ಪಿ ಚಂದ್ರಿಕಾ ಅಂಕಣ- ಚಂದ್ರಹಾಸರ ಮುಖದಲ್ಲಿ ತುಳುಕಿದ ನಗೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

9

ನಾವು ಮುಕ್ಕಚೇರಿಯನ್ನು ತಲುಪುವಾಗ ಆರು ಗಂಟೆ ದಾಟಿತ್ತು. ಸೂರ್ಯ ಆತುರಾತುರದಲ್ಲಿ ಸಮುದ್ರದ ಒಳಗೆ ಹೋಗಲು ಸಿದ್ಧವಾಗುತ್ತಿದ್ದ. ನಾವು ಗುರುತಿಸಿದ್ದ ಪಾತುಮ್ಮಳ ಮನೆಯ ಮೇಲೆ ಸೂರ್ಯನ ಕಡುಕೆಂಪು ಬಣ್ಣದ ಕಿರಣಗಳು ಬಿದ್ದು ಬಂಡೆಯ ನೆರಳಿನ ಜೊತೆ ಆಟವಾಡುತ್ತಾ ವಿಚಿತ್ರ ಆದರೆ ಸಮ್ಮೋಹಕ ವಾತಾವರಣ ಸೃಷ್ಟಿಯಾಗುತ್ತಿತ್ತು.

ನಾನು ಮೊರದಲ್ಲಿ ಅಕ್ಕಿ ಹಾಕಿಕೊಂಡು ಕೇರುತ್ತಿದ್ದ ಹಸೀನಮ್ಮನಿಗೆ ನಮ್ಮ ಹೀರೋ ಬಂದರಾ?'ಕೇಳಿದೆ. ಉಷ್’ ಎಂದು ತುಟಿಯ ಮೇಲೆ ಬೆರಳಿಟ್ಟು ಕೈತೋರಿದಳು. ಅವಳು ಕೈ ತೋರಿದ ಕಡೆಗೆ ನೋಡಿದರೆ ನಮ್ಮ ಕಣ್ಣೊಳಗಿನ ಎಲ್ಲ ಚಿತ್ರಗಳು ಪಟ್ಟೆಂದು ಒಡೆದು, ನಮ್ಮ ಅರಿವನ್ನೂ ಮೀರಿ ನಗು ಉಕ್ಕಿ ಬಂತು. ಈ ವ್ಯಕ್ತಿಗೇನಾ ನಾವು ಹೀಗೆ ಹುಡುಕಾಟ ನಡೆಸಿದ್ದು ಎಂದು ಅನ್ನಿಸಿಬಿಟ್ಟಿತು.

ಕಡುಗಪ್ಪು ಮೈಬಣ್ಣ. ಸೊಣಕಲು ಕೈಕಾಲು, ತುಸುವೇ ಉಬ್ಬಿದಂತಿದ್ದ ಹೊಟ್ಟೆ. ತುಟಿಗಳನ್ನು ಮೀರಿ ತುಸುವೇ ಹೊರಚಾಚಿದ ಹಲ್ಲುಗಳು. ದೇಹದ ಹಾಗೆ ಮುಖವೂ ಒಣಗಿಬಿಟ್ಟಿತ್ತು. ಚಂದ್ರಹಾಸರು ಅವರ ಜೊತೆ ಬ್ಯಾರಿ ಭಾಷೆಯಲ್ಲಿ ಮಾತಿಗಿಳಿದರು.

ನಾವೆಲ್ಲ ಅವರು ಏನು ಹೇಳಬಹುದು? ಎಂದು ಕಾತುರದಿಂದ ಕಾಯುತ್ತಿದ್ದೆವು. ಅವರ ಮುಖದಲ್ಲಿ ತುಸು ಸಂತೋಷ, ತುಸು ದೈನ್ಯ ಧಾರಾಳವಾಗಿ ತಾಂಡವವಾಡುತ್ತಿತ್ತು. ನಮಗೋ ಬ್ಯಾರಿ ಸರಿಯಾಗಿ ಬಾರದು. ಕಾರಣ ಚಂದ್ರಹಾಸರು ಏನು ಹೇಳುತ್ತಾರೆ ಎಂದು ಕಾಯುತ್ತಿದ್ದೆವು. ಅವರ ಜೊತೆಗಿನ ಮಾತುಕತೆಯ ಕೊನೆಯಲ್ಲಿ ಚಂದ್ರಹಾಸರ ಮುಖದಲ್ಲಿ ತುಳುಕಿದ ನಗೆಯಿಂದಲೇ ನಮಗೆ ಅರ್ಧ ಗೊತ್ತಾಗಿತ್ತು.

ಚಂದ್ರಹಾಸರು ಅತ್ಯಂತ ಉತ್ಸಾಹದಿಂದ ಇವರಿಗೆ ಯಾವ ಅಭ್ಯಂತರವೂ ಇಲ್ಲವಂತೆ. ನಾವು ಶೂಟಿಂಗ್ ಮಾಡಿಕೊಳ್ಳಬಹುದು' ಎಂದರು. ನಮಗೂ ಖುಷಿಯಾಯಿತು. ಇಷ್ಟು ಸುಲಭಕ್ಕೆ ಈ ಮನುಷ್ಯ ನಮ್ಮನ್ನು ದಡ ಸೇರಿಸಿಬಿಟ್ಟರಲ್ಲ ಎಂದು.ಆದರೆ ಅವರು ಒಂದಿಷ್ಟು ಹಣ ಬಯಸುತ್ತಿದ್ದಾನೆ’ ಎಂದೂ ಜೊತೆಗೆ ಸೇರಿಸಿದರು ಚಂದ್ರಹಾಸ.

ಹಣ ತಾನೇ ಕೊಟ್ಟರಾಯಿತು'ಎಂಬುದು ನಮ್ಮ ಧೋರಣೆ. ಆದರೆ ಅವರು ನಮ್ಮ ಕಡೆಯಿಂದ ಲಕ್ಷಗಟ್ಟಲೆ ಹಣವನ್ನು ಬಯಸಿದ್ದರು. ಅವರ ಬೇಡಿಕೆ ನ್ಯಾಯುತವೇ ಇರಬಹುದು. ಆದರೆ ನಮಗೆ ಕೊಡಲಿಕ್ಕೆ ಆಗಬೇಕಲ್ಲ? ಅವರಿಗೆ ಆ ಮನೆ ರಿಪೇರಿ ಆಗಬೇಕಿತ್ತು. ಅದಕ್ಕಾಗಿ ದೊಡ್ಡ ಮೊತ್ತಕ್ಕೆ ಅವರ ಬೇಡಿಕೆ.

ನಮ್ಮದು ವ್ಯಾಪಾರಿ ಚಿತ್ರವಲ್ಲ ಎಂದು ಅವರಿಗೆ ತಿಳಿಯ ಹೇಳಬೇಕಿತ್ತು. ಆದರೆ ಅವರ ಮನೆಯ ಪಕ್ಕದವರು ಇವರ ತಲೆಗೆ ಏನೆಲ್ಲಾ ತುಂಬಿರಬಹುದು ಎಂದು ಯೋಚಿಸಿ ಅರೆ ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ನಮ್ಮ ಬಜೆಟ್‌ನ ಮುಖ್ಯ ಭಾಗವನ್ನು ನಾವು ಇವರಿಗೆ ಕೊಡಬೇಕಾಗುತ್ತದೆ’ ಎಂದುಕೊಂಡು ನಾನು ಮಾತಾಡಲು ಮುಂದಾದೆ.

ನೋಡಿ ಜಕ್ಕು ಅವರೇ…' ಎಂದು ನನ್ನ ಮಾತನ್ನು ಶುರು ಮಾಡುತ್ತಿದ್ದಂತೆ. ಕೋಪಗೊಂಡ ಅವರು ನಿಮಗ್ಯಾರು ಈ ಹೆಸರನ್ನು ಹೇಳಿದ್ದು?’ ಎಂದೆಲ್ಲಾ ರೇಗಾಡಲಿಕ್ಕೆ ಶುರು ಮಾಡಿದರು. ನಾನು ಅಸಹಾಯಕಳಾಗಿ ಹಸೀನಮ್ಮನ ಕಡೆಗೆ ನೋಡಿದೆ. ಹಸೀನಮ್ಮ ತನ್ನ ಕಡೆ ನೋಡಬೇಡವೆಂದು ಸನ್ನೆ ಮಾಡಿದಳಾದರೂ ಅಷ್ಟು ಹೊತ್ತಿಗೆ ನಮ್ಮ ಈ ಎಲ್ಲ ಭಾವ ವಿನಿಮಯಗಳನ್ನೂ ಅವರು ನೋಡಿಬಿಟ್ಟಿದ್ದರು.

ಹಸೀನಮ್ಮ ಅವನ ಮುಖ ತಪ್ಪಿಸಿ ಹರವಿದ್ದ ಬಟ್ಟೆಗಳನ್ನು ತೆಗೆಯತೊಡಗಿದಳು. ಅವಳೊಂದಿಗೆ ದೊಡ್ದ ಜಗಳವನ್ನು ತೆಗೆದುಬಿಟ್ಟ. ಹಸೀನಮ್ಮ ಏನು ಮಾಡಲಿ ಕಾಕ ಊರ ತುಂಬಾ ಮಹಮದರೇ, ನಿನಗೆ ಅಂತ ಗುರುತು ಹೇಗೆ ಹೇಳುವುದು’ ಎಂದು ಅಂಗಲಾಚತೊಡಗಿದಳು. ಅದಕ್ಕೆ ನನ್ನೆ ಜಕ್ಕು ಎನ್ನುವುದಾ ನೀನು?’ ಎಂದು ಕೋಪಾವಿಷ್ಟಗೊಂಡು ಕೂಗತೊಡಗಿದರು. ಹಸೀನಮ್ಮನ ಸಹಾಯಕ್ಕೆ ಯಾರೂ ಬರಲಿಲ್ಲ. ಕಿಟಕಿ ಪರದೆಗಳ ಹಿಂದೆ ಕಂಡ ಮುಖಗಳು ತುಸುವೇ ನಗುವಿನಿಂದ ತೆರೆಮರೆಗೆ ಜಾರಿದವು.

ಹಸೀನಮ್ಮ ಊರವರೆಲ್ಲಾ ನಿನ್ನ ಹಾಗೆ ಕರೀಬಹುದು ಗುರುತಿಗಾಗಿ ನಾನು ಹಾಗೆ ಕರೆದರೆ ತಪ್ಪಾ?’ ಎಂದು ಮಾತಿಗೆ ಮಾತು ಸೇರಿಸುವಾಗ ನೀ ಸುಮ್ಮನೆ ಇರಡಿ. ನಾನು ಹತ್ತು ವರ್ಷ ಸಣ್ಣವನಿರಬೇಕಿತ್ತು, ಆಗ ನಿನಗೆ ಹೇಳುತ್ತಿದ್ದೆ ನಾನು ಏನೂಂತ. ವಯಸ್ಸಾಯಿತು ಸುಮ್ಮನಿದ್ದೇನೆ’ ಎಂದು ರೇಗಾಡಿ ಅಲ್ಲಿಂದ ತನ್ನ ಸೈಕಲ್ ತೆಗೆದುಕೊಂಡು ಹೊರಟರು. ಮರಳಲ್ಲಿ ಹೂತುಹೋಗುತ್ತಿದ್ದ ಆ ಸೈಕಲ್‌ನ್ನು ತಳ್ಳಲಾಗದೆ ತಳ್ಳುತ್ತಾ ಹೋಗುತ್ತಿದ್ದರೆ, ನಾವೆಲ್ಲಾ ಮನೆಯನ್ನು ಅವರು ಕೊಡದೆ ಹೋದರೆ ಎಂದು ಕಂಗಾಲಾದೆವು.

ಚಂದ್ರಹಾಸರಂತೂ ಅವರ ಹಿಂದೆ ನಿಲ್ಲು' ಎಂದು ಕೂಗುತ್ತಾ ಹೋದರು. ಅವರು ಸ್ವಲ್ಪ ದೂರ ಹೊರಟಿಲ್ಲ ಆಗಲೇ ಹಸೀನಮ್ಮ ಕಿಸಕ್ಕೆಂದು ನಕ್ಕು ನೀನೂ ಜಕ್ಕು, ನಿನ್ನ ಸೈಕಲ್ಲೂ ಜಕ್ಕು’ ಎಂದಳು. ಪ್ರಯಾಸದಿಂದ ವಾಪಾಸು ಬಂದ ಚಂದ್ರಹಾಸರು ಮಾತ್ರ ನನ್ನನ್ನು ತರಾಟೆಗೆ ತೆಗೆದುಕೊಂಡರು ನೀವು ಹಾಗೆ ಯಾಕೆ ಹೇಳಿದ್ದು’ ಎಂದು.ಅರೆ ನಾನು ತಪ್ಪು ಮಾಡುತ್ತಿದ್ದೇನೆಂದು ಗೊತ್ತಾಗಲಿಲ್ಲ. ನನಗೆ ಜಕ್ಕು ಪದದ ಅರ್ಥ ಗೊತ್ತಿಲ್ಲ’ ಎಂದೆ. ಜಕ್ಕು ಎಂದರೆ ಪಂಚರ್ ಆಗಿರೋದು ಅಂತ. ಆತ ನಿಮ್ಮ ಮಾತಿಂದ ಹರ್ಟ್ ಆಗಿದ್ದಾನೆ, ಆದರೆ ನಾನು ಹೇಗೋ ಮಾಡಿ ಒಪ್ಪಿಸಿದ್ದೇನೆ. ನೀನು ಕೇಳಿದಷ್ಟು ಹಣ ಕೊಡಲಿಕ್ಕಾಗಲ್ಲ, ಆದರೆ ಅನ್ಯಾಯ ಮಾಡಲ್ಲ’ ಎಂದಿರುವೆ. ಇಂಥಾದ್ದೊಂದು ಎಪಿಸೋಡ್ ಆಗಬಹುದೆಂದು ನಾವು ಊಹೆ ಕೂಡಾ ಮಾಡಿರದ ಕಾರಣ ದಂಗಾಗಿಬಿಟ್ಟಿದ್ದೆವು.

ಚಂಚಲಾ ನನ್ನನ್ನು ಸಮಾಧಾನ ಮಾಡಲಿಕ್ಕೆ ನೋಡಿದರೆ, ಪಂಚಾಕ್ಷರಿಗೆ ಇದರಿಂದ ಏನು ತೊಂದರೆ ಆಗುತ್ತದೋ ಎನ್ನುವ ಆತಂಕ. ಹಸೀನಮ್ಮಚಿಂತೆ ಮಾಡಬೇಡಿ. ಕಾಕಾನ ಬಡತನ, ಮಕ್ಕಳ ವಿದ್ಯಾಭ್ಯಾಸ. ಸತ್ತ ಹೆಂಡತಿಯ ಅನಾರೋಗ್ಯಕ್ಕಾಗಿ ಖರ್ಚು ಮಾಡಿದ ಹಣ, ಎಲ್ಲದರ ಲೆಕ್ಕ ಹೇಳುತ್ತಾ ಬಂದೇ ಬರುತ್ತಾನೆ’ ಎಂದಳು. ಅವಳ ಮಾತಿನಲ್ಲಿ ಸ್ವಲ್ಪ ನೋವೂ ಇನ್ನಷ್ಟು ವಾಸ್ತವವೂ ಇತ್ತು. ಹಣದ ವಿಷಯದಲ್ಲಿ ಇವರನ್ನು ಹೇಗಪ್ಪಾ ಸಂಬಾಳಿಸುವುದು ಎನ್ನುವುದು ನಮಗೆಲ್ಲರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: