ʼದಕ್ಲಕಥಾ ದೇವಿಕಾವ್ಯʼ: ಕೆಬಿ ಆತ್ಮಕ್ಕೆ ಕೆಪಿ ದೇಹ…

ಎಂ ನಾಗರಾಜ ಶೆಟ್ಟಿ

ಕೆ ಬಿ ಸಿದ್ಧಯ್ಯನವರ ಖಂಡ ಕಾವ್ಯಗಳ ಗ್ರಹಿಕೆ ಸುಲಭದ್ದಲ್ಲ.ನೆಲನುಡಿಯ ಗಂಧವನ್ನು ಹೀರಿ, ಅನುಭಾವಿಕ ನೆಲೆಯಲ್ಲಿ ವಾಸ್ತವವನ್ನೂ ಎದುರುಗೊಳ್ಳುವ ಕಾವ್ಯಗಳವು. ʼಬಕಾಲʼ ʼದಕ್ಲಕಥಾ ದೇವಿ ಕಾವ್ಯʼ, ʼಅನಾತ್ಮʼ ʼಗಲ್ಲೆಬಾನಿʼ ಸಾಹಿತ್ಯಿಕ ವಲಯದಲ್ಲಿ ಮೆಚ್ಚುಗೆಗೆ, ಚಿಂತನೆಗೆ ಕಾರಣವಾದ ಖಂಡಕಾವ್ಯಗಳು.ಇವುಗಳಲ್ಲಿ ಹೆಚ್ಚು ನಾಟಕೀಯ ಅಂಶಗಳಿರುವ ಮತ್ತು ಹೆಚ್ಚು ಅರಿಯದ ದಕ್ಕಲರ, ದಕ್ಲದೇವಿಯ ವಿವರಗಳನ್ನೊಂಡ ʼದಕ್ಲಕಥಾ ದೇವಿ ಕಾವ್ಯʼ ವನ್ನು ಲಕ್ಷ್ಮಣ್‌ ಕೆ ಪಿ ನಾಟಕ ರೂಪಕ್ಕೆ ಒಗ್ಗಿಸುವ ಸಾಹಸ ಮಾಡಿದ್ದಾರೆ.

ದಕ್ಕಲೆಂದರೆ ಯಾರು? ʼರಾತ್ರಿಯಲ್ಲಿ ಯಕ್ಕದ ಗಿಡದ ಬುಡದಲ್ಲೋ,ಬುಡದಲ್ಲಿ ಬಿದ್ದಿರುವ ಮುರುಕು ಮೋಕಿಯಲ್ಲೋ, ತಾಯಿಯೊಬ್ಬಳು ಆಗತಾನೆ ಹೆತ್ತು ಅಂಗಾತ ಮಲಗಿಸಿರುವ ತ್ರಿವಳಿ ಶಿಶುಗಳಿಗೆ ದಕ್ಲದೇವಿ ಮೂರು ಹಿಡಿ ಬೆರಣಿಯ ಪುಡಿಯನ್ನು ಉದುರಿಸುವಳು. ಮೂರು ಕೆಂಡನಾಲಿಗೆಗಳು ಚಟ ಚಟ ಸದ್ದು ಮಾಡಿ ಶಿಶುಗಳು ಉಸಿರಾಡತೊಡಗುತ್ತವೆ. ದಕ್ಲದೇವಿ ಏಕ ಮಾತ್ರ ಶಿಶುವನ್ನು ಸಲಹುವಂತೆ, ಸೆರಗು ಮರೆ ಮಾಡಿ, ಕಣ್ಣ ಬೆಳಗು ತೋರಿದ ದಾರಿಯಲ್ಲಿ ನಡೆಯುತ್ತಾಳೆʼ ಇದು ಖಂಡ ಕಾವ್ಯದಲ್ಲಿ ಬರುವ ಮಾತು.

ರಾತ್ರಿ ಹೊತ್ತಲ್ಲಿ ಹುಣಸೆ ಮರದಡಿಯಲ್ಲಿ ತಂಗುವ ದಕ್ಲ ಕುಟುಂಬದ ಪುರುಷ, ಮಾದಿಗ ಕುಟುಂಬದ ಕಟ್ಟೆ ಯಜಮಾನನಿಗೆ ಕೇಳಿಸುವಂತೆ “ಯಪ್ಪದೋ…..ಯವ್ವಲೋ….ಸಾಕುಮಗ ಬಂದಿದೀನಿ ಕಣ್ರವ್ವೋʼ ಎಂದು ಕೂಗು ಹಾಕಿದರೆ ಮೂರು ದಾರಿ ಕೂಡುವ ಜಾಗದಲ್ಲಿ ಕೂಳಿನ ಮಡಿಕೆಯನ್ನು ತಂದಿಡುತ್ತಾರೆ. ಮಾದಿಗರ ಸಾಕು ಮಕ್ಕಳೆಂದು ನಂಬಲಾದ ದಕ್ಕಲರು ಮಾದಿಗರಿಗಿಂತೂ ಅಸ್ಪೃಶ್ಯರು.ಅವರು ಊರೊಳಗೆ,ಮನೆಯೊಳಗೆ ಬರುವಂತಿಲ್ಲ. ಭಿಕ್ಷಾಟನೆಯಿಂದಲೇ ಹೊಟ್ಟೆ ಹೊರೆವ ದಕ್ಕಲರಿಗೆ ದೇವಿ ಅಥವಾ ಜೀವದಾಯಿನಿ ದಕ್ಲದೇವಿ.

ದಕ್ಕಲರನ್ನು ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದವರು ಕೆ ಬಿ ಸಿದ್ಧಯ್ಯನವರು. ದಕ್ಕಲರ ಮೂಲದಿಂದ ತೊಡಗಿ, ದಕ್ಲ ಪುರುಷನನ್ನು ದಕ್ಲದೇವಿ ಹೆಣ್ಣಾಗಿಸಿ ಮತ್ತೆ ಗಂಡಾಗಿಸುವ ವರೆಗೆ ಕಾವ್ಯದ ಹರಿವಿದೆ. ಮೊದಲೇ ಹೇಳಿದಂತೆ ನಾಟಕೀಯ ಗುಣವೂ ಇರುವ ಈ ಕಾವ್ಯದಲ್ಲಿ ನಾಟ್ಯಲಯವಿದೆ:

ಅಗ್ನಿ ಭಿಕ್ಷೆ ನೀಡಿದ ದಾತರನು ಯಾರವ್ವ?
ಅಗ್ನಿ ಭಿಕ್ಷೆಯ ದಾನ ನಮ್ಮ ದಾನವಲ್ಲವೋ
ಅದು ಕಟ್ಟೆಮನೆ ಯಜಮಾನನ ದಾನವೋ
ಕಟ್ಟೆಮನೆ ಯಜಮಾನನ ದಾನವಲ್ಲವೋ 
ಅದು ಕುಲದ ದಾನವೋ
ಆ ಬೆಂಕಿ ಬಂಗಾರವು ಕುಲದ ದಾನವಲ್ಲವೋ
ಕುಲದ ತಂದೆ ಹರಳಯ್ಯನವರ ದಾನವೋ
ಕುಲದ ತಂದೆ ಹರಳಯ್ಯನವರ ದಾನವಲ್ಲವೋ
ಕಲ್ಯಾಣದ ಬಸವಣ್ಣನವರ ದಾನವೋ
ಅದು ಕಲ್ಯಾಣದ ಬಸವಣ್ಣನವರ ದಾನವಲ್ಲವೋ
ದೇವಿ ಅರುಂಧತಿಯವರ ದಾನವೋ
ದೇವಿ ಅರುಂಧತಿಯವರ ದಾನವಲ್ಲವೋ
ಅದು ಬಿಸಿರೊಳಗೆ ಹುಟ್ಟಿದ ಉಸಿರೆಂಬ ಘನವಲ್ಲೋ
ಉಸಿರೊಳಗೆ ಹುಟ್ಟಿದ ಶಬ್ದವೆಂಬ ಸೂತಕವಲ್ಲೋ

ನಿರ್ದೇಶಕ ಕೆ ಪಿ ಲಕ್ಷ್ಮಣ್‌ ನಾಟಕದುದ್ದಕ್ಕೂ ಈ ನಾಟ್ಯಲಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.ಅದಕ್ಕೆ ಪೂರಕವಾಗಿ ತಮಟೆ, ಅರೆಗಳ ನಾದ ರಂಗಮಂದಿರವನ್ನು ತುಂಬುತ್ತದೆ. ನಾಟಕದ ವಿಶೇಷತೆ ಇರುವುದೇ ಇಲ್ಲಿ; ಕ್ಷಣ ಮಾತ್ರವೂ ಬಿಡುವುಗೊಡದಂತೆ ರಂಗವನ್ನು ಗದ್ಯ, ಪದ್ಯ, ನರ್ತನಗಳು ಆವರಿಸಿಕೊಳ್ಳುತ್ತವೆ.

ಗದ್ಯ ಅಂದೆನಲ್ಲವೇ? ಹೌದು, ಕೆ ಬಿ ಸಿದ್ದಯ್ಯನವರ ಗದ್ಯ ಬರಹಗಳನ್ನು ನಾಟಕದಲ್ಲಿ ಸೂಕ್ತವಾಗಿ ಬಳಸಿಕೊಳ್ಳಲಾಗಿದೆ. ಮುಖ್ಯವಾಗಿ ಅನಾತ್ಮದ ಮುನ್ನುಡಿಯ ಮಾತುಗಳು: ʼನನಗೆ ಅಸ್ಪೃಶ್ಯತೆಯ ಅನುಭವ ಸ್ವಮರುಕ ಅಥವ ಸ್ವರತಿಯಂತಹ ಮನೋರೋಗವಲ್ಲ. ಕೀಳರಿಮೆಯಲ್ಲ. ಆರಾಧನೆ ಅಥವಾ ಅಹಂ ಅಲ್ಲ. ಅಸ್ಪೃಶ್ಯತೆಯ ಅನುಭವ ಒಂದು ಅರಿವು.ನಿಜಮನುಷ್ಯನನ್ನು ಕಾಣುವ ಬೆಳಕುʼ. ನಾಟಕದಲ್ಲಿ ಅಳವಡಿಸಿಕೊಂಡಿರುವ ಇಂತಹ ಮಾತುಗಳು ಕೆ ಬಿ ಸಿದ್ದಯ್ಯನವರನ್ನು ಅರಿಯುವ ಬಗೆಯಲ್ಲಿವೆ.

ಮಕ್ಕಳನ್ನು ಮಲಗಿಸಲು ದಕ್ಲ ಪುರುಷ ಗಾಂಧಿ, ಬಸವಣ್ಣ, ಅಂಬೇಡ್ಕರರನ್ನು ಕತೆ,ಕಾವ್ಯವಾಗಿ ಹೇಳುವುದೇ ಸೊಗಸು. ತನ್ನೆರಡು ಗಂಡು ಮಕ್ಕಳನ್ನು ಭುಜದ ಎಡಗಡೆ, ಬಲಗಡೆ ಕೂರಿಸಿಕೊಂಡು ದಕ್ಲಯ್ಯ ಕುದುರೆ ಮೇಲೆ ಕುಣಿಯುತ್ತಾ ಹೋಗುವ ರಂಗಕಲ್ಪನೆಯೂ ಅಷ್ಟೇ ಚೆನ್ನಾಗಿದೆ.

ಮೂಲೆ ಮುಡುಕು ಮಡಿಕೆಕುಡಿಕೆಗಳಲ್ಲಿ
ಕೋಲಾಹಲ ನಾಲ್ಕು ದಿಕ್ಕುಗಳಲ್ಲೂ
ʼಘಟೆʼ ಉಕ್ಕಿ ಹರಿಯುವುದು

ಘಟೆ ಉಕ್ಕಿಸುವುದೆಂದರೆ ಮಾರಮ್ಮನ ಜಾತ್ರೆಯಲ್ಲಿ ಹೊಸ ಗಡಿಗೆಯಲ್ಲಿ ಹೆಂಡ ತುಂಬಿದರೆ ಅದು ಬುರಬುರ ಉಕ್ಕುವ ಸಾಂಪ್ರದಾಯಿಕ ಆಚರಣೆ. ರಂಗದಲ್ಲಿ ಇದನ್ನು ಕಾಣುವುದೇ ಚೆಂದ.

ನಾಟಕದ ಪಾತ್ರಧಾರಿಗಳು ಐವರೇ. ಬಿಂದು ರಕ್ಷಿದಿ (ದಕ್ಲದೇವಿ) ಪ್ರತಿ ಚಲನೆಗೂ ಜೀವ ತುಂಬಿದರೆ, ಸಂತೋಷ್‌ ದಿಂಡ್ಗೂರು (ದಕ್ಲ ಪುರುಷ) ನಾಟಕದ ಕೇಂದ್ರ. ಇವರಿಗೆ  ರಮಿಕ ಚೈತ್ರ, ನರಸಿಂಹರಾಜು ಬಿ ಕೆ,ಭರತ್‌ಡಿಂಗ್ರಿ ಉತ್ತಮವಾಗಿ ಸಾಥ್‌ನೀಡಿದ್ದಾರೆ. 

ತಮಟೆ, ಅರೆ ನಾದದೊಂದಿಗೆ ಹಿನ್ನೆಲೆಯ ಧ್ವನಿ ನಾಟಕದ ಸತ್ವವನ್ನು ಎತ್ತರಿಸುತ್ತದೆ. ʼಬೇಲಿ ಓಂʼ ಎಂದು ಅನುರಣನಗೊಳ್ಳುವ ಹಿನ್ನೆಲೆ ದನಿಯ ಔಚಿತ್ಯ ತಿಳಿಯಲಿಲ್ಲ.ಹಾಗೇ ದಕ್ಲದೇವಿಗೆ ಇನ್ನಷ್ಟು ರಂಗಾವಾಕಾಶ ಇದ್ದಿದ್ದರೆ ಅನ್ವರ್ಥವಾಗುತ್ತಿತ್ತೆಂದು ಅನ್ನಿಸಿತು.

ʼಪುರಾತನರ ಹೆಜ್ಜೆ ಗುರುತಿನ ಮೇಲೆ ಹೆಜ್ಜೆ ಇಟ್ಟು ನಡೆದೆ.ದಕ್ಲದೇವಿ ಸಿಕ್ಕಿದಳು.ʼದಕ್ಲಕಥಾ ದೇವಿಕಾವ್ಯʼ ರಚಿಸುವ ಯೋಗದಲ್ಲಿ ಹಸಿವು ಅನೇಕ ಹಾಗೂ ಅಪರಿಮಿತ, ಅನ್ನ ಮಿತ ಅನ್ನಿಸಿತುʼ ಇದು ಅನಾತ್ಮದಲ್ಲಿ ಕೆ ಬಿ ಸಿದ್ಧಯ್ಯ ಹೇಳುವ ಮಾತು.ಲಕ್ಷ್ಮಣ್‌ ಕೆ ಪಿ ಅಪಾರ ಹಸಿವಿಂದ ʼದಕ್ಲಕಥಾ ದೇವಿಕಾವ್ಯʼ ವನ್ನು ರಂಗರೂಪಕ್ಕೆ ತಂದಿದ್ದಾರೆ. ಅವರ ಹಸಿವು ನಮಗೆ ಅಮಿತ ಅನ್ನ ನೀಡಿದೆ. 

ಇದು ಕೆ ಬಿ ಸಿದ್ಧಯ್ಯ ಮತ್ತು ಲಕ್ಷಣ್‌ ಕೆ ಪಿ ಅವರ ಜುಗಲ್‌ಬಂದಿ.ಖಂಡಕಾವ್ಯವೆಂಬೋ ಆತ್ಮಕ್ಕೆ ನಾಟಕವೆಂಬೋ ದೇಹ ಸಿಕ್ಕಿದೆ. ಪ್ರೇಕ್ಷಕ ತೊಂಬತ್ತು ನಿಮಿಷಕ್ಕೂ ಮೀರಿ ಮೈಮರೆತು ದಕ್ಲದೇವಿಯೊಂದಿಗೆ ಒಂದಾಗುತ್ತಾನೆ.

ನಾಟಕ ನೋಡುವ ಹೊತ್ತಲ್ಲಿ ಕೆಬಿ ಇಲ್ಲವಲ್ಲ ಎನ್ನುವ ನೋವು ಕಾಡಿತು.ಸಮಾಧಾನ ತಂದುಕೊಂಡೆ:ಅಳಿದವರು ಉಳಿಯುವುದು ಹೀಗಲ್ಲವೇ?

ದಕ್ಲದೇವಿ’ಗೆ ಇನ್ನೊಂದಿಷ್ಟು ಅವಕಾಶ ಹೆಚ್ಚಿದ್ದರೆ ಅರ್ಥಪೂರ್ಣವಾಗುತ್ತಿತ್ತೆಂದೆನ್ನಿಸಿತು..’ಬೇಲಿ ಓಂ’ ಎನ್ನುವ ಪುನರಾವರ್ತಿತಗೊಳ್ಳುವ ನಾದ ಅರ್ಥವಾಗಲಿಲ್ಲ

ತಮಟೆ,ಅರೆಗಳ ಶಬ್ದ ‘ದಕ್ಲಕಥಾ ದೇವಿಕಾವ್ಯ’ ನೋಡಿ ಬಂದ ಮೇಲೂ ಕಿವಿಯಲ್ಲಿ ಮೊರೆಯುತ್ತಿತ್ತು. ತೊಂಬತ್ತು ನಿಮಿಷಗಳಿಂತಲೂ ಹೆಚ್ಚಿನ ಈ ಅಪೂರ್ವ ರಂಗಾನುಭವವನ್ನು ಬರೆಯಲೇ ಬೇಕೆಂದೆನಿಸಿತು.

ಕೆ ಬಿ ಸಿದ್ಧಯ್ಯನವರ ‘ದಕ್ಲಕಥಾ ದೇವಿಕಾವ್ಯ’ವನ್ನು ದಕ್ಕಲರ ಕತೆಯ ದೇವಿ ಕಾವ್ಯವೆಂದು ತಿಳಿದುಕೊಳ್ಳಬಹುದು.

ಆಗ ತಾನೇ ಹುಟ್ಟಿದ ಮೂರು ಶಿಶುಗಳನ್ನು ದಕ್ಲದೇವಿ ಸಲಹುತ್ತಾಳೆ.ದಕ್ಕಲರು ಮಾದಿಗರ ಸಾಕುಮಕ್ಕಳೆನ್ನುವುದು ರೂಢಿ. ಮೂರು ದಾರಿಗಳು ಸೇರುವ ಜಾಗದಲ್ಲಿ ಮಾದಿಗರು ಅವರಿಗೆ ಕೂಳು ಮಡಿಕೆ ತಂದೊಪ್ಪಿಸುತ್ತಾರೆ. ಗಾಂಧಿ, ಬಸವಣ್ಣ, ಅಂಬೇಡ್ಕರ್ ದಕ್ಲ ಪುರುಷ ಮಕ್ಕಳನ್ನು ಸಂತೈಸಲು ಹೇಳುವ ಕತೆ,ಕಾವ್ಯ.ಗಂಡಿನ ಅಹಂಕಾರ ದಕ್ಲನನ್ನೂ ಬಿಡದು.ಬರಲಿನಿಂದ ದಕ್ಲದೇವಿಗೆ ಹೊಡೆದಾಗ ಆಕೆ ಆತನನ್ನು ಹೆಣ್ಣು ರೂಪಿಗೆ ತರುತ್ತಾಳೆ.

ನಾಟಕ ‘ದಕ್ಲಕಥಾ ದೇವಿಕಾವ್ಯ’ ಖಂಡಕಾವ್ಯದೊಂದಿಗೆ ಕೆ ಬಿ ಸಿದ್ಧಯ್ಯನವರ ಗದ್ಯ ಬರಹಗಳನ್ನೂ ಒಳಗೊಂಡಿದೆ. ಇದರಿಂದ ಕಾವ್ಯ ಮಾತ್ರವಲ್ಲ ಸಿದ್ಧಯ್ಯನವರ ವಿಚಾರಗಳೂ ದಕ್ಕುತ್ತವೆ. ‘ನನಗೆ ಅಸ್ಪರ್ಶ್ಯತೆ ಅನುಭವ ಸ್ವ ಮರುಕವಲ್ಲ ಅಥವಾ ಸ್ವರತಿಯಂತಹ ಮನೋರೋಗವಲ್ಲ…. ಅದೊಂದು ಅರಿವು, ಬದುಕನ್ನು ಕಾಣುವ ಬೆಳಕು’ ಎನ್ನುವಂತಹ ಮಾತುಗಳು ಕಾಡುತ್ತವೆ.

ಸುಲಭದಲ್ಲಿ ತಿಳಿಯಲಾರದ ಕೆ ಬಿ ಸಿದ್ಧಯ್ಯನವರ ಖಂಡ ಕಾವ್ಯವನ್ನು ನಾಟಕ ರೂಪದಲ್ಲಿ ತರುವುದು ಕಷ್ಟದ ಕೆಲಸ.ಅಂತಹದೊಂದು ಕಷ್ಟವನ್ನು ಮೇಲೆದುಕೊಂಡು ಯಶಸ್ವಿಯಾದ  ಕೆ ಪಿ ಲಕ್ಷ್ಮಣ್ ರಿಗೆ ಅಭಿನಂದನೆಗಳು

‍ಲೇಖಕರು Admin

December 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: