ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ನಂಜನಗೂಡು to ನ್ಯೂಜರ್ಸಿ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಮಧ್ಯರಾತ್ರಿ. ಅಮೇರಿಕಾದ ನ್ಯೂಜರ್ಸಿಯ ಆಸ್ಪತ್ರೆಯೊಂದರ ಏಳನೇ ಮಹಡಿಯ ಕಾರಿಡಾರ್ ನ ಗಾಜಿನಿಂದ ಹೊರಗೆ ಝಗಮಗಿಸುತ್ತಿದ್ದ ದೀಪಗಳ ರಾಶಿಯ ಕಡೆಗೆ ಕಣ್ಣು ನೋಡುತ್ತಿದ್ದರೂ ಕನಕಮ್ಮನ ಗಮನ ಇದ್ದುದ್ದು ಬೇರೆ ಕಡೆಗೆ. ಲೇಬರ್ ವಾರ್ಡ್ ನಿಂದ ಯಾವಾಗ ಮಗುವಿನ ಧ್ವನಿ ಕೇಳಿಬರುತ್ತೋ ಅನ್ನೋ ಕಾತರ ಆತಂಕಗಳಿಂದ ಕನಕಮ್ಮ ಸೀರೆ ಸೆರಗಿನ ತುದಿಯನ್ನು ತಿರುಗಿಸಿ ತಿರುಗಿಸಿ ಗಂಟಾಗಿತ್ತು. ಆದರೆ ಈ ಅರವತ್ತೈದರ ಹರಯದ ಅಜ್ಜಿ ಕಾಯುತ್ತಿದ್ದುದ್ದು ಸ್ವಂತ ಮೊಮ್ಮಗುವಿನ ಆಗಮನಕ್ಕಲ್ಲ. ಆಕೆಯ ತವಕ ಅರ್ಥವಾಗಬೇಕಾದರೆ ನಂಜನಗೂಡಿನಿಂದ ನ್ಯೂಜರ್ಸಿಯ ತನಕದ ಪಯಣವನ್ನು ಮೆಲುಕು ಹಾಕಬೇಕು.

ಕನಕಮ್ಮನ ಮಗ ರಾಜಶೇಖರ ಬಿಸಿನೆಸ್ ನಲ್ಲಿ ಲಾಸ್ ಮಾಡಿಕೊಂಡು ಬೆಂಗಳೂರಿನಲ್ಲಿ ಮನೆ ಬಾಡಿಗೆ ಕಟ್ಟೋದಕ್ಕೂ ಕಷ್ಟವಾದಾಗ, ಹಳೇ ಹೆಂಡತಿ ಪಾದವೇ ಗತಿ ಅನ್ನುವಂತೆ, ಸ್ವಂತ ಊರು ನೆನಪಾಗಿ ನಂಜನಗೂಡಿಗೆ ವಾಪಸ್ಸಾಗಿದ್ದ. ಮುಂದೆ ಏನು ಮಾಡೋದು ಅಂತ ತೋಚದವನಿಗೆ ಒಂದು ದಾರಿ ಸಿಕ್ಕಿತ್ತು. ‘ನಮ್ ಜಮೀನ್ ನ ಮಾರಿ ಸಾಲ ತೀರಿಸ್ಬಿಡ್ತೀನಮ್ಮ, ಈ ಅವಮಾನಗಳು, ಸಾಲದ್ ಪ್ರೆಶರ್ ತಡೆದುಕೊಳ್ಳೋದಕ್ಕಾಗುತ್ತಿಲ್ಲ’ ಅಮ್ಮನ ಮುಂದೆ ತನ್ನ ನಿರ್ಧಾರ ಹೇಳಿಬಿಟ್ಟ. ಜಮೀನಲ್ಲಿ ಈಗ ವ್ಯವಸಾಯ ಅಷ್ಟಕ್ಕಷ್ಟೇ ಆದ್ರೂ ಅಪ್ಪನ ಸಮಾಧಿ ಇರೋದು ನೆನಪಾಗಬಾರದೇ ಮಗನಿಗೆ? ರಾಜಶೇಖರನ ಬಗ್ಗೆ ಬೇಸರವಾದರೂ ಅವನ ಕಷ್ಟದಲ್ಲಿ ಯಾರೇ ಇದ್ದರೂ ಹಾಗೇ ಯೋಚಿಸುತ್ತಿದ್ದರೇನೋ ಅನಿಸಿತು ಹೆತ್ತ ಕರುಳಿಗೆ. ಆದರೆ ಗಂಡನ ಸಮಾಧಿಯ ಪಕ್ಕವೇ ತಾನೂ ಮಣ್ಣಾಗಬೇಕು ಅಂತ ಬಯಸಿದ್ದ ಕನಕಮ್ಮನಿಗೆ ಜಮೀನನ್ನು ಮಾರಬಾರದೆಂದು ಮನಸ್ಸು ಹಠ ಮಾಡಿತು. ಅಲ್ಲಿಯ ತನಕ ಜೀವನದಲ್ಲಿ ಒಂದು ರುಪಾಯಿಯನ್ನೂ ಗಳಿಸದವಳಿಗೆ ಸಾಲದ ಹೊರೆ ಹೊತ್ತ ಮಗನ ಸಮಸ್ಯೆಗಿರುವ ಏಕಮಾತ್ರ ಪರಿಹಾರಕ್ಕೆ ತಾನು ಅಡ್ಡಗಾಲು ಹಾಕುವುದು ಹಿಂಸೆಯೆನಿಸಿತು.

ಕನಕಮ್ಮನ ಕೂಗನ್ನು ನಂಜುಂಡೇಶ್ವರ ಕೇಳಿಸಿಕೊಂಡನೋ ಏನೋ, ಅವರ ಕೊರಗು ಅಂತ್ಯ ಕಾಣೋ ಅವಕಾಶ ತಾನಾಗೇ ಒದಗಿ ಬಂದಿತು. ದೇವಸ್ಥಾನದಲ್ಲಿ ತಂಬಿಟ್ಟಾರತಿ ಮಾಡೋದಕ್ಕೆ ಹೋದಾಗ, ಅಲ್ಲಿ ಹೆಂಗಸರು ಅಮೇರಿಕಾದಲ್ಲಿ ಬಾಣಂತನ ಮಾಡೋದಕ್ಕೆ ಅನುಭವವಿರೋರು ಬೇಕೆಂತೆ, ಆರು ತಿಂಗಳಿಗೆ ಎಂಟು ಲಕ್ಷ ಸಂಬಳ ಅಂತ ಮಾತನಾಡಿಕೊಳ್ಳುತ್ತಿದ್ದರು. ತಾನು ಆ ಸಾಹಸ ಮಾಡಬೇಕೆಂದು ಆಗ ಕನಕಮ್ಮನ ಬುದ್ಧಿಗೆ ಆಗ ಹೊಳೆದಿರಲಿಲ್ಲ. ಆದರೆ ಮಗ ಯಾವಾಗ ಜಮೀನನ್ನು ಮಾರುವುದಕ್ಕೆ ಗಿರಾಕಿಯನ್ನು ಮನೆಗೆ ಕರೆದುಕೊಂಡು ಬಂದನೋ ಆಗ ಈ ವಿಚಾರ ಹೊಳೆಯಿತು. ಸೀದಾ ಹೋಗಿ ಗಿರಾಕಿಯ ಮುಂದೆ ನಾವು ಜಮೀನನ್ನು ಮಾರೋದಿಲ್ಲ ಅಂತ ವಿಶ್ವಾಸದಲ್ಲಿ ನುಡಿದುಬಿಟ್ಟರು.

‘ಏನಮ್ಮ ನಿಂಗೆ ತಲೆ ಕೆಟ್ಟಿದ್ದೀಯಾ? ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದೋರ್ ಮುಂದೆ ಹಾಗಂದುಬಿಟ್ಯಾಲ್ಲಾ’ ರಾಜಶೇಖರ ಮೈಯಲ್ಲಿದ್ದ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಕಿರುಚಿದ. ‘ನಿನ್ ಸಾಲದ್ ಹಣ ನಾನ್ ವಾಪಸ್ ಕೊಡ್ತೀನಿ. ಎಂಟು ಲಕ್ಷ’ ಕನಕಮ್ಮನ ಮಾತು ಯಾರಾದರೂ ನಂಬುವಂಥದ್ದೇ?. ‘ಏನಮ್ಮ ನಿಧಿ ಗಿಧಿ ಏನಾದ್ರೂ ಸಿಕ್ತಾ?’ ಮೆಲ್ಲಗೆ ಕೇಳಿದ. ‘ನಾನು ಆರು ತಿಂಗಳಲ್ಲಿ ದುಡಿದು ತರ್ತೇನೆ, ಜಮೀನನ್ನು ಮಾರೋದು ಬೇಡ. ನನ್ನ ಪ್ರಾಣಹೋದ್ಮೇಲೆ ಅವ್ರ್ ಪಕ್ಕ ನನ್ನನ್ನೂ ಮಲಗಿಸಿಬಿಡು ಅದೇ ದೊಡ್ಡ ನೆಮ್ಮದಿ ನಂಗೆ. ನೀನು ತಿಥಿ ಕಾರ್ಯ ಅಂತೇನೂ ಮಾಡೋದು ಬೇಡ’. ಅಷ್ಟನ್ನು ಹೇಳಿ ಕನಕಮ್ಮ ಗಳಗಳನೆ ಅತ್ತುಬಿಟ್ಟರು. ‘ಮಾವನವರು ಜೊತೆಯಲ್ಲಿಲ್ಲವಾದಾಗಲೇ ಹೀಗೆ, ಇನ್ನು ಅವರಿದ್ದಾಗ ಎಷ್ಟು ಪ್ರೀತಿಸಿರಬಹುದು!’ ಸೊಸೆ ಅತ್ತೆಯನ್ನು ಕಣ್ಣಾಡಿಸದೆ ನೋಡಿದಳು.

ಗಂಡನ ನೆನಪನ್ನು ಉಳಿಸಿಕೊಳ್ಳೋದಕ್ಕೆ ಕನಕಮ್ಮ ಅರ್ಧ ಪ್ರಪಂಚವನ್ನು ಸುತ್ತಿ ಅಮೇರಿಕಾಗೆ ಬಾಣಂತನ ಮಾಡುವ ಕೆಲ್ಸಕ್ಕೆ ಹೋಗಬೇಕಾಯಿತು. ಅಡುಗೆ ಮನೆ, ರಂಗೋಲಿ, ದೇವಸ್ಥಾನದಲ್ಲಿ ಕೈಲಾದ ಸೇವೆ ಮಾಡಿಕೊಂಡಿದ್ದ ವೃದ್ಧೆ ತನ್ನ ಜೀವನಕ್ಕೆ ಇಷ್ಟು ಉಪಯೋಗವಾಗಬಲ್ಲಳು ಅಂತ ಗೊತ್ತಾದಾಗ ಸೊಸೆಗೆ ಅತ್ತೆಯ ಮೇಲಿನ ಗೌರವ ಮುಗಿಲುಮುಟ್ಟಿತ್ತು. ಹೊರಡುವ ಮುನ್ನ ಚಟ್ನಿಪುಡಿ, ಉಪ್ಪಿನಕಾಯಿ, ಚಕ್ಕುಲಿ, ಕೋಡುಬಳೆ, ಪುಳಿಯೋಗರೆ ಗೊಜ್ಜು ಎಲ್ಲವನ್ನೂ ತಾನೇ ಖುದ್ದಾಗಿ ತಯಾರು ಮಾಡಿದ್ದಳು. ಹಲ್ಲುಗಳು ಬಲಹೀನವಾಗೋ ವಯಸ್ಸಿನಲ್ಲಿ ಚಕ್ಕುಲಿ ಕೋಡುಬಳೆ ಹೇಗೆ ತಿನ್ನಲಿ ಅಂತ ಆ ಪೊಟ್ಟಣವನ್ನು ಅಲ್ಲೇ ಬಿಟ್ಟುಬಂದಿದ್ದರು ಕನಕಮ್ಮ.

ನಂಜನಗೂಡಿನಲ್ಲಿ ಕನಕಮ್ಮನ ಸೊಸೆ, ವಯಸ್ಸಾದ ಅತ್ತೆ ಕೈಯಲ್ಲಿ ಕೆಲ್ಸ ಮಾಡ್ಸಿ ದುಡಿಸ್ಕೊಳ್ತಿದ್ದಾರೆ ಅಂತ ಅಕ್ಕಪಕ್ಕದವರು ಕೊಂಕು ನುಡಿಬಾರದು ಅಂತ, “ನಮ್ಮ ಅತ್ತೆಯವರಿಗೆ ಏನ್ ಹೇಳೋದು ಗೊತ್ತಾಗಲ್ಲ, ಬೇಡ ಬೇಡ ಅಂದ್ರೂ ಯಾವ್ದ್ ಯಾವ್ದೋ ಕೆಲಸ ಹಚ್ಚುಕೊಂಡ್ಬಿಡ್ತಾರೆ. ಇದೂ ಹಾಗೆ ಏನೋ ಅಂದುಕೊಂಡ್ವಿ. ಗೊತ್ತಿರೋರ್ ಮನೆಗೆ ಬಾಣಂತನ ಮಾಡಿ ಬರ್ತೀನಿ ಅಂತ ಹೇಳಿದೋರು ಅಮೇರಿಕಾದಲ್ಲಿ ಯಾರ್ದೋ ಮನೆ ಸೇವೆ ಮಾಡೋಕ್ ಹೋಗ್ತಿದ್ದಾರೆ ಅಂತ ಗೊತ್ತೇ ಇರ್ಲಿಲ್ಲ. ನಾವೂ ತುಂಬಾ ಬೇಡ ಅಂದ್ವಿ ಆದ್ರೆ ಅಷ್ಟ್ರಲ್ಲಾಗ್ಲೇ ವೀಸಾ ಪಾಸ್ ಪೋರ್ಟ್ ಮಾಡ್ಸಿ ಆಗಿತ್ತು. ಅವ್ರ್ ಬೇರೆ ಅಡ್ವಾನ್ಸ್ ದುಡ್ಡೂ ಕೊಟ್ಬಿಟ್ಟಿದ್ರು, ಇನ್ನೇನ್ ಮಾಡೋಕಾಗುತ್ತೆ ಅಂತ ಸುಮ್ಮನಾದ್ವಿ. ಅದೂ ಅಲ್ಲದೆ ಹೆಣ್ಮಗು ಬಾಣಂತನ ಮಾಡಿದ್ರೆ ಪುಣ್ಯ ಬರುತ್ತೆ. ಮಗ ಸೊಸೆ ಇಬ್ಬರೂ ಪೈಪೋಟಿಯಲ್ಲಿ ತಮ್ಮ ಋಣದ ಭಾರ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಸಮರ್ಥನೆಗಳನ್ನು ಕೊಟ್ಟುಕೊಂಡರು.

ಭಾರತದವರೇ ಹೆಚ್ಚು ಇರುವ ನ್ಯೂಜರ್ಸಿಯಲ್ಲಿ ಕೆಲಸ ಮಾಡಿಕೊಂಡಿರೋ ಉದಯ್ ಮಿಶ್ರಾ ಮತ್ತವನ ಪತ್ನಿ ತನುಜಾ ಡ್ಯೂಪ್ಲೆಕ್ಸ್ ಮನೆಯಲ್ಲಿದ್ದರು. ಮೊದಮೊದಲು ಕನಕಮ್ಮನಿಗೆ ಅಲ್ಲಿನ ವಾತಾವರಣ ಕಂಡು ದಿಗ್ಭ್ರಮೆಯಾಯಿತು. ಇದೇನಿದು ಇಲ್ಲಿ ಯಾರೂ ವಾಸಿಸುವುದಿಲ್ಲವೇ ಅಂದುಕೊಳ್ಳುವಷ್ಟು ಸ್ವಚ್ಛವಾದ ರಸ್ತೆಗಳು, ನೋಡುತ್ತಾ ಸಾಗಿದರೆ ಕತ್ತು ನೋವು ಬರುವಷ್ಟು ಎತ್ತರದ ಕಟ್ಟಡಗಳು, ತನ್ನಷ್ಟೇ ವಯಸ್ಸಾದ ಅಜ್ಜ ಅಜ್ಜಿಯರೆಲ್ಲಾ ಚಡ್ಡಿ ಪ್ಯಾಂಟುಗಳನ್ನು ತೊಟ್ಟು ಯುವಕರಂತೆ ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದನ್ನು ನೋಡಿ ಬೆರಗಾದಳು. ಇಳಿ ವಯಸ್ಸಿನಲ್ಲಿ ಹೊರದೇಶ ನೋಡೋ ಭಾಗ್ಯ ಬಂದುದ್ದಕ್ಕೆ ಖುಷಿಯೂ ಆಯಿತು. ಕಾಲಕ್ರಮೇಣ, ಪ್ರತಿದಿನ ಹಸುವಿನ ಹಾಲನ್ನು ಕರೆಯುತ್ತಿದ್ದವಳು ಈಗ ಫ಼್ರಿಜ್ ನಲ್ಲಿದ್ದ ಡಬ್ಬದ ಹಾಲಲ್ಲಿ ಕಾಫ಼ಿ ಮಾಡೋದನ್ನು ಕಲಿತರು, ಅಂಡೆ ಒಲೆಗೆ ಉರಿ ಹಾಕಿ ಸ್ನಾನ ಮಾಡುತ್ತಿದ್ದವರು ಹಾಟ್ ಶವರ್ ನ ಉಪಯೋಗಿಸತೊಡಗಿದರು. ಕಲಿಕೆಗೆ ವಯಸ್ಸಿಲ್ಲ ಅನ್ನೋದಕ್ಕೆ ಉದಾಹರಣೆಯಾದರು.

ವಾರ್ಡ್ ಒಳಗಿನಿಂದ ಮಗು ಅಳ್ತಿರೋ ಧ್ಚನಿ ಕೇಳಿತು. ಕನಕಮ್ಮ ಫ಼್ಲಾಶ್ ಬ್ಯಾಕ್ನಿಂದ ಹೊರಬಂದರು. ಒಳಗಡೆಯಿಂದ ಬಂದ ಮೇಲ್ ನರ್ಸ್ ಹತ್ತಿರ ಹೋಗಿ ವಾಟ್ ಬೇಬಿ ಅಂತ ಕೈ ತೋರಿಸಿ, ಕುತೂಹಲ ತುಂಬಿದ ಕಣ್ಗಳಲ್ಲಿ ಕೇಳಿದಾಗ ಆತ ಇಟ್ಸ್ ಗರ್ಲ್ ಬೇಬಿ ಅಂದು ಹೋದನು. ಸ್ವಲ್ಪ ಹೊತ್ತಿನ ನಂತರ ಮತ್ತೆ ಬಾಗಿಲು ತೆಗೆದುಕೊಂಡಿತು. ಅದರಿಂದ ಉದಯ್ ಆಚೆ ಬಂದ. “ನೀವು ಒಳಗೇ ಇದ್ರ ಡೆಲಿವರಿ ಆದಾಗ? ಕನಕಮ್ಮ ಆಶ್ಚರ್ಯದಿಂದ ಕೇಳಿದರು. ಇದು ಇಲ್ಲಿನ ಪದ್ದತಿ ಹೆಂಡತಿಯ ನೋವಿನಲ್ಲಿ ಗಂಡನೂ ಸಮಭಾಗಿ. ಮಗು ಹುಟ್ಟುವಾಗ ಎಷ್ಟ್ ಕಷ್ಟ ಅಂತ ನೋಡಿ ಭಯ ಆಗೋಯ್ತು. ನಿಜ್ವಾಗ್ಲೂ ನೀವ್ ಹೆಣ್ಮಕ್ಕಳು ಅದ್ ಹೇಗೆ ಈ ನೋವನ್ನ ಸಹಿಸ್ಕೊಳ್ತೀರೋ ಗ್ರೇಟ್! ಭಾರವಾಗಿ ಕೈಮುಗಿದ ಉದಯ್.

ಕಳೆದ ಒಂದು ತಿಂಗಳಿನಿಂದ ತುಂಬು ಗರ್ಭಿಣಿಗೆ ಅಡುಗೆ ಮಾಡಿ, ನೀರು ಹಾಕಿ ತನ್ನ ಮಗಳಂತೆ ನೋಡಿಕೊಂಡಿದ್ದ ಕನಕಮ್ಮನಿಗೆ ತನುಜಾ ಮೇಲೆ ಸ್ವಂತ ಮಗಳಂತೆ ಅಕ್ಕರೆ ಮೂಡಿತ್ತು. ಹೊಟ್ಟೆ ಉದ್ದ ಇದ್ದುದರಿಂದ ಮುಖ ಲಕ್ಷಣವಾಗೇ ಇದ್ದುದರಿಂದ ಹೆಣ್ಣು ಮಗುವೇ ಆಗಬಹುದೆಂದು ಊಹಿಸಿದ್ದು ನಿಜವಾಯಿತು. ಆದರೆ ಇನ್ನೊಂದನ್ನು ಊಹಿಸಿರಲಿಲ್ಲ. ಉದಯ್ ಮಗು ಅಂಡರ್ ವೈಟ್ ಇದೆ. ಕೇವಲ ಒಂದು ಕೆಜಿ ಇಪ್ಪತ್ತಾರು ಗ್ರಾಮ್ ಇದೆ ಎಂದು ತಿಳಿಸಿ ಮುಖ ಸಪ್ಪೆ ಮಾಡಿಕೊಂಡ. ಮಗುವನ್ನು ಇಂಟೆನ್ಸಿವ್ ಕೇರ್ ನಲ್ಲಿಟ್ಟಿದ್ದಾರೆ. ತುಂಬಾ ಹುಷಾರಾಗಿ ನೋಡಿಕೊಳ್ಬೇಕು ಅಂತ ಹೇಳಿದಾಗ ಕನಕಮ್ಮನಿಗೇನೂ ತುಂಬಾ ಭಯವಾಗಲಿಲ್ಲ. ನಂಜನಗೂಡಿನಲ್ಲಿ ಇಂಥ ಎಷ್ಟೋ ಸಮಸ್ಯೆಗಳನ್ನು ಎದುರಿಸಿದ ಕೈ ಅದು. ಆದರೆ ಹೊರದೇಶದಲ್ಲಿ ಬ್ರೆಡ್ಡು ಚೀಸು ಅಂತ ತಿಂದುಕೊಂಡಿರುವ ನಾಜೂಕಿನ ಮೈಯ್ಯ ತನುಜಾಗೆ ದೊಡ್ಡ ಚಿಂತೆಯಾಯಿತು. ಅವಳಿಗೆ ತನ್ನ ಎಳೇ ಮಗುವನ್ನು ಎತ್ತಿಕೊಳ್ಳೋಕೇ ಭಯವಾಗಿಬಿಟ್ಟಿತ್ತು. ಕನಕಮ್ಮ ಮಗುವನ್ನು ಎತ್ತಿಕೊಂಡಾಗ ಎಳೇ ಕೈ ತನ್ನ ಸಣ್ಣ ಕಿರುಬೆರಳಿನಿಂದ ಸುಕ್ಕಾದ ಅಜ್ಜಿಯ ಕೈಬೆರಳನ್ನು ಹಿಡಿದುಕೊಂಡಿತು. “ಬಾರೇ ರಾಣಿ, ಯಾರ್ ನಿಂಗೆ ನಿಶ್ಶಕ್ತಿ ಅಂದಿದ್ದು? ನಾನ್ ನೋಡ್ಕೋತೀನಿ ನೆಟಿಕೆ ತೆಗೆದು ಹೇಳಿದಳು.

ಉದಯ್ ದಂಪತಿಗಳಂತೂ ಕನಕಮ್ಮನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಅದೊಂದು ದಿನ ಕನಕಮ್ಮ ನಾಲ್ಕಾರು ಕಿತ್ತಲೆಹಣ್ಣುಗಳನ್ನು ತಂದು ಸಂಭ್ರಮದಿಂದ ತೋರಿಸಿದಾಗ ಎರಡೇ ನಿಮಿಷದಲ್ಲಿ ಅವರ ಸಂತೋಷ ಮಣ್ಣುಪಾಲಾಯಿತು. ಕಾರಣ, ಪಕ್ಕದ ಮನೆಯ ಕೇಟ್ ತಮ್ಮ ಕಾಂಪೌಂಡಿನ ಮರದಿಂದ ಕನಕಮ್ಮ ಕಿತ್ತಲೆ ಹಣ್ಣುಗಳನ್ನು ಕದ್ದಿದ್ದಾರೆ ಅಂತ ಪೋಲಿಸರಿಗೆ ದೂರುಕೊಟ್ಟುಬಿಟ್ಟಿದ್ದರು. ನಮ್ ಬೀದಿಯಲ್ಲಿ ಬಿಟ್ಟಿರೋ ಹೂವು ಹಣ್ಣುಗಳಲ್ಲಿ ನಮ್ಮಪಾಲೂ ಇದೆ ಅಂದುಕೊಂಡ ಜನರ ಮಧ್ಯೆ ಬದುಕಿದ್ದ ಕನಕಮ್ಮನಿಗೆ ಈ ಅನುಭವದಿಂದ ತಲೆತಗ್ಗಿಸುವಂತಾಗಿತ್ತು. ತನ್ನನ್ನೆಲ್ಲಿ ವಾಪಸ್ಸು ಕಳಿಸಿಬಿಡುತ್ತಾರೋ ಅಂತ ನಡುಗಿ ಹೋದಳು. ಮಗನ ಸಾಲದ ಭಾರ, ಯಜಮಾನರ ಸಮಾಧಿ ಇರೋ ಜಮೀನನ್ನು ಉಳಿಸಿಕೊಳ್ಳೋ ಭಾರ ಮುದುಕಿಯ ಮನಸ್ಸನ್ನು ಹಿಂಡಿಬಿಟ್ಟಿತ್ತು. ಆದರೆ ಕನಕಮ್ಮನ ಸ್ಥಿತಿ ಗೊತ್ತಿದ್ದ ತನುಜಾ ಕೇಟ್ ಗೆ ಅವರ ಕತೆ ಹೇಳಿ, ಕಂಪ್ಲೇಂಟ್ ವಾಪಸ್ ತೆಗೆದುಕೊಳ್ಳುವಂತೆ ಕೇಳಿಕೊಂಡಳು. ಗಂಡನಿಂದ ಡೈವರ್ಸ್ ತೆಗೆದುಕೊಂಡು ಒಂಟಿಯಾಗಿದ್ದ ಕೇಟ್ ಗೆ, ಸತ್ತುಹೋದ ಗಂಡನ ಪಕ್ಕದಲ್ಲಿ ತನ್ನನ್ನು ಮಣ್ಣುಮಾಡಬೇಕೆಂದು ಬಯಸಿದ ಕನಕಮ್ಮನ ಪ್ರೇಮ ಅದ್ಭುತವೆನಿಸಿತು. ಬೆಟ್ಟದಂತೆ ಬಂದ ಸಮಸ್ಯೆ ನೀರಾಗಿ ಕರಗಿಹೋಗಿ ಕನಕಮ್ಮನ ಕೆಲಸ ಮುಂದುವರಿಯಿತು. ಮಗುವನ್ನು ಕಾಲಮೇಲೆ ಬೋರಲು ಮಲಗಿಸಿಕೊಂಡು ಉಗುರು ಬೆಜ್ಜಗಿನ ಎಣ್ಣೆಯನ್ನು ಹಚ್ಚಿ ಮೈ ಕೈ ಎಳೆದು ತಲೆಗೆ ನೀರು ಹಾಕಿದರು. “ಸಾಂಬ್ರಾಣಿ ಇದೆ. ಇವತ್ತೊಂದು ದಿನ ಹಾಕ್ಲಾ?” ಕನಕಮ್ಮನ ಉತ್ಸಾಹಕ್ಕೆ ತನುಜಾ ಗಾಬರಿಯಾಗಿ ಹಾಗೆಲ್ಲಾ ಮಾಡಿದ್ರೆ ಇನ್ನೊಂದ್ ಸಲ ಪೋಲಿಸ್ ಕಂಪ್ಲೇಂಟ್ ಹೋಗುತ್ತೆ ಇಲ್ಲ ಅಂದ್ರೆ ಫ಼ೈರ್ ಇಂಜಿನ್ ನೋರು ಏನಾದ್ರೂ ತುಂದರೆಯಾಗಿ ಅಂದುಕೊಂಡು ಬಂದುಬಿಡ್ತಾರೆ ಅಂದು ಹೇಳಿ ನಕ್ಕಳು. ” ಬೇಡ ಬಿಡಮ್ಮ, ಸುತ್ಕಾರನಾದ್ರೂ ಹಾಕ್ತೀನಿ, ಆಮೇಲೆ ನಿಮ್ಮ ಡಾಕ್ಟರು ಹೇಳಿರೋ್ದನ್ನ ಕೊಡಿ. “ಸುತ್ಕಾರ ಅಂದ್ರೆ?”. ಭಜೆ, ಜಾಕಾಯಿ, ಮೆಣಸು, ಕಸ್ತೂರಿ ಮಾತ್ರೆ, ಒಣ ಖರ್ಜೂರ ಎಲ್ಲವನ್ನೂ ಕಲ್ಲಿನ ಮೇಲೆ ಎರಡೆರಡು ಸುತ್ತು ತೇಯ್ದು ಗಂಧದ ಹದ ಮಾಡಿ ಅದನ್ನುಕೊಟ್ರೆ ಮಗೂಗೆ ಮಂದ ಆಗಿದ್ರೆ ಸರಿಹೋಗುತ್ತೆ, ತಾಯಿ ಹಾಲು ಮೈಗಂಟಿ ಮಗು ದಪ್ಪ ಆಗುತ್ತೆ ಅಂತ ಅದರ ಉಪಯೋಗಗಳನ್ನು ಸೇಲ್ಸ್ ಮ್ಯಾನ್ ಗಳಂತೆ ಮಾರ್ಕೆಟಿಂಗ್ ಮಾಡುತ್ತಾ ಸುತ್ಕಾರ ಹಾಕಿ ಮಗುವನ್ನು ಮಲಗಿಸಿಕೊಂಡು ನಾಲಿಗೆಗೆ ನೆಕ್ಕಿಸಿದಳು. ಮಗು ಖರ್ಜೂರದ ರುಚಿಗೆ ನಾಲಿಗೆ ಚಪ್ಪರಿಸಿತು. ಏನನ್ನು ತಿನ್ನಿಸಿದರೂ ಬಾಯಿ ತೆರೆಯದಿದ್ದವಳು ಈಗ ಅಜ್ಜಿ ಕೈ ರುಚಿಗೆ ಒಗ್ಗಿಕೊಂಡುಬಿಟ್ಟಳು ಅಂತ ಅಪ್ಪ ಅಮ್ಮ ಸಂತೋಷಪಟ್ಟರು.

ಬೆಟ್ಟದಂತೆ ಬಂದ ಸಮಸ್ಯೆ ನೀರಾಗಿ ಕರಗಿಹೋಗಿ ಕನಕಮ್ಮನ ಕೆಲಸ ಮುಂದುವರಿಯಿತು. ಮಗುವನ್ನು ಕಾಲಮೇಲೆ ಬೋರಲು ಮಲಗಿಸಿಕೊಂಡು ಉಗುರು ಬೆಜ್ಜಗಿನ ಎಣ್ಣೆಯನ್ನು ಹಚ್ಚಿ ಮೈ ಕೈ ಎಳೆದು ತಲೆಗೆ ನೀರು ಹಾಕಿದರು. “ಸಾಂಬ್ರಾಣಿ ಇದೆ. ಇವತ್ತೊಂದು ದಿನ ಹಾಕ್ಲಾ?” ಕನಕಮ್ಮನ ಉತ್ಸಾಹಕ್ಕೆ ತನುಜಾ ಗಾಬರಿಯಾಗಿ ಹಾಗೆಲ್ಲಾ ಮಾಡಿದ್ರೆ ಇನ್ನೊಂದ್ ಸಲ ಪೋಲಿಸ್ ಕಂಪ್ಲೇಂಟ್ ಹೋಗುತ್ತೆ ಇಲ್ಲ ಅಂದ್ರೆ ಫ಼ೈರ್ ಇಂಜಿನ್ ನೋರು ಏನಾದ್ರೂ ತುಂದರೆಯಾಗಿ ಅಂದುಕೊಂಡು ಬಂದುಬಿಡ್ತಾರೆ ಅಂದು ಹೇಳಿ ನಕ್ಕಳು. ” ಬೇಡ ಬಿಡಮ್ಮ, ಸುತ್ಕಾರನಾದ್ರೂ ಹಾಕ್ತೀನಿ, ಆಮೇಲೆ ನಿಮ್ಮ ಡಾಕ್ಟರು ಹೇಳಿರೋ್ದನ್ನ ಕೊಡಿ. “ಸುತ್ಕಾರ ಅಂದ್ರೆ?”. ಭಜೆ, ಜಾಕಾಯಿ, ಮೆಣಸು, ಕಸ್ತೂರಿ ಮಾತ್ರೆ, ಒಣ ಖರ್ಜೂರ ಎಲ್ಲವನ್ನೂ ಕಲ್ಲಿನ ಮೇಲೆ ಎರಡೆರಡು ಸುತ್ತು ತೇಯ್ದು ಗಂಧದ ಹದ ಮಾಡಿ ಅದನ್ನುಕೊಟ್ರೆ ಮಗೂಗೆ ಮಂದ ಆಗಿದ್ರೆ ಸರಿಹೋಗುತ್ತೆ, ತಾಯಿ ಹಾಲು ಮೈಗಂಟಿ ಮಗು ದಪ್ಪ ಆಗುತ್ತೆ ಅಂತ ಅದರ ಉಪಯೋಗಗಳನ್ನು ಸೇಲ್ಸ್ ಮ್ಯಾನ್ ಗಳಂತೆ ಮಾರ್ಕೆಟಿಂಗ್ ಮಾಡುತ್ತಾ ಸುತ್ಕಾರ ಹಾಕಿ ಮಗುವನ್ನು ಮಲಗಿಸಿಕೊಂಡು ನಾಲಿಗೆಗೆ ನೆಕ್ಕಿಸಿದಳು. ಮಗು ಖರ್ಜೂರದ ರುಚಿಗೆ ನಾಲಿಗೆ ಚಪ್ಪರಿಸಿತು. ಏನನ್ನು ತಿನ್ನಿಸಿದರೂ ಬಾಯಿ ತೆರೆಯದಿದ್ದವಳು ಈಗ ಅಜ್ಜಿ ಕೈ ರುಚಿಗೆ ಒಗ್ಗಿಕೊಂಡುಬಿಟ್ಟಳು ಅಂತ ಅಪ್ಪ ಅಮ್ಮ ಸಂತೋಷಪಟ್ಟರು.

ಅಂದು ಬೆಳ್ಳಂಬೆಳ್ಳಗ್ಗೆಯೇ ಕನಕಮ್ಮನ ಮನೆಯಿಂದ ಫೋನು ಬಂದಿತ್ತು. “ಏನಮ್ಮಾ ಎಲ್ಲಾ ಆರೋಗ್ಯಾನಾ? ನಮ್ಮನ್ನೇ ಮರೆತುಬಿಟ್ಟಿರೋ ಹಾಗಿದೆ?” ಎಂದಿನಿಗಿಂತ ಮಗನ ಕಾಳಜಿಯ ತೂಕ ಹೆಚ್ಚಿತ್ತು. ಕನಕಮ್ಮ “ನಾನೂ ಮಾಡ್ಬೇಕು ಅಂತಾನೇ ಇದ್ದೆ ಆದ್ರೆ ಅಲ್ಲಿ ಯಾವಾಗ್ ಬೆಳ್ಳಗ್ಗೇನೋ ಮಧ್ಯರಾತ್ರೀನೋ ಸರಿಯಾಗಿ ಗೊತ್ತಾಗಲ್ವಲ್ಲಪ್ಪ, ಅಂತೂ ಒಂದು ದಿನ ಮಾಡಿದ್ದೆ ನೀವ್ಯಾರೂ ಎತ್ಕೊಳ್ಳಿಲ್ಲ. ಮಲ್ಗಿದ್ರೋ ಏನೋ ಅಂತ ಕಟ್ ಮಾಡಿಬಿಟ್ಟೆ”.

ಪಕ್ಕದ ಮನೆಯ ಜಯ ಫೊನ್ ಕೊಡು ಮಾತಾಡ್ತೀನಿ ಅಂತ ಒಂದೇ ಸಮನೆ ಕಿರಿಕಿರಿ ಮಾಡುತ್ತಿದ್ದನ್ನು ತಡೆಯೋಕಾಗದೆ ಫೋನನ್ನು ಅವರ ಕೈಗೆ ವರ್ಗಾಯಿಸಿದ. “ಅಲ್ಲ ಕನಕ ಅದ್ ಹೇಗೆ ಒಬ್ಳೇ ವಿಮಾನದಲ್ಲಿ ಹೋದೆ ನೀನು? ಭಾರೀ ಗಟ್ಟಿಗಿತ್ತಿ ಬಿಡಮ್ಮ”. “ಕಲ್ಯೋ ತನಕ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ ಅಂತ ಹೇಳಲ್ವಾ? ಹಂಗೇ ಎಲ್ಲಾ. ಏರ್ ಪೋರ್ಟಲ್ಲಿ ಎಲ್ಲಿಲ್ಲಿ ಕೇಳ್ತಾರೋ ಅಲ್ಲಿಲ್ಲಿ ನನ್ ವೀಸಾ ಬ್ಯಾಗ್ ಅಲ್ಲಿರೋದನ್ನೆಲ್ಲಾ ತೆಗೆದು ತೋರಿಸೋದು, ಅವ್ರೇ ಏನ್ ಬೇಕೋ ಅದನ್ ನೋಡ್ಕೊಂಡು ಠಸ್ಸೆ ಹೊಡೆದು ವಾಪಸ್ ಕೊಡ್ತಾರೆ. ಇನ್ನೇನಾದ್ರೂ ಗೊಂದಲ ಆದ್ರೆ ಮೊದ್ಲೇ ನಾವು ಮುದ್ಕೀರಲ್ವಾ ಸಹಾಯ ಮಾಡ್ತಾರೆ ಕಣೇ, ಬೇರೆವ್ರಿಗೆ ಬೈದಂಗೆ ಮುಖ ಮಾಡಲ್ಲ” ಒಂದೇ ಪ್ರಯಾಣಕ್ಕೆ ಇಂಟರ್ನ್ಯಾಶನಲ್ ಟ್ರಾವಲರ್ ನ ಹಾಗೆ ಕನಕಮ್ಮ ಸ್ನೇಹಿತೆಗೆ ಸಲಹೆ ಕೊಟ್ಟುಬಿಟ್ಟಳು. ಇನ್ನೊಂದು ನಾಲ್ಕು ತಿಂಗಳಿಗೆ ವಾಪಸ್ ಬರ್ತೀನಿ ಅನ್ನೋದಕ್ಕೆ ಮಾತು ಮುಗಿಯಿತು.

ಉದಯ್ ಮಿಶ್ರಾ ಮಗಳು ಹುಟ್ಟಿ ಒಂದು ಗಂಟೆಯ ಫೋಟೋದಿಂದ ಹಿಡಿದು ಒಂದು ದಿನದ ಫೋಟೋ, ಹತ್ತು ದಿನದ್ದು, ನೂರು ಗಂಟೆಯದ್ದು ಹೀಗೆ ಫೋಟೋಗಳನ್ನು ತೆಗೆದಿಟ್ಟುಕೊಂಡು ಒಂದು ವರ್ಷದ ಹುಟ್ಟುಹಬ್ಬಕ್ಕೆ ಕೊಲಾಜ್ ಮಾಡಿ ಕೋಣೇಗೆ ಹಾಕುವ ತಾಯಾರಿ ಮಾಡುತ್ತಿದ್ದನ್ನು ಕಂಡು ಕನಕಮ್ಮ ಬಲು ಖುಷಿಯಾದಳು. ತನ್ನ ಮಗಳು ಹುಟ್ಟಿದಾಗ ನನ್ನ ಗಂಡ ತಲೆ ಚಚ್ಚಿಕೊಂಡಿದ್ದರು ಹೆಣ್ಣು ಮಗುವಾಯಿತೆಂದು. ಈಗಿನ ಕಾಲದಲ್ಲೂ ಹೆಣ್ಣುಮಕ್ಕಳನ್ನು ತಿರಸ್ಕಾರ ಭಾವದಿಂದ ನೋಡೋ ಎಷ್ಟೋ ಉದಾಹರಣೆಗಳನ್ನು ನೋಡಿದ್ದ ಕನಕಮ್ಮನಿಗೆ ಉದಯ್ ಮಗಳನ್ನು ಸ್ವಾಗತಿಸಿದ ಸಂಭ್ರಮ ನೋಡಿ ಕಣ್ತುಂಬಿಕೊಂಡಳು. ಮಗು ಆದಷ್ಟು ಬೇಗ ತೂಕ ಹೆಚ್ಚಿಸಿಕೊಂಡು ಆರೋಗ್ಯವಂತೆಯಾದರೆ ಸಾಕು ನಂಜನಗೂಡಿನ ನಂಜುಂಡೇಶ್ವರನಿಗೆ ಸಾವಿರದ ಒಂದು ರುಪಾಯಿ ಕಾಣಿಕೆ ಹಾಕುತ್ತೇನೆಂದು ಹರಕೆ ಹೊತ್ತಳು.

ಚಳಿಗಾಲ ಶುರುವಾಗಿತ್ತು. ಅಪರೂಪಕ್ಕೆ ಆಲಿಕಲ್ಲನ್ನು ನೋಡಿ ಸಂಭ್ರಮ ಪಟ್ಟಿದ್ದ ಕನಕಮ್ಮ ಕಿಟಕಿಯಿಂದಾಚೆ ತುಂತುರು ಮಳೆಯ ಹಾಗೆ ನಿರಂತರವಾಗಿ ಬೀಳುತ್ತಿದ್ದ ಹಿಮವನ್ನು ನೋಡಿ ಹಿಗ್ಗಿಹೋದರು. ಮನೆ ತಾರಸಿ, ಕಿಟಕಿಗಳ ಮೇಲೆ ಕೂತಿದ್ದ ಹಿಮವನ್ನು ನೋಡಿದಾಗ ಯಾಕೋ ಬೆಣ್ಣೆ ಅಲಂಕಾರ ಮಾಡಿದ ಆಂಜನೇಯನ ಮೂರ್ತಿ ನೆನಪಾಯಿತು. ಚಳಿಗೆ ಮಗುವಿಗೆ ತುಂಬಾ ಶೀತವಾಗಿ ಮೂಗು ಸುರೀತಿತ್ತು. ಎಳೇಕಂದಮ್ಮ ಉಸಿರಾಡಲಾಗದೆ ಒದ್ದಾಡುತ್ತಿದ್ದಾಗ ತನುಜಾ ಜೀವ ಬಾಯಿಗೆ ಬಂದಂತಾಯಿತು. ಡಾಕ್ಟರ್ ಹತ್ತಿರ ದೌಡಾಯಿಸಿದಳು, ಅವರು ಸಿರಪ್ ಕೊಟ್ಟರು. ಆದ್ರೆ ಅದು ಶೀತದ ಮೇಲೆ ಉಶ್ಣವಾಗಿ ಇನ್ನೂ ತೊಂದರೆ ಮಾಡಿತು. “ನನ್ ಮಾತ್ ಕೇಳಮ್ಮ, ಕಸ್ತೂರಿ ಮಾತ್ರೆ, ಕಾಳ್ ಮೆಣ್ಸು ತೇಯ್ದು ಹಾಕಿದ್ರೆ ಎಲ್ಲಾ ಸರಿಹೋಗುತ್ತೆ” ಕನಕಮ್ಮ ಧೈರ್ಯ ಹೇಳಿದಳು. ಕೆಲವೇ ತಾಸುಗಳಲ್ಲಿ ಕನಕಮ್ಮನ ಮನೆ ಮದ್ದು ಫಲಿಸಿತು!

ಕೇಟ್ ಮನೆಯಿಂದ ಅವತ್ತು ಜೋರು ಸದ್ದು ಕೇಳಿಬರುತ್ತಿತ್ತು. ಏನಾಯಿತೆಂದು ಕೇಳೋದಾ ಬೇಡವಾ ಅಂತ ಉದಯ್ ಮತ್ತು ತನುಜಾ ಮುಖ ಮುಖ ನೋಡಿಕೊಳ್ಳುತ್ತಿದ್ದರು. “ಅವರ ಮಗ ಯಾಕೋ ಜೋರಾಗಿ ಅಳ್ತಿದೆ. ನೀವ್ ಯಾಕೆ ಹೀಗಿದ್ದೀರಾ? ಅಕ್ಕ ಪಕ್ಕದೋದು ಅಂದ್ರೆ ನೆಂಟರಿಗಿಂತ ಹೆಚ್ಚಿನೋರ್ ಹಾಗಿರ್ಬೇಕು ನಡೀರಿ..” ಕನಕಮ್ಮ ಯಾರ ಮಾತಿಗೂ ಕಾಯದೆ ಪಕ್ಕದಮನೆಗೆ ಹೊರಟೇ ಬಿಟ್ಟರು. ಕೇಟ್ ಐದು ವರ್ಷದ ಮಗು ನಾಯಿಯ ಜೊತೆ ಆಟವಾಡುತ್ತಾ ಗಂಟಲೊಳಗೆ ಕಾಯಿನ್ ನುಂಗಿಬಿಟ್ಟಿದ್ದ. ಉಸಿರಾಡೋಕಾಗದೆ ಒದ್ದಾಡುತ್ತಿದ್ದ. “ಡಾಕ್ಟರ್ ಗೆ ಕಾಲ್ ಮಾಡಿದ್ರಾ? ಅಂತ ತನುಜಾ ಕೇಳಿದಾಗ ಅವರು ಕೇಟ್ ಗಾಬರಿಯಿಂದ ಆನ್ ದ್ ವೇ ಅಂದಳು. ಆದರೆ ಮಗು ಸಾವು ಬದುಕಿನ ನಡುವೆ ಒದ್ದಾಡುತ್ತಿರುವಂತೆ ಕಂಡಿತು. ಕನಕಮ್ಮ ತಕ್ಷಣವೇ ಮನೆಗೆ ಹೋಗಿ ಹರಳೆಣ್ಣೆ ತಂದು, ಹುಡುಗನ ಬೆನ್ನಿಗೆ ಗುದ್ದಿ, ಮಕಡೆ ಮಲಗಿಸಿ, ಗಂಟಲಿಗೆ ಹರಳೆಣ್ಣೆ ಬಿಟ್ಟು ಹೊಟ್ಟೆಯಲ್ಲಿದ್ದನ್ನೆಲ್ಲವನ್ನೂ ಕಕ್ಕಿಸಿಬಿಟ್ಟಳು. ಕಾಯಿನ್ ಕೂಡ ಹೊರಗೆ ಬಂದು ಬಿಡ್ತು. ತನ್ನ ಮಗನನ್ನು ಹಿಂಸೆ ಮಾಡುತ್ತಿದ್ದಾಳೆ ಅಂತ ಕಿರುಚಾಡುತ್ತಿದ್ದ ಕೇಟ್ ಕನಕಮ್ಮನ ಕೈಚಳಕ ಅರ್ಥವಾಗಿ ಧನ್ಯವಾದ ಹೇಳಿದಳು.

ದಿನಗಳು ಉರುಳಿದವು, ಮಗುವಿಗೆ ಎರಡೂವರೆ ತಿಂಗಳು ತುಂಬಿತ್ತು. “ಅತ್ತಿತ್ತ ನೋಡದಿರೂ ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದೂ ಮಲಗು ಮಗುವೆ.. ಜೋಜೋ.. ” ಕನಕಮ್ಮ ತೊಡೆಮೇಲೆ ಮಲಗಿದ್ದ ಕೂಸನ್ನು ತಟ್ಟುತ್ತಾ ಲಾಲಿ ಹಾಡುತ್ತಿದ್ದಳು. ತನುಜಾ ಹಾಡಿಗೆ ತಾನೂ ದನಿಗೂಡಿಸಿದಳು. “ಓ ನಿಂಗೂ ಈ ಹಾಡು ಬರುತ್ತಾ?”. “ಹ್ಮ್ ನಮ್ಮಮ್ಮ ಹಾಡ್ತಿದ್ಲು, ಇವತ್ ಅವ್ಳ್ ಇದ್ದಿದ್ರೆ ಎಷ್ಟ್ ಸಂತೋಷಪಡುತ್ತಿದ್ದಳು. ನೀವ್ ನನ್ನಮ್ಮನ ಸ್ಥಾನವನ್ನು ತುಂಬಿಬಿಟ್ರಿ. ದುಡ್ಡು ಕೊಟ್ರೆ ಎಲ್ಲರೂ ಕೆಲಸ ಮಾಡ್ತಾರೆ ಆದರೆ ನೀವು ನಮ್ಮೋರೇ ಆಗಿಬಿಟ್ರಿ. ತನುಜಾ ಕಣ್ಣಿಂದ ನೀರು ಅಪ್ರಯತ್ನವಾಗಿ ಹರಿಯಿತು. ಕನಕಮ್ಮ ಅವಳನ್ನು ಸಮಾಧಾನಪಡಿಸಿ, ಇಲ್ಲಿಗೆ ಬಂದ್ಮೇಲಿಂದ ನನ್ ಬಗ್ಗೆ ನನಗೆ ಎಷ್ಟ್ ಗೌರವ ಬಂದಿದೆ ಗೊತ್ತಾ? ಅದಕ್ಕೆ ನೀನು ಕಾರಣಾಮ್ಮ, ಈ ವಯಸ್ಸಿನಲ್ಲೂ ನನಗೆ ಕಲಿಯೋಕೆ ಎಷ್ಟೆಲ್ಲಾ ವಿಷಯ ಸಿಕ್ಕಿತು. ಯಾರಿಗೂ ಬೇಡವಾದವಳನ್ನು ಇಂದು ಮನೆಯಲ್ಲಿ ಅಷ್ಟು ಗೌರವ ಕೊಟ್ಟು ಮಾತನಾಡಿಸ್ತಾರೆ ಅಂತ ಹೇಳಿಕೊಂಡಾಗ ತನುಜಾ “ನಾನು ಯಾವಾಗಲೂ ಉದಯ್ ತಂದೆ ತಾಯಿ ನಮ್ಮಿಂದ ದೂರವಿದ್ರೆ ಒಳ್ಳೇದು ಅಂತ ಅಂದುಕೊಳ್ಳುತ್ತಿದ್ದೆ. ಆದರೆ ಈಗ ನನ್ನ ತಪ್ಪಿನ ಅರಿವಾಗಿದೆ. ಮನೆಯಲ್ಲಿ ಹಿರಿಯರಿದ್ದರೆ ಎಷ್ಟು ಒಳ್ಳೇದು ಅಂತ. ಅಮ್ಮ ಹೇಳ್ತಿದ್ಲು ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು ಅಂತ.. ಎಂದು ಹೇಳುತ್ತಾ ತನುಜಾ ಭಾವುಕಳಾದಳು.

ಡಾಕ್ಟರ್ ರಿಪೋರ್ಟ್ ನೆಲ್ಲಾ ತೆಗೆದುಕೊಂಡು ಉದಯ್ ಮನೆಗೆ ಬಂದ. ಅವನ ಮುಖದಲ್ಲಿ ಸಾವಿರ ಕ್ಯಾಂಡಲ್ ಬಲ್ಬ್ ನ ತೇಜಸ್ಸಿತ್ತು. ಮಗು ಆರೋಗ್ಯವಾಗಿದೆ ಇನ್ನೇನು ಚಿಂತೆಯಿಲ್ಲ ಅಂತ ಡಾಕ್ಟರ್ ಹೇಳಿಬಿಟ್ಟಿದ್ದರು. ಮೊದಲು ಒಳಗೆ ಬಂದವನೇ ಕನಕಮ್ಮನ ಕಾಲಿಗೆ ಬಿದ್ದು ಆಶಿರ್ವಾದ ತೆಗೆದುಕೊಂಡ. ಕನಕಮ್ಮ ಬಂದ ಕೆಲಸ ಮಾಡಿ ಮುಗಿಸಾಗಿತ್ತು. ತಾನು ದುಡಿದ ಹಣ ಮಗನ ಮನೆಯ ಭಾರ ಇಳಿಸಿದರೆ ಇಲ್ಲಿನ ಅನುಭವ ಕನಕಮ್ಮನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ತನುಜಾ ಮತ್ತು ಉದಯ್ ಕನಕಮ್ಮನನ್ನು ಭಾರತಕ್ಕೆ ಕಳಿಸುವ ಸಮಯ ಬಂದಿತ್ತು.

ಸಾಯಂಕಾಲ ನಾಲ್ಕು ಗಂಟೆಯ ಫ಼್ಲೈಟ್ ಗೆ ಬೆಳಗ್ಗೆಯಿಂದಲೇ ತಯಾರಿ ಶುರುವಾಗಿತ್ತು. ಬೆಳಗ್ಗೆ ಬೇಗ ಎದ್ದು ತಾನು ಮನೆಯಿಂದ ತಂದಿದ್ದ ನಂಜುಂಡೇಶ್ವರನ ಫೋಟೋಗೆ ತುಪ್ಪದ ದೀಪ ಹಚ್ಚಿದಳು. ಹಣೆಗೆ ದೊಡ್ಡ ಕುಂಕುಮ, ಹಸಿರು ಬಣ್ಣದ ಕಾಟನ್ ಸೀರೆಯುಟ್ಟು ಲಕ್ಷಣವಾಗಿ ಕಂಗೊಳಿಸುತ್ತಿದ್ದ ಕನಕಮ್ಮನನ್ನು ತನುಜಾ ಮತ್ತು ಉದಯ್ ಕಣ್ತುಂಬ ನೋಡಿದರು. ನಿಮ್ಮನ್ನು ಕಳಿಸಿಕೊಡೋದಕ್ಕೇ ಬೇಸರವಾಗ್ತಿದೆ, ಆಗಾಗ ಬಂದುಹೋಗಿ ಅಂದ್ರೆ ಅದು ಸುಳ್ಳುಸುಳ್ಳೇ ಅನ್ನಿಸುತ್ತೆ ಬೆಂಗಳೂರೇನು ಇಲ್ಲಿದೆಯಾ? ತನುಜಾ ಹೇಳಿದಾಗ ತಕ್ಷಣವೇ ಕನಕಮ್ಮ”ಆಗಾಗ ವಿಡಿಯೋ ಕಾಲ್ ಮಾಡ್ತಿರೋಣ ಬಿಡಿ” ಎಂದರು. ಆ ಉತ್ತರ ನಿರೀಕ್ಷಿಸಿರಲಿಲ್ಲವಾದ್ದರಿಂದ ಇಬ್ಬರಿಗೂ ನಗುಬಂದಿತು. ಮಗುವಿನ ಹಣೆಗೆ ಮುತ್ತು ಕೊಟ್ಟು ದೀರ್ಘಾಯಸ್ಸು ಕೊಡ್ಲಿ ಆ ದೇವರು ಅಂತ ಹರಸಿದರು. ಮನೆಯಿಂದ ಹೊರಡುವಾಗ ಕೇಟ್ ತಮ್ಮ ಮನೆಯಲ್ಲಿ ಬೆಳೆದಿದ್ದ ಕಿತ್ತಲೆಹಣ್ಣುಗಳನ್ನು ಕೊಟ್ಟು ನೀವು ಇಲ್ಲಿಗೆ ಬಂದ ಕಾರಣ ತಿಳಿದು ತುಂಬಾ ಖುಷಿಯಾಯ್ತು. ನಿಮ್ಮ, ನಿಮ್ಮ ಗಂಡನ ರಿಲೇಶನ್ ಶಿಪ್ ಗೆ ಹ್ಯಾಟ್ಸ್ ಆಫ಼್ ಅಂದು ಬೀಳ್ಕೊಟ್ಟಳು.

ವಿಮಾನ ರನ್ ವೇ ನಲ್ಲಿ ಓಡಿ, ಆಕಾಶಕ್ಕೆ ಹಾರಿದಾಗ ಕನಕಮ್ಮನ ಹೃದಯ ಹಗುರವೆನಿಸಿತು. ಜೀವನದುದ್ದಕ್ಕೂ ಬೇರೆಯವರ ಮಾತಿನಂತೆ ಬದುಕಿದ್ದರಿಂದ ಮೊದಲ ಬಾರಿಗೆ ಸ್ವಂತ ನಿರ್ಧಾರ ತೆಗೆದುಕೊಂಡು ಬಂದಿದ್ದು ಸಾರ್ಥಕವೆನಿಸಿತು. ಪ್ಲೇನಿನಲ್ಲಿದ್ದ ನೂರಾರು ಜನರ ಮಧ್ಯೆ ಕನಕಮ್ಮ ಮರಳಿ ಗೂಡು ಸೇರುವ ಹಕ್ಕಿಯ ಹಾಗೆ ಪ್ಲೇನ್ ಲ್ಯಾಂಡ್ ಆಗೋದನ್ನೇ ಕಾಯುತ್ತಾ ಕುಳಿತಳು.

‍ಲೇಖಕರು Admin

August 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಲಿಖಿತ ಟಿ. ಎ.

    ಕಥೆ ತುಂಬ ಚೆನ್ನಾಗಿ ಮೂಡಿ ಬಂದಿದೆ ರಂಜಿನಿ ಮೇಡಂ…
    ಕಥೆಯ ಹೆಸರಿನಂತೆ ನಂಜನಗೂಡಿನಿಂದ ನ್ಯೂ ಜರ್ಸಿ ಪಯಣದ ಕಥೆ ರೋಮಾಂಚಕ ವಾಗಿದೆ… ಹಳ್ಳಿಯಾದರೆನು?? ದಿಲ್ಲಿಯಾದರೇನು??? ಮನೆಯಲ್ಲಿ ಹಿರಿ ಜೀವ ಇದ್ರೆ ಮನೆಗೆ ಒಂದು ಕಳೆ… ಕನಕಮ್ಮ ಪತಿಯ ಮೇಲೆ ಇಟ್ಟಿರೋ ಪ್ರೀತಿ ಒಂದೆಡೆ ಯಾದರೆ , ಮಗನ ಮೇಲೆ ಇರುವ ಕಾಳಜಿ ಇನ್ನೊಂದೆಡೆ…
    ಒಟ್ಟಾರೆ ಕಥೆ ತುಂಬ ಇಷ್ಟವಾಯಿತು……❤️

    ಪ್ರತಿಕ್ರಿಯೆ
  2. ರಶ್ಮಿ

    ನಿಮ್ಮ ಕಥಾ ಅಂಕಣ ಬಹಳ ಅರ್ಥಗರ್ಭಿತವಾಗಿದೆ

    ಪ್ರತಿಕ್ರಿಯೆ
  3. Hitesh

    ನಾನೊಬ್ಬ aspiring film maker .
    ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸ .
    ಎಸ್. ಎಲ್ಲ . ಭೈರಪ್ಪ , ತಾ.ರಾ.ಸು , ಪೂರ್ಣಚಂದ್ರ ತೇಜಸ್ವಿ ಮತ್ತು ಚೇತನ್ ಭಗತ್ ನನ್ನ ನಚ್ಚಿನ ಬರಹಗಾರರು .

    ನಿಮ್ಮ ಸಣ್ಣ ಕಥೆಯನ್ನು ಓದಿದೆ . ತುಂಬಾ ಖುಷಿಯಾಯಿತು . ರಸ , ಧ್ವನಿ ಮತ್ತು ಔಚಿತ್ಯವು ಹೂ ಬಳ್ಳಿಯಂತೆ ಅರಳಿವೆ ನಿಮ್ಮ ಬರವಣಿಗೆಯಲ್ಲಿ .

    ಈ ಕಥೆಯ ಕಥಾವಸ್ತುವನ್ನು ಹೇಗೆ ಆಯ್ಕೆ ಮಾಡಿಕೊಂಡಿರಿ . ಪಾತ್ರಗಳನ್ನು ಹೇಗೆ ಬೆಳೆಸಿದಿರಿ .
    ಮತ್ತು, ಈ ಕಥೆಯನ್ನು ಬರೆಯಲು ಸ್ಪೂರ್ತಿ ಎಲ್ಲಿ , ಯಾವಾಗ , ಹೇಗೆ ದೊರಕಿತು ಎಂದು ತಿಳಿಸಿಕೊಡಿ .

    ಅಮೆರಿಕಾದ ವಾತಾವರಣವನ್ನು , ಹಸುಗೂಸಿನ ಹಾರೈಕೆಯನ್ನು , ಮತ್ತು ಸಂಭಂದಗಳ ಭಾವನೆಗಳನ್ನು ತಮ್ಮ ಬರವಣಿಗೆಯ ಸಾಲುಗಳ ಮೂಲಕ ಓದುಗರ ಕಣ್ಣ ಮುಂದೆ ತಂದು ನಿಲ್ಲಿಸಿದಿರಿ . ಅಭಿನಂದನೆಗಳು .

    ಸಾಧ್ಯವಾದರೆ ನಿಮ್ಮ working materialಅನ್ನು ನೇರವಾಗಿ ಕಾಣುವ ಅವಕಾಶವನ್ನು ಕಲ್ಪಿಸಿಕೊಟ್ಟರೆ ಸಂತೋಷ .

    ಪ್ರತಿಕ್ರಿಯೆ
  4. ರವಿ

    ಅಮೇರಿಕಾದ ಅನುಭವ ನನಗೆ ಇದ್ದಿದ್ದರಿಂದ ಕಥೆ ಇನ್ನಷ್ಟು ಮನ ಮುಟ್ಟಿತು. ಹಿಂದಿನ ಜನರೇಶನರಿಗೆ ನಮ್ಮದು ಅನ್ನೊ ಭಾವ, ಕೆಲಸದಲ್ಲಿ ಪ್ರಾಮಾಣಿಕತೆ ಇತ್ತು. ಅಮೂರ್ತ ಸಂಬಂಧಗಳಿಗೆ ಅವರಲ್ಲಿ ಕಾರಣಗಳು ಬೇಕಿರಲಿಲ್ಲ. ಅವರು ಬೆಳೆದು ಬಂದ ವಾತಾವರಣದಲ್ಲಿ ಈಡಿ ಸಮಾಜ ನಮ್ಮದೆಂಬ ನಂಬಿಕೆ ಇರ್ತಿತ್ತು. ನನ್ನ ಅನುಭವದ ಪ್ರಕಾರ ಅವರ ಬದುಕು ಈಗಿನ ಜನರೆಶನ್ ಬದುಕಿಗಿಂತ ಹೆಚ್ಚು ಅರ್ಥಪೂರ್ಣವಗಿತ್ತು. ಇನ್ನೂ ಆಳವಾಗಿ ಸಂಬಂಧಗಳನ್ನು ಪೋಣಿಸಬಹುದಿತ್ತೆನೊ ಅಂತ ಅನ್ನಿಸಿದರೂ ಸಣ್ಣ ಕತೆಗೆ ಪೂರಕವಗಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: