ಮೇಘನಾ ಸುಧೀಂದ್ರ ಅಂಕಣ: ಆಂಟಿ ಕನ್ನಡ್ ಅಲ್ಲ, ಕನ್ನಡಾ, ಕನ್ನಡಾ ಆ ಅಂತ ಎಳೀರಿ

4

ಹೀಗೆ ರೀಪರ್ಸ್ ಬಗ್ಗೆ ಯೋಚನೆ ಮಾಡಿಕೊಂಡೇ ಹುಡುಗಿ ಮನೆಗೆ ಬಂದಳು. ಅವಳ ರೂಮಿನ ಪಕ್ಕದವಳು ಕಝಾಕ್ ಹುಡುಗಿ. ಇಲ್ಲಿಗಿಂತ ದೊಡ್ಡ ಯುದ್ಧ ಭೀಕರತೆಯನ್ನ ದಾಟಿ ಬಂದವಳಿದ್ದಳು.
೧೯೯೧ರಿಂದ ಒಂದೇ ಸರ್ವಾಧಿಕಾರಿ ಅವಳ ದೇಶವನ್ನ ಆಳುತ್ತಿದ್ದರ ಪರಿಣಾಮ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಜಾಸ್ತಿಯಾಗಿದ್ದರಿಂದಲೇ ಅವಳು ಯಾವುದಾದರೂ ಭಾಷೆ ಕಲಿತು ಊರು ಬಿಟ್ಟು ಬೇರೆ ಕಡೆ ನೆಲೆಯೂರುವ ಸ್ಥಿತಿಗೆ ಬಂದಿದ್ದಳು. ಅವಳಿಗೆ ಈ ಗಲಾಟೆ, ಜಗಳ, ದ್ವೇಷ ಯಾವುದೂ ಹೊಸದಲ್ಲ.
ಅಪ್ಪಟ ಸಂಗೀತಗಾರ್ತಿಯ ಹೆಸರಿಟ್ಟುಕೊಂಡ ಗೌಹರ್ ತನ್ನ ಪಾಡಿಗೆ ಸಿಗರೇಟು ಹಚ್ಚಿಕೊಂಡು ಮುಖ್ಯರಸ್ತೆಯ ಗಲಾಟೆಯನ್ನ ವೀಕ್ಷಿಸುತ್ತಿದ್ದಳು. ಹುಡುಗಿಗೆ ತಿರುಗಿ, ಕಲ್ಲು ಹೊಡೆದಿಲ್ಲ, ಟಿಯರ್ ಗ್ಯಾಸ್ ಬಂದಿಲ್ಲ, ಬಂದೂಕಿನ ಸದ್ದಿಲ್ಲ, ಈ ಯೂರೋಪಿಯನ್ನರು ಗಲಾಟೆಯಲ್ಲೂ ಶಿಸ್ತು ಪಾಲಿಸುತ್ತಿದ್ದಾರಲ್ವಾ, ಸಿನೆಮಾ ಶೂಟಿಂಗ್ ಥರ ಇದೆ ಎಂದಳು.
ಹುಡುಗಿ ಮಾತ್ರ ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್ ಎಂದು ಚರಿತ್ರೆ ಪಾಠದಲ್ಲಿ ಮಾತ್ರ ಓದಿದ್ದವಳಿಗೆ ಇಲ್ಲಿ ಅನುಭವ ಆಗುತ್ತಿದ್ದನ್ನು ನೋಡಿ ವ್ಯಥೆ ಪಡುತ್ತಿದ್ದಳು.
ಮನೆಯಲ್ಲಿ ಅಡುಗೆ ಮಾಡಲು ಹೋದರೆ, ಅಲ್ಲಿ ಸಾಸಿವೆ, ಬೇಳೆ ಇರಲಿಲ್ಲ. ಸರಿ ತರೋಣಾ ಬಾ ಗೌಹರ್ ಎಂದು ಹೊರಟು ನಿಂತಳು. ಲೆಟ್ಸ್ ಗೋ ಚೈನೀಸ್ ಎಂದಳು. ಅವರದ್ದು ಸಾಸಿವೆಯೋ ಇಲ್ಲಾ ಪ್ಲಾಸ್ಟಿಕ್ಕೋ ಎಂದು ಗೊತ್ತಾಗುವುದಿಲ್ಲ, ಬೇಡ ನಮ್ಮ ಅಂಗಡಿಗೆ ನಡಿ ಎಂದು ರಂಬ್ಲಾಸ್ ಗೆ ಹೋಗಲು ಅಣಿಯಾದಳು.
ಪ್ಲಾಸಾ ಕತಲೂನ್ಯಾ ಗಲಾಟೆ ದಾಟಿ ನಡೆಯುವಷ್ಟರಲ್ಲಿ ಹುಡುಗಿಯ ಹೆಣ ಬಿದ್ದಿತ್ತು. ಅವಳ ಮುಖವನ್ನ ನೋಡಿದ ತಕ್ಷಣ ಪೊಲೀಸ್ ಹಿಂದೆ ಹಿಂದೆ ಓಡಾಡಿ ನಿಮ್ಮನ್ನೆಲ್ಲ ಬೇರೆ ಸರಿಯಾಗಿ ನೋಡಿಕೊಳ್ಳಬೇಕು, ಯಾಕೆ ಈ ಗಲಾಟೆಯಲ್ಲಿ ಓಡಾಡುತ್ತೀರ ಎಂದು ಬೆಂಗಳೂರಿನ ಟ್ರಾಫಿಕ್ ಪೊಲೀಸಿನವರ ಹಾಗೆ ಲೆಕ್ಚರ್ ಕೊಟ್ಟರು.
ಹಾಗಾಗಿಯೂ ಹುಡುಗಿ ಪಂಜಾಬಿ ಆಂಟಿ ಅಂಗಡಿಗೆ ಬಂದರೆ, ಆಂಟಿ ಬೇಜಾರು ಮಾಡಿಕೊಂಡು ಕೂತಿದ್ದರು. ಏನ್ ಆಂಟಿ ಶಾರುಖ್ ಪಿಚ್ಚರ್ ಬರೋದು ಲೇಟ್ ಆಯ್ತಾ ಎಂದಾಗ ನಹೀ ಬೇಟಿ, ಈ ಗಲಾಟೆಯಿಂದ ನಮ್ಮ ವ್ಯಾಪಾರ ಹಾಳಾಗಿ ಹೋಗಿದೆ, ರಸ್ತೆ ಮಧ್ಯ ನಿಂತು ಗಲಾಟೆ ಮಾಡುತ್ತಾರೆ, ಯಾರಿಗೂ ಬರೋದಕ್ಕೆ ಬಿಡಲ್ಲ, ಅರ್ಧರ್ಧ ಘಂಟೆಗೂ ಕತಲಾನ್ ಧ್ವಜ, ಸ್ಪ್ಯಾನಿಷ್ ಧ್ವಜ ಅದಲು ಬದಲು ಮಾಡಿ ಹಾಕೋದೆ ಆಯ್ತು.
ದೇಶ ಬಿಡೋಣ ಅಂದ್ರೆ, ನನ್ನ ಮಕ್ಕಳಿಗೆ ಕತಲಾನ್ ಬಿಟ್ಟು ಏನೂ ಬರಲ್ಲ, ಎಲ್ಲಿ ಉದ್ಧಾರ ಆಗ್ತವೆ ಹೇಳು, ಒಂದೇ ಭಾಷೆಲಿ ಕಲಿತರೆ ಅಲ್ಲೇ ಕೊಳೀತೀವಿ ಅನ್ನೋ ಕಾಮನ್ ಸೆನ್ಸೂ ಇಲ್ಲ ಇವರಿಗೆ, ನೀನೆ ಹೇಳು ನೀನು ಬರೀ ಕನ್ನಡ್ ಕಲಿತಿದ್ರೆ ಇಷ್ಟು ದೂರ ಬರ್ತಿದ್ಯಾ? ಎಂದು ಒಂದೇ ಉಸಿರಲ್ಲಿ ಹೇಳುವಾಗ, ಹುಡುಗಿ ಮಾತ್ರ ಆಂಟಿ ಕನ್ನಡ್ ಅಲ್ಲ, ಕನ್ನಡಾ, ಕನ್ನಡಾ ಆ ಅಂತ ಎಳೀರಿ ಎಂದಾಗ ಆಂಟಿ ಮಾತ್ರ ಯಾವ್ಯಾವ ಸಾಮಾನು ಎಂದು ಹುಡುಗಿಯ ಕನ್ನಡ ಭಾಷಣವನ್ನು ಕೇಳದೇ ಲೆಕ್ಕ ಮಾಡಲು ಹೊರಟರು.
ಸಾಸಿವೆ, ಬೇಳೆ ತೆಗೆದುಕೊಂಡು ಇನ್ನೇನು ಇದೆ ನೋಡಲು ಹೋದರೆ ಗೌಹರ್ ಮಾರ್ಕೆಟಿನಲ್ಲಿ ಕುದುರೆ ಮಾಂಸ ತರಲು ಹೋಗುತ್ತೇನೆ  ಎಂದು ಮೆಸೇಜ್ ಕಳಿಸಿದ್ದಳು. ಮರ್ಕಾದೋ ಲ ಬೊಕಾರಿಯಾ ೧೨೧೭ರಲ್ಲಿ ಶುರುವಾದ ಮಾರುಕಟ್ಟೆ. ಬಾರ್ಸಿಲೋನಾಗೆ ಎಲ್ಲಾ ಮಾಲುಗಳು ಮೊದಲು ಬರೋದು ಅಲ್ಲೇ.
ಕಝಾಕಿನಲ್ಲಿ ಕುದುರೆ ಮಾಂಸ ಬಹಳ ಫೇಮಸ್ ಆದ್ದರಿಂದ ಗೌಹಾರಿಗೆ ಅದರ ವಾಸನೆ ಹತ್ತಿತ್ತು. ಸರಿ ಕಾಯೋಣ ಎಂದು ಅಲ್ಲೇ ಅಂಗಡಿಯ ಆಚೆ ನಿಂತರೆ ಯಾವುದೋ ಬಿಳಿ ಹುಡುಗರು ಹುಡುಗಿಯನ್ನ ಪಾಕಿ ಎಂದು ಕರೆದು ಹೋದರು. ಇವಳಿಗೆ ನಖಶಿಖಾಂತ ಕೋಪ ಬಂದು, ಅವರ ಹಿಂದೆ ಹೋಗಿ, soy un indio ಎಂದು ಮುಖ ಕೆಂಪಗೆ ಮಾಡಿಕೊಂಡು ಹೇಳಿದಳು. lo siento ಎಂದು ಹುಡುಗರು ಹೇಳಿ ಹೊರಟುಹೋದರು.
ಇದನ್ನೇ ಗಮನಿಸುತ್ತಿದ್ದ ಇಬ್ಬರು ಹುಡುಗರು ಹುಡುಗಿಯನ್ನು ಗುರಾಯಿಸುತ್ತಿದ್ದರು. ಥತ್ ಪಕ್ಕದಲ್ಲೇ ಬರಿ ಪಾಕಿ ಜನರಿದ್ದಾರೆ, ಮೋಸ್ಟ್ಲಿ ಅವರೇ ಇರಬೇಕು, ಅಯ್ಯೋ ಈ ಇಂಟರ್ನೆಟ್ಟಿನ ಹೇಟ್ ನೋಡಿ ನೋಡಿ ಹಾಳಾದೆ, ಸುಮ್ನೆ ಇರ್ಬಾರ್ದಿತ್ತಾ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿರುವಾಗಲೇ, ಆ ಹುಡುಗರು ಅವಳ ಹತ್ತಿರ ಬರುವುದನ್ನ ಕಂಡಳು.
ಹಿಂದಿಯಲ್ಲಿ ಅಯ್ಯೋ ನಿಮ್ಮ ಮೇಲೆ ಏನು ನನಗೆ ದ್ವೇಷ ಇಲ್ಲ, ಅದು ಅದು ಅದು… ಎನ್ನುತ್ತಿರುವಾಗಲೇ ವೀ ಆರ್ ಬಾಂಗ್ಲಾ ಎಂದು ಅವರು ನಕ್ಕರು. ಓಹ್ ಇಂಡಿಯಾ, ಪಾಕಿಸ್ತಾನ ಮತ್ತು ಬಾಂಗ್ಲಾ ಜನರ ನಡುವೆ ಅಷ್ಟೇನೂ ವ್ಯತ್ಯಾಸ ಇಲ್ಲ, ನನಗೆ ಗೊತ್ತಾಗಲ್ಲ, ಇನ್ನು ಅವರು ನನ್ನನ್ನ ಪಾಕಿ ಎಂದ್ದದ್ದು ತಪ್ಪೇನಿಲ್ಲ, ಬಿಡು ಎಂದು ಮನಸ್ಸಿನಲ್ಲೇ ಅಂದುಕೊಂಡು ಅವರನ್ನ ನೋಡಿ ನಕ್ಕಳು ಹುಡುಗಿ.
ಉಭಯ ಕುಶಲೋಪರಿಯಾದ ಮೇಲೆ, ಪ್ಲಾಸಾ ಕತಲೂನ್ಯದಲ್ಲಿ ದೊಡ್ಡ ಮಾನವ ಸರಪಳಿ ನಿರ್ಮಾಣವಾದುದ್ದರಿಂದ ಹುಡುಗಿ ಮತ್ತು ಹುಡುಗರು ಅಲ್ಲೇ ನಿಂತಿದ್ದರು. ಏನು ಕಥೆ ಇವರದ್ದು, ಹೀಗೆ ಆದ್ರೆ ನಮ್ಮ ಕೋರ್ಸಿನ ಫೀಸೆಲ್ಲಾ ಹೋಯ್ತಾ ಅಂತ ಪ್ರಶ್ನೆ ಮಾಡಿದರು.
ನಂದೇನು ಪ್ರಾಬ್ಲಮ್ ಇಲ್ಲ, ನಂಗೆಲ್ಲಾ ಫುಲ್ ಸ್ಕಾಲರ್ ಶಿಪ್ಪು, ಜೊತೆಗೆ ಇಂಟರ್ನ್ಶಿಪ್, ಸೋ ಅವರೇ ನನಗೆ ದುಡ್ಡು ಕೊಟ್ಟು ಓದಿಸುತ್ತಿದ್ದಾರೆ ಎಂದು ನಗುತ್ತಾ ಹೇಳಿದ್ದಳು ಹುಡುಗಿ. ಆಗ ಡಮ್ ಎಂದು ಶಬ್ದ ಬಂದಿತ್ತು. ಬಾರ್ಸಿಲೋನದಲ್ಲಿ ಮೊದಲ ಗುಂಡು ಬಿದ್ದಿತ್ತು. ಮಾನವ ಸರಪಳಿಯನ್ನ ಚೆಲ್ಲಾಪಿಲ್ಲಿ ಮಾಡಲು ಒಂದು ಗುಂಡು ಹಾರಿಸಿದ್ದರು.
ಟಿಯರ್ ಗ್ಯಾಸ್ ಬಂತು, ಇವತ್ತು ಕಥೆ ಮುಗೀತು ನಮ್ಮದು, ಪಾರ್ಥೀವ ಶರೀರ ಹೋಗುತ್ತೆ ನಮ್ಮ ನಮ್ಮ ದೇಶಕ್ಕೆ ಎಂದು ಎಲ್ಲಿ ಜಾಗ ಸಿಕ್ಕಿತ್ತೋ ಅಲ್ಲಿ ಓಡಲು ಯತ್ನಿಸಿದರು. ಬಾಂಗ್ಲಾದ ಹುಡುಗರು ಹುಡುಗಿಯ ಕೈ ಹಿಡಿದು ಎಳೆದುಕೊಂಡೇ ಹೋದರು. ಥೇಟ್ ರೋಜಾ ಸಿನೆಮಾ ಸೀನ್ ಇದ್ದಂಗಿದೆಯಲ್ಲ ಎಂದು ಅಂದುಕೊಂಡು ಇಂತಹ ದುರಂತದ ಸಮಯದಲ್ಲೂ ಅವಳ ರೊಮ್ಯಾಂಟಿಸಿಸಮ್ ನೆನೆದು ನಕ್ಕಳು. ಹಾಗೋ ಹೀಗೋ ಎಲ್ಲೆಲ್ಲೋ ಓಡಿ ಪೌ ಕ್ಲಾರಿಸ್ ಬಳಿ ಬಂದು ನಿಂತರು.

ಮಹಾತ್ಮ ಗಾಂಧಿಯ ಹೆಸರನ್ನು ಭಾರತದಲ್ಲಿ ಇಟ್ಟ ಹಾಗೆ ಪೌ ಕ್ಲಾರೀಸಿನ ಹೆಸರನ್ನೂ ಬಾರ್ಸಿಲೋನಾದಲ್ಲಿ ಎಲ್ಲಾ ಕಡೆ ಇಟ್ಟಿದ್ದರು. ಇವನು ಸಂತನೋ ಇಲ್ಲ ಮಹಾತ್ಮನೋ ಅಥವಾ ದೇಶದ್ರೋಹಿಯೋ ಎಂಬ ಯೋಚನೆಯಲ್ಲಿ ಅವನ ಪ್ರತಿಮೆಯನ್ನೇ ನೋಡುತ್ತಲಿದ್ದಳು ಹುಡುಗಿ. ಬಾಂಗ್ಲಾದ ಹುಡುಗ ಓರ್ಕೋ ಓಹ್ ರೀಪರ್ಸಿನ ಹೀರೋ ಮುಂದೆ ನಿಂತಿದ್ದೇವೆ ಎಂದ. ಹುಡುಗಿ, ನಿಂಗಿವೆಲ್ಲಾ ಹೇಗೆ ಗೊತ್ತೋ, ಏನು ಹೇಳು ನೋಡೋಣ… ಎಂದು ಟೈಮ್ ಪಾಸಿಗೆ ಕೇಳಿದಳು.
೧೬೪೦ ರಿಂದ ೧೬೫೯ ರಲ್ಲಿ ಕತಲಾನ್ ದಂಗೆಯಾಗಿತ್ತು. ಇದು ಸ್ಪೇನ್ ಮತ್ತು ಫ್ರಾನ್ಸಿನ ನಡುವೆ ಯುದ್ಧವಾದಾಗಿನಿಂದ ಶುರುವಾಯ್ತು. ಕಸ್ತಿಲಾನಿನ ಜನರ ದಬ್ಬಾಳಿಕೆ ಜಾಸ್ತಿಯಾಗಿ, ಆಡಳಿತದಲ್ಲೆಲ್ಲಾ ಬರೀ ಅವರೇ ತುಂಬಿಕೊಂಡು ಕತಲಾನಿನ ಜನರನ್ನ ಬರೀ ಆಳುಗಳನ್ನಾಗಿ ನಡೆಸಿಕೊಳ್ಳುತ್ತಿದ್ದರ ಪರಿಣಾಮ ಇಲ್ಲಿ ಆ ಜನ ಮತ್ತು ಈ ಜನ ಎಂದು ವಿಂಗಡಣೆಯಾಗಿ ದೊಡ್ಡ ಕಂದಕವೇ ಏರ್ಪಾಡಾಯಿತು.
ಆಡಳಿತದಲ್ಲಿದ್ದವರು ದೊಡ್ಡವರು ಎಂದು ಘೋಷಿಸಿಕೊಂಡಿದ್ದರು. ಆದರೆ ಸಮಸ್ಯೆಯಾಗಿದ್ದು ಅಥವಾ ಯುದ್ಧವಾಗಿದ್ದು ಅದಕ್ಕಲ್ಲ. ಪೌ ಕ್ಲಾರಿಸ್ ಎಂಬ ಕತಲಾನಿನ ಸಂತ ಕತಲಾನೇತರ ಸಂತರ ವಿರುದ್ಧವಾಗಿದ್ದ. ಸ್ಪೇನಿನ ಸಂತರು ಸ್ಪೇನಿನ ಸಿಂಹಾಸನಕ್ಕೆ ಹತ್ತಿರವಾಗಿ ಇಲ್ಲಿನ ಜನರನ್ನ ಶೋಷಣೆ ಮಾಡುತ್ತಿದ್ದರು. ತಮ್ಮ ದೇವರನ್ನೂ ಭಾಷೆ ಮತ್ತು ಸಂಸ್ಕೃತಿಯ ಕಾರಣಕ್ಕೆ ಭಿನ್ನ ಮಾಡಿಕೊಂಡಿದ್ದರು. ಈ ಸಂತರ ಜಗಳವನ್ನ ರೀಪರ್ಸ್ ಯುದ್ಧ ಎಂದು ಕರೆಯುತ್ತಾರೆ. ರೀಪರ್ಸ್ ಎಂದರೆ ದೇವದೂತರು ಎಂದರ್ಥ ಎಂದು ಅರಗಿಣಿಯಂತೆ ಓರ್ಕೋ ಹೇಳಿದ.
ಮತ್ತೆ ಸಾವರಿಸಿಕೊಂಡು, ಸ್ಪೇನಿನ ಗದ್ದುಗೆ ಕತಲಾನಿನ ಚರ್ಚುಗಳಿಗೆಲ್ಲಾ ರಾಯಲ್ ಟ್ಯಾಕ್ಸ್ ಹಾಕಿ ಚರ್ಚಿನ ಹಣವನ್ನು ಖಾಲಿ ಮಾಡಿ, ಅದನ್ನೆಲ್ಲಾ ಸ್ಪೇನಿನ ಚರ್ಚುಗಳಿಗೆ ತುಂಬಿಸುತ್ತಿದ್ದವು. ಇದಕ್ಕೆ ಆಳುಗಳು ಗಲಾಟೆ ಮಾಡಿ ರಸ್ತೆಗೆ ಬಂದರು. ಈ ಗದ್ದುಗೆ, ಚರ್ಚು ಆಳುವ ಮಂದಿಯ ಒಂದೊಂದು ಪೈಸೆ ದುಡ್ಡೂ ಹೊಲದಲ್ಲಿ ಹಗಲು ರಾತ್ರಿ ಎನ್ನದೇ ದುಡಿಯುವ ಕೈಗಳಿಂದಲೇ ಬರೋದು ಎಂದು ಅವರು ಅರಿತು ಆಕ್ರೋಶದಿಂದಲೇ ಕುಡುಗೋಲು ಹಿಡಿದು ಗದ್ದುಗೆಯ ವಿರುದ್ಧ ಹೋರಾಟಕ್ಕೆ ಇಳಿದಿದ್ದರು.
ಆಗ ಸ್ಪೇನಿನ ಸೈನಿಕರು ಇವರನ್ನ ಮಟ್ಟ ಹಾಕಲು ಯುದ್ಧ ಮಾಡೋದನ್ನ ಬಿಟ್ಟು ಅವರ ಬೆಳೆಗೆ ಬೆಂಕಿ ಇಟ್ಟು, ಚರ್ಚುಗಳನ್ನ ಸುಟ್ಟು, ಅವರ ಹೆಣ್ಣುಮಕ್ಕಳ್ಳನ್ನ ರಸ್ತೆಯಲ್ಲಿಯೇ ಮಾನಭಂಗ ಮಾಡಿದ್ದರು, ಕಂಡಲ್ಲಿ ಗುಂಡು, ಸಾಯಿಸುವ ಎಲ್ಲಾ ಹಿಂಸೆಗಳನ್ನೂ  ಮಾಡಿದ್ದರು. ೧೬೪೦ ಮೇ ನಲ್ಲಿ ಕಾರ್ಪಸ್ ಕ್ರಿಸ್ಟಿ ದಿವಸದಂದು ಇಡೀ ಕತಲಾನ್ ಜನತೆ ಬ್ಲಡಿ ಕಾರ್ಪಸ್ ಎಂದು ಕ್ರಿಸ್ತನ ಕ್ರಾಸಿಗೆ ಕಪ್ಪು ಬಟ್ಟೆ ಹೊದಿಸಿ ತಮ್ಮ ಮುಷ್ಕರವನ್ನ ಇನ್ನಷ್ಟು ಬಲಪಡಿಸಿದ್ದರು.
ಅವತ್ತು ಎರಡು ಕಡೆಯಿಂದಲೂ ರಕ್ತ ಹರಿಯುತ್ತಿತ್ತು. ಆ ಆವೇಶದಲ್ಲಿ ಸಂತ ಕಲೋಮಾ ಎಂಬ ಸ್ಪಾನಿಷ್ ಮನುಷ್ಯ, ಕತಲಾನಿನ ವೈಸ್ ರಾಯನ್ನನ್ನ ಕೊಲ್ಲಲಾಯಿತು. ಅಲ್ಲಿಗೆ ಇನ್ನೂ ಯುದ್ಧ ಭೀಕರವಾಯಿತು.
ಪೌ ಕ್ಲಾರಿಸ್ ಆದಷ್ಟು ಸಂವಿಧಾನಾತ್ಮಕವಾಗಿಯೇ ಒಂದು ನಿರ್ಣಯಕ್ಕೆ ಬರೋಣ ಎಂದುಕೊಂಡರೂ ಎರಡೂ ಕಡೆಯವರು ಬುಸುಗುಟ್ಟುವ ನಾಗರಹಾವಿನ ಹಾಗಾಗಿದ್ದರು. ಕಡೆಗೆ ಫ್ರಾನ್ಸಿನ ಸಹಾಯ ತೆಗೆದುಕೊಂಡು ಪೌ ಕ್ಲಾರಿಸ್ ಸ್ವಲ್ಪ ಭಾಗವನ್ನ ಕತಲಾನಿನವರದ್ದೇ ಎಂದು ಉಳಿಸಿಕೊಂಡು. ಜನವರಿ ೨೬ ೧೬೪೧ ರಂದು ಕತಲಾನಿಗೆ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿತು. ಆದರೆ ಯುದ್ಧ ಮುಂದುವರಿಯುತ್ತಲೇ ಇತ್ತು.
ಹೀಗೆ ೧೯ ವರ್ಷ ಯುದ್ಧ ಮಾಡಿದರೂ ಸಹ ಕಡೆಗೆ ಚಿಲಿ ದೇಶ ಬಂದು ಮಧ್ಯಸ್ತಿಕೆ ವಹಿಸಿ ಸ್ಪೇನ್ ಮತ್ತು ಫ್ರಾನ್ಸಿನ ಮಧ್ಯ ಒಂದು ಶಾಂತಿ  ಒಪ್ಪಂದ ಏರ್ಪಡಿಸಿತ್ತು. ಆದರೆ ಕತಲನ್ನರಿಗೆ ಏನೂ ಸಿಗಲ್ಲಿಲ್ಲ, ಬಾರ್ಸಿಲೋನಾ ಪ್ರಾಂತ್ಯವನ್ನೇ ಅರ್ಧರ್ಧ ಹಂಚಿ ಇಬ್ಬರೂ ತಿಂದುಕೊಂಡರು, ಮತ್ತೆ ಇಬ್ಬರು ಪರ್ಕೀಯರ ಆಳ್ವಿಕೆಗೆ ಕತಲೂನ್ಯ ಒಳಪಟ್ಟಿತು.
ಆದರೆ, ಈ ಯುದ್ಧದಿಂದ ‘ಕತಲೂನ್ಯ ತ್ರಿಯಾಂಫೆಂಟ್, ತೊರನಾರ ಆ ಸೆರ್ ರಿಕಾ’ ಎಂಬ ಮಹಾಕಾವ್ಯ ರಚನೆಯಾಯಿತು ಗೊತ್ತಾ ಎಂದು ಹೇಳುತ್ತಿರುವಾಗಲೇ ಅದೇ ಗೀತೆ ಅಲ್ಲಿನ ಜನರು ಹಾಡಲು ಶುರು ಮಾಡಿದ್ದರು. ಹುಡುಗಿಗೆ ಅದು ಅಡಿಗರ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಎಂಬ ಕಾವ್ಯವೇ ನೆನಪಾಯಿತು.
ಅಲ್ಲಿನ ಟಿಯರ್ ಗ್ಯಾಸಿಗೆ ಕಣ್ಣೀರು ಬಂತೋ ಇಲ್ಲಾ ಆ ಕಥೆ ಕೇಳಿ ಕಣ್ಣೀರು ಬಂತೋ ಗೊತ್ತಿಲ್ಲ… ಹಂಗಾಗಿಯೂ ಮುಂದ ಎಂದು ಅವನ್ನನ್ನ ಕೇಳಿದಳು.. ಓರ್ಕೋ ನಕ್ಕು, ಇವಿಷ್ಟೇ ನನಗೆ ಕಾಫಿ ಶಾಪಿನ ಸುಂದರಿ ಜೆನ್ನಿ ಹೇಳಿದ್ದು, ಅವಳಿಗೋಸ್ಕರ ಇವೆಲ್ಲ ಕೇಳಿದೆ ಎಂದಾಗ ಓಹ್ ಎಂದು ಉದ್ಗಾರ ಮಾಡಿ ಎಲೆನಾಳ ನಂಬರ್ ಡಯಲ್ ಮಾಡಿದಳು.. ಅವಳಿಗೆ ಮುಂದಿನ ಕಥೆ ಬೇಕಿತ್ತು…
ಎಲೆನಾ ಸಿಕ್ಕಳಾ ಅಥವಾ ಆ ಗುಂಪಿನಲ್ಲಿ ಇದ್ದಳಾ ಓದಿ ಮುಂದಿನ ವಾರ…

‍ಲೇಖಕರು

December 7, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: