ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದ್ದು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 154

ಮತ್ತೂರಿನಿಂದ ಬೆಂಗಳೂರಿಗೆ ಮರಳಿ ಬರುತ್ತಿದ್ದಂತೆ ಕಿರಿಯ ಮಿತ್ರ ರಘು ಸಮರ್ಥ ಅವರ ಫೋನ್ ಕರೆ: ‘ನಿಮ್ಮೊಂದಿಗೆ ಮಾತಾಡಬೇಕು..ಇಂದು ಸಂಜೆ ಸಿಟಿ ಇನ್ಸ್ಟಿಟ್ಯೂಟ್ ಗೆ ಬರಲು ಸಾಧ್ಯವೇ?’. ಅಂದು ಬೇರೇನೂ ವಿಶೇಷ ಕೆಲಸವಿರಲಿಲ್ಲವಾದ್ದರಿಂದ ಬರುತ್ತೇನೆ ಎಂದು ಒಪ್ಪಿಕೊಂಡೆ.

ರಘು ಸಮರ್ಥ ಪ್ರತಿಭಾವಂತ , ಉತ್ಸಾಹೀ ತರುಣ. ನಟ, ಬರಹಗಾರ, ಟಿ.ಎನ್.ಸೀತಾರಾಂ ಅವರಿಗೆ ಸಹಾಯಕ ನಿರ್ದೇಶಕರಾಗಿ ದುಡಿದು ಅವರ ಗರಡಿಯಲ್ಲಿ ಪಳಗಿದವರು. ಸೀತಾರಾಂ ಅವರ ‘ಮುಕ್ತ’ ಧಾರಾವಾಹಿಯಲ್ಲಿ ನಾನು ಟೋಪಿ ಶೇಷಪ್ಪನ ಪಾತ್ರ ನಿರ್ವಹಿಸಿದ್ದೆನಲ್ಲಾ, ಆ ಸಮಯದಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ದೆವು.

ಸಂಜೆ ಸಿಟಿ ಇನ್ಸ್ಟಿಟ್ಯೂಟ್ ಗೆ ನಾನು ಹೋಗುವ ವೇಳೆಗಾಗಲೇ ರಘು ಅಲ್ಲಿಗೆ ಬಂದು ಕಾಯುತ್ತಿದ್ದರು. ಅವರ ಮುಖದಲ್ಲಿ ಉತ್ಸಾಹ, ಸಂಭ್ರಮಗಳು ಹೊಡೆದು ಕಾಣುತ್ತಿದ್ದವು. “ಪ್ರಭು ಸರ್ , ನಿಮಗೊಂದು ಸಂತೋಷದ ಸುದ್ದಿ ಹೇಳಬೇಕು: ನಾನು ಒಂದು ಸಿನೆಮಾ ಡೈರೆಕ್ಟ್ ಮಾಡ್ತಿದೀನಿ. ಇದು ನನ್ನ ನಿರ್ದೇಶನದ ಪ್ರಥಮ ಚಿತ್ರ! ಕೆ.ಮಂಜು ಅವರು ನಿರ್ಮಾಪಕರು. ಈ ನನ್ನ ಸಾಹಸದಲ್ಲಿ ನೀವು ನನ್ನ ಜೊತೆಗಿರಬೇಕು. ನೀವು ಒಂದು ಮುಖ್ಯ ಪಾತ್ರ ನಿರ್ವಹಿಸಬೇಕು” ಎಂದು ನುಡಿದರು ರಘು ಸಮರ್ಥ!

ನನಗೂ ಸಂತೋಷವಾಯಿತು..ಹೆಸರಿಗೆ ತಕ್ಕಂತೆ ಸಮರ್ಥನೇ ಆಗಿದ್ದ ಸಂವೇದನಾಶೀಲ ಬರಹಗಾರನೊಬ್ಬನ ಚೊಚ್ಚಲ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ನಿರ್ವಹಣೆಗೆ ಅವಕಾಶ ದೊರೆತರೆ ಖುಷಿಯಾಗದೇ ಇರುತ್ತದೆಯೇ?! ನಂತರ ರಘು ಚಿತ್ರದ ಕಥೆಯನ್ನೂ ನನ್ನ ಪಾತ್ರದ ಪ್ರಾಮುಖ್ಯತೆಯನ್ನೂ ವಿವರವಾಗಿ ಹೇಳಿದರು. ಕ್ಯಾನ್ಸರ್ ಪೀಡಿತ ನಾಯಕ ತಲೆಯ ಮೇಲೆ ಸಾವಿನ ಕತ್ತಿ ತೂಗುತ್ತಿದ್ದರೂ ಇರುವಷ್ಟು ದಿನ ನಗುನಗುತ್ತಾ ಇರಬೇಕು, ಸಂಬಂಧಗಳನ್ನು ಜೀವಂತವಾಗಿ ಉಳಿಸಿಕೊಳ್ಳಬೇಕು, ಸಾರ್ಥಕವಾಗಿ ಬದುಕಬೇಕು ಎಂಬ ಮನೋಧರ್ಮದವನು. ಮೇಲ್ನೋಟಕ್ಕೆ ಹೃಷಿಕೇಶ್ ಮುಖರ್ಜಿ ಅವರ ಆನಂದ್ (ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್ ತಾರಾಗಣ) ಚಿತ್ರವನ್ನು ನೆನಪಿಸುವಂತಿದ್ದರೂ ವಿವರಗಳು, ಕಥೆಯ ಸಂವಿಧಾನ ಪೂರ್ತಿ ಬೇರೆಯದೇ ಆಗಿತ್ತು. ಕ್ಯಾನ್ಸರ್ ಕಥೆಯೊಂದಿಗೆ ಪ್ರೇಮಕಥೆಯೊಂದನ್ನೂ ಹೆಣೆದಿದ್ದರು ರಘು ಸಮರ್ಥ. ನಾಯಕಿಯ ತಂದೆಯ ಪಾತ್ರ ನನ್ನದು. ಅಭಿನಯಕ್ಕೆ ವಿಪುಲ ಅವಕಾಶವಿದ್ದ ಒಂದು ತೂಕದ ಪಾತ್ರವದು- ಸಚ್ಚಿದಾನಂದ ಮೂರ್ತಿ! ಗುರುನಂದನ್ ನಾಯಕನಾಗಿ, ಕಾವ್ಯಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಸುಧಾ ಬೆಳವಾಡಿ, ರಂಗಾಯಣ ರಘು, ಅವಿನಾಶ್, ಅರುಣಾ ಬಾಲರಾಜ್, ಲಿಖಿತೇಶ್ ಮೊದಲಾದವರು ಇತರ ತಾರಾಗಣದಲ್ಲಿದ್ದರು. ಅದೇ ತಿಂಗಳು ಹದಿನಾರರಿಂದಲೇ ಚಿತ್ರೀಕರಣ ಆರಂಭವಾಗುವುದಿತ್ತು. ಮಾಸಾಂತ್ಯದವರೆಗೂ ನನ್ನ ಸಮಯ ಚಿತ್ರೀಕರಣಕ್ಕೆ ಬೇಕಾಗುತ್ತದೆ ಎಂದು ರಘು ಹೇಳಿದಾಗ ಮತ್ತಷ್ಟು ಖುಷಿಯಾಯಿತು— ಪಾತ್ರಕ್ಕೆ ಪ್ರಾಮುಖ್ಯತೆಯೂ ಇದೆ, ಮೊದಲಿನಿಂದ ಕಡೆಯವರೆಗೆ ತೆರೆಯ ಮೇಲೆ ಇರುವ ಅವಕಾಶವೂ ಇದೆ, ಅಭಿನಯಕ್ಕೆ ಸವಾಲಾಗುವ ದೃಶ್ಯಗಳೂ ಇವೆ! ನಿರ್ಮಾಪಕ ಗಂಡುಗಲಿ ಕೆ.ಮಂಜು ಅವರು ನನಗೆ ಚಿರಪರಿಚಿತರೇ. ಹಿಂದೆ ಅವರ ನಿರ್ಮಾಣದ ‘ರಾಷ್ಟ್ರಗೀತೆ’ ಚಿತ್ರದಲ್ಲಿ ಅಭಿನಯಿಸಿದ್ದೆ ಕೂಡಾ. ಹಾಗಾಗಿ ಸಂತೋಷವಾಗಿ ಚಿತ್ರವನ್ನು ಒಪ್ಪಿಕೊಂಡು ರಘುವಿಗೆ ಅಭಿನಂದನೆಗಳನ್ನು ಹೇಳಿ ಮನೆಗೆ ಹೊರಟೆ.

ಏಪ್ರಿಲ್ ಹದಿನಾರು. ರಘು ಸಮರ್ಥರ ನಿರ್ದೇಶನದ “ಸ್ಮೈಲ್ ಪ್ಲೀಸ್” ಚಿತ್ರದ ಚಿತ್ರೀಕರಣ ಹಾರೋಹಳ್ಳಿಯಲ್ಲಿ ಆರಂಭ! ನಾನು ನನ್ನ ಕಾರ್ ನಲ್ಲಿಯೇ ಬೆಳಿಗ್ಗೆ ಆರೂವರೆಯ ಸುಮಾರಿಗೆ ಚಿತ್ರೀಕರಣಕ್ಕೆಂದು ಹೊರಟೆ. ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದ ಲಿಖಿತೇಶ್ ಅವರು ನಮ್ಮ ಮನೆಯ ಸಮೀಪದಲ್ಲೇ ವಾಸವಾಗಿದ್ದರು. ಲಿಖಿತೇಶ್ ಪ್ರಸಿದ್ಧ ‘ಮಾತಾಡುವ ಬೊಂಬೆ ‘ಕಲಾವಿದೆ ಇಂದು ಶ್ರೀ ರವೀಂದ್ರ ಅವರ ಸೋದರ. 50-60 ಕಿ.ಮೀ.ದೂರದ ಪ್ರಯಾಣಕ್ಕೆ ಒಬ್ಬರು ಜತೆಗೂ ಇದ್ದ ಹಾಗಾಯಿತು ಎಂದು ಅವರನ್ನೂ ಜೊತೆಯಲ್ಲೇ ಕರೆದುಕೊಂಡು ಹೊರಟೆ. ಹಾರೋಹಳ್ಳಿಯಲ್ಲಿ ಶೂಟಿಂಗ್ ಗೆ ಅನುಕೂಲವಾದ ಒಂದು ದೊಡ್ಡ ಮನೆಯಿದೆ. ಹೊರಗಡೆ ವಿಶಾಲವಾದ ಉದ್ಯಾನವನ..ಸ್ವಿಮ್ಮಿಂಗ್ ಪೂಲ್..ಎಲ್ಲವೂ ಇರುವುದರಿಂದ 15 ದಿನಗಳ ಕಾಲ ಅಲ್ಲಿಯೇ ಚಿತ್ರೀಕರಣ ನಡೆಸಲು ರಘು ನಿರ್ಧರಿಸಿದ್ದರು. ದಾರಿಯುದ್ದಕ್ಕೂ ನಾಟಕ -ಸಿನೆಮಾಗಳ ಬಗ್ಗೆ ಮಾತುಕತೆಯಲ್ಲಿ ತೊಡಗಿದ್ದ ನಮಗೆ ಹಾರೋಹಳ್ಳಿಯ ಸಮೀಪ ಬಂದದ್ದು ಗೊತ್ತಾಗಲೇ ಇಲ್ಲ. ಇನ್ನೇನು 3—4 ನಿಮಿಷಗಳಲ್ಲಿ ಮನೆಯನ್ನು ತಲುಪಬೇಕು, ಅಷ್ಟರಲ್ಲಿ ರಂಜನಿಯ ಫೋನ್ ಬಂತು. ಕರೆ ಸ್ವೀಕರಿಸಿ ನಾನಿನ್ನೂ ಹಲೋ ಅನ್ನುವುದಕ್ಕಿಲ್ಲ, ಅಷ್ಟರಲ್ಲಿ ರಂಜನಿ ನಡುಗುವ ಧ್ವನಿಯಲ್ಲಿ ಅಳುತ್ತಳುತ್ತಾ,”ಪ್ರಭೂಜೀ..ಪ್ರಭೂಜೀ..” ಎಂದು ಬಿಕ್ಕಿದಳು. ಅವಳ ಆ ಆರ್ತಧ್ವನಿಯನ್ನು ಕೇಳಿ ನನಗೆ ಹೃದಯವೇ ಬಾಯಿಗೆ ಬಂದಂತಾಯಿತು. ಕಾರ್ ಅನ್ನು ಒಂದು ಬದಿಗೆ ನಿಲ್ಲಿಸಿ “ಏನಾಯ್ತು ರಂಜು? ಯಾಕೆ ಅಳ್ತಿದೀಯಾ?” ಎಂದು ಗಾಬರಿಯಿಂದ ಕೇಳಿದೆ. “ಪ್ರಭೂಜೀ…ಮನೇಲಿದ್ದ ಚಿನ್ನ ಎಲ್ಲಾ ಕಳ್ತನ ಆಗಿಬಿಟ್ಟಿದೆ” ಎಂದು ಮತ್ತೆ ಬಿಕ್ಕತೊಡಗಿದಳು ರಂಜನಿ.

ಕಳ್ಳತನ!! ನಮ್ಮ flat ನಲ್ಲಿ!! ಒಂದು ಕ್ಷಣ ತಲೆ ಗಿರ್ರೆಂದಿತು! “ಏನು ಹೇಳ್ತಿದೀಯಾ ರಂಜು? ಸರಿಯಾಗಿ ಎಲ್ಲಾ ಕಡೆ ನೋಡಿದೆಯಾ?” ಎಂದೆ. “ಇದ್ದ ಚಿನ್ನಾನೆಲ್ಲಾ ಸಣ್ಣ ಸಣ್ಣ ಬಾಕ್ಸ್ ಗಳಲ್ಲಿ ಹಾಕಿ ಕಬೋರ್ಡಿನ ಖಾನೇಯಲ್ಲೇ ಇಟ್ಟಿದ್ದೆ..ಒಂದು ಜೊತೆ ಓಲೆ ಮಾತ್ರ ಕಬೋರ್ಡಿನ ಖಾನೆ ಎಳೆದ ತಕ್ಷಣ ಕಾಣೋ ಹಾಗೆ ಒಂದು ಬಟ್ಟಲಲ್ಲಿತ್ತು..ಅದು ಮಾತ್ರ ಉಳಿದಿದೆ..ಉಳಿದಿದ್ದೆಲ್ಲಾ ಒಡವೇನೂ ದೋಚಿಕೊಂಡು ಖಾಲಿ ಬಾಕ್ಸ್ ಗಳನ್ನ ಹಾಗೇ ಮುಚ್ಚಿಟ್ಟು ಹೋಗಿದಾರೆ…ಏನು ಮಾಡೋಕೂ ತೋಚ್ತಿಲ್ಲ..ನೀವು ಬೇಗ ಬಂದುಬಿಡಿ” ಎಂದು ರಂಜನಿ ಮತ್ತೆ ಬಿಕ್ಕಿದಳು. ಅಯ್ಯೋ ದೇವರೇ! ಇದೇನಿದು ಹೊಸ ಸಮಸ್ಯೆ!! ಏನಿಲ್ಲದಿದ್ದರೂ ಸುರಕ್ಷಿತ ವಾತಾವರಣ ಅನ್ನುವ ಕಾರಣಕ್ಕೇ ಅಪಾರ್ಟ್ ಮೆಂಟ್ ಗಳಲ್ಲಿ ವಾಸಕ್ಕೆ ಬರುತ್ತೇವೆ; ಅಲ್ಲಿಯೇ ಕಳ್ಳತನವಾಗತೊಡಗಿದರೆ? ಹೊಸ ಚಿತ್ರದ ಮೊಟ್ಟಮೊದಲ ದಿನದ ಶೂಟಿಂಗ್ ಬೇರೆ ಆರಂಭವಾಗಬೇಕಿದೆ…ನಾನು ಹೋಗದಿದ್ದರೆ ಶೂಟಿಂಗ್ ನಡೆಯುವ ಮಾತೇ ಇಲ್ಲ. ಒಬ್ಬ ವೃತ್ತಿಪರ ನಟನಾಗಿ ಹಾಗೆ ಇಡೀ ತಂಡವನ್ನು ತೊಂದರೆಗೆ ದೂಡಿ ಹೊರಟುಹೋಗುವುದು ನನ್ನ ಮನಸ್ಸಿಗೆ ಒಗ್ಗದ ಸಂಗತಿ. ರಂಜನಿಗೆ ಸಮಾಧಾನ ಹೇಳಿ, ” ಸಂಜೆ ಆದಷ್ಟು ಬೇಗ ಬರುತ್ತೇನೆ..ಮೊದಲು ಯಾರನ್ನಾದರೂ ಜೊತೆ ಮಾಡಿಕೊಂಡು ಪೋಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಬಾ..ನಾನು ಬಂದಮೇಲೆ ಮುಂದಿನದನ್ನು ನೋಡಿಕೊಳ್ಳುತ್ತೇನೆ” ಎಂದು ಹೇಳಿ ಕಾರ್ ಸ್ಟಾರ್ಟ್ ಮಾಡಿದೆ. ಪಕ್ಕದಲ್ಲಿದ್ದ ಲಿಖಿತೇಶ್ ಅವರಿಗೆ ಆ ವೇಳೆಗಾಗಲೇ ನಮ್ಮ ಮಾತುಕತೆಯಿಂದ ವಿಷಯ ಗೊತ್ತಾಗಿತ್ತು. “ಪ್ರಭು ಸರ್ , ಈ ಮನಸ್ಥಿತೀಲಿ ನಿಮಗೆ ಡ್ರೈವ್ ಮಾಡೋಕಾಗಲ್ಲ..ನನಗೆ ಡ್ರೈವಿಂಗ್ ಬರುತ್ತೆ..ಬನ್ನಿ..ಈ ಕಡೆ ಕೂತ್ಕೊಳ್ಳಿ” ಎಂದು ಹೇಳಿ ತಾವೇ ಡ್ರೈವ್ ಮಾಡಿಕೊಂಡು ಹೊರಟರು. ಲೊಕೇಷನ್ ಗೆ ಹೋದವನೇ ಮ್ಯಾನೇಜರ್ ಹಾಗೂ ರಘು ಅವರನ್ನು ಕರೆದು ಪರಿಸ್ಥಿತಿಯನ್ನು ವಿವರಿಸಿ,”ನೀವೇನೂ ಚಿಂತೆ ಮಾಡುವುದು ಬೇಡ…ನನ್ನ ದೃಶ್ಯಗಳನ್ನು ಮುಗಿಸಿ ನಂತರ ನಾನು ಹೊರಡುತ್ತೇನೆ..ಆದ್ಯತೆಯ ಮೇರೆಗೆ ನನ್ನ ದೃಶ್ಯಗಳ ಚಿತ್ರೀಕರಣವನ್ನು ಮೊದಲು ಮಾಡಿ ಮುಗಿಸಿದರೆ ಅನುಕೂಲವಾಗುತ್ತದೆ” ಎಂದು ರಘು ಅವರನ್ನು ವಿನಂತಿಸಿದೆ. ಅವರಾದರೂ ಪಾಪ ಏನು ಮಾಡಿಯಾರು? ನಡೆದ ಅನಾಹುತಕ್ಕೆ ಸಹಾನುಭೂತಿ ಹೇಳಿ “ಆದಷ್ಟು ಬೇಗ ಮುಗಿಸಿ ಕಳಿಸಿಕೊಡುತ್ತೇನೆ ಪ್ರಭು ಸರ್..” ಎಂದು ಭರವಸೆ ನೀಡಿದರು.

ಇಲ್ಲಿಂದ ಮುಂದೆ ನಡೆದದ್ದೊಂದು ರೋಚಕ ಪತ್ತೇದಾರಿ ಕಥಾಪ್ರಸಂಗ! ಕಥೆ ಸ್ವಾರಸ್ಯಕರವಾಗಿರುವುದರಿಂದ ಕೊಂಚ ವಿವರವಾಗಿಯೇ ನಿಮ್ಮೊಂದಿಗೆ ಹಂಚಿಕೊಂಡುಬಿಡುತ್ತೇನೆ.
ರಂಜನಿಗೆ ಸಾಂತ್ವನ ಹೇಳಿ ಪೋಲೀಸ್ ಠಾಣೆಗೆ ಹೋಗಲು ಸೂಚಿಸಿದ ನಂತರ ನಾನು ನಳಿನಿ ಅಕ್ಕನಿಗೆ ಫೋನ್ ಮಾಡಿ ವಿಷಯ ತಿಳಿಸಿ “ಕೊಂಚ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಹೋಗಿ ರಂಜನಿಯ ಜೊತೆ ಇರಿ..ಇಂಥ ಸಂದರ್ಭಗಳಲ್ಲಿ ಅವಳು ತೀರಾ ಕುಗ್ಗಿಹೋಗುತ್ತಾಳೆ” ಎಂದು ಕೇಳಿಕೊಂಡೆ. ರಂಜನಿ ಹೇಳಿದ ಮುಂದಿನ ಘಟನಾವಳಿಗಳನ್ನು ಕಥೆಯ ರೂಪದಲ್ಲೇ ಹೇಳಿಕೊಂಡು ಹೋಗುತ್ತೇನೆ:
ರಂಜನಿ ಮಗಳನ್ನೂ ಕರೆದುಕೊಂಡು ಹಾಗೂ ನಮ್ಮ ಅಪಾರ್ಟ್ ಮೆಂಟ್ ನವರೇ ಆದ ಚಂದ್ರೇಶ್ ಹಾಗೂ ಶ್ಯಾಮ್ ಅವರೊಂದಿಗೆ ಕೆ ಜಿ ಹಳ್ಳಿ ಪೋಲೀಸ್ ಠಾಣೆಗೆ ಕಂಪ್ಲೇಂಟ್ ಕೊಡುವ ಸಲುವಾಗಿ ಹೋದಳು. ಅವಳು ಅದೆಷ್ಟರ ಮಟ್ಟಿಗೆ ಕಂಗಾಲಾಗಿಬಿಟ್ಟಿದ್ದಳೆಂದರೆ ಪೋಲೀಸರಿಗೆ ಕಳುವಾದ ಒಡವೆಗಳ ಪೂರ್ಣ ಮಾಹಿತಿಯನ್ನು ಕೊಡುವಷ್ಟು ಸ್ಪಷ್ಟತೆಯೂ ಅವಳ ತಿಳಿವಿಗಿರಲಿಲ್ಲ. ಆಗ ಅವಳದು ಒಂದು ಅಯೋಮಯ, ಗೊಂದಲಿತ ಹಾಗೂ ಆತಂಕದ ಮನಸ್ಥಿತಿ. ಅವಳು ಕೊಟ್ಟ ದೂರಿನ ಆಧಾರದ ಮೇಲೆ ಪೋಲೀಸರು ಊಹಿಸಿ ದಾಖಲಿಸಿದ್ದು ಹೆಚ್ಚುಕಡಿಮೆ ಆರು ಲಕ್ಷ ಬೆಲೆಬಾಳುವ ಚಿನ್ನ ಕಳುವಾಗಿದೆ ಎಂದು. ರಂಜನಿಗೆ ಪ್ರವಾಸ ಹೋಗುವುದರಲ್ಲಿರುವಷ್ಟು ಆಸಕ್ತಿ ಮೈಮೇಲೆ ಚಿನ್ನ ಹೇರಿಕೊಳ್ಳುವುದರಲ್ಲಿ ಇರಲಿಲ್ಲವಾಗಿಯೂ ಭಾರೀ ಒಡವೆಗಳನ್ನು ಬಹಳಷ್ಟು ಮಾಡಿಸಿಕೊಳ್ಳುವಷ್ಟು ಆರ್ಥಿಕ ಕ್ಷಮತೆ ನಮಗೆ ಇರಲಿಲ್ಲವಾಗಿಯೂ ನಮ್ಮ ಮನೆಯಲ್ಲಿ ಇದ್ದ ಚಿನ್ನ ಕಡಿಮೆಯೇ. ಆದರೂ ಇದ್ದ ಮಿತಿಗಳಲ್ಲಿ ಸುಮಾರು 12-13 ಲಕ್ಷ ಬಾಳುವಷ್ಟು ಒಡವೆಗಳನ್ನು ಮಾಡಿಸಿಕೊಂಡಿದ್ದೆವೆಂಬುದು ನನ್ನ ಅಂದಾಜು. ಅದನ್ನೂ ಕೂಡಾ ತನ್ನ ಗಾಬರಿಯ ಸ್ಥಿತಿಯಲ್ಲಿ ರಂಜನಿ ಸರಿಯಾಗಿ ದಾಖಲಿಸಲಿಲ್ಲ. ಇರಲಿ. ಆನಂತರ ಪೋಲೀಸರು ಮನೆಗೆ ಬಂದರು. ಅಕ್ಕಂದಿರೂ ಆ ವೇಳೆಗೆ ಮನೆಗೆ ಬಂದಾಗಿತ್ತು. ಮನೆಗೆ ಬಂದ ಪೋಲೀಸರಿಗೆ ದೊಡ್ಡ ಆಶ್ಚರ್ಯ ಕಾದಿತ್ತು! ಕಳ್ಳತನವಾಗಿರುವುದು ಎಂದು ? ಎಂದು ರಂಜನಿಯನ್ನು ಕೇಳಿದರೆ “ಕಳ್ಳತನ ಆಗಿರುವ ದಿನ ನನಗೆ ತಿಳಿಯದು; ನನ್ನ ಗಮನಕ್ಕೆ ಅದು ಬಂದಿರುವುದು ಮಾತ್ರ ಇವತ್ತು ಬೆಳಿಗ್ಗೆ; ಇವತ್ತು ಕಾರ್ಯಕ್ರಮವೊಂದಕ್ಕೆ ಹೋಗಬೇಕಾಗಿದ್ದದ್ದರಿಂದ ಒಡವೆಗಳ ಬಾಕ್ಸ್ ತೆಗೆಯಬೇಕಾದ ಪ್ರಸಂಗ ಬಂತು. ಆಗ ಕಳ್ಳತನ ಆಗಿರುವುದು ಅರಿವಿಗೆ ಬಂತು” ಎನ್ನುತ್ತಿದ್ದಾಳೆ! ಇತ್ತೀಚೆಗೆ ಬೀಗ ಹಾಕಿಕೊಂಡು ಮನೆಯಿಂದ ಹೊರಗೆ , ಅಂದರೆ ಊರಿಗೆ ಹೋಗಿದ್ದಿರಾ? ಎಂದರೆ “5 ಮತ್ತು 6 ನೆಯ ತಾರೀಖು ನಾವು ಊರಲ್ಲಿರಲಿಲ್ಲ; ಆದರೆ ನಮ್ಮ ಮಗ ಮನೆಯಲ್ಲೇ ಇದ್ದ” ಎಂದಿದ್ದಾಳೆ. ಒಂದು ರಾತ್ರಿ ಮಗ ಅನಿರುದ್ಧನ ಗೆಳೆಯರು ನಾಲ್ಕೈದು ಜನ ಇಲ್ಲಿಯೇ ಮಲಗಿದ್ದರಂತೆ. ಮನೆಯ ಮುಂಬಾಗಿಲನ್ನು ನೋಡಿದರೆ ಅದು ಸುಸ್ಥಿತಿಯಲ್ಲಿದೆ. ಯಾರೂ ಅದನ್ನು ಒಡೆಯುವ ಅಥವಾ ಡೋರ್ ಲಾಕ್ ಅನ್ನು ಬಲವಂತವಾಗಿ ತೆಗೆಯಲು ಯತ್ನಿಸಿರುವ ಕುರುಹುಗಳೂ ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರೂಮ್ ನ ಯಾವ ಬೀರುವಿನ ಖಾನೆಯಲ್ಲಿ ಒಡವೆಗಳಿದ್ದವೋ ಆ ಬೀರುವನ್ನೂ ಬಲವಂತವಾಗಿ ತೆಗೆಯುವ ಪ್ರಯತ್ನ ಮಾಡಿದಂತಿಲ್ಲ! ಅಂದರೆ ಕಳ್ಳ ಒಳಬಂದು ಕಳ್ಳತನ ಮಾಡಿರುವುದಕ್ಕೆ ಒಂದು ಚಿಕ್ಕ ಕುರುಹೂ ಕಾಣುತ್ತಿಲ್ಲ!

ಇಂಥ ಸ್ಥಿತಿಯಲ್ಲಿ ಪೋಲೀಸರಾದರೂ ಏನು ಮಾಡುತ್ತಾರೆ?

“ನೋಡಿ ಮೇಡಂ, ನೀವು ಕಳ್ಳತನ ಆಗಿದೆ ಅಂತ ಹೇಳಿರೋದರಿಂದ ನಿಮ್ಮ ಮಾತನ್ನ ನಾವು ನಂಬಬೇಕಷ್ಟೇ. ಅದು ಹೊರತು ಇಲ್ಲಿ ಯಾವ ಸಾಕ್ಷೀನೂ ಸಿಗ್ತಿಲ್ಲ. ನೀವೇ ಎಲ್ಲಾದ್ರೂ ಬೇರೆ ಕಡೆ ಸೇಫ್ ಆಗಿ ಇಟ್ಟುಬಿಟ್ಟು ಮರೆತುಬಿಟ್ಟಿದೀರಾ ಅಂತ ಕಾಣುತ್ತೆ..ಜ್ಞಾಪಿಸಿಕೊಳ್ಳಿ…ಹಿಂದೆ ಒಂದ್ಸಲ ಹೀಗೇ ಒಬ್ರು ತುಂಬಾ ದಿನ ಊರು ಬಿಟ್ಟು ಹೋಗಬೇಕಾದ ಸಂದರ್ಭದಲ್ಲಿ ಒಂದಷ್ಟು ಚಿನ್ನದ ಒಡವೇನ ಕಾಗದದಲ್ಲಿ ಸುತ್ತಿ ಸುತ್ತಿ ಯಾರಿಗೂ ಗೊತ್ತಾಗದೇ ಇರಲಿ ಅಂತ ಅಟ್ಟಕ್ಕೆಸೆದು ಹೋಗಿದ್ದರು. ನಾಲ್ಕೈದು ತಿಂಗಳಾದ ಮೇಲೆ ವಾಪಸ್ ಬಂದ್ರು..ಆ ವೇಳೆಗೆ ಅಟ್ಟಕ್ಕೆ ಚಿನ್ನ ಎಸೆದಿದ್ದು ಮರೆತುಹೋಗಿತ್ತು! ಬಂದ್ರು ನಮ್ಮ ಹತ್ರ. ನಾವೂ ಹುಡುಕಿದ್ದೇ ಹುಡುಕಿದ್ದು! ಅನುಮಾನ ಇದ್ದ ನೋಟೆಡ್ ಕಳ್ಳರನ್ನೆಲ್ಲಾ ಕರೆಸಿ ರುಬ್ಬಿದ್ದೂ ಆಯ್ತು. ಅಷ್ಟರಲ್ಲಿ ಆ ಮಹಾತಾಯಿಗೆ ಜ್ಞಾನೋದಯ ಆಯ್ತು! ಹೀಗಾಗಿಬಿಟ್ಟಿದೆ..ಚಿನ್ನ ಎಲ್ಲಾ ಮನೇಲೇ ಇದೆ ಅಂತ ಹೇಳಿ ಕಂಪ್ಲೇಂಟ್ ವಾಪಸ್ ತೊಗೊಂಡ್ರು! ನೋಡಿ, ನೀವೂ ಹಾಗೇ ಏನಾದ್ರೂ ಸೇಫ್ ಮಾಡಿದೀರಾ ಚಿನ್ನಾನ ಅಂತ” ಎಂದು ಬಂದಿದ್ದ ಇನ್ಸ್ ಪೆಕ್ಟರ್ ಹೇಳಿದಾಗ ರಂಜನಿ ತಬ್ಬಿಬ್ಬಾಗಿ ಹೋದಳು! “ಖಂಡಿತ ಹಾಗೆಲ್ಲಾ ಏನೂ ಆಗಿಲ್ಲ…ಚಿನ್ನ ಕಳ್ತನ ಆಗಿದೆ ಅಷ್ಟೇ” ಎಂದು ಉತ್ತರಿಸಿದಳು. ಕೊನೆಗೆ ಇನ್ಸ್ ಪೆಕ್ಟರ್ ತಮ್ಮ ಪ್ರಾಥಮಿಕ ತನಿಖೆ ಮುಗಿಸಿ ಮನೆಯಲ್ಲಿ ಇರುವವರ, ಮನೆಗೆ ಕೆಲಸಗಳಿಗಾಗಿ ಬರುವವರ ವಿವರಗಳನ್ನು ಪಡೆದುಕೊಂಡು “ಆದಷ್ಚೂ ಪ್ರಯತ್ನ ಪಡ್ತೇವೆ” ಎಂದು ಆಶ್ವಾಸನೆ ಕೊಟ್ಟು ನಿರ್ಗಮಿಸಿದರು.

ರಘು ಸಮರ್ಥ ನನಗೆ ಭರವಸೆ ಕೊಟ್ಟಿದ್ದಂತೆಯೇ 3 ಗಂಟೆಗೆಲ್ಲಾ ನನ್ನನ್ನು ಕಳುಹಿಸಿಕೊಟ್ಟರೂ ಮನೆ ತಲುಪಿದಾಗ 5 ಗಂಟೆ. ಮನೆಯ ಹಾಲ್ ನಲ್ಲಿ ರಂಜನಿ—ರಾಧಿಕಾ ಇಬ್ಬರೂ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದರು. ಅನಿರುದ್ಧನಿಗೆ ಪರೀಕ್ಷೆ ಹತ್ತಿರ ಬಂದದ್ದರಿಂದ ಗೆಳೆಯನೊಂದಿಗೆ ಓದಿಕೊಳ್ಳಲು ಅವರ ಮನೆಗೆ ಹೋಗಿದ್ದ. ನನ್ನನ್ನು ನೋಡಿದೊಡನೆ ರಂಜನಿಗೆ ಮತ್ತೊಮ್ಮೆ ಅಳು ಉಕ್ಕಿ ಬಂತು. “ಸಧ್ಯ ಇಷ್ಟರಲ್ಲೇ ಕೃತವಾಗಿದೆ, ಪುಣ್ಯ! ಕಳ್ಳ ಬಂದಾಗ ಒಂದು ವೇಳೆ ರಾಧಿಕಾಳೋ ರಂಜನಿಯೋ ಒಬ್ಬೊಬ್ಬರೇ ಇದ್ದಿದ್ದರೆ ಗತಿ ಏನು?” ಎಂದೆಲ್ಲಾ ನಮಗೆ ನಾವೇ ಸಮಾಧಾನ ಮಾಡಿಕೊಂಡು ಮನಸ್ಸನ್ನು ತಹಬಂದಿಗೆ ತಂದುಕೊಳ್ಳಲು ಯತ್ನಿಸಿದೆವು. ಎಷ್ಟೇ ಸಮಾಧಾನ ಮಾಡಿಕೊಂಡರೂ ಆಗಿರುವ ನಷ್ಟದ ನೆನಪು ಕಾಡದೇ ಇರುತ್ತದೆಯೇ?

ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ರಂಜನಿ ಶೂನ್ಯದಲ್ಲೆಲ್ಲೋ ದೃಷ್ಟಿ ನೆಟ್ಟು ಕನವರಿಕೆಯ ರೀತಿಯಲ್ಲಿ ಮೆಲುದನಿಯಲ್ಲಿ ತನಗೆ ತಾನೇ ಎಂಬಂತೆ ಮಾತಾಡುತ್ತಿದ್ದಳು: “ಆಯ್ತು..ಕಷ್ಟಪಟ್ಟು ದುಡಿದಿದ್ದರಲ್ಲಿ ಒಂಚೂರು ಉಳಿಸಿಕೊಂಡು ಅಲ್ಪ ಸ್ವಲ್ಪ ಚಿನ್ನ ಮಾಡಿಕೊಂಡಿದ್ದೆ..ಅದೂ ಹೋಯ್ತು..ಇನ್ನಷ್ಟೇ..ಮತ್ತೆಲ್ಲಿ ಮಾಡಿಸಿಕೊಳ್ಳೋಕೆ ಆಗುತ್ತೆ ಅಷ್ಟು ಚಿನ್ನಾನ? ನೀವು ನನ್ನ ಹುಟ್ಟುಹಬ್ಬಕ್ಕೆ ಮಾಡಿಸಿಕೊಟ್ಟಿದ್ರಲ್ಲಾ ನೆಕ್ಲೇಸು.. ಅದನ್ನೂ ತೊಗೊಂಡು ಹೋಗಿದಾನೆ ಪಾಪಿ..ಅದನ್ನ ನೆನೆಸಿಕೊಂಡು ತುಂಬಾ ಸಂಕಟವಾಗ್ತಿದೆ.. ಚಿನ್ನದ ವ್ಯಾಮೋಹ ಇಲ್ಲ ನಂಗೆ ಅಂತ ಹೇಳಿಕೋತಾ ಇದ್ದೆ ಯಾವಾಗಲೂ… ಆಸೆ ಇಲ್ಲದವಳಿಗೆ ನಾನ್ಯಾಕೆ ಒಲೀಲಿ? ನಾನ್ಯಾಕೆ ಇವಳ ಹತ್ರ ಇರಲಿ? ಅಂತ ಚಿನ್ನಕ್ಕೂ ಅನ್ನಿಸಿರಬೇಕು.. ಹೋಗೇಬಿಡ್ತು ನೋಡಿ…”

ಅವಳ ಆ ಮಾತು..ಆ ಆರ್ತಭಾವ..ಆ ನೋವು ಮಡುಗಟ್ಟಿದ್ದ ಕಣ್ಣುಗಳು..ಎಲ್ಲವನ್ನೂ ನೋಡುತ್ತಾ ನೋಡುತ್ತಾ ನನಗೂ ಒಳಗೇ ಸಂಕಟ ಶುರುವಾಗಿಹೋಯಿತು! ಜೊತೆಗೆ ಈ ಪ್ರಸಂಗಕ್ಕೆ ಒಂದು ಸುಖಾಂತ್ಯವನ್ನು ನೀಡಲೇಬೇಕೆಂಬ ಛಲ ಪುಟಿದೆದ್ದಿತು! ರಂಜನಿಗೆ ಈ ಪರಿಯ ಸಂಕಟವನ್ನು ನೀಡಿರುವ ಆ ಚೋರ ಶಿಖಾಮಣಿಯನ್ನು ಪತ್ತೆ ಹಚ್ಚಲೇಬೇಕೆಂಬ ನಿರ್ಧಾರ ಗಟ್ಟಿಯಾಗಿ ಹೋಯಿತು!

ನನ್ನೊಳಗೇ ಅಂತರ್ಗತರಾಗಿದ್ದ ನನ್ನ ಪಾತ್ರಗಳು ಬಹಿರಂಗಕ್ಕೆ ಧುಮುಕಿದರು!

ಶೆರ್ಲಾಕ್ ಹೋಮ್ಸ್, ಡಿಟೆಕ್ಟಿವ್ ಅಜಿತ್ ಹಾಗೂ ಡಿಟೆಕ್ಟಿವ್ ಧನುಷ್ ಅತೀವ ಹುರುಪಿನಿಂದ ಕಾರ್ಯೋನ್ಮುಖರಾಗಿಬಿಟ್ಟರು!!!

|ಮುಂದಿನ ವಾರಕ್ಕೆ |

‍ಲೇಖಕರು Admin

14 November, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading