ಧರ್ಮಕ್ಕೆ ಎಂದಿಗೂ ಸಿಗದೆ ಮುಕ್ತವಾಗಿ ಉಳಿದೆ..

ಮರಡಿ ಬೀಜದ ಹೋಳಿಗೆಯು; ತರಾವರಿ ಹಣ್ಣುಗಳು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿಮಣ್ಣ ಒಡನಾಟರಂಗಭೂಮಿಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಜೀವ ಸಂಕುಲದ ಆತ್ಮ ಅಡವಿ. ತಿರೆಯ ಉಳಿವು ತನ್ನ ಹೋರಾಟಕ್ಕೆ ಅಡವಿಯನ್ನೇ ಅಂತಃಶಕ್ತಿ ಯನ್ನಾಗಿ ನಂಬಿದೆ. ನಮ್ಮ ಊರಿನಲ್ಲಿ ಅಡವಿಯನ್ನು ಹಡೆದಮ್ಮನೆಂದೇ ಕರೆಯುತ್ತಾರೆ. ನನ್ನ ಬಾಲ್ಯ ಶುರುವಾಗಿದ್ದೇ ಗಿಡ ಮರ ಬಳ್ಳಿಗಳಲ್ಲಿ ಲೀನವಾದ ದೊಡ್ಡ ದೊಡ್ಡ ಗುಡ್ಡದ ಆಕಾರಗಳನ್ನು ಒಳಗುಮಾಡಿಕೊಳ್ಳುತ್ತಾ. ಗುಡ್ಡದಿಂದ ನೇರ ಇಳಿದದ್ದು ನಮ್ಮ ಊರಿಗೆ ಅನಂತಗಳ ಅನುಭೂತಿಯನ್ನು ಕೊಟ್ಟ ‘ಗುಡ್ಲುಕುಂಟೆ ಗಿಡ’ಕ್ಕೆ. (ಗಿಡ ಅಂದರೆ ನಮ್ಮ ಕಡೆ ಕಾಡಿಗೆ ಹೇಳುತ್ತೇವೆ).

ಇದಕ್ಕೆ ರಾಮದೇವರ ಗಿಡವೆಂಬ ಇನ್ನೊಂದು ಹೆಸರಿದೆ. ಇಲ್ಲಿ ಕಂಬ್ರದ ಮರಗಳು ಅಗಣಿತ. ನನ್ನೂರಿನ ನೆತ್ತಿಯಂತಿರುವ ಜೀವಮಿಡಿತವಾದ ಈ  ಕಾಡಿನಲ್ಲಿ ಯಾವಾಗ ರಾಮಪ್ಪ, ಸೀತಮ್ಮ, ಲಕ್ಷ್ಮಣ, ಕರಿಯ ಕಲ್ಲಿನ ಮೇಲೆ ಕೆತ್ತನೆಯ ಆಕೃತಿಗಳಾಗಿ ಸಿಕ್ಕರೋ? ಅವತ್ತಿನಿಂದ ರಾಮಪ್ಪ ಸೀತೆ ಲಕ್ಷ್ಮಣರನ್ನು ಬಿಟ್ಟು ಈ ವಿಪಿನದ ಒಡೆಯನಾಗಿ ಸುತ್ತಮುತ್ತಲಿನ ಹಳ್ಳಿಗರಿಗೆಲ್ಲಾ ದನ ಕಳೆದರೆ ಹುಡುಕಿಕೊಡುವ ದೇವರಾಗಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಮಕ್ಕಳಿಲ್ಲದ ಅಮ್ಮಂದಿರ ಅಳಲಿಗೆ ಮಕ್ಕಳಾಗುವ ವರ ಕೊಡುವ ಮಹಿಮೆಗೂ ಇವನೇ ಪಾತ್ರದಾರಿ.

ಆಯಿತ್ವಾರ ನೀರೊಯ್ಕಂಡು ಗುಡ್ಲುಕುಂಟೆ ರಾಮಪ್ಪ ಇರದಿಕ್ಕಿಗೆ ಕೈಮುಗಿದು ನಿನ್ನಂತ ಗಂಡು ಹುಡುಗನ್ನ ಕೊಟ್ರೆ ಹೋಳ್ಗೆ ತುಪ್ದಾರಾದ್ನೆ ಮಾಡ್ತೀನಿ ಅಂತ ಕೈಮುಕ್ಕಳ್ರೆ ಅನ್ನೋ ಹಿರಿಯರ ಆದೇಶವಿರುತ್ತೆ. ಅಚ್ಚರಿಯೆಂಬಂತೆ ಹರಕೆ ಫಲಿಸಿ ಕೆಲವೊಮ್ಮೆ ಗಂಡುಮಕ್ಕಳೇ ಹುಟ್ಟಿ ಕಾಡೊಳಗಿನ ರಾಮಪ್ಪನ ಗುಡಿಯ ಮುಂದೆ ಗಂಟೆಯ ದನಿ ಚಿಮ್ಮಿ ಮಹಾಮಂಗಳಾರತಿಯು ನಡೆದು ಅಲ್ಲಿಯೇ ಇರುವ ಲಕ್ಷ್ಮಣನ ಕೆರೆಯ ಮಗ್ಗುಲಲ್ಲೇ ಮುಗಿಲಿಗೆ ಮುಟ್ಟುವಂತೆ ಬೆಳೆದ ತಾರೆಮರಗಳ ಅಡಿಯಲ್ಲಿ ಹೋಳಿಗೆಯ ಅಡುಗೆ ಆಗಿಯೇ ಬಿಡುತ್ತದೆ.

ಇಲ್ಲಿ ಪಾಂಡವರ ಹಸೆಕಲ್ಲೆಂದು ಗುರುತಿಸಿಕೊಂಡ ದೊಡ್ಡಗುಂಡುಕಲ್ಲು ಅಗಲನೆಯ ಹಸೆಕಲ್ಲು ಇವೆ. ಪಕ್ಕದಲ್ಲಿ ದಡಿಕಲ್ಲುಗಳನ್ನಿಟ್ಟು ಹೂಡಿದ ಒಲೆಯ ಮೇಲೆ ಬೇಳೆಕಾಳು ಬೆಲ್ಲ ಕಾಯಿ ಸೇರಿಸಿಕೊಂಡು ಬೆಂದು ಹಸೆಕಲ್ಲಿನಲ್ಲಿ ಅರೆಸಿಕೊಂಡು ರಾಮಪ್ಪನಿಗೆ ಹೋಳಿಗೆ ತುಪ್ಪದ ಹರಕೆಯ ಆರಾಧನೆ ಸಲ್ಲುತ್ತದೆ. ದನಗಳು ಕಳೆದರೂ ನಮ್ಮ ಭಾಗದಲ್ಲಿ ರಾಮಪ್ಪನಿಗೆ ದನ ಸಿಗಲೆಂದು ಇದೇ ಹರಕೆ ಹೊರುತ್ತಾರೆ.

ಗಂಡು ಕೊಟ್ಟನೆಂಬ ಕಂದಾಚಾರ ಮಾತ್ರ ಮುಗುದವಾಗಿ ಒಳಿತಿನ ತೆಕ್ಕೆಯಲ್ಲಿ ಜೋಗುಳದಂತಾ ತಿಳಿ ನಂಬಿಕೆಯಾಗಿ ಸುತ್ತಲಿನ ಊರು ಊರಲ್ಲೂ ಹರಿದಾಡುವುದನ್ನು ಯಾವ ವೈಚಾರಿಕತೆಯ ಪ್ರಶ್ನೆಗಳಿಗೂ ಬಲಿ ಕೊಡಲಾಗದಿರುವುದು ಒಂದು ತರದ ಬೆರಗಿನ ಒಡಲಾಗಿದೆ.

ಈ ಕಾನನದ ಗರ್ಭದಲ್ಲಿ ಹಣ್ಣಾಗಿ ಕಟ್ಟಕಡೆಯ ಅಪೂರ್ವ ರುಚಿ ಹೊತ್ತ ಮರಡಿ ಕಾಯಿಗಳು ಫೆಬ್ರವರಿ ಮಾಸದ ಅಂತ್ಯದ ವೇಳೆಗೆ ಕೆಂಪಗೆ ಮಾಗಿದ ಹಣ್ಣಾಗಿ ಅಡವಿಯ ತುಂಬಾ ಚೀವ್ಗುಡುವ ಹಕ್ಕಿಗಳ ಕೊಕ್ಕಿಗೆ ಸಿಕ್ಕು ಮರದ ಅಡಿಯಲ್ಲಿ ಚೀಪಿ ಬಿದ್ದ ಬೀಜಗಳನ್ನೇ ನಾವು ಬೆಳಗಿನಿಂದ ಬೈಗಿನವರೆಗೂ ಆಯುತ್ತಿದ್ದೆವು.

ಮಲ್ಡಿಬೀಜ  ಆಯಕೆ ನಮ್ಮ ಮನೆಗಳಲ್ಲಿ ಅದೆಷ್ಟು ಸಿದ್ದತೆ ಆಗ್ತಾಯಿತ್ತು ಅಂದ್ರೆ ವಾರಕ್ಕೆ ಮೊದ್ಲೆ ಮಾತುಕತೆ ಇಂತಾ ದಿನ ಹೋಗ್ಬೇಕು ಅಂತ. ಅಗಲನೆಯ ಅಡಕೆ ಪಟ್ಟೆ ಅನ್ನ ಕಡ್ಲೇಬೀಜದ ಚಟ್ನಿ ಕಟ್ಟಕೆ. ನೀರಿಗೆ ಒಂದು ಗಡಿಗೆ. ನಸುಕಿಗೆ ಮನೆಬಿಡ್ತಾಇದ್ವಿ. ಹೊತ್ತು ಉಟ್ಟದ್ರೊಳ್ಗೆ ಗಿಡಸರ‍್ಬೇಕು. ದೊಡ್ಡೆಜ್ಜೆ ಮೇಲೆ ನಡೀರಿ ನಡೀರಿ ಸರಸರ ಅನ್ನೋರು ದೊಡ್ಡಪ್ಪ ದೊಡ್ಡಮ್ಮ ಅವರ ಸಂಗಡ ಬಂದ ಊರಿನ ಅನೇಕ ಮನೆಯವರು.

ದೊಡ್ಡಪ್ಪನ ಜೊತೆ ಇಲ್ಲಿ ಅಲೆದು ಅಲೆದು ಮರಮರಗಳನ್ನು ಮುಟ್ಟಿ ಗಿಡಗಳ ಸಂದಿಯಲ್ಲಿ ಜಾಗ ಮಾಡಿಕೊಂಡು ಹರಿಯುವ ಸಣ್ಣಸಣ್ಣ ಹಳ್ಳಗಳ ನೀರನ್ನು ಬೊಗಸೆಗಿಳಿಸಿ ಕುಡಿದು ಕುಪ್ಪಳಿಸಿ ಹಿಗ್ಗಿ ಹೋದ ದಿನಗಳು ಎಣಿಕೆ ಮೀರಿವೆ. ಕಂಡು ಕೇಳರಿಯದ ಅನನ್ಯ ಸವಿಯ ಹಣ್ಣುಗಳನ್ನು ನಾನು ಇಲ್ಲಿಯೇ ತಿಂದದ್ದು.

ಕಾಡು ಬಿಕ್ಕೆ, ಮರಡಿ, ನೆಗ್ರೆ, ದ್ಯಾದಾರೆ, ಬೆಳ್ದೆ, ತೂಬ್ರೆ, ಕಾರೆ ಹೀಗೆ ಹಲವು ಬಿನ್ನ ರುಚಿಗಳ ಹಣ್ಣಿನ ಸ್ವಾದ ಸವಿಯಲು ಈಗಲೂ ಬನವನ್ನೇ ಧ್ಯಾನಿಸುವುದು. ಇಲ್ಲಿ ಸಿಗುವ ಮರಡಿ ಹಣ್ಣನ್ನು ಪಲ್ಲಗಟ್ಟಲೇ ಆಯ್ದು ಸಂಗ್ರಹಿಸುತ್ತಿದ್ದೆವು. ಬೀಜ ಆಯಲು ಹೋಗಿ ಬಂದ ಮೇಲೆ ಎಷ್ಟು ಬೀಜ ಕೂಡ್ಹಾಕಿದ್ರಿ ಅಂತ ಬರದ ಹಲವು ಮನೆಯವರು ವಿಚಾರಿಸಿಕೊಳ್ಳೊರು.

ಈ ಬೀಜವನ್ನು ನೆನೆಸಿ ಬೀಸುವ ಕಲ್ಲಿನಲ್ಲಿ ಒಡಕು ಮಾಡಿ ಪಪ್ಪು ತೆಗೆಯುವುದು ಸುಲಭದ ಕೆಲಸವಲ್ಲ. ಗಟ್ಟಿ ಒಡಕು ಪಪ್ಪಿನ ಜೊತೆ ಉಳಿಯದಂತೆ ಆಯ್ದು ಮಲ್ಡಿ ಬೀಜದ ಹೋಳಿಗೆ ತಯಾರಿಸಲು ಎರಡು ಮೂರು ದಿನಗಳೇ ಹಿಡಿಯುತ್ತಿತ್ತು. ವಿಪರೀತ ಏಕಾಗ್ರತೆ, ಶ್ರಮ ಎರಡನ್ನೂ ಕೇಳುವ ಈ ಹೋಳಿಗೆ ಕೆಲಸ ನಮ್ಮ ಮನೆಗಳಲ್ಲಿ ಅಪರೂಪದ ಸಡಗರಕ್ಕೆ ನಾಂದಿ. ಹೋಳಿಗೆ ಸಿದ್ದವಾಗಿ ಸಿಬ್ಬಲಿಗೆ ಹರಡಿಕೊಂಡು ಬಿಳಿಯ ಪಾವಡದ ಬಟ್ಟೆ ಹೊತ್ತು ಜಂತೆಗೆ ನೇತು ಬೀಳುವವರೆಗೆ ಮನೆಮಂದಿಯೆಲ್ಲಾ ಶ್ರಮಿಸಲೇ ಬೇಕು.

ಅಬ್ಬಾ! ಬದುಕಿನಲ್ಲಿ ಏನು ತಿಂದಿಲ್ಲಾ ಅಂದ್ರು ಸರಿನೇ, ಒಮ್ಮೆ ಈ ಮರಡಿ ಪಪ್ಪಿನ ಹೋಳಿಗೆಯನ್ನು ಸವಿಯಲೇ ಬೇಕು. ಮರಡಿ ಹಣ್ಣು ಆಕ್ಲಾಗುವವರೆಗೂ ಆಯುತ್ತಿದ್ದೆವು. ನಮ್ಮ ಮನೆಯ ಅಟ್ಟ ಸೇರುವ ಇವು ಭಾನುವಾರ ಬಂತೆಂದರೆ ಎರಡು ಮೂರು ಬೊಗಸೆ ಲಂಗದಲ್ಲಿ ಕಟ್ಟಿಕೊಂಡು, ದೊಡ್ಡಳ್ಳ ಉದಾರವಾಗಿ ಒದಗಿಸಿದ ಅಗಲನೆಯ ಬಚ್ಚಗಳನ್ನು ತಂದು ದೊಡ್ಡ ಜಗಲಿಯಲ್ಲಿ ಮನೆಮಕ್ಕಳೆಲ್ಲರೂ ಎದುರುಬದುರು ಕುಳಿತು ಮಲ್ಡಿಬೀಜ ಕುಟ್ಟಿಕುಟ್ಟಿ ಪಪ್ಪು ಆಯ್ದು ತಿನ್ನುವ ಸಿರಿಗೆ ಹೆಸರಿಟ್ಟರೆ ತಪ್ಪಾಗುತ್ತದೆ.

ಇದು ಸಿರಿಯಷ್ಟೆ. ಹೊತ್ತುಮುಣುಗ್ತು ಹಟ್ಟಿಬಾಗ್ಲು ಗುಡ್ಸಲ್ವೇನ್ರೆ ಏಸ್ ತಿಂದ್ರೂ ಬರ ಅರಿಯಲ್ಲ ನಿಮಗೆ ಎದ್ದಾಳ್ರಿ ಮ್ಯಾಲೆ ಅಂತ ದೊಣ್ಣೆ ತರ‍್ಸೋರು ದೊಡ್ಡರು ಕೆಲವೊಮ್ಮೆ. ಬೇಸಿಗೆಯ ಆರಂಭದ ದಿನಗಳಲ್ಲಿ ಸಂಗ್ರಹಿಸಿದ ಈ ಮರಡಿ ಬೀಜ ವರ್ಷ ಒಂಭತ್ತು ಕಾಲವು ಹಜಾರದಲ್ಲಿ ನಮಗೆ ಜೊತೆಯಾಗಿ ನಾಲಿಗೆ ಸವಿ ಕಾಣುತ್ತಿದ್ದದು ಬಚ್ಚಾ, ಮರಡಿ ಬೀಜ, ಹಜಾರ ನಮ್ಮ ಮಡ್ಲು ಎಲ್ಲವೂ ಜೊತಯಾಗಿ ನಮ್ಮ ಆನಂದಗಳನ್ನು ಕಾದಿವೆ.

ಇತ್ತೀಚಿನ ದಿನಗಳಲ್ಲಿ ಕಾನೂನಿನ ಹೆಸರಲ್ಲಿ ಫಾರೆಸ್ಟ್ ಗಾರ್ಡುಗಳು ಜನರನ್ನು ಆಯಲು ಬಿಡುತ್ತಿಲ್ಲ. ಆದರೂ ಏನೇನೋ ಕಿತಾಪತಿ ಮಾಡಿ ಜನರು ಅಷ್ಟಿಷ್ಟು ಆದು ತಂದು ಮಾರುವ ಕೆಲಸವು ನಡೆಯುತ್ತಿದೆ.

ದೊಡ್ಡಪ್ಪ ಕಾಡುಬಿಕ್ಕೆ ಹಣ್ಣನ್ನು ವಲ್ಲಿಬಟ್ಟೆಯ ತುಂಬ ಕಟ್ಟಿ ತರೋರು. ಈ ಬಿಕ್ಕೆಹಣ್ಣು ಕೂಡ ಸಲೀಸಾಗಿ ತಿನ್ನಲು ಬರುವುದಿಲ್ಲ. ನಾವು ಕಲ್ಲಿನಲ್ಲಿ ಒಡೆದು ಎರಡು ಹೋಳು ಆದ ಮೇಲೆ ಪುಟ್ಟ ಹೋಳುಗಳಲ್ಲಿ ಇರುವ ಮೆದುವಾದ ಬೆಣ್ಣೆಯಂತ ತಿರುಳನ್ನು ಬೆರಳಲ್ಲಿ ತೆಗೆದು ತಿನ್ನುತ್ತಿದ್ದೆವು.

ನಿಜಕ್ಕೂ ಈ ರುಚಿಗಳ ವಿವರಣೆ ಅಸಾಧ್ಯ. ತಿಂದೇ ಅನುಭವಿಸಬೇಕು ಈ ಸವಿಯ ಅಗಾಧತೆಯ ಅಮೃತವನ್ನು ಸುತ್ತಮುತ್ತಲಿನ ಹಳ್ಳಿಯ ಮಕ್ಕಳೆಲ್ಲರೂ ಹಣ್ಣಿನ ಕಾಲ ತೀರುವವರೆಗೂ ತಿಂದಿದ್ದೇವೆ. ಗಿಡದ ಕಡೆಗೆ ಹೋಗುವ ದನ ಕುರಿಯವರೆಲ್ಲಾ ತಮ್ಮ ವಲ್ಲಿಬಟ್ಟೆಯನ್ನು ಈ ಹಣ್ಣಿಗಾಗಿ ಮೀಸಲಿಡುತ್ತಿದ್ದುದು ಸತ್ಯ.

ನಾವೆಲ್ಲಾ ಅಕ್ಕಪಕ್ಕದವರಿಗೆ ನಮ್ಮನೇಲಿ ಬಿಕ್ಕೇಹಣ್ಣಿನ ಗುಡ್ಡವೇ ಬಿದ್ದಿದೆ ಬಾಯಿಗೆ ಬಿಡುವೇ ಸಿಗೊಲ್ಲ ಎನ್ನುವಂತೆ ಹೇಳಿಕೊಳ್ಳುತ್ತಿದ್ದೆವು. ಇವುಗಳ ಜೊತೆಗೆ ಬೆಳ್ದಣ್ಣಂತು ಏರಬಹುದಾದಷ್ಟು ಸಿಗವು. ಬೆಲ್ಲ ಕುಟ್ಟಿ ಬೆಳ್ದಣ್ಣಿನ ಶರಬತ್ತು ಕುಡಿಯುತ್ತಿದ್ದುದೆ ಹೆಚ್ಚು. ಊರ ಮಗ್ಗುಲಲ್ಲಿ ಊರಿಂದ ಹೊರಗಿನ ಬನದಲ್ಲಿ ಹೇರಳವಾಗಿ ಸಿಗುತ್ತಿದ್ದ ಈ ಹಣ್ಣಿಗೆ ಮಕ್ಕಳೆಲ್ಲಾ ಜೊತೆಯಾಗಿ ಹೋಗ್ತಿದ್ವಿ. ಈ ಅನುಭವಗಳ ಸಾಂದ್ರತೆಯೇ ನಮಗಿನ್ನು ಸಂಭ್ರಮಗಳ ಕಾಲವನ್ನು ಕಾಪಿಟ್ಟುಕೊಳ್ಳಲು ನೆರವಾಗಿದೆ.

ಕಾರೇಹಣ್ಣಿನ ಕಾಲ ಬಂದರೆ ಇಡೀ ಊರಿನ ಸುತ್ತಮುತ್ತ ಇರುವ ಬೇಲಿ ಬಂಕ ತಿರುಗಿ ಮುಳ್ಳಲ್ಲಿ ತೆರ್ಸಿಕೊಂಡು ಗಾಯಗಳಾದ್ರು ಗ್ಯಾನ ರ‍್ತಿರ್ಲಿಲ್ಲ ನಮಗೆ. ದಂಡು ಕಟ್ಕೊಂಡು ಕಾರೇಹಣ್ಣಿಗೆ ಹೋಗ್ತಿದ್ವಿ. ಇಲ್ಲಿ ನಾವೆಲ್ಲಾ ಸೇರಿ

ನಾಗ ನಾಗಲೇ…

ನಾಗುನ್ ತಮ್ಮಲೇ

ಕಾರೇಗಿಡ್ದಗೆ ಕಲ್ಡಿ ಕುಂತವೆ

ನೋಡುಬಾರಲೇ.. ಎಂದು ಕರಡಿಗೂ ಕಾರೇಗಿಡಕ್ಕೂ ನಂಟು ಕಟ್ಟಿ ಹಾಡ್ತಿದ್ವಿ.

ಕಾರೇಕೆಂಗನ್ನು ತಿಂದು ತಿಂದು ಗಂಟಲು ಕಟ್ಟಿದ ದಿನಗಳೆಷ್ಟೋ. ಈ ಕೆಂಗನ್ನು ಬಿಡಿಸಿ ತಂದು ಸೌದೆ ಮೂಲೆಯಲ್ಲಿರುವ ತೆಂಗಿನ ಚಿಪ್ಪಿನಲ್ಲಿ ಕುರಿಪಿಚ್ಗೆ, ಕಲ್ಲೋಳು ಸೇರಿಸಿ ಮುಚ್ಚಿಡ್ತಿದ್ವಿ. ಕೆಂಗು ಹಣ್ಣಾಗಿ ನಮ್ಮ ಬಾಯಿಗೆ ಬರಲು ಕುರಿಪಿಚ್ಗೆ, ಕಲ್ಲೇ ಗೊಬ್ಬರ. ದಿನ ಬೆಳಗಾದರೆ ಹಣ್ಣು ಆದವನ್ನೆಲ್ಲಾ ಆದು ಆದು ತಿನ್ನೋದೇ ಮಹಾ ಕಾಯಕ ನಮಗೆ. ನಮ್ಮ ಬಾಲ್ಯ ಈ ಹಣ್ಣುಗಳು ಸಿಗದೇ ಹೋಗಿದ್ರೆ ಸೊರಗಿ ಬಿಡ್ತಿತ್ತೇನೋ.

ಕೊಡೆಯಂತೆ ಹರಡಿಕೊಂಡು ಅಗಲವಾಗಿ ಪೊದೆಯಾಗಿ ಬಿಡುವ  ದ್ಯಾದಾರೆ ಗಿಡದಲ್ಲಿ ಎಲೆಗೊಂದರಂತೆ ಕೆಂಪನೆಯ ಸಣ್ಣ ಹಣ್ಣು ಬಿಟ್ಟಿರೊವು. ಅರ್ಧ ದಿನ ಬಿಡಿಸಿದರೂ ಬೊಗಸೆ ಹಣ್ಣು ಸಿಗ್ತಾಇದ್ದದು. ಮನಕ್ಕೆ ಮಗ್ನತೆ ಕೊಟ್ಟ ಈ ಹಣ್ಣಿಗೆ ಋಣಿಗಳು ನಾವು. ಈ ಗಿಡದ ಸೊಪ್ಪನ್ನು ಅಜೀರ್ಣ ಸರಿಪಡಿಸಲು ಮದ್ದಾಗಿಯು ಬಳಸಿ, ಬೇಯಿಸಿ ರಸ ಕುಡಿಸೋರು ಮನೆಯಲ್ಲಿ.

ತೂಬ್ರೆ ಹಣ್ಣು, ನೆಗ್ರೆಹಣ್ಣು, ಬಾರೇಹಣ್ಣುಗಳನ್ನು ಲೆಕ್ಕವಿಡಲಾಗದಷ್ಟೆ ತಿಂದಿದ್ದೇವೆ.

ತೂರೋ ಕಾಲ್ದಾಗೆ ತೂಬ್ರೆ ಹಣ್ಣು

ಬಿತ್ತೋ ಕಾಲ್ದಾಗೆ ಬಿಕ್ಕೇಹಣ್ಣು

ನೆಗ್ ನೆಗ್ರಿಕಂಡು ಗೆಯ್ವಾಗ ನೆಗ್ರೇಹಣ್ಣು

ಅನ್ನೋ ಮಾತು ನಮ್ಮಲ್ಲಿ ಈಗಲೂ ಬಳಕೆಯಲ್ಲಿವೆ. ಬೆಳೆಯುವ ಬೆಳೆಗಳಿಗೂ ಈ ಹಣ್ಣುಗಳಿಗೂ ಬಂಧ ಒದಗಿ ದೊಡ್ಡವರು ಸಣ್ಣವರೆನ್ನದೆ ಎಲ್ಲರೂ ಆಗುವಷ್ಟು ತಿಂದು ನಲಿದಿದ್ದೇವೆ.

ಮುಳ್ಳನ್ನು ಗಂಟಲವರೆಗೆ ಸಿಕ್ಕಿಸಿಕೊಂಡು ನರಳಿದರೂ ಬಿಡದೆ ತಿಂದ ಪಾಪಸ್‌ಕಳ್ಳಿ ಇನ್ನೊಂದು ವಿಶೇಷ ಹಣ್ಣು. ಅಗಲಮುಳ್ಳಿನ ಎಲೆಯ ಮೇಲೆ ಮುಳ್ಳನ್ನೇ ಹೊತ್ತು ಹಣ್ಣಾಗಿ ಕಿರಿಯ ಕಿರೀಟದಂತೆ ಕುಳಿತ ಈ ಹಣ್ಣನ್ನು ಬಂಡೆಗಳ ಮೇಲೆಲ್ಲಾ ಹತ್ತಿ ಬಿದ್ದೆದ್ದು ಕೆಡವಿ ಬಂದ್ರೆ ಸೊಪ್ಪು ತಂಕ್ಟೆ ಸೊಪ್ಪು ಬರ್ಲು ಮಾಡಿಕೊಂಡು ಈ ಹಣ್ಣಿನ ಮೇಲಿರುವ ಮುಳ್ಳು ಕಳೆಯಲು ರೊಚ್ಚಿಗೆದ್ದು ಸದೀತಿದ್ವಿ. ಎಷ್ಟು ಬಡ್ದು ಉದುರಿಸಿದರು ಮುಳ್ಳಿರೊವು.

ಕಡೆಗೆ ರೋಸಿ ಬಿಡಿಸಿ ತಿಂದ್ರೆ ಅಂಗಳಕ್ಕೆ ನುಚ್ಚು ಮುಳ್ಳು ಹತ್ತಿ ಎಷ್ಟೇ ಬಾದೆ ಇಕ್ಕಿರು ನಾವೇನೋ ಈ ಹಣ್ಣ್ ತಿನ್ನೊದು ಬಿಡ್ತಾ ರ‍್ಲಿಲ್ಲ. ಕೈ ಬಾಯಿಗೆ ಬಟ್ಟೆಗೆ ಮುಳ್ಳತ್ತಿ ನರಳೋದನ್ನ ನೋಡಿ ನಮ್ಮೂರಿನ ಜನ ಬರಗೆಟ್ಟವರಂಗೆ ಹೋಗ್ತಾವೆ ಕೂಳುರಸ ಕಂಡಿಲ್ವೆ ಮನೆಗೆ, ಹೋಗಿ ಹೋಗಿ ಮುಳ್ಳೆಟ್ಟಿಸ್ಕಂಡು ಬತ್ತಿರಲ್ಲ ಎಂದು ಊರಾಗಿರೋ ಮಕ್ಕಳು ಮರೀನೆಲ್ಲಾ ಒದೆಕೊಟ್ಟ ನಿದರ್ಶನಗಳಿಗೆ ಕೊರತೆಯಿಲ್ಲ. ಬಾಲ್ಯದ ಕಾಲವನ್ನು ಇಂತ ಮುದಗೊಳ್ಳುವ ಧ್ಯಾನಕ್ಕೆ ಮುಡಿಪಿಟ್ಟ ಸಕಾರಣದಿಂದಲೇ ನಮಗಿನ್ನು ಸಹಜ ಸಂತಸ ದಕ್ಕುತ್ತಿರುವುದು.

ಕಾಯಿಹಣ್ಣುಗಳೊಳಗೆ ಒಂದಾಗಿ ಮಾಗಿ

ಅಡವಿಯೊಳಗೆ ಮುಳುಗೆದ್ದು ಹಸಿರಾಗಿ

ಗುಡ್ಡಗುಡ್ಡಗಳನ್ನೆಲ್ಲಾ ಹಾದು

ಮುಂಗಾರು ಹಿಂಗಾರಿನಲ್ಲಿ ತೊಯ್ದು

ಪಾಲ್ವಾಣದ ಹಕ್ಕಿಗಳ ದನಿಯ

ಹುಣ್ಣಿಮೆಯ ಕಂಡು

ರಾಮಪ್ಪನ ಗಿಡದಲ್ಲಿ ಧರ್ಮಕ್ಕೆ ಎಂದಿಗೂ ಸಿಗದೆ ಮುಕ್ತವಾಗಿ ಉಳಿದಿದ್ದೇವೆ.

ಕಲ್ಲು, ಮಣ್ಣು, ಹಣ್ಣು, ಗಿಡಗೆಂಟೆ, ಸೊಪ್ಪುಸೆದೆ, ಬನದ ದಟ್ಟ ಹಸಿರು ಎಲ್ಲವೂ ನಮ್ಮವೆ.

September 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Kavishree

    ಮರಡಿ ಬೀಜ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತದೆ. ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  2. Vishwas

    ‘ಬನದ ಹಸಿರು ನಮಗೆ ಉಸಿರು’ ಎಂಬಂತೆ, ಅಕ್ಕನೂರಿನಲ್ಲಿ ದೊರಕುವ *ಹಣ್ಗಳ ಪರಿ ಅಲ್ಲಿನ ಬನಕ್ಕೆ ಸಿರಿ* ಎಂಬುದಿಲ್ಲಿ ಸ್ಪಷ್ಟವಾಗುತ್ತದೆ.

    ಹಣ್ಣಿನ ತಿರಳನ್ನಣ್ಣಲು ಅದರ ಸಿಪ್ಪೆ/ಬೀಜ/ಚಿಪ್ಪು/ಮುಳ್ಳಗಳನ್ನು ತಾಳ್ಮೆಯಿಂದ, ಎಚ್ಚರದಿಂದ, ಜಾಗ್ರತೆಯಾಗಿ ಹಾಳಗದಂತೆ ಬಿಡಿಸಿದಾಗ ಮಾತ್ರ ಸಾಧ್ಯ‌.

    ಇದು ಹಣ್ಣು ತಿನ್ನುವ ಪರಿ ಮಾತ್ರವಲ್ಲ, ಅದೊಂದು ಜೀವನ ಪಾಠವೂ ಕೂಡ. ಯಶಸ್ಸೆಂಬ ಹಣ್ಣು ತಿನ್ನಲು, ಕಷ್ಟ ಕಾರ್ಪಣ್ಯಗಳು, ಎದುರಾಗುವ ಸವಾಲುಗಳೆಂಬ ಮುಳ್ಳಗಳನ್ನು ತಾಳ್ಮೆಯಿಂದ , ಸ್ವಯಂ ಕೃಷಿಯಿಂದ ತೆಗೆದಾಗ ಮಾತ್ರ.

    ಹೀಗೆ, ಅಕ್ಕನ ಲೇಖನದ ಪ್ರತಿಯೊಂದು ಪದದಲ್ಲಾಗಲಿ, ಅಕ್ಷರದಲ್ಲಾಗಲಿ, ಜೀವನದ ಉನ್ನತ ಮೌಲ್ಯಗಳು ಅಡಗಿರಿತ್ತವೆ ಅವುಗಳನ್ನು ಕಂಡುಕೊಳ್ಳುತ್ತಾ ಓದುಗರೆಲ್ಲರೂ ಸಂತೃಪ್ತರಾಗಬಹುದು.

    ಮಾನವನ ಜೀವನವು ಗುಡ್ಲುಕುಂಟೆ ಗಿಡವಾದರೆ, ಆತನ ಸಾಮಜಿಕ ಪ್ರಜ್ಞೆ ಮತ್ತು ಜವಾಬ್ದಾರಿಗಳು ಬನದ ಕರಿಯ ಕಲ್ಲಿನ ಕೆತ್ತನೆಗಳ ಹಾಗೆ. ಅವುಗಳೇ ಹೆಗ್ಗುರುತಾಗಿ ಅವನನ್ನು ರಾಮದೇವರ ಗಿಡವಾಗಿ ಪರಿವರ್ತಿಸುತ್ತದೆ. ದೇವರು ಇನ್ನೆಲ್ಲೂ ಅಲ್ಲದೆ, ನಮ್ಮೊಳಗಯೇ‌ ನೆಲಸಿರುತ್ತಾನೆ ಎಂಬುದನ್ನು, ಅಕ್ಕನ ಲೇಖನ ಅತ್ಯದ್ಭುತವಾಗಿ ತೋರಿಸುವ ಸಾಧನವೇ ಎಂಬಂತೆ ಎನಿಸಿತು ನನಗೆ.
    ಕಳೆದ ದನಗಳು ಸಿಕ್ಕಿದರೆ, ಮಕ್ಕಳಿಲ್ಲದವರು ಮುದ್ದು ಮರಿಗಳನ್ನು ಹಡೆದರೆ ರಾಮಪ್ಪನಿಗಾಗುವ ಹೋಳಿಗೆಯ ನೈವೇದ್ಯವು, ಜೀವನದೇ ಯಾವುದೇ ಸಮಸ್ಯೆಗಳನ್ನು ಎದುರಿಸಿ ಸಿಗುವ ಪ್ರತಿಫಲ ಹಾಗೂ ಅದರಿಂದ ಗಳಿಸುವ ಆತ್ಮತೃಪ್ತಿಯ ಪ್ರತಿಬಿಂಬ.

    ಪ್ರತಿಕ್ರಿಯೆ
  3. ಎಸ್ ಬಿ ಎಂ ಯತೀಶ್

    ಹಳ್ಳಿಗೆ ಅಡವಿ ಎಂಬ ಅವ್ವ ಇರುವಳು, ಗುಡ್ಡಬೆಟ್ಟ ಎಂಬ ಅಪ್ಪ ಇರುವನು, ದನಕರುಗಳೆಂಬ ಮಕ್ಕಳು ಇರುವಾಗ ನಾವು ಹಣ್ಣು ಹೂವುಗಳಿಗೆ, ಈಜು ಮೋಜಿಗೆ, ಮರಕೋತಿ ಆಟಕ್ಕೆ ದನ ಕಾಯುವ ನೆಪವೊಡ್ಡಿ ಶನಿವಾರ ಮದ್ಯಾಹ್ನ ಊಟ ಬಿಟ್ಟು ಓರಟ ಆ ದಿನಗಳು ಕಣ್ಣ ಮುಂದೆ ಬರುತ್ತಿವೆ…ಕದ್ದು ತಿಂದ ಕಲ್ಲಂಗಡಿ, ಕಲ್ಲು ಒಡೆದು ಕೆಡವಿದ ಮಾವು, ಮಾಲೀಕನ ಯಾಮಾರಿಸಿ ತಂದು ತಿಂದ ಹಲಸು ಅದೆಷ್ಟೋ ಬಾಯಿ ನೀರು ತರಿಸುತ್ತಿದೆ ಎಂದು ಹೇಳಲು ಅಸಾಧ್ಯ…ಬಾಲ್ಯ ನೆನಪಿಸಿ ಭಾವನೆಗಳ ಬುತ್ತಿ ಉಣಬಡಿಸಿದ ನಿಮ್ಮ ಸಂಕಲನ ನಮ್ಮಂತವರ ಪಾಲಿನ ನೆಮ್ಮದಿಯ ಔತಣ… ಒಳ್ಳೆಯ ವಿಚಾರಗಳೊಂದಿಗೆ ಬರುವ ಗೀತಮ್ಮರವರಿಗೆ ಧನ್ಯವಾದಗಳು

    ಪ್ರತಿಕ್ರಿಯೆ
  4. Nagarjun

    Nice article mam, well explained your childhood along with people belief system

    ಪ್ರತಿಕ್ರಿಯೆ
  5. ಶಾಂಭವಿ

    ನಮ್ಮ ತಾಯಿ ಪ್ರಕೃತಿ ಮಾತೆ ಸಾಕ್ಷಾತ್ ಕಲ್ಪತರುವಿನಂತೆ ಸ್ವಲ್ಪ ಪಿಪ್ರೀತಿ ತೋರಲು ತನ್ನ ಬೊಕ್ಕಸದ ಅಕ್ಷಯ ಪಾತ್ರೆಯನ್ನೆ ನೀಡುವಳು ಎಂಬುದಕ್ಕೆ ನಿಮ್ಮ ವರ್ಣನೆಯಲ್ಲಿನ ಈ ಹಣ್ಣಿನ ವಿಧಗಳು ಹೋಳಿಗೆಯ ರುಚಿಯೇ ಸಾಕ್ಷಿಯಾಗಿದೆ ಮೇಡಂ

    ಪ್ರತಿಕ್ರಿಯೆ
  6. ಕಾವ್ಯ

    “ಹಸಿರೇ ಉಸಿರು”. ಆ ಹಸಿರು ಒಡಲಾಳದಲ್ಲಿ ನೂರಾರು ಜೀವರಾಶಿಗಳನ್ನು ಸಾಕಿ ಸಲಹುತ್ತಿರುವ ಪ್ರಕೃತಿ ಮಾತೆಗೆ ಶರಣು. ಆ ಮಾತೆಯ ಮಡಿಲಿಗೆ ಪೆಟ್ಟು ಕೊಟ್ಟು,ಸಸ್ಯ ಸಂಕುಲಗಳನ್ನು ವಿನಾಶದಂಚಿಗೆದೂಡುವ ಮಾನವನನ್ನು ಸಹಿಸುತ್ತಾ, ಮತ್ತೆ ಚಿಗುರಿ ಗಟ್ಟಿಯಾಗಿ ನೆಲೆಯೂರಿ ಬದುಕಿನ ಪಾಠವನ್ನು ಕಲಿಸುವಳು.
    ಹಳ್ಳಿಗಾಡಿನ ಸೊಗಡು ಭಾಷೆಯಲ್ಲಿ ಮೂಡಿಬಂದಿರುವ ಲೇಖನ ತುಂಬಾ ಸೊಗಸಾಗಿದೆ. ಈಗಿನ ಕಾಂಕ್ರೀಟ್ ಕಾಡಿನಲ್ಲಿ ಬದುಕುತ್ತಿರುವ ನಮಗೆ ಮತ್ತೆ ಬಾಲ್ಯದ ಕಾರೆ, ಕಾಡುಬಿಕ್ಕೆ, ಬೇಲದ ಹಣ್ಣುಗಳನ್ನು ಹುಡುಕುತ್ತಾ ಕಾಡನ್ನು ಅಲೆಯುತ್ತಿದ್ದ ಸಂಭ್ರಮ ನೆನಪಾಯಿತು, ಮರಡಿ ಬೀಜದ ಹೋಳಿಗೆ ತಿಂದಷ್ಟೇ ಸಂತೋಷವಾಯಿತು.

    ಪ್ರತಿಕ್ರಿಯೆ
  7. ಗೀತಾ ಎನ್ ಸ್ವಾಮಿ

    ಬರವಣಿಗೆ ನಿಮಗೆ ಸಿದ್ಧಿಸಿದೆ ಬರೆಯಿರಿ ಎಂದು ನನ್ನಿಂದ ಬರೆಸಿದ ಮೋಹನ್ ಸರ್ ಗೆ ಎಲ್ಲವೂ ಸಲ್ಲಬೇಕು.
    ಧನ್ಯವಾದಗಳು ಮೋಹನ್ ಸರ್…..
    ನಿಮ್ಮ ಮಮತೆಗೆ ಋಣಿ ನಾನು ನಿಚ್ಚವೂ….

    ಪ್ರತಿಕ್ರಿಯೆ
  8. Meghana N +91

    ಪ್ರಕೃತಿ ತನ್ನ ಒಡಲಾಳದಲ್ಲಿ ಎಲ್ಲಾ ರೀತಿಯ ರುಚಿ, ಬಣ್ಣ , ಗಂಧ ಎಲ್ಲವನ್ನು ಅಡಗಿಸಿಕೊಂಡಿದೆ ಆದರೂ ಮನುಷ್ಯ ಕೃತಕ, ಸ್ವಾಭಾವಿಕವಲ್ಲದ ಹೊಸತೇನನ್ನೋ ಸೃಷ್ಟಿಸುತ್ತೇನೆ ಅಥವಾ ಪ್ರಕೃತಿಯನ್ನೇ ತಿದ್ದುತ್ತೇನೆ ಎಂದು ಜೈವಿಕ ತಂತ್ರಜ್ಞಾನದ ಮೊರೆ ಹೋಗಿ ಬಿ ಟಿ ಬದನೆ, ಗೋಲ್ಡನ್ ರೈಸ್ ಇತ್ಯಾದಿ ಪ್ರಯತ್ನಗಳನ್ನು ಮಾಡಿ ಮುಗ್ಗರಿಸಿದರು ‘ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಚಿಕ್ಕವನು’ ಎಂಬುದನ್ನು ಮರೆತು ಆಧುನಿಕ ಜೀವನ ಶೈಲಿ ಆಹಾರ ಶೈಲಿಗೆ ಮೊರೆ ಹೋಗಿ ಮಹಾಮಾರಿ ರೋಗಗಳನ್ನೇ ಆಹ್ವಾನಿಸುತ್ತಿದ್ದೇವೆ ಹೀಗಿರುವಾಗ ನಿಮ್ಮ ಈ ಲೇಖನ ಪ್ರತಿಯೊಬ್ಬರ ಬಾಲ್ಯವನ್ನು ಹಾಗೂ ಮನುಷ್ಯ ಪ್ರಕೃತಿಯ ಶಿಶು ಎಂಬುದನ್ನು ನೆನಪಿಸುತ್ತದೆ

    ಪ್ರತಿಕ್ರಿಯೆ
  9. ಮೇಘನಾ

    ಬಗೆ ಬಗೆಯ ಹಣ್ಣುಗಳನ್ನು ಪರಿಚಯಿಸುವ ಈ ಲೇಖನ ” ಈಳೆ ನಿಂಬೆ ಮಾವು ಮಾದಲಕ್ಕ ಹುಳಿ ನೀರನೆರೆದವರಾರಯ್ಯ ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯ ” ಎಂಬ ಅಕ್ಕ ನವರ ವಚನವನ್ನು ನೆನಪಿಸುತ್ತದೆ ಅದರೊಟ್ಟಿಗೆ ನಾನು ಕಳೆದ ಕೃತಕ ಬಾಲ್ಯದ ಬಗ್ಗೆ ಬೇಸರಿಕೆ “ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವಿನ ಜನನ ನಾಮಗದೇಕೆ ಬಾರದು ” ಎಂದು ಪ್ರಕೃತಿಯ ಶಿಶುವಾಗಿ ಬದುಕುವ ಕನಸು ಚಿಗುರೊಡೆಯುತ್ತಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: