ಜಿ ಎನ್ ನಾಗರಾಜ್ ಅಂಕಣ- ವಿವಾಹ ಮತ್ತು ಜಾತಿಯ ಜಟಿಲ ಹೆಣಿಗೆ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

25

ವಿವಾಹ ಮತ್ತು ಜಾತಿ ನಮ್ಮ ದೇಶದಲ್ಲಿ ಬಿಡಿಸಲಾಗದಂತೆ ಪರಸ್ಪರ ಹೆಣೆದುಕೊಂಡಿದೆ. ಜಾತಿಯೊಳಗೇ ಮದುವೆ ಎಂಬುದು ಮೀರಲಾಗದ, ಉಕ್ಕಿನ ಬೇಡಿಯಷ್ಟು ಬಲವಾದ ಕಟ್ಡಳೆಯಾಗಿದೆ. ಇದು ಒಂದು ಕಡೆ ಜಾತಿ ಪದ್ದತಿಯನ್ನು ಅದರ ಎಲ್ಲ ಅಮಾನವೀಯ ಅಸಮಾನತೆಗಳೊಂದಿಗೆ ಸಾವಿರಾರು ವರ್ಷಗಳಿಂದ ಉಳಿಸಿ ಮುಂದುವರೆಸುತ್ತಾ ಬಂದಿದೆ. ಮತ್ತೊಂದು ಕಡೆ ಮಹಿಳೆಯರನ್ನು ತೊತ್ತಿನ ಸ್ಥಿತಿಗೆ ದೂಡಲು ಜಾತಿ ಪದ್ದತಿ ಆಧಾರವಾಗಿದೆ. 

ಬೇರೆ ದೇಶಗಳಲ್ಲಿ ಬುಡಕಟ್ಟು ಜೀವನ ಗುಲಾಮಗಿರಿ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿತು. ಅಂತಹುದೇ  ಪರಿಸ್ಥಿತಿ ನಮ್ಮ ದೇಶದಲ್ಲಿ ಬುಡಕಟ್ಟುಗಳನ್ನು ಜಾತಿ ಪದ್ದತಿಯಾಗಿ ರೂಪಿಸಿತು. ಬೇರೆ ಬುಡಕಟ್ಟುಗಳ ಮೇಲೆ ಆಕ್ರಮಣ ಮಾಡಿ ಅವರನ್ನು ಸೋಲಿಸಿದ ಮೇಲೆ ಸೋತ ಜನರನ್ನು ಎರಡು ರೀತಿಯ ದೌರ್ಜನ್ಯಕ್ಕೆ ಗುರಿ ಮಾಡಲಾಯಿತು ಎಂದು ಮಾನವ ಶಾಸ್ತ್ರದ ಅಧ್ಯಯನಗಳು ತಿಳಿಸಿವೆ. ಒಂದು, ಗಂಡಸರನ್ನು ಕೊಲೆಮಾಡುವುದು ಮತ್ತು ಹೆಣ್ಣುಗಳನ್ನು ಗುಲಾಮರನ್ನಾಗಿಸಿ ಹಿಡಿದು ತರುವುದು. ಕಠಿಣ ದುಡಿಮೆಯ ಜೊತೆಗೆ ‌ಲೈಂಗಿಕ ಭೋಗಕ್ಕೆ ಬಳಸಿಕೊಳ್ಳುವುದು.

ಮತ್ತೊಂದು, ಗಂಡಸರು ಮತ್ತು ಹೆಂಗಸರಿಬ್ಬರನ್ನೂ ಗುಲಾಮರನ್ನಾಗಿ ಹಿಡಿದುತಂದು ದುಡಿಮೆಗೆ ಮತ್ತು ಹೆಂಗಸರನ್ನು ಲೈಂಗಿಕ ದುರುಪಯೋಗಕ್ಕೆ ಬಳಸಿಕೊಳ್ಳುವುದು. ಹೀಗೆ ಒಮ್ಮೆ ಹೆಣ್ಣು ಎಂದರೆ ಮಕ್ಕಳಿಗೆ ಜನನವೀಯುವ, ಅವರನ್ನು ಪಾಲಿಸುವ ಅವರ ವಿಶೇಷ ಶಕ್ತಿಗಾಗಿ ಭಯ ಮಿಶ್ರಿತ ಗೌರವದಿಂದ ಕಾಣುತ್ತಿದ್ದವರು ಅವರನ್ನು ಗುಲಾಮರನ್ನಾಗಿ, ಲೈಂಗಿಕ ತೊತ್ತುಗಳನ್ನಾಗಿ ಕಾಣಲಾರಂಭಿಸಿದ ಮೇಲೆ ಅದರ ಪರಿಣಾಮ ತಮ್ಮದೇ ಕುಲದ ಹೆಂಗಸರ ಮೇಲೂ ಆಯಿತು. ತಮ್ಮದೇ ಕುಲದ ಹೆಣ್ಣುಗಳನ್ನು ಪರ ಕುಲದ ಹೆಣ್ಣುಗಳಂತೆ ಗುಲಾಮರಂತೆ‌ ಕಾಣದಿದ್ದರೂ ಅವರ ಸ್ಥಾನ ಬಹಳ ಕೆಳಗಿಳಿಯಿತು. ಗಂಡಸರಿಗಿಂತ ಕೆಳಗಿನ ಸ್ಥಾನ‌ ಹೆಂಗಸರದಾಯಿತು.  ಹೀಗೆ ಗುಲಾಮರ ಕೆಳ ಸ್ಥಾನದ  ಜೊತೆ ಜೊತೆಗೇ ಮಹಿಳೆಯರ ಕೀಳ್ತನವೂ ಅಸ್ತಿತ್ವಕ್ಕೆ ಬಂದಿತು. ಇದು ವಿಶ್ವವ್ಯಾಪಿ ಪ್ರಕ್ರಿಯೆ.

ಶ್ರಮವಿಭಜನೆ ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಯುದ್ಧ, ವಾಣಿಜ್ಯಗಳ ಆಕ್ರಮಣ, ಲೂಟಿಯೇ ಕೆಲವರ ಉದ್ಯೋಗವಾಗತೊಡಗಿತು, ವಾಣಿಜ್ಯ ಮತ್ತೊಂದು ಪರಿಣತಿಯಾಗಿ ಉದ್ಯೋಗವಾಯಿತು. ಕೃಷಿ, ತೋಟಗಾರಿಕೆ, ವಿವಿಧ ಪಶುಗಳ ಪಾಲನೆಗಳೂ ಪರಿಣತಿಯ ವಿಷಯಗಳಾಗಿ ನಿರ್ದಿಷ್ಟ ಜನ ವಿಭಾಗದ ಉದ್ಯೋಗವಾಯಿತು. ಈ ಕೆಲಸದ ವಿಭಜನೆ ಕೂಡ ಕೃಷಿ, ಪಶುಪಾಲನೆ ಪ್ರಧಾನವಾದ ಜನ ಸಮುದಾಯಗಳಲ್ಲಿ ವಿಶ್ವವ್ಯಾಪಿ ವಿದ್ಯಮಾನ. ಆದರೆ ಇದೇನೂ ಬಹಳ ಕಟ್ಟುನಿಟ್ಡಿನ ಕಟ್ಟಲೆಯಲ್ಲ. ಯಾರು ಯಾವಾಗ ಬೇಕಾದರೂ ಪರಿಸ್ಥಿತಿಗೆ ತಕ್ಕಂತೆ ತಮ್ಮ ವೃತ್ತಿಗಳನ್ನು ಬದಲಿಸುತ್ತಿದ್ದರು. ಒಬ್ಬರೇ ಒಂದಕ್ಕಿಂತ ಹೆಚ್ಚು ವೃತ್ತಿಗಳನ್ನೂ ಕೈಗೊಳ್ಳುತ್ತಿದ್ದರು. ಇವುಗಳ ಜೊತೆಗೆ ದೈವಾರಾಧನೆ, ಆಚರಣೆಗಳನ್ನು ನಡೆಸುವುದು, ವೈದ್ಯಕೀಯ ಮತ್ತು ಹಾಡು, ನೃತ್ಯಗಳನ್ನು ಆಚರಣೆಗಳ ಭಾಗವಾಗಿ ಮಾಡುತ್ತಿದ್ದ ಬುಡಕಟ್ಟು ಕಾಲದ ವಿಶೇಷ ಪರಿಣತಿ, ಮಹಿಳೆಯರಿಂದ ವಶಪಡಿಸಿಕೊಕೊಳ್ಳಲ್ಪಟ್ಟದ್ದು, ಅದೂ  ಇತ್ತು. 

ನಮ್ಮ ದೇಶದಲ್ಲಿ ಆರ್ಯ ಸಮುದಾಯಗಳು ಕೃಷಿಯನ್ನು ಕೈಗೊಂಡ ನಂತರ ಈ ಪರಿಣತಿಗಳನ್ನು ಹುಟ್ಟಿನ ಜೊತೆ ಜೋಡಿಸಿ ವರ್ಣಗಳನ್ನಾಗಿ ವಿಂಗಡಿಸಲಾಯಿತು. ಮೊದಲು ದೈವಾರಾಧನೆ ಮಾಡುವ ಬ್ರಾಹ್ಮಣರು, ಯುದ್ಧ ಮಾಡುವ ಕ್ಷತ್ರಿಯರು, ಕೃಷಿ, ಪಶುಪಾಲನೆ, ವ್ಯಾಪಾರಗಳಲ್ಲಿ ತೊಡಗಿದ ವೈಶ್ಯರು ಎಂಬ ಮೂರು ವರ್ಣಗಳ ವ್ಯವಸ್ಥೆ ರೂಪಿಸಲಾಯಿತು.  ಬೇರೆ ಬುಡಕಟ್ಟುಗಳ ಮೇಲೆ ಆಕ್ರಮಣ ಮಾಡಿ ಹಿಡಿದು ತಂದ ಗಂಡು ಹೆಣ್ಣುಗಳು ಮೊದ ಮೊದಲು ದಾಸ, ದಾಸಿಯರೆಂದು ದುಡಿಸಿಕೊಳ್ಳಲ್ಪಟ್ಟರು.

ಕೃಷಿ ಹೆಚ್ಚು ಹೆಚ್ಚು ಪ್ರದೇಶಗಳನ್ನು ವ್ಯಾಪಿಸಿದಂತೆಲ್ಲ, ಹೆಚ್ಚು ಕಾಡುಗಳನ್ನು ಕಡಿದಂತೆಲ್ಲ ಹೆಚ್ಚು ಹೆಚ್ಚು ಜನರನ್ನುಚ್ಚಲ್ಪಟ್ಟರು. ಈ ರೀತಿ ವಶಪಡಿಸಿಕೊಂಡ ಬೇರೆ ಬುಡಕಟ್ಟುಗಳ ಜನರು ಆರ್ಯರ ದೈವಾರಾಧನೆ, ಕಟ್ಟಲೆಗಳ ರೀತಿ ನೀತಿಗಳಿಗಿಂತ ಭಿನ್ನವಾದ ಆಚರಣೆಗಳನ್ನು ಅನುಸರಿಸುತ್ತಿದ್ದರು. ಅವರನ್ನು ಶೂದ್ರ ವರ್ಣದವರೆಂದು ಪರಿಗಣಿಸಲಾಯಿತು. ಹೀಗೆ ಚಾತುರ್ವರ್ಣ್ಯ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು. ಅದರ ಮೊದಲ ದಾಖಲೆ ಋಗ್ವೇದದಲ್ಲಿದೆ. ಅಲ್ಲಿಂದ ಮುಂದೆ ಶಥಪಥ ಬ್ರಾಹ್ಮಣ, ಐತರೇಯ ಬ್ರಾಹ್ಮಣಗಳ ಕಾಲದಲ್ಲಿ ವರ್ಣ ವ್ಯವಸ್ಥೆ ಮತ್ತಷ್ಟು ಗಡುಚಾಯಿತು. ಶೂದ್ರರನ್ನು ಸೇವೆಗಾಗಿಯೇ ಇರುವವರು, ಮೇಲ್ವರ್ಣಗಳು ತಮ್ಮಿಚ್ಚೆಯಂತೆ ಕೊಲ್ಲಲರ್ಹರಾದವರು ಎಂದು ಪರಿಗಣಿಸಲಾಯಿತು.

ಮಹಿಳೆಯರನ್ನೂ ಅತ್ಯಂತ ಕೀಳಾಗಿ ಪ್ರಾಣಿಗಳ ಜೊತೆಗೆ ಹೋಲಿಸಲಾಯಿತು. ಕಠಿಣ ದುಡಿಮೆಗೆ ಅರ್ಹಳಾದವಳು ಎಂದು ಪರಿಗಣಿಸಲ್ಪಟ್ಟಿತು. ಮಕ್ಜಳನ್ನು ಹೆರವುದೇ ಮಹಿಳೆಯರ ಮೌಲ್ಯದ ನಿಕಷವಾಯಿತು ವಶಪಡಿಸಿಕೊಂಡು ದುಡಿತಕ್ಕೆ ಅಂದಿನ ಕುಲ ಪ್ರಜ್ಞೆಯ ಪ್ರಕಾರ ತಮ್ಮ ತಾಯಿ ಅಥವಾ ಸೋದರಿಯರು ಅವರ ಮಕ್ಕಳು ತಮ್ಮದೇ ಬೆಡಗಿನ ಹೆಣ್ಣುಗಳು ತಮ್ಮವರು ಅವರೆಲ್ಲರ ಬದುಕು, ರಕ್ಷಣೆ ಆ ಬೆಡಗಿನ ಎಲ್ಲರ ಹೊಣೆ ಎಂಬ ಭಾವನೆ. ಪುರುಷರ ಪಾರುಪತ್ಯ ಆರಂಭವಾದ ಮೇಲೂ  ಬಹಳ ಕಾಲ ಬೆಡಗಿನ ಆಸ್ತಿ, ಉತ್ಪತ್ತಿ, ಸಂಪತ್ತು ತಾಯಿ ಕುಲದ ಆದಾರದಲ್ಲಿಯೇ ಮುಂದುವರೆಯಿತು. ಸೋದರ ಮಾವಂದಿರು ಬೆಡಗಿನ ಯಜಮಾನ,ಕಾರಣವರ್ ಆಗಿ ವ್ಯವಹಾರ ನಡೆಸಿದರು. ಈ ಭಾವನೆಯ ಪ್ರಕಾರ ತಾಯಿ , ಸೋದರಿ ತಮ್ಮ ಕುಲದವರು. ಹೆಂಡತಿ ಬೇರೆ ಬೆಡಗಿನವಳು. ಬೇರೆ ಕುಲದ ಮೇಲೆ ಧಾಳಿ ಹಿಡಿತಂದ ಗುಲಾಮರೂ ಬೇರೆಯವರೇ ಆದರೆ ಬೇರೆ  ಕುಲದವರು. ಹಾಗೆ ಹೆಂಡತಿ ಬೇರೆ ಬೆಡಗಿನವಳಾಗಿ ಅವಳ ಸ್ಥಾನ ಗುಲಾಮ, ದಾಸಿಯರಿಗಿಂತ ಮೇಲೆ, ತಮ್ಮದೇ ಬೆಡಗಿನ ರಕ್ತ ಸಂಬಂಧಿಗಳಿಗಿಂತ  ಕೆಳಗೆ.  ಗಂಡನ ಗಂಡನ ಕುಟುಂಬದ ಸೇವೆಗೆ ಮೀಸಲೆಂದು ಪರಿಗಣಿತರಾದರು. 

ಮಹಿಳೆಯರ ಅಧೀನ ಸ್ಥಿತಿ ನಮ್ಮ ದೇಶಕ್ಕೆ ವಿಶಿಷ್ಠವಾದ ವರ್ಣ ವ್ಯವಸ್ಥೆ ಜಾತಿ ಪದ್ದತಿಯಾಗಿ ವಿಸ್ತರಿಸಿ ಮತ್ತಷ್ಟು ಜಟಿಲವಾಗಿದೆ. ಎಲ್ಲ ಮಹಿಳೆಯರೂ ಕೀಳು . ಶೂದ್ರ, ಹಿಂದುಳಿದ ಜಾತಿಯ ಮಹಿಳೆಯರು ಬೇರೆ ಮಹಿಳೆಯರಿಗಿಂತ ಕೀಳು , ಮುಟ್ಟಿಸಿಕೊಳ್ಳಬಾರದ ದಲಿತ ಮಹಿಳೆಯರು ಬೇರೆಲ್ಲ ಮಹಿಳೆಯರಿಗಿಂತ ಕೀಳು, ತೊತ್ತಿನಂತೆ ದುಡಿಸಿಕೊಳ್ಳಲ್ಪಡುತ್ತಿರುವವರು. ಮೇಲ್ಜಾತಿ ಮಹಿಳೆಯರಿಗೆ ಅವಳು ಜೀತದಾಳು, ಪುರುಷರಿಗೆ ಅವರ ವಿಸ್ತಾರ ಹೊಲ ತೋಟಗಳಲ್ಲಿ ಮಿತಿ ಮೀರಿ ದುಡಿಸಿಕೊಳ್ಳುವ ಕೂಲಿಕಾರಳು. ಅದೇ ಸಮಯದಲ್ಲಿ ಅವರ ಲೈಂಗಿಕ ಪಿಪಾಸೆ ಮತ್ತು ಕ್ರೌರ್ಯಗಳಿಗೆ ಸುಲಭ ಗುರಿ.

ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಹೀಗೆ  ಒಂದು ವಿಭಾಗದ ಮಹಿಳೆಯರನ್ನು ತೊತ್ತುಗಳನ್ನಾಗಿ ಪರಿಗಣಿಸಲು ಅವಕಾಶ ನೀಡುತ್ತದೆಯೋ ಅಲ್ಲಿಯವರೆಗೆ ಎಲ್ಲ ಮಹಿಳೆಯರೂ ವಿವಿಧ ಪ್ರಮಾಣದಲ್ಲಿ, ಸ್ವಲ್ಪ ಹೆಚ್ಚು ಸ್ವಲ್ಪ ಕಡಿಮೆ ತೊತ್ತುಗಳಂತೆ ಪರಿಗಣಿಸಲ್ಪಡುತ್ತಾರೆ. ಅದೇ ರೀತಿ ದಲಿತ ಪುರುಷರೂ ತೊತ್ತುಗಳಂತೆ ಜೀತಗಾರರಾಗಿ ಪರಿಗಣಿಸಲ್ಪಡುತ್ತಾ ಬರಲಾಗಿದೆ. ಜಾತಿಯೊಳಗೇ ಮದುವೆ ಎಂಬುದು ಈ ಸ್ಥಿತಿಗೆ ಕಾರಣವಾಗಿದೆ. 

ಆದ್ದರಿಂದ ಜಾತಿ ವಿನಾಶವಾಗದೆ ಮಹಿಳಾ ಅಧೀನತೆಯ ನಾಶ ಸಾಧ್ಯವಿಲ್ಲ. ಮಹಿಳಾ ಅಸಮಾನತೆ ನಾಶವಾಗದೆ ಜಾತಿ ವಿನಾಶ ಸಾಧ್ಯವಿಲ್ಲ. 

ಶರಣರು, ಫುಲೆ, ಅಂಬೇಡ್ಕರ್ ಕಂಡ ಸತ್ಯ. 
ಜಾತಿ ಮತ್ತು ಮಹಿಳೆಯರ ಪ್ರಶ್ನೆಯ ಹೆಣಿಗೆಯ ಜಟಿಲತೆಯನ್ನು ಜಾತಿ ವ್ಯವಸ್ಥೆಯ ವಿರುದ್ಧ ದನಿಯೆತ್ತಿದ ಎಲ್ಲರೂ ಮನಗಂಡಿದ್ದಾರೆ. ಜಾತಿ ವ್ಯವಸ್ಥೆಯ ವಿರುದ್ಧದ ಬರಹ, ಹೋರಾಟಗಳ ಜೊತೆ ಜೊತೆಗೆ ಮಹಿಳಾ ಸಮಾನತೆಯ ಪರವಾಗಿ ದೃಢವಾಗಿ ದನಿ ಎತ್ತಿದ್ದಾರೆ, ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ. ವಚನಕಾರರಲ್ಲಿ ಮೊತ್ತ ಮೊದಲಿಗನಾದ ಜೇಡರ ದಾಸಿಮಯ್ಯನವರು ಮಹಿಳೆಯರು ಪುರುಷರಲ್ಲಿ ಬೇಧವಿಲ್ಲ ಎಂದು ಬರೆದ –
ಮೊಲೆ ಮುಡಿ ಬಂದರೆ ಹೆಣ್ಣೆಂಬರು,ಗಡ್ಡ ಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ ಈ ವಚನ  ಬಹಳ ಜನರಿಗೆ ಬಾಯಿಪಾಠವಾಗಿದೆ. ಅವರದೇ ಮತ್ತೊಂದು ವಚನ ಹೀಗಿದೆ:

ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೆ,ಒಡೆಯರ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ?ಕಡೆಯಲಿದ್ದ ಅಂತ್ಯಜನು ಹಿಡಿದಿದ್ದನೇ ಹಿಡಿಗೋಲನೀನಿಕ್ಕಿದ ತೊಡಕನೀ ಜಡರೆತ್ತ ಬಲ್ಲರೈ ರಾಮನಾಥ 
ಹೀಗೆ ಜಾತಿ ವ್ಯವಸ್ಥೆಯ‌ ಅಸಮಾನತೆ ಮತ್ತು ಮಹಿಳಾ ಅಸಮಾನತೆ ಎರಡನ್ನೂ ಒಮ್ಮೆಗೇ ಪ್ರಶ್ನಿಸುತ್ತಾರೆ. ಬಸವಣ್ಣನವರೂ ಸೇರಿದಂತೆ ಇತರ ವಚನಕಾರ, ವಚನಕಾರ್ತಿಯರೂ ಎರಡನ್ನೂ ಜೊತೆಗೇ ಪ್ರಶ್ನಿಸುತ್ತಾರೆ. ಅದಕ್ಕೆ ಮೂಲವಾದ ವೈದಿಕ ಧಾರ್ಮಿಕ ‌ಸಿದ್ಧಾಂತ ಮತ್ತು ಗ್ರಂಥಗಳನ್ನೂ, ದೇವಾಲಯಗಳಂತಹ ಸಂಸ್ಥೆಗಳನ್ನೂ ಪ್ರಶ್ನಿಸುತ್ತಾರೆ. ಜ್ಯೋತಿ ಬಾ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ಮಹಿಳಾ ಸಮಾನತೆ ಮುಖ್ಯವಾಗಿ ಶಿಕ್ಷಣ, ವಿಧವಾ ಸುಕ್ಷೇಮಕ್ಕಾಗಿ ಅದರಲ್ಲೂ ಕೂಡ ತಳ ಸಮುದಾಯಗಳ ಮಹಿಳೆಯರಿಗಾಗಿ  ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅದೇ ಸಮಯದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಅವರದು ಬಹಳ ಗಟ್ಟಿ ಧ್ವನಿ ಮತ್ತು ಹೋರಾಟ. ಅವರೂ ಕೂಡಾ ಈ ಎರಡೂ ಅಸಮಾನತೆಗಳಿಗೆ ಕಾರಣವಾದ ಪುರಾಣ, ವೈದಿಕ ಗ್ರಂಥಗಳನ್ನು ಕೂಡಾ ಪ್ರಶ್ನಿಸಿದರು. ಈ ದಿಸೆಯಲ್ಲಿ ಮುಂದೆ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಡಾ. ಅಂಬೇಡ್ಕರ್ ಆದಿಯಾಗಿ ಅನೇಕರಿಗೆ ಹೊಸ ಮಾದರಿ ರೂಪಿಸಿದವರು. ಡಾ. ಅಂಬೇಡ್ಕರ್‌ ಅವರು ಬದುಕಿನುದ್ದಕ್ಕೂ ಜಾತಿ ವಿನಾಶಕ್ಕಾಗಿ‌ ತುಡಿದವರು. ಅವರೂ ಕೂಡಾ‌ ಜಾತಿ ವ್ಯವಸ್ಥೆ ದೀರ್ಘ ಕಾಲ ಉಳಿದು ಕಾಡುತ್ತಿರುವುದಕ್ಕೆ ಜಾತಿಯೊಳಗೇ ವಿವಾಹ‌ ಮತ್ತು‌ ಜಾತಿ ಹೊರಗಿನ‌ ವಿವಾಹ ನಿಷೇಧದ ಕಠಿಣ ಕಟ್ಟಲೆಗಳು ಕಾರಣ ಎಂದು ಜಾತಿ‌ ಬಗೆಗಿನ ಅವರ ಮೊದಲ‌ ಪ್ರಬಂಧದಲ್ಲಿಯೇ‌ ಗುರುತಿಸಿದರು. 

ಈ ದಿಸೆಯಲ್ಲಿ ಅವರ ತಿಳುವಳಿಕೆಯ ಬೆಳವಣಿಗೆಯ ಆರಂಭದ ದಿನಗಳಿಂದಲೇ ಮಹಿಳೆಯರ‌ ಹಕ್ಕುಗಳ ಬಗ್ಗೆ ಪ್ರತಿಪಾದಿಸುತ್ತಾ ಬಂದರು.‌  ಮಹಾಡ್ ಸತ್ಯಾಗ್ರಹದ ನಂತರ 1927 ರ ಡಿಸೆಂಬರ್ ನಲ್ಲಿ ಮನುಸ್ಮೃತಿಗೆ ಶಾಸ್ತ್ರೋಕ್ತ ಅಂತ್ಯ‌ ಸಂಸ್ಕಾರ ಮಾಡುವಾಗಿ‌ನ ಸಂದರ್ಭ ಗಮನಾರ್ಹ‌.  ಅದರಲ್ಲಿ ಜಾತಿ ವ್ಯವಸ್ಥೆಯ ಅಮಾನವೀಯ ಕಟ್ಟಲೆಗಳನ್ನು ವಿಧಿಸುವಾಗಲೇ ಮಹಿಳೆಯರಿಗೂ ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಿರುವುದನ್ನು ಗುರುತಿಸುತ್ತಾ ಅದನ್ನು ಸುಡುವ ಕ್ರಿಯೆಯಲ್ಲಿ ಮಹಿಳೆಯರನ್ನೂ ಒಳಗೊಂಡರು.

ಕರ್ನಾಟಕದಲ್ಲಿ ಕುಲಾಧಿಪತ್ಯ : 
ಕೃಷಿ ಭೂಮಿ, ಪಶು ಮಂದೆಗಳ ಆಕ್ರಮಣ ,ಯುದ್ಧಗಳು ಮತ್ತು ದೂರ ವಾಣಿಜ್ಯ ಹಲವು ಬುಡಕಟ್ಟುಗಳು ಸೇರಿ ಕುಲಗಳಾಗಿ ರೂಪುಗೊಳ್ಳುವ ಅನಿವಾರ್ಯತೆಯನ್ನು ಉಂಟು ಮಾಡಿತು ಎಂಬ ಬಗ್ಗೆ ಓದಿದ್ದೀರಿ. ಇಂತಹ ವಿವಿಧ ಕುಲಗಳು ತಮ್ಮ ಕೃಷಿಗೆ ಭೂಮಿಯನ್ನು ವಶಪಡಿಸಿಕೊಂಡರು. ಅಲ್ಲಿದ್ದ ಅರಣ್ಯವನ್ನು ಕಡಿದು ಕೃಷಿಗೆ ಒಳಪಡಿಸಿದರು. ಅಲ್ಲಿ ಖಾಯಂ ವಸತಿಗಳನ್ನು ರೂಪಿಸಿಕೊಂಡರು. ಆ ಮೂಲಕ ಹಳ್ಳಿಗಳು ಅಸ್ತಿತ್ವಕ್ಕೆ ಬಂದವು.‌ 
ಇಂದು ಕರ್ನಾಟಕವೆನಿಸಿಕೊಂಡಿರುವ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಕುಲಗಳು ಸಾವಿರಾರು ವರ್ಷಗಳಿಂದ ‌ವಾಸ ಮಾಡುತ್ತಾ ಬಂದಿರುವುದನ್ನು ಹಲವು ಕನ್ನಡ ಶಾಸನಗಳು ದಾಖಲಿಸಿವೆ.ಇಂತಹ ನೂರಾರು ಕುಲಗಳ ಹೆಸರುಗಳು ಈ ಶಾಸನಗಳಲ್ಲಿ ದೊರಕುತ್ತವೆ. ಅಂತಹ ಕೆಲ ಕುಲಗಳ ಹೆಸರುಗಳು ಹೀಗಿವೆ :ಮೋರಕ ಕುಲ, ಖಚರ ಕುಲ, ಬೈರುಂಬರ ಕುಲ, ಬಿಳಿ ಕುಲ, ಕೊಮ್ಮೆಯರ ಕುಲ, ಮಾಳೆಯರ ಕುಲ, ಗುದಿಯರ ಕುಲ, ಮದುರೆಯ ಕುಲ, ತೆಳ್ಳರ ಕುಲ, ಎಮ್ಮೆಯರ ಕುಲ, ಎಮ್ಮಾವುರ ಕುಲ, ಸಂಕಿಯರ ಕುಲ, ಹೊರಲಾದಿ ಕುಲ, ಪರಮೆಯರ ಕುಲ, ಬಟಾರಿ ಕುಲ, ಕೋವಳೆಯರ ಕುಲ, ಕಮ್ಮೆ ಕುಲ, ಸೆಳರ ಕುಲ, ಶಳಾರ ಕುಲ, ಶಿಳಾರ ಕುಲ, ಗುಜ್ಜರ ಕುಲ, ಚೆಳ್ಳಿಯರ ಕುಲ ಇತ್ಯಾದಿ,ಇತ್ಯಾದಿ. ಇಂತಹ ಕುಲಗಳ ನಡುವೆ ಕೆಲವು ಕುಲಗಳಿಗೆ ವಿಶೇಷ ಅನುಕೂಲಗಳು ದೊರೆತವು.  ಅವು ಫಲವತ್ತಾದ ನೀರಾವರಿಯುಳ್ಳ ಕೃಷಿ ಭೂಮಿಯಾಗಿದ್ದರೆ ಹೆಚ್ಚು ಆಹಾರ ಮತ್ತಿತರ ಬೆಳೆಗಳ ಉತ್ಪಾದನೆ, ಅವುಗಳನ್ನು ಬಳಸಿ ಹೆಚ್ಚು ಸೈನಿಕರನ್ನುಳ್ಳ ಪಡೆ ನಿರ್ಮಾಣ. ಹೆಚ್ಚು ಕಾಲ ಯುದ್ಧಗಳಲ್ಲಿ ತೊಡಗುವ ಸಾದ್ಯತೆ ಇತ್ಯಾದಿ. ಕುದುರೆಗಳ ಲಭ್ಯತೆ, ಕಬ್ಬಿಣದ ಲಭ್ಯತೆ, ಗಾಲಿ ಚಕ್ರಗಳನ್ನು ಕಂಡುಹಿಡಿದದ್ದು, ಕುಲಗಳ ವಶದಲ್ಲಿದ್ದ ಭೂಮಿಯ ಮೇಲೆ  ಮುಖ್ಯ ವಾಣಿಜ್ಯ ಮಾರ್ಗಗಳು ರೂಪುಗೊಂಡದ್ದು, ಇವರ ವಶದಲ್ಲಿದ್ದ ಪ್ರದೇಶದಲ್ಲಿ ವ್ಯಾಪಾರದಲ್ಲಿ ಬಹಳ ಬೇಡಿಕೆಯುಳ್ಳ ವಿಶೇಷ ವಸ್ತುಗಳು, ಅಮೂಲ್ಯ ಮಣಿಗಳು,ಕವಡೆಗಳು ದೊರಕುವುದು  ಇತ್ಯಾದಿ. 

ಕಬ್ಬಿಣದ ಉಪಯೋಗ ಕೃಷಿ ಕೆಲಸಗಳಿಗೆ ಅವಶ್ಯವಾದ ಕುಡುಗೋಲು, ಮಚ್ಚು, ಕೊಡಲಿ, ನೇಗಿಲ ಗುಳ ಮೊದಲಾದವುಗಳ ತಯಾರಿಗೆ ಅನುಕೂಲಕರವಾಗಿ ಕೃಷಿ ಉತ್ಪಾದನೆ ಕಬ್ಬಿಣ ದೊರಕದ ಕುಲಗಳಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಿತು. ಅದೇ ಸಮಯದಲ್ಲಿ ಯುದ್ಧದ ಶಸ್ತ್ರಾಸ್ತ್ರಗಳ ತಯಾರಿಕೆಗೆ ಅನುಕೂಲವಾಗಿ ಒದಗಿತು. ಇದೇ ರೀತಿ ಕುದುರೆಗಳ ಲಭ್ಯತೆ, ಅವುಗಳನ್ನು ಪಳಗಿಸುವ ನೈಪುಣ್ಯ ಕೂಡಾ ಯುದ್ಧ, ಕೃಷಿ, ವ್ಯಾಪಾರಗಳಿಗೆ ಅನುಕೂಲಕರವಾಯಿತು. 

ಹಾಗೆ ಅನುಕೂಲ ದೊರೆತ  ಕುಲಗಳಲ್ಲಿ ಕೆಲವು ಬಲಿಷ್ಟವಾಗುತ್ತಾ ನಡೆದವು.‌ ಉಳಿದ ಕುಲಗಳು ತಾವು ಕೃಷಿ ಮಾಡುತ್ತಿದ್ದ ಭೂಮಿಯನ್ನು ಕಾಪಾಡಿಕೊಳ್ಳುವುದಕ್ಕೆ ಸೀಮಿತವಾದವು.‌ ಕುಲದ ಗೌಡುಗಳು, ಗುಡ್ಡರುಗಳು, ಅದರೊಳಗೆ ವಿವಿಧ ಬುಡಕಟ್ಟುಗಳ ನಾಯಕರು, ಬಳಿ/ಬೆಡಗುಗಳ ನಾಯಕರು ಹೀಗೆ ಒಂದು ಲಂಬ ಶ್ರೇಣಿ ಏರ್ಪಟ್ಟಿತು. ಕುಲಗಳ ಒಗ್ಗಟ್ಟೇ ಈ ಕುಲಗಳ ಮುಖ್ಯ ಸಾಧನವಾಯಿತು. ವಿಶೇಷ   ಕುಲಗಳಿಗೆ ಸೇನಾ‌ನಾಯಕರುಗಳೇ ಕುಲಾಧಿಪತಿಗಳಾದರು. ತಮ್ಮ ಸುತ್ತ ಮುತ್ತಲ ಕುಲಗಳ ಭೂಮಿಯನ್ನು ಆಕ್ರಮಿಸಿದವು. ತಮ್ಮ ಕುಲದ ಭೂಮಿಯನ್ನು ವಿಸ್ತರಿಸಿಕೊಂಡವು. ಕರ್ನಾಟಕದಲ್ಲಿ ಕಪಿಲಾ ನದಿಯ ಬಯಲಿನಲ್ಲಿ ಪುನ್ನಾಟರು, ಬೇರೆ ಬೇರೆ ಪ್ರದೇಶಗಳಲ್ಲಿ ಬಾಣರು, ಕೊಂಗಣರು, ಕೊಡವರು, ಕೋಶರು, ತುಳುವರು, ಕದಂಬರು  ಇಂತಹ ಕೆಲವು ಕುಲಗಳು ಸಣ್ಣ ಸಣ್ಣ ಪಾಳೆಯಪಟ್ಟುಗಳನ್ನು ಸ್ಥಾಪಿಸಿಕೊಂಡರು.

ಇವುಗಳಲ್ಲಿ ಉತ್ತರ ಕನ್ನಡದ ಜಿಲ್ಲೆಯ ಪ್ರದೇಶದಲ್ಲಿ ಕದಂಬರು ಮತ್ತು ಕೋಲಾರ ಪ್ರದೇಶದಲ್ಲಿ ಗಂಗರು ಪ್ರಮುಖರು. ಈ ಎರಡೂ ಕುಲಗಳು ಪ್ರಮುಖ ವಾಣಿಜ್ಯ ಮಾರ್ಗಗಳ ಮೇಲೆ ಹಿಡಿತ ಹೊಂದಿದ್ದರು.‌ ಯುದ್ಧ, ವಾಣಿಜ್ಯ ಮುಂತಾದ ಕ್ರಮಗಳಿಂದ ವಿಶಾಲ ಪ್ರದೇಶವನ್ನು ಆಕ್ರಮಿಸಿ ರಾಜ್ಯಗಳನ್ನು ಸ್ಥಾಪಿಸಿದರು. ಕುಲಾಧಿಪತ್ಯಗಳು ಭೂಮಿಯನ್ನು ಹಿಡಿದುಕೊಳ್ಳುವ  ಮತ್ತು ನಂತರ ರಾಜಾಡಳಿತಗಳನ್ನು ಸ್ಥಾಪಿಸುವ ಕ್ರಿಯೆಯಲ್ಲಿ ಮೇಲು ಕೀಳಿನ ಪುರುಷಾಧಿಪತ್ಯ ವೈದಿಕ ವರ್ಣ ವ್ಯವಸ್ಥೆಯನ್ನು ಅಂಗೀಕರಿಸಿತು.

‍ಲೇಖಕರು Admin

September 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: