ಇದು ‘ಶೌಚಲೋಕ’ವಯ್ಯಾ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿಯ ಜನನಿಬಿಡ ಪಾಲಂ-ದಾಬ್ರಿ ರಸ್ತೆಯು ಒಂದು ರೀತಿಯಲ್ಲಿ ಗಡಿಬಿಡಿಯ ತಾಣವೇ ಸರಿ.

ತೀರಾ ಗಲ್ಲಿಯಂತಲ್ಲದಿದ್ದರೂ ಇಕ್ಕಟ್ಟೆನಿಸುವ ರಸ್ತೆಗಳು, ಚಾಲಕನೊಬ್ಬ ಒಂದೇ ಒಂದು ಕ್ಷಣ ಸಾವರಿಸಿಕೊಂಡರೂ ಆಕಾಶ ಹರಿಯುವಷ್ಟರ ಮಟ್ಟಿಗೆ ಹಾರ್ನ್ ಮಾಡಿ ಅರಚುವ ವಾಹನಗಳ ಮುಗಿಯದ ಮೆರವಣಿಗೆಗಳು, ಬಹುತೇಕ ಒಂದೇ ರೀತಿ ಕಾಣುವ ಮುಖ್ಯ ರಸ್ತೆಯಿಂದ ಎರಡೂ ಬದಿಗಳಲ್ಲಿ ಚಾಚಿ ಹಬ್ಬಿರುವ ಒಳರಸ್ತೆಗಳು…

ಇವೆಲ್ಲಾ ಗಜಿ ಬಿಜಿ-ಗೋಜಲುಗಳ ಮಧ್ಯೆ ಈ ಜಾಗವು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯುಳ್ಳ ಅಚ್ಚರಿಯೊಂದಕ್ಕೆ ಆತಿಥ್ಯವನ್ನು ನೀಡುತ್ತಿದೆ ಎಂಬ ಸಂಗತಿಯೇ ತಕ್ಷಣಕ್ಕೆ ಮರೆತುಹೋಗುತ್ತದೆ. ಇನ್ನು ಈ ಜಾಗಕ್ಕೆ ಹೊಸಬರಾದರೆ ನಿಜಕ್ಕೂ ನಾವು ಸರಿಯಾದ ದಿಕ್ಕಿನತ್ತ ಪ್ರಯಾಣಿಸುತ್ತಿದ್ದೇವೆಯೋ ಇಲ್ಲವೋ ಎಂದು ಸಾಕ್ಷಾತ್ ಗೂಗಲ್ಬಾ ಬಾನನ್ನೇ ಅನುಮಾನಿಸಿ ನೋಡುವಂತಾಗುತ್ತದೆ.

ಯಾವ ಅರ್ಥದಲ್ಲಿ ಹೇಳಿದರೂ ವಿಶಿಷ್ಟವೆಂದು ಸಾಬೀತುಪಡಿಸಬಹುದಾದ ವಸ್ತು ಸಂಗ್ರಹಾಲಯವೇ ಇಲ್ಲಿರುವ ಈ ಅಚ್ಚರಿ. ಇಂತಹ ಜನನಿಬಿಡ ಪ್ರದೇಶದಲ್ಲೂ ಈ ಒಂದು ಮ್ಯೂಸಿಯಂ ತನ್ನ ಪಾಡಿಗೆ ತಾನು ಹಾಯಾಗಿದೆ. ಹೀಗಾಗಿಯೇ ಯಾವುದೇ ಅದ್ದೂರಿ ಫಲಕಗಳಿಲ್ಲದೆ, ಹತ್ತರಲ್ಲಿ ಹನ್ನೊಂದರಂತೆ ಕಾಣುವ ಈ ವಸ್ತುಸಂಗ್ರಹಾಲಯವನ್ನು ಇಲ್ಲಿ ಹುಡುಕುವುದು ಕೊಂಚ ಪ್ರಯಾಸದ ಕೆಲಸ. ಆದರೆ ಗೋಜಲುಗಳ ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕರೆ ಸಿಗುವುದು ಮಾತ್ರ ಅಕ್ಷರಶಃ ಒಂದು ಅಚ್ಚರಿಯ ಲೋಕ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ವಿಶಿಷ್ಟ ಲೋಕವೂ ಹೌದು.

ಇಲ್ಲಿ ‘ಲೋಕ’ ಎಂಬ ಪದದ ಬಳಕೆಯ ಬಗ್ಗೆ ನನಗೆ ಹಿಂಜರಿಕೆಯೇನೂ ಇಲ್ಲ. ಏಕೆಂದರೆ ಇಲ್ಲಿ ಉತ್ಪ್ರೇಕ್ಷೆಯೂ ಇಲ್ಲ. ಆ ಒಂದು ಪುಟ್ಟ ಕೋಣೆಯಲ್ಲಿ ನಿಜಕ್ಕೂ ವಿಶಿಷ್ಟವಾದ ಲೋಕವನ್ನೇ ತೆರೆದಿಟ್ಟಿದ್ದಾರೆ ಇದರ ಹಿಂದಿರುವ ಮಾಸ್ಟರ್ಮೈಂಡ್ ಗಳು. ಇಲ್ಲಿರುವ ಸಂಗತಿಗಳ ಬಗ್ಗೆ ತಿಳಿಯುತ್ತಾ ಹೋದಂತೆ ಜಗತ್ತು ಅದೆಷ್ಟು ವಿಶಾಲವಾಗಿದೆ.

ಅಬ್ಬಬ್ಬಾ, ನಮಗಿನ್ನೂ ತಿಳಿದಿರದ ಅದೆಷ್ಟು ಸಂಗತಿಗಳು ಈ ಪ್ರಪಂಚದಲ್ಲಿವೆ ಎಂಬುದರ ಅರಿವಾಗಿ ಬದುಕಿನ ಬಗ್ಗೆ ಮತ್ತಷ್ಟು ವಿನೀತ ಭಾವವು ಮೂಡುತ್ತದೆ. ಇವೆಲ್ಲವನ್ನು ನೋಡುತ್ತಾ ನೀವು ಕಣ್ಣರಳಿಸುತ್ತಿರುವ ನಡುವಿನಲ್ಲೇ ಫೋಟೋಗ್ರಾಫರ್ ಒಬ್ಬ ಬಂದು ನಿಮ್ಮ ಕ್ಯಾಂಡಿಡ್ ಕ್ಷಣವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿರುತ್ತಾನೆ.

ಭಾರತ ಭೇಟಿಯ ಸಂದರ್ಭದಲ್ಲೆಲ್ಲಾ ಇಲ್ಲಿಯ ಚಿಕ್ಕಪುಟ್ಟ ಅಚ್ಚರಿಗಳನ್ನು ಮಗುವಿನಂತೆ ಕಣ್ಣರಳಿಸಿ ನೋಡುತ್ತಿದ್ದ ಬಿಲ್ ಕ್ಲಿಂಟನ್ ನಿಗೆ ಆದಂತೆ ಇಲ್ಲಿ ಬರುವ ಆಸಕ್ತರಿಗೂ ಈ ಫೋಟೋ ಕ್ಷಣಗಳು ಮುದವನ್ನು ನೀಡುವುದು ಖಚಿತ. ಶೌಚದ ವಿಚಾರವು ನಮ್ಮ ದೇಶದಲ್ಲಿ ತಮಾಷೆಯಾಗಿ ಬಳಕೆಯಾಗುವುದು ಹೆಚ್ಚೇ ಹೊರತು, ಈ ಕುರಿತು ಜನಸಾಮಾನ್ಯರ ನಡುವೆ ಗಂಭೀರ ಚರ್ಚೆಗಳಾಗುವುದು ತೀರಾ ಕಡಿಮೆ.

ನಮಗೆ ಬಯಲಿಗೆ ಹೋದರಷ್ಟೇ ನಿರಾಳವಾಗುವುದು ಎನ್ನುವವರು ನನಗೆ ಇಂದಿಗೂ ಗೊತ್ತು. ಅಂಥದ್ದರಲ್ಲಿ ಶೌಚವನ್ನೇ ಥೀಮ್ ಆಗಿರಿಸಿಕೊಂಡು ಮ್ಯೂಸಿಯಂ ಒಂದನ್ನು ಸೃಷ್ಟಿಸಿದ್ದಾರೆಂದರೆ ಹೇಗಾಗಬೇಡ! ಇಂಥದ್ದೊಂದು ವಿಚಿತ್ರವಾದ ಕುತೂಹಲವನ್ನಿಟ್ಟುಕೊಂಡೇ ನಾನು ದಿಲ್ಲಿಯ ಸುಲಭ್ ಇಂಟನ್ರ್ಯಾಷನಲ್ ವಸ್ತು ಸಂಗ್ರಹಾಲಯವನ್ನು ಪ್ರವೇಶಿಸಿದ್ದೆ.

ಜಗತ್ತಿನಲ್ಲಿರುವ ವಿಲಕ್ಷಣ ವಸ್ತುಸಂಗ್ರಹಾಲಯಗಳ ಬಹುತೇಕ ಎಲ್ಲಾ ಪಟ್ಟಿಯಲ್ಲೂ ಸ್ಥಾನವನ್ನು ಪಡೆದಿರುವ ಈ ಮ್ಯೂಸಿಯಂ ಸಹಜವಾಗಿಯೇ ನನ್ನ ಕುತೂಹಲವನ್ನು ಕೆರಳಿಸಿತ್ತು. ಮತ್ತೇಕೆ ತಡ? ನನ್ನ ಸವಾರಿಯು ಹೊರಟಾಗಿತ್ತು. ಮೇಲ್ನೋಟಕ್ಕೆ ಪುಟ್ಟ ಶಾಲೆಯಂತೆ ಕಾಣುವ ಈ ಆವರಣದಲ್ಲಿ ಸಿಬ್ಬಂದಿಯೊಬ್ಬರು ಸ್ವಾಗತಿಸಿ ʼನೀವು ನೇರವಾಗಿ ಆ ಕೋಣೆಯೊಳಕ್ಕೆ ಹೋಗಿ. ಮ್ಯೂಸಿಯಂ ಅಲ್ಲಿದೆʼ , ಎಂದಿದ್ದರು.

ನೋಡಲು ಎಷ್ಟು ಸಮಯ ತಗುಲಬಹುದು ಎಂಬ ನನ್ನ ಒಣಪ್ರಶ್ನೆಗೆ ಉತ್ತರವಾಗಿ, ಅದು ನಿಮಗೆ ಬಿಟ್ಟಿದ್ದು ಸಾರ್ ಎಂದಿದ್ದ ಆತ. ಇತ್ತ ಮ್ಯೂಸಿಯಂ ಒಳಹೊಕ್ಕು ನೋಡಿದರೆ ಬಗೆಬಗೆಯ ಕಮೋಡ್ ಗಳೇ ತುಂಬಿದ್ದ ಪುಟ್ಟ ಅಂಗಡಿಯೊಳಕ್ಕೆ ನುಗ್ಗಿದಂತಾಗಿತ್ತು. ಕಲಾಕೃತಿಗಳಿಗಿಂತ ತಾವೇನು ಕಮ್ಮಿ ಎಂಬಂತಿದ್ದ ಆಕರ್ಷಕ ಕುಸುರಿ ಶೈಲಿಯ ಶೌಚಪರಿಕರಗಳು. ಗೋಡೆಗಳ ಮೇಲೆ ತರಹೇವಾರಿ ಫ್ರೇಮುಗಳು. ಇರಿಸಿದ್ದ ಮೇಜುಗಳ ಮೇಲೆ ವಿವಿಧ ಗಾತ್ರ, ಬಣ್ಣ ಮತ್ತು ಆಕಾರಗಳ ತರಹೇವಾರಿ ಕಮೋಡ್ ಗಳು, ಶೌಚಾಲಯದ ಮಾದರಿಗಳು. ಮತ್ತೊಂದು ಮೂಲೆಯಲ್ಲಿ ಏನೋ ಒಂದು ಕಲಾಕೃತಿ, ಮತ್ತೇನೋ ಕಾರ್ಟೂನು.

ಹೆಚ್ಚಿನ ವಿಸ್ತೀರ್ಣವನ್ನು ಆವರಿಸದಿರುವ ಆ ಉದ್ದನೆಯ ಕೋಣೆಯನ್ನು ನೋಡಿದರೆ ಹೆಚ್ಚೆಂದರೆ ಹತ್ತು-ಹದಿನೈದು ನಿಮಿಷಗಳಲ್ಲಿ ಮ್ಯೂಸಿಯಂ ನೋಡಿ ಮುಗಿಸಬಹುದು ಎಂಬ ಯೋಚನೆಯು ಯಾರಿಗಾದರೂ ಥಟ್ಟನೆ ಮೂಡುವುದು ಸಹಜ. ಆದರೆ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ಏನುಂಟು, ಏನಿಲ್ಲ! ಅಲ್ಲಿದ್ದ ಒಂದೊಂದು ವಸ್ತುವೂ ಒಂದೊಂದು ಕಥೆಯನ್ನು ಹೇಳುತ್ತಲಿತ್ತು. ಒಂದೊಂದು ವ್ಯಂಗ್ಯಚಿತ್ರಕ್ಕೂ, ತಮಾಷೆಯ ಪಂಚ್-ಲೈನುಗಳಿಗೂ ತನ್ನದೇ ಆದ ಸೊಗಸು.

ನಾನಂದು ಜಾಗತಿಕ ಮಟ್ಟಿನ ವೈಚಿತ್ರ್ಯಗಳ ಸಂಗ್ರಹವೆಂದು ಗುರುತಿಸಲ್ಪಟ್ಟಿದ್ದ ವಿಶ್ವವಿಖ್ಯಾತ ಮ್ಯೂಸಿಯಂ ಒಂದರಲ್ಲಿ ಅಡ್ಡಾಡುತ್ತಿದ್ದೆ. ಅದು ವೈಭವದ ಪ್ಯಾರಿಸ್ಸೂ ಅಲ್ಲ, ದೂರದ ಅಥೆನ್ಸೂ ಅಲ್ಲ. ಬದಲಾಗಿ ನಮ್ಮದೇ ದಿಲ್ವಾಲೋಂಕೀ ದಿಲ್ಲಿಯಲ್ಲಿ! ಇದರೊಂದಿಗೆ ವಸ್ತುಸಂಗ್ರಹಾಲಯವೊಂದನ್ನು ನಿರ್ಮಿಸಲು ಭವ್ಯ ಅರಮನೆಯಂತಹ ವಿಶಾಲ ಜಾಗವೇ ಬೇಕು ಎಂಬ ನನ್ನ ಬಾಲಿಶ ಕಲ್ಪನೆಯು ಮಣ್ಣುಮುಕ್ಕಿತ್ತು.

“ಶೌಚಾಲಯ” ಎಂದಾಗಲೆಲ್ಲಾ ಸಾಮಾನ್ಯವಾಗಿ ನಮ್ಮ ಮನದಲ್ಲಿ ಮೂಡುವ ಚಿತ್ರಗಳು ಏನೇನಿರಬಹುದು? ಅವೆಲ್ಲವನ್ನೂ ಮೀರಿದ ಹಲವು ಆಯಾಮಗಳನ್ನು ನೋಡಬೇಕೆಂದರೆ ಈ ಸುಲಭ್ ಮ್ಯೂಸಿಯಮ್ಮಿಗೆ ಬರಲೇಬೇಕು. ಕ್ರಿಸ್ತಪೂರ್ವ 2500 ರ ಮೊಹಂಜೋದಾರೋ-ಹರಪ್ಪ ನಾಗರಿಕತೆಯ ಕಾಲದಿಂದ ಹಿಡಿದು ಇಂದಿನವರೆಗೆ ಶೌಚ, ನೈರ್ಮಲ್ಯ ಇತ್ಯಾದಿಗಳ ಬಗ್ಗೆ ಆಗಿರುವ ಮೈಲುಗಲ್ಲಿನಂತಹ ಎಲ್ಲಾ ಐತಿಹಾಸಿಕ ನೆನಪುಗಳನ್ನು ಇಲ್ಲಿ ಹಲವು ರೂಪಗಳಲ್ಲಿ ಸಂಗ್ರಹಿಸಿಡಲಾಗಿದೆ.

ವಿಶೇಷವೆಂದರೆ ಇವುಗಳು ಪ್ರಾಚೀನ ಕಾಲದಲ್ಲಿದ್ದ ನಗರ ನೈರ್ಮಲ್ಯ ವ್ಯವಸ್ಥೆ, ಶೌಚಾಲಯ ಪರಿಕರಗಳ ಮಾದರಿಗಳು ಮತ್ತು ಅಪರೂಪದ ಛಾಯಾಚಿತ್ರಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಇವುಗಳ ಜೊತೆಗೆ ತಳುಕು ಹಾಕಿಕೊಂಡಿರುವ ಸಾಮಾಜಿಕ-ಸಾಂಸ್ಕಂತಿಕ ಆಯಾಮಗಳು, ಜನಪದ, ಸಾಹಿತ್ಯ, ಆಧ್ಯಾತ್ಮ, ಜೀವನಶೈಲಿ, ನಗೆಚಟಾಕಿಗಳು, ವೈಚಿತ್ರ್ಯಗಳು, ವಿವಾದಗಳು, ರಾಜಕೀಯ, ಆಡಳಿತಾತ್ಮಕ-ಕಾನೂನು ಸಂಬಂಧಿ ವಿಚಾರಗಳು… ಹೀಗೆ ಹತ್ತು ಹಲವು ವಿಚಾರಗಳ ಸುತ್ತಲೂ ಬೆಳಕು ಚೆಲ್ಲುತ್ತವೆ. ಮಾನವನ ವಿಕಾಸದೊಂದಿಗೆ ಶೌಚಾಲಯಗಳೂ ಕೂಡ ಕಾಲಾಂತರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿವೆ.

ಆದರೆ ವಿವಿಧ ಭೌಗೋಳಿಕ ವಲಯಗಳಲ್ಲಿ ಇದು ನಡೆದುಬಂದ ಪರಿ ಮಾತ್ರ ವಿಭಿನ್ನ. ಉದಾಹರಣೆಗೆ ಹರಪ್ಪ- ಮೊಹಂಜೋದಾರೋ ಉಚ್ಛ್ರಾಯ ಕಾಲದ ನಗರದಲ್ಲಿ ತಕ್ಕಮಟ್ಟಿನ ನೈರ್ಮಲ್ಯ ಸಂಬಂಧಿ ವ್ಯವಸ್ಥೆಗಳಿದ್ದವು. ಆ ಕಾಲಕ್ಕೆ ಅದು ಅಚ್ಚರಿಯ ಸಂಗತಿಯೇ ಸರಿ. ಪ್ರಾಚೀನ ಈಜಿಪ್ಟ್ ನಲ್ಲೂ ಇಂತಹ ವ್ಯವಸ್ಥೆಗಳಿದ್ದವಂತೆ. ಆದರೆ 500 – 1500 ಎ.ಡಿ ಕಾಲದ ಯೂರೋಪಿನಲ್ಲಿ ಮಲವನ್ನು ನೇರವಾಗಿ ರಸ್ತೆಯ ಮೇಲೆಯೇ ತಂದು ಸುರಿಯುತ್ತಿದ್ದರು.

ಶ್ರೀಮಂತರಿಂದ ಹಿಡಿದು ಬಡವರವರೆಗೆ ಎಲ್ಲರ ರೂಢಿಯೂ ಇದೇ ಆಗಿತ್ತು. ಸಿರಿವಂತರ ಮನೆಯ ಒಂದು ಭಾಗವು ಕೊಂಚ ವಿಸ್ತರಿಸಿದಂತಿದ್ದು ಈ ಭಾಗವು ಶೌಚಕ್ಕೆ ಮೀಸಲಾಗಿತ್ತಲ್ಲದೆ, ವಿಸರ್ಜಿಸಿದ ಮಲವು ನೇರವಾಗಿ ಬೀದಿಯಲ್ಲಿ ಬೀಳುವಂತಿತ್ತು. ವಿವಾದಾತ್ಮಕ ಫ್ರೆಂಚ್ ಕವಿಯಾಗಿದ್ದ ಕ್ಲೌಡೆ ಲೆ ಪೆತೀತ್ ಸೇರಿದಂತೆ ಹಲವು ಕವಿಗಳು ಈ ಅಂಶಗಳನ್ನು ತಮ್ಮ ಸಾಲುಗಳಲ್ಲಿ ಉಲ್ಲೇಖಿಸಿದ್ದ ಸಂದರ್ಭಗಳೂ ಇವೆ.

ವಿಚಿತ್ರವೆಂದರೆ ಸಿಂಧೂ ನಾಗರಿಕತೆಯ ಅವಸಾನದ ನಂತರ ಆ ಕಾಲಕ್ಕೆ ಆಧುನಿಕವೆಂದು ಹೇಳಬಹುದಾಗಿದ್ದ ನೈರ್ಮಲ್ಯ ವ್ಯವಸ್ಥೆಯು ಭಾರತದ ಭೂಭಾಗದಲ್ಲಿ ಕ್ರಮೇಣ ನೇಪಥ್ಯಕ್ಕೆ ಸರಿದುಹೋಯಿತು. ಇತ್ತ ಕ್ರಿಸ್ತಪೂರ್ವ 2100 ರ ಈಜಿಪ್ಟಿನಲ್ಲಿ ಕುಳಿತು ಮಲವಿಸರ್ಜಿಸುವ ವ್ಯವಸ್ಥೆಯು ಚಾಲ್ತಿಯಲ್ಲಿತ್ತು. ರೋಮ್ ನಲ್ಲಿ ಸಾರ್ವಜನಿಕ ಸ್ನಾನಗೃಹ ಮತ್ತು ಶೌಚಾಲಯಗಳಿದ್ದವು.

ಶೌಚಾಲಯಗಳನ್ನು ಬಳಸುವ ಬಗ್ಗೆ ಗ್ರೀಕಿನ ಮಂದಿಗೆ ಮಡಿಮೈಲಿಗೆಗಳಿರಲಿಲ್ಲ ಮತ್ತು ಸಾಮಾನ್ಯವಾಗಿ ಶೌಚಾಲಯಗಳನ್ನು ಮನೆಯ ಹೊರಭಾಗದಲ್ಲಿ ನಿರ್ಮಿಸಲಾಗುತ್ತಿತ್ತು. ಆದರೆ ರಾಜರನ್ನೂ ಸೇರಿದಂತೆ ರೋಮ್ ನಲ್ಲಿದ್ದ ಸಿರಿವಂತ ವರ್ಗದವರ ಮಲವನ್ನು ಹಲವು ಶೈಲಿಗಳಲ್ಲಿ ವಿಶೇಷವಾಗಿ ತಯಾರಿಸಲ್ಪಟ್ಟಿದ್ದ ಸುಂದರ ಪಾತ್ರೆಗಳಲ್ಲಿ ಗುಲಾಮರೇ ಬಾಚಿಕೊಂಡು ಇನ್ನೆಲ್ಲೋ ಸುರಿಯಬೇಕಿತ್ತು.

ಕಾಲಾಂತರದಲ್ಲಿ ಶೌಚಾಲಯಗಳ ಮಾದರಿಯಲ್ಲಿ, ಪರಿಕರಗಳ ಬಳಕೆಯ ವಿಧಾನಗಳಲ್ಲಿ ಮತ್ತು ಶೈಲಿಗಳಲ್ಲಿ ಹಲವಾರು ಬದಲಾವಣೆಗಳಾಗಿದ್ದೇನೋ ನಿಜ. ಆದರೆ ತ್ಯಾಜ್ಯ ನಿರ್ವಹಣೆಯ ಮೂಲ ಪರಿಕಲ್ಪನೆಯಲ್ಲಿ ಮಹತ್ತರವೆನ್ನಿಸುವ ಬದಲಾವಣೆಗಳೇನೂ ಆಗಿರಲಿಲ್ಲ. ಹೀಗಾಗಿ ಸಾವಿರಾರು ವರ್ಷಗಳ ಕಾಲ ಮಾನವ ಸಂಕುಲವು ಹಲವು ಸವಾಲುಗಳನ್ನು ಎದುರಿಸುತ್ತಲೇ ಇರಬೇಕಾಗಿದ್ದು ಸತ್ಯ.

ಒಟ್ಟಾರೆಯಾಗಿ ತಂತ್ರಜ್ಞಾನದ ನೆಲೆಯಲ್ಲಿ ನೆನಪಿನಲ್ಲಿ ಉಳಿಯುವಂತಹ ಬೆಳವಣಿಗೆಗಳಾಗಿದ್ದು ಮಾತ್ರ ಹದಿನಾರನೇ ಶತಮಾನದಲ್ಲಿ. ಹೀಗೆ ಆಸ್ಟ್ರಿಯಾ ಮೂಲದ ಫಿಟ್ಝ್ ಲಿಷ್ಕಾರನ್ನು ಸೇರಿದಂತೆ ಸುಮಾರು ತೊಂಭತ್ತು ತಜ್ಞರ ನೆರವನ್ನು ಪಡೆದುಕೊಂಡು, ಶೌಚಾಲಯಗಳಿಗೆ ಸಂಬಂಧಪಟ್ಟಂತೆ ಅಂದಾಜು 4500 ವರ್ಷಗಳ ಸುದೀರ್ಘ ಇತಿಹಾಸವನ್ನು ಕೆದಕಿ, ವ್ಯವಸ್ಥಿತವಾಗಿ ಆಸಕ್ತರ ಮುಂದಿರಿಸಿದೆ ಸುಲಭ್ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ.

ಕೌತುಕದ ಮತ್ತೊಂದು ಸಂಗತಿಯೆಂದರೆ ಹಲವಾರು ವಿಚಾರಗಳ ಬಗ್ಗೆ ವಿಶ್ವಸಾಹಿತ್ಯವು ಹರಿದುಬಂದಂತೆ ಶೌಚಾಲಯಗಳ ವಿಚಾರದಲ್ಲೂ ಸಾಕಷ್ಟು ಸಾಹಿತ್ಯವು ಜಗತ್ತಿನ ವಿವಿಧ ಮೂಲಗಳಲ್ಲಿ ಹರಿದುಬಂದಿದ್ದವು. ಬರೆದರೆ ಅವುಗಳದ್ದೇ ಒಂದು ದೊಡ್ಡ ಕತೆಯಾಗಿಬಿಡುತ್ತದೆ. ಹೀಗೆ ಬಂದ ಸಾಹಿತ್ಯದಲ್ಲಿ ಬಹಳಷ್ಟು ಪಾಲು ಅಶ್ಲೀಲವೆಂದು ಪರಿಗಣಿಸಿ ನಿಷೇಧಕ್ಕೊಳಪಟ್ಟರೆ, ಉಳಿದವುಗಳು ತಮಾಷೆಯ ಕತೆಗಳಾಗಿ, ಸ್ವಾರಸ್ಯಕರ ಗಾದೆ-ಒಗಟುಗಳಾಗಿ ಹಲವೆಡೆ ಶಾಶ್ವತವಾಗಿ ದಾಖಲಾದವು.

ಅಸಲಿಗೆ ಇಲ್ಲಿದ್ದಿದ್ದು ಸಾಹಿತ್ಯವಷ್ಟೇ ಅಲ್ಲ. ಒಂದಿಷ್ಟು ಆಧ್ಯಾತ್ಮವೂ, ನಂಬಿಕೆಗಳೂ, ಮೂಢನಂಬಿಕೆಗಳೂ ಜೊತೆಯಲ್ಲೇ ಹರಿದು ಬಂದವು. ಆಯಾ ಕಾಲದ ಶೌಚವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ರಾಜಕೀಯ ಇತ್ಯಾದಿ ವಿವರಗಳ ಬಗ್ಗೆ ಇಂತಹ ದಾಖಲಾತಿಗಳು ತಮ್ಮದೇ ಆದ ರೀತಿಯಲ್ಲಿ ಬೆಳಕು ಚೆಲ್ಲುತ್ತವೆ. ಈ ಸ್ವಾರಸ್ಯಕರ ಭಾಗದ ಬಗ್ಗೆ ಅಂಕಣದ ಮುಂದಿನ ಕಂತಿನಲ್ಲಿ ವಿವರವಾಗಿ ಬರೆಯಲಿದ್ದೇನೆ.

ಇನ್ನು ಶೌಚಾಲಯಗಳ ವಿನ್ಯಾಸದಲ್ಲಿ ಕೆಲವೊಮ್ಮೆ ಸೃಜನಶೀಲತೆ, ಕೀಟಲೆಯ ಮನೋಭಾವಗಳೂ ಕೆಲವೊಮ್ಮೆ ಇಣುಕುವುದುಂಟು. ಉದಾಹರಣೆಗೆ ಸ್ವಿಟ್ಝಲ್ರ್ಯಾಂಡಿನಲ್ಲೊಂದು ಶೌಚಾಲಯವಿದೆ. ಬೀದಿಯ ನಟ್ಟನಡುವಿನಲ್ಲಿ ನಿಲ್ಲಿಸಿರುವ ಈ ಸಾರ್ವಜನಿಕ ಶೌಚಾಲಯದ ನಾಲ್ಕೂ ಗೋಡೆಗಳು ಗಾಜಿನದ್ದು. ಆದರೆ ಇಲ್ಲಿ ಅಳವಡಿಸಿರುವ ಗಾಜು ಎಂಥದ್ದೆಂದರೆ ಬೀದಿಯಲ್ಲಿ ನಡೆದಾಡುತ್ತಿರುವ ಯಾರಿಗೂ ಒಳಗೆ ಶೌಚಕ್ಕೆಂದು ಕುಳಿತಿರುವಾತ ಕಾಣುವುದಿಲ್ಲ.

ಬದಲಾಗಿ ಶೌಚಾಲಯದೊಳಗೆ ಕುಳಿತಿರುವವನಿಗೆ ತಾನು ಕುಳಿತಲ್ಲಿಂದ ಬೀದಿಯ ಎಲ್ಲಾ ಆಗುಹೋಗುಗಳೂ ಸ್ಪಷ್ಟವಾಗಿ ಕಾಣಿಸುವಂತಿರುತ್ತದೆ. ಇದನ್ನು ಬಳಸಿದವರ ಅಭಿಪ್ರಾಯಗಳನ್ನು ಚಿತ್ರದ ಜೊತೆ ದಾಖಲಿಸಿಲ್ಲವಾದ್ದರಿಂದ ಇದನ್ನೊಂದು ತಮಾಷೆಯ ಪ್ರಯೋಗವೆಂದೂ ಭಾವಿಸಬಹುದೇನೋ!

ಇನ್ನು ಉಳಿದಂತೆ ಹಲವು ದೇಶಗಳಲ್ಲಿ ಚಾಲ್ತಿಯಲ್ಲಿರುವ ಶೌಚಸಂಬಂಧಿ ಶಿಷ್ಟಾಚಾರಗಳು, ಇದರ ಸುತ್ತ ಗಿರಕಿ ಹೊಡೆಯುವ ಜನಸಾಮಾನ್ಯರ ಹಾವಭಾವಗಳ ಶೈಲಿಗಳು, ಶೌಚಾಲಯಗಳಿಲ್ಲದ ಸ್ಥಳಗಳಲ್ಲಿ ತುರ್ತಾಗಿ ‘ನೇಚರ್ಸ್ ಕಾಲ್’ ಏನಾದರೂ ಬಂದುಬಿಟ್ಟರೆ ಅದನ್ನು ನಿಯಂತ್ರಿಸಲು ಬಳಸಬಹುದಾದ ಸು-ಜೋಕ್ ಥೆರಪಿಯ ಸುಲಭ ಮಾರ್ಗಗಳು (ಕೊರಿಯನ್ ಮೂಲ)… ಹೀಗೆ ಶೌಚ ಜಗತ್ತಿನ ಉದ್ದಗಲ ಆಳಗಳನ್ನು ಬಹಳ ಶಿಸ್ತಿನಿಂದ ಸಂಗ್ರಹಿಸಿ, ಈ ಅಪರೂಪದ ಸಂಗ್ರಹವನ್ನು ಅಷ್ಟೇ ಘನತೆಯಿಂದ ಆಸಕ್ತರ ಮುಂದಿರಿಸುತ್ತಿದೆ ದಿಲ್ಲಿಯ ಸುಲಭ್ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ.

ಅಂಕಣದ ಈ ಕಂತಿನಲ್ಲಿ ಬರೆದಿರುವ ಅಷ್ಟನ್ನೂ ತೃಣಮಾತ್ರವಷ್ಟೇ ಎಂದುಬಿಟ್ಟರೆ ‘ಸುಲಭ್’ ಕಥಾನಕವು ಒಂದೇ ಭಾಗದಲ್ಲಿ ಮುಗಿಸುವಷ್ಟು ಸುಲಭದ್ದಲ್ಲ ಎಂಬುದನ್ನು ನೀವೂ ಒಪ್ಪಿಕೊಳ್ಳುತ್ತೀರಿ ಅಂದುಕೊಂಡಿದ್ದೇನೆ! ನೀವೇ ಹೇಳಿ, ತನ್ನ ಇರುವಿಕೆಯ ಸೀಮೆಯಲ್ಲೇ ಇದೊಂದು ಅಗಾಧ ಲೋಕವಲ್ಲದೆ ಮತ್ತೇನು?

September 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: