ಪಾತತ್ತೆಗೆ ನೆತ್ತಿ ಹತ್ತಿರಬೇಕು..

ಅಮೆರಿಕಾ ಡೈರಿ 

ಶೌಚ ಪುರಾಣ

ಗಿರಿಜಾ ಶಾಸ್ತ್ರಿ 

ಡೆನ್ವರ್ ನ ಈ ನೆಲದ ಮೇಲೆ ನಡೆಯುವಾಗ ಏಕೋ ೫೦-೬೦ ವರುಷಗಳ ಹಿಂದೆ ಗತಿಸಿಹೋದ ನಮ್ಮಜ್ಜಿ, ಅತ್ತೆಯರೇ ಅಲ್ಲದೇ ನಮ್ಮ ಬಂಧುವರ್ಗಗಳಲ್ಲೇ ಇದ್ದ ಮಡಿ ಹೆಂಗಸರು ನೆನಪಾಗುತ್ತಿದ್ದಾರೆ.

ಮಡಿ ಹೆಂಗಸರೆಂದರೆ ಗಂಡ ಗತಿಸಿದ ನಂತರ ಕೇಶ ಮುಂಡನಕ್ಕೆ ಒಳಗಾಗಿ, ಮುಂಜಾವಿನ ಸ್ನಾನವಾದ ನಂತರ ರಾತ್ರಿ ಮಲಗುವವರೆಗೆ ಮನೆಯವರನ್ನೂ ಸಹ ಮುಟ್ಟಿಸಿಕೊಳ್ಳದೇ ಕಟ್ಟುನಿಟ್ಟಾದ ಮಡಿಯನ್ನು ಪಾಲಿಸುತ್ತಿದ್ದವರು. ಸಣ್ಣ ಮಕ್ಕಳಿದ್ದರೂ ವಿನಾಯಿತಿ ಇರುತ್ತಿರಲಿಲ್ಲ. ಬಟ್ಟೆ ತೊಟ್ಟ ಅವರು ಏನಾದರೂ ಮುಟ್ಟಿದರೆ ಮೈಲಿಗೆಯಾದೀತೆಂದು ಅವರನ್ನು ಬೆತ್ತಲೆ ತಿರುಗಿಸುತ್ತಿದ್ದರು. ಕಿ.ರಂ ಒಂದು ಸಲ ಎಂ.ಎ. ತರಗತಿಯಲ್ಲಿ ಪಾಠಮಾಡುವಾಗ ‘ನಮ್ಮಜ್ಜಿಗೆ ನಾನೇ ಅಸ್ಪೃಶ್ಯ ಕಣ್ರೀ” ಎಂದು ಹೇಷಾರವದ ನಗೆ ನಕ್ಕಿದ್ದನ್ನು ಮರೆಯುವುದು ಸಾಧ್ಯವೇ ಇಲ್ಲ.

ನಮ್ಮ ಮನೆಯಲ್ಲಿದ್ದ ಆ ಮಡಿ ಹೆಂಗಸರು, ಅಮೇರಿಕಾದ ಬಚ್ಚಲಲ್ಲಿ (ಟಬ್)ನಾನು ಸ್ನಾನ ಮಾಡುವಾಗಲೆಲ್ಲ ನೆನಪಾಗಲು ಕಾರಣವೂ ಇದೆ. ಅವರು ಬಹಿರ್ದೆಸೆಗೆ ಹೋಗಿಬಂದಾಗಲೆಲ್ಲಾ ಬೆಳಗಿನ ಸ್ನಾವಾಗಿದ್ದರೂ, ಅದು ಮೈಲಿಗೆ ಎಂಬ ಕಾರಣದಿಂದ ಮತ್ತೆ ಸ್ನಾನ ಮಾಡುತ್ತಿದ್ದರು. ಹೊಟ್ಟೆಯೊಳಗೇ ಇದ್ದದ್ದು ಹೊರಬಂದಾಕ್ಷಣ ಮೈಲಿಗೆ ಹೇಗೆ ಎಂದು ನಾವು ತಲೆಹರಟೆ ಮಾಡುತ್ತಿದ್ದೆವು. ಮಡಿಯೆಂದರೆ ಅದು ಶುಚಿಗೇ ಇರಬಹುದು. ಯಾಕೆಂದರೆ ಅಂದಿನ ಓಪನ್ ಕಕ್ಕಸ್ಸು ಗುಂಡಿಗಳು ಹಾಗಿದ್ದವು. ಆದರೆ ಮನೆಯ ಉಳಿದವರಿಗೆ ಆ ನಿಯಮವಿರಲಿಲ್ಲ.

ಹೀಗೆ ಶೌಚಾಲಯಕ್ಕೆ ಹೋಗಿ ಬಂದಾಗೆಲ್ಲ ಸ್ನಾನ ಮಾಡುವ ನಿಯಮವನ್ನು ಪಾಲಿಸುತ್ತಿದ್ದ ಅವರಿಗೆ ಪಾಪ ಭೇದಿ ಏನಾದರೂ ಹತ್ತಿಕೊಂಡಿದ್ದರೆ ಅದೆಷ್ಟು ಸಲ ಗಂಗೇಚ ಯಮುನೇಚ ಹೇಳಿಕೊಳ್ಳಬೇಕಾಗಿತ್ತೋ ಏನೋ.
ನಾನೂ ಅಮೇರಿಕಾದ ಈ ಸ್ನಾನಗೃಹ ದಲ್ಲಿ ಅವರಂತೆ ಸ್ನಾನ ಮಾಡಲು ಕಾಯುತ್ತಿರುತ್ತೇನೆ.ಆದರೆ ಅವರ ಹಾಗೆ ದಿನಕ್ಕೆ ಮೂರು ಬಾರಿಯಲ್ಲ, ಒಂದೇ ಬಾರಿ. ಅದನ್ನು ಮಾಡಲೂ ಕಾಯಬೇಕು. ಯಾಕೆಂದರೆ ಇಲ್ಲಿ ಶೌಚಕ್ಕೆ ನೀರು ಬಳಸುವ ಹಾಗಿಲ್ಲ. ಸ್ನಾನಮಾಡುವಾಗಲೇ ಶುಚಿರ್ಭೂತರಾಗಬೇಕು. ಹೀಗಾಗಿ ಸ್ನಾನಕ್ಕೆ ಕಾಯಬೇಕು. ಊಟ ತಿಂಡಿ ಎಲ್ಲಾ ಮುಗಿಸಿದರೂ ಒಮ್ಮೊಮ್ಮೆ ಸ್ನಾನಕ್ಕೆ ಬುಲಾವ್ ಬರುವುದಿಲ್ಲ.

ಅಮೇರಿಕಾದವರು ನೀರಿನ ಉಳಿತಾಯದ ಬಗ್ಗೆ ಬಹಳ ನಿಷ್ಠುರರು. ಇಲ್ಲಿ ಕಾಫಿಗಿಂತ ನೀರಿಗೇ ಕ್ರಯ ಹೆಚ್ಚು. ಪಾತ್ರೆ ತೊಳೆಯುವಾಗ ನಲ್ಲಿಯನ್ನು ಸ್ವಲ್ಪ ಜೋರಾಗಿ ತಿರುಗಿಸಿದರೂ ಸಾಕು ಮಗ ಓಡಿ ಬರುತ್ತಾನೆ ‘ ಸಣ್ಣಗೆ ಬಿಡು ಆಮೇಲೆ ಸ್ಯಾಂಡಿ ಏನಾದರೂ (ಮನೆಯೊಡತಿ) ನೋಡಿದ್ರೆ ಬಡಕೊಂಡು ಬಿಡ್ತಾಳೆ ಅಷ್ಟೇ’ ಎನ್ನುತ್ತಾನೆ. ಮಗನೊಡನೆ ನೀರಿನ ವಿಷಯಕ್ಕೆ ವಾಗ್ವಾದ ನಡೆಯುವಾಗೆಲ್ಲ,’ ಅಂಡು ತೊಳೆದುಕೊಳ್ಳಲು ನೀರು ದಂಡ ಎನ್ನುವುದು ಸಮ್ಮನೆ. ಒಂದು ಸಲ ಫ್ಲಷ್ ಮಾಡಿದರೆ ಸಾಕು ಹತ್ತು ಬಕೆಟ್ ನೀರು ಗುಂಡಿಯೊಳಗೆ ಹರಿದು ಹೋಗುತ್ತದೆ.ಅಂಡು ತೊಳೆದುಕೊಳ್ಳುವ culture ಇಲ್ಲ, ಇರೋದೆಲ್ಲಾ ಬರೀ Tissue culture ಅಷ್ಟೇ’ ಎಂದು ಮಗನಿಗೆ ದಬಾಯಿಸುತ್ತೇನೆ.

ಸ್ನಾನಕ್ಕೆ ನಮ್ಮಲ್ಲಿ ಒಂದೋ ಎರಡೋ ಬಕೆಟ್ಟು ಇಲ್ಲ ಒಂದು ಹಂಡೆ ನೀರು, ಲೆಕ್ಕ ಇದೆ. ಇಲ್ಲಿ ಶವರ್ ನ ಕೆಳಗೆ ನಿಂತರೆ ಸಾಕು ಇಲ್ಲಿನ ಚಳಿಗೆ ಹದವಾಗಿ ಬಿಸಿ ನೀರು ಮೈಮೇಲೆ ಬೀಳುತ್ತಿದ್ದರೆ ಹಿತವಾಗಿ, ಹೊರಗೆ ಬರುವುದೇ ಬೇಡವೆನಿಸುತ್ತದೆ. ಆಗ ಅದೆಷ್ಟು ಹಂಡೆಗಳ ನೀರು ಹರಿದು ಹೋಗುತ್ತದೆಯೋ ದೇವರೇ ಬಲ್ಲ!

ಕೊಲರಾಡೋ ಹೆಚ್ಚಾಗಿ ಮರುಭೂಮಿಯ ಪ್ರದೇಶವಾದ್ದರಿಂದ ಇಲ್ಲಿ ಮಳೆಯೂ ಕಡಿಮೆ. ಹೀಗಾಗಿ ಇಲ್ಲಿರುವ ಪರ್ವತಗಳ ಮೇಲಿನಿಂದ ಕರಗಿ ಜಾರುವ ಮಂಜನ್ನೇ ಸಂಗ್ರಹಿಸಿ ಕೆರೆಯನ್ನು ಕಟ್ಟಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಈ ಕೆರೆಯಲ್ಲಿ ಯಾವುದೇ ಜಲಚರಗಳಿಲ್ಲ, ಎಮ್ಮೆ ಮುಂತಾದ ಸಾಕು ಪ್ರಾಣಿಗಳನ್ನು ತೊಳೆಯುವುದಿರಲಿ, ನಮ್ಮ ಕಾಲುಗಳನ್ನೂ ನೀರೊಳಗೆ ಇಳಿಸುವ ಹಾಗಿಲ್ಲ. ನೀರಿನ ಪರಿಶುದ್ಧತೆಯನ್ನು ಆ ಮಟ್ಟದಲ್ಲಿ ಕಾಪಾಡಲಾಗುತ್ತದೆ.

ನೀರಿಗೆ ಕಷ್ಟವೆಂದಾಕ್ಷಣ ಇದು ಬಂಜರು ಭೂಮಿಯಲ್ಲ! ಎತ್ತೆತ್ತಲೂ ಹಸಿರು ಹೂವು ಮರ ಗಿಡ ಬಳ್ಳಿಗಳು! ಇಲ್ಲಿ ದಾರಿಯುದ್ದಕ್ಕೂ ದೊಡ್ಡ ದೊಡ್ಡ ಮರಗಳು. ಬುಲವಾರ್ ಹೆಸರಿನಿಂದಲೇ ಕರೆಯಲ್ಪಡುವ ರಸ್ತೆಗಳು. ಫ್ರೆಂಚ್ ಭಾಷೆಯಲ್ಲಿ ಬುಲವಾರ್ ಎಂದರೆ ಸಾಲು ಮರಗಳು ಎಂದು ಅರ್ಥವಂತೆ. ಮಗ ಇರುವ ಜಾಗದ ಹೆಸರು ಫೆಡರಲ್ ಬುಲವಾರ್. ಎಲ್ಲಾ ಮರಗಳ ಬುಡದ ಸುತ್ತಲೂ ಸಣ್ಣ ಸಣ್ಣ ಮರದ ಚೆಕ್ಕೆ ಪುಡಿಯನ್ನು ಚೆಲ್ಲಿರುತ್ತಾರೆ. ಎಲ್ಲಿ ನೋಡಿದರಲ್ಲಿ ಚೆಕ್ಕೆಗಳ ರಾಶಿ ರಾಶಿ. ಬಹುಶಃ ನೀರಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಇರಬಹುದು. ನಮ್ಮ ದೇಶದಲ್ಲಿ ಹೀಗೇನಾದರೂ ರಸ್ತೆಬದಿಯಲ್ಲಿ ಮರದ ಚೆಕ್ಕೆ ಸುರಿದಿದ್ದರೆ ಕಾಳಿ ಕಂಗಾಳಿಗಳು ಒಲೆ ಉರಿಸಲಿಕ್ಕೆಂದು ಆಯ್ದುಕೊಂಡು ಹೋಗಿಬಿಟ್ಟಿರೋವು. ಅಥವಾ ಸೌದೇ ಅಂಗಡಿ ಮಾಲೀಕರೇ ಕದ್ದು ಸಾಗಿಸಿ ಮರಗಳನ್ನು ಬೋಳಾಗಿಸಿಬಿಡುತ್ತಿದ್ದರು.

ರಸ್ತೆ ಬದಿಯ ಮರಗಳಿಗೆ ನೀರು ಹಾಕುವುದು ಸರ್ಕಾರದ ಕೆಲಸ. ಪ್ರತಿನಿತ್ಯ ವ್ಯಾನಿನಲ್ಲಿ ಬಂದು ನೀರು ಹಾಕಿ ಹೋಗುತ್ತಾರೆ. ಮನೆಯ ಮುಂದಿನ ಲಾನ್ ಮತ್ತು ಗಿಡಮರಗಳಿಗೆ ನೀರುಣಿಸುವುದು ಆಯಾ ಮನೆಯವರ ಜವಾಬ್ದಾರಿ.

ನಲವತ್ತು ವರ್ಷಗಳ ಕೆಳಗೆ ನಾವು ಬೆಂಗಳೂರು ಮಹಾರಾಣೀ ಕಾಲೇಜಿನಲ್ಲಿ ಓದುತ್ತಿದ್ದಾಗ ಸೂರ್ಯನ ಬಿಸಿಲೇ ಬೀಳದ ಹಾಗೆ ರೇಸ್ ಕೋರ್ಸ್ ರಸ್ತೆಯ ಉದ್ದಕ್ಕೂ ದಟ್ಟಮರಗಳ ಸಾಲುಗಳಿದ್ದವು. ಈಗ ಆ ರಸ್ತೆ ಅಗಲೀಕರಣಕ್ಕೆಂದು, ಮುಂಡನ ಮಾಡಿಸಿಕೊಂಡ ನಮ್ಮಜ್ಜಿಯ ಹಾಗೆ ಬೋಳಾಗಿ ನಿಂತಿದೆ.

ಆದರೆ ನೀರಿಗೆ ಇಲ್ಲಿ ಇಷ್ಟು ಬರವಿದ್ದರೂ ಇಲ್ಲಿನ ಹಸಿರು ಒಣಗಿಲ್ಲ. ನಗರೀಕರಣವನ್ನೂ ಹಸಿರನ್ನೂ ಒಟ್ಟಿಗೇ ಕಾಪಾಡುವುದನ್ನು ನಾವು ಇವರಿಂದ ಕಲಿಯಬೇಕು.

ಎಲ್ಲದಕ್ಕೂ ಇಷ್ಟೊಂದು ಪರ್ಯಾಯಗಳನ್ನು ಕಂಡುಕೊಂಡಿರುವ ಇವರು ಶೌಚಕ್ಕೂ ಒಂದು ಉಪಾಯವನ್ನು ಕಂಡುಕೊಳ್ಳಬಾರದೇ?

ಟಾಯ್ಲೆಟ್ ನಲ್ಲಿ ಪಾಟ್ ನ ಬದಿಗೆ ಒಂದು ಸಣ್ಣ ಶವರ್ ಇಡಬಹುದು. ಇಲ್ಲವೆಂದರೆ ಪಾಟ್ ಒಳಗೆ ಅಳವಡಿಸಲಾಗುವ ಸಣ್ಣ ಪೈಪ್ ಗಳೂ ಬರುತ್ತವೆ, ಅದನ್ನಾದರೂ ಹಾಕಿಸಬಹುದು.
ಭಾರತದಿಂದ ಬರುವವರಿಗೆ ಈ ಒಂದು ವಿಷಯದಲ್ಲಿ ಮಾತ್ರ ಸಮಜಾಯಿಷಿ ಮಾಡಿಕೊಳ್ಳುವುದು ಕಷ್ಟ.

ಕನ್ನಡವೇ ಬಾರದವರಂತೆ ಇಂಗ್ಲಿಷ್ ಶೋಕಿ ತೋರಿಸುವವರಿಗೆ ನಮ್ಮ ಮಕ್ಕಳು ‘ ಏನು ಥೇಮ್ಸ್ ನದಿಯಲ್ಲಿ ಅಂಡು ತೊಳೆದುಕೊಂಡವನ ಹಾಗೆ ಆಡ್ತೀಯಾ’ ಎಂದು ತಮಾಷೆ ಮಾಡುತ್ತಾರೆ. ಸದ್ಯ ತೊಳೆದುಕೊಳ್ಳುವ ಕಡೆಯೇ ತೊಳೆಯಲು ಆಸ್ಪದವಿಲ್ಲ ಇನ್ನು ಥೇಮ್ಸ್ ನದಿಯೇ? ಅದೇನು ತಿಪ್ಪಾರಳ್ಳಿ ಕೆರೆಯೇ?

ಸತ್ತು ಸ್ವರ್ಗದಲ್ಲಿರುವ ಪಾತತ್ತೆಗೆ ನೆತ್ತಿ ಹತ್ತಿರಬೇಕು. ದಿನಾ ಅವಳನ್ನು ನೆನಪಿಸಿಕೊಳ್ಳುತ್ತಾ ಸ್ನಾನಕ್ಕಾಗಿ ಕಾಯುತ್ತೇನೆ.

‍ಲೇಖಕರು avadhi

June 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಹೌದು. ಅಮೇರಿಕಕ್ಕೆ ಹೋದ ಪ್ರತಿಯೊಬ್ಬ ಭಾರತೀಯನ ಪರಿಪಾಟಲು ಇದು. ಆದರೆ ನನ್ನ ಮಗಳ ಮನೆಯಲ್ಲಿ ಟ್ಯಾಂಕಿಗೆ ನೀರು ತುಬುವ ಪೈಪಿನ ಬಳಿಯೇ ನಮ್ಮಲ್ಲಿರುವ ತರಹ ವಾಷಿಂಗ್ ಜೆಟ್ಟನ್ನು ಜೋಡಿಸಿದ್ದಾರೆ. ಹಾಗಾಗಿ ಮನೆಯಲ್ಲಿದ್ದಾಗ ನಮಗೆ ಯಾವ ತೊಂದರೆಯೂ ಆಗಲಿಲ್ಲ. ಹೊರಗಡೆ ಉಳಿಯಬೇಕಾಗಿ ಬಂದಾಗ ಮಾತ್ರ ಪರಿಪಾಟಲು ಅನುಭವಿಸಿದೆವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: