ಆತ ಬರೆದ ಕಾರ್ಡನ್ನು ಪೋಸ್ಟ್ ಮಾಡಲು ನನಗೇ ಹೇಳಬೇಕು! ಮತ್ಯಾರಿದ್ದಾರೆ ಅಲ್ಲಿ?

54

ಹಾಗೆ ನೋಡಿದರೆ ಅಣ್ಣನದು ತೀರಿಕೊಳ್ಳುವ ವಯಸ್ಸೇನೂ ಆಗಿರಲಿಲ್ಲ. ಆಗ ಆತನಿಗೆ ಕೇವಲ ೭೨ ವರ್ಷ. ಆತನಿಗೆ ಶುಗರ್ ಇರಲಿಲ್ಲ. ಬಿ.ಪಿ. ಇರಲಿಲ್ಲ. ಕಿಟಿಕಿಟಿ ದೇಹ. ದಿನನಿತ್ಯ ೬-೮ ಮೈಲಿ ವಾಕಿಂಗ್ ಮಾಡುತ್ತಿದ್ದ.

ಆತನ ಬಟ್ಟೆ ಆತನೇ ತೊಳೆದುಕೊಳ್ಳುತ್ತಿದ್ದ. ತೆಂಗಿನ ಮರಕ್ಕೆ ನೀರು ಬಿಡುತ್ತಿದ್ದ. ಸದಾ ಓಡಾಟ ಮಾಡುತ್ತಿದ್ದ. ರಾತ್ರಿ ೧೨ ಗಂಟೆಯವರೆಗೆ ಕೂತು ಓದಿ ಬರೆಯುವುದು ಮಾಡುತ್ತಿದ್ದ. ಬೆಳಿಗ್ಗೆ ೬.೩೦ ಕ್ಕೆ ಎದ್ದು ರೇಡಿಯೋ ಹಾಕಿದರೆ ವಾರ್ತೆ ಮುಗಿಯುವವರೆಗೆ ಅದು ಮಾತಾಡುತ್ತಿರುತ್ತಿತ್ತು. ಊಟವೂ ದೊಡ್ಡದಲ್ಲ. ಬೆಳಿಗ್ಗೆ ತಿಂಡಿ ತಿಂದರೆ ಮಧ್ಯಾಹ್ನ ಊಟ, ಸಂಜೆ ಚಹಾ, ಮತ್ತೆ ರಾತ್ರಿ ಊಟ ಅಷ್ಟೇ. ಕರಿದ ಪದಾರ್ಥ, ಸಿಹಿ ಇತ್ಯಾದಿ ಏನೂ ತಿನ್ನುತ್ತಿರಲಿಲ್ಲ.

ಆದರೂ ಆತನಿಗೆ ಬಂದ ನ್ಯುಮೋನಿಯಾ, ಉಸಿರಾಟದ ತೊಂದರೆ, ಒಂದೆರಡು ಸಲ ಆದ ಸರ್ಪಸುತ್ತು, ಕುರು (ಕೀವು ತುಂಬಿದ ಒಂದು ಬಗೆಯ ಸಣ್ಣ ಗಡ್ಡೆ) ಸದಾ ಇರುವ ನೆಗಡಿ… ಅವನ ಕೊನೆಯ ದಿನಗಳನ್ನು ಕಷ್ಟವಾಗಿಸಿತು. ಆತನಿಗೆ ಆದ ಸರ್ಪಸುತ್ತು ಮೇಲಿನ ಗಾಯ ಆರಿದರೂ ಒಳಗಾಯ ಹಾಗೇ ಉಳಿಯಿತು. ಅಂಗಿ ಬನಿಯನ್ ಹಾಕಿದರೆ ಹಸಿಗಾಯದ ಮೇಲೆ ಬಟ್ಟೆ ಹಾಕಿದಂತಾಗುತ್ತದೆಂದು ಹೇಳುತ್ತಿದ್ದ. ಬಸ್‌ ಅಲ್ಲಿ, ಕಾರ್ಯಕ್ರಮದಲ್ಲಿ ಹಾಕಿಕೊಂಡ ಜುಬ್ಬಾವನ್ನು ಹಲವು ಬಾರಿ ಕೈಯಲ್ಲಿ ಎತ್ತಿ ಹಿಡಿದುಕೊಂಡಿರುತ್ತಿದ್ದ. ಅಷ್ಟು ಅವನನ್ನು ಅದು ಕಾಡಿತ್ತು. ಮತ್ತು ಆಗಾಗ ಅವನಿಗೆ ಏಳುವ ಕುರು ದೊಡ್ಡ ಹಿಂಸೆ ಕೊಡುತ್ತಿತ್ತು. ಆದರೆ ಅದೆಲ್ಲಾ ಸಹಿಸಿಕೊಂಡೇ ಅವನು ಓದು, ಬರೆಹದಲ್ಲಿ ತಲ್ಲೀನನಾಗಿರುತ್ತಿದ್ದ.

ಒಮ್ಮೆ ವಾಕಿಂಗ್ ಮುಗಿಸಿ ಬರುವಾಗ ಯಾರೋ ಒಬ್ಬ ಎಲೆಚೂಳಿ ಹಾಕಿಕೊಂಡು ಹೋಗುವ ಬೈಕ್ ಈತನಿಗೆ ಹೊಡೆದು ಗಟಾರಕ್ಕೆ ಕೆಡವಿ ಹೋಗಿತ್ತು. ಅಲ್ಲಿಂದ ಪ್ರಾರಂಭವಾದ ಆತನ ಆಸ್ಪತ್ರೆ ಪಯಣ ಅವನ ಜೀವನದ ಕೊನೆಯವರೆಗೂ ಮುಂದುವರಿಯಿತು.

ಮೊದಮೊದಲು ವರ್ಷಕ್ಕೆ ೩-೪ ಬಾರಿ ಆಸ್ಪತ್ರೆಗೆ ಹೋಗುವುದಿತ್ತು. ನಂತರ ತಿಂಗಳಿಗೆ ೨ ಬಾರಿ ೩ ಬಾರಿ ಹೋಗಬೇಕಾಯಿತು. ಆಗಾಗ ಕಾಡುವ ಯೂರಿನ್ ಇನ್‌ಫೆಕ್ಷನ್‌ಗೆ ಸಾವಿರಾರು ರೂ.ಗಳನ್ನು ದೊಡ್ಡಾಸ್ಪತ್ರೆಯಲ್ಲಿ ಖರ್ಚು ಮಾಡಿದರು. ಆದರೆ ಒಮ್ಮೆ ಶಿರಸಿಯಲ್ಲಿ ಡಾ|| ಪಟವರ್ಧನ ಅವರು ನೋಡಿ ೨೫೦ ರೂ. ಔಷಧ ಕೊಟ್ಟು ಅದನ್ನು ಪೂರ್ತಿಯಾಗಿ ವಾಸಿ ಮಾಡಿಕೊಟ್ಟರು. ಅಲ್ಲಿಂದ ಆತ ಅದೊಂದು ಖಾಯಿಲೆಯಿಂದ ಬಚಾವಾದ. ಸಾವಕಾಶ ಡಿಮೆನ್ಶಿಯಾ ಕಾಡಲು ಪ್ರಾರಂಭಿಸಿತು.

ಆಗಲೇ ಆತನನ್ನು ನಾನು ಕೆರೆಕೋಣಿನಿಂದ ಸಿದ್ದಾಪುರಕ್ಕೆ ಕರೆದುಕೊಂಡು ಹೋದೆ. ಸುಮಾರು ಒಂದು ಒಂದುವರೆ ವರ್ಷ ಇನ್ನಕ್ಕ, ಯಮುನಾ, ಮಾಧವಿಯರ ಆರೈಕೆಯಲ್ಲಿ ಉಳಿದ. ಅವನ ಅನಾರೋಗ್ಯದಲ್ಲಿಯೇ ಸಿದ್ದಾಪುರದ ಸಾಹಿತ್ಯಾಸಕ್ತರು -ಜಿ.ಜಿ. ಹೆಗಡೆ, ಸಿ.ಎಸ್. ಗೌಡರ್, ಹೊನ್ನೆಗುಂಡಿ- ಮುಂತಾದವರು ಮನೆಗೆ ಬಂದು ಸನ್ಮಾನಿಸಿ ಹೋದರು. ನನಗ್ಯಾಕೆ ಸನ್ಮಾನ? ಅನಾರೋಗ್ಯದಲ್ಲಿದ್ದಾನೆ ಎಂದೆ? ಎಂದು ಸಣ್ಣಗೆ ತಮಾಷೆ ಮಾಡಿದ್ದ.

ಅಣ್ಣನ ಅನಾರೋಗ್ಯ ಇನ್ನಷ್ಟು ಉಲ್ಬಣವಾಗುತ್ತಿರುವಾಗ ಒಂದಿಷ್ಟು ದಿನ ಮಾಧವಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿಯೇ ಅಣ್ಣನ ‘ಮೀನ್‌ಪಳ್ದಿ’ ಕಥಾಸಂಕಲನ ಬಿಡುಗಡೆಯಾಗಿದ್ದು. ಅಣ್ಣನ ಸ್ನೇಹಿತರೆಲ್ಲಾ ಚಿಂತನದ ಆಹ್ವಾನದ ಮೇರೆಗೆ ಮಾಧವಿ ಮನೆಗೆ ಬಂದು ಪುಸ್ತಕ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದರು. ಡಾ. ಎಂ.ಜಿ. ಹೆಗಡೆಯವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನೆನಪು.

ಕೊನೆಯ ದಿನಗಳು ಹೆಚ್ಚು ಕಡಿಮೆ ಮಣಿಪಾಲ ಆಸ್ಪತ್ರೆಯಲ್ಲಿಯೇ ಕಳೆದ. ಆಸ್ಪತ್ರೆಯಲ್ಲಿ ಇರುವಾಗಲೂ ಆತನ ತಲೆಯ ಹತ್ತಿರ ಒಂದು ಪುಸ್ತಕ, ಒಂದು ಡೈರಿ, ಇನ್ನೊಂದು ಪೆನ್ನು ಇರಲೇಬೇಕು. ಆತ ನಮ್ಮನ್ನಗಲಿದ್ದು ೨೦೦೮ ಅಕ್ಟೋಬರ್‌ನಲ್ಲಿ. ಆತ ನವೆಂಬರ್ ಡಿಸೆಂಬರ್ ೨೦೦೭ ರ ವರೆಗೂ ಕವಿತೆ, ಕತೆ ಬರೆಯುತ್ತಿದ್ದ. ಅದರೆ ಅದು ಒಮ್ಮೊಮ್ಮೆ ಏನು ಎಂದು ಗೊತ್ತಾಗುತ್ತಿರಲಿಲ್ಲ. ಕಾಟು ಹಾಕುತ್ತಿದ್ದ. ಕೆಲವನ್ನು ಬರೆದು ಯಮುನಾಳ ಹತ್ತಿರ copy ಮಾಡಲು ನೀಡುತ್ತಿದ್ದ.

ಸಾಮಾನ್ಯವಾಗಿ ಕೊನೆಯ ದಿನಗಳಲ್ಲಿ ಅಣ್ಣನ ಜೊತೆ ಹೆಚ್ಚು ಕಳೆದದ್ದು ಇನ್ನಕ್ಕ, ಯಮುನಾ ಮತ್ತು ಬಿ. ಗಣಪತಿ. ಹಾಗೆಯೆ ಅತ್ತಿಗೆ(ಗಣಪತಿ ತಾಯಿ)-ಅತ್ಯಂತ ಕಾಳಜಿ ಮತ್ತು ಪ್ರೀತಿಯಿಂದ ಅಣ್ಣನ ಊಟ ಸಿದ್ಧತೆ ಮಾಡಿಕೊಡುತ್ತಿದ್ದಳು. ರೋಹಿದಾಸ ಭಾವನ ಸೇವೆ ಮಾಡುವ ಪುಣ್ಯದ ಕೆಲಸವೆಂದು ಹೇಳುತ್ತಿದ್ದಳು. ಅಷ್ಟೊಂದು ಪ್ರೀತಿ ಮತ್ತು ಭಕ್ತಿ ಅವಳಿಗೆ. ಅಕ್ಕ ಎಂದರೂ ಅವಳಿಗೆ ಇಷ್ಟವೆ. ಅಣ್ಣನಿಗೂ ಹಾಗೆ. ಸಾವಿತ್ರೀ ಅಂತ ಬಾಯಿ ತುಂಬಾ ಕರೆಯುತ್ತಿದ್ದ. ಅತ್ತಿಗೆ ತುಂಬಾ ಚೆಂದ ಹಾಡುತ್ತಿದ್ದಳು. ಎಂತಾ ಕಿತ್ತು ತಿನ್ನುವ ಬಡತನದಲ್ಲೂ ಎದೆಗುಂದದೆ ದೊಡ್ಡ ಸಂಸಾರ ನಡೆಸಿದ ಅವಳೆಂದರೆ ಅಷ್ಟೊಂದು ಪ್ರೀತಿ ಅವನಿಗೂ- ಸುನಿತಕ್ಕ.

ನಾನು ಮತ್ತು ಮಾಧವಿ ಇಬ್ಬರೂ ಕಾಲೇಜಿನ ಕೆಲಸಕ್ಕೆ ಹೋಗುತ್ತಿರುವುದರಿಂದ ರಜೆ ಇದ್ದಾಗ ಹೆಚ್ಚು ಭೇಟಿ ಕೊಡುತ್ತಿದ್ದೆವು. ಯಮುನಾ ಇದ್ದಷ್ಟು ಹೊತ್ತು ಅವನಿಗೆ ಏನಾದರೂ ಬರೆಯಲು ಹೇಳುತ್ತಿದ್ದಳು. ಅಲ್ಲಿಯ ನರ್ಸರನ್ನು ಪಾರಿವಾಳಗಳಿಗೆ ಹೋಲಿಸಿ ಪದ್ಯ ಬರೆದಿದ್ದ. ಅದನ್ನ ನೋಡಿ ಅವರು ತುಂಬಾ ಖುಷಿಗೊಂಡಿದ್ದರು.

ಆತ ಕೊನೆಯಲ್ಲಿ ಬರೆದ ಕವಿತೆಯ ತುಣುಕುಗಳಿವು:
“ಕಟ್‌ಕಟ್ ಎಂಬ ಶಬ್ಧ ಕೇಳುತ್ತಲೇ ಇದೆ
ಹಗಲು ರಾತ್ರಿ ಎಂಬ ಭೇದವೇ ಇಲ್ಲ.
ಒಂದೊಂದು ಹೊಡೆತಕ್ಕ ಬಂಡೆ ಬದಲುಗೊಳ್ಳುತ್ತದೆ.
ಇದೇ ಸರಿಯಾದುದು ಇದರ ಹೊರತು
ಯಂತ್ರಗಾರಿಕೆ ಬೆಳೆಯಲಾರದು
ದೇಶದ ಉನ್ನತಿ ಆಗಲಾರದು” – ೧೫-೦೮-೨೦೦೭
ಎಂದು ಬರೆಯಲು ಹೋದ ಸಾಲುಗಳು ಅಲ್ಲಲ್ಲೇ ನಿಂತು ಬಿಡುತ್ತಿದ್ದವು. ಇಡೀ ದಿನ ಮಕ್ಕಳದೇ ನೆನಪು ಮಾಡುವುದು. ಮಾಧವಿಯ ಹತ್ತಿರ ಆಸ್ಪತ್ರೆ ಮಂಚದ ಮೇಲೆ ಕುಳಿತು ಅಲ್ಲಿ ಮಕ್ಕಳು ಓಡಾಡುತ್ತಾರೆ, ಅವರನ್ನು ಒಳಗೆ ಕರೆ, ಅವರಿಗೆ ತಿಂಡಿ ಕೊಡು, ಅವರನ್ನು ಮಾತನಾಡಿಸು… ಹೀಗೆ ಮಕ್ಕಳ ಕುರಿತೇ ಮಾತನಾಡುತ್ತಿದ್ದ.
“ಬನ್ನಿ ಮಕ್ಕಳೆ ಇದು ನಿಮ್ಮದೇ ಉದ್ಯಾನ
ನೂರಾರು ಬಣ್ಣ ಹೂವುಗಳ ಪಕಳೆ
ಹೇಗೆ ತೂಗುತ್ತವೆ ನೋಡಿ…”
ಹೀಗೆ ಮಕ್ಕಳ ಕುರಿತೇ ಒಂದು ಪದ್ಯ ಬರೆದು ದಿನಾಂಕ & ಮಣಿಪಾಲ ಆಸ್ಪತ್ರೆಯಿಂದ ಎಂದು ಬರೆಯುತ್ತಿದ್ದ.

ತುಳಿಯದಿರಿ, ಮಕ್ಕಳೇ ಚಿನ್ನ, ಜಡ, ಮೋಡ, ಮುಂತಾದ ಕವಿತೆಗಳನ್ನು ಆತ ಬರೆದಿಟ್ಟಿದ್ದ. ಕೊನೆಯ ದಿನಗಳಲ್ಲಿ ಆತ ಬರೆದ ಕವಿತೆ
“ನಾನು ಸಣ್ಣವನಿದ್ದಾಗ
ಕಣ್ ಕಂಗಲ ಹಿಡಿದು
ಸೂರ್ಯನ ನೋಡುತ್ತಿದ್ದೆ
ಆಡುತ್ತಿದ್ದೆ
ಈಗ
ನಾನು ಸೂರ್ಯನಿಲ್ಲದ ಲೋಕಕ್ಕೆ
ಹೊರಟಿದ್ದೇನೆ.”
ಓದಿ ಯಾರ ಕಣ್ಣನ್ನೂ ಆರ್ದ್ರಗೊಳಿಸುವಂತಿತ್ತು. ಕೊನೆಯ ದಿನಗಳಲ್ಲಿ ಬರೆದ ಕವಿತೆಗಳು ಅಸ್ಪಷ್ಟವಾಗಿದ್ದವು. ಅಕ್ಷರಗಳು ಅಸ್ತವ್ಯಸ್ತ ಇರುತ್ತಿತ್ತು. ಕೆಲವು ಸಾಲುಗಳು ಸಂಬಂಧ ಕಳೆದುಕೊಂಡಿದ್ದವು. ಆದರೂ ಆತ ಬರೆಯುವುದನ್ನು ಮಾತ್ರ ಬಿಡಲಿಲ್ಲ. ಕೊನೆಕೊನೆಗೆ ಕೈ ಎತ್ತಲು ಆಗದಿದ್ದರೂ ತಲೆಯ ಪಕ್ಕದಲ್ಲಿ ಪಟ್ಟಿ, ಪೆನ್ನು ಇದೆಯಾ ಎಂದು ನೋಡಿಕೊಳ್ಳುತ್ತಿದ್ದ.

ಅಣ್ಣ ಕೊನೆಯ ಒಂದು ವಾರ ಕೃತಕ ಉಸಿರಾಟದಲ್ಲಿಯೇ ಇದ್ದದ್ದು. ಐಸಿಯು ದಲ್ಲಿ ಮಲಗಿದ್ದ. ಮೂಗು, ಬಾಯಿ, ಎದೆ, ಕೈಬೆರಳು, ಕಾಲು ಬೆರಳು ಇವಕ್ಕೆಲ್ಲ ಏನೇನೋ ಯಂತ್ರವನ್ನು ಅಳವಡಿಸಿದ್ದರು. ಆತನನ್ನು ಉಳಿಸಿಕೊಳ್ಳಲು ಮಾಡಿದ ಎಲ್ಲಾ ಪ್ರಯತ್ನವೂ ವಿಫಲವಾಗುತ್ತಿತ್ತು. ಬೆಳಿಗ್ಗೆ ಅರ್ಧ ಗಂಟೆ ಮತ್ತು ಸಂಜೆ ಅರ್ಧ ಗಂಟೆ ಅಣ್ಣನನ್ನು ನೋಡಲು ಐಸಿಯು ಒಳಗೆ ಬಿಡುತ್ತಿದ್ದರು. ಬೆಳಿಗ್ಗೆ ೮ ರ ರಿಂದ ಸಂಜೆ ೬ ಗಂಟೆ ಆಗುವ ತನಕ ಹೊರಗೆ ಕಾದು ಕುಳಿತಿರುತ್ತಿದ್ದೆವು.

ಗಡಿಯಾರವು ತೀರಾ ಸಾವಕಾಶ ಓಡಿದಂತೆ ಅನಿಸುತ್ತಿತ್ತು. ಒಳಗೆ ಹೋದಾಗ ಮಾತ್ರ ೩೦ ನಿಮಿಷಗಳ ಕಾಲ ಗಡಿಯಾರ ವೇಗವಾಗಿ ಓಡುವ ನೋವು. ಅಣ್ಣನ ನೋಡುವ ತವಕ. ಆತ ಒಮ್ಮೆ ಕಣ್ಣು ಬಿಟ್ಟು ನೋಡಿದರೆ ಅಂದೇ ನಮಗೆ ಹಬ್ಬ. ನಾನು ಇನ್ನಕ್ಕ, ಮಾಧವಿ ಯಮುನಾ ಎಲ್ಲರೂ ಅಣ್ಣ ನನ್ನನ್ನು ನೋಡಿದ ನನ್ನನ್ನು ನೋಡಿದ ಎಂದು ಸಂಭ್ರಮ ಪಡುತ್ತಿದ್ದೆವು. ಅವನು ಅಸಹಾಯಕತೆಯಿಂದ ಕೈಕಾಲು ಸ್ವಲ್ಪ ಎತ್ತುವುದಕ್ಕೆ, ತುಟಿಯನ್ನು ಅಗಲಿಸುವುದಕ್ಕೆ, ಕಣ್ಣನ್ನು ತೆರೆಯುವುದಕ್ಕೆ ನಾವು ನಮ್ಮದೇ ಆದ ವಿಶೇಷ ಅರ್ಥ ಕಲ್ಪಿಸಿಕೊಂಡು ಮತ್ತೆ ಸಂಜೆ ವರೆಗೆ ಚರ್ಚಿಸುತ್ತಾ ಕೂತಿರುತ್ತಿದ್ದೆವು.

ಮೊದಲು ಅಣ್ಣನನ್ನು ನೋಡುವವರು ಯಾರು ಎಂದು ನಮ್ಮ ನಮ್ಮಲ್ಲೇ ಒಂದು ಸ್ಪರ್ಧೆ ಇರುತ್ತಿತ್ತು. ನಮ್ಮಂತೆ ಐಸಿಯುದ ಬಾಗಿಲಲ್ಲಿ ಇಂಥ ಹತ್ತಾರು ಕುಟುಂಬಗಳು ಕಾದು ಕುಳಿತಿರುತ್ತಿದ್ದವು. ಏನಾದರೂ ಸುಳ್ಳು ಹೇಳಿ ಒಳಗೆ ಹೋಗು ಪ್ರಯತ್ನ ನಡೆದೇ ಇರುತ್ತಿತ್ತು.

ಕೊನೆಗೂ ವೈದ್ಯರು ಮತ್ತು ನಮ್ಮ ನಡುವಿನ ಸಂಘರ್ಷದ ದಿನ ಹತ್ತಿರ ಬಂತು. ಅಣ್ಣನ ಕೈಕಾಲುಗಳು ಬಾತುಕೊಳ್ಳಲು (ಸ್ವೆಲ್ಲಿಂಗ್) ಪ್ರಾರಂಭಿಸಿತು. ಕೃತಕ ಉಸಿರಾಟಕ್ಕೂ ದೇಹ ಒಗ್ಗಿಕೊಳ್ಳಲು ನಿರಾಕರಿಸುತ್ತಿತ್ತು. ಕೃತಕ ಉಸಿರಾಟ ತಪ್ಪಿಸಿದರೆ ಅಣ್ಣ ನಮ್ಮನ್ನಗಲುತ್ತಾನೆ. ತಪ್ಪಿಸದಿದ್ದರೆ ದೇಹ ಮತ್ತಿಷ್ಟು ಹದಗೆಡುತ್ತಾ ಹೋಗುತ್ತದೆ. ಹಾಗಾಗಿ ವೈದ್ಯರು ನನ್ನನ್ನು ಕರೆದು ನಿಮ್ಮ ಆಯ್ಕೆ ಯಾವುದೆಂದು ಕೇಳುತ್ತಿದ್ದರು. “ಅವನನ್ನು ನೋಡಿಕೊಳ್ಳುತ್ತಿರುವ ವೈದ್ಯರು ನೀವು, ತೀರ್ಮಾನ ನೀವೇ ತೆಗೆದುಕೊಳ್ಳಬೇಕು” ಎನ್ನುತ್ತಿದ್ದೆ.

ಇದು ಒಂದರ್ಥದಲ್ಲಿ ಅಣ್ಣನ ಸಾವಿನ ದಿನವನ್ನು ನಿರ್ಧರಿಸುವವರು ಯಾರು ಎಂಬ ನಮ್ಮಿಬ್ಬರ ನಡುವಿನ ಒಂದು ಸಂಕಷ್ಟದ ವಾದ ವಿವಾದ. ನಾನು ಆ ದಿನವನ್ನು ಮುಂದೂಡತ್ತಲೇ ಇದ್ದೆ. ಆದರೆ ವೈದ್ಯರೇ ಸಲಹೆ ನೀಡುವ ಆ ದಿನ ಹತ್ತಿರ ಬಂತು. ೨೫ ನೇ ತಾರೀಖು ಅಣ್ಣನ ದೇಹ ಎಲ್ಲಾ ರೀತಿಯ ಚಿಕಿತ್ಸೆಗೂ ಕಿಂಚಿತ್ತೂ ಸ್ಪಂದಿಸದ ದಿನ ಅದು. ಬಹುಶಃ ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಆಸ್ಪತ್ರೆಯನ್ನು ಬಿಟ್ಟು ಮನೆಯ ಕಡೆಗೆ ಹೊರಟೆವು.

ಯಾವ ದೀಪಾವಳಿ ಅವನಿಗೆ ತೀರಾ ಇಷ್ಟದ ಬೆಳಕಿನ ದಿನವಾಗಿತ್ತೋ ಆ ದೀಪಾವಳಿಯ ಮುನ್ನಾದಿನವೇ ಆತನ ಜೀವದೀಪ ಆರಿಹೋಯಿತು. ಯಾವಾಗಲೂ ಅಣ್ಣ ಪ್ರೀತಿಯಿಂದ ದೀಪ ಹಚ್ಚುತ್ತಿದ್ದ. ಬಡತನದಲ್ಲಿ ಮೇಣದ ಬತ್ತಿ ತರಲಾಗದಿದ್ದರೂ ಸಂಬಂಧಿಕರ ಮನೆಯಿಂದಾದರೂ ತಂದು ಹಚ್ಚಿದ ಮೇಣದ ಬತ್ತಿ ಇಂದು ನಂದಿ ಹೋಯಿತು. ಸದಾ ಬೆಳಕಿನ ಬಗ್ಗೆ ಮಾತನಾಡುವ ಮನೆಯಲ್ಲಿ ಬೆಳಕು ಆರಿ ಕತ್ತಲಾವರಿಸಿತು. ಇಂದು ಇಂಥ ಸಾವಿರಾರು ಮೇಣದ ಬತ್ತಿಯನ್ನು ತಂದು ಹಚ್ಚುವ ಸ್ಥಿತಿ ಇದೆ. ಆದರೆ ಅಣ್ಣ ಇಲ್ಲ. ಅಣ್ಣನ ನೆನಪು ಮಾತ್ರ ಸಹಯಾನದ ರೂಪ ಪಡೆದಿದೆ.

ಕೆರೆಕೋಣದ ಮನೆಯಲ್ಲಿ ರಾತ್ರಿಯಿಡೀ ದೊಡ್ಡ ಮಂಜುಗಡ್ಡೆಯ ಮೇಲೆ ಮಲಗಿದ್ದು ನೋಡಿದರೆ ಹೊಟ್ಟೆಯಲ್ಲಿ ಚುರ್ ಅನ್ನಿಸುತ್ತಿತ್ತು. ರಾತ್ರಿಯಿಡಿ ಮಂಜುಗಡ್ಡೆಯ ಮೇಲೆ ಮಲಗಿದರೆ ಚಳಿಯಾಗದೆ? ಆತ ಯಾವಾಗಲೂ ಇಷ್ಟಪಡುವ ಕರಿಕಂಬಳಿಯನ್ನು (ಕಂಬಳಿಯನ್ನು ಆತ ಸಿದ್ದಾಪುರದಿಂದ ಭಾವನಿಗೆ ಹೇಳಿ ತರಿಸಿಕೊಳ್ಳುತ್ತಿದ್ದ.) ಹೊದೆಸಿ ಬಿಡೋಣವೇ ಅನ್ನಿಸುತ್ತಿತ್ತು.

ಅಂತ್ಯಕ್ರಿಯೆಯಲ್ಲಿ ಯಾವ ಧಾರ್ಮಿಕ ವಿಧಿ ವಿಧಾನವೂ ಇರಲಿಲ್ಲ. ಏಕೆಂದರೆ, ಅದು ಅವನ ಆಸೆಗೆ ವಿರುದ್ಧವಾದದ್ದು. ನಮಗೂ ಅದರಲ್ಲಿ ನಂಬಿಕೆ ಇರಲಿಲ್ಲ. ಅಣ್ಣನ ಆದರ್ಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಕೂಡ ನಾನೂ ಹೆಗಲು ಕೊಟ್ಟೆ. ಜೊತೆಗೆ ಹೆಗಲು ಕೊಟ್ಟವನು ಶ್ರೀಪಾದ. ಮತ್ತೆ ಯಾರು ಎಂದು ಸರಿಯಾಗಿ ನೆನಪಿಲ್ಲ. ಹಲವರು ಹೆಗಲು ಕೊಟ್ಟರು. ಅದು ಒಂದು ದೊಡ್ಡ ಮೆರವಣಿಗೆಯೆ. ನಾನು, ಇನ್ನಕ್ಕ, ಮಾಧವಿ, ಯಮುನಾ ಈ ನಾಲ್ವರು ಸೇರಿ ಅಗ್ನಿ ಸ್ಪರ್ಷ ಮಾಡಿದೆವು. ಸಂಘಟನೆಯವರೆಲ್ಲಾ ಒಂದಿಷ್ಟು ಘೋಷಣೆ ಕೂಗಿದರು.

ಅಕ್ಕ ನಮ್ಮನ್ನಗಲಿದಾಗ ಕೂಡ ಅದೇ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದು. ಹಿಂದೆ ಆಯಿಯನ್ನೂ(ಅಣ್ಣನ ತಾಯಿ) ಅದೇ ಜಾಗದಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದು. ಮೂವರೂ ಒಟ್ಟಿಗೆ ಇದ್ದಾರೆ. ಅಡಿಗೆ ಮಾಡಿಕೊಡಲು, ಖರ್ಚು-ವೆಚ್ಚ ತೂಗಿಸಲು ಅಕ್ಕ, ಕವಳ ಜಪ್ಪಿ ಹದ ಮಾಡಿಕೊಡಲು ಆಯಿ ಅಲ್ಲೇ ಇದ್ದಾರೆ. ಆದರೆ ಅಣ್ಣನ ಬಗಲ ಚೀಲದಲ್ಲಿರುವ ಕವಿತೆ ಕೇಳುವವರು ಯಾರು? ಬಹುಶಃ ಆಯಿ “ಹುಡ್ಗ ಸುಮ್ಮನೆ ಮಲಿಕಾ ನೋಡ್ವಾ” ಎಂದು ಹುಸಿಕೋಪ ತೋರುತ್ತಿರಬಹುದೆ? ಅಥವಾ ಅಕ್ಕ, ಆಯಿ ಇಬ್ಬರಿಗೂ ಅಣ್ಣ ಕವಿತೆ ಕೇಳುವ ರೂಢಿಯನ್ನು ಮಾಡಿಸಿರಬಹುದೆ? ಆತ ಬರೆದ ಕಾರ್ಡನ್ನು ಪೋಸ್ಟ ಮಾಡಲು ಅಲ್ಲಿ ನಾನಿಲ್ಲ. ಮತ್ಯಾರಿದ್ದಾರೆ?

ಅನಿವಾರ್ಯವಾಗಿ ಅತ ನನ್ನಲ್ಲಿಯೇ ಬರಬೇಕು. ‘ಮರಿ ಇದನ್ನು ಸರಿಯಾಗಿ ತೂಕ ಮಾಡಿ ಸ್ಟಾಂಪ್ ಅಂಟಿಸಿ ಹಾಕು. ಇಲ್ಲದಿದ್ದರೆ ಡ್ಯೂ ಆಗುತ್ತದೆ. ಪಾಪ, ಅವರಿಗೆ ಅನವಶ್ಯಕ ಖರ್ಚು’ ಎಂದು ನನ್ನಲ್ಲಿ ಹೇಳದೆ ಆತ ಮತ್ಯಾರಲ್ಲಿ ಹೇಳುತ್ತಾನೆ?

‍ಲೇಖಕರು

December 7, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸುಬ್ಬಣ್ಣ.

    ಬಹುಬೇಗ ಪುಸ್ತಕವಾಗಿ ಬರಲಿ ವಿಠ್ಠಲ್.

    ಪ್ರತಿಕ್ರಿಯೆ
  2. T S SHRAVANA KUMARI

    ಅಂತಃಕರಣದ ಬರಹ. ಕಣ್ಣುಗಳು ಹನಿಗೂಡಿದವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: