ಡಾ ಗೋವಿಂದ ಹೆಗಡೆ ಕವಿತೆ – ಬಾಹುಬಲಿ ಹಾಗೂ ಆಶ್ರಯ

ಡಾ ಗೋವಿಂದ ಹೆಗಡೆ

1. ಬಾಹುಬಲಿ

ನೀನು ನಿಂತಿದ್ದೀ.
ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆ
ಹಕ್ಕಿಗೆ ಮೈ ಕೊಟ್ಟು

ನೀನು ‘ಮೈ ಕೊಟ್ಟ’ ಕಾರಣಕ್ಕೇ
ಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿ
ಬಯಲಿಗೆ ರೂಹು ಬಂದು ಆದವ ನೀನು
ಮೈ ಇದೆ ನಿನಗೆ, ಮೈಯ ಹಂಗಲ್ಲ

ಹಂಗಿನ ಮಾತು…
ನಿನ್ನ ಮಂದಸ್ಮಿತವ ಇನ್ನೂ
ಚೂರು ಹಿಗ್ಗಿಸಬಹುದು
ನಿಂತೆರಡು ಹೆಜ್ಜೆಗಳ ನೆಲ
ಬಿಡಲಾಗದಲ್ಲ, ಹಂಗನು
ಮೀರಲಾಗದಲ್ಲ ಎಂದು
ತಪಿಸಿದವ ನೀನು!
ಮತ್ತದನು ಮೀರಿ
ಬಯಲಿಗೆ ಭಾಷೆಯಾದವನು-
ವೀತರಾಗ.

ಆ ಕಣ್ಣುಗಳ ಎಲ್ಲಿ ನೆಟ್ಟಿದ್ದೀ
ಮಹರಾಯ!
ಲೋಕ ಲೋಕಾಂತರಗಳ ಆಚೆ?
ಕಲ್ಪಾಂತರಗಳ ದಾಟಿ?
ಗೊತ್ತು ನಿನಗೆ, ನನಗಲ್ಲ

ಆದರೂ ಮಣ್ಣಲ್ಲಿ ಹರೆವ
ಕ್ಷುದ್ರ-ಅಭದ್ರನಿಗೂ
ನಿನ್ನ ಅಭಯದ ನೋಟ
ಕರುಣೆಯ ಕಣ್ಣು
ನೇವರಿಸುವ ಬೆಳಕು

ಹೇಗೆ ನಿಂತಿರುವಿ ಅಚಲ
ಅವಿಚಲಿತ
ಕೊಡುವುದರಲ್ಲೇ, ಬಿಟ್ಟುಕೊಡುವುದರಲ್ಲೇ
ಪಡೆವ ಪಡುವ ಎಲ್ಲಕ್ಕೂ
ರೂಪಕವಾಗಿ.

ನಾವು ಅಲ್ಪರು, ವಿರಾಮರಲ್ಲ
ಹಗಲು-ರಾತ್ರಿ ಅದಕ್ಕೆ ಇದಕ್ಕೆ ಇನ್ನೊಂದಕ್ಕೆ
ಬಡಿದಾಡಿ ಕಚ್ಚಾಡಿ
ಇನ್ನಷ್ಟು ಕಿರಿದಾಗಿ ಕೊರಗಿ
ಕುಬ್ಜತೆಯಲ್ಲಿ ಅಳಿಯುತ್ತೇವೆ.

ನೀನು ಪೂರ್ಣ. ಎಲ್ಲ ಹೋರಾಟ
ಒಳತೋಟಿಗಳಿಗೆ ವಿರಾಮ ನಿನ್ನಲ್ಲಿ.
ಅರಿತವ ತನ್ನನರಿತವ
ಅವನಷ್ಟೇ ಗೆದ್ದವ
ಎನ್ನುತ್ತದೇನೋ ನಿನ್ನ ನಸು ಬಿರಿದ
ತುಟಿಯ ಸ್ನಿಗ್ಧ ಮೌನ

ಕೇವಲಜ್ಞಾನಿ, ಮುಕ್ತ, ಸಿದ್ಧ
ಇನ್ನೇನೋ ಹೆಸರು ನೀಡುತ್ತದೆ ಪರಂಪರೆ
ಹೆಸರು ಬೇಕು ಅದಕ್ಕೆ.
ಬಯಲೇ ಆದ ನಿನಗೆಲ್ಲಿ ಹೆಸರಿನ ಹಂಗು

ನಗುತ್ತಿರಬೇಕು ನೀನು
ನಿನಗೆ ಎರೆಯುವ ಉಡಿಸುವ
ಮೋಹಿಗಳ ಕಂಡು
ಮಗುವಂತೆ ಒಪ್ಪಿಸಿಕೊಂಡಿರಬೇಕು
ಅವರ ಖುಷಿಗೆ

ಎತ್ತರಕ್ಕೆ ನಿಂತವನು
ಎತ್ತರಕ್ಕೆ ಬಿತ್ತರಕ್ಕೆ ಮಾಪನವಾದವನು
ನಿನ್ನ ಕರುಣೆಯ ಬಾಹುಗಳ ಚಾಚು
ನಿನ್ನ ಪ್ರೀತಿಯಲಿ ಬಾಚು
ನಮ್ಮೆಲ್ಲ ಅಲ್ಪತೆ ಅಹಂಕಾರಗಳ
ಸ್ವಾರ್ಥದ ಸಾವಿರದ ಹುನ್ನಾರಗಳ

ತುಸುವೇ ಹಿಗ್ಗಲಿಸು, ಬಾಗಿಸು
ಮುಚ್ಚಿ ಸೆಡೆತ ಕದಗಳ
ಕರೆವಂತೆ
ನಮ್ಮೆಲ್ಲರ ಎದೆಯ ಕೂಪಗಳಿಗೆ
ನಿನ್ನ ಎದೆಯಿಂದ-
ಅನುರಾಗದೊಂದು ಕಿರಣ

ಮೂಡಲಿ ಅಲ್ಲಿ
ಪೊರೆ ಬೆಳೆದ ಒಳಗಣ್ಣುಗಳಲ್ಲಿ
ಮಸುಕಾಗಿಯಾದರೂ-

ನಿನ್ನ ಬಿಂಬ

2. ಆಶ್ರಯ

ಪರದೇಶಿ, ನಿರ್ಗತಿಕ ಆ ಪ್ರಯಾಣಿಕ
ಆ ಮಹಾನಗರವನ್ನು ಹೊಕ್ಕ
ಆಶ್ರಯ ಹುಡುಕಿಯೇ ಬಂದಿದ್ದು
ಇದಿರಿಗೆ ತೆರೆದ ವಿಶಾಲ ರಾಜಮಾರ್ಗ
ಎರಡೂ ಕಡೆ ಕವಲೊಡೆದ ರಸ್ತೆಗಳು
ಮತ್ತೆ ಮತ್ತೆ ಸೀಳುತ್ತ ಸೇರುತ್ತ ಒಂದು ಜಾಲವನ್ನೇ ರಚಿಸಿರಬೇಕು ಅವು

ಇದೇನಿದು, ರಸ್ತೆಯಲ್ಲಿ ಯಾರೂ
ಕಾಣುತ್ತಿಲ್ಲ!
ಎಲ್ಲ ಸ್ತಬ್ಧ-ನಿದ್ದೆ ಹೋದಂತೆ ಸ್ಥಿರ
ಚಿತ್ರದಂತೆ
ಜನರೆಲ್ಲ ಹೋದರೆಲ್ಲಿಗೆ ಗುಳೆ
ಹೋಗುವುದಾದರೂ ಎಲ್ಲಿಗೆ

ನಡೆಯುತ್ತ ಹುಡುಕುತ್ತ ಹಂಬಲಿಸುತ್ತ
ನಡೆ ನಡೆದು ಕೊನೆಗೆ
ಆ ಮಹಾದ್ವಾರದ ಮೂಲಕ
ನಗರದ ಹೊರಗೆ ಕಾಲಿಟ್ಟ ಆಗಂತುಕ

ಥಟ್ಟನೆ ಘೋಷಣೆಯಂಥ ಆದೇಶದಂಥ ಏನೋ ಒಂದು. ಮತ್ತು

ಆ ಮಹಾದ್ವಾರದ ಭಾರೀ ಗೇಟುಗಳನ್ನು ಜೋರಾಗಿ ಮುಚ್ಚಿದ ಸದ್ದು.

‍ಲೇಖಕರು Admin

June 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: