ಪಾರ್ವತಿ ಜಿ ಐತಾಳ್ ಓದಿದ ʼಪ್ರೀತ್ ಸುʼ

ಪಾರ್ವತಿ ಜಿ ಐತಾಳ್

ಮುಂಬಯಿ ಕನ್ನಡಿಗ ಸಣ್ಣ ಕಥೆಗಾರ ರಾಜೀವ ನಾಯಕರ ಮೊದಲ ಕಾದಂಬರಿ ‘ಪ್ರೀತ್ ಸು’ ಶೀರ್ಷಿಕೆಯೇ ಹೇಳುವಂತೆ ಇದರ ವಸ್ತು ಪ್ರೀತಿ-ಪ್ರೇಮ. ಮುಖ್ಯವಾಗಿ ಗಂಡು-ಹೆಣ್ಣುಗಳ ನಡುವಣ ಪ್ರೀತಿ. ಇಲ್ಲಿ ಪ್ರಧಾನ ಭೂಮಿಕೆಯಲ್ಲಿರುವವರು ಹದಿಹರೆಯದವರಾದರೂ ವಯಸ್ಸಾದಂತೆ  ಮಾಗುವ ಪ್ರೀತಿ ಆಧ್ಯಾತ್ಮಿಕತೆಯನ್ನು ಹೇಗೆ ರೂಢಿಸಿಕೊಳ್ಳುತ್ತದೆ ಅನ್ನುವುದನ್ನೂ ಲೇಖಕರು ಇನ್ನೊಂದು ಪಾತ್ರದ ಮೂಲಕ ತೋರಿಸಿ ಕೊಡುತ್ತಾರೆ. ಸಾಮಾನ್ಯ ಪ್ರೇಮ ಕಥೆಗಳಿಗಿಂತ ಭಿನ್ನವಾಗಿ  ಪ್ರೀತಿಯ ಕುರಿತಾದ ಒಂದು ಗಂಭೀರ ವ್ಯಾಖ್ಯಾನ ಈ ಕಾದಂಬರಿಯಲ್ಲಿದೆ.

ಕಾರವಾರದ ಸುಂದರ ಕಡಲತೀರದ ಹುಡುಗ ಪ್ರೀತಂ ನಲ್ಲಿ ಆ ಊರಿಗೆ ಕಾಲೇಜು ಓದಲೆಂದು ಬರುವ ಸುಮಿ ಅನುರಕ್ತಳಾಗುತ್ತಾಳೆ. ಅವಳು ಬುದ್ಧಿವಂತ ಹುಡುಗಿ. ಓದಿನಲ್ಲಿ ಜಾಣೆ. ಆದರೆ ಹದಿಹರೆಯ. ವಯೋಸಹಜವಾಗಿ ಸಂಗಾತಿ ಬೇಕೆಂಬ ಬಯಕೆ ಅವಳಲ್ಲೂ ಹುಟ್ಟುತ್ತದೆ. ಹಾಗೆಂದು  ದುಡುಕುವ ಹುಡುಗಿ ಅವಳಲ್ಲ. ಆಯ್ಕೆಯಲ್ಲಿ ಅವಳದ್ದೇ ಆದ ಕನಸುಗಳನ್ನು ಹೊತ್ತವಳು ಅವಳು. ಇದ್ದಕ್ಕಿದ್ದಂತೆ ಒಂದು ಸಂಜೆ ಅವಳಿಗೆ ಅತ್ಯಂತ ಪ್ರಿಯವಾದ ಕಡಲತೀರದಲ್ಲಿ ಅವನು ಕಾಣಸಿಗುತ್ತಾನೆ‌. ಬೆಸ್ತರ ಹುಡುಗ. ತೀರಾ ಮಿತಭಾಷಿಯಾದ ಅವನೂ ಸುಲಭದಲ್ಲಿ ಯಾವ ಹುಡುಗಿಗೂ ಸೋಲುವ ಸ್ವಭಾವದವನಲ್ಲ. ಅಂತೂ ಅವರಿಬ್ಬರೂ ಪ್ರೇಮಿಗಳಾಗುತ್ತಾರೆ.

ಬಡವನಾದ ಪ್ರೀತಂ ಜತೆಗೆ ಅವಳು ಸ್ನೇಹ ಬೆಳೆಸುವುದು ವಿರುಪಾಕ್ಷಿಗೆ ಇಷ್ಟವಾಗುವುದಿಲ್ಲ. ಅವರದ್ದು ಕಲಬುರಗಿಯ ಒಂದು  ಪ್ರತಿಷ್ಠಿತ ಮನೆತನ. ಪ್ರೇಮವನ್ನು ಹೊಡೆದುರುಳಿಸಿದ ಒಂದು ಇತಿಹಾಸವೂ ಅದಕ್ಕಿದೆ. ಸುಮಿಯ ಸೋದರತ್ತೆ ಶೈಲಾ ಹಿಂದೆ ಹುಸೇನ್ ಎಂಬ ಮುಸಲ್ಮಾನ ಹುಡುಗನನ್ನು ಪ್ರೀತಿಸಿದಾಗ ಅಣ್ಣ ಲಿಂಗಣ್ಣ ಪಾಟೀಲ (ಸುಮಿಯ ತಂದೆ) ಅದನ್ನು ಉಗ್ರವಾಗಿ ವಿರೋಧಿಸಿ  ಆ ಮದುವೆ ಆಗದಂತೆ ತಡೆಹಿಡಿದಿದ್ದ. ಈಗ ಆ ಕೆಲಸವನ್ನು ವಿರುಪಾಕ್ಷಿ ಮಾಡುತ್ತಾನೆ. ತಂಗಿಯನ್ನು ಬಲವಂತವಾಗಿ ಊರಿಗೆ ಕರೆದೊಯ್ದು  ಯಾರೂ ಕಾಣದ ಜಾಗದಲ್ಲಿ ಬಚ್ಚಿಡುತ್ತಾನೆ. ಆದರೆ ಅವಳಿಲ್ಲದೆ ಹುಚ್ಚನಂತಾದ ಪ್ರೀತಂ ಅವಳನ್ನು ಹುಡುಕುತ್ತ ಕಲಬುರಗಿಗೆ ಬಂದು ಈಗ ಟೀಚರ್ ಆಗಿರುವ ಶೈಲತ್ತೆಯ ಸಹಾಯದಿಂದ ಸುಮಿಯನ್ನು ಪಡೆಯಲೆತ್ನಿಸುತ್ತಾನೆ‌. ಆ ಸಮಯದಲ್ಲಿ ಆ ಊರಿಗೆ ಯಾವುದೋ ಒಂದು ಸಮಾರಂಭಕ್ಕೆಂದು  ಬರುವ ಶೈಲತ್ತೆಯ ಪ್ರೀತಿಯ ಲೇಖಕ  ನಾಗತಿಹಳ್ಳಿ ಚಂದ್ರಶೇಖರ್ ಅವರ ಸಹಾಯ ತೆಗೆದುಕೊಂಡು  ಕಥೆಯಲ್ಲಿ ಸಿನಿಮೀಯ ತಿರುವುಗಳ ಮೂಲಕ ಪ್ರೀತಂ ಸುಮಿಯರು ಒಂದಾಗುವಂತೆ  ಸನ್ನಿವೇಶಗಳು ಸೃಷ್ಟಿಯಾಗುತ್ತವೆ.

ಕಥೆ ಎಲ್ಲ ಸಾಮಾನ್ಯ ಪ್ರೇಮ ಕಥೆಗಳಂತೆ ಪ್ರೀತಿ, ಅಡೆತಡೆಗಳು, ವಿರೋಧ, ಸಂಘರ್ಷ, ಕಿಡ್ ನ್ಯಾಪ್, ಆತಂಕ, ತಲ್ಲಣಗಳ ವಿನ್ಯಾಸದೊಂದಿಗೆ ಮುಂದುವರೆಯುತ್ತದೆ. ಆದರೆ ಇಷ್ಟು ಕಥೆಯ ಹಂದರ ಮಾತ್ರ. ಒಳಸತ್ವದಲ್ಲಿ ಕೃತಿ ಶ್ರೀಮಂತವಾಗಿದೆ. ಅಲ್ಲಲ್ಲಿ ಪ್ರಕಟಗೊಳ್ಳುವ ಪ್ರೀತಿಯ ಕುರಿತಾದ ಮಾತುಗಳು ಇಲ್ಲಿ ಬಹಳ ವಿಶಿಷ್ಟ ರೀತಿಯಲ್ಲಿ ಸಾಗುತ್ತವೆ. ಮುಖ್ಯವಾಗಿ ಹೇಳುವುದಾದರೆ ಕಥೆಯಲ್ಲಿ ಒಂದು ಪಾತ್ರವಾಗಿ ಬರುವ ವಾಸ್ತವ‌ಲೋಕದ ಕಥೆಗಾರ ನಾಗತಿಹಳ್ಳಿ ಚಂದ್ರಶೇಖರ್ ಅವರ ಬಾಯಲ್ಲಿ ಲೇಖಕರು ಹೇಳುವಂಥ ಪ್ರೀತಿಯ ಮಹತ್ವದ ಕುರಿತಾದ ವಿಚಾರಗಳು:

‘ಈ ಜಗತ್ತಿಗೆ ಪ್ರೇಮವೇ ಬುನಾದಿ. ಪ್ರೇಮದ ಸ್ಪರ್ಶದಿಂದ ಮಾತ್ರ ಮನುಷ್ಯತ್ವದ ಅರಿವಾಗುತ್ತದೆ. ಪ್ರೇಮವು ಲೌಕಿಕವನ್ನು ದಾಟುವ ಹೆಬ್ಬಾಗಿಲು. ನಮ್ಮನ್ನು ಆಧ್ಯಾತ್ಮಿಕ ನೆಲೆಗೆ ಒಯ್ಯುವುದೂ ಈ ಪ್ರೇಮವೇ..! ಹೃದಯ ಶ್ರೀಮಂತಿಕೆ ಇಲ್ಲದಿದ್ದರೆ ಮೆಟೀರಿಯಲಿಸ್ಟಿಕ್ ಶ್ರೀಮಂತಿಕೆಗೆ ಯಾವುದೇ ಅರ್ಥವಿಲ್ಲ. ಪ್ರೇಮದಂಥ ಪ್ರೇಮವು ಜಾತಿ ಮತ ಲಿಂಗ ಭೇದವಿಲ್ಲದ ಸಮಾಜವನ್ನು ನಿರ್ಮಿಸುತ್ತದೆ.. ಪ್ರೇಮವೆಂದರೆ ಒಂದು ಜೀವಮಾನದ ಅನುಭೂತಿ‌ ಅದು ಎಲ್ಲರಿಗೂ ಪ್ರಾಪ್ತವಾಗಲಾರದು. ಅದಕ್ಕೆ ಅದೃಷ್ಟ ಬೇಕು…( ಪು.೭೮ -೭೯)

ಪ್ರೀತಮನ ತಾಯಿ ತಂದೆಯರಾದ ಗುಲಾಬಿ-ಗಣಪತಿಯರ ನಡುವಣ ಸುಂದರ  ಅನುರಾಗ ಬಂಧ, ಶೈಲತ್ತೆ ಹುಸೇನರ ನಡುವಣ ಪ್ರೀತಿಗೆ ಸಮಾಜದ ಒಪ್ಪಿಗೆ ಪಡೆದು ಮದುವೆಯಾಗುವುದು ಅಸಾಧ್ಯವಾದರೂ ಆ ಪ್ರೀತಿಯ ಶಕ್ತಿಯು  ಶೈಲತ್ತೆಗೆ  ಜೀವಮಾನ ಪರ್ಯಂತ ಒಂಟಿಯಾಗಿ ಬದುಕುವ ಅಚಲ ನಿರ್ಧಾರವನ್ನು ಕೈಗೊಳ್ಳುವಂತೆ  ಪ್ರೇರಣೆ ನೀಡುವುದು, ನಾಗತಿಹಳ್ಳಿಯವರ ಗಂಡು-ಹೆಣ್ಣುಗಳ ನಡುವಣ ಪ್ರೀತಿಯ ಕುರಿತಾದ ಸಾಹಿತ್ಯದ ಉಲ್ಲೇಖ, ಪ್ರೀತಮ- ಸುಮಿಯರ ನಡುವಣ ನವಿರಾದ  ಹುಸಿ ಮುನಿಸು ತುಂಬಿದ ಸಂಭಾಷಣೆಗಳು, ಅವರ ಪ್ರೀತಿಗೆ ಸ್ನೇಹಿತ ವರ್ಗವು ನೀಡುವ ಸಂಪೂರ್ಣ ಬೆಂಬಲ, ಪ್ರೀತಮನ ಸ್ಪೋರ್ಟ್ಸ್ ಮಾಸ್ಟರ್  ರೋಡ್ರಿಗ್ಸರ ಜತೆಗೆ ಅವನ ಕೃತಜ್ಞತಾ ಭಾವ ವ್ಯಕ್ತವಾಗುವ ಪರಿ- ಹೀಗೆ  ಕಾದಂಬರಿ ಮನುಷ್ಯ ಪ್ರೇಮದ  ವಿವಿಧ ಮುಖಗಳನ್ನು ಚಿತ್ರಿಸಿ  ಪ್ರೀತಿಯ ಅಗತ್ಯದ ಕುರಿತು ಸಂದೇಶವನ್ನು ಸಾರುತ್ತದೆ.

ಕೃತಿಯ ಕೊನೆಯಲ್ಲಿ ಬರುವ ದೋಣಿ ದುರಂತ ಮತ್ತು  ಪ್ರಧಾನ ಪಾತ್ರವಾದ ಶೈಲತ್ತೆ  ಅದಕ್ಕೆ ಬಲಿಯಾಗುವುದು  ಕಾದಂಬರಿಯ  ಒಂದು ಮಹಾ ತಿರುವು. ಅದು ಸಾಂಕೇತಿಕವೂ ಹೌದು. ಪ್ರೀತಿಗೆ ತಡೆಯೊಡ್ಢುವ ಮನುಷ್ಯ ಮನಸ್ಸುಗಳನ್ನು ನೋಡಿ ಪ್ರಕೃತಿಯೇ ಮುನಿಸಿಕೊಂಡು ನರಬಲಿಯನ್ನು ತೆಗೆದುಕೊಂಡಂಥ ಒಂದು ಸನ್ನಿವೇಶವನ್ನು ಇಲ್ಲಿ  ಲೇಖಕರು ಸೃಷ್ಟಿಸಿದ್ದಾರೆ.

ಕಾದಂಬರಿಯುದ್ದಕ್ಕೂ ಬಳಸಲಾದ ಕಡಲತೀರ ಹಾಗೂ ಬಯಲು ಸೀಮೆಗಳ ಸಂಸ್ಕೃತಿ ಮತ್ತು ಆಡುಭಾಷೆಗಳ ಸಹಜತೆಯು ನಿರೂಪಣೆಗೆ ಮೆರುಗನ್ನಿತ್ತಿದೆ. ಅಲ್ಲಲ್ಲಿ ಕಾಣುವ ಕಾಡು- ಕಣಿವೆ-ಕಡಲುಗಳ ರುದ್ರ‌ ಸುಂದರ ಮುಖಗಳ ಚಿತ್ರಣಕ್ಕೆ ಬಳಸಿದ ಭಾಷೆ ಚೇತೋಹಾರಿಯಾಗಿದೆ. ಕಥನ ಕೌಶಲ್ಯದ ಸೊಗಸು ಓದುಗನ ಮನಸ್ಸಿನಲ್ಲಿ ಉಳಿಯುವಂತಿದೆ. ಒಟ್ಟಿನಲ್ಲಿ ಖುಷಿಯಿಂದ ಓದಿಸಿಕೊಂಡು ಹೋಗುವ ಕಾದಂಬರಿ ‘ಪ್ರೀತ್ ಸು’.

‍ಲೇಖಕರು Admin

December 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ರಾಜೀವ ನಾಯಕ

    ಧನ್ಯವಾದ ಪಾರ್ವತಿ ಮೇಡಂ. “ಪ್ರೀತ್‌ಸು” ಮನುಷ್ಯ ಪ್ರೇಮದ ವಿವಿಧ ಮುಖಗಳನ್ನು ಚಿತ್ರಿಸುತ್ತದೆ ಎಂದು ಮೆಚ್ಚುಗೆಯ ಮಾತುಗಳನ್ನು ಬರೆದಿರುವಿರಿ. ಹೀಗೆ ಆಪ್ತವಾಗಿ ಓದುವುದು ಮತ್ತು ಬರೆಯುವುದೂ ಅಂಥ ಪ್ರೀತಿಯ ವಿಸ್ತರಣೆಯೇ ಆಗಿದೆ.
    ಧನ್ಯವಾದ ಅವಧಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: