ಎಂಟು ಸಾಸಿರ ಮಕ್ಕಳ ತಾಯಿ
-ಬಿದಲೋಟಿ ರಂಗನಾಥ್
ಮಕ್ಕಳಾಗಲಿಲ್ಲ
ತಾಯಿಯಾಗುವ ಹಂಬಲ ಕರಗಲಿಲ್ಲ
ಕಣ್ಣಿನ ಕಂಬದ ಮೇಲೆ ಸಾಸಿರ ಮರಗಳ ಸಾಲು
ಐದು ನೆಟ್ಟವಳಿಗೆ ಹತ್ತು ನೆಟ್ಟು ಪೊರೆಯುವುದು ಕಷ್ಟವಲ್ಲ
ನಡೆದಳು ಮೈಲಿಗಟ್ಟಲೇ ತಲೆ ಮೇಲೆ
ಬಿಂದಿಗೆ ನೀರು ಹೊತ್ತು
ಗಿಡದ ನೆತ್ತಿ ಚಿಗುರಿಸಿ
ಮೈದಡವಿ ಮುದ್ದಾಡಲು
ಕನಸಲ್ಲಿ ಕಂಡ ಸುಡು ಬಿಸಿಲು
ಮೈ ನಡುಗಿಸುತ್ತಲೇ ಇತ್ತು
ನಿದ್ದೆ ಬಾರದ ರಾತ್ರಿಗಳ ನಡುವೆ
ಎದ್ದು ಕೂತು ಮರಗಳ ಕಡೆ ಕಣ್ಣಾಸಿದ್ದಳು
ಬಾಡುವ ಮುಖದಲ್ಲಿ
ಚಂದ್ರನ ನಗು ಅಲ್ಲಿ ನೆಟ್ಟಿತ್ತು
ರಣ ಬಿಸಿಲು ಸುಡದಿರಲಿ ಎಂಟು ಸಾವಿರ ಮರಗಳ ಮೈಯನ್ನು
ಅಲ್ಲಿ ಕೂತು ಹಕ್ಕಿ ಮಾಡುವ ಅರೆಗಣ್ಣ ನಿದ್ದೆ
ಬೀಳದಿರಲಿ ಕೆಳಗೆ
ಬೇಡಿದಳು ವೃಕ್ಷ ಮಾತೆ ಶಿವನತ್ತ ಕರಕಮಲ ಜೋಡಿಸಿ
ಎದ್ದು ನಡೆಯುತ್ತಲೇ ಇದ್ದಳು
ಅದು ಬಿಡುವಿಲ್ಲದ ನಡಿಗೆ
ತಾನಿಟ್ಟ ಮರಗಳಿಗೆ ಮಮಕಾರ ಉಣ್ಣಿಸುತ್ತ
ತೂಕವಿಲ್ಲದ ನಿರಾಳ ನೆಮ್ಮದಿ
ಮಳೆ ಬಂದ ಅಷ್ಟೂ ರಾತ್ರಿ ಹಗಲು
ಮರಗಳ ನಗುವ ಕಂಡು
ಹಾಲುಣಿದಷ್ಟು ಹಿಗ್ಗಿದ್ದಳು
ಬಿರಿದ ಎದೆ ಹಾಲಿನಲಿ ಮಕ್ಕಳ ತುಟಿ ಗುರುತು ಕಂಡಳು!
ಮುಟ್ಟಿದ ಪ್ರತಿ ಮರವೂ ಅಮ್ಮ ಅನ್ನು ಸದ್ದು
ಅವಳ ಕವಿಗೆ ತಾಕುತಿತ್ತು
ಸ್ಪರ್ಶದ ಅಮಲಿನಲಿ ತಾನೆತ್ತ ಮಕ್ಕಳ ಭಾವ ಗೂಡು ಕಟ್ಟಿತ್ತು
ಚಿಗುರುವುದು ಅರಳುವುದು ಹಸಿರುಕ್ಕುವುದು
ಬೀಚು ಕಾಯಿ ಹಣ್ಣಾಗುವುದು ಎಲ್ಲವನ್ನು ಕಂಡ ತಾಯಿ
ಅರಿತಳು ನಾಡಿಮಿಡಿತ
ನೆರಳಾದಳು ನೆರಳಾಗುವ ಸಸಿಗಳಿಗೆ
ಅವೋ ಮೋಡ ಕರೆದವು
ಮಳೆತಂದವು
ಉಸಿರಾಡುತ ಭೂಮಿ ಹಸಿರುಟ್ಟಳು
ನೆತ್ತಿ ಸುಡುವ ಸೂರ್ಯ ಮೆತ್ತಗಾದ
ನಕ್ಕ ನವಿಲ ಕಣ್ಣು ಬದುಕಿನ ಚಿತ್ರ ಬರೆಯಿತು
ಚಂಬು ನೀರನು ತುಳಸಿಗೆ ಹೊಯ್ಯುವ
ಎರಡು ಮಕ್ಕಳ ತಾಯಿ
ತಾಯಿಯಾಗೆ ಉಳಿದಳು
ಎಂಟು ಸಾಸಿರ ಮರನೆಟ್ಟ ಸಾಲು ಮರದ ತಿಮ್ಮಕ್ಕ
ಮಹಾತಾಯಿಯಾದಳು






0 Comments