ಸತೀಶ ಕುಲಕರ್ಣಿ ಓದಿದ ‘ಬದುಕ ನಿತ್ಯ ನಗಾರಿ’

ಸತೀಶ ಕುಲಕರ್ಣಿ


ಕನಸುಗಳ ಕಟ್ಟಬಹುದು
ಮನಸುಗಳ ಕಟ್ಟಲಾಗದು
ಹಸಿವೆ ಕಟ್ಟಬಹುದು
ಉಸಿರ ಕಟ್ಟಲಾಗದು
ಮಾತುಗಳ ಕಟ್ಟಬಹುದು
ಭಾವನೆಗಳ ಕಟ್ಟಲಾಗದೆಂದ
— ನಮ್ಮ ಕರಿಬಸವ ಅಜ್ಜಯ್ಯ

ಈ ಸರಳ ಸುಂದರ ವಚನಾಕೃತಿ ಕವಯತ್ರಿ ಭಾಗ್ಯ ಎಂ.ಕೆ ಅವರ ‘ಬದುಕ ನಿತ್ಯ ನಗಾರಿ’ ಕವನ ಸಂಕಲನದ್ದು. 

ಮತ್ತೆ ಮತ್ತೆ ವಚನಗಳು ಪ್ರಸ್ತುತ ಕನ್ನಡ ಕಾವ್ಯದಲ್ಲಿ ಒಡಮೂಡಿ ಅದರ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿರುವುದು ಸೋಜಿಗದ ಸಂಗತಿ. ಸಾವಿರ ವರ್ಷಗಳ ಹಿಂದೆ ಭಾಷೆಯನ್ನು ಮುರಿದು ಕಟ್ಟಿದ ವಚನಕಾರರು ಕಾಲಕಾಲಕ್ಕೂ ಪ್ರಸ್ತುತವಾಗುವುದಕ್ಕೆ ಭಾಗ್ಯಾರ ಮೇಲಿನ ವಚನ ಒಂದು ಬಿಂದು ಮಾದರಿ ಮಾತ್ರ. 

ಹಾವೇರಿ ಹತ್ತಿರದ ಕಾಟೇನಹಳ್ಳೆ ಎಂಬ ಗ್ರಾಮದಲ್ಲಿ ಶಿಕ್ಷಕಿಯಾಗಿರುವ ಕವಯತ್ರಿ ಈ ಮೊದಲು ‘ಬೀದಿ ಬದಿಯ ಹೂವುಗಳು ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಹೆಸರೇ ಹೇಳುವಂತೆ ಬದುಕು ನಿತ್ಯ ನಗಾರಿ ಜೀವನದ  ಅನೇಕ ಚಹರೆಗಳು ಆಧುನಿಕ ರೀತಿಯಲ್ಲಿ ವಚನಗಳಾಗಿವೆ. 

ಆಧ್ಯಾತ್ಮ ಮತ್ತು ಆಧುನಿಕತೆಯ ನಡುವೆ ಜೀಕುವ ೭೦ ವಚನಗಳ ಜೊತೆಗೆ ೧೩ ದೊಡ್ಡ ಕವಿತೆಗಳಿವೆ. ನುಡಿಯ ಮೊನಚು ಈ ಸಂಕಲನದ ಕಾವ್ಯ ವಿಶೇಷ. ತನ್ನೊಳಗೆ ತಾನು ಮಾತನಾಡಿಕೊಳ್ಳುತ್ತ ಹೊರ ಜಗತ್ತಿಗೆ ಕನೆಕ್ಟ ಆಗುವ ನೀಲನಕ್ಷೆಯದು. ಸಮಭಾವದಿಂದ ಸಮಾಜ ಹಿತ ಬಯಸುತ್ತ, ಕಾಲದ ಕೇಡನ್ನು ಕಡಿಮೆಗೊಳಿಸುವ ಮನೋಭಾವದವು.  
    
ತೇಲುತಿದೆ ಧರೆಯೊಳಗೆ
    ದ್ವೇಷ ಮತ್ಸರಗಳ ದೋಣಿ
    ಪ್ರೀತಿ ಮಮತೆಗಳ ಹುಟ್ಟು ಹಾಕಿ
    ದಡ ಸೇರಿಸೆಂದ
            -- ನಮ್ಮ ಕರಿಬಸವ ಅಜ್ಜಯ್ಯ

ಈ ವಚನಗಳ ಜೊತೆಗೆ ೧೩ ಕವಿತೆಗಳಿವೆ. ದುಗುಡ ದುಮ್ಮಾನಗಳು ರಾಚುವ ‘ಮೌನ’ ಕವಿತೆ ಹೀಗಿದೆ –
ಯಂತ್ರಗಳು ಮಾತನಾಡುತ್ತಿವೆ
ಧರಣಿ ಮೌನವಾಗಿದೆ

ಲೇಖನಿ ಮಾತನಾಡುತ್ತಿದೆ
ಮಸಿ ಮೌನವಾಗಿದೆ

ಗುಡಿ ಗಂಟೆಗಳು ಮಾತನಾಡುತ್ತಿವೆ
ಕಲ್ಲು ದೇವರುಗಳು ,ಮೌನವಾಗಿವೆ

ಸುಳ್ಳುಗಳು ಮಾತನಾಡುತ್ತಿವೆ
ಸತ್ಯ ಮೌನವಾಗಿದೆ

ಮನಸ್ಸೆಕೋ ಮಂಕಾಗಿದೆ ಎಂದು ಆರಂಭವಾಗುವ ಈ ಕವಿತೆ ಕಾಲದ ಅನೇಕ ವೈರುಧ್ಯಗಳನು ಬಿಚ್ಚಿಟ್ಟಿದೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ, ಒಗಟು, ಕಾರಣಿಕ ಶೈಲಿಯ ಭಾಗ್ಯ ಅವರ ಕಾವ್ಯ ತನ್ನದೇಯಾದ ಶೈಲಿಗತಿ ಪಡೆದಿದೆ.   

ಅರಮನೆಯು ಅರಸನಿಗೆ
ಸೆರೆಮನೆಯು ಕೈದಿಗೆ 
ನಡುವೆ ಗುರು ಮನೆಯಿರಲು
ಸಾವಿನ ಮನೆಯು ದೂರವೆಂದ 
ನಮ್ಮ ಕರಿಬಸವ ಅಜ್ಜಯ್ಯ 

ಮನ ತಟ್ಟುವ, ಮನ ಮುಟ್ಟುವ ಇಂಥ ಅನೇಕ ನುಡಿಗಟ್ಟುಗಳು ಸಂಕಲನದ ತುಂಬ ಹರಡಿವೆ.



                                    

‍ಲೇಖಕರು avadhi

January 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: