ಶ್ರುತಿ ಬಿ. ಎಸ್. ಅವರ ‘ಕರ್ತೃ’

ಪ್ರಸನ್ನ ಸಂತೇಕಡೂರು

“ಕರ್ತೃ” ಶ್ರುತಿ ಬಿ. ಎಸ್. ಅವರ ಬಹುನಿರೀಕ್ಷಿತ ಕಾದಂಬರಿ ಎಂದೇ ಹೇಳಬಹುದು. ಅದಕ್ಕೆ ಮುಖ್ಯ ಕಾರಣ ಅವರ ಆತ್ಮಕಥನ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ” ಕ್ಕೆ ಸಿಕ್ಕ ಜನಪ್ರಿಯತೆ, ಪ್ರಶಸ್ತಿಗಳು ಮತ್ತು ವಿಮರ್ಶಾ ಲೇಖನಗಳು ಎಂದು ಖಂಡಿತ ಹೇಳಬಹುದು. ಈ ಕರ್ತೃ ಕಾದಂಬರಿಯ ಬಗ್ಗೆ ಹೇಳುವುದಕ್ಕಿಂತ ಮುಂಚೆ ಶ್ರುತಿಯವರ ಬಗ್ಗೆ ಎರಡು ಮಾತನ್ನು ಹೇಳಬೇಕು. ಶ್ರುತಿಯವರು ನನಗೆ ಫೇಸ್ಬುಕ್ ಮೂಲಕವೇ ಪರಿಚಯವಾದವರು. ಅವರು ಕೂಡ ನಮ್ಮ ಶಿವಮೊಗ್ಗ ಜಿಲ್ಲೆಯವರು ಎಂಬುದು ಇನ್ನೊಂದು ಸಂತೋಷದ ಮತ್ತು ಹೆಮ್ಮೆಯ ವಿಷಯ.

ಶ್ರುತಿಯವರ ಬದುಕು ಒಂದು ಹೋರಾಟವೇ ಸರಿ. ಅವರು ಉತ್ತಮ ಲೇಖಕಿಯಾಗಲು ಸಾಗಿ ಬಂದ ದಾರಿ ಸುಲಭವಾಗಿರಲಿಲ್ಲ. ಅದು ಸವಾಲುಗಳನ್ನು ಮೆಟ್ಟಿನಿಂತು ಸೋಲನ್ನು ಗೆಲುವನ್ನಾಗಿ ಮಾರ್ಪಾಡು ಮಾಡಿಕೊಂಡು ಹೋರಾಟದಿಂದ ತಾವೇ ನಿರ್ಮಿಸಿಕೊಂಡ ಮಾರ್ಗ. ಹಾಗಾಗಿ ಅವರು ಸಾಗಿ ಬಂದಿರುವುದು ಹೋರಾಟದ ದಾರಿಯಲ್ಲಿ. ಆ ಕಾರಣದಿಂದ ಅವರು ಇಚ್ಛಾಶಕ್ತಿ, ಮನೋಶಕ್ತಿ ಮತ್ತು ಆತ್ಮವಿಶ್ವಾಸದಿಂದ ತಮ್ಮನ್ನು ತಾವು ಬರವಣಿಗೆಯಲ್ಲಿ ಅಂದರೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಹೆಚ್ಚಿನದನ್ನು ಸಾಧಿಸುತ್ತಿರುವದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕು. 

ಹಾಗಾದರೆ ಅವರಿಗೆ ಏನಾಗಿತ್ತು? ಎಂದು ಹಲವರು ಕೇಳಬಹುದು.  “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ” ಎಂಬ ಅವರ ಆತ್ಮಕಥನದ ಶೀರ್ಷಿಕೆ ಓದಿದವರು ಅವರ ಬದುಕಿನ ದಿಕ್ಕು ಏಕೆ ಬದಲಿಸಿತು? ಎಂದು ಕೇಳಬಹುದು. ಇನ್ನು ಕೆಲವರು ಆಸ್ಟಿಯೋ ಸರ್ಕೋಮಾ ಅಂದರೆ ಏನು? ಎಂದು ಕೇಳಬಹುದು. ಅಥವಾ ಅವರ ಮನಸಿನಲ್ಲಿ ಆ ಪ್ರಶ್ನೆ ಮೂಡಬಹುದು. ಆಸ್ಟಿಯೋ ಸರ್ಕೋಮಾ ಎಂದರೆ ಮೂಳೆಯ ಕ್ಯಾನ್ಸರ್. ಅವರಿಗೆ ಆ ಮೂಳೆಯ ಕ್ಯಾನ್ಸರ್ ಬಂದಿತ್ತು.

ಈಗ ಅದನ್ನು ಸಂಪೂರ್ಣ ಗೆದ್ದು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಹಾಗೆ ಅವರು ಈಗ “ಕ್ಯಾನ್ಸರ್ ಸರ್ವಯ್ವರ್” ಅಥವಾ ಕ್ಯಾನ್ಸರನ್ನು ಗೆದ್ದಿರುವ ಯೋಧೆ ಎಂದು ಹೇಳಬಹುದು. ಆಸ್ಟಿಯೋ ಸರ್ಕೋಮಾ ಬಂದು ಅದನ್ನು ಮೆಟ್ಟಿನಿಂತ ಕತೆಯೇ ಅವರ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ” ಎಂಬ ಆತ್ಮಕಥನ. 

ಶ್ರುತಿ ಅವರ ಮೂಲ ಹೆಸರು ಶೃತಿ ರಾವ್, ಮೂಲತಃ ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಾಣಿಗ ಗ್ರಾಮದವರು. ಅವರು 2008ನೇ ಇಸವಿಯಲ್ಲಿ ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದಾಗ ಆಗಿನ್ನೂ 18ರ ಪ್ರಾಯದ ಶೃತಿಯವರ ಬದುಕಿನಲ್ಲಿ, ಬಿರುಗಾಳಿಯಂತೆ ಬಂದೆರಗಿತ್ತು “ಆಸ್ಟಿಯೋ ಸರ್ಕೋಮಾ”. ಆ ಕಾರಣದಿಂದ ಮಣಿಪಾಲದಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದ ಅವರು ತಮ್ಮ ವಿದ್ಯಾಭಾಸವನ್ನು ಅಲ್ಲಿಗೆ ನಿಲ್ಲಿಸಬೇಕಾಯಿತು.

ಆನಂತರ ಗುಣಮುಖರಾಗಿ ಬಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಆನಂತರ ಮನೋಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಿದ್ದಾರೆ. ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲಾಮೋ ಮಾಡಿ ಇಂಜಿನೀಯರ್ ಆಗಬೇಕಾಗಿದ್ದ ಶ್ರುತಿಯವರು ಈಗ ಮನೋಶಾಸ್ತ್ರದಲ್ಲಿ ಹೆಚ್ಚು ಪರಿಣತಿಯನ್ನು ಪಡೆಯುವಂತಾದುದು ಇದೆ ಆಸ್ಟಿಯೋ ಸರ್ಕೋಮಾದಿಂದ ಎಂದು ಹೇಳಬಹುದು.

ಆ ಕಾರಣದಿಂದ ಶ್ರುತಿಯವರ ಬದುಕಿನ ದಿಕ್ಕು ಆಸ್ಟಿಯೋ ಸರ್ಕೋಮಾದಿಂದ ಬದಲಿಸಿತು ಎಂದು ಹೇಳಬಹುದು. ಜೊತೆಗೆ ಆಸ್ಟಿಯೋ ಸರ್ಕೋಮಾದ ವಿರುದ್ಧ ಹೋರಾಡಿದ ಅವರ ಧೈರ್ಯದ ಸಾಧನೆಗೆ ಎಂಬಂತೆ ಅವರ ಆತ್ಮಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿತು. ಆ ಆತ್ಮಕಥನ “Osteosarcoma that changed my life” ಎಂಬ ಶೀರ್ಷಿಕೆಯಿಂದ ಇಂಗ್ಲಿಷ್ ಭಾಷೆಗೂ ಅನುವಾದವಾಗಿದೆ. ಈಗ ಎರಡನೇ ಮುದ್ರಣವೂ ಬಂದಿದೆ. ಅವರ ಅಂಕಣ ಬರಹಗಳ ಪುಸ್ತಕ “ಇಚ್ಛಾಶಕ್ತಿಯೆಂಬ ರೆಕ್ಕೆಗಳಿವೆಯಲ್ಲ” ಪುಸ್ತಕ ಕೂಡ ಬಿಡುಗಡೆಯಾಗಿ ಹೆಚ್ಚು ಜನರನ್ನು ತಲುಪಿದೆ. ಈ ಕರ್ತೃ ಕಾದಂಬರಿ ಅವರ ಮೂರನೇ ಪುಸ್ತಕ.

ಈ ಕಾದಂಬರಿಯ ಬಗ್ಗೆ ತಿಳಿಯುವುದಕ್ಕಿಂತ ಮುಂಚೆ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ತುಂಬಾ ಜನಪ್ರಿಯ ಸಾಲುಗಳನ್ನು ಇಲ್ಲಿ ಪ್ರಸ್ತಾಪ ಮಾಡಲು ಇಚ್ಛಿಸುತ್ತೇನೆ.

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ,ಕುದುರೆ ನೀನ್,

ಅವನು ಪೇಳ್ದಂತೆ ಪಯಣಿಗರು. ಮದುವೆಗೋ ಮಸಣಕೋ ಹೋಗೆಂದಕಡೆಗೋಡು

ಪದ ಕುಸಿಯೆ ನೆಲವಿಹುದು ಮಂಕುತಿಮ್ಮ.

ಈ ಸಾಲುಗಳನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಅದರ ಅರ್ಥ ನಮ್ಮ ಅಂತರಂಗವನ್ನು ಕಲಕಿಯೇ ಇರುತ್ತದೆ. ಕೆಲವೊಮ್ಮೆ ನಾವೆಷ್ಟೇ ಪ್ರಯತ್ನಪಟ್ಟರೂ ವಿಧಿ ಎಲ್ಲೆಲ್ಲಿಗೂ ಕರೆದುಕೊಂಡು ಹೋಗಿರುತ್ತದೆ. ವಿಧಿಯನ್ನೂ ನಂಬದ ನಿರೀಶ್ವರವಾದಿಗಳೂ ಕೂಡ ಬದುಕಿನ ಯಾವುದೋ ಘಟ್ಟದಲ್ಲಿ ಅದರ ಪ್ರಭಾವದ ಬಗ್ಗೆ ಯೋಚಿಸಲೂಬಹುದು.

ಇನ್ನು ಈ ಕಾದಂಬರಿಯ ಶೀರ್ಷಿಕೆಯ ಕರ್ತೃ ಪದದ ಅರ್ಥ ಈ ಕಾದಂಬರಿಯಲ್ಲಿ ಸ್ವಾಮಿ ವಿವೇಕಾನಂದರು ಹೇಳುವ ಹಾಗೆ “ನಿನ್ನ ಏಳಿಗೆಗೆ ನೀನೆ ಶಿಲ್ಪಿ”   ಅದನ್ನು ಇಂಗ್ಲಿಷಿನಲ್ಲಿ “You are the creator of your own Destiny” ಎಂದು ಹೇಳಬಹುದು. ಆ ಕಾರಣದಿಂದ ವಿಧಿ ಏನೇ ಮಾಡಿದರೂ ನಮ್ಮ ಆಯ್ಕೆಗಳೇ ನಮ್ಮ ಬದುಕನ್ನು ನಿರ್ಮಿಸುವುದು. ನಾವೇ ನಮ್ಮ ಬದುಕಿನ ಕರ್ತೃಗಳು! ಎಂಬ ಸಂದೇಶವನ್ನು ಈ ಕಾದಂಬರಿ ಕೊಡುತ್ತದೆ.

ಕಾದಂಬರಿ ಮೊದಲು ಓದುತ್ತ ಹೋದ ಹಾಗೆ ಇದೊಂದು ದುಃಖಾಂತ ಕಾದಂಬರಿಯಾಗಬಹುದೇನೋ ಎಂಬ ಭಾವ ಮೂಡುತ್ತದೆ. ಇಲ್ಲಿ ನಾಲ್ಕು ಮುಖ್ಯ ಪಾತ್ರಗಳು ಬರುತ್ತವೆ. ಒಂದು ಹರ್ಷ, ಅವನ ಹೆಂಡತಿ ಮಧು, ನಿರೂಪಕಿಯ ಹಾಗೆ ಕಾಣುವ ಇಂಪು ಮತ್ತು ಡಾ. ಆರವ್. ಇಲ್ಲಿ ಹರ್ಷ ಎಂಬ ವಿಜ್ಞಾನಿ ಗೋವಾಕ್ಕೆ ಪ್ರವಾಸ ಹೋಗಿರುತ್ತಾನೆ.  ಅಲ್ಲಿ ಒಂದು ವಿಚಿತ್ರ ಘಟನೆ ನಡೆಯುತ್ತದೆ. ಅಲ್ಲಿನ ಈಜುಕೊಳ ಒಂದರಲ್ಲಿ ಅಮೀಬಾ ಎಂಬ ಏಕಕೋಶ ಜೀವಿಯಿಂದ ಸೋಂಕಿಗೆ ಒಳಪಡುತ್ತಾನೆ. ಸಾಮಾನ್ಯವಾಗಿ ಈ ಅಮೀಬಾ ಬ್ಯಾಕ್ಟಿರಿಯಾದಷ್ಟೂ ಹಾನಿಕಾರಕವಲ್ಲ ಇದರಿಂದ ಸೋಂಕಿಗೆ ಒಳಗಾದ ವ್ಯಕ್ತಿಗೆ ತೀವ್ರತರವಾದ ಭೇದಿಯಾಗಬಹುದು. ಆದರೆ, ಇಲ್ಲಿನ ಅಮೀಬಾ ಸಾಮಾನ್ಯ ಅಮೀಬಾವಲ್ಲ ಇದು ಬೇರೆಯ ರೀತಿಯ ಅಮೀಬಾ.

ಹಾಗಾದರೆ, ಈ ಅಮೀಬಾ ಏನು ಮಾಡುತ್ತದೆ ಎಂದು ಕೇಳಬಹುದು. ಈ ಅಮೀಬಾ ಮೆದುಳಿನಲ್ಲಿ ಸೇರಿಕೊಂಡು ಮೆದುಳನ್ನೇ ತಿನ್ನಲು ಆರಂಭಿಸುತ್ತದೆ. ಸೋಂಕಿದ ವ್ಯಕ್ತಿಯನ್ನು ಯಮಪುರಿಯ ಬಾಗಿಲಲ್ಲಿ ತಂದು ನಿಲ್ಲಿಸುತ್ತದೆ. ಸೋಂಕಿದ ವ್ಯಕ್ತಿ ಸೂಕ್ಷ ಮನಸಿನವನೋ ಅಥವಾ ದುರ್ಬಲ ಮನಸಿನವನೋ ಆಗಿದ್ದರೆ ಅವನ ಸಾವು ಕೆಲವೇ ದಿನಗಳಲ್ಲಿ ನಿಶ್ಚಿತ.

ಅಮೀಬಾ ಎಂದರೆ ಏನು ಎಂದು ಕೆಲವರು ಕೇಳಬಹುದು. ಅದು ಬ್ಯಾಕ್ಟಿರೀಯಾದಂತಹ ನೀರಿನಲ್ಲಿ ಜೀವಿಸುವ ಏಕಕೋಶ ಜೀವಿ. ಜೀವಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ ಅದು ಅತ್ಯಂತಹ ಚಿಕ್ಕ ಪ್ರಾಣಿ. ಆ ಪ್ರಾಣಿಗೆ ಇರುವುದು ಕೇವಲ ಒಂದೇ ಜೀವಕೋಶ. ಈ ಒಂದೇ ಜೀವಕೋಶವಿರುವ ಅತೀ ಚಿಕ್ಕ ಪ್ರಾಣಿ ಬಹುಕೋಟಿ ಜೀವಕೋಶಗಳಿರುವ ಮನುಷ್ಯನ ಮೆದುಳನ್ನೇ ತಿನ್ನುತ್ತದೆಯೇ ಎಂದು ನೀವು ಅಚ್ಚರಿಗೊಳ್ಳಬಹುದು. ಈಗ ಜಗತ್ತಿನಾದ್ಯಂತ ಕರೋನ ವೈರಸ್ಸಿನ ಅಟ್ಟಹಾಸದ ಬಗ್ಗೆ ಎಲ್ಲರೂ ತಿಳಿದಿರುವುದರಿಂದ ಕರೋನ ವೈರಸ್ಸೇ ಆ ರೀತಿ ಆಕ್ರಮಣಮಾಡುವಾಗ ಅದಕ್ಕಿಂತ ಗಾತ್ರದಲ್ಲಿ ತುಂಬಾ ದೊಡ್ಡದಿರುವ ಅಮೀಬಾ ಈ ರೀತಿ ಮಾಡುವುದನ್ನು ಕೇಳಿದರೆ ಅಚ್ಚರಿ ಮೂಡದೆಯೂ ಇರಬಹುದು.

ಇಂಪು ಸೋಂಕಿತ ಹರ್ಷನ ಗೆಳತಿ ಮತ್ತು ಸಹೋದ್ಯೋಗಿ. ಇಬ್ಬರೂ ಸೂಕ್ಷಜೀವಶಾಸ್ತ್ರವನ್ನು ಓದಿಕೊಂಡಿರುತ್ತಾರೆ. ವಿಪರ್ಯಾಸವೆಂದರೆ ಅವರಿಗೂ ಈ ಅಮೀಬಾ ಎಂಬ ಸೂಕ್ಷಜೀವಿ ಮೆದುಳನ್ನು ತಿಂದು ಘೋರವಾಗಿ ಕೊಲ್ಲುತ್ತದೆ ಎಂದು ತಿಳಿದಿರುವುದಿಲ್ಲ. ಸೋಂಕಿತ ಹರ್ಷ ಆಸ್ಪತ್ರೆಗೆ ಸೇರಿದ ಮೇಲೆ ವೈದ್ಯರು ಅವನನ್ನು ಕೋಮಾಕ್ಕೆ ಕಳಿಸಿ ಅವನ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಿ ಅಲ್ಲಿರುವ ಮತ್ತು ಅವನ ದೇಹದ ಇತರೆ ಭಾಗಗಳಲ್ಲಿ ಸೇರಿಕೊಂಡಿದ್ದ ಅಮೀಬಾಗಳನ್ನು ಕೊಲ್ಲಲು ಯೋಚಿಸುತ್ತಾರೆ. ಅವನನ್ನು ಕೋಮಾಕ್ಕೂ ಕಳಿಸುತ್ತಾರೆ. ಅವನು ಮರಳಿ ಬದುಕಿದನೇ ಇಲ್ಲವೇ ಎಂದು ತಿಳಿಯಲು ಕಾದಂಬರಿ ಓದಲೇ ಬೇಕು.

ಈ ಕಾದಂಬರಿಯ ಪ್ರಕಾಶಕರೂ ಶ್ರುತಿಯವರ ಮೊದಲ ಎರಡು ಪುಸ್ತಕಗಳನ್ನು ಪ್ರಕಟಿಸಿರುವ ತುಮಕೂರಿನ ಗೋಮಿನಿ ಪ್ರಕಾಶನದ ಗುಬ್ಬಚ್ಚಿ ಸತೀಶ್ ರವರು. ಇದರ ಬೆನ್ನುಡಿ ಬರೆದವರು ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ನಿರ್ದೇಶಕರಾದ ಮತ್ತು ರಂಗಕರ್ಮಿಯೂ ಆಗಿರುವ ಸೇತುರಾಮ್ ಅವರು. ಈ ಕಾದಂಬರಿಯಲ್ಲಿ ಬದುಕು, ಹುಟ್ಟು ಮತ್ತು ಸಾವುಗಳ ಬಗ್ಗೆ ತಾತ್ವಿಕ ಪ್ರಶ್ನೆಗಳನ್ನು ಎತ್ತಿ ಆ ಪ್ರಶ್ನೆಗಳಿಗೆ ಅರ್ಥವನ್ನು ಹುಡುಕುತ್ತಾ ಸಾಗುತ್ತಿರುವ ಪಾತ್ರಗಳ ನಿರಂತರ ಶೋಧನಯಾತ್ರೆಯನ್ನು ಕಾಣಬಹುದು. 

ಸಾಮಾನ್ಯವಾಗಿ ಈ ರೀತಿ ತಾತ್ವಿಕ ಶೋಧನ ಯಾತ್ರೆಗೆ ಹೊರಟವರಿಗೆ ಸಾವುಗಳು ಮುಖಾಮುಖಿಯಾಗುತ್ತಲೇ ಇರುತ್ತವೆ. ಅಲ್ಲಿ ಹುಟ್ಟು ಸಾವಿನ ಪ್ರಶ್ನೆಗಳು ಮತ್ತೇ ಮತ್ತೇ ಕಾಡುತ್ತಿರುತ್ತವೆ. ಕಾದಂಬರಿ ದುಃಖಾಂತವಾಯಿತು ಅನ್ನುವಷ್ಟರಲ್ಲಿ ಮತ್ತೇನೋ ಅದ್ಭುತ ನಡೆಯುತ್ತದೆ. ಕಾದಂಬರಿಗೆ ಹೊಸ ತಿರುವು ಸಿಗುತ್ತದೆ.

ಡಾ. ಆರವ್ ಮತ್ತು ಇಂಪುವಿನ ನಡುವೆ ಆಸ್ಪತ್ರೆಯಲ್ಲಿಯೇ ಪ್ರೇಮಾಂಕುರವಾಗುತ್ತದೆ. ಆ ಪ್ರೇಮಾಂಕುರ ಸುಖಾಂತ್ಯವಾಯಿತೋ ಅಥವಾ ದುಃಖಾಂತವಾಯಿತೋ ಎಂದು ಕಾದಂಬರಿಯ ಕೊನೆಯಲ್ಲಿ ತಿಳಿಯುತ್ತದೆ. ಇಲ್ಲಿ ಶಂಕರಚಾರ್ಯರ ಅದ್ವೈತ ಸಿದ್ದಾಂತ ಎತ್ತುವ ಮಾಯಾವಾದದ ಪ್ರಶ್ನೆ ಬರುತ್ತದೆ. ಈ ಬದುಕು ಮಾಯೆಯೇ? ಇದು ಮಿಥ್ಯವೇ? ಇಲ್ಲ ಇದು ಸತ್ಯ ಎಂಬ ಉತ್ತರ ಸಿಗುತ್ತದೆ. ಈ ಭೂಮಿಯೆಂಬುದೊಂದು ಮಹಾಮನೆ ಮೊದಲು ಇಲ್ಲಿ ಸಲ್ಲಬೇಕು ಎಂಬ ಉತ್ತರ ಸಿಗುತ್ತದೆ. ಇಲ್ಲಿ ನಮ್ಮ ಬದುಕು ಮಾಯಾ ಸಿದ್ಧಾಂತದಿಂದ ಬಂಧಿತವಾಗಿಲ್ಲ. ಆ ಕಾರಣದಿಂದ ನಮ್ಮ ಬದುಕಿನ ಕರ್ತೃಗಳು ನಾವೇ. ನಮ್ಮ ಬದುಕಿನ ಕತೆಯನ್ನು ನಾವೇ ಬರೆಯಬೇಕು. ನಮ್ಮ ಬದುಕಿನ ಶಿಲ್ಪವನ್ನು ನಾವೇ ಸೃಷ್ಟಿಸಿಕೊಳ್ಳಬೇಕು.

ಈ ಎಲ್ಲಾ ಕಾರಣದಿಂದ ಈ ಕಾದಂಬರಿ ಒಂದು ಒಳ್ಳೆಯ ಪ್ರಯತ್ನ ಎಂದು ಹೇಳಬಹುದು. ಸುಂದರವಾಗಿ ಮತ್ತು ಚೆನ್ನಾಗಿ ಮೂಡಿಬಂದಿದೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಮೊದಲೆರಡು ಪುಸ್ತಕಗಳಲ್ಲಿ ಆತ್ಮಕತೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಯಶಸ್ವಿಯಾಗಿದ್ದ ಶ್ರುತಿಯವರು ಈಗ   ಕಾದಂಬರಿ ಬರೆದು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ. ಅವರಿಂದ ಇನ್ನು ಹೆಚ್ಚು ಕತೆಗಳು, ಕಾದಂಬರಿಗಳು ಮೂಡಿಬರಲಿ ಎಂದು ಆಶಿಸುತ್ತಾ ಬಹಳಷ್ಟು ಹೊಸಬರಿಗೆ ಬರೆಯಲು ಸ್ಪೂರ್ತಿಯಾಗಿರುವ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

‍ಲೇಖಕರು Avadhi

September 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shyamala Madhav

    ಅಭಿನಂದನೆ, ಶ್ರುತೀ. ನಿಮ್ಮ Austeo Circoma That Changed My Life ಓದಿ ಮೆಚ್ಚಿದವಳು, ನಾನು. ನೀವು ಬಲ್ಲಿರಿ.
    ಈಗ ನಿಮ್ಮ ಈ ಕಾದಂಬರಿ ಬಗ್ಗೆ ತಿಳಿದು ತುಂಬಾ ಸಂತೋಷವಾಯ್ತು. ಸಾಧಕರಾದ ನಿಮಗೆ ಪ್ರೀತಿಯ ಅಭಿನಂದನೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: