ಪವಾಡ ಗೆದ್ದಯ್ಯೋ ನೀವೇ ಬನ್ಯೋ…

ಚಿಕ್ಕಲ್ಲೂರು ಜಾತ್ರೆ: “ಮನುಷ್ಯ ಕುಲದ ಅನನ್ಯತೆ”

ಗೋಳೂರ ನಾರಾಯಣಸ್ವಾಮಿ

**

ಜೀವ ಮಂಡಲದಲ್ಲಿ ಮನುಷ್ಯ ಕುಲ ತನ್ನ ಇರುವಿಕೆಯನ್ನು ಖಾತರಿಪಡಿಸಿಕೊಳ್ಳಲು ಸಂಶೋಧನೆಯನ್ನು ಕೈಗೊಳ್ಳುತ್ತದೆ. ಇದರಿಂದ ಮನುಷ್ಯ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನೂರೂ, ಇನ್ನೂರೂ ವರ್ಷಗಳಿಗೊಮ್ಮೆ ಅನುಸಂಧಾನಗೊಳ್ಳುವ ಮನುಷ್ಯ ಕುಲದ ಜೀವನ ವಿಧಾನವನ್ನು ಇತಿಹಾಸದ ಅಧ್ಯಯನದಿಂದ ತಿಳಿದುಕೊಳ್ಳುತ್ತೇವೆ. ಇತಿಹಾಸ ಅಧ್ಯಯನದಲ್ಲಿ ಮಾಹಿತಿಗಳು ಲಿಖಿತವಾಗಿಯೂ ಹಾಗೂ ಮೌಖಿಕವಾಗಿಯೂ ದೊರಕುತ್ತವೆ. ಮೌಕಿಕ ಪರಂಪರೆಗೆ ಸೇರಿದ ಇತಿಹಾಸವು ಪ್ರಮುಖವಾಗಿ ಜನಪದ ಕಥೆಗಳು, ಕಾವ್ಯ , ಲಾವಣಿಗಳು, ಹಾಡುಗಳು ಮುಂತಾದ ಪ್ರಕಾರಗಳಲ್ಲಿ ದೊರಕುತ್ತವೆ. ಇಂತಹ ಎಷ್ಟೋ ಕಾವ್ಯಗಳು, ಕಥೆಗಳು ಭಾರತದ ಜನಜೀವನ, ಹೋರಾಟ, ಆಡಳಿತ, ಹಲವಾರು ಸಂವೇದನೆಗಳನ್ನೊಳಗೊಂಡ ತತ್ವ ಚಿಂತನೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಜನಪದವು ಜನರು ಬಾಯಿಂದ ಬಾಯಿಗೆ ಹಾಡುತ್ತಾ ಬಂದಿದ್ದು ಜನರ ನಂಬಿಕೆಯ ಆಧಾರದ ಮೇಲೆ ನಿಂತಿದೆ. ಇಂತಹ ಜನಪದ ಆಚರಣೆಗಳು ಹಾಗೂ ವಿಚಾರಗಳು ಮುಂದೆ ದೈವಿಕ ಸ್ವರೂಪವನ್ನೂ ಪಡೆದಿವೆ. ಇಲ್ಲಿ ತಾವು ನಂಬಿದ್ದ ಸಿದ್ದಾಂತವನ್ನೂ, ತಮ್ಮ ಸಾಂಸ್ಕೃತಿಕ ನಾಯಕನನ್ನೂ , ಮರಗಿಡ ಬಳ್ಳಿ , ಪ್ರಾಣಿ ಪಕ್ಷಿಗಳನ್ನೂ ಗೌರವಿಸುತ್ತಾ ಪೂಜೆಗೆ ಒಳಪಡಿಸಿರುವುದನ್ನು  ಕಾಣಬಹುದು.

ಭಾರತದಲ್ಲಿ ಈಗಾಗಲೇ ನಡೆದಿರಬಹುದಾದ ರಾಮಾಯಣ ಹಾಗೂ ಮಹಾಭಾರತ ಕಾಲದ ಚಾರಿತ್ರಿಕ ಘಟನೆಗಳನ್ನು ವಾಲ್ಮೀಕಿಯ ರಾಮಾಯಣ ಹಾಗೂ ವ್ಯಾಸನ ಮಹಾಭಾರತದ ಜೊತೆಗೆ ನೂರಾರು ಜನಪದ ರಾಮಾಯಣ ನೂರಾರು ಜನಪದ ಮಹಾಭಾರತ ಕಾವ್ಯ ಹಾಗೂ ಕಥೆಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈಗಲೂ ಇಂತಹ ಲಕ್ಷಾಂತರ ಜನಪದರು ತಮ್ಮ ಮೂಲ ಇತಿಹಾಸವನ್ನು ಜನಪದದ ವಿವಿಧ ಪ್ರಕಾರಗಳಲ್ಲಿ ಹಾಡುತ್ತಾ ಬಂದಿದ್ದಾರೆ. ಅವುಗಳಲ್ಲಿ ದಕ್ಷಿಣ ಕರ್ನಾಟಕದ ಬಹಳ ಮುಖ್ಯವಾಗಿ ಮಾದೇಶ್ವರ ಕಾವ್ಯ ಹಾಗೂ ಮಂಟೇಸ್ವಾಮಿ ಕಾವ್ಯಗಳನ್ನು ಜನರು ಇಂದಿಗೂ ಹಾಡುತ್ತಾರೆ ಹಾಗೂ ಇದಕ್ಕೆ ಸಂಬಂಧಿಸಿದ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ದೀಪಾವಳಿ, ಸಂಕ್ರಾಂತಿ ಹಬ್ಬದಿಂದ ಯುಗಾದಿವರೆಗೆ ಸಾಕಷ್ಟು ಜಾತ್ರೆಗಳನ್ನು ನಡೆಸುವುದರ ಮೂಲಕ ಈ ಆಚರಣೆಯನ್ನು ಜೀವಂತವಾಗಿಟ್ಟಿದ್ದಾರೆ. ಚಿಕ್ಕಲ್ಲೂರು ಜಾತ್ರೆ, ಕಪ್ಪಡಿ ಜಾತ್ರೆ ಹಾಗೂ ಬೊಬ್ಬೇಗೌಡನಪುರದ ಮಂಟೇಸ್ವಾಮಿ ಜಾತ್ರೆ ಮಂಟೇಸ್ವಾಮಿ ಪರಂಪರೆಗೆ ಬರುವ ಪ್ರಮುಖ ಜಾತ್ರೆಗಳು ಆಗಿವೆ. ದೀಪಾವಳಿ, ಯುಗಾದಿ ಹಾಗೂ ಪ್ರತಿ ತಿಂಗಳ ಅಮಾವಾಸ್ಯೆಯಂದು ಮಳವಳ್ಳಿ ತಾಲೂಕಿನ ಸರಗೂರು ಮೂಗಪ್ಪ ರಾಮವ್ವ ನೆಲೆಸಿರುವ ಸ್ಥಳದಲ್ಲಿ ನಡೆಯುವ ಪೂಜಾಕಾರ್ಯಗಳು ಮಾದೇಶ್ವರನ ಕಾವ್ಯ ಪರಂಪರೆಗೆ ಸೇರುವ ಪ್ರಮುಖ ಜಾತ್ರೆಗಳಾಗಿವೆ.

ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳ ಕುರಿತು ವಿದ್ವಾಂಸರು ಕ್ಷೇತ್ರಕಾರ್ಯ ಮಾಡಿ ಎರಡೂ ಕಾವ್ಯಗಳ ಸಂಗ್ರಹ ಕಾರ್ಯ ಮಾಡಿದ್ದಾರೆ. ಹಲವಾರು ಜನಪದ ಕಲಾವಿದರಿಂದ ಈ ಕಾವ್ಯಗಳನ್ನು ಹಾಡಿಸಿ ಅವುಗಳನ್ನು ಸಂಪಾದಿಸುವ ಮೂಲಕ ಪುನರ್ ವಿಮರ್ಶೆ ಕಾರ್ಯವನ್ನು ಮಾಡಿದ್ದಾರೆ. ಪ್ರಮುಖವಾಗಿ ಜೀ.ಶಂ.ಪರಮಶಿವಯ್ಯ, ಹಿ.ಚಿ.ಬೋರಲಿಂಗಯ್ಯ, ಪಿ.ಕೆ.ರಾಜಶೇಖರ್, ವೆಂಕಟೇಶ ಇಂದ್ವಾಡಿ, ಮಹದೇವ ಶಂಕನಪುರ, ಕೋಟಗಾನಹಳ್ಳಿ ರಾಮಯ್ಯ, ಬಂಜಗೆರೆ ಜಯಪ್ರಕಾಶ್, ಕೇಶವನ್ ಪ್ರಸಾದ್, ಎಚ್.ಎಸ್. ಶಿವಪ್ರಕಾಶ್, ಲಕ್ಷ್ಮಣ ಕೌಂಟೆ, ಮುಂತಾದ ಮಹನೀಯರು ಈ ಕಾವ್ಯಗಳ ಬಗ್ಗೆ ಮಾತನಾಡಿದ್ದಾರೆ ಇತ್ತೀಚಿಗೆ ಸುರೇಶ ನಾಗಲಮಡಿಕೆ, ಪ್ರಕಾಶ್ ಮಂಟೇದ ಬರೆಯುತ್ತಿದ್ದಾರೆ.

ಸಾವಿರಾರು ವರ್ಷಗಳಿಂದ ಹಾಡಿಕೊಂಡು ಬಂದಿರುವ ಮಾದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯಗಳಿಗೆ ವಿಶೇಷ ಸ್ಥಾನಮಾನವಿದೆ ಹಾಗೂ ಎರಡು ಕಾವ್ಯಗಳು ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿವೆ. ಹಿಂದೆ ಈ ಎರಡೂ ಕಾವ್ಯಗಳನ್ನು ಏಳು ರಾತ್ರಿ ಏಳು ಹಗಲು ಆಡುತ್ತಿದ್ದ ದೊಡ್ಡ ಪರಂಪರೆ ಇತ್ತು. ಇತ್ತೀಚೆಗೆ ಅದು ಕ್ಷೀಣಿಸುತ್ತ ಬಂದಿದೆ. ಕಾರಣ ಆಗ ಜಾತ್ರೆಗಳು ಹತ್ತರಿಂದ ಹದಿನೈದ ಅಥವಾ ತಿಂಗಳುಗಳ ಕಾಲ ನಡೆಯುತ್ತಿದ್ದವು. ಜಾತ್ರೆಗಳು ಈಗ ಎರಡು ಮೂರು ಅಥವಾ ನಾಲ್ಕು ದಿನಗಳಿಗೆ ಸೀಮಿತವಾಗಿರುವುದರಿಂದ ಈ ಕಾವ್ಯಗಳನ್ನು ಹಾಡುವ ಅವಧಿಯು ಕೂಡ ಕಡಿಮೆಯಾಗುತ್ತಾ ಬಂದಿದೆ. ಈಗ ಜಗತ್ತಿನಲ್ಲೇ ಅತಿ ದೊಡ್ಡ ಜನಪದ ಕಾವ್ಯವಾಗಿ ಮಾದೇಶ್ವರ ಕಾವ್ಯ ಎರಡನೇ ಸ್ಥಾನದಲ್ಲಿದೆ. ಫಿನ್ ಲ್ಯಾಂಡ್ ನ ‘ಕಲೆವಲ’ ಎಂಬ ಜನಪದ ಕಾವ್ಯ ಮೊದಲ ಸ್ಥಾನದಲ್ಲಿದೆ. ಹಾಗೆ ನೋಡಿದರೆ ನಮ್ಮ ಎರಡೂ ಜನಪದ ಕಾವ್ಯಗಳನ್ನು ಸಂಪಾದಿಸುವ ಕಾರ್ಯ ತುಂಬಾ ತಡವಾಗಿ ಆಗಿದೆ ಎನ್ನಬಹುದು.

ಕರ್ನಾಟಕದ ಮೌಖಿಕ ಪರಂಪರೆಯ ಹೆಗ್ಗಳಿಕೆ ಹೊಂದಿರುವ ಮಂಟೇಸ್ವಾಮಿ ಹಾಗೂ ಮಾದೇಶ್ವರ ಕಾವ್ಯವನ್ನು ಈ ಪರಂಪರೆಯಲ್ಲಿ ಬರುವ ಗುಡ್ಡರು ಹಾಗೂ ನೀಲಗಾರರು ಹಾಡುತ್ತಾ ಬಂದಿದ್ದಾರೆ. ಈ ಎರಡು ಕಾವ್ಯಗಳು ಕನ್ನಡ ಸಾಹಿತ್ಯ ರಚನೆಯಲ್ಲೂ ಕೂಡ ಪ್ರಭಾವ ಬೀರಿವೆ. ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯಲ್ಲಿ ಈ ಛಾಯೆ ಅಥವಾ ಬನಿಯನ್ನು ಕಾಣಬಹುದು. ಅಲ್ಲದೆ ಈ ನೆಲದಲ್ಲಿ ಹುಟ್ಟಿ ಬೆಳೆದ ನನ್ನಂತಹ ಕಾವ್ಯ ಭಿಕ್ಷುಗಳನ್ನು ಸದಾ ಕಾಡುತ್ತವೆ. ಇಂದಿಗೂ ಈ ಮಹಾಕಾವ್ಯಗಳನ್ನು ಹಾಡುತ್ತಾ ಬಂದಿರುವ ನೀಲಗಾರರು ಹಾಗೂ ದೇವರಗುಡ್ಡರುಗಳಿಗೆ ಎಷ್ಟು ಧನ್ಯವಾದಗಳು ಸಾಲದು.

ದಕ್ಷಿಣ ಕರ್ನಾಟಕದ ಸಮಾಜ ಸುಧಾರಣೆಯ ಮಹಾರಾಯಭಾರಿಗಳು, ಸಾಂಸ್ಕೃತಿಕ ನಾಯಕರಗಳು ಆದಂತಹ ಮಂಟೇಸ್ವಾಮಿ ಹಾಗೂ ಮಾದೇಶ್ವರ ಕಾಲಮಾನದ ಬಗ್ಗೆ ಗೊಂದಲವಿದೆ. ಸಾಮಾನ್ಯವಾಗಿ ಇವರು 14ರಿಂದ 16ನೇ ಶತಮಾನದಲ್ಲಿ ಇದ್ದವರೆಂದು ಊಹಿಸಲಾಗಿದೆ. ಆದರೆ ಇತ್ತೀಚಿಗೆ ನಾನು ಮಳವಳ್ಳಿ ತಾಲೂಕಿನ ಸರಗೂರಿಗೆ ಭೇಟಿ ನೀಡಿದ್ದೆ. ಇಲ್ಲಿ ಪ್ರತೀ ಅಮವಾಸ್ಯೆ ದಿನದಂದು ವಿಶೇಷವಾದ ಜಾತ್ರೆಯೇ ನಡೆಯುತ್ತದೆ. ಮಾದೇಶ್ವರ ದೇವಸ್ಥಾನ ಮತ್ತು ಇವರ ಶಿಶು ಮಕ್ಕಳಾದ ಮೂಗಪ್ಪ ಹಾಗೂ ರಾಮವ್ವ ಅವರ ದೇವಸ್ಥಾನಗಳು ಇವೆ. ಈ ರಾಮವ್ವ ದೇವಸ್ಥಾನದ ಮುಂಭಾಗ ಕುಳಿತು ಮಳವಳ್ಳಿ ತಾಲೂಕಿನ ನಾರಾಯಣಪುರದ ಬಳಿಯ ಮಲ್ಲಿಗನಹಳ್ಳಿಯ ಮಲ್ಲಯ್ಯ ಎಂಬುವರು ಮಾದೇಶ್ವರ ಕಾವ್ಯದಲ್ಲಿ ಬರುವ “ಸರಗೂರಯ್ಯನ ಸಾಲು” ಎಂಬ ಕವಟ್ಲನ್ನು ಹಾಡುತ್ತಿದ್ದರು. 

ಅಲ್ಲಿ ಒಂದು ಸಾಲು ಬರುತ್ತದೆ ಅದು: 

“ಕರತನ್ನಿ ಕಾರಯ್ಯನ 

ಬರಹೇಳಿ ಬಿಲ್ಲಯ್ಯನ 

ಸರಗೂರಿಗೆ ಓಲೆ ಬರೆಯವನ 

ಎಣ್ಣೆ ಮಜ್ಜನಕೆ ಕರೆಯವನ

ಗಂಡು ಮೇಲೆ ಮೆರೆಯವನ”

ಹೀಗೆ ಮಾದೇಶ್ವರ ಕಾವ್ಯದಲ್ಲಿ ಬರುವಂತೆ ತನಗೆ ಎಣ್ಣೆ ಮಜ್ಜನ ಮಾಡಲು ಭಕ್ತರು ಯಾರು ಇಲ್ಲವಲ್ಲ ನಾನು ಅಂತಹ ಭಕ್ತರ ಪಡಿಬೇಕು ಎಂದುಕೊಂಡು ಸರಗೂರಿನಲ್ಲಿ ವಾಸವಾಗಿದ್ದ ಉಪ್ಪಲಿಗಶೆಟ್ಟಿ ಮೂಗಪ್ಪ ಹಾಗೂ ರಾಮವ್ವ ಎಂಬ ಸತ್ಯವಂತ ದಂಪತಿಯನ್ನು ಒಕ್ಕಲು ಪಡೆದು ತನ್ನ ಶರಣರನ್ನಾಗಿ ಮಾಡಿಕೊಂಡು ತನ್ನ ಏಳು ಮಲೆಗೆ ಕರೆದೊಯ್ಯುತ್ತಾನೆ. ಅವರಿಗೆ ಪ್ರತೀ ಅಮವಾಸ್ಯೆಯಂದು ಎಣ್ಣೆ ಮಜ್ಜನ ಮಾಡಲು ನೇಮಿಸುತ್ತಾರೆ. ಹೀಗೆ ಶುರುವಾದ ಎಣ್ಣೆ ಮಜ್ಜನ ಸೇವೆ ಈಗಲೂ ಮುಂದುವರೆದಿದೆ. ಮಲ್ಲಯ್ಯ ಎಂಬುವ ಜನಪದ ಕಲಾವಿದ ಆಡುತ್ತಿದ್ದ ಈ ಸಾಲುಗಳನ್ನು ಕೇಳಿ ಇದಕ್ಕೆ ಸಂಬಂಧಪಟ್ಟಂತೆ ಸರಗೂರಿನಲ್ಲಿ ವಾಸವಾಗಿರುವ ರಾಮಪ್ಪ ಮೂಗುವ ಅವರ ವಂಶಸ್ಥರಾದ ಸಿ.ಸಿದ್ದಪ್ಪ ಸ್ವಾಮಿ ಎಂಬುವವರನ್ನು ಭೇಟಿಯಾಗಿ ಮಾದೇಶ್ವರ ಕಾಲಮಾನದ ಬಗ್ಗೆ ವಿಚಾರಿಸಿದೆ.

ಅವರು ಅವರು ಬಹಳ ಸಂತೋಷದಿಂದ ಮಾತನಾಡುತ್ತಾ, ಈ ದೇವಾಲಯದ ಎಣ್ಣೆ ಮಜ್ಜಣದ ವಿಚಾರವಾಗಿ ನಡೆಯುತ್ತಿದ್ದ ಕೋರ್ಟ್ ವ್ಯಾಜ್ಯವೊಂದರ ಕುರಿತು ಹೇಳುತ್ತಾ, ತಮ್ಮ ಬಳಿ ಇದ್ದ ಚಾಮರಾಜನಗರ ತಾಲೂಕು ‘ಹರದನಹಳ್ಳಿ’ಯಲ್ಲಿ ದೊರೆತ ಹೊಯ್ಸಳರ ‘ವೀರ ಬಲ್ಲಾಳದೇವ’ ಹೊರಡಿಸಿದ ತಾಮ್ರಸಾಸನದ ಬಗ್ಗೆ ಮಾಹಿತಿ ನೀಡಿದರು. ಕ್ರಿ.ಶ.1246ನೇ ಇಸವಿಯಲ್ಲಿ ಹೊರಡಿಸಿದ ತಾಮ್ರ ಶಾಸನದ ಮುದ್ರಿತ ಪ್ರತಿ ಇವರ ಬಳಿ ಇರುವುದನ್ನು ತೋರಿಸಿದರು. ಇದು ಮೈಸೂರು ಪುರಾತತ್ವ ಇಲಾಖೆಯು ಸಂಗ್ರಹಿಸಿರುವ ಮಾಹಿತಿಯಾಗಿದೆ. 

ಈ ತಾಮ್ರ ಶಾಸನದಲ್ಲಿ: “ಶ್ರೀ ಮಹದೇವನು ಉಪ್ಪಲಿಗಶೆಟ್ಟಿಯ ದೃಢಕ್ಕೆ ಮೆಚ್ಚಿ ಗುಡ್ಡನ ಮಾಡಿ ಯೆಂಣೆಮಜ್ಜನ ಕರ್ತನ ಮಾಡಿ” ಎಂದು ಉಲ್ಲೇಖವಾಗಿದೆ. 

ಇದೇ ರೀತಿ ಮೈಸೂರಿನ ಹೈದರಾಲಿಖಾನ್ ಕ್ರಿ.ಶ.1698ರಲ್ಲಿ ಹೊರಡಿಸಿದ ತಾಮ್ರ ಶಾಸನದ ಬಗ್ಗೆಯೂ ಮಾಹಿತಿ ನೀಡಿದರು. ಈ ತಾಮ್ರ ಶಾಸನದಲ್ಲಿ “ಈ ಮಾದೇವನು ಸರಗೂರಿನಲ್ಲಿ ಇರುವ ಉಪ್ಪಲಿಗಶೆಟ್ಟಿಗೆ ವಲಿದು ಗುಡ್ಡನ ಮಾಡಿ ಯೆಂಣೆಮಜ್ಜನ ಶ್ಯಾವಗೆ ಕರ್ತನ ಮಾಡಿಯಿರಲು” ಎಂದು ಉಲ್ಲೇಖವಾಗಿದೆ.

ಕ್ರಿ.ಶ.1246ನೇ ಇಸವಿಯಲ್ಲಿ ಹೊರಡಿಸಿದ ಹರದನಳ್ಳಿ ತಾಮ್ರ ಶಾಸನದಿಂದ ಮಾದೇವನು ಹನ್ನೆರೆಡು ಅಥವಾ ಅದಕ್ಕಿಂತ ಮೊದಲು ಇದ್ದ ಒಬ್ಬ ಸಾಂಸ್ಕೃತಿಕ ಧೀರಮಣಿ ಎಂದು ಅನಿಸುತ್ತದೆ. ಈ ಶಾಸನವು ಮಾದೇವನಿಗೆ ಸರಗೂರಿನಲ್ಲಿರುವ ಉಪ್ಪಲಿಗಶೆಟ್ಟಿಯೂ ಎಣ್ಣೆಮಜ್ಜನ ಮಾಡುತ್ತಿದ್ದ ಎಂಬ ಅಂಶ ಸ್ಪಸ್ಟವಾಗಿತ್ತದೆ ಹಾಗೂ ಸಿ.ಸಿದ್ದಪ್ಪಸ್ವಾಮಿ ಅವರು ಹೇಳಿವಂತೆ 1911  ರ ವರೆವಿಗೂ ಮಾದೇಶ್ವರ ಬೆಟ್ಟದಿಂದ ಎಣ್ಣೆಮಜ್ಜನ ಮಾಡಲು ಬರಬೇಕೆಂದು ಪತ್ರ ನಮಗೆ ಬರುತ್ತಿತ್ತು ಎಂಬ ವಿಚಾರ ತಿಳಿಸಿದರು. ಅಲ್ಲಿಗೆ ಮಾದೇವನ ಕಾಲದಿಂದಲೂ ಮೌಖಿಕ ಪರಂಪರೆಯ ಜೊತೆಗೆ ಪತ್ರ ವ್ಯವಹಾರವೂ ಇತ್ತು ಎಂಬುದನ್ನು ಅಂದಾಜಿಸಬಹುದು.

ಮಾದೇಶ್ವರ ಹಾಗೂ ಮಂಟೇಸ್ವಾಮಿ ಇವರಿಬ್ಬರೂ ಕೂಡ ಸಮಕಾಲೀನರು ಎಂಬುದು ವಿದ್ವಾಂಸರ ವಾದವಾಗಿರುವುದರಿಂದ ಈ ತಾಮ್ರಶಾನದ ಆಧಾರದ ಮೇಲೆ ಇವರ ಕಾಲಮಾನ 12 ಅಥವಾ 12ನೇ ಶತಮಾನದ ಹಿಂದಕ್ಕೆ ಹೋಗುತ್ತದೆ. ಮಹದೇಶ್ವರ ಕಾವ್ಯದಲ್ಲಿ ಮಾದೇಶ್ವರ ಹುಟ್ಟು ಬೆಳೆದ ಸಾಲಿನಲ್ಲಿ ಒಂದು ವಿಚಾರ ಪ್ರಸ್ತಾಪವಾಗಿದೆ. 

ಅದೇನೆಂದರೆ: “ಮಾದೇವನು ಬಂಕಾಪುರವನ್ನು ಆಳುತ್ತಿದ್ದ ದುಷ್ಟ ದೊರೆ ಶ್ರವಣಯ್ಯನನ್ನು ಸಂಹರಿಸಲೆಂದೇ ಉತ್ತರ ದೇಶದಿಂದ ಕತ್ತಲ ರಾಜ್ಯಕ್ಕೆ ಬರುತ್ತಾನೆ. ಆ ಸಂದರ್ಭದಲ್ಲಿ ಶ್ರವಣ ದೊರೆ ದೇವಾನುದೇವತೆಗಳನ್ನು ಸೆರೆ ಹಿಡಿದುಕೊಂಡು ಎಲ್ಲರಿಗೂ ಹಿಂಸೆ ಕೊಡುತ್ತಿರುತ್ತಾನೆ. ತಾನು ಸೆರೆಹಿಡಿದಿದ್ದ ಎಲ್ಲ ದೇವತೆಗಳಿಗೂ ಒಂದೊಂದು ಕೆಲಸ ಕೊಟ್ಟಿರುತ್ತಾನೆ. ಅಂತೆಯೇ ಮಂಟೇಸ್ವಾಮಿಯವರಿಗೆ ಕಡೆಯ ಬಾಗಿಲಿನಲ್ಲಿ ನಿಂತು ತಮಟೆ ಬಾರಿಸುವ ಕಾಯಕಕ್ಕೆ ನೇಮಿಸಿಕೊಂಡಿರುತ್ತಾನೆಂದು ಕಥೆ ಹೇಳುತ್ತದೆ.

 ಒಟ್ಟಾರೆ ಈ ಕಥೆಯ ಪ್ರಕಾರ ಮಂಟೇಸ್ವಾಮಿ ಅವರು ಮಹದೇಶ್ವರಳಿಗಿಂತ ಮುಂಚೆ ಬಂದು ಹೋದವರೆಂದೂ ಹಾಗೂ ಜನರ ಮನದಲ್ಲಿ ಈಗಾಗಲೇ ದೈವಿಕ ಸ್ಥಾನ ಪಡೆದವರಾಗಿ ರೂಪಗೊಂಡವರಾಗಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ಮಾದೇಶ್ವರ ಹಾಗೂ ಮಂಟೇಸ್ವಾಮಿ ಅವರು ಬಸವಣ್ಣನಿಗಿಂತ ಹಿರಿಯರು ಅಥವಾ ಆತನ ಸಮಕಾಲೀನರೆಂದು ಊಹಿಸಬಹುದಾಗಿದೆ. ಕಾಲಮಾನದ ಪ್ರಜ್ಞೆಯ ಜೊತೆಗೆ “ಕಾವ್ಯವೂ ದೊಡ್ಡದು; ಕಾವ್ಯದೊಳಗಿನ ಬದುಕ ಇನ್ನೂ ದೊಡ್ಡದು!

ಕುರುಬರ ಬೀರಯ್ಯ ಲಿಂಗ 

ಮಡಿವಾಳ ಮಾಚಯ್ಯ ಲಿಂಗ

ಹೊಲಾರ ಹೊನ್ನಯ್ಯ ಲಿಂಗ

ಮೇಲು ಸಕ್ಕರೆ ಲಿಂಗ

ಹಡಪದ ಅಪ್ಪಣ್ಣ ಲಿಂಗ

ಕುಂಬಾರ ಗುಂಡಯ್ಯ ಲಿಂಗ

ಈ ಎಲ್ಲಾ ರೈತಾಪಿ ಉತ್ಪಾದಕ ಜನಗಳ ಸಂತ, ಪವಾಡಪುರುಷ, ಬಹುದೊಡ್ಡ ಸಾಂಸ್ಕೃತಿಕ ನಾಯಕ ಮಂಟೇಸ್ವಾಮಿ. 

– ಬಂಜಗೆರೆ ಜಯಪ್ರಕಾಶ್.

ನಾಡಿನ ಬಹುದೊಡ್ಡ ಸಂಸ್ಕೃತಿಯೊಂದನ್ನು ಸಮಕಾಲೀನ ಬದುಕಿಗೆ ಓರೆ ಹಚ್ಚುವ, ಒಗ್ಗಿಸಿಕೊಳ್ಳುವ ಪರಿಯನ್ನು ಬಂಜಗೆರೆ ಅವರು ಪ್ರಸ್ತಾಪಿಸುವ ರೀತಿ ನನಗೆ ಬಹಳ ಇಷ್ಟ. ನಾಡಿನ ಬಹಳ ದೊಡ್ಡ ಸಂಸ್ಕೃತಿ ಚಿಂತಕರಾಗಿ ಈಗಾಗಲೇ ಆಗಿಹೋದ ಕುತೂಹಲಕಾರಿ ವಿಚಾರವೊಂದನ್ನು ಎಲ್ಲಿಯೂ ಉದ್ವೇಗಗೊಳ್ಳದೆ, ಭಾವಪರವಶವಾಗದೆ, ಸಹಜ ಸತ್ಯದೆಡೆಗೆ ಅದನ್ನು ಕರೆದೊಯ್ಯುವ ಅಥವಾ ಅದರ ಮೂಲವನ್ನು ಹುಡುಕುವ ಮನುಷ್ಯ ಸಹಜ ಕುತೂಹಲವನ್ನು ಪ್ರೋತ್ಸಾಹಿಸುವ ಇವರ ಗುಣ ಸದಾ ನನ್ನನ್ನು ಕಾಡುತ್ತದೆ. ಬಂಜಗೆರೆ ಅವರು ಹೇಳುವಂತೆ, ಎಲ್ಲ ಜಾತಿ ವರ್ಗದವರನ್ನೂ ಒಳಗೊಂಡು, ಅನೇಕ ಮೌಢ್ಯ- ತಾರತಮ್ಯಗಳನ್ನು ಅಳಿಸಿ ಹಾಕುವ ಮೂಲಕ ಸಮಸಮಾಜ ನಿರ್ಮಾಣ ಮಾಡಲು ಹೊರಟ ಬಹಳ ದೊಡ್ಡ ಸಾಂಸ್ಕೃತಿಕ ನಾಯಕ ಮಂಟೇಸ್ವಾಮಿ. ಅವರ ಶಿಶುಮಗ ಸಿದ್ದಪ್ಪಾಜಿ.

ಕಾಲಗರ್ಭದಲ್ಲಿ ಆಗಿ ಹೋದ ಎದೆಷ್ಟೋ ಹೋರಾಟದ ಕತೆಗಳಿವೆ. ಸಮಾಜ ಸುಧಾರಣೆಯ ಸಾವಿರಾರು ಚಳುವಳಿಗಳು ಈ ನೆಲದಲ್ಲಿ ನಡೆದಿವೆ. ಇಂತಹ ಬಹುದೊಡ್ಡ ಸಾಂಸ್ಕೃತಿಕ ಚಳುವಳಿಯೊಂದನ್ನು ನಡೆಸಿ ಬಹು ಕಠಿಣವಾದ ಪವಾಡಗಳನ್ನು ಗೆದ್ದು, ಅತಿ ಮುದ್ದು ಘನನೀಲಿಯಾಗಿ ರೂಪುಗೊಂಡ ಸಿದ್ದಪ್ಪಾಜಿಯವರ ಹೋರಾಟ ಹಾಗೂ ಸಾಹಸಗಾತೆಯೂ ಅನೇಕ ವೈರುದ್ಯಗಳಿಗೆ ಉತ್ತರವಾಗಿದೆ.

ಕೆಂಪಾಚಾರಿಯಾಗಿದ್ದ ಸಿದ್ದಪ್ಪಾಜಿಯು ಮಂಟೇಸ್ವಾಮಿ ಅವರ ಶಿಶುಮಗನಾಗಿ ತಾನು ಕೈಗೊಂಡ ಸಾಮಾಜಿಕ ಸುಧಾರಣಾ ಕ್ರಾಂತಿಯಿಂದಾಗೆ ‘ಸಾಂಸ್ಕೃತಿಕ ಚಳುವಳಿಗಳ ಪುಂಡ’ ‘ಮಾರಿ ಮಸಣಿಯರ ಗಂಡ’ ಎಂದೆನಿಸಿಕೊಂಡಿದ್ದಾರೆ. ಭಾರೀ ಬರಗನ ಏರಿ ಬರುವ ಸಿದ್ದಪ್ಪಾಜಿ ಹಲವಾರು ಗಂಡಾಂತರಗಳನ್ನು ಒಡ್ಡಬಲ್ಲ, ಹೊಡೆಯಬಲ್ಲ, ಕೂಡಬಲ್ಲ ಚತುರನಾಗಿ ಕಾಣುತ್ತಾರೆ.

ಈ ಎಲ್ಲ ಹೋರಾಟದ ಫಲವಾಗಿ ಜನಮಾನಸದಲ್ಲಿ ಮಹಾಕಾವ್ಯಗಳ ಉದಯವಾಗಿದೆ. ಇವುಗಳಲ್ಲಿ ದಕ್ಷಿಣ ಕರ್ನಾಟಕದ ಮಂಟೇಸ್ವಾಮಿ ಕಾವ್ಯವು ಜನಪದ ಲೋಕಕ್ಕೆ ಅನನ್ಯ ಕೊಡುಗೆ. ನನ್ನಂತಹ ಎಷ್ಟೋ ಜನ ಕಾವ್ಯ ಹಾಗೂ ಜನಪದ ಕಲಾವಿದರು ಈ ಕಾವ್ಯವನ್ನು ಹಾಡುತ್ತಾ, ತಿರುಗಾಡುತ್ತಾ, ಉಸಿರಾಡುತ್ತಾ ತಮ್ಮ ಇಡೀ ಜೀವನವನ್ನೇ ಮುಗಿಸಿಕೊಂಡಿದ್ದಾರೆ. ಆ ಮಟ್ಟಗಿನ ಕಕ್ಕುಲಾತಿ ಈ ಕಾವ್ಯದ ಮೇಲಿದೆ. ಹಳೇ ಮೈಸೂರು ಭಾಗದ ಜನರಿಗೆ ಮಂಟೇಸ್ವಾಮಿ ಕಾವ್ಯ ಎಂದರೆ ಅಪಾರವಾದ ಗೌರವ, ಭಕ್ತಿ ಹಾಗೂ ಬತ್ತಲಾರದ ಪ್ರೇಮ! ಈ ಕಾವ್ಯದಲ್ಲಿ ಕಾಣಬರುವ ರೋಮಾಂಚನಕಾರಿ ವಿಚಾರಗಳೆಲ್ಲವೂ ಬಂಡವಾಳಶಾಯಿಗಳ ಅಥವಾ ಹಣವುಳ್ಳ ಅಹಂಕಾರಿಗಳ ವಿರುದ್ಧ ಬಂಡಾಯ ಎದ್ದು ಹೋರಾಟ ಮಾಡಿರುವುದೇ ಆಗಿದೆ. ಬಡತನ, ಸಿರಿತನ, ಮೋಸ, ಕಳ್ಳತನ, ವಂಚನೆ, ಭಯ, ಅಹಂಕಾರ ಮುಂತಾದವುಗಳನ್ನು ಮೀರುವುದು ಈ ಕಾವ್ಯದ ಆಶಯವಾಗಿದೆ. ಮಂಟೇಸ್ವಾಮಿ ಕಾವ್ಯವನ್ನು ಹಾಡುವವರನ್ನು ನೀಲಗಾರರೆಂದು ಕರೆಯುತ್ತೇವೆ. “ನೀಲಗಾರರು” ಮಂಟೇಸ್ವಾಮಿ ಪರಂಪರೆಯಲ್ಲಿ ಬರುವ ಶಿಶುಮಕ್ಕಳು. ಈ ನೀಲಗಾರರು ತಂಬೂರಿ ಹಾಗೂ ಕಂಸಾಳೆಯನ್ನು ಪ್ರಧಾನ ಸಂಗೀತ ಸಾಧನಗಳಾಗಿ ಬಳಸಿಕೊಂಡು ಕಾವ್ಯವನ್ನು ಹಾಡುತ್ತಾರೆ. ವಿಶೇಷವಾಗಿ ಕಾವ್ಯದಲ್ಲಿ ಎದೆಗೂ ಮಿಗಿಲಾದ ಭಾಷಾ ಪ್ರಯೋಗವನ್ನು ಕಾಣಬಹುದು. ಮುಖ್ಯವಾಗಿ ಮಂಟೇಸ್ವಾಮಿ ಕಾವ್ಯವನ್ನು ಮೂರು ಕವಟ್ಲುಗಳಲ್ಲಿ ಹಾಡುತ್ತಾರೆ. “ಧರೆಗೆ ದೊಡ್ಡವರ ಸಾಲು” “ಸಿದ್ದಪ್ಪಾಜಿ ಸಾಲು” “ರಾಚಪ್ಪಾಜಿ ಸಾಲು” ಹೀಗೆ ಈ ಕಾವ್ಯವನ್ನು ಚಾಮರಾಜನಗರ, ಮಂಡ್ಯ, ಮಳವಳ್ಳಿ, ಹಲಗೂರು, ಮೈಸೂರು, ನಂಜನಗೂಡು, ಕೊಳ್ಳೇಗಾಲ, ಟಿ.ನರಸಿಪುರ, ಎಚ್.ಡಿ.ಕೋಟೆ, ಕೆ ಆರ್ ನಗರ, ಗುಂಡ್ಲುಪೇಟೆ ಸೇರಿದಂತೆ ಬೆಂಗಳೂರಿನ ಕನಕಪುರದವರೆಗೂ ಹಾಡುವ ಕಲಾವಿದರಿದ್ದಾರೆ.

ಸಿದ್ದಪ್ಪಾಜಿಯವರ “ಚಿಕ್ಕಲೂರು ಜಾತ್ರೆ” ಪ್ರತಿ ವರ್ಷ ಸಾಮಾನ್ಯವಾಗಿ ಜನವರಿ ತಿಂಗಳಿನ ಹುಣ್ಣಿಮೆಯ ದಿನದಂದು “ಚಂದ್ರಮಂಡಲ” ಆಚರಣೆಯಿಂದ ಶುರುವಾಗುತ್ತದೆ. ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪ್ರತಿದಿನ ಒಂದೊಂದು ಸೇವೆ ಜರಗುತ್ತದೆ. ಎಲ್ಲ ಜಾತಿಜನರು ಒಟ್ಟಿಗೆ ಸೇರಿ ಆಚರಿಸುವ ಈ ಜಾತ್ರೆ ಬಹುದೊಡ್ಡ ಸಾಂಸ್ಕೃತಿಕ ಅನನ್ಯತೆಯನ್ನು ಸಾರುತ್ತದೆ. ಈ ಜಾತ್ರೆಯ ಪ್ರಧಾನ ನಾಯಕ ಸಿದ್ದಪ್ಪಾಜಿಯೇ ಆಗಿರುತ್ತಾನೆ.

ಈವಾಗಲೀಗ ಇಂತಹ “ಘನನೀಲಿ ಸಿದ್ದಪ್ಪಾಜಿ” ಹಾಗೂ ಅವರ ಪವಾಡಗಳನ್ನು ಸ್ಮರಿಸೋಣ.

ಸಿದ್ದ ಸಿದ್ದರಿಗೆಲ್ಲ ಅತಿ ಮುದ್ದು ಘನನೀಲಿ 

ಸಿದ್ದಯ್ಯ ಸ್ವಾಮಿ ಬನ್ನಿ 

ಪವಾಡ ಗೆದ್ದಯ್ಯ ನೀವೇ ಬನ್ನಿ 

ಬಾರದ ಪವಾಡಕ್ಕೆಲ್ಲ ಬಂದು ಒದಗೋ ಘನನೀಲಿ

ಸಿದ್ದಯ್ಯ ಸ್ವಾಮಿ ಬನ್ನಿ…

ಮಂಟೇಸ್ವಾಮಿ ಕಾವ್ಯವನ್ನು ಹಾಡುವಾಗ ಇಡೀ ಕಾವ್ಯದ ಉದ್ದಕ್ಕೂ ಮೇಲಿನ ಸಾಲುಗಳು ಕಂಡು ಬರುವುದು ಸಿದ್ದಪ್ಪಾಜಿಯವರ ಹೆಚ್ಚುಗಾರಿಕೆಯನ್ನು ಮನವರಿಕೆ ಮಾಡಿಕೊಡುತ್ತದೆ. ಇಂತಹ ಹೆಚ್ಚಿನ ಪವಾಡವನ್ನು ಗೆದ್ದಂತಹ ಸಿದ್ದಪ್ಪಾಜಿಯವರಾದರೂ ಯಾರೆಂದರೆ:

ಒಮ್ಮೆ ಕಲ್ಯಾಣ ಪಟ್ಟಣದಲ್ಲಿ ಬಸವಣ್ಣನವರು ತಮ್ಮ ಮಡದಿ ನೀಲಮ್ಮನವರೊಂದಿಗೆ ಮಾತನಾಡುತ್ತಾ ಜಗತ್ತಿಗೆ ಹೆಚ್ಚಿನ ಗುರು ನಾನೇ ಆಗಿದ್ದು, ನನಗೊಬ್ಬ ಗುರು ಇಲ್ಲವಲ್ಲ ಎಂದು ಹೇಳಿದರಂತೆ. ಅದಕ್ಕೆ ನೀಲಮ್ಮನವರು ಅಯ್ಯೋ ಗುರುವೇ ಗುರುಪಾದವೇ ನಾನೇ ಹೆಚ್ಚು ಅನ್ನಬೇಡಿ ನಮಗಿಂತ ಹೆಚ್ಚಿನ ಗುರು ನೋಡಬೇಕೆಂದಿದ್ದರೆ ನಮ್ಮ ಕಲ್ಯಾಣ ಪಟ್ಟಣದ ಕಡೆ ಬಾಗಿಲಿನಲ್ಲಿ ನಾಲಿಗೆ ಇಲ್ಲದ ಒಂದು ಉಕ್ಕಿನ ಗಂಟೆಯನ್ನು ತೂಗ್ಹಾಕಿಬಿಡಿ. ನಮಗಿಂತ ಹೆಚ್ಚಿನ ಗುರು ಬಂದಾಗ ಆ ನಾಲಿಗೆ ಇಲ್ಲದ ಗಂಟೆ ನಾದಸಪ್ತ ಮಾಡುತ್ತದೆ ಎಂದು ಹೇಳುತ್ತಾಳೆ. ನೀಲಮ್ಮನವರ ಮಾತಿನಂತೆ ಬಸವಣ್ಣನವರು ಕಲ್ಯಾಣ ಪಟ್ಟಣದ ಕೊನೆಯ ಬಾಗಿಲಿನಲ್ಲಿ ನಾಲಿಗೆ ಇಲ್ಲದ ಗಂಟೆ ಯೊಂದನ್ನು ಮೂರ್ತ ಮಾಡಿಸಿದ್ದಾರೆ. ಅದೊಂದು ದಿನ ಅಲ್ಲಮಪ್ರಭುವೇ ಜಂಗಮ ವೇಷ ಧರಿಸಿ ಕೈ ಸೊತ್ತ, ಬಾಯಿ ಸೊತ್ತ ಮಾಡಿಕೊಂಡು, ಕಣ್ಣು ಇಲ್ಲದವನಾಗಿ- ಕಿವಿಯಲ್ಲಿ ಭಂಗಿ ಸೊಪ್ಪು, ಕೈಯಲ್ಲಿ ಸುರಿಗಡಿಗೆ ಹಿಡಿದುಕೊಂಡು ಕುಂಟುತ್ತಾ, ತೆವಳುತ್ತಾ, ಸತ್ತೆಮ್ಮ ಕರವನ್ನು ಹೆಗಲ ಮೇಲೆ ಹೊತ್ತುಕೊಂಡು ಕಲ್ಯಾಣದ ಕಡೆಯ ಬಾಗಿಲ ಬಳಿ ಬಂದಾಗ, ನಾಲಿಗೆ ಇಲ್ಲದ ಗಂಟೆ ನಾದ ಸಪ್ತ ಮಾಡಿದೆಯಂತೆ. 

ನಾದ ಸಪ್ತ ಕೇಳಿಸಿಕೊಂಡ ಬಸವಣ್ಣ ನೀಲಮ್ಮನವರು ಓಡೋಡಿ ಬರುತ್ತಾರೆ. ಇವರು ಬರುವಷ್ಟರಲ್ಲಿ ಕಾವಲು ಕಾಯುತ್ತಿದ್ದ ಪಾರದವರು ಮಂಟೇಸ್ವಾಮಿ ವೇಷ ನೋಡಿ ಮುನ್ನೂರ ಮೂವತ್ತು ರೋಗ ರುಜಿನ ಹೊತ್ತುಕೊಂಡು ಬಂದಿದ್ದ ಈ ಕೊಳಕು ಮನುಷ್ಯನನ್ನು ನೋಡಿ ಗುರುಮಠದೊಳಗೆ ಬಿಡದೆ ಕಳಿಸಿ ಬಿಟ್ಟಿರುತ್ತಾರೆ‌. (ಇಲ್ಲಿ ಪಾರದವನು ಆದಿ ಬ್ರಹ್ಮಯ್ಯ ಎಂದು ಕೂಡ ಹೇಳಲಾಗುತ್ತದೆ) ಬಸವಣ್ಣನವರ ದೃಢ ಪರೀಕ್ಷಿಸಲು ಬಂದಿದ್ದ ಮಂಟೇಸ್ವಾಮಿಯವರು ಅಲ್ಲಿಂದ ಬಂದು ಹರಳಯ್ಯನವರ ‘ಉಯ್ಯಲು ದಿಪ್ಪೆಗೆ'(ಬೂದಿಗುಡ್ಡ) ಬಂದು ಹುಲಿ ಚರ್ಮ ಹಾಸಿಕೊಂಡು ಮಲಗಿರುತ್ತಾರೆ. ಬಸವಣ್ಣ ದಂಪತಿಗಳು ಬಂದು ತಮ್ಮ ಪಾರದವರು ಮಾಡಿದ ತಪ್ಪನ್ನು ಕ್ಷಮಿಸಿ ತಮ್ಮೊಡನೆ ಗುರುಮಠಕ್ಕೆ ಬರಲು ಕೇಳಿಕೊಳ್ಳುತ್ತಾರೆ. ಒಪ್ಪದ ಮಂಟೇಸ್ವಾಮಿ ಎಡ ಮಗ್ಗಲಿನಿಂದ ಬಲ ಮಗ್ಗಲಿಗೆ ಪವಾಡಿಸುತ್ತಾರೆ.  ದಂಪತಿಗಳಿಬ್ಬರು ಅವರ ಪಾದ ಹಿಡಿಯಲು ಹೋದಾಗ ಅವರ ಪಾದಗಳೇ ಕಿತ್ತು ಬಂದವಂತೆ, ರಟ್ಟೆ ಹಿಡಿದರೆ ರಟ್ಟೆಗಳೆರೆಡು ಈಜಿ ಬಂದವಂತೆ, ಮುಂಡಾಸು ಹಿಡಿದರೆ ಮುಂಡಾಸೆ ಎದ್ದು ಬಂದಿತಂತೆ. ಆವಾಗಲೀಗ ಬಸವಣ್ಣನ ಮಡದಿ ಬುದ್ದಿವಂತೆ ನೀಲಮ್ಮನವರು, ತಮ್ಮನ್ನು ಪರೀಕ್ಷೆ ಮಾಡುತ್ತಿರುವ ಸ್ವಾಮಿಯವರ ಮಾಂಸವನ್ನೆಲ್ಲ ಗಂಟು ಮೂಟೆ ಕಟ್ಟಿ ಬಸವಣ್ಣನವರ ನೆತ್ತಿ ಮೇಲೆ ಹೊರಿಸಿ, ತಾವು ಸತ್ತೆಮ್ಮ ಕರುವನ್ನು ಹೊತ್ತುಕೊಂಡು, ಸುರಿಗಡಿಗೆ ಹಿಡಿದುಕೊಂಡು ಕಲ್ಯಾಣ ಪಟ್ಟಣದ ರಾಜಬೀದಿಯಲ್ಲಿ ಕರೆತಂದರಂತೆ. ಇದನ್ನು ನೋಡಿದ ಜಂಗಮರೆಲ್ಲ ಕಲ್ಯಾಣ ಕೆಟ್ಟು ಹೋಯಿತು ಎಂದು ಪಟ್ಟಣ ಬಿಟ್ಟು ಓಡಿ ಹೋಗುತ್ತಾರೆ. ಬಸವಣ್ಣ ದಂಪತಿಗಳು ಕರೆತಂದ ಜಂಗಮರ ಮೂಟೆಯನ್ನು ನಂದಿ ಗುರುಮಠದ ಮಂಚದ ಮೇಲೆ ಇರಿಸುತ್ತಾರೆ. ಅದರ ಗಂಟು ಬಿಚ್ಚಿ ಸತಿಪತಿಗಳಿಬ್ಬರು ಅಂಗೈ ಮೇಲೆ ಕರ್ಪೂರ ಹಚ್ಚಿಕೊಂಡು ಮಂಗಳಾರತಿ ಮಾಡಿ ನಿಮ್ಮ ನಿಜ ಸ್ವರೂಪ ತೋರಿಸಿರಯ್ಯ ಎಂಬುದಾಗಿ ಪ್ರಾರ್ಥಿಸಲು,  ಮಂಟೇಸ್ವಾಮಿಯು ಪ್ರಕಾಶವಾಗಿ ಉರಿಯುತ್ತಾರೆ. ಇದನ್ನು ನೋಡಿದ ನೀಲಮ್ಮ ಬಸವಣ್ಣ ದಂಪತಿಗಳು “ಪರಂಜ್ಯೋತಿ” ಎಂಬುದಾಗಿ ಕರೆಯುತ್ತಾರೆ.

ಕಲ್ಯಾಣ ಪಟ್ಟಣಕ್ಕೆ ಹೆಚ್ಚಿನ ಗುರುವಾಗಿ ನೀವು ಬಂದಮೇಲೆ ಈ ಪಟ್ಟಣವನ್ನು ನೀವೇ ಆಳಿರಯ್ಯ ಎಂದು ಬಸವಣ್ಣ ಕೇಳಿಕೊಳ್ಳುತ್ತಾರೆ. ಅದಕ್ಕೆ ಮಂಟೇಸ್ವಾಮಿಯವರು ನನಗೆ ನಿನ್ನ ಪಟ್ಟಣ ಬೇಡ- ಬದಲಾಗಿ ನಾಲ್ಕು ಪಾದ ಜೋಳಿಗೆ ದಾನ ಕೊಡಿ. ನಿಮ್ಮ ಜೊತೆ ಇರುವ ರಾಚಪ್ಪಾಜಿಯವರನ್ನು ಶಿಶು ಮಗನಾಗಿ ಮಾಡಿಕೊಡಿ ಎಂದು ಕೇಳುತ್ತಾರೆ. ಅಂತೆಯೇ ಬಸವಣ್ಣ ರಾಚಪ್ಪಾಜಿಯವರನ್ನು ದಾನವಾಗಿ ಕೊಡುತ್ತಾರೆ. ಆ ಸಂಧರ್ಭದಲ್ಲಿ ಅಲ್ಲೇ ವೀರಭದ್ರನ ಹಲಗೆಯನ್ನು ಗೇಯುತ್ತಿದ್ದ ‘ಬಾಚಿ ಬಸವಯ್ಯ’ ಎಂಬುವನು ಸ್ವಾಮಿ ನಾನು ಕೂಡ ನಿಮಗೆ ಶಿಶು ಮಗನಾಗುತ್ತೇನೆ ಎಂದು ಕೇಳಿಕೊಳ್ಳುತ್ತಾನೆ. ಆಗ ಅವರು ನಿನಗಿನ್ನು ಇಲ್ಲಿ ಕಾಲಾವಕಾಶವಿದೆ. ಮುಂದೆ ನೀನು ಮುದ್ದೋಜಿಯ ಮಡದಿ, ನಿಂಗಮ್ಮ ತಾಯಿಯ ಗರ್ಭದೊಳಗೆ ಹುಟ್ಟಿ ಬಾ. ಆಗ ನಾನು ಬಂದು ನಿನ್ನನ್ನು ಶಿಸು ಮಗನಾಗಿ ಪಡೆದುಕೊಳ್ಳುತ್ತೇನೆ ಎಂದು ಹೇಳಿ ಕಲ್ಯಾಣ ಪಟ್ಟಣವನ್ನು ಬಿಟ್ಟು ಹೊರಡುತ್ತಾರೆ. ಹೀಗೆ ಮುಂದೆ ಲಿಂಗಮ್ಮ ತಾಯಿಯ ಮಡಿಲಲ್ಲಿ ಹುಟ್ಟಿದ ಕೆಂಪಾಚಾರಿ ಎಂಬ ಹೆಸರಿನ ಮಗನನ್ನು ಮಂಟೇಸ್ವಾಮಿ ಶಿಶುಮಗನಾಗಿ ಪಡೆದುಕೊಳ್ಳುತ್ತಾರೆ. 

ಇನ್ನೊಂದು ಕತೆ ಪ್ರಕಾರ, ಮಂಟೇಸ್ವಾಮಿ ಜಂಗಮ ವೇಷವನ್ನು ಧರಿಸಿ ಕಲ್ಯಾಣ ಪಟ್ಟಣದ ಕಡೇ ಬಾಗಿಲಿಗೆ ಬಂದಾಗ ಗುರುಮಠದೊಳಗೆ ಬಿಡದ ಪಾರದವನ ಹೆಸರು ಆದಿ ಬ್ರಹ್ಮಯ್ಯ. ಈ ಆದಿ ಬ್ರಹ್ಮಯ್ಯ ಮುಂದೆ ಪಶ್ಚಾತ್ತಾಪ ಪಟ್ಟು, ಸ್ವಾಮಿ ನೀವು ನಮಗೆ ಹೆಚ್ಚಿನ ಗುರು ಎಂದು ತಿಳಿಯದೆ ನಿಮ್ಮನ್ನು ಗುರುಮಠದೊಳಗೆ ಬಿಡದೆ ಅಪಚಾರ ಮಾಡಿದ್ದೇನೆ. ಹಾಗಾಗಿ ನನ್ನನ್ನು ಕೂಡ ನೀವು ನಿಮ್ಮ ಶಿಶು ಮಗನಾಗಿ ಸ್ವೀಕರಿಸಬೇಕು ಎಂದು ಕೇಳಿಕೊಂಡಿರುತ್ತಾನೆ. ಆಗ ಮಂಟೇಸ್ವಾಮಿ ಅವರು ಮುಂದೆ ನೀನು ‘ಮುದ್ದೋಜಿ ಹಾಗೂ ನಿಂಗಮ್ಮ ತಾಯಿ ದಂಪತಿಗಳ’ ಮಗನಾಗಿ ಹುಟ್ಟಿ ಬಾ. ಆಗ ನಾನು ಬಂದು ನಿನ್ನನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ. 

ಹೀಗೆ ಬಾಚಿ ಬಸವಯ್ಯ ಅಥವಾ ಆದಿ ಬ್ರಹ್ಮಯ್ಯನೆಂಬ ಪ್ರತಿಮೆ ಕೆಂಪಾಚಾರಿಯನ್ನು ಶಿಶುಮಗನಾಗಿ ಪಡೆದ ಮಂಟೇಸ್ವಾಮಿ ಅನೇಕ ಪವಾಡಗಳನ್ನು ಗೆದ್ದ ಸಿದ್ದಪ್ಪಾಜಿಯನ್ನಾಗಿ ರೂಪಿಸಿತ್ತಾರೆ.

ಈ ಎರಡು ಕತೆಗಳಿಗೆ ಪ್ರತ್ಯೇಕವಾಗಿ ನಿಲ್ಲುವ ನಿಡುಘಟ್ಟ ಮಾರಳ್ಳಿ ಗ್ರಾಮದ ಮುದ್ದೋಜಿ ಹಾಗೂ ನಿಂಗಮ್ಮ ದಂಪತಿಗಳಿಗೆ ಕಡು ಬಡಸ್ತನವಿರುತ್ತದೆ. ಮಂಟೇಸ್ವಾಮಿ ಕೊಟ್ಟ ಭಾಗ್ಯದಲ್ಲಿ ಏಳನೇ ಮಗನಾಗಿ ಕೆಂಪಾಚಾರಿ ಹುಟ್ಟಿದ ಮೇಲೆ ಅವರ ಬಡತನವೆಲ್ಲ ನಾಶವಾಗಿ ಸಿರಿತನ ಬಂದಿರುತ್ತದೆ. ಇಂಥ ಮಗನ ಶಿಶುಮಗನಾಗಿ ಮಂಟೇಸ್ವಾಮಿ ಪಡೆಯುತ್ತಾರೆ.

ಆದರೆ ಅದು ಅಷ್ಟೊಂದು ಸುಲಭದ್ದಾಗಿರುವುದಿಲ್ಲ:

” ತಾಯಿ ನಿಂಗಮ್ಮ ತನ್ನ ಮಗ ಕೆಂಪ್ ಆಚಾರ್ಯಯನ್ನು ಮಂಟಸ್ವಾಮಿಯವರಿಗೆ ಶಿಶು ಮಗನಾಗಿ ಕೊಡಲು ಒಪ್ಪುವುದಿಲ್ಲ ಹಾಗೂ ಸ್ವತಃ ಕೆಂಪಾರಿಗೂ ಕೂಡ ದುರಹಂಕಾರದಿಂದ ವರ್ತಿಸಿ ನಿಮ್ಮ ಮಂಟೇಸ್ವಾಮಿಯವರ ಶಿಶು ಮಗನಾಗಲು ಒಪ್ಪುವುದಿಲ್ಲ ಈ ವೇಳೆಯಲ್ಲಿ ಮಂಟಸ್ವಾಮಿಯವರು ನಾನಾ ಕಷ್ಟಗಳನ್ನು ಕೊಟ್ಟು ಅಂತಿಮವಾಗಿ ಕೆಂಪಾಚಾರಿಯನ್ನು ಒಪ್ಪಿಸುತ್ತಾರೆ.

ಹುಚ್ಚು ಮೊಲ್ಲಾಗ್ರ ಬಂದ ಮೇಲೆ  ನಾನು ನಿಮ್ಮ ಶಿಷ್ಯನಾಗಲು ಒಪ್ಪಿರುತ್ತೇನೆ. ಆದರೆ ನನಗೆ ಏನು ಕೊಡುತ್ತೀರಾ ಎಂದು ಕೆಂಪಾಚಾರಿ ಮಂಟೇಸ್ವಾಮಿ ಅವರನ್ನು ಕೇಳುತ್ತಾನೆ. ಇದಕ್ಕೆ ಮಂಟೇಸ್ವಾಮಿಯವರು ಹರಕು ಜೋಳಿಗೆ, ಮುರುಕು ಬೆತ್ತ ಕೊಡ್ತೀನಿ. ಇದನ್ನು ತಕಂಡು ನೀನು ಆರು ಮನೆ ಕ್ವಾರಣ್ಯಕ್ಕೆ ಹೋಗಬೇಕು; ಆಗ ನಿನ್ನ ಮೂರು ಮನೆಯಲ್ಲಿ ಮುಂದಕ್ಕೆ ಹೋಗು ಎಂದು, ಮೂರು ಮನೆಯಲ್ಲಿ ಕೊಟ್ಟಂತಹ ಭಿಕ್ಷ ನಿನ್ನ ಮುತ್ತಿನ ಜೋಳಿಗೆ ತುಂಬಿ ಸುರಿದು ಹೋಗಬೇಕು ಹಾಗೆ ನಿನಗೆ ಪಟ್ಟ ಕಟ್ತೀನಿ ಎಂದು ಹೇಳುತ್ತಾರೆ. ಅದಕ್ಕೆ ಕೆಂಪಾಚಾರಿ ಅಲ್ಲ, ಗುರುವೇ ಲಕ್ಷಿಕನ ಮಗನ ತಂದು ಭಿಕ್ಷೆ ಬೇಡೋ ಎನ್ನುತ್ತಿದ್ದೀರಲ್ಲ, ಆಗಲಿ ಪ್ರಭುವೇ ಭಿಕ್ಷೆ ಬೇಡುತ್ತೀನಿ ಆಮೇಲೆ ನನಗೆ ಏನೂ ಕೊಡುತ್ತೀರಿ ಎನ್ನುತ್ತಾನೆ. ಹೋ ಬಾ ಇಲ್ಲಿ ನಿನ್ನ ಕಾಳಿಂಗನ ಗವಿಗೆ ಎತ್ತಿ ಹಾಕುತ್ತೇನೆ. ಅಲ್ಲಿ ಎಡಬಿಡದೆ ನನ್ನ ಧ್ಯಾನ ಮಾಡು ನಿನಗೇನು ಬೇಕೋ ಕೊಡುತ್ತೀನಿ ಎಂದಾಗ, ಆಗಲಿ ಗುರುವೇ, ನಿನ್ನ ಧ್ಯಾನವನ್ನೂ ಮಾಡ್ತೀನಿ ಆಮೇಲೆ ಏನು ಕೊಡ್ತೀರಿ ಎಂದು ಕೇಳುತ್ತಾನೆ. ನಿನ್ನನ್ನು ದೇವರು ಮಾಡ್ತೀನಿ, ನನ್ನ ಸಮಾನ ಮಾಡ್ತೀನಿ ಎಂದು ಮಂಟೇಸ್ವಾಮಿ ಹೇಳುತ್ತಾರೆ. ಅದಕ್ಕೆ ಕೆಂಪಾಚಾರಿ ಅಲ್ಲ ಗುರುಪಾದವೇ ದೊರೆತನ ಏನಾರಾ ಮಾಡ್ತೀರಾ ಸ್ವಾಮಿ ಅಂದ್ರೆ , ನಿಮ್ಮಂಗೆ ನನ್ನನ್ನು ತಿರಕರವನ ಮಾಡುತ್ತೀರಿ ಎನ್ನುತ್ತಾ ಇದ್ದೀರಲ್ಲಾ, ಇದ್ಯಾವ ನ್ಯಾಯ ಎಂದು ಕೇಳುತ್ತಾನೆ! ಈ ಮಾತು ಕೇಳಿದ ಮಂಟೇಸ್ವಾಮಿಯವರು ನಿನಗೆ ಇನ್ನೂ ಅಹಂಕಾರ ಹೋಗಿಲ್ಲ. ಬಾ ಎಂದು ಕುಂದೂರು ಬೆಟ್ಟದ ಕಾಳಿಂಗನ ಗವಿ ಒಳಗೆ ಸೆರೆಯ ಮಾಡಿ ಬಾರಿ ಗುಂಡನ್ನು ಗವಿಯ ಮೇಲೆ ಎಳೆದು ಮುಚ್ಚಿಬಿಡುತ್ತಾರೆ. ಅಲ್ಲಿಂದ ರಾಜ ಬೊಪ್ಪೇಗೌಡನಪುರಕ್ಕೆ ಮಂಟೇಸ್ವಾಮಿಯವರು ಬಂದು ನೆಲೆಸುತ್ತಾರೆ.

ಈ ಈಗ ಹನ್ನೆರೆಡು ವರ್ಷಗಳ ಕಾಲ ತನ್ನ ಶಿಶು ಮಗ ಕೆಂಪಾಚಾಯೂ ಕಾಳಿಂಗನ ಗವಿಯಲ್ಲಿ ಧ್ಯಾನ ಮಾಡುತ್ತ ಕುಳಿತಿರಲು, ಹೀಗೆ ಒಂದು ದಿನ ದೊಡ್ಡಮ್ಮತಾಯಿ, ರಾಚಪ್ಪಾಜಿ, ಚೆನ್ನಾಜಮ್ಮ, ಫಲಾರದಯ್ಯ, ಮಡಿವಾಳ ಮಾಚಯ್ಯ, ಸಕರಾಯಪಟ್ಟಣದ ರಾಜರ ಮಕ್ಕಳು ಎಲ್ಲರನ್ನು ರಾಜ ಬೊಪ್ಪೇಗೌಡನಪುರದ ಉರಿಗದ್ದುಗೆಯ ಬಳಿ ಕರೆಸಿಕೊಂಡು ಮಂಟೇಸ್ವಾಮಿಯವರು ಏನು ಹೇಳುತ್ತಿದ್ದಾರೆಯೆಂದರೆ:

“ನೋಡಿ ನಿಮ್ಮನೆಲ್ಲ ನಾನು ಶಿಶು ಮಕ್ಕಳಾಗಿ ಪಡೆದುಕೊಂಡು ಬಂದೆ. ಆದರೆ ನೀವು ಯಾರು ನನಗೆ ತಕ್ಕನಾದ ಶಿಶು ಮಕ್ಕಳ ಆಗಲಿಲ್ಲ. ನನಗೆ ಬೆಂಕಿ ಕೆಂಡ ಕೊಡುವರಿಲ್ಲ. ಹೊತ್ತು ಹೊತ್ತಿಗೆ ಭಂಗಿ ಫಲಹಾರ ಮಾಡಿಕೊಡುವರಿಲ್ಲ. ನನಗೆ ನನ್ನಂಥವನೇ ಒಬ್ಬ ಶಿಶುಮಗಬೇಕು. ಅವನನ್ನ ನಾನು ಕುಂದೂರು ಬೆಟ್ಟದ ಕಾಳಿಂಗನ ಗವಿಯಲ್ಲಿ ಕೂಡಿ ಹಾಕಿದ್ದೇನೆ. ನೀವು ಈಗಲೇ ಹೋಗಿ ಅವನನ್ನು ಕರೆತನ್ನಿ ಎಂದು ಹೇಳುತ್ತಾರೆ.

ಆವಾಗಲೀಗ ದೊಡ್ಡಮ್ಮತಾಯಿಯವರು ತನ್ನ ಮಗ ಕೆಂಪಾಚಾರಿಯನ್ನು ಪ್ರೇಮದಲ್ಲಿ ಕೂಗುತ್ತಾರೆ. ಅವರ ಹನ್ನೆರೆಡು ವರ್ಷದಿಂದ ಧ್ಯಾನ ಮಾಡುತ್ತಾ ಬಿದ್ದಿದ್ದ ಕೆಂಪ ಚಾರಿಯನ್ನು ಯಾರೂ ಕೂಡ ಇದುವರೆವಿಗೂ ಏನು , ಎತ್ತ ಎನ್ನಲಿಲ್ಲ ಅನ್ನ ಆಹಾರವಿಲ್ಲ, ಕಣ್ಣಿಗೆ ನಿದ್ದೆ ಇಲ್ಲ.

ಈಗ ತಾಯಿ ದೊಡ್ಡಮ್ಮನವರು ಕೂಗುತ್ತಿದ್ದಾರೆ ಆದರೆ ನಾನು ಇರುವ ಸ್ಥಿತಿಯಲ್ಲಿ ಹೇಗೆ ಹೋಗಲಿ ಎಂದು ರೋದಿಸುತ್ತಿದ್ದಾರೆ:

“ನನ್ನ ನೆತ್ತಿ ಮ್ಯಾಲೆ ಹನ್ನೆರೆಡು ಆಳುದ್ದ ಮೂಗುತ್ತ ಬೆಳೆದಿದೆ, ಮೂಗಿನ ಮ್ಯಾಲೆ ಮೂರು ಆಳುದ್ದ ಮೂಗುತ್ತ ಬೆಳದವೆ, ಹೆಕ್ಕತ್ತಿನ ಮ್ಯಾಲೆ ಮತ್ತಿ ಮರವು ಬೆಳದದೆ, ಕಿವಿ ಉರುಳಲ್ಲಿ ಶಕುನದ ಹಕ್ಕಿ ಮರಿಮಾಡದೆ,

ಕಣ್ಣಿನ ರೆಪ್ಪೆಯೊಳಗೆ ಹೆಗ್ಗಡಜ ಮರಿ ಮಾಡದೆ, ಮೂಗಿನ ಉರುಳಲ್ಲಿ ಹೆಜ್ಜೇನು ಕಟ್ಟಿದೆ, ನಡು ನಾಲಿಗೆ ಒಳಗೆ ಚಿಕ್ಕ ಚಿಕ್ಕ ಮರವು ಹುಟ್ಟವೇ, ಸ್ವಾಮಿ ನನ್ನ ಕಂಕುಳ ಸಂದೀಲಿ ಗರುಡಾವು ಮನೆ ಮಾಡಿದೆ, ಎದೆತೊಕ್ಕೆ ಒಳಗೆ ಹದ್ದು ಮರಿಮಾಡದೆ, ಎಡದಲ್ಲಿ ಬಲದಲ್ಲಿ ಕಾಳಿಂಗ ಸರ್ಪ ಮರಿ ಮಾಡಿದೆ, ಹಾವಿನಲ್ಲಿ ಹಾಸಿಗೆ ನನಗೆ ಚೇಳಿನಲ್ಲಿ ತಲೆದಿಂಬು, ನನ್ನ ಉಗುರು ಕಣ್ಣು ಜಲದ ಪರಿಯಂತ ಇಳಿದು ಹೋಗವೆ, ಸ್ವಾಮಿ ನನ್ನ  ನೂರೊಂದು ಕಿರಿಜಡೆ ಗವಿತುಂಬಾ ಅಂಬಾಗಿ ಹರಿದದೆ. ನಾ ಹೇಗೆ ಎದ್ದು ಬರಲಿ ನನ್ನ ತಂದೆ ಮಂಟೇದು ಸ್ವಾಮಿ ಎಂದು ಅಳುತ್ತಾ ಕಾಳಿಂಗನ ಗವಿ ಒಳಗೆ ರೋದಿಸುತ್ತಿದ್ದಾರೆ.

ಆಗ ದೊಡ್ಡಮ್ಮನವರು ಒಂದು ಗುಟರು ಹಾಕಿ ಮೇಲೆ ಏಳಪ್ಪ ನನಕಂದ ಎಂದು ಹೇಳಲಾಗಿ, ಕೆಂಪಾಚಾರಿಯು ಒಂದು ಗುಟರಿ ಹೊಡೆದು ಮೇಲೆದ್ದಾಗ: 

“ಆ ಕುಂದೂರು ಬೆಟ್ಟ ಒಡೆದು ಜಜ್ಜರಿದು ಹೋಯಿತಂತೆ, ಆಗ ಅಲ್ಲಿರುವ ಕಾಕನವುಲು ಕನ್ನನವುಲು ಏಕದಾಟಿ ಗೀಜಗ ಜೋರಿಗರವ ಮದ್ದಾನೆ ಹೆದರಿ ಅಪ್ಪಳಿಸಿ ಹೋದವಂತೆ. ನೆತ್ತಿ ಮೇಲಿದ್ದ ಹನ್ನೆರೆಡು ಆಳುದ್ದ ಮೂಗುತ್ತ ಆಕಾಶಕೆ ಹಾರಿ ಹೋಗಿ, ಎಡಬಲದ ಕಾಳಿಂಗ ಅರುಗಾದವಂತೆ.

ಆಗಲೀಗ, ಇವನ ಆರ್ಭಟದ ಅರ್ಥಮಾನ ಮಂಟೇಸ್ವಾಮಿ ಅವರಿಗೆ ತಿಳಿದು, ಕುಂದೂರು ಬೆಟ್ಟದ ಗವಿಯನ್ನು ದಿಟ್ಟಿಸಿ ನೋಡಲಾಗಿ, ತನ್ನ ಶಿಶುಮಗ ಘನನೀಲಿ ಓಡೋಡಿ ಬಂದರಂತೆ.

ಬಂದಂತಹ ಶಿಶುಮಗನನ್ನು ಕರಿಯ ಕಂಬಳಿ ಗದ್ದಿಗೆ ಮೇಲೆ ಮೂರ್ತ ಮಾಡಿಸುತ್ತಾರೆ. ಏನಪ್ಪ ಮಗನೇ, ಈಗ ನನ್ನ ಪಾದಕ್ಕೆ ನೀನು ಶಿಶು ಮಗನಾದೆ. ಸ್ನಾನ ಮಾಡಿಕೊಂಡು ಬಾರಪ್ಪ ಎಂದ್ಹೇಳಿ,

ಒಂದು ಕಂಡುಗ ಸಾಂಬ್ರಾಣಿ ಬೇಯಿಸಿ,  ಕಳಸ ಕನ್ನಡಿ ತಯಾರು ಮಾಡಿ,  ಈಭೂತಿ ಆಧಾರ ಮಾಡಿ, ಕಪ್ಪಿನ ಬೊಟ್ಟು ಇಕ್ಕುತ್ತಾರೆ. ಕೆಂಪಣ್ಣ, ಕೆಂಪಾಚಾರಿ ಇಂದಿಗೆ ನಿಮ್ಮ ತಾಯಿ ತಂದೆ ನಿನಗೆ ಕೆಂಪಣ್ಣ ಎಂದು ಕರೆದಿದ್ದರು. ಇಂದಿಗೆ ಅದು ಹಾಳಾಗಿ ಹೋಯಿತು. ಇವತ್ತಿಗೆ ನಾನು ಸಿದ್ದ ಸಿದ್ದರಿಗೆಲ್ಲ ಅತಿ ಮುದ್ದು ಘನ ನೀಲಿ ಸಿದ್ದಯ್ಯ ಅಂತ ನಾಮಕರಣ  ಕರೆಯುತ್ತೇವೆ ಎಂದು ಕೂಗುತ್ತಾರೆ.

ಸಿದ್ದಪ್ಪಾಜಿ ಎಂದು ನಾಮಕರಣ ಮಾಡಿ ಅವರಿಗೆ ಭಾರೀ ಕಂಡಾಯ, ಬಟುವಿನ ಕಿರೀಟ, ರುದ್ರಾಕ್ಷಿ ಮಣಿ, ಪಾದಕ್ಕೆ ಉಕ್ಕಿನ ಮುಳ್ಳಾವಿಗೆ, ಪವಾಡ ಉರಸಂಗಿ ಕೊರಡು, ಹಕ್ಕಿಯ ಗೂಡು, ಜಾಗಟೆ, ಢಮರುಗ ಹೀಗೆ ನೂರೊಂದು ಬಿರುದುನ್ನೆಲ್ಲ ಕೊಡುತ್ತಾರೆ. “ಅಪ್ಪ ಪೂಜೆ ದೇವರು ನಾವು, ಮೆರೆಯುವ ದೇವರು ನೀವು ಕಾಣೋ; ಕೂತ ಪಟ್ಟ ನಮ್ಮದು ಮೆರೆಯುವ ಪಟ್ಟ ನಿಮ್ಮದಯ್ಯ ಎಂದು ಹೇಳುತ್ತಾರೆ. 

ಈ 

ಈಗ ಸಿದ್ದಪ್ಪಾಜಿಯವರನ್ನು ಶಿಶು ಮಗನಾಗಿ ಪಡೆದ ಮೇಲೆ ಉರಿ ಗದ್ದಿಗೆಯ ಮೇಲೆ ಕುಳಿತು ಮಡಿವಾಳ ಮಾಚಯ್ಯ ಅವರನ್ನು ಮಂಟೇಸ್ವಾಮಿ ಅವರು ಕರೆದಿದ್ದಾರೆ. ಕಲಿಗಾಲ ಹೆಚ್ಚಾಗುತ್ತದೆ ನಾನು ಪಾತಾಳ ಲೋಕಕ್ಕೆ ಹೋಗಬೇಕು ಅದಕ್ಕೆ ಪಾತಾಳ ಬಾವಿಯಾಗಬೇಕು ಬಿರುದುಗಳಾಗಬೇಕು ಇದಕ್ಕೆಲ್ಲ ಕಬ್ಬಿಣದ ಆಯುಧಗಳು ಬೇಕು ಎನ್ನುತ್ತಾರೆ. ಅದಕ್ಕೆ ಮಾಚಯ್ಯ ಕಲಿ ಅಂದರೆ ಏನಯ್ಯ ಎಂದು ಕೇಳುತ್ತಾರೆ.

ನೋಡು ನನ್ನ ಕಂದ:

“ಕಲಿ ಅಂದ್ರೆ ಆ ಜಾತಿ ಈ ಜಾತಿ ಏಕ ಜಾತಿ ಆಯ್ತದೆ. ಮೇಲೆ ಕೀಳಾಯಿತ್ತದೆ ಕೀಳೇ ಮೇಲಾಯಿತದೆ. ಆ ಜಾತಿ ಈ ಜಾತಿ ಅಂತ ವಿಂಗಡಿಸಿದವನೇ ಕೀಳು ಜಾತಿಯ ಆಯಿತಾನೆ. ಆಕಾಶ ನಡುಗುತ್ತದೆ, ನಕ್ಷತ್ರ ಸುರಿಯುತ್ತದೆ, ಹಗಲುಗತ್ತಲೆ ಕವಿಯುತ್ತದೆ, ಹಗರಣ ಆಯ್ತದೆ, ಆದರೆ ಅಣ್ಣನ ಮನೆಗೆ ತಮ್ಮ ಹೋಗಲ್ಲ, ತಮ್ಮನ ಮನೆಗೆ ಅಣ್ಣ ಹೋಗಲಾರನು. ನುಡಿದಂತ ಕಲಿ ಕಣ್ಣೆದುರಿಗೆ ಎದ್ದು ಬಂದ ಮೇಲೆ ನರರ ಮುಖ ನೋಡೋದಿಲ್ಲ. ಪಾತಾಳ ಲೋಕದಲ್ಲಿ ಮರೆತು ನಿದ್ದೆ ಮಾಡಬೇಕು. ಮುಕ್ಕಾಲು ಬೆಳ್ಳಿ ಮಂಚದ ಮೇಲೆ ನಾವು ಮಾಯದ ನಿದ್ದೆ ಮಾಡಬೇಕು ಎಂದು ಹೇಳುತ್ತಾರೆ.

ಈಗಾಗಲಾಗಿ, ಮಂಟೇಸ್ವಾಮಿಯವರು ಸಿದ್ದಪ್ಪಾಜಿಯವರನ್ನು ಕೂಗಿ ಕಂದಾ

ನಾನಿನ್ನೂ ಈ ನರ ಮನುಷ್ಯರನ್ಜು ನೋಡಲಾರೆ ಕಲಿ ಹೆಚ್ಚಾಯ್ತದೆ ನಾನು ಪಾತಾಳ ಬಾವಿಯೊಳಗೆ ಪವಡಿಸಬೇಕು. ಇದಕ್ಕಾಗಿ ಬಾರಿ ಬಾವಿ ತೆಗೆಯುವುದಕ್ಕೆ ಲಗಾ ಆಗಬೇಕು. ಅರೆ ಮೂರು ಎಲೆಗುದಲಿ, ಮೂರು ಮೊನೆಗುದಲಿ, ಮೂರು-ಮೂರು ಒಂಬತ್ತು ಲಗಾ ಶೀಘ್ರದಲ್ಲಿ ಆಗಬೇಕು. ನನಗೆ ಚಿನ್ನದ ತೊಟ್ಟಿಲು-

ಬೆಳ್ಳಿ ಲಾಕೆ, ಒಂಟಿ ಡಂಗುರ ಆಗಬೇಕು. ಇದಕ್ಕೆಲ್ಲ ಕಬ್ಬಿಣದ ಭಿಕ್ಷೆ ಆಗಬೇಕು, ಕಬ್ಬಿಣ ಹುಟ್ಟಿರುವಂತ ಸ್ಥಳ ಹಲಗೂರು. ಅಲ್ಲಿಗೆ ಸಿದ್ದಪ್ಪಾಜಿ ನೀನು ಹೋಗಿ ಭಿಕ್ಷೆ ತರಬೇಕು ಎಂದು ಹೇಳುತ್ತಾರೆ. 

ಹಲಗೂರು ಪಾಂಚಾಳದವರು ನನಗೆ ಭಿಕ್ಷೆ ಕೊಡಲ್ಲ ಸ್ವಾಮಿ. ನನ್ನನ್ನೂ, ನನ್ನ ವೇಷವನ್ನೂ, ನೀವು ಕೊಟ್ಟ ಈ ಬಿರುದುಗಳನ್ನು ನೋಡಿ ನಗಾಡುತ್ತಾರೆ. ನಾನು ಅಲ್ಲಿಗೆ ಹೋಗಲಾರೆ ಎಂದು ಗೋಳಾಡುತ್ತಾರೆ. ದಯಮಾಡಿ ನನ್ನನ್ನು ಮನ್ನಿಸಿ ಎಂದು ಬೇಡಿಕೊಳ್ಳುತ್ತಾರೆ. ಹೆದರಬೇಡ ನನಕಂದ ಮೂರು ತಿಂಗಳ ಹೊತ್ತಿಗೆ ಏಳು ಮಂದಿ ದನಿಗಳು, ಏಳುನೂರ ಐವತ್ತು ಒಕ್ಕಲು ನಿನ್ನ ಒಕ್ಕಲಾಗುತ್ತದೆ.  ದೊಡ್ಡಮ್ಮತಾಯಿ, ಕಿಡಗಣ್ಣ ರಾಚಪ್ಪಾಜಿಯವರನ್ನು ನಿನ್ನ ಬೆನ್ನ ಹಿಂದೆ ಕಳುಹಿಸುತ್ತೇನೆ ಹೋಗು ಎಂದು ಧೈರ್ಯ ಹೇಳಿ ಕಳುಹಿಸುತ್ತಾರೆ.

ಘನನೀಲಿ ಸಿದ್ದಪ್ಪಾಜಿ ಹನ್ನೆರೆಡು ವರ್ಷ ಕಾಲ ಮಂಟೇಸ್ವಾಮಿ ಅವರ ಗ್ಯಾನವನ್ನೇ ಅನ್ನಾಹಾರ ಮಾಡಿಕೊಂಡು ಸಾಧನೆ ಮಾಡಿ ಬದುಕುಳಿದಿದ್ದಾಗಿ ಹೇಳಿ ನನ್ನನ್ನು ಈಗ ಪಂಚಾಳದವರ ಬಳಿ ಕಬ್ಬಿಣದ ಭಿಕ್ಷಾ ಬೇಡಲು ಕಳುಹಿಸುತ್ತಿದ್ದೀರಿ. ಸ್ವಾಮಿ ನಾನು ಬದುಕುಳಿದರೆ ನಿಮ್ಮ ಮಗ; ಅಳಿದರೆ ತಂದೆ ತಾಯಿ ಮಗ ಅಂತಾಗಲಿ. ನಾನು ಹಲಗೂರಿಗೆ ಹೋಗುತ್ತೇನೆ. ನನಗೆ ಭಂಗೀ ಸೊಪ್ಪು ಕೊಡಿಸುವಂತೆ ತಾಯಿ ದೊಡ್ಡಮ್ಮನವರನ್ನು ಕೇಳಿಕೊಳ್ಳುತ್ತಾರೆ.

ದೊಡ್ಡಮ್ಮನವರು ಅಣ್ಣಯ್ಯ ಮಗನಿಗೆ ಭಂಗಿ ಫಲಾಹಾರ ಬೇಕಂತೆ ಮಾಡಿಕೊಡಿ ಎಂದಾಗ.. ಹೌದಾ ದೊಡ್ಡಮ್ಮ ಆಗಲಿ ಅಂತ್ಜೇಳಿ ಹನ್ನೆರೆಡು ಕಂಡುಗ ಭಂಗಿ ಸೊಪ್ಪು ತರಿಸಿ ಮಿಠ್ಠ ಮಾಡಿ ಕೊಟ್ಟರಂತೆ ಮಂಟೇಸ್ವಾಮಿ. 

ಸಿದ್ದಪ್ಪಾಜಿ ಅವರಾದರೂ ಭಂಗಿ ಸೇದಲಾಗಿ ಒಂದು ದಮ್ಮು ಹೊಡೆದರಂತೆ ದೊಡ್ಡಮ್ಮತಾಯಿ ನೆನದರಂತೆ, ಎರಡು ದಮ್ಮ ಹೊಡೆದರಂತೆ ರಾಚಪ್ಪಾಜಿ ನೆನದರಂತೆ, ಮೂರು ದಮ್ಮ ಹೊಡೆದರಂತೆ ಧರಗೆ ದೊಡ್ಡೋರ ನೆನದರಂತೆ ಸಿದ್ದಯ್ಯ ಸ್ವಾಮಿ….

ಬನ್ನಿ ಪವಾಡ ಗೆದ್ದಯ್ಯ ನೀವೆ ಬನ್ಯೋ….!

ಹೀಗೆ ಎಲ್ಲರಿಗು ಕಬ್ಬಿಣ ತರುವುದಾಗಿ ವಚನ ನೀಡಿ ಘನ ನೀಲಿ ಸಿದ್ದಪ್ಪಾಜಿ ಅವರು ರಾಜ ಬೊಪ್ಪೇಗೌಡನಪುರ ಬಿಟ್ಟು, ಕುಂದೂರು ಬೆಟ್ಟ ಹತ್ತಿ ಇಳಿದು, ಹಲಗೂರಿಗೆ ಬಂದು ಊರು ಪ್ರವೇಶ ಮಾಡುವಾಗ ಊರ ಸುತ್ತ ಕಾಯುತ್ತಿದ್ದ ಮಾರಿಯರಿಗೆ ತಕ್ಕ ಪಾಠ ಕಲಿಸಿ, ಪಾಂಚಾಳದವರ ಬಳಿ ಬಂದು ಕಬ್ಬಿಣದ ಭಿಕ್ಷಾ ಕೇಳುತ್ತಾರೆ. 

ಅದಕ್ಕೆ ಅವರು ಯಾರೋ ನೀನು ಏಕಾಏಕಿ ಬಂದು ಕಬ್ಬಿಣ ಕೇಳುತ್ತಿದ್ದೀಯ! ಆರು ಮೂರು ಒಂಬತ್ತು ಲಗ ಕಬ್ಬಿನ ಅಂದ್ರೆ ಅದೇನು ನಿಮ್ಮ ಅಜ್ಜ ಸಂಪಾದಿಸಿ ಕೊಟ್ಟಿದ್ದ ನಮಗೆ. ಇವನನ್ನು ಊರೊಳಗೆ ಬಿಟ್ಟವರು ಯಾರು ಎಂದು ಬೈಯುತ್ತಾ, ಯಾವುದೇ ಕಾರಣಕ್ಕೂ ಕಬ್ಬಿಣ ಕೊಡಲು ಆಗುವುದಿಲ್ಲವೆಂದು ಕತ್ತಿನ ಮೇಲೆ ಗುದ್ದಿ, ಊರಿನ ಆಚೆಗೆ ತಳ್ಳಿಬಿಡುತ್ತಾರೆ. ಪಾಂಚಾಳದವರು ಮಾಡಿದ ಅವಮಾನವನ್ನು ಸಹಿಸಲಾಗದೆ ರಾಚಪ್ಪಾಜಿ-ದೊಡ್ಡಮ್ಮನವರನ್ನು ನೆನೆದು ಮತ್ತೆ ಪಾಂಚಾಳದವರ ಬಳಿ ಹೋಗಿ ನನ್ನ ಗುರುವಿಗೆ ಕಬ್ಬಿಣ ಬೇಕೆ ಬೇಕು ಎಂದು ಕೇಳಲಾಗಿ, ಯಾರೋ ನಿನ್ನ ಗುರು ನಿನಗೆ ಕಬ್ಬಿಣ ಬೇಕೆಂದರೆ ನಾವು ಹೇಳಿದ ಪವಾಡಗಳನ್ನು ಮಾಡುತ್ತಿಯಾ ಆಗ ಒಂಬತ್ತು ಏನು ಇಪ್ಪತ್ತು ಲಗಾ ಕಬ್ಬಿಣ ಬೇಕಾದರೆ ಕೊಡುತ್ತೇವೆ ಎಂದು ಪಾಂಚಾಳದವರು ಹೇಳಿದಾಗ ಆಗಲಿ ಸ್ವಾಮಿ ಎನ್ಬುತ್ತಾರೆ.

ಮೊದಲನೇ ಪವಾಡ:

“ಹೇಳು ಮಂದಿ ಇದನಿಗಳು ಸಿದ್ದಪ್ಪಾಜಿ ಅವರನ್ನು ಕರೆದುಕೊಂಡು ಬಂದು ಒಂದು ನೇಗಿಲ ತುಂಡಿನ ಗಾತ್ರಕ್ಕೆ ಕಾದ ಕಬ್ಬಿಣವನ್ನು ಅವರ ಎರಡು ಕೈ ಮೇಲೆ ಮಡಗಿದರು ಇದು ಮೊದಲನೇ ಭಿಕ್ಷ ಈ ಕಬ್ಬಿಣದೆ ನಮ್ಮ ಮಂಟೇಸ್ವಾಮಿಗೆ ಎಲ್ಲಾ ಲಗಕ್ಕೂ ಸಾಕಾಗುತ್ತೆ ಅನ್ನೋದ್ ಆಗಿ ಮೂರು ಮೂರು ತುಂಡು ಮಾಡಿ ನಾಕು ಪಾದ ಜೋಳಗೆ ಕಾದ ಕಬ್ಬಿನ ಮಡಗಿಕೊಂಡರು”.

ಎರಡನೆಯ ಪವಾಡ:

“ಏಳು ದಿವಸಗಳ ಕಾಲ ಕಾಯಿಸಿದ ಕಾದಗಟ್ಟಿ ಕಾದು, ಅದರ ಉರಿ ಧಗ ಧಗನೆ ಹೇಳುತ್ತಿದೆ. ಇದರ ಅವಾಜ ತಡೆಯಲಾರದೆ ಆಕಾಶದಲ್ಲಿ ಹೋಗುವ ಪಕ್ಷಿಗಳೆಲ್ಲ ಸೀದು ಹೋಗುತ್ತಿವೆ. ಅಂತ ಕಾದಗಟ್ಟಿ ಮೇಲೆ ಸಿದ್ದಪ್ಪಾಜಿ ಅವರನ್ನು ಕೂರಲು ಹೇಳುತ್ತಾರೆ. ಈ ಕಾದ ಗಟ್ಟಿಯು ಸಾವಿರ ವರಕ್ಕೆ ಉಕ್ಕು, ತವರ, ತಗಡು, ಸೀಸ, ಚಿನ್ನ, ಬೆಳ್ಳಿ ಎಲ್ಲವೂ ಸಾವಿರ ವರ. ಇದು ಪಂಚಲೋಹದ ಕಾದಗಟ್ಟಿ. ಇದನ್ನು ಇಪ್ಪತ್ತನಾಲ್ಕು ಕೋಣನ ತಿದಿಗಳು, ಏಳು ಸಾವಿರ ಕಂಡುಗ ಬಿದಿರಿಜ್ಜಲನ್ನು ಕುಲುಮೆಗೆ ಸುರಿದು ಆರು ಹನ್ನೆರೆಡು ದಿನಗಳ ಕಾಯಿಸಿ ಕಾದಗಟ್ಟಿಯು ಈರುಳ್ಳಿ ಬಣ್ಣಕ್ಕೆ ತಿರುಗಿದಾಗ ಸಿದ್ದಪ್ಪಾಜಿಯವರನ್ನು ಇದರ ಮೇಲೆ ಕೂರಿಸುತ್ತಾರೆ. ಆಗ ಸಿದ್ದಪ್ಪಾಜಿ ಈ ಕಾದಗಟ್ಟಿಯ ಮೇಲೆ ಹುಲ್ಲೇ ಚರ್ಮ ಹಾಸುತ್ತಾರೆ. ಹುಲಿಯ ಚರ್ಮ ಹೊದ್ದುಕೊಂಡು ಉರಿಯೋ ಕಂಡಾಯ ತಲೆದಸಿಯಲ್ಲಿರಿಸಿಕೊಂಡು ಬಲ ಮಗ್ಗಲಾಗಿ ಪವಾಡಿಸಿಕೊಳ್ಳುತ್ತಾರೆ ಘನನೀಲಿ. ಹೀಗೆ ಹನ್ನೆರೆಡು ದಿನ ಪವಾಡ ಮಾಡುತ್ತಾರೆ. ಹನ್ನೆರಡನೇ ದಿನಕ್ಕೆ ಕಾದಗಟ್ಟಿ ತಣ್ಣಗಾಗಿ ಪವಾಡ ಗೆಲ್ಲುತ್ತಾರೆ. ಗೆದ್ದ ಈ ಪವಾಡ ಕಾದಗಟ್ಟಿಯನ್ನು ಧರೆಗಡ ದೊಡ್ಡವರಿಗೆ ಬೇರ್ಮೆಯಾಗಬೇಕು, ನಿಶಾನಿ ಆಗಬೇಕು, ಕೊಂಬಿನಕಾಳೆಯಾಗಬೇಕು, ಉಯಿಲದಮ್ಮಟೆಯಾಗಬೇಕು, ನಗಾರಿಯಾಗಬೇಕು ಎಂದು ಈ ಕಾದ ಕಟ್ಟಿ ಕಬ್ಬಿಣವನ್ನು ಮೀಸಲಿಡುತ್ತಾರೆ”.

ಮೂರನೇ ಪವಾಡ:

“ಈ ಪವಾಡವನ್ನು ಗೆದ್ದುಬಿಟ್ಟಿನಲ್ಲ ಪರದೇಸಿ ಎಂದು ಪಂಚಾಳದವರು ಕೋಪಗೊಂಡು ತಮ್ಮ ಹೆತ್ತಯ್ಯನ ಕಾಲದ ಹಿರಿಯ ಕೊಪ್ಪರಿಕೆಯನ್ನು ಹನ್ನೆರೆಡು ದಿನ ಹಗಲು ರಾತ್ರಿ ಕಾಯಿಸುತ್ತಾರೆ. ಅದರಲ್ಲಿ ಸಿದ್ದಪ್ಪಾಜಿಯವರನ್ನು  ಹನ್ನೆರೆಡು ದಿನ ಮಲಗುವಂತೆ ಹೇಳುತ್ತಾರೆ. ಘನನೀಲಿ ಈ ಪವಾಡವನ್ನೂ ಗೆಲ್ಲುತ್ತಾರೆ. ಈ ಸಂದರ್ಭದಲ್ಲಿ ಅವರ ತಲೆದೆಸಿ ಇದ್ದ ಲಾವದ ಹಕ್ಕಿ ಕೂಗುತ್ತದೆ. ಅದೂ ಕೂಡ ಸಾಯುವುದಿಲ್ಲ. ಇದನ್ನು ಕಂಡು ಅಲ್ಲಿ ನೆರೆದಿದ್ದ ಜನ ಸಮುದಾಯವು ಆಶ್ಚರ್ಯಗೊಂಡು, ಘನನೀಲಿಯ ಪವಾಡಕ್ಕೆ ಮನ ಸೋಲುತ್ತಾರೆ. ಹೀಗೆ ಈ ಮೂರನೇ ಪವಾಡವನ್ನು  ಸಿದ್ದಪ್ಪಾಜಿ ಗೆಲ್ಲುತ್ತಾರೆ.

ನಾಲ್ಕನೇ ಪವಾಡ:

” ಪಾಂಚಾಳದವರು ಕೊಟ್ಟಂತಹ ಎಲ್ಲಾ ನೀಡಿದಂತಹ ಎಲ್ಲಾ ಪವಾಡಗಳನ್ನು ಗೆದ್ದು ಕಬ್ಬಿಣದ ಭಿಕ್ಷವನ್ನು ಕೇಳಲು, ಇಷ್ಟಕ್ಕೆ ಮುಗಿಯಲಿಲ್ಲ, ಇನ್ನೂ ನಿನಗೆ ಪವಾಡಗಳು ಇದೆ ಎಂದು ಹೇಳಿ; ಉಕ್ಕಿನ ಕುದುರೆ ಮಾಡಿ, ಉಕ್ಕಿನಲ್ಲಿ ತೋಪುರ ಮಾಡಿ, ಉಕ್ಕಿನಿಂದಲೇ ಕಡಲೆ ಮಾಡಿ ಕುದುರೆ ಬಾಯಿಗೆ ಕಟ್ಟುತ್ತಾರೆ. ಆಗ ಅಂತಹ ಕುದುರೆ ಮೇಲೆ ನೊಣವು ಕುಳಿತಿಕೊಂಡರೆ,  ನೊಣವೇ ಕತ್ತರಿಸಿ ಹೋಗಬೇಕು ಅಂತಹ ಚೂಜಿ ಮನೆ ದಬ್ಬಳ ಹೊಡೆಸುತ್ತಾರೆ. ಶಸ್ತ್ರಗಳನ್ನು ಹೊಡಿಸುತ್ತಾರೆ. ಉಕ್ಕಿನ ಕುದುರೆಯ ಕೀಲು ಕೀಲುಗಳನ್ನೆಲ್ಲ ಏಳು ದಿನಗಳ ಕಾಲ ಕಾಯಿಸುತ್ತಾರೆ. ಅಂತಹ ಕುದುರೆ ಮೇಲೆ ಸಿದ್ದಪ್ಪಾಜಿಯವರನ್ನು ಕೂರಿಸಿ ಪವಾಡ ಮಾಡಬೇಕು ಎನ್ನುತ್ತಾರೆ. ಆಗ ನೋಡು ನಿನಗೆ ಒಂಬತ್ತಲ್ಲ ಹತ್ತು ಲಗಾ ಕಬ್ಬಿಣ ಕೊಡ್ತೀವಿ ಅನ್ನುತ್ತಾರೆ. ಆಗಲಿ ಎಂದು ಸಿದ್ದಪ್ಪಾಜಿ ಅವರು ಮುಂದೆ ರಾಜಪ್ಪಯ್ಯ ರವರಿಗೆ ಏರುವಂತ ಕೆಂದುಗುದುರೆ ಇದು ಆಗಲಿ ಎನ್ನುತ್ತಾ ನೆಗೆದು ಆ ಕುದುರೆ ಮೇಲೆ ಮೂರ್ತ ಮಾಡುತ್ತಾರೆ. ಆಗ ದೊಡ್ಡಮ್ಮ ತಾಯಿಗೆ ಅರುವಾಗಿ ಹಲಗೂರು ಪಂಚಾಳಗೇರಿಗೆ ಹೋಗಿ ಉಕ್ಕಿನ ಕುದುರೆಗೆ ಜೀವಕಳೆ ತುಂಬುತ್ತಾರೆ. ನಾಲ್ಕು ಪಾದ ಜೋಳಗೆಯಿಂದ ಉರಸಂಗಿ ಕೊರಡಿ ತೆಗೆದು ಉಕ್ಕಿನ ಕುದುರೆಗೆ ಮೂರು ಎಳೆತ ಎಲಕೆದಾಗ ಏಳು ಸುತ್ತು ಕುದುರೆ ಓಡಿ ಬರುತ್ತದೆ. ಆಗ ಆ ಪವಾಡವನ್ನು ಗೆಲ್ಲುತ್ತಾರೆ.

ಐದನೇ ಪವಾಡ:

“ಹೆತ್ತಯ್ಯನ ಕಾಲದ ಇಲಿಗುಳಿವೊಳಗೆ ಹನ್ನೆರೆಡು ಕಂಡುಗ ಸುಣ್ಣ, ಹನ್ನೆರೆಡು ಕಂಡುಗ ಮೆಣಸಿನಕಾಯಿ, ಹನ್ನೆರೆಡು ಕಂಡುಗ ಕಳ್ಳಿ ಹಾಲು, ಎಕ್ಕದ ಹಾಲು, ಹುಣೆಸೆ ತೆರಿಗೆಂಡ ಸುರಿದು ನಿನ್ನ ಒಳಕೆ ಹಾಕಿ ಕೂಡಿ ಹಾಕುತ್ತೇವೆ. ಆ ಗುಂಡಿಯ ಮೇಲೆ ಕಲ್ಲು ಹಾಕಿ, ವಜ್ರದ ಗಾರೆ ಹಾಕಿ ಮುಚ್ಚಿಬಿಡುತ್ತೇವೆ. ಏಳು ದಿವಸದ ಮೇಲೆ ನೀನು ಈಚೆಗೆ ಎದ್ದು ಬಂದರೆ ಹದಿಮೂರು ಲಗಾ ಕಬ್ಬಿಣ ಕೊಡುತ್ತೀವಿ ಎಂದು ಹೇಳುತ್ತಾರೆ. ಗುಳಿಗೆ ಬಿದ್ದು ಹೋದ ಘನನೀಲಿ ಸಿದ್ದಯ್ಯನವರು ಅಲ್ಲಿ ಹಾಕಿದ್ದ ವಸ್ತುಗಳನ್ನೆಲ್ಲ ಏಳು ದಿನ ಊಟ ಮಾಡಿಕಂಡರು. ಈ ಪಾವಡ ನಿಮ್ಮದೇ ಎಂದು ಧರೆಗೆ ದೊಡ್ಡವರ ಸ್ತೋತ್ರ ಮಾಡಿ ಒಂದು ಗುಟರೆ ಹೊಡೆದರು. ಆಗ ಗುಳಿ ಬಾವಿಗೆ ಹಾಕಿದ್ದ ಕಟ್ಟನೆ ಕಲ್ಲು ಆಕಾಶಕ್ಕೆ ಹಾರಿ ಹೋಯಿತು.

ಹೀಗೆ ನಾನ ಪವಾಡಗಳನ್ನು ಗೆದ್ದು ತನ್ನ ಗುರು ಮಂಟೇಸ್ವಾಮಿಯವರಿಗೆ ಬೇಕಾದ ಕಬ್ಬಿಣ ಕೊಡಿರಯ್ಯ ಎಂದು ಕೇಳಿಕೊಳ್ಳುತ್ತಾರೆ. ಪಾಂಚಾಳದವರು ಇವರ ಪವಾಡಗಳನ್ನೆಲ್ಲ ನೋಡಿ ಸಿದ್ದಪ್ಪಾಜಿ, ಹೇಗಿದ್ದರೂ ನೀನು ನಮ್ಮವನೇ ನಮ್ಮ ಕುಲದವನೇ. ನಿನ್ನ ಸಾಹಸ, ಧೈರ್ಯವನ್ನೆಲ್ಲ ನಾವು ನೋಡಿ ಮೆಚ್ಚಿ ಆಯಿತು. ನೀನು ನಮ್ಮ ಜೊತೆಯಲ್ಲೇ ಇದ್ದು ಬಿಡು. ನಿನ್ನನ್ನು ಹೆಚ್ಚಿನ ದಳವಾಯಿಯನ್ನಾಗಿ ಮಾಡಿ ಸಕಲ ಐಶ್ವರ್ಯಗಳನ್ನು ನೀಡುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಸಿದ್ದಯ್ಯನವರು ಅಯ್ಯೋ ಗುರುವೇ ಗುರುಪಾದವೇ ಧರ್ಮಗುರು ಮಂಟೇದಯ್ಯನವರೇ ನನಗೆ ತಂದೆ ತಾಯಿ. ಇವರಿಗಿಂತ ನನಗೆ ಹೆಚ್ವಿನ ಗುರು ಅವರೇ ನನಗೆ ಎಲ್ಲಾ ಆಗಿರುವಾಗ ನಿಮ್ಮ ಬಳಿ ನಾನು ಉಳಿಯಲಾರೆ.  ಏನ್ರಣ್ಣ ರಾಜರೇ ಈ ಕಾಡ ಪರದೇಶಿಯಿಂದ ಎಲ್ಲ ಪವಾಡಗಳನ್ನು ಮಾಡಿಸಿದ್ದೀರಿ. ಈಗಲಾದರೂ ನನಗೆ ಕಬ್ಬಿಣದ ಭಿಕ್ಷೆ ನೀಡಿದರೆ ಅದನ್ನು ತಕಂಡು ಹೋಗಿ ಬೊಪ್ಪೇಗೌಡನಪುರದಲ್ಲಿ ನೆಲೆಸಿರುವ ನಮ್ಮಪ್ಪಾಜಿ ಮಂಟೇದಯ್ಯನಿಗೆ ಕೊಡುತ್ತೀನಿ ಅಂದರಾಗ. 

ತಮ್ಮ ಬಳಿ ಇರಲು ಒಪ್ಪದ ಸಿದ್ದಪ್ಪಾಜಿಯವರನ್ನು ಪಾಂಚಾಳದವರು ಬಹಳ ಅಹಂಕಾರದಿಂದ ಏನೋ ಪರದೇಶಿ ಚಿನ್ನದ ತೊಟ್ಟಿಲು, ಬೆಳ್ಳಿಯ ನ್ಯಾಕೆ, ಆರು- ಮೂರು ಒಂಬತ್ತು ಲಗಾ ಅಂದರೆ ಅದನ್ನು ನಿಮ್ಮಜ್ಜ ಸಂಪಾದಿಸಿ ಕೊಟ್ಟಿದ್ದ ನಮಗೆ. ಯಾವುದೇ ಕಾರಣಕ್ಕೂ ಕೊಡಲು ಆಗುವುದಿಲ್ಲವೆಂದು ಮೋಸದ ನುಡಿಯ ಆಡಿದಾಗ ಅಯ್ಯೋ ನನ್ನ ಕುಲದವರೆ ನಿಮ್ಮ ಇನ್ನು ಉಳಿಸುವವರು ಯಾರು ಎಂದು ಗೋಳಾಡುತ್ತಾ ಉರಿಯೋ ಗದ್ದಿಗೆ ಕಡೆಗೆ ಹೊರಡುತ್ತಾರೆ.

ಅಲ್ಲಿಂದ ನೇರವಾಗಿ ಬೊಪ್ಪೇಗೌಡನಪುರದ ಉರಿಗದ್ದಿಗೆ ಮೇಲೆ ಕುಳಿತಿದ್ದ ಮಂಟೇಸ್ವಾಮಿ ಅವರ ಬಳಿ ಬಂದು ಗುರುವೇ, ಗುರುಪಾದವೇ, ಧರ್ಮ ಗುರುವೇ ನೀವು ಕೇಳಿದ ಕಬ್ಬಿನ ಭಿಕ್ಷೆಯನ್ನು ನಾನು ತರಲಾಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಅಲ್ಲಿ ನಡೆದ ಅಷ್ಟೂ ಕಷ್ಟಕೋಟಲೆಗಳನ್ನು ಅರುಹಲಾಗಿ, 

ತನ್ನ ಅತಿಮುದ್ದು ಘನನೀಲಿ ಸಿದ್ದಯ್ಯನವರು ಆಡಿದ ಮಾತನ್ನು ಕೇಳಿ, ಒಮ್ಮೆ ಹಲಗೂರು ಪಂಚಾಳದವರ ಬೀದಿಗಳನ್ನು ದಿಟ್ಟಿಸಿ ನೋಡುತ್ತಾರೆ. ಹಲಗೂರು ಏಳು ಬೀದಿ, ಚಿಲ್ಲಾಪುರ ಏಳು ಬೀದಿ ಪಾಳೆಗಾರರ ಮಡದಿ ಮಕ್ಕಳು ಊರು-ಕೇರಿ,ದನ-ಕರ, ಕೋಳಿ-ಕೊತ್ತಿ, ಹೊಲ-ಕುಲುಮೆಯನ್ನೆಲ್ಲ ಹಾಳು ಮಾಡಿ ಧೂಳು ಎಬ್ಬಿಸುತ್ತಾರೆ. ಇಡೀ ಊರಾಗಿದ್ ಊರೇ ಈ ಈ ಪರ್ಯಾಯ ನಾಶವಾಗುವುದನ್ನು ನೋಡಿ ಪಾಂಚಾಳದವರು ವಾಸವಾಗಿದ್ದ ಬೊಬ್ಬೆಗೌಡನಪುರಕ್ಕೆ ಬಂದು ತಾವು ಮಾಡಿದ್ದು ತಪ್ಪಾಯಿತು ಎಂದು ಒಪ್ಪಿಕೊಂಡು, ಚಿನ್ನದ ತೊಟ್ಟಿಲು ಬೆಳ್ಳಿಯ ಲಾಕೆ, ಹಾರೆ, ಮೊನೆಗುದಲಿ, ಎಲೆಗುದಲಿ ಎಲ್ಲವನ್ನು ಮಾಡಿಕೊಡುತ್ತೇವೆಂದು ಒಪ್ಪಿಕೊಳ್ಳುತ್ತಾರೆ.

ಹೀಗೆ ಅನೇಕ ಪವಾಡಗಳನ್ನು ಗೆದ್ದಂತಹ ಸಿದ್ದಪ್ಪಾಜಿ ಅವರನ್ನು ಕೊಂಡಾಡಿ, ನಾನಿನ್ನು ಪಾತಾಳ ಬಾವಿಯಲ್ಲಿ ಮುಕ್ಕಾಲು ಮಂಚದ ಮೇಲೆ ಪವಡಿಸುತ್ತೇನೆ. ರಾಚರಾಯರೆ, ಚೆನ್ನಾಜಮ್ಮ, ದೊಡ್ಡಮ್ಮತಾಯಿ ನೀವು ಕಪ್ಪಡಿಗೆ ಹೋಗಿ ಪವಾಡಿಸಿರಯ್ಯ. ಸಿದ್ದಪ್ಪಾಜಿ ನೀವು ಚಿಕ್ಕಲ್ಲೂರಿಗೆ ಹೋಗಿ ನೆಲೆಗೊಳ್ಳಿ ಎಂದು ಹೇಳಿ ಹನ್ನೆರಡು ಆಳುದ್ದ ಬಾವಿಯೊಳಗೆ ಮೂರ್ತ ಮಾಡುತ್ತಾರೆ. 

ಅತಿ ಮುದ್ದು ಘನನೀಲಿ ಸಿದ್ದಪ್ಪಾಜಿ ಅವರು ಬೊಪ್ಪೇಗೌಡನಪುರ ಬಿಟ್ಟು, ಬೆಳಕವಾಡಿ ರಾಜಬೀದಿಯಲ್ಲಿ ಸಾಗಿ ಬಂದು ಬಾಳ ಪೂಜೆ ಪಡೆದುಕೊಂಡು ಅನೇಕ ಭಕ್ತರನ್ನು ಪಡೆದುಕೊಂಡು ಶಿವನಸಮುದ್ರಕ್ಕೆ ಬಂದು ತೆಂಗಿನ ಹಳ್ಳದ ಮಾರಿಯಿಂದ ಪೂಜೆ ಪಡೆದುಕೊಂಡು ಅರೆಕಲ್ಲಿಗೆ ಬಂದು ಭಂಗಿ ಫಲಾರ ಮಾಡುತ್ತಾರೆ. ಅಲ್ಲಿಂದ ಮುಂದಕ್ಕೆ ಬಂದು ಸುಕ್ಕಲಿಗರ ದೊಡ್ಡಿಯ ದುಷ್ಟ ಮಾರಿ ಇವರನ್ನು ಊರೊಳಗೆ ಬರುವುದನ್ನು ಅಡ್ಡಿಪಡಿಸಿದಾಗ ಉರಸಂಗಿ ಕೊರಡ ತಗೆದು ಮೂರು ಎಳೆತ ಎಳೆದಾಗ ಸುಕ್ಕಲಿಗರ ಮಾರಿ ಬೇವಿನ ಮರದ ಕಲ್ಲಕಟ್ಟೆ ಮ್ಯಾಲೆ ಬಾಯಿ ಮುಚ್ಚುಕೊಂಡು ನಿಂತುಕೊಂಡಳಂತೆ. ಹೀಗೆ ತಾವು ಬರುವ ಹಾದಿಯಲ್ಲಿ ಅನೇಕ ಮಾರಿಮಸಣಿಯರ ಪಡೆಯುತ್ತಾರೆ. 

ಸ್ವಾಮಿ ಅಲ್ಲಿಂದ ಮುಂದಕ್ಕೆ  ಚಿಕ್ಕಲ್ಲೂರಿಗೆ ದಯಮಾಡಿಸುತ್ತಾರೆ. ಇಲ್ಲಿ ಏಳು ಜನ ಮಂದಿ ಮುನಿಗಳು ಹುಣಸೆಯ ತುರಿಕೆಂಡ ಹಾಕಿಕೊಂಡು ಭಂಗಿ ಫಲಾರ ಮಾಡುತ್ತಾ ಕುಳಿತಿರುತ್ತಾರೆ. ನಮ್ಮ ನೀಲಿ ಸಿದ್ದಯ್ಯನವರು ಮುನಿಗಳ ಬಳಿಗೆ ಬಂದು ಅಯ್ಯಾ ನನಗೂ ಭಂಗಿ ಫಲಹಾರ ಮಾಡಕ್ಕೆ ಬೆಂಕಿ ಫಲಾರ ಕೊಡಿರಯ್ಯ ಎಂದು ಕೇಳುತ್ತಾರೆ. ಆಗ ಮುನಿಗಳಿಗೆ ಬಹಳ ಕೋಪ ಬಂದು ನಿನ್ನಲ್ಲಿ ಸಾಸವೇನು- ನಿನ್ನಲ್ಲಿ ಸತ್ಯವೇನು! ನಮಗೆ ತಿಳಿಯದು. ಹಾಗಾಗಿ ನಮ್ಮ ಎದುರಾಗಿ ನೀನು ಒಂದು ಪವಾಡ ಮಾಡಬೇಕು ಆಗ ನಿನಗೆ ನಾವು ಬೆಂಕಿ ಫಲಾರ ಕೊಡುತ್ತೇವೆ ಎಂದು ಪಂತ ಕಟ್ಟುತ್ತಾರೆ. ಆಗ ಸಿದ್ದಪ್ಪಾಜಿ ಹೌದಾ ಪವಾಡ ಮಾಡಬೇಕಾ! ನನಗೆಯಾವ ಪವಾಡ ಮಾಡಬೇಕು ತಿಳಿಯದು! ಏಳು ಮಂದಿ ಮುನಿಗಳೇ ನೀವೇ ಹೇಳಿರಯ್ಯ ಎಂದು ಸಿದ್ದಪ್ಪಾಜಿಯವರು ವಿಡಂಬನಾತ್ಮಕವಾಗಿ ಮುನಿಗಳನ್ನು ಕೇಳುತ್ತಾರೆ. ಅದಕ್ಕೆ ಮುನಿಗಳು ಎರಡು ಗುಳಿ ಮುಸುಗನೇ ತಗೀತೀವಿ. ಅಲ್ಲಿಗೆ ಕಳ್ಳಿ ಹಾಲು, ಎಕ್ಕದ ಹಾಲು, ಸುಣ್ಣ ತುಂಬಿಸ್ತೇವೆ. ಹುಣಸೆ ತುರಿಗೆಂಡ ಸುರಿಸ್ತೀವಿ. ಒಂದು ಗುಳಿ ಒಳಗೆ ನಾವು ಅಣ್ಣ ತಮ್ಮಂದಿರು ಏಳು ಜನವೂ ಹೋಗುತ್ತೀವಿ. ಇನ್ನೊಂದು ಗುಳಿಗೆ ನೀನು ಹೋಗಬೇಕು. ಏಳು ದಿನ ವಾಯಿದೆವೊಳಗೆ ಗುಳಿ ಪವಾಡದಿಂದ ಗೆದ್ದು ಬರಬೇಕು. ಗೆದ್ದು ಬಂದವನಿಗೆ ಈ ಮಠ ಮಾಳಿಗೆ ಬೆಂಕಿ ಕೆಂಡದ ಜೊತೆಗೆ ಎಲ್ಲವನ್ನು ನೀನು ತೆಗೆದುಕೊಳ್ಳಬಹುದು ಎಂದು ಮುನಿಗಳು ಹೇಳುತ್ತಾರೆ. ಮುನಿಗಳ ಪಂಥ ಒಪ್ಪಿಕೊಳ್ಳುತ್ತಾ ಸಿದ್ದಪ್ಪಾಜಿ ಅವರು ನಾನೇನಾದರೂ ಸತ್ತು ಹೋಗಿಬಿಟ್ಟರೆ ನನ್ನ ಹತ್ತಿರ ಇರುವ ಎಲ್ಲಾ ಬಿರುದುಗಳು ನಿಮ್ಮದು ಕಂಡ್ರಯ್ಯ ಮುನಿಗಳ ಹೇಳಿ: ಈಗ ನಮ್ಮ ನಿಮ್ಮ ಮಾತಲ್ಲ ಇದುಕೊಬ್ಬರು ಸಾಕ್ಷಿ ಬೇಕು ಎಂಬುದಾಗಿ ಚಿಕ್ಕೆಗೌಡರ ದೊಡ್ಡಿಯಿಂದ ಈ ಪಂದ್ಯದ ಮಧ್ಯಸ್ಥಿಕೆಗಾಗಿ ಚಿಕ್ಕೆಗೌಡನನ್ನು ಕರೆಸುತ್ತಾರೆ. ಎರಡು ಗುಳಿ ಬಾವಿ ತೆಗೆಸಿದ್ರು ಆ ಗುಳಿಯ ಮಧ್ಯದಲ್ಲಿ ನಿಂತುಕೊಂಡು ಕಳ್ಳಿ ಎಕ್ಕದ ಹಾಲು ಹಾಕಿಸಿದರು. ಅಣ್ಣ ತಮ್ಮಂದಿರು ಏಳು ಜನ ಮುನಿಗಳು ಒಂದು ಗುಳಿ ಒಳಗೆ ಹೋದರು. ಇನ್ನೊಂದು ಗುಳಿ ಒಳಗೆ ಸಿದ್ದಪ್ಪಾಜಿಯವರು ಹೋದರು. ಅದರ ಮೇಲೆ ಕಲ್ಲು- ನಯಗಾರೆ ಹಾಕಿಸಿ ಅದರ ಮೇಲೆ ಕೆಮ್ಮಣ್ಣು ಹಾಕಿಸಿ, ಕೆಮ್ಮಣ್ಣ ಮೇಲೆ ಕೀರೆ ಬಿತ್ತುತ್ತಾನೆ. ಈಗ ಏಳು ದಿನದ ವಾಯಿದೆವೊಳಗೆ ಯಾರ ಗುಳಿ ಮೇಲೆ ಕೀರೆ ಗಿಡ ಹುಟ್ಟಿ ವಾಲಾಡ್ತದೆ ಅವನು ಗೆದ್ದ ಹಾಗೆ. ಯಾರ ಗುಳಿ ಮೇಲೆ ಕೀರೆಗಿಡ ಹುಟ್ಟಲಿಲ್ಲ ಅವರು ಸೋತ ಹಾಗೆ ಎಂದು ಪಂದ್ಯಾಗುತ್ತದೆ.  ಹೀಗೆ ಏಳು ದಿನ ಆ ಗುಳಿಯೊಳಗೆ ಇದ್ದಂತಹ ಸಿದ್ದಪ್ಪಾಜಿಯವರು ಗುಳಿಗೆ ಹಾಕಿದ್ದ ಸಾಮಾನುವೆಲ್ಲ ಒಂದು ದುಡ್ಡಿನ ಸಾಮ್ರಾಣಿ ಲೋಬಾನದ ಹೊಗೆ ಆಯ್ತು. ನಮ್ಮ ಸ್ವಾಮಿ ಒಳಗಡೆ ಗುರು ಪೂಜೆ ಮಾಡುತ್ತಾರೆ. ಏಳು ಮಂದಿ ಮುನಿಗಳಿಗೆ ಗುರು ಮಹಿಮೆ ಕಾಣದೆ ಒಂದು ಗುಳಿಗೆ ಹೋಗಿದ್ದಾರಲ್ಲ ಶಾಖ ತಡೆಯಲಾರದೆ ಗುಳಿಯ ಒಳಗೆ ಸತ್ತು ಹೋಗಿದ್ದರು. ಏಳು ದಿನದ ಮೇಲೆ ಚಿಕ್ಕೆಗೌಡ ಬಂದು ನೋಡಿದಾಗ ಸಿದ್ದಪ್ಪಾಜಿ ಅವರ ಗುಳಿ ಮೇಲೆ ಕೀರೆ ಗಿಡ ಹುಟ್ಟಿತ್ತು. ಇನ್ನೊಂದು ಗುಡಿಯಲ್ಲಿ ಏಳು ಜನ ಸತ್ತು ಸತ್ತ ಬಿದ್ದಿದರು. ಇದನ್ನು ನೋಡಿದ ಚಿಕ್ಕೆಗೌಡ ಮಠ ಮಾಳಿಹೆ ನಿಶಾನಿಿನ ಕಹಳೆ ಎಲ್ಲವೂ ಯಾವುದೋ ಕಾಡ ಪರದೇಸಿಗೆ ಆಗಿ ಹೋಯಿತಲ್ಲ ಎಂದು ಗೋಳಾಡಲು ಶುರು ಮಾಡಿದಾಗ ಗುಳಿಯೊಳಗಿದ್ದ ಸಿದ್ದಪ್ಪಾಜಿಯವರು ಆಕಾಶ ಅಂತ ನೋಡಿ ಒಂದು ಗುಟುರೆ ಹೊಡೆದರಂತೆ, ಆ ಗುಟುರಿಗೆ ಬಾಗಿಲಿಗೆ ಹಾಕಿದ್ದ ಕಟ್ಟರೆ ಕಲ್ಲುಆಕಾಶಕೆ ಹಾರಿಘನನೀಲ ಹೊರಬಂದರಂತೆ. ಇದನ್ನು ನೋಡಿದ ಚಿಕ್ಕೆಗೌಡ ಓಡಿ ಬಂದು ಸಿದ್ದಪ್ಪಾಜಿ ಅವರ ಪಾದಗಳಿಗೆ ನಮಸ್ಕಾರ ಮಾಡಿ ಭಕ್ತಿಯಿಂದ ನಮಸ್ಕರಿಸುತ್ತಾನೆ ಆಗ ಸಿದ್ದಪ್ಪಾಜಿಯವರು ಜಾತ್ರೆಯೊಳಗೆ ನನ್ನಿಂದ ಇವರಿಗೂ ಪೂಜೆಯಾಗಲಿ ಎಂದು ಹೇಳಿ ಏಳು ಗೋರಿಗಳನ್ನು ಕಟ್ಟಿಸುತ್ತಾರೆ. 

ಈವಾಗಲೀಗ,

ಚಿಕ್ಕೇಗೌಡನನ್ನು ಬರಮಾಡಿಕೊಂಡು ಸ್ವಾಮಿ ಹೃದಯದಲ್ಲಿ ಬಾವಿಯನ್ನು ತೆಗೆಯುತ್ತಾರೆ. ಹನ್ನೊಂದು ಆಳುದ್ದ ಜಲಬಾವಿ ತೆಗಿತಾನೆ ಚಿಕ್ಕಯ್ಯಗೌಡ. ಈಗ ಘನನೀಲಿ ಬಾವಿಗೆ ಪುಣ್ಯಮಜ್ಜನ ಜಯದಕ್ಷತೆ ಇಟ್ಟು, ಆಕಾಶ ಹೊದಿಕೆ ಮಾಡಿಕೊಂಡು, ಭೂಮಿ ತೊಟ್ಟಿಲು ಮಾಡಿಕೊಂಡು ನರರ ಹಂಗು ನನಗೆ ಬೇಡ ನನ್ನ ಹಂಗು ನರರಿಗಿರಲಿ ಎಂದು ಚಿಕ್ಕಲ್ಲೂರು ತೋಪಿನಲ್ಲಿ ಪಾವಾಡಿಸುತ್ತಾರೆ.

“ಮಠ, ಮಾಳಿಗೆ, ಭೇರಿ, ನಿಶಾನೆ, ಕೊಂಬಿನ ಕಹಳೆ” ಎಲ್ಲಾ ಇವರಂತೆಯೇ ಐದು ದಿವಸದ ಜಾತ್ರೆ ಚಿಕ್ಕಲೂರಿನಲ್ಲಿ ನಡೆಯುತ್ತದೆ. ಈ ಜಾತ್ರೆಯನ್ನು ಬಹಳ ಐಭೋಗದಿಂದ ಭಕ್ತಿ ಭಾವಗಳಿಂದ ತುಂಬಿದ್ದು ಜನಸಾಗರವೇ ಅಲ್ಲಿ ನೆರೆದಿರುತ್ತದೆ.  

ಹಾವಾನೆ ಮೆಟ್ಟಿಗೊಂಡು ಸ್ವಾಮಿಯ ನೆನುದಾರೆ 

ಹಾವು ಅಂಬಾಗಿ ಹರಿದಾವು- ಚಿಕ್ಕಲೂರ 

ನೀಲಿಸ ಸಿದ್ದಯ್ಯನ ಬಿಡದೆ ನೆನುದಾರೆ

ಅಪ್ಪಾಜಿ ಸಿದ್ದಯ್ಯನವರು ಬೊಟ್ಟಿಟ್ಟು ಗಂಧ ಧರಿಸಿ 

ಹತ್ತಿ ನೋಡವವರೇ ತಿಪರವ- ಚಿಕ್ಕಲೂರ 

ಬಿಂಕದಿಂದ ಬರುವ ಪರುಷೆಯ

ಸ್ವಾಮಿ ಸಿದ್ದಯ್ಯನವರು ಕೀಲು ಗಂಧ ಧರಿಸಿ 

ಏರಿ ನೋಡವರೆ ಯಾಗ್ರನ- ಚಿಕ್ಕಲ್ಲೂರ

ದೂರದಿಂದ ಬರುವ ಪರುಷೆಯ

ಹೀಗೆ ಚಿಕ್ಕಲೂರು ಜಾತ್ರೆ ಬಹಳ ವೈಭವಗಳಿಂದ ಇಂದಿನವರೆಗೂ ನಡೆದುಕೊಂಡು ಬಂದಿದೆ. ಮಂಟೇಸ್ವಾಮಿ ಅವರ ನೆಲಮೂಲ ಪರಂಪರೆ ಲಕ್ಷಾಂತರ ಕೋಟ್ಯಾಂತರ ನಿಜವುಳ್ಳವರ ಹೃದಯದಲ್ಲಿ ಇಂದಿಗೂ ಜೀವಂತವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಚಿಕ್ಕಲ್ಲೂರು ಜಾತ್ರೆ ಸಾಕ್ಷಿಯಾಗಿದೆ.

ಚಿಕ್ಕಲ್ಲೂರು ಜಾತ್ರೆ ಐದು ದಿನಗಳ ಕಾಲ ನಡೆಯತ್ತದೆ. 

ಮೊದಲನೆಯ ದಿನ, ‘ಪರಂಜ್ಯೋತಿ ಸೇವೆ’: ತುಂಬಿದ ಹುಣ್ಣಿಮೆಯ ರಾತ್ರಿಯಂದು “ಚಂದ್ರಮಂಡಲ” ಪೂಜೆಯ ಮುಖೇನ ಜಾತ್ರೆಗೆ ಬೆಳಕು ಮೂಡುತ್ತದೆ. ಈ ದಿನ ಭಕ್ತರು ಹೊತ್ತು ತಂದ ಮೀಸಲು ಬುತ್ತಿ ಬಿಚ್ಚಿ ಊಟ ಮಾಡುತ್ತಾರೆ. ದೇವರಿಗೆ ಫಲಾಹಾರವನ್ನು ನೇವೈದ್ಯವಾಗಿ ಒಪ್ಪಿಸುತ್ತಾರೆ.

ಎರಡನೇ ದಿನ, “ದೊಡ್ಡಮ್ಮ ತಾಯಿ ಸೇವೆ”: ಸಿದ್ದಾಪ್ಪಾಜಿಯವರ ಆತ್ಮಜ್ಯೋತಿಯಾಗಿ ಬೆಳಗಿದ ದೊಡ್ಡಮ್ಮತಾಯಿಯವರನ್ನು ಜನಪದರು ನೆನೆಯುವ ಕಾರ್ಯ ಜರಗುತ್ತದೆ ಹಾಗೂ ಭಕ್ತರು ಈ ದಿನ ಕಜ್ಜಾಯ ತುಪ್ಪವನ್ನು ಮಾಡಿ ಸೇವಿಸುತ್ತಾರೆ.

ಮೂರನೇ ದಿನ, “ಮುಡಿಸೇವೆ”: ಸಿದ್ದಪ್ಪಾಜಿ ಭಕ್ತರು ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸುವುದರ ಮೂಲಕ ಭಕ್ತಿ ಮೆರೆಯುತ್ತಾರೆ ಹಾಗೂ ಹೊಸದಾಗಿ ನೀಲಗಾರರಾಗುವವರು ನೇಮಗಳನ್ನು ಕೈಗೊಂಡು ಧೀಕ್ಷೆ ಪಡೆದುಕೊಳ್ಳುತ್ತಾರೆ. ಹಿರಿಯ ನೀಲಗಾರರು ಕಿರಿಯರಿಗೆ ನೀತಿ ಬೋಧನೆ ಮಾಡುತ್ತಾರೆ. ನೀಲಗಾರ ಧೀಕ್ಷೆ ಪಡೆದ ಮೇಲೆ ಗುರು-ಹಿರಿಯರಿಗೆ ಗೌರವ ಕೊಡಬೇಕು, ಸುಳ್ಳು ಹೇಳಬಾರದು, ಮೋಸ ಮಾಡಬಾರದು, ಕಳ್ಳತನ ಮಾಡಬಾರದು, ಮದ್ಯಪಾನ ಮಾಡಬಾರದು, ಜೂಜು ಆಡಬಾರದು ಎಂದು ಕಿರಿಯರಿಗೆ ನೀತಿಯನ್ನು ಭೋದಿಸುತ್ತಾರೆ. ಇನ್ನು ಮುಂದೆ ನೀನು ಅಪ್ಪ ಅಮ್ಮನ ಮಗನಲ್ಲ ದೇವರ ಮಗನೆಂದು ಹೊಸದಾಗಿ ಧೀಕ್ಷೆ ಪಡೆಯುವ ನೀಲಗಾರರಿಂದ ಹೇಳಿಸುತ್ತಾರೆ. ನಂತರ ಭಿಕ್ಷಾಟನೆ ಮಾಡಿಸುತ್ತಾರೆ. ಈ ದಿನ ಹೆಸರುಬೇಳೆ ಪಾಯಸ ಮಾಡಿ ಸಸ್ಯಹಾರ ಸೇವಿಸುತ್ತಾರೆ.

ನಾಲ್ಕನೇ ದಿನ, “ಪಂಕ್ತಿಸೇವೆ”: ಚಿಕ್ಕಲ್ಲೂರು ಜಾತ್ರೆಯ ಪ್ರಧಾನ ಆಶಯವಾದ ಐಕ್ಯತೆ, ಸಮಾನತೆ, ಸೌಹಾರ್ದತೆ ಸಾರುವ ಪಂಕ್ತಿಸೇವೆ ನಡೆಯುತ್ತದೆ. ಪಂಕ್ತಿಸೇವೆ ಮಾಂಸಾಹಾರದಿಂದ ಕೂಡಿದ್ದು, ತಮ್ಮ ಇಷ್ಟಾರ್ಥಗಳು ನೆರೆವೇರಲೆಂದು ಜಾತ್ರೆಗೆ ಬಂದ ಭಕ್ತರು ಕುರಿ, ಕೋಳಿ, ಆಡು ಪ್ರಾಣಿಗಳನ್ನು ತಂದು ಹರಕೆ ಒಪ್ಪಿಸಿ , ಸಿದ್ದಪ್ಪಾಜಿಯವರ ಕಂಡಾಯಕ್ಕೆ ಮೊದಲುಗೊಂಡು ಎಡೆ ಪ್ರಸಾದವನ್ನು ಬಡಿಸಿ ಪೂಜಾದಿ ಕಾರ್ಯಕ್ರಮಗಳನ್ನು ನೆರೆವೇರಿಸುತ್ತಾರೆ. ನಂತರ ಎಲ್ಲ ಜಾತಿಯ ಜನರು ಒಟ್ಟಿಗೆ ಕುಳಿತು ಊಟ ಮಾಡುವ ವಿಶಿಷ್ಟ ಆಚರಣೆ ಸಮಾನತೆಯನ್ನು ಸಾರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪ್ರಾಣಿಬಲಿ’ ನೆಪದಲ್ಲಿ ಈ ಜಾತ್ರೆಯಲ್ಲಿ ಮಾಂಸಾಹಾರ ನಿಷೇಧಿಸುವ ಮೂಲಕ ಈ ವಿಶಿಷ್ಟ ಆಚರಣೆಗೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದ್ದು; ಇದು ಈ ಜಾತ್ರೆಯ ಕತ್ತನ್ನೇ ಹಿಚುಕಿದಂತಾಗಿದೆ. ಈ ವಿಚಾರವಾಗಿ ಸಸ್ಯಾಹಾರ ಪ್ರತಿಪಾದನೆಯ ಮೂಲಕ ಜಾತ್ರೆಯನ್ನು ಬ್ರಾಹ್ಮಣೀಕರಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಸಾಂಸ್ಕೃತಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅದೇನೆ ಇರಲಿ ‘ಸಸ್ಯಾರವೇ ಶ್ರೇಷ್ಟ ಎನ್ನುವ ಅಹಂ’ ನಾಶವಾಗಿ ಯಾವುದೇ ಭಿನ್ನಬೇದವಿಲ್ಲದೆ ಉರಿವ ಪರಂಜ್ಯೋತಿಯ ಚಂದ್ರಮಂಡಲದ ಬೆಳಕು ಎಲ್ಲರ ಎದೆಯೊಳಗೆ ಮೂಡಲಿ. ಆ ಮೂಲಕ ನೂರಾರು ವರ್ಷಗಳಿಂದ ಭಾವೈಕ್ಯತೆ ಸಾರುತ್ತಾ ಬಂದಿರುವ ಜನಪದರ ಜಾತ್ರೆ ಉಳಿಯಲಿ ಎಂಬುದು ಪ್ರತಿಯೊಬ್ಬರ ಆಶಯವಾಗಿದೆ. 

ಐದನೇ ದಿನ ಹಾಗೂ ಜಾತ್ರೆಯ ಕೊನೆಯ ದಿನ “ಮುತ್ತತ್ತಿರಾಯನ ಸೇವೆ” ನಡೆಯುತ್ತದೆ. ಈ ದಿನ ಮೊದಲ ಮೂರು ದಿನಗಳಂತೆ ಸಸ್ಯಹಾರವನ್ನು ಭಕ್ತರು ಸೇವಿಸುತ್ತಾರೆ. ಇಲ್ಲಿಗೆ ಬಹಳ ವೈಭವದಿಂದ ಜನ ಸಮೂಹವೇ ಮಾಡುವ ಒಂದು ಬಹುದೊಡ್ಡ ಸಾಂಸ್ಕೃತಿಕ ಜನಜಾತ್ರೆಗೆ ತೆರೆ ಬೀಳುತ್ತದೆ.ಜನರು ತಾವು ಬೆಳೆದ ಬೆಳೆಗಳನ್ನು ಮೊದಲ ಪಾಲು ದೇವರಿಗೆಂದೇ ನೀಡಲು ತಂದು ಅರ್ಪಿಸುವ ಪದ್ಧತಿ ಭಾರತೀಯ ಜನಪದ ಪರಂಪರೆಯೊಳಗೆ ನಡೆದು ಬಂದಿದೆ. ಅಂತೆಯೇ “ಈ ಜಾತ್ರೆ ಚಿಕ್ಕಲ್ಲೂರು, ಕೊತ್ತನೂರು, ಬಾಳಹುಣಸೆ, ತೆಳ್ಳನೂರು, ಬಾಣೂರು, ಅಂಕನಪುರ, ಗಾಂಧಿನಗರ” ಸೇರಿದಂತೆ ಸುತ್ತ ಏಳು ಊರಿನವರಿಂದ ಆಯೋಜಿಸಲ್ಪಟ್ಟರೂ, ಅನೇಕ ಹಳ್ಳಿಗಳಿಂದ  ಲಕ್ಷಾಂತರ ಭಕ್ತರು ಬಂದು ಸೇರುವ ಈ ಜಾತ್ರೆಯು ಬಹುದೊಡ್ಡ ಸಾಂಸ್ಥಿಕ ರೂಪವನ್ನು ಪಡೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ‘ಮನುಷ್ಯ ಪ್ರೇಮ’ವನ್ನು ಸಾರುವ ಚಿಕ್ಕಲ್ಲೂರು ಜಾತ್ರೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆಯೇ ಶಾಂತಿ-ಸೌಹಾರ್ದತೆಯಿಂದ  ನಡೆಯಬೇಕು. ಮಂಟೇಸ್ವಾಮಿಯವರ ನೀಲಗಾರರ ಪರಂಪರೆ ಉಳಿಯಬೇಕು; ಬೆಳೆಯಬೇಕು. ಆ ಮೂಲಕ ಸಮಾಜದಲ್ಲಿ ಸಮಾನತೆ ನೆಲಸಬೇಕು ಎಂಬುದು ಮಂಟೇಸ್ವಾಮಿ ಪರಂಪರೆಯ ಆಶಯವಾಗಿದೆ.

ಚಿಕ್ಕಲ್ಲೂರು ಜಾತ್ರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಅಂದಿನಿಂದ ಇಂದಿನವರೆಗೂ ಯಾವುದೇ ಧಕ್ಕೆ ಬಂದಿಲ್ಲ. ಈ ಜಾತ್ರೆ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡುಗು, ಹಾಸನ ಸೇರಿದಂತೆ ಹಳೇ ಮೈಸೂರು ಭಾಗದಿಂದ ಲಕ್ಷಾಂತರ ಜನರು ಒಂದು ಕಡೆ ಸೇರಿ ಯಾವ ಭಿನ್ನ ಬೇಧವಿಲ್ಲದೆ ನಡೆಯುವ ಬಹುದೊಡ್ಡ ಸಾಂಸ್ಕೃತಿಕ ಆಚರಣೆಯಾಗಿದೆ.

‍ಲೇಖಕರು avadhi

January 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: