ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪದ್ಮಿನಿ ನಾಗರಾಜು ಹೊಸ ಕವಿತೆ- ದಾರಿ ಯಾವುದಯ್ಯ…

ಡಾ ಪದ್ಮಿನಿ ನಾಗರಾಜು

ಬದುಕೆಂಬ ಮಾರುಕಟ್ಟೆಯಲಿ
ಮಾರಾಟವಾಗುತ್ತಿವೆ ಕನಸು
ಕೊಳೆಯುತ್ತಿವೆ ಮನಸ್ಸು
ಕೊಂಡು ಮಾರುವ ಭರಾಟೆಯಲಿ
ಬೆತ್ತಲಾಗುತ್ತಿವೆ ರೂಪಾಯಿಗಳು

ಸಾವು ನೋವು ಬಿಕರಿಯಾಗುತ್ತಿವೆ
ಹೃದಯಕ್ಕೆ ಅಪ್ಪಳಿಸುವ ಅಲೆಯಂತೆ
ನೋವು ಅವರವರ ಸಂಬಂಧಿ
ಎದೆಗೆ ಬಿದ್ದ ಹನಿಗಳಂತೆ
ಕತೆಗಳ ನೆನಪಿಸುತ್ತಿವೆ
ಮಳೆಯ ಮಣ್ಣ ಘಮಲಂತೆ

ಇಂದು ಅವರ ಸರದಿ
ನಾಳೆ ನಮ್ಮದು ಎಂಬುದು
ಲೋಕದುಕ್ತಿ
ಮಾತು ಹೊರಬಂದು
ಶಿಲಾಲೇಖದಂತೆ ಗುರುತು ಉಳಿಸಿ
ಹೃದಯಕ್ಕೆ ದಾಟಿಸಿದೆ

ಮೂರು ದಿನದ ಬದುಕಲ್ಲಿ
ಮುವತ್ತು ಮುಖವಾಡ
ಧರಿಸಿ ಸುತ್ತಾಡುವುದು
ಅಭ್ಯಾಸವಾಗಿದೆ
ಲಾಭ-ನಷ್ಟಗಳ
ಗುಣಾಕಾರ ಭಾಗಾಕಾರದಲಿ
ಮಣ್ಣಲ್ಲಿ ಮಡಿದವರ ಹೆಸರು
ಅದ ವ್ಯಾಪಾರ ಮಾಡಿದವರು
ಲೆಕ್ಕ ಒಪ್ಪಿಸಬೇಕಲ್ಲಿ

ಲೆಕ್ಕ ತಪ್ಪದಂತೆ
ಬದುಕ ಸಾಗಿಸಬೇಕು
‘ಬೆತ್ತಲಾಗದೆ ಬಯಲು ದಕ್ಕದು’
ಅಲ್ಲಮನ ಮಾತಿದು
ಬೆಳಗು ಕತ್ತಲಾಗುವ ಮುನ್ನ
ಕಾಯ ಕರಗುವ ಮುನ್ನ
ತಳ ಒಡೆದ ದೋಣಿಯಲಿ ಕುಂತು
ಬೋರ್ಗರೆವ ಕಡಲಲ್ಲಿ ನಿಂತು
ದಾರಿ ಕೇಳುತ್ತಿದ್ದೇನೆ
ದಾರಿ ಯಾವುದಯ್ಯ….

‍ಲೇಖಕರು Admin

22 June, 2021

2 Comments

  1. ಸತೀಶ್ ಕುಮಾರ್. ಕೆ

    ತುಂಬಾ ಅರ್ಥಪೂರ್ಣ ಕವಿತೆ

  2. ಚಂದ್ರಪ್ರಭ ಕಠಾರಿ

    ಕವಿತೆ ಮುಖವಾಡದ ಬದುಕಿನ ವಾಸ್ತವಕ್ಕೆ ಕನ್ನಡಿ ಹಿಡಿದಿದೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading