ನ್ಯಾಯಮೂರ್ತಿಗಳ ಸಮಾಧಾನ ದೊಡ್ಡ ಪಾಠ ಕಲಿಸಿತು..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

ಸ್ವ್ಯಾನ್ ಪ್ರಿಂಟರ್ಸ್ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಚಿಕ್ಕಮಗಳೂರಿನ ಹಿರಿಯ ಸಾಹಿತಿ ಪ್ರೊ. ಚಂದ್ರಯ್ಯ ನಾಯ್ಡು ಅವರಿಂದ ನಮಗೆ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರ ಪರಿಚಯವಾಯಿತು. ಒಂದು ದಿನ ನ್ಯಾಯಮೂರ್ತಿಗಳು ನನ್ನನ್ನು ಅವರ ಮನೆಗೆ ಕರೆಸಿಕೊಂಡು letterhead ಪ್ರಿಂಟಿಂಗ್‌ಗೆ ಕೊಟ್ಟು, “ಬಹಳ ತುರ್ತಾಗಿ ಬೇಕು. ನನ್ನ ಬಳಿ ಒಂದು ಹಾಳೆ ಕೂಡ ಇಲ್ಲ. ಯಾವತ್ತು ಸಿಗಬಹುದು?” ಎಂದಾಗ ಮೂರ್ನಾಲ್ಕು  ದಿನಗಳು ಆಗುತ್ತದೆ, ನಾಲ್ಕನೆಯ ದಿನ ಸಂಜೆ ಕೊಡುವೆ ಎಂದು ಭರವಸೆ ಕೊಟ್ಟು ಬಂದೆ.

ಸರಿಯಾಗಿ ನಾಲ್ಕನೇ ದಿನ ಮಧ್ಯಾಹ್ನ ಕರೆ ಮಾಡಿದ ನ್ಯಾಯಮೂರ್ತಿಗಳಿಗೆ  ನಾನು “ಸ್ವಲ್ಪ ಮುದ್ರಣ ತಡವಾಗುತ್ತಿದೆ, ನಾಳೆ ಬೆಳಗ್ಗೆ ತಂದುಕೊಡುವೆ” ಎಂದೆ. ಅವರು  “ಪರವಾಗಿಲ್ಲ ಬೆಳಗ್ಗೆ ೧೧:೩೦ ರ  ಒಳಗೆ ತಂದುಕೊಡಿ” ಎಂದರು.

ಆದರೆ ನಾನು ಮಾರನೇ ದಿನ ಮಧ್ಯಾಹ್ನ ೧ ಗಂಟೆಗೆ  letterhead  ತೆಗೆದುಕೊಂಡು ನ್ಯಾಯಮೂರ್ತಿಗಳ ಮನೆ ತಲುಪಿದೆ. ತಡವಾದ್ದರಿಂದ ನಾನು ಭಯದಿಂದಲೇ ಒಳಗೆ ಹೋದೆ..!!! ನಗುಮುಖದಲ್ಲಿ ನ್ಯಾಯಮೂರ್ತಿಗಳು ನನ್ನನ್ನು ಬರಮಾಡಿಕೊಂಡರು. ನಾನು ಸದ್ಯ, ಏನೂ ತಡವಾಗಿಲ್ಲ ಎಂದು ಸ್ವಲ್ಪ ಸಮಾಧಾನವಾಗಿದೆ. ಟೀ ತರಿಸಿ ಕುಡಿಯಲು ಕೊಟ್ಟು, “ನೋಡು, ಚೆನ್ನೈಯಿಂದ ಒಂದು ದೊಡ್ಡ  ಸಂಸ್ಥೆಯ ಮುಖ್ಯಸ್ಥರೆಲ್ಲ ಬಂದಿದ್ದರು. ಅವರಿಗೆ ನಾನು ಪತ್ರ ಕೊಡಬೇಕಿತ್ತು..

ಅವರು ೧೧.೩೦ ಕ್ಕೆ ಬಂದರು. ಒಂದು ಗಂಟೆ ಅವರೊಂದಿಗೆ ಚರ್ಚೆ ಮಾಡಿ ಕೊನೆಯಲ್ಲಿ ಅವರಿಗೆ ನಿರ್ಣಯಗಳನ್ನು ನನ್ನ ಒಂದು ಪತ್ರದಲ್ಲಿ ಟೈಪ್ ಮಾಡಿ  ಕೊಡಬೇಕಿತ್ತು. ಅವರು ಚೆನ್ನೈಗೆ ಹಿಂದಿರುಗಲು ೩ ಗಂಟೆಗೆ ವಿಮಾನ ಇದ್ದಿದ್ದರಿಂದ ಕಾದುಕಾದು ಅಂತಿಮ ನಿರ್ಣಯದ ಪತ್ರವಿಲ್ಲದೆ ಹಿಂದಕ್ಕೆ ಮರಳಬೇಕಾಯಿತು…..” ಎಂದು ನಗು ನಗುತ್ತಲೇ ಸಮಾಧಾನವಾಗಿ ಹೇಳಿದರು.” ನೋಡು ಅವರು ದೊಡ್ಡ ಸಂಸ್ಥೆಯ ಮುಖ್ಯಸ್ಥರು, ಅವರಿಗೆ ಸಮಯ ಬಹಳ ಮುಖ್ಯ. ಅವರನ್ನು ನಾವು ಹಾಗೆ ಕಾಯಿಸಬಾರದಿತ್ತು. ಮನುಷ್ಯನಿಗೆ ಸಮಯಪಾಲನೆ ಬಹಳ ಬಹಳ ಮುಖ್ಯ. ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳಿ” ಎಂದರು.

ಅವರು ಸಿಟ್ಟಿನಿಂದ ಬೈದು ಹೇಳಿದ್ದರೆ ನನ್ನ ಮನಸ್ಸಿಗೆ ಇಷ್ಟು ನಾಟುತ್ತಿರಲಿಲ್ಲವೇನೋ! ಅಷ್ಟು ಸಮಾಧಾನವಾಗಿ ತಿಳಿ ಹೇಳಿದ್ದರಿಂದ, ಇಂತಹ ಒಂದು ಹಿರಿಯ ಜೀವವನ್ನು ನೋಯಿಸಿದ್ದಕ್ಕಾಗಿ ಬಹಳ ಬೇಸರವಾಯಿತು.

ಮುಂದೆ ನಾವು ಅವರ ಅತ್ಯಂತ ಆತ್ಮೀಯ ಮುದ್ರಕರಾದೆವು.  ಅವರ ಹಲವು ಪುಸ್ತಕಗಳನ್ನೂ ಮುದ್ರಿಸಿದೆವು. ಅವರ ಪುಸ್ತಕಗಳ ಬಿಡುಗಡೆ ಹಾಗೂ ೭೦ನೇ ಹುಟ್ಟುಹಬ್ಬದ ವರ್ಷಾಚರಣೆಯ ವಿಶೇಷ ಕಾರ್ಯಕ್ರಮಗಳ ಆಯೋಜನೆಯ ಜವಾಬ್ದಾರಿಯನ್ನೂ ನಮಗೆ ಕೊಟ್ಟಿದ್ದರು. 

ಇತ್ತೀಚೆಗೆ ಅವರಿಗೆ ೮೦ ವರ್ಷ ತುಂಬಿದ ಸಂದರ್ಭಕ್ಕೆ ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳ ಸಭೆ ಸೇರಿ ಕಾರ್ಯಕ್ರಮ ರೂಪಿಸುವಾಗ ಈ ವಿಶೇಷ ಕಾರ್ಯಕ್ರಮದ ನೆನಪಿಗಾಗಿ ಒಂದು ಸಂದರ್ಭ ಸಂಚಿಕೆಯನ್ನು ತಂದರೆ ಅರ್ಥಪೂರ್ಣವಾಗಿರುತ್ತದೆ ಎಂದು ಹಲವರಿಂದ ಅಭಿಪ್ರಾಯ ಬಂತು.

ಆದರೆ ಸಮಯ ಬಹಳ ಕಡಿಮೆ ಇದೆ, ಈ ಅಲ್ಪಾವಧಿಯಲ್ಲಿ ಲೇಖನಗಳನ್ನು ಬರೆಸಿ ಮುದ್ರಿಸಲು ಸಾಧ್ಯವೇ ಎಂಬುದು ಇನ್ನು ಕೆಲವರ ಅನುಮಾನವಾಗಿತ್ತು. ಆಗ ಹಂಪಿ ವಿಶ್ವವಿದ್ಯಾಲಯದ  ಅಮರೇಶ್ ಯತಿಗಲ್ ಅವರು “ನ್ಯಾಯಮೂರ್ತಿ ಶಿವರಾಜ ಪಾಟೀಲರು ೧೨ನೇ ಶತಮಾನದ ಶರಣರ ತತ್ವಗಳನ್ನು ಅವರ ನಿಜ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಶೈಲಿ ರೂಪಿಸಿಕೊಂಡಿದ್ದಾರೆ.  ಆದ್ದರಿಂದ ೧೨ನೇ ಶತಮಾನದ  ಶರಣರ ಮೇಲೆ ರಾಜ್ಯದ ಅನೇಕ ವಿದ್ವಾಂಸರ ಕೈಯಲ್ಲಿ ಲೇಖನಗಳನ್ನು ಬರೆಸುತ್ತೇನೆ.

ಬಾಕಿ ಇರುವ ಎರಡು ತಿಂಗಳಲ್ಲಿ ಲೇಖನಗಳನ್ನು ಡಿ.ಟಿ.ಪಿ. ಮಾಡಿಸಿ ಪ್ರಿಂಟ್ ಮಾಡಲು ಸಾಧ್ಯವಾಗುವುದಾದರೆ ನಾನು ಲೇಖನಗಳನ್ನು ತರಿಸಿ ಕೊಡುತ್ತೇನೆ” ಎಂದರು.

ಕೇವಲ ಎರಡು ತಿಂಗಳ ಅವಧಿಯಲ್ಲಿ ೧೭೭ ಜನ ಹಿರಿಯ ಮತ್ತು ಕಿರಿಯ ಲೇಖಕರಿಂದ ಲೇಖನಗಳನ್ನು ತರಿಸಿ ಡಿ.ಟಿ.ಪಿ. ಮಾಡಿಸಿ ೮೦೦ ಪುಟಗಳ  ಕ್ರೌನ್ ೧/೪ ಅಳತೆಯ ಎರಡು ಬೃಹತ್ ಸಂಪುಟಗಳನ್ನು ಮುದ್ರಿಸಿ, ಕಾರ್ಯಕ್ರಮದ ದಿನದಂದು ಬಿಡುಗಡೆಗೆ ಕೆಲವೇ ನಿಮಿಷಗಳ ಮುಂಚೆ  ವೇದಿಕೆಗೆ ತಂದು ಸಿರಿಗೆರೆ ಶ್ರೀಗಳ ಕೈಯಿಂದ ಬಿಡುಗಡೆಗೊಳಿಸಿ, ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿ ಅಭಿನಂದನಾ ಸಮಿತಿ ಸದಸ್ಯರೊಂದಿಗೆ ನ್ಯಾಯಮೂರ್ತಿಗಳ ಮೆಚ್ಚುಗೆಗೂ ಪಾತ್ರರಾದೆವು.

ಕರ್ನಾಟಕದ ಗಡಿ ಭಾಗವಾದ  ರಾಯಚೂರು ಜಿಲ್ಲೆಯಲ್ಲಿ ಹುಟ್ಟಿ ಸರ್ಕಾರಿ ಶಾಲೆಗಳಲ್ಲಿ  ಕಷ್ಟಪಟ್ಟು ಓದಿ,  ಮುಂದೆ ಚೆನ್ನೈ ಮತ್ತು ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದ ಹಾಗೂ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರು ಜೀವನದುದ್ದಕ್ಕೂ ಅನೇಕ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದವರು.

ಯಾವುದೇ ಹುಮ್ಮು ಬಿಮ್ಮು ಇಲ್ಲದೆ ನಮಗೆ ಪ್ರೀತಿಯಿಂದ ಹಲವು ಸಲಹೆ ಸೂಚನೆಗಳನ್ನು ನೀಡುತ್ತ, ಅವರ ಬಳಿ ಬರುವ ಹಿರಿಯರಿಗೆ ನನ್ನನ್ನು ಪರಿಚಯಿಸಿ `ಕೃಷ್ಣಮೂರ್ತಿ ನಮ್ಮ ಮನುಷ್ಯ ಇದ್ದಂತೆ’ ಎನ್ನುವಾಗ ಹಾಗೂ ಅವರ ಕಾರ್ಯಕ್ರಮಗಳು ನಮ್ಮ ರಾಜ್ಯ ಹಾಗೂ ದೇಶದ ವಿವಿಧ ನಗರಗಳಲ್ಲಿ ನಡೆಯುವ ಸಂದರ್ಭದಲ್ಲಿ ನನ್ನನ್ನೂ ನ್ಯಾಯಮೂರ್ತಿಗಳು ಜೊತೆಯಲ್ಲಿ ಕರೆದುಕೊಂಡು ಹೋಗುವಾಗ ಬಹಳ ಹೆಮ್ಮೆ ಎನ್ನಿಸುತ್ತದೆ.

September 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: