ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ತಾಕತ್ತಿದ್ದರೆ ನಮ್ ಬಾವನ ಮೈ ಮುಟ್ಟಿ!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.

ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.

ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.

ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.

ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.

ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.

ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್‌ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಅಂಕಣ – 4

ಮುಖ್ಯಮಂತ್ರಿ ಮೀನು ಸೇವಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದರು.

ಟಿ.ವಿ. ಯವರಿಗೆ ಮೂರ‍್ನಾಲ್ಕು ದಿವಸಕ್ಕೆ ಆಹಾರ! ಮೀನು ಸೇವಿಸಿ ದೇವಸ್ಥಾನಕ್ಕೆ ಪ್ರವೇಶಿಸಿದ್ದು ಅಪರಾಧವಲ್ಲವೇ? ಆ ಪಾಪಕ್ಕೆ ಏನು ಪ್ರಾಯುಶ್ಚಿತ್ತ? ಇದರಿಂದ ಬಹುಸಂಖ್ಯಾತ ಜನರ ಧಾರ್ಮಿಕ ಭಾವನೆಯ ಮೇಲೆ ಹೇಗೆ ಧಕ್ಕೆಯಾಗಿದೆ?

ಚಾನಲ್‌ನವರು ತಮ್ಮದೇ ದೇವಮಾನವರನ್ನು ಕೂರಿಸಿಕೊಂಡು ಚರ್ಚೆ ಮಾಡುತ್ತಿದ್ದರು.

ಹೇಳಿ ಕೇಳಿ ಚುನಾವಣೆಯ ಸಮಯ ಬೇರೆ. ಕಾಂಗ್ರೆಸ್ ಮುಖ್ಯಮಂತ್ರಿ ಮೀನು ತಿಂದು ದೇವಳಕ್ಕೆ ಹೋಗಿದ್ದಾರೆ. ಬಹುಸಂಖ್ಯಾತರ ಭಾವನೆಗಳನ್ನೂ ಕೆರಳಿಸಿ ಪರಿಸ್ಥಿತಿಯನ್ನು ತಮ್ಮ ಪಕ್ಷದ ಪರವಾಗಿ ಹೇಗೆ ತಿರುಗಿಸಿಕೊಳ್ಳಬಹುದು ಎಂದು ವಿರೋಧ ಪಕ್ಷದವರು ಹರಸಾಹಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಗೋಜಲಿನೊಳಕ್ಕೆ ಹಿಂದೂಗಳೊಂದಿಗೆ ಮುಸ್ಲಿಮರನ್ನು ಎಳೆದುಕೊಂಡರೆ ಹೇಗೆ ?

ಮೂರು ದಿನದಿಂದ ಚರ್ಚೆ ನಡೆದೇ ಇತ್ತು. ಚರ್ಚೆಯ ಫಲಿತಾಂಶ ಏನಾಗಬಹುದು ಎಂಬ ಕತೂಹಲ ಜನರಿಗಿತ್ತು.

ಮೀನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವುದು ಮಹಾ ಪಾಪವೇ ?

ಇವೆಲ್ಲ ದೊಡ್ಡ ವಿಚಾರಗಳು. ನಮ್ಮಂತಹ ಹುಲು ಮಾನವರು ಏನು ಹೇಳಲಾದೀತು ? ಮುಂದೆ ದೇವಸ್ಥಾನಕ್ಕೆ ಹೋಗುವಾಗ ಮಾಂಸಾಹಾರ ತೊರೆದು ಕೇವಲ ಪಾಯಸ ಕುಡಿದು ಹೋದರೆ ಆದೀತೆ ? ಇಲ್ಲ. ಪುಳಿಯೋಗರೆ ತಿಂದರೆ ಪರವಾಗಿಲ್ಲವೇ ? ಎಂಬ ಆಲೋಚನೆ ಇತರೆ ಜನಸಾಮಾನ್ಯರಂತೆ ನನಗೂ ಹೊಳೆಯತೊಡಗಿತು.

ಮೂರು ದಿನ ಚಾನಲ್‌ನವರು ಇದೇ ವಸ್ತುವನ್ನು ಇಟ್ಟುಕೊಂಡು ಕಡೆದರೂ ಪರಿಣಾಮ ಸೊನ್ನೆ. ಜನ ನಿರ್ಲಿಪ್ತರಾಗಿಯೇ ಇದ್ದರು. ಮೊಸರನ್ನು ಕಡೆದರೆ ತಾನೇ ಬೆಣ್ಣೆ ಬರುವುದು? ಬರೀ ನೀರನ್ನು ಕಡೆದರೆ ಏನು ಬಂದೀತು?

ಇದರಿಂದ ತಮಗೇನಾದರೂ ಲಾಭ ದೊರೆತೀತೆಂದು ಕಾಯುತ್ತಿದ್ದ ವಿರೋಧ ಪಕ್ಷದವರಿಗೆ, ಮೊದಲೇ ಮಾನಸಿಕ ದೂರವನ್ನು ಕಾಯ್ದುಕೊಳ್ಳಲು ತೊಡಗಿದ್ದ ಎರಡು ವಿಭಿನ್ನ ಧರ್ಮದ ಜನರನ್ನು ಪರಸ್ಪರ ವಿರುದ್ಧ ನಿಲ್ಲಿಸಿದರೆ ಹೇಗೆ? ಎನಿಸಿತು.

ಒಬ್ಬ ಮುಹಾಶಯನ ಮೆದುಳು ಚುರುಕಾಯಿತು. ತನಗೆ ಬೇಕಾದ ಚಾನಲ್‌ ಗಳಲ್ಲಿ ಸುದ್ದಿ ಹರಿಯಬಿಟ್ಟ.

ʻಇವರು ಮೀನು ತಿಂದು ದೇವಸ್ಥಾನಕ್ಕೆ ಹೋಗಿ ಬಚಾವಾಗಿದ್ದಾರೆ. ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿ ಪ್ರವೇಶಿಸಿ ನೋಡಲಿʼ ಎಂದು ಸುದ್ದಿ ಹಬ್ಬತೊಡಗಿತು..

                                       *    *    *

ಹಿಂದಿನ ನಾಲ್ಕೈದು ದಿನಗಳಿಂದ ಟಿವಿಯ ಚಾನಲ್‌ ವೊಂದರಲ್ಲಿ ಹಗಲಿಡೀ ನಡೆಯುತ್ತಿದ್ದ ಚರ್ಚೆಯನ್ನು ನೋಡಿದಾಗ ಈಕೆಳಗಿನ ಪ್ರಸಂಗ ನೆನಪಾಗಿತ್ತು…………

ಅವನು ತನ್ನ ಒಬ್ಬಳೇ ತಂಗಿಯನ್ನು ಮಲೆಸೀಮೆಯಿಂದ ದೂರದ ಮಲ್ಲಿಪಟ್ಟಣ ಸೀಮೆಗೆ ಕೊಟ್ಟಿದ್ದ. ಕೂಡು ಮಾ ಡಿದವರು ಹೇಳಿದ್ದರು. ‘ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ, ಸಾಕಷ್ಟು ಜಮೀನಿದೆ’ ಎಂದು. ಹಾಗೆಯೇ ಜಮೀನೇನೋ ಇತ್ತು. ಆದರೆ ಅದನ್ನು ಉತ್ತು ಬಿತ್ತಿದರೆ ತಾನೇ ಬೆಳೆ ! ವಾರವಿಡೀ ಸಂತೆ ಸಂತೆ ಸುತ್ತುತ್ತಾ ಪಂಚಾಯಿತಿ ಕಛೇರಿ ಮುಂದೆ ಪುಡಾರಿಗಿರಿ ಮಾಡುತ್ತಾ ಅಂದಿನಂದಿನ ಕ್ವಾರ್ಟರ್ ಖರ್ಚಿಗೆ ಕಾಸು ಗೆಬರಿಕೊಳ್ಳುತ್ತಾ, ಕಟ್ಟೆಯ ಮೇಲೆ ಕುಳಿತು ಬೀಡಿ ಎಳೆದು ಆಕಾಶದ ಕಡೆ ಹೊಗೆ ಬಿಡುತ್ತಾ ಆತ ಕಾಲ ದೂಡುತ್ತಿದ್ದುದು ತಿಳಿಯಲು ಹೆಣ್ಣು ಕೊಟ್ಟ ಬಾವನಿಗೆ ತಡವೇನೂ ಆಗಲಿಲ್ಲ.

‘ಒಳ್ಳೆಯ ಜಮೀನು ಇಟ್ಟುಕೊಂಡು ಹೀಗೇಕೆ ಸೋಮಾರಿಯಾಗಿ ಅಲೆದಾಡ್ತೀಯ. ಹೀಗಾದ್ರೆ ಸಂಸಾರ ನಡೆಯೋದು ಹೇಗೆ’ ಎಂದು ಮೈದುನನಿಗೆ ಬಾವ ಬುದ್ಧಿವಾದ ಹೇಳಿದ. ಅವರಿವರಿಂದ ಹೇಳಿಸಿ ನೋಡಿದ. ಅದ್ಯಾವುದು ಅವನಿಗೆ ಚಂದಲಿಲ್ಲ.

ಮೊದಲೇ ಅವನೊಬ್ಬ ವೃತ್ತಿನಿರತ ಸಾಲಗಾರ !

ಇಂತಹವರಿಗೆ ಕೆಲವು ಗುಣಲಕ್ಷಣಗಳಿರುತ್ತವೆ. ಒಂದು; ಯಾವುದೇ ದುಡಿಮೆ ಮಾಡದೇ ಬದುಕಿನಲ್ಲಿ ಮಜಾ ಮಾಡುವುದು. ಎರಡು; ಮಿಕ್ಕವರೆಲ್ಲಾ ತಮಗಾಗಿಯೇ ದುಡಿಯುತ್ತಿದ್ದಾರೆ ಎಂದು ನಂಬಿ ಅವರ ದುಡಿಮೆಯ ಒಂದು ಪಾಲನ್ನು ಸಾಲದ ರೂಪದಲ್ಲಿ ತಮ್ಮದಾಗಿಸಿಕೊಳ್ಳುವುದು. ಮೂರು; ಅದನ್ನು ಹಿಂದಿರುಗಿಸದೇ ಸತಾಯಿಸುವುದು, ಹಲವಾರು ದಿನ ಅವನ ಬಳಿ ಅಲೆದಾಡಿ ಬೇಸತ್ತ ಸಾಲ ಕೊಟ್ಟವರು ಅದರ ಆಸೆಯನ್ನೆ ತೊರೆಯುವಂತೆ ಮಾಡುವುದು.

ರೋಸಿ ಹೋದ ಯಾರಾದರೂ ಜೋರು ಮಾಡಿ ಸಾಲ ವಸೂಲು ಮಾಡಿಯೇ ತೀರುತ್ತೇನೆಂದು ಹೊರಟರೆ, ಆಂತಹವನ ಮುಂದೆ ತಾನಾಗಿ ಎದೆ ಚಾಚಿ ಮುಂದೆ ಹೋಗಿ ಏನ್ಮಾಡ್ತೀರಿ, ಹೊಡಿತೀರೇನ್ರಿ ? ಹೊಡಿತೀರೇನ್ರಿ ? ಎನ್ನುವುದು. ಎದುರಾಳಿಗೆ ಏನೂ ಹೊಳೆಯದೆ ಸಿಟ್ಟಿಗೆದ್ದು ಅವನಿಗೆ ಒಂದೇಟು ಹಾಕುವುದು. ಆ ಗಳಿಗೆಯಿಂದಲೇ ಸಾಲ ಕೊಟ್ಟವನು ತನ್ನ ವಸೂಲಿಯ ಅಧಿಕಾರವನ್ನು ಕಳೆದುಕೊಳ್ಳುವುದು. ಆಮೂಲಕ ಸಾಲ ಮನ್ನಾ ಆಗುವುದು ಇದೆಲ್ಲವೂ ಈ ‘ವೃತ್ತಿನಿರತ ಸಾಲಗಾರ’ ರಲ್ಲಿ ಸರ್ವೇ ಸಾಮಾನ್ಯ. ಇವೆಲ್ಲಾ ವಿದ್ಯೆಯಲ್ಲಿ ಪಾರಂಗತನಾಗಿದ್ದ ಮೈದುನ ತನ್ನ ಊರು ಮೂರು ಸುತ್ತೆಲ್ಲಾ ಸಾಲ ಮಾಡಿಕೊಂಡಿರುವುದು ತಿಳಿದು ಬಾವ ಹೌಹಾರಿದ. ಹ್ಯಾಗಾದರೂ ಇವನನ್ನು ವ್ಯವಸಾಯಕ್ಕೆ ಹಚ್ಚಬೇಕು. ಇಲ್ಲವಾದರೆ ತನ್ನ ತಂಗಿಯ ಬದುಕು ಮೂರಾಬಟ್ಟೆಯಾಗುತ್ತದೆ ಎಂದುಕೊಳ್ಳುತ್ತಾ, ಒಂದು ದಿನ ಎರಡೂ ಕಡೆಯ ಕೆಲವು ನೆಂಟರನ್ನು ಸೇರಿಸಿದ.

ಅವರೆಲ್ಲರ ಮಾತನ್ನು ಮೌನ ವಹಿಸಿ ಕೇಳಿದ ಮೈದುನ, ‘ಎತ್ತು ಕರ ಇಲ್ದೆ ವ್ಯವಸಾಯ ಮಾಡಕೆ ಆಗುತೈನ್ರಿ’ ಎಂದು ಅವರಿಗೇ ಪಟ್ಟು ಹಾಕಿದ.

‘ಅದಿಲ್ಲದೆ ಆಗುತ್ತೆ ಅಂತ ನಾವೆಲ್ಲಿ ಹೇಳಿದ್ವಿ’ ಎಂದರು ನೆಂಟರು.

‘ಅವ ಕೊಳ್ಳದಿಕೆ ದುಡ್ಡು ಬೇಡ್ವಾ ? ನಮ್ಮ ಬಾವನಿಗೆ ಹೇಳಿ, ಎಲ್ಲಾದರೂ ಸ್ವಲ್ಪ ಸಾಲ ಕೊಡಿಸಿ. ಆಮೇಲೆ ಏನ್ಮಾಡ್ಮೇಕು ಅಂತಾ ನನಗೆ ಗೊತ್ತಿದೆ’ ಎಂದ.

ನೆಂಟರ ಸಲಹೆಯಂತೆ ಬಾವ ಎರಡು ಮೂರು ಕಡೆ ಸಾಲ ಮಾಡಿ. ಮೂವತ್ತು ಸಾವಿರ ರೂ. ಹೊಂದಿಸಿ ಕೊಟ್ಟು ಮೈದುನನನ್ನು ಕಳುಹಿಸಿದ. ಹೀಗಾದರೂ ತನ್ನ ತಂಗಿಯ ಸಂಸಾರ ನೇರವಾದರೆ ಸಾಕಲ್ಲ ಎಂದು ಆಶಾವಾದದಿಂದ ಇರತೊಡಗಿದ.

ತಿಂಗಳುಗಳು ಕಳೆಯುತ್ತಾ ಇದ್ದರೂ ಮೈದುನ ಎತ್ತು ಕೊಂಡ ಸುದ್ದಿ ಇವನಿಗೆ ಬರಲೇ ಇಲ್ಲ.

‘ನಿಮ್ಮ ಮೈದುನ ಈಗ ಹೊಸ ಪಂಚೆ ಟರ್ಕಿ ಟವಲು ಹಾಕಂಡು ಜರ್ಬಾಗಿ ತಿರ್ಗಾಡ್ತರ‍್ತಾನೆ. ಬೀಡಿ ಬದಲು ಸಿಗರೇಟ್ ಸೇದ್ತಾನೆ’.

ಮಲ್ಲಿಪಟ್ಟಣ ಸಂತೆಗೆ ಹೋಗಿ ಬಂದ ಜನ ಹೇಳಿದಾಗ ಬಾವ ಹೌಹಾರಿ ಹೋದ.

ಮೈದುನನನ್ನು ಭೇಟಿ ಮಾಡಲು ಹಲವಾರು ಬಾರಿ ಪ್ರಯತ್ನಿಸಿದ. ಆದರೆ ಅವನು ಬಾವನ ಕೈಗೆ ಸಿಗದೆ ನುಣುಚಿಕೊಂಡು ತಿರುಗಾಡತೊಡಗಿದ.

ಇದ್ದ ಒಂದು ಹಸುವನ್ನು ಮೇಯಿಸಿಕೊಂಡು ಡೈರಿಗೆ ಹಾಲು ಹಾಕಿ ಹೊಟ್ಟೆ ಪಾಡು ಮಾಡುತ್ತಿದ್ದ ತಂಗಿ, ‘ಅಣ್ಣ ಅವರನ್ನೇನೂ ಎದುರು ಹಾಕ್ಕೋಬೇಡ. ಹೆಂಗಾದ್ರೂ ಉಪಾಯದಲ್ಲಿ ಬಗೆಹರಿಸ್ಕೊ’ ಎಂದಳು.

‘ನೀನ್ ಹಿಂಗೆ ಮೆದುಗ್ಲನಂಗೆ ಇದ್ರೆ ಆಗದಿಲ್ಲ. ಅವ್ನು ನೆಟ್ಟಗೆ ಎತ್ತು ಕರ ತಂದು ವ್ಯವಹಾರ ಮಾಡಿದ್ರೆ ಮಾಡ್ಲಿ. ಇಲ್ಲಾಂದ್ರೆ ನಮ್ಮ ದುಡ್ಡು ವಸೂಲು ಮಾಡಿ ನಮಗೆ ಕೊಟ್ಬಿಡು’. ನೆಂಟರಿಷ್ಟರು ಇವನನ್ನೇ ದಬಾಯಿಸತೊಡಗಿದರು.

ಮತ್ತೆ ನೆಂಟರು ಸೇರಿದರು. ಮೈದುನನನ್ನು ಕರೆ ತಂದರು. ಅವನು ಸೋಲೊಪ್ಪಿಕೊಳ್ಳಲು ಬಂದಿರಲಿಲ್ಲ.

ನಾನೇನು ನಿಮ್ಮ ದುಡ್ಡು ತಿಂದ್ಹಾಕಿದೀನೀಂತ ನೆಂಟ್ರ ಪಂಚಾಯ್ತಿ ಸರ‍್ಸಿದಿರೇನ್ರಿ. ಕೆಲವು ಅರ್ಜೆಂಟಿನ ಸಾಲ ತರ‍್ಸಿದಿಸಿ…… ಎತ್ತು ಕೊಳ್ಳದಕ್ಕೂ ಓಡಾಡ್ತಾ ಇದೀನಿ. ಬ್ಯಾಂಕ್ ಲೋನ್ ಆಗುತ್ತೆ, ಏನ್ ಹೆದರಬೇಡ’ ಎಂದು ಬಾವನಿಗೆ ಸಮಜಾಯಿಷಿ ಹೇಳತೊಡಗಿದ.

ಬಾವನಿಗೆ ಅವನ ವಾದ ಹಿಡಿಸಲಿಲ್ಲ. ಅವನೂ ವಾದಕ್ಕೆ ಬಿದ್ದ. ‘ಅದ್ಯಾವುದೂ ಬ್ಯಾಡ. ನಾನು ನೆಂಟರ ಹತ್ರ ಸಾಲ ಮಾಡಿ ತಂದ್ಕೊಟ್ಟಿದ್ದೆ. ಒಳ್ಳೆದಾಗಿ ಅಂತ. ನೀನು ಮೂವತ್ ಸಾವ್ರ ತಂದ್ಕೊಟ್ಟು ಹೋಗ್ಬಡು’ ಎಂದ.

‘ಏನು ಲಕ್ಷ ಕೊಟ್ಟಿದೀರೇನ್ರಿ ?’ ಎಂದು ಮೈದುನ ನಿಗುರಾಡತೊಡಗಿದ. ಬಾವನಿಗೂ ರೇಗತೊಡಗಿತು. ಏನು ಮಾಡಬೇಕೆಂದು ತೋಚಲಿಲ್ಲ. ಎದ್ದು ನಿಂತು ಮೈದುನನ ಕಡೆಗೆ ಕೆಂಗಣ್ಣು ಬಿಡತೊಡಗಿದ.

ಮೈದುನನಿಗೆ ಅಷ್ಟೇ ಸಾಕಾಗಿತ್ತು

ಏನ್ ಹೊಡಿತೀರೇನ್ರಿ? ಎಂದು ಎದೆ ಚಾಚಿ ಭಾವನ ಕಡೆ ಮುನ್ನುಗ್ಗಿ ಹೋದ. ಭಾವನಿಗೆ ಸಿಟ್ಟು ನೆತ್ತಿಗೇರಿತು.ನೆತ್ತಿಯ ಸಿಟ್ಟು ರಟ್ಟೆಗಿಳಿಯಿತು. ಬೀಸಿ ಕಪಾಳಕ್ಕೆ ಹೊಡೆದ. ಮೈದುನ ‘ಆಯ್ತು ಬಿಡಿ’ ಎಂದ ನೆಂಟರು ಮೂಕ ಪ್ರೇಕ್ಷಕರಾಗಿದ್ದರು. ಭಾವನ ಕಡೆ ತಿರುಗಿದ ಅವನು ‘ನನ್ ತಾವ ಏನ್ ಕಿತ್ಗಳ್ತೀಯಾ ನೋಡ್ತಿನಿ’ ಎನ್ನುತ್ತಾ ಟವಲ್ ಕೊಡವಿ ಹೆಗಲ ಮೇಲೆ ಹಾಕಿಕೊಂಡು ಬಿರುಗಾಳಿಯಂತೆ ಹೊರಟು ಹೋದ. ಬಾವನ ಸಾಲ ಮನ್ನಾ ಆಯಿತು ಎಂಬುದು ಅಲ್ಲಿದ್ದವರಿಗೆಲ್ಲಾ ಅರಿವಾಗಿ ಹೋಯಿತು.

ಬಾವ ಮಕ್ಕಳ ಸಂಬಂಧದಲ್ಲಿ ಶಾಶ್ವತ ಕಂದಕ ಏರ್ಪಟ್ಟಿದ್ದಲ್ಲದೆ ಇಬ್ಬರಲೂ ದ್ವೇಷದ ಕಿಡಿ ಹೊತ್ತಿಕೊಂಡಿತು.

ಕೆಲವಾರು ತಿಂಗಳುಗಳು ಕಳೆದವು. ಗೌರಿ ಹಬ್ಬ ಸಮೀಪಿಸಿತು. ಮೈದುನನ ಮೇಲೆ ಸಿಟ್ಟಿದ್ದರೂ ತಂಗಿಯನ್ನು ಬಿಡಲಾದೀತೆ ?

‘ಕಾಯಿ ಕಣ’ ತೆಗೆದುಕೊಂಡ ಹೋದ. ತಂಗಿ ಮನೆಯಲ್ಲಿದ್ದಳು. ಅವ್ರು ಮಲ್ಲಿಪಟ್ಣ ಸಂತೆಗೆ ಹೋಗಿದ್ದಾರೆ. ಹಂಗೇ ಮಾತಾಡಿಸಿಕೊಂಡು ಹೋಗು. ಮತ್ತೆ ಅದೇ ದೊಡ್ಡ ವಿಷ್ಯ ಮಾಡ್ಕಬೇಡ’ ಎಂದಳು ತಂಗಿ.

ತಂಗಿ ಹೇಳದ್ದು ಸರಿ. ಎಷ್ಟ್ ದಿನ ಸಾಧಿಸುವುದು ? ಮಾತಾಡಿಸಿಕೊಂಡೇ ಹೋಗೋಣ ಎಂದು ಸಂತೆಗೆ ಹೋದ.

ಅವತ್ತು ನೆಂಟರೆದುರಿಗೆ ಕಪಾಳಕ್ಕೆ ಪೆಟ್ಟು ತಿಂದ ಮೈದುನ ತನ್ನ ಮೇಲೆ ಸೇಡಿಗೆ ಕಾದಿರುತ್ತಾನೆ ಎಂದು ಅವನು ತಿಳಿದಿರಲಿಲ್ಲ.

ಸಂತೆಯ ಮೂಲೆಯಲ್ಲಿ ಮೈದುನನ ಮುಖ ಕಾಣಿಸಿತು. ಮರ‍್ನಾಲ್ಕು ಜನ ಸಾಲ ಕೊಟ್ಟವರು ಅವನನ್ನು ಮೂಲೆಗೆ ಸರಿಸಿ. ತಳ್ಳಾಡುತ್ತಿದ್ದಾರೆ. ಬಾವನೆದುರಿಗೆ ಸಾಲಗಾರರ ಕೈಗೆ ಸಿಲುಕಿಕೊಂಡಿದ್ದು ಅವನಿಗೆ ಮತ್ತೂ ಅವಮಾನವೆನಿಸಿತು. ಕೂಗಾಡತೊಡಗಿದ. ಒಬ್ಬೊಬ್ಬರೇ ಅವನ ಕತ್ತು ಬಗ್ಗಿಸಿ ಬೆನ್ನ ಮೇಲೆ ಇಡಿಯತೊಡಗಿದರು.

ಗುಂಪಿನಲ್ಲಿ ನುಗ್ಗಿದ ಬಾವ ಜಗಳ ಬಿಡಿಸತೊಡಗಿದ. ಅವರೆಲ್ಲಾ ಹೊಡೆಯುವುದು ಬಿಟ್ಟು ಪಕ್ಕಕ್ಕೆ ಸರಿದರು. ಸಿಟ್ಟಿನಿಂದ ಕುದಿಯುತ್ತಿದ್ದ ಅವರನ್ನು ಮೈದುನ ಮಾತಲ್ಲಿ ಕೆಣಕಿ ಇನ್ನೂ ರೊಚ್ಚಿಗೇಳಿಸುತ್ತಿದ್ದ.

‘ಯಾರೂ ಗತಿ ಇಲ್ಲ ಅಂತ ಒಂಟಿ ಸಿಕ್ಕಿದವನನ್ನು ತಾರಾಮಾರಾ ಹೊಡಿತಿದ್ರಲ್ಲ. ಈಗ ನಮ್ಮ ಬಾವ ಬಂದಿದ್ದಾನೆ ನೋಡಿ. ಅವ್ನ ಮೈ ಮುಟ್ಟಕ್ಕೆ ನಿಮ್ ಕೈಲಾಗುತ್ತಾ ? ತಾಕತ್ತಿದ್ದರೆ ಅವನ ಮೈ ಮುಟ್ಟಿ ನೋಡಿ’ ಎಂದು ಕೆಣಕಿದ. ಸಿಟ್ಟಿನಿಂದ ಕುದಿಯುತ್ತಿದ್ದ ಅವರು ಬಾವನೆಡೆಗೆ ತಿರುಗಿ ಅವನನ್ನು ನೆಲಕ್ಕೆ ಕೆಡವಿ ಒದೆಯತೊಡಗಿದರು’

। ಮುಂದಿನ ವಾರ ।

‍ಲೇಖಕರು Admin

15 November, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading