ಪದ್ಮನಾಭ ಆಗುಂಬೆಯ ಹೊಸ ಕಾದಂಬರಿ ಬರುತ್ತಿದೆ..

ಪ್ರಸನ್ನ ಸಂತೇಕಡೂರು

ನನ್ನ ‘ಸು’ ಕಾದಂಬರಿ ಬಿಡುಗಡೆಯಾದ ಮೇಲೆ ಆ ಕಾದಂಬರಿಯನ್ನು ಓದಿ ಮೆಚ್ಚಿಕೊಂಡು ಬರೆದ ಹಲವಾರು ಸಹೃದಯರಲ್ಲಿ ಪದ್ಮನಾಭ ಆಗುಂಬೆಯವರು ಒಬ್ಬರು. ಆ ಓದಿನ ಮೂಲಕ ಪರಿಚಯವಾದ ಪದ್ಮನಾಭರ ಸಾಹಿತ್ಯಾಸಕ್ತಿಯನ್ನು ಕಂಡು ಅಚ್ಚರಿಗೊಂಡಿದ್ದೇನೆ. ಆ ನಂತರ ನಾವು ನೇರ ಭೇಟಿಯಾಗದಿದ್ದರೂ ಫೋನ್ ಮೂಲಕ ಹಲವಾರು ಸಲ ಮಾತನಾಡಿ ನಮ್ಮ ಸಮಾನ ಆಸಕ್ತಿಯ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಅವರ ಓದಿನ ವಿಸ್ತಾರ ಬಹು ದೊಡ್ಡದು. ಹೆಚ್ಚು ಹೆಚ್ಚು ಓದಿದಂತೆ ನಾನು ಏಕೆ ಬರೆಯಬಾರದು? ಎಂಬ ಭಾವ ಪ್ರತಿಯೊಬ್ಬ ಬರಹಗಾರನಿಗೂ ಮೊದಲು ಕಾಡಿರುತ್ತದೆ. ಆ ತುಡಿತವೇ ಹೊಸ ಬರಹಕ್ಕೆ ನಾಂದಿಯಾಗಿರುತ್ತದೆ.  

‘ಕುರುಡು ಮಂತ್ರ’ ಎಂಬ ಶೀರ್ಷಿಕೆಯ ಈ ಕಾದಂಬರಿ ಪದ್ಮನಾಭ ಆಗುಂಬೆಯವರ ಮೊದಲ ಕೃತಿ. ಮೊದಲ ಕಾದಂಬರಿಯಲ್ಲಿಯೇ ನುರಿತ ಬರಹಗಾರರ ಮೊನಚನ್ನು ನಾವು ಪದ್ಮನಾಭರಲ್ಲಿ ಕಾಣಬಹುದು. ಸಾಹಿತ್ಯವನ್ನು ಅಪಾರವಾದ ಆಸಕ್ತಿಯಿಂದ ಓದಿಕೊಂಡಿರುವ ಪದ್ಮನಾಭರು ಅವರ ಹೆಸರೇ ಸೂಚಿಸುವಂತೆ ಮೂಲತಃ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ತೀರ್ಥಹಳ್ಳಿ ಸಮೀಪದ ಆಗುಂಬೆಯವರು. ‘ಕೋಶ ಓದು ದೇಶ ಸುತ್ತು’ ಎಂಬಂತೆ ಒಂದು ಕಡೆ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡು ಇನ್ನೊಂದು ಕಡೆ ಭಾರತ ದೇಶದ ಹಲವಾರು ಭಾಗಗಳನ್ನು ಸುತ್ತಿ ಸದ್ಯಕ್ಕೆ ತಮಿಳುನಾಡಿನ ಚೆನ್ನೈ ನಗರದಲ್ಲಿ ನೆಲೆಸಿದ್ದಾರೆ.

ಇನ್ನು ಕಾದಂಬರಿಯ ಕಥಾ ಹಂದರದ ಬಗ್ಗೆ ಹೇಳುವುದಾದರೆ ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಿನ್ನೆಲೆಯಲ್ಲಿಯೇ ಸಾಗುವ ಕೃತಿ. ಆ ಕಾರಣದಿಂದ ಇಲ್ಲಿನ ಪಾತ್ರಗಳ ಹೆಸರನ್ನು ಕೇಳಿದರೆ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ, ಯು. ಆರ್. ಅನಂತಮೂರ್ತಿಯವರ ಮತ್ತು ಎಂ.ಕೆ. ಇಂದಿರಾರವರ ಕೆಲವು ಕಾದಂಬರಿಗಳಲ್ಲಿ ಬರುವ ಹೆಸರುಗಳನ್ನು ತಕ್ಷಣಕ್ಕೆ ಜ್ಞಾಪಕಕ್ಕೆ ತರುತ್ತವೆ. ಟೀಕಪ್ಪ, ಕೊಗ್ಗ ಕಾಮತರು, ಗಾಯತ್ರಿ, ಪುಟ್ಟಮ್ಮ, ತಮ್ಮಯ್ಯಗೌಡ ಹೆಸರುಗಳು ಇಲ್ಲಿ ಮುಖ್ಯವಾದವು.

ಈ ಕಾದಂಬರಿಯ ನಾಯಕ ಟೀಕಪ್ಪ ಒಬ್ಬ ಬುದ್ದಿವಂತನೂ ಅಲ್ಲದ ದಡ್ಡನೂ ಅಲ್ಲದ ಸೋಮಾರಿ ಯುವಕ ಎಂದು ಹೇಳಬಹುದು. ಎಸ್.ಎಸ್. ಎಲ್. ಸಿ. ಯನ್ನು ತನ್ನ ಊರು ಹಸಿರುಪೇಟೆಯಲ್ಲಿಯೇ ಶ್ರಮಪಟ್ಟು ಮುಗಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಪಿಯುಸಿ ಮಾಡಲು ಸೇರಿಕೊಂಡು ಅಲ್ಲಿ ಸರಿಯಾಗಿ ಓದದೇ ಅನುತ್ತೀರ್ಣನಾಗಿ ಮುಂದೆ ಪರೀಕ್ಷೆ ಬರೆಯಲು ಆಸಕ್ತಿಯೂ ಇಲ್ಲದೆ ಮತ್ತೇ ತನ್ನ ಊರು ಸೇರಿಕೊಳ್ಳುತ್ತಾನೆ. ಅವನು ಊರು ಸೇರಿಕೊಂಡ ಮೇಲೆ ಅವನ ಬದುಕಿನಲ್ಲಿ ನಡೆಯುವ ಆಕಸ್ಮಿಕ ಎಂಬಂತಹ ಘಟನೆಗಳು ಈ ಕಾದಂಬರಿಗೆ ಬೇರೊಂದು ಆಯಾಮವನ್ನು ನೀಡುತ್ತವೆ.  

ಬದುಕಿಗೆ ನಿರ್ದಿಷ್ಟವಾದ ಗುರಿ ಇರದಿದ್ದರೆ ಅದು ಕರೆದುಕೊಂಡು ಹೋಗುವ ಕಡೆಗೆ ಸಾಗು ಎಂಬಂತೆ ಕಥಾನಾಯಕ ಟೀಕಪ್ಪನ ಬದುಕು ಸಾಗುತ್ತದೆ. ಹಾಗಾದರೆ ಈ ಟೀಕಪ್ಪನ ಬದುಕಿನ ಅರ್ಥವೇನು? ಜಗತ್ಪ್ರಸಿದ್ದ ಫ್ರೆಂಚ್ ಲೇಖಕ ಆಲ್ಬರ್ಟ್ ಕಾಮೂ ಹೇಳುವಂತೆ ಬದುಕು ಅಸಂಬದ್ಧ ಘಟನೆಗಳ ಸರಮಾಲೆಯೇ? ಅಲ್ಲಿ ವಿನಾಕಾರಣ ಘಟನೆಗಳು ನಡೆಯುತ್ತಿರುತ್ತವೆ. ಇಲ್ಲಿ ಒಬ್ಬನ ಸಾವು ಕೂಡ ಅರ್ಥ ಕಳೆದುಕೊಂಡಿರುತ್ತದೆ. ಇಲ್ಲಿ ಯಾವುದೇ ಉದ್ದೇಶವಿಲ್ಲದೆ ಒಬ್ಬನ ಹತ್ಯೆಯಾಗುತ್ತದೆ. ಇದು ಆಧುನಿಕ ಮನುಷ್ಯನ ಬದುಕಿನ ತಲ್ಲಣಗಳ ಪ್ರಭಾವ ಎಂದು ಹೇಳಬಹುದು.

ಹಳ್ಳಿಯೊಂದರ ಬಡತನದ ಜೀವನ, ಅಲ್ಲಿನ ಜನರ ಮೌಢ್ಯ, ಆಚಾರ ವಿಚಾರಗಳು. ಜಾತೀಯತೆಯ ಮಧ್ಯದಲ್ಲಿ ಅರಳುವ ಸುಂದರ ಪ್ರೇಮವನ್ನು ಇಲ್ಲಿ ಕಾಣಬಹುದು. ಗಾಯತ್ರಿ ಮತ್ತು ಟೀಕಪ್ಪರ  ನಡುವಿನ ಪ್ರೇಮ ಆದರ್ಶಮಯವಾಗುತ್ತಿದೆ ಎಂಬುವಷ್ಟರಲ್ಲಿ ಕಾದಂಬರಿ ಬೇರೊಂದು ತಿರುವನ್ನು ಪಡೆಯುತ್ತದೆ. ಇಲ್ಲಿ ಟೀಕಪ್ಪ ಏಕೆ ಅಷ್ಟೊಂದು ಪ್ರೀತಿಸುವ ಗಾಯತ್ರಿಯನ್ನು ಮದುವೆಯಾಗಲಿಲ್ಲ ಎಂಬ ಪ್ರಶ್ನೆ ಓದುಗರನ್ನು ಕಾಡುತ್ತದೆ.

ಟೀಕಪ್ಪ ಗಾಯತ್ರಿಗೆ ಮದುವೆಯಾಗಿದ್ದರೆ ಕಾದಂಬರಿಗೆ ಬೇರೊಂದು ತಿರುವು ಸಿಗುತಿತ್ತು. ಆದರೆ ಟೀಕಪ್ಪ ಮುಂಬೈಗೆ ಏಕೆ ಹೋದ? ಅಲ್ಲಿಂದ ದೆಹಲಿಗೆ ಏಕೆ ಪ್ರಯಾಣ ಮಾಡಿದ? ಇವು ಓದುಗನ ಮುಂದೆ ಬರುವ ಪ್ರಶ್ನೆಗಳು. ಬದುಕು ಸಿದ್ದಮಾದರಿಯ ಉಡುಪಲ್ಲ. ಅದು ಆಶ್ಚರ್ಯಕರವೂ ವಿಸ್ಮಯಕಾರಿಯೂ ಆದ ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತದೆ. ಬದುಕಿನ ಪುಟಗಳಲ್ಲಿ ಅನಿರೀಕ್ಷಿತ ತಿರುವುಗಳಿದ್ದರೇ ಎಷ್ಟೊಂದು ಚಂದವೋ! ಅದೇ ರೀತಿ ಈ ಕಾದಂಬರಿಯಲ್ಲಿಯೂ ಕೂಡ ಆ ತಿರುವುಗಳನ್ನು ನಾವು ಕಾಣಬಹುದು.

ಟೀಕಪ್ಪನಿಗೆ ದೆಹಲಿಯಲ್ಲಿ ವೇಶ್ಯಾಗೃಹವೊಂದರ ತಲೆಹಿಡುಕನಾಗುವ ಪ್ರಸಂಗ ಬರುವುದು ಅಲ್ಲಿಂದ ಅವನು ಜಮ್ಮುವಿಗೆ ಹೊರಡುವುದು. ಅಲ್ಲಿ ಯಾವುದೋ ಸಾಧುಗಳ ಜೊತೆ ಸೇರಿಕೊಳ್ಳುವುದು ಅವನ ನಿಯಂತ್ರಣಕ್ಕೆ ಸಿಗದ ವಿಷಯಗಳಾಗಿರುತ್ತವೆ. ಜಮ್ಮುವಿಗೆ ಹೋಗದೆ ಹರಿಯಾಣದ ಬ್ರಹ್ಮ ಸರೋವರ, ಕುರುಕ್ಷೇತ್ರ ಮತ್ತು ಅಂಬಾಲ, ಚಂಡೀಗಡಗಳಲ್ಲಿ ತಿರುಗುವುದು. ಅಲ್ಲಿ ಗ್ಯಾನನಾಥರ ಸೇವೆಯಲ್ಲಿ ದಿನಗಳನ್ನು ಕಳೆಯುವುದು ಒಂದು ರೀತಿ ಎಸ್. ಎಲ್. ಭೈರಪ್ಪನವರ ನಿರಾಕರಣ ಕಾದಂಬರಿಯನ್ನು ಓದುಗನಿಗೆ ಜ್ಞಾಪಕಕ್ಕೆ ತರುತ್ತದೆ.

ಇತ್ತ ಅತೀ ಸುಂದರಿಯಾದ ಗಾಯತ್ರಿಯ ಮದುವೆ ಶ್ರೀಮಂತ ಮನೆತನದ ತಮ್ಮದೇ ಜಾತಿಯ ತಮ್ಮದೇ ಬೀದಿಯ ಜಯತೀರ್ಥನ ಜೊತೆ ಆಗುವ ಪ್ರಸಂಗ ಬರುತ್ತದೆ. ಆ ದಾಂಪತ್ಯ ಸುಖಮಯವಾಗಿರುತ್ತದೆಯೇ? ಗಾಯತ್ರಿ ಟೀಕಪ್ಪನ ಬರುವಿಕೆಗೆ ಕಾಯುವುದಿಲ್ಲವೇ? ಜಯತೀರ್ಥ ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷನಾಗುತ್ತಾನೆ. ಇತ್ತ ಗಾಯತ್ರಿಯ ಬದುಕು ಬದಲಾಗುತ್ತದೆ.

ಮನುಷ್ಯ ಕೆಲವೊಮ್ಮೆ ಮಾನಸಿಕವಾಗಿ ತನ್ನನ್ನು ತಾನು ನಿಯಂತ್ರಣ ಮಾಡಿಕೊಳ್ಳಲು ಸೋಲುತ್ತಾನೆ. ತನ್ನ ಮನಸ್ಸು ಕರೆದಲ್ಲಿಗೆ ಸಾಗುತ್ತಾನೆ. ತನ್ನ ಬುದ್ಧಿಶಕ್ತಿಯ ಕೈಯಿಂದ ತಪ್ಪಿಸಿಕೊಳ್ಳುತ್ತಾನೆ. ಆ ರೀತಿ ಸೋತಾಗ ಏನೇನೋ ಘಟನೆಗಳು ಸಂಭವಿಸುತ್ತವೆ. ಕೆಲವೊಮ್ಮೆ ಯಾವುದೋ ವಿಷವರ್ತುಲದಲ್ಲಿ ಸಿಲುಕುತ್ತಾನೆ. ಕೆಲವೊಮ್ಮೆ ಅದು ಚಕ್ರವ್ಯೂಹವೂ ಆಗಬಹುದು. ಇನ್ನು ಕೆಲವೂಮ್ಮೆ ಬದುಕಿನಲ್ಲಿ ವೈರಾಗ್ಯವೂ ಮೂಡಬಹುದು. ಕೆಲವೊಮ್ಮೆ ಆ ವೈರಾಗ್ಯ ಭಯದಿಂದಲೂ ಮೂಡಬಹುದು. ಅದನ್ನೇ ಆಧ್ಯಾತ್ಮಿಕ ಸಾಧನೆಯ ದಾರಿ ಎಂದು ತಿಳಿದರೆ ಮೂರ್ಖತನವಾಗುತ್ತದೆ. ಇಲ್ಲಿನ ಕಥಾನಾಯಕನ ವೈರಾಗ್ಯ ಕೂಡ ಇದೆ ರೀತಿಯಲ್ಲಿ ಕಂಡರೂ ಅದಕ್ಕೂ ಇಲ್ಲಿ ಅರ್ಥವಿರುವುದಿಲ್ಲ.

ಟೀಕಪ್ಪ ಹಠಯೋಗ ಕಲಿತು ಹಠಯೋಗಿ ಟೀಕಪ್ಪ, ಭಗವಾನ್ ದಾಸ್, ಟೀಕಾನಂದ ಗುರೂಜಿಯಾಗಿ ಮಾರ್ಪಾಡಾಗುತ್ತಾನೆ. ಕೊನೆಗೆ ತನ್ನ ಹಳ್ಳಿಗೆ ಬಂದು ಆಶ್ರಮವನ್ನು ತೆರೆಯುತ್ತಾನೆ. ಅತ್ತ ಜಯತೀರ್ಥ ರಾಜಕೀಯವಾಗಿ ಎತ್ತರ ಎತ್ತರ ಬೆಳೆಯುತ್ತಾನೆ. ಮುಂದೆ ಟೀಕಪ್ಪನ ಬದುಕು ಏನಾಯಿತು. ಗಾಯತ್ರಿ ಏನಾದಳು? ಜಯತೀರ್ಥ ಏನಾದ ಎಲ್ಲಕ್ಕೂ ಉತ್ತರ ಕಾದಂಬರಿಯ ಕೊನೆಗೆ ಸಿಗುತ್ತದೆ.

ಪದ್ಮನಾಭ ಆಗುಂಬೆಯವರ ಈ ಕಾದಂಬರಿ ಆಧುನಿಕ ಬದುಕಿನ ತಲ್ಲಣಗಳನ್ನು ನಮ್ಮ ಮುಂದೆ ನೀಡುತ್ತದೆ. ಕವಿ ಗೋಪಾಲ ಕೃಷ್ಣ ಅಡಿಗರ ‘ಇದ್ದುದ್ದೆಲ್ಲವ ಬಿಟ್ಟು ಇಲ್ಲದುದರೆಡೆಗೆ ತುಡಿವುದೇ ಜೀವನ’ ಎಂಬ ಸಾಲನ್ನು ಕಾದಂಬರಿಯ ನಾಯಕನಿಗೆ ಅನ್ವಯಿಸಬಹುದು. ಇನ್ನೊಂದು ಕಡೆ ‘ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೇ’ ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಅನ್ವೇಷಣೆ ಕವನದ ಸಾಲುಗಳನ್ನು ನೆನೆಯಬಹುದು. ಟೀಕಪ್ಪ ಏನನ್ನೋ ಹುಡುಕಿಕೊಂಡು ಎಲ್ಲಿಗೋ ಹೋಗುತ್ತಾನೆ. ಅದು ಅವನಿಗೆ ಸಿಕ್ಕಿತೇ? ಅದನ್ನು ತಿಳಿಯಲು ನೀವು ಕಾದಂಬರಿಯನ್ನು ಓದಲೇ ಬೇಕು.

ಈ ಕಾದಂಬರಿಯನ್ನು ಹಸ್ತಪ್ರತಿರೂಪದಲ್ಲಿಯೇ ಓದಲು ನೀಡಿ ಅದರ ಬಗ್ಗೆ ಎರಡು ಮಾತುಗಳನ್ನು ಬರೆಯಲು ಕೇಳಿಕೊಂಡ ಪದ್ಮನಾಭ ಆಗುಂಬೆಯವರಿಗೆ ತುಂಬು ಹೃದಯದ ಧನ್ಯವಾದಗಳು. ಅದೇ ರೀತಿ ಅವರ ಈ ಮೊದಲ ಕಾದಂಬರಿ ಹೆಚ್ಚು ಜನರಿಗೆ ತಲುಪಿ ಹೆಚ್ಚು ಹೆಚ್ಚು ಮನ್ನಣೆ ಪಡೆಯಲಿ ಎಂದು ಆಶಿಸುತ್ತಾ ಅವರನ್ನು ಅಭಿನಂದಿಸುತ್ತಿದ್ದೇನೆ. ಅವರಿಂದ ಇನ್ನು ಹೆಚ್ಚು ಹೆಚ್ಚು ಕೃತಿಗಳನ್ನು ಓದುಗರು ನೀರಿಕ್ಷಿಸಬಹುದು.

‍ಲೇಖಕರು Avadhi

May 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಧನಪಾಲ‌ ನಾಗರಾಜಪ್ಪ

    ಒಳ್ಳೆಯ ವಿಶ್ಲೇಷಣೆ ‌. ಲೇಖಕರಿಗೆ ಶುಭಾಶಯಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: