ಕೆ ನಲ್ಲತಂಬಿ ಅನುವಾದ ಸರಣಿ- ಅಶೋಕನ ಆಜ್ಞೆ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

19

ರಸ್ತೆಯ ಬದಿಗಳಲ್ಲಿ ಅಶೋಕ ಮರಗಳನ್ನು ನೆಟ್ಟನು. ಕಳಿಂಗ ಯುದ್ಧದನಂತರ ಬುದ್ಧ ಮತವನ್ನು ಅಪ್ಪಿಕೊಂಡನು. ಸಾಮಾನ್ಯವಾದ ಧರ್ಮ ಸಿದ್ಧಾಂತಗಳನ್ನು ಕಲ್ಲಿನಲ್ಲಿ ಕೆತ್ತಿದನು ಎಂಬ ಸಾಮಾನ್ಯ ಮಾಹಿತಿಗಳನ್ನು ದಾಟಿ, ಅಶೋಕನ ಕಾರ್ಯಗಳೂ ಅದರ ಹಿಂದೆ ಇರುವ ಅಕ್ಕರೆಗಳು ಚರಿತ್ರೆಯ ಪಠ್ಯ ಪುಸ್ತಕಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯಲೇ ಇಲ್ಲ. 

ಅಶೋಕನನ್ನು ಯಾಕೆ ಇಂದು ತಿಳಿದುಕೊಳ್ಳಬೇಕು? ಇತಿಹಾಸ ಎಂದರೆ ಗತ ಕಾಲವಲ್ಲವೇ? ಅದನ್ನು ನಾವೇಕೆ ಅರಿತುಕೊಳ್ಳಬೇಕು? ಎಂಬ ಪ್ರಶ್ನೆ ಸಹಜವಾಗಿ ಅನೇಕರಿಗೆ ಇದೆ. ಇತಿಹಾಸ ಎಂಬುದು ಗತ ಕಾಲವಲ್ಲ. ಅದು, ವರ್ತಮಾನ ಕಾಲವನ್ನು ನಿರ್ಣಯಿಸುವ ಪ್ರೇರಣೆ. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಭವಿಷ್ಯತ್ತನ್ನು ತೀರ್ಮಾನಿಸುವ ಪರೋಕ್ಷ ಶಕ್ತಿ. 

ಒಂದು ಸರಳವಾದ ನಿರ್ವಹಣೆಯ ಸೂತ್ರವನ್ನು ಆ ಕಾಲದಲ್ಲೇ ಅಶೋಕ ಪರಿಚಯಿಸಿದ್ದನು. ಸರಕಾರದ ಆಜ್ಞೆಗಳು, ಸಾರ್ವಜನಿಕ ಕಲ್ಯಾಣ ಕುರಿತ ಸೂಚನೆಗಳು ಎಲ್ಲವೂ ಪ್ರಜೆಗಳ ಗಮನಕ್ಕೆ ಬರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಲ್ಲಿನಲ್ಲಿ ಶಾಸನಗಳಾಗಿ ಕೆತ್ತಿದ್ದನು. ಸರಕಾರದ ಆಜ್ಞೆಗಳನ್ನು ಸಂಬಂಧಪಟ್ಟ ಅಧಿಕಾರಿ ಕಾರ್ಯ ರೂಪಕ್ಕೆ ತರಲು ತಪ್ಪಿದರೆ ಪ್ರಜೆಗಳು ದೂರು ಕೊಡಬಹುದು.

ಸರಕಾರಿ ಯೋಜನೆಗಳು ಪ್ರಜೆಗಳಿಗೆ ತಲುಪಲು, ಪ್ರಜೆಗಳು ಅದರ ಬಗ್ಗೆ ಸ್ಪಷ್ಟವಾಗಿ ಅರಿತು ಕೊಳ್ಳಬೇಕಾಗಿರುವುದು ಬಹಳ ಅಗತ್ಯ. ಆದ್ದರಿಂದ  ಶಾಸನಗಳ ಮೂಲಕ ಪ್ರಜೆಗಳು ಈ ಆಜ್ಞೆಗಳನ್ನು ದಿನವೂ ಓದುತ್ತಾರೆ, ಅದನ್ನು ಪಾಲಿಸುತ್ತಾರೆ. ಅಕಸ್ಮಾತ್ ಇದರಲ್ಲಿ ಏನಾದರೂ ಗೊಂದಲಗಳು ಉಂಟಾದರೆ, ಸರಕಾರದ ಗಮನಕ್ಕೆ ಅದನ್ನು ತೆಗೆದುಕೊಂಡು ಹೋಗುತ್ತಾರೆ ಎಂಬ ನೇರವಾದ ನಿರ್ವಹಣೆಯ ಪದ್ಧತಿಯನ್ನು ಅಶೋಕ ಜಾರಿಗೆ ತಂದಿದ್ದ. 

ಕಿ.ಪೂ. 262ರಲ್ಲಿ ಪ್ರಕಟವಾದ ಅವನ ಶಿಲಾಶಾಸನಗಳಲ್ಲಿ ಒಂದನ್ನು ನೋಡಿ. ಅದರ ಪ್ರಾಮುಖ್ಯತೆ ಇಂದಿಗೂ ಪ್ರಸ್ತುತವಾಗಿದೆ ಎಂಬುದನ್ನು ನೀವು ಅರಿತುಕೊಳ್ಳುವಿರಿ. 

ದೇವರಿಗೆ ಪ್ರೀತಿಯಾದ ರಾಜ ಪ್ರಿಯದರ್ಶಿ ಹೀಗೆ ಹೇಳುತ್ತಾನೆ; ಇದಕ್ಕೆ ಮೊದಲು ಸರಕಾರಿ ಕಾರ್ಯಗಳನ್ನು ಸರಿಯಾಗಿ ಗಮನಿಸಲಾಗದ, ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಪಡೆಯಲಾಗದ ಸ್ಥಿತಿ ಇತ್ತು.  ಆದ್ದರಿಂದ ಈ ಹೊಸ ಆಜ್ಞೆ ಪ್ರಕಟವಾಗುತ್ತಿದೆ. ಸಾಮ್ರಾಟನಾದ ನಾನು ಯಾವ ಸಮಯದಲ್ಲೂ, ಆಹಾರ ಸೇವಿಸುತ್ತಿದ್ದರೂ, ಅಂತಃಪುರದಲ್ಲಿದ್ದರೂ, ಮಲಗುವ ಕೋಣೆಯಲ್ಲಿ ಶಯನಿಸುತ್ತಿದ್ದರೂ, ತೇರಿನಲ್ಲಿ ಪ್ರಯಾಣ ಮಾಡುತ್ತಿದ್ದರೂ, ಪಲ್ಲಕ್ಕಿಯಲ್ಲಿ ಇದ್ದರೂ, ಮನರಂಜನೆಗಾಗಿ ಉಧ್ಯಾನವನದಲ್ಲಿದ್ದರೂ, ಬೇರೆ ಯಾವ ಸ್ಥಳದಲ್ಲಿ ಹೇಗೆ ಇದ್ದರೂ ಸರಕಾರಿ ಸಿಬ್ಬಂದಿಗಳ ಮೂಲಕ ಪ್ರಜೆಗಳ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಗಳು ತಕ್ಷಣ ನನಗೆ ಕಳುಹಿಸಿಕೊಡಬೇಕು. ಅದರ ಮೂಲಕವೇ ಪ್ರಜೆಗಳ ಸಮಸ್ಯೆಗಳನ್ನು ನನ್ನಿಂದ ತಕ್ಷಣ ಗಮನಿಸಲು ಸಾಧ್ಯ.

ಧಾನ, ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಸಂಬಂಧಪಟ್ಟ ನನ್ನ ಬಾಯಿ ಮಾತುಗಳನ್ನು ಪ್ರಕಟಿಸಿದ ಆಜ್ಞೆಗಳನ್ನು ಅಥವಾ ಮಂತ್ರಿಗಳಿಗೆ ಬಂದು ತಲುಪುವ ಅವಸರ ಸೂಚನೆಗಳಿಗೆ ಸಂಬಂಧಿಸಿದಂತೆ ಯಾರಿಗಾದರೂ ಏನಾದರೂ ಭಿನ್ನಾಭಿಪ್ರಾಯ ಉಂಟಾದರೆ, ಅದಕ್ಕೆ ಸಂಬಂಧಪಟ್ಟ ಮಾಹಿತಿಗಳು ತಕ್ಷಣ ರಾಜನಾದ ನನ್ನ ಬಳಿ ಬಂದು ಸೇರಬೇಕು. ಇದು ನನ್ನ ಆಜ್ಞೆ. ಕೆಲಸವನ್ನು ಗಮನದಿಂದ ಮಾಡುವುದಕ್ಕೂ ಅದಕ್ಕಾಗಿ ಕಟುವಾಗಿ ದುಡಿಯುವುದಕ್ಕೂ ನಾನೆಂದೂ ಹಿಂಜರಿಯುವುದಿಲ್ಲ.

ಪ್ರಜೆಗಳ ಹಿತವನ್ನು ಕಾಯುವುದೇ ನನ್ನ ಕರ್ತವ್ಯವಾಗಿ ಭಾವಿಸುತ್ತೇನೆ. ಅದನ್ನು ಉತ್ತಮವಾಗಿ ಮಾಡಲು ನಾನು ಕಟುವಾದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆದ್ದರಿಂದ, ಕೆಲಸಗಳನ್ನು ವಿಳಂಬವಿಲ್ಲದೆ ಮುಗಿಸಬೇಕು. ಪ್ರಜೆಗಳ ಒಳಿತಿಗೆ ಪ್ರಾಮುಖ್ಯತೆ ಕೊಡುವುದರ ಹೊರತು ಬೇರೆ ಯಾವ ಕೆಲಸವೂ ಇಲ್ಲ. ಈ ಧರ್ಮದ ಆಜ್ಞೆ ಬಹಳ ಕಾಲ ಉಳಿಯುವುದಕ್ಕಾಗಿಯೂ, ನನ್ನ ಮಕ್ಕಳೂ, ಮೊಮ್ಮಕ್ಕಳೂ ಅದರ ಮುಂದಿನ ಸಂತತಿಗಳೂ ಈ ಆಜ್ಞೆಯಂತೆ  ನಡೆದು, ಜಗತ್ತಿನ ಒಳಿತನ್ನು ಕಾಪಾಡುವುದಕ್ಕೆ ಶಿಲಾಶಾಸನ ಬರೆಯಲಾಗಿದೆ’ – ಈ ರೀತಿಯಾಗಿ ಆ ಶಿಲಾಶಾಸನದಲ್ಲಿ ಬರೆಯಲಾಗಿದೆ. 

ಅಶೋಕನ ಶಿಲಾಶಾಸನಗಳು ಇತಿಹಾಸದ ನೆನಪುಗಳು ಮಾತ್ರವಲ್ಲ. ಅವು, ಒಂದು ಸಮಾಜ ಹಿಂಬಾಲಿಸಬೇಕಾದ ಮೂಲ ಧರ್ಮಗಳು. ಅಶೋಕನನ್ನು ಪವಿತ್ರ ಬಿಂಬವಾಗಿಸಿದ ನಾವು ಅವರ ಧರ್ಮ ಸಿದ್ಧಾಂತಗಳನ್ನು ಹಾಗೆಯೇ ಕೈಬಿಟ್ಟೆವು ಎಂಬುದು ವ್ಯಥೆ ತುಂಬಿದ ಸತ್ಯ. ಜೇಮ್ಸ್ ಪ್ರಿನ್ಸೆಪ್ (James Prinsep) ಕಂಡುಹಿಡಿದು ಹೇಳುವವರೆಗೆ, ಅಶೋಕನ ಶಿಲಾಶಾಸನಗಳು ಭಾರತದ ಇತಿಹಾಸದಲ್ಲಿ ಪ್ರಾಮುಖ್ಯತೆ ಗಳಿಸಲೇ ಇಲ್ಲ. ಸೆಪ್ಟಂಬರ್ 15, 1819ನೇಯ ಇಸವಿ ಕಲ್ಕತ್ತಾದಲ್ಲಿರುವ ನಾಣ್ಯದ ಕಾರ್ಖಾನೆಯಲ್ಲಿ ಕೆಲಸ ಮಾಡಲು ಇಂಗ್ಲೆಂಡಿನಿಂದ ಪ್ರಿನ್ಸೆಪ್ ಬಂದು ತಲುಪಿದಾಗ, ಅವನಿಗೆ ವಯಸ್ಸು 20.

ನಾಣ್ಯಗಳ ತಯಾರಿಕೆಯಲ್ಲಿ ನಿಪುಣನಾದ ಅವನು, ಸಹಾಯಕ ವಿನ್ಯಾಸಕನಾಗಿ ಕೆಲಸ ಮಾಡಿದನು. ಅಲ್ಲಿಂದ ಕಾಶಿಗೆ ವರ್ಗಾವಣೆಯಾದ ಪ್ರಿನ್ಸೆಪ್, ವಾರಣಾಸಿ ನಗರದ ಪುರಾತನ ಸಂಪ್ರದಾಯಗಳಿಗೆ ಮರುಳಾಗಿ, ಅದರ ಬಗ್ಗೆ ವಿಸ್ತಾರವಾದ ಅಧ್ಯಯನ ಮಾಡಲು ತೊಡಗಿದನು. ಪ್ರಿನ್ಸೆಪ್, ಕಾಶಿ ನಗರದ ಜನಗಣನೆಯನ್ನು ಮೊದಮೊದಲು ಮಾಡಿದವನು. ತೇರ್ಗಡೆ ಹೊಂದಿದ ಒಬ್ಬ ಚಿತ್ರ ಕಲಾವಿದನಾದುದರಿಂದ, ಕಾಶಿ ನಗರದ ಪ್ರಮುಖ ಸ್ಥಳಗಳನ್ನು ಶ್ರೇಷ್ಟವಾದ ಚಿತ್ರಗಳಾಗಿಸಿದ್ದಾನೆ. ಅದರೊಂದಿಗೆ, ತ್ಯಾಜ್ಯ ನೀರು ಹರಿದುಹೋಗಲು ಕಾಶಿ ನಗರದಲ್ಲಿರುವ ತಡೆಗಳನ್ನು ಕಂಡು ಅರಿತು ವೈಜ್ಞಾನಿಕವಾಗಿ ತ್ಯಾಜ್ಯ ನೀರಿನ ಕೊಳವೆಗಳನ್ನು ನಿರ್ಮಾಣಿಸಿ ಕೊಟ್ಟವನು.   

ಕಾಶಿಯಲ್ಲಿ ಇದ್ದ ದಿನಗಳು ಸಂಸ್ಕೃತ, ಖಗೋಳ ಶಾಸ್ತ್ರ ಮತ್ತು ರಸವಾದ ಮುಂತಾದುವನ್ನು ಕಲಿತು ತೇರ್ಗಡೆ ಹೊಂದಿದ ಪ್ರಿನ್ಸೆಪ್, ನಾಣ್ಯ ಶಾಸ್ತ್ರದಲ್ಲಿ (Numismatics) ಹೆಚ್ಚಿನ ಆಸಕ್ತಿಯನ್ನೂ ತೋರಿದನು. ಅದಕ್ಕಾಗಿ ಪುರಾತನ ನಾಣ್ಯಗಳನ್ನು ಶೇಕರಿಸಿದನು. ಆಗ, ರಂಜೀತ್ ಸಿಂಗ್ ಎಂಬ ಮಹಾರಾಜರ ದಳಪತಿಯಾಗಿದ್ದ ಫ್ರೆಂಚ್ ಅಧಿಕಾರಿ ಭೂಮಿಯನ್ನು ಅಗೆಯುವಾಗ ದೊರಕಿದ್ದಾಗಿ ತಂದ ನಾಣ್ಯಗಳನ್ನು ಅಧ್ಯಯನ ಮಾಡಿದನು. ಆಗಲೇ, ಅದರಲ್ಲಿರುವ ಅಕ್ಷರಗಳನ್ನು ಓದಿ ತಿಳಿಯಬೇಕೆಂಬ ಆಸೆ ಉಂಟಾಯಿತು. ಅದಕ್ಕಾಗಿ ನಿಘಂಟುಗಳನ್ನು ತಿರುವು ಹಾಕಿದನು.

ಇತಿಹಾಸ ಅಧ್ಯಯನಕಾರರನ್ನು ಬೇಟಿಯಾಗಿ ವಿವರಣೆ ಕೇಳಿ ಅರ್ಥಮಾಡಿಕೊಳ್ಳಲು ಯತ್ನಿಸಿದನು. ಆ ನಡುವೆ ಅವನನ್ನು ಮತ್ತೆ ಕಲ್ಕತ್ತಾಗೆ ವರ್ಗಾವಣೆ ಮಾಡಲಾಯಿತು. ಪ್ರಿನ್ಸೆಪ್, ಇಂಗ್ಲೀಷ್- ಸಂಸ್ಕೃತ ನಿಘಂಟನ್ನು ತಯಾರಿಸುವುದರಲ್ಲಿ ತೊಡಗಿಕೊಂಡನು. ಆ ದಿನಗಳಲ್ಲೇ, ಅವನಿಗೆ ಅಶೋಕನ ಶಿಲಾಶಾಸನದ ಒಂದು ಪ್ರತಿ  ದೊರಕಿತು. ಅದನ್ನು ಹಲವು ದಿನಗಳು ಹೋರಾಡಿ ನಂತರ ಓದಿ ಅರಿತುಕೊಂಡನು. ಅದು ಯಾವ ರಾಜನ ಶಿಲಾಶಾಸನ ಎಂದು ಆಗ ಅವನಿಗೆ ತಿಳಿದಿರಲಿಲ್ಲ. 

ಹಲವು ತಿಂಗಳ ಶ್ರಮಗಳ ನಂತರ, ದೇವನಾಮ್ ಪ್ರಿಯ ಪ್ರಿಯದರ್ಶಿನಿ ಎಂಬ ಹೆಸರನ್ನು ಗುರುತುಹಿಡಿದನು. ಆದರೇ, ಹಾಗೊಬ್ಬ ರಾಜ ಭಾರತವನ್ನು ಆಳಿದ್ದಾಗಿ ಇತಿಹಾಸದ ಟಿಪ್ಪಣಿಗಳಿಂದ ತಿಳಿದುಕೊಳ್ಳಲು ಆಗಲಿಲ್ಲ. ಯಾರು ದೇವನಾಮ್ ಪ್ರಿಯ ಎಂದು ತನ್ನ ಅಧ್ಯಯನವನ್ನು ಮುಂದುವರೆಸಿದನು. ಆಗ ರಾವಲ್ಪಿಂಡಿಯಲ್ಲಿ ಮತ್ತೊಂದು ಶಿಲಾಶಾಸನ ದೊರಕಿತು. ಅದು ಸಾಮ್ರಾಟ್ ಅಶೋಕನದಾಗಿರಬಹುದೆಂಬ ಸಂಶಯ ಪ್ರಿನ್ಸೆಪ್-ಗೆ ಉಂಟಾಯಿತು. ಆ ವಿಷಯವನ್ನು ಮುಂದಿಟ್ಟುಕೊಂಡು, ಮುಂದುವರೆಸಿದ ಆಧ್ಯಯನದ ಅಂತ್ಯದಲ್ಲಿ, ಅದು ಸಾಮ್ರಾಟ್ ಅಶೋಕನ ಶಿಲಾಶಾಸನ ಎಂದು ಖಚಿತವಾಗಿ ತಿಳಿಸಿದನು. ಅದರ ನಂತರವೇ, ಭಾರತ, ನೇಪಾಳ, ಪಾಕಿಸ್ತಾನ್ ಮತ್ತು ಆಫ್ಘಾನಿಸ್ತಾನ್ –ಗಳಲ್ಲಿ ಇರುವುದನ್ನು ಕಂಡುಹಿಡಿಯಲಾಯಿತು. 

ಅಶೋಕನ ಬಹಳ ದೊಡ್ಡ ಯುದ್ಧವಾಗಿ ಹೇಳಲಾಗುವ ಕಳಿಂಗದ ಯುದ್ಧ ನಡೆದ ಧೌಲಿ ಈಗ ಒಡಿಸ್ಸಾದಲ್ಲಿದೆ. ಈ ಧೌಲಿ ದಯಾ ನದಿಯ ತೀರದಲ್ಲಿದೆ. ಅಲ್ಲೇ ಕಳಿಂಗ ಯುದ್ಧ ನಡೆಯಿತು ಎನ್ನುತ್ತಾರೆ. ಇಂದಿನ ಓಡಿಸ್ಸಾ ಅಂದಿನ ಕಳಿಂಗವಾಗಿತ್ತು. ಇಂದಿನ ಬಿಹಾರ್ ಅಂದಿನ ಮಗದವಾಗಿತ್ತು. ಮೌರ್ಯ ಚಕ್ರವರ್ತಿ ಚಂದ್ರಗುಪ್ತನ ಮೊಮ್ಮಗನೇ  ಅಶೋಕ. ಅವರ ತಂದೆ ಬಿಂಬಿಸಾರ. ಪಾಟಲೀಪುತ್ರವನ್ನು ರಾಜಧಾನಿಯಾಗಿಸಿ ಇವರು ಆಡಳಿತ ಮಾಡುತ್ತಿದ್ದರು. ಚಂದ್ರಗುಪ್ತ ಜೈನ ಮಠಕ್ಕೆ ಬೆಂಬಲ ನೀಡಿದವನು. ಅದೇ ಸಮಯ ಅವನಿಗೆ ಗುರುವಾಗಿ ಇದ್ದವರು ಚಾಣಕ್ಯ. ಚಂದ್ರಗುಪ್ತನಿಂದ ಮೌರ್ಯ ಸಾಮ್ರಾಜ್ಯ ಸ್ಥಿರವಾಯಿತು. ಬಿಂಬಸಾರ, ಚಂದ್ರಗುಪ್ತನ ಹಾಗೆ ಬಲವಾದ ರಾಜನಾಗಿ ಇರಲಿಲ್ಲ. ಅಶೋಕ ತನ್ನ ಸ್ವಂತ ಸಹೋದರರನ್ನು ಕೊಂದು ಸಿಂಹಾಸನ ಹತ್ತಿದನು. 

ಅಶೋಕನ ಬಗ್ಗೆಯ ಇಂದಿನ ಚಿತ್ರ ಎಲ್ಲವೂ ಅವನು ಬಹಳ ಮೂರ್ಖನಾಗಿಯೂ, ಕ್ರೂರಿಯಾಗಿಯೂ ಇದ್ದ, ಕಳಿಂಗ ಯುದ್ಧದ ನಂತರ ಅವನು ಬುದ್ಧ ಧರ್ಮಕ್ಕೆ ಮತಾಂತರವಾದ ನಂತರವೇ, ಶಾಂತಿ, ಸಮಾಧಾನವನ್ನು ಮುನ್ನೆಲೆಗೆ ತಂದು ಆಡಳಿತ ಮಾಡಿದ ಎಂದು ತಿಳಿಸುತ್ತದೆ. ಇದರ ಬಗ್ಗೆ ಇಂದಿನವರೆಗೆ ಬಹಳ ಚರ್ಚೆಗಳಿವೆ. 

ಬೇಕಂತಲೇ ಹೀನವಾದ ರಾಜನಾಗಿ ಅಶೋಕನನ್ನು ಚಿತ್ರಿಸಿದ್ದಾರೆ ಎನ್ನುತ್ತಾರೆ ಥಾಮಸ್ ಟ್ರೂಮನ್ (Thomas Truman) ಅದಕ್ಕೆ ಅವರು ಹೇಳುವ ಪುರಾವೆ, ಅಶೋಕನ ಕಾಲಕ್ಕೆ ಹಿಂದಿನವರೆಗೆ ಬೌದ್ಧ ರಾಜ್ಯದೊಂದಿಗೆ ಕಲೆತಿರಲಿಲ್ಲ.  ಆದ್ದರಿಂದ, ರಾಜನ ಮತವಾಗಿ ಬೌದ್ಧ ತಲೆಯೆತ್ತಿದಾಗ ಅಶೋಕನ ಬಗ್ಗೆಯ ಚಿತ್ರವೂ ಹೀಗೆ ಹೀನವಾಗಿ ರೂಪಿಸಲಾಗಿದೆ ಎನ್ನುತ್ತಾರೆ. 

ಅದರಂತೆಯೇ, ಕಳಿಂಗ ಯುದ್ಧದ ನಂತರವೇ ಅಶೋಕ ಮತಾಂತರಗೊಂಡ ಎಂಬುದು ತಪ್ಪಾದ ಮಾಹಿತಿ. ಅದಕ್ಕೆ ಮೊದಲೇ ಅವನು ಬೌದ್ಧ ಧರ್ಮವನ್ನು ಒಪ್ಪಿಕೊಂಡಿದ್ದನು. ಕಳಿಂಗ ಯುದ್ಧಕ್ಕೂ, ಅವನು ಬೌದ್ಧವನ್ನು ಸ್ವೀಕಾರ ಮಾಡಿಕೊಂಡದ್ದಕ್ಕೂ ಸಂಬಂಧವಿಲ್ಲ. ಅವನು, ಬೌದ್ಧ ಧರ್ಮವನ್ನು ಸ್ವೀಕರಮಾಡಲು ಪ್ರಮುಖ ಕಾರಣ, ಆಡಳಿತ ಅಧಿಕಾರದಲ್ಲಿ ಬ್ರಾಹ್ಮಣರು ಹೆಚ್ಚಾಗಿ ಹಸ್ತಕ್ಷೇಪ ಮಾಡುತ್ತಿದ್ದುದರಿಂದಲೇ ಎನ್ನುತ್ತಾರೆ. ಬಿಂಬಸಾರನ  ಕಾಲದಲ್ಲಿ ದಿನವೂ 60,000 ಬ್ರಾಹ್ಮಣರಿಗೆ ಆಹಾರವೂ, ಧಾನವೂ ನೀಡಲಾಗುತ್ತಿತ್ತು. 

ಕೌಟಿಲ್ಯನ ನೆರವಿನಿಂದಲೇ ಮೌರ್ಯರು ಆಡಳಿತಕ್ಕೆ ಬಂದರು ಎಂಬುದರಿಂದ, ಬ್ರಾಹ್ಮಣರ ಪ್ರಭಾವ ಹೆಚ್ಚಾಗಿತ್ತು. ಆದ್ದರಿಂದ, ತನ್ನ ರಾಜ್ಯಬಾರವನ್ನು ಬಯಸಿದಂತೆ ನಡೆಸಲು ಸಾಧ್ಯವಾಗಲಿಲ್ಲ ಎಂದೇ, ಅಶೋಕ ಬುದ್ಧ ಮತವನ್ನು ಸ್ವೀಕಾರ ಮಾಡಿದ ಎನ್ನುತ್ತಾರೆ ಜೋಸೆಫ್ ಕಿದ್ಹವಾನ್ (Joseph kidhavan) ಎಂಬ ಇತಿಹಾಸ ಅಧ್ಯಯನಕಾರರು.                                     

ಅವರ ಸಂಶೋಧನೆಯ ಪ್ರಕಾರ ಅಶೋಕ ಯಾವ ಶಿಲಾಶಾಸನದಲ್ಲೂ ಬುದ್ಧ ಮತದ ಸಿದ್ದಾಂತಗಳನ್ನು ಕೆತ್ತಿಡಲಿಲ್ಲ. ಅವನು, ಬೌದ್ಧ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಮಾಹಿತಿಗಳಿಲ್ಲ. ಬುದ್ಧ ಮತದ ಬಗ್ಗೆ ಸರಳವಾದ ಒಲವೇ ಇತ್ತು. ಅವನು, ಬುದ್ಧ ಧರ್ಮದ ಸಿದ್ಧಾಂತಗಳನ್ನು ತನದಾಗಿಸಿಕೊಂಡಿದ್ದ. ಆದ್ದರಿಂದಲೇ ಅಶೋಕನ ಶಿಲಾಶಾಸಗಳು ಸಹಿಷ್ಣುತೆ, ಮತ ಒಗ್ಗಟ್ಟು, ಪ್ರಾಣಿ ಹಿಂಸೆ ನಿಷೇಧ, ಬೇಟೆಯಾಡುವುದನ್ನು ನಿಲ್ಲಿಸುವುದು, ಮನುಷ್ಯರಿಗೂ, ಮೃಗಗಳಿಗೂ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಬೇಕೆಂಬುದು, ದೇಶದ ಪ್ರಜೆಗಳನ್ನು ತನ್ನ ಸ್ವಂತ ಮಕ್ಕಳಂತೆ ಭಾವಿಸಿ ನಡೆದುಕೊಳ್ಳಬೇಕೆಂಬುದು, ರಾಜ್ಯದ ಸಿಬ್ಬಂದಿಗಳು ಒಮ್ಮೆಯೂ ಕೋಪಗೊಳ್ಳುವುದೋ, ಆತುರದಿಂದ ನಡೆದುಕೊಳ್ಳುವುದೋ ಕೂಡದು ಮುಂತಾದುವನ್ನು ಶಿಲಾಶಾಸಗಳಲ್ಲಿ ಕೆತ್ತಲಾಗಿದೆ. 

ಮತ ಐಕ್ಯತೆಯನ್ನು ಗಮನಿಸಲು ‘ಮಾಹಮಾತ್ರರು’ ಎಂಬ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿದ್ದನು. ರಾಜ್ಯದ ಅಧಿಕಾರಿಗಳು ಹೆದರಿಸಿ ಬೆದರಿಸಿಯೋ, ಕಠೋರವಾಗಿ ನಡೆದುಕೊಂಡರೋ  ಕಟುವಾದ ಶಿಕ್ಷೆ ವಿಧಿಸಲಾಗುವುದು ಎಂದು ಸೂಚನೆ ನೀಡಲಾಗಿತ್ತು. ಅಶೋಕನ ಧೌಲಿ ಶಿಲಾಶಾಸನಗಳಲ್ಲಿ ಇರುವುದು ಬ್ರಾಹ್ಮಿ ಭಾಷೆ. ರೈಸ್ ಡೇವಿಡ್ (Rise David) ಎಂಬ ಪಾಲಿ ಭಾಷಾ ತಜ್ಞ, ಬ್ರಾಹ್ಮಿ ಲಿಪಿಯ ಪದ್ಧತಿ ಮಧ್ಯ ಏಷ್ಯಾದ ವ್ಯಾಪಾರಿಗಳಿಂದ ಪರಿಚಯವಾಗಿರಬಹುದು ಎಂದು ಹೇಳುತ್ತಾರೆ. ಹಂಟರ್ (Hunter) ಮತ್ತು ರೇಮಂಡ್ (Ramond) ಮುಂತಾದ ತಜ್ಞರು, ಬ್ರಾಹ್ಮಿ ಲಿಪಿಯ ಪದ್ಧತಿ ಭಾರತದ ಸಿಂಧೂ ಪ್ರಸ್ಥಭೂಮಿಯ ಲಿಪಿಯಿಂದ ಉಂಟಾಗಿರಬಹುದು ಎಂದು ಹೇಳುತ್ತಾರೆ.

| ಇನ್ನು ನಾಳೆಗೆ |

‍ಲೇಖಕರು Admin

August 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: