‘ಚುಸ್..’ ಅಲ್ಲದ ಮಾಮೂಲಿ ನೀರು!! ಆಹಾ ಮರಣಾನಂದ!

ಬಿ ವಿ ಭಾರತಿ ಅವರ ʼಶೋವಾ ಎನ್ನುವಶೋಕಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

| ಕಳೆದ ಸಂಚಿಕೆಯಿಂದ |

ಆಸಕ್ತಿಕರವಾದ ಈ ವಿಷಯ ಹೇಳುತ್ತಲೇ ಆನ್ಯಾ ಯೂನಿವರ್ಸಿಟಿಯಲ್ಲಿ ಒಂದು ಸುತ್ತು ಹೊಡೆಸಿದಳು, ಚರ್ಚ್ ಒಂದರ ಒಳಗೆ ಕರೆದುಕೊಂಡು ಹೋದಳು, ಓಡ್ರಾ ನದಿಗೆ ಅಡ್ಡಲಾಗಿ ಕಟ್ಟಲ್ಪಟ್ಟ ಟುಮ್‌ಸ್ಕಿ ಸೇತುವೆ ತೋರಿಸಿದಳು. ನಾವು ಹೊರಟಿದ್ದೇ ತಡವಾದ್ದರಿಂದ ಹೆಚ್ಚು ಸಮಯವಿರಲಿಲ್ಲ.

ಬರುವ ದುಡ್ಡು ಬರುತ್ತದೆ, ಇರುವ ಸಮಯದಲ್ಲಿ ಎಷ್ಟಾಗುತ್ತದೋ ಅಷ್ಟು ತೋರಿಸುತ್ತೇನೆ ಅನ್ನಬಹುದಿತ್ತು ಅವಳು.

ಆದರೆ ಇದ್ದ ಸಮಯದಲ್ಲೇ ಆದಷ್ಟೂ ತೋರಿಸುವ ತವಕ ಆನ್ಯಾಳಿಗೆ. ಟುಮ್‌ಸ್ಕಿ ಸೇತುವೆಯ ಬಳಿ ಬಂದಾಗ ಮಾತ್ರ ಆ ಸೇತುವೆಯ ಕಂಬಿಗಳಿಗೆ ಹಾಕಿದ್ದ ಸಾವಿರಾರು ಬೀಗಗಳನ್ನು ನೋಡಿ ‘ಇಲ್ಲಿ ಇಳಿಸು ಆನ್ಯಾ, ಆಸಕ್ತಿಕರವಾಗಿ ಇದ್ದಂತಿದೆ’ ಎಂದಾಗ ಗಾಡಿ ಬದಿಗೆ ಹಾಕಿ ತಾನೂ ಇಳಿದು ಬಂದು ‘ಪ್ರೇಮಿಗಳು ಇದನ್ನು ಹಾಕುತ್ತಾರೆ, ತಮ್ಮ ಪ್ರೀತಿ ಅಜರಾಮರವಾಗಿರಲಿ ಎಂದು. ಆ ನಂತರ ಬೀಗದ ಕೈ ಅನ್ನು ನದಿಯೊಳಗೆ ಎಸೆದುಬಿಟ್ಟರೆ ತಮ್ಮ ಪ್ರೇಮ ಶಾಶ್ವತವಾಗಿ ಉಳಿಯುತ್ತದೆ ಅನ್ನುವ ನಂಬಿಕೆ’ ಎಂದು ವಿವರಿಸುವಾಗಲೇ ಅಲ್ಲಿಗೆ  ಎರಡು ಜೋಡಿಗಳು ಬಂದವು.

ಅವರಲ್ಲಿ ಒಂದು ಜೋಡಿ ಮುತ್ತಿಕ್ಕಿಕೊಳ್ಳಲು ಸಿದ್ದವಾಯಿತು, ಹಾಗೂ ಮತ್ತೊಂದು ಜೋಡಿ ಅದರ ಫೊಟೋ ತೆಗೆಯಲು ಸಿದ್ದವಾಯಿತು. ಮೊದಲೆಲ್ಲ ಇಂಥ ಘಟನೆಗಳು ಕಣ್ಣೆದುರು ನಡೆಯುತ್ತಿದ್ದಾಗ ಫೋಟೋ ತೆಗೆದರೆ ಉಗಿಯುತ್ತಾರೇನೋ ಎಂದು ಭಯ ಬೀಳುತ್ತಿದ್ದೆ. ಆದರೆ ಈಗೀಗ ಇಂಥ ಸುಂದರ ಸನ್ನಿವೇಶಗಳನ್ನು ಸೆರೆ ಹಿಡಿಯದೇ ಉಳಿಯುವುದು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ಈಗ ಒಂದು ಮಾರ್ಗ ಮಾಡಿಕೊಂಡಿದ್ದೇನೆ…

ಫೋಟೋ ತೆಗೆಯುವಾಗ ಅವರ ಕಡೆಗೆ ಸಂಪೂರ್ಣ ಫೋಕಸ್ ಮಾಡದೇ, ಸುತ್ತಲಿನ ಪರಿಸರವನ್ನೂ ಸ್ವಲ್ಪ ಸೇರಿಸಿ ತೆಗೆಯಬೇಕು ಮತ್ತು ತೆಗೆದಾದ ನಂತರ ಅವರ ಕಡೆಗೆ ಕಣ್ಣು ಕೂಡಿಸಲೂ ಬಾರದು ಎಂದು! ಹಾಗೆ ಕಣ್ಣು ಕೂಡಿಸಿದರೆ ಅವರಿಗೆ ಏಕಾಂತಕ್ಕೆ ಭಂಗ ಬಂದ ರೀತಿ ದೃಷ್ಟಿಸಿ ನೋಡುತ್ತಾರೆ. ಆದರೆ ತೆಗೆದ ಫೋಟೋ ಸರಿ ಇದೆಯೇ ಎನ್ನುವಂತೆ ತುಂಬ ಸೀರಿಯಸ್ಸಾಗಿ ಮೊಬೈಲ್ ಚೆಕ್ ಮಾಡುತ್ತಾ ಅಲ್ಲಿಂದ ನಡೆದು ಬಿಟ್ಟರೆ ಅವರಿಗೆ ಮತ್ತು ನನಗೆ ಇಬ್ಬರಿಗೂ ಮುಜುಗರವಾಗುವುದಿಲ್ಲ ಎಂಬುದು ಹೊಸದಾಗಿ ಕಂಡುಹಿಡಿದ ಪ್ಲ್ಯಾನ್.

ಗೊತ್ತು, ಗೊತ್ತು… ಇದೆಲ್ಲ ಸರಿಯಿಲ್ಲ ನೀನು ಮಾಡುವುದು ಎಂದು ಓದುತ್ತಿರುವ ಹಲವರಾದರೂ ನನ್ನನ್ನು ಬಯ್ದುಕೊಳ್ಳುತ್ತೀರ ಎಂದು. ಆದರೆ ನಾನೇನು ಮಾಡಲಿ, ಬದುಕಿನ ಇಂಥ ಬೆರಗುಗಳು ನನ್ನನ್ನು ತೀವ್ರವಾಗಿ ಸೆಳೆದುಬಿಡುತ್ತವೆ. ಬರೀ ಪ್ರೇಮವಷ್ಟನ್ನೇ ಫೋಟೋ ತೆಗೆಯಲು ನಿನ್ನದೊಂದು ನೆಪ ಎನ್ನದಿರಿ…

ರಷ್ಯಾದಲ್ಲಿ ಅಮ್ಮ ತನ್ನ ಪುಟ್ಟ ಮಗುವಿನೊಡನೆ ಮಳೆಯಲ್ಲಿ ತುಂಬಿ ಹರಿಯುತ್ತಿದ್ದ ಕಾಲುವೆಯೊಳಗೆ ಪೇಪರ್ ದೋಣಿ ಮಾಡಿ ತೇಲಿ ಬಿಟ್ಟಿದ್ದನ್ನೂ ಇಷ್ಟೇ ಪ್ರೀತಿಯಿಂದ ಸೆರೆ ಹಿಡಿಯುತ್ತೇನೆ. ಇವು ಅತ್ಯಂತ ಖಾಸಗಿ ಘಟನೆಗಳಾದರೂ ನಡೆದದ್ದು ಸಾರ್ವಜನಿಕ ಸ್ಥಳದಲ್ಲಿ. ಹಾಗಾಗಿ ಇಷ್ಟಾದರೂ ಮಾರ್ಜಿನ್ ಕೊಡಲೇ ಬೇಕಲ್ಲವೇ ಎನ್ನುವ ಅನುಕೂಲಸಿಂಧು ಸಮಜಾಯಿಷಿಯೊಂದು ನನ್ನ ಬಳಿ ಸದಾ ಸಿದ್ದವಿರುತ್ತದೆ!

ಈಗಲೂ ಅದೇ ರೀತಿಯ ಮಾರ್ಗವನ್ನು ಅನುಸರಿಸಿ ಅವರ ಫೋಟೋ ತೆಗೆದು ಮುಗ್ದಳಂತೆ ಅಲ್ಲಿಂದ ನಡೆಯುವಾಗ ಮನಸ್ಸಿನಲ್ಲಿ – ಪ್ರೇಮವನ್ನು ಉಳಿಸಿಕೊಳ್ಳಲು ಇಷ್ಟು ಸುಲಭವೇ! ಇಲ್ಲಿ ಬಂದು ಬೀಗ ಹಾಕಿ ಕೀಲಿ ಎಸೆದುಬಿಟ್ಟರೆ ಪ್ರೇಮ ಉಳಿದುಬಿಡುವಂತಿದ್ದರೆ ಎನ್ನಿಸಿ ನಗುಬಂತು. ಎದೆಯಲ್ಲಿನ ಪಸೆ ಆರಿಬಿಟ್ಟರೆ ಜಡಿದ ಬೀಗ ತುಕ್ಕು ಹಿಡಿಯುವಷ್ಟೇ ಸುಲಭಕ್ಕೆ ಪ್ರೇಮಕ್ಕೂ ತುಕ್ಕು ಹಿಡಿಯುತ್ತದಷ್ಟೇ…

ಬೆಳಕು ಮಂಕಾಗುತ್ತಿರುವುದು ಕಂಡು ಸಮಯ ನೋಡಿಕೊಂಡರೆ ಆಗಲೇ 7 ಘಂಟೆ! ಆಗಲೇ ನಮಗೆ ಸಮಯದ ಅರಿವಾಗಿದ್ದು. ಆನ್ಯಾಳೊಡನೆ ನಾವು ಸಿಟಿ ಟೂರ್ ಮಾತನಾಡಿದ್ದು ಒಂದೂವರೆ ಘಂಟೆಗಳಿಗಷ್ಟೇ. ಆದರೆ ಅದಾಗಲೇ ಎರಡು ಘಂಟೆ ಕಳೆದುಹೋಗಿದೆ! ಆದರೂ ಆನ್ಯಾ ಯಾವುದೇ ಗಡಿಬಿಡಿ ಇಲ್ಲದೇ ತೋರಿಸುತ್ತಲೇ ಇದ್ದುದು ಕಂಡು ನಮಗೇ ಒಂದು ರೀತಿಯ ಕಸಿವಿಸಿ ಆಯಿತು. ಇಷ್ಟರ ಜೊತೆಗೆ ಈಗ ಒಂದು ಕೆಲಸ ಬಾಕಿ ಉಳಿದಿತ್ತು.

ಮರುದಿನ ರೈಸ್ ಕಾಂಪ್ಲೆಕ್ಸ್ ನೋಡಲು ಸ್ವಲ್ಪ ಹೆಚ್ಚು ಸಮಯವಾಗುವಂತೆ, ಮೂರು ಘಂಟೆಗಿದ್ದ ನಮ್ಮ ಟ್ರೈನ್ ಟಿಕೆಟ್ ಅನ್ನು ಮುಂದೂಡಿ ಆದಷ್ಟು ತಡವಾಗಿ ಹೊರಡಲಾಗುತ್ತದಾ ಎಂದು ನೋಡಬೇಕಿತ್ತು. ಹಾಗಾಗಿ ರೈಲ್ವೇ ಸ್ಟೇಷನ್ನಿಗೆ ಹೋಗಬೇಕು ಎಂದೆವು. ಬೇರೆ ದೇಶಗಳಲ್ಲಿನ ಕಠಿಣ ರೂಲ್‌ಗಳಿಗೆ ಅಭ್ಯಾಸವಾಗಿದ್ದ ಮನಸ್ಸಿಗೆ ಅವಳೀಗ ‘ಇಲ್ಲ ಇಲ್ಲ ಅದು ನನ್ನ ಕೆಲಸದಲ್ಲಿ ಸೇರುವುದಿಲ್ಲ’ ಎನ್ನುತ್ತಾಳೆ ಎಂದುಕೊಂಡರೆ, ಅವಳು ಕೂಡಲೇ ಸ್ವಲ್ಪವೂ ಬೇಸರಿಸದೆ ‘ನಡೆಯಿರಿ, ಅಲ್ಲಿಗೇ ಕರೆದೊಯ್ಯುತ್ತೇನೆ’ ಎಂದಳು ನಗುತ್ತಾ.

ಸಮಯ 7.15. ವ್ರೋಟ್ಜ಼್ವಾ ಗ್ಲೌನಿ ಸ್ಟೇಷನ್ ಸುತ್ತ ಕತ್ತಲಾವರಿಸುತ್ತಿತ್ತು. ನಮ್ಮ ಮೈಸೂರು ರೈಲ್ವೇ ಸ್ಟೇಷನ್ ಥರ ಸುಂದರವಾಗಿದ್ದ ಆ ಸ್ಟೇಷನ್ ಸುಮಾರು 60 ವರ್ಷ ಹಳೆಯದ್ದಂತೆ, ಪೋಲ್ಯಾಂಡಿನ ಅತ್ಯಂತ ಹಳೆಯ ರೈಲ್ವೆ ಸ್ಟೇಷನ್ ಇದು ಎಂದು ಪರಿಚಯಿಸುತ್ತಲೇ ಪಾರ್ಕಿಂಗ್‌‌ನಲ್ಲಿ ನಿಲ್ಲಿಸಿದಳು ಆನ್ಯಾ. ಇಳಿಯಲು ಸಿದ್ದವಾಗುತ್ತಿದ್ದವರಿಗೆ ‘ಈಗ ಒಂದು ಕೆಲಸ ಮಾಡಿ, ಯಾರಾದರೂ ಇಬ್ಬರು ಬೇಗ ಒಳಗೆ ಹೋಗಿ ಕೆಲಸ ಮುಗಿಸಿ ಬನ್ನಿ.

ಇನ್ನಿಬ್ಬರೂ ನಡೆಯುವುದೇಕೆ? ಇಲ್ಲಿಯೇ ಕುಳಿತಿರಿ. ನಂತರ ನಿಮ್ಮನ್ನು ಹೋಟೆಲ್‌ಗೆ ಬಿಟ್ಟೇ ನಾನು ಹೋಗುತ್ತೇನೆ ಎಂದಳು’. ನಾವು ಈ ಜಗತ್ತಿನ ಎಂಟನೆಯ ಅದ್ಭುತದಂತೆ ಅವಳನ್ನೇ ನೋಡಿದೆವು. ಐದು ನಿಮಿಷ ತಡವಾಗಿದ್ದಕ್ಕೆ ನಮ್ಮನ್ನು ಬಿಟ್ಟು ಹೊರಟೇ ಹೋಗಿದ್ದ ರೋಮ್‌ನ ಗೈಡ್, ನಾವು ನಡೆಯಲು ಎರಡು ನಿಮಿಷ ತಡ ಮಾಡಿದ್ದಕ್ಕಾಗಿ ನಮ್ಮನ್ನು ಬಿಟ್ಟು ಸಾಗಿ ಹೋಗಿದ್ದ ಇಸ್ರೇಲ್‌ನ ಗೈಡ್ ಎಲ್ಲರೂ ನೆನಪಾದರು.

ಈ ರೀತಿ ಅತೀ ಒಳ್ಳೆಯವರು ಎದುರಾಗಿಬಿಟ್ಟರೆ ಅದು ಕನಸಾ ಅನ್ನಿಸಿಬಿಡುತ್ತದೆ ನನಗಂತೂ. ಹಾಗೆ ಹೇಳಿದ ಆನ್ಯಾಳಿಗೆ ಕೃತಜ್ಞತೆ ಸಲ್ಲಿಸಿ ನಾನು, ಅಪ್ಪ ಗಾಡಿಯಲ್ಲೇ ಉಳಿದೆವು. ನನ್ನ ಗಂಡ ಮತ್ತು ಮಗ ಸ್ಟೇಷನ್ ಒಳಗೆ ಓಡಿದರು. ಸುಮಾರು ಹದಿನೈದು ನಿಮಿಷದ ನಂತರ ನನ್ನ ಮಗ ಮತ್ತೆ ಬರುವುದು ಕಾಣಿಸಿತು. ‘ಇಷ್ಟು ಬೇಗ ಮುಗಿದು ಹೋಯಿತಾ’ ಎಂದಳು ಆನ್ಯಾ. ಅವನು ಅಲ್ಲಿ ತುಂಬ ರಷ್ ಇರುವುದರಿಂದ ಇನ್ನೂ ತಡವಾಗುತ್ತದೆಂದೂ, ಅವಳನ್ನು ಹಣ ಕೊಟ್ಟು ಕಳಿಸಿಬಿಡಿ ಎಂದು ಹೇಳಲು ಬಂದಿದ್ದನಷ್ಟೇ.

ಅವನು ಹಾಗೆ ಹೇಳಿದಾಗ ಅವಳು ‘ಹೊಸ ಜಾಗ. ಬಿಟ್ಟು ಹೇಗೆ ಹೋಗುವುದು, ನಾನು ಕಾಯುತ್ತೇನೆ, ತಡವಾಗಲಿ ಪರವಾಗಿಲ್ಲ’ ಎಂದಳು. ನಿಗದಿತ ಸಮಯಕ್ಕಿಂತ ಒಂದು ಘಂಟೆ ತಡವಾಗಿತ್ತು. ಹಾಗಾಗಿ ಅವಳನ್ನು ನಾವೇ ಬಲವಂತ ಮಾಡಿ ಹೊರಡಿಸಿದೆವು. ನಿಗದಿಯಾಗಿದ್ದ ಹಣ 200 ಜ಼್ಲಾಟಿ, ಅಂದರೆ ಸರಿಸುಮಾರು 4000 ರೂಪಾಯಿ.

ಇನ್ನೂ 50 ಜ಼್ಲಾಟಿ ಸೇರಿಸಿ 250 ಕೊಟ್ಟಾಗ ಕಣ್ಣು ಹೊಳೆಯಿಸುತ್ತ ಥ್ಯಾಂಕ್ಸ್ ಹೇಳಿದಳು. ಆ ನಂತರವೂ ಅವಳು ಅವಸರಿಸದೇ, ನಾವು ಹೊರಡಬೇಕಾದಾಗ ಟ್ಯಾಕ್ಸಿ ಹತ್ತಬೇಕಾದ ಜಾಗ ತೋರಿಸಿದ ನಂತರವೇ ಹೊರಟಳು. ಇಂಥ ಒಳ್ಳೆಯತವೇ ನಮ್ಮನ್ನು ಸಿನಿಕರಾಗದಿರುವಂತೆ ಸದಾ ಕಾಪಾಡುತ್ತದೆ…

ರೈಲ್ವೇ ಸ್ಟೇಷನ್ ಒಳಗೆ ಕೂಡಾ ತುಂಬ ವಿಶಿಷ್ಟವಾಗಿತ್ತು. ನನ್ನ ಗಂಡ ಕ್ಯೂನಲ್ಲಿ ನಿಂತಿದ್ದ. ನಾವು ಅಲ್ಲಿಯೇ ಇದ್ದ ಬೆಂಚ್‌ನ ಮೇಲೆ ಕುಳಿತಾಗ ಕಾಫಿ ಪ್ರಿಯರಾದ ನಮ್ಮ ಕಣ್ಣಿಗೆ ಮೊದಲು ಬಿದ್ದಿದ್ದೇ ಎದುರಿಗಿದ್ದ ಕಾಫಿ ಶಾಪ್. ಕೆಲಸ ಮುಗಿದ ನಂತರ ಅಲ್ಲಿ ಕಾಫಿ ಕುಡಿದು ಹೊರಡುವ ಮಹತ್ತರ ನಿರ್ಧಾರ ಕೈಗೊಂಡು ಕುಳಿತೆವು! ಟಿಕೆಟ್ ಮುಂದೂಡಲಾಗುವುದಿಲ್ಲ ಎಂಬ ಉತ್ತರ ಪಡೆಯಲು ನಿಧಾನವಾಗಿ ಸರಿಯುತ್ತಿದ್ದ ಕ್ಯೂನಲ್ಲಿ ನನ್ನ ಮಗ ಮತ್ತು ಗಂಡ ಅರ್ಧ ಘಂಟೆ ನಿಂತಿದ್ದಾಯಿತು.

ಮಾರನೆಯ ದಿನ ಮಧ್ಯಾಹ್ನ ಎರಡೂವರೆಗೆ ರೈಲ್ವೇ ನಿಲ್ದಾಣದಲ್ಲಿ ಇರಲೇಬೇಕಿತ್ತು. ಆಗಲಿ ಬಿಡು, ರೈಸ್ ಕಾಂಪ್ಲೆಕ್ಸ್‌ನಲ್ಲಿ ಸಿಕ್ಕಷ್ಟನ್ನೇ ನೋಡಿ ಬರೋಣ ಎಂದು ಕಾಫಿಗೆ ಬರಗೆಟ್ಟು ಒಳ ನುಗ್ಗಿದೆವು. ಅಲ್ಲೆಲ್ಲ ಬ್ಲ್ಯಾಕ್ ಕಾಫಿ ಹೆಚ್ಚು ಕುಡಿಯುತ್ತಾರೆ ಎಂದು ಗೊತ್ತಿದ್ದರಿಂದ ಮಗ ಮೂರು ಮೂರು ಸಲ ‘ಕಾಫಿ ವಿತ್ ಮಿಲ್ಕ್, ವಿಥ್ ಶುಗರ್’ ಎಂದು ಗಿಣಿಪಾಠದಂತೆ ಒಪ್ಪಿಸಿಯೇ ಒಪ್ಪಿಸಿದ. ವೇಟ್ರೆಸ್ ಅರ್ಥವಾದಂತೆ ತಲೆ ಆಡಿಸಿದಳು.

ಐದು ನಿಮಿಷದ ನಂತರ ನಮ್ಮ ಟೋಕನ್ ನಂಬರ್ ಕೂಗಿದಾಗ ಹೋಗಿ ನೋಡಿದರೆ ಮುಕ್ಕಾಲು ಬೆರಳುದ್ದದ ಪಿಂಗಾಣಿ ಕಪ್‌ನಲ್ಲಿ ಎರಡು ಗುಟುಕು ಡಿಕಾಕ್ಷನ್ ಇತ್ತು, ಹಾಗೂ ಮತ್ತೊಂದು ಪುಟ್ಟ ಜಾರ್‌ನಲ್ಲಿ ಕೊರೆಯುವ ಹಾಲು! ಆ ಮೂರು ಸ್ಪೂನ್ ಡಿಕಾಕ್ಷನ್‌ಗೆ ಎರಡು ಸ್ಪೂನ್ ಕೊರೆವ ಹಾಲು ಸೇರಿಸಿ, ಒಂದು ಚಿಟಿಕೆ ಸಕ್ಕರೆ ಬೆರೆಸಿ ತೀರ್ಥದಂತೆ ಅದನ್ನು ಸೇವಿಸುವುದರೊಂದಿಗೆ ಕಾಫಿಯ ಆಟವು ಮುಗಿದಿತ್ತು!

ಹೊರಗೆ ಬಂದರೆ ತುಂಬ ಟ್ಯಾಕ್ಸಿಗಳು ನಿಂತಿದ್ದರೂ ಎಲ್ಲವೂ ಬುಕ್ ಆಗಿದ್ದವು. ಆಗ ಮಗನಿಗೆ ಆಗಲೇ ನಮ್ಮ Travel buddy ನೆನಪಾಗಿದ್ದು! ಅದರಲ್ಲಿ ಊಬರ್ ಆಪ್ ಇತ್ತು. ಆಹಾ ಎಂದು ಕುಣಿದಾಡುತ್ತ ಕ್ಯಾಬ್ ಬುಕ್ ಮಾಡಲು ಹೋದರೆ, ಅದಕ್ಕೆ ಕಾರ್ಡ್ ಅಟ್ಯಾಚ್ ಆಗಬೇಕು ಎಂಬ ಸೂಚನೆ ಬಂದಿತು. ಅದನ್ನೆಲ್ಲ ಮಾಡಿಕೊಂಡು ಕೂರಲು ತಾಳ್ಮೆ ಇಲ್ಲದ್ದರಿಂದ ನಮ್ಮ ಹೊಟೆಲ್‌ಗೆ ಫೋನ್ ಮಾಡಿ ಟ್ಯಾಕ್ಸಿ ಕಳಿಸಲು ಕೇಳಿಕೊಂಡು ಅಲ್ಲಿಯೇ ಹಾಕಿದ್ದ ಕಲ್ಲು ಬೆಂಚುಗಳ ಮೇಲೆ ಉಸ್ಸೋ ಎಂದು ಕುಳಿತು ಕಾಲು ಚಾಚಿದೆವು.

ರೈಲ್ವೇ ಸ್ಟೇಷನ್ ರಸ್ತೆಯೆಂದರೆ ಅದೆಷ್ಟು ಬಿಜ಼ಿ ಎಂದು ನೀವು ಊಹಿಸಿಕೊಳ್ಳಬಹುದು. ರಸ್ತೆಯ ತುಂಬ ಗಾಡಿಗಳು ಬರುತ್ತಿದ್ದವು, ಹೋಗುತ್ತಿದ್ದವು. ನಾವು ಅದನ್ನೇ ನೋಡುತ್ತ ಕುಳಿತೆವು. ತುಂಬ ಹೊತ್ತು ಕಾದು ಕಾದು ಸುಸ್ತಾಗಿ, ಹೋಟೆಲ್‌ಗೆ ರಾಶಿ ಫೋನ್ ಕರೆಗಳನ್ನು ಮಾಡಿದ ನಂತರ ಟ್ಯಾಕ್ಸಿ ಕೊನೆಗೆ ಅಂತೂ ಬಂದಿತು. ಪ್ರಯಾಣದ ಆಯಾಸಕ್ಕೆ ಬಾತುಕೊಂಡಿದ್ದ ಕಾಲುಗಳನ್ನು ಎತ್ತಿ ಟ್ಯಾಕ್ಸಿಯೊಳಗೆ ಕುಕ್ಕರಿಸಿದಾಗ ಮಗ ‘ಇಡೀ ಊರು ಸೂಪರಾಗಿದೆ.

ಆದರೆ ಏನೋ ಮಿಸ್ಸಿಂಗ್ ಅನ್ನಿಸಲಿಲ್ವಾ ನಿನಗೆ?’ ಎಂದ. ನಿಜಕ್ಕೂ ಹೇಳಬೇಕೆಂದರೆ ನನಗೂ ತುಂಬ ಹೊತ್ತಿನಿಂದ ಹಾಗೆಯೇ ಅನ್ನಿಸುತ್ತಿತ್ತು. ‘ಹೂ ಕಣೋ… ಏನಿರಬಹುದು…’ ಎಂದು ಯೋಚಿಸುವುದರಲ್ಲೇ ಕೇವಲ 2 ಕಿಲೋಮೀಟರ್ ದೂರವಿದ್ದ ನಮ್ಮ ಹೋಟೆಲ್ ತಲುಪಿ ಆಗಿತ್ತು. ಮರುದಿನ ಬೆಳಿಗ್ಗೆ ಎದ್ದು 7.30ಕ್ಕೆ ಸ್ನಾನ, ತಿಂಡಿ ಎಲ್ಲ ಮುಗಿಸಿ ಹೊರಟು 110 ಕಿಲೋಮೀಟರ್ ಪ್ರಯಾಣ ಮಾಡಿ, ರೈಸ್ ಕಾಂಪ್ಲೆಕ್ಸ್ ನೋಡಿ ಮಧ್ಯಾಹ್ನ ಎರಡೂವರೆಗೆ ರೈಲ್ವೆ ನಿಲ್ದಾಣ ಸೇರಬೇಕಿತ್ತು. ಇದೆಲ್ಲ ಮಾಡಬೇಕೆಂದರೆ ಈಗ ಕಣ್ತುಂಬ ನಿದ್ರಿಸಬೇಕಿತ್ತು.

ಆದರೆ ಇಲ್ಲಿಯವರೆಗೆ ನಾವು ಮರೆತಿದ್ದ ಅತ್ಯಂತ ಘೋರ ಸಮಸ್ಯೆಯೊಂದು ಇನ್ನೂ ಬಗೆಹರಿಯದೇ ಉಳಿದಿತ್ತು, ಕುಡಿಯುವ ನೀರಿನದ್ದು! ಇಂಟರ್‌ನೆಟ್‌ನಲ್ಲಿ ನೋಡಿದರೆ ಹತ್ತಿರದಲ್ಲಿಯೇ ಒಂದು ಸೂಪರ್ ಮಾರ್ಕೆಟ್ ಇರುವುದು ತಿಳಿಯಿತು. ಅಬ್ಬ ಬದುಕಿದೆಯಾ ಬಡಜೀವವೇ ಎಂದು ಅಲ್ಲಿಗೆ ಓಡಿದೆವು.

ಕೌಂಟರ್‌ನಲ್ಲಿರುವವರಿಗೆ ಹೇಳೇ ಹೇಳಿದೆವು ಹೇಳೇ ಹೇಳಿದೆವು ನಮ್ಮ ನೀರಿನ ಸಮಸ್ಯೆ. ಸೋಡಾ ಅಲ್ಲ Aerated ನೀರಲ್ಲ ನೋ ಫ಼ಿಜ಼್ ಬರೀ ನೀರು… ಬರೀ ನೀರು… ಉಹು! ಎಷ್ಟೇ ಹೊಡಕೊಂಡರೂ ಅವರಿಗೆ ನಮ್ಮ ಸಮಸ್ಯೆ ಅರ್ಥವಾಗುತ್ತಿಲ್ಲ.

ಹೇಗೆ ತಿಳಿಸಿ ಹೇಳುವುದು ಎಂದು ಮಗ ಮೊಬೈಲ್‌ನಲ್ಲಿ ಟ್ರಾನ್ಸ್‌ಲೇಟರ್‌ ಹುಡುಕಲು ಶುರು ಮಾಡುವುದರಲ್ಲೇ ಅಲ್ಲಿಗೆ ಏಳೆಂಟು ಮಕ್ಕಳ ಒಂದು ಗುಂಪು ಬಂದಿತು. ಬಂದವರು ಇದ್ದಬದ್ದ ಬುದ್ದಿಯೆಲ್ಲ ಖರ್ಚು ಮಾಡುತ್ತಿದ್ದ ನಮ್ಮನ್ನು ಕಂಡು ‘ನೋ ಗ್ಯಾಸ್ ವಾಟರ್?’ ಎಂದರು. ನಮ್ಮ ತಲೆಯಲ್ಲಿ ಆಗ ಟ್ಯೂಬ್ ಲೈಟ್ ಹತ್ತಿದಂತಾಯಿತು… ಯೂರೇಕಾ! ಚುಸ್ ನೀರನ್ನು ಇವರು ಗ್ಯಾಸ್ ನೀರು ಅನ್ನುತ್ತಾರೆ!

ಖುಷಿಯಲ್ಲಿ ಯೆಸ್ ಯೆಸ್ ಎಂದಕೂಡಲೇ ನಮ್ಮನ್ನು ನೋ ಗ್ಯಾಸ್ ನೀರಿದ್ದ ಜಾಗಕ್ಕೆ ಕರೆದೊಯ್ದು ತೋರಿಸಿದಾಗ ತಲೆಯ ಹಿಂದೆ ಪ್ರಭಾವಳಿ ಇರುವ ದೇವರಂತೆ ಕಂಡರು ಆ ಮಕ್ಕಳು! ಇಬ್ಬರೂ ಹೊರಲಾಗುವಷ್ಟು ನೀರಿನ ಬಾಟಲ್‌ಗಳನ್ನು ಹೊತ್ತು ತರುವಾಗಲೂ ‘ಮಗಾ ಇದೂ ಅದೇ ಚುಸ್ ನೀರಾದರೆ ಏನ್ಲಾ ಮಾಡೋದು’ ಅಂದಿತು ಈ ಡೌಟಮ್ಮ! ರೂಮಿಗೆ ಬಂದು ಮುಚ್ಚಳ ತೆರೆಯುವವರೆಗೂ ಬಾಂಬ್ ನಿಷ್ಕ್ರಿಯ ಪಡೆಯ ಥರ ಎದೆ ಡಬಡಬ ಅನ್ನುತ್ತಿತ್ತು… ತೆರೆದೆವು… ಸದ್ದಿಲ್ಲ! ಚುಸ್ ಅಲ್ಲದ ಮಾಮೂಲಿ ನೀರು!! ಆಹಾ ಮರಣಾನಂದ! ಹೊಟ್ಟೆ ತುಂಬ ನೀರು ಕುಡಿದು ಧೊಪ್ಪೆಂದು ಬಿದ್ದಿದ್ದೊಂದೇ ಗೊತ್ತು, ಗಾಢ ನಿದ್ದೆ…

ಮುಂದಿನ ವಾರಕ್ಕೆ..

‍ಲೇಖಕರು ಬಿ ವಿ ಭಾರತಿ

September 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: