ಎದೆಗೆ ಬಿದ್ದ ನೋವು ಮಕ್ಕಳಿಗೆ ಬಿಸಿಯೂಟವಾಗಿ ದಕ್ಕಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ಅವತ್ತು ನಡೆದ ಘಟನೆ ನನ್ನನ್ನು ಅಕ್ಷರಶ: ನಡುಗಿಸಿತು ವಿಠ್ಠಲಮೂರ್ತಿ. ಅಷ್ಟೇ ಅಲ್ಲ,ನಾಡಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅಕ್ಷರ ದಾಸೋಹ ಯೋಜನೆಗೆ ಪ್ರೇರಣೆಯಾಯಿತು ಅಂತ ಹೇಳಿ ಅವರು ಅರೆಕ್ಷಣ ಸುಮ್ಮನಾದರು.

ಆ ಪುಟ್ಟ ಲಾನ್‌ನಲ್ಲಿ ಅವರೊಂದಿಗೆ ಸೇರಿ ನಡೆಯುತ್ತಿದ್ದ ನಾನು ಗಕ್ಕಂತ ನಿಂತು: ಆ ಘಟನೆಯ ವಿವರ ಹೇಳಿ ಸಾರ್‌ ಎಂದೆ. ಅರೆಕ್ಷಣ, ಅವರು ಭಾವಕೋಶದ ಆಳಕ್ಕೆ ಜಾರಿದರು. ನಾನು ಅವಸರ ಮಾಡದೆ ಅವರನ್ನೇ ನೋಡತೊಡಗಿದೆ.

ನಾಡಿನ ಸರ್ಕಾರಿ ಶಾಲೆಗಳ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಆ ಕ್ರಾಂತಿಕಾರಿ ಯೋಜನೆಗೆ ಪ್ರೇರಣೆಯಾದ ಆ ಘಟನೆಯನ್ನು ಎಳೆ,ಎಳೆಯಾಗಿ ಅರಿಯುವುದು ನನಗೆ ಬೇಕಿತ್ತು. ಹಾಗೆಂಬ ಭಾವದೊಂದಿಗೆ ನಾನು ನೋಡುತ್ತಿರುವಾಗಲೇ ಅವರು ಮಾತನಾಡತೊಡಗಿದರು. ಅವರ ಹೆಸರು ಹೆಚ್‌.ವಿಶ್ವನಾಥ್‌.

ಇದು ಶುರುವಾಗಿದ್ದು ಒಂದು ಹೃದಯ ವಿದ್ರಾವಕ ಘಟನೆಯಿಂದ ವಿಠ್ಠಲಮೂರ್ತಿ. ಅವತ್ತು ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಅವರ ನೇತೃತ್ವದ ಸರ್ಕಾರ ಇತ್ತು. ನಾನು ಶಿಕ್ಷಣ ಸಚಿವನಾಗಿದ್ದೆ.

ಒಂದು ದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನನಗೆ ಬುಲಾವ್‌ ನೀಡಿದರು. ನಾನು ತಕ್ಷಣವೇ ಅವರನ್ನು ಹೋಗಿ ಭೇಟಿ ಮಾಡಿದೆ. ನನ್ನನ್ನು ನೋಡಿದ್ದೇ ಅವರು ತಮ್ಮ ಛೇಂಬರಿನ ಒಳಗೆ ಕರೆದುಕೊಂಡು ಹೋಗಿ ವಿಷಯ ಹೇಳಿದರು.

ವಿಶ್ವನಾಥ್‌,ನಮ್ಮ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ಇದೆಯಲ್ಲ? ಅಲ್ಲಿ ಕೊಂಚಾವರಂ ಅಂತ ಹಳ್ಳಿ ಇದೆ. ಅಲ್ಲೊಬ್ಬ ಕಲ್ಲು ಕುಟಿಗರ ಹೆಣ್ಣುಮಗಳು ತನ್ನ ಬಡತನದ ಕಾರಣಕ್ಕಾಗಿ ಹೆತ್ತ ಮಗುವನ್ನೇ ಮಾರಿದ್ದಾಳೆ.

ಇದು ಗೊತ್ತಾಗುತ್ತಿದ್ದಂತೆಯೇ ಎಲ್ಲ ಕಡೆ ಹಾಹಾಕಾರದ ಧ್ವನಿಗಳು ಎದ್ದಿವೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನೀವು ಸ್ಥಳಕ್ಕೆ ಹೋಗಿ, ಘಟನೆಯ ವಿವರ ಪಡೆದು ಸಮಸ್ಯೆಯನ್ನು ಬಗೆಹರಿಸಿ ಬನ್ನಿ.

ಅವತ್ತು ಮುಖ್ಯಮಂತ್ರಿಗಳು ನೀಡಿದ ಸೂಚನೆಯಂತೆ ನಾನು ತಕ್ಷಣವೇ ಅಧಿಕಾರಿಗಳ ಜತೆ ಸೇರಿ ಕೊಂಚಾವರಂ ಕಡೆ ಹೊರಟೆ. ಹೋದವನೇ ವಿವರ ಪಡೆದೆ. ಆ ತಾಯಿ ಹತ್ತುಸಾವಿರ ರೂಪಾಯಿಗಳಿಗಾಗಿ ತನ್ನ ಮಗುವನ್ನು ಮಾರಿದ್ದಳು. ಸರಿ, ಸಂಬಂಧಿಸಿದವರಿಗೆ ಹಣ ನೀಡಿ ಮಗುವನ್ನು ವಾಪಸ್ಸು ಪಡೆಯುವ, ಅದೇ ರೀತಿ ಆ ಮಗುವಿಗೆ ಅಗತ್ಯವಾದ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಂಡು ವಾಪಸ್ಸು ಹೊರಟೆ.

ಬೆಂಗಳೂರಿಗೆ ವಾಪಸ್ಸು ಬರಲು ಅವತ್ತು ಹೈದರಾಬಾದ್‌ ಏರ್‌ಪೋರ್ಟ್‌ಗೆ ಹೋಗಬೇಕಿತ್ತು. ಸರಿ, ಹಿರಿಯ ಅಧಿಕಾರಿಗಳಾದ ವಿಜಯಭಾಸ್ಕರ್‌ ಮತ್ತಿತರರ ಜತೆಗೂಡಿ ಹೊರಟಿದ್ದಾಯಿತು. ದಾರಿಯಲ್ಲಿ ನಾನು ಪಾನ್‌ ಹಾಕಿಕೊಂಡೆ. ಸ್ವಲ್ಪ ದೂರ ಹೋದ ಮೇಲೆ ಇಳಿಯಬೇಕು ಎಂಬ ಭಾವ. ಹಾಗಂತಲೇ ಡ್ರೈವರ್‌ಗೆ ಹೇಳಿ ಕಾರು ನಿಲ್ಲಿಸಿದೆ. ತಕ್ಷಣ ಹಿಂದಿದ್ದ ಎಲ್ಲ ಕಾರುಗಳು ನಿಂತವು.

ನಾನು ಕೆಳಗಿಳಿದವನೇ ಪಕ್ಕಕ್ಕೆ ಹೋಗಿ ಬಂದು ಸ್ವಲ್ಪ ಹೊತ್ತು ಕಾರಿನ ಬಾಗಿಲಿಗೆ ಕೈ ಆನಿಸಿ ನಿಂತುಕೊಂಡೆ. ಹಾಗೆ ನಿಂತುಕೊಳ್ಳುತ್ತಿದ್ದಂತೆಯೇ ಒಂದು ದೃಶ್ಯ ನನ್ನ ಮನಸ್ಸನ್ನು ಸೆಳೆಯಿತು. ಆ ಕಡೆಯಿಂದ ಒಬ್ಬ ಹೆಣ್ಣುಮಗಳು ಬಿರ ಬಿರನೆ ನಡೆದು ಬರುತ್ತಿದ್ದಾಳೆ.

ಬಿಸಿಲು ಎಂದರೆ ಎಂತಹ ರಣ ಬಿಸಿಲು ಎನ್ನುತ್ತೀರಿ? ಯಾರೋ ಬಿಸಿಲಿನ ತಾಪವನ್ನು ಮೊರದಲ್ಲಿ ಮೊಗೆ, ಮೊಗೆದು ಮೈ ಮೇಲೆ ಸುರಿದಂತೆ. ಅಂತಹ ಕಾಲದಲ್ಲಿ ಆ ಹೆಣ್ಣು ಮಗಳು ಕಾಲಿಗೆ ಚಪ್ಪಲಿ ಧರಿಸದೆ ಕೆಂಡದಂತಹ ಟಾರು ರಸ್ತೆಯ ಮೇಲೆ ನಡೆದು ಬರುತ್ತಿದ್ದಾಳೆ.

ಹಾಗಂತಲೇ ಹತ್ತಿರ ಬರುತ್ತಿದ್ದಂತೆಯೇ: ನಿಲ್ರಮ್ಮ ಎಂದು ಗಟ್ಟಿಯಾಗಿ ಕೂಗಿದೆ. ನನ್ನ ಕೂಗು ಕೇಳಿ ನಿಂತ ಆಕೆ, ಏನ್ರೀ ಸಾರ್‌ ಅಂತ ಮರು ಪಶ್ರಿಸಿದಳು. ನಾನು ದುಗುಡ ತಡೆಯಲಾಗದೆ, ಏನಮ್ಮ,ಎಲ್ಲಿಗೆ ಹೊರಟಿದ್ದೀರಿ? ಎಂದು ಕೇಳಿದೆ.

ಅದಕ್ಕಾಕೆ: ಇಲ್ಲೇ ಹತ್ತಿರದಲ್ಲಿ ನಮ್ಮ ಹಳ್ಳಿ ಇದೆ ಸಾರ್‌, ಬೆಳಿಗ್ಗೆ ಮಗುವನ್ನು ಶಾಲೆಗೆ ಓದಲು ಬಿಟ್ಟು ನಾನು ಕೆಲಸಕ್ಕೆ ಹೋಗಿದ್ದೆ. ಈಗ ಮಧ್ಯಾಹ್ನದ ಸಮಯ. ಹೊತ್ತಿಗೆ ಸರಿಯಾಗಿ ಹೋಗದಿದ್ದರೆ ಆ ಮಗು ಕೂಳಿಗಾಗಿ ಯಾರ ಮನೆ ಬಾಗಿಲಲ್ಲಿ ನಿಲ್ಲುತ್ತದೋ ಗೊತ್ತಿಲ್ಲ ಎಂದಳು.

ಆಕೆಯ ಮಾತು ಕೇಳಿ ನಾನು ವಿಸ್ಮಿತನಾಗಿ: ಹಾಗಿದ್ದರೆ ಕೆಲಸಕ್ಕೆ ಅಂತ ಬರುವಾಗಲೇ ಅಡುಗೆ ಮಾಡಿಟ್ಟು ಬಂದಿದ್ದೀರಾ ತಾಯಿ? ಅಂತ ಕೇಳಿದೆ. ಅದಕ್ಕಾಕೆ: ಇಲ್ಲ ಸಾರ್‌, ಆ ಮಗುವಿಗಿಂತ ಮುಂಚೆ ನಾನು ಹೋದರೆ ಯಾರಲ್ಲಾದರೂ ಕೂಳು ಬೇಡಿ ತಿನ್ನಿಸಬಹುದು. ಇಲ್ಲದಿದ್ದರೆ ಆ ಮಗು ಹೋಗಿ ನಿಲ್ಲಬೇಕಾಗುತ್ತದೆ ಎಂದಳು.

ಆಕೆಯ ಮಾತು ಕೇಳಿ ನನ್ನ ಹೃದಯ ದ್ರವಿಸಿ ಹೋಯಿತು ವಿಠ್ಠಲಮೂರ್ತಿ, ಬೇರೆ ಮಾತನಾಡಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಅಲ್ಲಿಂದ ಮುಂದೆ ಹೈದ್ರಾಬಾದ್‌ ಏರ್‌ಪೋರ್ಟ್‌ಗೆ ಹೋಗುವ ತನಕವೂ ಮನಸ್ಸಿನಲ್ಲಿ ಶೂನ್ಯ ಭಾವ.

ಆದರೆ ಹೈದ್ರಾಬಾದ್‌ ಏರ್‌ಪೋರ್ಟ್‌ ತಲುಪುತ್ತಿದ್ದಂತೆಯೇ ಒಂದು ವಿಷಯ ತಿಳಿಯಿತು. ಅಲ್ಲಿಂದ ಬೆಂಗಳೂರಿಗೆ ಹೊರಡುವ ವಿಮಾನ ಬರಲು ವಿಳಂಬವಾಗಿದೆ. ಹೀಗಾಗಿ ಇನ್ನೂ ಎರಡು ಗಂಟೆ ಅಲ್ಲೇ ಕಳೆಯಬೇಕು ಎಂಬುದು ಆ ವಿಷಯ.

ಸರಿ,ನಾನು ಏರ್‌ಪೋರ್ಟ್‌ ಲಾಂಜಿನಲ್ಲೇ ವಿಜಯಭಾಸ್ಕರ್‌ ಮತ್ತಿತರ ಅಧಿಕಾರಿಗಳೊಂದಿಗೆ ಸೇರಿ ಸಭೆ ಮಾಡಿದೆ, ರಸ್ತೆಯಲ್ಲಿ ಸಿಕ್ಕ ಹೆಣ್ಣುಮಗಳ ಕತೆಯನ್ನು ನೀವೆಲ್ಲ ಕೇಳಿದ್ದೀರಿ. ಇಂತಹ ಸಂದರ್ಭದಲ್ಲಿ ಆ ಹೆಣ್ಣುಮಗಳು ಮತ್ತು ಮಗುವಿನ ಬದುಕಿಗೆ ಶಕ್ತಿ ತುಂಬುವುದು ಒಂದು ಹೃದಯವಂತ ಸರ್ಕಾರದ ಕೆಲಸ. ಇದು ನಮಗೆ ಸಿಕ್ಕ ಒಂದು ಉದಾಹರಣೆ. ಇದನ್ನೇ ಮುಂದಿಟ್ಟುಕೊಂಡು ನಾಡಿನ ಮಕ್ಕಳಿಗೆ ಮಧ್ಯಾಹ್ನದ ಊಟ ದಕ್ಕುವಂತೆ ಮಾಡಬೇಕು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಕೂಡಾ ಆದೇಶ ನೀಡಿದೆ. ಆದರೆ ಇದನ್ನು ಹೇಗೆ ಮಾಡಬಹುದು ಹೇಳಿ ಎಂದೆ.

ನೀವು ನಂಬಲಾರಿರಿ, ಅವತ್ತು ನಾನು ಈ ಮಾತನಾಡಿದ ಕೂಡಲೇ ವಿಜಯಭಾಸ್ಕರ್‌ ಸೇರಿದಂತೆ ಅಧಿಕಾರಿಗಳ ಪಡೆ: ಸಾರ್‌,ನೀವು ಹೇಳಿದ್ದು ನಿಜ. ಶಾಲಾ ಮಕ್ಕಳಿಗೆ ಒಂದು ಹೊತ್ತಿನ ಊಟ ದಕ್ಕಿದರೆ ಅವರ ಅಕ್ಷರಾಭ್ಯಾಸವೂ ನಡೆಯುತ್ತದೆ. ಪೋಷಕರ ನೋವಿನ ಕತೆಗೂ ಒಂದು ಮಟ್ಟದ ವಿರಾಮ ಹಾಕಿದಂತಾಗುತ್ತದೆ ಎಂದರು.

ಸರಿ, ಹಾಗಿದ್ದರೆ ಶಾಲಾ ಮಕ್ಕಳಿಗೆ ಒಂದು ಹೊತ್ತಿನ ಊಟ ಒದಗಿಸುವ ಯೋಜನೆಗೆ ನಾವು ಎಲ್ಲಿಂದ ಹಣ ಹೊಂದಿಸಬಹುದು ಅನ್ನುವುದನ್ನೂ ಯೋಚಿಸಿ, ಯಾಕೆಂದರೆ ರಾಜ್ಯ ಸರ್ಕಾರದ ಈ ವರ್ಷದ ಬಜೆಟ್‌ ಗಾತ್ರವೇ ನಲವತ್ತೆರಡು ಸಾವಿರ ಕೋಟಿ ರೂಪಾಯಿ. ಹೀಗಾಗಿ ಇಂತಹದೊಂದು ದೊಡ್ಡ ಯೋಜನೆಗೆ ಬಹಳ ಹಣ ಬೇಕು ಎಂದೆ.

ಆಗ ಅಧಿಕಾರಿಗಳು ಒಂದು ವಿಷಯದ ಬಗ್ಗೆ ಗಮನ ಸೆಳೆದರು. ಸಾರ್‌,ಬಹುತೇಕ ಖಾಸಗಿ ಶಾಲೆಯವರು ಶಿಕ್ಷಣ ಕೊಡುವ ಹೆಸರಿನಲ್ಲಿ ಅನಗತ್ಯವಾಗಿ ಶಾಲೆಗಳನ್ನು ತೆರೆದು ಸರ್ಕಾರದ ಹಣ ಲೂಟಿ ಹೊಡೆಯುತ್ತಿದ್ದಾರೆ. ಅದಕ್ಕೆ ತಡೆ ಒಡ್ಡಲು ಶಿಕ್ಷಣ ಇಲಾಖೆಯ ಸೇವಾ ನಿಯಮಾವಳಿ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೇವಲ್ಲ? ಇದರಿಂದ ನೂರಾ ಇಪ್ಪತ್ತು ಕೋಟಿ ರೂಪಾಯಿಗಳಷ್ಟು ಹಣ ಉಳಿಯುತ್ತದೆ. ಅದನ್ನೇ ಈ ಯೋಜನೆಗೆ ಬಳಸಬಹುದು.

ಸರಿ, ಬೆಂಗಳೂರಿಗೆ ವಾಪಸ್ಸಾದ ಮೇಲೆ ನಾನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದೆ. ಕೊಂಚಾವರಂ ಘಟನೆಯ ವಿವರ ನೀಡಿದ ನಂತರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಚನೆಯ ಕುರಿತು ವಿವರಿಸಿದೆ.

ಕೃಷ್ಣ ಅವರೂ ಬಹಳ ದೊಡ್ಡ ವ್ಯಕ್ತಿ. ಕೇಳಿದ ಕೂಡಲೆ ಗೋ ಅಹೆಡ್‌ ಎಂದರು. ಅಷ್ಟೇ ಅಲ್ಲ,ಯೋಜನೆಗೆ ಹಣದ ಕೊರತೆಯಾದರೆ ಬೇರೆ ಮೂಲಗಳಿಂದ ಕೊಡೋಣ ಎಂದರು. ಕೊಟ್ಟರು ಕೂಡಾ.

ಹೀಗೆ ನೋಡ, ನೋಡುತ್ತಿದ್ದಂತೆಯೇ ರಾಜ್ಯದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಗೆ ಕಣ್ಣು ಬಂತು. ಆರಂಭದಲ್ಲಿ ಹೈದ್ರಾಬಾದ್‌ ಕರ್ನಾಟಕ ಭಾಗದ ಆರು, ಮುಂಬೈ-ಕರ್ನಾಟಕ ಭಾಗದ ಎರಡು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕೆಲಸ ಶುರುವಾಯಿತು.

ಅವತ್ತಿನ ಕಾಲಕ್ಕೆ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಂಟು ಸಾವಿರ ಅಡುಗೆ ಮನೆಗಳು ಆರಂಭವಾಗಿ,ಲಕ್ಷಾಂತರ ಮಕ್ಕಳ ಮಧ್ಯಾಹ್ನದ ಹೊಟ್ಟೆಯ ಹಸಿವನ್ನು ಆ ಮೂಲಕ ಅಕ್ಷರದ ಹಸಿವನ್ನು ಈ ಯೋಜನೆ ನೀಗಿಸಿತು.

ಮುಂದೆ ಈ ಯೋಜನೆ ಇಡೀ ರಾಜ್ಯದುದ್ದಗಲ ಆವರಿಸಿಕೊಂಡಿತು. ಆ ಮೂಲಕ ಹಸಿವಿನ ಕಾರಣಕ್ಕಾಗಿ ಅಕ್ಷರದಿಂದ ಯಾರೂ ವಂಚಿತರಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು ವಿಠ್ಠಲಮೂರ್ತಿ.

ಅಂದ ಹಾಗೆ ಇಂತಹ ಯೋಜನೆಗಳಿಗೆ ನಾವು ಕಾರಣರು ಎಂಬುದು ನಿಮಿತ್ತ. ವಸ್ತುಸ್ಥಿತಿ ಎಂದರೆ ಇಂತಹ ಯೋಜನೆಗಳಿಗೆ ಮೂಲ ಕಾರಣರಾದವರೇ ನಮ್ಮ ಜನ. ಅವರ ನೋವುಗಳಿಗೆ, ಭಾವನೆಗಳಿಗೆ ಸ್ಪಂದಿಸುತ್ತಾ ನಾವು ಮುಂದಿನ ಹೆಜ್ಜೆ ಇಟ್ಟೆವು ಅಷ್ಟೇ.

ಹಾಗಂತ ಹೇಳಿದ ವಿಶ್ವನಾಥ್‌ ಮೌನವಾಗಿ ಆ ಲಾನ್‌ನಲ್ಲಿ ನಡೆಯತೊಡಗಿದರು. ನಾನೂ ಸುಮ್ಮನೆ ನಡೆಯತೊಡಗಿದೆ.

September 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: