‘ಪದಂ’ ಕವಿ ಕ್ಷೇತ್ರಯ್ಯ

ಆರ್. ವಿಜಯರಾಘವನ್

ಕ್ಷೇತ್ರಯ್ಯನ ಬಗ್ಗೆ

ತೆಲುಗು ಪದಂ ಕವಿಯಾದ ಕ್ಷೇತ್ರಯ್ಯನವರ ಬದುಕಿನ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಅವರ ಇಷ್ಟದ ದೇವರು ಮುವ್ವಾ ಗೋಪಾಲ(ಗೆಜ್ಜೆ ಗೋಪಾಲ). ಅವರು ತಮ್ಮ ಕೆಲವು ಕವಿತೆಗಳಲ್ಲಿ ಮುವಾಪುರಿ ಎಂಬ ಹಳ್ಳಿಯನ್ನು ಉಲ್ಲೇಖಿಸುತ್ತಾರೆ.

ಅದು ಅವರ ಜನ್ಮಸ್ಥಳ, ಆ ಸ್ಥಳ ಆಂಧ್ರದ ಕೃಷ್ಣ ಜಿಲ್ಲೆಯ ಕೂಚಿಪುಡಿ (ಅದೇ ಹೆಸರಿನ ನೃತ್ಯ ಸಂಪ್ರದಾಯದ ಕೇಂದ್ರ) ಬಳಿಯಿರುವ ಮುವ್ವಾ ಅಥವಾ ಮೊವ್ವಾ ಗ್ರಾಮವಿರಬೇಕೆಂದು ವಿದ್ವಾಂಸರು ತರ್ಕಿಸುತ್ತಾರೆ. ಈ ಗ್ರಾಮದಲ್ಲಿ ಕೃಷ್ಣನ (ಗೊಲ್ಲ ಗೆಜ್ಜೆ ಗೋಪಾಲನ) ದೇವಾಲಯವಿದೆ. ಅದರೊಂದಿಗೆ  ಕ್ಷೇತ್ರಯ್ಯನವರ ಒಡನಾಟವು ಇನ್ನೂ ನಿಶ್ಚಿತವಾಗಿಲ್ಲ.

ಕ್ಷೇತ್ರಯ್ಯನವರನ್ನು ಬಹುಶಃ ಪದಂ ಸಂಪ್ರದಾಯವನ್ನು ಅದರ ಅತ್ಯಂತ ಸೂಕ್ಷ್ಮ ಮತ್ತು ಪರಿಷ್ಕೃತ ಕವಿಯಾಗಿ ಗುರುತಿಸಿದರೆ, ಹದಿನೆಂಟನೇ ಶತಮಾನದ ಆರಂಭದಲ್ಲಿ ಸಾರಂಗಪಾಣಿಯವರು ಅದನ್ನು ಮತ್ತಷ್ಟು ವಿಕಸಿಸಿ ಇನ್ನೂ ಹೆಚ್ಚು ಗಟ್ಟಿಯಾದ, ಕಾಲ್ಪನಿಕವಾದ ಮತ್ತು ಕೆಲವೊಮ್ಮೆ ಅಸೂಕ್ಷ್ಮ ಶೃಂಗಾರದ ದಿಕ್ಕಿನಲ್ಲಿ ತೋರಿಸುತ್ತಾರೆ. ಅವರು ಚಿತ್ತೂರು ಜಿಲ್ಲೆಯ ಕಾರ್ವೆಟಿನಗರಂ ಎಂಬ ಪುಟ್ಟ ಸಾಮ್ರಾಜ್ಯದೊಂದಿಗೆ ಸಂಬಂಧ ಹೊಂದಿದ್ದವರು. 

ಈ ಕವಿಯ ಇನ್ನೂರು ಪದಂಗಳು ಮಾತ್ರ ಮುದ್ರಣದಲ್ಲಿ ಉಳಿದುಕೊಂಡಿವೆ, ಬಹುತೇಕ ಇವೆಲ್ಲವೂ ಕಾರ್ವೆಟಿನಗರದ ದೇವರನ್ನು ವೇಣುಗೋಪಾಲ ಎಂದು ಸಂಬೋಧಿಸಿವೆ. ಇಬ್ಬರು ಕವಿಗಳ ನಡುವಿನ ಸ್ವರದಲ್ಲಿ ಸ್ಪಷ್ಟವಾದ ವ್ಯತ್ಯಾಸದ ಹೊರತಾಗಿಯೂ ಸಾರಂಗಪಾಣಿಗೆ ಹೆಸರಿಸಲಾದ ಕೆಲವು ಕವನಗಳು ಕ್ಷೇತ್ರಯ್ಯನ ಸಂಗ್ರಹಗಳಲ್ಲಿ ಕಂಡುಬರುತ್ತವೆ.

ಶೃಂಗಾರಭಕ್ತಿಯ ಕುರಿತು

ಅದರ ರಚನಾತ್ಮಕ ಅವಧಿಯಾದ ಏಳರಿಂದ ಒಂಬತ್ತನೇ ಶತಮಾನಗಳ ಬಳಿಕ ದಕ್ಷಿಣ ಭಾರತದ ಭಕ್ತಿಕಾವ್ಯವನ್ನು- ಶೈವ ನಾಯನ್ಮಾರ್ ಮತ್ತು ವೈಷ್ಣವ ಆಳ್ವಾರುಗಳ ತಮಿಳು ಕವಿತೆಗಳಲ್ಲಿ – ಶೃಂಗಾರ ವಿಷಯಗಳು ಮತ್ತು ಚಿತ್ರಗಳು ಆವರಿಸಿಕೊಂಡವು., ಇವುಗಳಲ್ಲಿ ದೇವರು ಆಗಾಗ್ಗೆ ಪ್ರೇಮಿಯಂತೆ ಕಾಣಿಸಿಕೊಳ್ಳುತ್ತಾನೆ. ಸಂಗಂ ಕಾಲ ಎಂದು ಕರೆಯಲ್ಪಡುವ (ಕ್ರಿ.ಶ ಮೊದಲ ಶತಮಾನ) ಪ್ರಾಚೀನ ತಮಿಳು ಪ್ರೇಮಕಾವ್ಯದಿಂದ ಬಳುವಳಿಯಾಗಿ ಪಡೆದ ಪಾತ್ರಗಳು ಅವಾಗಿದ್ದವು. ಈ ರೀತಿಯ ಕವನಗಳನ್ನು ಸಾಮಾನ್ಯವಾಗಿ ಅವುಗಳ ಶಾಸ್ತ್ರೀಯ ಸಂಗಂ ಮಾದರಿಗಳ ಜೊತೆಗೆ, ಅಕಂ ವಿಭಾಗದಲ್ಲಿ ಇಟ್ಟು ನೋಡಲಾಗುತ್ತದೆ.

ಅಕಂ “ಆಂತರಿಕ” ಭಾವದ ಕಾವ್ಯ. ಅದರಲ್ಲಿ  ವ್ಯತ್ಯಯವಾಗುತ್ತಿರುವ ಪ್ರೀತಿಯ ವೈವಿಧ್ಯಮಯ ಭಾವನೆಗಳ ಅಂಶಗಳಿವೆ. ಅಂತಹ ಅಕಂ ಕವನಗಳು ಅಂತಿಮವಾಗಿ ದೇವರಿಗೆ- ಶಿವ ಅಥವಾ ವಿಷ್ಣುವಿಗೆ- ಭಕ್ತಿಯ ಚೌಕಟ್ಟಿನಿಂದ ಕೂಡಿ ಸಂದರ್ಭೋಚಿತವಾಗಿ ರಚಿತವಾಗಿವೆ. ಸಾಮಾನ್ಯವಾಗಿ ದಕ್ಷಿಣ ಭಾರತದ ದೇವಾಲಯದಲ್ಲಿ ದೇವರ ಪೂಜೆಯ ಆರಂಭಿಕ ಉದಾಹರಣೆಗಳಿವು.

ಅತೀಂದ್ರಿಯ ಭಕ್ತಿ ಮತ್ತು ಶೃಂಗಾರದ ನಿರ್ವಚನದ ನಡುವಿನ ಸಾಹಿತ್ಯಿಕ ಸಂಪರ್ಕವು ವಿಶ್ವದ ಪ್ರಮುಖ ಧರ್ಮಗಳಲ್ಲಿ ಪ್ರಚಲಿತವಾಗಿದೆ. ಈ ಸಂಪ್ರದಾಯದ ಐತಿಹಾಸಿಕ ಮುಂದುವರಿಕೆಯು ಒಂದು ಸಹಸ್ರಮಾನದ ನಂತರ ನಿರಂತರವಾಗಿ ಭಕ್ತಿಕವಿಗಳಿಂದ – ಕ್ಷೇತ್ರಯ್ಯ ಮತ್ತು ಸಾರಂಗಪಾಣಿಯವರೆಗೆ – ವಿಸ್ತರಿಸಿಕೊಳ್ಳುತ್ತದೆ.

ಪದಂ ಓದುವ ಕುರಿತು

ಅತಿ ಕಡಿಮೆ ವಿಷಯಗಳು ಮತ್ತು ಧ್ವನಿಗಳನ್ನು (ದೊರೆಸಾನಿ, ದೇವರು/ಗಿರಾಕಿ, ಹಿರಿಯ ದೊರೆಸಾನಿ ಕೂಡ ಮನೆಯ ಯಜಮಾನಿಯೂ ಆಗಿರಬಹುದು, ಮತ್ತು ಕೆಲವೊಮ್ಮೆ ಪ್ರೇಮಿಯನ್ನು ಕರೆಯುವ ವಿವಾಹಿತ ಮಹಿಳೆ), ಬಳಸಿ ಕ್ಷೇತ್ರಯ್ಯ ಅಸಾಮಾನ್ಯ ವಿವರಗಳ ಜೊತೆಗೆ ಜೀವೋತ್ಸಾಹಭರಿತ ವೈವಿಧ್ಯಮಯ ಕವಿತೆಗಳನ್ನು ರಚಿಸುತ್ತಾರೆ. ಒಂದರಲ್ಲಿ ವಿವಾಹಿತ ಮಹಿಳೆ ತಾನು ಗರ್ಭಿಣಿಯೆಂದು ಕಂಡುಕೊಂಡು ತನ್ನ ಪ್ರೇಮಿಯನ್ನು ಗರ್ಭಪಾತಕ್ಕೆ ಹಿಂಸಿಸುತ್ತಾಳೆ. ಮೂಲಿಕೆ, ಬೇರು ಅಥವಾ ಏನನ್ನಾದರೂ ಹುಡುಕಲು ಹೋಗು ಎಂದು ಒತ್ತಾಯಿಸುತ್ತಾಳೆ. ಇನ್ನೊಂದರಲ್ಲಿ ಹಿರಿಯ ದೊರೆಸಾನಿಯು ತನ್ನ ಪ್ರೇಮಿಯೊಂದಿಗೆ ಅಸಮಾಧಾನಗೊಂಡಿರುವ ಕಿರಿಯಳೊಂದಿಗೆ ಮಾತನಾಡುತ್ತಾ, ಸ್ವಲ್ಪ ಸಾಕ್ಷಿಯಾಗಿ,

“ನಿಮ್ಮ ಮುವ್ವಾ ಗೋಪಾಲನು

ನಿನ್ನನ್ನು ಶಯ್ಯೆಯಲ್ಲಿ ಕೂಡಿಕೊಂಡಾಗ

ನೀನು, ನನ್ನ ಚಿನ್ನಾ,

ಗೊಂದಲಗೊಂಡಿದ್ದರೆ,

ನನ್ನ ಬಳಿ ಏಕೆ ದೂರು ತರುವುದು?” 

ಆದಾಗ್ಯೂಈ ಕವನಗಳು ‘ಲಘು’ ಸಂಗೀತದ ಸಂಪ್ರದಾಯಕ್ಕೆ ಸೇರಿವೆ. ಶಾಸ್ತ್ರೀಯ ಸಂಪ್ರದಾಯಕ್ಕೆ ವಿರುದ್ಧವಾಗಿ, ಅವು ಶಾಸ್ತ್ರೀಯ ಸಂಪ್ರದಾಯದ ಬತ್ತಳಿಕೆಯಲ್ಲಿ ಜಾಗ ಕಂಡುಕೊಂಡರೂ ಕೆಲವು “he-done-me-wrong” ಎಂಬಂತಹ ಅಮೇರಿಕನ್ ಪಾಪ್ ಹಾಡುಗಳಂತೆ ಧ್ವನಿಸುತ್ತವೆ. 

ಕೊನೆಗೆ

ಪದಂ ಸಂಪ್ರದಾಯ ತನ್ನ ವಿಕಾಸದಲ್ಲಿ ತಮಿಳು ಭಕ್ತಿಸಿದ್ಧಾಂತದ ಹೊರಗೆ ಬೇರುಬಿಟ್ಟಿರುವುದನ್ನು ನಾವು ಗ್ರಹಿಸಬಹುದು. ಇಲ್ಲಿ ಕವಿಯು/ಗಾಯಕಿಯು ತಪ್ಪು ಎಸಗಿರುವಳು ಎಂಬ ಅರ್ಥವಿಲ್ಲ; ಅವಳು ತನ್ನ ಪ್ರೇಮಿಯ ಆಗಮನಕ್ಕಾಗಿ ಶಾಶ್ವತವಾಗಿ ಕಾಯುತ್ತಿಲ್ಲ. ಅಲ್ಲಿ ಆಕಾಶ ಮತ್ತು ಕಾರುಮೋಡದ ದೃಶ್ಯವಿಲ್ಲ. ಅವಳೊಂದಿಗೆ ಕಾಯುತ್ತಿರುವ ಕಗ್ಗತ್ತಲ ಇರುಳು ಸಹ ಇಲ್ಲ.

ಇದು ದೇವರ ಆವರಿಸಿರುವ ಸ್ವಭಾವದ – ಸರ್ವಾಂತರ್ಯಾಮಿತನದ-  ಸಂಕೇತವಾಗಿದೆ. ದೇವರು ತನ್ನ ಎಲ್ಲಾ ಚಿಹ್ನೆಗಳೊಂದಿಗೆ (ಚಕ್ರ, ಗದೆ, ಕಮಲಪಾದಗಳು) ಇಲ್ಲಿ ಆವಾಹಿಸಲ್ಪಟ್ಟಿಲ್ಲ. ಅವನ ಅನೇಕ ಕಾಸ್ಮಿಕ್ ಅಂದರೆ ವಿಶ್ವಾವತಾರಗಳು ಮತ್ತು ಇಚ್ಛಾಕಾರ್ಯಗಳನ್ನು ನಾವು ನೆನಪಿಸಿಕೊಳ್ಳುವುದಿಲ್ಲ. ಅದರ ವಿರುದ್ಧವಾಗಿ ಗಾಯಕಿಯ  ಅನಪೇಕ್ಷಿತ ಪ್ರೀತಿಯ ಕಿರುನಾಟಕವನ್ನು ಆಡಲಾಗುತ್ತದೆ.

ವಿರಹ,  ಭಕ್ತಿಕವಿಗಳಲ್ಲಿನ ಪ್ರತ್ಯೇಕತೆಯು ತರುವ ಹಂಬಲ ಭೂತಕಾಲದಲ್ಲಿ ಬಣ್ಣಿಸಲಾದದ್ದು. ಈ  ಪ್ರಬಲ ಮನಸ್ಥಿತಿ  ಕವಿತೆಯ ಆರಂಭಿಕ ಭಾಗಕ್ಕೆ ಸೀಮಿತಗೊಳಿಸಲ್ಪಟ್ಟಿತು “ನಮ್ಮ ಪ್ರತ್ಯೇಕತೆಯ, ವಿರಹದ ನೋವನ್ನು ಶಮನಗೊಳಿಸಲು ನಾವು ಸ್ವಲ್ಪ ಸಮಯದವರೆಗಾದರೂ ಮಾತನಾಡಿದ್ದೇವೆಯೇ”).

ಗೆಳತಿಯರಿಗೆ ಯುವತಿ ಹೇಳಿದ್ದು

ಆ ಹೆಂಗಸರು ನನ್ನ ಮೋಸಗೊಳಿಸಿದರು.

ಅವರು ನನಗೆ ಅವನು ಹೆಣ್ಣು ಎಂದು ಹೇಳಿದರು

ಅವರು ಮಾಡಿದ ಕೆಲಸದಿಂದ

ಈಗ ನನ್ನ ಹೃದಯವು ಕಲಮಲಗೊಂಡಿದೆ

ಮೊದಲು ನಾನು ಯೋಚಿಸಿದೆ

ಅವಳು ನನ್ನ ಚಿಕ್ಕಮ್ಮ ಚಿಕ್ಕಪ್ಪಂದಿರ ಮಗಳು

ಹಾಗಾಗಿ ನಾನವಳಿಗೆ ಬಾಗಿ ನಮಸ್ಕರಿಸಿದೆ

ಅವಳು ನನ್ನನ್ನು ಆಶೀರ್ವದಿಸಿದಳು:

“ನೀನು ಸಧ್ಯದಲ್ಲೇ ಕಂಕಣ ಕಟ್ಟುತ್ತೀಯ

ಸಂಕೋಚವ ಬಿಡು.

ನಾನು ನಿನ್ನ ಹೃದಯದ ಮನುಷ್ಯನನ್ನು

ನಿನ್ನ ಬಳಿಗೆ ಕರೆತರುತ್ತೇನೆ 

ನಿನ್ನ ಪುಟ್ಟ  ಕುಚಗಳು ಅತಿ ಬೇಗನೆ

ದುಂಡುದುಂಡಗೆ ಅರಳುತ್ತವೆ ಪೂರ್ಣವಾಗಿ”

ಎಂದು ಅವಳು ಹೇಳಿದಳು.

ಅವಳು ಅವುಗಳ ಜೊತೆ ಆಟವಾಡಿದಳು 

ಅವುಗಳನ್ನು ಉಗುರ ತುದಿಯಿಂದ ಕೆರೆದಳು

ಅವಳು ನನ್ನನ್ನು ಹತ್ತಿರವೇ ಇರಿಸಿಕೊಂಡಿದ್ದಾಳೆ

“ನನ್ನೊಂದಿಗೆ ಬಾ ಊಟಕ್ಕೆ ಹೋಗೋಣ”ವೆಂದು

ಮದುವೆಯಲ್ಲಿ ನನಗೆ ಭೂರಿಭೋಜನ ಮಾಡಿಸಿದಳು, ಆದರೆ

ಆ ಮಹಿಳೆಯರು ನನಗೆ ಅವನು ಒಬ್ಬ ಹೆಣ್ಣು ಎಂದು ಹೇಳಿದರು

ನಂತರ ಅವಳು ಹೇಳಿದಳು: “ನನ್ನ ಪತಿ ಊರಲ್ಲಿಲ್ಲ

ನನ್ನೊಂದಿಗೆ ಮನೆಗೆ ಬಾ”

ನಾನು ಹೋಗಿ ಅವಳ ಜೊತೆ ಹಾಸಿಗೆಯಲ್ಲಿ ಮಲಗಿದೆ

ಸ್ವಲ್ಪ ಸಮಯ ಕಳೆದ ಬಳಿಕ ಅವಳು,” ಬೇಸರಾಗಿದೆ ನನಗೆ

ಮುತ್ತಿನಾಟ ಆಡೋಣ ನಾವು” ಎಂದಳು

‘ತುಂಬಾ ಕೆಟ್ಟದು”, ಎಂದೆ ನಾನು “ನಾವಿಬ್ಬರೂ ಹೆಂಗಸರು”.

ನಂತರ ಅವಳು, ನಾನು ನಿದ್ರೆಗೆ ಜಾರಿದ್ದನ್ನು ನೋಡಿ

ಚಿತ್ರವಿಚಿತ್ರ ಆಟಗಳನ್ನು ನನ್ನ ಮೇಲೆ ಆಡಲು

ಶುರುವಿಟ್ಟುಕೊಂಡಳು, ಆದರೆ

ಆ ಮಹಿಳೆಯರು ನನಗೆ ಅವನು  ಒಬ್ಬ ಹೆಣ್ಣು ಎಂದು ಹೇಳಿದರು!

ಅವಳು ಕೊಂಚ ಹೊತ್ತಿಗೆ “ನನಗೆ ನಿದ್ರೆ ಸಾಧ್ಯವಿಲ್ಲ. ಪುರುಷರು

ಏನು ಮಾಡುತ್ತಾರೆಯೋ ಅದನ್ನು ನಾವು ಮಾಡೋಣ ಎಂದಳು

“ಅವಳು” ಒಬ್ಬ ಮಹಿಳೆ ಎಂದು ಯೋಚಿಸುತ್ತಾ ಒಪ್ಪಿ ಮಾತಂತೆ

ನಾನು ಅವನ ಮೇಲೆ ಏರಿ ಹೋದೆನು

ಆದರೆ ಅವನು ನನ್ನನ್ನು ಆಚೆ ಹೋಗಲು ಬಿಡಲೇ ಇಲ್ಲ

ಅವನು ನನ್ನನ್ನು ತುಂಬಾ ಬಿಗಿಯಾಗಿ ಹಿಡಿದುಕೊಂಡ

ಅವನು ನನ್ನಲ್ಲಿ ತನ್ನನ್ನು ತಾನು ಕಳೆದುಕೊಂಡ

ಎಂದೆಂದಿಗೂ ದುಷ್ಟ, ಎಂದಿನಂತೆಯೇ ದುಷ್ಟ

ಅವನು ಹೀಗೆ ಹೇಳುತ್ತಾನೆ: “ನಾನು ನಿನ್ನ ಮುವ್ವಾ ಗೋಪಾಲನು!”

ಅವನು ನನ್ನನ್ನು ಪಳಗಿದವನಂತೆ ಮುಟ್ಟುತ್ತಾನೆ

ಪಳಗಿದವನಂತೆ ನನ್ನನ್ನು ಭೋಗಿಸುತ್ತಾನೆ. ಆದರೆ

ಆ ಮಹಿಳೆಯರು ನನಗೆ ಅವನು ಒಬ್ಬ ಹೆಣ್ಣು ಎಂದು ಹೇಳಿದರು!

ಹೆಣ್ಣೊಬ್ಬಳು, ತನ್ನ ಪ್ರಿಯಕರನಿಗೆ

ಈಗಾಗಲೇ ಬೆಳಗಾಯಿತೆ ಎಷ್ಟು ಬೇಗನೆ!

ಹೃದಯದಲ್ಲಿ ಹೊಸತೆಷ್ಟಿದೆ ಮುವ್ವ ಗೋಪಾಲನೆ

ಸ್ವಲ್ಪ ಸಮಯವಾದರೂ ನಾವು ಮಾತನಾಡಿದೆವೇ

ಇಲ್ಲಿವರೆಗಿನ ವಿರಹದ ನಮ್ಮ ನೋವನ್ನು ಶಮನಗೊಳಿಸಲು?

ನೀನು ನನ್ನ ಕರೆಯುವಿ “ಹೆಣ್ಣೆ ಬಾರೆ ನನ್ನ ಬಳಿಗೆ” ಎಂದುತ್ಸಾಹದಲಿ

ನಿಮ್ಮ ತುಟಿಯು ಇನ್ನೂ ನನ್ನ ತುಟಿಯ ಮೇಲೆ ಇರುವಾಗಲೆ

ಈಗಾಗಲೇ ಬೆಳಗಾಯಿತೆ ಎಷ್ಟು ಬೇಗನೆ!

ಕಾಮದೇವನ ಹಿಡಿತದಲ್ಲಿ ಸಿಕ್ಕಿಬಿದ್ದು

ಅವನ ಮೇಲೆ ಕೋಪಗೊಂಡು

ಬಿಡುಗಡೆಯನು ಕಾಣುವೆವು,

ತುಟಿಯಲ್ಲಿ ತುಟಿಯ ಕುಡಿಯುತಿರುತಲಿ  

“ನನ್ನ ಹುಡುಗಿ, ನಿನ್ನ ಮೈ ಚಿಗುರಿನಂತೆ

ಮೃದುವಾಗಿದೆ” ಎನ್ನುತ್ತೀಯ

ನೀನು ಬಿಗಿಯಾದ ಅಪ್ಪುಗೆಯನು

ಸಡಿಲಗೊಳಿಸುವ ಮೊದಲು

ಈಗಾಗಲೇ ಬೆಳಗಾಯಿತೆ ಎಷ್ಟು ಬೇಗನೆ!

ನನ್ನೀ ಮೈಯ ನೀನು ತಡವಿ ಕೆಲವೆಡೆಗಳ ತಾಕಿದಾಗ

ನನ್ನ ನರಳನಾಲಿಸುವುದು ಸಾಕು ಸಾಕು

ಗಿಳಿಯು ನನ್ನನನುಕರಿಸುತ್ತದೆ ಓ ಹಾಸಿಗೆಯಲ್ಲಿ

ನಾವು  ಹೇಗೆ ನಗುತ್ತೇವೆ ಎನ್ನುವುದನು ಸೇರಿ!

“ನನ್ನ ಹುಡುಗಿ, ಹತ್ತಿರ ಬಾ” ಎಂದು ನೀನು ಹೇಳುತ್ತೀಯ 

ಕಾಡುಮನುಷ್ಯನಂತೆ ನನ್ನನ್ನು ಪ್ರೀತಿಸುವೆಯೋ, ಮುವ್ವಾ ಗೋಪಾಲನೆ

ನಾ ನಿನ್ನ ಮೇಲಕ್ಕೆ  ಬರಲು ಸಿದ್ಧಳಾಗುತಿರುವಾಗಲೆ

ಈಗಾಗಲೇ ಬೆಳಗಾಯಿತೆ ಎಷ್ಟು ಬೇಗನೆ!

ದೊರೆಸಾನಿ ತನ್ನ ಪ್ರೇಮಿಗೆ

ನಿನ್ನ ನನ್ನ ನಡುವಿನ ಜಾಗದಲ್ಲಿ

ಮಲಗಿದ್ದ ಆ ಹೆಣ್ಯಾರು?

ಮುವ್ವಾ ಗೋಪಾಲ, ನೀನು ಮೋಸಗಾರ

ಅವಳ ಬಳೆಗಳ ಕಿಂಕಿಣಿ ಸದ್ದ ಕೇಳಿದೆ ನಾನು

ಆಗ ಈಗ ನಿನ್ನನ್ನು ಚುಂಬಿಸಿದಂತೆಯೇ

ಅವಳ ತುಟಿಗಳನ್ನು ನಾನು ನನ್ನೊಳಗೆ ತೆಗೆದುಕೊಂಡೆ

ಆ ಹೆಣ್ಣ ತುಟಿಗಳು ಕರ್ಪೂರದಂತೆ ಘಮಗುಡುತ್ತಿವೆ

ನೀನು ಅವಳ ತುಟಿಗಳನ್ನು ದೀರ್ಘಕಾಲ ಚುಂಬಿಸಿರಲು

ಅದೇ ತುಟಿಯ ರುಚಿಯ ನಾನು ನೋಡಿದಾಗ

ಅವು ರಸಹೀನವಾಗಿದ್ದವು ಅಗಿದುಗಿದ ಕಬ್ಬಿನಂತೆ

ಆ ಹೆಣ್ಣು ಯಾರು?

ಅದು ನೀನೇ ಎಂದು ಯೋಚಿಸಿ,

ತಬ್ಬಿಕೊಳ್ಳಲು ಹೋದೆ ನಾನು

ದೊಡ್ಡ ಮೊಲೆಗಳೆನ್ನವಕ್ಕೆ ಡಿಕ್ಕಿ ಹೊಡೆದವು

ಸ್ವಲ್ಪವೇನು ಅತಿ ವಿಚಿತ್ರವಾಗಿ ಕಂಡಿತ್ತದು ಆದರೆ

ನಾನು ಅದನ್ನೊಂದು ದೊಡ್ಡವಿಚಾರವೆಂದು ಮಾಡಲಿಲ್ಲ

ಸ್ವಾಮಿ, ಇಲ್ಲದಿರೆ ನಾನು ನಿನ್ನನ್ನು ನೋಯಿಸಿದಂತಲ್ಲವೇ

ಪಕ್ಕ ತಿರುಗಿದೆ ನಾನು. ಯಾರು ಆ ಹೆಣ್ಣು ?

ಮೊದಲು ನೀನು ಪ್ರೀತಿಸಿದ್ದೆ ನನ್ನನ್ನು

ತದನಂತರ ಬಂದಿತೇನು ಅವಳ ಸರದಿಯು?

ಅವಳು ಪ್ರತಿದಿನ ಇಲ್ಲಿಗೆ ಬರುವಳೇನು?

ಮುವ್ವಾ ಗೋಪಾಲ ನೀನು ಕಾಮದೇವನ ಜನಕ

ನಿನ್ನನ್ನು ನಂಬಲು ಸಾಧ್ಯವೇ ಇಲ್ಲವೋ

ನಿನ್ನ ತಂತ್ರ ನಾನು ಬಲ್ಲೆ ಎಲ್ಲ ಈಗ ತಿಳಿದಿವೆ

ನಿಮ್ಮ ಹೃದಯದ ಸತ್ಯವೂ ನನಗೆ ಈಗ ತಿಳಿದಿದೆ

ಹೇಳು ಸ್ವಾಮಿ ಹೇಳು ನಡುವೆಯಿದ್ದ ಆ ಹೆಣ್ಣು ಯಾರು?

ದೊರೆಸಾನಿ ಅವಳ ಗೆಳತಿಗೆ

ಇಂದು ತುಂಬಾ ತಡವಾಗಿದೆ. ಅವನು ಬರುವುದಿಲ್ಲ,

ಬಾರನವನು ಅವನ ಕುರಿತು ಚಿಂತಿಸುವುದು ವ್ಯರ್ಥ.

ದುರದೃಷ್ಟಶಾಲಿ ನೀನು ನನ್ನ ಗೆಳತಿಯಾದೆಯೇ

ಮುಂಜಾನೆ ತನಕ ಕಾಯಬೇಡ

ಎಸೆದುಬಿಡು ಗಂಧ ಕಸ್ತೂರಿ ಎಲ್ಲವನ್ನು

ಮಲಗು ಸಾಕು ನಿದ್ರೆ ಮಾಡು

ಯಾರು ಬಲ್ಲರವನು ಎಲ್ಲಿ ಇರುಳ ಕಳೆಯುತ್ತಿರುವನೋ

ಯಾವ ಹೆಣ್ಣಿನೊಂದಿಗೋ?

ಊರಿಗೆ ಊರೆಲ್ಲವೂ ಮಗ್ನವಾಗಿ ನಿದ್ರಿಸುತ್ತಿದೆ

ತುಂಬಾ ತಡವಾಗಿದೆ ಗೆಳತಿ ಮಲಗು ನಿದ್ರಿಸು

ಆಲಿಸೆನ್ನ ಹಕ್ಕಿಯೆಲ್ಲ ಸಂಗಾತಿ ಮನೆಗೆ ತೆರಳಿವೆ

ನಾವು ಬಯಸಿದ್ದನ್ನು ನಾವು ಪಡೆಯುವುದು ಅಪರೂಪಕ್ಕೆ

ಇನ್ನು, ನಾನು ಮಾಡಿದ ಪಾಪ ಯಾವುದು?

ಇದು ತುಂಬಾ ತಡವಾಗಿದೆ

ಉತ್ಸುಕತೆಯಿಂದ ನಾನು ಶಯ್ಯೆಯನ್ನು ಸಿಂಗರಿಸಿದೆ

ನನ್ನ ಪ್ರಿಯನಿಗಾಗಿ ಅದು ಕಾಯುತ್ತಿದೆ

ಏನು ಲಾಭ ಈ ಒಡವೆಯಿಂದ ಈ ಎಲ್ಲ ಹೂಗಳಿಂದ?

ಯಾರು ನೋಡುತ್ತಾರೆ ಈ ಅಲಂಕಾರವನ್ನು?

ನಂಬಬಾರದವನನ್ನು, ಮುವ್ವ ಗೋಪಾಲನನ್ನು

ಯಾರು ನನ್ನ ಹಾಸಿಗೆಯನ್ನು ಆಳಿದವನನು

ಇದು ತುಂಬಾ ತಡವಾಗಿದೆ

ಕ್ಷೇತ್ರಯ್ಯ 37 “ಇಂತ ಪ್ರೊದ್ದಾಯೆ”

ಮೂಲ: When God Is a Customer

ಆಯ್ದ ಅನುವಾದ: ಆರ್. ವಿಜಯರಾಘವನ್

‍ಲೇಖಕರು Avadhi

September 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: