‘ಜೋಗಿ’ ನಳಮಹರಾಜನ ಅಡುಗೆ ಜಗತ್ತು ಆರಂಭವಾದದ್ದು ಹೀಗೆ…

ಚೈತ್ರಾ ರಾವ್

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ಸೇರ್ಪಡೆಯಾದ ಕ್ಲಬ್ ಹೌಸ್ ಇತರರೊಂದಿಗೆ ಚರ್ಚೆ, ಸಂದರ್ಶನ, ಮಾತುಕಥೆ ಬೆಳೆಸಲು ಉತ್ತಮ ಮಾಧ್ಯಮವಾಗಿದೆ. ಬರಹಗಾರರು, ಕಲಾವಿದರು, ನಿರ್ದೇಶಕರು ಹೀಗೆ ಎಲ್ಲಾ ರೀತಿಯ ಜನರು ಒಂದು ವಿಷಯದ ಕುರಿತು ಮಾತನಾಡುತ್ತಾರೆ. ಮತ್ತು ನಾವು ಅವರೊಂದಿಗೆ ಮಾತನಾಡಬಹುದಾಗಿದೆ. ಪರಸ್ಪರ ವಿಷಯವನ್ನು ವಿನಿಮಯ ಮಾಡಿಕೊಳ್ಳಲು ಕ್ಲಬ್ ಹೌಸ್ ಉತ್ತಮ ವೇದಿಕೆಯಾಗಿದೆ.

ಕನ್ನಡ.ಟ್ರಾವೆಲ್ಸ್ ತಂಡ ಆಯೋಜಿಸಿದ್ದ, ನಮ್ಮ ಕನ್ನಡ ಪುಟದಲ್ಲಿ ‘ಜೋಗಿ ನಳಮಹಾರಾಜ- ಅಡುಗೆ ಕಲಿಸಿದ ಪಾಠಗಳು’ ಎಂಬ ಕಾರ್ಯಕ್ರಮ ತುಂಬಾ ವಿಶಿಷ್ಟವಾಗಿ ಮೂಡಿಬಂದಿತ್ತು. ಜೋಗಿ ಅವರು ಬರಹಗಾರ ಮಾತ್ರವಲ್ಲದೆ ಅಡುಗೆಯನ್ನು ತಯಾರಿಸುವಲ್ಲಿಯೂ ಎತ್ತಿದ ಕೈ. ಇವರ ಅಡುಗೆಯ ಆಸಕ್ತಿ, ಅಡುಗೆಯ ಗುಟ್ಟು, ಕರ್ನಾಟಕದಲ್ಲಿರುವ ಅತ್ಯುತ್ತಮ ಹೋಟೆಲ್ ಹಾಗೂ ಅಲ್ಲಿನ ವಿಶೇಷ ಆಹಾರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಜೋಗಿ ಅವರಿಗೆ ಅಡುಗೆಯ ಆಸಕ್ತಿ ಹುಟ್ಟಿಕೊಂಡದ್ದು ಅವರ ತಾಯಿಯಿಂದ. ಇವರ ಅಮ್ಮನ ಅಡುಗೆ ಬಹಳ ಬಡತನದಿಂದ ಹುಟ್ಟಿತ್ತು. ನಾವು ಅಮ್ಮ ಅಡುಗೆ ಮಾಡಿ ಬಡಿಸಿದರೆ ಅದು ರುಚಿ ಇಲ್ಲವೆಂದು ದೂರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಹಾಗೂ ಹೋಟೆಲ್ ಗಳಲ್ಲಿ ತಯಾರಿಸುವ ಆಹಾರಗಳು ಎರಡು ಪಟ್ಟು ಹೆಚ್ಚು ಸಾಮಗ್ರಿಗಳನ್ನು ಹಾಕಿ ತಯಾರಾಗುತ್ತದೆ. ಅದುವೇ ರುಚಿಕರವಾದ ಆಹಾರ ಎಂದು ನಮಗೆ ಅನಿಸುತ್ತದೆ. ಆದರೆ ಅದಲ್ಲ ಅಡುಗೆ, ತಾಯಿಯ ಕೈಯಳತೆಯಲ್ಲಿ ತಯಾರಿಸಿದ ಅಡುಗೆ ತುಂಬಾ ವಿಶಿಷ್ಟತೆಯಿಂದ ಕೂಡಿರುತ್ತದೆ. ಹಾಗಾಗಿ ಅಡುಗೆ ವಿಷಯದಲ್ಲಿ ತಾಯಿಯೇ ನನಗೆ ಸ್ಪೂರ್ತಿ ಎಂದರು.

ಇವರ ತಾಯಿ ಅಡುಗೆ ಮಾಡುವಾಗ ಅಡುಗೆಯ ಜೊತೆಗೆ ಮಾತನಾಡುತ್ತಾರೆ. ಅಂದರೆ ಉಪ್ಪು ಕಾರ ಹಾಕುವಾಗ ಅಡುಗೆಗೆ ತೋರಿಸಿ ಇಷ್ಟು ಸಾಕಾ ಎಂದು ಕೇಳಿ ಹಾಕುವುದು ಇವರ ತಾಯಿಯ ಕ್ರಮವಂತೆ. ಪ್ರೀತಿಯಿಂದ ನಾವು ತಿಂಡಿ ಸಾಂಬಾರಿನ ಜೊತೆ ಮಾತನಾಡುತ್ತಾ ಅಡುಗೆ ಮಾಡಿದರೆ ಆ ದಿನ ಅಡುಗೆ ಬಹಳ ರುಚಿಯಾಗಿರುತ್ತದೆ.

ಇವರ ಅಡುಗೆಗೆ ಇನ್ನೊಬ್ಬ ಸ್ಫೂರ್ತಿ ವ್ಯಕ್ತಿ ಗೆಳೆಯ ಹರೀಶ್. ಮದುವೆ ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಊಟದ ತಯಾರಿಯಲ್ಲಿ ಇವರೇ ಮುಖ್ಯವಾಗಿ ನೇತೃತ್ವ ವಹಿಸಿರುತ್ತಾರೆ. ಅದ್ಭುತ ಅಡುಗೆ ಭಟ್ಟರಂತೆ. ಇವರೊಂದಿಗೆ ಅಡುಗೆ ಕಾರ್ಯಕ್ರಮಕ್ಕೆ ಜೋಗಿ ಅವರೂ ಹೋಗುತ್ತಿದ್ದರು. ಅಡುಗೆಯನ್ನು ಹೇಗೆ ವಿಶಿಷ್ಟವಾಗಿ ತಯಾರಿಸುತ್ತಾರೆ, ಅಡುಗೆಯ ತಯಾರಿಯ ಗುಟ್ಟೇನು, ಇವೆಲ್ಲವನ್ನು ದೂರದಿಂದ ವೀಕ್ಷಿಸುತ್ತಿದ್ದರು.

ನಂತರ ತಮ್ಮ ಪದವಿ ಮುಗಿದ ನಂತರ ಜೋಗಿಯವರೇ 1987ರಲ್ಲಿ ಒಂದು ಪುಟ್ಟ ಹೋಟೆಲನ್ನು ತೆರೆದರು. ಅವರಿಗೆ ತಮ್ಮ ಹೋಟೆಲ್ ಕನಸು ಹೇಗಿತ್ತೆಂದರೆ, ಏಕಾಂಗಿಯಾಗಿ ಅವರೇ ಅಡುಗೆ ತಯಾರಿಸಬೇಕು. ಹೋಟೆಲ್ ನಲ್ಲಿ ಒಂದಷ್ಟು ಪುಸ್ತಕಗಳಿರಬೇಕು, ಹಾಗೆ ಗೆಳೆಯರು ಬಂದು ಹೋಗುತ್ತಿರಬೇಕು, ವಾರದಲ್ಲಿ ಒಂದು ದಿನ ಹೋಟೆಲ್ ರಜೆ. ಅಂದರೆ ಆ ದಿನ ಪೂರ್ತಿ ಎಲ್ಲಾದರೂ ಸುತ್ತಿಕೊಂಡು ಬರಬೇಕೆಂಬ ಕನಸು. ಆ ಕನಸಿನಂತೆಯೇ ಆಯಿತು ಕೂಡ.

ಅವರ ಹೋಟೆಲ್ನಲ್ಲಿ ಮೂರು ಬಗೆಯ ಆಹಾರವನ್ನು ತಯಾರಿಸುತ್ತಿದ್ದರು. ಅನ್ನ ಸಾಂಬಾರ್, ಉಪ್ಪಿಟ್ಟು ಹಾಗೂ ಅವಲಕ್ಕಿ. ಇವರ ಹೋಟೆಲ್ ಗೆ ಬಂದ ಎಲ್ಲರೂ ಬೇರೆ ಬೇರೆ ಪುಸ್ತಕದ ಕುರಿತು, ಇವರ ಬರಹಗಳ ಕುರಿತು, ಪ್ರವಾಸಿತಾಣ ಅಲ್ಲಿನ ವಿಶಿಷ್ಟ ಆಹಾರ ಎಲ್ಲದರ ಬಗ್ಗೆ ಮಾತನಾಡಿ ಹೋಗುತ್ತಿದ್ದರು. ಜೋಗಿಯವರ ಹೋಟೆಲ್ ಗೆ ಬಂದರೆ ಒಂದೊಳ್ಳೆ ಕಟ್ಟೆ ಪಂಚಾಯಿತಿ ಅಂತೂ ಖಂಡಿತ.

ಹಾಗೆ ಇವರ ಹೋಟೆಲ್ ಪಕ್ಕದಲ್ಲಿದ್ದ ಒಂದು ಶಾಲೆಯಲ್ಲಿ ಒಟ್ಟು 500 ವಿದ್ಯಾರ್ಥಿಗಳು. ಆ 500 ವಿದ್ಯಾರ್ಥಿಗಳಲ್ಲಿ 300 ವಿದ್ಯಾರ್ಥಿಗಳು ಇವರ ಹೋಟೆಲ್ ಗೆ ಊಟಕ್ಕಾಗಿ ಬರುತ್ತಿದ್ದರಂತೆ. ಜೋಗಿಯವರ ಅಡುಗೆಯ ರುಚಿಗೆ ಮಕ್ಕಳು, ಅವರ ಗೆಳೆಯರು, ಊರಿನ ಜನರು ಸೇರಿದಂತೆ ಯೋಗರಾಜ್ ಭಟ್, ರಮೇಶ್ ಅರವಿಂದ್ ಹೀಗೆ ಎಲ್ಲರೂ ಇವರ ಅಡುಗೆಯ ರುಚಿಗೆ ಅಪ್ಪಟ ಅಭಿಮಾನಿಗಳಾಗಿದ್ದರೆ.

ಅಡುಗೆ ಎಂಬುದು ಒಂದು ಅದ್ಭುತ ಕಲೆ ಹಾಗಾಗಿ ಇವರ ಅಡುಗೆಯ ಕೆಲವೊಂದು ಗುಟ್ಟನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಜೋಗಿ ಅವರು ಅಡುಗೆ ತಯಾರಿಸುವಾಗ ಮುಖ್ಯವಾಗಿ ಪರಿಮಳ, ಅಡುಗೆಯನ್ನು ಯಾವುದರ ಮೂಲಕ ತಯಾರಿಸಬೇಕು, ಅಂದರೇ ರುಬ್ಬುವ ಕಲ್ಲು, ಕುಟ್ಟಣ ಇತ್ಯಾದಿ. ಹಾಗೆ ಯಾವುದರ ಮೂಲಕ ತಯಾರಿಸುತ್ತೇವೆ, ಬಳಸುವ ಪಾತ್ರೆಗಳ ಕುರಿತು ಜೋಗಿ ಮುಖ್ಯ ಗಮನಹರಿಸುತ್ತಾರೆ.

ನಾವು ಅಡುಗೆಗೆ ಬಳಸುವ ಮಸಾಲೆ ಹುಡಿಯನ್ನು ಅಂಗಡಿಗಳಿಂದ ತರುತ್ತೇವೆ. ಆದರೆ ಮಸಾಲೆ ಹುಡಿಯನ್ನು ಕುಟ್ಟಣದಿಂದ ಹುಡಿಮಾಡಿ, ತಕ್ಷಣ ಮಾಡಿ ತಕ್ಷಣ ಬಳಸಬೇಕು. ಯಾವತ್ತಿಗೂ ಮಸಾಲೆ ಹುಡಿಯನ್ನು ಶೇಖರಣೆ ಮಾಡಿ ಇಡಬಾರದು. ಅದು ದಿನಕಳೆದಂತೆ ತನ್ನ ರುಚಿ ಸ್ವಾದವನ್ನು ಕಳೆದುಕೊಳ್ಳುತ್ತದೆ. ಮಿಕ್ಸಿಯಿಂದ ಮಾಡಿದ ಹುಡಿಗೂ, ಕುಟ್ಟಣದಿಂದ ಹುಡಿಮಾಡಿದ ಮಸಾಲೆ ಪುಡಿಗೂ ತುಂಬಾ ವ್ಯತ್ಯಾಸವಿದೆ.

ಹಾಗೆ ಮಡಿಕೆಯಲ್ಲಿ ಮಾಡಿದ ಅಡುಗೆಗೂ ನಾವು ಈಗಿನ ಸ್ಟೀಲ್ ಪಾತ್ರೆಯಲ್ಲಿ ಮಾಡಿದ ಅಡುಗೆಗೂ ಅಜಗಜಾಂತರ ವ್ಯತ್ಯಾಸವಿದೆ. ಮಾಂಸದ ಆಹಾರವನ್ನು ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಅದರ ರುಚಿಯೇ ಬೇರೆ. ಅದರಲ್ಲಿಯೂ ಮುಖ್ಯವಾಗಿ ಫಿಷ್ ಕರಿ, ಹಾಗೂ ಚಿಕನ್ ಕರಿಯನ್ನು ಮಣ್ಣಿನ ಪಾತ್ರದಲ್ಲಿಯೇ ತಯಾರಿಸಬೇಕು. ಎರಡಕ್ಕೂ ಒಂದೇ ಪಾತ್ರೆಯನ್ನು ಬಳಸಬಾರದು. ಜೀವನದುದ್ದಕ್ಕೂ ಆ ಆಹಾರ ಪದಾರ್ಥ ತಯಾರಿಸುವಾಗ ಬೇರೆ ಬೇರೆ ಪಾತ್ರೆಯನ್ನು ಅದಕ್ಕಾಗಿಯೇ ಮೀಸಲಿಡಬೇಕು.

ಬಿರಿಯಾನಿ ತಯಾರಿಸಲು ಹಳೆಯ ಅಲ್ಯೂಮಿನಿಯಂ ಪಾತ್ರೆ ಬಳಸಿದರೆ ಉತ್ತಮ. ಹಾಗೆ ಸಸ್ಯಹಾರಿ ಆಹಾರಗಳನ್ನು ತಯಾರಿಸುವಾಗ ಆಲೂಗಡ್ಡೆ ಈರುಳ್ಳಿ ಹುಳಿ, ಸಾಂಬಾರ್ ಇವುಗಳಿಗೆ ಮಣ್ಣಿನ ಪಾತ್ರೆ ಉತ್ತಮ ಎಂದರು. ಇದು ಅವರು ಮಾಡುವ ಅಡುಗೆಯ ವಿಧಾನವಾಗಿದೆ.

ಕರ್ನಾಟಕದಲ್ಲಿ ಜೋಗಿಯವರ ಇಷ್ಟದ ಹೋಟೆಲ್

ಸಕಲೇಶಪುರದ ಆನೆಬಾಗಿಲು ಎಂಬಲ್ಲಿ ಪುಟ್ಟ ಹಂಚಿನ ಒಂದು ಸಸ್ಯಹಾರಿ ಹೋಟೆಲ್ ಇದೆ. ಮುಂಜಾನೆ 7ರಿಂದ 10 ಗಂಟೆಯವರೆಗೆ ಇದು ತೆರೆದಿರುತ್ತದೆ. ಅಲ್ಲಿ ಅಕ್ಕಿ ರೊಟ್ಟಿ ಹಾಗೂ ಅದಕ್ಕೆ ಚಟ್ನಿ ಮತ್ತು ಜೊತೆಗೆ ಒಂದು ಚಹಾ ಕೊಡುತ್ತಾರೆ.

ಜೋಗಿ ಅವರ ಪ್ರಕಾರ ದೇಶದಲ್ಲಿ ಸಿಗುವ ಅತ್ಯುತ್ತಮ ರುಚಿಕರವಾದ ಅಕ್ಕಿರೊಟ್ಟಿಯಂತೆ.

ಹಾಗೆ ಉಪ್ಪಿನಂಗಡಿಯಲ್ಲಿ ಹಿಂದೆ ಫಾರೆಸ್ಟ್ ಗೇಟ್ ಹತ್ತಿರ ಅಹಮ್ಮದ್ ಎಂಬವರ ಹೋಟೆಲ್ ಇತ್ತು. ಅಲ್ಲಿ 1 ರೂಪಾಯಿಗೆ ಕಲ್ತಪ್ಪ ಸಿಗುತ್ತಿತ್ತು. ಇದು ಜೋಗಿ ಅವರ ಇಷ್ಟದ ತಿಂಡಿ. ಈಗ ದಕ್ಷಿಣ ಕನ್ನಡದ ಚಾರ್ಮಾಡಿ ಘಾಟ್ ಇಳಿದ ತಕ್ಷಣ ‘ಹಸನಬ್ಬ ಹೋಟೆಲ್’ನಲ್ಲಿ ಅಹಮ್ಮದ್ ಅವರು ತಯಾರಿಸುತ್ತಿದ್ದಂತೆಯೇ ರುಚಿಕರ ಕಲ್ತಪ್ಪ ಇಲ್ಲ ಸಿಗುತ್ತದೆ. ಜೋಗಿಯವರು ಹೋಗಿ ಬರುವಾಗ ಎರಡು ಬಾರಿಯೂ ಹಸನಬ್ಬ ಹೋಟೆಲ್ನಲ್ಲಿ ರುಚಿಕರ ಕಲ್ತಪ್ಪ ತಪ್ಪದೇ ತಿನ್ನುತ್ತಾರೆ. ದಕ್ಷಿಣ ಕನ್ನಡದಲ್ಲಿ ಹಸನಬ್ಬ ಹೋಟೆಲ್ ಜೋಗಿಯವರ ಇಷ್ಟದ ಹೋಟೆಲ್ ಆಗಿದೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿದ ಜೋಗಿ, ತಮ್ಮ ಅಡುಗೆಯ ಶೈಲಿ, ತಯಾರಿಸುವ ರೀತಿ, ಇತರ ಹೋಟೆಲ್, ಅಲ್ಲಿನ ಪ್ರಮುಖ ಆಹಾರದ ಕುರಿತು ತಮ್ಮ ನೆನಪು, ಅನುಭವಗಳನ್ನು ಹಂಚಿಕೊಂಡರು ಮತ್ತು ಕೇಳುಗರ ಪ್ರಶ್ನೆಗೂ ಉತ್ತರಿಸಿದರು.

‍ಲೇಖಕರು Avadhi

June 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: