ಪರಿಸರ ಸಮಾವೇಶದಲ್ಲಿ ನೀವಿರಬೇಕು

ನಮಸ್ಕಾರ,

ನಿಮಗಾಗಿಯೇ ವಿಶೇಷವಾದ ಸಂದೇಶವಿದು.

ಕೊಂಚ ಧೀರ್ಘವಾಗಿದೆ, ಕೊನೆಯವರೆಗೂ ಓದಿ.

ಕೆಲವೇ ಜನರ ಮೋಜಿಗಾಗಿ, ಲಾಭಕ್ಕಾಗಿ ಮತ್ತು ಲಾಲಸೆಗಾಗಿ ನಮ್ಮ ಇಡೀ ನಾಗರೀಕತೆಯನ್ನು ಮತ್ತು ಸಮಸ್ತ ಜೀವ ಸಂಕುಲವನ್ನು ಬಲಿ ಕೊಡಲಾಗುತ್ತಿದೆ ಮತ್ತು ನಮ್ಮಿಡೀ ಜೀವಜಾಲವನ್ನು ಲೂಟಿ ಮಾಡಲಾಗುತ್ತಿದೆ.

ನಮ್ಮ ನಿಜವಾದ ಸಂಪತ್ತು ನಮ್ಮ ಕಾಡುಗಳು.
ನಮ್ಮ ಕಾಡು ನಮ್ಮ ಹೆಮ್ಮೆ.
ಅಲ್ಪಸ್ವಲ್ಪ ಉಳಿದಿರುವ ಈ ಜಗತ್ತಿನ ಶ್ವಾಸಕೋಶವಾಗಿರುವ ಕಾಡನ್ನು ಅಭಿವೃದ್ಧಿ ಹೆಸರಿನಲ್ಲಿ ನಿರ್ನಾಮ ಮಾಡುವುದಕ್ಕೆ ನಮ್ಮ ವಿರೋಧವಿದೆ.

ಕಾಡು ನಮ್ಮ ಸೊತ್ತಲ್ಲ, ನಮ್ಮ ಮಕ್ಕಳಿಗೆ ಜಾಗರೂಕತೆಯಿಂದ ಹಾಗೂ ಸುಸ್ಥಿತಿಯಲ್ಲಿ ಹಿಂದಿರುಗಿಸಲೇಬೇಕಾದ ನಮ್ಮ ಪೂರ್ವಜರಿಂದ ಬಂದಿರುವ ಬಳುವಳಿ.

ಅವಿವೇಕಿಗಳ, ಭ್ರಷ್ಠರ, ಕೊಲೆಗಡುಕರ ನಿರ್ಧಾರಗಳಿಗೆ ಸಭ್ಯರೆಲ್ಲಾ ಕೋಲೆಬಸವರಂತೆ ತಲೆಯಾಡಿಸುತಿದ್ದರೆ ವಿವೇಕಿಗಳಮಾತು, ಚಿಂತನೆ, ಕಲಾಸೃಷ್ಠಿ, ಪ್ರಶಸ್ತಿ ಮತ್ತು ಸನ್ಮಾನಗಳು ಅಸಂಗತವಾಗುತ್ತಾ ಹೋಗುತ್ತವೆ.
ಇಡೀ ವಿಶ್ವದ ಆಸ್ತಿಯಾದ ಅರಣ್ಯ ತೆರೆದಿಟ್ಟ ಖಜಾನೆಯಂತಾಗಿರುವುದು ಮುಂದಿನ ದಿನಗಳ ಬಗ್ಗೆ ಕಳವಳಕ್ಕೆ ಕಾರಣವಾಗಿದೆ.

ಜೈವಿಕ ಪರಿಸರದ ವಿಚಾರಕ್ಕೆ ಬಂದಾಗ ಇಡೀ ಜೀವಸಂಕುಲವೇ ಒಂದು ಕುಟುಂಬವಾಗಿ ವರ್ತಿಸುತ್ತದೆ. ಯಾರ ಮತ್ತು ಯಾವುದರ ನಡುವೆಯೂ ಗಡಿ ಅಥವಾ ಗೋಡೆ ಇರುವುದಿಲ್ಲ.
ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವುಗಳು ಒಂದು ತುರ್ತು ಕಾರಣಕ್ಕೆ ಸಂಘಟಿತರಾಗಲೇಬೇಕಿದೆ ಮತ್ತು ದನಿಗೂಡಿಸಲೇಬೇಕಿದೆ.

ವ್ಯವಸ್ಥೆಯನ್ನು ಪ್ರಶ್ನಿಸುವ ಹಂತಕ್ಕೆ ಬರುವ ಮೊದಲೇ ಆ ಚಳವಳಿಯನ್ನು ಷಡ್ಯಂತ್ರದಿಂದ  ಹಿಮ್ಮೆಟ್ಟಿಸಲಾಗುತ್ತಿದೆ.

ನಾವು ನಂಬಿರುವ ಆದರ್ಶಗಳ ಪರವಾಗಿ ನಿಲ್ಲುವ ಅದ್ಭುತ ಅನುಭವ ಮತ್ತು ಆತ್ಮತೃಪ್ತಿಯದೇ ಒಂದು ತೂಕ.
ಮುಂದಾಲೋಚನೆಯ ಮಿಂಚುಗಳು ಕೊಡುತ್ತಿರುವ ಮುನ್ನೆಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ.
ಈಗಿನ ವ್ಯವಸ್ಥೆಯಲ್ಲಿ ಪರಿಹಾರ ಕಂಡುಕೊಳ್ಳಲು ಆಗದಿದ್ದಲ್ಲಿ, ಈಗಿನ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಿಸಬೇಕಾಗಿದೆ.

ಒಮ್ಮನಸ್ಸಿನಿಂದ ನಾವೆಲ್ಲರೂ ಕೈ ಜೋಡಿಸಿದರೆ ಏನೇನನ್ನು ಮಾಡಲು ಸಾಧ್ಯವಿದೆ ಎಂಬುದನ್ನು ಆಲೋಚಿಸಿ.

ಅದನ್ನು ಕಾರ್ಯರೂಪಕ್ಕೆ ತರಲು ನಾವು ಖಡಕ್ಕಾಗಿ, ಖಚಿತವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಬೇಕಿದೆ.
ಅದು ಎಷ್ಟೇ ಕಠಿಣವಾಗಿದ್ದರೂ ಪರವಾಗಿಲ್ಲ.
ಇದು ನಮಗಿರುವ ಕೊನೇ ಅವಕಾಶ.
ಇಂದಿಲ್ಲದಿದ್ದರೆ, ಎಂದಿಗೂ ಇಲ್ಲ

ಪ್ರಕೃತಿ ಎನ್ನುವುದು ಅಪಾರ ವಿಸ್ಮಯಗಳ ಕಣಜ.

ಅಧಿಕಾರದ ಸ್ಥಾನದಲ್ಲಿದ್ದು, ಅಲ್ಲಿನ ಗುರುತರ ಜವಾಬ್ದಾರಿಯಿಂದ ನುಣುಚಿಕೊಂಡು, ಆ ಹೊಣೆಗೂ ತಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಸಂವೇದನಾರಹಿತರಾಗಿರುವ ಜಾಗತಿಕ ನಾಯಕರುಗಳಿಗೆ ಸಮಸ್ತ ಜೀವರಾಶಿಯ ಪರವಾಗಿ ಇದೊಂದು ಆಗ್ರಹ.

ಅಭಿವೃದ್ದಿ ಮತ್ತು ಪರಿಸರದ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿದೆ.  ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ.  ಜೀವವೈವಿಧ್ಯವನ್ನು ಹಣದ ಮಾನದಂಡದಲ್ಲಿ ಅಳೆಯುವ ಕೆಲಸವನ್ನು ಯಾರೂ ಮಾಡಬಾರದು. ಇಡೀ ವಿಶ್ವದ ವಿದ್ಯಾಮಾನಗಳು ಒಂದಕ್ಕೊಂದು ಸೂಕ್ಷ್ಮವಾಗಿ ಅವಲಂಬಿಸಿರುವ ಬಲೆಯ ಎಳೆಗಳು.

ಪರಿಸರದ ಈ ಭಯಾನಕತೆಯ ಕಡೆಗೆ ಸರ್ಕಾರೀ ವ್ಯವಸ್ಥೆ ಅಗತ್ಯ ಗಮನ ಹರಿಸುತ್ತಿಲ್ಲ.
ಸಭೆ-ಸಮಾರಂಭ, ಘೋಷಣೆ, ಫೋಟೋ ಮತ್ತು ಪತ್ರಿಕೆಯಲ್ಲಿ ಸುದ್ಧಿ ಇಷ್ಟಕ್ಕೇ ಆ ಬದ್ಧತೆಯು ಸೀಮಿತವಾಗಿದೆ.
ಒಂದು ದೃಷ್ಟಿಯಲ್ಲಿ ವಾಸ್ತವ ಅತ್ಯಂತ ಭೀಕರವಾಗಿದೆ ಮತ್ತು ನಿರಾಶಾದಾಯಕವಾಗಿದೆ.

ಇಂದಿನ ಗಂಭೀರ ಪರಿಸ್ಥಿತಿಯ ,ಕುರಿತು ವಿಚಾರ ವಿನಿಮಯ ಮಾಡಬೇಕಿದೆ.
ಎಲ್ಲ ಆಡಳಿತ ವ್ಯವಸ್ಥೆಯೂ ಭಾರತದಷ್ಟೇ ಅಲ್ಲದೆ ಸಮಸ್ತ ವಿಶ್ವ ಪರಿಸರದ ಗಂಭೀರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀತಿ, ನಿಯಮ, ಕಾನೂನು ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ.
ಮತ್ತು ಅದನ್ನು ತಮ್ಮ ಕಾರ್ಯನಿರ್ವಹಣೆಯ ಮೊದಲ ಆದ್ಯತೆಯ ವಿಷಯವಾಗಿ ಸೇರಿಸಿಕೊಳ್ಳಲು ಒತ್ತಾಯಿಸಬೇಕಿದೆ.

ಜಾಗತಿಕ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು,
ಜೈವಿಕ ಪರಿಸರವನ್ನು ಸುರಕ್ಷಿತವಾಗಿ ಇಡಲು ಮತ್ತು
ಈ ಗಂಭೀರ ವಾಸ್ತವವನ್ನು ಸಾರ್ವಜನಿಕ ಚರ್ಚೆಯಲ್ಲಿ ತರಲು,
“ನಮ್ಮ ಭೂಮಿ ನಮ್ಮ ಹೆಮ್ಮೆ” ಎಂಬ ಧ್ಯೇಯವಾಕ್ಯದಡಿ
ಮಾನವನಿರ್ಮಿತ ಹವಾಮಾನ ವೈಪರೀತ್ಯ ಕುರಿತು ಜಾಗೃತಿ ಮೂಡಿಸಲು ಪುಟ್ಟ ಮಕ್ಕಳು,
ವಿಜ್ಞಾನಿಗಳು, ವಿಚಾರವಂತರು, ಬುದ್ಧಿಜೀವಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರಾಸಕ್ತರು, ಸರ್ಕಾರದ ಆಯ್ದ ಪ್ರಮುಖರು, ಪರಿಸರದ ಬಗ್ಗೆ ವಿಶೇಷವಾದ ಕಾಳಜಿಯುಳ್ಳ ರಾಜಕಾರಣೆಗಳು,
ಜಲತಜ್ಞರು, ಕ್ರೀಡೆ, ಸಿನೆಮಾ ಹಾಗೂ ಸಾಹಿತ್ಯ ವಲಯದ ಉತ್ಸಾಹಿಗಳು ಜಾಗತಿಕ ಕಾರಣಕ್ಕೆ ತಮ್ಮ ಸಮಗ್ರತೆಯನ್ನು ಸೂಚಿಸಲು ಒಂದೆಡೆ ಸೇರೋಣ.

ನಮಗಿರುವುದೊಂದೇ ಭೂಮಿ.

ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ ಜರುಗಲಿರುವ ರಾಜ್ಯ ಮಟ್ಟದ ಪರಿಸರ ಸಮಾವೇಶ ದ ಬಗ್ಗೆ ಇಂದು ಒಂದು ಪೂರ್ವಭಾವಿ ಸಭೆ ಮಾಡಲಾಯ್ತು.

ಸರ್ಕಾರದ ನೀತಿ-ನಿರೂಪಣೆ ಮತ್ತು ಯೋಜನೆಗಳ ಕಾರ್ಯಗತ ಹಂತದಲ್ಲಿ ನಮ್ಮ ಜೀವವೈವಿಧ್ಯತೆಯ ಅಸ್ಮಿತೆಗೆ ಕೊಂಚವೂ ಧಕ್ಕೆಯಾಗದಂತೆ ಹಾಗೂ ಈವರೆವಿಗೂ ಆಗಿರುವ ಜೈವಿಕ ಹಾನಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಖಚಿತವಾದ ಬದ್ಧತೆಯನ್ನು ನಿರೂಪಿಸಲು ಸರ್ಕಾರವನ್ನು ಆಗ್ರಹಿಸಲಿಕ್ಕಾಗಿ ಒಂದು ದಿನದ ಕರ್ನಾಟಕ ರಾಜ್ಯ ಮಟ್ಟದ ಪರಿಸರ ಸಮಾವೇಶ ಜರುಗಲಿದೆ.

ಜೀವವೈವಿಧ್ಯತೆಯ ಕುರಿತು ಆಳವಾದ ತಿಳುವಳಿಕೆ, ನೇರ ಅನುಭವ ಹೊಂದಿರುವ
ಮತ್ತು ಪರಿಣಾಮಕಾರಿ ಸಂವಹನ ಮಾಡಬಲ್ಲವರು ವಿಚಾರ ಮಂಡಿಸಲಿರುವರು.

ಸಮಾವೇಶದಲ್ಲಿ ಮಂಡನೆಯಾದ ವಿಚಾರಗಳನ್ನು ಕ್ರೋಢೀಕರಿಸಿ ರಾಜ್ಯದ ಸಮಸ್ತರ ಪರವಾಗಿ ಸರ್ಕಾರದ ನೀತಿ-ನಿರೂಪಣೆ ಮತ್ತು ಯೋಜನೆಗಳ ಮೇಲೆ ಪ್ರಭಾವ ಬೀರಬಲ್ಲಂಥ ಸನ್ನದು ಒಂದನ್ನು ಘೋಷಿಸಲು ತೀರ್ಮಾನಿಸಲಾಯಿತು.

ಪ್ರತೀ ಜಿಲ್ಲೆಯಿಂದ ಇಪ್ಪತ್ತೈದು ಜನ ಪ್ರತಿನಿಧಿಗಳಿಗೆ ಸಮಾವೇಶದಲ್ಲಿ ಭಾಗವಹಿಸಲು ಅವಕಾಶ.

ಪ್ರತಿನಿಧಿಗಳು ಸ್ವಯಂಪ್ರೇರಣೆಯಿಂದ ಸ್ವಂತ ಖರ್ಚಿನಲ್ಲಿ ಭಾಗವಹಿಸಬೇಕಾಗುತ್ತದೆ.

ಬೆಳಿಗ್ಗೆ ಒಂಬತ್ತಕ್ಕೆ ಪ್ರಾರಂಭವಾಗುವ ವಿಚಾರ ಮಂಡನೆಯ  ಪ್ರತೀ ಅವಧಿಯು ಹದಿನೈದು ನಿಮಿಷಗಳದ್ದಾಗಿದ್ದು, ಐದು ನಿಮಿಷದ ವಿರಾಮದ ಬಳಿಕ ನಂತರದ ಮಂಡನೆಯು ಪ್ರಾರಂಭವಾಗುತ್ತದೆ.
ಹೀಗೆ ಒಟ್ಟು ಹದಿನೆಂಟು ವಿಷಯಗಳು ಮಂಡನೆಯಾಗಲಿವೆ.

ಸಮಾವೇಶದ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು.

ಸಮಾವೇಶದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಮೇ ೨೫ರ ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಲು ಕರೆ ನೀಡಲಾಗಿದೆ.

ವಿಚಾರ ಮಂಡಿಸಲು ಅಗತ್ಯವಿರುವ ಅನುಭವಸ್ಥ ವಿಚಾರವಂತರ ವಿವರಗಳನ್ನು ಅಪೇಕ್ಷಿಸಲಾಗಿದೆ.
ಇಡೀ ರಾಜ್ಯಕ್ಕೆ ಕೇವಲ ಹದಿನೆಂಟೇ ಜನರಿಗೆ ಮಾತನಾಡಲು ಅವಕಾಶವಿರುವುದರಿಂದ
ನಿಮ್ಮ ಸಂಪರ್ಕದಲ್ಲಿರುವ ಪ್ರಖರ ವಿಚಾರಧಾರೆಯ ಸಂಪನ್ಮೂಲ ವ್ಯಕ್ತಿಗಳನ್ನು ಸೂಚಿಸಿ (ಇದು ಸಾರ್ವಜನಿಕ ಹಿತಾಸಕ್ತಿಯ ಸರ್ಕಾರೇತರ ಕಾರ್ಯಕ್ರಮ ಆದ್ದರಿಂದ ಸಂಪನ್ಮೂಲ ವ್ಯಕ್ತಿಗಳು ಸ್ವಂತ ಖರ್ಚಿನಲ್ಲೇ ಭಾಗವಹಿಸಬೇಕಾಗಿದೆ).
ಈ ಕಾರ್ಯಕ್ರಮ ಇನ್ನೂ ಹೆಚ್ಚು ಪರಿಣಾಮಕಾರಿಯಾಗಲು ಮಾಡಬೇಕಾದ ಬದಲಾವಣೆಗಳ ಸಲಹೆಯನ್ನು ನೀಡಿರಿ.
ನಿಮಗೆ ಸಂಪರ್ಕವಿರುವ ಪರಿಸರ ಕಾಳಜಿಯುಳ್ಳ ಸೆಲೆಬ್ರಿಟಿಗಳನ್ನು ಭಾಗವಹಿಸುವಂತೆ ಒಪ್ಪಿಸಿ, ಕರೆತರಬಹುದೇ?

ನೀವು ಈ ಸಮಾವೇಶದ ಸರ್ವ ಹಂತದಲ್ಲೂ ನೇರವಾಗಿ ಭಾಗಿಯಾಗಲು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ.

ನಿಮ್ಮವ,

ಧನಂಜಯ ಜೀವಾಳ ಬಿ.ಕೆ.
ರಾಜ್ಯ ಸಂಚಾಲಕ,
ಕರ್ನಾಟಕ ರಾಜ್ಯ ಪರಿಸರ ಸಮಾವೇಶ.

‍ಲೇಖಕರು avadhi

April 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: