದರಿಂದ ತುಮಕೂರಿನ ಅಲ್ಲದೆ ಅಕ್ಕಪಕ್ಕದ ಹಳ್ಳಿಗಳಿಂದ ಅವರನ್ನು ಭೇಟಿಮಾಡಲು ಜನ ಪ್ರತಿದಿನ ಬರುತ್ತಿದ್ದರು. ಬಂದವರು ಮನೆಯ ಮುಂದಿನ ಜಗುಲಿ, ಅಲ್ಲಿ ಇಲ್ಲಿ ಕಾಯುತ್ತಾ ಕುಳಿತುಬಿಡುತ್ತಿದ್ದರು. ನಮ್ಮ ಸಂಜೆಯ ವ್ಯಾಪಾರ, ಗ್ರಂಥಿಗೆ ಅಂಗಡಿ ಎಲ್ಲಾ ಚೆನ್ನಾಗಿ ನಡೆಯುತ್ತಿದ್ದುದರಿಂದ ಅಪ್ಪನ ಈ ‘ ಜನತಾ ದರ್ಶನ ‘ ಸೇವೆಯ ದೃಷ್ಟಿಯಿಂದ ಮಾತ್ರ ನಡೆಯುತ್ತಿತ್ತು. 

ಅಪ್ಪ ಸರಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಆಯುರ್ವೇದ ಔಷದಿಗಳನ್ನು ಮಾಡಿಕೊಟ್ಟಿರಬಹುದು. ಅವರನ್ನು ಹುಡುಕಿಕೊಂಡು ಬರುವವರು ಹೆಚೆಚ್ಚು ಹಳ್ಳಿಗಾಡಿನವರೇ ಆಗಿರತ್ತಿದ್ದರು. ಪಟ್ಟಣದವರು ಮತ್ತು ಅಫೀಷಿಯಲ್ ಗಳು ಬಂದರೆ ಅವರು ಸುಮಾರು ಕಡೆ ತಿರುಗಿ ಎಲ್ಲೂ ತಮ್ಮ ಸಮಸ್ಯೆಗೆ ನಿವಾರಣೆ ಸಿಗದಿದ್ದುದರಿಂದ ಇಲ್ಲಿಯೂ ಪ್ರಯತ್ನ ಪಡೋಣವೆಂದು ಬರುತ್ತಿದ್ದುದು ಸಾಮಾನ್ಯವಾಗಿತ್ತು. 

ಹಳ್ಳಿಗಾಡಿನ ಜನ ವಾತ, ಪಿತ್ತ, ಕೆಮ್ಮು, ದಮ್ಮು, ಖಫಾ, ಗ್ಯಾಸು, ಅಜೀರ್ಣ, ತಲೆನೋವು ಮುಂತಾದ ಸಣ್ಣ ಪುಟ್ಟ ಸಮಸ್ಯೆಗಳಿಗೆ ಹಾಗೆಯೇ ಸಕ್ಕರೆ ಖಾಯಿಲೆ, ಮೈ ಕೈ ನೋವು, ಹಳೇ ನೋವು, ಚರ್ಮ ಖಾಯಿಲೆ, ಅಲರ್ಜಿಗಳಿಗೆ ಇಂಗ್ಲಿಷ್ ಮೆಡಿಸಿನ್ನ ಕಡೆಗೆ ಹೋಗುವುದು ಇಷ್ಟವಿಲ್ಲದುದ್ದರಿಂದ ಅಪ್ಪನ ಬಳಿಗೆ ಬರುತ್ತಿದ್ದದ್ದು ವಾಡಿಕೆ. ಇನ್ನೂ ಕೆಲವು ಕಾರಣಗಳೆಂದರೆ ಆಯುರ್ವೇದದಲ್ಲಿರದ ಅಡ್ಡಪರಿಣಾಮಗಳು,ಅಪ್ಪನ ಮೇಲಿನ ನಂಬಿಕೆ ಮತ್ತು ಸಲೀಸಾಗಿ ಅವರೊಂದಿಗೆ ಮಾತಿಗಿಳಿಯಬಹುದೆಂಬ ವಿಶ್ವಾಸ. 

ಅಪ್ಪ ಮೂಲಿಕೆಗಳಿಗೆ ಖರ್ಚಾಗುತ್ತಿದ್ದ ಹಣವನ್ನು ಮಾತ್ರ ಪಡೆಯುತ್ತಿದ್ದರು. ಮಾತಾಡಿಸುತ್ತಿದ್ದದಕ್ಕೆ, ಮನೆ ಮದ್ದು ಹೇಳಿದ್ದಕ್ಕೆ ಅಥವಾ ಮನೆಯಲ್ಲೇ ತಯಾರಿಸುವ ಬಗೆಯನ್ನು ಅದಕ್ಕೆ ಬೇಕಾದ ಮೂಲಿಕೆಗಳನ್ನು ವಿವರಿಸಿದ್ದಕ್ಕೆ ಹಣ ಎಂದೂ ಪಡೆಯುತ್ತಿರಲಿಲ್ಲ. ಹಲವು ಬಾರಿ ಮೂಲಿಕೆಗಳ ಖರ್ಚನ್ನೂ ಖಾಯಿಲೆ ಗುಣವಾದ ಮೇಲೆ ಕೊಡಿ ಎನ್ನುತ್ತಿದ್ದರು. ಕಡೆಯ ವರ್ಷಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಗುಣವಾದರೆ ನಿಮ್ಮ ನಿಮ್ಮ ದೇವರ ಹುಂಡಿಗೆ ನಿಮಗೆ ಇಷ್ಟ ಬಂದಷ್ಟು ಹಾಕಿಬಿಡಿ ಅನ್ನುತ್ತಿದ್ದರು. ಇದರಿಂದ ಅಪ್ಪನಬಳಿ ಹೆಚೆಚ್ಚು ಹಳ್ಳಿಗಾಡಿನ ಜನ ಬರುತ್ತಿದ್ದರೆ ಪಟ್ಟಣದ ಜನ ಕಡಿಮೆಯಾಗತೊಡಗಿದರು! 

ಆಗೆಲ್ಲಾ ಅಪ್ಪ ಹೇಳುತ್ತಿದ್ದದು ‘ನೋಡು ಇವರಿಗೆಲ್ಲ ಗಿಲೀಟ್ ಮಾಡಿ ಮಾತನಾಡಿ, ಒಳ್ಳೊಳ್ಳೆ ಪ್ಯಾಕೇಜಿನಲ್ಲಿ ಔಷದಿ ತುಂಬಿ, ಚೆನ್ನಾಗಿ ಚಾರ್ಜ್ ಮಾಡಿದರೆ ದುಂಬಾಲು ಬೀಳ್ತಾರೆ. ಅದರ ಬದಲು ಮನೆಯ ಪಥ್ಯ ಹೇಳಿ, ಅವರೇ ಔಷಧಿ ಮಾಡಿಕೊಳ್ಳುವ ವಿಧಾನ ಹೇಳಿ ಗುಣವಾದರೆ ಧರ್ಮಸ್ಥಳಕ್ಕೋ ಮತ್ತೆಲ್ಲಿಗೋ ಹಣ ಕಳಿಸಿಬಿಡಿ ಎಂದರೆ ನನ್ನನ್ನೇ ಅನುಮಾನಿಸಿ ಬರುವುದನ್ನೇ ಬಿಟ್ಟು ಬಿಡ್ತಾರೆ! ಏನು ಮಾಡೋದು ಪ್ರಪಂಚನೇ ಹಂಗಾಗಿದೆ. ಜನ ಮರುಳೋ ಜಾತ್ರೆ ಮರುಳೋ… ಹಿತ್ತಲ ಗಿಡ ಮದ್ದಲ್ಲ!’

ಇದೇ ಕಾರಣಕ್ಕೆ ಅಪ್ಪನಿಗೆ ನಮ್ಮ ವಿದ್ಯಾವಂತ ಜನಗಳು ಆಯುರ್ವೇದದ ಬಗ್ಗೆ ಇರಿಸಿಕೊಂಡಿದ್ದ ನೂರಾರು ಅನುಮಾನಗಳು, ಅಪನಂಬಿಕೆಗಳು, ಅಸಡ್ಡೆ, ತಾತ್ಸಾರಗಳು ನೋವುಂಟುಮಾಡುತ್ತಿದ್ದವು. ಇದಕ್ಕೆ ಅರ್ಧಬರ್ದ ತಿಳಿದು ಏನೇನನ್ನೋ ಬಡಬಡಿಸುವ ಪಂಡಿತರೂ ಕಾರಣವೆಂದೂ ತಿಳಿದಿತ್ತು. 

ಇದನ್ನು ಕೊಂಚಮಟ್ಟಿಗೆ ಪರಿಹರಿಸಲೆಂದೇ ಅವರು ಹಲವು ಹಳೆಯ ಪುಸ್ತಕಗಳನ್ನು ತರಿಸಿಕೊಂಡು ಅದರಲ್ಲೂ ಸುಲಭವಾಗಿ ಸಿಕ್ಕುವ ಮತ್ತು ಕೆಲವು ದಿನಬಳಕೆಯ ಪದಾರ್ಥಗಳಾದ ತುಳಸಿ, ಮೆಣಸು,ಬೇವು,ಜೀರಿಗೆ, ಶುಂಠಿ, ಮೆಂತ್ಯ, ಜೇನುತುಪ್ಪ, ಬಜೆ ಹಾಗೆಯೇ ಆಯುರ್ವೇದ ಮೂಲಿಕೆಗಳಾದ ಅಳಲೇಕಾಯಿ, ಜಾಕಾಯಿ, ಮಾಕಾಯಿ, ಅಮೃತಬಳ್ಳಿ, ಬೆಟ್ಟದನೆಲ್ಲಿ ಚೆಟ್ಟು, ಲಾವಂಚ, ಸೊಗದೆ ಬೇರು, ನನ್ನಾರಿ, ಗುಲಾಬಿ, ರಕ್ತಗೊಳ, ಅತ್ತಿ (ಔದುಂಬರ), ಉತ್ತರಾಣಿ ಮುಂತಾದವುಗಳ ಬಗ್ಗೆ ಓದಿಕೊಂಡು ಅದರ ಟಿಪ್ಪಣಿ ಕೂಡ ಮಾಡಿ, ಸಾವಿರಾರು ಪಾಂಪ್ಲೆಟ್ಗಳನ್ನು ಹೊಡೆಸಿ ಅಂಗಡಿಗೆ ಮತ್ತು ಮನೆಗೆ ಬಂದವರಿಗೆಲ್ಲ ಹಂಚುತ್ತಿದ್ದರು. 

ನನಗೆ ನೆನಪಿರುವಂತೆ ತುಮಕೂರಿನಲ್ಲಿ 2001 ರಲ್ಲಿ ನಡೆದ 69 ನೆಯ ಸಾಹಿತ್ಯ ಸಮ್ಮೇಳನದಲ್ಲಿ ಅಪ್ಪನ ಜೊತೆಗೂಡಿ ನಾನೂ ಸಾವಿರಾರು ಇಂತಹ ಪಾಂಪ್ಲೆಟ್ ಗಳನ್ನು ಹಂಚಿದ್ದೆ! ಆಗೆಲ್ಲಾ ನಮ್ಮ ಸುತ್ತ ಮುತ್ತಲಿನ ಜನರು ಅಪ್ಪನನ್ನು alien (ಅನ್ಯ ಗ್ರಹ ಜೀವಿ) ಯಂತೆ ನೋಡುತ್ತಿದ್ದರು. ಈತನಿಗೆ ಪ್ರಚಾರದ ಹುಚ್ಚು ಎಂದು ಎಷ್ಟೋ ಜನ ಅಪ್ಪನ ಮುಂದೆಯೇ ಹೇಳಿದ್ದಿದೆ. ಅಪ್ಪ ಅದಾವುದಕ್ಕೂ ಸೊಪ್ಪು (ಮೂಲಿಕೆ ಅಂತ ಓದಿಕೊಳ್ಳಿ!) ಹಾಕದೆ ತಮ್ಮ ಕಾಯಕ ತಾವು ಮಾಡುತ್ತಿದ್ದರು. 

ಅಪ್ಪನನ್ನು ಭೇಟಿ ಮಾಡುತ್ತಿದ್ದ ಜನ ಅವರ ಖಾಯಿಲೆಯ ಬಗ್ಗೆ, ತಲ್ಲಣಗಳ ಬಗ್ಗೆ, ಹಳ್ಳಿ ಜೀವನದ ಬಗ್ಗೆ, ಮಳೆ ಬೆಳೆಯ ಬಗ್ಗೆ, ಕೂಲಿ ಕರ್ಮಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದರು. ಹೀಗೆ ನನ್ನ ರಜಾದಿನಗಳು ಕಥೆ ಕೇಳುವ ಪಿರಿಯಡ್ಗಳಾಗಿ ಮಾರುಪಾಡಾಗುತ್ತತಿತ್ತು. ಅಪ್ಪ ದುಡ್ಡು ತೆಗೆದುಕೊಳ್ಳರೆಂದು ತಿಳಿದಿದ್ದ ಸ್ವಾಭಿಮಾನಿ ಹಳ್ಳಿ ಜನ ಬೆಣ್ಣೆ, ತರಕಾರಿ, ಗೆಡ್ಡೆ, ಹಣ್ಣುಗಳು, ಕಡಲೆಕಾಯಿ ಇತ್ಯಾದಿಗಳನ್ನು ಇಟ್ಟು ಹೋಗುತ್ತಿದ್ದರು. ನಾನು ಅಲ್ಲಲ್ಲಿ ನೀರು ಪಾರು ಕೊಡಲು ಸುಳಿದ್ದಾಡುತ್ತಿದ್ದಾಗ ನನಗೂ ಹರಸಿ ಹೋಗುತ್ತಿದ್ದರು. 

ಇದಕ್ಕೆ ವಿರುದ್ಧವಾಗಿ ಕೆಲವು ಸೊಕಾಲ್ಡ್ ಅಫೀಷಿಯಲ್ ಜನಗಳು ಅಪ್ಪನ ವಿದ್ಯಾಭ್ಯಾಸದ ಬಗ್ಗೆ, ಆಯುರ್ವೇದದ ಪ್ರಾಕ್ಟೀಸ್ ಮಾಡಲಿಕ್ಕೆ ಸರ್ಟಿಫಿಕೇಟ್ ಬೇಡವೋ? ಲೈಸನ್ಸ್ ಬೇಡವೋ ಎಂದೆಲ್ಲ ಕಿಚಾಯಿಸುತ್ತಿದ್ದರು. ಅದನ್ನು ಎಂದೂ ಮನಸ್ಸಿಗೆ ತೆಗೆದುಕೊಳ್ಳದ ಅಪ್ಪ ‘ನಾನು ಕ್ಯಾನ್ಸರ್, ಹೃದಯ , ಕಿಡ್ನಿ ಸಂಬಂಧಿ ಖಾಯಿಲೆಗಳನ್ನು ಗುಣಪಡಿಸಲ್ಲ ಸ್ವಾಮಿ. ನಂದೇನಿದ್ದರೂ ವಾತ, ಪಿತ್ತ, ಕೆಮ್ಮು, ಖಫಾ, ಹಳೇನೋವು ಗೀವು ಅಷ್ಟೇ. ಅದಕ್ಕೂ ಲೈಸನ್ಸ್ ಬೇಕಾ?’ ಎಂದು ನಗುನಗುತ್ತಲೇ ಹೇಳುತ್ತಿದ್ದರು. ಕೆಲವೊಮ್ಮೆ ಇಂಥವರನ್ನು ಬಾಯಿ ಮುಚ್ಚಿಸಲು ನಾನು ಏನೋ ಹೇಳಲು ಹೋಗಿ ಅಪ್ಪನಿಂದ ಬೈಸಿಕೊಳ್ಳುತ್ತಿದ್ದೆ. ಅಷ್ಟರ ಮಟ್ಟಿಗೆ ಅಪ್ಪ ಪ್ರೊಫೆಷನಲ್ ಆಗಿದ್ದರು! 

ಒಂದು ಸ್ವಾರಸ್ಯದ ಸಂಗತಿಯೆಂದರೆ ಅಪ್ಪ,  ಅವರನ್ನು ಭೇಟಿ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುವುದನ್ನು ನೋಡಿ, ಎಲ್ಲರೊಟ್ಟಿಗೂ ಸರಿಯಾಗಿ ಮಾತನಾಡಲಾಗದೆ ತಮ್ಮ ಕುರ್ಚಿಯ ಹಿಂದೆ,  ಮುಂದೆ ಕೂತವರಿಗೆ ಸ್ಪಷ್ಟವಾಗಿ ಕಾಣುವಹಾಗೆ ‘ದಯವಿಟ್ಟು ಅಗತ್ಯವಿದ್ದಷ್ಟೇ ಮಾತನಾಡಿ’ ಎಂದು ಬೋರ್ಡ್ ಒಂದನ್ನು ಹಾಕಿದ್ದರು.ಆದರೆ ಒಮ್ಮೆ ಮಾತಿನೊಳಹೊಕ್ಕರೆ ಎದುರಿಗೆ ಇದ್ದವರಿಗಿಂತಾ ಇವರೇ ಹೆಚ್ಚು ಮಾತನಾಡುತ್ತಿದ್ದರಿಂದ ಅಮ್ಮ ಆಗಾಗ ‘ಆ ಬೋರ್ಡ್ನ ನಿಮ್ಮ ಮುಂದೆ ಹಾಕಿಕೊಳ್ಳಿ ಹಿಂದೆ ಹಾಕಿ ಪ್ರಯೋಜನವಿಲ್ಲಾ!’ ಎನ್ನುತ್ತಿದ್ದೂದುಂಟು.

| ಇನ್ನು ನಾಳೆಗೆ |

‍ಲೇಖಕರು Admin

August 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: