ಪತಂಜಲಿ ಎಂಬ ಬಿಸಿನೆಸ್ ಮಾಡೆಲ್!

ಸಣ್ಣದೊಂದು ಗರಟೆಯೊಳಗೆ ಕರಿನೀರು ತುಂಬಿಸಿ, ನಮ್ಮ ದೇಶದ ಎಲ್ಲ ಪ್ರತಿಷ್ಠಿತ ಮ್ಯಾನೇಜ್ ಮೆಂಟ್  ಕಲಿಕಾ ಸಂಸ್ಥೆಗಳವರನ್ನು ಸಾಲಾಗಿ ಬಂದು ಆ ಗರಟೆ ನೀರಿನೊಳಗೆ ಮುಳುಗಿ ಏಳುವಂತೆ ಹೇಳಬೇಕು ಅನ್ನಿಸುತ್ತಿದೆ.  ಪತಂಜಲಿ ಎಂಬ ವ್ಯವಹಾರ ಸಾಮ್ರಾಜ್ಯವು ಧರ್ಮ-ರಾಜಕೀಯ-ದೇಶಪ್ರೇಮ – ವ್ಯವಹಾರದ ಜಾಣ್ಮೆಗಳನ್ನು ಹದನಾಗಿ ಬೆರೆಸಿ ಸಿದ್ಧಪಡಿಸಿರುವ ಈ ಪತಂಜಲಿ ಎಂಬ ಕಾಕ್ ಟೇಲ್ ಸದ್ಯಕ್ಕಂತೂ ನಿಗಿನಿಗಿಸುತ್ತಿದೆ.

ದೇಶದಾದ್ಯಂತ 5ಕೋಟಿಗೂ ಮಿಕ್ಕಿ ಗ್ರಾಹಕರು, 3ಲಕ್ಷ ಅಂಗಡಿಗಳು, 1000 ಉತ್ಪನ್ನಗಳು, 5000ಪತಂಜಲಿ ಸ್ಟೋರ್ ಗಳು – ಅಷ್ಟೇ ಏಕೆ, ಹಾಲಿ ಹಿಂದೂಸ್ಥಾನ್ ಯುನಿಲಿವರ್ ಎಂಬ ಬಹುರಾಷ್ಟ್ರೀಯ ದಿಗ್ಗಜವೊಂದನ್ನು ಹೊರತು ಪಡಿಸಿದರೆ, ಡಾಬರ್, ನೆಸ್ಲೆ, ಕಾಲ್ಗೇಟ್, ಐಟಿಸಿ, ಗ್ಲಾಕ್ಸೊ, ಪ್ರಾಕ್ಟರ್ ಅಂಡ್ ಗಾಂಬಲ್, ಬ್ರಿಟಾನಿಯಾ, ಗಾಡ್ರೆಜ್ ಸೇರಿದಂತೆ FMCG (ವೇಗವಾಗಿ ಬಿಕರಿಯಾಗಬಲ್ಲಗ್ರಾಹಕ ಉತ್ಪನ್ನಗಳು) ಕ್ಷೇತ್ರದ ದಿಗ್ಗಜರನ್ನೆಲ್ಲ ಮಲಗಿಸಿ ಎರಡನೇ ಸ್ಥಾನಕ್ಕೇರಿರುವ ಪತಂಜಲಿ ಇನ್ನೂ ಮಹತ್ವಾಕಾಂಕ್ಷೆಯಿಂದ ಮುನ್ನುಗ್ಗುತ್ತಿದೆ.

FMCG ಮಾರುಕಟ್ಟೆಯ ಒಟ್ಟು ಬೆಳವಣಿಗೆಯ ವೇಗಕ್ಕೆ ಹೋಲಿಸಿದರೆ, ಶರವೇಗದಂತೆ ಕಾಣಿಸುತ್ತಿರುವ ಪತಂಜಲಿಯ ಬೆಳವಣಿಗೆಯಲ್ಲಿರುವ ಆಕ್ಟೋಪಸ್ ಮಾದರಿ ದಿಗಿಲು ಹುಟ್ಟಿಸುತ್ತಿದೆ. ಆಳುವವರಿಗೆ ಸಮೀಪದಲ್ಲಿರುವ ಪತಂಜಲಿಯ ಈ ಬೆಳವಣಿಗೆಯನ್ನು ಯಾವುದಾದರೂ ಇನ್ನೊಂದು ಕಾರ್ಪೋರೇಟ್ ಗುಂಪಿನ ಜೊತೆ ಸಮೀಕರಿಸಬಹುದಾಗಿದ್ದರೆ ಅದು ಅದಾನಿ ಗುಂಪು ಮಾತ್ರ ಎಂದರೆ ಎಲ್ಲವನ್ನೂ ಹೇಳಿದಂತಾಯಿತು!

ದೇಶದಾದ್ಯಂತ ಯೋಗ, ಶಿಕ್ಷಣ, ಆಯುರ್ವೇದ ಉತ್ಪನ್ನಗಳು ಎಂದು ಆರಂಭಗೊಂಡ ಪತಂಜಲಿ ಚಟುವಟಿಕೆಗಳು ಇಂದು ಅಲ್ಲಿಂದ ಮುಂದೆ ಆರೋಗ್ಯ, ಕ್ರಷಿ – ಫುಡ್ ಪಾರ್ಕ್, ಸಂಶೋಧನೆ, FMCG ಉತ್ಪನ್ನಗಳು ಮಾತ್ರವಲ್ಲದೆ ಕೆನಡಾ, ನೇಪಾಳ, ಮಾರಿಷಸ್, ಅಮೆರಿಕ, ಇಂಗ್ಲಂಡ್ ಎಂದು ಹಲವೆಡೆ ಪತಂಜಲಿ ಯೋಗಪೀಠಗಳನ್ನು (PYP)  ಹೊಂದಿವೆ. ಕುತೂಹಲಕ್ಕೆಂದು ಕಂಡರೆ, ಇಂಗ್ಲಂಡಿನಲ್ಲಿ ಈ ಯೋಗಪೀಠದ ಕಾರ್ಪೋರೇಟ್ ಸದಸ್ಯತ್ವದ ಶುಲ್ಕ 13,750 ಪೌಂಡ್, ಅಮೆರಿಕದಲ್ಲಿ 25,000 ಅಮೆರಿಕನ್ ಡಾಲರ್.

ಈ ಎಲ್ಲ ಸಂಸ್ಥೆಗಳ ನಿರ್ದೇಶಕ-ಟ್ರಸ್ಟೀ ಮಂಡಳಿಗಳಲ್ಲಿ ಕೆಲವೇ ಕೆಲವು ಜನಗಳಿದ್ದು, ಆರ್ಥಿಕವಾಗಿ ಬಹಳ ಫ್ಲೆಕ್ಸಿಬಲ್ ಆದ ಮಾಡೆಲ್ಲೊಂದನ್ನು ಸಿದ್ಧಪಡಿಸಿಕೊಂಡಂತಿದೆ. ಯೋಗ, ಆಯುರ್ವೇದಗಳಿಗೆ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಒದಗಿಸುವ ಸವಲತ್ತುಗಳು, ಧಾರ್ಮಿಕ ಸಂಸ್ಥೆಯಾಗಿ ಸಿಗುವ ಸವಲತ್ತುಗಳು ಹಾಗೂ ಕಾರ್ಪೋರೇಟ್ ಗುಂಪಾಗಿ ಸಿಗುವ ಸವಲತ್ತುಗಳೆಲ್ಲವೂ ಪತಂಜಲಿ ಗುಂಪು ಉದ್ದಕ್ಕೂ ಅಡ್ಡಕ್ಕೂ ಬೆಳೆಯಲು ತಮ್ಮ ಯಥೇಚ್ಛ ಕೊಡುಗೆಗಳನ್ನು ನೀಡಿವೆ.

ಪತ್ರಿಕಾವರದಿಗಳನ್ನು ನಂಬುವುದಿದ್ದರೆ, ಹಾಲೀ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪತಂಜಲಿ ಬಳಗಕ್ಕೆ ಸಾವಿರಾರು ಎಕರೆ ಭೂಮಿ ಸರ್ಕಾರದ ವತಿಯಿಂದಾಗಿ ಒಂದೋ ಉಚಿತವಾಗಿ ಇಲ್ಲವೇ ಮಾರುಕಟ್ಟೆಯ ದರಕ್ಕಿಂತ ತೀರಾ ಕಡಿಮೆ ದರದಲ್ಲಿ ಲಭ್ಯವಾಗಿದೆ; ಇದು ಹಲವು ಹುಬ್ಬುಗಳನ್ನು ಏರಿಸಿದ್ದು, ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾಗಿದೆ. ಕೆಲವು ಉದಾಹರಣೆಗಳು ಇಲ್ಲಿವೆ:

೧. ಉತ್ತರ ಪ್ರದೇಶ ವ್ಯಾಪ್ತಿಯ ನೋಯ್ಡಾದಲ್ಲಿ ಯಮುನಾ ಎಕ್ಸ್ ಪ್ರೆಸ್ ವೇ ಬಳಿ ಪತಂಜಲಿ ಯೋಗ ಸಂಸ್ಥೆಗೆ 4500  ಎಕರೆ ಭೂಮಿ ನೀಡಲಾಗಿದ್ದು, ಈ ಬಗ್ಗೆ ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.

೨. ಮಹಾರಾಷ್ಟ್ರದ ನಾಗಪುರದ ಬಳಿ ಬಹುರಾಷ್ಟ್ರೀಯ ವಿಮಾನ ನಿಲ್ದಾಣ ಹಬ್ ಯೋಜನೆಯ ಬಳಿ (MIHAN) ಎಕರೆಗೆ ಕೋಟಿ ಬೆಲೆಬಾಳುವ 600 ಎಕರೆ ಭೂಮಿಯನ್ನು ಎಕರೆಗೆ ಬರೀ 25 ಲಕ್ಷಕ್ಕೆ ಪತಂಜಲಿ ಆಯುರ್ವೇದ್ ಲಿಮಿಟೆಡ್ ಗೆ ನೀಡಲಾಗಿದ್ದು, ಈಗಾಗಲೇ 234 ಎಕರೆ ಅವರ ವಶದಲ್ಲಿದೆ. ಇಲ್ಲೂ ಸಾರ್ವಜನಿಕರಿಂದ ಅಪಸ್ವರಗಳು ಕೇಳಿಬಂದಿವೆ.

೩. ಅಸ್ಸಾಂ ನಲ್ಲಿ ಪತಂಜಲಿ ಗುಂಪಿಗೆ 1200 ಎಕರೆ ಭೂಮಿಯನ್ನು ಸರಕಾರ 2014ರಲ್ಲಿ ಕೊಟ್ಟಿದೆ.

೪. ಹರ್ಯಾಣಾದ ಫರೀದಾಬಾದ್ ಜಿಲ್ಲೆಯಲ್ಲಿ ಕೋಟ್ ಎಂಬಲ್ಲಿ ಆರಾವಲೀ ಬೆಟ್ಟಗಳ ತಪ್ಪಲಿನಲ್ಲಿ 1000 ಎಕರೆ ಭೂಮಿ, ಮಧ್ಯಪ್ರದೇಶದ ರೇವಾ ಮತ್ತು ಪಿತಾಂಪುರಗಳಲ್ಲಿ ತಲಾ 400, 40  ಎಕರೆ ಭೂಮಿಗಳನ್ನು ಸರಕಾರ ಪತಂಜಲಿ ಗುಂಪಿಗೆ ಒದಗಿಸಿಕೊಟ್ಟಿದೆ ಎಂಬ ಪುಕಾರುಗಳು ಕೇಳಿಬರುತ್ತಿವೆ.

ಹೀಗೆ ಮೂರು –ನಾಲ್ಕು ವರ್ಷಗಳಲ್ಲೇ ಸರಿಸುಮಾರು ಹತ್ತುಸಾವಿರ ಎಕರೆಗಳಷ್ಟು ಸರ್ಕಾರಿ ಭೂಮಿಯನ್ನು ಒಂದು ಬಹು ಚಟುವಟಿಕೆಗಳ-ವ್ಯವಹಾರಗಳ ಗುಂಪಿಗೆ ಒದಗಿಸಿರುವುದು ಮುಂದೊಂದು ದಿನ ಹಲವಾರು ಪ್ರಶ್ನೆಗಳಿಗೆ ಕಾರಣ ಆಗದಿರದು.

ಅಗತ್ಯ ಇರುವೆಡೆ ತಾನು ಸೇವಾಸಂಸ್ಥೆಯೆಂದೂ, ಉಳಿದಂತೆ ವ್ಯವಹಾರವೆಂದೂ ಬಿಂಬಿಸಿಕೊಳ್ಳುತ್ತಾ, ಹೊಸ ಕಾರ್ಪೋರೇಟ್ ಮಾಡೆಲ್ಲೊಂದನ್ನು ಹುಟ್ಟುಹಾಕಿರುವ  ಪತಂಜಲಿ ಬಳಗ ತನ್ನ ಜಾಹೀರಾತುಗಳಲ್ಲೂ ತನ್ನ ಉತ್ಪನ್ನಗಳನ್ನು ಕೊಳ್ಳುವುದು ದೇಶಸೇವೆಗೆ ಸಮನಾದುದೆಂದು ಅರ್ಥ ಬರುವ ವಾಕ್ಯಗಳನ್ನು ಪ್ರಕಟಿಸಿ, ನಿಯಂತ್ರಕರ ಕಣ್ಣಿಗೆ ಬಿದ್ದುದಿದೆ.

ಹಿಂದೊಮ್ಮೆ ಮ್ಯಾಗಿ ಹಠಾತ್ತಾಗಿ ಬಂದಾಗಿ, ಅದರ ಬೆನ್ನಿಗೇ ಪತಂಜಲಿ ನೂಡಲ್ಸ್ ಮಾರ್ಕೆಟ್ಟಿಗೆ ಬಂದದ್ದು, ಆ ಬಳಿಕ ಮ್ಯಾಗಿಯಿಂದ ತೊಂದರೆ ಇಲ್ಲ ಎಂದು ಪ್ರಕಟವಾಗಿ ಅದು ಮತ್ತೆ ಮಾರುಕಟ್ಟೆ ಪ್ರವೇಶಿಸಿದ್ದನ್ನು ಒಂದು ಒಟ್ಟಂದದ ಪ್ರಹಸನವನ್ನಾಗಿ ನೋಡಿದರೆ ಬಹಳ ಕುತೂಹಲ ಹುಟ್ಟಿಸುತ್ತದೆ.

ಇಂತಹದೇ ಒಂದು ಪಕ್ಷಿನೋಟ ಈ ಇಡಿಯ ವ್ಯವಹಾರದ ಕುರಿತು ಮಾರುಕಟ್ಟೆ ವಿಶ್ಲೇಷಕರಿಂದ ಸಿಗುವಂತಾದರೆ, ಕಿರುನೆನಪಿರುವ ನಮ್ಮಂತಹ ಸಾರ್ವಜನಿಕರಿಗೆ ಹಲವು ವ್ಯವಹಾರದ ಹೊಳಹುಗಳು ಸಿಗಲಿವೆ.

 

‍ಲೇಖಕರು avadhi

October 9, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Indian

    I think he has used an opportunity where the goods are impure, not upto a standard, duplicates etc. And mixed with the nationalism …

    ಪ್ರತಿಕ್ರಿಯೆ
  2. Simha SN

    ಕಳಪೆ ಪದಾರ್ಥ ಮುಗಿಬಿದ್ದು ಕೊಳ್ಳಲು ಜನರೇನು ಮುಠ್ಠಾಳರೇ ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: