ನೆನಪು ಕಡಲಾದಾಗ..

ದೀಪಕ್ ಉಚ್ಚಿಲ್

ಗಾಢವಾದ ಸಿಹಿನಿದ್ರೆಯಿಂದ ಯಾರೋ ತಟ್ಟಿ ಎಬ್ಬಿಸಿದಂತಾಯಿತು. ಕಣ್ಣು ತೆರೆದು ನೋಡಿದರೆ ಅಮ್ಮ ..! ‘ಏಳೋ ದೋಣಿಗಳು ಬರ್ತಾ ಇದೆ. ಕಡಪ್ಪರಕ್ಕೆ ಹೋಗೋ..’ ಎಂದು ಸಣ್ಣದಾಗಿ ಗದರಿದಾಗ ತಟ್ಟನೆ ಕುಳಿತ. ನಿನ್ನೆ ರಾತ್ರಿ ಸಣ್ಣದಾಗಿ ಸಿಲೋನ್ ಸ್ಟೇಷನ್ ನಲ್ಲಿ ಹಿಂದಿ ಹಾಡು ಕೇಳುತ್ತಾ ನಿದ್ರೆಗೆ ಜಾರಿ ಆಫ್ ಮಾಡಲು ಮರೆತ ರೇಡಿಯೋದಲ್ಲಿ ಆಗಲೇ ಬೆಳಗಿನ ಆಲಾಪನೆ ತೊಡಗಿತ್ತು..! ಚಾಪೆ ಮಡಚಿಟ್ಟು ಹೊರಬಂದ.

ಅಂಗಳದಲ್ಲೇ ಕೈಗೆಟಕುತ್ತಿದ್ದ ಮಾವಿನ ಮರದ ಗೆಲ್ಲಿಂದ ಎಲೆಯೊಂದನ್ನು ಕಿತ್ತು ಹಲ್ಲುಜ್ಜಿ ,ಮುಖತೊಳೆವ ಶಾಸ್ತ್ರ ಮಾಡಿ ಬಂದ. ಕಪಾಟಿನಿಂದ ಲೆಕ್ಕಪುಸ್ತಕದ ಚೀಲವನ್ನು ತೆಗೆದುಕೊಂಡು ಅಂಗಳಕ್ಕಿಳಿದಂತೆಯೇ ಹಿಂದಿನಿಂದ ಅಮ್ಮನ ದನಿ ಕೇಳಿಸಿತು. ‘ಸ್ವಲ್ಪ ತಡಿಯೋ.. ಚಾ ಕುಡಿದು ಹೋಗು..’ ‘ಇಲ್ಲಮ್ಮ..ದೋಣಿ ಕರೆ ಸೇರಿದ ಮೇಲೆ ಹೇಗೂ ಅವರೊಂದಿಗೆ ಜಯಣ್ಣನ ಹೋಟೇಲಲ್ಲಿ ಗೋಳಿಬಜೆ, ಚಾ ಉಂಟಲ್ಲಾ.. ?’
ಎನ್ನುತ್ತಾ ಓಡುತ್ತಲೇ ಕಡಲಕರೆಗೆ ಬಂದ.

ಸಮುದ್ರದ ಕಡಗೆ ದೃಷ್ಟಿ ಹಾಯಿಸಿದಾಗ ದೋಣಿಗಳು ಇನ್ನೂ ಕರೆಯಾಗುವ ಲಕ್ಷಣಗಳಿರಲಿಲ್ಲ.. ! ಈ ಅಮ್ಮ ಯಾವಾಗಲು ಹೀಗೆ.. !
ಅವಸರ ಮಾಡಿ ಎಬ್ಬಿಸುವುದು.. ಎಂದು ಮನಸ್ಸಿನಲ್ಲಿ ಹೇಳಿಕೊಂಡರೂ ಒಮ್ಮೆ ಬೆಳ್ಳಂಬೆಳಗ್ಗೆ ಕಡಲತೀರಕ್ಕೆ ಬಂದರೆ ಅದೊಂದು ಅದ್ಭುತ ಅನುಭವ..! ತಣ್ಣನೆಯ ಕರೆಯ ಮರಳಲ್ಲಿ ಕಾಲೂರಿ ನಿಂತು ನೀಲಾಬ್ಧಿಯನ್ನು ನಿಟ್ಟಿಸಿದರೆ, ವಿಶಾಲ ನೆಲ, ನದಿ, ಬೆಟ್ಟ ಘಟ್ಟ, ಪರ್ವತಗಳನ್ನೇ ತನ್ನ ಬೆನ್ನ ಹಿಂದಿರಿಸಿಕೊಂಡು ಸಮುದ್ರವನ್ನು ದಿಟ್ಟಿಸುವ ಪರುಶುರಾಮನ ಭಾವ ಮನಸ್ಸಿನೊಳಗೆ..! ಎದೆಯುಬ್ಬಿಸಿ‍ ನೀಳವಾದ ಉಸಿರನ್ನಳೆಯುತ್ತಾ ನಡೆಯತೊಡಗಿದ.

ದೋಣಿಗಳು ಕರೆಯಾಗುವ ಸ್ಥಳ ದೂರದಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಲೆಗಳು ಮರಳನ್ನು ಸಮತಟ್ಟಾಗಿಸಿ ಇವನಿಗಾಗಿಯೇ ಹಾಸಿದ ರತ್ನಗಂಬಳಿಯೋ.. ಎಂಬಂತೆ ಅದರ ಮೇಲೆ ಉತ್ಸಾಹದಿಂದ ಪಾದಗಳನ್ನೂರಿ ನಡೆಯುತ್ತಿದ್ದ..! ಸ್ವಲ್ಪ ದೂರ ಸಾಗಿ ಹಾಗೆಯೇ ಒಮ್ಮೆ ಹಿಂತಿರುಗಿ ನೋಡಿದ. ಹಾಲಿಗಿಂತಲೂ ಬಿಳುಪಾದ ಶುಭ್ರ ಅಲೆಗಳು ಇವನ ಅಡ್ಡಾದಿಡ್ಡಿ ಹೆಜ್ಜೆಗುರುತುಗಳನ್ನು ಮಾಯಿಸಿ ಮೊದಲಿನಂತೆ ಸಮತಟ್ಟಾಗಿಸುವ ನಿರ್ಲಿಪ್ತ ಕಾರ್ಯದಲ್ಲಿ ತೊಡಗಿದ್ದವು.

ಶತಮಾನಗಳಿಂದ ತನ್ನ ಹಿರಿಯ ತಾತಂದಿರ, ಮುತ್ತಾತಂದಿರ, ಕಳೆದ ಎಷ್ಟೋ ತಲೆಮಾರುಗಳ ಸರಿತಪ್ಪು, ಹೆಜ್ಜೆಗುರುತುಗಳನ್ನು ಮಾಯಿಸುತ್ತಾ ಮುಂದಿನ ಪೀಳಿಗೆಗೆ ಪ್ರತಿದಿನವೂ ಒಂದು ಸುಂದರ ಕರಾವಳಿಯನ್ನು ಅಣಿಗೊಳಿಸುತ್ತಾ ಬರುತ್ತಿದೆ.. ಈ ಪ್ರಕೃತಿ..! ನಾವಾದರೋ ತಲೆಮಾರುಗಳ ಹಿಂದಿನ ದ್ವೇಷ, ಅಹಂಗಳನ್ನು ಇನ್ನೂ ಹೊತ್ತುಕೊಂಡೇ ಬದುಕುತ್ತೇವೆ.. ಅಲ್ಲದೆ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಅಪರಾಧವನ್ನೂ ಮಾಡುತ್ತಿದ್ದೇವೆ..!

ಪ್ರಕೃತಿಯಿಂದ ಮಾನವ ಕಲಿಯಬೇಕಾದುದು ಅದೆಷ್ಟಿದೆಯೋ.. ಅಲೆಗಳೊಂದಿಗೆ ಮರಳ ಮೇಲೆ ಬರುವ ನರುವಂಟೆ, ಆಕರ್ಷಕ ಚಿಪ್ಪು, ಶಂಖಗಳನ್ನು ಹೆಕ್ಕುತ್ತಾ ಮತ್ತೆ ಅವುಗಳನ್ನು ನೀರಿಗೆಸೆಯುತ್ತಾ ಸಾಗುತ್ತ ಇದ್ದಂತೆ ಯಾರೋ ಕರೆಯಲ್ಲಿ ಬಹಿರ್ದೆಸೆಗೆ ಕುಳಿತಂತೆ ಕಂಡು ಅಲ್ಲಿಂದ ಸ್ವಲ್ಪ ಮೇಲೇರಿ ಮರಳಿನ ಇಡುವರೆಯ ಮೇಲೆ ಹತ್ತಿ ನಡೆಯತೊಡಗಿದ.. ಅಡುಂಬುಬಳ್ಳಿಯ ಎಲೆ ಹಾಗೂ ಹೂಗಳ ಮೇಲೆ ಹನಿಗಟ್ಟಿದ್ದ ಮಂಜಿನ ಹನಿಗಳು ಕಾಲಿಗೆ ತಣ್ಣಗೆ ಸ್ಪರ್ಶಿಸುವಾಗ ಮನಸ್ಸಿಗೆ ಆಗುವ ಅಹ್ಲಾದತೆಯೇ ಬೇರೆ.! ಕಡಲ ತೆರೆಗಳಾಚೆ ಕಣ್ಣು ಹಾಯಿಸಿದ.

ಚಿತ್ರಕಾರನೋರ್ವ ಬರೆದ ಚಿತ್ರದಂತೆ ಸೋಂಪಚ್ಚನವರ ಸಣ್ಣ ದೋಣಿ ಕಾಣಿಸುತ್ತಿತ್ತು..! ಸೋಂಪಚ್ಚನವರದು ಒಂದು ಆಸಕ್ತಿಕರ ಬದುಕು..! ನೋಡಲು ಕೆಂಪಗೆ, ಕೆಲವೊಮ್ಮೆ ನೀಳ ಗಡ್ಡಧಾರಿ..! ಮಾಗಿದ ಹಾಲಿವುಡ್ ನಟನ ವ್ಯಕ್ತಿತ್ವ. ಮಾತು ಯಾವಾಗಲೂ ನೇರ.. ಸ್ಪಷ್ಟ..!
ಎಲ್ಲಾ ಮಾತಿನ ಕೊನೆಗೆ ಒಂದು ನಿಷ್ಕಲ್ಮಷ ಸುಂದರ ನಗು..! ಇವರದ್ದು ಕಡಲ ದುಡಿಮೆಯಲ್ಲಿ ಅಕ್ಷರಶಃ ಅತ್ಮ ನಿರ್ಭರತೆ ಎನ್ನಬಹುದು..
ಏಕೆಂದರೆ ತನ್ನ ಹಗುರವಾದ ದೋಣಿಯನ್ನು ತಾನೊಬ್ಬನೇ ಹೆಗಲು ಕೊಟ್ಟು ತೆರೆಗಳ ಬೆನ್ನ ಮೇಲಿಂದ ಜಾರಿಸಿ, ಕಡಲೇರಿ ಹೋಗಿ ಮೀನುಗಾರಿಕೆ ಮಾಡಿಬರುವ ಸಾಮರ್ಥ್ಯ ಉಳ್ಳ ಮೀನುಗಾರ ಆತ..! ಎಲ್ಲರಿಗಿಂತ ಮೊದಲು ದಡ ಸೇರುವುದೂ ಅವರ ಈ ಪುಟ್ಟ ದೋಣಿಯೇ..!

ಯಾಕೆಂದರೆ ಅವರಿಗೆ ಸ್ನಾನ, ತಿಂಡಿ ಮುಗಿಸಿ, ಪ್ಯಾಂಟು, ಶರ್ಟು ಧರಿಸಿ ತನ್ನ ಲ್ಯಾಂಬ್ರೆಟ್ಟಾ ಹತ್ತಿ ಒಂಭತ್ತು ಗಂಟೆಯ ಒಳಗೆ ತನ್ನ ಉದ್ಯೋಗ ಸ್ಥಾನವಾದ ಸಿಂಡಿಕೇಟ್ ಬ್ಯಾಂಕಿಗೆ ಹೊರಡಬೇಕಿತ್ತು..! ಅಲ್ಲಿ ಸಂಜೆ ಐದರವರೆಗೆ ಅವರು ಪೆನ್ಶನ್, ಪಿಗ್ಮಿ, ಹಣಕಾಸು ವ್ಯವಹಾರದವರಿಗೆ ಪ್ರೀತಿಯ ‘ಬ್ಯಾಂಕ್ ಸೋಂಪಣ್ಣ.’.! ಕಾಲಿಗೇನೋ ಚುಚ್ಚಿದಂತಾಗಿ ತಟ್ಟನೆ ಬಾಗಿ ನೋಡಿದ.. ಯಮುನಮ್ಮ, ಪೊಣ್ಣಮ್ಮಜ್ಜಿಯರು ಕಡಲ ದಂಡೆಯಲ್ಲಿ ಒಣಗಲು ಹರಡಿದ್ದ ಚವರಪೊಡಿ ಕಸಕಡ್ಡಿಗಳು ಕಾಲಿಗೆ ಚುಚ್ಚಿದ್ದವು..

ಮಳೆಗಾಲದಲ್ಲಿ ಘಟ್ಟಗಳ ಮೇಲಿನಿಂದ ಒಣಗಿದ ಮರಗಳ ಕೊಂಬೆಗಳು, ಮಳೆನೀರಿನೊಂದಿಗೆ ಕೊಚ್ಚಿಕೊಂಡು ನದಿಗೆ ಸೇರಿ, ನದಿಗಳಿಂದ ಕಡಲು ಸೇರುತ್ತವೆ.. ಕಡಲು ಅವುಗಳನ್ನು ತನ್ನಿಷ್ಟ ಬಂದಂತೆ ಪುಡಿ ಮಾಡಿ ಇದರ ನಿರೀಕ್ಷೆಯಲ್ಲಿರುವ ನಮ್ಮೂರ ಅಜ್ಜಿಯರ ಮನೆ ಹಿಂದುಗಡೆ ದಡದಲ್ಲಿ ನಾಜೂಕಾಗಿ ಟನ್ ಗಟ್ಟಲೆ ಪೇರಿಸಿಟ್ಟು ಹೋಗುತ್ತದೆ..!

ಇವುಗಳನ್ನೇ ದಾರಿಕಾಯುತ್ತಿದ್ದ ಪೊಣ್ಣಮ್ಮಜ್ಜಿ,ಯಮುನಮ್ಮ, ಕಮಲಮ್ಮರಂತಹ ಎಲ್ಲಾ ಕಡಲ ಕರೆಯ ಅಜ್ಜಿಯರು ಮಳೆಗಾಲದ ಅಪರೂಪದ ಬಿಸಿಲಿಗೆ ಕಡಲು ರಾಶಿ ಹಾಕಿದ ತುಂಡು ರೆಂಬೆಕೊಂಬೆಗಳನ್ನು ಹರಡಿ ಒಣಗಿಸಿಟ್ಟರೆ ಮನೆಮಂದಿಗೆಲ್ಲಾ ಮಳೆಗಾಲಪೂರ್ತಿ ಬಿಸಿನೀರಿನ ಜಳಕಕ್ಕೆ ತೊಂದರೆಯಿಲ್ಲ..!

ಇದೊಂದು ಪ್ರಕೃತಿಗೂ ಮನುಷ್ಯನಿಗೂ ಇರುವ ಅಪ್ಯಾಯಮಾನ ಹೊಂದಾಣಿಕೆ..! ಕಾಲಿಗೆ ಚುಚ್ಚಿಕೊಂಡಿದ್ದ ಕಡ್ಡಿಯೊಂದನ್ನು ಕಿತ್ತೆಸೆದು ವೇಗವಾಗಿ ಹೆಜ್ಜೆ ಹಾಕಿದ.. ಎದುರಿನ ಫಿಶರೀಸ್ ರಸ್ತೆಯಿಂದ ಕೆಲವು ಮೀನು ವ್ಯಾಪಾರದ ಹೆಂಗಸರು ಆಗಲೇ ಬುಟ್ಟಿ ಹಿಡಿದುಕೊಂಡು ಕಡಲ ಕರೆಯತ್ತ ನಿಧಾನವಾಗಿ ಬರತೊಡಗಿದ್ದರು.. ದೋಣಿ ಕರೆಯಾಗುವ ಕಡವು ಸಮೀಪಿಸುತ್ತಿದ್ದಂತೆ ಒಂದೆರಡು ದೋಣಿಗಳು ಕರೆಯಾಗಿದ್ದವು.
ಕರೆಯಾದ ದೋಣಿಗಳು ಕೊಂತಳದ್ದಾಗಿದ್ದಾವು.

ತುಂಬಿಸಿಕೊಂಡು ಬಂದಿದ್ದ ಎರಡು ಮೂರು ಕಳ್ಳಿಗೆಯಷ್ಟು ಅಂದರೆ ಸುಮಾರು ಅರ್ಧ ದೋಣಿಯಷ್ಟು ಮೀನುಗಳನ್ನು ಮರಳಿನ ಮೇಲೆ ಹಾಸಿದ್ದ ಮಡಲಿನ ಮೇಲೆ ಸುರಿದು ಮತ್ತೆ ಕಡಲೇರಿ ಹೊರಟಿತು.. ದಂಡೆಯ ಮೇಲೆ ಕುಳಿತಿದ್ದ ಹೆಂಗೆಳೆಯರು ಈಗ ಚುರುಕಾದರು. ನಾರಾಯಣಜ್ಜ, ಬೀರಪ್ಪಜ್ಜ ನವರು ಏಲಂ ಕೂಗುತ್ತಿದ್ದಂತೆ ಎಲ್ಲರೂ ಮೀನಿನ ರಾಶಿಯ ಸುತ್ತಲೂ ನಿಂತು ಲಾಭನಷ್ಟದ ಲೆಕ್ಕ ಹಾಕತೊಡಗಿದ್ದರು..

‍ಲೇಖಕರು Avadhi

June 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: