ಪಿ ಆರ್ ವೆಂಕಟೇಶ್ ಕವಿತೆ- ಜೇಡ ಜಾಡಿಸಬೇಕಿದೆ ಗೆಳೆಯ…

ಪಿ ಆರ್ ವೆಂಕಟೇಶ್ 

ಗೆಳೆಯ,
ನನ್ನ ಮನೆಯ ಪಶ್ಚಿಮದ ಮಾಡು
ಜೇಡನ ಗೂಡಾಗಿದೆ.
ಯಾವ ವೈಭವದ, ಅಮೃತದ ಸುರತ ಬೇಕಿಲ್ಲ ನನಗೆ
ಕಟ್ಟಿದ ಬಲೆಗುಂಟ ನಡೆದು ಜೇಡ ಜಾಡಿಸಬೇಕಿದೆ.
ಗುಲಾಮಗಿರಿಯ ಇತಿಹಾಸ ತಡೆಯಬೇಕಿದೆ.
ಗೂಡೊಡಲಿನ ಕಾಡಗಾಳಿಯಲಿ ಗಂಧದ ಅಮಲಿಲ್ಲ, ತಣ್ಣನೆಯ ವಿಷ ಉಸುರು,
ಸಪ್ತ ಸರೋವರದ ಕೊರಳ ಜೋಗುಳದಲ್ಲಿ
ಕಪ್ಪು ಜನರ ದನಿಯಿಲ್ಲ, ಸಾವು ನಿದ್ರಿಸಿದೆ.
ತೊಟ್ಟ ಕಿರೀಟದ ಸಪ್ತ ಕಿರಣದ ತಂತಿಯಲಿ ಎದೆಮಿಡಿತವಿಲ್ಲ
ಕರಳು ಕತ್ತರಿಸುವ ಗರಗಸದ ಸದ್ದು,
ಜೇಡ ನೇಯ್ದ ಪ್ರತಿನೂಲಲ್ಲೂ ವೈರಸ್ ಮೊರೆತ,
ಯುದ್ಧದಾಹದ ಉರಿತ, ದಿಗ್ಬಂಧನಗಳ ಕೊರೆತ.

ಗೆಳೆಯ,
ಇದಕ್ಕೆ ಬೇಕಿಲ್ಲ ಹುಳು ಹುಪ್ಪಟೆ.
ಮೆದುಳೆಂದರೆ, ಧೂಳೆಬ್ಬಿಸಿದ ಸಂತೆಯ ಕೊಳ್ಳುವ ಕೈ,
ತಿನ್ನುವ ಬಾಯಿ, ಎಣ್ಣೆ ಬಾವಿ ಎಂದರೆ ಎಲ್ಲವೂ ಅಲ್ಲಾಬೆಲ್ಲ,
ಮನೆಯ ಯಜಮಾನನಿಗೂ ಮೋಹದ ಸೆಳೆತ.
ಅಮೆಜಾನ್ ಮೊಹಬತ್ತಿನ ಮತ್ತಹೀರಿ
ಜನರಲ್ ಮೋಟಾರ್ಸಿನ ವಯೊಲಿನ್ ನಾದಕ್ಕೆ ಸೊಂಟ ತಿರುವಿ
ಫೋರ್ಡ್ ಡೋಲಿನ ತಾಳಕ್ಕೆ ಕಾಲ್ಗೊಡವಿ
ಬಾಯ ಚಪ್ಪರಿಸಿ, ಮೀಸೆ ನಿಗರಿಸಿ
ಬೀರಿದ ಮಾರ್ಜಾಲ ನಗೆಗೆ
ಲಾಡೆನ್, ಬಾಟಿಸ್ಟಾ, ತಾಲಿಬಾನ್ಗಳ ಹುಟ್ಟು,
ತುಟಿ ಸವರಿ ನಾಲಗೆ ತುಪ್ಪಿದರೆ
ಅಡುಗೆ ಮನೆಯಿಂದ ಅಂಗಳದ ರಂಗೋಲಿಯವರೆಗೆ
ಬಲೆ ಹೆಣಿಕೆ.
ಜೇಡಜಾಡಿನ ಪಾರುಪತ್ಯೆಯಲ್ಲಿ
ನನ್ನ ಮನೆಗೆ ನಾನೇ ಪರಕೀಯ ನಿಮ್ಮಂತೆ.

ಗೆಳೆಯ,
ನನ್ನ ಕವಿತೆ ಗಡಿಗಳ ಕೊಚ್ಚಿದರೆ
ಜೇಡ ಬಲೆಯ ಬೇಲಿ ಕಾಕುತ್ತದೆ.
ಬೇಲಿಯಲಿ ಹೂ ಕನಸಿದರೆ, ಬಂದೂಕುಗಳ ನೆಡುತ್ತದೆ.
ಕದ ಕಿಟಿ ಬಂಧಗಳ ಕೊಸರಿದರೆ, ಕಂದಕ ಅರಳಿಸಿದೆ.
ಬೆವರು ಮರೆತ ಬುದ್ಧಿಬಲದ ಸೊಕ್ಕಿನ ಡಾಲರ್ ನೋಟಕೆ ನನ್ನ ಮನೆ ಸೀಳಿದೆ,
ಪ್ರತಿ ಸೀಳಿನಲ್ಲೂ ಜೇಡನ ಬಲೆ
ಪ್ರವಾದಿ ಟೆಂಟಿನಲಿ ಒಂಟಿ ತೂರಿದಂತೆ.

ಗೆಳೆಯ,
ನನ್ನ ಮನೆಯ ಕಡಲುಗಳೀಗ ಕಣ್ಣೀರ ಹೊಂಡವಾಗಿವೆ.
ಹೊಂಡದ ಪ್ರತಿ ಹನಿಯಲ್ಲೂ ನನ್ನ ಮನೆಯ ದುಃಖ,
ತಾಯ ಮಡಿಲಿಂದ ಜೇಡನ ಬಲೆಗೆ ಬಲಿಯಾದ ಮಕ್ಕಳ ತಾಯಂದಿರ “ಡೆ ಪ್ಲಾಜಾ ಡೆ ಮಾಯೋ” ನಿರೀಕ್ಷೆಯ ಹಾಡು.
ಪ್ರತಿ ಹನಿಯಲ್ಲೂ ಪ್ಯಾಲೆಸ್ತೇನ್ ವಿಧವೆಯರ ಸಂಕಟ.
ರೊಮೆನಿಯಾ ಚಲುವೆಯ ಕನಸ ಕೆಂಡ.
ಪೇಷಾವರ ಮಕ್ಕಳ ರಕ್ತದ ಕಮುಟು
ಬಿಲ್ಕೀಸ್ ಬಾನು ಆತಂಕ,
ಶಂಕೆಯ ಉರಿಗೆ ಸೀದ ಸೀತೆಯರ ಬೂದಿ,
ಗ್ರೀಕ್ ಕೂಲಿಯ ಯಾತನೆ,
ಬೊಲೋವಿಯ, ಮೆಕ್ಸಿಕೊ ಅರ್ಜೆಂಟೆನಾದ ಹಸಿವು ಮೋಸ ಕರುಣೆಯ ಅಕ್ಕಿಮೂಟೆಯನೊದ್ದು ತಟ್ಟಿದ ಹೊಟ್ಟೆಯ ತಾಳ ಎಲ್ಲವೂ ಹೆಪ್ಪಾಗಿವೆ.

ಸದ್ದು ಗೆಳೆಯ ಸದ್ದು ………………
ಕೇಳುತ್ತಿದೆಯೇ ನಿನಗೆ
ಹೆಪ್ಪುಗಟ್ಟಿದ ಹೊಂಡದೊಡಲಲ್ಲಿ ಸುನಾಮಿ ಮಿಸುಕಾಟದ ಸದ್ದು.
ಬುಲುವಿಯಾದ ದಟ್ಟಕಾಡಲ್ಲಿ ಮರುಕಳಿಸಿದ
‘ಚೇ’ನ ಹೆಜ್ಜೆ ಸಪ್ಪಳ
ಅವನೆದೆಯ ಗುಲಾಬಿಯ ನಗು
ಹೆಗಲೇರಿದ ಬಂದೂಕದ ಹಾಡು.

ಚಿಲಿಯ ಹೃದಯಕ್ಕೆ ಚಿಮ್ಮಿದ ಅಲೆಂಡೆಯ ರಕ್ತ ನೆರೂದಾನ ಕವಿತೆ ಹಾಡುತ್ತಿದೆ.
ಕೇಳುತ್ತಿದೆಯೇ ನಿಮಗೆ?

ಜೇಡ ಕಕ್ಕಿದ ಎಲ್ಲ ವಿಷ ನುಂಗಿ
ಅರಳಿದ ಸಕ್ಕರೆ ಬಟ್ಟಲ ಸಿಹಿಮಾತು
ಆಲಿಸು ಗೆಳೆಯ,
ವಿಷ ಬಲೆಗುಂಟ ನಡೆದು ಜೇಡನೆದೆಗೆ ತಿವಿವ ತಾಕತ್ತಿನ ಮಾತದು.

ಗೆಳೆಯ,
ಹೊಂಡ ಬಿರುಸಾಗುತ್ತಿದೆ
ಕೆಂಪು ಕಪ್ಪು ಹಳದಿ ಹಸಿರು ನೀಲಿ ತರವಾರಿ ಬಾವುಟಗಳ ಹಿಡಿ ಮಾಡು
“ವಿ ಷಲ್ ಓವರ್ ಕಮ್” ಹಾಡೋಣ
ಹೊಂಡದ ಗರಿಗಳನೆಲ್ಲ ಹಿಡಿಗೆ ನೆಡೋಣ
ಪೊರೆಕೆ ಕಟ್ಟೋಣ ಜೇಡ ಜಾಡಿಸೋಣ
ಬೆವರ ಚರಿತ್ರೆ ಬೆಳಗುವ ಸೂರ್ಯನಿಗಾಗಿ.

‍ಲೇಖಕರು Admin

September 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: