ಕಪ್ಪು ಸುಂದರಿಯ ಕಾರಣಕ್ಕೆ ಒಡಕು..

6

ಏಪ್ರಿಲ್ 23 ಷೇಕ್ಸ್ ಪಿಯರ್ ಹುಟ್ಟಿದ ಮತ್ತು ಇಲ್ಲವಾದ ದಿನ.

ಈ ಸಂದರ್ಭದಲ್ಲಿ ‘ಅವಧಿ’ಯ ಪರಿಚಿತ ಬರಹಗಾರ, ಲಿಬ್ಯಾದಲ್ಲಿ ಸಾಕಷ್ಟು ವರ್ಷ ಅಧ್ಯಾಪನ ಮಾಡಿದ, ಆ ಕುರಿತು ಪ್ರವಾಸ ಕಥನವನ್ನೂ ಬರೆದಿರುವ ಉದಯ ಇಟಗಿ ಅವರ ಹೊಸ ಮಾಲೆಯನ್ನು ಪ್ರಕಟಿಸುತ್ತಿದ್ದೇವೆ.

ಉದಯ್ ಇಟಗಿ 

ನಿನ್ನೆಯ ಸಂಚಿಕೆಯಿಂದ..

ಆಮೇಲೆ ಪ್ಲೇಹೌಸಿನಲ್ಲಿ ಆಟ ಶುರುವಾಯಿತು. ಎಲ್ಲ ತಿರುವುಮುರುವು. ಒಮ್ಮೆ ನಾನು ಗಂಡಿನ ವೇಷದಲ್ಲಿ, ಅವನು ಹೆಣ್ಣು ವೇಷದಲ್ಲಿ! ಇನ್ನೊಂದು ಆಟದಲ್ಲಿ “ಈ ಹಾಸಿಗೆಯೇ ದ್ವೀಪ” ಅಂದ. ನಾನು ಮಂತ್ರವಾದಿಯ ಮಗಳಂತೆ. ಆ ಮಂತ್ರವಾದಿಯ ಹೆಸರು ಪ್ರಾಸ್ಟರಸ್ ಅಂತೆ. ಷೇಕ್ಸ್ ಪಿಯರ್ ತಾನು ಅದೆಂಥದೋ ಕ್ಯಾಲಿಬನ್ ಅಂದ. ಇನ್ನೊಂದು ಆಟದಲ್ಲಾಗಲೇ ನೀನು ಜೂಲಿಯೆಟ್ ಅಂದ. ಹಾಸಿಗೆಯೇ ಗೋರಿಯಂತೆ. ಅದರೊಳಗೆ ನಾನು ಸತ್ತು ಬಿದ್ದಿರಬೇಕಂತೆ!

ಆಮೇಲೆ ತಾನು ರೋಮಿಯೋ ಅಂತ ಬಂದು ವಿಷ ಕುಡಿದ. ಇದಾದ ಮೇಲೆ ನಾನು ಎದ್ದು ಚೂರಿಯಿಂದ ಇರಿದುಕೋಬೇಕು! ಇನ್ನೊಂದು ರಾತ್ರಿ ಅದ್ಯಾವನೋ ಡೆನ್ಮಾರ್ಕ್ ರಾಜಕುಮಾರನ ಪ್ರೇಯಸಿಯ ಪಾತ್ರ. ಆ ರಾಜಕುಮಾರನಿಗೆ ಒಂಥರಾ ಹುಚ್ಚು, ಅಥವಾ ಹುಚ್ಚನಂತೆ ನಟಿಸುತ್ತಿದ್ದ, ಅಥವಾ ಹಾಗೆ ನಟಿಸೋಕೆ ಹೋಗಿ ಹುಚ್ಚನಾದನೋ ಏನೋ. ಅಂತೂ ಅದು ನನಗೂ ಗೊತ್ತಾಗಲಿಲ್ಲ, ಷೇಕ್ಸ್ ಪಿಯರ್ ನಿಗೂ ಗೊತ್ತಾಗಲಿಲ್ಲ. ಆದರೆ ನಾನಂತೂ ಅವನ ಪ್ರೇಯಸಿಯಂತೆ ಹೂವೆಸೆಯುವಂತೆ ನಟಿಸುತ್ತಾ ಕೊಳಕ್ಕೆ, ಅಂದರೆ ಹಾಸಿಗೆಗೆ, ಬಿದ್ದೆ. ಹಾಂ, ಅವನು ಹೇಳಿದ ಹಾಗೆ ಮುಖ ಅಡಿಯಾಗೇ ಬಿದ್ದೆ, ಅನ್ನಿ!

ಇದಾದ ಮೇಲೆ ಒಂದು ರಾತ್ರಿ “ಆ ಹೆನ್ರಿ ರಿಜ್ಲಿ ನೋಡೊಕೆ ಹೇಗಿದಾನೆ?” ಅಂದೆ.

“ನನ್ನ ಪುಟ್ಟ ಸೂಳೆ! ಅವನೇನು ನಿನ್ನ ಸವತಿ ಅಲ್ಲ” ಅಂದ, ಪ್ರೀತಿಯಿಂದ.

“ಅದೆಲ್ಲ ಇರಲಿ, ಅವನು ನೋಡೋಕೆ ಹೇಗಿದಾನೆ ಹೇಳು, ಪ್ಲೀಸ್” ಅಂದೆ.

ಷೇಕ್ಸ್ ಪಿಯರ್ ನಾಚಿದ, ಬೆವೆತ, ಉಗುರು ಕಚ್ಚಿದ, “ಅವನ ಬಗ್ಗೆ ನನ್ನ ಸಾನೆಟ್ಟುಗಳಲ್ಲಿ ಬರೆದಿರೋದನ್ನೆಲ್ಲ ಓದಲೆ?” ಅಂದ, “ಅವೆಲ್ಲ ಬೇಡಯ್ಯ, ಸಾಫ್ ಸೀದಾ ಎರಡೇ ಮಾತಲ್ಲಿ ಹೇಳು” ಅಂದೆ. ಶುರುಮಾಡಿಯೇಬಿಟ್ಟ, “ಇಪ್ಪತ್ತೊಂದು ವಸಂತಗಳ ಕಂಡವನು, ಆ ದೇವತೆ, ಆ ಸ್ಪೂರ್ತಿ, ಆ ಸಂತ, ಸಂಪಿಗೆಗಿಂತ ಮಧುರ ಅವನ ಬಿಸಿಯುಸಿರು….” ಪಾಪ, ಹೀಗೆ ಹಾಡುತ್ತಲೇ ಇದ್ದ, the love-sick fool, my dirty devil!

ಆದರೆ ಆಮೇಲೆ ಯಾರಿಂದಲೋ ಗೊತ್ತಾಯಿತು ಆ ಹೆನ್ರಿ, ಷೇಕ್ಸ್ ಪಿಯರ್ ನಿಗೆ ಬರಿ ಸಲಿಂಗಿ ಸಂಗಾತಿಯಾಗಿರಲಿಲ್ಲ, ಅವನ ಆತ್ಮ ಸಂಗಾತಿ ಕೂಡ ಆಗಿದ್ದನೆಂದು. ಅವರಿಬ್ಬರಲ್ಲಿ ಎಷ್ಟೊಂದು ಆತ್ಮೀಯತೆ, ಗಾಢತೆಯಿತ್ತೆಂದರೆ ಇಬ್ಬರೂ ಒಬ್ಬರೊನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಷೇಕ್ಸ್ ಪಿಯರ್ ಕೂಡ ಅವನನ್ನು ಅತ್ಯಂತ ತೀವ್ರವಾಗಿ ಗಾಢವಾಗಿ ಪ್ರೀತಿಸುತ್ತಿದ್ದ. ಅದಕ್ಕೆ ಅವನು ಬರೆದ 154 ಸಾನೆಟ್ ಗಳಲ್ಲಿ 126 ಸಾನೆಟ್ ಗಳು ಗೆಳೆತನಕ್ಕೇ ಮೀಸಲಾಗಿರುವದು ಸಾಕ್ಷಿ.

ಆ ಹೆನ್ರಿ ಇವನಿಗೆ ಹೇಳಿ ಮಾಡಿಸಿದಂಥ ಜೋಡಿ. ಅವನ ಚೆಲುವಿಗೆ ಇವನೆಷ್ಟು ಮಾರುಹೋಗಿದ್ದನೆಂದರೆ ಅವನು ತನ್ನ ಒಂದು ಸಾನೆಟ್ ನಲ್ಲಿ ಅವನ ಚೆಲುವನ್ನು ಕುರಿತು ಹೀಗೆ ವರ್ಣಿಸಿದ್ದಾನೆ.

“ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ

ಇನ್ನೊಂದು ಕೊಡು ಎಂದು ಕೇಳಿಕೋ. ನೀ ನಿನ್ನ

ಮತ್ತೆ ಸೃಷ್ಟಿಸಿಕೊಳ್ಳದೆ ಬಿಟ್ಟಲ್ಲಿ ಲೋಕವನೆ

ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ,

ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ಯೆ ಇರುವಳೇ?”

ಷೇಕ್ಸ್ ಪಿಯರ್ ನ ಭಾವನೆಗಳಿಗೆ, ಕನಸುಗಳಿಗೆ, ಅವನು ಅದ್ಭುತವಾಗಿ ಸ್ಪಂದಿಸುತ್ತಿದ್ದನಂತೆ. ಅಷ್ಟೇ ಅಲ್ಲ ಅವ ಷೇಕ್ಸ್ ಪಿಯರ್ ಬರೆದಿದದ್ದನ್ನು ಮೆಚ್ಚಿಕೊಂಡು ಹಾಡಿ ಹೊಗಳುತ್ತಿದ್ದನಂತೆ ಹಾಗೂ ಇನ್ನೂ ಬರಿಯೆಂದು ಹುರುದುಂಬಿಸುತ್ತಿದ್ದನಂತೆ. ಒಂದು ಲೆಕ್ಕದಲ್ಲಿ ಅವನೇ ಇವನಿಗೆ ಹೆಂಡತಿಯಾಗಿದ್ದರೆ ಚೆನ್ನಾಗಿತ್ತೇನೋ! ತಪ್ಪಿ ನಾನಾಗಿಬಿಟ್ಟೆ.

ಪಾಪ ಷೇಕ್ಸ್ ಪಿಯರ್! ಮೊದಲೇ ಹೇಳಿದಂಗೆ ನಾನು ಅವನಿಗೆ ಸರಿಯಾದ ಜೋಡಿಯಾಗಲಿಲ್ಲ. ಅವನ ಭಾವನೆಗಳಿಗೆ ನಯವಾಗಿ ನಾಜೂಕಾಗಿ ಯಾವತ್ತೂ ಸ್ಪಂದಿಸಲಿಲ್ಲ. ಬರೀ ಏನಿದ್ದರೂ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದೆ. ಇನ್ನು ಅವನು ಯಾವಾಗಲಾದರೂ ಕವನ ಓದಲು ಬಂದಾಗ ‘ತಲೆನೋವು ಮಾರಾಯ’ ಅಂತ ಹೇಳಿ ನಿರಾಶೆಗೊಳಿಸುತ್ತಿದ್ದೆ. ನನಗೆ ಸಾಹಿತ್ಯದಲ್ಲಿ ಆಸಕ್ತಿಯಿರಲಿಲ್ಲ ನಿಜ. ಆದರೆ ಆಸಕ್ತಿ ಬೆಳೆಸಿಕೊಂಡಿದ್ದರೆ, ಅವನನ್ನು ನಯವಾಗಿ ಸಂಭಾಳಿಸಿದ್ದರೆ ನಾನವನಿಗೆ ಒಳ್ಳೆ ಹೆಂಡತಿ ಆಗಬಹುದಿತ್ತೇನೋ ಅಂತ ಈಗ ಅನಿಸುತ್ತದೆ. ಬಹುಶಃ ಅದೇ ಕಾರಣಕ್ಕೇ ಇರಬೇಕು ಅವ ನನ್ನಲ್ಲಿ ಕಾಣದಿದ್ದನ್ನು ಅವನ ಗೆಳೆಯನಲ್ಲಿ ಕಂಡುಕೊಂಡ. ಅದೇ ಅವರಿಬ್ಬರು ಹತ್ತಿರವಾಗಲು ಕಾರಣವಾಗಿರಬಹುದು. ನನಗೆ ಅವನಿಷ್ಟದಂತೆ ಬದುಕಲು ಸಾಧ್ಯವಿತ್ತೇನೋ ಆದರೆ ನಾನು ಪ್ರಯತ್ನಿಸಲಿಲ್ಲ. ಹೀಗಾಗಿ ಅವನ ಗೆಳೆಯನೇ ಅವನಿಗೆ ಹೆಂಡತಿಯಂತಾದ.

ಆದರೆ ಸ್ವಲ್ಪ ದಿನ ಕಳೆದ ಮೇಲೆ ನನಗೆ ಮತ್ತೆ ಯಾರೋ ಬಂದು ಹೇಳಿದರು. ಷೇಕ್ಸ್ ಪಿಯರ್ ಮತ್ತು ಅವನ ಗೆಳೆಯ ಹೆನ್ರಿ ಮಧ್ಯ ಕಪ್ಪು ಸುಂದರಿಯ ಕಾರಣಕ್ಕೆ ಒಡಕು ಮೂಡಿದೆಯೆಂದೂ, ಅವನ ಗೆಳೆಯ ಅವನನ್ನು ತನ್ನ ಆಸ್ಥಾನದಿಂದ ಹೊರಹಾಕಿದ್ದಾನೆಂದೂ ಹೇಳಿದರು. ಆ ವೈನಾತಿ ಕಪ್ಪು ಸುಂದರಿ ಷೇಕ್ಸ್ ಪಿಯರ್ ನನ್ನು ಮತ್ತು ಅವನ ಗೆಳೆಯನನ್ನು ಏಕಕಾಕಲಕ್ಕೆ ಒಟ್ಟೊಟ್ಟಿಗೆ ಪ್ರೀತಿಸುತ್ತಿದ್ದಳಂತೆ. ಒಂದು ದಿನ ಈ ವಿಷ್ಯ ಅವನ ಗೆಳೆಯನಿಗೆ ತಿಳಿದು ಅವನು ಷೇಕ್ಸ್ ಪಿಯರ್ ನನ್ನೇ ತಪ್ಪಿತಸ್ಥನನ್ನಾಗಿ ಮಾಡಿ ಹೊರಗೆ ದಬ್ಬಿದನಂತೆ. ಮುಂದೆ ಐದಾರು ವರ್ಷಗಳ ಕಾಲ ಅವ ಎಲ್ಲಿ ಇದ್ದ ಎನ್ನುವದು ಸ್ವತಃ ನನಗೂ ಸಹ ಗೊತ್ತಿರಲಿಲ್ಲ.

ಆ ಕಪ್ಪು ಸುಂದರಿ ಕುರಿತು ಷೇಕ್ಸ್ ಪಿಯರ್ ನೇ ತನ್ನ ಸಾನೆಟ್ ನಲ್ಲಿ ಹೀಗೆ ಹೇಳಿದ್ದಾನಂತಲ್ಲ……..

“ಹಿತ ಅಹಿತ ನನಗುಂಟು ಒಲವೆರೆಡು

ಪ್ರೇರಿಸುವುವೆರೆಡೂ ಮರುಳಂತೆ ಈಗಲೂ

ಎರಡರಲಿ ಒಂದು  ದೇವತೆ, ಚೆಂದ, ಗಂಡು,

ಮತ್ತೊಂದು ಹೆಣ್ಣು, ಕೆಟ್ಟುದು, ಬಣ್ಣ, ಕಂದು”

“ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ

ನರಳಿಸುತ್ತಿರುವ ಆ ಹೃದಯಕ್ಕೆ ಧಿಕ್ಕಾರ”

ಈ ಗಂಡಸರು ನೇರವಾಗಿ ಹೆಂಡತಿ ಹತ್ತಿರ ಬಂದು ’ನಾನು ಹೀಗ್ಹೀಗೆ ಮಾಡಿದೆ ಅಂತಾ ಎಲ್ಲಿ ಬಂದು ಹೇಳ್ತಾರೆ? ಎಲ್ಲಾ ಹೆಂಗಸರಿಗೆ ಅವರವರ ಗಂಡಂದಿರ ವಿಷ್ಯ ಗೊತ್ತಾಗೋದು ಅವರಿವರ ಬಾಯಿಂದಲೇ! ಅದೂ ಎಲ್ಲಾ ಮುಗಿದು ಹೋದ ಮೇಲೆ! ಕರ್ಮ ಕಣ್ರೀ!

ಮತ್ತೆ ನೆನಪಾಗುತ್ತಿದೆ.. ನಾನೊಮ್ಮೆ ಅದೇ ಥೇಮ್ಸ್ ನದಿ ದಂಡೆಯ ಮೇಲೆ ಸಂಜೆ ವಿಹಾರಕ್ಕೆಂದು ಅವನ ಜೊತೆ ಹೋದಾಗ ಕುತೂಹಲಕ್ಕೆಂದು ಕೇಳಿದ್ದೆ “ನಿನ್ನ ಗೆಳೆಯ ಬೇಸಿಗೆಯ ಹಗಲಾದರೆ, ನಾನೇನು ಹಾಗಾದರೆ?” ಎಂದು. ಅದಕ್ಕವನು ನಿರ್ಭಿಡೆಯಿಂದ “ನೀನು ಚಳಿಗಾಲದ ಒಂದು ದಿನ” ಎಂದು ಹೇಳಿದ್ದ. ನನಗಾಗ ಅರ್ಥವಾಗದೆ ನಗುತ್ತಾ ಸುಮ್ಮನೆ ತಲೆಯ ಮೇಲೊಂದು ಮೊಟಕಿದ್ದೆ.

ಆದರೆ ಈಗ ಎಲ್ಲವೂ ಅರ್ಥವಾಗುತ್ತಿದೆ. ನಿಜಕ್ಕೂ ನಾನವನ ಮೈ ಮನಗಳ ಬಿಸಿಯೇರಿಸದ “ಚಳಿಗಾಲದ ಒಂದು ದಿನ” ವಾಗಿ ಉಳಿದುಬಿಟ್ಟೆನೆಂದು. ನಿಮಗೆ ಒಂದು ವಿಷ್ಯ ಗೊತ್ತಾ? ನಾವು ಹೆಂಗಸರು ನಮ್ಮನಮ್ಮ ಗಂಡಂದಿರು ಕಚ್ಚೆ ಹರುಕರು ಅಂತಾ ಗೊತ್ತಾದ ಮೇಲೂ ಅವರು ಮತ್ತೆ ಮತ್ತೆ ನಮ್ಮನ್ನೇ ಪ್ರೀತಿಸಲಿ ಅಂತಾ ಆಸೆ ಪಡ್ತೀವಿ. ಎಂಥಾ ವಿಪರ್ಯಾಸ ಅಲ್ವಾ? ನನ್ನ ಗಂಡನ ವಿಷ್ಯ ಎಲ್ಲಾ ತಿಳಿದ ಮೇಲೂ ಅವ ನನ್ನ ಇನ್ನೂ ಪ್ರೀತಿಸ್ತೀದನಾ ಅನ್ನೂ ಕುತೂಹಲ ಇತ್ತು ನನಗೆ. ಬೇಕಾದ್ರೆ ನೀವದನ್ನು ಕೆಟ್ಟ ಕುತೂಹಲ ಅಂತಾ ಕರೆಯಿರಿ. ಹೀಗಾಗಿ ಅವನು ಬರೆದಿದ್ದನ್ನೆಲ್ಲಾ ನನ್ನ ಹಿರಿಮಗಳ ಕೈಲಿಂದ ಒಮ್ಮೆ ತಿರುಗಿಸಿ ಹಾಕುವಾಗ ಅವನ ಒಂದು ಸಾನೆಟ್ ನಲ್ಲಿ ಒಂದಿಷ್ಟು ಚಿತ್ರಣ ಸಿಕ್ಕಿತು….

“ನನ್ನವಳ ಕಣ್ಣು ರವಿಯಂತೆ ಖಂಡಿತ ಅಲ್ಲ,

ಅವಳ ತುಟಿ ಕೂಡ ಹವಳದ ಹಾಗೆ ಕೆಂಪಲ್ಲ;

ಮೊಲೆ ಬಣ್ಣ ತುಸು ಕಂದು, ಹಿಮದಂಥ ಬಿಳುಪಲ್ಲ,

ಕೂದಲೋ ತಂತಿ ಥರ, ತಲೆಯೋ ಕರಿ ತಂತಿ ಹೊಲ”

ಅದು ನನ್ನ ಬಗ್ಗೆನೇ ಇರುವಂಥದ್ದು ಅಂತಾ ನಾನು. ಆದರೆ ಮಗಳು ಇರಲಿಕ್ಕಿಲ್ಲ. ಅದು ಕಪ್ಪು ಸುಂದರಿ ಬಗ್ಗೆಯೇ ಇರಬೇಕು ಅಂತಾ ಅವಳು. ಆದರೆ ಅವನ ಆ ಚಿತ್ರಣ ಹೆಚ್ಚುಕಮ್ಮಿ ನನ್ನನ್ನೇ ಹೋಲುತ್ತಿದ್ದುದು ಸುಳ್ಳಲ್ಲ ಕಣ್ರೀ..

/ಉಳಿದದ್ದು ನಾಳೆ/

‍ಲೇಖಕರು Avadhi Admin

April 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vijayavaman

    ಸಾರ್, ಕೇವಲ ಎರಡೇ ದಿನಗಳ ಹಿಂದೆ ಕವಿ ಮತ್ತು ಅವನ ಹೆಂಡತಿಯ ಸಮಾಧಿಯ ಮುಂದೆ ನಿಂತು ಕೈಹಿಡಿದು ನಡೆಸಿದ ಅವನ ಎಲ್ಲಾ ಪಾತ್ರಗಳನ್ನು ಕುರಿತು ಧ್ಯಾನಿಸಿದೆ! ಹೊರಗೆ ಹನಿಹನಿ ಮಳೆ, ಮೂಳೆ ಗದಗುಡುವ ಚಳಿ! ನಿಮ್ಮದು ಚೆಂದದ ಬರವಣಿಗೆ.

    ಪ್ರತಿಕ್ರಿಯೆ
    • Uday Itagi

      ವಿಜಯವಾಮನ್ ಸರ್ ಧನ್ಯವಾದಗಳು ನಿಮ್ಮ ಮಾತುಗಳಿಗೆ . ಶೇಕ್ಸ್ಪಿಯರ್ ಮತ್ತು ಆತನ ಹೆಂಡತಿಯ ಸಮಾಧಿಗೆ ಭೇಟಿ ಕೊಟ್ಟ ನೀವೇ ಧನ್ಯರು . ನನ್ನ ಲೇಖನ ಓದಿದ ಮೇಲೆ ನಿಮಗೆ ಶೇಕ್ಸ್ಪಿಯರ್ನ ಬಗ್ಗೆ ಏನು ಅನ್ನಿಸಿತು ಎಂಬುದನ್ನು ತಿಳಿಸಿ .

      ಪ್ರತಿಕ್ರಿಯೆ
    • Uday Itagi

      Thank you Sir. ಶೇಕ್ಸ್ಪಿಯರ್ನ ಸಮಾಧಿಗೆ ಭೇಟಿ ಕೊಟ್ಟು ಅಲ್ಲಿ ನಿಂತು ಅವನ ಪಾತ್ರಗಳ ಬಗ್ಗೆ ಧೆನಿಸಿದ ನೀವೇ ಧನ್ಯರು. ಈಗ ಲೇಖನ ಪೂರ್ಣ ಮುಗಿದಿದೆ ದಯವಿಟ್ಟು ತಮ್ಮ ಅಭಿಪ್ರಾಯವನ್ನು ತಿಳಿಸಿ .

      ಪ್ರತಿಕ್ರಿಯೆ
    • Suresh

      ತುಂಬಾ ಸೊಗಸಾದ ಬರವಣಿಗೆ.ಶೇಕ್ಸ್ ಪಿಯರನ ಇನ್ನೊಂದು ಮುಖ ವಿಚಿತ್ರವಾದರೂ, ಅವನೂ ನಮ್ಮ ನಿಮ್ಮ ಹಾಗೆ ಮನುಷ್ಯ ಅನ್ನಿದಂತೂ ಸಾಬೀತು ಆಯ್ತು..

      #ಸುರೇಶ್ ಬುಜರಿ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: